ಕುವೆಂಪು ನೆನಪು - ಎಚ್.ಎಲ್.ನಾಗೇಗೌಡರು




ಕುವೆಂಪುರವರು ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಬರಬೇಕಾದರೆ ಕೊಂಚ ಹೊತ್ತು ಮೌನ ತಾಳಿ ಆಮೇಲೆ ಶುರುಮಾಡುತ್ತಾರೆ. ಹಾಗೆ ಮಾಡಿ "ಮೊನ್ನೆ ಪುಟ್ಟಯ್ಯ ನಾಯ್ಕರು ಬಂದಿದ್ರು. ನಿಮ್ಮ ಶಿವಮೊಗ್ಗ ಮ್ಯೂಸಿಯಂನಲ್ಲಿ ಕೆಲವು ವಿಷಯಗಳು ದೊರೆಯಬಹುದು ಎಂದರು" ಎಂದು ಹೇಳಿದಾಗ, ನಾನು "ಯಾವ ಬಗ್ಗೆ?" ಎಂದು ಕೇಳಿದೆ.



"ಅದೇ ನನ್ನ ಕಾದಂಬರಿಗೆ ಸಾಮಗ್ರಿ ಸಂಗ್ರಹಿಸುತ್ತಿದ್ದೇನಲ್ಲ ಅದರ ಬಗ್ಗೆ. ಕೆಲವು ಒದಗಿಸಿದ್ದಾರೆ. ಮ್ಯೂಸಿಯಂನಲ್ಲಿ ತುಂಬಾ ಹಳೆಯ ಗ್ರಂಥಗಳನ್ನು ಸಂಗ್ರಹಿಸಿಟ್ಟಿದ್ದೀರಂತೆ. ಒಂದ್ಸಲ ಹೋದಾಗ ನೋಡಿಕೊಂಡು ಬರ್ತೀನಿ." ಎಂದರು.



"ಹೌದು ಇವೆ. ಹಳೆಯ ಕಡತಗಳು, ಓಲೆಗರಿಗಳು, ತಾಮ್ರ ಲಿಖಿತಗಳು ಅನೇಕ ಇವೆ. ಹುಡುಕಿದರೆ ನಿಮಗೆ ಕೆಲವು ಸಂಗತಿಗಳು ಸಿಗಬಹುದು. " ಎಂದೆ.



"ಚಿನ್ನೇಗೌಡರು ಕ್ರೈಸ್ತರಾದದ್ದು ಯಾವಾಗ ಎಂಬ ವಿಷಯ ಈಗ ಗೊತ್ತಾಗಿದೆ. ತಪ್ಪು ನಮ್ಮದು. ವೇದೋಪನಿಷತ್ತುಗಳ ಸಾರವನ್ನು ಮನೆಮನೆಗೆ ಮುಟ್ಟಿಸದೇ ಹೋದ ತಪ್ಪು ನಮ್ಮವರದು. ಕ್ರೈಸ್ತನ ಬಗ್ಗೆ ನನಗೆ ಗೌರವವಿದೆ. ಆದರೆ ಅನ್ಯಮತ ಅವಲಂಬಿಸಬೇಕೆ, ನಮ್ಮ ಮತದಲ್ಲಿ ಏನೂ ಇಲ್ಲ ಅಂತ ಹೇಳಿ! ವೇದೋಪನಿಷತ್ತುಗಳು ತಮ್ಮ ಸ್ವಂತ ಆಸ್ತಿ ಎಂದು ನಮ್ಮವರು ಮಾಡಿದ್ದು ತಪ್ಪು. ದೇವಂಗಿ ರಾಮಣ್ಣಗೌಡರು ಅವರೆಲ್ಲಾ ಕ್ರೈಸ್ತರಾಗಬೇಕು ಅಂತ ತೀರ್ಮಾನ ಮಾಡಿ ಹಾರೆ ತಗೊಂಡು ನಿಂತಿದ್ರಂತೆ, ತುಳಸೀ ಕಟ್ಟೆ ಕಿತ್ತಾಕೋದಕ್ಕೆ, ಅವರ ತಮ್ಮ ನಾಗಪ್ಪಗೌಡರು- ಈಗ್ಲೂ ಇದಾರೆ - ಕೈಲಿ ಕೋವಿ ಹಿಡಿದು ನೀವು ತುಳಸಿ ಕಟ್ಟೆ ಕಿತ್ರೆ ಬಂದೂಕಿನಲ್ಲಿ ಸುಡ್ತೀನಿ ಅಂದ್ರಂತೆ. ಆಗ ಸುಮ್ಮನಾದರು ರಾಮಣ್ಣಗೌಡರು. ಅವರು ಕ್ರೈಸ್ತಮತಕ್ಕೆ ಸೇರೋದು ನಿಂತ್ಹೋಯ್ತು. ವಿಷಯಾನೆಲ್ಲಾ ಸಂಗ್ರಹಿಸ್ತಾ ಇದ್ದೀನಿ ನನ್ನ ಕಾದಂಬರಿಗೆ. " ಎಂದರು.



"ಎಷ್ಟು ದೊಡ್ಡ ಗ್ರಂಥ ಆಗಬಹುದು? " ಎಂದೆ.



"ಬಹುಶಃ ಎಂಟು ಹತ್ತು ಸಂಪುಟಗಳಾಗಬಹುದು. ಕಳೆದ ನೂರು ವರ್ಷಗಳಲ್ಲಿ ಮಲೆನಾಡಿನಲ್ಲಿ ಮೈಸೂರಿನಲ್ಲಿ, ಇಂಡಿಯಾದಲ್ಲಿ ಪ್ರಪಂಚದಲ್ಲಿ ಏನೇನಾಯ್ತು ಎಂಬುದರ ಚಿತ್ರ ಅದರಲ್ಲಿ ಬರ್ತದೆ. ಅದು ಪೂರ್ಣದೃಷ್ಟಿಯ ಮಹಾಕಾದಂಬರಿ. ಇಡೀ ಪ್ರಪಂಚದಲ್ಲಿ ಯಾವ ಭಾಷೆಯಲ್ಲಿಯೂ ಸೃಷ್ಟಿಯಾಗದಂತಹ ಕಾದಂಬರಿ. It covers the whole universe! ಟಾಲ್ಸ್ಟಾಯ್ ಅವರ War and Peace .....? ನನಗೆ ಟಾಲ್ಸ್ಟಾಯ್ ಅವರಿಗಿಂತ ಹೆಚ್ಚು ಇಮ್ಯಾಜಿನೇಷನ್ ಉಂಟು .... " ಎಂದರು.



ಅವರು ಹೀಗೆಂದಾಗ ನನಗೆ ಅನ್ನಿಸಿತು, ಮನುಷ್ಯನ ಜಂಭ ಎಷ್ಟು ಅಂತ. ಆದರೆ ಮಾತಾಡಿದ್ದು ಕೆ.ವಿ.ಪುಟ್ಟಪ್ಪ ಅಲ್ಲ, ಅಂತಹ ಹತ್ತಾರು ಪುಟ್ಟಪ್ಪಗಳನ್ನೊಳಗೊಂಡ ಮಹಾದಾರ್ಶನಿಕ ಎಂದುಕೊಂಡಾಗ ಅವರ ಮಾತಿನ ಅರ್ಥ ಆದಂತಾಯಿತು.



"ಹಿಂದೆ ಹೇಗಿತ್ತು ಎನ್ನುವ ವಿಷಯ ಬೇಕು ನನಗೆ. ನೋಡಿ ರಸ್ತೆ (ಅವರಾಗಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದರು) - ಕೊಪ್ಪ ತೀರ್ಥಹಳ್ಳಿ ರಸ್ತೆ ಯಾವಾಗಾಯ್ತು, ಬಸ್ಸು ಬಂದದ್ದು ಯಾವಾಗ- ಹೀಗೆ ನನಗೆ ಅನೇಕ ವಿಷಯಗಳು ಬೇಕು. ೧೮೬೦ ರಿಂದ ಆರಂಭವಾಗಿ ೧೯೨೦ ಕ್ಕೆ ಮುಗಿಯುತ್ತೆ ಕಾದಂಬರಿ. ಈಗಿರೋ ರಸ್ತೆ ಯಾವಾಗ ಆದದ್ದು, ಹಿಂದಿನ ಕಾಲದಲ್ಲಿ ಜನರು ಹೇಗೆ ಓಡಾಡುತ್ತಿದ್ದರು - ಇವೆಲ್ಲ ಬೇಕು. ನೀವು ನಿಮಗೆ ಗೊತ್ತಾದಷ್ಟನ್ನು ಟಿಪ್ಪಣಿ ಮಾಡಿಕೊಟ್ರೆ ಸಾಕು. " ಎಂದರು.



ವಿಷಯವನ್ನು ನನಗೆ ಹಿಂದೆಯೇ ಹೇಳಿದ್ದರು. ಆದರೆ ಏನೂ ಮಾಡಿರಲ್ಲಿಲ್ಲ. ಈಗ "ಆಗಲಿ" ಎಂದೆ. ಅರವತ್ತಕ್ಕೆ ಅರುಳು ಮರುಳು ಎನ್ನುತ್ತಾರೆ. ಆದರೆ, ಮನುಷ್ಯನಿಗೆ ವಯಸ್ಸಿನಲಿ ಎಂಟು ಹತ್ತು ಸಂಪುಟಗಳ ಮಹಾಕಾದಂಬರಿ ಬರೆಯುವ ನಿರ್ಧಾರ, ನಿಜವಾಗಿಯೂ ಆಶ್ಚರ್ಯ! ವಯಸ್ಸಿನ ಇತಿಮಿತಿ ಇವರಿಗೆ ಇದ್ದಂತೆ ಕಾಣಲಿಲ್ಲ. ಹಿಂದೊಮ್ಮೆ ಕೇಳಿಯೇ ಬಿಟ್ಟಿದ್ದೆ "ವಯಸ್ಸಾಯಿತಲ್ಲ ನಿಮಗೆ, ನಿಮ್ಮ ಮೇಧಾಶಕ್ತಿ ಹೇಗಿದೆ? ಹಿಂದೆ ಇದ್ದಂತೆಯೇ ಇದೆಯೇ?" ಎಂದು. ನಾನು ವಯಸ್ಸಿಗೆ ಹೇಗಿರುತ್ತೇನೆ ಎಂದು ತಿಳಿದುಕೊಳ್ಳುವುದೂ ನನ್ನ ಉದ್ದೇಶವಾಗಿತ್ತು. "ಓಹೋ ಇದೆ. I have not lost anything" ಎಂದಿದ್ದರು. ಈಗಲೂ ಅವರಲ್ಲಿ ಕವಿಯ ದರ್ಶನ ಹಾಗೂ ಕಲ್ಪನೆಗಳಿಗೆ ಹಾಗೂ ಕೃತಿ ರಚನೆಗೆ ಯಾವ ಅಡ್ಡಿಯೂ ಬಂದಂತಿಲ್ಲ. ನರೆತ ಕ್ರಾಪು ಮೀಸೆಗಳನ್ನು ಬಿಟ್ಟರೆ ಮತ್ತೆಲ್ಲೂ ನರೆತಂತೆ ಕಾಣುವುದಿಲ್ಲ.



"ಮಲೆನಾಡಿನ ಮದುಮಗಳು ಎಷ್ಟಕ್ಕೆ ಬಂತು? " ಎಂದೆ.



"ಮಲೆಗಳಲ್ಲಿ ಮದುಮಗಳು. ಬರೀತಾ ಇದ್ದೀನಿ. ರಾಮಾಯಣ ದರ್ಶನಂ ಬರೆಯುವಾಗಲೇ ಇದನ್ನು ಬರೆಯಲು ಆರಂಭಿಸಿದ್ದೆ. ನಲವತ್ತು ಪುಟ ಅಚ್ಚಾಗಿಯೂ ಇತ್ತು..... ಪತ್ರಿಕೇಲಿ ಪ್ರಕಟವಾಗ್ತಾನೂ ಇತ್ತು. ಆದ್ರೆ ರಾಮಾಯಣ ದರ್ಶನಂ, ಕಾದಂಬರಿ ಎರಡನ್ನೂ ಒಟ್ಟಿಗೆ ಬರೆಯುವುದು, ಎರಡರಲ್ಲಿ ಬರುವ ಭಿನ್ನ ಭಿನ್ನ ಭಾವನೆಗಳನ್ನು ಒಂದೇ ಕಾಲದಲ್ಲಿ ಮೂಡಿಸುವುದು ಸರಿಯಲ್ಲ ಎಂದು ಕಾದಂಬರಿ ನಿಲ್ಲಿಸಿದೆ. ಈಗ ಮಾಡ್ತಿದ್ದೀನಿ ಇನ್ನೂ ಒಂದು ದಿನದ ಕಥೆಯೂ ಮುಗಿದಿಲ್ಲ. ಆಗಲೇ ಮುನ್ನೂರು ಪುಟ ಆಗಿದೆ. ಪಾತ್ರಗಳನ್ನು ಸೃಷ್ಟಿ ಮಾಡಿ ಬಿಟ್ಟು ಬಿಟ್ಟಿದ್ದೀನಿ. ಅವರು ಮುಂದೆ ತಮ್ಮ ಕಥೆ ಹೇಳ್ಕೊಂಡು ಹೋಗ್ತಾರೆ. ಈಗ ನನ್ನ ಕೈಯಲ್ಲಿಲ್ಲ ಕಾದಂಬರಿ, ಅವರ ಕೈಯಲ್ಲಿದೆ, ತಾಯಿ-ಮಕ್ಕಳನ್ನು ಹೆತ್ತು ಸಲಹಿದ ನಂತರ ಅವರ ಪಾಡಿಗೆ ಅವರನ್ನು ಬಿಟ್ಟು ತಾನು ನೋಡುತ್ತಿರುವಂತೆ ಆಗಿದೆ ನನ್ನ ಕಾದಂಬರಿಯ ಪಾತ್ರಗಳ ಸೃಷ್ಟಿ, ನಾನೀಗ ಅವರ ಕೈಯಲ್ಲಿದ್ದೇನೆ. I think a poet has to be not only a creator but also humble witness of the actions of the characters he creates. ಕಾದಂಬರಿ ಎಲ್ಲಿಗೆ ಮುಟ್ಟುತ್ತೆ ಅಂತ ಹೇಳಲಾರೆ . . . " ಎಂದರು.



ಮಾತುಗಳನ್ನು ಕೇಳುತ್ತ ಸ್ವಲ್ಪ ಹೊತ್ತು ಮೌನವಾಗಿ ಕುಳಿತೆ.



ಕುವೆಂಪು "ನೆನಪಿನ ದೋಣಿಯಲ್ಲಿ ..... Reminiscences ಎಂಬ ಇನ್ನೊಂದು ಗ್ರಂಥ ಬರೆಯಬೇಕಾಗಿದೆ' ಎಂದರು.



ಕುವೆಂಪು ಅವರು ಅನಾವಶ್ಯಕವಾಗಿ ಮಾತಾಡುವವರಲ್ಲ, ಇಷ್ಟು ಮಾತಾಡಿದ್ದೆ ಹೆಚ್ಚು ಎಂದು ಅಂದುಕೊಂಡು ಅವರಿಗೆ ಬೇಜಾರು ಮಾಡಬಾರದೆಂದು ಹೊರಡುವ ಸೂಚನೆ ತೋರಿಸಿದೆ. ಅವರು ಎದ್ದು ಮನೆಯೊಳಕ್ಕೆ ಹೋಗಿ ಬಂದು ಮತ್ತೆ ಕೂತರು.



"ನೀವು ಕಡೆ ಬಂದರೆ ನಿಮಗೆ ಬೇಕಾದ ವಿಷಯ ಸಂಗ್ರಹ ಮಾಡಲು ಅನುಕೂಲವಾಗುತ್ತದೆ" ಎಂದೆ.

" ಎಲ್ಲಿ? ಸಾಧ್ಯವಾಗುವುದಿಲ್ಲ. ದೇವರು ನನಗೆ ಎಷ್ಟು ಆಯುಸ್ಸು ಕೊಟ್ಟಿದಾನೋ ಕಾಣೆ. ಮಲೆಗಳಲ್ಲಿ ಮದುಮಗಳು ಮುಗಿಸಬೇಕು. ಬೆಳಗ್ಗೆ ವಾಕಿಂಗ್, ವಾಕಿಂಗ್ನಿಂದ ಬಂದ ಮೇಲೆ ಸ್ವಲ್ಪ ಹೊತ್ತು ಮಧ್ಯಾಹ್ನದವರೆಗೆ ಬರೆಯೋ ಕೆಲಸ. ಬರೆಯುವ mood ಬರಬೇಕು. ಬಂದಾಗ ಬರೆದುಬಿಡಬೇಕು.   ಎಲ್ಲಿಯೂ ಹೋಗುವಂತಿಲ್ಲ. ಕರ್ನಾಟಕ ಯೂನಿವರ್ಸಿಟಿಯವರು ಹೋದ ವರ್ಷ ನಿಮಗೆ ಡಾಕ್ಟರೇಟ್ ಕೊಡಬೇಕಾಗಿದೆ ಬನ್ನಿ ಎಂದು ಬರೆದಿದ್ದರು. ನಾನು ಈಗ ಸಾಧ್ಯವಿಲ್ಲ. ನೀವು ಕೊಡ್ಲೇಬೇಕು ಅಂತ ಇದ್ರೆ 'In Absentia' ಕೊಡಿ ಎಂದು ತಿಳಿಸಿದೆ. ಅವರು ಇಲ್ಲ ನೀವೇ ಬರಬೇಕು ,      ಇಲ್ಲಿಯೋರೆಲ್ಲ ನಿಮ್ಮನ್ನ ನೋಡ್ಬೇಕು ಅಂತ ಇದಾರೆ ಎಂದು ಬರೆದು ಒತ್ತಾಯ ಮಾಡಿದರು. ನಾನು ಅವರಿಗೆ ಉತ್ತರ ಬರೆದೆ. ನಾಲ್ಕು ಷರತ್ತುಗಳನ್ನು ಹಾಕಿದೆ; ಒಂದನೆಯದು, ಕನ್ನಡ ಅಧಿಕೃತ ಭಾಷೆಯಾಗಬೇಕು; ಎರಡನೆಯದು, ಮೈಸೂರಿನ ಹೆಸರು ಕರ್ನಾಟಕ ಎಂದಾಗಬೇಕು; ಮೂರನೆಯದು, ರಾಜ್ಯಾಂಗದ ಪ್ರಕಾರ ರಾಜ್ಯಪಾಲರ ನೇಮಕ ಆಗಬೇಕು; ನಾಲ್ಕನೆಯದು ಬೋಧನಾ ಭಾಷೆ ಕನ್ನಡ ಆಗಬೇಕು. ಇವು ನಾಲ್ಕು ಆದ ನಂತರ ಬಂದು ಸಂತೋಷದಿಂದ ಡಾಕ್ಟರೇಟ್ ಸ್ವೀಕರಿಸುತ್ತೇನೆ ಎಂದು ಹೇಳಿದೆ. ಕನ್ನಡ ಅಧಿಕೃತ ಭಾಷೆ ಆಗಬೇಕು ಅಂತ ಕಾಗದದ ಮೇಲೇನೊ ಆಗಿದೆ. ರಾಜ್ಯಾಂಗದ ಪ್ರಕಾರ ರಾಜ್ಯಪಾಲರ ನೇಮಕವೂ ಆಗುವಂತಿದೆ. ನಮಗೆ ದಾಸ್ಯದ ಮನೋಭಾವ ಹೋಗಬೇಕಾದರೆ ಬೇರೆ ರಾಜ್ಯಪಾಲರು ಬರಬೇಕು. ಈಗ ಇರುವ ಮಹಾರಾಜರೇ ಬೇರೆ ಕಡೆ ಹೋಗಿ ಮತ್ತೆ ಬೇಕಾದರೆ ಬರಲಿ. ಆಗ ಸರಿಹೋಗುತ್ತೆ. ಆದರೆ ಹಿಂದೆ ಮಹಾರಾಜರಾಗಿದ್ದವರೆ ರಾಜ್ಯಪಾಲರಾಗಿ ಮುಂದುವರಿಯುವುದು ದಾಸ್ಯ ಮನೋವೃತ್ತಿಯ ಬದಲಾವಣೆಗೆ ಸಹಾಯವಾಗುವುದಿಲ್ಲ. ನಾವು ಸೊಂಟ ಬಗ್ಗಿಸಿ ಬೆನ್ನು ಗೂನು ಮಾಡಿಕೊಂಡಿದ್ದೀವಿ. ಗೂನು ಬೆನ್ನೇ ನಮಗೆ ಲಕ್ಷಣವಾಗಿ ಕಾಣುವಷ್ಟರಮಟ್ಟಿಗೆ ನಾವು ಅದಕ್ಕೆ ಹೊಂದಿಕೊಂಡಿದ್ದೇವೆ. ನೆಟ್ಟಗೆ ನಿಂತರೆ ಎಲ್ಲಿ ಬೆನ್ನುಲುಬು ಮುರಿಯುತ್ತೋ ಎಂದು ಹೆದರಿದ್ದೇವೆ. ನಮ್ಮ ಜನರ ಅಜ್ಞಾನ, ದಾಸ್ಯ, ಸಣ್ಣ ತನಕ್ಕೆ ಎರಡು ಕಾರಣ; ಒಂದು ಗುರುಮನೆ; ಮತ್ತೊಂದು ಅರಮನೆ. ಅರಮನೆಯೇನೋ ಹೋಯಿತು ಗುರುಮನೆ ಇನ್ನೂ ಭದ್ರವಾಗಿ ಬೇರೂರಿದೆ. ಅಜ್ಞಾನಿಗಳಿಂದ ಹಣ ಕಿತ್ತು ತಿನ್ನುವ ಮಠಗಳಿಂದ ದೇಶಕ್ಕಾಗುವ ಅನಾಹುತ ಅಷ್ಟಿಷ್ಟಲ್ಲ. .... " ಎಂದರು.

ಇಷ್ಟರಲ್ಲಿ ಕುವೆಂಪು ಅವರ ಕಿರಿಯ ಮಗಳು ಕಾಫಿ ತಂದಿಟ್ಟು ಹೋದಳು. ಅದನ್ನು ಕುಡಿಯುತ್ತಾ, ಕುಡಿಯುತ್ತಾ ಅವರಿಗೆ ಹುಮ್ಮಸ್ಸು ಬಂದಂತಾಯಿತೋ ಏನೋ " ಸ್ವಾಮಿ ವಿವೇಕಾನಂದರ ಧೀರವಾಣಿ ಹಳ್ಳಿ ಹಳ್ಳಿಗಳಿಗೆಲ್ಲ ಹರಡಬೇಕು, ಷಂಡರನ್ನು ಧೀರರನ್ನಾಗಿ ಮಾಡುವ ವಾಣಿ ಅದು. ನನ್ನ ಜೀವನದಲ್ಲೇ ಅದ್ಭುತ ಬದಲಾವಣೆ ಮಾಡಿದರು ಅವರು. ಮೊನ್ನೆ ಅವರ ಶತಮಾನೋತ್ಸವ ನಡೆಯಿತಲ್ಲ, ಅದನ್ನು ಶೃಂಗೇರಿ ಮುಂತಾದ ಮಠಗಳಲ್ಲಿ ಆಚರಿಸಿದರೇನು? ಇಲ್ಲ! ಅವರಿಗೆ ವಾಣಿಯನ್ನು ಕೇಳುವ ಆಸೆಯಿಲ್ಲ. ಕೇಳಿದರೆ ಅವರ ಕಾಣಿಕೆ ಕಾಸಿಗೇ ಚಕ್ಕರ್! " ಎಂದು ಹೇಳಿ ನಕ್ಕರು.



ಹೀಗೆಂದವರು ಎದ್ದು ಒಳಗೆ ಹೋಗಿ `ವಿವೇಕಾನಂದ ಕೃತಿ ಶ್ರೇಣಿ' ಎಂಬ ಹತ್ತು ಕನ್ನಡ ಪುಸ್ತಕಗಳನ್ನು ತಂದು ಮುಂದೆ ಪೇರಿಸಿಟ್ಟರು. ಮೊದಲನೇ ಸಂಪುಟದಲ್ಲಿ ನನ್ನ ಮುನ್ನುಡಿ ಇದೆ. ಎಲ್ಲಾ ಸೇರಿ ೬೦ ರಿಂದ ೭೦ ರೂಪಾಯಿ ಆಗಬಹುದು. ಇದರ ಒಂದೊಂದು ಕಟ್ಟು ತಕ್ಕೊಂಡ್ಹೋಗಿ ಹಳ್ಳೀಲಿ ಇಟ್ಟುಬಿಡಿ. ಯಾರಾದರೂ ಇದಕ್ಕೆ ಢಿಕ್ಕಿ ಹೊಡೆದಾಗ ಡೈನಮೈಟ್ ಸಿಡಿದು ಹೋಗುತ್ತದೆ. ಆಗ ನೋಡಿ, ಇದು ಮಾಡುವ ಕೆಲಸವನ್ನು! ಎಂದು ಕುವೆಂಪು ಮಹಾವಿಧ್ವಂಸಕ ಗೂಢಾಚಾರನಂತೆ ನುಡಿದರು. "ಭೇಷ್ ನನ್ನಪ್ಪ! " ಎಂದೆ ನನಗೆ ನಾನೇ.

ವಿವೇಕಾನಂದರ ಬಗ್ಗೆ ಅಮೇರಿಕಾ ಮಹಿಳೆಯೊಬ್ಬಳು ಬರೆದಿರುವ ಉದ್ಗ್ರಂಥವೊಂದನ್ನು ಪ್ರಸ್ತಾಪಿಸುತ್ತಾ ಅದರಲ್ಲಿ ಬರುವ anecdotes ಗಳ ಬಗ್ಗೆ ಹೇಳಿದರು. ವಿವೇಕಾನಂದರ ಪ್ರಜ್ಞೆ, ಪ್ರತಿಭೆ, ಜ್ಞಾಪಕ ಶಕ್ತಿ- ಇವುಗಳನ್ನು ವರ್ಣಿಸುತ್ತಾ "ಬೇಕಾದರೆ ಇಂಗ್ಲೀಷ್ ವಿಶ್ವಕೋಶವನ್ನು ಒಮ್ಮೆ ತಿರುವು ಹಾಕಿ ಯಾವುದನ್ನು ಕೇಳಿದರೂ ಹೇಳಬಹುದಾದಷ್ಟು ಜ್ಞಾಪಕ ಶಕ್ತಿ ಇತ್ತು. ವೇದೊಪನಿಷತ್ತುಗಳು ಅವರ ಕಂಠಗತವಾಗಿದ್ದವು. ಶಕ್ತಿ ಹೇಗೆ ಬಂತು ಅಂತ ಕೇಳಿದರೆ ಅವರು ಪಾಲಿಸಿದ ಬ್ರಹ್ಮಚರ್ಯದಿಂದ ! ಒಮ್ಮೆ ಯಾರೋ ರಾಮಕೃಷ್ಣ ಪರಮಹಂಸರನ್ನು ಕೇಳಿದರಂತೆ ಶಕ್ತಿ ಹೇಗೆ ಬರುತ್ತೆ ಅಂತ. ಅದಕ್ಕೆ ಅವರು ಹೇಳಿದರು, `ಯಾರು ಕಾಯಾ, ವಾಚಾ, ಮನಸಾ ಹನ್ನೆರಡು ವರ್ಷಗಳು ಬ್ರಹ್ಮಚರ್ಯ ಪಾಲಿಸುತ್ತಾರೋ ಅವರಿಗೆ ಇದು    ಸಿದ್ಧಿಸುವುದು' ಎಂದು. " ಇದು ನನಗೂ ಸಾಧ್ಯ, ನಿಮಗೂ ಸಾಧ್ಯ " ಎಂದರು ಕುವೆಂಪು .



Krupe: http://www.kuvempu.com/nenapu14.html

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು