ಜಗತ್ತೆಂದರೆ ನನಗೆ ನಿಲುಕಿದ್ದು, - ಪ್ರವರ ಕೊಟ್ಟೂರು

ಜಗತ್ತೆಂದರೆ ನನಗೆ ನಿಲುಕಿದ್ದು,
ನನ್ನ ನೋಟದ ಪರಿಥಿಗೆ ಸಿಲುಕಿದ್ದು 
ನಿಲುಕದ್ದು ಅನೂಹ್ಯವೋ, ಕೌತುಕವೋ
ಇನ್ನೇನೋ ಆಗಿರುತ್ತದೆ

ಗಡಿಯಾರದಲ್ಲಿ ಮುಳ್ಳುಗಳೇ
ಇರುವುದಿಲ್ಲ
ಹರಿದ ಇತಿಹಾಸದ ಕರಾಳ ಪುಟಗಳಿರುತ್ತವೆ
ಗುಂಡು ಹೊಕ್ಕಿದ ಗೋಡೆಗಳ ಒಡಲಲ್ಲಿ
ಮೊಳೆಗಳ ನೆತ್ತಿಗೆ ಫೋಟೊಗಳು
ಸೀಳಿಟ್ಟ ಎದೆಗಳೂ ಇರಬಹುದು

ವಿಷದಂಗಡಿಯಲ್ಲಿ ಕುಂತಿದ್ದ ಹಿಟ್ಲರ್ರನ ಮೀಸೆಯನ್ನು
ಚಾಪ್ಲೀನು ಕೊಂಡುಕೊಂಡಿದ್ದಾನೆ

ರಣಹದ್ದುಗಳೀಗ ಲೋಹದ ಹಕ್ಕಿಗಳಾಗಿವೆ
ಬೆಂಕಿ ಕುಲುಮೆಯಲ್ಲಿ ರೆಕ್ಕೆಗಳ ಗರ್ಭ,
ನೆಲಕ್ಕೂ ಆಕಾಶಕ್ಕೂ ಇಟ್ಟ ನಿಚ್ಚಣಿಕೆ
ಇದ್ದಿಲಾಗಿದೆ,
ಏರಲೆಂದು ಹೊರಟವರ ಬೂದಿ
ಗಾಳಿಯಲ್ಲಿ

ಸೋಮಾಲಿಯಾದ ಮಗು ಗನ್ನು
ಹಿಡಿಯುತ್ತದೆ,
ತುಂಡು ರೊಟ್ಟಿಗೆ, ಮುಚ್ಚಲಾರದ ಹಸಿವಿಗೆ
ಹಲ್ಲು ಕಿರಿಯುತ್ತಲೇ
ಮನಸೋ ಇಚ್ಚೆ ಗುಂಡು ಹಾರಿಸುತ್ತದೆ
ಅಲ್ಯಾವ ಸೇಡು ಇರಲಿಲ್ಲ!!!
ಅದೆಷ್ಟೋ ಶತಮಾನಗಳ ಹಸಿವು
ತೊಳಲಾಟ

ಜೇನು ತುಂಬಿದ ಜಗತ್ತಿಗೆ
ಕರೆದೊಯ್ದ ಏಸುವನ್ನು
ಶಿಲುಬೆಗೇರಿಸಿ ಮೊಳೆ ಬಡಿದಿದ್ದಾರೆ,
ನೆತ್ತಿಯಲ್ಲಿ ಮುಳ್ಳಿನ ಸಿಂಬೆ ಇನ್ನೂ ಇದೆ
ಗೋಪುರದ ಗಂಟೆಯನ್ನು ದಿನವೂ
ಬಾರಿಸುತಿದ್ದಾರೆ,
ಬಾಸುಂಡೆಗಳು ದಿನ ದಿನಕ್ಕೂ
ಮೂಡುತ್ತಲೇ ಇವೆ
ತುಂಡು ಬಟ್ಟೆ ಕಳಚುತ್ತಲೇ ಇದೆ

ಲಕ್ಷಾಂತರ ಜೀವಗಳ ರಕ್ತ ಕುಡಿದ
ಯುದ್ಧದ ನಂತರವೇ
ರಾಜನೊಬ್ಬ ಜೋಳಿಗೆ ಹಿಡಿದು ಬಿಕ್ಷುವಾಗಿದ್ದಾನೆ
ಕೊನೆಗೂ ಅರಿತಿದ್ದಾನೆ
ಜಗತ್ತನ್ನು, ಬದುಕನ್ನು, ಬೆಳಕು-ಕತ್ತಲನ್ನೂ
ಆತನ ಕಣ್ಣುಗಳೀಗ ನಿಂತ ನದಿಯಾಗಿವೆ

ದೇಶ-ಕಾಲಗಳ ಯಾರು ಮೀರಿರಬಹುದು?
ಲೆಕ್ಕ ಹಾಕಿದೆ, ಕೈಬೆರಳುಗಳು ಸಾಕಾದವು

ಗಾಂಧಿಯ ಚರಕದಲ್ಲಿ ಜೇಡ ನೂಲಿನ
ಪ್ರವರ ಕೊಟ್ಟೂರು, 
ಜಾಗವನ್ನು ಆಕ್ರಮಿಸಿಕೊಂಡಿದೆ,
ರಾಟೆಯನ್ನು ಇನ್ಯಾರೋ ತಿರುವುತಿದ್ದಾರೆ
ರಾಟೆಯಲ್ಲಿದ್ದ ಜೇಡ
ಜಗತ್ತನ್ನೇ ಉಂಡೆ ಕಟ್ಟುತ್ತಿದೆ,
ಮೇಲಿದ್ದವರು ಕೆಳಗೆ; ಕೆಳಗಿದ್ದವು ಮೇಲೆ
ರಾಟೆ ತಿರುಗುತ್ತಲೇ ಹೋಗುತ್ತದೆ

ಈ ನಾಣ್ಯದಲಿನ ಮುಖ
ವಿಕಾರವಾಗಿದೆ,
ಇತಿಹಾಸಕ್ಕೆ ದೇಹ ಮಾತ್ರ
ಮುಖವಿಲ್ಲ
ಮುಖವಾಡಗಳ ಬೇಕಿದ್ದಲಿ
ತೊಡಿಸಿಕೊಳ್ಳಬಹುದು

ಇದೆಲ್ಲವೂ ನನ್ನದೇ ಪ್ರಪಂಚವೇ?
ನಾನು ಬದುಕುತ್ತಿರುವುದು ವರ್ತಮಾನದಲ್ಲೆಂಬುದಕ್ಕೆ
ಸಬೂಬು ಬೇಕು!
ನಿಲುಕಿದ್ದೋ ನಿಲುಕದ್ದೋ ಎಂಬುದಕ್ಕೂ
ಸಬೂಬು ಬೇಕು!

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು