ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Wednesday, November 18, 2015

ಇಳಿದು ಬಾ ತಾಯೆ ಇಳಿದು ಬಾ - ಕುವೆಂಪು

ಇಳಿದು ಬಾ ತಾಯೆ ಇಳಿದು ಬಾ - ಕುವೆಂಪು

ಓಂ ಸಚ್ಚಿದಾನಂದ ತ್ರಿತ್ವ ಮುಖವಾದ ಪರಬ್ರಹ್ಮದಲ್ಲಿ
ಅಭವದೊತ್ತಾದೆ ಭವದ ಬಿತ್ತಾದೆ ಋತದ ಚಿತ್ತಾದೆ ನೀ
ಇಳಿದು ಬಾ ಇಳೆಗೆ ತುಂಬಿ ತಾ ಬೆಳೆಗೆ ಜೀವ ಕೇಂದ್ರದಲ್ಲಿ
ಮತ್ತೆ ಮೂಡಿ ಬಾ ಒತ್ತಿ ನೀನೆನ್ನ ಚಿತ್ತ ಪೃಥ್ವಿಯಲ್ಲಿ ||
ಋತದ ಚಿತ್ತಾಗಿ ವಿಶ್ವಗಳ ಸೃಜಿಸಿ ನಡೆಸುತಿಹ ಶಕ್ತಿಯೆ
ಅನ್ನ ಪ್ರಾಣಗಳ ಮನೋಲೋಕಗಳ ಸೂತ್ರಧರ ಯುಕ್ತಿಯೆ
ಅಖಿಲ ಬಂಧನದ ಹೃದಯದಲ್ಲಿ ಅವಿನಾಶಿ ಆಸಕ್ತಿಯೆ
ನಿನ್ನ ಅವತಾರವೆನ್ನ ಉದ್ಧಾರ ಬಾ ದಿವ್ಯ ಮುಕ್ತಿಯೆ
ಎಲ್ಲವನು ಮಾಡಿ ಎಲ್ಲರೊಳಗೂಡಿ ನೀನೆ ಎಲ್ಲವಾದೆ
ಜ್ಯೋತಿಯಾದರೂ ತಮೋಲೀಲೆಯಲಿ ಜಡದ ಮುದ್ರೆಯಾದೆ
ಎನಿತು ಕರೆದರೂ ಓಕೊಳ್ಳದಿರುವಚಿನ್ನಿದ್ರೆಯಾದೆ
ಬೆಳಗಿ ನನ್ನಾತ್ಮಕಿಳಿದು ಬಾ ತಾಯೆ ನೀನೆ ಬ್ರಹ್ಮ ಬೋಧೆ
ಇಳಿದು ಬಾ ತಾಯೆ ಇಳಿದು ಬಾ ||
ಗಾಳಿಗುಸಿರು ನೀ ಬೆಂಕಿಗುರಿಯು ನೀನುದಕಕದರ ಜೀವ
ಅಗ್ನಿ ಇಂದ್ರ ವರುಣಾರ್ಕ ದೇವರನು ಮಾಡಿ ನೋಡಿ ಕಾವ
ಶಿವನ ಶಕ್ತಿ ನೀ, ವಿಷ್ಣು ಲಕ್ಷ್ಮೀ ನೀ, ಚತುರ್ಮುಖನ ರಾಣಿ
ದಿವ್ಯ ವಿಜ್ಞಾನ ನನ್ನೊಳುದ್ಭವಿಸೆ ಮತಿಗಾಗಮಿಸು, ವಾಣಿ
ಹೃದಯ ಪದ್ಮ ತಾನರಳೆ ಕರೆವೆ ಬಾರಮ್ಮ ಬಾ, ಇಳಿದು ಬಾ
ಮನೋದ್ವಾರ ತಾ ಬಿರಿಯೆ ಕರೆವೆ ಜಗದಂಬೆ ಬಾ, ಇಳಿದು ಬಾ
ಅಗ್ನಿ ಹಂಸ ಗರಿಗೆದರೆ ಕರೆವೆ ಬಾ ತಾಯೆ ಬಾ, ಇಳಿದು ಬಾ
ಚೈತ್ಯ ಪುರುಷ ಯಜ್ಞಕ್ಕೆ ನೀನೆ ಅಧ್ವರ್ಯು, ಬಾ, ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ ||ಹಗಲಲ್ಲದ ಇರುಳಲ್ಲದ ನಡುಗಾಲದ - ರಾಜೇಂದ್ರ ಪ್ರಸಾದ್

ಹಗಲಲ್ಲದ ಇರುಳಲ್ಲದ ನಡುಗಾಲದ
ನೆತ್ತಿಯ ಮೇಲೆ ಎಷ್ಟೊಂದು ಉರಿದೀಪ
ಎದೆಯ ಮೇಲೆ ತೇಲಿ ಬಿಟ್ಟಂತೆ!
ಎತ್ತ ನೋಡಿದರತ್ತ ಸಾವಿನ ದೋಣಿಗಳು
ನನ್ನನೇ ಅಟ್ಟಿಸಿಕೊಂಡು ಬಂದಂತೆ
ಬಿಡಿದೆ ಬಾಗಿಲವರೆಗೆ ಬಂದು ಅಲ್ಲಿಯೇ ಕಾಯ್ದಂತೆ
ರುಂಡವಿಲ್ಲದ ಹಾರುಪಕ್ಷಿಗಳು ಯಮಪಾಶವ
ಹಿಡಿದು ಮನೆಯ ಮೇಲಣ ಮುಗಿಲೆಲ್ಲಾ ಸುತ್ತಿದಂತೆ.
ದೇಹ ಬೆವರುತ್ತಿದೆ ಬಿಸಿಹಬೆಯಂತೆ.
ಹನುಮಾss ಇಟ್ಟು ಮರೆತ ಸಂಜೀವಿನಿ ಎಲ್ಲೋ ?
ಮರೆತದ್ದು ಮಣ್ಣಾಗಲಿ ಚಮ್ಮಾರನ ಮನೆಯ
ಗಲ್ಲೇಬಾನಿಯನಾದರೂ ಮೊಗೆದು ತಾರೋ ಸಂಜೀವರಾಯ
ನಿನ್ನ ಮನೆಕಾಯ, ಉಸಿರು ಸಿಕ್ಕಿಕೊಂಡಿದೆ.
ಬಾಗಿಲಲ್ಲಿ ದೋಣಿ
ಮುಗಿಲಲ್ಲಿ ಪಕ್ಷಿ
ಎದೆಯಲ್ಲಿ ದೀಪ
ನನ್ನ ಕಾಯುತ್ತಿವೆ. ~

                                                -    ರಾಜೇಂದ್ರ ಪ್ರಸಾದ್

Monday, October 26, 2015

ಚುಟುಕ - ಸಂತೋಷ್ ಕುಮಾರ್ ಎಲ್. ಎಂ.

---1 ---

ಬತ್ತಿಯ ಬಾಯಿಗೆ
ಬೆಂಕಿಯಿಟ್ಟವನ ಆಶಯ
ಬೆಳಕಷ್ಟೇ!
ಮುಗಿಯುವ
ಅದರ ಆಯಸ್ಸಲ್ಲ

---2---------


ಗೂಡು ಕಟ್ಟಿದ್ದ ಮರವ
ಧರೆಗುರುಳಿಸಿದ ಕಾರಣ
ಹುಡುಕುತ್ತಿದ್ದ ಹಕ್ಕಿಗೆ
ವಿಳಾಸವಿಲ್ಲ...
ಹಕ್ಕಿಯೂ ಶಪಿಸಿತು,
ಉರುಳಿಸಿದ ದುರುಳನಿಗೂ
ಮುಂದೊಂದು ದಿನ
ವಿಳಾಸವಿಲ್ಲ!

ಅತೀ ಎತ್ತರದ ಕಟ್ಟಡಗಳ ಮೇಲೆ ಹಗ್ಗ ಕಟ್ಟಿ ನಡೆದ - Philippe Petit
ಚಿಕ್ಕವನಿದ್ದಾಗ ಫ್ರಾನ್ಸಿನ ಬೀದಿಗಳಲ್ಲಿ ತಿರುಗುತ್ತ, ಜನಗಳು ಅಚ್ಚರಿಪಡುವ ಪುಟ್ಟ ಪುಟ್ಟ ಸಾಹಸ ಪ್ರದರ್ಶನಗಳನ್ನು ನೀಡುತ್ತ ಸಂಪಾದಿಸುವ ಹುಡುಗ Philippe Petit. ಇದರ ಬಗ್ಗೆ ಅವರ ಅಪ್ಪ ಅಮ್ಮನಿಗೆ ಕೊಂಚವೂ ಇಷ್ಟವಿರುವುದಿಲ್ಲ. ಸರ್ಕಸ್ಸೊಂದರಲ್ಲಿ ಹಗ್ಗದ ಮೇಲೆ ನಡೆಯುವ ಸರ್ಕಸ್ಸಿನವನೊಬ್ಬನ ಕೌಶಲ್ಯದಿಂದ ಪ್ರೇರಿತನಾಗುವ Philippe Petitಗೆ ಮುಂದೆ ತಾನೂ ಈ ಸಾಹಸವನ್ನು ಮಾಡಬೇಕೆಂಬ ಆಸೆಯಾಗುತ್ತದೆ. ಅದನ್ನು ಕಲಿಯುತ್ತ ಸಾಗುವ ಹಾದಿಯಲ್ಲಿ ಆತ ಹಗ್ಗ ಕಟ್ಟಿ ಮಧ್ಯೆ ನಡೆಯಲು ಅನುಕೂಲವಾಗಬಲ್ಲ ಎರಡು ಎತ್ತರದ ವಸ್ತುಗಳನ್ನು ಸದಾ ಹುಡುಕುತ್ತಿರುತ್ತಾನೆ.
ಯಾವುದೋ ಒಂದು ದೃಶ್ಯದಲ್ಲಿ ಹಲ್ಲು ನೋವಾಗಿ Dental Clinic ಗೆ ಹೋದಾಗ, ಅಲ್ಲಿಟ್ಟ ಮ್ಯಾಗಜೈನುಗಳ ಪೈಕಿ ಒಂದರಲ್ಲಿ ಪ್ರಪಂಚದ ಅತೀ ಎತ್ತರದ ಕಟ್ಟಡ ನ್ಯೂಯಾರ್ಕಿನ WTCಯ ಬಗೆಗಿನ ಮಾಹಿತಿ ಇವನ ಕಣ್ಣಿಗೆ ಬೀಳುತ್ತದೆ. ಕೇವಲ ಅದರ ಚಿತ್ರ ನೋಡಿಯೇ ರೋಮಾಂಚನಗೊಂಡು, ಜೀವನದಲ್ಲೊಮ್ಮೆ ತಾನು ಆ ಜೋಡಿ ಕಟ್ಟಡಗಳ ಮಧ್ಯೆ ಹಗ್ಗ ಕಟ್ಟಿ ನಡೆಯಬೇಕೆಂಬ ಮಹದಾಶೆ ಆ ಕ್ಷಣದಲ್ಲೇ ಅವನೆದೆಯೊಳಗೆ ಚಿಗುರೊಡೆಯುತ್ತದೆ. ಇಂಟರ್ನೆಟ್ಟುಗಳಿಲ್ಲದ ಎಪ್ಪತ್ತರ ದಶಕಗಳಲ್ಲಿ ಕೇವಲ ಪುಸ್ತಕಗಳಲ್ಲಿ, ವೃತ್ತಪತ್ರಿಕೆಗಳಲ್ಲಿ ಬರುವ ಆ ಕಟ್ಟಡದ ಬಗೆಗಿನ ಮಾಹಿತಿಯನ್ನು ಸಂಗ್ರಹಿಸುತ್ತ ತಯಾರಿ ಶುರುವಿಟ್ಟುಕೊಳ್ಳುತ್ತಾನೆ.
ಈ ಮಧ್ಯೆ ಮನೆಯಿಂದ ಹೊರಹಾಕಿಸಿಕೊಳ್ಳುವ Philippe Petitಗೆ Annie ಪರಿಚಯವಾಗುತ್ತಾಳೆ. ಈತ ತನ್ನ ಮಹತ್ವಾಕಾಂಕ್ಷೆಯನ್ನು ಅವಳಲ್ಲಿ ಹೇಳಿಕೊಂಡಾಗ ತನ್ನಿಂದಾದ ಸಹಾಯ ಮಾಡಲು ಜೊತೆಯಾಗುತ್ತಾಳೆ. ಇನ್ನೇನಿದ್ದರೂ ಆ ಗುರಿಯೆಡೆಗೆ ತನ್ನ ಪ್ರಯಾಣವಷ್ಟೆ. ಮೊದಲೇ ಬೇರೆ ದೇಶ. ಇಂತಹ ಆತ್ಮಹತ್ಯೆಗೆ ಸರಿಸಮಾನಾದ ಅಪಾಯಕಾರಿ ಸಾಹಸವನ್ನು ಯಾವುದೇ ದೇಶದ ಕಾನೂನು ಬೆಂಬಲಿಸುವುದಿಲ್ಲ. ಹಾಗಿದ್ದಾಗ ಈ ಕಾರ್ಯವನ್ನು ಸಾಧಿಸುವ ಹಾದಿಯಲ್ಲಿ ಆತನ ಸಿಹಿ-ಕಹಿ ಅನುಭವಗಳೇನು? Philippe Petit (ಪಾತ್ರದಲ್ಲಿ Joseph Gordon-Levitt) ತನ್ನ ಅನುಭವ ಹೇಗಿತ್ತು ಅನ್ನುವುದನ್ನು ನಮ್ಮೆದುರಿಗೆ ನಿಂತು ನಿರೂಪಿಸುತ್ತ ಇಡೀ ಚಿತ್ರದ ಪೂರ್ತಿ ಆವರಿಸಿಕೊಳ್ಳುತ್ತಾನೆ. ಪ್ರತೀ ಹೆಜ್ಜೆಯಲ್ಲಿ ಇನ್ನು ಸಾಧ್ಯವೇ ಇಲ್ಲ ಅನ್ನುವಷ್ಟು ಅಡೆತಡೆಗಳು ಎದುರಾಗುತ್ತವೆ. ಅವುಗಳನ್ನೆಲ್ಲ ದಾಟಿ ಮುಂದೆ ಕಾಲಿಟ್ಟಾಗ ಅವನೆದುರಿಗಿದ್ದದ್ದು ಶೂನ್ಯದೆಡೆಗೆ ಸಾಗಿದಂತೆ ಕಾಣುವ ಹಗ್ಗವಷ್ಟೇ. ಭಯಂಕರ, ಮೈರೋಮಾಂಚನಗೊಳಿಸುವ,ಸುತ್ತಲಿನ ನೋಟ ವಿಹಂಗಮವೆನಿಸುವ, ಅತೀ ಎತ್ತರದ ಕಟ್ಟಡಗಳ ಮಧ್ಯದ ಒಂದು ನೂಲಿನಂತೆ ಕಾಣುವ ಹಗ್ಗದ ಮೇಲೆ ಆತ ಕಾಲಿಟ್ಟಾಗ ಚಿತ್ರಮಂದಿರದಲ್ಲಿ ಕುಳಿತ ಪ್ರೇಕ್ಷಕನಿಗೆ ತಾನೇ ಅಲ್ಲಿ ಕಾಲಿಟ್ಟಂತೆ ಭಾಸವಾಗುತ್ತದೆ. ಚಿತ್ರದ ಆರಂಭದಲ್ಲೇ ನಮಗೆ ಆತ ಸುರಕ್ಷಿತವಾಗಿ ಹಗ್ಗದ ಮೇಲೆ ನಡೆದು ಬರುತ್ತಾನೆ ಎನ್ನುವ ವಿಷಯ ಗೊತ್ತಿದ್ದರೂ ಚಿತ್ರ ಮುಗಿದು ಗಡಿಯಾರ ನೋಡಿಕೊಂಡರೆ ನಮಗೆ ಗೊತ್ತಿಲ್ಲದಂತೆ ಎರಡು ಗಂಟೆ ಕಳೆದು ಹೋಗಿರುತ್ತದೆ. ಅಷ್ಟು ಕುತೂಹಲಭರಿತವಾಗಿ ಕೊಂಚವೂ ಬೇಸರವಾಗದಂತೆ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಚಿತ್ರಕ್ಕಾಗಿ ದುಡಿದವರ ನೈಪುಣ್ಯತೆ ಎದ್ದು ಕಾಣುತ್ತದೆ.
ಇದು ಕಾಲ್ಪನಿಕ ಕಥೆಯಲ್ಲ. ಅತೀ ಎತ್ತರದ ಕಟ್ಟಡಗಳ ಮೇಲೆ ಹಗ್ಗ ಕಟ್ಟಿ ನಡೆದು ಪ್ರಸಿದ್ಧಿಯಾದ ವ್ಯಕ್ತಿ Philippe Petit, ತಮ್ಮ ಅನುಭವವನ್ನು "To Reach the Clouds" ಅನ್ನುವ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಅದೇ ಪುಸ್ತಕವನ್ನಾಧರಿಸಿ "The Walk" ಚಿತ್ರವನ್ನು ತಯಾರಿಸಲಾಗಿದೆ. ಅವಕಾಶ ಸಿಕ್ಕರೆ ನೀವೂ ಒಮ್ಮೆ ಚಿತ್ರಮಂದಿರದಲ್ಲಿ ನೋಡಿ.
ಸಂತೋಷ್ ಕುಮಾರ್ ಎಲ್. ಎಂ.


Saturday, September 26, 2015

ಹಾಸ್ಯ - ಕೃಪೆ - ವಾಟ್ಸ್ ಆಪ್


ಎಂಟು , ಹತ್ತು ವರುಷದ ಇಬ್ಬರು ಹುಡುಗರು ತುಂಟತನದಲ್ಲಿ ಪ್ರಖ್ಯಾತರಾಗಿದ್ದರು. ಕುಖ್ಯಾತರು ಕೂಡ. ಊರಲ್ಲಿ ಏನೇ ಕಿತಾಪತಿಯಾದರೂ ಅದರಲ್ಲಿ ಇವರಿಬ್ಬರ ಹೆಸರು ಇದ್ದೇ ಇರುತಿತ್ತು.. ಅವರ ಹೆತ್ತವರಿಗೆ ಸಹಜವಾಗಿಯೇ ಇದು ತಲೆಬಿಸಿಯ ಸಂಗತಿಯಾಗಿತ್ತು.  ಹೀಗಿರುವಾಗ ಅವರಮ್ಮನಿಗೆ ಒಬ್ಬ ಸ್ವಾಮೀಜಿಯ ಬಗ್ಗೆ ತಿಳಿದು ಬಂತು. ಅವರು ಇಂಥ ಎಷ್ಟೊ ಮಕ್ಕಳ ತಂಟತನವನ್ನು ಬುದ್ಧಿ ಹೇಳಿ ಕಡಿಮೆ ಮಾಡಿದ್ದರು. ಮಕ್ಕಳಿಬ್ಬರನ್ನೂ ಕರೆದುಕೊಂಡು ಸ್ವಾಮೀಜಿಯವರ ಬಳಿ ಹೋದಳು.
ವಿಷಯವೆಲ್ಲ ತಿಳಿದುಕೊಂಡು ಸ್ವಾಮೀಜಿ ಹೇಳಿದರು ಒಬ್ಬೊಬ್ಬರನ್ನೇ ಮಾತಾಡಿಸುತ್ತೇನೆ. ನಾಳೆ ಚಿಕ್ಕವನನ್ನು ಕಳುಹಿಸಿ ನನ್ನ ಹತ್ತಿರ.


ಸರಿ ಎಂದ ಅಮ್ಮ.. ಮಾರನೆ ದಿನ ಚಿಕ್ಕವನನ್ನು ಕಳುಹಿಸಿದರು. ಅವನನ್ನು ಸ್ವಲ್ಪ ಹೊತ್ತು ದಿಟ್ಟಿಸಿ ನೋಡಿದ ಸ್ವಾಮೀಜಿ ತಮ್ಮ ಕಂಚಿನ ಕಂಠದಿಂದ ದೇವರು ಎಲ್ಲಿದ್ದಾನೆ? ಎಂದು ಕೇಳಿದರು. ಹುಡುಗ ಮೌನವಾಗಿದ್ದ. ಪುನಃ ಹತ್ತಿರ ಬಂದು ದೇವರು ಎಲ್ಲಿದ್ದಾನೆ ಎಂದು ಕೇಳಿದರು.
ಆಗಲೂ ಮಾತಾಡದ ಹುಡುಗನ ಕೆನ್ನೆಯನ್ನು ತನ್ನ ಬೆರಳಿಂದ ತಿವಿದು ಅದೇ ಪ್ರಶ್ನೆಯನ್ನು ಕೇಳಿದರು.. ದೇವರು ಎಲ್ಲಿದ್ದಾನೆ?.
ಹುಡುಗ ಅಲ್ಲಿಂದ ಒಂದೇ ಉಸಿರಿಗೆ ಓಡಿ ಬಂದು ಮನೆ ಸೇರಿ ಮೂಲೆಯೊಂದರಲ್ಲಿ ಅಡಗಿ ಕೂತ.
ಅದನ್ನು ಕಂಡ ದೊಡ್ಡ ಹುಡುಗ ಹತ್ತಿರ ಬಂದು ಏನಾಯ್ತು ಎಂದು ಕೇಳಿದ.
ಚಿಕ್ಕವನು ನಡುಗುತ್ತ... ಅಣ್ಣಾ.... ಎಂದು ಅವನ ಕಿವಿಯಲ್ಲಿ ಗುಟ್ಟಾಗಿ ಹೇಳಿದ..
ಆ ಪುಟ್ಟ ಹುಡುಗನ ಉತ್ತರ ಅದೆಷ್ಟು ಮುಗ್ಧವಾಗಿತ್ತೆಂದರೆ ನನಗಂತೂ ನಗು ತಡೆಯಲೇ ಆಗಲಿಲ್ಲ..
ನೀವೂ ಓದಿ.
.
.
.
.
"ಅಣ್ಣಾ...ಈ ಸಲ ದೊಡ್ಡ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆ ಕಣೊ... ದೇವರು ಕಾಣೆಯಾಗಿದ್ದಾನಂತೆ .. ಅದೂ ನಮ್ಮ ಮೇಲೆ ಬಂದಿದೆ."


ಕೃಪೆ - ವಾಟ್ಸ್ ಆಪ್

Monday, August 10, 2015

ನಾಡೋಜ ಶ್ರೀ ಕಯ್ಯಾರ ಕಿಞ್ಞಣ್ಣ ರೈ - Rohith Chakrathirtha

ಕನ್ನಡದ ಅಕ್ಷರಗಳನ್ನು ಕೈಬಿಡಬೇಕು, ಮಹಾಪ್ರಾಣ ತೆಗೆಯಬೇಕು, ಕೊನೆಗೆ ಕನ್ನಡದ ಪ್ರಾಣವನ್ನೂ ಉಡಾಯಿಸಬೇಕು ಎಂದು ನಮ್ಮೊಳಗಿನ ಕನ್ನಡಿಗರೇ ಸಂಚು ಮಾಡುತ್ತಿರುವಾಗ ಕಾಸರಗೋಡಿನಂಥ ಪರಸ್ಥಳದಲ್ಲಿದ್ದು ಮಾನಸಿಕವಾಗಿ ಎಂದೆಂದೂ ಕನ್ನಡಿಗನೇ ಆಗಿ ಉಳಿದ ಮತ್ತು ತನ್ನ ತಾಯ್ನಾಡು ಕಾಸರಗೋಡನ್ನು ಕಡೆಯವರೆಗೂ ಕನ್ನಡನಾಡಿನ ಭಾಗವೆಂದೇ ತಿಳಿದ ರೈಗಳು ಪರೋಕ್ಷವಾಗಿ 'ಞ' ಎಂಬ ಪಾಪದ ಅಕ್ಷರವನ್ನೂ ಉಳಿಸಲು ಹೋರಾಡಿದರು ಎನ್ನಬಹುದು. ಯಾಕೆಂದರೆ ರೈದಂಪತಿ ತಮ್ಮೆರಡು ಹೆಸರುಗಳಲ್ಲೇ ನಾಲ್ಕು 'ಞ'ಗಳನ್ನು ಮಕ್ಕಳಂತೆ ಕಟ್ಟಿಕೊಂಡಿದ್ದರು.
ಹುಟ್ಟಿಸಿದ ತುಳುವಪ್ಪೆ, ಬೆಳೆಸಿದ ಕನ್ನಡತಾಯಿ ಇಬ್ಬರೂ ಬಡವಾಗಿದ್ದಾರೆ. 'ಞ' ಅಕ್ಷರ ಕೂಡ ತಬ್ಬಲಿಯಾಗಿದೆ.

ನಾಡೋಜ ಶ್ರೀ ಕಯ್ಯಾರ ಕಿಞ್ಞಣ್ಣ ರೈFriday, July 24, 2015

ಶ್ರೀ ಗಣೇಶಭಟ್ಟ ಕೊಪ್ಪಲತೋಟರ ಮೂರನೆಯ ಅಷ್ಟಾವಧಾನಕಾರ್ಯಕ್ರಕೆ ಅಮಂತ್ರಣ

ಆತ್ಮೀಯಮಿತ್ರರಿಗೆಲ್ಲ ನಮಸ್ಕಾರ,
ಇದೇ ತಿಂಗಳು ಇಪ್ಪತ್ತೈದನೆಯ ತಾರೀಖು ಶನಿವಾರದಂದು ಬೆಳಗ್ಗೆ ಹತ್ತುಗಂಟೆಗೆ ಬಸವನಗುಡಿ ರಸ್ತೆಯಲ್ಲಿರುವ ಗೋಖಲೆ ಸಾರ್ವಜನಿಕವಿಚಾರಸಂಸ್ಥೆಯಲ್ಲಿ ನಮ್ಮ ಯುವಮಿತ್ರರೂ ಸಾಹಿತ್ಯರಸಿಕರೂ ಆದ
ಶ್ರೀ ಗಣೇಶಭಟ್ಟ ಕೊಪ್ಪಲತೋಟರ ಮೂರನೆಯ ಅಷ್ಟಾವಧಾನಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದಕ್ಕೆ ಪ್ರಾಯೋಜಕರಾಗಿ ಒದಗಿ ಬಂದವರು ನಮ್ಮ ಪದ್ಯಪಾನ ಬಳಗದವರೇ ಆದ ಶ್ರೀ.ಸೋಮಶೇಖರಶರ್ಮ, ಶ್ರೀ.ರವಿಶಂಕರ್ ಮತ್ತು ಶ್ರೀ.ಶ್ರೀಧರ್ ಸಾಲಿಗ್ರಾಮ ಅವರ ಪೂಜ್ಯಮಾತಾಪಿತರು.ಇದಕ್ಕಾಗಿ ಅವರಿಗೆ ವಿಶೇಷಕೃತಜ್ಞತೆಗಳು.
ಶ್ರೀ ಗಣೇಶಭಟ್ಟ ಕೊಪ್ಪಲತೋಟ
ಈ ಅವಧಾನದಲ್ಲಿ ಪೃಚ್ಛಕರಾಗಿ ಪಾಲ್ಗೊಳ್ಳಲು ಪ್ರೀತಿಯಿಂದ ಒಪ್ಪಿದವರು :
ಶ್ರೀ. ಎಮ್ ಆರ್ ಚಂದ್ರಮೌಳಿ (ನಿಷೇಧಾಕ್ಷರಿ)
ಶ್ರೀ. ಮಂಜುನಾಥ ಕೊಳ್ಳೇಗಾಲ (ಸಮಸ್ಯಾಪೂರಣ)
ಶ್ರೀ. ಬಿ ಆರ್ ಪ್ರಭಾಕರ್ (ದತ್ತಪದೀ)
ಶ್ರೀಮತಿ. ಉಷಾ ಉಮೇಶ್ (ನ್ಯಸ್ತಾಕ್ಷರೀ)
ಶ್ರೀ. ಸುಧೀರ್ ಕೃಷ್ಣಸ್ವಾಮಿ (ಆಶುಕವಿತೆ)
ಶ್ರೀಮತಿ. ಶ್ರೀಲಲಿತಾ ರೂಪನಗುಡಿ (ಕಾವ್ಯವಾಚನ)
ಶ್ರೀ. ರಂಗನಾಥ ಪ್ರಸಾದ್ (ಸಂಖ್ಯಾಬಂಧ)
ಶ್ರೀ. ಆರ್ ಗಣೇಶ್ (ಅಪ್ರಸ್ತುತಪ್ರಸಂಗ)

ಅಷ್ಟಾವಧಾನಿ ಕೊಪ್ಪಲತೋಟರು ಕೇವಲ ಇಪ್ಪತ್ತಾರು ವರ್ಷಗಳ ಕಿರಿಯ ಹರೆಯದಲ್ಲಿಯೇ ಮಾಡಿರುವ ಸಾಹಿತ್ಯಸಾಧನೆ ಸ್ತುತ್ಯವಾಗಿದೆ. ಅವರು ಈಗಾಗಲೇ ಕಥೆ, ಕಾದಂಬರಿ, ಕವಿತೆ, ಖಂಡಕಾವ್ಯ ಮುಂತಾದ ಪ್ರಕಾರಗಳಲ್ಲಿ ದುಡಿದಿದ್ದಾರೆ. ಅಲ್ಲದೆ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಸಾಹಿತ್ಯಗಳಲ್ಲಿ ಒಳ್ಳೆಯ ಅಧ್ಯಯನವನ್ನೂ ಮಾಡಿದ್ದಾರೆ. ಜೊತೆಗೆ ಒಳ್ಳೆಯ ಧಾರೆ, ಧಾರಣ ಮತ್ತು ಪ್ರತಿಭೆ-ಪಾಂಡಿತ್ಯಗಳ ಹದವುಳ್ಳ ತಮ್ಮ ಮೊದಲ ಅವಧಾನದ ಮೂಲಕವೇ ವಿದ್ವದ್ರಸಿಕರಲ್ಲಿ ಹೊಸಭರವಸೆಯನ್ನೂ ಮೂಡಿಸಿದ್ದಾರೆ. ಇಂಥ ಮೇಧಾವಿಗಳಾದ ತರುಣರ ವಿಶಿಷ್ಟಕಲೆಯನ್ನು ಮೆಚ್ಚಿ ಆದರಿಸಲು ಕನ್ನಡಸಾಹಿತ್ಯರಸಿಕರೂ ಅವಧಾನಕಲಾಪ್ರೇಮಿಗಳೂ ಬರಬೇಕೆಂದು ವಿನಂತಿ. ಎಲ್ಲ ಕಾವ್ಯರಸಿಕರಿಗೂ ಆದರದ ಸ್ವಾಗತ.ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಗಿರೀಶ್ ಕಾಸರವಳ್ಳಿ ಚಿತ್ರೋತ್ಸವ


ಜು. 25ರಿಂದ ಜು. 29ರವರೆಗೆ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಗಿರೀಶ್ ಕಾಸರವಳ್ಳಿ ಚಿತ್ರೋತ್ಸವ ಆಯೋಜನೆಗೊಂಡಿದೆ.  

Wednesday, July 22, 2015

ವಂಶ ವೃಕ್ಷ ಕಾದಂಬರಿ ಕುರಿತಾದ ಅನಿಸಿಕೆಗೆ - ಶಿವಕುಮಾರ್

ನಮಸ್ಕಾರ !!
ವಂಶವೃಕ್ಷಕ್ಕೆ ಐವತ್ತು ವರ್ಷಗಳು ತುಂಬಿರಬಹುದು ಆದರೆ ನಾನು ಅದನ್ನು ಓದಿದ್ದು ನಾಲ್ಕು ವರ್ಷಗಳ ಹಿಂದೆ !! ನಂತರ ಐದು ಬಾರಿ ಇದನ್ನು ಓದಿದ್ದೆನೆ. ನನ್ನ ಹುಟ್ಟು ಹಬ್ಬಕ್ಕೆ ನನ್ನ ಆಪ್ತ ಗೆಳೆಯ ಶಂಕರ್ ಕವಲು ಕಾದಂಬರಿಯನ್ನು ಉಡುಗೊರೆಯಾಗಿ ಕೊಟ್ಟಿದ್ದ. ಆಗ ನಾನು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. (ಭೈರಪ್ಪನವರು ಇಲ್ಲೇ ಕಾರ್ಯ ನಿರ್ವಹಿಸಿ ನಿವೃತ್ತರಾದರು) ಆಗಿನಿಂದ ನಾನು ಭೈರಪ್ಪನವರ ಪುಸ್ತಕಗಳನ್ನು ಓದಲು ಶುರು ಮಾಡಿದ್ದು. ಅಲ್ಲಿದ್ದ ಶೀಘ್ರಲಿಪಿಗಾರರಾದ ಜಗದೀಶ್ ಭೈರಪ್ಪನವರ ಬಗ್ಗೆ ಬಹಳ ಹೇಳುತ್ತಿದ್ದರು (ಇವರ ಹೆಸರನ್ನು ಭೈರಪ್ಪನವರು ತಮ್ಮ ಭಿತ್ತಿ ಪುಸ್ತಕದಲ್ಲಿ
ನೆನಪಿಸಿಕೊಂಡಿದ್ದಾರೆ) ಮತ್ತು ಭೈರಪ್ಪನವರ ಅಭಿಮಾನಿ ಹಾಗು ಅವರ ಬೋಧನೆಯನ್ನು ಕೇಳಿದ್ದ ಮತ್ತು ಈಗ ಅದೇ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಪ್ರೊಫೆಸರ್ ಆಗಿರುವ ನನ್ನ ಗುರುಸಮಾನರಾದ ಡಾ. ಗೌರಮ್ಮ ಭೈರಪ್ಪನವರ ಬಗ್ಗೆ ಹೇಳುತ್ತಿದ್ದಲ್ಲದೆ ಅವರ ಕಾದಂಬರಿಗಳ ಬಗ್ಗೆ ನನ್ನೊಡನೆ ಚರ್ಚಿಸುತ್ತಿದರು. ನಂತರ ನಾನು ನ್ಯಾಯಾಂಗ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ ನಂತರ ಎರಡು ವರ್ಷಗಳ ಹಿಂದೆ ಚಾಮರಾಜನಗರಕ್ಕೆ ವರ್ಗವಾದೆ. ದಿನಾ ಬೆಳಿಗ್ಗೆ ೭. ೩೦ ಗಂಟೆಯ ರೈಲಿನಲ್ಲಿ ಪ್ರಯಾಣ ಮತ್ತೆ ಸಂಜೆ ೬ ಗಂಟೆಗೆ ವಾಪಾಸ್ಸು ಮೈಸೂರಿಗೆ ರೈಲಿನಲ್ಲಿ ಬರುತ್ತಿದ್ದೆ. ಹೋಗುವಾಗ ಬರುವಾಗ ಒಂದೂವರೆ ತಾಸಿನ ಸಮಯದಲ್ಲಿ ಭೈರಪ್ಪನವರ ಕಾದಂಬರಿಗಳನ್ನು ಓದುತ್ತಿದ್ದೆ. ರೈಲು ನಂಜನಗೂಡು ಮಾರ್ಗವಾಗಿ ಹೋಗುವಾಗ ಪ್ರತಿದಿನ ಕಾತ್ಯಾಯನಿ ಶೋತ್ರಿಗಳು ಮತ್ತಿತರೇ ಪಾತ್ರಗಳು ಜ್ಞಾಪಕಕ್ಕೆ ಬರುತ್ತವೆ. ಇಲ್ಲಿ ಇನ್ನೊಂದು ಹೇಳಲೇ ಬೇಕಾದ ವಿಚಾರವಿದೆ. ನೀವು ಯಾರಾದರು ನಂಜನಗೂಡಿಗೆ ಅಥವಾ ಚಾಮರಾಜನಗರಕ್ಕೆ ಮೇಲೆ ತಿಳಿಸಿದ ರೈಲಿನಲ್ಲಿ ಪ್ರಯಾಣ ಮಾಡುವ ಸಂಧರ್ಭ ಬಂದರೆ ಐದನೇ ಬೋಗಿಗೆ ಬಂದರೆ ಸೀಟ್ ನಂಬರ್ ೪೦ ರಿಂದ ೬೮ ರ ವರೆಗೆ ಭೈರಪ್ಪನವರ ಕಾದಂಬರಿಗಳ ಬಗ್ಗೆ ಮತ್ತು ಪಾತ್ರಗಳ ಬಗ್ಗೆ ಪ್ರತಿ ನಿತ್ಯ ಚರ್ಚೆ ನಡೆಯುತ್ತಲೇ ಇರುವುದನ್ನು ನೋಡಬಹುದು ! ನೀವು ಪಾಲ್ಗೊಳ್ಳಬಹುದು, ಇದರಲ್ಲಿ ಇರುವವರೆಲ್ಲ ವೃತ್ತಿಯಲ್ಲಿ ವಿವಿಧ ಇಲ್ಲಖೆಗಳವರು. ಭೈರಪ್ಪನವರ ಪುಸ್ತಕಗಳು ಇಲ್ಲಿ ಸರ್ಕ್ಯುಲೇಟ್ ಆಗುತ್ತಿರುತ್ತದೆ. ಹೀಗೆ ನಾವೆಲ್ಲಾ ಭೈರಪ್ಪನವರ ಪುಸ್ತಕಗಳನ್ನು ಓದಿ ಚರ್ಚಿಸುತ್ತಿರುತ್ತೇವೆ. ರೈಲು ನಂಜನಗೂಡಿನ ಸೇತುವೆ ದಾಟಿ ಗುಂಡ್ಲು ಹೊಳೆಯನ್ನು ದಾಟಿ ಹೋಗುವುದರೊಳಗೆ ಕಾತ್ಯಾಯಿನಿ ದಿನನಿತ್ಯ ಇದೇ ರೈಲಿನಲ್ಲಿ ಚಲಿಸಿರಬಹುದು ಎಂಬ ಭಾವ ಬಹುತೇಕರನ್ನು ಕಾಡಿದೆ. ಕೆಲವೊಮ್ಮೆ ಕಪಿಲಾ ನದಿಯಲ್ಲಿ ನೀರು ತುಂಬಿ ಹರಿಯುವಾಗ ಶೋತ್ರಿಗಳ ಮಗ ಹೀಗೆ ನದಿ ನೀರು ತುಂಬಿ ಹರಿಯುವಾಗ ಮೃತ ಪಟ್ಟಿರ ಬಹುದೇ ಎಂಬ ಆಲೋಚನೆ ಬರುತ್ತದೆ. ಇದು ನನ್ನೊಬ್ಬನ ಕಲ್ಪನೆಯಲ್ಲ. ನನ್ನೊಡನೆ ಈ ವಿಚಾರಗಳ ಬಗ್ಗೆ ಬಹುತೇಕರು ಚರ್ಚಿಸಿದ್ದಾರೆ. ಇವರು ಯಾರೂ ಫೇಸ್ ಬುಕ್ ನಲ್ಲಿ ಇಲ್ಲ.. ಸ್ಮಾರ್ಟ್ ಫೋನ್ ಇವರೆಲ್ಲರ ಬಳಿ ಇಲ್ಲ ! ಆದರೆ ಭೈರಪ್ಪನವರ ಬಗ್ಗೆ ಈ ಫೇಸ್ಬುಕ್ ಗ್ರೂಪ್ ನಲ್ಲಿ ಆಗುವ ಚರ್ಚೆಗಳಿಗಿಂತಲೂ ವಿಭಿನ್ನವಾದ ಚರ್ಚೆಗಳು ಆಗುತ್ತವೆ. ಇನ್ನು ಅನೇಕ ವಿಚಾರಗಳು ಇವೆ. ವಂಶವೃಕ್ಷಕ್ಕೆ ಐವತ್ತು ವರ್ಷಗಳು ತುಂಬಿದ ಈ ಸಂದರ್ಭದಲ್ಲಿ ವಂಶವೃಕ್ಷದ ಬಗ್ಗೆ ಒಂದುದಿನ ಮುಂದಿನವಾರದಲ್ಲಿ ನಾವೆಲ್ಲಾ ರೈಲಿನಲ್ಲಿ ಚರ್ಚೆ ಮಾಡಿ, ನಡೆದ ಸಂಗತಿಯನ್ನು ಇಲ್ಲಿ ಹಾಕುತ್ತೇನೆ. ಆ ಸಮದಯದ ಫೋಟೋ ತೆಗೆದು ಈ ಗ್ರೂಪಿನಲ್ಲಿ ಹಾಕುತ್ತೇನೆ.

 ಡಾ|| ಶಿವಕುಮಾರ್

ಹಕ್ಕಿ ಹಾರುತಿದೆ ನೋಡಿದಿರಾ? - ದ ರಾ ಬೇಂದ್ರೆ,

ದ ರಾ ಬೇಂದ್ರೆ, 
ಹಕ್ಕಿ ಹಾರುತಿದೆ ನೋಡಿದಿರಾ?
ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತುಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ?

ಕರಿನರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ -ಗರಿಯುಂಟು
ಕೆನ್ನನ ಹೊನ್ನನ ಬಣ್ಣ-ಬಣ್ಣಗಳ
ರೆಕ್ಕೆಗಳೆರಡೂ ಪಕ್ಕದೊಲುಂಟು
ಹಕ್ಕಿ ಹಾರುತಿದೆ ನೋಡಿದಿರಾ?

ನೀಲಮೇಘಮಂಡಲ-ಸಮ ಬಣ್ಣ
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ
ಚಿಕ್ಕಿಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ?

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ?

ಯುಗ-ಯುಗಗಳ ಹಣೆ ಬರಹವ ಒರಸಿ
ಮನ್ವಂತರಗಳ ಭಾಗ್ಯವ ತರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ?

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ?

ಮುಟ್ಟಿದೆ ದಿಗ್ಮಂಡಲ ಅಂಚ
ಆಚಿಗೆ ಚಾಚಿದೆ ತನ್ನಯ ಕುಂಚ
ಬ್ರಹ್ಮಾಂಡಲಗಳ ಒಡೆಯಲು ಎಂದೊ
ಬಲ್ಲರು ಯಾರಾ ಹಾಕಿದ ಹೊಂಚ!
ಹಕ್ಕಿ ಹಾರುತಿದೆ ನೋಡಿದಿರಾ?


ನಾದಲೀಲೆ - ಕುರುಡು ಕಾಂಚಾಣ

ದ.ರಾ. ಬೇಂದ್ರೆ (ಅಂಬಿಕಾತನಯದತ್ತ) | ನಾದಲೀಲೆ
ಕುರುಡು ಕಾಂಚಾಣ ಕುಣಿಯುತಲಿತ್ತು
ಕಾಲಿಗೆ ಬಿದ್ದವರ ತುಳಿಯುತಲಿತ್ತೊs
ಕುರುಡು ಕಾಂಚಾಣ || ಪಲ್ಲವಿ ||

ಬಾಣಂತಿಯೆಂಬಾ ಸಾ-
ಬಾಣದ ಬಿಳುಪಿನಾ
ಕಾಣದ ಕಿರುಗೆಜ್ಜೆ ಕಾಲಾಗೆ ಇತ್ತೋ
ಸಣ್ಣ ಕಂದಮ್ಮಗಳ
ಕಣ್ಣೀನ ಕವಡಿಯ
ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ;

ಬಡವರ ಒಲವಿನ
ಬಡಬಾsನಲದಲ್ಲಿ
ಸುಡು ಸುಡು ಪಂಜವು ಕೈಯೊಳಗಿತ್ತೊ;
ಕಂಬನಿ ಕುಡಿಯುವ
ಹುಂಬ ಬಾಯಿಲೆ ಮೈ-
ದುಂಬಿದಂತಧೊ ಉಧೊ ಎನ್ನುತ್ತಲಿತ್ತೊ;

ಕೂಲಿ ಕಂಬಳಿಯವರ
ಪಾಲಿನ ಮೈದೊಗಲ
ಧೂಳಿಯ ಭಂಡಾರ ಹಣೆಯೊಳಗಿತ್ತೊ;
ಗುಡಿಯೊಳಗೆ ಗಣಣ ಮಾ-
ಹಡಿಯೊಳಗೆ ತನನ ಅಂ-
ಗಡಿಯೊಳಗ ಝಣಣ ನುಡಿಗೊಡುತ್ತಿತ್ತೋ;

ಹ್ಯಾಂಗಾರೆ ಕುಣಿಕುಣಿದು
ಮಂಗಾಟ ನಡೆದಾಗ
ಅಂಗಾತ ಬಿತ್ತೋ, ಹೆಗಲಿ ಎತ್ತೋ.

(ಅಂಬಿಕಾತನಯದತ್ತ) | ಭಾವಗೀತೆ | ಶ್ರಾವಣ
ಮುಗಿಲ ಮಾರಿಗೆ ರಾಗರತಿಯಾ....
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ನೆಲದ ಅಂಚಿಗೆ ಮಂಜಿನ ಮುಸುಕೂ
ಹ್ಯಾಂಗೋ ಬಿದ್ದಿತ್ತಾ, ಗಾಳಿಗೆ ಮೇಲಕ್ಕೆದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ

ಬಿದಿಗಿ ಚಂದ್ರನ ಚೊಗಚಿ ನಗಿವು
ಮೆಲ್ಲಗ ಓಡಿತ್ತ, ಮ್ಯಾಲಕ ಬೆಳ್ಳಿನ ಕೂಡಿತ್ತ
ಬಿದಿಗಿ ಚಂದ್ರನ ಚೊಗಚಿ ನಗಿವು
ಮೆಲ್ಲಗ ಓಡಿತ್ತ, ಮ್ಯಾಲಕ ಬೆಳ್ಳಿನ ಕೂಡಿತ್ತ
ಇರುಳ ಹರಳಿನ ಅರಳ ಮಲ್ಲಿಗೆ
ಜಾವಿಗೆ ಹಾಂಗಿತ್ತ, ಸೂಸ್ಯಾವ ಚಿಕ್ಕೆ ಹತ್ತಿತ್ತ

ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ

ಬೊಗಸೆಗಣ್ಣಿನ ಬಯಕೆ ಹೆಣ್ಣು
ನೀರಿಗೆ ಹೋಗಿತ್ತ.. ತಿರುಗಿ ಮನೆಗೆ ಸಾಗಿತ್ತ..
ಬೊಗಸೆಗಣ್ಣಿನ ಬಯಕೆ ಹೆಣ್ಣು
ನೀರಿಗೆ ಹೋಗಿತ್ತ.. ತಿರುಗಿ ಮನೆಗೆ ಸಾಗಿತ್ತ..
ಕಾಮಿ ಬೆಚ್ಚಿಹಾಂಗ ಭಾವಿಹಾದಿ
ಕಾಲಾಗ ಸುಳಿದಿತ್ತ.. ಎರಗಿ ಹಿಂದಕ್ಕುಳಿದಿತ್ತ..

ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ

ಮಳ್ಳ ಗಾಳಿ ಸುಳಿದಳ್ಳ ಕೈಲೆ
ಸೆರಗನು ಹಿಡಿದಿತ್ತ.. ಮತ್ತ ಮತ್ತ ಬೆರಗಿಲೆ ಬಿಡತಿತ್ತ..
ಮಳ್ಳ ಗಾಳಿ ಸುಳಿದಳ್ಳ ಕೈಲೆ
ಸೆರಗನು ಹಿಡಿದಿತ್ತ.. ಮತ್ತ ಮತ್ತ ಬೆರಗಿಲೆ ಬಿಡತಿತ್ತ..
ಒಂದು ಮನದ ಗಿಳಿ ಹಿಂದ ನೆಳ್ಳಿಗೆ
ಹುಣ್ಣಿವೆ ಬರಲಿತ್ತ.. ತನ್ನಾ ಮೈಮನ ಮರೆತಿತ್ತ..

ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ನೆಲದ ಅಂಚಿಗೆ ಮಂಜಿನ ಮುಸುಕೂ
ಹ್ಯಾಂಗೋ ಬಿದ್ದಿತ್ತಾ, ಗಾಳಿಗೆ ಮೇಲಕ್ಕೆದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ
ಮುಗಿಲ ಮಾರಿಗೆ ರಾಗರತಿಯಾ....ನಾನು ಬಡವಿ, ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು ||ಪ ||

ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣು ಕಟ್ಟುವಂತ ಮೂರ್ತಿ
ಕಿವಿಗೆ ಮೆಚ್ಚಿನೋಲೆ

ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುತ್ತೆ
ಅದೇ ಗಳಿಗೆ ಮೈಯ ತುಂಬ

ನನಗೆ ನವಿರು ಬತ್ತೆ

ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂಧಿ
ಕೆನ್ನೆ ತುಂಬ ಮುತ್ತು
ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವಫಲವ
ತುಟಿಗೆ ಹಾಲು ಜೇನು
ದ ರಾ ಬೇಂದ್ರೆ,  

Monday, July 20, 2015

ತಬ್ಬಲಿಯು ನೀನಾದೆ ಮಗನೆ - ಗಣೇಶ ಕೊಪ್ಪಲತೋಟ   ಹೆಸರನ್ನು ಓದಿ ತಕ್ಷಣ ಭೈರಪ್ಪನವರ ಕಾದಂಬರಿಯ ಬಗ್ಗೆ ಬರೆಯುತ್ತಿದ್ದೇನೆ ಎಂದು ತಿಳಿದುಕೊಳ್ಳಬೇಡಿ. ಪುಣ್ಯಕೋಟಿಯ ಹಾಡಿನಲ್ಲಿ ಬರುವ ಈ ಸಾಲಿನಿಂದ ಭೈರಪ್ಪನವರು ಒಂದು ಕಾದಂಬರಿಯನ್ನು ಬರೆದದ್ದಂತೂ ಹೌದು. ಇತ್ತೀಚಿಗೆ ಸ್ವರ್ಣವಲ್ಲಿ ಮಠದಲ್ಲಿ ಅವರ 'ಕವಲು' ಕಾದಂಬರಿಯ ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದಾಗ ಅದರಲ್ಲಿ "ಪುಣ್ಯಕೋಟಿಯಂತಹ ಮೌಲ್ಯಯುತ ಕಥೆಗಳು ಇಂದಿನ ಪಟ್ಯಪುಸ್ತಕಗಳಲ್ಲಿ  ಕಾಣುತ್ತಿಲ್ಲ.ಹಸು ಮಾತನಾಡುವುದೆಲ್ಲ unscientific ಎಂದು ಹೇಳಿಬಿಡುತ್ತಾರೆ. ಅದರ ಮೌಲ್ಯವನ್ನು ಅರಿತುಕೊಳ್ಳುತ್ತಿಲ್ಲ" ಎಂದು ವಿಷಾದ ವ್ಯಕ್ತಪಡಿಸಿದರು.


ಮೌಲ್ಯ ಶಿಕ್ಷಣ ಎಂಬುದು ಬೋಧಿಸಿ ಅದಕ್ಕೊಂದು ಪರೀಕ್ಷೆ ಇಟ್ಟು ಅದರಿಂದ ತಿಳಿದುಕೊಳ್ಳುವಂತಹದ್ದಲ್ಲ.' ಎಂದೂ ಹೇಳಿದರು.ಆಗ ನನಗೆ ಅನ್ನಿಸಿದ್ದು ಮೌಲ್ಯ ಶಿಕ್ಷಣದ ಮೌಲ್ಯವನ್ನು ಮಕ್ಕಳು ಚಿಕ್ಕವರಾಗಿದ್ದಾಗಿನಿಂದಲೇ ತಿಳಿಸಿ ಹೇಳಬೇಕು ಎಂದು.ಹಿರಿಯರು ತಂದೆತಾಯಿಯರು ನಡೆದಂತೆ ಮಕ್ಕಳು ಅನುಸರಿಸುತ್ತಾರೆ.
ನಿತ್ಯವೂ ದೇವರಿಗೆ ಕೈಮುಗಿಯುವ ತಾಯಿಯೊಡನೆ ಮಗಳೂ ಕೈ ಮುಗಿಯುತ್ತಾಳೆ. ಅಪ್ಪ ಸಿಗರೇಟು ಸೇದುವುದನ್ನು  ನೋಡಿದ ಮಗ ಅದನ್ನೇ ಅನುಕರಿಸುತ್ತಾನೆ. ಹೀಗಾಗಿ ತಮ್ಮ ಮಕ್ಕಳ ಉನ್ನತಿಗೆ ಹಾಗು ಮೌಲ್ಯಯುತ ಜೀವನಕ್ಕೆ ತಂದೆತಾಯಿಯರೂ ಮೌಲ್ಯಯುತವಾಗಿ ಬದುಕುವುದು ಅವಶ್ಯಕ.


          ಹಠಮಾರಿ ಮಗನೊಬ್ಬನ ತಾಯಿಗೆ ಏನು ಮಾಡಿದರೂ ಮಗನನ್ನು ತಿದ್ದಲಾಗಲಿಲ್ಲ. ಶಾಲೆಯಿಂದ ಸಣ್ಣ ಪುಟ್ಟ ವಸ್ತುಗಳನ್ನು ಕದ್ದು ತರುತ್ತಿದ್ದ. ಅವನು ದೊಡ್ಡವನಾದಾಗ ತಾಯಿ ಒಂದು ದಿನ ನಿಶ್ಚಯ ಮಾಡಿ ಹೇಳಿದಳು "ಮಗೂ ಕದಿಯುವುದು ಕೆಟ್ಟ ಕೆಲಸ ಎಂದು ನಿನಗೆ ಗೊತ್ತಿಲ್ಲವೇ? " ಎಂದು. ಆಗ ಮಗ "ನನಗೆ ಬೇಕಾದ್ದನ್ನು ನಾನೂ ಮಾಡುತ್ತೀನಿ" ಎಂದ. ಅದಕ್ಕೆ ತಾಯಿ "ಸರಿ ಹಾಗಾದರೆ ನೀನು ಒಂದೊಂದು ಕಳ್ಳತನ ಮಾಡಿದಾಗಲೂ ನಾನೂ ಒಂದೊಂದು ಮೊಳೆ ತಂದು ಈ ಗೋಡೆಗೆ ಹೊಡೆಯುತ್ತೇನೆ" ಎಂದಳು. ಅವನು ಅದರಿಂದ ತನ್ನ ಗಂಟೇನು ಹೋಗುವುದಿಲ್ಲ ಎಂದು ಸುಮ್ಮನಿದ್ದ. ಕೆಲವು ತಿಂಗಳು ಕಳೆದ ನಂತರ ಗೋಡೆಯ ಮೇಲೆಲ್ಲಾ ಮೊಳೆಗಳಿದ್ದವು. ಮತ್ತೂ ಕೆಲವು ಕಾಲ ಕಳೆದ ನಂತರ ಒಮ್ಮೆ ಮಗ ಆ ಗೋಡೆಯನ್ನು ನೋಡಿ "ಛೆ.. ಎಷ್ಟೊಂದು ಕಳ್ಳತನ ಮಾಡಿಬಿಟ್ಟೆ.ತಪ್ಪು ಮಾಡಿಬಿಟ್ಟೆ." ಎಂದು ಪಶ್ಚಾತ್ತಾಪ ಪಟ್ಟು ತಾಯಿಯ ಬಳಿ ಕ್ಷಮೆ ಯಾಚಿಸಿದ.ತನು ಕದ್ದದ್ದೆಲ್ಲವನ್ನು ಹಿಂತಿರುಗಿಸುವುದಾಗಿ ಹೇಳಿದ. ಅವನ ತಾಯಿ ಆಗ ಗೋಡೆಯ ಮೇಲಿದ್ದ ಮೊಳೆಗಳನ್ನೆಲ್ಲ ಕಿತ್ತು ಹಾಕಿದಳು. ಗೋಡೆಯ ಮೇಲಿದ್ದ ಕಲೆಗಳನ್ನು ತೋರಿಸಿ " ನೋಡಿದೆಯಾ? ಒಂದು ಬಾರಿ ಕೆಟ್ಟ ಕೆಲಸ ಮಾಡಿದರೂ ಅಳಿಸಲಾಗದ ಕಲೆ ಬಿದ್ದು ಹೋಗುತ್ತದೆ. ಈಗ ನೀನು ಸುಮ್ಮನಿದ್ದರೆ ಆ ಕಲೆಗಳು ಹಾಗೆ ಇರುತ್ತವೆ.ಅದನ್ನು ಹೋಗಲಾಡಿಸಲು ಒಳ್ಳೆ ಕೆಲಸಗಳನ್ನು ಮಾಡು. ಸುಣ್ಣ ತುಂಬಿಸಿ ಅದನ್ನು ಮುಚ್ಚು." ಎಂದಳು.  ಎಷ್ಟು ಅರ್ಥವತ್ತಾದ ಮಾತು. ಕೆಟ್ಟ ಕೆಲಸದಿಂದ ಕಳಂಕ ಬರುತ್ತದೆ ಅದನ್ನು ಹೋಗಲಾಡಿಸಲು ಒಳ್ಳೆ ಕೆಲಸಗಳನ್ನು ಮಾಡಬೇಕು. ಅದೇ ಒಳ್ಳೆ ಕೆಲಸಗಳಲ್ಲೇ ತೊಡಗಿಕೊಂಡಿದ್ದರೆ ಎಂತಹ ಸುಂದರವಾಗುತ್ತದೆ ಈ ಜೀವನ!

                 ಆದರೆ ಈಗಿನ ಪರಿಸ್ಥಿತಿ ಹೇಗಾಗುತ್ತಿದೆ ಎಂದರೆ ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ, ಅಜ್ಜ ಅಜ್ಜಿ ಇಬ್ಬರೂ ವೃದ್ಧಾಶ್ರಮದಲ್ಲಿದ್ದಾರೆ.ಮಕ್ಕಳು ಭಾರವಾದ ಪುಸ್ತಕದ ಹೊರೆ ಹೊತ್ತು ಕಾನ್ವೆಂಟ್ ಗೆ ಹೋಗುತ್ತಾರೆ ಅಥವಾ ಇನ್ನು ಚಿಕ್ಕವರಾದರೆ ತಂದೆ ತಾಯಿಯರು ಮಕ್ಕಳನ್ನು ನೋಡಿಕೊಳ್ಳುವ ದಾದಿಯರಿಗೆ  ಸಾವಿರಾರು ರೂಪಾಯಿ ತೆತ್ತು ಅವರ ಬಳಿ ಬಿಟ್ಟು ಹೋಗುತ್ತಾರೆ. ಇಂತಹ ಮಕ್ಕಳಿಗೆ ಎಲ್ಲಿಂದ ಸಿಗಬೇಕು ನೈತಿಕ ಅಥವಾ ಮೌಲ್ಯ ಶಿಕ್ಷಣ? ಅಜ್ಜ ಅಜ್ಜಿಯರು ಮೊಮ್ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದರೆ ಅವರು ಅಲ್ಪ ಸ್ವಲ್ಪ ಮೌಲ್ಯಯುತ ಜ್ಞಾನವನ್ನು ಮಕ್ಕಳಿಗೆ ಉಣಿಸಬಹುದು. ಅನವರತ " ಓದು ಓದು ಓದು" ಎಂದು ಹೇಳುತ್ತಿದ್ದಾರೆ ಮಕ್ಕಳಲ್ಲಿರುವ ಉಳಿದ ಪ್ರತಿಭೆಗಳು ಬೆಳಕಿಗೆ ಬರುವುದಿಲ್ಲ, ಓದೂ ಅಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಮಕ್ಕಳು ಆಟವಾಡಿಕೊಂಡು ನಲಿದಾಡುತ್ತಾ ಕಲಿಯಬೇಕು.ಇಲ್ಲದಿದ್ದರೆ ಜೀವನ ಕೇವಲ ಯಾಂತ್ರಿಕವಾಗುತ್ತದೆ. ಹಿಂದೆ ಸಮಾಜದಲ್ಲಿದ್ದ ಎಲ್ಲ ಸಮಸ್ಯೆಗಳಿಗಿಂತ ಭೀಕರವಾಗಿ ಇಂದು ಈ ಸಮಸ್ಯೆ ನಮ್ಮೆಲ್ಲರ ಮುಂದೆ ನಿಂತಿದೆ. ಅದನ್ನು ಸಮರ್ಥವಾಗಿ ಎದುರಿಸುವ ಉಪಾಯವೂ ನಮ್ಮ ಬಳಿಯಲ್ಲೇ ಇದೆ.
             ತಂದೆ ತಾಯಿಯರಿದ್ದೂ ತಬ್ಬಲಿಗಳಂತಾಗಿರುವ ಇಂದಿನ ಮಕ್ಕಳನ್ನು 'ಕಿಡ್ಸ್ ಗಾರ್ಡಿಂಗ್ ಹೋಂ' ನಲ್ಲೋ ಅಥವಾ ಮತ್ತೆಲ್ಲೋ ಬಿಡುವಾಗಲಾದರೂ ತಾಯಂದಿರಿಗೆ ಎಂದೋ ಕೇಳಿದ "ತಬ್ಬಲಿಯು ನೀನಾದೆ ಮಗನೆ" ಹಾಡು ನೆನಪಿಗೆ ಬರಲಿ..

       ಸರ್ವೇ ಭವಂತು ಸುಖಿನಃ


 ಗಣೇಶ ಕೊಪ್ಪಲತೋಟ  


Wednesday, July 15, 2015

ಕೈಗಂಟಿದ ಅತ್ತರು (ಅನುಭವ) - ರಾಜೇಶ್ ಶ್ರೀವತ್ಸ


ನಾನು ಪ್ರೇತದ ಕೈ ಹಿಡಿದು ಮೇಲೆಬ್ಬಿಸಿದೆನೇ?
ನೈಸ್ ರಸ್ತೆಯ ಸೇತುವೆಯ ಕಡೆಗೆ ನಡೆಯುತ್ತಾ ಮನೆಯ ಕಡೆ ಸಾಗುತ್ತಿದ್ದೆ. ತಲೆ ಸಣ್ಣಗೆ ನೋಯುತ್ತಿತ್ತು ಮಾತ್ರೆ ತೆಗೆದುಕೊಂಡು ಮನೆಗೆ ಹೋಗಬೇಕು ಅಂದುಕೊಂಡೆ. ಕೆಲಸ ಮುಗಿಸಿ ಮನೆಯ ಕಡೆ ಸಾಗುತ್ತಿದ್ದ ಗಾರ್ಮೆಂಟ್ಸ್ ಕಂಪನಿಯ ಹುಡುಗಿಯರಿಂದ ರಸ್ತೆ ಗಿಜಿಗಿಡುತ್ತಿತ್ತು. ಎದುರಿನ ವಿಟ್ಟಸಂದ್ರದ ಕಡೆಯಿಂದ ಸುಮಾರು ಮೂವತ್ತು ವರ್ಷದ ಹೆಂಗಸು ನಡೆದು ಬರುತ್ತಿದ್ದಳು. ಸುಮಾರು ಐದೂವರೆ ಅಡಿ ಎತ್ತರ, ದಪ್ಪದೇಹ, ಗೌರವರ್ಣ, ಗುಂಗುರು ಕೂದಲು, ತಲೆ ತುಂಬಾ ಹೂವು, ಕಾಲಿನಲ್ಲಿ ಇಂಚಗಲದ ಬೆಳ್ಳಿ ಗೆಜ್ಜೆ, ಕೈತುಂಬಾ ಬಳೆ , ಕೈಯಲ್ಲಿ ಪ್ಲಾಸ್ಟಿಕ್ ವಯರ್ ಚೀಲ. ಹತ್ತಿರ ಬರುತ್ತಿದ್ದಂತೇ ಕತ್ತಿನಲ್ಲಿದ್ದ ದೊಡ್ಡ ಕರಿಮಣಿ ಚಂದ್ರಹಾರ, ಕಿವಿಯಲ್ಲಿ ಹಳೆಯಕಾಲದ ಹಂಸದ ಹರಳಿನ ಕಿವಿಯೋಲೆ ನೋಡಿ ಅಕೆ ಮುಸ್ಲಿಮ್ ಇರಬೇಕು ಅನ್ನಿಸಿತು. ಇಬ್ಬರೂ ನೈಸ್ ಸೇತುವೆಯ ಕಡೆ ನಡೆದೆವು. ಆಕೆ ಮುಂದೆ. ನಾನು ಹಿಂದೆ. ಸೇತುವೆಯ ಮಧ್ಯ ಬರುತ್ತಿದ್ದಂತೆ ಆಕೆ ಜರ್ರನೆ ಜಾರಿ ಬಿದ್ದಳು. ಕೈಲಿದ್ದ ಚೀಲದಿಂದ ಖಾಲಿ ಟಿಫನ್ ಡಬ್ಬಗಳು ಉರುಳುತ್ತಾ ಹೊರಬಿದ್ದವು. ನಾನು ಅರ್ರೇ!! ಪ್ಚ್ ಪ್ಚ್ ಅನ್ನುತ್ತ ನೆರವಿಗೆ ಹತ್ತಿರ ಹೋಗಿ ನೆರವಿಗೆ ಕೈ ಚಾಚಿದೆ. ಅತ್ತರಿನ ಘಂ ಮೂಗಿಗೆ ಬಡಿಯಿತು. ಆಕೆ ನನ್ನ ಕೈ ಹಿಡಿದು ಸಾವರಿಸಿಕೊಂಡು ಎದ್ದು ಕುಳಿತಳು. ಉರುಳಿ ಬಿದ್ದ ಮೂರು ಟಿಫನ್ ಬಾಕ್ಸ್‌ಗಳನ್ನು ಎತ್ತಿ ಅಕೆಗೆ ನೀಡಿದೆ. ಆಕೆ ನಗುತ್ತಾ ’ ತುಂಬಾ ಥಾಂಕ್ಸ್‌ರೀ. ಅಣ್ಣನ ಮನೆಗೆ ಹೋಗ್ತಾ ಇದ್ದೆ ಇವತ್ತು ಇಫ್ತೆಹಾರ್. ಯಾವಾಗಲೂ ಸೇತುವೆ ದಾಟುವಾಗ ಇಲ್ಲಿ ಜಾರಿ ಬೀಳ್ತೀನಿ ’ ಅಂದಳು. ಅಲ್ಲಾ ಇಷ್ಟು ಹೆಣ್ಣು ಮಕ್ಕಳು ಓಡಾಡುತ್ತಿದ್ದರೂ ಈ ಹೆಣ್ಣಿನ ಸಹಾಯಕ್ಕೆ ಒಬ್ಬರೂ ಬರಲಿಲ್ಲವಲ್ಲ ಅನಿಸಿ ಸುತ್ತ ನೋಡಿದೆ. ರಸ್ತೆಯಲ್ಲಿರುವವರೆಲ್ಲಾ ನನ್ನನ್ನೆ ನೋಡುತ್ತಿದ್ದಾರೆ ಅನ್ನಿಸಿ ಕಸಿವಿಸಿಯಾಯ್ತು. ಹತ್ತಿರ ನಡೆದು ಬರುತ್ತಿದ್ದ ಇಬ್ಬರು ಹುಡುಗಿಯರು ನನ್ನನ್ನೆ ನೋಡುತ್ತಾ ’ ಏನಾಯ್ತು ಸಾರು ಏನಾದ್ರು ಕಳೆದುಕೊಂಡ್ರಾ ’ ಎಂದು ನನ್ನ ಕಡೆ ನೋಡಿ ನಿಂತು ವಿಚಾರಿಸಿದರು. ನಾನು ಪೆಚ್ಚು ಪೆಚ್ಚಾಗಿ ಎನೂ ಇಲ್ಲ ಅನ್ನುತ್ತಾ ಸುತ್ತ ನೋಡಿದೆ ಅಷ್ಟರೊಳಗೆ ಆ ಹೆಣ್ಣು ಅಲ್ಲಿಂದ ಎದ್ದು ಮಾಯವಾಗಿದ್ದಳು. ಜನ ಜಂಗುಳಿಯಲ್ಲಿ ಸೇರಿ ಹೋಗಿರ ಬೇಕೆಂದು ಸುಮ್ಮನಾದೆ. ಸೇತುವೆ ದಾಟಿ ವೀರಭದ್ರ ಮೆಡಿಕಲ್ಸ್ ಕಡೆ ನಡೆದು ನಾಲ್ಕು ನೈಸಿಪ್ ಕೊಡಿ ಅಂತ ಕೇಳಿದೆ. ಅಂಗಡಿಯಾತನಿಗೆ ನನ್ನ ಮುಖ ಪರಿಚಯವಿದೆ. ಆತ ’ ಏನು ಸಾರು ತುಂಬಾ ತಲೆ ನೋವಾ? ಸೇತುವೆ ಮೇಲೆ ಯಾಕೆ ಕೂತು- ನಿಂತು ಮಾಡ್ತಾ ಇದ್ದ್ರಿ ? ತಲೆ ತಿರುಗಿತಾ? ಏನಾದ್ರು ಕಳೆದುಕೊಂಡ್ರಾ ? ’ ಅಂತ ಕೇಳಿದ. ನಾನು ಯಾರದೋ ಟಿಫನ್ ಬಾಕ್ಸ್ ಎತ್ತಿಕೊಡ್ತಾ ಇದ್ದೆ ಎಂದಷ್ಟೇ ಹೇಳಿ ಮನೆಯ ಕಡೆ ತಿರುಗಿದೆ.
ನಮ್ಮ ಲೇಔಟ್ ಗೇಟಿನಿಂದ ಅಷ್ಟು ದೂರದಲ್ಲಿ ಹೊಲದ ಮಧ್ಯದಲ್ಲಿ ಸ್ಥಳೀಯ ಪುಢಾರಿ ಕಂ ರೌಡಿ ಜಮೀಲ್ ಅಬ್ಬಾಸನ ಬಂಗಲೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುತ್ತಾ ಇದ್ದರು. ಶಾಮಿಯಾನದ ಬಾಗಿಲಲ್ಲೇ ದೊಡ್ಡ ಫ್ಲೆಕ್ಸ್ ಬೋರ್ಡ್ ಅದರ ಮೇಲೆ ಜಮೀಲ್‌ನ ಚಿತ್ರ. ಅವನ ಪಕ್ಕದಲ್ಲಿ ನಮ್ಮ ಏರಿಯಾದ ಎಲ್ಲಾ ಪುಢಾರಿಗಳ ಮುಂಡಗಳನ್ನು ಕತ್ತರಿಸಿ ಸಾಲಾಗಿ ಅಂಟಿಸಿದ್ದರು. ಪಕ್ಕದಲ್ಲೇ ಇನ್ನೊಂದು ಫ್ಲೆಕ್ಸ್ ಬೋರ್ಡ್ ಅದರ ಮೇಲೆ ಒಬ್ಬ ಹೆಣ್ಣಿನ ಚಿತ್ರಕ್ಕೆ ಗುಲಾಬಿ ಹೂವಿನ ಅಲಂಕಾರ. ಹತ್ತಿರ ಬರುತ್ತಿದ್ದಂತೇ ಅದು ಅಲ್ಲಿ ಸೇತುವೆಯ ಮೇಲೆ ಭೇಟಿಯಾದ ಹೆಣ್ಣಿನ ಚಿತ್ರವೆಂದು ಗುರುತಿಸಿದೆ. ಕೆಳಗೆ ಉರ್ದು ಭಾಷೆಯಲ್ಲಿ ಎನೋ ಬರೆದಿದ್ದರು. ಅಪಾರ್ಟ್ಮೆಂಟ್‌ನ ಗೇಟ್ ದಾಟುತ್ತಿದ್ದಂತೇ ನಮ್ಮ ಅಪಾರ್ಟ್ಮೆಂಟ್ ಮಾಲಿಕರ ಅಮ್ಮ ಎದುರಾದರು. ’ಏನಮ್ಮ ರಂಜಾನ್ ಊಟಕ್ಕೆ ಸಾಬರ ಮನೆಗೆ ಹೋಗಲಿಕ್ಕಿದೆಯಾ ’ ಅಂತ ತಮಾಷೆಗೆ ಕೇಳಿದೆ. ಅವರು ’ ಕರೆದಿದ್ದಾರಪ್ಪ . ಅದರೆ ಅಲ್ಲಿ ಎಲ್ಲಾ ರಾಜಕೀಯದವರೇ ತುಂಬಿರುತ್ತಾರೆ. ಅವರ ಮಧ್ಯ ನಮಗೇನು ಕೆಲಸ. ಹೋಗದವರಿಗೆಲ್ಲಾ ಜಮೀಲನೇ ಮನೆಗೆ ಪಾರ್ಸಲ್ ಕಳಿಸುತ್ತಾನೆ ’ ಎಂದರು . ಶಾಮಿಯಾನದ ಎದುರು ಒಬ್ಬ ಹೆಂಗಸಿನ ಚಿತ್ರ ಹಾಕಿದ್ದಾರಲ್ಲ ಆಕೆ ..’ ಎಂದು ನಾನು ವಿಚಾರಿಸುತ್ತಿದ್ದಂತೇ ಮಧ್ಯದಲ್ಲೇ ಅವರು ’ ಆಕೆನಾ? ಅವಳು ಜಮೀಲನ ತಂಗಿ ಜುಬೇದಾ. ಇಲ್ಲೇ ವಿಟ್ಟಸಂದ್ರದಲ್ಲಿ ಇದ್ದಳು. ಆರು ವರ್ಷದ ಹಿಂದೆ ಜಮೀಲ ಹೀಗೇ ಒಂದು ರಂಜಾನ್ ಉಪವಾಸದ ದಿನ ರಾತ್ರಿ ಊರಿಗೆಲ್ಲಾ ಊಟ ಇಟ್ಟಿದ್ದ. ಆಗಿನ್ನೂ ನೈಸ್ ಸೇತುವೆ ಕಟ್ಟುತ್ತಿದ್ದರು. ಸಂಜೆ ಆಕೆ ಮನೆಯಿಂದ ನಡೆದು ಬರುತ್ತಾ ಇದ್ದಳು. ಕಟ್ಟಿ ಮುಗಿಸುವ ತನಕ ಸೇತುವೆ ಮೇಲೆ ಹತ್ತಿ ಓಡಾಡ ಬಾರದೆಂದು ರಸ್ತೆ ಬಂದ್ ಮಾಡಿದ್ದರೂ ಜನ ಸೆಕ್ಯುರಿಟಿಯ ಕಣ್ಣು ತಪ್ಪಿಸಿ ಸೇತುವೆಯ ಮೇಲಿಂದಲೇ ಇತ್ತ ಬರುತ್ತಿದ್ದರು. ಇವಳಿಗೆ ಅಂದು ಗ್ರಹಚಾರ ಕಾದಿತ್ತು ಈಕೆಯೂ ತಡೆ ಗೋಡೆ ಹಾರಿ ಸೇತುವೆಯ ಮೇಲೆ ಓಡುತ್ತಾ ದಾಟುತ್ತಿದ್ದಳು ಜಲ್ಲಿ ಕಲ್ಲಿನ ಮೇಲೆ ಕಾಲಿಟ್ಟು ಜಾರಿ ಬಿದ್ದಳು. ತಲೆ ನೆಲಕ್ಕೆ ಬಡಿದು ಅಲ್ಲೇ ಸತ್ತಳು. ಭಾರೀ ಆಳು.. ಲಕ್ಷ್ಣಣವಾಗಿದ್ದಳು , ಸ್ಟೈಲಾಗಿ ಅಲಂಕಾರ ಮಾಡ್ಕೊಂಡು ಸೆಂಟ್ ಹಾಕ್ಕೊಂಡು, ಝಣ್ ಝಣ್ ಗೆಜ್ಜೆ ಸದ್ದು ಮಾಡ್ಕೊಂಡು ಓಡಾಡೋಳು , ಸಾಯುವಾಗ ಮದುವೆ ಆಗಿ ಐದು ತಿಂಗಳಾಗಿತ್ತು ಅಷ್ಟೆ. ಪಾಪ ಛೇ !! . ಈಗಲೂ ಆಗಾಗ ಚೀಲ ಹಿಡಿದುಕೊಂಡು ಸೇತುವೆ ಮೇಲೆ ನಡಿತಾ ಇರ್ತಾಳೆ ನಾವೇ ನೋಡಿದ್ದೀವಿ ಅಂತ ಸಿದ್ದರಾಜು, ತಾಯಪ್ಪ ಹೇಳ್ತಾರೆ. ಅವರು ಮೊದಲೇ ಕುಡುಕ್‌ ಬಡ್ಡೀಮಕ್ಕಳು ಅವರನ್ನ ಹೆಂಗೆ ನಂಬೋದು ? ಅಷ್ಟಕ್ಕೂ ಸಾಬರು ಸತ್ತರೆ ದೆವ್ವ ಆಗಲ್ವಂತಲ್ಲ? ಹಿಂಗಂದಕ್ಕೆ ಒಮ್ಮೆ ಆ ಜಮೀಲ ತಾಯಪ್ಪನನ್ನು ಕತ್ತರಿಸಿ ಹಾಕ್ತೀನಿ ಮಗನೆ, ನನ್ನ ತಂಗಿನ ಸೈತಾನ್ ಅಂತೀಯಾ ಅಂತ ಹೊಲದೊಳಗೆ ಅಟ್ಟಿಸಿಕೊಂಡು ಹೋಗಿದ್ದ...." ಅವರು ಹೇಳುತ್ತಲೇ ಇದ್ದರು.
ಹಾಗಾದರೆ ನಾನು ಕೈ ಚಾಚಿ ಎಬ್ಬಿಸಿದ್ದು ಜುಬೇದಳನ್ನೇ ? !! ನಾನು ಪ್ರೇತದ ಕೈ ಹಿಡಿದು ಮೇಲೆಬ್ಬಿಸಿದೆನೇ? ಕೈ ಉಜ್ಜಿಕೊಳ್ಳುತ್ತಾ ಮೂಸಿ ನೋಡಿಕೊಂಡೆ.. ಅತ್ತರಿನ ಪರಿಮಳ ಘಂ ಅಂದಿತು !!!

ರಾಜೇಶ್ ಶ್ರೀವತ್ಸ, 

ಬರ್ಮುಡಾ ಹುಲ್ಲು - ರಾಜೇಶ್ ಶ್ರೀವತ್ಸ,


ನಿಮ್ಮ ಊರಿಗೆ ಮಂತ್ರಿ ಮಹೋದಯರು ವಕ್ಕರಿಸುತ್ತಿದ್ದಾರೆಂದರೆ ನಿಮ್ಮೂರಿನ ಉದ್ಯಾನವನ ರಾತ್ರಿ ಬೆಳಗಾಗುವುದರೊಳಗಾಗಿ ನಂದನವನದಂತೆ ಕಂಗೊಳಿಸುತ್ತದೆ ಅಲ್ಲವೆ? ಬೆಳೆದು ನಿಂತ ಹೂವಿನ ಗಿಡಗಳಂತೆ ಐದರಿಂದ ಹತ್ತಡೀಗೂ ಎತ್ತರದ ಸೈಕಸ್ ಹಾಗು ಕಣಗಲೆ ಮರಗಳು ಕೂಡಾ ತೋಟಗಾರಿಕ ಕೇಂದ್ರಗಳಲ್ಲಿ ಕುಂಡಗಳಲ್ಲಿ ಬೇಕಾದಾಗ ಲಭ್ಯವಾಗುತ್ತವೆ. ಸಾಮಾನ್ಯ ಬೋಗನ್ ವಿಲ್ಲೆಯ ಗಿಡಕ್ಕೆ ರೂ ೨೫೦ ಕಕ್ಕಬೇಕು ಅಷ್ಟೆ. ಇನ್ನು ಉತ್ತಮ ಜಾತಿಯ ಗಿಡಗಳಂತೂ ಇನ್ನೂ ದುಬಾರಿ. ಈ ಮಂತ್ರಿ ಮಹೋದಯರಿಗೆ ಸ್ವಾಗತ ಕೋರಲು ನಮ್ಮ ತೆರಿಗೆ ಹಣ ಎಷ್ಟು ಪೋಲಾಗುತ್ತಿರಬಹುದು ಊಹಿಸಿ ? ಇನ್ನು ಕುಂಡಗಳ ಜೊತೆಗೆ ಉದ್ಯಾನವನಗಳ ನೆಲಕ್ಕೆ ಹಾಸಲು ಹುಲ್ಲಿನ ಚಾಪೆಗಳೂ ಲಭ್ಯ.

ಪರಪ್ಪನ ಅಗ್ರಹಾರ, ಕೋಣೇನ ಅಗ್ರಹಾರ, ವಿಟ್ಟಸಂದ್ರ, ಬಸವಾಪುರ, ತೋಗೂರುಗಳ ಅಳಿದುಳಿದ ಹೊಲಗಳಲ್ಲಿ ಈ ಚಿನ್ನದ ಬೆಳೆಯನ್ನು ಹುಲುಸಾಗಿ ಬೆಳೆಯುತ್ತಾರೆ. ಗರಿಕೆಯ ಹಾಗೆ ಕಾಣುವ ಗರಿಕೆಗಿಂತ ಚಿಕ್ಕ ಎಲೆಗಳ ಈ ಹುಲ್ಲಿನ ಹೆಸರು ಬರ್ಮುಡಾ ಹುಲ್ಲು.ಗರಿಕೆಗಿಂತಲೂ ಹಸಿರು, ಕಾಲಿಟ್ಟರೆ ಮೆತ್ತಗೆ ಸ್ಪಂಜಿನ ಮೇಲೆ ಕಾಲಿಟ್ಟಂತೆ ಭಾಸವಾದರೂ ಗರಿಕೆಯಷ್ಟು ಕೋಮಲವಲ್ಲ. ಮುಟ್ಟಿದರೆ ಪ್ಲಾಸ್ಟಿಕ್ ಎಳೆ ಮುಟ್ಟಿದ ಅನುಭವವಾಗುತ್ತದೆ. ಬಿತ್ತನೆಗಾಗಿ ಬೇರಿರುವ ಹುಲ್ಲಿನ ಗಂಟುಗಳನ್ನು ಕತ್ತರಿಸಿ ಇಟ್ಟುಕೊಳ್ಳುತ್ತಾರೆ. ಚಪ್ಪಟೆಯಾಗಿ ಉಳುಮೆ ಮಾಡಿದ ಭೂಮಿಯ ಮೇಲೆ ಆ ಹುಲ್ಲಿನ ಗಂಟುಗಳನ್ನು ಬಿತ್ತುತ್ತಾರೆ. ಇದಕ್ಕೆ ಉಪಯೋಗಿಸುವ ನೀರು ಹಾಗು ಗೊಬ್ಬರದ ಪ್ರಮಾಣವನ್ನು ಕೇಳಲೇ ಬೇಡಿ. ಬತ್ತದ ಬೆಳೆಯಷ್ಟೇ ನೀರು ಗೊಬ್ಬರ ಬೇಕೇನೋ ..!! ದಿನಕ್ಕೆರಡು ಬಾರಿ ನೀರುಣಿಸಿ.. ವಾರಕ್ಕೊಮ್ಮೆ ರಸಾಯನಿಕ ಗೊಬ್ಬರ ಎರಚಿ, ಅಗತ್ಯ ಬಿದ್ದಾಗ ಕೀಟನಾಶಕ ಸಿಂಪಡಿಸಿ, ಕಳೆ ಹಾಗು ಕೊಳೆತ ಒಣಗಿದ ಹುಲ್ಲಿನ ಕುಡಿಗಳನ್ನು ಆಗಾಗ ಬೇರ್ಪಡಿಸಿದರೆ ಮೂರು ತಿಂಗಳಿಗೆ ಸೊಗಸಾದ ಹುಲ್ಲಿನ ಹಾಸಿಗೆ ಲಭ್ಯ. ಕೊಯಿಲಿಗೆ ೧ ವಾರಕ್ಕೆ ಮುನ್ನ ಯಂತ್ರದಿಂದ ಅಡ್ಡಾದಿಡ್ಡಿ ಬೆಳೆದಿರುವ ಕುಡಿಗಳನ್ನು ಮಟ್ಟ ಮಾಡಿದರೆ ಆಯ್ತು. ಯಂತ್ರಗಳು ಕರ್ರೋ ಶಬ್ದ ಮಾಡುತ್ತಾ ಅಳತೆಗೆ ತಕ್ಕನಾಗಿ ಹುಲ್ಲುಹಾಸನ್ನು ಕತ್ತರಿಸುತ್ತಾ ಸಾಗುತ್ತವೆ. ಕಾರ್ಮಿಕರು ಅದನ್ನು ಹಸಿರು ಒಳಗೆ ಕೆಳಗಿನ ಮಣ್ಣು ಮೇಲೆ ಮಾಡಿ ಚಾಪೆಯಂತೆ ಸುತ್ತಿ ಲಾರಿಯಲ್ಲಿ ಪೇರಿಸಿ ಸಾಗಿಸುತ್ತಾರೆ. ಒಂದು ಚದರ ಅಡಿ ಹುಲ್ಲುಹಾಸಿನ ಬೆಲೆ ಸುಮಾರು ರೂ.೬೦ ರಿಂದ ರೂ.೧೦೦ರವರೆಗೆ. ಇಷ್ಟೆಲ್ಲಾ ಬೆಲೆಕೊಟ್ಟು ನಿಮ್ಮ ತೋಟಕ್ಕೆ ಈ ಹುಲ್ಲನ್ನು ತಂದು ಹಾಸಿದರೆ ಹೊಸ ಪರಿಸರಕ್ಕೆ ಹೊಂದಿಕೊಳ್ಳಲಾಗದೆ ಒಂದು ತಿಂಗಳಲ್ಲೇ ಒಣಗಿ ಹೋಗುತ್ತದೆ frown emoticon . ಬೇಸಿಗೆಯಲ್ಲಿ ಬೆಲೆ ಹೆಚ್ಚು. ಕತ್ತರಿಸಲಾಗದೆ ಅಂಚುಗಳಲ್ಲಿ ಉಳಿದ ಹುಲ್ಲಿಗೂ ಬೆಲೆ ಇದೆ. ಅವುಗಳನ್ನು ಹೊಸೂರಿನ ಹೂವಿನ ಮಾರುಕಟ್ಟೆಗೆ ಸಾಗಿಸಿದರಾಯ್ತು. ಅಲ್ಲಿ ಸೊಗಸಾಗಿ ಹಾರ ಮಾಡಿ ಎಲ್ಲೆಡೆಗೆ ಸಾಗಿಸುತ್ತಾರೆ. ಭಕ್ತರು ಇದೇ ಗರಿಕೆಯೆಂದು ಗಣೇಶನಿಗೇ ಮೋಸ ಮಾಡಿ ಅವನ ಕೊರಳಿಗೆ ಹಾಕುತ್ತಾರೆ. ತಮಿಳುನಾಡು, ಆಂಧ್ರಗಳಲ್ಲಂತೂ ಅದನ್ನು ಗರಿಕೆಯೆಂದೇ ಜನ ಒಫ್ಫಿಕೊಂಡಿದ್ದಾರೆ.  

ರಾಜೇಶ್ ಶ್ರೀವತ್ಸ, 
ಇಗು ಒಂದು ಸುಂದರ ಸಂಸಾರ -

ನಾನೂ ಇಫ಼್ತಾರ್‌ಗೆ ಹೋಗಿದ್ದೆ. - ರಾಜೇಶ್ ಶ್ರೀವತ್ಸ,


ನಮ್ಮ ಮನೆಯ ಹಿಂದೆ ಉಲ್ಲಾಳದ ಬ್ಯಾರಿ ಮೊಹಮ್ಮದ್ ಅಬುಕರ್ ಅವರ ಮನೆ. ಅವರ ಹೆಂಡತಿ ಆಯೇಷಾ, ಇನ್ನೂ ಒಂದಿಬ್ಬರು ಸಂಬಂಧಿಕರು ಅವರ ಮಕ್ಕಳು ಅಂತ ಮನೆ ತುಂಬಾ ಜನ-ಮಕ್ಕಳು. ಆ ಮಕ್ಕಳ ಹೆಸರು ನಮಗೆ ನೆನಪಿನಲ್ಲೇ ಉಳಿಯುತ್ತಿರಲಿಲ್ಲ. ಅಬೀದಾ, ನಸೀಮ, ಜುಲ್ಫಿ, ರಫಿಕ್... ಹೀಗೆ. ಯಾರ್ಯಾರು ಯಾರ ಮಕ್ಕಳು ಅಂತ ಕೂಡ ಅರ್ಥವಾಗ್ತಾ ಇರಲಿಲ್ಲ. ಒಟ್ಟಿನಲ್ಲಿ ನಮ್ಮ ಪಾಲಿಗೆ ಅವರೆಲ್ಲ ಬ್ಯಾರಿಮಕ್ಕಳು. ಆಯೇಷಾ ನಮಗೆಲ್ಲಾ ಐಸಮ್ಮ . ಐಸಮ್ಮ ಸುಮಾರು ನಮ್ಮ ಅಮ್ಮನ ಸಮ ವಯಸ್ಸಿನವರು. ಮನೆಗಳ ಮುಖ ಬೇರೆ ಬೇರೆ ರಸ್ತೆಗಿದ್ದರೂ ಇಬ್ಬರ ಹಿತ್ತಿಲೂ ಒಂದೇ ಕಡೆ ಇರುವುದರಿಂದ ಅಮ್ಮ ಹಾಗು ಐಸಮ್ಮ ನಿತ್ಯ ಒಂದೇ ಸಮಯದಲ್ಲಿ ಹರಟೆ ಹೊಡೆಯುತ್ತಾ ಬಟ್ಟೆ ಒಗೆಯುತ್ತಿದ್ದರು. ಆಗಾಗ ಬಟ್ಟೆ ಕಲ್ಲಿಗೆ ಬಡೆಯುವ ಸದ್ದನ್ನೂ ಮೀರಿ ಕೇಳುವಂತೆ ಮಾತನಾಡಬೇಕಾದಾಗ ಜೋರಾಗಿ ಸ್ವರ ಎತ್ತರಿಸುತ್ತಿದ್ದರು. ಆಗಾಗ ಮೆಲ್ಲಗೆ ಸಣ್ಣ ದನಿಯಲ್ಲಿ. ದೂರದಿಂದ ಇದನ್ನು ಕೇಳುತ್ತಿದ್ದ ನೆರೆಹೊರೆಯ ಕೆಲವರು ಇವರಿಬ್ಬರೂ ನಿತ್ಯ ಬಟ್ಟೆ ಒಗೆಯುವಾಗ ಜಗಳಾಡುತ್ತಾರೆ ಎಂದು ಅಂದುಕೊಂಡಿದ್ದರಂತೆ.
ಸಣ್ಣ ಮಕ್ಕಳಾದ ನಮಗೆ ಐಸಮ್ಮನ ಕಿವಿಯ ಅಂಚಿನುದ್ದಕ್ಕೂ ತೂತುಗಳು ಹಾಗು ಅದಕ್ಕೆ ಪೋಣಿಸಿದ ಚಿನ್ನದ ಸುರುಟೆ, ಸುರುಟೆಗೆ ಜೋಲಾಡುವ ಹರಳುಗಳ ಗೊಂಚಲುಗಳು ಮಹಾ ಆಕರ್ಷಣೆ. ಅವರನ್ನು ಕಂಡಾಗಲೆಲ್ಲಾ ಅಷ್ಟೊಂದು ತೂತು ಮಾಡಿಸಿಕೊಳ್ಳುವಾಗ ನೋವಾಗಲಿಲ್ವಾ? ರಕ್ತ ಬರಲಿಲ್ವಾ? ಸುರುಟೆ ಭಾರ ಆಗೋಲ್ವಾ? ಎಷ್ಟು ಚಿನ್ನ ಇದೆ ನಿಮ್ಮ ಹತ್ತಿರ ? ನೀವು ತುಂಬಾ ಶ್ರೀಮಂತರು ಅಲ್ವಾ? ಎಂದು ಪದೇ ಪದೇ ಕೇಳುತ್ತಿದ್ದೆವು. ಇಂದು ಅವರು ನಮ್ಮ ಪ್ರಶ್ನೆಗಳಿಗೆ ಉತ್ತರ ಹೇಳಿದರೂ ನಾಳೆ ಮತ್ತೆ ಅದೇ ಪ್ರಶ್ನೆಗಳನ್ನು ಕೇಳುತ್ತಿದ್ದೆವು. ಅವರು ಸ್ವಲ್ಪವೂ ಬೇಸರವಿಲ್ಲದೆ ಮತ್ತೆ ಉತ್ತರಿಸುತ್ತಿದ್ದರು. ನಮ್ಮ ಮಗ ಈ ಸಲ ಇಸ್ಕೂಲ್ ಪರೀಕ್ಷೆಯಲ್ಲಿ ಫೈಲಾಗಿದ್ದಾನೆ ಅಂದರೆ ’ಗಣಪತಿಗೆ ಹಣ್ಣು ಕಾಯಿ ಮಾಡಿಸಿ ನಿಮ್ಮ ಮಗ ಮುಂದಿನ ಪರೀಕ್ಷೆಯಲ್ಲಿ ಪಾಸ್ ಆಗ್ತಾನೆ’, ಮಗಳಿಗೆ ಅಮ್ಮ ಆಗಿದೆ ಅಂದರೆ ’ ಪರಿಮಳಮ್ಮನಿಗೆ ಹಣ್ಣುಕಾಯಿ ಮಾಡ್ತೀನಿ ಅಂತ ಹರಕೆ ಹೊತ್ತುಕೊಳ್ಳಿ’ ಎಂದು ಬಿಟ್ಟಿ ಸಲಹೆ ಕೊಡುತ್ತಿದ್ದೆವು. ಆಗಲೂ ಅವರು ನಕ್ಕು ಸರಿ ಹಾಗೇ ಮಾಡ್ತೀನಿ ಎಂದು ನುಡಿಯುತ್ತಿದ್ದರು. ಅವರು ಅಗಾಗ ಸಂಜೆ ವಿಧ ವಿಧದ ಮೀನುಗಳನ್ನು ತಂದು ತೊಳೆಯುವಾಗ ನಾವು ಅದನ್ನು ನೋಡಲು ಬೇಲಿ ತೂರಿ ಅವರ ಸುತ್ತ ಹೋಗಿ ನಿಲ್ಲುತ್ತಿದ್ದೆವು. ಎಲ್ಲಿ ಆ ಮೀನಿನ ಕಣ್ಣು ತೋರಿಸಿ, ಈ ಮೀನಿನ ಬಾಲ ತೋರಿಸಿ, ಇದರ ಹೊಟ್ಟೆಯಲ್ಲಿ ಮರಿ ಇದೆಯಾ? ಇದು ಗಂಡಾ? ಇದು ಹೆಣ್ಣಾ ? ಮೀನು ತಿಂತೀರಲ್ಲಾ ನಿಮಗೆ ಪಾಪ ಬರೋಲ್ವಾ ? ನೀವು ನಮ್ಮ ಜಾತಿಗೆ ಸೇರಿಬಿಡಿ. ಈ ವಾಸನೆ ಮೀನು ತಿನ್ನೋದು ತಪ್ಪುತ್ತೆ ಅಂತ ಅವರ ತಲೆ ತಿಂದು ತೇಗುತ್ತಿದ್ದೆವು.
ರಂಜಾನ್ ಉಪವಾಸ ಶುರುವಾದಾಗ ’ನಿಮ್ಮದೆಂತ ಕಳ್ಳ ಉಪವಾಸ ರಾತ್ರಿಯೆಲ್ಲಾ ಗಡದ್ದಾಗಿ ತಿಂದು ಹಗಲು ನಿದ್ದೆ ಮಾಡ್ತೀರಿ ’ ಅಂತ ಆಡಿಕೊಂಡು ನಾವು ಬಿದ್ದು ಬಿದ್ದು ನಗುತ್ತಾ ಗೇಲಿ ಮಾಡಿದರೂ ಅವರ ನಗು ಮಾತ್ರ ನಮಗೆ ಉತ್ತರ. ಒಮ್ಮೆ ರಂಜ಼ಾನ್ ಮಾಸದಲ್ಲಿ ಅಕ್ಕ ವಿಶಾಖ ಊರಿಂದ ಬಂದಿದ್ದಳು. ಅವಳ ಮೇಲೆ ಐಸಮ್ಮನಿಗೆ ನಮಗಿಂತ ಸ್ವಲ್ಪ ಹೆಚ್ಚು ಪ್ರೀತಿ. ಅಂದು ಸಂಜೆ ಮಸೀದಿಯಿಂದ ಬಾಂಗ್ ಕೂಗಿದ ಅರ್ಧ ಘಂಟೆಯ ನಂತರ ನಮಾಜ಼್ ಮುಗಿಸಿ ಹೊರಬಂದ ಐಸಮ್ಮ, ಆಟ ಮುಗಿಸಿ ಹೊರಗೆ ಕೈ ಕಾಲು ತೊಳೆಯುತ್ತಿದ್ದ ನಮ್ಮನ್ನು ( ನಾನು, ವಿಶಾಖ , ನನ್ನ ತಮ್ಮ) ಶ್..! ಎಂದು ಗುಟ್ಟಾಗಿ ಕರೆದರು. ನಾವು ಹೊರಗಿನಿಂದಲೇ ನಮ್ಮಮ್ಮನಿಗೆ ದೇವಸ್ಥಾನಕ್ಕೆ ಹೋಗಿ ಬರ್ತೇವೆ ಎಂದು ಕೂಗಿ ಹೇಳಿ ಬೇಲಿ ನುಸುಳಿ ಐಸಮ್ಮನ ಮನೆಗೆ ಹೋದೆವು. ಒಳಗೆ ಬಣ್ಣ ಬಣ್ಣದ ದುಬೈ ಕಂಬಳಿಯ ಮೇಲೆ ಅವರ ಮನೆಯಲ್ಲಿದ್ದ ಏಳೆಂಟು ಮಕ್ಕಳು ಸಾಲಾಗಿ ಕುಳಿತು ನಮ್ಮನ್ನೇ ಕಾಯುತ್ತಿದ್ದರು. ಮೊದಲಿಗೆ ಎಲ್ಲರಿಗೂ ದೊಡ್ದ ದೊಡ್ಡ ಗಾಜಿನ ಲೋಟಗಳಲ್ಲಿ ಕಾಮಕಸ್ತೂರಿ ಬೀಜ ಹಾಕಿದ ನಿಂಬೆಹಣ್ಣಿನ ಶರಬತ್ತು. ಅದಾದ ಮೇಲೆ ಒಂದಷ್ಟು ಒಣಗಿದ ದ್ರಾಕ್ಷಿ, ಖರ್ಜೂರ, ಗೋಡಂಬಿ, ಅಂಜೂರ. ಬೇರೆ ಬೇರೆ ಹಸಿ ಹಣ್ಣಿನ ಚೂರುಗಳು. ಕಾಯಿದೋಸೆ ಪುದೀನಾ ಚಟ್ಣಿ. ಚಟ್ಣಿ ಬೇಡ ಎಂದು ರಾಗ ತೆಗೆದ ನನ್ನ ತಮ್ಮನಿಗೆ ನೆಂಚಿಕೊಳ್ಳಲು ಗುಲ್ಕನ್. ಹೆಸರು ಬೇಳೆ ಪಾಯಸ, ಕೊಬ್ಬರಿ ಸಕ್ಕರೆ ಹಾಕಿದ ಖರ್ಜಿಕಾಯಿ. ಕೇರಳದ ಹಲ್ವಾ, ಕೊಬ್ರಿ ಬಿಸ್ಕೆಟ್. ತಿನ್ನಿ ತಿನ್ನಿ ಎಂಬ ಒತ್ತಾಯದ ಜೊತೆಗೆ ನಿಮ್ಮ ಮನೆಯಲ್ಲಿ ಶುದ್ಧ ಅಲ್ವಾ ಅದಕ್ಕೆ ಎಲ್ಲಾ ಹೊಸ ಗ್ಲಾಸ್ ಮತ್ತೆ ತಟ್ಟೆ ಯಲ್ಲಿ ನಿಮಗೆ ಕೊಡ್ತಾ ಇದ್ದೀನಿ, ಇದರಲ್ಲಿ ಮೊಟ್ಟೆ ಮೀನು ಏನೂ ಇಲ್ಲ ಹೆದರಬೇಡಿ ಎಂಬ ಸಮಾಧಾನ. ಅವರ ಮನೆಯ ಮಕ್ಕಳೆಲ್ಲಾ ತಿನ್ನುವುದು ಬಿಟ್ಟು ನಮ್ಮನ್ನು ನೋಡುತ್ತಾ ಗುಸು ಗುಸು ನಗುತ್ತಾ ಇದ್ದರು. ಅವರಿಗೆ ಏನೋ ಖುಷಿ. ತಿನ್ನುವಾಗ ನಮ್ಮ ಪ್ರತಿಕ್ರಿಯೆ ಹೇಗಿದೆ ಎಂದು ಹಿರಿಯರೂ ಆಗಾಗ ಇಣುಕಿ ನೋಡುತ್ತಿದ್ದರು. ಅಂತೂ ನಮಗೆ ವಿಐಪಿ ಟ್ರೀಟ್‌ಮೆಂಟ್. ಎಲ್ಲಾ ತಿಂದು ಮುಗಿದ ಮೇಲೆ ಕೆಂಪು ಸಿಪ್ಪೆಯ ಚಂದ್ರ ಬಾಳೆ ಹೊಟ್ಟೆಗೆ ತುರುಕಿ, ಹೊಟ್ಟೆ ಭಾರವಾಗಿ ಮೇಲೆ ಏಳಲಾರದೆ ಎದ್ದೆವು. ಐಸಮ್ಮನೇ ನಮ್ಮ ಕೈಗಳನ್ನು ಹೊಸಾ ಸಣ್ಣ ರೆಕ್ಸೋನಾ ಸೋಪ್‌ನಿಂದ ತೊಳೆದು ಏಲಕ್ಕಿ ನಿಂಬೆ ಹಾಕಿದ ಬಿಸಿ ಪಾನಕ ಕುಡಿಸಿ ಮನೆಯಲ್ಲಿ ಹೇಳ ಬೇಡಿ ಆಯ್ತಾ ಅಂತ ಭಾಷೆ ತೆಗೆದುಕೊಂಡರು. ಐಸಮ್ಮನ ಮೈದುನ ನಮ್ಮ ಮನೆಯ ಹಿತ್ತಲಲ್ಲಿ ಲೈಟ್ ಹಾಕಿಲ್ಲ ಎಂದು ಖಚಿತ ಪಡಿಸಿಕೊಂಡು ಕಳ್ಳ ಹೆಜ್ಜೆಗಳಿಂದ ಕರೆದುಕೊಂಡು ಬಂದು ಒಬ್ಬೊಬ್ಬರನ್ನೆ ಎತ್ತಿ ಬೇಲಿಯಿಂದ ಈಚೆ ದಾಟಿಸಿ ಹೋದನು.
ರಾತ್ರಿ ಓದುತ್ತಾ ಕೂರುವ ನಾಟಕವಾಡುವಾಗ ನನ್ನ ತಮ್ಮ ಗುಲ್ಕನ್ ಚೆನ್ನಾಗಿತ್ತು ಅಂದರೆ , ವಿಶಾಖ ಕಾಮಕಸ್ತೂರಿ ಬೀಜ ಹಾಕಿದ ಶರಬತ್ತು ಚೆನ್ನಾಗಿತ್ತು ಅಂದಳು. ನಾನು ಜೇಬಿನಲ್ಲಿ ಇಟ್ಟುಕೊಂಡು ಬಂದಿದ್ದ ಗೋಡಂಬಿ ದ್ರಾಕ್ಷಿ ಖರ್ಜೂರ ತೋರಿಸುತ್ತಾ ನನಗೆ ಇದು ಚೆನ್ನಾಗಿತ್ತು ಅಂದೆ.
ಅದಾದ ಬಹಳ ವರ್ಷಗಳ ಮೇಲೆ ಹೈದರಾಬಾದಿನಲ್ಲಿದ್ದಾಗ ಪ್ರೀತಿಯಿಂದ ಒತ್ತಾಯ ಮಾಡಿ ಕರೆದ ನನ್ನ ಸ್ನೇಹಿತನ ಮನೆಗೆ ಇಫ಼್ತಾರ್‌ಗೆ ಹೋಗಿದ್ದೆ. ಅದರ ಮಾರನೆಯ ದಿನವೇ ಕಂಪನಿಯ ಕಾಟಾಚಾರದ ಇಫ಼್ತಾರ್‌ ಕೂಟದಲ್ಲಿ ನೀರೂ ಕುಡಿಯದೆ ಮಡಿಯ ನೆಪ ಹೇಳಿ ವಾಪಾಸ್ ಬಂದಾಗ ಕೆಲವರು ತಿಕ್ಕಲು ಅಂದುಕೊಂಡಿರಬಹುದು. ಈಗಲೂ ಇಫ಼್ತಾರ್‌ ಅಂದ ಕೂಡಲೆ ಐಸಮ್ಮ ಪ್ರೀತಿ ವಾತ್ಸಲ್ಯದಿಂದ ಊಟಮಾಡಿಸಿದ್ದು ನೆನಪಾಗುತ್ತದೆ.
ರಾಜೇಶ್ ಶ್ರೀವತ್ಸ, ವೇಣಿ ಮಾಧವನ ತೋರಿಸೆ – ವಾದಿರಾಜರು

ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ
ಕಾಣದೆ ನಿಲ್ಲಲಾರೆನೆ||ಪಲ್ಲವಿ||

ಕಾಣುತ ಭಕ್ತರ ಕರುಣದಿ ಸಲಹುವ
ಜಾಣೆ ತ್ರಿವೇಣಿ ಸಾರೆ ಸುಖವಾಣಿ||ಅನುಪಲ್ಲವಿ||

ಬಂದೆನೆ ಬಹಳ ದೂರದಿ ಭವಸಾಗರ ತರಣಿ
ನಿಂದೆನೆ ನಿನ್ನ ತೀರದಿ
ಒಂದು ಗಳಿಗೆ ಹರಿಯ ಅಗಲಿ ನಾನಿರಲಾರೆ
ಮಂದಗಮನೆ ಎನ್ನ ಮುಂದಕೆ ಕರೆಯೆ ||೧||

ಶರಣಾಗತರ ಪಾಲಿಪುದು ತರಳೆ ನಿನ್ನ ಬಿರುದು
ಕರುಣದಿಂದೆನ್ನ ಪೊರೆಯೆ
ಸ್ಮರಣೆ ಮಾತ್ರದಿ ಭವತಾಪವ ಹರಿಸುವ
ಸ್ಮರನ ಪಿತ ಮುರಹರನ ಕರುಣದಿ ||೨||

ಸುಜನರಿಗೆಲ್ಲಾಧರಳೆ ಸುಖಶೀಲೆ ಕೇಳೆ
ಕುಜನ ಸಂಗವನು ಕೀಳೆ
ನಿಜಪದವಿಯನೀವ ಹಯವದನನ
ಪದ ರಜವ ತೋರಿಸೆ ಮದಗಜಗಮನೆ ||೩||

Friday, May 22, 2015

ಸಂಕಥನ - ಚುಕ್ಕುಬುಕ್ಕು

Courtesy:  ಚುಕ್ಕುಬುಕ್ಕು


(ಹೊಸ ಸಾಹಿತ್ಯ ಪತ್ರಿಕೆ ‘ಸಂಕಥನ’ದ ಮೊದಲ ಸಂಚಿಕೆ ಕಳೆದವಾರ ಹೊರಬಂದಿದೆ. ಅದಕ್ಕೆ ಸ್ವಾಗತ ಹಾಗೂ ಶುಭ ಕೋರುತ್ತಾ, ಮೊದಲ ಸಂಚಿಕೆ ಓದಿ ಗೌರಿ ಹಂಚಿಕೊಂಡಿರುವ ಅನಿಸಿಕೆಗಳನ್ನು ಇಲ್ಲಿ ಕೊಡುತ್ತಿದ್ದೇವೆ. ‘ಸಂಕಥನ’ಕ್ಕೆ ಚಂದಾದಾರರಾಗಲು ಸಂಪಾದಕ ರಾಜೇಂದ್ರ ಪ್ರಸಾದ್‌ ಅವರನ್ನು ಸಂಪರ್ಕಿಸಿ) 
ಕಾವ್ಯ, ಅಂಕಣಬರಹ, ಓದು, ತಿರುಗಾಟ, ಛಾಯಾಗ್ರಹಣ, ಸಂಘಟನೆ, ಅಡುಗೆ, ಜಗಳ ಹೀಗೆ ಬದುಕಿನ ಹಲವು ಆಯಾಮಗಳಲ್ಲಿ ತಮ್ಮನ್ನು ತಾವು ತೀವ್ರವಾಗಿ ತೊಡಗಿಸಿಕೊಂಡಿರುವ ರಾಜೇಂದ್ರ ಪ್ರಸಾದ್‌ ಅವರ ಹೊಸ ಸಾಹಸ 'ಸಂಕಥನ' ತ್ರೈಮಾಸಿಕ ಸಾಹಿತ್ಯ ಪತ್ರಿಕೆ.
ಕಳೆದ ಭಾನುವಾರ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಈ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ನಡೆಯಿತು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹೆಚ್ಚಿನಂಶ ಯುವಕರು ಮತ್ತು ಕೆಲವು ಹಿರಿಯರ ಸಮ್ಮಿಲನ 'ಸಂಕಥನ' ಪತ್ರಿಕೆಯ ಉದ್ದೇಶ, ಕಾರ್ಯವೈಖರಿಯನ್ನೂ ಸೂಕ್ತವಾಗಿ ಪ್ರತಿಬಿಂಬಿಸುವಂತಿತ್ತು. ಹಿರಿಯರಾದ ಸಿ.ಎನ್‌. ರಾಮಚಂದ್ರನ್‌, ಚಂದ್ರಶೇಖರ ಆಲೂರು, ಆರ್‌. ಪೂರ್ಣಿಮಾ ಅವರು ಆಡಿದ ಮಾತುಗಳೂ 'ಸಂಕಥನ' ಪತ್ರಿಕೆ ಸಾಧಿಸಿದ ಗುಣಗಳೊಟ್ಟಿಗೇ, ಒಳಗೊಳ್ಳಬೇಕಾದ ಅಂಶಗಳನ್ನೂ ಒತ್ತಿಹೇಳಿದ್ದನ್ನು ಮನಸ್ಸಿನಲ್ಲಿಟ್ಟುಕೊಂಡೇ ಈ ಮುದ್ದಾದ ಪತ್ರಿಕೆಯನ್ನು ಕೈಗೆತ್ತಿಕೊಂಡೆ.
ಆಕಾರ, ಮುಖಪುಟ ಚಿತ್ರ ಎಲ್ಲ ದೃಷ್ಟಿಯಿಂದಲೂ ನೋಡಿದ ಕೂಡಲೇ ಕೈಗೆತ್ತಿಕೊಳ್ಳಬೇಕು ಎನಿಸುವಷ್ಟು ಮುದ್ದಾಗಿದೆ.
'ಇದು ಇಂದಿನ ದುರಿತ ಕಾಲಘಟ್ಟದಲ್ಲಿ ಸಮಾಜ, ಧರ್ಮ ಮತ್ತು ರಾಜಕಾರಣ ಸೇರಿದಂತೇ ಎಲ್ಲಾ ಕ್ಷೇತ್ರಗಳೂ ಸಮೂಹ ಭ್ರಮೆಗಳಿಂದ ತುಂಬಿಕೊಳ್ಳುತ್ತಾ ಮನುಷ್ಯನ ನಡುವೆ ಪರಸ್ಪರ ಹೊಂದಾಣಿಕೆ ಸಂಘಟನೆಯ ಜೀವನವನ್ನು ವಿಘಟಿಸುತ್ತಾ ಇರುವ ಶಕ್ತಿಗಳ ವಿರುದ್ಧ ಜಾಗೃತಗೊಳ್ಳುವ ಪ್ರಯತ್ನ' ಎಂದು ಸಂಪಾದಕರು ಸಂಕಥನದ ಆಶಯವನ್ನು ತಿಳಿಸಿದ್ದಾರೆ. ಹಳೆಯ ಸಾಹಿತ್ಯ ಪತ್ರಿಕೆಗಳಲ್ಲಿನ ಅತ್ಯುತ್ತಮ ಅಂಶಗಳನ್ನು ಹೆಕ್ಕಿಕೊಂಡು ಹೊಸ ಗಂಟು ಕಟ್ಟಿಕೊಂಡು ಹೊಸ ಪಯಣ ಹೊರಡುವ ಆಶಯ ಅವರದು.
ಸಂಕಥನದ ಪರಿವಿಡಿಯನ್ನು ಒಮ್ಮೆ ನೋಡಿದರೆ ಸಾಕು, ಆ ಪತ್ರಿಕೆಯ 'ಎಲ್ಲವನ್ನೂ ಒಳಗೊಳ್ಳುವ' ಆಶಯ ಸ್ಪಷ್ಟವಾಗಿಯೇ ಗೋಚರಿಸುತ್ತದೆ.
ಮಾತು–ವಿಮರ್ಶೆ, ಸಂದರ್ಶನ, ಪುಸ್ತಕಲೋಕ, ಸಿನಿಮೋಪಾಖ್ಯಾನ, ಕಥನ, ಕವಿತೆ, ಬಿಡಿಕವಿತೆಗಳು ಹೀಗೆ ಏಳು ವಿಭಾಗಗಳಲ್ಲಿ ವೈವಿಧ್ಯಮಯ ಬರಹಗಳು ಇವೆ. ಮೊದಲ ಸಂಚಿಕೆಯಲ್ಲಿ ವಿಶೇಷವಾಗಿ ಗಮನಸೆಳೆದದ್ದು ಪ್ಯಾಬ್ಲೋ ನೆರೊಡಾನ ಸಂದರ್ಶನ. 'ಪ್ಯಾರೀಸ್‌ ರಿವ್ಯೂ' ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಈ ಸಂದರ್ಶನವನ್ನು ಯುವ ಕವಯಿತ್ರಿ ಸ್ಮಿತಾ ಮಾಕಳ್ಳಿ ಸಶಕ್ತವಾಗಿ ಕನ್ನಡಕ್ಕೆ ತಂದಿದ್ದಾರೆ. ಸಾಹಿತ್ಯದ ಓದಿನಷ್ಟೇ ಲೇಖಕರ ಬಗ್ಗೆಯೂ ಕುತೂಹಲ ಬೆಳೆಸಿಕೊಂಡಿರುವ ನನ್ನಂಥವರಿಗೆ ಬಹಳೇ ರುಚಿಸುವ ಸಂದರ್ಶನವಿದು. ನೆರೋಡಾ ಹಸಿರು ಶಾಯಿಯಲ್ಲಿ ಪದ್ಯ ಬರೆಯುತ್ತಿದ್ದ ಎನ್ನುವುದರಿಂದ ಹಿಡಿದು 'ಬೆಂಕಿಯಿಂದ ನಿಮ್ಮ ಪುಸ್ತಕಗಳನ್ನು ಉಳಿಸಿಕೊಳ್ಳಬೇಕಾದಲ್ಲಿ ಯಾವುದನ್ನು ಉಳಿಸಿಕೊಳ್ಳುತ್ತೀರಿ?' ಎಂಬ ಪ್ರಶ್ನೆಗೆ 'ಯಾವುದನ್ನೂ ಇಲ್ಲ, ಅದಕ್ಕೆ ಬದಲಾಗಿ ಒಂದು ಹುಡುಗಿಯನ್ನು ರಕ್ಷಿಸುತ್ತೇನೆ' ಎಂಬ ಮಾತುಗಳವರೆಗೆ ಎಲ್ಲವನ್ನೂ ಬೆರಗು, ಕುತೂಹಲದಿಂದ ಓದಿಕೊಂಡೆ.
'ಮಾತು–ವಿಮರ್ಶೆ' ವಿಭಾಗವೊಂದರಲ್ಲಿಯೇ ಆರು ಲೇಖನಗಳಿವೆ. ಪ್ರತಿಯೊಂದೂ ವಿಭಿನ್ನ ನೆಲೆಗಳನ್ನು ಶೋಧಿಸುತ್ತವೆ. ಸ್ವತಃ ಸಾಹಿತ್ಯ ಪತ್ರಿಕೆಯೊಂದನ್ನು ಶ್ರದ್ಧೆ ಮತ್ತು ಬದ್ಧತೆಯಿಂದ ರೂಪಿಸುತ್ತಾ ಬಂದಿರುವ ಡಿ.ವಿ. ಪ್ರಹ್ಲಾದ್‌ ಅವರ 'ನಾಲ್ಕು ಮತ್ತೊಂದರ ನಡುವೆ' ಲೇಖನ ನನಗೆ ತುಂಬ ಇಷ್ಟವಾಯ್ತು. ಒಂದು ಸಾಹಿತ್ಯ ಪತ್ರಿಕೆ ರೂಪುಗೊಳ್ಳಲು ಬೇಕಾದ ವಾತಾವರಣ, ಅವುಗಳ ಸಾರ್ಥಕತೆ– ನಿರರ್ಥಕತೆಗಳ ಬಗ್ಗೆ ವಿವರಿಸುತ್ತಲೇ ಇಂದಿನ ಜಡ್ಡುಗಟ್ಟಿದ ಪರಿಸ್ಥಿತಿಯ ಬಗ್ಗೆ ಚುರುಕಾಗಿಯೇ ಚಾಟಿ ಬೀಸಿದ್ದಾರೆ.
ಈ ವಿಭಾಗದ ಇನ್ನೊಂದು ಮುಖ್ಯ ಲೇಖನ ಎಚ್‌.ಎಸ್‌. ಅನುಪಮಾ ಅವರ 'ಮಾತೃಭಾಷಾ ಶಿಕ್ಷಣ'. ಮಾತೃಭಾಷಾ ಶಿಕ್ಷಣ ಆಂದೋಲನದ ಅಂಗವಾಗಿ ಧಾರವಾಡದ ಕರ್ನಾಟಕ ಜನಸಾಹಿತ್ಯ ಸಂಘಟನೆ ಏರ್ಪಡಿಸಿದ್ದ ಎರಡು ದಿನದ 'ಮಾತೃಭಾಷಾ ಮಾಧ್ಯಮದ ಕುರಿತ ರಾಷ್ಟ್ರೀಯ ಚಿಂತನಾ ಶಿಬಿರ'ದ ಕುರಿತಾದ ಬರಹವಿದು. ಕಾರ್ಯಕ್ರಮದ ವರದಿಯಂತೇ ಆರಂಭವಾಗುವ ಈ ಲೇಖನ ನಂತರ ಸಂವಾದವಾಗಿ ಬೆಳೆಯುತ್ತದೆ. ಮಾತೃಭಾಷಾ ಶಿಕ್ಷಣದ ಆಂದೋಲನದ ಅವಶ್ಯಕತೆಯ ಜತೆಜತೆಗೇ ಭಾಷಾ ಚಳವಳಿಯಲ್ಲಿನ 'ಅತಿ'ತನಗಳು ಕಟ್ಟುವ ಚೌಕಟ್ಟಿನ ಅಪಾಯಗಳ ಕುರಿತೂ ಈ ಲೇಖನ ಕೆಲವು ಬಹು ಮುಖ್ಯ ಅನುಮಾನ–ಪ್ರಶ್ನೆಗಳನ್ನು ಎತ್ತುತ್ತದೆ.
ಸಲಿಂಗ ಕಾಮದ ಕುರಿತು ಐತಿಹಾಸಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸುವ ಕೃಷಿಕ್‌ ಎ.ವಿ. ಅವರ 'ಸಲಿಂಗ ಪ್ರೇಮ' ಲೇಖನ, ಜಿ.ಸಿ. ಕುಮಾರಪ್ಪ ಎನ್ನುವ ಗಾಂಧಿವಾದಿ ಸಾಧಕರನ್ನು ಪರಿಚಯಿಸುವ ಜಗದೀಶ ಕೊಪ್ಪ ಅವರ ಲೇಖನವೂ ಇಷ್ಟವಾಯಿತು.
ಈ ಸಂಚಿಕೆಯಲ್ಲಿ ಒಟ್ಟು ನಾಲ್ಕು ಕಥೆಗಳಿವೆ. ಬಾದಲ್‌ ನಂಜುಂಡಸ್ವಾಮಿ ಅವರ 'ಈಸ್ತೊರೀಯ ದೆ ಫಿದೆನ್ಶಿಯೋ' ಕಥೆ ವಿಭಿನ್ನ ಕಥಾವಸ್ತು ಮತ್ತು ಆವರಣದಿಂದ ಗಮನ ಸೆಳೆಯುತ್ತದೆ. ಇಲ್ಲಿನ ನಾಲ್ಕೂ ಕಥೆಗಳೂ ಭಾಷೆ, ಪರಿಸರ, ವಸ್ತುಗಳ ದೃಷ್ಟಿಯಿಂದ ಭಿನ್ನವಾಗಿರುವುದಷ್ಟೇ ಅಲ್ಲದೇ ಈ ಎಲ್ಲ ಕಥೆಗಾರರೂ ಹೊಸಬರು ಎನ್ನುವುದೂ ಮಹತ್ವದ ಸಂಗತಿ.
ಪುಸ್ತಕಲೋಕದಲ್ಲಿ ನರೇಂದ್ರ ಪೈ ಅವರು ಅರುಣ್‌ ಕೊಲಟ್ಕರ್‌ ಅವರ 'ಜೆಜೂರಿ' ಮತ್ತು ಎಸ್‌. ಸುರೇಂದ್ರನಾಥ್‌ ಅವರ 'ಗಾಳಿಗೆ ಬಿದ್ದ ಚಂದ್ರನ ತುಂಡುಗಳು' ಪುಸ್ತಕಗಳನ್ನು ತುಂಬ ಆಪ್ತವಾಗಿ ಪರಿಚಯಿಸಿದ್ದಾರೆ. ವಿಮರ್ಶೆಯ ಕಟುತನವಿಲ್ಲದ ಆಪ್ತವಾದ ಭಾಷೆಯ ಈ ಬರಹ ಪುಸ್ತಕಗಳ ಬಗ್ಗೆ ಕುತೂಹಲ ಹುಟ್ಟಿಸುವಂತಿವೆ.
ಸಂಪಾದಕ ರಾಜೇಂದ್ರ ಪ್ರಸಾದ್‌ ಅವರ ಕಾವ್ಯಪ್ರೇಮ ಪತ್ರಿಕೆಯಲ್ಲಿಯೂ ಧಾರಾಳವಾಗಿಯೇ ವ್ಯಕ್ತವಾಗಿವೆ. ಹದಿನೈದು ಕವಿಗಳ ಅದಕ್ಕೂ ಹೆಚ್ಚು ಕವಿತೆ, ಕಿರುಗವಿತೆಗಳು ಇವೆ. ಎಂ.ಆರ್. ಕಮಲಾ, ಎಂ.ಎಸ್‌. ರುದ್ರೇಶ್ವರಸ್ವಾಮಿ, ಅಶೋಕ ಶೆಟ್ಟರ್‌, ಬಸವರಾಜ ಸೂಳಿಬಾವಿ ಅವರಂತಹ ಹಿರಿಯರ ಜತೆಗೆ ರಾಜಶೇಖರ ಬಂಡೆ, ಸಂಯುಕ್ತಾ ಅವರಂತಹ ಹೊಸ ಕವಿಯ ಕವಿತೆಗಳೂ ಇವೆ. ಚಿದಂಬರ್‌ ನರೇಂದ್ರ ಅವರ ಅನುವಾದವಿದೆ.
ವೈವಿಧ್ಯಮಯವಾದ ವಸ್ತು–ವಿಷಯ, ಪ್ರಕಾರಗಳಿಂದ ಎಲ್ಲವನ್ನೂ ಒಳಗೊಳ್ಳುವ ಸಂಪಾದಕರ ಹಂಬಲದಿಂದ 'ಸಂಕಥನ'ದ ಮೊದಲ ಸಂಚಿಕೆ ಬಗೆಬಗೆಯ ಭಕ್ಷ್ಯಗಳನ್ನು ಬಡಿಸಿಟ್ಟ ಊಟದ ಬಾಳೆಯಂತೆಯೇ ಕಾಣಿಸುತ್ತದೆ. ಅದೇ ಸಂತಸದಿಂದ ಓದಿನ ಊಟಕ್ಕೆ ಕೂತರೆ ಊಟದ ಮಧ್ಯ ಸಿಕ್ಕ ಕೆಲವು ಕಲ್ಲುಗಳ ಕುರಿತೂ ಬರೆಯದಿದ್ದರೆ ಅಪ್ರಾಮಾಣಿಕತೆಯಾಗುತ್ತದೆ.
ಮೊದಲನೇಯದಾಗಿ ಓದಿನುದ್ದಕ್ಕೂ ರಸ್ತೆಯ ನಡುವಿನ ಹೊಂಡದಂತೆ ಅಡಚಣೆ ಮಾಡುವುದು ಕಾಗುಣಿತ ದೋಷಗಳು. ಪೂರ್ಣವಿರಾಮ, ಅಲ್ಪವಿರಾಮಗಳ ದೋಷ, ವ್ಯಾಕರಣ ದೋಷ, ಅಕ್ಷರಗಳ ತಪ್ಪುಗಳು ಆಸ್ವಾದನೆಗೆ ಅಲ್ಲಲ್ಲಿ ತಡೆ ಮಾಡುತ್ತವೆ. ಫಾಂಟ್‌ಗಳು, ತಲೆಬರಹದ ಆಕಾರ, ಗಾತ್ರಗಳ ಕಡೆ ಇನ್ನಷ್ಟು ಗಮನ ಬೇಕಾಗಿದೆ ಅನ್ನಿಸಿತು. ಕಥೆಗಳು, ಲೇಖನಗಳ ನಡುವೆ ಅಲ್ಲಲ್ಲಿ ಬಾಕ್ಸ್‌ಗಳಲ್ಲಿ ಇಣುಕುವ ಕಿರುಗವಿತೆಗಳೂ ಕಿರಿಕಿರಿ ಉಂಟುಮಾಡುತ್ತವೆ. ಓದುಗರು ಒಂದು ಕತೆಯನ್ನೋ ಲೇಖನವನ್ನೋ ತನ್ಮಯರಾಗಿ ಓದುತ್ತಿರುವಾಗ ಮಧ್ಯದಲ್ಲಿಯೇ ತಲೆಹಾಕಿ 'ಇದೊಂದು ಪದ್ಯ ಓದು' ಎಂದು ರಸಭಂಗ ಮಾಡಿದಂತೆ ಭಾಸವಾಗುತ್ತದೆ. ಈ ಬಿಡಿಕವಿತೆಗಳನ್ನೆಲ್ಲಾ ಒಂದೇ ಕಡೆ ಒಟ್ಟಾಗಿ ಪ್ರಕಟಿಸಿದ್ದರೆ ಸೂಕ್ತವಾಗುತ್ತಿತ್ತು. ಕೃಷ್ಣ ಗಿಳಿಯಾರ್‌ ಅವರ ಚಿತ್ರಗಳು ಗಮನ ಸೆಳೆಯುತ್ತವೆ. ಅಂತರ್ಜಾಲದಲ್ಲಿನ ಚಿತ್ರಗಳ ಬಳಕೆ ಜಾಸ್ತಿಯಾಯಿತೇನೋ.
ಈ ಸಂಚಿಕೆಯಲ್ಲಿ ನನ್ನಲ್ಲಿ ಅತ್ಯಂತ ಅಸಮಧಾನ ಹುಟ್ಟಿಸಿದ ಸಂಗತಿ ಎಂದರೆ ಮರುಮುದ್ರಣ.
'ಪ್ರಕಟಿತ/ ಅಪ್ರಕಟಿತ ಎಂಬ ಯಾವ ಮುಲಾಜಿಲ್ಲದೇ ಒಂದಷ್ಟು ಹೊಸ ಬರಹಗಳೊಂದಿಗೆ ಫೇಸ್ಬುಕ್‌ ಮತ್ತು ಬ್ಲಾಗ್‌ಗಳಲ್ಲಿ ಪ್ರಕಟಗೊಂಡು ಯಾರ ಕಣ್ಣಿಗೂ ಬೀಳದೇ ಎಲೆಮರೆಯಲ್ಲಿದ್ದ ಮತ್ತಷ್ಟು ಬರಹಗಳನ್ನು ಸೇರಿಸಿ ಈ ಪ್ರಥಮ ಸಂಚಿಕೆಯನ್ನು ರೂಪಿಸಿದ್ದೇವೆ' ಎಂದು ಸಂಪಾದಕರು ಪ್ರಾಮಾಣಿಕವಾಗಿ ಹೇಳಿಕೊಂಡುಬಿಟ್ಟಿದ್ದಾರೆ. ನೆರೋಡಾನ ಸಂದರ್ಶನದಂತಹ ಮಹತ್ವದ ಬರಹಗಳನ್ನು ಬೇರೆ ಭಾಷೆಯಿಂದ ಅನುವಾದಿಸಿ ಮರುಮುದ್ರಿಸುವುದರಲ್ಲಿ ಅರ್ಥವಿದೆ. ಆದರೆ ಫೇಸ್‌ಬುಕ್‌ ಮತ್ತು ಬ್ಲಾಗ್‌ಗಳಲ್ಲಿ ಪ್ರಕಟವಾದ ಬರಹಗಳನ್ನು ಇಷ್ಟು ಪ್ರಮಾಣದಲ್ಲಿ ಸಾಹಿತ್ಯ ಪತ್ರಿಕೆಯೊಂದರಲ್ಲಿ ಬಳಸಿಕೊಳ್ಳುವ ಅಗತ್ಯ ಇದೆಯಾ ಎಂಬುದು ನನ್ನನ್ನು ತೀವ್ರವಾಗಿ ಕಾಡಿತು. ಅದರ ಬದಲು ಇದೇ ಲೇಖಕರಿಂದ ಹೊಸ ಬರಹಗಳನ್ನು ಬರೆಸಬಹುದಿತ್ತಲ್ಲವೇ? ಇಲ್ಲವೇ ಹೊಸ ಲೇಖಕರನ್ನು ಸಂಪರ್ಕಿಸಿಯಾದರೂ ಬರೆಸಬಹುದಿತ್ತು.
ಪುಸ್ತಕದ ಆರಂಭದ ಡಿ.ವಿ. ಪ್ರಹ್ಲಾದ್‌ ಲೇಖನದಲ್ಲಿ ಬರುವ ಮಾತುಗಳು: 'ಪ್ರತಿ ಸಂಚಿಕೆಯೂ ಒಂದು ಪ್ರಕ್ರಿಯೆ (process). ಅದರ ಲೇಖಕರು, ಓದುಗರು, ಸಂಪಾದಕರು ಇದೊಂದು ಪರಸ್ಪರ ಸಂಬಂಧವುಳ್ಳ ಸುಂದರ ತ್ರಿವಳಿ. ಇವರುಗಳ ಸಹಸ್ಪಂದನೆಯಲ್ಲಿ ಪ್ರತಿಸಂಚಿಕೆಯೂ ಒಂದು 'ಸಂಭವಿಸುವ' ಸಂಗತಿ ಆಗಬೇಕು. ಒಂದು ಪ್ರಾಡಕ್ಟ್‌ ಆಗಬಾರದು.'
ಈ ಮಾತುಗಳು ಸಂಕಥನದ ಮುಂದಿನ ಸಂಚಿಕೆಯ ರೂಪಣೆಗೆ ದಾರಿ ತೋರುವಂಥವು. ಪತ್ರಿಕೆ 'ಪ್ರಾಡಕ್ಟ್‌' ಆಗುವ ಅಪಾಯವನ್ನು ರಾಜೇಂದ್ರ ತುಂಬ ಚೆನ್ನಾಗಿಯೇ ಬಲ್ಲರು. ಆದ್ದರಿಂದಲೇ ಆ ಅಪಾಯದಿಂದ ತಪ್ಪಿಸಿಕೊಳ್ಳುವ ದಾರಿಯನ್ನೂ ಅವರಿಗೆ ಯಾರೂ ಹೇಳಿಕೊಡಬೇಕಾಗಿಲ್ಲ. ಈಗ ಬೇಕಾಗಿರುವುದು ಇನ್ನೊಂದಿಷ್ಟು ಶ್ರಮ ಮತ್ತು ಎಚ್ಚರ ಅಷ್ಟೇ!
‘ಸಂಕಥನ’ದ ಮುಂದಿನ ಸಂಚಿಕೆಗಾಗಿ ಕುತೂಹಲ ಮತ್ತು ನಿರೀಕ್ಷೆಯಿಂದ ನಾವೆಲ್ಲರೂ ಕಾಯುತ್ತಿದ್ದೇವೆ ಎನ್ನುವ ಎಚ್ಚರ ರಾಜೇಂದ್ರ ಅವರ ಉತ್ಸಾಹವನ್ನು ಹೆಚ್ಚಿಸಲಿ.
ಶುಭಾಷಯಗಳು.

Friday, April 10, 2015

ವೇದದಲ್ಲಿ ಎಲ್ಲವೂ ಇದೆ, ಅದರಲ್ಲಿ ಇಲ್ಲದ ಸಂಗತಿಗಳೇ ಇಲ್ಲ ... ಕರಣo ಪವನ್ ಪ್ರಸಾದ್

ವೇದದಲ್ಲಿ ಎಲ್ಲವೂ ಇದೆ, ಅದರಲ್ಲಿ ಇಲ್ಲದ ಸಂಗತಿಗಳೇ ಇಲ್ಲ, ಅನಂತವಾದುದು ವೇದ ಎಂಬ ಉತ್ಪ್ರೇಕ್ಷೆಗಳ ಹೊರತಾಗಿ.ಅವುಗಳ ಬಗ್ಗೆ ಪ್ರಾಥಮಿಕ ಅಂಶಗಳಾದರು ನಮಗೆ ಗೊತ್ತಿರಬೇಕು, ತಿಳಿದವರು ... ಎಲ್ಲರಿಗೂ ತಿಳಿಸುವ ಕಾರ್ಯ ಮಾಡಬೇಕು ಎಂದು ಈ ನಡುವಿನಲ್ಲಿ ನನಗನ್ನಿಸಿತು. ಒಬ್ಬ ಮಹನೀಯ ನಾಲ್ಕು ವೇದಗಳಲ್ಲಿ ಒಂದಾದ ಆಯುರ್ವೇದವನ್ನು ಜಗತ್ತಿಗೆ ಕೊಟ್ಟ ವಿಶ್ವ ಗುರು ಭಾರತ ಎಂದುಬಿಟ್ಟ. ನನಗೆ ನನ್ನ ಗ್ರಹಿಕೆಯ ಬಗೆಗೇ ಅನುಮಾನ ಹಾದುಬಿಟ್ಟಿತು. ನನ್ನ ಅಧ್ಯಯನವೇ ತಪ್ಪೇನೋ ಎನ್ನಿಸಿ ಬಿಟ್ಟಿತು. ಇಂದಿನ ಒಂದಷ್ಟು ಯುವ ಪೀಳಿಗೆಯ ಕೆಲ ಉದ್ವೇಗಿಗಳು ವೇದಗಳ ಬಗ್ಗೆ ಇಲ್ಲದ್ದನ್ನೆಲ್ಲ ಸೇರಿಸಿ ಗುಲ್ಲು ಮಾಡಿ, ಸಾಮಾಜಿಕ ತಾಣದಲ್ಲೋ ಇನ್ನೆಲ್ಲೋ ಏನೂ ತಿಳಿಯದೆ, ಕುಚೋದ್ಯರ ಕುಹಕಕ್ಕೆ ಒಳಗಾದದ್ದನ್ನು ಕಂಡಿದ್ದೇನೆ. ಸ್ನೇಹಿತರಾದ ನವೀನ್ ಭಟ್ ಹೇಳಿದ್ದರು "ಸಂಸ್ಕೃತ ಗೊತ್ತಿರುವವರು ಅತಿ ಮಾಡುವುದಿಲ್ಲ, ಸಂಸ್ಕೃತದ ಬಗ್ಗೆ ಮಾತನಾಡುವವರು ಅತಿ ಮಾಡುತ್ತಾರೆ" ಎಂದು. ವೇದದ ಪ್ರಾಥಮಿಕ ವಿಚಾರಗಳಿಗೂ ಇದು ಅನ್ವಯ ಎಂದು ಭಾವಿಸುತ್ತೇನೆ. ಈ ಸಂದರ್ಭದಲ್ಲಿ ವೇದಗಳ ಕಿರು ಪರಿಚಯದ ಈ ಚಾರ್ಟ್ ಮಾಡಿ ಹಾಕುವುದು ಸೂಕ್ತ ಎನ್ನಿಸಿತು,ಇಲ್ಲಿ ಇನ್ನೇನಾದರೂ ಸೇರಿಸುವ ಹಾಗೂ ತಿದ್ದುವ ಸಂಗತಿ ಇದ್ದರೆ ಪ್ರಾಜ್ಞರು ತಿದ್ದಿ ಇತರರಿಗೆ ಹಂಚಿ. ಇದು ಅವಶ್ಯವಾದದು ಏಕೆಂದರೆ ಮೂರ್ಖರ ಮಾತಿಗಿಂತ, ತಿಳಿದವರ ಮೌನ ಅಪಾಯಕಾರಿ.

ಪದ ತಿದ್ದುಪಡಿಗಳು :   ಅರಣ್ಯಕ= ಆರಣ್ಯಕ  ;  ಮಾದ್ವನಾದೀನ= ಮಾಧ್ಯಂದಿನ  
ಕಣ್ವ= ಕಾಣ್ವ ;  ಮೈತ್ತಿರಾಯಣ =ಮೈತ್ರಾಯಣ ; ಕೌತುಮ = ಕೌಥುಮ

ಕರಣo ಪವನ್ ಪ್ರಸಾದ್


Thursday, February 12, 2015

ದೇಶದ ರಾಜಕೀಯಕ್ಕೇ ಹೊಸ ಆಶಾ ಕಿರಣವಾದ ಆಮ ಆದ್ಮೀ ಪಕ್ಷದ ಗೆಲುವು............

ದೇಶದ ರಾಜಕೀಯಕ್ಕೇ ಹೊಸ ಆಶಾ ಕಿರಣವಾದ ಆಮ ಆದ್ಮೀ ಪಕ್ಷದ ಗೆಲುವು............
 ಇಂದು ಪ್ರಕಟವಾದ ದೆಹಲಿ ರಾಜ್ಯದ ಚುನಾವಣಾ ಫಲಿತಾಂಶದಲ್ಲಿ ಆಮ ಆದ್ಮೀ ಪಕ್ಷಕೆ ದೊರೆತ ಭರ್ಜರಿ ಜಯ ದೇಶದ ರಾಜಕೀಯಕ್ಕೆ ಆಶಾ ಕಿರಣವಾಗಿರುವುದರಲ್ಲಿ ಯಾವುದೇ ಸಂಶಯವಿಲ್ಲ.
ಕಾಂಗ್ರೇಸ್ಸನ ಭೃಷ್ಟತೆ, ಬಿಜಿಪಿಯ ಕೋಮವಾದ ರಾಜಕಾರಣ, ಉಳಿದ ಪ್ರಾದೇಶಿಕ ಪಕ್ಷಗಳ ಸ್ವಾರ್ಥ ರಾಜಕಾರಣದಿಂದಲ್ಲೇ ಕಳೆದ 25 ವರ್ಷಗಳಿಂದ ಭಾರತದ ರಾಜಕೀಯ ಕಲ್ಮಶವಾಗಿತ್ತು.   ನಿಷ್ಠಾವಂತ ಮಯಾ೯ದಸ್ಥ ವ್ಯಕ್ತಿಗಳು ರಾಜಕೀಯ ಕ್ಷೇತ್ರಕ್ಕೆ ಬರಬಾರದು ಎಂಬತಹ ಸ್ಥಿತಿಗೆ ಭಾರತದ ರಾಜಕೀಯ ಕಲ್ಮಶವಾಗಿತ್ತು.
 ಇಂತಹ ಸಂದರ್ಭದಲ್ಲಿ ಅಣ್ಣಾಹಜಾರೆ ಹೋರಾಟದ ಕೂಸಾಗಿ ಹುಟ್ಟಿದ ಆಮ ಆದ್ಮೀ ಪಕ್ಷವು ಉದಯವಾದ 8 ತಿಂಗಳ ಒಳಗೆ ಉತ್ತಮ ಪ್ರದರ್ಶನವನ್ನು ನೀಡಿತು. ಕಾಂಗ್ರೆಸ್ಸನ ಬಾಹ್ಯ ಬೆಂಬಲದೊಂದಿಗೆ 49 ದಿನ ಸಕಾರ ರಚಿಸಿದ ಪಕ್ಷ ನಂತರ ಸಕಾ೯ರವನ್ನು ವಿಸಜಿ೯ಸಿತು. ವ್ಯವಸ್ಥೆಯೊಂದನ್ನು ಬದಲಿಸುವ ತುಡಿತದಲ್ಲಿದ್ದ ಪಕ್ಷ ಅಧಿಕಾರದಿಂದ ಕೆಳಗಿಳಿದಿದ್ದು ದುಡುಕಿನ ನಿಧಾ೯ರವೆಂದು ಬಿಂಬಿತವಾಯಿತು.
ಅದೇ ಸಮಯದಲ್ಲಿ ಎದುರಾದ ಲೋಕಸಭೆಗೆ  ಅತಿ ಆಸೆಯಿಂದ ಸೂಕ್ತ ತಯಾರಿ ಇಲ್ಲದೇ ಹೋಯಿತು  ಕಾರಣದಿಂದಲ್ಲೇ ಸೋಲನ್ನು ಅನುಭವಿಸಿತು. ಆದರೇ ಸೋಲನ್ನು ಸ್ವೀಕಾರ ಮಾಡಿ ತಕ್ಷಣ ಕಾರ್ಯಪ್ರವೃತವಾಗಿ ಆಮ ಆದ್ಮೀ ಪಕ್ಷ ದೆಹಲಿಯ ಚುನಾವಣೆಗೆ ತಯಾರಿ ಮಾಡಿ ಕಳೆದು ಹೋದ ತನ್ನ ಕಳೆಯನ್ನು 8 ತಿಂಗಳ ಅವಧಿಯೊಳಗೆ ಇನ್ನೂ ಹೆಚ್ಚು ಕಳೆಯೊಂದಿಗೆ ಪುನರ್ ಸ್ಥಾಪಿಸಿಕೊಂಡಿರುವುದು. ಇದರ ಪರಿಣಾಮವೇ ಇಂದು 70 ಕ್ಷೇತ್ರದಲ್ಲಿ  ಆಮ ಆದ್ಮೀ ಪಕ್ಷ ಸಿಂಹಪಾಲನ್ನು ಗೆದ್ದು ಇತಿಹಾಸ ಬರೆದಿರುವುದು.
ಆಮ ಆದ್ಮೀ ಪಕ್ಷಕೆ ಕೊನೆಯ ಗಳಿಗೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ನೇರವಾಗಿ ಎದುರಿಸಲಾಗದೇ ಇಲ್ಲ ಸಲ್ಲದ ಆಪಾದನೇ ಮಾಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಲು ಪ್ರಯತಿಸಿತು. ಬಿಜೆಪಿಯ 120 ಎಂಪಿಗಳು ಬಿಜೆಪಿಯ ಗೆಲುವಿಗೆ ಕೊನೆ ಗಳಿಗೆಯಲ್ಲಿ ಎಲ್ಲಾ ರೀತಿಯಿಂದಲ್ಲೂ ಪ್ರಯತ್ನ ಪಟ್ಟರು. ಆದರೇ ದೆಹಲಿಯ ಜನತೆ ಎಲ್ಲವನ್ನು ಅರ್ಥಮಾಡಿಕೊಂಡು ಯಾವ ಆಪಾದನೆಗೂ ಬೆಲೆ ನೀಡದೆ ಆಮ ಆದ್ಮೀ ಪಕ್ಷಕೆ ಪ್ರಚಂಡ ಬಹುಮತ ನೀಡಿರುವುದು. ಆಮ ಆದ್ಮೀ ಪಕ್ಷದ ಬಗ್ಗೆ ಬೇರೆ ಪಕ್ಷಗಳು ಮಾಡಿದ ಅಪಪ್ರಚಾರ ಎಲ್ಲವು ಆಮ ಆದ್ಮೀಗೆ ಪಕ್ಷಕೆ ವರವಾಗಿ ಪರಿಣಮಿಸಿತು. ಕಾರಣ ಪಕ್ಷದ ಪಾರದರ್ಶಕತೆ ಬಗ್ಗೆ ಯಾವುದೇ ಅನುಮಾನ ಇರಲಿಲ್ಲ. ಎಲ್ಲ ಪರಿಣಾಮವಾಗಿ ದೇಶದ ರಾಜಧಾನಿಯಲ್ಲಾದ ರೀತಿಯ ರಾಜಕೀಯ ಫಲಿತಾಂಶ ಉಳಿದ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯ ಗಂಟೆಯಾಗಿರುವುದು
ದೇಶದ ರಾಜಧಾನಿಯಲ್ಲಿ ಆಮ ಆದ್ಮೀಯ ಪ್ರಚಂಡ ವಿಜಯ ದೇಶದ ಮುಂಬರುವ ರಾಜಕಾರಣದಲ್ಲಿ ಮಹತ್ತರ ಬದಲಾವಣೆ ತರುವುದರಲ್ಲಿ ಯಾವುದೇ ಸಂಶಯ ಇಲ್ಲ.
ಎಲ್ಲಾ ರಾಜಕೀಯ ಪಕ್ಷಗಳು ಸಹಾ ತಮ್ಮ ಪಕ್ಷದ ನೀತಿಗಳ ಬಗ್ಗೆ ಅವಲೋಕನ ಮಾಡಿಕೊಳ್ಳುತ್ತಾ  ಬದಲಾವಣೆಗಳನ್ನು ಮಾಡಿಕೊಳ್ಳುವ ಅಗತ್ಯವಿದೆ.
                ರಾಜಕೀಯ ಪಾಟರ್ಿಗಳ ದೇಣಿಗೆಯ ಬಗ್ಗೆ ಆಮ ಆದ್ಮೀ ಪಾಟಿ೯ಯ ತರಹ ಪಾರದರ್ಶಕತೆ ಇರುವುದು ಅಗತ್ಯವಿದೆ.
                ಬಿಜೆಪಿ ತನ್ನ ಸಹಚರ ಸಂಸ್ಥೆಗಳು ನಡೆಸುತ್ತಿರುವ ಘರ ವಾಪಸ್ಸಿಯಂತಹ ಚಟುವಟಿಕೆಯನ್ನು ತಕ್ಷಣ ನಿಲ್ಲಿಸಬೇಕಾಗಿದೆ.
                ಕಾಂಗ್ರೆಸ್ಸ ಪಕ್ಷ ತನ್ನ ಸೋಲನ್ನು ಒಪ್ಪಿಕೊಂಡು, ಆಗಿರುವ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಬೇಕು. ಭೃಷ್ಟಾಚಾರವನ್ನು ತೆಗೆದು ಹಾಕುವ ಹಿನ್ನಲೆಯಲ್ಲಿ  ಪಾಟಿ೯ಯಲ್ಲಿಯೇ ಅಮೂಲಾಗ್ರ ಬದಲಾವಣೆ ತರಲು ಪ್ರಾರಂಭಿಸಬೇಕು.
                ಸಮಾಜವಾದಿ ಪಕ್ಷ, ಬಹುಜನ, ಜನತಾದಳದ ಪರಿವಾರಗಳು ಎಲ್ಲಾ ಪಾಟಿ೯ಗಳು ತಮ್ಮ ತಮ್ಮ ಪಕ್ಷವನ್ನು ಶುಚಿಗೊಳಿಸುವ ಕಾರ್ಯವನ್ನು ಪ್ರಾರಂಭಿಸಬೇಕು. ಮೊದಲು ಪಕ್ಷದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಆಮ ಆದ್ಮೀ ಪಕ್ಷ ಅನುಸರಿಸುತ್ತಿರುವಂತಹ ನಿಯಮವನ್ನು ರೂಢಿಸಿಕೊಳ್ಳಬೇಕು.
                ಎಲ್ಲಾ ಪಕ್ಷಗಳು ವಿಷಯಾಧಾರಿತವಾಗಿ ರಾಜಕೀಯ ಮಾಡಬೇಕು ವಿನಹ ಜಾತಿ/ ಧರ್ಮ ರಾಜಕೀಯವನ್ನಲ್ಲ.
                ಜನಸಾಮಾನ್ಯರನ್ನು, ರೈತರನ್ನು ಕಡೆಗಣಿಸಿ ಮುಖ್ಯವಾಗಿ ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗುವಂತಹ ರೀತಿ ಕಾರ್ಯನಿರ್ವಹಿಸುವ ದೃಷ್ಠಿಯನ್ನು ಬಿಜೆಪಿ ಮುಖ್ಯವಾಗಿ ಬದಲಾಯಿಸಿಕೊಳ್ಳುವ ಅಗತ್ಯವಿದೆ.
                ಜನಸಾಮಾನ್ಯರ ಮೂಲಭೂತ ಅಗತ್ಯಗಳಾದ ಶುದ್ದ ಕುಡಿಯುವ ನೀರು, ವಸತಿ, ಉತ್ತಮ ಶಿಕ್ಷಣ, ಉತ್ತಮ ಆರೋಗ್ಯದ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ದೃಷ್ಠಿ ಏನು ಎಂಬುದನ್ನು ಪುನ: ವಿಮಶಿ೯ಸಿ ಪಸ್ಥುತಪಡಿಸಬೇಕಾದ ಅಗತ್ಯತೆ ಇರುವುದು.
                ಕೊಲೆಗಡುಕರು, ಭೃಷ್ಠಾಚಾರಿಗಳು, ಕಪಟಿಗಳು, ಮೋಸಗಾರರು ಬಹುತೇಕ ಎಲ್ಲಾ ಪಕ್ಷಗಳಲ್ಲಿಯೂ ಇರುವರು ಇಂತವರನ್ನು ಹೊರಗೆ ಕಳುಹಿಸುವ ಕಾರ್ಯವನ್ನು ಎಲ್ಲಾ ಪಾಟಿ೯ಗಳು ತಕ್ಷಣ ಪ್ರಾರಂಭಿಸಬೇಕಾಗಿದೆ.
ಒಟ್ಟಾರೆ ಶುದ್ದ, ಪಾರದರ್ಶಕ ಆಡಳಿತದ ಭರವಸೆಗೆ ದೆಹಲಿಯಲ್ಲಿ ಸಿಕ್ಕ ಜಯ ನಿಜವಾಗಿಯೂ ಆಮ ಆದ್ಮೀಯದೇ ಜಯವಾಗಿರುವುದು. ಆಯ್ಕೆಯಾದ ಎಲ್ಲಾ ಜನಪ್ರತಿನಿಧಿಗಳು ವಾಸ್ತವದಲ್ಲಿ  ಜನರ ಪ್ರತಿನಿಧಿಯಾಗಿ ತಾವು ನೀಡಿದ ಆಶ್ವಾಸನೆಯಂತೆ ಕಾರ್ಯನಿಹಿಸಿ ದೇಶದಲ್ಲಿ ರಾಜಕೀಯದ ಚಿತ್ರಣ ಬದಲಾಗುವಂತೆ ಮಾಡುವ ಮಹತ್ವದ ಜವಬ್ದಾರಿ ಇಂದು ಅರವಿಂದ ಕ್ರೇಜಿವಾಲ್ ಮತ್ತು ಆಮ ಆದ್ಮೀ ಪಕ್ಷದ ಮುಂದಿದೆ.
ಚುನಾವಣೆ ಕೇವಲ ದೇಹಲಿಗೆ ಮಾತ್ರ ಸೀಮಿತ ಎಂದು ಅಸಡ್ಡೆ ತೋರದೆ ಎಲ್ಲಾ ರಾಜಕೀಯ ಪಕ್ಷಗಳು  ಗಂಭೀರವಾಗಿ ಚಿಂತಿಸಲು ಇದು ಸಕಾಲವಾಗಿದೆ.
ಕೊನೆಯದಾಗಿ ಪ್ರಾಮಾಣಿಕರು ರಾಜಕೀಯ ಕ್ಷೇತ್ರಕ್ಕೆ ಬರುವ ಭರವಸೆ ಮೂಡಿಸಿದ ದೆಹಲಿ ಜನತಗೆ ಮತ್ತು ಆಮ ಆದ್ಮೀ ಪಕ್ಷಕ್ಕೆ ತುಂಬು ಹೃದಯದ ಧನ್ಯವಾದಗಳು...

ವಿವೇಕ ಬೆಟ್ಕುಳಿ