ಗ್ರಾಹಕರ ಹಿತರಕ್ಷಣೆ: ನಿಮಗಿದು ಗೊತ್ತಿರಲಿ - ಪಿ.ಎಸ್.ಪರ್ವತಿ
- ಪಿ.ಎಸ್.ಪರ್ವತಿ , ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ, ಗದಗ
ಹಣ ನೀಡಿ ಪಡೆಯುವ ಸರಕು ಅಥವಾ ಸೇವೆಯಿಂದಾಗಿ ನಾವು ಗ್ರಾಹಕರೆನಿಸಿಕೊಳ್ಳುತ್ತೇವೆ. ಈ ರೀತಿ ಹಣ ಕೊಟ್ಟು ಪಡೆದ ಸರಕು ಅಥವಾ ಸೇವೆಗಳಲ್ಲಿ ಅದು ಕೊಟ್ಟ ಬೆಲೆಗೆ ಅನುಗುಣವಾದ ಗುಣಮಟ್ಟವನ್ನು ಹೊಂದಿರದಿದ್ದಲ್ಲಿ ಅದಕ್ಕೆ ಪರಿಹಾರ ಪಡೆಯುವ ಹಕ್ಕನ್ನು ಗ್ರಾಹಕರಿಗೆ ಕಾನೂನು ಒದಗಿಸಿದೆ. ಡಿಸೆಂಬರ್ ೨೪ ರಂದು ವಿಶ್ವ ಗ್ರಾಹಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗ್ರಾಹಕರ ಹಕ್ಕುಗಳ ಜಾಗೃತಿಗಾಗಿ ಈ ಲೇಖನ
ನಮ್ಮ ದೈನಂದಿನ ಕೆಲಸಗಳಲ್ಲಿ ನಾವು ಒಂದಿಲ್ಲೊಂದು ರೀತಿಯಲ್ಲಿ ಗ್ರಾಹಕರಾಗಿರುತ್ತೇವೆ. ಆದರೆ ನಾವದನ್ನು ಗಮನಸಿರುವುದಿಲ್ಲ. ಬೆಳಗಿನ ಹಲ್ಲುಜ್ಜುವ ಹಲ್ಲುಪುಡಿ ಅಥವಾ ಟೂಥ್‌ಪೇಸ್ಟ್, ಹಾಲಿನಿಂದ ಹಿಡಿದು ತಿಂಡಿ, ಊಟಕ್ಕಾಗಿ ಅಂಗಡಿಯಲ್ಲಿ ಕೊಂಡು ತಂದ ಆಹಾರ ಪದಾರ್ಥಗಳು, ಕುಡಿಯುವ ನಲ್ಲಿ ನೀರು, ಸಂಚರಿಸುವ ರಸ್ತೆ, ಬಸ್ ಸೇವೆಯಲ್ಲದೇ ಶಾಲಾ-ಕಾಲೇಜು ವಿದ್ಯಾರ್ಜನೆಗೂ ಸಹ ಶುಲ್ಕ ನೀಡಿ ಗ್ರಾಹಕರಾಗುತ್ತೇವೆ. ಬಟ್ಟೆ ಖರೀದಿ , ನಂತರ ಹೊಲಿಯುವಿಕೆಯ ಸೇವೆ ಹಾಗೂ ವೈದ್ಯರ ಬಳಿ ಚಿಕಿತ್ಸೆಗಾಗಿ ಹೋದಾಗ ಅವರು ನೀಡುವ ಸೇವೆಗೆ ಗ್ರಾಹಕರಾಗುತ್ತೇವೆ. ದಿನನಿತ್ಯದ ಯಾವುದೇ ಕೆಲಸ-ಕಾರ್ಯ ತೆಗೆದುಕೊಂಡರೂ ನಾವು ಯಾವುದಾದರೂ ಸರಕು ಅಥವಾ ಸೇವೆಯ ಗ್ರಾಹಕರಾಗಿರುತ್ತೇವೆ.
ಈ ರೀತಿ ಹಣ ತೆತ್ತು ಪಡೆದ ಸರಕು ಅಥವಾ ಸೇವೆಯ ಗುಣಮಟ್ಟದ ಬಗ್ಗೆ ಬಳಕೆದಾರ ಅಷ್ಟೊಂದು ಗಮನಹರಿಸುವುದಿಲ್ಲ. ಸೇವಾ ನ್ಯೂನತೆಯಾದಾಗ ಆ ಸಂದರ್ಬದಲ್ಲಿ ಸ್ವಲ್ಪ ಗೊಣಗಬಹುದೇ ವಿನಹ ಪರಿಹಾರಕ್ಕೆ ಹೋರಾಡುವುದಿಲ್ಲ. ಇದರಿಂದಾಗಿ ಗ್ರಾಹಕ ಕಡಿಮೆ ತೂಕದ ಅಳತೆ, ಕಲಬೆರಕೆ ಅಥವಾ ನಕಲು ವಸ್ತುಗಳ ಶೋಷಣೆಗೊಳಗಾಗುತ್ತಾನೆ. ಗ್ರಾಹಕರಿಗೆ ಯಾವುದೇ ರಕ್ಷಣೆ ಇಲ್ಲ ಎಂಬುದು ಇದರ ಅರ್ಥವಲ್ಲ. ಬಳಕೆದಾರರ ಅಸಹಾಯಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಸರ್ಕಾರ ಕೆಲವು ಕಾಯಿದೆ ಮತ್ತು ಕಾನೂನುಗಳನ್ನು ಜಾರಿಗೊಳಿಸಿದೆ. ಬಳಕೆದಾರರಿಗೆ ಗುಣಮಟ್ಟದ ಸರಕುಗಳು ದೊರೆಯಲಿ ಎಂಬ ಉದ್ದೇಶದಿಂದ ಸೂಕ್ತ ಏರ್ಪಾಟು ಮಾಡಿದೆ. ಇದಕ್ಕಾಗಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದವರೆಗೆ ಗ್ರಾಹಕರ ವೇದಿಕೆಗಳನ್ನು ರಚಿಸಿದೆ.
ಗ್ರಾಹಕರ ರಕ್ಷಣೆಗಾಗಿ ಇರುವ ಕಾನೂನು ಹಾಗೂ ಹಕ್ಕುಗಳ ಬಗ್ಗೆ ಜನರು ಅರಿತುಕೊಂಡಾಗ ಮಾತ್ರ ಈ ಕ್ರಮಗಳು ನಿರೀಕ್ಷಿತ ಫಲ ನೀಡುತ್ತವೆ. ಈ ಬಗ್ಗೆ ಗ್ರಾಹಕರು ಕನಿಷ್ಟ ಮಟ್ಟದ ಮಾಹಿತಿ ಹೊಂದಿರಬೇಕು. ತಮ್ಮ ಹಕ್ಕುಗಳಿಗೆ ಚ್ಯುತಿ ಬರದಂತೆ ನಿಗಾ ವಹಿಸಬೇಕು. ಮಾರಾಟದ ಆಕರ್ಷಕ ಕ್ರಮಗಳಿಗೆ ಮೋಸ ಹೋಗದಷ್ಟು ಜಾಗರೂಕರಾಗಿದ್ದು, ತಾಳ್ಮೆಯಿಂದ ತಮ್ಮ ಹಕ್ಕು ಜವಾಬ್ದಾರಿ ಅರಿತುಕೊಂಡಾಗ ಶೋಷಣೆ ತಪ್ಪಿಸಲು ಸಾಧ್ಯವಾಗುತ್ತದೆ.
ಗ್ರಾಹಕರ ಹಕ್ಕು
ಗ್ರಾಹಕರಾಗಿ ನಮಗಿರುವ ಹಕ್ಕುಗಳ ಬಗ್ಗೆ ನಾವು ಅರಿತುಕೊಳ್ಳಬೇಕು. ಅಂದಾಗ ಮಾತ್ರ ನಾವು ನಮ್ಮ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಗುತ್ತದೆ. ಸ್ಥೂಲವಾಗಿ ಹೇಳುವುದಾದಲ್ಲಿ ಗ್ರಾಹಕರಾಗಿ ನಮಗೆ ಎಂಟು ವಿಧದ ಹಕ್ಕುಗಳಿವೆ. ಅವುಗಳೆಂದರೆ:
೧) ಮೂಲಭೂತ ಅಗತ್ಯಗಳನ್ನು ಪೂರೈಸುವ ಹಕ್ಕು ೨) ಸುರಕ್ಷತೆಯ ಹಕ್ಕು ೩) ಮಾಹಿತಿ ಪಡೆಯುವ ಹಕ್ಕು ೪) ಆಯ್ಕೆ ಹಕ್ಕು ೫) ಕೇಳಿಸಿಕೊಳ್ಳುವ ಹಕ್ಕು ೬) ಪರಿಹಾರ ಪಡೆಯುವ ಹಕ್ಕು ೭) ಗ್ರಾಹಕ ಶಿಕ್ಷಣದ ಹಕ್ಕು ಹಾಗೂ ೮) ಆರೋಗ್ಯಕರ ಮತ್ತು ಸಹನೀಯ ಪರಿಸರದ ಹಕ್ಕು
ಪರಿಹಾರ ಪಡೆಯುವ ಹಕ್ಕಿನ ಅನ್ವಯ ಭಾರತದ ಸಂಸತ್ತು ೧೯೮೬ ರಲ್ಲಿ ಗ್ರಾಹಕ ಸಂರಕ್ಷಣಾ ಅಧಿನಿಯಮ ಜಾರಿಗೆ ತಂದಿದೆ. ಈ ಕಾನೂನಿನ ಅಡಿಯಲ್ಲಿ ನಾವು ಖರೀದಿಸಿದ ಸರಕು ದೋಷಪೂರಿತವಾಗಿದ್ದಲ್ಲಿ ಅಥವಾ ಹಣ ನೀಡಿ ಪಡೆದ ಸೇವೆಯಲ್ಲಿ ನ್ಯೂನತೆಯಿದ್ದರೆ ನಾವು ಸುಲಭವಾಗಿ ಪರಿಹಾರವನ್ನು ಪಡೆಯಬಹುದು. ಈ ಕಾನೂನು ಅನುಷ್ಟಾನಕ್ಕೆ ತರಲು ಮೂರು ಹಂತಗಳಲ್ಲಿ ಗ್ರಾಹಕರ ನ್ಯಾಯಾಲಯಗಳನ್ನು ರಚಿಸಲಾಗಿದೆ. ಜಿಲ್ಲಾ ಮಟ್ಟದ ಗ್ರಾಹಕರ ವೇದಿಕೆ, ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ. ನಾವು ಸಾಮಾನ್ಯವಾಗಿ ನಮ್ಮ ದೂರುಗಳನ್ನು ಜಿಲ್ಲಾ ಗ್ರಾಹಕರ ವೇದಿಕೆಗೆ ಸಲ್ಲಿಸಬಹುದು. ಈ ಗ್ರಾಹಕ ನ್ಯಾಯಾಲಯಗಳ ಶುಲ್ಕ ಬಹಳ ಕಡಿಮೆ. ತ್ವರಿತ ಇತ್ಯರ್ಥಕ್ಕೆ ಅವಕಾಶವಿರುವ ಈ ನ್ಯಾಯಾಲಯದಲ್ಲಿ ಗ್ರಾಹಕನೇ ತನ್ನ ವಾದ ಮಂಡಿಸಬಹುದು. ಗ್ರಾಹಕ ನ್ಯಾಯಾಲಯ ಆದೇಶಿಸಿದ ಪರಿಹಾರವನ್ನು ಪ್ರತಿವಾದಿ ನಿಮಗೆ ನೀಡದಿದ್ದರೆ ಅವರಿಗೆ ದಂಡನೆ ಹಾಗೂ ಸಜೆ ವಿಧಿಸುವ ಅಧಿಕಾರ ಈ ನ್ಯಾಯಾಲಯಗಳಿಗಿದೆ. ಮೋಸ ಹೋಗಬೇಡಿ:
ಇಂದಿನ ಮಾರುಕಟ್ಟೆ ಬಹು ಸಂಕೀರ್ಣವಾಗಿದ್ದು ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಬಹು ಜಾಗರೂಕರಾಗಿರಬೇಕಲ್ಲದೆ ಮೋಸ ಹೋಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ವಸ್ತುಗಳನ್ನು ಖರೀದಿಸುವ ಮುನ್ನ ಯೋಚಿಸಿ ನಿರ್ಧರಿಸಿ. ಕೊಂಡ ಪದಾರ್ಥದೊಂದಿಗೆ ನೀಡುವ ಗ್ಯಾರಂಟಿ ಪತ್ರವನ್ನು ಗಮನಿಸಬೇಕು. ತಕ್ಕಡಿ ಸರಿಯಾಗಿರುವುದನ್ನು ಗಮನಿಸಲು ತೂಕದ ಕಲ್ಲುಗಳನ್ನು (ಬೊಟ್ಟುಗಳನ್ನು) ಅದಲು ಬದಲು ಮಾಡಿ. ಆಗ ಮೋಸ ಹೋಗಿದ್ದರೆ ತಿಳಿಯುತ್ತದೆ. ತೂಕದ ಸಾಧನಗಳನ್ನು ಕಾನೂನು ಮಾಪನ ಇಲಾಖೆ ಪ್ರತಿ ವರ್ಷ ಸತ್ಯಾಪನೆಗೆ ಒಳಪಡಿಸಿ, ಸರಿಯಾಗಿದ್ದರೆ ಮುದ್ರೆ ಹಾಕಿ ಖಚಿತಪಡಿಸುತ್ತಾರೆ. ಗ್ರಾಹಕರು ಇದನ್ನು ಅರಿತಿರಬೇಕು. ಅಂಗಡಿಯಲ್ಲಿ ಯಾವ ಸರಕುಕೊಂಡರೂ, ಕೊಳ್ಳುವ ಮೊದಲು ದೋಷಗಳಿಗಾಗಿ ಅದನ್ನು ಅಂಗಡಿಯಲ್ಲೇ ಪರಿಶೀಲಿಸಿ ಕೊಂಡದ್ದಕ್ಕೆ ರಸೀದಿ ಪಡೆಯಿರಿ. ತಕ್ಕಡಿಯ ಕೆಳಭಾಗದಲ್ಲಿ ಅಯಸ್ಕಾಂತ ಅಥವಾ ಅಳತೆ ಮಾಪನದಲ್ಲಿ ಒಳಭಾಗದಲ್ಲಿ ಯಾವುದೇ ವಸ್ತು ಅಂಟಿಸಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಿ. ರಸೀದಿಯಿಲ್ಲದೇ ಹಣ ಕಡಿಮೆಯಾಗುತ್ತದೆ ಎಂಬ ಅಮಿಷಕ್ಕೆ ಬಲಿಯಾಗಬೇಡಿ. ಖರೀದಿ ನಂತರ ಸರಕಿನಲ್ಲಿ ದೋಷವಿದ್ದಲ್ಲಿ ಪರಿಹಾರ ಪಡೆಯಲು ಈ ರಸೀದಿ ಬೇಕೆ ಬೇಕು. ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಬಗ್ಗೆ ತಿಳಿದುಕೊಂಡಿರಬೇಕು. ಅನೇಕ ತರಹದ ಕಲಬೆರಕೆಯನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದ್ದು ಅವುಗಳ ಬಗ್ಗೆ ಅರಿತುಕೊಳ್ಳುವುದು ಅಗತ್ಯ.
ಮಾರುಕಟ್ಟೆಯಲ್ಲಿ ಈಗ ಅನೇಕ ಪೊಟ್ಟಣ ಸಾಮಗ್ರಿ ಲಭ್ಯವಾಗುತ್ತಿವೆ. ಪೊಟ್ಟಣಗಳ ಮೇಲೆ ತಯಾರಕರ ಹೆಸರು ವಿಳಾಸ, ಪದಾರ್ಥದ ಹೆಸರು, ನಿವ್ವಳ ತೂಕ, ಪ್ಯಾಕ್ ಮಾಡಿದ ತಿಂಗಳ ವರ್ಷ ಹಾಗೂ ಗರಿಷ್ಟ ಬೆಲೆಯನ್ನು ಕಡ್ಡಾಯವಾಗಿ ಪ್ರಕಟಿಸಬೇಕು. ಯಾವುದೇ ಕಾರಣಕ್ಕೂ ಮುದ್ರಿತ ಬೆಲೆಗಿಂತ ಹೆಚ್ಚು ಬೆಲೆಗೆ ಮಾರುವಂತಿಲ್ಲ. ಸರಕಿನ ಗುಣಮಟ್ಟವನ್ನು ಖಾತರಿ ಮಾಡಲು ಸರ್ಕಾರವು ಐ.ಎಸ್.ಐ. ಮಾನ್ಯತೆ ನೀಡುತ್ತದೆ. ಈ ಚಿಹ್ನೆ ಇರುವ ಸರಕನ್ನೆ ಕೊಳ್ಳಿರಿ.
ಚಿನ್ನ , ಬೆಳ್ಳಿ ಮುಂತಾದ ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವಾಗ ಫ್ಯಾನ್ ನಿಲ್ಲಿಸಲು ತಿಳಿಸಬೇಕು. ಇಲ್ಲವಾದಲ್ಲಿ ತೂಕ ಬದಲಾಗಬಹುದಾಗಿದೆ. ಸೀಮೆ ಎಣ್ಣೆ ಖರೀದಿಸುವಾಗ ಲೀಟರ್ ನೆಗ್ಗಿದ್ದರೆ ಅಥವಾ ಹಿಡಿಕೆಯಲ್ಲಿ ರಂಧ್ರವಾಗಿ ಎಣ್ಣೆ ಸೋರಿಕೆಯಾಗುತ್ತಿದ್ದಲ್ಲಿ ಅಂತಹ ಅಳತೆ ಒಪ್ಪಬೇಡಿ. ಮಾಪನದಲ್ಲಿ ನೊರೆ ನಿಂತರ ಎಣ್ಣೆ ಖರೀದಿಸಿ. ಅಡಿಗೆ ಅನಿಲದ ಸಿಲೆಂಡರ್ ೧೪.೨ ಕಿಲೋಗ್ರಾಂ ಅನಿಲದ ಜೊತೆಗೆ ಅದರಲ್ಲಿ ನಮೂದಿಸಿರುವ ತೂಕವಿರುವುದನ್ನು ಗಮನಿಸಬೇಕು. ಪೆಟ್ರೋಲ್ ಅಥವಾ ಡೀಸೈಲ್ ಕೊಳ್ಳುವಾಗ ಸ್ವಿಚ್ ಹಾಕಿದ ತಕ್ಷಣ ಮೀಟರ್ ಸೊನ್ನೆ (೦) ತೋರಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ತಂಪು ಪಾನೀಯ ಅಥವಾ ಹಣ್ಣಿನ ರಸದ ಪಾನೀಯ ಬಾಟಲ್‌ಗಳ ಮೇಲೆ ಅದನ್ನು ಪ್ಯಾಕ್ ಮಾಡಿದ ಅವಧಿ ಹಾಗೂ ಮಾರಾಟ ಬೆಲೆ ಇರಬೇಕಾದುದು ಕಡ್ಡಾಯ.
ಅಪಾರ ಅಮಿಷ:
ಊರಿಗೆ ಹೊಸ ಹೊಸ ಕಂಪನಿಗಳು ಬಂದು ಗ್ರಾಹಕರಿಗೆ ಅಪಾರ ಅಮಿಷಗಳನ್ನು ತೋರಿ ವ್ಯವಹಾರ ನಡೆಸುವ ಪ್ರಸಂಗಗಳು ನಮ್ಮ ಕಣ್ಣೆದುರಿಗೆ ನಡೆಯುತ್ತಿವೆ. ಇಂತಹ ಕಂಪನಿಗಳೊಂದಿಗೆ ವ್ಯವಹಾರ ಮಾಡಿದಲ್ಲಿ ಮೋಸ ಹೋಗುವ ಸಂಭವ ಹೆಚ್ಚು. ಇಂತಹ ಕಂಪನಿಗಳು ಹೇಳ ಹೆಸರಿಲ್ಲದೇ ದಿನ ಬೆಳಗಾಗುವುದರಲ್ಲಿ ಮಾಯವಾಗುವುದರಿಂದ ಅವರ ಮೇಲೆ ಪ್ರಕರಣ ಹಾಕುವುದಾಗಲಿ ಅಥವಾ ಪರಿಹಾರ ಪಡೆಯುವುದು ಕಷ್ಟಸಾಧ್ಯ. ಆದ್ದರಿಂದ ಭಾರೀ ರಿಯಾಯತಿ , ಹೆಚ್ಚು ಅಮಿಷ ತೋರುವ ಕಂಪನಿಗಳ ಬಗ್ಗೆ ಗ್ರಾಹಕರು ಸದಾ ಜಾಗೃತರಾಗಿರಬೇಕು.
ಕೊಳ್ಳುವ ಶಕ್ತಿ ಹೆಚ್ಚಿದಷ್ಟು, ಮರುಳು ಮಾಡುವ ಜಾಹೀರಾತುಗಳಿಂದ ಕಣ್ಣಿಗೆ ಕಂಡದ್ದನ್ನೆಲ್ಲ ಖರೀದಿಸಬೇಕೆಂಬ ಚಪಲ ಹೆಚ್ಚುತ್ತದೆ. ಮಾರುಕಟ್ಟೆ ಅಷ್ಟೇ ಅಲ್ಲ, ಪ್ರವಾಸ ಸಂದರ್ಭದಲ್ಲೂ ಪ್ರೇಕ್ಷಣೀಯ ಸ್ಥಳಗಳಲ್ಲಿ ಗ್ರಾಹಕ ಮಾರು ಹೋಗುತ್ತಾನೆ. ಉದ್ಯಮ, ವ್ಯಾಪಾರ ಅಭಿವೃದ್ಧಿಯಾದಂತೆ ಮಾರಾಟದ ಮಾದರಿಗಳು ಬದಲಾಗುತ್ತಿವೆ. ಮಾಹಿತಿ ತಂತ್ರಜ್ಞಾನದ ಫಲವಾಗಿ ಆನ್ ಲೈನ್ ಶಾಪಿಂಗ್, ಟೆಲಿಶಾಪಿಂಗ್, ಡೈರೆಕ್ಟ್ ಸೆಲ್ಲಿಂಗ್ ಎಂಬ ಪದ್ಧತಿಗಳು ಈಗ ಚಾಲ್ತಿಯಲ್ಲಿವೆ.
ಆದ್ದರಿಂದ ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ತನ್ನ ಬುದ್ಧಿವಂತಿಕೆ ಉಪಯೋಗಿಸಿ ಸರಿಯಾದ ಬೆಲೆ ಹಾಗೂ ಗುಣಮಟ್ಟದ ವಸ್ತುಗಳನ್ನು ಖರೀದಿಸುವುದು ಅಗತ್ಯ. ಸಾಮಗ್ರಿ ಅಥವಾ ಸರಕು ಖರೀದಿಯಲ್ಲಿ ಕಳಪೆ ಗುಣಮಟ್ಟ, ಕಡಿಮೆ ಪ್ರಮಾಣ, ಅಶುದ್ಧತೆ ಅಥವಾ ನ್ಯೂನತೆ ಕಂಡುಬಂದಲ್ಲಿ ಗ್ರಾಹಕರು ಕೂಡಲೇ ದೂರು ನೀಡುವ ಮೂಲಕ ವಂಚನೆ ತಡೆಗಟ್ಟಲು ಮುಂದಾಗಬೇಕು. ಸರಕಾರದ ಕಾರ್ಯಕ್ರಮದಲ್ಲಿ ಜನರ ಸಹಭಾಗಿತ್ವ ದೊರೆತಾಗ ಮಾತ್ರ ಗ್ರಾಹಕರ ಹಿತರಕ್ಷಣೆ ಸಾಧ್ಯವಾಗುತ್ತದೆ.
Krupe : http://kannadaratna.com/lekhana/consumer_rights.html
Comments
Post a Comment