ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Sunday, April 2, 2017

ಕತ್ತೆ ಎಂಬ ಹರಿಕಾರನ ಕ್ರಾಂತಿ - ಕೃಪಾಕರ ಸೇನಾನಿ

ಹೆದ್ದಾರಿಯ ಪಕ್ಕದಲ್ಲೇ ಇದ್ದ ಆ ಊರಿನಲ್ಲಿ ಬಡತನ, ಮೂಢನಂಬಿಕೆ ಮತ್ತು ಅಜ್ಞಾನಗಳು ಯಥೇಚ್ಛವಾಗಿ ಮನೆಮಾಡಿದ್ದವು. ರಾಜಕೀಯವಾಗಿ ಪ್ರಭಾವಿಗಳಾಗಿದ್ದ ಒಂದೆರಡು ಮನೆಗಳ ಹೊರತಾಗಿ, ಅಲ್ಲಿದ್ದ ಮಣ್ಣಿನ ಮನೆಗಳಾವುವೂ ಸುಸ್ಥಿತಿಯಲ್ಲಿರಲಿಲ್ಲ. ಎಲ್ಲಾ ಜಾತಿಯ ಜನರ ಆರ್ಥಿಕ ಪರಿಸ್ಥಿತಿ ಮತ್ತು ಅವರ ಮನೆಗಳ ಪರಿಸ್ಥಿತಿ ಹೆಚ್ಚು ಕಡಿಮೆ ಒಂದೇ ತೆರನಾಗಿತ್ತು.

ಆದರೆ ಎಲ್ಲೆಂದರಲ್ಲಿ ಜಾತಿ ಸೂಚಕ ಸಾಂಕೇತಿಕ ಫಲಕಗಳು, ಬೀದಿಗೊಂದರಂತೆ ಹೆಂಡದಂಗಡಿ ಮತ್ತು ದೇವಸ್ಥಾನಗಳು ಇದ್ದವು. ಅಲ್ಲಿ ಜನಸಂಖ್ಯೆಗೇನು ಕೊರತೆ ಇರಲಿಲ್ಲವಾದರೂ, ಜನರಿಗಿಂತ ಜಾನುವಾರುಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದವು. ಅವೆಲ್ಲವು ಕಾಡಿನಲ್ಲಿ ಪುಕ್ಕಟ್ಟೆ ಮೇಯ್ದು ಬರುತ್ತಿದ್ದುದರಿಂದ, ಅವು ಹಿಂಡುತ್ತಿದ್ದ ಅರ್ಧ ಲೀಟರ್ ಹಾಲು ಕೂಡ ಅವುಗಳ ಮಾಲೀಕರಿಗೆ ಲಾಭದಾಯಕ ಎಂಬಂತೆ ಕಾಣುತ್ತಿತ್ತು.

ಊರ ಸುತ್ತಲೂ ಸಾಕಷ್ಟು ಒಣಭೂಮಿ ಇತ್ತಾದರೂ, ಕಡಿಮೆ ಮಳೆ ಬೀಳುವ ಪ್ರದೇಶವಾದ್ದರಿಂದ ವ್ಯವಸಾಯಕ್ಕೆ ಅಷ್ಟೇನು ಅನುಕೂಲಕರವಾಗಿರಲಿಲ್ಲ. ಹಾಗಾಗಿ ಸೆಗಣಿ ಸಂಗ್ರಹಿಸಿ ಗೊಬ್ಬರ ಮಾಡಿ ಮಾರುವುದು, ಕಾಡಿನಿಂದ ಸೌದೆ ಮತ್ತು ಕಳ್ಳ ನಾಟಗಳನ್ನು ತಂದು ಹತ್ತಿರದ ಪಟ್ಟಣಕ್ಕೆ ಮಾರುವುದು ಅವರ ಮುಖ್ಯ ಕಸುಬಾಗಿತ್ತು.

ಆ ಊರಿನಲ್ಲಿ ಮೂವರು ನಕಲಿ ಡಾಕ್ಟರ್‌ಗಳು ವೈದ್ಯಕೀಯ ವೃತ್ತಿ ನಡೆಸಿದ್ದರು. ಎಲ್ಲಾ ಬಗೆಯ ಸಣ್ಣ ಪುಟ್ಟ ಕಾಯಿಲೆಗಳಿಗೂ ಅವರು ಚುಚ್ಚುಮದ್ದನ್ನು ಪ್ರಯೋಗಿಸುತ್ತಿದ್ದುದರಿಂದ ರೋಗಿಗಳಿಗೆ ಅವರ ಬಗ್ಗೆ ಅಪಾರ ಗೌರವವಿತ್ತು. ಅವರು ಹೆಚ್ಚಾಗಿ ಡಿಸ್ಟಿಲ್ಡ್ ನೀರನ್ನೇ ಚುಚ್ಚುಮದ್ದಾಗಿ ನೀಡುತ್ತಿದ್ದರು.

ಅದು ಉಂಟುಮಾಡುತಿದ್ದ ವಿಪರೀತ ನೋವಿನಿಂದ ಪುಳಕಿತರಾಗುತ್ತಿದ್ದ ರೋಗಿಗಳು, ಅವರು ಶಕ್ತಿಯುತ ಔಷಧಿಗಳನ್ನೇ ನೀಡುತ್ತಾರೆಂದು ಗಟ್ಟಿಯಾಗಿ ನಂಬಿದ್ದರು. ಈ ನಂಬಿಕೆಯಿಂದಲೇ ನಕಲೀ ವೈದ್ಯರ ವಹಿವಾಟು ಲಾಭಕರವಾಗಿ ನಡೆದಿತ್ತು.

ಇದಲ್ಲದೆ ಆ ಊರಿನಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವೂ ಇತ್ತು. ಅಲ್ಲಿ ಒಬ್ಬರು ವೈದ್ಯರು, ಅವರ ಸಹಾಯಕರಾಗಿ ಕಾಂಪೌಂಡರ್ ಮತ್ತು ನರ್ಸ್ ಸಹ ಇದ್ದರು. ನಗರದಲ್ಲಿ ನೆಲೆಸಿದ್ದ ಆ ವೈದ್ಯರು ಯಾವಾಗಲೋ ಒಮ್ಮೆ ಕೆಲಸಕ್ಕೆ ಬರುತ್ತಿದ್ದರು. ಬೇರೆ ಖಾಸಗಿ ಆಸ್ಪತ್ರೆಗಳಲ್ಲೂ ಅವರು ಸೇವೆ ಸಲ್ಲಿಸುತ್ತಿದ್ದರಿಂದ ಹೆಚ್ಚು ಬಿಡುವಾಗುತ್ತಿರಲಿಲ್ಲ. ಆದರೆ ವೈದ್ಯರ ಅನುಪಸ್ಥಿತಿಯಲ್ಲಿ ಅವರ ಕೆಲಸವನ್ನು ಕಾಂಪೌಂಡರ್ ನಿರ್ವಹಿಸುತ್ತಿದ್ದರು.

ಪಕ್ಕದ ಊರಿನವರಾಗಿದ್ದ ಆ ಕಾಂಪೌಂಡರ್ ತಮ್ಮದೇ ಆದ ಕ್ಲಿನಿಕ್ ಸಹ ಹೊಂದಿದ್ದರು. ಸರ್ಕಾರಿ ಆಸ್ಪತ್ರೆಯ ಔಷಧಗಳನ್ನೆ ಅಲ್ಲಿ ಬಳಸುತ್ತಿದ್ದರಿಂದ ಅವರ ವೃತ್ತಿ ಹೆಚ್ಚು ಲಾಭದಾಯಕವಾಗಿತ್ತು.


ಆ ಊರಿನ ಮಗ್ಗುಲಲ್ಲೆ ವಿಶಾಲವಾದ ಕೆರೆಯೊಂದಿತ್ತು. ಅದು ಎಂದೂ ಬತ್ತಿದ್ದನ್ನು ನಾವು ನೋಡಿರಲಿಲ್ಲ. ಮಳೆಗಾಲದಲ್ಲಿ ಕಾಡಿನಿಂದ ಹರಿದುಬರುತ್ತಿದ್ದ ನೀರು ಈ ಕೆರೆಯನ್ನು ಜೀವಂತವಾಗಿಟ್ಟಿತ್ತು. ಇಡೀ ಊರೇ ನೀರಿಗಾಗಿ ಈ ಕೆರೆಯನ್ನು ಅವಲಂಬಿಸಿತ್ತು. ಕೆರೆಯ ಪಕ್ಕದಲ್ಲಿ ಮೂರು ನೆಲಮಟ್ಟದ ಬಾವಿಗಳಿದ್ದವು.

ಈ ಮೂರು ಬಾವಿಗಳಿಗೆ ಕೆರೆಯಲ್ಲಿ ಇಂಗಿದ ನೀರು ಬಂದು ಸೇರುತ್ತಿತ್ತು. ಅಂದರೆ ಈ ಎಲ್ಲ ಬಾವಿಗಳ ನೀರಿನ ಮೂಲ ಒಂದೇ ಆಗಿತ್ತು. ಚಪ್ಪಡಿಗಳನ್ನು ಹರಡಿ ಮೇಲ್ಭಾಗವನ್ನು ಮುಚ್ಚಿದ್ದ ಆ ಬಾವಿಗಳಿಗೆ ನೀರು ಎತ್ತಲು ಎರಡು ಅಡಿ ಅಗಲದ ಕಿಂಡಿಗಳಿದ್ದವು.

ಈ ಬಾವಿಗಳ ಬಳಿ ಸದಾ ಚಟುವಟಿಕೆಯಿರುತ್ತಿತ್ತು. ಮುಂಜಾನೆಯಿಂದ ಸಂಜೆಯವರೆಗೆ, ಯಾವಾಗ ನೋಡಿದರೂ ಗಂಡಸರು, ಹೆಂಗಸರು, ಸಣ್ಣ ಸಣ್ಣ ಮಕ್ಕಳು ಕೂಡ ಅಲ್ಲಿ ನೆರೆದು, ಕುಡಿಯುವ ನೀರನ್ನು ಬಿಂದಿಗೆಗಳಲ್ಲಿ ಸೇದಿ ಕೊಂಡೊಯ್ಯುತ್ತಲೇ ಇರುತ್ತಿದ್ದರು.

ಆ ಊರಿನ ಅಗಸರ ಕತ್ತೆಗಳಿಗಂತೂ ಬಿಡುವಿನ ಸಮಯವೆಂಬುದೇ ಇರಲಿಲ್ಲ. ಅವುಗಳಿಗೆ ಬಟ್ಟೆ ಹೊರುವ ಕೆಲಸ ಮುಗಿಯುತ್ತಿದ್ದಂತೆ ನೀರು ಹೊರುವ ಕೆಲಸ ಶುರುವಾಗುತ್ತಿತ್ತು. ಹಾಗಾಗಿ ಇವುಗಳಿಗೆ ಮೇಯಲು ಅವಕಾಶ ಸಿಗುತ್ತಿದ್ದುದು ರಾತ್ರಿ ಮಾತ್ರ. ಜಾತ್ರೆ ಸಂತೆಗಳಿಲ್ಲದ ಈ ಊರು ಎಂದೂ ನಮ್ಮ ಕುತೂಹಲವನ್ನು ಕೆರಳಿಸಿರಲಿಲ್ಲ.

ಹೀಗಿರುವಾಗ, ನಮಗೆ ಪರಿಚಯವಿದ್ದ ವೈದ್ಯರೊಬ್ಬರು, ಹೇಗೋ ಈ ಊರಿನ ಸಂಪರ್ಕಕ್ಕೆ ಬಂದು, ಅಲ್ಲಿನ ಜನರ ಪರಿಸ್ಥಿತಿಯನ್ನು ಹತ್ತಿರದಿಂದ ನೋಡಿ ಮರುಕಗೊಂಡಿದ್ದರು. ಸಾಮಾಜಿಕ ಕಳಕಳಿಯಿದ್ದ ಈತ ಇಡೀ ಊರನ್ನು ಸುತ್ತಾಡಿ, ಸಮೀಕ್ಷೆ ನಡೆಸಿ ಅಲ್ಲಿನ ಬಹಳಷ್ಟು ಜನ ರೋಗಪೀಡಿತರಾಗಿರುವುದನ್ನು ಹಾಗೂ ಅದರ ಹಿಂದಿನ ಕಾರಣಗಳನ್ನು ಗುರುತಿಸಿ ಪಟ್ಟಿ ಮಾಡಿಕೊಂಡರು.

ಈ ಯುವ ಎಂ.ಬಿ.ಬಿ.ಎಸ್ ಪದವೀಧರ ತನಗೆ ಬರುತ್ತಿದ್ದ ಉತ್ತಮ ಉದ್ಯೋಗ ಅವಕಾಶಗಳನ್ನು ಪಕ್ಕಕ್ಕಿಟ್ಟು ಸಮಾಜ ಸೇವೆ ಮಾಡುವ ತನ್ನ ಮನದಾಳದ ತುಡಿತಕ್ಕೆ ಈ ಹಳ್ಳಿಯನ್ನು ಆರಿಸಿಕೊಂಡರು.

ಗ್ರಾಮ ಸ್ವರಾಜ್ಯದಲ್ಲಿ ನಂಬಿಕೆಯಿಟ್ಟಿದ್ದ ಇವರು ಅತ್ಯಂತ ಸರಳ ಜೀವನಕ್ಕೆ ಕಟ್ಟುಬಿದ್ದಿದ್ದರು. ಹಾಗಾಗಿ, ಬದುಕಿಗೆ ಅವಶ್ಯವಿರುವಷ್ಟು ಸಂಭಾವನೆಯನ್ನು ಮಾತ್ರ ತೆಗೆದುಕೊಳ್ಳುವುದೆಂದು ನಿರ್ಧರಿಸಿ ಆ ಊರಿನಲ್ಲಿ ಒಂದು ಕ್ಲಿನಿಕ್ ಆರಂಭಿಸಿದರು. ಬಹಳ ವರ್ಷಗಳಿಂದ ನಕಲಿ ವೈದ್ಯರನ್ನಷ್ಟೇ ನೋಡಿದ್ದ ಜನ, ಅಸಲಿ ವೈದ್ಯನನ್ನು ಒಪ್ಪಿಕೊಳ್ಳಲು ಹಿಂಜರಿದರು. ಜನರ ನಂಬಿಕೆ ಗಳಿಸುವುದು ಸುಲಭವಾಗಿರಲಿಲ್ಲ.

‘ಇಷ್ಟು ಕಡಿಮೆ ಶುಲ್ಕ ಕೇಳುವವರು ಒಳ್ಳೆಯ ವೈದ್ಯರಾಗಿರಲು ಹೇಗೆ ಸಾಧ್ಯ?’ ಎಂಬುದು ಹಳ್ಳಿಗರ ತರ್ಕಕ್ಕೆ ನಿಲುಕದ ವಿಚಾರವಾಗಿತ್ತು. ಆದರೆ, ಸಮಯ ಕಳೆದಂತೆ ನಿಧಾನವಾಗಿ ಜನ ಬದಲಾಗತೊಡಗಿದರು. ವೈದ್ಯರ ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವವನ್ನು ಜನರು ಅರ್ಥಮಾಡಿಕೊಂಡಂತೆ ಕಂಡುಬಂತು. ಕ್ಲಿನಿಕ್‌ನಲ್ಲಿ ಜನ ನೆರೆಯತೊಡಗಿದರು. ಕ್ರಮೇಣ ಅವರ ಜನಪ್ರಿಯತೆ ಹರಡಿ ಅಕ್ಕಪಕ್ಕದ ಊರಿನ ಬಡಜನರು ಕೂಡ ಅಲ್ಲಿಗೆ ಬರಲಾರಂಭಿಸಿದರು.

ಅನಂತರದ ಮೂರು ತಿಂಗಳು ನಾವು ಬೇರೆಡೆ ಕೆಲಸ ಮಾಡುತ್ತಿದ್ದೆವು. ವಾಪಸ್ಸಾದಾಗ, ಕ್ಲಿನಿಕ್ ಇದ್ದ ಅಂಗಡಿಯ ಬಾಗಿಲು ಮುಚ್ಚಿತ್ತು. ಅಂಗಡಿಯ ಫಲಕವೂ ಕೂಡ ಕಾಣಲಿಲ್ಲ. ಅಲ್ಲೇನಾಯ್ತೆಂದು ಅಕ್ಕಪಕ್ಕದವರಾರೂ ಸರಿಯಾದ ಕಾರಣಗಳನ್ನಾಗಲೀ ವಿವರಗಳನ್ನಾಗಲೀ ನೀಡಲಿಲ್ಲ. ವೈದ್ಯಮಿತ್ರರ ನಾಪತ್ತೆ ನಮಗೆ ರಹಸ್ಯವಾಗಿಯೇ ಉಳಿಯಿತು.

ಆ ವರ್ಷ ನಾಡಿನೆಲ್ಲೆಡೆ ಬರ ಆವರಿಸಿತ್ತು. ಕೆರೆಗಳೆಲ್ಲ ಬತ್ತುತ್ತಿದ್ದವು. ರೈತರೆಲ್ಲ ಕಂಗಾಲಾಗಿದ್ದರು. ಆದರೆ ಈ ಊರಿನಲ್ಲಿ ಜನಜೀವನ ಮಾತ್ರ ಎಂದಿನಂತೆ ಸಾಗಿತ್ತು. ಏಕೆಂದರೆ ಇಲ್ಲಿನ ಜನ ರೈತಾಪಿ ಕೆಲಸ ಬಿಟ್ಟು ಎಷ್ಟೋ ವರ್ಷಗಳು ಕಳೆದಿತ್ತು, ಅಲ್ಲದೆ ಕಾಡಂಚಿನಲ್ಲಿದ್ದುದರಿಂದ ಊರ ಕೆರೆ ಸಂಪೂರ್ಣವಾಗಿ ಬತ್ತಿರಲಿಲ್ಲ. ಕುಡಿಯುವ ನೀರಿಗೆ ಹೇಗಿದ್ದರೂ ನೆಲಬಾವಿಗಳಿದ್ದವು.

ಆದರೆ ಹಲವಾರು ಕಾರಣಗಳಿಂದ, ಕಾಡಿನಿಂದ ಕೆರೆಗೆ ನಿರಂತರವಾಗಿ ಹರಿದುಬರುತ್ತಿದ್ದ ನೀರು ನಿಂತು ಹೋಗಿ ಎರಡು ವರ್ಷಗಳಾಗಿತ್ತು. ಆ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಖಾಸಗಿಯವರು ಜೆ.ಸಿ.ಬಿ., ಟ್ರಾಕ್ಟರ್‌ಗಳಲ್ಲಿ, ಬತ್ತಿದ್ದ ಆ ಕೆರೆಯ ಮಣ್ಣೆತ್ತಿ ಅಕ್ಕಪಕ್ಕದ ಊರಿನ ರೈತರಿಗೆ ಮಾರುತ್ತಿದ್ದರು.

ಇದೇ ಸಮಯದಲ್ಲಿ ರೀಕೊ ಎಂಬ ಅಮೆರಿಕಾದ ಪ್ರಜೆಯೊಬ್ಬರು ನಮ್ಮಲ್ಲಿಗೆ ಬಂದಿದ್ದರು. ಪೆರ್ಮಕಲ್ಚರ್ ಮತ್ತು ಭೂವಿಜ್ಞಾನದಲ್ಲಿ ತಜ್ಞರಾಗಿದ್ದ ಅವರಿಗೆ ಮಣ್ಣಿನ ರಚನೆ ಮತ್ತು ಸ್ವರೂಪಗಳ ಬಗೆಗೆ ವಿಶೇಷ ಪರಿಜ್ಞಾನವಿತ್ತು. ಈ ಕೆರೆಯಲ್ಲಿ ಮಣ್ಣೆತ್ತುವುದನ್ನು ನೋಡಿದ ಆತ ಹೇಳಿದ್ದು ನಮಗಿನ್ನೂ ನೆನಪಿದೆ.

‘ಈ ರೀತಿ ಕೆರೆಯ ಮಣ್ಣೆತ್ತುವ ಮೊದಲು ಮಣ್ಣಿನ ಪದರಗಳನ್ನು ಸೂಕ್ಷ್ಮವಾಗಿ ಅಧ್ಯಯಿಸಬೇಕು. ಹೀಗೆ ಅಡ್ಡಾದಿಡ್ಡಿ ಮಣ್ಣೆತ್ತುವುದು ಬಹಳ ಅಪಾಯಕಾರಿ. ಒಂದು ಪಕ್ಷ ಕೆಲವು ನಿರ್ದಿಷ್ಟ ಪದರಗಳಿಗೆ ಹಾನಿಯಾದರೆ ಮತ್ತೆ ಇಲ್ಲಿ ನೀರು ನಿಲ್ಲಲು ಹತ್ತಾರು ವರ್ಷಗಳೇ ಬೇಕು. ಇವರು ಮಾಡುತ್ತಿರುವ ಕೆಲಸ ತೀರಾ ಅವೈಜ್ಞಾನಿಕ ಮತ್ತು ಅಪಾಯಕಾರಿ’ ಎಂದು ತಿಳಿಸಿದ್ದರು.

ಅವರು ಪ್ರಯೋಗಾತ್ಮಕವಾಗಿ ಕೊಪ್ಪಳದ ಖಾಸಗಿ ಪ್ರದೇಶದಲ್ಲಿ ರೂಪಿಸಿದ್ದ ಮಾದರಿ ಕೆರೆಯನ್ನು ನಾವು ನೋಡಿದ್ದೆವು. ನಾಲ್ಕು ತಿಂಗಳ ಅವಧಿಯಲ್ಲಿ, ಯಂತ್ರಗಳ ಸಹಾಯವಿಲ್ಲದೆ ನಿರ್ಮಿಸಿದ್ದ ಆ ಕೆರೆ ನಮ್ಮ ಕುತೂಹಲ ಕೆರಳಿಸಿತ್ತು. ಸುತ್ತಮುತ್ತಲಿನ ಕೆರೆಗಳ ಆತ್ಮವನ್ನು ಕೂಲಂಕಷವಾಗಿ ಅಧ್ಯಯಿಸಿ, ಅಲ್ಲಿ ನೆಲೆಸಿರುವ ಜಲಚರ ಜೀವಿಗಳನ್ನೆಲ್ಲ ಪಟ್ಟಿಮಾಡಿ, ಅವುಗಳ ಬದುಕಿಗೆ ಪೂರಕವಾದ ನೆಲೆಯನ್ನು ಕೂಡ ಅಲ್ಲಿ ಸೃಷ್ಟಿಸಿದ್ದರು.

ಎರಡೇ ವರ್ಷಗಳಲ್ಲಿ ಅದು ಕೆರೆಯಾಗಿತ್ತು! ಬೇಸಿಗೆಯಲ್ಲಿ, ಬರದ ನೆರಳಿನಲ್ಲಿ ಕೂಡ ಆ ಕೆರೆಯಲ್ಲಿ ನೀರು ಇಂಗಿರಲಿಲ್ಲ. ಇದನ್ನು ಅರಿತಿದ್ದ ನಾವು ಈ ಮಾಹಿತಿಯನ್ನು ಪಂಚಾಯ್ತಿ ಕಚೇರಿಗೆ ನೀಡುವುದು ಒಳ್ಳೆಯದೆಂದು ಅಲ್ಲಿಗೆ ಹೋದೆವು.

ಅಲ್ಲಿ ಅವರೆಲ್ಲರೂ, ಖಾಸಗಿಯವರು ಎತ್ತುತ್ತಿದ್ದ ಕೆರೆಯ ಹೂಳಿಗೆ ಸರ್ಕಾರದ ಕಾರ್ಯಕ್ರಮದಡಿಯಲ್ಲಿ ಬಿಲ್ ಸಿದ್ಧಗೊಳಿಸುವ ಗಡಿಬಿಡಿಯಲ್ಲಿದ್ದರು. ಅಪಾರ ಏಕಾಗ್ರತೆಯಿಂದ ಕೆಲಸದಲ್ಲಿ ಮಗ್ನರಾಗಿದ್ದ ಅವರಿಗೆ ನಮ್ಮ ಮಾತುಗಳು ಕೇಳಿಸಲೇ ಇಲ್ಲ.

ಇದಾದ ಕೆಲವು ತಿಂಗಳುಗಳ ನಂತರ ಸ್ನೇಹಿತರೊಬ್ಬರು ಸಿಕ್ಕಾಗ ವೈದ್ಯರ ಬಗ್ಗೆ ವಿಚಾರಿಸಿದೆವು. ಅವರು ತಿಳಿಸಿದ ವಿಷಯ ನಮಗೆ ಅತೀವವಾದ ಆಘಾತವನ್ನೂ ನಾಚಿಕೆಯನ್ನೂ ಉಂಟುಮಾಡಿತ್ತು.

ಆ ಊರಿನ ನಕಲೀ ವೈದ್ಯರುಗಳೋ ಅಥವ ಜನರೋ ಆ ಯುವ ಡಾಕ್ಟರ್‌ರ ಜಾತಿ, ಕುಲ–ಗೋತ್ರಗಳನ್ನೆಲ್ಲ ಹುಡುಕಿ ಹೊರತೆಗೆದಿದ್ದರು. ಗುಸು ಗುಸು ಸುದ್ದಿ ಹರಡಿತ್ತು. ಅಸ್ಪೃಶ್ಯತೆಯ ಗುಮ್ಮ ಹೊರಬಂದಿತ್ತು. ನಂತರದ ಕೆಲವೇ ದಿನಗಳಲ್ಲಿ ತಪಾಸಣೆಗೆ ಬರುತ್ತಿದ್ದ ರೋಗಿಗಳ ಸಂಖ್ಯೆ ತೀವ್ರವಾಗಿ ಇಳಿಮುಖವಾಯಿತು. ಮಳಿಗೆಯ ಮಾಲೀಕ ಕಾರಣ ಕೂಡ ಹೇಳದೆ, ಪುಂಡು ಹುಡುಗರನ್ನು ಬಳಸಿ ಅಂಗಡಿಯನ್ನು ತೆರವುಮಾಡುವಂತೆ ಒತ್ತಡ ಹೇರಿದ್ದ.

ಸೂಕ್ಷ್ಮ ಮನಸ್ಸಿನ ಆ ವೈದ್ಯರನ್ನು, ಈ ಘಟನೆ ಮಾನಸಿಕ ಖಿನ್ನತೆಗೆ ದೂಡಿತ್ತು. ಬಳಿಕ ಹೇಗೋ ಚೇತರಿಸಿಕೊಂಡು, ಆ ನೆನಪುಗಳಿಂದ ಕಳಚಿಕೊಳ್ಳುವ ಪ್ರಯತ್ನದಲ್ಲಿ ತಮಿಳುನಾಡಿನ ಯಾವುದೋ ಮೂಲೆಯಲ್ಲಿದ್ದ ಸ್ವಯಂ ಸೇವಾಸಂಸ್ಥೆಯೊಂದನ್ನು ಸೇರಿಕೊಂಡಿದ್ದರು.

ಈ ಊರಿನ ಜನ ಮೊದಲಿನಂತೆ ನಕಲಿ ವೈದ್ಯರ ಬಳಿ ಹೋಗಿ, ಎಲ್ಲ ರೋಗಗಳಿಗೂ ಒಂದೇ ‘ಸೂಜಿ’ ಹಾಕಿಸಿಕೊಳ್ಳುತ್ತಾ ಸುಖ ಕಂಡುಕೊಂಡಿದ್ದರು.
ಮಳೆ ಮತ್ತೆ ಮತ್ತೆ ಕೈಕೊಟ್ಟಿತ್ತು. ಬರ ಮೂರನೇ ವರ್ಷಕ್ಕೆ ಮುಂದುವರೆಯಿತು.

ಮನುಷ್ಯನ ದೃಷ್ಟಿಯಲ್ಲಿ ಅಥವ ಯಾವುದೋ ಒಂದು ಪ್ರಾಣಿಯ ಅಥವ ಒಂದು ಜಾತಿಯ ಜೀವಿಯ ದೃಷ್ಟಿಯಲ್ಲಿ ನೋಡಿದಾಗ ಬರ ಎಲ್ಲವನ್ನೂ ಹಾಳುಗೆಡಹುವ ಒಂದು ವಿನಾಶಕಾರಿ ಪ್ರಕ್ರಿಯೆ.

ಆದರೆ, ನಾವು ಬಹಳ ವರ್ಷಗಳ ಕಾಲ ಹತ್ತಿರದಿಂದ ನೋಡಿದ್ದ ಕಾಡಿನಲ್ಲೊಮ್ಮೆ ಬರ ತಂದ ಬದಲಾವಣೆ ನಮ್ಮ ಆಲೋಚನೆಯ ದಿಕ್ಕನ್ನೇ ಬದಲಿಸಿತ್ತು. ಅಲ್ಲಿ ಮೂರು ವರ್ಷಗಳ ಕಾಲ ಸತತವಾಗಿ ಕಾಡಿದ ಬರಗಾಲದ ನಂತರ ಮಳೆ ಎಂದಿನಂತೆ ಸುರಿದು ಬರ ಮಾಯವಾದಾಗ, ಸತ್ತ ಮರಗಳಿಂದ ತೆರವಾದ ಜಾಗದಲ್ಲಿ ಬೇರೆ ಬೇರೆ ಜಾತಿಯ ಸಸ್ಯಗಳು ತಲೆ ಎತ್ತಿದ್ದವು.

ಭೂಮಿಯಲ್ಲಿ ಎಷ್ಟೋ ವರ್ಷಗಳ ಕಾಲ ‘ಅವಕಾಶವಂಚಿತ’ರಾಗಿ ಅಡಗಿ ಕುಳಿತಿದ್ದ ಬೀಜಗಳಿಗೆ ಚಿಗುರೊಡೆಯುವ ಸದಾವಕಾಶ ಸೃಷ್ಟಿಯಾಗಿತ್ತು. ಬರ ನಿರ್ದಾಕ್ಷಿಣ್ಯವಾಗಿ ಅನಾರೋಗ್ಯಕರ ಜೀವಿಗಳನ್ನು ತೊಡೆದು ಹಾಕಿ, ಆರೋಗ್ಯಕರ ಜೀವಸಂಕುಲದ ಮುಂದುವರಿಕೆಗೆ ದಾರಿ ಮಾಡಿಕೊಟ್ಟಿತ್ತು.

ಇದೇನೆ ಇರಲಿ, ಆ ವರ್ಷ ಮುಂದುವರೆದ ಬರದಿಂದಾಗಿ ಆ ಊರಿನ ಕೆರೆಯಲ್ಲಿ ನೀರು ಸಂಪೂರ್ಣವಾಗಿ ಖಾಲಿಯಾಗಿತ್ತು. ಆದರೆ ಕೆರೆಯ ಪಕ್ಕದ ಮೂರು ನೆಲಬಾವಿಗಳ ಪೈಕಿ ಎರಡರಲ್ಲಿ ಇನ್ನೂ ನೀರು ಬತ್ತಿರಲಿಲ್ಲ.

ಆಗೊಮ್ಮೆ, ಅನಿವಾರ್ಯವಾಗಿ, ನಾವು ಆ ಕೆರೆಯನ್ನು ದಾಟಿ ಹೋಗಬೇಕಾದ ಸನ್ನಿವೇಶ ಬಂದಿತ್ತು. ಅಂದು ಅಲ್ಲಿ ಬಹಳ ಜನ ಸೇರಿದ್ದರು. ಏನೋ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದಂತೆ ಕಂಡಿತು. ಕುತೂಹಲಕ್ಕೆ ಏನೆಂದು ವಿಚಾರಿಸಿದೆವು. ‘ಕತ್ತೆಯೊಂದು ತೀರಿಕೊಂಡಿದೆ. ಹಾಗಾಗಿ ಊರಿನವರು ಹೋಮ ನಡೆಸಿದ್ದಾರೆ’ ಎಂದು ತಿಳಿದುಬಂತು.

ಅಲ್ಲಿಯವರೆಗೆ ಕತ್ತೆ ಕೇವಲ ಬೈಗುಳುದ ಪದವಾಗಿ ಮಾತ್ರ ಜನಮನದಲ್ಲಿರುವುದೆಂದು ನಾವು ತಿಳಿದಿದ್ದೆವು. ಅದಲ್ಲದೆ ಆಗೊಮ್ಮೆ ಈಗೊಮ್ಮೆ ಅಸಭ್ಯ ರಾಜಕಾರಣಿಗಳ ನಡವಳಿಕೆಯನ್ನು ಅವಮಾನಿಸಲು ಪ್ರತಿಭಟನೆಯ ಸಂಕೇತವಾಗಿ ಕತ್ತೆಗಳ ಮೆರವಣಿಗೆ ನಡೆಸುವುದು ತಿಳಿದಿತ್ತು. ಆದರೆ ಭಾರತದಲ್ಲಿ ಕತ್ತೆಗಳಿಗೆ ಇಷ್ಟು ಪೂಜ್ಯ ಸ್ಥಾನಮಾನವಿರುವ ತಿಳಿವಳಿಕೆ ಕೂಡ ನಮಗಿರಲಿಲ್ಲವಲ್ಲ ಎಂದು ಆಶ್ಚರ್ಯವಾಯಿತು.

ಐದು ಸಾವಿರ ವರ್ಷಗಳ ಹಿಂದೆ ಉತ್ತರ ಆಫ್ರಿಕಾದ ಕಾಡುಗಳಲ್ಲಿ ಸ್ವಚ್ಛಂದವಾಗಿ ಅಂಡಲೆಯುತ್ತಿದ್ದ ಕಾಡುಜೀವಿ ಕತ್ತೆಗಳು, ಮಾನವನ ಹಿಡಿತಕ್ಕೆ ಸಿಕ್ಕಿ ಪಳಗಿ ಅವನ ಅಡಿಯಾಳಾಗಿ ಮುಂದುವರೆದ ಅಧ್ಯಾಯಗಳೆಲ್ಲ ನೆನಪಿಗೆ ಬಂದವು. ಅವು ಮರುಭೂಮಿ, ಹಿಮಪರ್ವತಗಳ ಕಠಿಣ ಹಾದಿಗಳಲ್ಲಿ, ಯುದ್ಧಗಳಲ್ಲಿ, ಸರಕು ಸಾಗಿಸುವ ಸಾಧನಗಳಾದವು.

ಯುದ್ಧಭೂಮಿಯಲ್ಲಿ ಅವು ಒದಗಿಸಿದ ಸೇವೆಗಳಿಗಾಗಿ ಇಂಗ್ಲೆಂಡ್ ಜನರಿಗೆ ಕತ್ತೆಗಳನ್ನು ಕಂಡರೆ ವಿಶೇಷ ಪ್ರೀತಿ, ಕನಿಕರ. ಆದರೆ, ಇಂಡಿಯಾದಲ್ಲಿ ಕೂಡ ಕತ್ತೆಗಿರುವ ಗೌರವಾಧಾರಗಳನ್ನು ನೋಡಿದಾಗ ನಮಗೆ ಅಚ್ಚರಿಯಾಯಿತು.

ಕುತೂಹಲ ತಡೆಯಲಾರದೆ ಆ ಬಾವಿಗಳ ಬಳಿ ತೆರಳಿದೆವು. ಅಲ್ಲಿ ಬೇರೊಂದು ಕಥೆಯೇ ಅನಾವರಣಗೊಂಡಿತು. ಅಲ್ಲಿದ್ದ ಮೂರು ಬಾವಿಗಳಲ್ಲಿ ಒಂದು ಬಾವಿಯನ್ನು ದಲಿತರು ಉಪಯೋಗಿಸುತ್ತಿದ್ದರು. ಮತ್ತೆರಡು ಬಾವಿಗಳು ಉಳಿದ ಬೇರೆ ಬೇರೆ ಜಾತಿಯವರಿಗೆ ಹಂಚಿಕೆಯಾಗಿತ್ತು. ಅದರಲ್ಲಿ ಒಂದು ಬಾವಿ ಬರಗಾಲದಿಂದಾಗಿ ಬತ್ತಿಹೋಗಿತ್ತು.

ಕೆಲವು ದಿನಗಳ ಹಿಂದೆ ಮತ್ತೊಂದು ಬಾವಿಗೆ ಕತ್ತೆಯೊಂದು ಆಕಸ್ಮಿಕವಾಗಿ ಜಾರಿ ಬಿದ್ದಿತ್ತು. ಅದೇ ನೀರನ್ನು ಕುಡಿಯುತ್ತಿದ್ದ ಮಂದಿಗೆ ಕೆಲವು ದಿನಗಳ ಬಳಿಕ ಕತ್ತೆ ಬಾವಿಗೆ ಬಿದ್ದು ಕೊಳೆತಿರುವುದು ಗಮನಕ್ಕೆ ಬಂತು. ಈಗ ‘ಅಸ್ಪೃಶ್ಯ’ರ ಬಾವಿಯಲ್ಲಿ ಮಾತ್ರ ಕುಡಿಯುವ ನೀರಿತ್ತು.

ಧರ್ಮಸಂಕಟಕ್ಕೆ ಸಿಕ್ಕಿಬಿದ್ದಿದ್ದ ಊರಿನ ಮಂದಿಗೆ ಅನ್ಯಮಾರ್ಗವಿರಲಿಲ್ಲ. ಕುಡಿಯುವ ನೀರಿಗೆ ‘ಆ’ ಬಾವಿಯೊಂದೇ ಗತಿಯಾಗಿತ್ತು. ಹಾಗಾಗಿ ಹೋಮ, ಪೂಜೆಗಳೊಂದಿಗೆ ಆ ಬಾವಿಯನ್ನು ಶುದ್ಧಮಾಡುತ್ತಿದ್ದರು. ಶುದ್ಧವಾಗಿಯೇ ಇದ್ದ ನೀರಿಗೆ ಗಂಜಲ ಪ್ರೋಕ್ಷಿಸಿ ಶುದ್ಧವಾಗಿಸುವ ಪ್ರಯತ್ನ ನಡೆಸಿದ್ದರು.

ಮುಂದಿನ ಹಲವು ತಿಂಗಳುಗಳ ಕಾಲ ಆ ಊರಿನ ಎಲ್ಲ ಜಾತಿಯ ಜನರೂ ಅದೇ ಬಾವಿಯಿಂದ ನೀರು ಸೇದಿ ಕುಡಿಯುವ ಪದ್ಧತಿ ಆರಂಭವಾಯಿತು. ನೂರಾರು ಸಮಾಜ ಸುಧಾರಕರ, ಮಾನವತಾವಾದಿಗಳ, ಹರಿಕಾರರ ಹಲವಾರು ವರ್ಷಗಳ ನಿರಂತರ ಹೋರಾಟ ತರಲಾರದ ಬದಲಾವಣೆಯೊಂದನ್ನು ಕತ್ತೆಯೊಂದು ಸಾಧಿಸಿ, ಜೀವ ತೆತ್ತಿತ್ತು.

ಬರ, ಕಾಡಿನಲ್ಲಿ ಅನಾರೋಗ್ಯಕರ ಜೀವಿಗಳನ್ನು ತೊಡೆದುಹಾಕಿ, ಆರೋಗ್ಯಕರ ಜೀವಸಂಕುಲದ ಮರುಹುಟ್ಟಿಗೆ ದಾರಿ ಮಾಡಿಕೊಟ್ಟಂತೆಯೇ, ಇಲ್ಲಿ ಒಂದು ಆರೋಗ್ಯಕರ ಸಮಾಜಕ್ಕೆ ಬುನಾದಿ ಹಾಕುವ ಪ್ರಯತ್ನ ಮಾಡಿತ್ತು. ಅದು ಕೊಂಚಮಟ್ಟಿಗೆ ಯಶಸ್ವಿಯಾಗಿತ್ತು, ತಾತ್ಕಾಲಿಕವಾಗಿಯಾದರೂ...

ಪ್ರಕೃತಿ ಮೇಲ್ನೋಟಕ್ಕೆ ನಿಷ್ಕರುಣಿ ಮತ್ತು ವಿಛಿದ್ರಕಾರಿ ಶಕ್ತಿಯಾಗಿ ಕಾಣಿಸುತ್ತದೆ. ಆದರೆ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಲು ಆರಂಭಿಸಿದಾಗ ಅಥವ ಕತ್ತೆತ್ತಿ ಅಸಂಖ್ಯಾತ ಆಕಾಶಕಾಯಗಳತ್ತ ದೃಷ್ಟಿ ಹಾಯಿಸಿ ವಿಶ್ವದ ಅಗಾಧತೆಯನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದಾಗ, ನಮ್ಮ ಜೀವನದೃಷ್ಟಿಯೇ ಬದಲಾಗಬಹುದು.

ವಿಶ್ವದಲ್ಲಿ ನೂರು ಬಿಲಿಯನ್‌ಗೂ (ಒಂದು ಬಿಲಿಯನ್‌ ಎಂದರೆ ನೂರು ಕೋಟಿ) ಹೆಚ್ಚು ತಾರಾಪುಂಜಗಳಿವೆ. ಪ್ರತಿ ತಾರಾಪುಂಜಗಳಲ್ಲೂ ನೂರು ಬಿಲಿಯನ್‌ಗೂ ಮೀರಿದ ನಕ್ಷತ್ರಗಳಿವೆ. ಈ ಪಟ್ಟಿಯಲ್ಲಿ ಗ್ರಹ ಅಥವ ಉಪಗ್ರಹಗಳು ಸೇರಿಲ್ಲ!

ಅಂದರೆ, ನಮ್ಮ ಸೂರ್ಯ, ವಿಶ್ವದ ಸುಮಾರು ಹತ್ತು ಸಾವಿರ ಕೋಟಿ ನಕ್ಷತ್ರಗಳಲ್ಲಿ, ಒಂದು ಪುಟ್ಟ ನಕ್ಷತ್ರ ಮಾತ್ರ. ಹಾಗಾಗಿ ಇಡೀ ವಿಶ್ವದ ಪರಿಕಲ್ಪನೆಯಲ್ಲಿ ಸೌರವ್ಯೂಹ ಎಂಬುದು ಒಂದು ಚುಕ್ಕೆ ಮಾತ್ರ. ಸೂರ್ಯ ಒಂದು ದೂಳಿನ ಕಣವಾದರೆ ಭೂಮಿ ಒಂದು ಅಣುವಿನಂತೆ. ಅಲ್ಲಿಗೆ ಮನುಷ್ಯನ ಗಾತ್ರವನ್ನು ನೀವೇ ಊಹಿಸಿಕೊಳ್ಳಿ.

ಹಾಗಿದ್ದೂ, ಈ ಭೂಮಿ ಒಂದು ಅಪೂರ್ವ ಗ್ರಹ. ನಮಗೆ ಈವರೆಗೆ ತಿಳಿದಿರುವಂತೆ, ಜೀವಿಗಳಿರುವ ಏಕ ಮಾತ್ರ ಆಕಾಶಕಾಯ. ಲೆಕ್ಕವಿಲ್ಲದಷ್ಟು ಕಾಕತಾಳೀಯತೆ ಮತ್ತು ಆಕಸ್ಮಿಕಗಳ ಸಮ್ಮಿಳನಗಳಿಂದ ಉಗಮಗೊಂಡು, ವಿಕಾಸ ಹೊಂದಿದ ಮಾನವ, ಇಂದು ವಿಶ್ವದ ವಿಸ್ಮಯಗಳನ್ನು ಕೆಲಮಟ್ಟಿಗೆ ಅರ್ಥೈಸುವ, ವಿಶ್ಲೇಷಿಸುವ ಮಟ್ಟಕ್ಕೇರಿದ್ದಾನೆ.

ಆದರೆ, ತೇಲುತ್ತಿರುವ ಈ ಅಪೂರ್ವ ಜೀವಚೈತನ್ಯದಲ್ಲಿ ಒಬ್ಬನಾಗಿರುವ ಆತ, ತನ್ನ ಅದೃಷ್ಟವನ್ನು ಮನಗಾಣದೆ, ತನ್ನ ಸುತ್ತಲಿನ ಜೀವಪರಿಸರವನ್ನು ಗೌರವಿಸುವ, ಪ್ರೀತಿಸುವ, ಆಸ್ವಾದಿಸುವ ಬದಲು ಕ್ಷುಲ್ಲಕ ವಿಚಾರಗಳಲ್ಲಿ ಕಳೆದುಹೋಗಿದ್ದಾನೆ.

ಜೀವಸಂಕುಲಗಳ ವಿಕಾಸದ ಹಾದಿಯನ್ನು, ಭೂಮಿ ಹಾಗೂ ಇತರೆ ಆಕಾಶಕಾಯಗಳ ಹುಟ್ಟನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದಾಗ, ಎಲ್ಲದರ ನಡುವೆ ಇರುವ ನಿಕಟ ಸಂಬಂಧಗಳ ಚಿತ್ರಣ ಮೂಡುತ್ತದೆ... ಬಿದ್ದಿರುವ ಕಲ್ಲು, ಮಲಗಿರುವ ಮಣ್ಣು, ಹರಿಯುವ ನೀರು, ಬೀಸುವ ಗಾಳಿ, ಗಿಡ, ಮರ, ಪ್ರಾಣಿ, ಮಾನವ ಎಲ್ಲವೂ ಸೇರಿದಂತೆ.

ಹಾಗಾಗಿ, ತನ್ನ ಗಂಭೀರ ಅಧ್ಯಯನದಲ್ಲಿ ತೊಡಗಿಸಿಕೊಂಡರವನ್ನು, ವಿಶಾಲಹೃದಯಿಗಳನ್ನಾಗಿ ಹಾಗೂ ವಿನಯವಂತರನ್ನಾಗಿ ಪರಿವರ್ತಿಸುವ ಶಕ್ತಿ ಕೂಡ ಈ ಪ್ರಕೃತಿಗಿರುವುದು ನಿಜ.