ವಚನ (231 - 235) - ಬೇಲೂರು ರಘುನಂದನ್


ವಚನ - 231
ಕಟ್ಟು - ೩

ಅಂತರವೆಂದರೆ ಇಬ್ಬರ ನಡುವೆ,
ಬಬ್ಬೆ ಹೊಡೆದು ಬಾಳನ್ನು ಮಬ್ಬು ಮಾಡುವುದಲ್ಲ.
ಸಿಡುಕು ಒಡಕು ಮುನಿಸೆಂದರೆ,
ಒಳಗೊಳಗೇ ಕಸಿದು ಕತ್ತರಿಸಲು ಮಸೆಯುವುದೂ ಅಲ್ಲ.
ಜಗಳವೆಂದರೆ ನುಸಿ ಹತ್ತಿಸಿ ಇಷ್ಟಿಷ್ಟಕ್ಕೂ,
ಪುಕ್ಸಟ್ಟೆ ಸರಕೆಂದು ಮಾತನ್ನು ಸುಖಾಸುಮ್ಮನೆ ಎಸೆಯುವುದಲ್ಲ.
ಸರ್ವ ಅರ್ಥಗಳ ಸಾಧಿಸಿಕೊಂಡು,
ಅವನಿಗೆ ನಾನು, ನನಗೆ ಅವನು,
ವಿಶ್ವಾಸದ ದೋಣಿ ಏರಿ ಮುಳುಗದಂತೆ ಪಯಣಿಸುವುದೇ,
ಬದುಕು ಅಲ್ಲವೇ ಶ್ವೇತಪ್ರಿಯ ಗುರುವೆ?

-ಬೇಲೂರು ರಘುನಂದನ್
5.10.2013



ವಚನ - 232
ಕಟ್ಟು - ೩

ಮೂರು ಗಂಟು ಹಾಕಿಸಿಕೊಂಡು ಸಾಂಗತ್ಯ ಸ್ಥಾಪಿಸದ ಮೇಲೆ ಅದು,
ಎಲ್ಲವೂ ಸರಿಯಿದ್ದ ಸಾಕಾರಕ್ಕೆ ಮಣ್ಣು ಸೇರುವವರೆಗೂ ಸ್ಥಾವರ.
ಸಂಗಾತಿ ಎಂದು ಪ್ರೇಮ ಪ್ರೀತಿ ಮನಸು ದುಡಿಮೆಯ ಬೆವರು ಕೊನೆಗೆ ಮಯ್ಯಿ
ಎಲ್ಲವೂ ಕೊಟ್ಟು ಮೇಲೂ ಅವನ ಸರ್ವೋತ್ಪನ್ನಕ್ಕೆ ಖಾರಕಾನೆಯಂತೆ ನಾ.
ಸಂಗಾತಿ ಸಿಕ್ಕನೆಂದು ಹಿಂದಿದ್ದ ಎಲ್ಲ ಸ್ನೇಹಗಳ ಮಣ್ಣು ಮುಚ್ಚಿ ಮರೆತುಬಿಡು ಅಂದರೆ,
ಹಳದಿಯ ಕಣ್ಣಿಗೆ ಒಗರು ಹತ್ತಿ ಕಂಡಿದ್ದೆಲ್ಲಾ ಚುಚ್ಚುಗಳ್ಳಿ ಅಲ್ಲವೇ ಗುರುವೆ ?
ಮರ ಬಳ್ಳಿ ನಾವಾದ ಮೇಲೆ ಬರುವ ಹಕ್ಕಿಗಳೆಲ್ಲಾ ಬಳ್ಳಿಯ ಹೂವ ರಮಿಸಲು ಬರುತ್ತವೆ,
ಅನ್ನುವ ಸುಳ್ಳು ಕಣ್ಣಿಗೆ ಸಾಂಗತ್ಯ ಸ್ನೇಹ ದೋಣಿಯ ಬೇರೆ ಬೇರೆ ತುದಿಗಳೆಂದು ನೀನೆ ಹೇಳಯ್ಯ
ಶ್ವೇತಪ್ರಿಯ ಗುರುವೆ.

-ಬೇಲೂರು ರಘುನಂದನ್
6.10.2013


ವಚನ - 233
ಕಟ್ಟು - ೩

ಸೊಸೆ ಬಂದು ತಾಯಿಯ ತಿಂದಳು.
ಮಗಳು ಹೋಗಿ ನಾದಿನಿಯ ಜರಿದಳು.
ಗೆಳತಿ ಮಡದಿಯ ಮೆಟ್ಟಿ ನಿಂತಳು.
ಅಕ್ಕ ತಂಗಿಯರು ಸೊಕ್ಕಿ ಹಟಕ್ಕೆ ಬಿದ್ದರು.
ಹೊಸ ಸವತಿಯು ಒಡತಿಯಾದಳು.
ಬೀಗ ಬೀಗತಿಯರು ಬಾಗದೆ ಬಿದ್ದರು.
ಮಗಳು ಮೊಮ್ಮಗಳು ಹೊಸ ನೀರು ಕುಡಿದರು.
ಹಠದ ಮಾರಿಗೆ ಅಹಮಿನ ಮೆರವಣಿಗೆ ಕೂಡಿ,
ಹೆಣ್ಣೆಂದರೆ ಭುವಿಯಂತ ಸಹನೆ ಸರಿ,
ಹೆಣ್ಣೆಂದರೆ ಹಠಮಾರಿಯೆನ್ನುವುದೂ ಸತ್ಯವೇ
ಅಲ್ಲವೇ ಶ್ವೇತಪ್ರಿಯ ಗುರುವೆ ?

-ಬೇಲೂರು ರಘುನಂದನ್
6.10.2013


ವಚನ - 234

ಕಟ್ಟು - ೩


ಸೌಟು ಹಿಡಿವ ಕೈ ನೇಗಿಲ ಹಿಡಿದು,
ಅನ್ನ ಮೂಲದ ಆಧಾರಕ್ಕೆ ಅಂಗೈ ಬಯಲಾಗಬಲ್ಲುದು.
ಮಗುವ ಮೀಯಿಸುವ ಕೈ ದೇಗುಲದ,
ಶಿಲೆ ದೇವನ ತೊಳೆದು ಹೊಳೆವಂತೆ ಮಾಡಬಲ್ಲುದು.
ರುಚಿ ಲೆಖ್ಖಾಚಾರ ಗೊತ್ತಿರುವ ಕೈಗೆ,
ಕೂಡಿ ಕಳೆದು ಹೂಡಿಕೆಯಿತ್ತು ಸಂಕಲಿಸಿ ಎಣಿಸಿ ಗುಣಿಸಬಲ್ಲುದು.
ಬಳೆ ತೊಟ್ಟ ಕೈಗೆ ಹೊಳೆಯಂತಾ ಶಕ್ತಿ ಇರುವಾಗ,
ಕೈಲಾಗದ ಕೊಳೆ ಕೈ ಅಂದರೆ ಇನ್ನು ಸುಮ್ಮನಿರಲಾಗದು ಎಂದು,
ನೀನೇ ಹೇಳು ಶ್ವೇತಪ್ರಿಯ ಗುರುವೆ.

-ಬೇಲೂರು ರಘುನಂದನ್
7.10.2013


ವಚನ - 235
ಕಟ್ಟು - ೩

ಮೈ ತುಂಬಾ ಮೃದು ಮಾಂಸವಿರುವಾಗ,
ಜೋಡಿ ರುಚಿದ್ವಾರ,ಜೋಡಿ ಹಾಲು ಬಿಂದಿಗೆ ,
ಜೀವಕ್ಕಾಗಿ ದುಡಿಯೋ ಪುಷ್ಪ ದ್ವಾರಕ್ಕೆ ಏಕೆ ಬೇಡಿಕೆ?
ಕುಶಿ ಕೊಡುವ ಮಜಬೂತಿನ ಅಂಗಗಳೇನೋ ಸರಿ,
ಬೇಲೂರು ರಘುನಂದನ
ಇಷ್ಟ ಉನ್ಮತ್ತವಾದರೆ ಚಟಕ್ಕೆ ಹಠ ಬರುತ್ತದೆಯಲ್ಲವೇ?
ಮಾಂಸವನೇ ಸದಾ ತಿನ್ನಬೇಕೆಂದರೆ ಕಾಯಿಲೆ ಹತ್ತಿ,
ಮನಸು ಶಿಕಾರಿ ಆಗಿ ಹಾರಿ ಹೋಗುವುದು ಅಲ್ಲವೇ
ಶ್ವೇತಪ್ರಿಯ ಗುರುವೆ?

-ಬೇಲೂರು ರಘುನಂದನ್
7.10.2013

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು