ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Tuesday, February 28, 2012

ಆಡಂಬರದ ಪೂಜೆ

ಕುರುಕ್ಷೇತ್ರದ ಯುದ್ಧ ಮುಗಿದು ಯುಧಿಷ್ಠರ ಚಕ್ರವರ್ತಿಯಾಗಿದ್ದಾನೆ. ದೇಶದಲ್ಲಿ ಶಾಂತಿ ಇದೆ. ಇನ್ನು ಮುಂದೆ ಯುದ್ಧದ ಭೀತಿ ಇಲ್ಲ. ಯುದ್ಧ ಮಾಡಲು ಯಾರೂ ಉಳಿದೇ ಇಲ್ಲ.
ಅರ್ಜುನನಿಗೆ ತಾನು ಯುದ್ಧದಲ್ಲಿ ಮಾಡಿದ ಸಾಧನೆಯ ಬಗ್ಗೆ ಗರ್ವ ಬಂದಿದೆ. 

ತಾನಿಲ್ಲದಿದ್ದರೆ ಪಾಂಡವರು ಗೆಲ್ಲುವುದು ಸಾಧ್ಯವಿತ್ತೇ? ತಾನು ಈಶ್ವರನನ್ನು ಒಲಿಸಿಕೊಂಡು ಪಡೆದ ಪಾಶುಪತಾಸ್ತ್ರದಿಂದಲೇ ವಿಜಯ ಸಾಧ್ಯವಾದದ್ದು ಎಂದು ಬಲವಾಗಿ ನಂಬಿದ್ದ. ಪರಶಿವನ ಬಗ್ಗೆ ತನಗಿದ್ದ ಗೌರವವನ್ನು ತೋರಿಸಲು ದಿನಾಲು ಭರ್ಜರಿಯಾಗಿ ಪೂಜೆ ಮಾಡುತ್ತಿದ್ದ.
 
ಅವನು ಪೂಜೆಗೆ ಕುಳಿತರೆ ಆ ಕರ್ಪೂರ, ಊದುಬತ್ತಿಗಳ ಘಮಲೇನು? ಅದೆಷ್ಟು ಆರತಿಗಳು, ಅದೆಷ್ಟು ಬಂಡಿ ಬಂಡಿ ಹೂಗಳು? ಅರ್ಜುನ ಪೂಜೆ ಮಾಡುವಾಗ ಅವನ ಸೇವಕರಿಗೆ ಈ ವಸ್ತುಗಳನ್ನು ಒದಗಿಸಿ ಒದಗಿಸಿ ಪ್ರಾಣ ಹೋಗುತ್ತಿತ್ತು. 

ಇಡೀ ದೇಶದ ತುಂಬೆಲ್ಲ ಅರ್ಜುನನ ಪೂಜೆಯ ವೈಖರಿಯ ಮಾತು ಹರಡಿತ್ತು. ಅದು ಪ್ರಚಾರವಾದಷ್ಟೂ ಅರ್ಜುನನ ಅಭಿಮಾನ ಹೆಚ್ಚಾಗುತ್ತಿತ್ತು, ಮತ್ತೆ ಪೂಜೆಯ ಆಡಂಬರ ಬೆಳೆಯುತ್ತಿತ್ತು. 

ಆದರೆ ಭೀಮ ಈ ತರಹದ ಪೂಜೆಯನ್ನು ಮಾಡುತ್ತಿರಲಿಲ್ಲ. ಬಹಳ ಹೆಚ್ಚೆಂದರೆ ಊಟಕ್ಕೆ ಕೂಡ್ರುವ ಮುಂದೆ ಐದು ನಿಮಿಷ ಕಣ್ಣು ಮುಚ್ಚಿ ಧ್ಯಾನ ಮಾಡಿ ಓಂ ಶಿವಾಯ ನಮಃ ಎನ್ನುತ್ತಿದ್ದ.
 
ಅದನ್ನು ನೋಡಿ ಅರ್ಜುನ ತಿರಸ್ಕಾರದ ನಗೆ ನಗುತ್ತಿದ್ದ. ತನ್ನ ಪೂಜೆಯ ಸಂಭ್ರಮದ ಬಗ್ಗೆ ಅರ್ಜುನನಿಗೆ ಬಂದ ಅಹಂಕಾರದ ಸೂಚನೆ ಕೃಷ್ಣನಿಗೆ ದೊರೆಯಿತು, ತಕ್ಷಣವೇ ಹಸ್ತಿನಾವತಿಗೆ ಬಂದ.

ಮರುದಿನ, ಅರ್ಜುನನ ಪೂಜೆಯ ಆರ್ಭಟವನ್ನು ನೋಡಿದ. ಪೂಜೆಯ ನಂತರ ಹೇಳಿದ, `ಅರ್ಜುನ, ನಿನ್ನ ಪೂಜೆಯನ್ನು ನೋಡಿ ತುಂಬ ಸಂತೋಷವಾಯಿತು. ಇದು ಈಶ್ವರನನ್ನು ನಿಜವಾಗಿಯೂ ಒಲಿಸುವ ಬಗೆ ಅಲ್ಲವೇ?` `ಹೌದು ಕೃಷ್ಣ, ಮಹೇಶ್ವರನ ಗೌರವಕ್ಕೆ ತಕ್ಕ ರೀತಿಯಲ್ಲಿ ಪೂಜೆ ಮಾಡಬೇಡವೇ? ಭೀಮನ ಹಾಗೆ ಒಮ್ಮೆ ಮಾತ್ರ ಓಂ ಶಿವಾಯ ನಮಃ ಎಂದರೆ ಸಾಕೇ? ಅದೂ ಒಂದು ಪೂಜೆಯೇ` ಎಂದು ಅಹಂಕಾರದಿಂದ ಬೀಗಿದ ಅರ್ಜುನ. 

ಆಗ ಕೃಷ್ಣ ಹೇಳಿದ, `ಅರ್ಜುನ, ನೀನು ಆ ಮಹೇಶ್ವರನನ್ನು ನೋಡಿ ತುಂಬ ದಿನಗಳಾದುವಲ್ಲವೇ? ನಡೆ, ನಾವಿಬ್ಬರೂ ಸೇರಿ ಕೈಲಾಸಕ್ಕೆ ಹೋಗಿ ಆತನಿಗೆ ಪ್ರಣಾಮ ಸಲ್ಲಿಸಿ ಬರೋಣ.` ಅರ್ಜುನ ಒಪ್ಪಿದ. ಮರುದಿನವೇ ಇಬ್ಬರೂ ಪ್ರಯಾಣ ಬೆಳೆಸಿದರು.

ಕೈಲಾಸದ ಹತ್ತಿರಕ್ಕೆ ಬರುತ್ತಿದ್ದರು. ಆಗ ಅಲ್ಲೊಂದು ದೃಶ್ಯ ಕಾಣಿಸಿತು. ಒಬ್ಬ ಮನುಷ್ಯ ಒಂದು ಗಾಡಿಯ ತುಂಬ ಹೂಗಳನ್ನು ತುಂಬಿಕೊಂಡು ಬಂದು ಒಂದೆಡೆಗೆ ಸುರಿಯುತ್ತಿದ್ದ. ಅವನ ಹಿಂದೆ ಮತ್ತೊಂದು ಬಂಡಿ, ಅದರ ಹಿಂದೆ ಇನ್ನೊಂದು ಬಂಡಿ. ಹೀಗೆ ಬಂಡಿಗಳ ಸಾಲೇ ಬರುತ್ತಿದ್ದವು. ಒಬ್ಬೊಬ್ಬರಾಗಿ ಬಂದು ಹೂಗಳನ್ನು ತಂದು ತೆಗ್ಗಿನಲ್ಲಿ ಸುರುವಿ ಮತ್ತೆ ಅವಸರದಿಂದ ಹೋಗುತ್ತಿದ್ದರು. 

ಕೃಷ್ಣ ಆ ಬಂಡಿ ಸವಾರನನ್ನು ಕೇಳಿದ, `ಏನಪ್ಪಾ ಇದು. ಇಷ್ಟೊಂದು ಹೂಗಳನ್ನು ಇಲ್ಲಿ ಸುರಿದು ಹೋಗುತ್ತಿದ್ದೀರಿ?` ಆತ ಹೇಳಿದ, `ಸ್ವಾಮೀ ದಯವಿಟ್ಟು ನಮ್ಮನ್ನು ಮಾತನಾಡಿಸಬೇಡಿ. 

ನಮಗೆ ಒಂದು ನಿಮಿಷವೂ ಪುರುಸೊತ್ತಿಲ್ಲ, ಈಗಾಗಲೇ ಐದು ನೂರು ಬಂಡಿ ಹೂಗಳನ್ನು ಕೈಲಾಸದಿಂದ ತಂದು ಸುರುವಿದ್ದೇವೆ. ಇನ್ನೂ ಸಾವಿರ ಬಂಡಿಗಳಷ್ಟು ಹೂಗಳಿವೆ. ಈಶ್ವರನಿಗೆ ಅರ್ಪಿಸಿದ ಹೂಗಳನ್ನು ಖಾಲಿಮಾಡುವುದರಲ್ಲಿ ಸಾಕುಸಾಕಾಗಿ ಹೋಗಿದೆ.

` ಅರ್ಜುನ ಉತ್ಸಾಹದಿಂದ ಕೇಳಿದ, `ಯಾರು ಇಷ್ಟು ಪ್ರಮಾಣದಲ್ಲಿ ಈಶ್ವರನಿಗೆ ಹೂ ಅರ್ಪಿಸಿದವರು?` ಸೇವಕ ಹೇಳಿದ, `ಮತ್ತಾರು ಸ್ವಾಮಿ, ಅವನೇ ಭೀಮಸೇನ. ದಿನಾಲು ಅವನು ಅರ್ಪಿಸಿದ ಹೂಗಳನ್ನು ತೆಗೆಯುವುದೇ ಕಷ್ಟ.` ಅರ್ಜುನನಿಗೆ ಆಶ್ಚರ್ಯವಾಯಿತು. `ಇವು ಅರ್ಜುನ ಅರ್ಪಿಸಿದ ಹೂಗಳಿರಬೇಕು. ಭೀಮನೆಲ್ಲಿ ಹೂ ಅರ್ಪಿಸುತ್ತಾನೆ?` ಎಂದ.
 
ಅದಕ್ಕೆ ಸೇವಕ, `ಛೇ ಆ ಅಹಂಕಾರದ ಮುದ್ದೆ ಅರ್ಜುನನೆಲ್ಲಿ ಹೂ ಏರಿಸುತ್ತಾನೆ? ತೋರಿಕೆಗಾಗಿ ಪೂಜೆಯ ಆಡಂಬರ ಮಾಡುತ್ತಾನೆ. ಬಹಳವೆಂದರೆ ದಿನವೂ ಕೇವಲ ಒಂದೆರಡು ಹೂಗಳು ಇಲ್ಲಿಗೆ ಬಂದಿರಬಹುದು. ಆದರೆ ಅತ್ಯಂತ ಭಕ್ತಿಯಿಂದ ಭೀಮ ಕ್ಷಣಮಾತ್ರ ಮಾಡಿದ ಪೂಜೆಯಿಂದ ಬಂಡಿಗಟ್ಟಲೆ ಹೂಗಳು ಇಲ್ಲಿಗೆ ಈಶ್ವರನ ಪಾದಕ್ಕೆ ತಲುಪುತ್ತವೆ` ಎಂದ. ಕೃಷ್ಣ ಅರ್ಜುನನ ಮುಖ ನೋಡಿದ. ಅಹಂಕಾರ ಪೂರ್ತಿ ಇಳಿದುಹೋದದ್ದು ಕಾಣುತ್ತಿತ್ತು.

ಪೂಜೆ ಭಕ್ತ-ಭಗವಂತರ ನಡುವಿನ ಅತ್ಯಂತ ಪ್ರೀತಿಯ ಸಂಬಂಧ, ಸಂವಾದ. ಅದಕ್ಕೆ ಆಡಂಬರದ ಅವಶ್ಯಕತೆ ಇಲ್ಲ. ಆಡಂಬರ ಹೆಚ್ಚಾದಂತೆ ನಮ್ಮ ಅಹಂಕಾರದ ಮೆರವಣಿಗೆಯಾಗುತ್ತದೆ ಅಷ್ಟೇ. ಅದು ಭಕ್ತಿಯ ಪೂಜೆ ಆಗುವುದಿಲ್ಲ.

Monday, February 27, 2012

ಕತ್ತೆಯ ಕೊರಳಿನ ಹರಳು

ಅವನೊಬ್ಬ ಬಡವ. ಅವನು ದಿನಾಲು ಕಾಡಿಗೆ ಹೋಗಿ ಕಟ್ಟಿಗೆ ಕಡಿದುಕೊಂಡು ಊರಿಗೆ ಬಂದು, ಅದನ್ನು ಮಾರಿ ಜೀವನ ಸಾಗಿಸುತ್ತಿದ್ದ. ಏನು ಮಾಡಿದರೂ ಬಡತನ ಹಿಂಗದು. ಅವನ ಕಾರ್ಯದಲ್ಲಿ ಸಹಕಾರಿಯಾಗಿದ್ದುದು ಅವನ ಕತ್ತೆ. ಹತ್ತು ವರ್ಷದಿಂದ ಕಟ್ಟಿಗೆ ಹೊತ್ತು ಹೊತ್ತು ಸಣ್ಣದಾಗಿತ್ತು.

ಚಳಿಗಾಲದ ಒಂದು ದಿನ ಸಂಜೆ ಹೀಗೆ ಕಟ್ಟಿಗೆಯನ್ನು ಕತ್ತೆಯ ಮೇಲೆ ಹೊರಿಸಿ ಕಾಡಿನಿಂದ ಬರುತ್ತಿದ್ದಾಗ ರಸ್ತೆಯ ಮಧ್ಯದಲ್ಲಿ ಹೊಳೆಹೊಳೆಯುವ ಕಲ್ಲೊಂದು ಅವನ ಗಮನ ಸೆಳೆಯಿತು. ಅದೊಂದು ಗಾಜಿನ ಚೂರು ಇರಬೇಕೆಂದುಕೊಂಡು ಎತ್ತಿಕೊಂಡ. 

ಆ ಕಲ್ಲಿನ ಮಧ್ಯದಲ್ಲೊಂದು ಸಣ್ಣ ತೂತಿತ್ತು. ಚೆನ್ನಾಗಿದೆ ನೋಡುವುದಕ್ಕೆ ಎಂದುಕೊಂಡು ಆ ತೂತಿನಲ್ಲಿ ದಾರ ಪೋಣಿಸಿ ಅದನ್ನು ತನ್ನ ಕತ್ತೆಯ ಕೊರಳಿನಲ್ಲಿ ಹಾರದಂತೆ ಹಾಕಿದ. ಪಾಪ! ಇದುವರೆಗೂ ಕತ್ತೆಗೆ ತಾನು ಏನೂ ಮಾಡಲಿಲ್ಲ, ಹೀಗಾದರೂ ಒಂದು ಮರ್ಯಾದೆ ಇರಲಿ ಎಂದು ಸಮಾಧಾನ ಪಟ್ಟುಕೊಂಡ.

ಮುಂದೆ ನಡೆಯುತ್ತಿರುವಾಗ ಎದುರಿಗೆ ಒಬ್ಬ ವರ್ತಕ ಬಂದ. ಅವನು ಕತ್ತೆಯ ಕೊರಳಲ್ಲಿ ನೇತಾಡುತ್ತಿದ್ದ ಹೊಳೆಯುವ ಹರಳು ನೋಡಿದ. ಅವನ ತರಬೇತಾದ ಕಣ್ಣುಗಳಿಗೆ ಅದು ಒಂದು ವಜ್ರವೆಂದು ತಕ್ಷಣ ಹೊಳಿಯಿತು.
 
ಬಹುಶಃ ಈ ಬಡವನಿಗೆ ಅದು ವಜ್ರವೆಂದು ತಿಳಿದಿಲ್ಲ, ಅದಕ್ಕೇ ಕತ್ತೆಯ ಕೊರಳಲ್ಲಿ ಕಟ್ಟಿದ್ದಾನೆ ಎಂದು ಗೊತ್ತಾಗಿ ಅದನ್ನು ಲಪಟಾಯಿಸಲು ಹೊಂಚು ಹಾಕಿದ.  `ಏನಪ್ಪಾ, ಕತ್ತೆಯ ಕೊರಳಲ್ಲಿ ಯಾಕೆ ಈ ಸಿಂಗಾರ? ನನಗೆ ಈ ಕಲ್ಲು ಕೊಡುತ್ತೀಯಾ? 

ಎಷ್ಟು ಕೊಡಬೇಕು ಹೇಳು` ಎಂದು ಕೇಳಿದ. ಬಡವನಿಗೆ ಆಶ್ಚರ್ಯವಾಯಿತು. ಈ ಕಲ್ಲನ್ನು ಯಾಕೆ ಕೊಂಡುಕೊಳ್ಳುತ್ತಾನೆ ಈತ ಎಂದು ಚಿಂತಿಸಿ `ನೂರು ರೂಪಾಯಿ ಕೊಟ್ಟರೆ ಕೊಟ್ಟೇನು` ಎಂದ. 

ವ್ಯಾಪಾರಿಗೆ ದುರಾಸೆ. ಹೇಗಿದ್ದರೂ ಮೂರ್ಖನಿಗೆ ವಜ್ರದ ಬೆಲೆ ಗೊತ್ತಿಲ್ಲ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಜ್ರವನ್ನು ನೂರು ರೂಪಾಯಿಗೆ ಕೊಡಲು ಸಿದ್ಧನಿದ್ದಾನೆ. ಅವನು ಕೇಳಿದಷ್ಟೇ ಕೊಟ್ಟರೆ ಸಂಶಯ ಬಂದೀತು, ಇನ್ನಷ್ಟು ಚೌಕಾಸಿಮಾಡೋಣವೆಂದು, `ಇಲ್ಲಪ್ಪ, ನೂರು ರೂಪಾಯಿ ಹೆಚ್ಚಾಯಿತು, ಐವತ್ತು ರೂಪಾಯಿ ಕೊಡುತ್ತೇನೆ. 

ಏನು ಹೇಳುತ್ತೀ?` ಎಂದು ಕೇಳಿದ. ಬಡವನಿಗೆ ಗೊತ್ತಾಯಿತು, ಈ ಕಲ್ಲಿನ ಬೆಲೆ ಐವತ್ತಕ್ಕಿಂತ ಹೆಚ್ಚಾಗಿದೆ. ಇಲ್ಲದಿದ್ದರೆ ಬುದ್ಧಿವಂತ ವ್ಯಾಪಾರಿ ಕಲ್ಲಿಗೆ ಇಷ್ಟೇಕೆ ಬೆಲೆಕೊಡುತ್ತಿದ್ದ? ಗೋಣು ಅಲ್ಲಾಡಿಸಿ ಹೇಳಿದ, `ಬೇಡ ಬಿಡಿ ಸ್ವಾಮಿ. ನನ್ನ ಕತ್ತೆಯ ಕೊರಳಲ್ಲಿ ಚೆನ್ನಾಗಿ ಕಾಣುತ್ತದೆ. ಹಾಗೆಯೇ ಇರಲಿ.`  ರೈತ ಗಮನಿಸಿದ, ಕೊಡುವುದಿಲ್ಲವೆಂದರೂ ವ್ಯಾಪಾರಿ ಹಿಂದೆಯೇ ಬರುತ್ತಿದ್ದಾನೆ. 

ಆಗ ದಾರಿಯಲ್ಲಿ ಮತ್ತೊಬ್ಬ ವ್ಯಾಪಾರಿ ಬಂದ. ಅವನೂ ಹರಳು ನೋಡಿದ ಅವನಿಗೂ ಆದರ ಬೆಲೆ ಅರ್ಥವಾಯಿತು. ಹಿಂದೆಯೇ ಬರುತ್ತಿದ್ದ ವ್ಯಾಪಾರಿಯನ್ನು ಕಂಡ. ಇವನೂ ಈ ಹರಳಿನ ಹಿಂದೆಯೇ ಬಿದ್ದಿದ್ದಾನೆ ಎಂದು ತಿಳಿಯಿತು. 

ತಾನೇ ಬಡವನನ್ನು ಕೇಳಿದ, `ಏನಪ್ಪಾ, ನಿನಗೆ ಸಾವಿರ ರೂಪಾಯಿ ಕೊಡುತ್ತೇನೆ, ಕಲ್ಲು ಕೊಡುತ್ತೀಯಾ?` ಇವನಿನ್ನೂ ಪ್ರಶ್ನೆಯನ್ನು ಮುಗಿಸಿರಲಿಲ್ಲ, ಆಗ ಹಿಂದೆ ಬರುತ್ತಿದ್ದ ವ್ಯಾಪಾರಿ ಥಟ್ಟನೇ ಹಾರಿ ಬಂದ. `ನೀನು ಬರೀ ಸಾವಿರ ರೂಪಾಯಿ ಕೊಟ್ಟು ಹರಳು ಹೊಡೆಯಬೇಕೆಂದು ಮಾಡಿದ್ದೀಯಾ?
 
ನಾನು ಐದು ಸಾವಿರ ಕೊಡುತ್ತೇನೆ` ಎಂದು ಅರಚಿದ. ಇನ್ನೊಬ್ಬ ಬಿಟ್ಟಾನೆಯೇ, `ಏನಯ್ಯೊ ಐದು ಸಾವಿರಕೊಟ್ಟು ಈ ಮುಗ್ಧನಿಗೆ ಟೋಪಿ ಹಾಕಲು ನೋಡುತ್ತೀಯಾ? ನಾನು ಹತ್ತು ಸಾವಿರ ರೂಪಾಯಿ ಕೊಡುತ್ತೇನೆ.` ಇಬ್ಬರ ನಡುವೆ ಪೈಪೋಟಿ ನಡೆಯಿತು. 

ಕಟ್ಟಿಗೆ ಮಾರುವ ಬಡವ ನಕ್ಕು. ತನ್ನ ಕತ್ತೆಗೆ, ಸ್ನೇಹಿತ, `ನಮ್ಮಿಬ್ಬರ ಬಡತನ ಕೊನೆಗೂ ನೀಗಿತು. ನಿನ್ನ ಕೊರಳಲ್ಲಿ ಇರುವುದು ವಜ್ರವೆಂದು ತಿಳಿಯಿತು. ನಾವು ವಜ್ರದ ವ್ಯಾಪಾರಿಗೆ ಇದನ್ನು ಮಾರಿ ಮುಂದೆ ಸುಖವಾಗಿರೋಣ.
 
ನೀನಿನ್ನು ಕೆಲಸ ಮಾಡುವುದು ಬೇಡ. ಈ ಮೂರ್ಖರು ಹೊಡೆದಾಡುತ್ತ ಇರಲಿ` ಎಂದು ಹೇಳಿ ನಡೆದ. ಮುಂದೆ ಸಂತೋಷವಾಗಿ ಬದುಕಿದ.

ಮಾಸ್ತಿ ಹೇಳುತ್ತಿದ್ದರು :  ಪ್ರತಿಯೊಬ್ಬರ ಮನೆಯಲ್ಲೂ ಒಂದು ಕಪಾಟಿದೆ. ಅದರೊಳಗೆ ನೂರು ಕೋಟಿ ರೂಪಾಯಿ ನಗದು ಇದೆ. ಆದರೆ ನಾವು ಮನೆ ಮನೆಗೆ ಹೋಗಿ ಹತ್ತು ರೂಪಾಯಿ ಕೊಡಿ ಎಂದು ಬೇಡುತ್ತೇವೆ. 

ಯಾಕೆ ಗೊತ್ತೇ? ನಮಗೆ ಕಪಾಟಿನ ಕೀಲಿಕೈ ನಮ್ಮ ಜೇಬಿನಲ್ಲೇ ಇದೆ ಎಂಬುದು ತಿಳಿದಿಲ್ಲ. ಅದನ್ನು ಹುಡುಕಿ ಹೊರ ತೆಗೆದರೆ ನಮ್ಮ ಜೀವನವೇ ಬದಲಾಗಿ ಹೋಗುತ್ತದೆ .
ನಿಜ, ನಮ್ಮಳಗಿರುವ ಅಸಾಮಾನ್ಯ ಶಕ್ತಿಯನ್ನು ತಿಳಿಯದೇ ನಾವು ಬರೀ ಕಲ್ಲೆಂದುಕೊಳ್ಳುತ್ತೇವೆ. 

ಅದು ವಜ್ರವೆಂದು ಒಂದು ಬಾರಿ ತಿಳಿದರೆ ಸಾಕು ನಮಗೇ ಆಶ್ಚರ್ಯವಾಗುವಂತೆ ಜೀವನ ಅದ್ಭುತವಾಗಿ ತೆರೆದುಕೊಳ್ಳುತ್ತದೆ.

Tuesday, February 14, 2012

ಮಳ್ಳೆಗಣ್ಣರ ಮುಠ್ಠಾಳತನವೂ......ಅವಕಾಶ ವ್ಯಾಧಿಗಳ ವಾಸಿಯಾಗದ ಕಾಯಿಲೆಗಳೂ......

ಮೊನ್ನೆ ಪ್ರಜಾವಾಣಿಯಲ್ಲಿ ಸ್ವಾಮಿ ವಿವೇಕಾನಂದರ ಬಗ್ಗೆ ದಿನೇಶ್ ಅಮೀನ್'ಮಟ್ಟು "ಸ್ವಾಮಿ ವಿವೇಕಾನಂದ ಎಂಬ ಮನುಷ್ಯ ಹೀಗಿದ್ದರು ....." ಎಂಬ ಲೇಖನವನ್ನು ತಮ್ಮ ಅಂಕಣದಲ್ಲಿ ಬರೆದಿದ್ದರು. ಈ ಬಗ್ಗೆ ಅನೇಕ ಪ್ರತಿಕ್ರಿಯೆಗಳನ್ನ ಪತ್ರಿಕೆಗಳಲ್ಲೂ ಓದಿ, ಖಾಸಗಿಯಾಗಿಯೂ ಆಲೈಸಿ ಅನಂತರ ನನಗನ್ನಿಸಿರೋದನ್ನು ಇಲ್ಲಿ ಬರೆದಿದ್ದೇನೆ. ಮೊದಲಿಗೆ ಲೇಖನದ ಪ್ರಸ್ತುತತೆ ಹಾಗೂ ಅದನ್ನ ವಿರೋಧಿಸಿ ಪ್ರತಿಭಟಿಸಿ ಬೀದಿಗಿಳಿದವರ ಆವೇಶದ ಬಗೆ ಎರಡೂ ಹಾಸ್ಯಾಸ್ಪದವಾಗಿದ್ದವು. ಖ್ಯಾತನಾಮರು ಅದ್ಯಾವುದೆ ರಂಗದವರಾಗಿದ್ದರೂ ಅವರನ್ನ ಆಧರಿಸಿ ಬರೆದು ಆ ವ್ಯಕ್ತಿತ್ವಗಳ ಖ್ಯಾತಿಯಲ್ಲಿ ತಾವೂ ಪಾಲು ಗಿಟ್ಟಿಸುವ ಚಾಳಿ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ದಿನೇಶರ ಲೇಖನದ ಉದ್ದೇಶವೂ ಇದಕ್ಕಿಂತ ಹೊರತಾಗಿರಲಿಲ್ಲ. ವಿವೇಕಾನಂದರು ಭಾರತೀಯತೆಯ ಚಿರ ಜಾಗತಿಕ ರಾಯಭಾರಿ, ಅವರನ್ನ ಹಿಂದುತ್ವದ ಸೀಮಿತ ಚೌಕಟ್ಟಿನಲ್ಲಿ ಹೊಂದಿಸಿ ಕೇವಲ ನಿರ್ದಿಷ್ಟ ಧಾರ್ಮಿಕತೆಯೊಂದರ ವಕ್ತಾರರ ಪಾತ್ರದಲ್ಲಿ ಬಿಂಬಿಸುವುದೇ ಮೂರ್ಖತನ. ಅಂತದ್ದರಲ್ಲಿ ಅವರನ್ನ ಉಗ್ರ ಹಿಂದೂವಾದಿಯಂತೆ ಕೆಲವು ಸಂಘಟನೆಗಳು ವ್ಯವಸ್ಥಿತವಾಗಿ ಹೊರಜಗತ್ತಿಗೆ ಬಿಂಬಿಸುತ್ತಿದ್ದವು. ಸ್ವಾಮೀಜಿಯ ವ್ಯಕ್ತಿತ್ವದ ಸಮಗ್ರ ಚಿತ್ರಣ ಶ್ರೀರಾಮಕೃಷ್ಣ ಮಿಶನ್ನಿನ ಹಲವಾರು ಪ್ರಕಟಣೆಗಳಲ್ಲಿ ವಿವರವಾಗಿ ಪ್ರಕಟವಾಗಿವೆ. ಅದ್ವೈತಾಶ್ರಮ ಪ್ರಚುರ ಪಡಿಸಿರುವ ಸ್ವಾಮೀಜಿಯ ಕುರಿತ ಸಮಗ್ರ ಕೃತಿ ಶ್ರೇಣಿಯಲ್ಲಿ ಅವರ ವಯಕ್ತಿಕ ಬದುಕಿನ ಸ್ಪಷ್ಟ ಚಿತ್ರಣವಿದೆ. ಇವುಗಳಲ್ಲೆಲ್ಲೂ ಮುಚ್ಚುಮರೆಯಿಲ್ಲ.


ಸ್ವಾಮೀಜಿಗಿದ್ದ ಮಿತಿಗಳು-ಅವರನ್ನ ಬಾಧಿಸುತ್ತಿದ್ದ ಆರೋಗ್ಯದ ಸಮಸ್ಯೆಗಳು ಇವನ್ನೆಲ್ಲ ತಿಳಿದಿದ್ದೇ ಅವರ ಅಭಿಮಾನಿಗಳು ಅವರನ್ನ ನಿರಂತರವಾಗಿ ಆರಾಧಿಸುತ್ತಿದ್ದರೆ ಹೊರತು ಅವರ ಸಾಧನೆಗಳಿಗೆ ಅದೊಂದು ತೊಡಕೆಂದು ಎಂದೂ ಅವರಿಗನಿಸಿಯೇ ಇರಲಿಲ್ಲ. ಪರಿಸ್ಥಿತಿ ಹೀಗಿರುವಾಗ ಆಶ್ರಮದ್ದೆ ಆದ ಪ್ರಕಟಣೆಗಳನ್ನ ಬಳಸಿಕೊಂಡು ಬರೆಯಲಾಗಿದ್ದ ದಿನೇಶರ ಅನುಕೂಲ ಸಿಂಧು ವ್ಯಾಖ್ಯಾನ ಒಳಗೊಂಡಿದ್ದ ಲೇಖನವೂ ಅದೇ ಮಾದರಿಯದ್ದಾಗಿತ್ತು. ಅವರು ಬಳಸಿದ್ದ ಭಾಷೆ ಹಾಗೂ ಪದಗಳ ಬಗ್ಗೆ ಧಾರಾಳ ಆಕ್ಷೇಪ ಏಳ ಬಹುದಾದರೂ ಅಲ್ಲಿ ಹೇಳಲಾಗಿದ್ದ ಸಂಗತಿಗಳಲ್ಲ್ಲಿ ವಿಶೇಷವೇನೂ ಇರಲಿಲ್ಲ, ಆಶ್ರಮದ ಸಂಪರ್ಕವಿರುವ ಅನೇಕರಿಗೆ ಈ ಮೊದಲೆ ಗೊತ್ತಿದ್ದ ಸಂಗತಿಗಳನ್ನೆ ಅಲ್ಲಿ ಹೊಸತೆನ್ನುವಂತೆ ವಿವರಿಸಲಾಗಿತ್ತು. ವಿವೇಕಾನಂದರನ್ನ ಸರಿಯಾಗಿ ಓದಿಕೊಳ್ಳದವರೆ ಹೆಚ್ಚಿರುವ ಹೊತ್ತಿನಲ್ಲಿ ಸಹಜವಾಗಿ ಅಭಿವ್ಯಕ್ತಿ ಸ್ವಾತಂತ್ರದ ಹೆಸರಿನಲ್ಲಿ ಅದೆ ಲೇಖನದ ಅಪದ್ದ ಬಳಕೆ ಧಾರಾಳವಾಗಿ ಆಯಿತು, ಆಕ್ಷೇಪ ಏಳ ಬೇಕಾಗಿರೋದು ಇಲ್ಲಿಯೆ. ಹಾಗಂತ ಇದು ವ್ಯಥಾ ಒಂದು ಪ್ರಹಸನವಾಗ ಬೇಕಿರಲಿಲ್ಲ. ಆದರೂ ಪರ ಮತಾನುಯಾಯಿಗಳು ಇಂತಹ ಸಂದರ್ಭದಲ್ಲಿ ನಡೆದುಕೊಳ್ಳಬಹುದಾಗಿದ್ದ ರೀತಿಯಿಂದ ಪ್ರೇರಿತರಾದ ಕೆಲವರು ತಾವೂ ಅವರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎನ್ನುವುದನ್ನು ಸಾಬೀತು ಪಡಿಸಲಿಕ್ಕೆ ಹೋಗಿ, ಆಲಕ್ಷಿಸಿ ಮುಚ್ಚಿ ಹಾಕಬಹುದಾಗಿದ್ದ ಸಂಗತಿಯೊಂದಕ್ಕೆ ತಾವೆ ಅತಿ ಪ್ರಚಾರ ಒದಗಿಸಿಕೊಟ್ಟದ್ದು ಮಾತ್ರ ವಿಪರ್ಯಾಸ .


ಸ್ವಾಮೀಜಿಯ ಜನ್ಮದಿನವನ್ನ "ರಾಷ್ಠ್ರೀಯ ಯುವದಿನ"ವನ್ನಾಗಿ ಆಚರಿಸುವ ಹಿನ್ನೆಲೆಯಲ್ಲಿ ದಿನೇಶರ ಅನಿಸಿಕೆಯಂತೆ ಕೆಲವು ಅಲ್ಪಮತಿಗಳು ಸ್ವಾಮೀಜಿಯನ್ನ ಹಿಂದುತ್ವಕ್ಕೆ ಮಾತ್ರ ಸೀಮಿತಗೊಳಿಸಿದ್ದು ಕಹಿಯಾದರೂ ಸತ್ಯ. ಅವರ ವ್ಯಕ್ತಿತ್ವದ ಅತಿಶಯೋಕ್ತಿಯ ಕ್ಲೀಷೆಯನ್ನ ಒಡಿಯುವ ಪ್ರಾಮಾಣಿಕ ಪ್ರಯತ್ನ ದಿನೇಶರ ಅಂಕಣದ ಅಂದಿನ ಲೇಖನದ ಉಧ್ದೇಶವೆಂದುಕೊಂಡರೂ ಅದರಿಂದಾದ ಅನೇಕರ ಮಾನಸಿಕ ಕ್ಲೇಶಕ್ಕೆ ಖಂಡಿತ ಅವರು ನಂತರದ ದಿನಗಳಲ್ಲಿ ಕೊಟ್ಟ ವಿಸ್ಕೃತ ಸಮಜಾಯಿಷಿ ಸಮಾಧಾನ ತಾರದಿದ್ದಕ್ಕೆ ಅಲ್ಲಿ ಬಳಕೆಯಾಗಿದ್ದ ಹದಮೀರಿದ ಭಾಷಾ ಧಾಟಿಯೆ ಕಾರಣ. ಯಾವುದೆ ವ್ಯಕ್ತಿ ಪರಿಪೂರ್ಣನಲ್ಲ, ಅಂತೆಯೆ ಸಂನ್ಯಾಸಿ ವಿವೇಕಾನಂದರು ಸಹ, ಆದರೆ ಅವರ ಬಗ್ಗೆ ಬರೆಯುವಾಗ ಬಳಸಿದ ಅತಿಯಾದ ಸಲುಗೆಯನ್ನ ಹಿಂದೆಲ್ಲಾ ಪರಮತದ ಧಾರ್ಮಿಕ ವ್ಯಕ್ತಿಗಳ ಬಗ್ಗೆಯೂ ಬಳಸಲಾಗಿತ್ತೆ? ಅದರ ಅರ್ಧದಷ್ಷು ಕಠಿಣ ಪದಗಳನ್ನ ಒಳಗೊಂಡಿದ್ದ ಅಂತಹ ಲೇಖನಗಳು ಪ್ರಕಟವಾಗಿದ್ದ ಸಂದರ್ಭಗಳಲ್ಲಿಯೂ ಆ ಮತಾನುಯಾಯಿಗಳ ದುಂಡಾವರ್ತಿಯ ಎಲ್ಲೆಯನ್ನೂ ಮೀರಿದ್ದ ಪ್ರತಿಭಟನೆಯ ಹೆಸರಿನ ಸಮಾಜಘಾತಕ ವರ್ತನೆ ಹೇಗಿತ್ತು? ಆಗೆಲ್ಲಾ ಸದರಿ ಲೇಖನ ಪ್ರಕಟವಾಗಿದ್ದ ಪತ್ರಿಕೆಯ ಪ್ರತಿಕ್ರಿಯೆ ಯಾವ ಮಟ್ಟದಲ್ಲಿತ್ತು? ಆ ರೀತಿಯ ಸಮಾಜಘಾತಕ ಘಟನೆಗಳಾದ ಹೊತ್ತಿನಲ್ಲಿ ಈಗ ಮಾತ್ರ ಹುರುಪಿನಿಂದ ದಿನೇಶರನ್ನ ಬೆಂಬಲಿಸಿ ಬೀದಿಗಿಳಿದ ಎಡಪಂಥೀಯ ಭ್ರಾಂತಿವೀರರ ಎಡಬಿ"ಢೋಂಗಿ' ಧೋರಣೆಗೆೆ ಅದೇಕೆ ತುಕ್ಕು ಹಿಡಿದಿತ್ತು? ಎನ್ನುವ ಪ್ರಶ್ನೆಗಳಿಗೆ ಉತ್ತರವಾಗಿ ಕಾಣೋದು ಕೇವಲ ಪಕ್ಷಪಾತ ಹಾಗೂ ಮಳ್ಳೆಗಣ್ಣ ಮಳ್ಳತನ ಮಾತ್ರ!


ಇಲ್ಲಿ ಮೂರು ಹಳೆಯ ಪ್ರಕರಣಗಳು ನೆನಪಾಗುತ್ತಿವೆ. ಕೇರಳದ ಖ್ಯಾತ ಪತ್ರಿಕೆಯೊಂದರಲ್ಲಿ ಅದಾಗಲೆ ಪ್ರಕಟವಾಗಿದ್ದ ಮಲಯಾಳಿ ಕಥೆಯೊಂದರ ಆಂಗ್ಲ ಭಾಷಾಂತರಿತ ಅವತರಣಿಕೆ ಬೆಂಗಳೂರಿನಿಂದ ಪ್ರಕಟವಾಗುವ ಆಂಗ್ಲ ದೈನಿಕ "ಡೆಕ್ಕನ್ ಹೆರಾಲ್ಡ್"ನಲ್ಲಿ "ಮಹಮದ್ ದ ಈಡಿಯಟ್" ಎಂಬ ಯಥಾವತ್ ಮೂಲ ಶಿರೋನಾಮೆಯೊಂದಿಗೆ ಪ್ರಕಟವಾಗಿತ್ತು, ಆ ಕಾಲಕ್ಕೆ ಸುಮಾರು ಹದಿನಾಲ್ಕು ಲಕ್ಷ ಪ್ರಸಾರ ಸಂಖ್ಯೆ ಹೊಂದಿದ್ದ ಮಲಯಾಳಿ ಪತ್ರಿಕೆಯಲ್ಲಿ ಸದರಿ ಮೂಲಕಥೆ ಪ್ರಕಟವಾಗಿ ಅದಾಗಲೆ ಆರು ತಿಂಗಳು ಕಳೆದಿದ್ದು ದೇಶದಲ್ಲಿಯೆ ಹೆಚ್ಚಿನ ವಿದ್ಯಾವಂತರಿರುವ ಕೇರಳದ ಕನಿಷ್ಠ ಏಳು ಲಕ್ಷ ಮಂದಿಯಾದರೂ ಮಹಮದನೆಂಬ ಒಬ್ಬ ಉಢಾಳ ಹುಡುಗನೊಬ್ಬನ ಬಗ್ಗೆ ಬರೆದಿದ್ದ ಆ ಸಾಧಾರಣ ಕಥೆಯನ್ನು ಓದಿಯೂ ಇದ್ದರು, ಅಷ್ಟೇ ಸುಲಭವಾಗಿ ಮರೆತೂ ಇದ್ದರು. ಹೀಗೆ ಓದಿದವರಲ್ಲಿ ಮಲಯಾಳಿ ಮುಸ್ಲಿಂಮರೂ ಇದ್ದರು ಅನ್ನೋದು ಇಲ್ಲಿ ಗಮನಾರ್ಹ. ವಿಶೇಷವಾಗಿ ನೆನಪಿಡಲು ಅಂತಹ ಅದ್ಬುತ ಅಂಶಗಳೇನೂ ಇದ್ದಿರದಿದ್ದ ಈ ಕಥೆಯ ಆಂಗ್ಲಾನುವಾದ "ಡೆಕ್ಕನ್ ಹೆರಾಲ್ಡ್"ನಲ್ಲಿ ಪ್ರಕಟವಾಗಿದ್ದೆ ತಡ ಸಲ್ಲದ ತಳಮಳ ಘಟಿಸಿ ಹೋಯಿತು. ಪತ್ರಿಕೆಯ ಕೇಂದ್ರ ಕಛೇರಿಗೆ ಸಮೀಪವಿರುವ ಶಿವಾಜಿನಗರದಿಂದ ಮೊದಲಿಗೆ ಕಥೆಯ ವಿರುದ್ಧ ಪ್ರತಿಭಟನೆಯ ಕಿಡಿ ಹೊತ್ತಿತು. ಕ್ರಮೇಣ ನಗರದ ಇತರೆಡೆಗಳಿಂದಲೂ ಇನ್ನಷ್ಟು ಇಸ್ಲಾಂ ಧರ್ಮಾಂಧ ಕಿಡಿಗೇಡಿಗಳು ಪತ್ರಿಕೆಯ ಕಛೇರಿಗೆ ಲಗ್ಗೆಯಿಟ್ಟರು. ಕಾನೂನು-ಕಟ್ಟಳೆಗಳೆಲ್ಲ ಅಂದು ಗಾಳಿಗೆ ತೂರಿ ಹೋಗಿದ್ದವು. ಕೈಗೆ ಸಿಕ್ಕಿದ್ದನ್ನೆಲ್ಲ ಅಲ್ಲಿ ಸೇರಿದ್ದ ಪ್ರತಿಭಟನಾನಿರತರು ಪುಡಿಗಟ್ಟಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ತಾವು ನಿತ್ಯದ ಬದುಕಿನಲ್ಲಿ ಬಳಸುವ ಉರ್ದು ಬಿಟ್ಟರೆ ಈ ನೆಲದ ಭಾಷೆಯಾದ ಕನ್ನಡವನ್ನೂ ಸರಳವಾಗಿ ಉಚ್ಛರಿಸಲಾಗದ, ಅದತ್ಲಾಗಿರಲಿ ಉರ್ದುವನ್ನು ಬರೆಯಲು ಬಳಸುವ ಅರಬ್ಬಿ ಲಿಪಿಯನ್ನೊ ಓದುವುದರಲ್ಲಿ ಪ್ರಭುತ್ವವಿರದಿದ್ದವರೆ ಅಂದಿನ ಪ್ರತಿಭಟನೆಯಲ್ಲಿ ಅಧಿಕವಾಗಿದ್ದರು. ಇನ್ನು ಆಂಗ್ಲಭಾಷೆಯನ್ನ ಅವರಲ್ಲಿ ಬೆರಳೆಣಿಕೆಯಷ್ಟು ಮಂದಿಯೂ ಓದುವುದು ಅನುಮಾನಾಸ್ಪದವಾಗಿತ್ತು! ಹೀಗಾಗಿ ಪ್ರಕಟಿತ ಕಥೆಯನ್ನ ಅಲ್ಲಿದ್ದವರಲ್ಲಿ ಅನೇಕರು ಓದಿರುವ ಸಾಧ್ಯತೆಯೆ ಇರಲಿಲ್ಲ. ಕೇವಲ ಮಹಮದ್ ಎಂಬ ಹೆಸರೆ ಅವರ ಅಕ್ಷೇಪಕ್ಕೆ ಇದ್ದ ಮೂಲ ಕಾರಣ : ಅದೇನೆ ಇದ್ದರೂ ಮಹಾತ್ಮ ಗಾಂಧಿ ರಸ್ತೆಯಲ್ಲಿ ಅಂದು ನಡೆದಿದ್ದ ಪ್ರತಿಭಟನೆಯೇನೂ 'ಗಾಂಧಿ ಮಾರ್ಗ ವನ್ನು ಅನುಸರಿಸಿ ಅಲ್ಲಿ ನೆರೆದಿದ್ದ ಧರ್ಮಾಂಧ ಮುಸ್ಲಿಂ ಪುಂಡರು ಸಂಘಟಿಸಿರಲಿಲ್ಲ ಅನ್ನೋದಂತೂ ಸ್ಪಟಿಕದಷ್ಟು ಸ್ಪಷ್ಟವಾಗಿತ್ತು. ವಾಸ್ತವವಾಗಿ ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಪತ್ರಿಕೆ ಕಛೇರಿಯ ಸ್ಥಿರಾಸ್ತಿ ಹಾಗೂ ಪತ್ರಿಕಾ ಸ್ವಾತಂತ್ರ್ಯಕ್ಕೆ ಅಂದು ಹಾನಿಯಾಗಿತ್ತು. ಪರಿಸ್ಥಿತಿ ಹೀಗಿದ್ದರೂ ಮರುದಿನ ಪತ್ರಿಕೆ ತಾನು ಮಾಡದೆ ಇರುವ ತಪ್ಪಿಗಾಗಿ ಮುಖಪುಟದಲ್ಲಿಯೆ ಢಾಳಾದ ಅಕ್ಷರಗಳಲ್ಲಿ "ಅಲ್ಪಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ಆದ(?) ನೋವಿಗೆ ಬೇಷರತ್ ಕ್ಷಮೆ" ಯಾಚಿಸಿತ್ತು! ಇಂತಹ ನಾಚಿಕೆಗೇಡಿನ ಪ್ರಕರಣ ನಡೆದಾಗ ಯಾವೊಬ್ಬ ಪ್ರಜ್ಞಾವಂತ ಎಡಪಂಥೀಯನೂ ಈ ಘಟನೆಯನ್ನ ಖಂಡಿಸಿ ಕನಿಷ್ಠ ಕಾಳಜಿಯ ಒಂದು ಹೇಳಿಕೆಯನ್ನೂ ಕೊಡಲಿಲ್ಲ. ಇನ್ನು ಈ ಮಳ್ಳೆಗಣ್ಣರು ಮುಸ್ಲಿಂ ಪುಂಡರ ಪುಂಡತನವನ್ನ ಖಂಡಿಸಿ ಬೀದಿಗಿಳಿಯೋದಂತೂ ದೂರದ ಮಾತಾಯಿತು.

ಕೇವಲ ಮಹಮದರ ಹೆಸರೆ ಇಲ್ಲಿ ಸ್ವಾಭಿಮಾನದ ಸಂಕೇತವಾಗುವುದಾದರೆ, ಮೂಲಭೂತವಾದಿ ಸಂಘಟನೆಯೊಂದು ತನ್ನ ತುತ್ತೂರಿಯಂತೆ ಮಂಗಳೂರಿನಿಂದ ನಿತ್ಯ ಪ್ರಾಯೋಜಿಸಿ ಪ್ರಕಟಿಸುವ "ವಾತ" ಪೀಡಿತ "ಭಾರ"ವಾದ ಕರ"ಪತ್ರಿಕೆ"ಯೊಂದರ ಅರೆಬೆಂದ ಸೋಗಲಾಡಿ "ಪತರಕರ್ತ"ನೊಬ್ಬ ಇತ್ತೀಚೆಗೆ ಇದೆ ಫೇಸ್ಬುಕ್ಕಿನ ಗೋಡೆಯ ಮೇಲೆ ಪಿ ಲಂಕೇಶರ ಬಗ್ಗೆ ಬರೆಯುತ್ತ ಹಿಂದೆ ಅವರೆ ತಮ್ಮ ಮಗ ಇಂದ್ರಜಿತ್ ಅಫಘಾತಕ್ಕೊಳಗಾದ ಬಗ್ಗೆ ಬರೆದಿದ್ದ "ರಾಮು ಎಂಬ ಹುಡುಗ" ಎಂಬ ಲೇಖನದ ಶೀರ್ಷಿಕೆಯನ್ನ ಗೇಲಿ ಮಾಡುತ್ತ "ಲಂಕೇಶರ ರಾಮು ಎಂಬ ಹುಡುಗ ಈಗ ಪೂರ ಅಪಾಪೋಲಿ ಬಿದ್ದು ಹೋಗಿದ್ದಾನೆ" ಎಂದು ಬರೆದಿದ್ದ. ಅದನ್ನ ಓದಿದ ಹಿಂದುಗಳು ಅಷ್ಟೇ ತಮಾಷೆಯಾಗಿ ಅದನ್ನ ತೆಗೆದುಕೊಳ್ಳುವ ಬದಲು ಇದು ರಾಮನ ಬಗ್ಗೆ ಮಾಡಿದ ಅವಮಾನ ಎಂದು ಪರಿಗಣಿಸಿ ಬೀದಿಗಿಳಿದಿದ್ದರೆ ಅಂತಹ ಹುಚ್ಚಾಟಕ್ಕೆ ಎಂದಾದರೂ ಕೊನೆಯಿರುತ್ತಿತ್ತ?


ಇನ್ನೊಂದು ಪ್ರಕರಣ ಮೂರು ವರ್ಷದ ಹಿಂದೆ ಕನ್ನಡದ ಮತ್ತೊಂದು ದಿನಪತ್ರಿಕೆ "ಕನ್ನಡ ಪ್ರಭ"ಕ್ಕೆ ಸಂಬಂಧಿಸಿದ್ದಂತೆ ನಡೆದು ಹೋಗಿದೆ. ಪತ್ರಿಕೆಯ ಭಾನುವಾರದ ಪುರಾವಣಿ "ಸಾಪ್ತಾಹಿಕ ಪ್ರಭ"ದಲ್ಲಿ ಡಾ ತಸ್ಲೀಮಾ ನಸ್ರೀನ್'ನವರು ಕೊಲ್ಕತ್ತಾ ಮೂಲದ ಆಂಗ್ಲ ನಿಯತಕಾಲಿಕೆಗೆ "ಇಸ್ಲಾಂನಲ್ಲಿ ಸ್ತ್ರೀ ಸ್ವಾತಂತ್ರ್ಯ" ಎನ್ನುವ ವಿಷಯದ ಕುರಿತು ನೀಡಿದ್ದ ಸಂದರ್ಶನವನ್ನು (ಅದು ಅವರ ಹೊಸ ಪುಸ್ತಕದ ಆಯ್ದ ಭಾಗವನ್ನೂ ಒಳಗೊಂಡಿತ್ತು) ಕನ್ನಡಕ್ಕೆ ಅನುವಾದಿಸಿ "ಸಿಂಧು" ಎನ್ನುವ ಕಾವ್ಯನಾಮದಲ್ಲಿ ಪ್ರಕಟಿಸಲಾಗಿತ್ತು. ಮೂಲ ಸಂದರ್ಶನವನ್ನ ಏನೊಂದೂ ಬದಲಾಯಿಸದೆ ಹಾಗ್ಹಾಗೆಯೆ ಅನುವಾದಿಸಿ ಪ್ರಕಟಿಸಿದ್ದರೂ ಮರುದಿನ ಹೊತ್ತಿ ಉರಿಯಿತು ನೋಡಿ ರಾಜ್ಯ. ಬೆಂಗಳೂರಿನ "ಕನ್ನಡ ಪ್ರಭ"ದ ಕೇಂದ್ರ ಕಛೇರಿಯ ಮುಂದೆ ನಡೆದ ಪುಂಡಾಟಿಕೆಯ ಪರಿಣಾಮ ತಿಂಗಳುಗಟ್ಟಲೆ ಪತ್ರಿಕೆಯ ಕಛೇರಿ ಪೊಲೀಸ್ ಬಿಗಿ ಬಂದೋಬಸ್ತಿನಲ್ಲಿ ಸ್ವಯಂ ಸಿಲುಕಿಕೊಳ್ಳ ಬೇಕಾಯಿತು. ಶಿವಮೊಗ್ಗದಲ್ಲಿ ಸದರಿ ಸಂಗತಿ ಎಬ್ಬಿಸಿದ ಮುಸ್ಲಿಂ ಪುಂಡಾಟಿಕೆ ಕೈಮೀರಿ ಹೋಗುತ್ತಿದ್ದುದನ್ನ ನಿಯಂತ್ರಿಸೋಕೆ ಪೊಲೀಸರು ಹಾರಿಸಿದ ಗುಂಡಿಗೆ ಇಬ್ಬರು ಸ್ಥಳದಲ್ಲಿಯೆ ಬಲಿಯಾಗಿ, ಐವರು ಮಾರಣಾಂತಿಕವಾಗಿ ಗಾಯಗೊಂಡರು. ಅಷ್ಟು ತೀವ್ರವಾಗಿದ್ದ ಈ ಧರ್ಮಾಂಧ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅಗ್ಗದ ಪುಂಡರು ಯಥಾಪ್ರಕಾರ ಲೇಖನದ ತಲೆ-ಬುಡ ಅರಿತಿರಲಿಲ್ಲ. ಅನಕ್ಷರಸ್ಥರೂ ಧಾರಾಳವಾಗಿದ್ದರು ಈ ಸ್ವಾಭಿಮಾನಿ ಸ್ವೇಚ್ಛಾಚಾರದಲ್ಲಿ. "ಕನ್ನಡ ಪ್ರಭ"ದ ಅಂದಿನ ಸಂಪಾದಕ ಶಿವಸುಬ್ರಮಣ್ಯ ಮರು ಸಂಚಿಕೆಯಲ್ಲಿ ಮುಸ್ಲೀಮರಿಗೆ ಒಂದು ವೇಳೆ ನೋವಾಗಿದ್ದಲ್ಲ್ಲಿ ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ ಎಂದರಾದರೂ ಪತ್ರಿಕಾ ಸ್ವಾತಂತ್ರ್ಯವನ್ನು ಬಲವಾಗಿ ಸಮರ್ಥಿಸಿ ಆ ಸಂದರ್ಶನದ ಅನುವಾದಕರ ಹೆಸರನ್ನ ಎಲ್ಲಿಯೂ ಬಹಿರಂಗಗೊಳಿಸಲಿಲ್ಲ. ಹಾಸನ-ಹುಬ್ಬಳ್ಳಿ-ಶಿವಮೊಗ್ಗ-ಮಂಗಳೂರು-ಬೆಂಗಳೂರು ಇಲ್ಲೆಲ್ಲ ಪುಂಡಾಟಿಕೆ ಮೆರೆದ ಇಸ್ಲಾಮಿ ಗೂಂಡಾಗಳ ಬಗ್ಗೆ ನಿರೀಕ್ಷೆಯಂತೆ ಯಾವ ಧರ್ಮಾತೀತ ಬು(ಲ)ದ್ದಿಜೀವಿಯೂ ಉಸಿರೆತ್ತಲಿಲ್ಲ.


ಹೀಗಿದ್ದರೂ ಅದೆ ಪತ್ರಿಕೆಯ ಸಹ ಪ್ರಕಟಣೆ "ಸಖಿ" ಪಾಕ್ಷಿಕದ ನಿರ್ವಾಹಕಿ ಚೇತನಾ ತೀರ್ಥಹಳ್ಳಿ ಅನುವಾದಕಿ "ಸಿಂಧು" ಎಂದು ಅನುಮಾನಿಸಿದ ಮುಸ್ಲಿಂ ಮತಾಂಧ ಪುಂಡರು ಆಕೆಗೆ ಕೊಲೆ ಬೆದರಿಕೆಯ ದೂರವಾಣಿ ಕರೆ ಮಾಡಿ ನಿರಂತರವಾಗಿ ಬೆದರಿಸಿ ಸುಮಾರು ಎರಡು-ಮೂರು ತಿಂಗಳು ಆಕೆಯ ಖಾಸಗಿ ಬದುಕನ್ನ ನರಕವಾಗಿಸಿದರು. ಆಗ ಯಾರೊಬ್ಬ ಆದರ್ಶವಾದಿ ಕ್ರಾಂತಿಕೋರನೂ ಘೋಷಣೆ ಕೂಗುತ್ತ ಆವೇಶದಿಂದ ಆಕೆಯ ಬೆಂಬಲಿಸಿ ರಸ್ತೆಗಿಳಿದದ್ದು ನನಗಂತೂ ನೆನಪಿಲ್ಲ. ಮತ್ತದೆ ಮಳ್ಳೆಗಣ್ಣಿನ ಹೀನ ರೋಗ ಅವರಿಗೆಲ್ಲ ಅಂದೂ ಇತ್ತು. ವಾಸ್ತವವಾಗಿ ಆಗಷ್ಟೆ "ಪ್ರಜಾವಾಣಿ" ತೊರೆದು "ವಿಜಯ ಕರ್ನಾಟಕ" ಸೇರಿದ್ದ ಪತ್ರಕರ್ತರೊಬ್ಬರು "ಕನ್ನಡ ಪ್ರಭ"ಕ್ಕಾಗಿ ಅದನ್ನ ಅನುವಾದಿಸಿದ್ದರು! ಮಿಂಚಂಚೆಯ ಮೂಲಕ "ಸಾಪ್ತಾಹಿಕ ಪ್ರಭ"ಕ್ಕೆ ಅವರು ರವಾನಿಸಿದ್ದ ಲೇಖನಕ್ಕೂ ಅಮಾಯಕಿ ಚೇತನಳಿಗೂ ಸೂತ್ರ ಸಂಬಂಧವೆ ಇರಲಿಲ್ಲ! ಖುಲ್ಲಂಖುಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕೊಳ್ಳಿಯಿಟ್ಟ ಈ ಘಟನೆಯಾಗಿದ್ದಾಗಲೂ ಯಾವೊಬ್ಬ ಜಾತ್ಯತೀತ ಉದಾರ"ವ್ಯಾಧಿ"ಗೂ ಪೈಗಂಬರ್ ಮಹಮದ್ ಆಗಲಿ-ಇಸ್ಲಾಂ ಆಗಲಿ ಟೀಕಾತೀತವೇನೂ ಅಲ್ಲ ಎಂದೆನ್ನುವ ಛಾತಿಯಾಗಲಿ, ಪ್ರಾಮಾಣಿಕತೆಯಾಗಲಿ ಬಹಿರಂಗದಲ್ಲೂ ಇರಲಿಲ್ಲ, ಅಂತರಂಗದಲ್ಲಂತೂ ಮೊದಲೆ ಇರಲಿಲ್ಲ ಅನ್ನೋದು ವ್ಯಂಗ್ಯವಾದರೂ ಸತ್ಯ.


ಮತ್ತೊಂದು ಘಟನೆ ನೇರವಾಗಿ "ಪ್ರಜಾವಾಣಿ"ಗೆ ಸಂಬಂಧಿಸಿದ್ದು. ಪತ್ರಿಕೆಯ ವಿದೇಶಿ ಸುದ್ದಿಗಳು ಪ್ರಕಟವಾಗುವ ಪುಟದಲ್ಲಿ "ಪ್ರಪಂಚ ದರ್ಶನ"ದ ಹೆಸರಿನಲ್ಲಿ ದಿನಕ್ಕೊಂದು ವಿದೇಶದ ಕಿರು ಪರಿಚಯದ ಅಂಕಣವೊಂದು ಪ್ರಕಟವಾಗುತ್ತಿತ್ತು. ಹಾಗೆಯೆ ಒಂದು ದಿನ ಸೌದಿ ಅರೇಬಿಯಾದ ಕುರಿತ ಪರಿಚಯವೂ ಬಂದಿತ್ತು, ಅವತ್ತು ಶುಕ್ರವಾರ. ತಪ್ಪದೆ ದಿನವೂ ಆ ಅಂಕಣವನ್ನ ಓದುತ್ತಿದ್ದ ನಾನು ಮರುದಿನವೂ ಗಮನಿಸಿದಾಗ ಅದೇ ದೇಶದ ಪರಿಚಯ ಮರುಪ್ರಕಟವಾಗಿದ್ದನ್ನ ಕಂಡು ಗೊಂದಲಕ್ಕೀಡಾಗಿ ಬಹುಷಃ ಅದು ಕಣ್ಥಪ್ಪಿನಿಂದ ಆದ ತಪ್ಪಾಗಿರಬಹುದು ಎಂದುಕೊಂಡು ಪತ್ರಿಕೆಯ ಸಿನೆಮಾ ವಿಭಾಗದಲ್ಲಿರುವ ಗೆಳೆಯರಾದ ಹಿರಿಯ ಪತ್ರಕರ್ತರೊಬ್ಬರಿಗೆ ಈ ಬಗ್ಗೆ ಗಮನ ಸೆಳೆಯಲು ಫೋನಾಯಿಸಿದೆ. ಅವರಿಂದ ಆ ಅಂಕಣದ ಉಸ್ತುವಾರಿ ಇನ್ನೊಬ್ಬ ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆಯವರೆಂದು ತಿಳಿದು ಬಂತು. ಸರಿ ಅವರಿಗೇನೆ ದೂರವಾಣಿ ಕರೆ ಮಾಡಿ ಕೇಳುವ ಅಂತಂದುಕೊಳ್ಳುತ್ತಾ ಮತ್ತೆ ಪತ್ರಿಕೆಯ ಅದೆ ಅಂಕಣವನ್ನ ತಿರುಗಿ ಪರಿಶೀಲಿಸಿದಾಗ ಅಂದು ಪ್ರಕಟವಾಗಿದ್ದ ನಿತ್ಯದ ವಿವರಣೆಯ ಕೆಳಗೆ ಇನ್ನಷ್ಟು ಹೆಚ್ಚಿನ ವಿವರಣೆಯೂ ಪ್ರಕಟವಾಗಿದ್ದನ್ನು ಕಂಡು ಅದನ್ನ ಓದಿ ಅಚ್ಚರಿಗೊಂಡೆ. ಅಲ್ಲಿ ಇಷ್ಟು ಮುದ್ರಿಸಲಾಗಿತ್ತು " ನೆನ್ನೆಯ ದಿನ 'ಸೌದಿ ಅರೇಬಿಯಾ'ವನ್ನು ಕುರಿತು ನೀಡಿದ್ದ ವಿವರಣೆಯಲ್ಲಿ. ಮಹಮದ್ ಪೈಗಂಬರ್ ಮೆಕ್ಕಾದಿಂದ ಮದೀನಾಕ್ಕೆ ಕ್ರಿಸ್ತಶಕ 622ರಲ್ಲಿ ಓಡಿಹೋದರು. ಅಂದಿನಿಂದ ಹಿಜ್ರಾ ಶಕೆ ಪ್ರಾರಂಭವಾಗುತ್ತದೆ ಎಂದು ಪ್ರಕಟವಾಗಿತ್ತು. ಇದರಿಂದ ಅನೇಕರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ತಿಳಿದುಬಂದಿದೆ. ಅದಕ್ಕಾಗಿ ಪತ್ರಿಕೆ ಕ್ಷಮೆಯಾಚಿಸುತ್ತದೆ ಹಾಗೂ ಇಂದು ಅದೇ ವಿವರಣೆಯನ್ನು ತಿದ್ದಿ ಪ್ರಕಟಿಸಲಾಗಿದೆ!". ಇದನ್ನ ನೋಡಿ ನನಗಂತೂ ಸಖೇದಾಶ್ಚರ್ಯವಾಯಿತು. ಮತ್ತೊಮ್ಮೆ ಇಂದಿನ ವಿವರಣೆಯನ್ನ ಓದಿ ನೋಡಿದೆ. ಹೌದು, ನೆನ್ನೆ ಪ್ರಕಟವಾಗಿದ್ದ ಆ ಒಂದು ಸಾಲು ಮಾತ್ರ ಇಂದು ನಾಪತ್ತೆಯಾಗಿದೆ!.


ವಾಸ್ತವವಾಗಿ ಕ್ರಿಸ್ತಶಕ 622ರ ಜೂನ್ 20ರಂದು ತನ್ನ ಗೆಳೆಯ ಹಾಗೂ ಮುಂದೆ ಹೆಣ್ಣುಕೊಟ್ಟ ಮಾವನಾದ ಆಯೆಷಾಳ ತಂದೆ ಅಬು ಬಕರನೊಡನೆ ಪ್ರಾಣಭೀತಿಯಿಂದ ತನ್ನ ಐವತ್ತಮೂರರ ಹರೆಯದಲ್ಲಿ ಪೈಗಂಬರ್ ಮಹಮದ್ ಎಂಟುದಿನಗಳ ಕಡುಕಷ್ಟದ ಪ್ರಯಾಣ ಮಾಡಿ ಮದೀನ ತಲುಪಿ ತನ್ನ ತಲೆಯುಳಿಸಿಕೊಂಡದ್ದೂ ಹೌದು. ಅವರನ್ನ ಕೊಂದೇ ತೀರುವ ರೊಚ್ಚಿನಿಂದ ಬೆನ್ನು ಬಿದ್ದ ಖುರೈಷಿಗಳ ಪಡೆಗಳ ಕಣ್ತಪ್ಪಿಸುವ ಸಲುವಾಗಿ ಹೆದರಿಕೆಯಿಂದ ಮೂರುದಿನ ದಾರಿ ಮಧ್ಯದ ಥೌರ್ ಬೆಟ್ಟ ಸಾಲಿನ ಗುಹೆಯೊಂದರಲ್ಲಿ ತಲೆಮರೆಸಿ ಕೊಂಡಿದ್ದದ್ದೂ ಹೌದು. ಅಂದಿನಿಂದಲೆ ಹಿಜ್ರಾ ಶಕೆಯನ್ನ ಪರಿಗಣಿಸಲಾಗುತ್ತದೆ ಅನ್ನೋದು ಸಹಾ ಹೌದು. ಈ ಬಗ್ಗೆ ಸಂಶಯವಿರುವವರು ಖ್ಯಾತ ಇತಿಹಾಸಕಾರರಾದ ಸರ್ ವಿಲಿಯಂ ಮ್ಯೂರ್ರ 'ದ ಲೈಫ್ ಆಫ್ ಮಹಮದ್' ಪುಸ್ತಕದ ಪುಟ 137ನ್ನೂ, ಅಲ್ ಮುಬಾರಖಿಯ 'ದ ಸೀಲ್ಡ್ ನೆಕ್ಟರ್' ಪುಸ್ತಕದ ಪುಟಸಂಖ್ಯೆ 342ನ್ನೂ, ಕ್ಯಾರನ್ ಅರ್ಮಸ್ಟಾಂಗ್ರ 'ಮಹಮದ್' ಪುಸ್ತಕದ ಪುಟಸಂಖ್ಯೆ 111ನ್ನೂ ಆಸಕ್ತಿ ಇದ್ದಲ್ಲಿ ಓದಿ ಖಚಿತ ಪಡಿಸಿಕೊಳ್ಳಬಹುದು.

ಇದನ್ನ ಮನಸಿನಲ್ಲಿಟ್ಟುಕೊಂಡೆ ಕೊಡಸೆಯವರಿಗೆ ಫೋನಾಯಿಸಿದಾಗ ಅವರು ಸರಿಯಾದ ಉತ್ತರ ಕೊಡದೆ ನುಣುಚಿಕೊಂಡರು. ಅವರ ಪ್ರಕಾರ "ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ!" ಎಂದು ಯಾರೊ ನೊಂದವರು(?) ದೂರವಾಣಿ ಕರೆ ಮಾಡಿದ್ದರಂತೆ, ಹೀಗಾಗಿ ಸಮಜಾಯಷಿ ಪ್ರಕಟಿಸಲಾಯಿತಂತೆ! 'ಅಲ್ರೀ ಸತ್ಯ ಪ್ರಕಟಿಸಿದರೆ ಅದ್ಹೇಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗ್ತದೆ?' ಎಂದ ನನ್ನ ಮರು ಪ್ರಶ್ನೆಗೆ ಕೊಡಸೆ ಫೋನಿನಲ್ಲಿಯೆ ಹಲ್ಲುಬಿಟ್ಟರು?! ಮರುದಿನ ಅಲ್ಲಿಯೆ ಕೆಲಸ ಮಾಡುವ ನನ್ನ ಗೆಳೆಯ ಹಾಗೆ ಯಾವ ಕರೆಯೂ ಬಂದಿರಲಿಲ್ಲ, ನಿತ್ಯದ ಮೀಟಿಂಗಿನಲ್ಲಿ ಆ ಬಗ್ಗೆ ಚರ್ಚೆ ನಡೆದು ಈ ಹಿಂದೆ ನಡೆದಿದ್ದ "ಮಹಮದ್ ದ ಈಡಿಯಟ್" ದೊಂಬಿ ಪ್ರಕರಣವನ್ನು ಗಮನದಲ್ಲಿರಿಸಿಕೊಂಡು ಮುಂಜಾಗ್ರತಾ ಕ್ರಮವಾಗಿ ಕ್ಷಮೆ ಹಾಗೂ ತಿದ್ದುಪಡಿ ಪ್ರಕಟಿಸಿ ತಿಪ್ಪೆ ಸಾರಿಸಲಾಯ್ತು ಎಂದಾಗ ನಿಜಕ್ಕೂ ಯಾರಿಗೂ-ಯಾವತ್ತೂ ತಗ್ಗಿಬಗ್ಗಿಯೂ ನಡೆಯದ ಆನೆಯಂತಹ "ಪ್ರಜಾವಾಣಿ"ಯಿಂದ ಇಂತಹ ತೆವಳಿ ಸಾಗುವ ನಡೆ ನಿರೀಕ್ಷಿಸಿರದ ನನಗೆ ನಾಚಿಕೆ-ಹೇಸಿಗೆ ಎರಡೂ ಏಕ ಕಾಲದಲ್ಲಾಯಿತು.


ಈ ಘಟನೆಯ ಗುಂಗಿನಲ್ಲಿಯೆ ಇದ್ದ ನನಗೆ ದಿನೇಶರ "ಸ್ವಾಮಿ ವಿವೇಕಾನಂದ ಎಂಬ ಮನುಷ್ಯ ಹೀಗಿದ್ದರು...." ಎಂಬ ಅನಾವರಣದಲ್ಲಿ ಅನಗತ್ಯ ಉಪಮೆಗಳೇ ತುಂಬಿದ್ದ ಲೇಖನ ಪ್ರಕಟವಾದ ಮರುದಿನ ಮೇಲಿನಂತೆ ತೆವಳುವುದಲ್ಲದಿದ್ದರೂ ಕನಿಷ್ಠ "ಪತ್ರಿಕೆಯಲ್ಲಿ ಪ್ರಕಟವಾಗುವ ಲೇಖನಗಳು ಅದನ್ನು ಬರೆದ ಲೇಖಕರ ವಯಕ್ತಿಕ ಅಭಿಪ್ರಾಯ ಮಾತ್ರ, ಪತ್ರಿಕೆ ಅದಕ್ಕೆ ಯಾವುದೆ ರೀತಿಯಿಂದ ಜವಾಬ್ದಾರವಲ್ಲ ಹಾಗೂ ಅವು ಪತ್ರಿಕೆಯ ಧೋರಣೆಯನ್ನು ಬಿಂಬಿಸುವುದಿಲ್ಲ" ಎನ್ನುವ ಅಡ್ಡ ಗೋಡೆಯ ಮೇಲೆ ದೀಪವಿಡುವ ಹೇಳಿಕೆಯನ್ನಾದರೂ "ಪ್ರಜಾವಾಣಿ" ಪ್ರಕಟಿಸಿ ಸದರಿ ಕಸಿವಿಸಿಯಿಂದ ಕೈ ತೊಳೆದುಕೊಳ್ಳುತ್ತದೆ ಎಂದು ನಿರೀಕ್ಷಿಸಿದ್ದೆ. ಆದರೆ ಅದು ಹುಸಿ ಹೋಯಿತು. ಅದರ ಎರಡನೆ ದಿನ ದಿನೇಶರ ಲೇಖನಕ್ಕೆ ಬಂದ ಪ್ರತಿಕ್ರಿಯೆಯಂತೆ ಐದು ಪರ ಹಾಗೂ ನೆಪಕ್ಕೊಂದೆ ಒಂದು ವಿರೋಧದ ಪತ್ರಗಳ ಹೊರತು ಇನ್ಯಾವ ತೇಪೆದಾರಿಕೆಯನ್ನೂ ತೋರದೆ "ಪ್ರಜಾವಾಣಿ" ದಿನೇಶರನ್ನ ಪರೋಕ್ಷವಾಗಿ ಸಮರ್ಥಿಸಿಕೊಂಡಿತು. ಮೂರು ದಿನಗಳ ನಂತರ ಸ್ವತಃ ದಿನೇಶರೆ ಸಮಜಾಯಷಿ ಲೇಖನ ಬರೆಯುವ ತನಕ ಯಾವ ಮಂಡೆಮಾರಿಯೂ ಆಗಿಲ್ಲ ಎಂಬಂತೆ ಪತ್ರಿಕೆ ಮಗುಮ್ಮಾಗಿತ್ತು. ಬಂಗಾಳಿ ಲೇಖಕ ಮಣಿಶಂಕರ್ ಮುಖರ್ಜಿಯವರ "ದ ಮಾಂಕ್ ಆ್ಯಸ್ ಮ್ಯಾನ್" ಪುಸ್ತಕದಿಂದ ಪ್ರೇರಿತರಾಗಿ ದಿನೇಶರು ಅಂದಿನ ಲೇಖನ ಬರೆದಿದ್ದರು, ತಮಾಷೆಯೆಂದರೆ ಸ್ವತಃ ಮುಖರ್ಜಿಯವರಿಗೆ ಸಿಕ್ಕ ಮೂಲ ಆಕರ ಗ್ರಂಥಗಳು ಸ್ವತಃ ಶ್ರೀರಾಮಕೃಷ್ಣಾಶ್ರಮದ ಪ್ರಕಟಣೆಗಳನ್ನೆ ಆಧರಿಸಿತ್ತು. ತನ್ನ ಸ್ಥಾಪಕರ ಬಗ್ಗೆ ಆಶ್ರಮ ಎಲ್ಲೂ ಏನೂ ಮುಚ್ಚಿಟ್ಟಿಲ್ಲ, ಅಂದ ಹಾಗೆ ಮುಚ್ಚಿಡುವುದಕ್ಕೆ ಆಶ್ರಮದ ತೆರೆದ ಬತ್ತಳಿಕೆಯಲ್ಲಿ "ರಹಸ್ಯ"(!)ಗಳೇನೂ ಇಲ್ಲ! ಅಷ್ಡಲ್ಲದೆ ವಿವೇಕಾನಂದರೇನೂ ಟೀಕಾತೀತರೂ ಅಲ್ಲ ಅಂತಲೆ ಆಶ್ರಮದ ಹಿಂಬಾಲಕರ ನಂಬಿಕೆ. ಆದರೆ ವಿವೇಕಾನಂದರ ಬಗ್ಗೆ ಕಳಕಳಿಯಿಂದ ಓದಿ ಅರಿತವರ್ಯಾರೂ ಅವಸರವಸರವಾಗಿ ವ್ಯಥಾ ಟೀಕೆಗೆ ಇಳಿಯೋದೂ ಇಲ್ಲ ಅನ್ನೋದು ಕೂಡ ಅಷ್ಟೆ ಸತ್ಯ. ಪರಿಸ್ಥಿತಿ ಹೀಗಿರೋವಾಗ ವಿವೇಕಾನಂದರ ಅಭಿಮಾನಿಗಳ ಸಂಯಮವನ್ನೆ ಸ್ವೇಚ್ಛೆಯ ಸವಾರಿಗೆ ದಿನೇಶರಲ್ಲ ಯಾರೂ ಬಳಸಿಕೊಳ್ಳಬಾರದಿತ್ತು. ನೋವು-ಘಾಸಿ ಹಿಂದೂಗಳಿಗೂ ಆಗ ಬಾರದ್ಯಾಕೆ? ಆ ಬಗ್ಗೆ ಪತ್ರಿಕೆಯ ಧಾಡಸಿ ನಿರ್ಲಕ್ಷ್ಯವೂ ಆ ಬಗ್ಗೆ ಪ್ರತಿಭಟಿಸಿದ್ದ ಮಂದಿಯ ಶ್ರದ್ಧೆಯ ಭಾವನೆಗಳನ್ನು ಕೆರಳಿಸಿರಲಿಕ್ಕೆ ಸಾಕು.




ಆದರೆ ದಿನೇಶರ ಲೇಖನಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಿ ಸಮರ್ಥಿಸಿಕೊಳ್ಳಲಾಗದ ಖದೀಮರ್ಯಾರೊ ಅವರಿಗೆ ದೂರವಾಣಿ ಕರೆ ಮಾಡಿ ಪ್ರಾಣ ಬೆದರಿಕೆ ಒಡ್ಡಿದ್ದು ಅಕ್ಷಮ್ಯ. ಇದೊಂಥರಾ ಕೈಲಾಗದವ ಮೈಪರಚಿ ಕೊಂಡಂತೆ ಅನ್ನೋದೇನೋ ಸರಿ. ಆದರೆ ದಿನೇಶರ ಅರ್ಜೆಂಟ್ ಅಭಿಮಾನಿಗಳ ಇನ್ಸ್ಟಂಟ್ ಭಾವೋದ್ರೇಕದ ಪ್ರತಿಕ್ರಿಯೆಯಂತೂ ಎಲ್ಲಾ ಕಾಮಿಡಿ ಸರ್ಕಸ್ಗಳನ್ನ ಮೀರಿಸುವಂತಿತ್ತು. "ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು" ಎಂಬಂತೆ ವಿವೇಕಾನಂದರಿಗಾದ ಮಾನಹಾನಿಯ ವಿರುದ್ಧ ಪ್ರತಿಭಟಿಸಿದ ಪ್ರತಿಯೊಬ್ಬರೂ ಅವರ ಕಾಮಾಲೆ ಕಣ್ಣಿಗೆ ಮೂಲಭೂತವಾದಿ ಹಿಂದೂ ಉಗ್ರಗಾಮಿಗಳಂತೆ ಕಂಡುಬಂದು ಅವರು ನಿಂತಲ್ಲಿ- ಕೂತಲ್ಲಿ ತಪ್ಪು ಕಂಡು ಹಿಡಿಯುವುದೆ ಈ ಅಭಿಮಾನಿ "ದೆವ್ವ"ರುಗಳ ಸಾಮಾಜಿಕ ತಾಣಗಳಲ್ಲಿನ ನಿತ್ಯದ ಕಾಯಕವಾಯಿತು. ಒಬ್ಬ ಆಸಾಮಿ "ಸಂಘ ಪರಿವಾರದ ಮಂಗಗಳು ಪತ್ರಿಕೆಯ ಹುಬ್ಬಳ್ಳಿಯ ಕಛೇರಿಗೆ ನುಗ್ಗಿ ಘೋಷಣೆ ಕೂಗಿದರು" ಎಂದು ಜೀವನದಲ್ಲಿ ಇದೇ ಮೊದಲ ಬಾರಿಗೆ ಅಂತದ್ದನ್ನು ಕಂಡ ಕಂದಮ್ಮನಂತೆ ಹುಸಿ ಆತಂಕದಿಂದ ಬಡಬಡಿಸಿದ! "ಪ್ರಜಾವಾಣಿ"ಯ ವಿರುದ್ಧದ ಪ್ರತಿಭಟನೆಯನ್ನ "ವಿಜಯ ಕರ್ನಾಟಕ"ದ ಕಛೇರಿಯ ಮುಂದೆ ಮಾಡಲಾಗುವುದಿಲ್ಲ ಎಂಬ ಸಾಮಾನ್ಯ ಜ್ಞಾನವೂ ಪಾಪ ಅವನಿಗಿರದಿದ್ದುದು ದುರಂತ. ಇನ್ನೊಬ್ಬ ಪ್ರಭೃತಿಯಂತೂ "ಸಂಘ ಪರಿವಾರದ ಕಪಿಗಳು ಕಿರುಚಿ- ಚೀರಾಡಿ ಕೊನೆಗೆ ತಾವು ಹಿಡಿದಿದ್ದ ಬೋರ್ಡುಗಳನ್ನ ಅಲ್ಲಿಯೆ ಎಸೆದು ಹೋದವು, ವಿವೇಕಾನಂದರ ಚಿತ್ರ ಮುದ್ರಿತವಾಗಿದ್ದ ಕರಪತ್ರಗಳನ್ನ ಪಾದಾಚಾರಿಗಳು ತುಳಿದುಕೊಂಡು ಓಡಾಡಿದರು. ಇದು ಆ ಕಮಂಗಿಗಳ ಅಭಿಮಾನ!" ಅಂತ ಸಲ್ಲದ ಆಕ್ಷೇಪ ಎತ್ತಿದ. ದೀಪಾವಳಿಯಲ್ಲಿ ಬೇಕಾಬಿಟ್ಟಿ ಪಟಾಕಿ ಹೊಡೆದು ತಾನೆ ಬೀದಿ ತುಂಬ ಚಲ್ಲಾಡಿದ ದೇವಾನುದೇವತೆಗಳ ಚಿತ್ರಗಳೆ ಇರುವ ಖಾಲಿಯಾದ ಪಟಾಕಿ ಪೊಟ್ಟಣಗಳನ್ನ ವಾರಗಟ್ಟಲೆ ಅಲ್ಲಿ ಓಡಾಡುವವರೆಲ್ಲಾ ಮೆಟ್ಟಿಕೊಂಡು ಓಡಾಡುವಾಗ, ಮನೆಯ ತಲೆಬಾಗಿಲ್ಲಿ ಕಾಲೊರಸಾಗಿ ಹಾಕಿರುವ ಖಾಲಿ ಗೋಣಿ ಚೀಲಗಳಲ್ಲಿ ಮುದ್ರಿತ ಗಣಪತಿ-ಲಕ್ಷ್ಮಿ-ಈಶ್ವರರ ಚಿತ್ರಗಳನ್ನ ತಾನೆ ನಿತ್ಯ ಮೆಟ್ಟಿಕೊಂಡು ಓಡಾಡುವಾಗಲೂ ಅವನಿಗೆ ಆಗಿರದ ಆಘಾತ ಪಾಪ,ತನಗಾಗದವರು ಮಾತ್ರ ಅಂತದ್ದ್ದೆ ಕೆಲಸ ಮಾಡಿದಾಗ ಮಾತ್ರ ಘನಘೋರ ಅಪರಾಧವಾಗಿ ಆ ಪಂಡಿತನ ಕಣ್ಣಿಗೆ ಕಂಡಿತ್ತು!

"ತಾನು ತಿಂದರೆ ಔಷಧಿಗೆ.....ಬೇರೆಯವರದ್ದು ಮಾತ್ರ ಹೊಟ್ಟೆ ಹಸಿವು" ಎನ್ನುವ ನಕಲಿ ಶ್ಯಾಮರ ಈ ಸಂತೆಯಲ್ಲಿ ಉದಾತ್ತವಾಗಿ ಚಿಂತಿಸಿ-ಧೀಮಂತವಾಗಿ ಬದುಕಿದ್ದ ಕ್ರಾಂತಿಕಾರಿ ಸಂನ್ಯಾಸಿಯ ತೇಜೋವಧೆ ಆದದ್ದು ದುರಂತ. ಈ ಮೂಲಕ ವಿವೇಕಾನಂದರು ಅರ್ಥವಾದರು ಎನ್ನುವ ದೇಶಾವರಿ ಮಾತುಗಳಂತೂ ಪ್ರಾಮಾಣಿಕತೆಯ ಸೊಂಕೂ ಇಲ್ಲದ ಸೋಗಲಾಡಿತನ, ಒಂದು ಉನ್ನತ ವ್ಯಕ್ತಿತ್ವವನ್ನ ಹೀಗೆಲ್ಲ ಹೀಗೆಳೆಯುವ ಮೂಲಕ ಅರ್ಥ ಮಾಡಿಕೊಳ್ಳುವ ತುರ್ತು ಕೇವಲ ಅದೊಂದು ಲೇಖನದಿಂದ ಜ್ಞಾನೋದಯವಾದಂತೆ ವರ್ತಿಸುತ್ತಿರುವ ಓದುಗರಿಗೂ- ಬರೆದು ಅರ್ಥ ಮಾಡಿಸುವ ಜರೂರತ್ತು ಇಂತಹ ಅಮಾಯಕರ ಕಣ್ತೆರೆಸಿದ ಲೇಖಕರಿಗೂ ಇದ್ದಿರಲಾರದು. ಹಿಂದಿನ ಇಂತಹದ್ದೆ ಪ್ರಕರಣಗಳಲ್ಲಿ ದಿನೇಶರು ಪ್ರತಿನಿಧಿಸುವ ಪತ್ರಿಕಾ ಸಮೂಹ ಹಾಗೂ ಅವರ ಅರ್ಜೆಂಟ್ ಬೆಂಬಲಿಗ ಪಡೆ ತೋರಿದ ಅನುಕೂಲ ಸಿಂಧು ನಡೆಯನ್ನ ಅರಿತವರ್ಯಾರಿಗೂ ಹೀಗನ್ನಿಸೊದು ಸಹಜ. ಇಷ್ಟರ ಮೇಲೂ ಅವರನ್ನ ಬಲಿಪಶುಗಳಂತೆ ಕಾಣೋದು ಇದನ್ನ ಓದಿದವರ ಕುರುಡು ಅಮಾಯಕತೆ ಅಂದುಕೊಂಡು ನಕ್ಕು ಸುಮ್ಮನಾಗದೆ ವಿಧಿಯಿಲ್ಲ!

ಕಡೆಯದಾಗಿ ಧೂಮಪಾನ- ಮಾಂಸಾಹಾರಗಳ ಕುರಿತ ಮಡಿವಂತ ಮನಸ್ಸುಗಳಿಗೆ ನಾನು ಹೇಳ ಬಯಸುವುದು ಇಷ್ಟೆ. ಯಾವುದೆ ವ್ಯಕ್ತಿಯ ವಯಕ್ತಿಕತೆಯನ್ನ ವಿವರಿಸುವಾಗ ಲೇಖಕರು ದೇಶ-ಕಾಲಮಾನ ಇವೆರಡರ ಪ್ರಜ್ಞೆಯಿಲ್ಲದೆ ನಮ್ಮ ಪರಿಸರದ ನಡೆಗೆ ಸಮಾಂತರಿಸಿ ಬರೆಯುವುದು ಸ್ಪಷ್ಟವಾದ ಹಾದಿ ತಪ್ಪಿಸುವ ತಂತ್ರವಾಗುತ್ತದೆ. ವಿವೇಕಾನಂದರ ತಂದೆ ತಮ್ಮ ಸಾಮಾಜಿಕ ಸ್ಥಿತಿಬದ್ಧತೆಗೆ ಪೂರಕವಾಗಿ ಮನೆಯ ದಿವಾನ ಖಾನೆಯಲ್ಲಿ ಹತ್ತಕ್ಕೂ ಹೆಚ್ಚು ಹುಕ್ಕಾ ಹೊಂದಿದ್ದರು. ಬಿಗಿಯಾದ ಜಾತಿಪದ್ಧತಿ ಇದ್ದ ಕಾಲದ ಬಂಗಾಳ ಅದು. ಮನೆಗೆ ಬರುವ ಅತಿಥಿಗಳಿಗೆ ಅವರ ಜಾತಿಗೊಂದು ಹುಕ್ಕಾ ಒದಗಿಸಿಕೊಡುವುದು ಆ ಕಾಲದ ಅತಿಥಿ ಸತ್ಕಾರದ ಒಂದು ಅಂಗವೆ ಆಗಿದ್ದು ಬಾಲ್ಯದಿಂದಲೆ ಸಹಜವಾಗಿ ವಿವೇಕಾನಂದರು ಧೂಮಪಾನಿಯಾದದ್ದು ಹೀಗೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿರಲಿಲ್ಲ. ಇನ್ನು ಮಾಂಸಾಹಾರ ಬಂಗಾಳದಲ್ಲಿ ಎಲ್ಲಾ ವರ್ಗದ ಜನರಿಗೂ ಅನ್ವಯ. ದಕ್ಷಿಣ ಭಾರತೀಯರಂತೆ ಅವರಿಗೆ ಆಹಾರದಲ್ಲಿ ಮಡಿವಂತಿಕೆ ಇಲ್ಲವೆ ಇಲ್ಲ. ಕೊಲ್ಕತ್ತಾದ ಅಲಿಪುರದಲ್ಲಿ ಶ್ರೀರಾಮಕೃಷ್ಣಾಶ್ರಮದ ವತಿಯಿಂದ ನಡೆಸಲಾಗುವ "ವಸತಿ ವಿದ್ಯಾರ್ಥಿನಿಲಯ"ದಲ್ಲಿ ವಾರದ ಮೂರುದಿನದ ಮಧ್ಯಾಹ್ನದ ಊಟ ಕೋಳಿಮಾಂಸದ ಮೇಲೋಗರವನ್ನು ಒಳಗೊಂಡಿದೆ. ನಿತ್ಯವೂ ಹುರಿದ ಮೀನು- ಮೀನು ಸಾರು ಕೊಡಲಾಗುತ್ತದೆ. ಆರು ಸಾವಿರಕ್ಕೂ ಹೆಚ್ಚು ವಿವಿಧ ವಯೋಮಾನದ ವಿದ್ಯಾರ್ಥಿಗಳಿರುವ ಅಲ್ಲಿ, ನಿತ್ಯ ಮೂರು ಮೂರು ಪಾಳಿಗಳಲ್ಲಿ ಮಾಂಸಾಹಾರದ ಸಮಾರಾಧನೆಯೆ ನಡೆಯುವಂತೆ ಕನಿಷ್ಠ ಮೊಟ್ಟೆಯೂ ಆಹಾರವಾಗಿ ಪರಿಗಣಿತವಾಗದ ಆಶ್ರಮದ ದಕ್ಷಿಣ ಭಾರತದ "ವಿಧ್ಯಾರ್ಥಿ ಮಂದಿರ"ದಿಂದ ತೆರಳಿದ ನನ್ನಂತವರ ಕಣ್ಣಿಗೆ ಕಂಡುಬಂದರೆ ಅದು ಅವರ ಅರಿವಿನ ಮಿತಿ ಅಷ್ಟೆ.


ಇನ್ನು ವಿವೇಕಾನಂದರ ವಿಷಯಕ್ಕೆ ಬಂದರೆ ಅವರ ನೆಚ್ಚಿನ ತಿನಿಸು ಮೀನು ಅದರಲ್ಲೂ ಒಣ ಮೀನಿನ ಚಟ್ನಿಯಾಗಿತ್ತು. ಅವರ ಗುರುದೇವ ಶ್ರೀರಾಮಕೃಷ್ಣರ ನೆಚ್ಚಿನ ತಿನಿಸು ಹುರಿದ ಮೀನಾಗಿತ್ತು ಅನ್ನುವ ಕಾರಣಕ್ಕೆ ಆಶ್ರಮದ ಅಧಿಕಾರ ಕೇಂದ್ರ ಬೇಲೂರು ಮಠದಲ್ಲಿ ವರ್ಷಾವಧಿ ಅವರ ಜಯಂತಿ ಆಚರಣೆಯಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಊಟದಲ್ಲಿ ಕಡ್ಡಾಯವಾಗಿ ಹುರಿದ ಮೀನು ಬಡಿಸಲಾಗುತ್ತದೆ. ಪ್ರದೇಶಕ್ಕೆ ತಕ್ಕಂತೆ ಬದಲಾಗುವ ಆಹಾರ ಪದ್ಧತಿ ಸಹಜವಾಗಿ ಅಲ್ಲಿನವರ ಅಭ್ಯಾಸವಾಗಿರುತ್ತದೆ, ಅದೆಂದೂ ವ್ಯಕ್ತಿಯ ಚಾರಿತ್ರ್ಯಕ್ಕೆ ಮಾನದಂಡ ಆಗುವುದಿಲ್ಲ, ಆಗಬಾರದು. ವಿವೇಕಾನಂದರ ಪೀಡಿಸಿದ್ದ ಕಾಯಿಲೆಗಳ ಬಗ್ಗೆ ದಿನೇಶರೆ ಸಮಜಾಯಷಿ ಕೊಟ್ಟಿರುವುದರಿಂದ ಆ ಬಗ್ಗೆ ಹೆಚ್ಚಿನ ವಿವರಣೆ ಕೊಡುವುದು ಸಮಂಜಸವಾಗಲಾರದೇನೊ.

ಈ ಮಳ್ಳೆಗಣ್ಣಿನ ಮಳ್ಳರಿಗೆ ಅವರ ಪೂರ್ವಾಗ್ರಹ ಪೀಡಿತ ದೃಷ್ಟಿಕೋನವನ್ನ ಬದಲಿಸಿಕೊಳ್ಳಿ ಎನ್ನುವುದರಿಂದ ಹೆಚ್ಚು ಪ್ರಯೋಜನವಾದೀತು ಅಂತ ನನಗನ್ನಿಸೋದಿಲ್ಲ. ಆದರೆ ಈ ದೇಶದಲ್ಲಿ ಜಾತಿಗೊಂದು- ಮತಕ್ಕೊಂದು ಪ್ರತ್ಯೇಕ ಕಾನೂನಿಲ್ಲ, ತಪ್ಪು ಯಾರು ಮಾಡಿದರೂ ಸಮಾನವಾಗಿ ಅದನ್ನ ಪರಿಗಣಿಸುವ ಪ್ರಾಮಾಣಿಕತೆ ಇರಬೇಕು. ನಮ್ಮದು ಧರ್ಮಾಧರಿತ ಪ್ರಜಾಪ್ರಭುತ್ವವಲ್ಲ ಹೀಗಾಗಿ ಯಾರೊಬ್ಬರೂ ಅತಿ ಸನ್ಮಾನಕ್ಕೆ ಅರ್ಹರಲ್ಲ. ಈ ಪ್ರಜ್ಞಾಪೂರ್ವಕ ಸಂಯಮ ಎಲ್ಲರಿಂದಲೂ ಅಪೇಕ್ಷಿತ. ಅಂತೆಯೆ ಅನಗತ್ಯವಾಗಿ ಆಗುವ ಮಾನನಷ್ಟದ ಕಿರಿಕಿರಿಯನ್ನ ಯಾರೊಬ್ಬರೂ ಮೌನವಾಗಿ ಸಹಿಸಿಕೊಳ್ಳುವುದೂ ಇಲ್ಲ. ಈ ಮೂಲಭೂತ ವಾಸ್ತವಾಂಶದ ಪರಿಜ್ಞಾನ ನ್ಯಾಯ ನೀತಿಯ ಬಗ್ಗೆ ಕಂಡಕಂಡಲ್ಲಿ ಬಿಟ್ಟಿ ಭಾಷಣ ಬಿಗಿಯುವವರಿಗೆ ಮತ್ತೊಮ್ಮೆ ವಿತಂಡವಾದಿಸುವ ಮುನ್ನ ಹೊಳೆದರೆ ಸಾಕು ಅತ್ಯಲ್ಪ ಸಂಖ್ಯೆಯಲ್ಲಿರುವ ಆದರ್ಶ ವ್ಯಕ್ತಿಗಳನ್ನೂ ಹೀಗೆ ಕೆಸರೆರಚಿ ನಮ್ಮ ಮಟ್ಟಕ್ಕೆ ಇಳಿಸಿಕೊಂಡರೆ ನಾಳಿನ ನಮ್ಮದೆ ಪೀಳಿಗೆಗೆ ಹರಕು ಕಚ್ಚೆಯ ರೇಣುಕಾಚಾರಿ, ಕಾಮನ್'ವೆಲ್ತ್ ಕೂಳರ ಅಧಿನಾಯಕಿ ಮತ್ತವಳ ಕೆಟ್ಟ ಸಂತಾನ ಕಲ್ಮಾಡಿ, ಪತ್ರಿಕೋದ್ಯಮಕ್ಕೆ ಹಾದರ ಪರಿಚಯಿಸಿದ ಇಪ್ಪತ್ತನಾಲ್ಕು ಘಂಟೆ(?)ಯ ರೋಲ್ದ್'ಗೋಲ್ಡ್ ಚಾನಲ್ಲಿನ 'ವಿ'ಕೃತ ಭಟ್ಟ, ಚಪಲ ಚನ್ನಿಗ ಸವದಿ,ಪಾಲೆಮಾರ್,ಪಾಟೀಲನಂತಹ ಕ್ರಿಮಿಗಳೆ ಆದರ್ಶದ ಅಪರ ಮೂರ್ತಿಗಳಾಗಿ ತೋರುವ ಅಪಾಯವೂ ಇದೆ. ಇವರು ಕಡಿಮೆ ಬಿದ್ದರೆ ಅವಕಾಶ'ವ್ಯಾಧಿ'ಯಿಂದ ಬಳಲುವ, ಬುದ್ದಿಜೀವಿ ಎಂಬ ಆರೋಪ ಹೊತ್ತ ಖಾಲಿ ತಲೆಯ ಖದೀಮರನ್ನೂ ಈ ಪಟ್ಟಿಗೆ ಧಾರಾಳವಾಗಿ ಸೇರಿಸಿಕೊಳ್ಳಬಹುದು.

Thursday, February 9, 2012

ವಚನ


ನೆಲವೊಂದೇ ಹೊಲಗೇರಿ ಶಿವಾಲಯಕ್ಕೆ
ಜಲವೊಂದೇ ಶೌಚಾ ಚಮನಕ್ಕೆ !
ಕುಲವೊಂದೇ ತನ್ನ ತಾನರಿದವಂಗೆ !
ಫಲವೊಂದೇ ಫಡದರ್ಶನ ಮುಕ್ತಿಗೆ
ನಬಿಲವೊಂದೇ ಕೂಡಲ ಸಂಗಮದೇವ ನಿಮ್ಮನರಿದವಂಗೆ - ಬಸವಣ್ಣ

- ನಾವು ಆಚರಿಸುವ ಆಚರಣೆಗಳಿಂದ ಮಾತ್ರ ಉತ್ತಮ, ಅಧಮರೆನಿಸಿಕೊಳ್ಳುತ್ತೇವೆ ಜಾತಿಯಿಂದಲ್ಲ. ನೆಲ ಒಂದೇ ಅಲ್ಲಿ ಶಿವಾಲಯಕಟ್ಟಿದರೆ ಪುಣ್ಯಕ್ಷೇತ್ರ, ದುರಾಚಾರಿಗಳ ತಾಣವಾದರೆ ಅದು ಹೊಲಗೇರಿ. ನೀರು ಒಂದೇ ಅದು ಪೂಜೆಗೆ ಬಳಸಿದರೆ ತೀರ್ಥ, ಶೌಚಕ್ಕೆ ಬಳಸಿದರೆ ಕೊಳಕು ನೀರು. ಅಂತೆಯೇ ಕಾರ್ಯದಿಂದ ಮಾನವ ಕುಲವೊಂದೆ ಉತ್ತಮ. ಜ್ಞಾನದಿಂದ ಉತ್ತಮ, ಅಜ್ಞಾನದಿಂದ ಅಧಮ ಆಯಾಜಾತಿಗಳ ಗುರಿ ಒಂದೇ ಅದುವೇ ಮುಕ್ತಿ ಮೇಲು ಕೀಳೆಂದು ಜಾತಿಯನ್ನು ವಿಂಗಡಿಸುವದನ್ನು ಈ ವಚನದಲ್ಲಿ ಖಂಡಿಸಿದ್ದಾರೆ.