ಈಶ್ವರ ಸಣಕಲ್ಲ ಅವರ ಪ್ರಖ್ಯಾತ ಕವಿತೆ "ಕೋರಿಕೆ" - ಶ್ರೀವತ್ಸ ಜೋಶಿ

ನಿಮ್ಮ ಮೆಚ್ಚಿನ FB ಪೋಸ್ಟುಗಳು...
====================
ಈ ವಾರ, ಕೋರಿಕೆಗೆ ಕೋರಿಕೆ! ಅಂದರೆ, ಈಶ್ವರ ಸಣಕಲ್ಲ ಅವರ ಪ್ರಖ್ಯಾತ ಕವಿತೆ "ಕೋರಿಕೆ" ಪ್ರಕಟಿಸುವಂತೆ ಕೋರಿಕೆ ಎಂದು ಅರ್ಥ  ಪತ್ರ ಬರೆದವರು ಶಿಕಾಗೋದಿಂದ Anil Deshpande.

ಇದು ಮನಮಿಡಿಯುವ ಪದ್ಯ. ನಾನು ಕಲಿತ ಸಿಲೆಬಸ್‌ನಲ್ಲಿರಲಿಲ್ಲವಾದರೂ ಬೇರೆಬೇರೆ ವರ್ಷಗಳಲ್ಲಿ ಕನ್ನಡ ಪಠ್ಯಪುಸ್ತಕಗಳನ್ನು ಅಲಂಕರಿಸಿ, ವಿದ್ಯಾರ್ಥಿಗಳ ಮನದಾಳದಲ್ಲಿ ಅಚ್ಚಳಿಯದೇ ನಿಂತಿರುವ ಕವನಕುಸುಮಗಳಲ್ಲಿ ಇದೊಂದು. ಪ್ರಪಂಚದಲ್ಲಿ ಈಗೀಗ ಪ್ರತಿಯೊಬ್ಬರೂ ತನ್ನ ಲಾಭ, ತನ್ನ ಸಂಪತ್ತು, ತನ್ನ ಸುಖಗಳಲ್ಲಷ್ಟೇ ಮಗ್ನರಾಗಿರುವಾಗ ಕವಿಯ ಆಶಯ ತದ್ವಿರುದ್ಧ! ತನಗೆ ಕಷ್ಟಗಳಿರಲಿ, ಬಡತನವಿರಲಿ ಚಿಂತೆಯಿಲ್ಲ, ಆದರೆ ಜಗತ್ತು ಸುಖವಾಗಿರಲಿ ಎಂಬ ಹಂಬಲ ಕವಿಯದು. ಈಶ್ವರ ಸಣಕಲ್ಲರವರು ಇದನ್ನು "ಅಕ್ಷರಗಳನ್ನಲಂಕರಿಸುತ್ತಾ ನಾನೂ ಒಂದು ಕವನ ಬರೆದೆ, ಫೇಸ್‌ಬುಕ್‌ನಲ್ಲಿ ಹತ್ತಾರು ಲೈಕುಗಳನ್ನು ಗಿಟ್ಟಿಸಿದೆ" ಎಂಬ ರೀತಿಯಲ್ಲಿ ಬರೆದದ್ದಲ್ಲ. ಅವರು ಬರೆದಂತೆಯೇ ಬದುಕಿದವರು, ಬದುಕಿದಂತೆಯೇ ಬರೆದವರು. ಕಸ್ತೂರಿನಿವಾಸ ಚಿತ್ರಗೀತೆಯಲ್ಲಿ ಚಿ.ಉದಯಶಂಕರ್ ಬರೆದ "ಮೈಯನೆ ಹಿಂಡಿ ನೊಂದರೂ ಕಬ್ಬು ಸಿಹಿಯ ಕೊಡುವುದು... ತೇಯುತಲಿದ್ದರೂ ಗಂಧದ ಪರಿಮಳ ತುಂಬಿ ಬರುವುದು... ತಾನೇ ಉರಿದರೂ ದೀಪವು ಮನೆಗೆ ಬೆಳಕ ಕೊಡುವುದು...’ ಎಂಬ ಸಾಲುಗಳಲ್ಲಿನ ಕಬ್ಬು, ಗಂಧ, ದೀಪಗಳಂತೆಯೇ ಈ ಕವಿಯ ಆತ್ಮ. ತನಗೆ ತೊಂದರೆಯಾದರೂ ಸರಿಯೇ, ಜಗವು ನಗುನಗುತಿರಲಿ ಎಂಬ ನಿವೇದನೆ.

ಸ್ನೇಹಿತ ಅನಿಲ ದೇಶಪಾಂಡೆಯವರು ಈ ಕೋರಿಕೆ ಸಲ್ಲಿಸಿರುವುದು ಅರ್ಥಪೂರ್ಣವೇ ಆಗಿದೆ. ಅವರು ‘SEWA’ (Selfless Efforts for Welfare of All. www.sewausa.org ) ಎಂಬ ಸ್ವಯಂಸೇವಾ ಸಂಸ್ಥೆಯ ಶಿಕಾಗೋ ಶಾಖೆಯ ಸಕ್ರಿಯ ಕಾರ್ಯಕರ್ತ. ಈ ಕವಿತೆಯು ಅವರ ಮೇಲೆ ಪ್ರಭಾವ ಬೀರಿರುವುದು, ಮತ್ತು, ಇನ್ನಷ್ಟು ಸಮಾನಮನಸ್ಕರ ಮೇಲೆ ಇದು ಪ್ರಭಾವ ಬೀರಲಿ ಎಂದು ಅವರು ಬಯಸಿರುವುದು ಸಹಜವೇ ಆಗಿದೆ. ಇಷ್ಟು ಒಳ್ಳೆಯ, ಭಾವಪೂರ್ಣ ಕವಿತೆಯನ್ನು ನೆನಪಿಸಿದ್ದಕ್ಕೆ ಅನಿಲ್ ಅವರಿಗೆ ಧನ್ಯವಾದಗಳು.

* * *
ಇನ್ನೋರ್ವ ಹಿರಿಯಸ್ನೇಹಿತ ಪುತ್ತೂರಿನ Moorthy Deraje ಅವರ ಸಂಗ್ರಹದಿಂದ, ಗಾಯಕ ಗರ್ತಿಕೆರೆ ರಾಗಣ್ಣ ಅವರ ಧ್ವನಿಯಲ್ಲಿ ಈ ಕವಿತೆಯನ್ನು ಇಲ್ಲಿ ಕೇಳಬಹುದು:
https://soundcloud.com/srivathsajoshi/mbnaooaoyiok

* * *
"ಕೋರಿಕೆ" - ಈಶ್ವರ ಸಣಕಲ್ಲ ಅವರ ಪದ್ಯದ ಸಾಹಿತ್ಯ:

ಜಗವೆಲ್ಲ ನಗುತಿರಲಿ!
ಜಗದಳುವು ನನಗಿರಲಿ!
ನಾನಳಲು, ಜಗವೆನ್ನನೆತ್ತಿಕೊಳದೇ?
ನಾ ನಕ್ಕು, ಜಗವಳಲು ನೋಡಬಹುದೇ?

ತೆರವಾಗಿ ನನ್ನೆದೆಯು,
ಧರೆಯೆದೆಯು ಉಕ್ಕಿರಲಿ!
ಧರೆಯೊಳಗೆ ತೇಲಿಸುವೆನೆನ್ನೆದೆಯನು!
ಧರೆ ಬತ್ತಿ, ಎನ್ನೆದೆಯು ಉಕ್ಕಲೇನು?

ಪೊಡವಿಯೈಸಿರಿವಡೆದು,
ಬಡತನವು ನನಗಿರಲಿ
ಕೈಯೊಡ್ಡೆ ಪೊಡವಿಯೆನಗಿಕ್ಕದೇನು?
ಪೊಡವಿಯೇ ಮೈಯಳಿಯೆ, ಮಾಡಲೇನು?

ವಿಶ್ವವನು ತುಂಬಿರುವ
ಈಶ್ವರನೆ ಅಳತೊಡಗೆ,
ಸೈತಿಡಲು, ಸೈಪಿಡಲು ಬರುವನಾವಂ?
’ಹೇ ತಂದೆ’,ಎನಲೆನ್ನನವನೆ ಕಾವಂ!

* * *
ಕವಿ ಕೃತಿ ಪರಿಚಯ:
ಈಶ್ವರ ಸಣಕಲ್ಲ (1906-1984): ’ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ…’ ಎಂದು ಹಾಡಿ, ಸಂಭಾವಿತ ಕವಿ ಎಂಬ ಅಗ್ಗಳಿಕೆಗೆ ಪಾತ್ರರಾಗಿ ಬದುಕಿನುದ್ದಕ್ಕೂ ಕಷ್ಟಗಳನ್ನೇ ಉಂಡ ಈಶ್ವರ ಸಣಕಲ್ಲರು ಹುಟ್ಟಿದ್ದು ಜಮಖಂಡಿ ತಾಲ್ಲೂಕಿನ ರಬಕವಿಯಲ್ಲಿ. ತಂದೆ ಮಹಾರುದ್ರಪ್ಪ, ತಾಯಿ ನೀಲಮ್ಮ. ನೇಕಾರರ ಕುಟುಂಬ. ಪ್ರಾರಂಭಿಕ ವಿದ್ಯಾಭ್ಯಾಸ ತಾಯಿಯ ತೌರೂರಾದ ಯಾದವಾಡ, ರಬಕವಿಯಲ್ಲಿ. ಬಾಲ್ಯದಿಂದಲೇ ಓದಿನಲ್ಲಿ ಆಸಕ್ತಿ, ಪ್ರೌಢಶಿಕ್ಷಣ ಬೆಳಗಾವಿಯ ಜಿ.ಎ. ಹೈಸ್ಕೂಲ್‌ನಲ್ಲಿ. ಆಗಲೇ ಹಲವಾರು ಕವನಗಳ ರಚನೆ. ಶಿವಾನಂದ ಸ್ವಾಮಿಗಳವರ "ಬ್ರಹ್ಮಚರ‍್ಯವೇ ಜೀವನ, ವೀರ‍್ಯನಾಶವೇ ಮೃತ್ಯು" ಗ್ರಂಥದ ಕನ್ನಡಾನುವಾದ ಮಾಡಿದ್ದು 22ರ ಹರೆಯದಲ್ಲಿ. 1929ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣ. ಕೊಲ್ಲಾಪುರದ ರಾಜಾರಾಮ ಕಾಲೇಜಿಗೆ ಸೇರ‍್ಪಡೆ. ಹಣಕಾಸಿನ ತೊಂದರೆಯಿಂದ ಕಾಲೇಜು ಶಿಕ್ಷಣಕ್ಕೆ ಸಂಚಕಾರ. ಉದ್ಯೋಗಕ್ಕೆ ಸೇರಿದ್ದು ರಬಕವಿಯಲ್ಲಿ . ಮಿತ್ರ ಸಮೂಹ ಖಾದಿ ಭಂಡಾರ, ನಂತರ ವಚನ ಪಿತಾಮಹ ಫ.ಗು.ಹಳಕಟ್ಟಿಯವರ ‘ಶಿವಾನುಭವ’ ಮತ್ತು ನವಕರ್ನಾಟಕದ ಪತ್ರಿಕೆಯ ಪ್ರಕಟಣೆಯ ಸಹಾಯಕರಾಗಿ. 1934ರಲ್ಲಿ ಮೊದಲ ಕವನ ಸಂಕಲನ ‘ಕೋರಿಕೆ’ಪ್ರಕಟ. ನಂತರ ಉದ್ಯೋಗಕ್ಕೆ ಸೇರಿದ್ದು ಹರ್ಡೇಕರ್ ಮಂಜಪ್ಪನವರ ಆಲಮಟ್ಟಿ ಆಶ್ರಮದಲ್ಲಿ. ಶರಣ ಸಂದೇಶ, ಖಾದಿ ಗ್ರಾಮೋದ್ಯೋಗ ಪತ್ರಿಕೆಗಳ ಸಂಪಾದಕತ್ವ, ಬೆಳಗಾವಿಯ ಗ್ರಾಮಸೇವಕ ಪತ್ರಿಕೆಯ ಉಪಸಂಪಾದಕ, ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ. ಹಿರೇಮಠರವರಿಂದ ಬಂದ ಕರೆ, ಸಂಶೋಧನೆ ಶಾಖೆಯಲ್ಲಿ 1962ರಿಂದ 1972ರವರೆಗೂ ಸೇವೆ. ಈಶ್ವರ ಸಣಕಲ್ಲ ಸತ್ಯ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದರು. ನಿಷ್ಠುರವಾದಿಗಳಾಗಿದ್ದರು. ಆ ಕಾರಣದಿಂದಾಗಿಯೇ ಅವರು ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಆಗಲಿಲ್ಲ. ಮತ್ತು ಸಾಂಸಾರಿಕ ಜೀವನದಲ್ಲಿಯೂ ನೆಮ್ಮದಿ ಕಾಣಲಿಲ್ಲ. ಬಡತನದ ಬೇಗೆಯಿಂದ ಹೊರಬರಲೂ ಇಲ್ಲ. ಬದುಕಿನ ಉದ್ದಕ್ಕೂ ಬಡತನವನ್ನೇ ಹಾಸಿ, ಬಡತನವನ್ನೇ ಹೊದ್ದು ಬದುಕು ನೂಕಿದರು. ಒಟ್ಟು ಸುಮಾರು ಇಪ್ಪತ್ತು ಕೃತಿ ಪ್ರಕಟಿತ. ‘ಬಟ್ಟೆ’ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ, 1980ರ ಬೆಳಗಾವಿ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ. ಸಣಕಲ್ಲರ ಉತ್ತಮ ಬರವಣಿಗೆಯಿಂದಾಗಿ ರಾಷ್ಟ್ತ್ರಕವಿ ಕುವೆಂಪು ಮನದಲ್ಲಿಯೂ ಅವರು ಸ್ಥಾನ ಪಡೆದಿದ್ದರು. ಸಾಮಾನ್ಯವಾದುದಾವುದನ್ನೂ ಒಪ್ಪಿಕೊಳ್ಳದ ಕುವೆಂಪು ಅವರು ತಮ್ಮ ಆತ್ಮ ಕಥೆಯಲ್ಲಿ ಈಶ್ವರ ಸಣಕಲ್ಲರ ಬಗ್ಗೆಯೂ ಉಲ್ಲೇಖಿಸಿದ್ದಾರನ್ನುವುದು ಸಾಮಾನ್ಯ ಸಂಗತಿಯಲ್ಲ.























ಶ್ರೀವತ್ಸ ಜೋಶಿ


Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು