ಕಾದಿರುವಳು ಶಬರಿ ರಾಮ ಬರುವನೆಂದು
ಕಾದಿರುವಳು ಶಬರಿ ರಾಮ ಬರುವನೆಂದು ತನ್ನ ಪೂಜೆಗೊಳುವನೆಂದು
ವನವನವ ಸುತ್ತಿ ಸುಳಿದು ತರುತರುವನಲೆದು ತಿರಿದು | ಬಿರಿವೂಗಳಾಯ್ದು ತಂದು ತನಿವಣ್ಗಳಾಯ್ದು ತಂದು
ಕೊಳದಲ್ಲಿ ಮುಳುಗಿ ಮಿಂದು ಬಿಳಿ ನಾರು ಮುಡಿಯನುಟ್ಟು | ತಲೆವಾಗಿಲಿಂಗೆ ಬಂದು ಹೊಸತಿಲಲಿ ಕಾದು ನಿಂದು
ಎಳಗಾಳಿ ತೀಡುತಿರಲು ಕಿವಿಯೆತ್ತಿ ಆಲಿಸುವಳು | ಎಲೆಯಲುಗೆ ಗಾಳಿಯಲ್ಲಿ ನಡೆ ಸಪ್ಪುಳೆಂದು ಬಗೆದು
ದೂರಕ್ಕೆ ನೋಳ್ಪೆನೆಂದು ಮರವೇರಿ ದಿಟ್ಟಿಸುವಳು | ಗಿರಿ ಮೇಲಕೈದಿ ಕೈಯ ಮರೆ ಮಾಡಿ ನೋಡುತಿಹಳು
ಬಾ ರಾಮ, ರಾಮ ಎಂದು ಬರುತಿಹನು ಇಹನು ಎಂದು | ಹಗಲಿರುಳು ತವಕಿಸಿಹಳು ಕಳೆದಿಹವು ವರುಷ ಹಲವು
ಶಬರಿವೊಲು ಜನವು ದಿನವೂ ಯುಗಯುಗವು ಕರೆಯುತಿಹುದು| ಕರೆ ಇಳೆಗಳೇಳಲರಸಿ ತವಕದಲಿ ತಪಿಸುತಿಹುದು
ಭರವಸೆಗಳಳಿಯವಾಗಿ ಮನವೆಲ್ಲ ಬಯಕೆಯಾಗಿ | ಹಗಲೆಲ್ಲ ಕಾದು ಕೂಗಿ ಇರುಳೆಲ್ಲ ಜಾಗರಾಗಿ
ಬಂದಾನೊ ಬಾರನೋ ಓ ಕಂಡಾನೊ ಕಾಣನೋ ಓ | ಎಂದೆಂದು ಜಪಿಸಿ ತಪಿಸಿ ಶಂಕಾತುರಂಗಳೂರಿ
ಬಾ ರಾಮ, ಬಾರ, ಬಾರಾ ಬಡವರನು ಕಾಯು ಬಾರಾ| ಕಂಗಾಣದಿವರ ಪ್ರೇಮ ನುಡಿಸೋತ ಮೂಕ ಪ್ರೇಮ
ಕಾದಿರುವುದು ಜನವು ರಾಮ ಬರುವನೆಂದು ತಮ್ಮ ಪೂಜೆಗೊಳುವನೆಂದು
Comments
Post a Comment