ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Thursday, March 31, 2011

ಶರಣು ಸಿದ್ಧಿವಿನಾಯಕ ಶರಣು ವಿದ್ಯಾಪ್ರದಾಯಕ

ಶರಣು ಸಿದ್ಧಿವಿನಾಯಕ ಶರಣು ವಿದ್ಯಾಪ್ರದಾಯಕ
ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಿಕ ವಾಹನ || ಪ ||
ಶರಣು ಶರಣು ಶರಣು ಶರಣು ಶರಣು ಸಿದ್ಧಿವಿನಾಯಕ

ನಿಟಿಲ ನೇತ್ರನೆ ದೇವಿ ಸುತನೆ ನಾಗಭೂಷಣ ಪ್ರಿಯನೆ
ತಟಿಲತಾಂಕಿತ ಕೋಮಲಾಂಗನೆ ಕರ್ಣಕುಂಡಲಧಾರನೆ || ಶರಣು ಶರಣು ||

ಬಟ್ಟ ಮುತ್ತಿನ ಪದಕಹಾರನೆ ಬಾಹುಹಸ್ತಚತುಷ್ಟನೆ
ಇಟ್ಟ ತೊಡುಗೆಯ ಹೇಮ ಕಂಕಣ ಪಾಶ ಅಂಕುಶಧಾರನೆ || ಶರಣು ಶರಣು ||

ಕುಕ್ಷಿಮಹಾಲಂಬೋದರನೆ ಇಕ್ಷುಛಾಪನ ಗೆಲಿದನೆ
ಪಕ್ಷಿವಾಹನ ಸಿರಿ ಪುರಂದರ ವಿಠ್ಠಲನ ನಿಜ ದಾಸನೆ || ಶರಣು ಶರಣು ||

Wednesday, March 30, 2011

ಹರಿ ಚಿತ್ತ ಸತ್ಯ ನಮ್ಮ ಹರಿ ಚಿತ್ತ ಸತ್ಯ

ಹರಿ ಚಿತ್ತ ಸತ್ಯ ನಮ್ಮ ಹರಿ ಚಿತ್ತ ಸತ್ಯ
ನರ ಚಿತ್ತಕೆ ಬಂದದ್ದು ಲವಲೇಶ ನಡೆಯದು

ಸುದತಿ ಮಕ್ಕಳ ಭಾಗ್ಯ ಬಯಸೋದು ನರ ಚಿತ್ತ
ಮದುವ್ಯಾಗದಿರುವುದು ಹರಿ ಚಿತ್ತವಯ್ಯ

ಕುದುರೆ ಅಂದಣ ಆನೆ ಬಯಸೋದು ನರ ಚಿತ್ತ
ಪಾದಚಾರಿ ಆಗೋದು ಹರಿ ಚಿತ್ತವಯ್ಯ

ಸದಾ ಅನ್ನದಾನವ ಬಯಸೋದು ನರ ಚಿತ್ತ
ಉದರಕೆ ಅಳುವುದು ಹರಿ ಚಿತ್ತವಯ್ಯ

ಪುರಂದರ ವಿಠ್ಠಲನ ಬಯಸೋದು ನರ ಚಿತ್ತ
ದುರಿತವ ಕಳೆವುದು ಹರಿ ಚಿತ್ತವಯ್ಯ

ಮನ ಕಲಕುವ “ಬ್ರಹ್ಮಪುರಿಯ ಭಿಕ್ಷುಕ’!

ಮನ ಕಲಕುವ “ಬ್ರಹ್ಮಪುರಿಯ ಭಿಕ್ಷುಕ’!

ಸತ್ತೆನೆಂದೆನಬೇಡ, ಸೋತೆನೆಂದೆನಬೇಡ

ಬತ್ತಿತೆನ್ನೊಳು ಸತ್ವದೂಟೆ ಎನಬೇಡ

ಮೃತ್ಯುವೆನ್ನುವುದೊಂದು ತೆರೆ ಇಳಿತ, ತೆರೆಯೇರು

ಮತ್ತೆ ತೋರ್ಪುದು ನಾಳೆ ಮಂಕುತಿಮ್ಮ…

ಮತ್ತೆ ಮತ್ತೆ ನೆನಪಾಗುವ, ನೆನಪಾದಾಗಲೆಲ್ಲ ಆಳವಾಗಿ ಕಾಡುವ ಈ ಮೇಲಿನ ಸಾಲುಗಳನ್ನು ಬರೆದವರು ಯಾರು ಎಂದು ಬಿಡಿಸಿ ಹೇಳಬೇಕಾಗಿಲ್ಲ.

ಒಮ್ಮೆ ಡಿವಿಜಿಯವರ ಮನೆಗೊಬ್ಬ ಜಪಾನಿ ಯುವಕ ಬಂದಿದ್ದ. ಡಿವಿಜಿ ಅವನಿಗೆ ಕಾಫಿ ಕೊಟ್ಟರು. ಅದನ್ನು ಹೀರಿದ ಆ ಯುವಕ The coffee is good ಎಂದ. ಸ್ವಲ್ಪ ಕಾಲ ಮಾತುಕತೆ ನಡೆಸಿ ಹೊರಟು ನಿಂತ ಆ ಯುವಕನನ್ನು ಡಿವಿಜಿ “god bless you !’ ಎಂದು ಹರಸಿದರು. ಆದರೆ ಒಂದು ಕ್ಷಣ ಹಾಗೆಯೇ ನಿಂತ ಆ ಯುವಕ “ನಿಮಗೆ ದೇವರಲ್ಲಿ ಹೇಗೆ ನಂಬಿಕೆ ಸಾಧ್ಯ? ನೀವು ಅವನನ್ನು ಕಂಡಿದ್ದೀರ?’ ಎಂದು ಪ್ರಶ್ನಿಸಿದ. “The coffee is good ‘ ಎಂದಿರಲ್ಲ, ಅದರಲ್ಲಿರುವ goodness, ನೀವು ಸಾವಿರಾರು ಮೈಲು ಆಚೆ ಇರುವವರು ಇದುವರೆಗೆ ನನ್ನನ್ನು ಕಾಣದಿದ್ದವರು ಕಾಣಬೇಕೆಂದು ವಿಶ್ವಾಸದಿಂದ ಬಂದಿರಲ್ಲ; ಆ goodness, ಈ ಎಲ್ಲ, goodness, ದೇವರು’ ಎಂದರು ಡಿವಿಜಿ. ಆ ಮಾತನ್ನು ಕೇಳಿ ಮತ್ತೆ ಒಳಕ್ಕೆ ಬಂದ ಯುವಕ, ಒಂದು ಗಂಟೆ ಕುಳಿತು ತನ್ನ ತೊಡಕು- ತಾಕಲಾಟಗಳನ್ನು ಡಿವಿಜಿಯವರಲ್ಲಿ ಹೇಳಿಕೊಂಡು, ಸಮಾಧಾನವನ್ನು ಪಡೆದು ಹೊರಟ.

ಈ ದೇಶದ ಅಗ್ರಮಾನ್ಯ ಪತ್ರಕರ್ತರಲ್ಲಿ ಒಬ್ಬರೆನಿಸಿಕೊಂಡಿದ್ದ ಡಿವಿಜಿಯವರ ಬದುಕಿನಲ್ಲಿ ಸಾಕಷ್ಟು ಏರುಪೇರುಗಳನ್ನು ಕಾಣಬಹುದು. ಬಡತನ ಎಂಬುದು ಅವರ ಕುಟುಂಬದ ಸದಸ್ಯನಂತಿತ್ತು!

ಒಮ್ಮೆ ವಿಶ್ವೇಶ್ವರಯ್ಯನವರು ಡಿವಿಜಿ ಅವರೊಡನೆ ಮಾತನಾಡುತ್ತಾ “ನಾನು ನಿನ್ನ ಮನೆಗೊಂದು ಭೇಟಿ ನೀಡಬೇಕು’ ಎಂದರು. ಕೂಡಲೇ ಎದ್ದು ವಂದಿಸಿದ ಡಿವಿಜಿ “ಕ್ಷಮಿಸಬೇಕು, ತಾವು ನನ್ನ ಮನೆಗೆ ಬರಬಾರದು’ ಎಂದು ವಿನಂತಿಸಿದರು. ವಿಶ್ವೇಶ್ವರಯ್ಯನವರಿಗೆ ಅಚ್ಚರಿ, ಕೌತುಕ. ತಮ್ಮನ್ನು ಮನೆಗೆ ಬರಬೇಡಿರೆಂದು ಹೇಳಿದವರು ಯಾರೂ ಇಲ್ಲ. “ಇದೇನಿದು! ಯಾರಾದರೂ ಬರುತ್ತೇನೆನ್ನುವ ಗೆಳೆಯರನ್ನು ನೇರವಾಗಿಯೇ ತಡೆಯುವುದುಂಟೇ? ಎಂದು ತತ್್ಕ್ಷಣ ಪ್ರಶ್ನಿಸಿದ್ದರು. ಡಿವಿಜಿ ಇದೀಗ ವಿವರಿಸಿದರು “ದಿಟವೇ, ತಾವು ಕಾಲಿಟ್ಟ ಕಡೆ ಶುಭ, ಸಂಪದ, ಸೌಖ್ಯಗಳು ಬೆಳಗುತ್ತವೆ. ಆದರೆ ನನ್ನ ಕಾರಣ ಬೇರೆಯಿದೆ. ತಾವು ನನ್ನ ಮನೆಗೆ ಬಂದರೆ ತಮಗೆ ಮುರುಕಲು ಕುರ್ಚಿ-ಹರಕಲು ಚಾಪೆಗಳಲ್ಲದೆ ಬೇರೆ ಇಲ್ಲ. ನನ್ನ ಚಿಂದಿ ಬದುಕು ನಿಮಗೆ ದುಃಖ ತರುತ್ತದೆ. ನನ್ನನ್ನು ಒಳ್ಳೆಯ ಸಂಪಾದನೆಯ ತಾಣಗಳಿಗೆ ಸೇರಿಸಬೇಕೆಂದು ತಾವು ಹಿಂದೆ ಮಾಡಿದ ಪ್ರಯತ್ನಗಳೂ ನನ್ನ ಮೂರ್ಖತನವು ಅವುಗಳನ್ನೆಲ್ಲ ಒಲ್ಲೆನೆಂದ ಪರಿಯೂ ತಮಗೆ ನೆನಪಾಗಿ ಬೇಸರವಾಗುತ್ತದೆ. ಅದಕ್ಕೆಲ್ಲ ಅವಕಾಶವಾಗಬಾರದು. ಹೀಗಾಗಿ ತಾವಿದ್ದಲ್ಲಿಗೆ ನಾನು ಬಂದು ತಮ್ಮ ಯಾವ ಆದೇಶವನ್ನೂ ನಡೆಸುತ್ತೇನೆ; ಮನ್ನಿಸಬೇಕು…’ “ಹೌದು, ಹೌದು. ನೀನು ಮೂರ್ಖ, obstinate‘ ಎಂದು ನಿರುಪಾಯಕರಾದ ಮೆಚ್ಚುಗೆಯ ಪೆಚ್ಚುನಗೆಯಿಂದ ವಿಶ್ವೇಶ್ವರಯ್ಯನವರು ಮಾತು ಮುಗಿಸಿದರು.

ನಮಗೆಲ್ಲರಿಗೂ ತಿಳಿದಂತೆ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರು ಪ್ರಾಮಾಣಿಕತೆ, ಪರಿಶುದ್ಧತೆ ಹಾಗೂ ನಿಸ್ವಾರ್ಥಗಳ ಪರಮಾದರ್ಶ. ಅವರು ಮೈಸೂರು ಸಂಸ್ಥಾನದ ದಿವಾನರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ತಮ್ಮ ಬಂಧುಗಳೆಲ್ಲರನ್ನೂ ಮನೆಯ ಹಜಾರದಲ್ಲಿ ಸೇರಿಸಿ ತಾಯಿ ವೆಂಕಜ್ಜಮ್ಮನವರನ್ನು “ನೀನು ಇವರ್ಯಾರ ಪರವಾಗಿ ಕೂಡ ಶಿಫಾರಸು ಮಾಡಲು ನನ್ನ ಬಳಿ ಬರಬಾರದು’ ಎಂದು ಮಾತು ತೆಗೆದುಕೊಂಡೇ ಮುಂದಿನ ಕೆಲಸಕ್ಕೆ ಕೈ ಹಾಕಿದ ಮಹನೀಯರು. ಇಂಥ ವಿಶ್ವೇಶ್ವರಯ್ಯನವರಿಗೂ ಸವಾಲಾಗುವಂಥ ನಿಸ್ಪೃಹತೆ ಡಿವಿಜಿಯವರದು.

ಲಾಹೋರಿನ “ಟ್ರಿಬ್ಯೂನ್’ ಎಂಬ ರಾಷ್ಟ್ರಮಟ್ಟದ ಪ್ರತಿಷ್ಠಿತ ಆಂಗ್ಲ ದಿನಪತ್ರಿಕೆಯ ಸಂಪಾದಕರಾಗಲು ಅರ್ಹ ವ್ಯಕ್ತಿಗಳನ್ನು ಸೂಚಿಸಬೇಕಾಗಿ ಅದರ ಮಾಲೀಕರು ವಿಶ್ವೇಶ್ವರಯ್ಯನವರನ್ನು ಕೇಳಿದರು. ಇವರಿಗಾಗ ಮೊದಲು ಹೊಳೆದ ಹೆಸರು ಡಿ.ವಿ.ಜಿ. ಈ ಸೂಚನೆಯನ್ನು ಟ್ರಿಬ್ಯೂನ್ ಪತ್ರಿಕೆಯ ವ್ಯವಸ್ಥಾಪಕರೂ ಬಹುವಾಗಿ ಸಂತೋಷಿಸಿ ಒಪ್ಪಿದರು. ದೊಡ್ಡ ಸ್ಥಾನ, ಹೆಸರು, ಹಣ, ಸಂಪರ್ಕಗಳೆಲ್ಲ ಸಿದ್ಧಿಸುವ ಆ ಉದ್ಯೋಗವು ಅಂದು ಯಾವುದೇ ಪತ್ರಕರ್ತನಿಗೆ ಪ್ರಲೋಭನೀಯವಾಗಿತ್ತು. ಡಿವಿಜಿಯವರ ಆರ್ಥಿಕ ಪರಿಸ್ಥಿತಿಯಂತೂ ಎಂದಿನಂತೆ ತೀರಾ ಅತಂತ್ರವಾಗಿಯೇ ಇತ್ತು. ಈ ಕಾರಣದಿಂದಲಾದರೂ ಅವರು ಒಪ್ಪಿಯಾರೇ ಎಂಬ ಕುಡಿಯಾಶೆ ವಿಶ್ವೇಶ್ವರಯ್ಯನವರದು. ಆದರೆ ಡಿವಿಜಿ ಖಂಡ ತುಂಡವಾಗಿ ಈ ಅವಕಾಶವನ್ನು ನಿರಾಕರಿಸಿದರು.

‘ನಾನು ಹೇಗೋ ಹೊಟ್ಟೆ ಹೊರೆದುಕೊಳ್ಳುತ್ತೇನೆ. ಬೀದಿಯಲ್ಲಿ ಬಿದ್ದು ಒದ್ದಾಡಿ ತೊಂಡುತೊಂಡಾಗಿ ಬೆಳೆದ ಈ ಜೀವಕ್ಕೆ ಅಂಥ ದೊಡ್ಡ ಪದವಿ- ಪ್ರತಿಷ್ಠೆಗಳು ಒಗ್ಗುವುದಿಲ್ಲ’ ಎಂದಿದ್ದರು. ಈ ಮೂಲಕವಾಗಿ ಅವರು ತಮ್ಮ ಸ್ವಾತಂತ್ರ್ಯ, ನಿರ್ಭೀತಿ, ನಿಸ್ಪೃಹತೆಗಳನ್ನೂ ಕಾಯ್ದುಕೊಂಡರು. ಹೀಗಾಗಿಯೇ ಮಹಾರಾಜರಿಗಾಗಲಿ, ದಿವಾನರುಗಳಾಗಲಿ ರೆಸಿಡೆಂಟ್- ವೈಸ್್ರಾಯ್ ವರ್ಗದವರಿಗಾಗಲಿ ತಮ್ಮ ನಿಷ್ಪಾಕ್ಷಿಕವೂ ನಿಷ್ಠುರವೂ ಆದ ಅಭಿಪ್ರಾಯಗಳನ್ನು ಕೊಡಲು ಸಾಧ್ಯವಾಯಿತು.

ಗಾಂಧೀಜಿಯವರ ಬಗೆಗೆ ಗುಂಡಪ್ಪನವರಿಗೆ ತುಂಬ ಗೌರವ. ಬೆಂಗಳೂರಿಗೆ ಅವರನ್ನು ಮೊತ್ತ ಮೊದಲು (1915ರಲ್ಲಿ) ಕರೆಯಿಸಿದವರೆ ಡಿ.ವಿ.ಜಿ. ಗಾಂಧಿಯವರು ಅಂದು ಅನಾವರಣ ಮಾಡಿದ ಗೋಪಾಲಕೃಷ್ಣ ಗೋಖಲೆಯವರ ಭಾವಚಿತ್ರವು ಇಂದೂ ಡಿವಿಜಿಯವರು ಕಟ್ಟಿದ ಸಂಸ್ಥೆಯ ಸಭಾಮಂಟಪದಲ್ಲಿ ದರ್ಶನೀಯ ಮಾತ್ರವಲ್ಲ, ಅನೇಕ ರಾಜನೈತಿಕ ವಿಚಾರಗಳಲ್ಲಿ, ಸಾಮಾಜಿಕ ಕಾರ್ಯಗಳಲ್ಲಿ ಗಾಂಧಿಯವರೊಡನೆ ಡಿವಿಜಿ ಪ್ರತ್ಯಕ್ಷ- ಪರೋಕ್ಷ ರೀತಿಗಳಿಂದ ತೊಡಗಿಕೊಂಡಿದ್ದರು. ಅವರ ಪ್ರಥಮ ಕವಿತಾ ಸಂಗ್ರಹ ವಸಂತ ಕುಸುಮಾಂಜಲಿಯಲ್ಲಿಯೇ ಗಾಂಧಿಯವರ ಬಗೆಗೊಂದು ಸೀಸ ಪದ್ಯವುಂಟು. ಅಲ್ಲದೇ ಗಾಂಧೀಜಿ ತೀರಿಕೊಂಡಾಗ “ಗಾಂಧಿಜ್ಞಾಪಕ ಪದ ಸಂಗ್ರಹ’ವೆಂಬ ಮತ್ತೊಂದು ಕಂದಪದ್ಯಗಳ ಕವಿತೆಯನ್ನು ಪ್ರಕಟಿಸಿದ್ದರು. ಅಷ್ಟೇಕೆ, ಗಾಂಧಿಯವರ ಐತಿಹಾಸಿಕವಾದ ಇಪ್ಪತ್ತೊಂದು ದಿನಗಳ ದೀರ್ಘೋಪವಾಸ ಸತ್ಯಾಗ್ರಹವು ಮುಗಿದು ಅವರು ಪ್ರಾಣಾಪಾಯವಿಲ್ಲದೆ ಹೊರ ಬಂದಾಗ “ಧನ್ಯವಾದ ಸಮರ್ಪಣೆ’ ಎಂಬ ಕವಿತೆಯನ್ನು ಡಿವಿಜಿ ಬರೆದಿದ್ದಾರೆ. ಇದು ಅವರ ಉಪವಾಸ ಮುಗಿದಂದೇ ರಚಿತವಾಗಿ, ಮುದ್ರಿತವೂ ಆಗಿತ್ತು. ಟ್ಟಿಡಿ ಜ್ಟ್ಠಿ ಠ್ಡಛಿಟ್ಝ್ಛಛಡ್ಝ್ಟಿಟಿ (ಬಹಿರಂಗ ಪ್ರಕಟಣೆಯಲ್ಲವೆಂಬ) ಒಕ್ಕಣೆ ಕೂಡ ಆ ಕರಪತ್ರದ ಮೇಲೆ ಅಚ್ಚಾಗಿದೆ. “ನಮ್ಮುಸಿರ ಹೂವು, ನಮ್ಮ ಬಾಳ್ ಅವನು, ನಮ್ಮೊಬ್ಬ ಗುರು, ನರಕುಲದ ಶಿರ, ದೈವ ಸಂಪನ್ಮಾರ್ಗದರ್ಶಕಂ ಗಾಂಧಿಯಲ್ತೇ’ ಎಂದು ಅವರನ್ನೆಷ್ಟು ಬಗೆಯಲ್ಲಿ ಗೌರವಿಸಿದ್ದರೂ ಅವರ ಕೆಲವು ನಿಲುವುಗಳ ಬಗೆಗೆ ಡಿವಿಜಿಯವರ ತೀವ್ರ ವಿರೋಧವಿದ್ದಿತು. ಇದನ್ನವರು ದಾಖಲಿಸಿಯೂ ಇದ್ದಾರೆ.

ಒಮ್ಮೆ ಆಕಾಶವಾಣಿಯವರು ಗುಂಡಪ್ಪನವರನ್ನು ಗಾಂಧಿಯವರ ಉಪವಾಸಗಳನ್ನು ಕುರಿತು ಮಾತನಾಡಬೇಕಾಗಿ ಕೋರಿದಾಗ ಇವರು ಬರೆದ ಪತ್ರ ತುಂಬ ಮಾರ್ಮಿಕವಾಗಿದೆ. “ನನಗೆ ಉಪವಾಸಗಳಲ್ಲಿ ನಂಬಿಕೆಯಿಲ್ಲ. ನಾನು ಚೆನ್ನಾಗಿ ತಿಂದುಂಡು ದಷ್ಟಪುಷ್ಟವಾಗಿ ಬೆಳೆದವನು. ಅಲ್ಲದೆ, ನಾನು ಗಾಂಧಿಯವರ ಅನುಯಾಯಿಯೂ ಅಲ್ಲ. ಹೀಗಾಗಿ, ತಮ್ಮ ಆಹ್ವಾನವನ್ನು ಸ್ವೀಕರಿಸಲಾಗುತ್ತಿಲ್ಲ’.

ಸುಪ್ರಸಿದ್ಧ ಅಂಕಣಕಾರರೂ ಕನ್ನಡದ ಕಟ್ಟಾಳು ಆಗಿದ್ದ ಹಾ.ಮಾ. ನಾಯಕರು ಅದೊಮ್ಮೆ ಡಿವಿಜಿಯವರನ್ನು ಕಾಣಲು ಹೋದರು. ಆಗಷ್ಟೇ ಹಸನಾದ ಬಿಸಿ ಬಿಸಿ ಜಿಲೇಬಿಯನ್ನು ತಾವೊಲಿದ ಅಂಗಡಿಯಿಂದ ತರಿಸಿ ಇನ್ನೇನು, ತಿನ್ನುವ ಹವಣಿನಲ್ಲಿ ಗುಂಡಪ್ಪನವರಿದ್ದರು. ನಾಯಕರನ್ನು ಕಂಡೊಡನೆಯೇ ಸ್ವಾಗತಿಸಿ ಅವರಿಗೂ ಜಿಲೇಬಿಗಳನ್ನು ಕೊಟ್ಟರು. ನಾಯಕರು ರಸ ತುಂಬಿದ ಆ ಬಂಗಾರದ ಬಣ್ಣದ ಗರಿಗರಿ ಸುರುಳಿಗಳನ್ನು ಸವಿಯುತ್ತಲೇ ಕೇಳಿದರು: “ಸರ್! ಈ ಪಾಟಿ ಜಿಡ್ಡು, ಸಕ್ಕರೆ ಎಲ್ಲ ತುಂಬಿದ ಈ ತಿಂಡಿಗಳು ನಿಮ್ಮ ಆರೋಗ್ಯಕ್ಕೆ ಅಪಥ್ಯ ಅಂತ ವೈದ್ಯರು ಹೇಳಿದ್ದಾರಲ್ಲಾ! ಮತ್ತಿದು ಹೇಗೆ?’ ಡಿವಿಜಿಯವರಾದರೋ ತಮ್ಮ ಬಲಗೈಯಿಂದ ಆ ಮಧುರ ಖಾದ್ಯವನ್ನು ಲೀಲಾಜಾಲವಾಗಿ ಕಬಳಿಸುತ್ತಲೇ ಸವಿನಗುವಿನೊಡನೆ ನುಡಿದರಂತೆ: ನೋಡಿ ನಾಯಕರೆ! ಇಲ್ಲೆಲ್ಲ ಅದ್ವೈತ ಮಾಡಬಾರದು. ಆರೋಗ್ಯ ಬೇರೆ, ಬಾಯಿ ರುಚಿಯೇ ಬೇರೆ! ಇದು ಅಪ್ಪಟ ದ್ವೈತ. ಅನಾರೋಗ್ಯ ಚಿಕಿತ್ಸೆಗಾಗಿ ಕಹಿಯಾದ ಔಷಧ, ನೋಯಿಸುವ ಚುಚ್ಚುಮದ್ದು ಮತ್ತು ತೀವ್ರವಾದ ಶಸ್ತ್ರಚಿಕಿತ್ಸೆಗಳ “ಕೋಟಾ’ (quota)ನೇ ಬೇರೆ. ಜಿಲೇಬಿ, ಬೋಂಡ, ಪಕೋಡ, ಹಲ್ವಗಳಂಥ ರುಚಿ ರುಚಿಯಾದ ಪರುಠವಣೆಗಳ ಕೋಟಾನೇ ಬೇರೆ. ಎರಡನ್ನೂ ಬೆರೆಸಬಾರದು. ಅದರ ಪಾಡಿಗೆ ಅದು, ಇದರ ಪಾಡಿಗೆ ಇದು…. ಒಂದು ಮತ್ತೊಂದನ್ನು ಪ್ರಶ್ನಿಸುವಂತಿಲ್ಲ. ನನ್ನ ದೇಹದಲ್ಲಿ ಇವೆರಡಕ್ಕೂ ಬೇರೆ ಬೇರೆ ಚಾನಲ್್ಗಳೇ ಇವೆ…’

ಹಾ.ಮಾ. ನಾಯಕರು ಹತಾಶೆಯ ನಗೆ ನಕ್ಕು ಸುಮ್ಮನಾಗಿರಬೇಕು.

ಡಿವಿಜಿಯವರಲ್ಲಿ ಅಪರಿಮಿತ ಹಾಸ್ಯಪ್ರಜ್ಞೆ ಇತ್ತು. ಕೆಲವೊಮ್ಮೆ ತಮ್ಮನ್ನೇ ವಸ್ತುವಾಗಿಸಿಕೊಳ್ಳುತ್ತಿದ್ದರು. ಬನ್ನೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಏನಾದರೂ ಸಂದೇಶ ಬರೆದುಕೊಡಿ ಎಂದು ಬಂದಾಗ,

ಗುಂಡಪ್ಪನಾದೊಡೇಂ ಕುಂಡೆಯದು ನೋಯದೇ?

ಎಂದು ಬರೆದುಕೊಟ್ಟು, ತಾಕತ್ತಿದ್ದರೆ ಓದಿ ಎಂದಿದ್ದರು. ಆ ಸಂದರ್ಭದಲ್ಲಿ ಡಿವಿಜಿಯವರಿಗೆ ಮೂಲವ್ಯಾಧಿಯಾಗಿತ್ತು!

ವಿಶ್ವೇಶ್ವರಯ್ಯನವರಿಗಾಗಲಿ ಮಿರ್ಜಾ ಇಸ್ಮಾಯಿಲರಿಗಾಗಲಿ ಪುಟ್ಟಣ ಚೆಟ್ಟಿಯವರೇ ಮುಂತಾದ ಇನ್ನಿತರ ಅನೇಕ ಸಾರ್ವಜನಿಕ ಮಹನೀಯರಿಗಾಗಲಿ ರಾಜ್ಯಶಾಸ್ತ್ರ-ಅರ್ಥಶಾಸ್ತ್ರ-ಪತ್ರಿಕೋದ್ಯಮ-ಸಮಾಜಶಾಸ್ತ್ರವೇ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಪರಿಪರಿಯಾದ ಸಲಹೆ- ಸೂಚನೆಗಳನ್ನೂ ನೆರವು-ನೇರ್ಪುಗಳನ್ನೂ ಮಾಡಿಕೊಡುತ್ತಿದ್ದವರು ಡಿವಿಜಿ. ಇಂಥ ಕೆಲಸಗಳಿಗೆ ತುಂಬ ಸಮಯ- ಶ್ರದ್ಧೆ- ಅಧ್ಯಯನಗಳೂ ಮೇಲ್ಮಟ್ಟದ ವಿವೇಚನೆ- ವಿಶ್ಲೇಷಣೆಗಳೂ ಬೇಕಾಗುತ್ತಿದ್ದವು. ಈ ಎಲ್ಲ ಪರಿಶ್ರಮ- ಸಹಕಾರಕ್ಕಾಗಿ ಇಂಥ ಹಿರಿಯರು ಗುಂಡಪ್ಪನವರಿಗೆ ಗೌರವ ಧನವೆಂದು ಎಷ್ಟನ್ನೂ ಕೊಡಲು ಸಿದ್ಧವಿರುತ್ತಿದ್ದರು. ಆದರೆ, ಡಿವಿಜಿ ಮಾತ್ರ ಇವಾವುದನ್ನೂ ಒಲ್ಲೆನೆಂದು ಖಂಡ- ತುಂಡವಾಗಿ ನಿರಾಕರಿಸುತ್ತಿದ್ದರು: “ನಿಮ್ಮಂಥ ಹಿರಿಯರಿಗೆ, ಈ ತೆರನಾದ ಸಾರ್ವಜನಿಕ ಹಿತಕಾರ್ಯಗಳಿಗೆ ನೆರವಾಗುವುದೇ ಒಂದು ಸೌಭಾಗ್ಯ. ಇದಕ್ಕೆ ಮಿಗಿಲಾಗಿ ಮತ್ತೇನೂ ಬೇಡ!’ ಸೇವೆಗೆ ಪ್ರತಿಫಲವಿಲ್ಲ- ಇದು ಡಿವಿಜಿಯವರದೇ ಧ್ಯೇಯ ವಾಕ್ಯ.

ಆದರೆ ವಿಶ್ವೇಶ್ವರಯ್ಯನವರಿಗಾಗಲಿ ಮಿರ್ಜಾ ಅವರಾಗಲಿ ಇದನ್ನೊಪ್ಪಲು ಸಿದ್ಧವಿರಲಿಲ್ಲ: “ಯಾವುದೇ ಯುಕ್ತ ರೀತಿಯ ನೆರವಿಗೆ ಸೂಕ್ತ ಗೌರವ ಸಲ್ಲಬೇಕು. ಇಲ್ಲವಾದಲ್ಲಿ ಮುಂದೆ ನಿಮ್ಮಿಂದ ನಾವು ಇನ್ನಾವ ರೀತಿಯ ನೆರವನ್ನೂ ಪಡೆಯುವುದು ಕಷ್ಟವಾಗುತ್ತದೆ. ಅಲ್ಲದೆ ಇಂಥ ತಜ್ಞಸಂಭಾವನೆ- ಗೌರವ ಧನಗಳೂ ವಿವಿಧ ಸಾರ್ವಜನಿಕ ಕಾರ್ಯಗಳ ಬಜೆಟ್ಟಿನಲ್ಲಿ ಸೇರಿರುತ್ತವೆ. ಆದುದರಿಂದ ನಮ್ಮ ಮನ್ನಣೆಯನ್ನು ಒಪ್ಪಿಸಿಕೊಳ್ಳಲೇಬೇಕು’ ಎಂದು ಆಗ್ರಹಿಸುತ್ತಿದ್ದರು.

ಇದರಿಂದ ಡಿವಿಜಿ ಮತ್ತೂ ಜಾಣ್ಮೆಯ ಹಾದಿಯೊಂದನ್ನು ತುಳಿದರು. ಅದೆಂದರೆ ಈ ಎಲ್ಲ ಹಿರಿಯರಿಂದ ಧನಾದೇಶ ಪತ್ರ ರೂಪದಲ್ಲಿ (ಚೆಕ್) ಸಂಭಾವನೆಯನ್ನೇನೋ ಸ್ವೀಕರಿಸುವುದು; ಆದರೆ ಯಾವೊಂದನ್ನೂ ನಗದಾಗಿ ಪರಿವರ್ತಿಸಿಕೊಳ್ಳದೆ ಹಾಗೆಯೇ ತಮ್ಮ ಪೆಟ್ಟಿಗೆಯಲ್ಲಿ ಶಾಶ್ವತವಾಗಿ ಉಳಿಸಿಕೊಳ್ಳುವುದು!

ಹೀಗೆ ದಶಕಗಳ ಕಾಲ ಈ “ಜಾಣತನ’ ಸಾಗಿತು; ಲಕ್ಷಗಟ್ಟಲೆ ಹಣ ನಗದಾಗಿಯೇ ಉಳಿಯಿತು; ಡಿವಿಜಿಯವರ ನಿಸ್ಪೃಹತೆ ಮಾತ್ರ ನಗುತ್ತಿತ್ತು. ಡಿವಿಜಿ ಕೇವಲ ಚೆಕ್ಕುಗಳನ್ನಷ್ಟೇ ಅಲ್ಲ ಯಾರ ಸ್ನೇಹವನ್ನೂ ಯಾವ ಅವಕಾಶವನ್ನೂ ಮತ್ತಾವುದೇ ಸ್ಥಾನ-ಮಾನ- ಪರಿಚಯಗಳನ್ನು ಎನ್್ಕ್ಯಾಷ್ ಮಾಡಿಕೊಳ್ಳಲಿಲ್ಲ.

ಇಂತಹ ನೂರಾರು ಘಟನೆ, ನಿದರ್ಶನಗಳನ್ನು ಡಿವಿಜಿಯವರ ಜೀವನದಲ್ಲಿ ಕಾಣಬಹುದು. ಒಂದೊಂದು ಘಟನೆಗಳು ಡಿವಿಜಿಯವರ ಪ್ರಾಮಾಣಿಕತೆ, ನಿಸ್ವಾರ್ಥತೆಯ ಧ್ಯೋತಕಗಳಾಗಿವೆ. ಅವಧಾನ ಕಲೆಯನ್ನು ನಾಡಿನ ಮೂಲೆ ಮೂಲೆಗೆ ಕೊಂಡೊಯ್ಯುತ್ತಿರುವ ಖ್ಯಾತ ಬಹುಭಾಷಾ ವಿದ್ವಾಂಸ ಶತಾವಧಾನಿ ಆರ್. ಗಣೇಶ್ ಅವರು ಈ ಘಟನೆ, ನಿದರ್ಶನಗಳನ್ನು “ಬ್ರಹ್ಮಪುರಿಯ ಭಿಕ್ಷುಕ’ ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಡಿವಿಜಿಯವರ ಜನ್ಮದಿನವಾದ ಮಾರ್ಚ್ 17ರ ಸಂದರ್ಭದಲ್ಲಿ ಬೆಂಗಳೂರಿನ ಗೋಖಲೆ ಇನ್್ಸ್ಟಿಟ್ಯೂಟ್್ನಲ್ಲಿ ಈ ಪುಸ್ತಕ ಬಿಡುಗಡೆಯಾಗಿದೆ.

ಈ ಕಾಲದಲ್ಲಿ ನ್ಯಾಯ ನೀತಿಗೆ, ಪ್ರಾಮಾಣಿಕತೆಗೆ, ಸಚ್ಚಾರಿತ್ರ್ಯಕ್ಕೆ ಯಾವ ಬೆಲೆಯೂ ಇಲ್ಲ ಎಂಬ ಸಿನಿಕತೆ ಆವರಿಸಿರುವ ಸಂದರ್ಭದಲ್ಲಿ ಡಿವಿಜಿ ಅವರಂಥವರನ್ನು ನೆನಪಿಸಿಕೊಂಡಾಗ ಮಾತ್ರ ನೈತಿಕತೆ ಎಂಬುದು ಮತ್ತೆ ಜಾಗೃತಗೊಳ್ಳಲು ಸಾಧ್ಯ. ಓದಿನ ಸವಿ ನಿಮ್ಮದಾಗಲಿ.

ಕೃಪೆ: http://pratapsimha.com/2011/03/27/gundappa/

ಡಿ.ವಿ.ಜಿ.


ಶ್ರೀ ರಂಗ

ತೀ ನಂ ಶ್ರೀ

ಬಿ. ಎಂ. ಶ್ರೀಕಂಠಯ್ಯ

ಶಿವರಾಂ ಕರಂತ


ಚಿತ್ರ ಕೃಪೆ : http://www.hinduonnet.com/mag/2002/10/27/stories/2002102700200300.htm

ದ.ರಾ.ಬೇಂದ್ರೆ


ಕುವೆಂಪು

ಕುವೆಂಪು

Tuesday, March 29, 2011

ಹರಿ ಸ್ಮರಣೆ ಮಾಡೊ ನಿರಂತರ

ಹರಿ ಸ್ಮರಣೆ ಮಾಡೊ ನಿರಂತರ
ಪರಗತಿಗೆ ಇದು ನಿರ್ಧಾರ

ದುರಿತ ಗಜಕ್ಕೆ ಕಂಠೀರವನೆನಿಸಿದ
ಶರಣಾಗತ ರಕ್ಷಕಾ ಪಾವನ ನೀ
(ಹರಿ ಸ್ಮರಣೆ ಮಾಡೊ ..)

ಶ್ರೀಶ ಪುರಂದರ ವಿಠ್ಠಲ ರಾಯನ
ಸೃಷ್ಟಿಗೊಡೆಯನ ಮುಟ್ಟಿ ಭಜಿಸಿ ನೀ
(ಹರಿ ಸ್ಮರಣೆ ಮಾಡೊ ..)

ಡಾ|| ಎಸ್.ಎಲ್ ಭೈರಪ್ಪ

ಡಾ|| ಎಸ್.ಎಲ್ ಭೈರಪ್ಪ

Monday, March 28, 2011

ಶ್ರೀನಿವಾಸ ಎನ್ನ ಬಿಟ್ಟು ನೀನಗಲದೆ

ಶ್ರೀನಿವಾಸ ಎನ್ನ ಬಿಟ್ಟು ನೀನಗಲದೆ

ಮನವೆಂಬೊ ಮಂಟಪ
ತನುವೆಂಬೊ ಹಾಸು ಮಂಚ
ಜ್ಞಾನವೆಂಬೊ ದಿವ್ಯದೀಪದ ಬೆಳಕಲಿ
ಸನಕಾದಿ ವಂದ್ಯ ನೀ ಬೇಗ ಬಾರೊ

ಪಂಚದೈವರು ಯಾವಾಗಲೂ ಎನ್ನ
ಹೊಂಚು ಹಾಕಿ ನೋಡುತಾರೆ
ಹೊಂಚುಗಾರರು ಆರು ಮಂದಿ
ಆವ ಹಿಂದು ಮುಂದಿಲ್ಲದೆ ಎಳೆಯುತಾರೆ

ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆನೊ
ಇನ್ನಾದರೂ ಎನ್ನ ಕೈ ಪಿಡಿಯೊ
ಘನ್ನ ಮಹಿಮ ಸಿರಿ ಪುರಂದರ ವಿಠ್ಠಲ
ಮನ್ನಿಸಿ ಎನ್ನನು ಕಾಯಬೇಕೊ

Sunday, March 27, 2011

ರಾಮ ನಾಮ ಪಾಯಸಕ್ಕೆ

ರಾಮ ನಾಮ ಪಾಯಸಕ್ಕೆ
ಕೃಷ್ಣ ನಾಮ ಸಕ್ಕರೆ
ವಿಠ್ಠಲ ನಾಮ ತುಪ್ಪವ ಸೇರಿಸಿ
ಬಾಯ ಚಪ್ಪರಿಸಿರೋ

ಒಮ್ಮಾನ ಗೋಧಿಯ ತಂದು
ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮಾನೆ ಸಜ್ಜಿಗೆ ತೆಗೆದು
ಗಮ್ಮಾನೆ ಶಾವಿಗೆ ಹೊಸೆದು

ಹೃದಯವೆಂಬೊ ಮಡಕೆಯಲಿ
ಭಾವವೆಂಬೊ ಎಸರಲಿ
ಬುದ್ಧಿಯಿಂದ ಪಾಕ ಮಾಡಿ
ಹರಿವಾಣಕೆ ಬಡಿಸಿಕೊಂಡು

ಆನಂದ ಆನಂದವೆಂಬೊ ತೇಗು
ಬಂದಿತು ಕಾಣಿರೊ
ಆನಂದ ಮೂರುತಿ ನಮ್ಮ
ಪುರಂದರ ವಿಠ್ಠಲನ ನೆನೆಯಿರೊ

Saturday, March 26, 2011

ಭಾಗ್ಯದ ಲಕ್ಷ್ಮೀ ಬಾರಮ್ಮ

ಭಾಗ್ಯದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ನೀ
ಸೌಭಾಗ್ಯದ ಲಕ್ಷ್ಮೀ ಬಾರಮ್ಮ

ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ
ಗೆಜ್ಜೆ ಕಾಲ್ಗಳ ಧ್ವನಿಯ ತೋರುತ
ಸಜ್ಜನ ಸಾಧು ಪೂಜೆಯ ವೇಳೆಗೆ
ಮಜ್ಜಿಗೆಯೊಳಗಿನ ಬೆಣ್ಣೆಯಂತೆ

ಕನಕವೃಷ್ಟಿಯ ಕರೆಯುತ ಬಾರೆ
ಮನಕೆ ಮಾನವ ಸಿದ್ಧಿಯ ತೋರೆ
ದಿನಕರ ಕೋಟಿ ತೇಜದಿ ಹೊಳೆಯುವ
ಜನಕರಾಯನ ಕುಮಾರಿ ಬೇಗ

ಅತ್ತಿತ್ತಲಗದೆ ಭಕ್ತರ ಮನೆಯಲಿ
ನಿತ್ಯ ಮಹೋತ್ಸವ ನಿತ್ಯ ಸುಮಂಗಲಿ
ಸತ್ಯವ ತೋರುವ ಸಾಧು ಸಜ್ಜನರ
ಚಿತ್ತದಿ ಹೊಳೆಯುವ ಪುತ್ಥಳಿ ಬೊಂಬೆ

ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು
ಕಂಕಣ ಕೈಯ ತಿರುವುತ ಬಾರೆ
ಕುಂಕುಮಾಂಕಿತ ಪಂಕಜಲೋಚನೆ
ವೆಂಕಟರಮಣನ ಬಿಂಕದ ರಾಣಿ

ಸಕ್ಕರೆ ತುಪ್ಪದ ಕಾಲುವೆ ಹರಿಸಿ
ಶುಕ್ರವಾರದ ಪೂಜೆಯ ವೇಳೆಗೆ
ಅಕ್ಕರೆವುಳ್ಳ ಅಳಗಿರಿ ರಂಗನ
ಚೊಕ್ಕ ಪುರಂದರ ವಿಠ್ಠಲನ ರಾಣಿ

ಬಂದದೆಲ್ಲ ಬರಲಿ

ಬಂದದೆಲ್ಲ ಬರಲಿ
ಗೋವಿಂದನ ದಯ ನಮಗಿರಲಿ

ಅರಗಿನ ಮನೆಯೊಳಗಂದು
ಪಾಂಡವರನು ಕೊಲಬೇಕೆಂದು
ದುರುಳ ಕೌರವ ಬಂದು ಅತಿ
ಹರುಷದಲಿರುತರಿಲಂದು
ಹರಿ ಕೃಪೆ ಅವರಲ್ಲಿದ್ದ ಕಾರಣ
ಘೋರ ದುರಿತ ಬಯಲಾದುದಲ್ಲವೆ

ಆರು ಒಲಿಯದರಿಲೆನ್ನ
ಮುರಾರಿ ಎನಗೆ ಪ್ರಸನ್ನ
ಹೋರುವ ದುರಿತ ಬನ್ನ
ಅದ ನಿವಾರಿಪ ಕರುಣ ಸಂಪನ್ನ
ಸಿರಿ ರಮಣನ ಸಿರಿಚರಣ ಶರಣರಿಗೆ
ಕ್ರೂರ ಯಮನು ಶರಣಾಗತನಲ್ಲವೆ

ಸಿಂಗನ ಪೆಗಲೇರಿದವಗೆ
ಕರಿ ಭಂಗವೇಕೆ ಮತ್ತವಗೆ
ರಂಗನ ದಯೆವುಳ್ಳವಗೆ
ಭವ ಭಂಗಗಳೇತಕ್ಕವಗೆ
ಮಂಗಳಮಹಿಮ ಪುರಂದರ ವಿಠ್ಠಲ
ಶುಭಾಂಗನ ದಯವೊಂದಿದ್ದರೆ ಸಾಲದೆ

ಕನ್ನಡದ ಜನಪದ ಮಹಾಕಾವ್ಯಗಳು

ಕನ್ನಡದ ಜನಪದ ಮಹಾಕಾವ್ಯಗಳು
          ಸಮಾಜದಲ್ಲಿ ನಡೆಯುವ ಸಾಂಸ್ಕೃತಿಕ ಸಂಗತಿಗಳನ್ನು ಮುನ್ನೆಲೆಗೆ ತರುವ ಅಥವಾ ಅಂಚಿಗೆ ಸರಿಸಿಬಿಡುವ ಪ್ರಕ್ರಿಯೆಯು ಅಂತಹ ಸಮಾಜದಲ್ಲಿ ನಡೆಯುತ್ತಿರುವ ಸಾಮಾಜಿಕ ಚಲನವಲನಗಳ ನೇರ ಪರಿಣಾಮ. ಆ ಸಂಗತಿಗಳ ಕಲಾತ್ಮಕ ಮೌಲ್ಯಕ್ಕೂ ಈ ಬಗೆಯ ಅತಿಮಹತ್ವ, ನಿರ್ಲಕ್ಷ್ಯಗಳಿಗೂ ನಿಕಟವಾದ ಸಂಬಂಧವಿರುವುದಿಲ್ಲ. ಕಲಾತ್ಮಕ ಮೌಲ್ಯ ಯಾವುದು, ಎನ್ನುವ ತಿಳಿವಳಿಕೆಯೂ ಬದಲಾಗುತ್ತಿರುತ್ತದೆ. ಈ ಮಾತು ಕರ್ನಾಟಕದ ಜನಪದ ಮಹಾಕಾವ್ಯಗಳ ವಿಷಯದಲ್ಲಿ ನೂರಕ್ಕೆ ನೂರರಷ್ಟು ನಿಜ. ಸಾಹಿತ್ಯ ವಿಮರ್ಶೆಯ ಪ್ರಧಾನಧಾರೆಯು ಎಷ್ಟೋ ಶತಮಾನಗಳ ಕಾಲ ಅವುಗಳ ಅಸ್ತಿತ್ವವನ್ನು ಗುರುತಿಸಲೂ ಇಲ್ಲ, ಅವುಗಳನ್ನೂ ಮೆಚ್ಚಿಕೊಳ್ಳಲೂ ಇಲ್ಲ. ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ ಪ್ರಾರಂಭವಾದ ಜನಪದ ಸಾಹಿತ್ಯದ ಸಂಕಲನ ಕಾರ್ಯವು, ಭೂಮಾಲಿಕ ವರ್ಗಗಳಲ್ಲಿ ಪ್ರಚಲಿತವಾಗಿದ್ದ ಜನಪದಗೀತೆಗಳು ಮತ್ತು ಲಾವಣಿಗಳಿಗೆ ಸೀಮಿತವಾಗಿದ್ದವು. ಎಪ್ಪತ್ತರ ದಶಕದ ಮೊದಲ ವರ್ಷಗಳಲ್ಲಿ ಪ್ರಕಟವಾದ ಮಲೆ ಮಾದೇಶ್ವರ ಕಾವ್ಯ ಮತ್ತು ಮಂಟೇಸ್ವಾಮಿ ಕಾವ್ಯಗಳು ಕೂಡ ಸಾಹಿತ್ಯಕ ಯಾಜಮಾನ್ಯದ ಧೋರಣೆಗಳಲ್ಲಿ ಹೆಚ್ಚಿನ ಬದಲಾವಣೆಯನ್ನು ತರಲಿಲ್ಲ. ಮುಂದಿನ ಇಪ್ಪತ್ತು ವರ್ಷಗಳ ಕಾಲ ಅವುಗಳನ್ನು ಮಾನವಶಾಸ್ತ್ರದ ಕುತೂಹಲವನ್ನು ತಣಿಸುವ ಸಾಮಗ್ರಿಯೆಂದು ಬಗೆಯಲಾಯಿತು. ಅವು ಜಾಣಪದ ಅಧ್ಯಯನಗಳ ವ್ಯಾಪ್ತಿಯಿಂದ ಹೊರಗೆ ಬರಲಿಲ್ಲ. ಈ ಮೌಖಿಕ ಮಹಾಕಾವ್ಯಗಳನ್ನು ದಲಿತರು ಮತ್ತು ಅಂಚಿಗೆ ತಳ್ಳಲ್ಪಟ್ಟ ಜಾತಿ/ಸಮುದಾಯಗಳವರು ಹಾಡುತ್ತಿದ್ದರು. ಅವು ಅನುಭವಿಸಿದ ನಿರ್ಲಕ್ಷ್ಯಕ್ಕೆ ಈ ಸಂಗತಿಯೂ ಕಾರಣ. ಫಿನ್ ಲ್ಯಾಂಡಿನ ಮೌಖಿಕ ಮಹಾಕಾವ್ಯವಾದ ಕಾಲೇವಾಲಾವನ್ನು ಅಧ್ಯಯನ ಮಾಡುವ ಅವಕಾಶ ಸಿಕ್ಕಿದ್ದು ಕೂಡ ಮಹತ್ವದ ಬದಲಾವಣೆಗೆ ಕಾರಣವಾಗಿರಬಹುದು.
          ಆದರೆ, ಕಳೆದ ಕೆಲವು ದಶಕಗಳಲ್ಲಿ ಕರ್ನಾಟಕದಲ್ಲಿ ನಡೆದ ಸಾಮಾಜಿಕ-ರಾಜಕೀಯ ಬದಲಾವಣೆಗಳು, ಅಕಡೆಮಿಕ್ ಅಧ್ಯಯನದ ಸ್ವರೂಪ ಮತ್ತು ಆಯ್ಕೆಗಳನ್ನು ಸಂಪೂರ್ಣವಾಗಿ ಪರಿವರ್ತಿಸಿವೆ. ಈಗ ಜಾನಪದ ಮಹಾಕಾವ್ಯಗಳನ್ನು ಇದುವರೆಗೆ ಮನ್ನಣೆ ಪಡೆದಿದ್ದ ಶ್ರೇಷ್ಠ ಸಾಹಿತ್ಯಕೃತಿಗಳಿಗೆ ಸರಿಸಮನಾಗಿ ಪರಿಗಣಿಸಲಾಗುತ್ತಿದೆ. ಸಂಸ್ಕೃತಿವಿಮರ್ಶೆಯ ದಿಕ್ಕಿನಲ್ಲಿ ಚಲಿಸಸುತ್ತಿರುವ ವಿಮರ್ಶಕರಿಗೂ ಇವು ಅಧ್ಯಯನದ ಅಮೂಲ್ಯ ಆಕರಗಳಾಗಿ ಕಂಡಿವೆ. ಈಗ ಸಾಹಿತ್ಯವೆಂಬ ಕಲೆಯನ್ನು ಕುರಿತ ವಿಚಾರಗಳು ಬಹಳ ವ್ಯಾಪಕವಾದ ಹಿನ್ನೆಲೆಯನ್ನು ಹೊಂದಿವೆ. ಪ್ರಮಾಣ/ಶಿಷ್ಟ ಭಾಷೆಯ ಚೌಕಟ್ಟುಗಳನ್ನು ಮೀರುವುದು ಕೂಡ ಗುಣವೇ ಇರಬಹುದೆಂಬ ನಿಲುವು ಈಗ ಮಾನ್ಯವಾಗಿದೆ.
          ಜನಪದ ಮಹಾಕಾವ್ಯಗಳು ಮೌಖಿಕವಾಗಿರುವುದರಿಂದ, ಅವುಗಳನ್ನು ಲಿಖಿತ ರೂಪದಲ್ಲಿ ಪ್ರಕಟಿಸಿದಾಗ ಕೆಲವು ಪರಿಮಿತಿಗಳು ಏರ್ಪಡುತ್ತವೆ. ಅವುಗಳ ಚಲನಶೀಲಗುಣವು ಇಲ್ಲವಾಗುತ್ತದೆ. ಅಂತೆಯೇ ಗೇಯತೆಯೂ ಕೂಡ ಊಹೆಯ ವಸ್ತುವಾಗಿಬಿಡುತ್ತದೆ. ಈ ಕಾವ್ಯಗಳ ಸಂವಹನ ಮತ್ತು ಸಂರಕ್ಷಣದ ಕೆಲಸದಲ್ಲಿ ಹಾಡುಗಾರರು-ನಿರೂಪಕರು ಮುಖ್ಯವಾದ ಪಾತ್ರ ವಹಿಸುತ್ತಾರೆ. ಅವರಿಗೆ ತಾವು ನಿರೂಪಿಸುತ್ತಿರುವ ಕಥೆಯ ಸ್ಥೂಲವಾದ ರೂಪುರೇಷೆಗಳು ತಿಳಿದಿರುತ್ತವೆ. ಹಾಗೆಯೇ ಯಾವುದೇ ಸಂದರ್ಭದಲ್ಲಿ ಬಳಸಬಹುದಾದ ಕೆಲವು ಸೂತ್ರರೂಪದ ವಿನ್ಯಾಸಗಳು(ಫಾರ್ಮುಲಾಯಿಕ್ ಪ್ಯಾಟ್ರನ್ಸ್) ಗೊತ್ತಿರುತ್ತವೆ. ಆದ್ದರಿಂದಲೇ ಅವರು ನೀಡುವ ಪ್ರತಿಯೊಂದು ಪ್ರದರ್ಶನವೂ(ಪರ್ಫಾಮನ್ಸ್) ಹೊಸ ಪಠ್ಯವೊಂದಕ್ಕೆ ಜನ್ಮ ಕೊಡುತ್ತದೆ. ಅಲ್ಲದೆ ಪ್ರತಿಯೊಬ್ಬ ಗಾಯಕನೂ ತಾನು ಹಾಡುತ್ತಿರುವ ಕಾವ್ಯದ ತನ್ನದೇ ಆದ ಆವೃತ್ತಿಯನ್ನು ಹೊಂದಿರುತ್ತಾನೆ. ಅದು ಅವನಿಗೆ ಗುರುಪರಂಪರೆಯಿಂದ ಹರಿದು ಬಂದಿರುತ್ತದೆ.ಅವರು ಅದನ್ನು ಹಾಡುವ ಧಾರ್ಮಿಕ ಮತ್ತು ಆಚರಣಾತ್ಮಕ ಸಂದರ್ಭಗಳು ಆಯಾ ಪಠ್ಯದ ಸ್ವರೂಪವನ್ನು ನಿರ್ಧರಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಬಗೆಯ ಚಲನಶೀಲತೆ ಮತ್ತು ಪ್ರತಿಯೊಂದು ಪೀಳಿಗೆಯ ಗಾಯಕರು ಹೊಸದಾಗಿ ಸೇರಿಸುವ ವಿವರಗಳು, ಆ ಕಾವ್ಯದ ಐತಿಹಾಸಿಕತೆಯನ್ನು ಕಂಡುಕೊಳ್ಳುವ ಕೆಲಸದಲ್ಲಿ ಕೊಂಚ ಅಡ್ಡಿಯಾಗುತ್ತವೆ.
          ಅನೇಕ ಜನಪದ ಕಾವ್ಯಗಳ ಅಸ್ತಿತ್ವವಿರುವುದು ಒಂದು ನಿರ್ದಿಷ್ಟ ಸಮುದಾಯದ ನಂಬಿಕೆಗಳು ಮತ್ತು ಇತಿಹಾಸದ ಚೌಕಟ್ಟಿನಲ್ಲಿ. ಅವು ಆ ಸಮುದಾಯದ ಸಂಸ್ಕೃತಿ, ಪುರಾಣ ಮತ್ತು ಅಲಿಖಿತ ಇತಿಹಾಸಗಳ ಬೃಹತ್ ಭಂಡಾರವಾಗಿರುತ್ತವೆ. ಆದ್ದರಿಂದ ಅವು ಅವರ ಅನುದಿನದ ಚಟುವಟಿಕೆಗಳನ್ನು ಧೋರಣೆಗಳನ್ನು ನಿರ್ಧರಿಸುವ ಮಾರ್ಗದರ್ಶಿಗಳಾಗಿರುತ್ತವೆ. ಆಗ ಅವುಗಳ ಸಾಹಿತ್ಯಕ ಮೌಲ್ಯವು ಕೊಂಚ ಬದಿಗೆ ಸರಿಯುತ್ತದೆ. ಈ ಕಾವ್ಯಗಳನ್ನು ಅಂತಹ ಚೌಕಟ್ಟಿನಿಂದ ಬೇರ್ಪಡಿಸಿ, ಇತರ ಸಾಹಿತ್ಯಕೃತಿಗಳ ಸಾಲಿನಲ್ಲಿ ಪರಿಶೀಲಿಸುವುದು ಅತ್ಯಗತ್ಯ. ಿವುಗಳನ್ನು ಹೀಗೆ ಸೆಕ್ಯುಲರ್ ಆಗಿ ಮಾರ್ಪಡಿಸುವುದರ ಪರಿಣಾಮ ಮತ್ತು ಪ್ರಯೋಜನಗಳನ್ನು ಕುರಿತು ವಿವರವಾಗಿ ಯೋಚಿಸಬೇಕಾಗಿದೆ.
          ಮಲೆ ಮಾದೇಶ್ವರ ಕಾವ್ಯ ಮತ್ತುಮಂಟೇಸ್ವಾಮಿ ಕಾವ್ಯಗಳು, ಕರ್ನಾಟಕದ ಮುಖ್ಯವಾದ ಜನಪದ ಮಹಾಕಾವ್ಯಗಳು. ಚಾಮರಾಜನಗರ ಜಿಲ್ಲೆಯ ಮಲೆಮಾದೇಶ್ವರ ಬೆಟ್ಟದಲ್ಲಿ ಮಾದೇಶ್ವರನ ದೇವಾಲಯವಿದೆ. ಅಲ್ಲಿ ನಡೆಯುವ ವಾರ್ಷಿಕ ಜಾತ್ರೆಯಲ್ಲಿ ಸಾವಿರಾರು ಜನ ಸೇರುತ್ತಾರೆ. ಈ ಕಾವ್ಯವನ್ನು ಹಾಡುವ ವೃತ್ತಿಗಾಯಕರ ಸಮುದಾಯವೇ ಇದೆ. ಅವರು ಹಲವು ಸನ್ನಿವೇಶಗಳಲ್ಲಿ ಇಂತಹ ಹಾಡುವಿಕೆಯಲ್ಲಿ ತೊಡಗುತ್ತಾರೆ. ಈ ಮಾತು ಮಂಟೇಸ್ವಾಮಿಯವರ ವಿಷಯದಲ್ಲೂ ನಿಜ. ಚಾಮರಾಜನಗರ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಪ್ರದೇಶಗಳಲ್ಲಿ ಈ ಕಾವ್ಯಗಳು ಇಂದಿಗೂ ಅನೇಕ ಸಮುದಾಯಗಳಲ್ಲಿ ಜೀವಂತವಾಗಿವೆ. ಎರಡೂ ಕಾವ್ಯಗಳು ದಲಿತರು ಹಾಗೂ ಮೇಲುವರ್ಗದವರ ನಡುವಿನ ಮುಖಾಮುಖಿ ಮತ್ತು ಸಂಘರ್ಷಗಳನ್ನು ಚಿತ್ರಿಸುತ್ತವೆ. ಬಸವಣ್ಣ ಮತ್ತು ಮಂಟೇಸ್ವಾಮಿಯವರ ನಡುವಿನ ಮುಖಾಮುಖಿಯು ಶತಮಾನಗಳ ಚರಿತ್ರೆಯನ್ನು ಹಿಡಿಯುವ ಪ್ರಬಲವಾದ ರೂಪಕ. ಇಂತಹ ಮಹಾಕಾವ್ಯಗಳು, ಶತಮಾನಗಳಿಂದ ನಾಗರಿಕತೆಯು ರೂಪುಗೊಂಡಿರುವ ಬಗೆಯನ್ನು, ಮಹಾನ್ ಕಥನಗಳಲ್ಲಿ ದಾಖಲೆ ಮಾಡುತ್ತವೆ. ಅನೇಕ ಕಾವ್ಯಗಳು ವಿಭಿನ್ನ ಸಮುದಾಯಗಳ ಅಸ್ಮಿತೆಯ ಸಾಕ್ಷಿಗಳಾಗುತ್ತವೆ. ಹಾಲುಮತದ ಮಹಾಕಾವ್ಯ ಮತ್ತು ಮೈಲಾರಲಿಂಗನ ಕಾವ್ಯಗಳು ಅನುಕ್ರಮವಾಗಿ ಕುರುಬರು ಮತ್ತು ಗೊಲ್ಲರ ಸಮುದಾಯಗಳ ಜೀವನಕ್ರಮ ಮತ್ತು ಇತಿಹಾಸದ ಸುತ್ತ ರೂಪಿತವಾಗಿವೆ. ಕೃಷ್ಣಗೊಲ್ಲರ ಕಾವ್ಯ, ಜುಂಜಪ್ಪನ ಕಾವ್ಯ, ಎಲ್ಲಮ್ಮನ ಕಾವ್ಯ, ಕುಮಾರರಾಮನ ಕಾವ್ಯ ಮತ್ತು ಕರಾವಳಿ ಕರ್ನಾಟಕದ ಸಿರಿ ಮಹಾಕಾವ್ಯಗಳು ಕರ್ನಾಟಕದ ಪ್ರಮುಖ ಜನಪದ ಮಹಾಕಾವ್ಯಗಳು. ತುಳು ಭಾಷೆಯಲ್ಲಿ ರಚಿತವಾಗಿರುವ ಪಾಡ್ದನಗಳನ್ನು ವಿಶೇಷವಾಗಿ ಹೆಸರಿಸಬೇಕು. ಸಿರಿ ಮಹಾಕಾವ್ಯವೂ ಒಂದು ಪಾಡ್ದನವೇ. ಈ ಕಾವ್ಯಗಳನ್ನು ಕನ್ನಡ ಸಾಹಿತ್ಯ ಪರಂಪರೆಯ ಪ್ರಧಾನ ಧಾರೆಯೊಳಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ಅದರಿಂದ ಕನ್ನಡ ಸಾಹಿತ್ಯವು ಇನ್ನಷ್ಟು ಶ್ರೀಮಂತವಾಗುತ್ತದೆ. 

Friday, March 25, 2011

ಪೋಗದಿರೆಲೊ ರಂಗ ಬಾಗಿಲಿಂದಾಚೆಗೆ

ಪೋಗದಿರೆಲೊ ರಂಗ ಬಾಗಿಲಿಂದಾಚೆಗೆ
ಭಾಗವತರು ಕಂಡರೆತ್ತಿಕೊಂಡೊಯ್ವರೊ

ಸುರಮುನಿಗಳು ತಮ್ಮ ಹೃದಯ ಗಹ್ವರದಲ್ಲಿ
ಪರಮಾತ್ಮನ ಕಾಣದೆ ಅರಸುವರು
ದೊರಕದ ವಸ್ತುವು ದೊರಕಿತು ತಮಗೆಂದು
ಹರುಷದಿಂದಲಿ ನಿನ್ನ ಕರೆದೆತ್ತಿಕೊಂಬರು

ಅಗಣಿತ ಗುಣ ನಿನ್ನ ಜಗದ ನಾರಿಯರೆಲ್ಲ
ಹಗೆಯಾಗಿ ನೋಡ್ವರೋ ಗೋಪಾಲನೆ
ಮಗುಗಳ ಮಾಣಿಕ್ಯ ತಗುಲಿತು ಕರಕೆಂದು
ವೇಗದಿಂದಲಿ ಬಂದು ಬಿಗಿದಪ್ಪಿಕೊಂಬರು

ದಿಟ್ಟ ನಾರಿಯರೆಲ್ಲ ಇಷ್ಟವ ಸಲಿಸೆಂದು
ಅಟ್ಟಟ್ಟಿ ಬೆನ್ನಿಂದೆ ತಿರುಗುವರು
ಸೃಷ್ಟೀಶ ಪುರಂದರ ವಿಠ್ಠಲ ರಾಯಗೆ
ಇಷ್ಟಿಷ್ಟು ಬೆಣ್ಣೆಯ ಕೊಟ್ಟೆನೋ ರಂಗಯ್ಯ

ನೀನ್ಯಾಕೊ ನಿನ್ನ ಹಂಗ್ಯಾಕೊ

ನೀನ್ಯಾಕೊ ನಿನ್ನ ಹಂಗ್ಯಾಕೊ
ನಿನ್ನ ನಾಮದ ಬಲವೊಂದಿದ್ದರೆ ಸಾಕೊ

ಕರಿ ಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗ
ಆದಿ ಮೂಲ ಎಂಬೊ ನಾಮವೆ ಕಾಯ್ತೊ

ಬಾಲೆಯ ಸಭೆಯಲ್ಲಿ ಸೀರೆಯ ಸೆಳೆವಾಗ
ಕೃಷ್ಣ ಕೃಷ್ಣ ಎಂಬೊ ನಾಮವೆ ಕಾಯ್ತೊ

ಆ ಮರ ಈ ಮರ ಧ್ಯಾನಿಸುತಿರುವಾಗ
ರಾಮ ರಾಮ ಎಂಬೊ ನಾಮವೆ ಕಾಯ್ತೊ

ನಿನ್ನ ನಾಮಕೆ ಸರಿ ಕಾಣೆನೊ ಜಗದಲಿ
ಘನ್ನ ಮಹಿಮ ಸಿರಿ ಪುರಂದರ ವಿಠ್ಠಲ

ಯೋಚಿಸಲೊ೦ದಿಷ್ಟು...

೧. ಸದ್ಗುಣಗಳು ತು೦ಬಿರುವ ವ್ಯಕ್ತಿಯ ಸೌ೦ದರ್ಯವನ್ನು ಹೆಚ್ಚಿಸಲು ಮತ್ಯಾವ ಸೌ೦ದರ್ಯ ವರ್ಧಕವೂ ಬೇಕಿಲ್ಲ!

೨. ಒಮ್ಮೆ ಸುಳ್ಳನ್ನು ನುಡಿದು ಕಳೆದುಕೊಳ್ಳಬಹುದಾದ ಸ್ನೇಹಿತನನ್ನು ಮು೦ದೊ೦ದು ದಿನ ಅವನ ಬಳಿ ಸತ್ಯವನ್ನು ನುಡಿದೂ ಅವನನ್ನು ಹಿ೦ತಿರುಗಿ ಕರೆತರಲಾಗದು!

೩. ಸಮಸ್ಯೆಗಳು ಅನಿವಾರ್ಯವಾಗಿರಬಹುದು, ಆದರೆ, ಅವುಗಳ ಮೇಲೆ ಚಿ೦ತೆ ಮಾಡುವುದು, ನಮ್ಮ ಆಯ್ಕೆಗೆ ಬಿಟ್ಟದ್ದು!
೪. ಬದುಕನ್ನು ಬದುಕುವ ರೀತಿಯಲ್ಲಿಯೇ ಬದುಕಿದರೆ ಬದುಕು ಸು೦ದರ!

೫. ಜೀವನಕ್ಕೆ ‘ನಿಲುಗಡೆ‘ ಯಿಲ್ಲ! ಕನಸುಗಳಿಗೆ “ಕೊನೆಯ ದಿನಾ೦ಕ“ ಎ೦ಬುದಿಲ್ಲ! ಅ೦ತೆಯೇ “ಕಾಲ“ಕ್ಕೆ “ರಜೆ“ ಎ೦ಬು ದಿಲ್ಲ! ನಮ್ಮ ಜೀವನದ ಪ್ರತಿಯೊ೦ದು ಕ್ಷಣವೂ ಅಮೂಲ್ಯವಾದುದೇ!

೬. ಹತ್ತಿಯ ಬಟ್ಟೆಯನ್ನು ದು:ಖವೆ೦ಬ ನೀರಿನಲ್ಲಿ ಮುಳುಗಿಸಿದರೂ, ಅದನ್ನು ಗಾಳಿಗೆ ಹರವಲು ಬಿಟ್ಟರೆ, ಅದರಲ್ಲಿನ ನೀರೆಲ್ಲಾ ಒಣಗಿ ಹೋಗುತ್ತದೆ! ಅ೦ತೆಯೇ ಜೀವನವೂ ಕೂಡಾ ಒ೦ದು ಹತ್ತಿ ಬಟ್ಟೆಯ೦ತೆಯೇ!

೭. ಇನ್ನೊಬ್ಬರ ತಪ್ಪುಗಳನ್ನು ಕ೦ಡೂ ಪ್ರತಿಭಟಿಸದೇ ಮೌನವಾಗಿರುವುದೆ೦ದರೆ, ತಪ್ಪು ಮಾಡುವವರಿಗೆ ಮತ್ತಷ್ಟು ಹೆಚ್ಚು ತಪ್ಪುಗಳನ್ನು ಮಾಡಲು ಪ್ರೋತ್ಸಾಹಿಸಿದ೦ತೆಯೇ!

೮. ಜಗತ್ತಿಗೇ ಸೌ೦ದರ್ಯವ೦ತರನ್ನು ಪ್ರೀತಿಸುವ ಬದಲು, ನಮ್ಮ ಬಾಳನ್ನು ಸು೦ದರಗೊಳಿಸಿದವರನ್ನು ಪ್ರೀತಿಸುವುದೇ ಉತ್ತಮ!

೯. ಯಾರು ನಿಮ್ಮನ್ನು ಸೆಳೆಯಲು ಪ್ರಯತ್ನಿಸುತ್ತಾರೆಯೋ, ಅವರಾಗಲೇ ನಿಮ್ಮಿ೦ದ “ಆಕರ್ಷಿತ“ ರಾಗಿದ್ದಾರೆ೦ದು ಅರ್ಥ!

೧೦. ಇನ್ನೊಬ್ಬರ ಹೃದಯದಲ್ಲಿ ನಾವು ನೆಲೆಸುವುದೆ೦ದರೆ ಅದು ನಮ್ಮ ಮಹಾನ್ ಸಾಧನೆಯೇ!

೧೧. ವ್ಯಕ್ತಿಯೊಬ್ಬನನ್ನು ಹೇಗಿದ್ದಾನೆಯೋ ಹಾಗೆಯೇ ಒಪ್ಪಿಕೊ೦ಡು ಬಿಟ್ಟರೆ, ಆ ವ್ಯಕ್ತಿಯು ನಮ್ಮ ನಿರೀಕ್ಷೆಯನ್ನೂ ಮೀರಿ ನಮ್ಮನ್ನು ಪ್ರತಿದಿನವೂ ಆಶ್ಚರ್ಯಗೊಳಿಸುತ್ತಲೇ ಹೋಗುತ್ತಾನೆ!!

೧೨.“ಭಯ“ ವೆ೦ಬುದೇ ಎಲ್ಲ ವಿಫಲತೆಗಳ ಹಿ೦ದಿನ ಕಾರಣವಾದರೆ “ ಭರವಸೆ“ ಯೆ೦ಬುದು ಎಲ್ಲ ಗೆಲುವುಗಳ ಹಿ೦ದಿನ ಮರ್ಮ!

೧೩. ನಾವು ಬೇರೊಬ್ಬರ ಜೀವನದಲ್ಲಿನ ಸ೦ತಸದ ಘಳಿಗೆಗಳನ್ನು ಬರೆಯಬಹುದಾದ ಸೀಸದಕಡ್ಡಿಗಳಾಗದಿದ್ದರೂ, ಅವರ ದು:ಖ ವನ್ನು ಅಳಿಸಿಹಾಕುವ “ರಬ್ಬರ್“ ಗಳ೦ತೂ ಆಗಬಹುದಲ್ಲ!

೧೪.ಸತತ ಪರಿಶ್ರಮವು ಎ೦ತಹ “ವಿಫಲತೆ“ ಯನ್ನೂ ಮೆಟ್ಟಿನಿಲ್ಲುವ ಏಕೈಕ ಔಷಧ!

೧೫. ನೋವನ್ನು ಹೇಗೆ ತಡೆದುಕೊಳ್ಳಬಹುದೆ೦ಬ ಅರಿವಿದ್ದವರಿಗೆ “ಜೀವನ“ ವೆನ್ನುವುದು ನಿತ್ಯನೂತನವಾಗಿಯೇ ಗೋಚರಿಸಲ್ಪಡು ತ್ತದೆ!

ವೇದಸುದೆ ಬ್ಲಾಗನಿಂದ

Thursday, March 24, 2011

ನಾ ನಿನ್ನ ಧ್ಯಾನದೊಳಿರಲು ಮಿಕ್ಕ

ನಾ ನಿನ್ನ ಧ್ಯಾನದೊಳಿರಲು ಮಿಕ್ಕ
ಹೀನ ಮಾನವರೇನು ಮಾಡಬಲ್ಲರೊ ರಂಗ

ಮತ್ಸರಿಸುವರೆಲ್ಲ ಕೂಡಿ ಮಾಡುವರೇನು
ಅಚ್ಯುತ ನಿನ್ನ ದಯೆಯೆನ್ನೊಳಿರಲು
ವಾತ್ಸಲ್ಯ ಬಿಡದಿರು ನಿನ್ನ ನಂಬಿದೆ ದೇವ
ಕಿಚ್ಚಿಗೆ ಇರುವೆ ಮುತ್ತುವುದೆ ಕೇಳೆಲೊ ರಂಗ

ಧಾಳಲಿ ಕುದುರೆ ವೈಯಾರದಿ ಕುಣಿಯಲು
ಧೂಳು ರವಿಯ ತಾ ಮುತ್ತುವುದೆ
ತಾಳಿದವರ ವಿರುದ್ಧ ಲೋಕದೊಳಗುಂಟೆ
ಗಾಳಿಗೆ ಗಿರಿಯು ಅಲ್ಲಾಡಬಲ್ಲದೆ

ಕನ್ನಡಿಯೊಳಗಣ ಗಂಟು ಕಂಡು ಕಳ್ಳ
ಕನ್ನವಿಕ್ಕಲವನ ವಶವಹುದೆ
ನಿನ್ನ ನಂಬಲು ಮುದ್ದು ಪುರಂದರ ವಿಠ್ಠಲ
ಚಿನ್ನಕ್ಕೆ ಪುಟವನಿಟ್ಟಂತೆ ಅಹುದೋ ರಂಗ

ನಾ ಮಾಡಿದ ಕರ್ಮ ಬಲವಂತವಾದರೆ

ನಾ ಮಾಡಿದ ಕರ್ಮ ಬಲವಂತವಾದರೆ
ನೀ ಮಾಡುವುದೇನೋ ದೇವ

ಸಾಮಾನ್ಯವಲ್ಲಿದು ಬ್ರಹ್ಮ ಬರೆದ ಬರಹ
ನೇಮದಿಂದಲಿ ಎನ್ನ ಹಣೆಯಲ್ಲಿ ಬರೆದುದಕೆ

ಅತಿಥಿಗಳಿಗೆ ಅನ್ನ ಕೊಟ್ಟವನಲ್ಲ ಪರ
ಸತಿಯರ ಸಂಘಗಳ ಬಿಟ್ಟವನಲ್ಲ
ಮತಿಹೀನ ನಾನಾಗಿ ಮರುಳಾಗಿದ್ದೆನೊ ದೇವ
ಗತಿಯಾವುದಿನ್ನು ಗರುಡ ಗಮನ ಕೃಷ್ಣ

ಅನ್ನಪಾನಂಗಳಿಗೆ ಅಗ್ರಗಣ್ಯನಾಗಿ
ಸ್ನಾನ ಸಂಧ್ಯಾದಿ ಜಪ ತಪವ ನೀಗಿ
ದಾನವಾಂತಕ ನಿನ್ನ ಧ್ಯಾನವ ಮಾಡದೆ
ಶ್ವಾನನಂತೆ ಮನೆ ಮನೆ ತಿರುಗತಲಿದ್ದೆ

ಇನ್ನಾದರೂ ನಿನ್ನ ದಾಸರ ಸಂಘವಿತ್ತು
ಮನ್ನಿಸಿ ಸಲಹಯ್ಯ ಮನ್ಮಥ ಜನಕ
ಅನ್ಯರೊಬ್ಬರ ಕಾಣೆ ಆಧರಿಸುವರಿಲ್ಲ
ಪನ್ನಗಶಯನ ಪುರಂದರ ವಿಠ್ಠಲ

Wednesday, March 23, 2011

ದುಗ್ಗಾಣಿ ಎಂಬೊದು....

ದುಗ್ಗಾಣಿ ಎಂಬೊದು ದುರ್ಜನ ಸಂಘ
ದುಗ್ಗಾಣಿ ಬಲು ಕೆಟ್ಟದಣ್ಣ

ಆಚಾರ ಹೇಳೋದು ದುಗ್ಗಾಣಿ
ಬಲು ನೀಚರ ಮಾಡೋದು ದುಗ್ಗಾಣಿ
ನಾಚಿಕೆಯಿಲ್ಲದೆ ಮನೆ ಮನೆ ತಿರುಗಿ
ಛೀ ಛೀ ಎನಿಸೋದು ದುಗ್ಗಾಣಿಯಣ್ಣ
(ದುಗ್ಗಾಣಿ ಎಂಬೊದು ..)

ನೆಂಟತನ ಹೇಳೋದು ದುಗ್ಗಾಣಿ
ಬಹುನೆಂಟರನೊಲಿಸುವುದು ದುಗ್ಗಾಣಿ
ಒಂಟೆ ಹಾಂಗೆ ಮೋರೆ ಮೇಲಕ್ಕೆ ಸೆಳಕೊಂಡು
ಕುಂಟನೆನಿಸೋದು ದುಗ್ಗಾಣಿಯಣ್ಣ
(ದುಗ್ಗಾಣಿ ಎಂಬೊದು ..)

ಮಾನವ ಹೇಳೋದು ದುಗ್ಗಾಣಿ
ಮಾನ ಹದೆಗೆಡಿಸೋದು ದುಗ್ಗಾಣಿ
ಬಹುಮಾನ ನಿಧಿ ಶ್ರೀ ಪುರಂದರ ವಿಠ್ಠಲನ
ಕಾಣಿಸದಿರುವುದು ದುಗ್ಗಾಣಿಯಣ್ಣ
(ದುಗ್ಗಾಣಿ ಎಂಬೊದು ..)

ತೇಲಿಸೊ ಇಲ್ಲ ಮುಳುಗಿಸೊ ನಿನ್ನ

ತೇಲಿಸೊ ಇಲ್ಲ ಮುಳುಗಿಸೊ ನಿನ್ನ
ಕಾಲಿಗೆ ಬಿದ್ದೇನೊ ಪರಮ ಕೃಪಾಳೊ || ಪ ||

ಸತಿಸುತ ಧನದಾಸೆ ಎಂದೆಂಬ ಮೋಹದಿ
ಹಿತದಿಂದ ಅತಿ ನೊಂದು ಬೆಂಡಾದೆನೊ
( ಗತಿಕೊಡುವರ ಕಾಣೆ ಮತಿಯ ಪಾಲಿಸೊ ) ೨ ಲಕ್ಷ್ಮೀ
ಪತಿ ನಿನ್ನ ಚರಣದ ಸ್ಮರಣೆ ಇತ್ತೆನಗೆ || ೧ ||

ಜರೆ ರೋಗ ದಾರಿದ್ರ್ಯ ಕಶ್ಮಲವೆಂತೆಂಬ
ಶರಧಿಯೊಳಗೆ ಬಿದ್ದು ಮುಳುಗಿದೆನೊ
ಸ್ಥಿರವಲ್ಲ ದೇಹವು ನೆರೆನಂಬಿದೆನು
ಸ್ಥಿರವಲ್ಲ ದೇಹವು ನೆರೆನಂಬಿದೆ ನಿನ್ನ
ಕರುಣಾಭಯವಿತ್ತು ಪಾಲಿಸೊ ಹರಿಯೆ || ೨ ||

ದೋಷವುಳ್ಳವ ನಾನು ಭಾಷೆಯುಳ್ಳವ ನೀನು
ಮೋಸ ಹೋದೆನು ಭಕ್ತಿ ರಸವ ಬಿಟ್ಟು
(ಶೇಷಶಯನ ಶ್ರೀ ಪುರಂದರ ವಿಠ್ಠಲನ ) ೨
ದಾಸರ ಸಂಗವಿತ್ತು ಪಾಲಿಸೊ ಹರಿಯೆ || ೩ ||

Tuesday, March 22, 2011

ಅಕ್ಕಮಹಾದೇವಿ

ಅಕ್ಕಮಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ,ಸ್ತ್ರಿವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಹೀಗೆ ಹಲವು ರೀತಿ ಗುರುತಿಸಬಹುದಾಗಿದೆ. ಕಿರಿಯ ವಯಸ್ಸಿನಲ್ಲಿ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು. ಸಾಕ್ಷಾತ್ ಶಿವ ( ಮಲ್ಲಿಕಾರ್ಜುನ)ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕ, ಹಲವಾರು ಭಕ್ತರಿಗೆ ಮಾದರಿಯಾಗಿದ್ದಾಳೆ.
 ಜೀವನ

ಶಿವಶರಣೆ ಅಕ್ಕಮಹಾದೇವಿಯವರು ಜನಿಸಿದ್ದು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ-ಶಿರಾಳಕೊಪ್ಪದ ನಡುವೆ ಇರುವ ಉಡುತಡಿ ಅಥವಾ ಉಡಗಣಿ ಅಥವಾ ಉಡುಗಣಿ ಎಂದೇ ಪ್ರಸಿದ್ದವಾಗಿರುವ ಪುಟ್ಟ ಗ್ರಾಮದಲ್ಲಿ. ಇದು ಶಿಕಾರಿಪುರದಿಂದ ಸುಮಾರು 15 ಕಿ.ಮಿ. ಹಾಗೂ ಶಿರಾಳಕೊಪ್ಪದಿಂದ 4 ಕಿ.ಮಿ.ದೂರದಲ್ಲಿದೆ. ಇದೀಗ ಇದು ಪ್ರವಾಸಿ ತಾಣವಾಗಿಯೂ ಪ್ರಸಿದ್ದವಾಗಿದೆ. ಪರರ ಪಾಲಾಗಿದ್ದ ಇಲ್ಲಿರುವ ಕೌಶಿಕ ಮಹಾರಾಜರ ಕೋಟೆ ಹಾಗೂ ಅಕ್ಕನ ದೇವಸ್ಥಾನ ಇರುವ ಜಮೀನನ್ನು ಉಳಿಸಲು ಪ್ರಯತ್ನಿಸಿ, ಹೋರಾಟ ನಡೆಸಿ, ಯಶಸ್ವಿಯಾಗಿದ್ದು ಸಿರಿಗೆರೆಯ ಶ್ರೀಗಳಾಗಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರು ಹಾಗೂ ಹಿರೇಜಂಬೂರಿನ ಸ್ವಾತಂತ್ರ ಹೋರಾಟಗಾರ ದಿವಂಗತ ಶ್ರೀ ಶಿವನಗೌಡ ಪಾಟೀಲರು. ಇದನ್ನು ಇವರು ಉಳಿಸಿಕೊಟ್ಟ ನಂತರ ಸರಕಾರ ಇತ್ತ ಗಮನ ಹರಿಸಿ,ಅದರ ಅಭಿವೃದ್ದಿಗೆ ಮುಂದಾಗಿದೆ. ಇಂತಹ ಉಡುತಡಿಯಿಂದ ಎಲ್ಲವನ್ನೂ ತ್ಯಜಿಸಿ ಹೊರಟ ಅಕ್ಕಮಹಾದೇವಿಯವರು ಮುಂದೆಬಸವ ಕಲ್ಯಾಣದ ಅನುಭವ ಮಂಟಪದಲ್ಲಿ ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣ, ಸಿದ್ಧರಾಮೇಶ್ವರ ಮೊದಲಾದ ಶರಣರೊಡನೆ ಕಲ್ಯಾಣದ ಕ್ರಾಂತಿಯಲ್ಲಿ ತಮ್ಮನ್ನು ತೊಡಗಿಸಿದರಲ್ಲದೇ, ಚನ್ನಮಲ್ಲಿಕಾರ್ಜುನ ಎಂಬ ಅಂಕಿತದಲ್ಲಿ ವಚನ ಸಾಹಿತ್ಯಕ್ಕೆ (ಶರಣ ಸಾಹಿತ್ಯ) ತಮ್ಮದೇ ಆದ ಸಾಹಿತ್ಯಸೇವೆಯನ್ನು ಸಲ್ಲಿಸಿದ್ದಾರೆ.

ಅಕ್ಕನ ಅನುಭಾವಿಕ ಜೀವನ

ಅಕ್ಕಮಹಾದೇವಿ ಶರಣ ಚಳುವಳಿಯಲ್ಲಿ ,ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವ .ಅವರ ಇಡೀ ಜೀವನ ಕಥನ , ಐತಿಹ್ಯಗಳಿಂದ, ವಿಸ್ಮಯಗಳಿಂದ , ಪ್ರಭಾವಳಿಗಳಿಂದ ತುಂಬಿದ್ದರೂ ಸಹ, ಅವರ ಬಗ್ಗೆ ಅವರ ಸಮಕಾಲೀನ ವಚನಕಾರರೂ; ಅಕ್ಕನ ಕಾಲಕ್ಕೆ ತುಂಬಾ ಹತ್ತಿರದವನಾದ ಹರಿಹರ ಮಹಾಕವಿಯು ರಚಿಸಿರುವ 'ಮಹಾದೇವಿಯಕ್ಕಗಳ ರಗಳೆ'ಮತ್ತು ಸ್ವತಹ ಅಕ್ಕಮಹಾದೇವಿಯವರೇ ರಚಿಸುವ ವಚನಗಳೂ , ಅವರ ವ್ಯಕ್ತಿತ್ವವನ್ನು ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ .ಈ ಎಲ್ಲವನ್ನೂ ಗಮನಿಸಿದಾಗ ಅಕ್ಕಮಹಾದೇವಿಯವರ ಜೀವನ ಅಸಾಮಾನ್ಯವಾದ , ವೈಶಿಷ್ಟ್ಯತೆಯಿಂದ, ವೈಚಾರಿಕವಾದ, ಅನುಭಾವಪೂರ್ಣವಾದ , ನುಡಿ,ನಡೆಗಳೊಂದಾದ ಪರಿಯಲ್ಲಿರುವುದು ಕಂಡು ಬರುತ್ತದೆ .

ವಚನ ಚಳುವಳಿಯ ಸಮಯದಲ್ಲಿ , ಸಾಹಿತ್ಯದ ದೃಷ್ಟಿಯಿಂದ ಗಮನಿಸುವುದಾದರೆ ,ಅಲ್ಲಮ ಮತ್ತು ಅಕ್ಕ ,ಅಂದಿನ ಅತ್ಯಂತ ವಿಶಿಷ್ಟ ಸಂವೇದನೆಯ ವ್ಯಕ್ತಿತ್ವದವರಾಗಿ ಗಮನ ಸೆಳೆಯುತ್ತಾರೆ. ಅನುಭಾವಿಯೂ , ಕವಿಯೂ ಆಗಿದ್ದ ಅಕ್ಕಮಹಾದೇವಿಯವರ ವಚನಗಳು ,ಕನ್ನಡ ಸಾಹಿತ್ಯದ ಮೌಲಿಕ ಬರವಣಿಗೆಗಳಾಗಿವೆ .ವಚನಕಾರರಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಪ್ರತಿಭೆಯಾಗಿದ್ದರೂ ಸಹ , ವಿಶಿಷ್ಟ ಜೀವನಾನುಭವವನ್ನು ಹೊಂದಿದ ಕಾರಣದಿಂದ, ಅವರ ಬರಹಗಳು ಗಮನಾರ್ಹವಾಗಿವೆ . ಉದಾ: 'ಲೋಕದ ಚೇಷ್ಟೆಗೆ ರವಿ ಬೀಜವಾದಂತೆ, ಕರಣಂಗಳ ಚೇಷ್ಟೆಗೆ ಮನಸ್ಸು ಬೀಜ', 'ಬೆಟ್ಟದಾ ಮೇಲೊಂದು ಮನೆಯ ಮಾಡಿ , ಮೃಗಗಳಿಗೆ ಅಂಜಿದೊಡೆಂತಯ್ಯಾ' , 'ಹಸಿವಾದರೆ ಭಿಕ್ಷಾನ್ನಗಳುಂಟು, ತೃಷೆಯಾದರೆ ಕೆರೆ ಹಳ್ಳಗಳುಂಟು' ಮುಂತಾದ ವಚನಗಳು ಅವರ ಲೋಕಾನುಭವ , ಜ್ಝಾನ ಸಂಪನ್ನತೆ , ಅಭಿವ್ಯಕ್ತಿ ಸಾಮರ್ಥ್ಯಕ್ಕೆ ನಿದರ್ಶನಗಳಾಗಿವೆ .

ಶೂನ್ಯ ಸಂಪಾದನೆಕಾರರು 'ಮಹಾದೇವಿಯಕ್ಕಗಳ ಸಂಪಾದನೆ' ಎಂಬ ಒಂದು ಅಧ್ಯಾಯವನ್ನೇ ರಚಿಸಿ, ಅವರಿಗೆ ಗೌರವ ತೋರಿದ್ದಾರೆ .ಹರಿಹರ ಮಹಾಕವಿಯ ಮಹಾದೇವಿಯಕ್ಕಗಳ ರಗಳೆ, ಇಪ್ಪತ್ತನೆಯೆ ಶತಮಾನದ ನವೋದಯ ಕಾಲದ ಸಾಹಿತಿ ಎಚ್.ತಿಪ್ಪೇರುದ್ರಸ್ವಾಮಿಯವರ 'ಕದಳಿಯ ಕರ್ಪುರ' ಅಕ್ಕನವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಸಮರ್ಥ ಬರಹಗಳು .

ಅಕ್ಕಮಹಾದೇವಿಯವರ ಜೀವನದಲ್ಲಿ ನಿರ್ಣಾಯಕ ಘಟನೆಗಳಲ್ಲಿ , ಪ್ರಮುಖವಾದವುಗಳು ಈ ಎರಡು , ಒಂದನೆಯದು: ಅಧಿಕಾರ,ಸಂಪತ್ತು, ವೈಭವ, ಆಡಂಬರ, ಭೋಗ ಜೀವನಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ ,ಈ ಎಲ್ಲ ಬಂಧನಗಳಿಂದ ಬಿಡುಗಡೆ ಪಡೆದು ,ಸಾಮಾನ್ಯರಲ್ಲಿ ಸಾಮಾನ್ಯಳಂತೆ ಜನ ಜೀವನದಲ್ಲಿ ಬೆರೆತುದು; ಇದಕ್ಕಾಗಿ ಅರಸೊತ್ತಿಗೆಯನ್ನು ಎದುರು ಹಾಕಿಕೊಳ್ಳಲು ಹಿಂಜರಿಯದಿದ್ದುದು .ಎರಡನೆಯದು : ಶರಣ ಚಳುವಳಿಯಲ್ಲಿ ಭಾಗವಹಿಸಲು ನಿರ್ಣಯಿಸಿ , ಅನುಭವ ಮಂಟಪವನ್ನು ಪ್ರವೇಶ ಮಾಡಿದುದು , ಅಕ್ಕನವರ ಅನುಭವ ಮಂಟಪದ ಪ್ರವೇಶದ ಮೊದಲ ದಿನವನ್ನು ಸ್ಮರಿಸದ ಶರಣ ಸಾಹಿತ್ಯಕಾರನಿಲ್ಲ ,ಎನ್ನುವಷ್ಟು ಅಪೂರ್ವ ಸ್ವಾಗತ ಆಕೆಗೆ ಶರಣರಿಂದ ದೊರಕಿತು, ಅಲ್ಲಿ ಅಲ್ಲಮಪ್ರಭು ಮತ್ತು ಅಕ್ಕನವರ ನಡುವೆ ನಡೆಯಿತೆನ್ನಲಾದ ಸಂಭಾಷಣೆಯೆಂಬುದು ; ಅನುಭಾವದ ಉತ್ತುಂಗದ ಋಷಿ ವಾಣಿಯ ರೂಪದಲ್ಲಿ ವಚನಗಳಲ್ಲಿ ಸಂಗ್ರಹಿತವಾಗಿದೆ.
 ಲಿಂಗ್ಯಕ್ಯ

ಕೊನೆಗೆ ತನ್ನ ಇಷ್ಟದೈವ ಮಲ್ಲಿಕಾರ್ಜುನನಲ್ಲಿ ಶ್ರಿಶೈಲದ ಕದಳಿವನದಲ್ಲಿ ಐಕ್ಯರಾದರು ಅಕ್ಕಮಹಾದೇವಿ.

ರಾಘವಾಂಕ

ರಾಘವಾಂಕ ಕವಿಯು ಕ್ರಿ.ಶ.೧೨ನೆಯ ಶತಮಾನದ ಉತ್ತರಾರ್ಧದಲ್ಲಿ ಹಾಗು ೧೩ನೆಯ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ್ದ ಕವಿ.

ಈತನು ಹರಿಹರನ ಸೋದರಳಿಯ.ಹರಿಹರನೂ,ರಾಘವಾಂಕನೂ ಕನ್ನಡ ಸಾಹಿತ್ಯಚರಿತ್ರೆಯಲ್ಲಿ ನೂತನ ಯುಗಪ್ರವರ್ತಕರೆಂದು ಹೆಸರಾಗಿದ್ದಾರೆ.ಕನ್ನಡ ಸಾಹಿತ್ಯದಲ್ಲಿ ಷಟ್ಪದೀ ಪ್ರಕಾರವನ್ನು ಪ್ರವರ್ತನಗೊಳಿಸಿದ ಕೀರ್ತಿ ರಾಘವಾಂಕನಿಗೆ ಸಲ್ಲುತ್ತದೆ.

ಕೃತಿಗಳು :   ರಾಘವಾಂಕನ ಕಾವ್ಯಗಳು ಆರು.

೧.ಹರಿಶ್ಚಂದ್ರ ಕಾವ್ಯ.

೨.ಸಿದ್ಧರಾಮ ಪುರಾಣ

೩.ಸೋಮನಾಥ ಚರಿತೆ

೪. ವೀರೇಶ ಚರಿತೆ

೫.ಶರಭ ಚಾರಿತ್ರ

೬.ಹರಿಹರ ಮಹತ್ವ - ಈ ಕೃತಿ ಇನ್ನೂ ಸಿಕ್ಕಿಲ್ಲ.

ಹರಿಶ್ಚಂದ್ರ ಕಾವ್ಯವು ರಾಘವಾಂಕ ಕವಿಯ ಪ್ರಸಿದ್ಧ ಕಾವ್ಯವಾಗಿದೆ.





ಗುರುವಿನ ಗುಲಾಮನಾಗುವ ತನಕ

ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ
ಪರಿ ಪರಿ ಶಾಸ್ತ್ರವನೋದಿದರೇನು
ವ್ಯರ್ಥವಾಯ್ತು ಭಕುತಿ

ಆರು ಶಾಸ್ತ್ರವ ಓದಿದರಿಲ್ಲ
ಮೂರು ಪುರಾಣವ ಮುಗಿಸಿದರಿಲ್ಲ
ಸಾರ ನ್ಯಾಯ ಕಥೆಗಳ ಕೇಳಿದರಿಲ್ಲ
ಧೀರನಾಗಿ ತಾ ಪೇಳಿದರಿಲ್ಲ

ಕೊರಳೊಳು ಮಾಲೆ ಧರಿಸಿದರಿಲ್ಲ,
ಬೆರಳೊಳು ಜಪಮಣಿ ಜಪಿಸಿದರಿಲ್ಲ
ಮರುಳನಾಗಿ ಶರೀರಕೆ ಬೂದಿ
ಒರೆಸಿಕೊಂಡು ತಾ ತಿರುಗಿದರಿಲ್ಲ

ನಾರಿಯ ಭೋಗ ಅಳಿಸಿದರಿಲ್ಲ
ಶಾರೀರಿಕ ಸುಖವ ಬಿಡಿಸಿದರಿಲ್ಲ
ನಾರದವರದ ಪುರಂದರ ವಿಠ್ಠಲನ
ಸೇರಿಕೊಂಡು ತಾ ಪಡೆಯುವ ತನಕ

Monday, March 21, 2011

ಹರಿಹರ

ಹರಿಹರನು ೧೨ನೆಯ ಶತಮಾನದ ಉತ್ತರಾರ್ಧದಲ್ಲಿದ್ದ ವೀರಶೈವ ಕವಿ. ಈತನ ಸೋದರಳಿಯನೆ ರಾಘವಾಂಕ. ಹರಿಹರನು ಕೆಲವು ಕಾಲ ಬಲ್ಲಾಳ ರಾಜನಲ್ಲಿ ಕರಣಿಕನಾಗಿದ್ದು, ಆ ಬಳಿಕ ಹಂಪೆಗೆ ಬಂದು ನೆಲೆಸಿದನು.

ಹರಿಹರನು ಗಿರಿಜಾಕಲ್ಯಾಣ ಎಂಬ ಚಂಪೂಕಾವ್ಯವನ್ನೂ, ಪಂಪಾಶತಕ, ರಕ್ಷಾಶತಕ, ಮುಡಿಗೆಯ ಆಷ್ಟಕ ಮತ್ತು ಅನೇಕ ಶಿವಶರಣರ ರಗಳೆಗಳನ್ನೂ ರಚಿಸಿದ್ದಾನೆ. ಅಲ್ಲದೆ "ರಗಳೆಗಳ ಕವಿ" ಎಂದೆ ಪ್ರಸಿದ್ಧನಾಗಿದ್ದಾನೆ. ಹನ್ನೆರಡನೆಯ ಶತಮಾನದ ಬಹು ಮಹತ್ವದ ಶರಣ ಚಳವಳಿ ಮತ್ತು ವಚನ ಸಾಹಿತ್ಯದ ಪ್ರಭಾವವು ಹರಿಹರನ ಮೇಲೆ ದಟ್ಟವಾಗಿದೆ. ಮೂಲತಃ ಆತನು ಭಕ್ತ ಕವಿ. ಆತನ ಕಾವ್ಯದ ತುಂಬ ಭಕ್ತಿಯು ಓತಪ್ರೋತವಾಗಿ ಹರಿದಿದೆ. ಹರಿಹರನ ಎರಡೂ ಶತಕಗಳಲ್ಲಿ ಆತನು ಹಂಪೆಯ ಶ್ರೀ ವಿರೂಪಾಕ್ಷನಲ್ಲಿ ತಳೆದಿರುವ ಭಕ್ತಿಯು ಎದ್ದು ಕಾಣುತ್ತದೆ. ಅಂತೆಯೇ ಆತನ ಶಿವಗಣದ ರಗಳೆಗಳಲ್ಲಿ ಶಿವಶರಣರ ಶಿವಭಕ್ತಿಯ ಉಜ್ವಲ ಚಿತ್ರಣವಿದೆ.

ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ ಹರಿಹರನು ಕನ್ನಡದ ಮುಖ್ಯ ಕವಿಗಳಲ್ಲಿ ಒಬ್ಬ. ತನ್ನ ಕಾವ್ಯವಸ್ತುವಿಗಾಗಿ, ಸಂಸ್ಕೃತ ಮತ್ತು ಪ್ರಾಕೃತ ಮೂಲಗಳನ್ನು ಬಿಟ್ಟು ತಮಿಳು ಮೂಲವನ್ನು ಆರಿಸಿಕೊಂಡವರಲ್ಲಿ ಹರಿಹರನೇ ಮೊದಲಿಗ. ಹನ್ನೊಂದನೆಯ ಶತಮಾನದಲ್ಲಿ ಶೆಕ್ಕಿಯಾರ್ ಎನ್ನುವವರು ರಚಿಸಿದ ಪೆರಿಯಪುರಾಣವು ಹರಿಹರನಿಗೆ ಪುರಾತನ ಶಿವಗಣದ ರಗಳೆಗಳನ್ನು ಬರೆಯಲು ಆಕರವಾಯಿತು. ಪೆರಿಯ ಪುರಾಣ ಎಂದರೆ ದೊಡ್ಡ ಕಥೆ ಎಂದು ಅರ್ಥ. ತಿರುತ್ತೊಂಡರ್ ಪುರಾಣಂ ಎನ್ನುವುದು ಅದರ ಇನ್ನೊಂದು ಹೆಸರು. ಅದು ಚೋಳದೇಶದ ಹಿರಿಯ ಶೈವ ಸಂತರಾದ ನಾಯನಾರರುಗಳ ಜೀವನಚಿತ್ರಗಳನ್ನು ಕೊಡುತ್ತದೆ. ಅದು ಪಶ್ಚಿಮ ಏಷಿಯಾದ ದೇಶಗಳೊಂದಿಗೆ ನಮಗಿದ್ದ ವಾಣಿಜ್ಯ ಸಂಬಂಧಗಳಿಗೆ ಪುರಾವೆ ನೀಡುತ್ತದೆ. ಮಧ್ಯ ಕರ್ನಾಟಕದಲ್ಲಿದ್ದ ಹರಿಹರನಿಗೆ ಈ ಕಾವ್ಯವು ಅದು ಪ್ಕಟವಾದ ಹೊಸತರಲ್ಲಿಯೇ ಸಿಕ್ಕಿತ್ತೆನ್ನುವುದು ಕುತೂಹಲಕಾರಿಯಾದ ಸಂಗತಿ. ಹರಿಹರನ ಈ ತೀರ್ಮಾನದ ಪರಿಣಾಮವಾಗಿ, ಅವನ ರಗಳೆಗಳ ಸ್ಥಳ, ಜೀವನ ವಿವರಗಳು ಮತ್ತು ನಿರೂಪಣ ವಿಧಾನಗಳು ಸಂಪೂರ್ಣವಾಗಿ ಬದಲಾಗುತ್ತವೆ. ಅವು ದ್ರಾವಿಡ ಜೀವನಶೈಲಿಗೆ ನಿಕಟವಾಗುತ್ತವೆ. ಪುರಾತನರ ರಗಳೆಗಳ ವಿಚಾರದಲ್ಲಂತೂ ಈ ಮಾತು ಇನ್ನಷ್ಟು ನಿಜ. ಬದಲಾಗಿ ನೂತನರ ರಗಳೆಗಳು ಮಧ್ಯಕಾಲೀನ ಕರ್ನಾಟಕದ ಜೀವನಕ್ರಮಕ್ಕೆ ಕನ್ನಡಿ ಹಿಡಿಯುತ್ತವೆ. ಅಲ್ಲಿನ ವಿವರಗಳನ್ನು ಎಚ್ಚರಿಕೆಯಿಂದ ಗಮನಿಸಿ,ಸಂವೇದನಶೀಲವಾಗಿ ಚಿತ್ರಿಸಲಾಗಿದೆ.
ಹರಿಹರನು ತನ್ನ ಗಿರಿಜಾಕಲ್ಯಾಣದಲ್ಲಿ ಚಂಪೂ ಶೈಲಿಗೆ ಮತ್ತು ಹಳಗನ್ನಡಕ್ಕೆ ವಿದಾಯ ಹೇಳುತ್ತಾನೆ. ಅವನ ರಗಳೆಗಳು ನಡುಗನ್ನಡ ಅಥವಾ ಮಧ್ಯಕಾಲೀನ ಕನ್ನಡದಲ್ಲಿ ಪರಿಣಾಮಕಾರಿಯಾಗಿ ರಚಿತವಾಗಿವೆ. ಅವನ ಶೈಲಿಯು ವಾತಾವರಣ ಸೃಷ್ಟಿಗೆ ಸಹಾಯಕವಾಗಿದ್ದು, ಸಂಸ್ಕೃತ ಪದಗಳ ಬಳಕೆಯು ಬಹಳ ಕಡಿಮೆಯಾಗಿದೆ. ತನ್ನ ಕಾವ್ಯಗಳ ವಸ್ತು ಮತ್ತು ಆಕೃತಿಗಳೆರಡನ್ನೂ ಬದಲಿಸುವುದರಲ್ಲಿ ಅವನು ತೋರಿಸಿರುವ ಧೈರ್ಯವು ಮೆಚ್ಚುವಂತಹುದು. ಅವನ ಮೇಲೆ ಹನ್ನೆರಡನೆಯ ಶತಮಾನದ ಶಿವಶರಣರ ಹಾಗೂ ವಚನ ಸಾಹಿತ್ಯದ ದಟ್ಟವಾದ ಪ್ರಭಾವವಿದೆ. ಈ ರಗಳೆಗಳಲ್ಲಿ, ಪ್ರಾಯಶಃ ಕನ್ನಡ ಸಾಹಿತ್ಯದಲ್ಲಿಯೇ ಮೊದಲ ಬಾರಿಗೆ, ಶ್ರೀ ಸಾಮಾನ್ಯನ ಬದುಕು ಕೇಂದ್ರಸ್ಥಾನವನ್ನು ಪಡೆಯುತ್ತದೆ. ಕುಂಬಾರ, ಕೃಷಿಕ, ಬೇಟೆಗಾರ, ಚಮ್ಮಾರ, ಅಗಸ ಮತ್ತು ಬೆಸ್ತರು ಹರಿಹರನ ಪ್ರಸಿದ್ಧವಾದ ರಗಳೆಗಳ ಕೇಂದ್ರ ಪಾತ್ರಗಳು. ಶಿವಭಕ್ತಿಯೆನ್ನುವುದು ಅವರೆಲ್ಲರನ್ನೂ ಒಗ್ಗೂಡಿಸುವ ಸೂತ್ರ. ಅವರೆಲ್ಲರೂ ಯಾವುದೇ ಪುರೋಹಿತರ ಮಧ್ಯಪ್ರವೇಶವಿಲ್ಲದೆ ಶಿವನ ಅನುಗ್ರಹವನ್ನು ಪಡೆಯಬಲ್ಲರೆನ್ನುವುದು ಮಹತ್ವದ ಸಂಗತಿ. ಹರಿಹರನ ಈ ದಿಟ್ಟತನವನ್ನು ಅವನ ನಂತರ ಬಂದ ಕವಿಗಳು ಮುಂದುವರಿಸಲಿಲ್ಲವೆನ್ನುವುದು ದುರದೃಷ್ಟದ ಸಂಗತಿ.

ಹರಿಹರನ ಮತ್ತೊಂದು ಮಹತ್ವದ ಸಾಧನೆಯೆಂದರೆ, ತನ್ನ ಪಾತ್ರಗಳ ಬಹಳ ವಾಸ್ತವಿಕವಾದ ಚಿತ್ರಣ ಮತ್ತು ಅವುಗಳನ್ನು ದೈವೀಕರಣಗೊಳಿಸುವ ಹಂಬಲಗಳ ನಡುವೆ ಅವನು ತಂದುಕೊಂಡಿರುವ ಸಮತೋಲನ.ಅವನ ಮಹತ್ವದ ಕೃತಿಗಳಾದ ಬಸವರಾಜದೇವರ ರಗಳೆ ಮತ್ತು ನಂಬಿಯಣ್ಣನ ರಗಳೆಗಳು ಈ ಕೆಲಸವನ್ನು ಯಶಸ್ವಿಯಾಗಿ ನೆರವೇರಿಸಿವೆ.ತಮ್ಮ ಕಥನಾಯಕರನ್ನು ನೂರಕ್ಕೆ ನೂರರಷ್ಟು ದೈವೀಕರಿಸಿದ ಅವನ ಉತ್ತರಾಧಿಕಾರಿಗಳಿಗೆ ಹೋಲಿಸಿದಾಗ ಅವನ ಮಹತ್ವವು ನಿಚ್ಚಳವಾಗುತ್ತದೆ.ಹರಿಹರನು ಗದ್ಯ ಮತ್ತು ಪದ್ಯಗಳೆರಡರ ಬಳಕೆಯಲ್ಲಿಯೂ ಸಮರ್ಥನಾಗಿದ್ದನು. ಬಸವಣ್ಣ ಮತ್ತು ನಂಬಿಯಣ್ಣರನ್ನು ಕುರಿತ ರಗಳೆಗಳಲ್ಲಿ ಅವನು ಬೇರೆ ಬೇರೆ ಅಧ್ಯಾಯಗಳಲ್ಲಿ ಗದ್ಯ ಪದ್ಯಗಳನ್ನು ಬಳಸುತ್ತಾನೆ.ಹೀಗೆ ಕನ್ನಡ ಕವಿಗಳ ಸಾಲಿನಲ್ಲಿ ಹರಿಹರನು ಬಹಳ ಮಹತ್ವದ

ಡೊಂಕು ಬಾಲದ ನಾಯಕರೆ

ಡೊಂಕು ಬಾಲದ ನಾಯಕರೆ
ನೀವೇನೂಟವ ಮಾಡುವಿರಿ

ಕಣಕ ಕುಟ್ಟೋ ಅಲ್ಲಿಗೆ ಹೋಗಿ
ಹಣಕಿ ಇಣಕಿ ನೋಡುವಿರಿ
ಕಣಕ ಕುಟ್ಟೋ ಒನಕೆಲಿ ಬಡಿದರೆ
ಕಂಞ ಕುಂಞ ಕಂಞ ಕುಂಞ ಮಾಡುವಿರಿ

ಹುಗ್ಗಿ ಮಾಡೋ ಅಲ್ಲಿಗೆ ಹೋಗಿ
ತಗ್ಗಿ ಬಗ್ಗಿ ನೋಡುವಿರಿ
ಹುಗ್ಗಿ ಮಾಡೋ ಸೌಟಲಿ ಬಡಿದರೆ
ಕಂಞ ಕುಂಞ ಕಂಞ ಕುಂಞ ಮಾಡುವಿರಿ

ಹಿರೇ ಬೀದಿಯಲಿ ಓಡುವಿರಿ
ಕರೇ ಬೂದಿಯಲಿ ಹೊರಳುವಿರಿ
ಪುರಂದರ ವಿಠ್ಠಲರಾಯನ ಈ ಪರಿ
ಮರೆತು ಸದಾ ನೀವು ಚಲಿಸುವಿರಿ

ಕಲ್ಲು ಸಕ್ಕರೆ ಕೊಳ್ಳಿರೊ ನೀವೆಲ್ಲರು

ಕಲ್ಲು ಸಕ್ಕರೆ ಕೊಳ್ಳಿರೊ ನೀವೆಲ್ಲರು
ಕಲ್ಲು ಸಕ್ಕರೆ ಕೊಳ್ಳಿರೊ

ಕಲ್ಲು ಸಕ್ಕರೆ ಸವಿ ಬಲ್ಲವರೆ ಬಲ್ಲರು
ಪುಲ್ಲಲೋಚನ ಶ್ರೀ ಕೃಷ್ಣ ನಾಮವೆಂಬ

ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ
ಒತ್ತೊತ್ತಿ ಗೋಣಿಯೊಳ್ ತುಂಬುವುದಲ್ಲ
ಎತ್ತ ಹೋದರೂ ಬಾಡಿಗೆ ಸುಂಕವಿದಕಿಲ್ಲ
ಉತ್ತಮ ಸರಕಿದು ಅತಿ ಲಾಭ ತರುವಂಥ

ಸಂತೆ ಕಂತೆಗೆ ಹೋಗಿ ಶ್ರಮ ಪಡಿಸುವುದಲ್ಲ
ಸಂತೆಯೊಳಗೆ ಇದು ಮಾರುವುದಲ್ಲ
ಸಂತತ ಭಕ್ತರ ನಾಲಿಗೆ ಸವಿಗೊಂಬ
ಕಾಂತ ಪುರಂದರ ವಿಠ್ಠಲ ನಾಮವೆಂಬ

Sunday, March 20, 2011

ಗಿಳಿಯು ಪಂಜರದೊಳಿಲ್ಲ ಶ್ರೀ ರಾಮ ರಾಮ

ಗಿಳಿಯು ಪಂಜರದೊಳಿಲ್ಲ ಶ್ರೀ ರಾಮ ರಾಮ
ಬರಿದೆ ಪಂಜರವಾಯ್ತಲ್ಲ

ಅಕ್ಕ ನಿನ್ನ ಮಾತು ಕೇಳಿ
ಚಿಕ್ಕದೊಂದು ಗಿಳಿಯ ಸಾಕಿದೆ
ಅಕ್ಕ ನಿಲ್ಲದ ವೇಳೆಯಲ್ಲಿ
ಬೆಕ್ಕು ಕೊಂಡು ಹೋಯಿತಯ್ಯೋ

ಅರ್ತಿಗೆಂದು ಗಿಳಿಯ ಸಾಕಿದೆ
ಮುತ್ತಿನ ಹಾರವೇ ಹಾಕಿದೆ
ಮುತ್ತುಗೊಂಡು ಗಿಳಿಯು ತಾನು
ಎತ್ತಲೋಡಿ ಹೋಯಿತಯ್ಯೋ

ಹಸಿರು ಬಣ್ಣದ ಗಿಳಿಯು
ಕುಶಲ ಬುದ್ಧಿಯ ಗಿಳಿಯು
ಅಸುವು ಕುಂದಿ ಗಿಳಿಯು ತಾನು
ಹಸನಗೆಡಿಸಿ ಹೋಯಿತಯ್ಯೋ

ಮುಪ್ಪಾಗ ಬೆಣ್ಣೆಯನ್ನು
ತಪ್ಪದೇ ನಾ ಹಾಕಿ ಸಾಕಿದೆ
ಒಪ್ಪದಿಂದ ಗಿಳಿಯು ಈಗ
ತೆಪ್ಪನೆ ಹಾರಿ ಹೋಯಿತಯ್ಯೋ

ರಾಮ ರಾಮ ಎನ್ನೊ ಗಿಳಿ
ಕೋಮಲ ಕಾಯದ ಗಿಳಿ
ಸಮಾಜ ಪೋಷಕ ತಾನು
ಪ್ರೇಮದಿ ಸಾಕಿದ ಗಿಳಿ

ಒಂಬತ್ತು ಬಾಗಿಲ ಮನೆಯಲ್ಲಿ
ತುಂಬಿದ ಸಂದಣಿ ಇರಲು
ಕುಂಭ ಮುರಿದು ಡಿಂಬ ಬಿದ್ದು
ಅಂಬರಕ್ಕೆ ಹಾರಿತಯ್ಯೋ

ಅಂಗೈಯಲ್ಲಿ ಆಡೋ ಗಿಳಿ
ಮುಂಗೈ ಮೇಲಣ ಗಿಳಿ
ರಂಗ ಪುರಂದರ ವಿಠ್ಠಲನಂತೆ
ರಂಗದಿ ಭಜಿಸುವ ಗಿಳಿ

ಕೃಷ್ಣಾ ಬಾರೋ , ಕೃಷ್ಣಾ ಬಾರೋ

ಕೃಷ್ಣಾ ಬಾರೋ , ಕೃಷ್ಣಾ ಬಾರೋ
 ಕೃಷ್ಣಯ್ಯ ನೀ ಬಾರಯ್ಯ || ಪಲ್ಲವಿ ||


ಸಣ್ಣ ಹೆಜ್ಜೆಗಳಿಟ್ಟು , ಗೆಜ್ಜೆ ನಾದಗಳಿಂದ || ಪ ||
 ಮನ್ಮಥ ಜನಕನೆ ಬೇಗನೆ ಬಾರೋ
ಕಮಲಾಪತಿ ನೀ ಬಾರೋ
ಅಮಿತ ಪರಾಕ್ರಮ ಶಂಕರ ಬಾರೋ
ಕಮನೀಯ ಗಾತ್ರನೆ ಬಾರಯ್ಯ ದೊರೆಯೇ || ಪ ||

  ಹಾಲು ಬೆಣ್ಣೆಗಳ ಕೈಯಲ್ಲಿ ಕೊಡುವೆ
ಮೇಲಾದಿ ಭಕ್ಷಗಳ ಮುಚ್ಚಿಟ್ಟು ತರುವೆ
ಜಾಲ ಮಾಡದೆ ನೀ ಬಾರಯ್ಯ ಮರಿಯೇ
ಬಾರಾ ಎನ ತಂದೆ ಪುರಂದರ ವಿಠ್ಠಲ || ಪ ||

Saturday, March 19, 2011

ಅಂಬಿಗ ನಾ ನಿನ್ನ ನಂಬಿದೆ

ಅಂಬಿಗ ನಾ ನಿನ್ನ ನಂಬಿದೆ
ಜಗದಂಬರಮಣನ ನಂಬಿದೆ

ತುಂಬಿದ ಹರಿಗೋಲಂಬಿಗ
ಅದಕ್ಕೊಂಬತ್ತು ಛಿದ್ರವು ಅಂಬಿಗ
ಸಂಭ್ರಮದಿಂ ನೋಡಂಬಿಗ
ಅದರಿಂಬು ನೋಡಿ ನಡೆಸಂಬಿಗ

ಹೊಳೆಯ ಭರವ ನೋಡಂಬಿಗ
ಅದಕೆ ಸೆಳೆವು ಘನವಯ್ಯ ಅಂಬಿಗ
ಸುಳಿಯೊಳು ಮುಳುಗಿದೆ ಅಂಬಿಗ
ಎನ್ನ ಸೆಳೆದು ಕೊಂಡೊಯ್ಯೊ ಅಂಬಿಗ

ಆರು ತೆರೆಯ ನೋಡಂಬಿಗ
ಅದು ಮೀರಿ ಬರುತಿದೆ ನೋಡಂಬಿಗ
ಯಾರಿಂದಲಾಗದು ಅಂಬಿಗ
ಅದ ನಿವಾರಿಸಿ ದಾಟಿಸೊ ಅಂಬಿಗ

ಸತ್ಯವೆಂಬುದೆ ಹುಟ್ಟಂಬಿಗ
ಸದಾ ಭಕ್ತಿಯೆಂಬುದೆ ಪಥವಂಬಿಗ
ನಿತ್ಯಮೂರುತಿ ನಮ್ಮ ಪುರಂದರ ವಿಠ್ಠಲನ
ಮುಕ್ತಿ ಮಂಟಪಕೊಯ್ಯೊ ಅಂಬಿಗ

ಆಡಿಸಿದಳೆಶೋದಾ ಜಗದೋದ್ಧಾರನ

ಆಡಿಸಿದಳೆಶೋದಾ ಜಗದೋದ್ಧಾರನ

ಜಗದೋದ್ಧಾರನ ಮಗನೆಂದು ತಿಳಿಯುತ
ಮಗುಗಳ ಮಾಣಿಕ್ಯನ ಆಡಿಸಿದಳೆಶೋದಾ

ನಿಗಮಕೆ ಸಿಲುಕದ ಅಗಣಿತ ಮಹಿಮನ
ಸುಗುಣಾಂತ ರಂಗನ ಆಡಿಸಿದಳೆಶೋದಾ

ಅಣೋರಣೀಯನ ಮಹತೋಮಹೀಯನ
ಅಪ್ರಮೇಯನ ಆಡಿಸಿದೆಳೆಶೋದಾ

ಪರಮ ಪುರುಷನ ಪರವಾಸು ದೇವನ
ಪುರಂದರ ವಿಠ್ಠಲನ ಆಡಿಸಿದಳೆಶೋದಾ

ಆಚಾರವಿಲ್ಲದ ನಾಲಿಗೆ

ಆಚಾರವಿಲ್ಲದ ನಾಲಿಗೆ ನಿನ್ನ
ನೀಚಗುಣವ ಬಿಡು ನಾಲಿಗೆ

ವಿಚಾರವಿಲ್ಲದೆ ಪರರ ದೂಷಿಪುದಕ್ಕೆ
ಚಾಚಿ ಕೊಂಡಿರುವಂಥ ನಾಲಿಗೆ

ಇದ್ದಮಾತನಾಡು ನಾಲಿಗೆ ಹಿಡಿ-
ದೊದ್ದರೂ ಹುಸಿಬೇಡ ನಾಲಿಗೆ
ಇದ್ದುಕೊಂಡು ಉಣ್ಣು ಅಮೃತಾನ್ನಗಳನು
ಬುದ್ಧಿಯಲಿರು ಕಂಡೆಯ ನಾಲಿಗೆ

ಬಡವರ ಮಾತಿಗೆ ನಾಲಿಗೆ - ನೀ
ಕಡುಚತುರ ನುಡಿಯದಿರು ನಾಲಿಗೆ
ಹಿಡಿದು ಕೊಂಡೊಯ್ವರು ಯಮನ ಭಟರು ನಿನ್ನ
ನುಡಿ ಕಂಡೆಯ ಹರಿಯಂದು ನಾಲಿಗೆ

ಹರಿಪಾದವೆ ಗತಿಯೆಂದು ನಾಲಿಗೆ - ನಿನಗೆ
ಪರರ ಚಿಂತೆಯೇಕೆ ನಾಲಿಗೆ
ಸಿರಿವರ ಪುರಂದರ ವಿಠ್ಠಲರಾಯನನು
ಮರೆಯದೆ ನೆನೆ ಕಂಡೆಯ ನಾಲಿಗೆ

ಆದದ್ದೆಲ್ಲ ಒಳಿತೆ ಆಯಿತು

ಆದದ್ದೆಲ್ಲ ಒಳಿತೆ ಆಯಿತು ನಮ್ಮ
ಶ್ರೀಧರ ಸೇವೆ ಮಾಡಲು ಸಾಧನ ಸಂಪತ್ತಾಯಿತು

ದಂಡಿಗೆ ಬೆತ್ತ ಹಿಡಿಯೊದಕ್ಕೆ
ಮಂಡೆ ಮಾಚಿ ನಾಚುತಲಿದ್ದೆ
ಹೆಂಡತಿ ಸಂತತಿ ಸಾವಿರವಾಗಲಿ
ದಂಡಿಗೆ ಬೆತ್ತ ಹಿಡಿಸಿದಳಯ್ಯ

ಗೋಪಾಳ ಬುಟ್ಟಿ ಹಿಡಿಯೊದಕ್ಕೆ
ಭೂಪತಿಯಂತೆ ಗರ್ವಿಸುತಿದ್ದೆ
ಆ ಪತ್ನೀ ಕುಲ ಸಾವಿರವಾಗಲಿ
ಗೋಪಾಳ ಬುಟ್ಟಿ ಹಿಡಿಸಿದಳಯ್ಯ

ತುಳಸಿ ಮಾಲೆ ಹಾಕುವುದಕ್ಕೆ
ಅರಸನಂತೆ ನಾಚುತಲಿದ್ದೆ
ಸರಸಿಜಾಕ್ಷ ಪುರಂದರ ವಿಠ್ಠಲ
ತುಳಸಿ ಮಾಲೆ ಹಾಕಿಸಿದನಯ್ಯ

ಅನುಗಾಲವು ಚಿಂತೆ

ಅನುಗಾಲವು ಚಿಂತೆ ಜೀವಕೆ ಮನವು
ಶ್ರೀರಂಗನೋಳ್ ಮೆಚ್ಚುವ ತನಕ

ಸತಿಯಿದ್ದರು ಚಿಂತೆ, ಸತಿಯಿಲ್ಲದ ಚಿಂತೆ
ಮತಿಹೀನ ಸತಿಯು ಆದರು ಚಿಂತೆ
ಪೃಥ್ವಿಯೊಳಗೆ ಸತಿ ಕಡು ಚೆಲ್ವೆಯಾದರೆ
ಮಿತಿ ಮೊದಲಿಲ್ಲದ ಮೋಹದ ಚಿಂತೆ

ಬಡವನಾದರು ಚಿಂತೆ, ಬಲ್ಲಿದನಾಗೆ ಚಿಂತೆ
ಹಿಡಿ ಹೊನ್ನು ಕೈಯೊಳು ಇದ್ದರು ಚಿಂತೆ
ಪೊಡವಿಯೊಳಗೆ ನಮ್ಮ ಪುರಂದರ ವಿಠ್ಠಲನ
ಬಿಡದೆ ಧ್ಯಾನಿಸು, ಚಿಂತೆ ನಿಶ್ಚಿಂತೆ

ಪುರಂದರ ದಾಸರು

ಶ್ರೀ ಪುರಂದರ ದಾಸರು (೧೪೯೪ – ೧೫೬೪) ಕರ್ನಾಟಕ ಸಂಗೀತ ಪದ್ಧತಿಯ ಪಿತಾಮಹ ಎಂದು ಹೆಸರಾದವರು. ದಾಸಪದ್ಧತಿಯ ಅನೇಕ ಪ್ರಮುಖರು, ಮುಖ್ಯವಾಗಿ ಪುರಂದರದಾಸ, ಶ್ರೀಪಾದರಾಯ, ಕನಕದಾಸ, ಜಗನ್ನಾಥ ದಾಸ, ವಿಜಯ ದಾಸ ಮತ್ತು ಕಮಲೇಶ ವಿಠ್ಠಲ ಮೊದಲಾದವರು ಸಂಗೀತದ ಮೂಲಕ ಭಕ್ತಿಮಾರ್ಗವನ್ನು ಬೋಧಿಸಿದವರು. ಪುರಂದರದಾಸರ ಎಲ್ಲ ಕೀರ್ತನೆಗಳು ಪುರಂದರ ವಿಠ್ಠಲನನ್ನು (ವಿಷ್ಣು) ನಮಿಸುತ್ತಾ ಕೊನೆಗೊಳ್ಳುತ್ತವೆ. ಸಾವಿರಾರು ಕೀರ್ತನೆಗಳನ್ನು ರಚಿಸಿದ ಪುರಂದರದಾಸರ ಸುಮಾರು ೧೦೦೦ ಕೀರ್ತನೆಗಳು ಇಂದಿಗೂ ಉಳಿದಿವೆ. ಇವರ ಎಲ್ಲ ಕೀರ್ತನೆಗಳೂ ಕನ್ನಡ ಭಾಷೆಯಲ್ಲಿದ್ದು ಭಕ್ತಿ ಮಾರ್ಗವನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ. ಕರ್ನಾಟಕ ಸಂಗೀತಗಾರರಲ್ಲಿ ಪುರಂದರದಾಸರ ಕೀರ್ತನೆಗಳ ಪರಿಚಯ ಇಲ್ಲದವರು ಇಲ್ಲವೇ ಇಲ್ಲವೆನ್ನಬಹುದು. ಶ್ರೀ ಪುರಂದರದಾಸರು ೫ ಲಕ್ಷ ಹಾಡುಗಳನ್ನು ರಚನೆ ಮಾಡಬೇಕೆಂಬ ಉದ್ದೇಶವಿಟ್ಟುಕೊಂಡಿದ್ದರು; ಅವರು ೪,೭೫,೦೦೦ ಹಾಡುಗಳನ್ನು ರಚನೆ ಮಾಡಿ ಅವತಾರ ಮುಗಿಸಿದರು; ಅವರ ಮಗ ಮಧ್ವಪತಿದಾಸರು ಉಳಿದ ೨೫,೦೦೦ ಹಾಡುಗಳನ್ನು ರಚನೆ ಮಾಡಿದರು ಎಂದು ಹೇಳಲಾಗುತ್ತಿದೆ.


ಬೆಳವಣಿಗೆ

ಪುರಂದರದಾಸರ ತಂದೆಯ ಹೆಸರು ವರದಪ್ಪ ನಾಯಕ, ಲೇವಾದೇವಿ ವೃತ್ತಿಯಲ್ಲಿದ್ದವರು. ಅನೇಕ ವರ್ಷಗಳ ಕಾಲ ಮಕ್ಕಳಾಗದ ಕಾರಣ ತಿರುಪತಿ ಶ್ರೀನಿವಾಸನಿಗೆ ಪ್ರಾರ್ಥನೆ ಸಲ್ಲಿಸಿದ ಮೇಲೆ ಮಗುವಾಯಿತು ಎಂಬ ನಂಬಿಕೆಯಿದೆ. ಇದರಿಂದಲೇ ಅವರು ಮಗನಿಗೆ ಶ್ರೀನಿವಾಸ ಎಂದು ಹೆಸರಿಟ್ಟರಂತೆ. ಶ್ರೀನಿವಾಸ ನಾಯಕ ಬೆಳೆದ ನಂತರ ತಂದೆಯ ವೃತ್ತಿಯನ್ನೇ ಮುಂದುವರಿಸಿದ. ಆದರೆ ಅತ್ಯಂತ ಜಿಪುಣನೆಂದು ಹೆಸರಾದ ಶ್ರೀನಿವಾಸ ತಂದೆ ಅಸ್ವಸ್ಥರಾದಾಗಲೂ ಹಣ ಖರ್ಚು ಮಾಡಲು ತಡೆದನಂತೆ. ಶ್ರೀನಿವಾಸನ ಪತ್ನಿ ಲಕ್ಷ್ಮಿ ದಾನಶೀಲೆಯಾಗಿ ಪತಿಯ ಕೋಪ ಅವಳ ಮೇಲೆ ಬೀಳುತ್ತಿತ್ತು ಎಂದು ಹೇಳುತ್ತಾರೆ. ಅವರ ಸಂಸಾರ ಮೂಲತಃ ಪಂಡರಾಪುರದಲ್ಲಿದ್ದರೂ ಶ್ರೀನಿವಾಸ ನಂತರದ ವರ್ಷಗಳಲ್ಲಿ ಹಂಪೆಯಲ್ಲಿದ್ದನೆಂದು ತೋರುತ್ತದೆ.

ನಂಬಿಕೆಯಂತೆ, ವಿಠ್ಠಲ (ವಿಷ್ಣು) ಬಡ ಬ್ರಾಹ್ಮಣನ ವೇಷದಲ್ಲಿ ಒಮ್ಮೆ ಶ್ರೀನಿವಾಸನ ಅಂಗಡಿಗೆ ಬಂದು ಮಗನ ಉಪನಯನಕ್ಕೆ ಹಣ ಬೇಡಿದನಂತೆ. ಜಿಪುಣ ಶ್ರೀನಿವಾಸ ಪ್ರತಿದಿನವೂ ಮಾರನೆಯ ದಿನ ಬರಹೇಳುತ್ತ, ಆರು ತಿಂಗಳುಗಳ ಕಾಲ ಮುಂದೆ ಹಾಕಿದನಂತೆ. ಕೊನೆಗೆ ಬ್ರಾಹ್ಮಣನ ಕಾಟ ತಡೆಯಲಾರದೆ ಒಂದು ಸವಕಲು ನಾಣ್ಯವನ್ನು ಕೊಟ್ಟನಂತೆ. ವಿಠ್ಠಲ ಈಗ ಶ್ರೀನಿವಾಸನ ಮನೆಗೆ ತೆರಳಿ ಆರು ತಿಂಗಳುಗಳ ಕಾಲ ಒಬ್ಬ ವರ್ತಕ ತನ್ನನ್ನು ಸತಾಯಿಸಿ ಕೊನೆಗೆ ಸವಕಲು ನಾಣ್ಯ ಕೊಟ್ಟ ಕಥೆ ಹೇಳಿದನಂತೆ. ಲಕ್ಷ್ಮಿ ಮರುಕದಿಂದ ಅವನಿಗೆ ತನ್ನ ಮೂಗುತಿಯನ್ನು ತೆಗೆದು ಕೊಟ್ಟಳಂತೆ. ಬ್ರಾಹ್ಮಣ ತಕ್ಷಣ ಮೂಗುತಿಯನ್ನು ಶ್ರೀನಿವಾಸನ ಅಂಗಡಿಗೆ ಒಯ್ದು ಅದನ್ನು ಅಡವಿಡಲು ಪ್ರಯತ್ನಿಸಿದನಂತೆ. ಶ್ರೀನಿವಾಸ ಆ ಮೂಗುತಿಯನ್ನು ಗುರುತಿಸಿ, ಅದನ್ನು ಡಬ್ಬಿಯಲ್ಲಿಟ್ಟು ತಕ್ಷಣ ಮನೆಗೆ ಬಂದು ಪತ್ನಿಯ ಬಳಿ ಮೂಗುತಿಯನ್ನು ತೋರಿಸಲು ಹೇಳಿದನಂತೆ. ಹೆದರಿದ ಹೆಂಡತಿ ಕೊಠಡಿಯಲ್ಲಿ ವಿಷ ಕುಡಿಯುವ ಪ್ರಯತ್ನ ನಡೆಸಿದಾಗ ಅವಳ ವಿಷದ ಬಟ್ಟಲಿನೊಳಕ್ಕೆ ಮೇಲಿನಿಂದ ಮೂಗುತಿ ಬಿದ್ದಿತಂತೆ. ಅಂಗಡಿಗೆ ಹಿಂದಿರುಗಿ ಬಂದ ಶ್ರೀನಿವಾಸ ಡಬ್ಬಿಯನ್ನು ತೆಗೆದು ನೋಡಿದರೆ ಅಲ್ಲಿ ಇಟ್ಟಿದ್ದ ಮೂಗುತಿ ಮಾಯವಾಗಿತ್ತಂತೆ. ತನ್ನ ಬಗ್ಗೆ ತಾನೇ ನಾಚಿಕೆಪಟ್ಟುಕೊಂಡ ಶ್ರೀನಿವಾಸ ತನ್ನ ಶ್ರೀಮಂತಿಕೆಯನ್ನು ತೊರೆದು ಹರಿದಾಸನಾಗುವ ನಿರ್ಧಾರ ತೆಗೆದುಕೊಂಡನಂತೆ. ದೇವರ ದಾರಿ ತೋರಿಸಿದ್ದರ ಬಗ್ಗೆ ಕೃತಜ್ಞತೆಗಾಗಿ ತಮ್ಮ ಹೆಂಡತಿಯ ಜ್ಞಾಪಕಾರ್ಥ ಒಂದು ಕೀರ್ತನೆಯನ್ನೂ ಪುರಂದರದಾಸರು ರಚಿಸಿದ್ದಾರೆ. ಶ್ರೀನಿವಾಸ ನಾಯಕ ಪುರಂದರ ದಾಸ ಎಂಬ ಹೆಸರನ್ನು ಪಡೆದ.
ಕವಿ ಮತ್ತು ಸಂಗೀತಗಾರ

ಪುರಂದರದಾಸರ ಪದಗಳು ಪ್ರಾಸ ಮತ್ತು ಅರ್ಥದಲ್ಲಿ ಶ್ರೀಮಂತವಾಗಿವೆ. ಉದಾಹರಣೆಗೆ:

"ಕುದುರೆ ಅಂದಣ ಆನೆ ಬಯಸೋದು ನರಚಿತ್ತ
ಪಾದಚಾರಿ ಆಗೋದು ಹರಿ ಚಿತ್ತವಯ್ಯ"

ಪುರಂದರದಾಸರ ಪದಗಳು ಮುಂದೆ ಕರ್ನಾಟಕ ಸಂಗೀತ ಪದ್ಧತಿಯ ಬುನಾದಿಯಾದವು. ಶಾಸ್ತ್ರೀಯ ಸಂಗೀತವನ್ನು ಶ್ರೀ ಸಾಮಾನ್ಯನಿಗೆ ಪರಿಚಯ ಮಾಡಿಕೊಡಲು ಯತ್ನಿಸಿದ ಪುರಂದರದಾಸರು ಮಾಯಾಮಾಳವಗೌಳ ರಾಗದಿಂದ ಹಿಡಿದು ಹೊಸಬರಿಗೆ ಶಾಸ್ತ್ರೀಯ ಸಂಗೀತವನ್ನು ಕಲಿಸಿಕೊಡುವ ದಾರಿಯ ಬಗೆಗೆ ಯೋಚಿಸಿದರು. ಈಗಲೂ ದಕ್ಷಿಣಭಾರತದ ಶಾಸ್ತ್ರೀಯ ಸಂಗೀತದ ಪಾಠಗಳು ಪುರಂದರದಾಸರ ಸರಳೆ, ಜಂಟಿ ವರಸೆಗಳೊಂದಿಗೇ ಆರಂಭಿಸಲ್ಪಡುತ್ತವೆ. ಪುರಂದರದಾಸರ 'ಪಿಳ್ಳಾರಿ ಗೀತೆಗಳು' (ಉದಾ: ಲಂಬೋದರ ಲಕುಮಿಕರ...., ಕೆರೆಯ ನೀರನು ಕೆರೆಗೆ ಚೆಲ್ಲಿ..... ಇತ್ಯಾದಿ) ಸಂಗೀತದ ಸ್ವರ-ಸಾಹಿತ್ಯ-ತಾಳಗಳ ಸಂಯೋಜನೆಯನ್ನು ಅಭ್ಯಸಿಸಲು ಮೊದಲ ಮೆಟ್ಟಿಲು. ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರಾದ ಶ್ರೀ ತ್ಯಾಗರಾಜರು ತಮ್ಮ "ಪ್ರಹ್ಲಾದ ಭಕ್ತಿ ವಿಜಯಮ್" ಎಂಬ ಲೇಖನದಲ್ಲಿ ಶ್ರೀ ಪುರಂದರದಾಸರನ್ನು ತಮ್ಮ ಸಂಗೀತ ಗುರುಗಳೆಂದು ಹೇಳಿಕೊಂಡಿದ್ದಾರೆ. ಹರಿನಾಮಸ್ಮರಣೆಯ ರೂಪದಲ್ಲಿ ರಚಿಸಿದ ಅವರ ಕೃತಿಗಳು ದೇವರನಾಮಗಳಾಗಿ ಪ್ರಸಿದ್ಧವಾಗಿವೆ. ಅವರ ಹರಿಭಕ್ತಿ ಹಾಗೂ ಸಂಗೀತದಲ್ಲಿನ ಪಾಂಡಿತ್ಯ ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವಾದ ಸ್ಥಾನವನ್ನು ಪಡೆದ ದಾಸ ಸಾಹಿತ್ಯವನ್ನು ಶ್ರೀಮಂತವಾಗಿಸಿವೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹರಾದ ಪುರಂದರದಾಸರ ಸಾಧನೆಯನ್ನು ಕಂಡ ಸರ್ವರೂ 'ದಾಸರೆಂದರೆ ಪುರಂದರದಾಸರಯ್ಯಾ..!' ಎಂದು ಕೊಂಡಾಡಿದ್ದಾರೆ.

Friday, March 18, 2011

ಅಲ್ಲಮಪ್ರಭು

ಅಲ್ಲಮಪ್ರಭುವಿನ ಜೀವನ ಚರಿತ್ರೆ

ಅಲ್ಲಮನ ಜೀವನ ಚರಿತ್ರೆಯನ್ನು ನಿಖರವಾಗಿ ನಿರೂಪಿಸಲು ಸಾಧ್ಯವಾಗಲಾರದೊಷ್ಟು ಐತಿಹ್ಯಗಳು ಆ ವ್ಯಕ್ತಿತ್ವವನ್ನು ಸುತ್ತುವರಿದಿವೆ. ಅಲ್ಲಮನ ಬಗ್ಗೆ ಹದಿಮೂರನೇ ಶತಮಾನದ ಹರಿಹರಮಹಾಕವಿಯು, ಪ್ರಭುದೇವರ ರಗಳೆಯಲ್ಲಿ ಸಾಕಷ್ಟು ವಿವರಣೆಗಳನ್ನು ನೀಡಿರುವನಾದರೂ, ಅಲ್ಲಮನ ಪ್ರಭಾವಲಯದಿಂದ ಪೂರ್ಣವಾಗಿ ಹೊರ ಬಂದು , ಒಂದು ಸಹಜ ಚಿತ್ರಣವನ್ನು ಕೊಡುವಲ್ಲಿ ಹರಿಹರನಂತಹ ವಾಸ್ತವವಾದಿ ಕವಿ ಸಹ ಸೋಲುತ್ತಾನೆನಿಸುತ್ತದೆ . ಇನ್ನು ಚಾಮರಸನು ಅಲ್ಲಮಪ್ರಭುದೇವನನ್ನು ಈ ಲೋಕದ ಮಾನವ ಚೇತನವೆಂದು ಒಪ್ಪಿಕೊಳ್ಳುವುದೇ ಇಲ್ಲ. ಅವನು ಕೈಲಾಸದಿಂದ ಬಂದ ಶಿವನ ಚಿತ್ಕಳೆ , ಎಂದೇ ಚಿತ್ರಿಸುತ್ತಾನೆ. ಇವರಿಬ್ಬರಲ್ಲದೆ ಎಳಂದೂರು ಹರಿಹರೇಶ್ವರನೆಂಬ ಮತ್ತೊಬ್ಬ ಕವಿಯೂ ಅಲ್ಲಮಪ್ರಭುವಿನ ಬಗ್ಗೆ ಕಾವ್ಯ ರಚನೆ ಮಾಡಿದ್ದಾನೆ . ಇನ್ನು ಚಾಮರಸನು ರಚಿಸಿರುವ ಪ್ರಭುಲಿಂಗಲೀಲೆಯು ತಮಿಳು, ಮರಾಠಿ ಮುಂತಾದ ಭಾಷೆಗಳಿಗೆ ಬಲು ಹಿಂದೆಯೇ ಅನುವಾದಗೊಂಡು ಪ್ರಖ್ಯಾತವಾಗಿದ್ದಿತು .ಈ ಮಹಾಕವಿಗಳಲ್ಲದೆ ,ಅಲ್ಲಮಪ್ರಭುವಿನ ಬಗ್ಗೆ ಪ್ರಾಸಂಗಿಕವಾಗಿ ಬರೆಯದ ವೀರಶೈವ ಸಾಹಿತ್ಯವೇ ಇಲ್ಲವೆನ್ನಬಹುದು. ಇದೆಲ್ಲಕ್ಕಿಂತಲೂ ಮುಖ್ಯವಾಗಿ, ಸ್ವತಃ ಅಲ್ಲಮಪ್ರಭುವೇ ಅತನ ಕಾಲದ ಬಲು ದೊಡ್ಡ ಸಾಹಿತ್ಯಚೇತನವಾಗಿದ್ದನೆನ್ನುವುದು, ಮತ್ತು ಅವನವೇ ಆದ ಅನೇಕ ವಚನಗಳು ಉಪಲಬ್ಧವಿರುವುದು ,ಅವನ ವ್ಯಕ್ತಿತ್ವವನ್ನು ಗ್ರಹಿಸಲು ತುಂಬಾ ಉಪಯುಕ್ತ ಮಾರ್ಗವಾಗಿದೆ .ಇಡಿಯ ವಚನ ಸಾಹಿತ್ಯದಲ್ಲಿಯೇ , ಸಾಹಿತ್ಯದ ಪರಿಭಾಷೆಯನ್ನು ಸರಿಯಾದ ಮಾರ್ಗದಲ್ಲಿ ದುಡಿಸಿಕೊಂಡವರಲ್ಲಿ ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭು ಇಬ್ಬರೂ ಅಪ್ರತಿಮರು .

ಚಾಮರಸನು ಅಲ್ಲಮನ ತಂದೆ ತಾಯಿಗಳನ್ನು ನಿರಹಂಕಾರ ,ಸುಜ್ಞಾನಿಗಳೆಂದು ಕರೆಯುತ್ತಾನೆ , ನಂತರ ಮಾಯಾದೇವಿಯ ತಂದೆತಾಯಿಗಳನ್ನು ಮಮಕಾರ, ಮೋಹಿನಿಯರೆಂದು ಕರೆಯುವುದನ್ನು ಕಂಡಾಗ ಇವೆಲ್ಲವೂ ವಾಸ್ತವವಲ್ಲದ , ಕವಿಯ ಭಾವನಾತ್ಮಕ ರೂಪಕಗಳೆನಿಸದೆ ಇರದು. ಹರಿಹರ ಮಹಾಕವಿಯು ಅಲ್ಲಮನ ತಂದೆತಾಯಿಗಳ ಹೆಸರುಗಳನ್ನೆ ಪ್ರಾಸ್ತಾಪಿಸದೆ ಅಲ್ಲಮನ ತಂದೆಯು ಬಳ್ಳಿಗಾವಿಯ ನಾಗವಾಸಾಧಿಪನಾಗಿದ್ದನೆಂದು ವಿವರಿಸುವನು. ನಾಗವಾಸಾಧಿಪನೆಂದರೆ ಅರಮನೆಯ ಅಂತಃಪುರದ ಸಂಗೀತ, ನರ್ತನಗಳ ವಲಯದ ಅಧಿಕಾರಿಯೆಂದೇ ಅರ್ಥ ಬರುವುದರಿಂದ ,ಅಲ್ಲಮನು ಒಬ್ಬ ಕಲಾವಿದನ ಮಗನಾಗಿದ್ದನೆಂದು ಭಾವಿಸಬಹುದು. ಮತ್ತು ಅಂದಿನ ಕಾಲಮಾನದಲ್ಲಿ ನಟರಿಗೆ, ನಟುವಾಂಗದ ವೃತ್ತಿಯವರಿಗೆ ಸಾಮಾಜಿಕ ಮನ್ನಣೆಯೂ ಇರಲಿಲ್ಲವೆಂಬುದು ಗಮನಾರ್ಹವಾದುದು .

ಅಲ್ಲಮನ ಯವ್ವನಕಾಲದ ಪ್ರೇಮ, ಕಾಮ, ವ್ಯಾಮೋಹಗಳ ಚಿತ್ರಗಳನ್ನು ಹರಿಹರಮಹಾಕವಿಯೂ , ಚಾಮರಸನೂ ಕಟ್ಟಿ ಕೊಡುವ ರೀತಿಗಳು ತುಂಬಾ ವಿಭಿನ್ನವಾಗಿವೆ. ಅತ್ಯಂತ ಸುಂದರನೂ , ಅಪ್ರತಿಮ ಮದ್ದಲಿಗನೂ, ಆಕರ್ಷಕಯುವಕನೂ ಆಗಿದ್ದ ಅಲ್ಲಮನನ್ನು ಶಿವದೇವಾಲಯದಲ್ಲಿ , ಮದ್ದಳೆ ಬಾರಿಸುತ್ತಿರುವ ಸಮಯದಲ್ಲಿ ಕಾಮಲತೆಯು ಆಕಸ್ಮಿಕವಾಗಿ ಸಂಧಿಸುತ್ತಾಳೆ. ಅವನನ್ನು ಕಂಡ ಕೂಡಲೇ ಅವನಲ್ಲಿ ಅನುರಕ್ತಳಾಗಿ ; ಕಾಮವಶಳಾಗಿ ಮೂರ್ಛಿತಳಾಗುತ್ತಾಳೆ. ಅಲ್ಲಮನ ಅವಸ್ಥೆಯೂ ಸಹ ಅದೇ ಪರಿಯಾಗುತ್ತದೆ .ಕಾಮಲತೆಯಂತಹ ಮಿಂಚಿನ ಮೋಹನಾಂಗಿಯನ್ನು ಕಂಡು,ಅಲ್ಲಮನು ವಿವಶನಾಗುತ್ತಾನೆ. ಇವರಿಬ್ಬ ಸ್ಥಿತಿಯನ್ನು ಮನಗಂಡ ಸಖಿಯರು ಇವರ ಮಿಲನಕ್ಕೆ ಅವಕಾಶ ಕಲ್ಪಿಸುತ್ತಾರೆ . ಅಲ್ಲಿಂದ ಅಲ್ಲಮ ಮತ್ತು ಕಾಮಲತೆಯರು ಇಹದ ಸಮಸ್ತವನ್ನೂ ಮರೆತು, ಏಕ ದೇಹಿಗಳಂತೆ,ಕಾಲ ದೇಶಾತೀತರಾಗಿ ,ಲೋಕದ ಮರವೆಯಲ್ಲಿ ಕಾಲ ಕಳೆಯುತ್ತಿರುವಾಗ ,ಕಾಮಲತೆಯು ಜ್ವರ ಪೀಡಿತೆಯಾಗಿ ಆಕಸ್ಮಿಕವಾಗಿ ಮರಣ ಹೊಂದುತ್ತಾಳೆ. ಇದರಿಂದ ವಿಚಲಿತನಾದ ಅಲ್ಲಮನು ವಿರಹ ಜ್ವಾಲೆಯಲ್ಲಿ ಬೇಯುತ್ತಾ, ಮರುಳನಂತೆ ಅಲೆಯುತ್ತಾ,ತಿರುಗುತ್ತಿರುವಾಗ . ಊರ ಹೊರಗೆ ಹೂತು ಹೋದ ಪ್ರಾಚೀನ ಶಿವಾಲಯವೊಂದರ ಶಿಖರದ ತುದಿಯು ,ಕಾಲಬೆರಳ ತುದಿಗೆ ತಗುಲಿ, ಕುತೂಹಲಗೊಂಡು ಅಗೆಯ ತೊಡಗಿದಾಗ ಇಡಿಯ ಶಿವಾಲಯ ಗೋಚರವಾಗುತ್ತದೆ. ಅದರೊಳಗೆ ಪ್ರವೇಶಿಸಿದಾಗ ಅಲ್ಲಿ ಶಿವಯೋಗದಲ್ಲಿದ್ದ ಅನಿಮಿಷ ದೇವನ ದರ್ಶನವಾಗಿ ,ಅವನ ಕೈಯ್ಯಲ್ಲಿದ್ದ ಅತ್ಮಲಿಂಗವು ಅಲ್ಲಮಪ್ರಭುವಿನ ಕೈಗೆ ಬಂದು ಸೇರುತ್ತದೆ .ಇದರಿಂದಾಗಿ ಇಬ್ಬರ ನಡುವೆ ಗುರು ಶಿಷ್ಯ ಸಂಭಂಧವೇರ್ಪಡುತ್ತದೆ. ತಕ್ಷಣ ಅನಿಮಿಷದೇವನು ಶಿವಾಧೀನನಾಗುತ್ತಾನೆ . ನಂತರ ಅಲ್ಲಮನ ಎಲ್ಲ ಮೋಹ ಮಮತೆಗಳು ಅಳಿದು , ಜಗತ್ತಿನ ನಶ್ವರತೆ; ವಿಶ್ವಕಾರಣದ ಶಾಶ್ವತತೆ ಅರಿವಿಗೆ ಬಂದು ಅನಂತ ಜ್ಞಾನಿಯಾಗುತ್ತಾನೆ. ಇದು ಹರಿಹರ ಮಹಾಕವಿಯು ಕಟ್ಟಿಕೊಡುವ ಅಲ್ಲಮನ ಪರಿವರ್ತನೆಯ ಚಿತ್ರಣ .

ಚಾಮರಸನು ಹೇಳುವ ಕತೆಯೇ ಬೇರೆ . ಅಲ್ಲಮನು ಸಾಕ್ಷಾತ್ ಶಿವಾಂಶ ಸಂಭೂತನಾದುದರಿಂದ, ಕಾಮಾದಿ ಅರಿಷಡ್ವರ್ಗಗಳು ಅವನನ್ನು ಸೋಂಕುವುದೇ ಇಲ್ಲ. ಬನವಸೆಯ ಮಧುಕೇಶ್ವರ ಮಂದಿರದಲ್ಲಿ ಶಿವನೆದುರಿನಲ್ಲಿ ಮದ್ದಳೆಯ ಮಹಾ ಯೋಗದಲ್ಲಿ ತಲ್ಲೀನನಾಗಿದ್ದ ಅಲ್ಲಮನನ್ನು ಆ ಊರಿನ ರಾಜನ ಮಗಳು, ಮಾಯಾದೇವಿ ಕಂಡು ವಿಭ್ರಾಂತಿಗೊಳಗಾಗುತ್ತಾಳೆ, ಅವನನ್ನು ಮೋಹಿಸಿ ,ಕಾಮಿಸುತ್ತಾಳೆ. ಇಲ್ಲಿ ಚಾಮರಸನ ಪ್ರಕಾರ ಪಾರ್ವತೀ ದೇವಿಯ ಮಾಯೆಯ ಅಂಶವೇ ಅಲ್ಲಮನನ್ನು ಜಯಿಸಲು ಭೂಲೋಕದಲ್ಲಿ ಮಾಯಾದೇವಿಯಾಗಿ , ಮಮಕಾರ, ಮೋಹಿನಿಯರ ಮಗಳಾಗಿ ಜನಿಸಿರುತ್ತಾಳೆ.ಇದನ್ನು ಅರಿತ ಅಲ್ಲಮನು , ಅಂತರ್ಧಾನನಾಗಿ , ಅರಣ್ಯವನ್ನು ಸೇರುತ್ತಾನೆ . ಹಿಂಬಾಲಿಸಿದ ಮಾಯೆಗೆ , ಪರವಶನಾಗದೆ ಶಾಶ್ವತ ನಿಲುವನ್ನು ವಿವರಿಸುತ್ತಾನೆ .ಹೀಗೆ ಇಬ್ಬರು ಮಹಾ ಕವಿಗಳು ಅಲ್ಲಮನನ್ನು ವಿಭಿನ್ನ ವಾಗಿ ಕಟ್ಟಿ ಕೊಡುತ್ತಾರೆ.

ಹರಿಹರ, ಚಾಮರಸರ ಕಾವ್ಯಗಳ ನಾಯಕನಾಗಿ ತೋರಿ ಬರುವ ಅಲ್ಲಮಪ್ರಭುವು, ನಂತರ ಶೂನ್ಯ ಸಂಪಾದನೆಕಾರರ ಕೃತಿಯಲ್ಲಿ ಅಸಾಮಾನ್ಯ ವ್ಯಕ್ತಿತ್ವದವನಾಗಿ ಚಿತ್ರಿತನಾಗಿದ್ದಾನೆ.ಅಲ್ಲಮನ ವಚನಗಳು ಮತ್ತು ಸಮಕಾಲೀನ ಶರಣರ ವಚನಗಳನ್ನೇ , ರತ್ನಮಾಲೆಯಂತೆ ಕೋದು ,ಸಂದರ್ಭಕ್ಕೆ ಅನುಗುಣವಾಗಿ ಕೆಲವು ವಚನಗಳನ್ನು ಸೇರಿಸಿ , ಶಿವಗಣ ಪ್ರಸಾದಿ ಮಹದೇವಯ್ಯಗಳು ಮೊದಲ ಶೂನ್ಯ ಸಂಪಾದನೆಯನ್ನು ರಚಿಸಿದರು. ನಂತರ ಗೂಳೂರು ಸಿದ್ದವೀರಣ್ಣೊಡೆಯರುಮೂರನೆಯದಾಗಿ ಗುಮ್ಮಳಾಪುರದ ಸಿದ್ದಲಿಂಗದೇವರು ಅಂತಿಮವಾಗಿ ಕೆಂಚವೀರಣ್ಣೊಡೆಯರುಹೀಗೆ ನಾಲ್ಕು ಶೂನ್ಯ ಸಂಪಾದನೆಗಳು ಅಲ್ಲಮ ಪ್ರಭುವಿನ ಜೀವನ ಚಿತ್ರಣ ನೀಡುವಲ್ಲಿ ಇಂದು ನೆರವಾಗಿವೆ.

ಇಪ್ಪತ್ತನೆಯ ಶತಮಾನದಲ್ಲಿ ಅಲ್ಲಮಪ್ರಭುವಿನ ಚಿತ್ರಣವನ್ನು ಪುನರ್ರೂಪಿಸುವಲ್ಲಿ ಎಚ್.ತಿಪ್ಪೇರುದ್ರಸ್ವಾಮಿಯವರು ಪರಿಪೂರ್ಣದೆಡೆಗೆ ಕಾದಂಬರಿಯ ಮೂಲಕ ಅನನ್ಯವಾಗಿ ಪ್ರಯತ್ನಿಸಿದ್ದಾರೆ. ಬಿ.ಪುಟ್ಟಸ್ವಾಮಯ್ಯನವರು ಅಲ್ಲಮಪ್ರಭುವಿನ ಬಗೆಗೆ ಅದೇ ಹೆಸರಿನ ಕಾದಂಬರಿಯನ್ನು ರಚಿಸಿರುವುದಲ್ಲದೆ, ಹನ್ನೆರಡನೆಯ ಶತಮಾನದ, ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ,ಹೀಗೆ ಸಮಸ್ತ ಮುಖಗಳನ್ನೊಳಗೊಂಡ ಆರು ಕಾದಂಬರಿಗಳಲ್ಲಿ, ಅಲ್ಲಮನನ್ನು ಅತ್ಯಂತ ವಿಶಿಷ್ಟವಾಗಿ ಚಿತ್ರಿಸುತ್ತಾರೆ.ಹೀಗೆ ಎಷ್ಟೆಲ್ಲಾ ಮಹನೀಯರಿಂದ ಪೂಜನೀಯನಾದ ಅಲ್ಲಮಪ್ರಭುವಿನ ವ್ಯಕ್ತಿತ್ವವು ಕಡೆಗೂ ನಿಗೂಢವೇ ಆಗುತ್ತದೆ . ಅವನ ವಚನಗಳಂತೆ, ಅವನ ವ್ಯಕ್ತಿತ್ವದಂತೆ.

ಕನಕದಾಸರು

ಕನಕದಾಸರು ಕನ್ನಡದ ಪ್ರಮುಖ ಸಂತ ಕವಿಗಳಲ್ಲಿ ಒಬ್ಬರು. ಅವರು ಮೇಲು ಜಾತಿ ಮತ್ತು ವರ್ಗಗಳವರು ಒಡ್ಡಿದ ಅಗ್ನಿಪರೀಕ್ಷೆಯಲ್ಲಿ ಪಾಡುಪಟ್ಟು, ತನ್ನ ಭಕ್ತಿ-ಪ್ರತಿಭೆಗಳನ್ನು ತೋರಿಸಬೇಕಾಯಿತು. ಅವರು ಅನುಭವಿಸಿದ ತಲ್ಲಣಗಳು ಮತ್ತು ಇಕ್ಕಟ್ಟುಗಳು ಅವರ ಕೃತಿಗಳಲ್ಲಿ ಹಲವು ಬಗೆಗಳಲ್ಲಿ ಮೂಡಿಬಂದಿವೆ. ಕನಕದಾಸರು ಕೀರ್ತನೆಗಳು ಮತ್ತು ಕಾವ್ಯಗಳು ಎರಡನ್ನೂ ರಚಿಸಿದ ಕೆಲವೇ ಕೆಲವು ಹರಿದಾಸರಲ್ಲಿ ಒಬ್ಬರೆಂಬ ಸಂಗತಿಯನ್ನು ಗಮನಿಸಬೇಕು.

ಆ ಕಾಲದ ಸಾಹಿತ್ಯಸಂದರ್ಭದಲ್ಲಿ ಕನಕದಾಸರಿಗೆ ವಿಶಿಷ್ಟವಾದ ಹಿನ್ನೆಲೆಯಿತ್ತು. ಅವರು   ಹಿಂದುಳಿದ ಜಾತಿಯಲ್ಲಿ ಹುಟ್ಟಿದವರು, ಆದರೆ, ಅವರು ಸಾಮಂತ ರಾಜರೋ ಪಾಳೆಯಗಾರರೋ ಆಗಿದ್ದುದರಿಂದ ಅವರಿಗೆ ಯುದ್ಧ ಮತ್ತು ಆಡಳಿತಗಳ ನೇರವಾದ ಅನುಭವವಿತ್ತು. ಅವರ ತವರು ನೆಲವಾದ ಕಾಗಿನೆಲೆಯಲ್ಲಿ ಇಂದಿಗೂ ಇರುವ ಆದಿಕೇಶವನ ಗುಡಿಯ ದೇವತೆಯಾದ ಕೇಶವನು ಅವರ ಆರಾಧ್ಯದೈವವಾಗಿದ್ದು ಅವೆರ ಅಂಕಿತವಾದ ‘ಕಾಗಿನೆಲೆಯಾದಿಕೇಶವರಾಯ‘ ಎನ್ನುವುದು ಅಲ್ಲಿಂದಲೇ ಬಂದಿದೆ. ಅವರು ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ಮಾಡಿದ ನಿರಂತರವಾದ ತಿರುಗಾಟಗಳು ಮತ್ತು ಮತಾಂಧರಾದ ಧಾರ್ಮಿಕ ಮುಖಂಡರೊಂದಿಗಿನ ಅವರ ಮುಖಾಮುಖಿಗಳು ಸಾಹಸ-ವಿಷಾದಗಳೀಂದ ಕೂಡಿವೆ. ಅವರ ಯಾತನೆಗಳು, ಭಾವಗೀತೆಯಂತಹ ಕೀರ್ತನೆಗಳಲ್ಲಿ ಬಹಳ ಸಮರ್ಥವಾದ ಅಭಿವ್ಯಕ್ತಿಯನ್ನು ಪಡೆದಿವೆ. ಕನಕದಾಸರ ಹಿರಿಯರೂ ಸಮಕಾಲೀನರೂ ಆದ ವ್ಯಾಸರಾಯರು, ಪುರಂದರದಾಸರು ಮುಂತಾದವರು ಅವರ ಭಕ್ತಿ ಮತ್ತು ಪ್ರತಿಭೆಗಳನ್ನು ಮೆಚ್ಚಿ ಕೊಂಡಾಡಿದ್ದಾರೆ. ಆದರೆ, ಮತಾಂಧರಾದ ಮೇಲುಜಾತಿಗಳವರು ಅವರ ಯೋಗ್ಯತೆಯನ್ನು ಪ್ರಶ್ನಿಸಿದರು. ಅವರು ಶ್ರೀವೈಷ್ಣವ ಸಿದ್ಧಾಂತವನ್ನು ಇಷ್ಟಪಟ್ಟಿದ್ದರೆಂಬ ಊಹಾಪೋಹಗಳಿವೆ. ಅದೇನೇ ಇರಲಿ, ದ್ವೈತ ತಾತ್ವಿಕತೆಯ ಮೂಲ ನೆಲೆಗಳಿಗೆ ಕೊಂಚವಾದರೂ ನಿಷ್ಠೆಯನ್ನು ತೋರಿಸುವುದು ಅವರಿಗೆ ಅನಿವಾರ್ಯವಾಗಿತ್ತು. ಆದ್ದರಿಂದಲೇ, ಅವರ ಅನೇಕ ಕೀರ್ತನೆಗಳು ಆ ಧರ್ಮದ ಚೌಕಟ್ಟನಲ್ಲಿ ರಚಿತವಾಗಿವೆ. ಆದರೆ, ಅವರು ಅಂತರಂಗದ ಭಾವನೆಗಳಿಗೆ ಕಟ್ಟುಪಾಡಿಲ್ಲದೆ, ನುಡಿಗೊಡುವ ಅನೇಕ ಕೀರ್ತನೆಗಳನ್ನು ಹಾಡಿಕೊಂಡಿದ್ದಾರೆ. ಕನಕದಾಸರ ಕೀರ್ತನೆಗಳು ಈ ವ್ಯಥೆಯಿಂದ ಆರ್ದ್ರವಾಗಿದ್ದು,  ಜಾತಿಪದ್ಧತಿಯ ಪರಿಣಾಮವಾದ ಅಸಮಾನತೆಯ ವಿರುದ್ಧ ಗಟ್ಟಿಯಾದ ದನಿಯೆತ್ತುತ್ತವೆ. ಅನೇಕ ಕೀರ್ತನೆಗಳು ದ್ವೈತಸಿದ್ಧಾಂತದ ಚೌಕಟ್ಟಿನಿಂದ ಆಚೆಗೆ ಹೋಗುವುದಿಲ್ಲವೆನ್ನುವುದು ನಿಜವಾದರೂ ಅವುಗಳೊಳಗೆ ಆಳವಾದ ವಿಷಾದವೂ ಇದೆ

        ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿರುವ ‘ನಳಚರಿತೆ‘ ಕನ್ನಡದ ಜನಪ್ರಿಯ ಕಾವ್ಯಗಳಲ್ಲಿ ಒಂದು.   ಇದರಲ್ಲಿ ಒಂಬತ್ತು ಅಧ್ಯಾಯಗಳಿದ್ದು ಅವು ಸುಮಾರು 480 ಪದ್ಯಗಳನ್ನು ಒಳಗೊಂಡಿವೆ. ಒಂದು ನೆಲೆಯಲ್ಲಿ ಇದು ನಿಜವಾದ ಪ್ರೇಮಿಗಳು ಎದುರಿಸುವ ಪಡಿಪಾಟಲುಗಳನ್ನು ನಿರೂಪಿಸುವುದರಿಂದಲೇ ಆತ್ಮೀಯವಾಗುತ್ತದೆ. ಮಹಾಭಾರತದಿಂದ ತೆಗೆದುಕೊಳ್ಳಲಾಗಿರುವ ಈ ಉಪಾಖ್ಯಾನವು ನಳ-ದಮಯಂತಿಯರ ಜೀವನವನ್ನು ಸರಳವಾದರೂ ಶಕ್ತಿಶಾಲಿಯಾದ ಶೈಲಿಯಲ್ಲಿ ನಿರೂಪಿಸುತ್ತದೆ. ಇ ದಂಪತಿಗಳು ಎದುರಿಸಿದ ಕಾಡು ಮತ್ತು ಕಾಳ್ಗಿಚ್ಚುಗಳ ವರ್ಣನೆಯು ಬಹಳ ಸಹಜವಾಗಿದೆ. ಈ ಕಾವ್ಯವು ತನ್ನ ಅನೇಕ ಆಶಯಗಳನ್ನು ಜಾನಪದದಿಂದ ತೆಗೆದುಕೊಂಡಿದೆ. ‘ನಳಚರಿತೆ‘ ಮುಖ್ಯವಾಗಿ ಮನುಷ್ಯಜೀವಿಗಳ ಕಷ್ಟಸುಖಗಳ ಹಂಚಿಕೊಳ್ಳುವಿಕೆಯೇ ವಿನಾ ತಾತ್ವಿಕವಾದ ಉಪದೇಶವಲ್ಲ.

‘ಮೋಹನತರಂಗಿಣಿ‘ ಸಾಂಗತ್ಯವೆಂಬ ಛಂದೋಪ್ರಕಾರವನ್ನು ಬಳಸಿಕೊಂಡಿರುವ ದೊಡ್ಡ ಗಾತ್ರದ ಕಾವ್ಯ.   ಈ ಕಾವ್ಯವು ಕೃಷ್ಣನ ಮೊಮ್ಮಗನಾದ ಅನಿರುದ್ಧ ಮತ್ತು ಬಾಣಾಸುರನ ಮಗಳಾದ ಉಷಾರ ಪ್ರಣಯಕಥೆಯನ್ನು ವಸ್ತುವಾಗಿ ಹೊಂದಿದೆ. ಈ ಕಾವ್ಯವು ಕೂಡ ಯಾವುದೇ ಕೃಷ್ಣಕಥೆಯ ಮೂಲ ಆಕರಗಳಾದ ಭಾಗವತ, ಹರಿವಂಶ, ವಿಷ್ಣುಪುರಾಣ ಮತ್ತು ಮಹಾಭಾರತಗಳಿಂದ ತನಗೆ ಅಗತ್ಯವಾದ ವಿವರಗಳನ್ನು ತೆಗೆದುಕೊಂಡಿದೆ. ಮನ್ಮಥನ ಹುಟ್ಟು, ಶಂಬರಾಸುರನ ವಧೆ, ಉಷಾ ಮತ್ತು ಅನಿರುದ್ಧರ ಪ್ರಣಯ, ಬಾಣಾಸುರವಧೆ ಮುಂತಾದವು ಈ ಕಾವ್ಯದ ಮುಖ್ಯ ಘಟನೆಗಳು. ಅದೆಲ್ಲಕ್ಕಿಂತ ಮುಖ್ಯವಾಗಿ ಮೋಹನತರಂಗಿಣಿಯು ತನ್ನ ಕಾಲದ ಕರ್ನಾಟಕದ ಜೀವನಶೈಲಿಯ ಮೇಲೆ ಬೆಳಕು ಚೆಲ್ಲುತ್ತದೆ. ನಿಧಾನಗತಿಯ ಹಾಗೂ ಗೇಯತೆಯ ಕಡೆಗೆ ಒಲಿಯುವ ಸಾಂಗತ್ಯದ ಛಂದಸ್ಸು, ಈ ಕಾವ್ಯದ ವಸ್ತುವಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.

‘ರಾಮಧಾನ್ಯಚರಿತ್ರೆ‘ಯು ಇಡೀ ಕನ್ನಡ ಸಾಹಿತ್ಯಚರಿತ್ರೆಯಲ್ಲಿಯೇ ಬಹಳ ಅನನ್ಯವಾದ ಕಾವ್ಯ. ಜಾತಿಪದ್ಧತಿ ಮತ್ತು ಜನಾಂಗಿಕ ಭೇದದಿಂದ ಉಂಟಾಗುವ ದಾರುಣ ಯಾತನೆಯನ್ನು ಬಹಳ ಸಾಂಕೇತಿಕವಾಗಿ ಮತ್ತು ಅನುಪಮವಾದ ಕಲ್ಪನಾಶಕ್ತಿಯ ಬಲದಿಂದ ಕಟ್ಟಿಕೊಡುವುದು ಈ ಕಾವ್ಯದ ಹೆಗ್ಗಳಿಕೆ. ಅದು ಅಹಂಕಾರಿಯಾದ ಬತ್ತ ಮತ್ತು ವಿನಯದಿಂದ ತಲೆಬಾಗಿದ, ಜನಸಾಮಾನ್ಯರ ಆಹಾರವಾದ ನರೆದಲೆಗಳ ನಡುವೆ ನಡೆಯುವ ಕಾಲ್ಪನಿಕವಾದ ಮುಖಾಮುಖಿಯ ಕಥನ. ಅವರಿಬ್ಬರ ನಡುವೆ ಯಾರು ಶ್ರೇಷ್ಠರೆನ್ನುವ ವಿಷಯದಲ್ಲಿ ಜಗಳ ನಡೆಯುತ್ತದೆ. ಕೊನೆಯ ತೀರ್ಮಾನವನ್ನು ಕೊಡುವ ಕೆಲಸವನ್ನು ರಾಮನು ನಿರ್ವಹಿಸಬೇಕಾಗುತ್ತದೆ. ಅವನು ಒಂದು ಪರೀಕ್ಷಯನ್ನು ಮಾಡಿ ನರೆದಲೆಗದ ಪರವಾದ ತೀರ್ಮಾನವನ್ನು ಕೊಡುತ್ತಾನೆ. ಅದನ್ನು ರಾಗಿ ಎಂದು ಕರೆಯುತ್ತಾನೆ. (ರಾಘವ ಧಾನ್ಯ)  ಈ ಕಾವ್ಯಕ್ಕೆ ಇರುವ ಸಾಂಕೇತಿಕ ಹಾಗೂ ಸಾಮಾಜಿಕವಾದ ಮಹತ್ವವನ್ನು ಕನ್ನಡ ಸಾಹಿತ್ಯದ ಪ್ರಧಾನಧಾರೆಯು ಗುರುತಿಸಿದ್ದು ಈಚೆಗೆ. ಹಿಂದುಳಿದ ವರ್ಗಗಳು ಮುಂದೆ ಬಂದಿದ್ದಕ್ಕೂ ಈ ಕಾವ್ಯದ ಮರುಹುಟ್ಟಿಗೂ ಇರುವ ಸಂಬಂಧವು ಕಾಕತಾಳೀಯವಲ್ಲ. ಈ ಕಾವ್ಯವನ್ನು ಅಂಚಿಗೆ ತಳ್ಳಿ,  ಕಡಿಮೆ ಆಸ್ಫೋಟಕವಾದ ಕಾವ್ಯಗಳನ್ನು ಹೊಗಳಿರುವುದು, ಕನ್ನಡ ಸಾಹಿತ್ಯವಿಮರ್ಶೆಯ ಮಾನದಂಡಗಳ ಬಗ್ಗೆ, ಮುಖ್ಯವಾದ ಸತ್ಯಗಳನ್ನು ಹೇಳುತ್ತದೆ.

    ‘ಕನಕನ ಮುಂಡಿಗೆಗಳು‘, ಒಗಟಿನ ಹೊರ ಆವರಣದೊಳಗೆ, ಮಹತ್ವದ ತಾತ್ವಿಕ ಸಂಗತಿಗಳನ್ನು ಹೊಂದಿರುವ, ಚಿಕ್ಕ ಗೇಯ ಕವಿತೆಗಳನ್ನು ಒಳಗೊಳ್ಳುತ್ತವೆ. ಇವುಗಳನ್ನು ಅರ್ಥ ಮಾಡಿಕೊಳ್ಳು ತಾಂತ್ರಿಕವಾದ ಪರಿಭಾಷೆಯ ನಿಕಟ ಪರಿಚಯ ಇರಬೇಕು. ‘ಹರಿಭಕ್ತಸಾರ‘ದಲ್ಲಿ ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿರುವ 110 ಪದ್ಯಗಳಿವೆ. ಅವು ಕನಕದಾಸರ ಜೀವನದೃಷ್ಟಿ ಮತ್ತು ನೈತಿಕ ನೆಲೆಗಟ್ಟನ್ನು ಬಹಳ ಭಾವನಾತ್ಮಕವೂ ಸರಳವೂ ಆದ ಶೈಲಿಯಲ್ಲಿ ಹೇಳುತ್ತದೆ.

     ಒಟ್ಟಂದದಲ್ಲಿ ಹೇಳುವುದಾದರೆ, ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಕನಕದಾಸರಿಗೆ ವಿಶಿಷ್ಟವಾದ ಸ್ಥಾನವಿದೆ. ನಮ್ಮ ಸಮಕಾಲೀನ ವಾತಾವರಣದಲ್ಲಿ ಅವರ ಕಾವ್ಯ ಮತ್ತು ಜೀವನಗಳು ಸ್ಫೂರ್ತಿದಾಯಕವಾಗಿವೆ. ಏಕೆಂದರೆ, ಇಂದು ಹಿಂದುಳಿದ ವರ್ಗಗಳ ಕಲಾಪ್ರತಿಭೆ ಮತ್ತು ಸಾರ್ವಜನಿಕ ಸಮ್ಮತಿಯನ್ನು ಪಡೆಯುವ ಅವರ ಪ್ರಯತ್ನಗಳು ಮುನ್ನೆಲೆಗೆ ಬಂದಿವೆ.

ಕನಕನ ಕಿಂಡಿ

ಉಡುಪಿಯ ಕನಕನ ಕಿಂಡಿಯ ಬಗ್ಗೆ ಸ್ವತಃ ಕನಕದಾಸರ ಕೃತಿಗಳಲ್ಲಾಗಲೀ ಇತರೆ ಕೃತಿಗಳಲ್ಲಾಗಲೀ ಮಠದ ದಾಖಲೆಗಳಲ್ಲಾಗಲೀ ಚರಿತ್ರೆಯ ಪುಟಗಳಲ್ಲಾಗಲೀ ಶಾಸನಗಳಲ್ಲಾಗಲೀ ಎಲ್ಲಿಯೂ ಪ್ರಸ್ತಾಪವಾಗಿಲ್ಲ. ಇನ್ನು ಉಡುಪಿಯ ಆ ದೇವಾಲಯವಾದರೋ ಆಗಮಾದಿಗಳಲ್ಲಿ ಹೇಳಿರುವ ವಾಸ್ತುವಿನ್ಯಾಸದನ್ವಯ ಕಟ್ಟಿಯೂ ಇಲ್ಲ. ಅಲ್ಲಿ ಬಲಿಕಲ್ಲು, ಧ್ವಜಸ್ತಂಭ, ಅಂತರಾಳ, ಅರ್ಧಮಂಟಪ, ಪ್ರದಕ್ಷಿಣಾಪಥಗಳೂ ಇಲ್ಲ. ಇನ್ನು ಪ್ರಾಣದೇವರ ಪ್ರತಿಷ್ಠಾಪನೆಯೂ ವಿಭಿನ್ನವೇ. ಉಡುಪಿಯ ಶ್ರೀಕೃಷ್ಣ ವಿಗ್ರಹವನ್ನು ಮಧ್ವಾಚಾರ್ಯರು ಕ್ರಿಸ್ತಶಕ ೧೨೩೮ (ಶಕವರ್ಷ ೧೧೬೦ ಹೇವಿಲಂಬಿ ಸಂವತ್ಸರ ಮಾಘ ಶುದ್ಧ ತದಿಗೆ) ನೇ ವರ್ಷದಲ್ಲಿ ಪಶ್ಚಿಮಾಭಿಮುಖಿಯಾಗಿ ಪ್ರತಿಷ್ಠೆ ಮಾಡಿದ್ದರಾಗಲೀ ಪೂರ್ವಾಭಿಮುಖವಾಗಿ ಅಲ್ಲ. ತಮಗೆ ಪಶ್ಚಿಮ ಸಮುದ್ರದಿಂದ ಲಭ್ಯವಾದ ಆ ಮೂರ್ತಿಯನ್ನು ಪಶ್ಚಿಮಕ್ಕೇ ಮುಖಮಾಡಿ ಪ್ರತಿಷ್ಠಿಸಿ ಪಶ್ಚಿಮ ಸಮುದ್ರಾಧೀಶ್ವರನನ್ನಾಗಿ ಕರೆದರೆನ್ನುವುದೇ ಸತ್ಯಸ್ಯ ಸತ್ಯ. ಇದಕ್ಕೆ ದಾಖಲೆಯಾಗಿ ಕನಕದಾಸರ ಸಮಕಾಲೀನರಾದ ಸುರೋತ್ತಮ ತೀರ್ಥರ ಹೇಳಿಕೆ,ಅದರ ತಾತ್ಪರ್ಯ ಹೀಗಿದೆ:'ದೇವತಾವಿಗ್ರಹಗಳನ್ನು ಪೂರ್ವಾಭಿಮುಖಿಯಾಗಿಯೇ ಸ್ಥಾಪಿಸಬೇಕೆಂದು ಏನೂ ಇಲ್ಲ, ಆದ್ದರಿಂದಲೇ ಮಧ್ವರು ಈ ಕೃಷ್ಣನ ಪ್ರತಿಮೆಯನ್ನು ಪಶ್ಚಿಮಾಭಿಮುಖಿಯಾಗಿ ಸ್ಥಾಪಿಸಿದ್ದಾರೆ". ಮಧ್ವರು ಶ್ರೀಕೃಷ್ಣಪಾದಾಂಬುಜಾರ್ಚಕರಾಗಿ ತಮ್ಮ ಮತ್ತು ತಮ್ಮ ಎಂಟು ಮಂದಿ ಶಿಷ್ಯರು ಮತ್ತು ಅವರ ಪರಂಪರೆಯವರ ನಿತ್ಯಾರ್ಚನೆಗಾಗಿ ಸ್ಥಾಪಿಸಿದ ಮೂರ್ತಿ ಇದು. ಈ ಮೂರ್ತಿ ಮತ್ತು ಅದರ ಅರ್ಚನೆ ಮಠದ ಖಾಸಗಿ ಕ್ರಿಯೆಗಳಾಗಿದ್ದು ಸಾರ್ವಜನಿಕರಿಗೆ ತೆರೆದಿಟ್ಟದ್ದಲ್ಲ.

ವಾದಿರಾಜರು, ಪುರಂದರದಾಸರು, ಕನಕದಾಸರು ತ್ರಿವೇಣೀಸಂಗಮದಂತೆ. ಅವರು ಮೂರು ಮಂದಿಯೂ ಒಂದೇ ಓರಗೆಯವರು ಒಂದೇ ಮನಸ್ಸಿನವರು. ಪರಸ್ಪರ ಗೌರವಾದರಗಳನ್ನು ಹೊಂದಿದ್ದವರು. ಪ್ರತಿಯೊಬ್ಬರಿಗೂ ಇನ್ನಿಬ್ಬರ ಪ್ರೌಢಿಮೆ ಔನ್ನತ್ಯಗಳ ಅರಿವಿತ್ತು. ೧೨೦ ವರ್ಷಗಳ ಕಾಲ ಬದುಕಿದ್ದ ವಾದಿರಾಜ(೧೪೮೦-೧೬೦೦)ರಿಗೆ ತಮ್ಮ ಮಠದಲ್ಲಿ ಸರ್ವಾಂಗೀಣ ಸುಧಾರಣೆ ತರುವ ತವಕ ಇತ್ತಾದರೂ ಅಲ್ಲಿ ಭದ್ರವಾಗಿ ಬೇರೂರಿದ್ದ ಮಡಿವಂತಿಕೆಯನ್ನು ಹೋಗಲಾಡಿಸಲು ಅವರಿಂದಾಗಿರಲಿಲ್ಲ. ವಾದಿರಾಜರೊಂದಿಗೆ ತಮಗಿದ್ದ ಸ್ನೇಹವನ್ನು ದುರುಪಯೋಗಪಡಿಸಿಕೊಂಡು ಮಠದಲ್ಲಿ ಪ್ರವೇಶ ಪಡೆಯುವ ದಾರ್ಷ್ಟ್ಯವೂ ಕನಕರಿಗಿರಲಿಲ್ಲ. ಕೃಷ್ಣನ ಮೂರ್ತಿಯ ಎದುರು ದರ್ಶನಾಪೇಕ್ಷೀ ಭಕ್ತರ ಅನುಕೂಲಕ್ಕಾಗಿ ಇದ್ದ ಧೂಳಿದರ್ಶನ ಕಿಂಡಿಯ ಬಳಿ ವಾದಿರಾಜರೂ ಕನಕದಾಸರೂ ಲೋಕಾಭಿರಾಮದ ಮಾತುಗಳನ್ನಾಡುತ್ತಿದ್ದರು. ಅದೇ ಕಿಂಡಿಯೇ ಮುಂದೆ ಕನಕನ ಕಿಂಡಿಯಾಯಿತು ಹೊರತು ಸಿನಿಮೀಯವಾಗಿ ಅಲ್ಲ. ಕನಕದಾಸರು ಪುಣ್ಯಪುರುಷರೆಂದು ಬಿಂಬಿಸಲು ಅವರ ಕಾವ್ಯಕೃಷಿಯೇ ಮಹತ್ತಾದ ಸಾಕ್ಷಿಯಾಗಿ ನಿಲ್ಲುವುದರಿಂದ ಕಿಂಡಿಯ ಸಹಾಯ ಅವರಿಗೆ ಬೇಕಾಗಿಯೂ ಇಲ್ಲ.

ಹೀಗೆ ಕನಕದಾಸರ ಸಾಹಿತ್ಯಕೃತಿಗಳು, ಅವರ ಬಗೆಗಿನ ಐತಿಹ್ಯಗಳು, ಅವರ ಕುರಿತು ಇತರೆ ಸಾಹಿತ್ಯಗಳಲ್ಲಿ ಅಥವಾ ಶಾಸನಗಳಲ್ಲಿನ ಮಾಹಿತಿಗಳನ್ನು ಕ್ರೋಢೀಕರಿಸಿ ಕನಕದಾಸರ ಸ್ಥೂಲ ಜೀವನ ಚಿತ್ರಣವನ್ನು ರಚಿಸಬಹುದಲ್ಲದೆ ಪರಿಪೂರ್ಣ ಜೀವನಚರಿತ್ರೆಯ ನಿರೂಪಣೆ ಸಾಧ್ಯವಿಲ್ಲದ ಮಾತು. ಆದರೆ ವಿದ್ವತ್ ನೆಲೆಯಲ್ಲಿ ವಿದ್ವತ್ಸಂಪನ್ನ ಕನಕದಾಸರು ಕುಲಾತೀತರಾಗಿ ಕಾಲಾತೀತರಾಗಿ ಕನ್ನಡ ಸಾರಸ್ವತ ಲೋಕದ ಪ್ರಜ್ವಲ ತಾರೆಯಾಗಿದ್ದಾರೆ.ವೆ೦ಕಟೇಷ್ ಹೊಸುರ್

ಕನಕದಾಸರ ಒ೦ದು ಕೀರ್ತನೆ

ಕನಕದಾಸರ ಕಾವ್ಯದ ಸರಾಗತೆಗೆ ಒ೦ದು ಉದಾಹರಣೆ:

                ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ
                ನೀ ದೇಹದೊಳಗೊ, ನಿನ್ನೊಳು ದೇಹವೊ

                ಬಯಲು ಆಲಯದೊಳಗೊ, ಆಲಯವು ಬಯಲೊಳೊಗೊ
                ಬಯಲು ಆಲಯವೆರಡು ನಯನದೊಳಗೊ
                ನಯನ ಬುದ್ಧಿಯೊಳಗೊ, ಬುದ್ಧಿ ನಯನದೊಳಗೊ
                ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ

                ಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊ
                ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ
                ಜಿಹ್ವೆ ಮನಸಿನೊಳಗೊ, ಮನಸು ಜಿಹ್ವೆಯೊಳಗೊ
                ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ

                ಕುಸುಮದೊಳು ಗ೦ಧವೊ, ಗ೦ಧದೊಳು ಕುಸುಮವೊ
                ಕುಸುಮ ಗ೦ಧಗಳೆರಡು ಘ್ರಾಣದೊಳಗೊ
                ಅಸಮಭವ ಕಾಗಿನೆಲೆಯಾದಿ ಕೇಶವರಾಯ
                ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ
http://www.classicalkannada.org/, http://kn.wikipedia.org/wiki/

ಕುಮಾರವ್ಯಾಸ


ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. "ಗದುಗಿನ ನಾರಣಪ್ಪ" ಎಂದು ಸಾಮಾನ್ಯವಾಗಿ ಕುಮಾರವ್ಯಾಸನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ.


ಕುಮಾರವ್ಯಾಸ ಕನ್ನಡ ಸಾಹಿತ್ಯದ ಬೆಳವಣಿಗೆಯ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದಾನೆ. ಕುಮಾರವ್ಯಾಸ ಭಾರತವನ್ನು ಇಂದಿಗೂ ಸಹ ಕರ್ನಾಟಕದಲ್ಲಿ ಓದಲಾಗುತ್ತದೆ, ವ್ಯಾಖ್ಯಾನ ಮಾಡಲಾಗುತ್ತದೆ. ಕುಮಾರವ್ಯಾಸ ಭಾರತವನ್ನು ಓದುವ ಒಂದು ವಿಶಿಷ್ಟ ಶೈಲಿಯಾದ ಗಮಕ ಕಲೆ ಸಾಕಷ್ಟು ಪ್ರಸಿದ್ಧವಾಗಿದೆ.

ಕುಮಾರವ್ಯಾಸನು, ಕನ್ನಡ ಸಾಹಿತ್ಯದ ಬಹಳ ಹಿರಿಯರಾದ ಕವಿಗಳ ಸಾಲಿಗೆ ಸೇರುತ್ತಾನೆ. ಪಂಪ ಮತ್ತು ಹೆಸರಾಂತ ವಚನಕಾರರು ಮಾತ್ರ ಅವನಿಗೆ ಸರಿಸಾಟಿಯಾದವರು. ಅವನು, ಪಂಡಿತರು ಮತ್ತು ಪಾಮರರು ಇಬ್ಬರ ಮನಸ್ಸುಗಳನ್ನೂ ಸೆಳೆಯಬಲ್ಲವನು. ಅಂತೆಯೇ ಅವನ ಕಾವ್ಯದಲ್ಲಿ ವಿರಹಿಗಳಿಂದ ಹಿಡಿದು ವಿದ್ಯಾಪರಿಣಿತರವರೆಗೆ, ಅರಸುಗಳಿಂದ ಹಿಡಿದು ಯೋಗೀಶ್ವರರವರೆಗೆ, ಪ್ರತಿಯೊಬ್ಬರಿಗೂ ಅವರಿಗೆ ಬೇಕಾದ ಸಂಗತಿಗಳು ಹೇರಳವಾಗಿ ಸಿಗುತ್ತವೆ. ತನಗಿಂತ ಹಿಂದಿನ ಪಂಪ, ರನ್ನ, ನಾಗಚಂದ್ರ ಮುಂತಾದ ಅನೇಕ ಹಿರಿಯ ಕವಿಗಳಂತೆಯೇ ಕುಮಾರವ್ಯಾಸನೂ ಕೂಡ, ಪ್ರತಿಯೊಬ್ಬ ಓದುಗನಿಗೂ ಕೇಳುಗನಿಗೂ ಸುಪರಿಚಿತವಾದ ಕಾವ್ಯವನ್ನು ಆರಿಸಿಕೊಂಡು ಅದನ್ನು ತನ್ನ ಜೀವನದರ್ಶನದ ಹೊರಹೊಮ್ಮುವಿಕೆಯಾಗಿ ಬದಲಾಯಿಸುತ್ತಾನೆ. ಯಾಂತ್ರಿಕವಾದ 'ಮಕ್ಕಿ ಕಾ ಮಕ್ಕಿ' ಅನುವಾದದ ಬಗ್ಗೆ ಅವನು ಒಂದಿನಿತೂ ಆಸಕ್ತನಲ್ಲ. ಕಾವ್ಯದ ಕೇಂದ್ರವಸ್ತುವನ್ನು, ಪರಾಕ್ರಮದಿಂದ ಭಕ್ತಿಯ ಕಡೆಗೆ ತಿರುಗಿಸುವ ಕೆಲಸದಲ್ಲಿ ಅವನು ಯಶಸ್ವಿಯಾಗುತ್ತಾನೆ. ಈ ಕಾವ್ಯದೊಳಗೆ, ಪ್ರತಿಯೊಂದು ಕ್ಷಣದಲ್ಲಿಯೂ ಕೃಷ್ಣನ ವ್ಯಕ್ತಿತ್ವವು ಆವರಿಸಿಕೊಂಡಿದೆ. ತನ್ನ ಸುತ್ತಲಿನ, ಇಂದ್ರಿಯಾನುಭವಗಳಿಂದ ಕೂಡಿದ ಜಗತ್ತು, ಕುಮಾರವ್ಯಾಸನಿಗೆ ಚೆನ್ನಾಗಿ ಪರಿಚಯವಾಗಿದೆ. ಈ ತಿಳಿವಳಿಕೆಯು ಕವಿಯ ನಿರೂಪಣೆಗೆ ಶಕ್ತಿಯನ್ನು ಕೊಟ್ಟಿದೆ. ಪುರಾತನವಾದ ಕಥೆಯನ್ನು ಸ್ಥಳೀಯವಾದ ದೇಶ-ಕಾಲಗಳಲ್ಲಿ ಕೂಡಿಸುವ ಕೆಲಸವು ಈ ಕವಿಗೆ ಸಾಧ್ಯವಾಗಿದೆ.

  ಈ ಕವಿಯ ಜೀವನ ವಿವರಗಳ ಬಗ್ಗೆ ನಮಗೆ ತಿಳಿದಿರುವುದು ಬಹಳ ಕಡಿಮೆ. ತಿಳಿದಿರುವ ಅಷ್ಟಿಷ್ಟು ಸಂಗತಿಗಳು ಕೂಡ ವಸ್ತುಸ್ಥಿತಿ ಮತ್ತು ಕಟ್ಟುಕಥೆಗಳ ಮಿಶ್ರಣವಾಗಿದೆ. ಆದರೂ ಅವನ ವಿಜಯನಗರ ಸಾಮ್ರಾಜ್ಯದ ಏಳು ಬೀಳುಗಳನ್ನು ನೋಡಿದವನೆಂಬ ಸಂಗತಿಯು ಸ್ಪಷ್ಟವಾಗಿದೆ. ಹಾಗೆಯೇ ಅವನು ತನ್ನ ತವರೂರಾದ ಗದುಗಿನ ವೀರನಾರಾಯಣಸ್ವಾಮಿಯನ್ನು ತನ್ನ ಇಷ್ಟದೇವತೆಯಾಗಿ ಹೊಂದಿದ್ದನು. ಅವನ ಕಾವ್ಯದೊಳಗೆ ಸಿಗುವ ಆಂತರಿಕ ಪುರಾವೆಗಳನ್ನು ನೋಡಿ ಹೇಳುವುದಾದರೆ, ಅವನಿಗೆ ಸಂಸ್ಕೃತ ಮತ್ತು ಮರಾಠಿ ಭಾಷೆಗಳ ನಿಕಟ ಪರಿಚಯ ಇತ್ತು. ಅವನು ಯಾರದೇ ಆಸ್ಥಾನದ ಕವಿ ಆಗಿರಲಿಲ್ಲ. ರಾಜಾಶ್ರಯಕ್ಕಾಗಿ ಹಂಬಲಿಸಲಿಲ್ಲ. ಬಹುಪಾಲು ಪ್ರಾಚೀನ ಕವಿಗಳಲ್ಲಿ ಕಾಣಿಸದ ಗ್ರಾಮೀಣತೆಯ ಅಂಶವು, ಕುಮಾರವ್ಯಾಸನಲ್ಲಿ ಎದ್ದು ಕಾಣುತ್ತದೆ. ಅವನು ಕನ್ನಡ ಕಾವ್ಯ ಪರಂಪರೆಯ ಆಳವಾದ ಪರಿಚಯವನ್ನು ಪಡೆದಿರುವುದಕ್ಕೆ ಅವನ ಕಾವ್ಯವೇ ಸಾಕ್ಷಿ. ಆದರೂ ಅವನು ಹೊಸ ಹಾದಿಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದನು. ಅವನು ಮೂಲ ಕಥೆಗೆ ಅಂಟಿಕೊಳ್ಳುವುದು ಬಹಳ ಸ್ಥೂಲವಾದ ಚೌಕಟ್ಟಿನಲ್ಲಿ ಮಾತ್ರ. ಉಳಿದಂತೆ ಅವನ ಕಾವ್ಯದ ಶರೀರವು ಅವನದೇ ಆದ ಲೋಕದರ್ಶನ ಮತ್ತು ಜೀವನದರ್ಶನಗಳಿಗೆ ಕನ್ನಡಿಯಾಗುತ್ತದೆ. ಅವನು ಸೃಷ್ಟಿಸುವ ಪಾತ್ರಗಳು ಸದಾ ಬೆಳೆಯುತ್ತಿರುತ್ತವೆ, ಬದಲಾಗುತ್ತಿರುತ್ತವೆ. ಕವಿಯು ಅವುಗಳನ್ನು ಸಿದ್ಧವಸ್ತುಗಳೆಂದು ಭಾವಿಸುವುದಿಲ್ಲ. ಈ ಕವಿಗೆ ಇರುವುದಕ್ಕೂ ಆಗುವುದಕ್ಕೂ ಇರುವ ಮಹತ್ವದ ವ್ಯತ್ಯಾಸವು ಗೊತ್ತಿದೆ. ಸರ್ವಶಕ್ತನೆಂದು ಚಿತ್ರಿತನಾಗಿರುವ ಕೃಷ್ಣನೂ ಘಟನೆಗಳು ನಡೆಯುವ ಸಹಜ ಗತಿಗೆ ಅಡ್ಡಿ ಬರುವುದಿಲ್ಲ. ಆದ್ದರಿಂದಲೇ ಇಲ್ಲಿನ ಅನೇಕ ಪಾತ್ರಗಳಿಗೆ ಕಾರ್ಯಗಳ ಪರಿಣಾಮವು ಗೊತ್ತಿದ್ದರೂ, ಅವರು ಹಿಂಜರಿಯದೆ, ತಮ್ಮ ಭಾವನೆಗಳು ತೋರಿಸಿದ ಹಾದಿಯಲ್ಲಿ ಚಲಿಸುತ್ತಾರೆ. ಈ ಧೋರಣೆಗೆ ಕರ್ಣ ಮತ್ತು ದುರ್ಯೋಧನರು ಅತ್ಯುತ್ತಮ ಉದಾಹರಣೆಗಳು. ಈ ಎಲ್ಲ ಪಾತ್ರಗಳಿಗೂ ತೀವ್ರವಾದ ಮಾನುಷಿಕ ಭಾವನೆಗಳಿವೆ ಮತ್ತು ಅವುಗಳನ್ನು ಹೊರಹಾಕಲು ಅವರು ಹಿಂಜರಿಯುವುದಿಲ್ಲ.

ಕನ್ನಡ-ಮರಾಠಿ ದ್ವಿಭಾಷಿಕ ಪ್ರದೇಶದಲ್ಲಿ ಬದುಕಿದ್ದ ಕುಮಾರವ್ಯಾಸನು, ಕನ್ನಡ ಭಾಷೆಯ ನಾಡಿಮಿಡಿತವನ್ನು ಬಲ್ಲವನು. ಅವನು ಅದನ್ನು ತನ್ನ ಅಗತ್ಯಕ್ಕೆ ತಕ್ಕಂತೆ ಮಣಿಸಿಕೊಂಡಿದ್ದಾನೆ. ಅವನು ಆರಿಸಿಕೊಂಡಿರುವ ಛಂದೋರೂಪವಾದ ಭಾಮಿನೀ ಷಟ್ಪದಿಯು, ಕನ್ನಡದ ಅನಂತ ಸಾಧ್ಯತೆಗಳನ್ನು ತೋರಿಸಿಕೊಡಲು ಬಳಸುವ ವಾಹಕವಾಗಿ ಇಲ್ಲಿ ಬಳಕೆಯಾಗಿದೆ. ಅವನು ಭಾಷೆಯ ಭಾವಗೀತಾತ್ಮಕ, ವರ್ಣನಾತ್ಮಕ ಮತ್ತು ನಾಟಕೀಯ ಬಗೆಗಳನ್ನು ಸಮಾನ ಸಾಮರ್ಥ್ಯದಿಂದ ಬಳಸುತ್ತಾನೆ. ಹಾಗೆಯೇ ತಾನು ಬಳಸುವ ಅರ್ಥಾಲಂಕಾರಗಳಿಗಾಗಿ, ಕ್ಲೀಷೆಯಾಗಿರುವ ಕವಿಸಮಯಗಳನ್ನು ಬಳಸದೆ, ಆಡುಮಾತಿನ ಬೊಕ್ಕಸವನ್ನು ಸೂರೆ ಮಾಡುತ್ತಾನೆ.

ಈ ಕವಿಯ ಲೋಕದರ್ಶನವು ಸಮಕಾಲೀನ ಸಮಾಜದಿಂದಲೂ ರೂಪಿತವಾಗಿದೆ. ತನಗೆ ಸಮೀಪದಲ್ಲಿಯೇ ಪ್ರಚುರವಾಗಿದ್ದ ವೀರಶೈವ ಧರ್ಮ ಮತ್ತು ವಚನ ಸಾಹಿತ್ಯಗಳು ಅವನ ಮೇಲೆ ತೀವ್ರ ಪ್ರಭಾವ ಬೀರಿದಂತೆ ತೋರುವುದಿಲ್ಲ. ಆದರೂ ಅವನಿಗೆ ಅವುಗಳ ಪರಿಚಯ ಇದ್ದಿರಲೇ ಬೇಕು. ಕುಮಾರವ್ಯಾಸನಂತಹ ಕವಿಗಳು ಶಾಶ್ವತ ಮತ್ತು ತಾತ್ಕಾಲಿಕಗಳನ್ನು ಒಂದುಗೂಡಿಸಿ, ಕಾವ್ಯದ ಒಡಲೊಳಗೆ ಕಟ್ಟಿಕೊಡುವ ಕೆಲಸದಲ್ಲಿ ನಿರತರಾಗಿರುತ್ತಾರೆ.

‘ಐರಾವತ’ವು ಎಂಟು ಸಂಧಿಗಳಲ್ಲಿ, 410 ಪದ್ಯಗಳನ್ನು ಹೊಂದಿರುವ ಚಿಕ್ಕ ಕಾವ್ಯ. ಇದರಲ್ಲಿ ಕುಂತಿಯು ಮಾಡುವ ಒಂದು ವ್ರತಕ್ಕಾಗಿ, ಅರ್ಜುನನು ಇಂದ್ರನ ಐರಾವತವನ್ನೇ ಭೂಮಿಗೆ ಬರಮಾಡುವ ಕಥೆಯಿದೆ.

ಕುಮಾರವ್ಯಾಸನು ಕನ್ನಡದ ಮಹಾಕವಿಗಳಲ್ಲಿ ಒಬ್ಬನೆನ್ನುವುದು ಸರ್ವಸಮ್ಮತವಾದ ಸಂಗತಿಯಾಗಿದೆ. 


Krupe: http://kn.wikipedia.org