ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Saturday, April 30, 2011

ಜಿ. ಪಿ. ರಾಜರತ್ನಂ

'ಜಿ. ಪಿ. ರಾಜರತ್ನಂ' ರವರು ಹೆಸರಾಂತ ಗುಂಡ್ಲು ಪಂಡಿತ ವಂಶ ದಲ್ಲಿ ಡಿಸೆಂಬರ್ ೦೫, ೧೯೦೪ರಂದು ಜನಿಸಿದರು. ತಾಯಿಯ ಪ್ರೀತಿ ಇಲ್ಲದೆ ಬೆಳೆದ ರಾಜರತ್ನಂಗೆ, ತಂದೆಯೇ ಎಲ್ಲವೂ ಆಗಿದ್ದರು. ಅಜ್ಜಿಯ ಅಕ್ಕರೆಯಲ್ಲೂ ರಾಜರತ್ನಂ ಬೆಳೆದರು. ತಂದೆ ಬಡ ಮೇಸ್ಟ್ರು. ಸ್ವಾತಂತ್ರ್ಯ ಪೂರ್ವದಲ್ಲೇ (೧೯೩೧ರಲ್ಲಿ) ರಾಜರತ್ನಂ ಎಂ. ಎ (ಕನ್ನಡ) ದಲ್ಲಿ ಮುಗಿಸಿ, ಶಿಶು ವಿಹಾರ ಹಾಗೂ ತಂದೆಯ ಶಾಲೆಯಲ್ಲಿ ಆರಂಭಿಕ ಮೇಸ್ಟ್ರು ಆದರು. ಇದರ ಅನುಭವದ ಫಲವೇ ಮಕ್ಕಳ ಕುರಿತು ಬರೆದ `ತುತ್ತೂರಿ' ಶಿಶು ಗೀತೆ ಸಂಕಲನ'. ಕ್ರಮೇಣ ಆ ಕೆಲಸ ತೃಪ್ತವಾಗದೆ ಹೈದರಾಬಾದಿಗೂ ಕೆಲಸ ಹುಡುಕಿ ಹೋಗಿದ್ದುಂಟು. ಅಲ್ಲಿಂದ ನಿರಾಶರಾಗಿ ಬೆಂಗಳೂರಿಗೆ ಬಂದು ಜನಗಣತಿ ಕಛೇರಿಯಲ್ಲಿ ಕೆಲಸಕ್ಕೆ ಪ್ರಯತ್ನಿಸಿದರು. ಆದರೆ ಅಲ್ಲಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ರಾಜರತ್ನಂರವರಿಗೆ 'ಸಾಹಿತ್ಯ ಸೇವೆ' ಮುಂದುವರೆಸಲು ಉಪದೇಶಿಸಿದರು. ಅದರ ಫಲವೇ ಮುಂದೆ 'ರಾಜರತ್ನಂ' ಅವರಿಂದ 'ಉತ್ತಮ ಸಾಹಿತ್ಯ ನಿರ್ಮಾಣ'ಕ್ಕೆ ದಾರಿಯಾಯಿತು. ಬೌದ್ಧ ಸಾಹಿತ್ಯ ಇಂಥ ಉಪಯುಕ್ತ ಸಾಹಿತ್ಯದಲ್ಲೊಂದು 'ಮಿಂಚು'.

ರಾಜರತ್ನಂ ಅವರಿಗೆ ವೈವಾಹಿಕ ಜೀವನದಲ್ಲಿ ಸಾಕಷ್ಟು ನೋವುಂಟಾಯಿತು. ಪತ್ನಿ ಲಲಿತಮ್ಮ ಕಾಯಿಲೆ ಬಿದ್ದವರು ಉತ್ತಮವಾಗಲೇ ಇಲ್ಲ. ವಿಧಿವಶರಾದರು. ಅವರ ನೆನಪು ಹಸಿರಾಗಿದ್ದಾಗಲೇ ಸೀತಮ್ಮ ಅವರ 'ಬಾಳನಂದಾದೀಪ'ವಾಗಿ ಬಂದರು. ಬದುಕು ಸ್ಥಿರವಾಯಿತು. ಕಷ್ಟ ಕಾರ್ಪಣ್ಯಗಳ ನಡುವೆ ೧೯೩೮ರಲ್ಲಿ 'ಕನ್ನಡ ಪಂಡಿತ ಹುದ್ದೆ', ರಾಜರತ್ನಂ ಅವರನ್ನು ಹುಡುಕಿ ಬಂತು. ಮೈಸೂರು, ಬೆಂಗಳೂರು, ಶಿವಮೊಗ್ಗ, ತುಮಕೂರುಗಳಲ್ಲಿ ಅಧ್ಯಾಪಕರಾಗಿ, ಮೆಚ್ಚಿನ ಮೇಸ್ಟ್ರು ಆಗಿ ಖ್ಯಾತರಾದರು

"ರತ್ನನ ಪದಗಳು" ರಾಜರತ್ನಂ ಅವರ ವಿಶಿಷ್ಟ ಕೊಡುಗೆ. ಇದರಲ್ಲಿ ಅವರ ಜೀವನ ದರ್ಶನವಿದೆ. 'ಕುಡುಕ'ನೆಂಬ ಹೀಯಾಳಿಕೆಗೆ ಗುರಿಯಾದ ಬಡವನೊಬ್ಬನ ಕಾಣ್ಕೆ, ನೋವು, ನಲಿವು, ಒಲವು, ಗೆಲವು, ಸೋಲು ಎಲ್ಲಾ ಈ ಕಾವ್ಯದಲ್ಲಿ ಮೈದುಂಬಿವೆ. 'ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ' ಎಂಬ ಶಿಶು ಗೀತೆಯಿಂದ, ಎಂಡಕುಡುಕ ರತ್ನನ ಪದಗಳನ್ನಲ್ಲದೆ ನೂರಾರು ಕೃತಿಗಳನ್ನು ರಚಿಸಿ ಕನ್ನಡ ಕಾಯ್ದ, ಬೋಧಿಸಿದ `ಮೇಷ್ಟ್ರು' ಆಗಿ ಹೆಸರಾದವರು ಜಿ.ಪಿ.ರಾಜರತ್ನಂ ಅವರು. ಟಿ. ಪಿ.ಕೈಲಾಸಂ ಅವರ ಸಾಹಿತ್ಯ ಪ್ರಭಾವ, ಭಾಷೆ ಬಳಕೆ ರಾಜರತ್ನಂ ಅವರ ಮೇಲಾಗಿರುವುದು ಕಾಕತಾಳೀಯ ಇರಬಹುದು.

Friday, April 29, 2011

ಅನಂತ ಪ್ರಣಯ - ದ ರಾ ಬೇಂದ್ರ

ಉತ್ತರದ್ರುವದಿಂ ದಕ್ಷಿಣದ್ರುವಕೂ
ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಜಿಸಿ ನಗೆಯಲಿ ಮೀಸುತಿದೆ.
ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ.
ಭುವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸೆಯಿಸಿತು
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ದ್ಃಅರೆಯ ಮಸೆಯಿಸಿತು.
ಅಕ್ಷಿನಮೀಲನ ಮಾಡದೆ ನಕ್ಷ-
ತ್ರದ ಗಣ ಗಗನದಿ ಹಾರದಿದೆ
ಬಿದಿಗೆಯ ಬಿಂಬಾಧರದಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ.

Thursday, April 28, 2011

ಅನಂತ ಪೈ,

ಕಾರ್ಕಳದ ಸಾಲ್ಮರದ ಬಳಿಯ ಮನೆಯಲ್ಲಿ ಕೆಲಕಾಲ ವಾಸವಾಗಿದ್ದ ಹಾಗೂ ಕಾರ್ಕಳಕ್ಕೆ ಬಂದಾಗ ವಾಸ ಮಾಡುತ್ತಿದ್ದ ಅಂಕಲ್ ಪೈ ಮನೆ.  (ಚಿತ್ರ ಕೃಪೆ ಪ್ರಜಾವಾಣಿ )

ಮಕ್ಕಳ ಪ್ರೀತಿಯ ‘ಅಂಕಲ್ ಪೈ
ಭಾರತೀಯ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಮಕ್ಕಳಿಗಾಗಿ ಚಿತ್ರಕಥೆಗಳನ್ನ ರೂಪಿಸಿದ್ದ ಅಪರೂಪದ ಮೆದುಳು ಅನಂತ ಪೈ ೧೯೬೦ರ ದಶಕದಲ್ಲಿ ಮಕ್ಕಳಿಗಾಗಿನ ಸಚಿತ್ರ ಕಥಾಗುಚ್ಚಗಳೆಂದರೆ ಕೇವಲ ಪಾಶ್ಚಾತ್ಯ ಮೂಲದ ಕಾಮಿಕ್ಸ್ಗಳು ಹಾಗು ಅವುಗಳ ಎರವಲು ಸರಕು ಮಾತ್ರವೆ ಎನ್ನುವಂತಾಗಿದ್ದ ಭೀಕರ ದಿನಗಳಲ್ಲಿ.ಮುಂದಿನ ತಲೆಮಾರುಗಳ ಓದುವ ದಿಕ್ಕನ್ನೆ ನಿರ್ದೇಶಿಸಿ-ಉತ್ತಮ ಓದನ್ನ ರೂಪಿಸಿಕೊಟ್ಟ "ಅಮರ ಚಿತ್ರಕಥೆಗಳು" ಹಾಗು "ಪಂಚತಂತ್ರದ ಕಥೆಗಳು" ಅನಂತ ಪೈಗಳಿಂದ ಭಾರತೀಯ ಚಿಣ್ಣರಿಗೆ ಸಂದಿದ್ದ ಒಂದು ಅದ್ಭುತ ಕೊಡುಗೆ.ಇವರು ಮೂಲತಃ ನಮ್ಮ ಕರಾವಳಿಯ ಕಾರ್ಕಳದವರು ಎನ್ನೋದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ.ಅವರನ್ನ ನೆನೆಯದಿದ್ದರೆ ಮಾತ್ರ ನಾವೆಲ್ಲಾ ನಿಸ್ಸಂಶಯವಾಗಿ ಕೃತಘ್ನರ ಸಾಲಿಗೆ ಸೇರುತ್ತೀವಿ.  (ಕೃಪೆ - ಮರೆತ ಮಾತುಗಳು)

ಅಂತರಂಗದ ಮೃದಂಗ

ಅಂತರಂಗದ ಮೃದಂಗ ಅಂತು ತೋಮ್-ತನಾನ
ಚಿತ್ತ ತಾಳ ಬಾರಿಸುತಲಿತ್ತು ಝಣ್-ಝಣಣಣಾಣ
ನೆನಹು ತಂತಿ ಮೀಟುತಿತ್ತು ತಮ್-ತನನತಾನ
ಹಲವು ಜನುಮದಿಂದ ಬಂದ ಯಾವುದೋನೋ ಧ್ಯಾನ
ಏಕ ನಾದದಂದನೊಂದು ತಾನದ ವಿತಾನ
ತನಗೆ ತಾನೇ ಸೋಲುತಿಹುದು ನೂಲುತಿಹುದು ಗಾನ
ಕಲ್ಪದಾದಿಯಲ್ಲೇ ನನ್ನ ನಿನ್ನ ವಿರಹವಾಗಿ
ಎಲ್ಲೋ ಏನೋ ನಿನ್ನ ಹುಡುಕಿ ಕಾಂಬ ಕಣ್ಣೇ ಹೋಗಿ
ಮರೆವೆಗೊಂಡು ಬಿದ್ದೆ ನಾನು ನೆಲದ ಮಣ್ಣು ತಾಗಿ
ಕತ್ತಲಲ್ಲೇ ಬೆಳಕು ಮಿಂಚಿ ಪಡೆದಿತೇಳು ಬಣ್ಣ
ಮೂಕ ಮೌನ ತೂಕ ಮೀರಿ ದನಿಯು ಹುಟ್ಟಿತಣ್ಣ
ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ

ಆದಿಪರ್ವ: ೦೧. ಪೀಠಿಕಾ ಸಂಧಿ

ಶ್ರೀವನಿತೆಯರಸನೆ ವಿಮಲ ರಾ
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನನಿಕರ ದಾತಾರ
ರಾವಾಣಾಸುರ ಮಥನ ಶ್ರವಣ ಸು
ಧಾ ವಿನೂತನ ಕಥನ ಕಾರಣ
ಕಾವುದಾನತ ಜನವ ಗದುಗಿನ ವೀರನಾರಯಣ ೧

ಶರಣಸಂಗವ್ಯಸನ ಭುಜಗಾ
ಭರಣನಮರ ಕಿರೀಟ ಮಂಡಿತ
ಚರಣ ಚಾರುಚರಿತ್ರ ನಿರುಪಮ ಭಾಳಶಿಖಿನೇತ್ರ
ಕರಣನಿರ್ಮಲ ಭಜಕರಘ ಸಂ
ಹರಣ ದಂತಿ ಚಮೂರು ಚರ್ಮಾಂ
ಬರನೆ ಸಲಹುಗೆ ಭಕುತ ಜನರನು ಪಾರ್ವತೀರಮಣ ೨

ವರಮಣಿಗಳಿಂದೆಸೆವ ಮೌಳಿಯ
ಸರಸಿಜಾರಿಯ ಕಿರಣದೋಳಿಯ
ವಿರಚಿಸಿದ ಸಿಂಧೂರಭಾಳದಿ ಕುಣಿವ ಕುಂತಳದ
ಕರಿ ನಿಭಾಕೃತಿಯೆನಿಪ ವದನದ
ಕರದ ಪಾಶದ ಮೋದಕದ ವಿ
ಸ್ತರದ ಗಣಪತಿ ಮಾಡೆಮಗೆ ನಿರ್ವಿಘ್ನದಾಯಕವ ೩

ಗಜಮುಖನೆ ಮೆರೆವೇಕದಂತನೆ
ನಿಜಗುಣಾನ್ವಿತ ಪರಶುಧಾರನೆ
ರಜತಗಿರಿಗೊಡೆಯನ ಕುಮಾರನೆ ವಿದ್ಯೆವಾರಿಧಿಯೆ
ಅಜನು ಹರಿ ರುದ್ರಾದಿಗಳು ನೆರೆ
ಭಜಿಸುತಿಹರನವರತ ನಿನ್ನನು
ತ್ರಿಜಗವಂದಿತ ಗಣಪ ಮಾಳ್ಪುದು ಮತಿಗೆ ಮಂಗಳವ ೪

ವಾರಿಜಾಸನೆ ಸಕಲಶಾಸ್ತ್ರ ವಿ
ಚಾರದುದ್ಭವೆ ವಚನರಚನೋ
ದ್ಧಾರೆ ಶ್ರುತಿ ಪೌರಾಣದಾಗಮ ಸಿದ್ದಿದಾಯಕಿಯೆ
ಶೌರಿ ಸುರಪತಿ ಸಕಲ ಮುನಿಜನ
ಸೂರಿಗಳಿಗನುಪಮದ ಯುಕುತಿಯೆ
ಶಾರದೆಯೆ ನರ್ತಿಸುಗೆ ನಲಿನೊಲಿದೆನ್ನ ಜಿಹ್ವೆಯಲಿ ೫

ಆದಿ ನಾರಾಯಣಿ ಪರಾಯಣಿ
ನಾದಮಯೆ ಗಜಲಕ್ಷ್ಮಿ ಸತ್ವಗು
ಣಾಧಿದೇವತೆ ಅಮರ ವಂದಿತ ಪಾದಪಂಕರುಹೆ
ವೇದಮಾತೆಯೆ ವಿಶ್ವತೋಮುಖೆ
ಯೈದು ಭೂತಾಧಾರಿಯೆನಿಪೀ
ದ್ವಾದಶಾತ್ಮ ಜ್ಯೋತಿರೂಪಿಯೆ ನಾದೆ ಶಾರದೆಯೆ ೬

ವೀರನಾರಾಯಣನೆ ಕವಿ ಲಿಪಿ
ಕಾರ ಕುವರವ್ಯಾಸ ಕೇಳುವ
ಸೂರಿಗಳು ಸನಕಾದಿಗಳು ಜಂಗಮ ಜನಾರ್ದನರು
ಚಾರುಕವಿತೆಯ ಬಳಕೆಯಲ್ಲ ವಿ
ಚಾರಿಸುವೊಡಳವಲ್ಲ ಚಿತ್ತವ
ಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನಪವ ೭

ಶ್ರೀಮದಮರಾಧೀಶ ನತಪದ
ತಾಮರಸ ಘನವಿಪುಳ ನಿರ್ಮಲ
ರಾಮನುಪಮ ಮಹಿಮ ಸನ್ಮುನಿ ವಿನುತ ಜಗಭರಿತ
ಶ್ರೀಮದೂರ್ಜಿತ ಧಾಮ ಸುದಯಾ
ನಾಮನಾಹವ ಭೀಮ ರಘುಕುಲ
ರಾಮ ರಕ್ಷಿಸುವೂಲಿದು ಗದುಗಿನ ವೀರನಾರಯಣ ೮

ಶರಧಿಸುತೆ ಸನಕಾದಿ ವಂದಿತೆ
ಸುರನರೋರಗ ಮಾತೆ ಸುಜನರ
ಪೂರೆವ ದಾತೆ ಸುರಾಗ್ರಗಣ್ಯಸುಮೌನಿ ವರಸ್ತುತ್ಯೆ
ಪರಮ ಕರುಣಾ ಸಿಂಧು ಪಾವನ
ಚರಿತೆ ಪದ್ಮಜ ಮುಖ್ಯ ಸಕಲಾ
ಮರ ಸುಪೂಜಿತೆ ಲಕ್ಷ್ಮಿ ಕೊಡುಗೆಮಗಧಿಕ ಸಂಪದವ ೯

ಗಜಮುಖನ ವರಮಾತೆ ಗೌರಿಯೆ
ತ್ರಿಜಗದರ್ಚಿತ ಚಾರು ಚರಣಾಂ
ಭುಜೆಯೆ ಪಾವನಮೂರ್ತಿ ಪದ್ಮಜಮುಖ್ಯ ಸುರಪೂಜ್ಯೆ
ಭಜಕರಘ ಸಂಹರಣೆ ಸುಜನ
ವ್ರಜ ಸುಸೇವಿತೆ ಮಹಿಷ ಮರ್ದಿನಿ
ಭುಜಗ ಭೂಷಣನರಸಿ ಕೊಡು ಕಾರುಣ್ಯದಲಿ ಮತಿಯ ೧೦

ದುರಿತಕುಲಗಿರಿ ವಜ್ರದಂಡನು
ಧರೆಯ ಜಂಗಮ ಮೂರ್ತಿ ಕವಿ ವಾ
ರಿರುಹ ದಿನಮಣಿ ನಿಖಿಲ ಯತಿಪತಿ ದಿವಿಜವಂದಿತನು
ತರಳನನು ತನ್ನವನೆನುತ ಪತಿ
ಕರಿಸಿ ಮಗನೆಂದೊಲಿದು ಕರುಣದಿ
ವರವನಿತ್ತನು ದೇವ ವೇದವ್ಯಾಸ ಗುರುರಾಯ ೧೧

ವಂದಿತಾಮಳ ಚರಿತನಮರಾ
ನಂದ ಯದುಕುಲ ಚಕ್ರವರ್ತಿಯ
ಕಂದ ನತಸಂಸಾರ ಕಾನನ ಘನ ದವಾನಳನು
ನಂದನಂದನ ಸನ್ನಿಭನು ಸಾ
ನಂದದಿಂದಲೆ ನಮ್ಮುವನು ಕೃಪೆ
ಯಿಂದ ಸಲಹುಗೆ ದೇವ ಜಗದಾರಾಧ್ಯ ಗುರುರಾಯ ೧೨

ತಿಳಿಯ ಹೇಳುವೆ ಕೃಷ್ಣಕಥೆಯನು
ಇಳೆಯ ಜಾಣರು ಮೆಚ್ಚುವಂತಿರೆ
ನೆಲೆಗೆ ಪಂಚಮ ಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ
ಹಲವು ಜನ್ಮದ ಪಾಪ ರಾಶಿಯ
ತೊಳೆವ ಜಲವಿದು ಶ್ರೀಮದಾಗಮ
ಕುಲಕೆ ನಾಯಕ ಭಾರತಾಕೃತಿ ಪಂಚಮ ಶ್ರುತಿಯ ೧೩

ಪದದಪ್ರೌಢಿಯ ನವರಸಂಗಳ
ವುದಿತವೆನುವಭಿಧಾನ ಭಾವವ
ಬೆದಕಲಾಗದು ಬಲ್ಲ ಪ್ರೌಢರುಮಾ ಕಥಾಂತರಕೆ
ಇದ ವಿಚಾರಿಸೆ ಬರಿಯ ತೊಳಸಿಯ
ವುದಕದಂತಿರೆಯಲ್ಲಿ ನೋಳ್ಪುದು
ಪದುಮನಾಭನ ಮಹಿಮೆ ಧರ್ಮವಿಚಾರ ಮಾತ್ರವನು ೧೪

ಹಲಗೆ ಬಳಪವ ಪಿಡಿಯದೊಂದ
ಗ್ಗಳಿಕೆ ಪದವಿಟ್ಟಳುಪದೊಂದ
ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ
ಬಳಸಿ ಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ ೧೫

ಕೃತಿಯನವಧರಿಸುವುದು ಸುಕವಿಯ
ಮತಿಗೆ ಮಂಗಳವೀವುದಧಿಕರು
ಮಥಿಸುವುದು ತಿದ್ದುವುದು ಮೆರೆವುದು ಲೇಸ ಸಂಚಿಪುದು
ನುತಗುಣರು ಭಾವುಕರು ವರಪಂ
ಡಿತರು ಸುಜನರು ಸೂಕ್ತಿಕಾರರು
ಮತಿಯನೀವುದು ವೀರನಾರಯಣನ ಕಿಂಕರಗೆ ೧೬

ತಿಣಿಕಿದನು ಫಣಿರಾಯ ರಾಮಾ
ಯಣದ ಕವಿಗಳ ಭಾರದಲಿ ತಿಂ
ತಿಣಿಯ ರಘುವರ ಚರಿತೆಯಲಿ ಕಾಲಿಡಿಲು ತೆರಪಿಲ್ಲ
ಬಣಗು ಕವಿಗಳ ಲೆಕ್ಕಿಪನೆ ಸಾ
ಕೆಣಿಸದಿರು ಶುಕರೂಪನಲ್ಲವೆ
ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ ೧೭

ಹರಿಯ ಬಸುರೊಳಗಖಿಲ ಲೋಕದ
ವಿರಡವಡಗಿಹವೋಲು ಭಾರತ
ಶರಧಿಯೊಳಗಡಗಿಹವನೇಕ ಪುರಾಣ ಶಾಸ್ತ್ರಗಳು
ಪರಮ ಭಕ್ತಿಯಲೀ ಕೃತಿಯನವ
ಧರಿಸಿ ಕೇಳ್ದಾನರರ ದುರಿತಾಂ
ಕುರದ ಬೇರಿನ ಬೇಗೆಯೆಂದರುಹಿದನು ಮುನಿನಾಥ ೧೮

ಅರಸುಗಳಿಗಿದು ವೀರ ದ್ವಿಜರಿಗೆ
ಪರಮ ವೇದದ ಸಾರ ಯೋಗೀ
ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ
ವಿರಹಿಗಳ ಶೃಂಗಾರ ವಿದ್ಯಾ
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ ೧೯

ವೇದ ಪಾರಾಯಣದ ಫಲ ಗಂ
ಗಾದಿ ತೀರ್ಥಸ್ನಾನ ಫಲ ಕೃ
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗ ಫಲ
ಮೇದಿನಿಯನೊಲಿದಿತ್ತ ಫಲ ವ
ಸ್ತ್ರಾದಿ ಕನ್ಯಾದಾನ ಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ ೨೦

ಹೇಮ ಖುರ ಶೃಂಗಾಭರಣದಲಿ
ಕಾಮಧೇನು ಸಹಸ್ರ ಕಪಿಲೆಯ
ಸೋಮ ಸೂರ್ಯ ಗ್ರಹಣದಲಿ ಸುರನದಿಯ ತೀರದಲಿ
ಶ್ರೀಮುಕುಂದಾರ್ಪಣವೆನಿಸಿ ಶತ
ಭೂಮಿದೇವರಿಗಿತ್ತ ಫಲವಹು
ದೀ ಮಹಾಭಾರತದೊಳೊಂದಕ್ಷರವ ಕೇಳ್ದರಿಗೆ ೨೧

ಚೋರ ನಿಂದಿಸಿ ಶಶಿಯ ಬೈದಡೆ
ಕ್ಷೀರವನು ಕ್ಷಯರೋಗಿ ಹಳಿದರೆ
ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು
ಭಾರತದ ಕಥನ ಪ್ರಸಂಗವ
ಕ್ರೂರ ಕರ್ಮಿಗಳೆತ್ತ ಬಲ್ಲರು
ಘೋರತರ ರೌರವವ ಕೆಡಿಸುಗು ಕೇಳ್ದ ಸಜ್ಜನರ ೨೨

ವೇದಪುರುಷನ ಸುತನ ಸುತನ ಸ
ಹೋದರನ ಮೊಮ್ಮಗನ (ಪಾ: ಹೆಮ್ಮಗನ) ಮಗನ ತ
ಳೋದರಿಯ ಮಾತುಳನ ರೂಪ (ಮಾವ)ನನತುಳ ಭುಜಬಲದಿ
ಕಾದಿ ಗೆಲಿದವನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ
ನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ ೨೩

ಕೃಪೆ :  http://gaduginabharata.blogspot.in/


Contributors

Wednesday, April 27, 2011

ಬಸವಣ್ಣನ ವಚನಗಳ ಭಾವಾರ್ಥ

ನೆಲನೊಂದೇ ಹೊಲಗೇರಿ ಶಿವಾಲಯಕ್ಕೆ
ಜಲವೊಂದೇ ಶೌಚಾ ಚಮನಕ್ಕೆ !
ಕುಲವೊಂದೇ ತನ್ನ ತಾನರಿದವಂಗೆ !
ಫಲವೊಂದೇ ಫಡದರ್ಶನ ಮುಕ್ತಿಗೆ
ನಬಿಲವೊಂದೇ ಕೂಡಲ ಸಂಗಮದೇವ ನಿಮ್ಮನರಿದವಂಗೆ

- ನಾವು ಆಚರಿಸುವ ಆಚರಣೆಗಳಿಂದ ಮಾತ್ರ ಉತ್ತಮ, ಅಧಮರೆನಿಸಿಕೊಳ್ಳುತ್ತೇವೆ ಜಾತಿಯಿಂದಲ್ಲ. ನೆಲ ಒಂದೇ ಅಲ್ಲಿ ಶಿವಾಲಯಕಟ್ಟಿದರೆ ಪುಣ್ಯಕ್ಷೇತ್ರ, ದುರಾಚಾರಿಗಳ ತಾಣವಾದರೆ ಅದು ಹೊಲಗೇರಿ. ನೀರು ಒಂದೇ ಅದು ಪೂಜೆಗೆ ಬಳಸಿದರೆ ತೀರ್ಥ, ಶೌಚಕ್ಕೆ ಬಳಸಿದರೆ ಕೊಳಕು ನೀರು. ಅಂತೆಯೇ ಕಾರ್ಯದಿಂದ ಮಾನವ ಕುಲವೊಂದೆ ಉತ್ತಮ. ಜ್ಞಾನದಿಂದ ಉತ್ತಮ, ಅಜ್ಞಾನದಿಂದ ಅಧಮ ಆಯಾಜಾತಿಗಳ ಗುರಿ ಒಂದೇ ಅದುವೇ ಮುಕ್ತಿ ಮೇಲು ಕೀಳೆಂದು ಜಾತಿಯನ್ನು ವಿಂಗಡಿಸುವದನ್ನು ಈ ವಚನದಲ್ಲಿ ಖಂಡಿಸಿದ್ದಾರೆ.
-------------------

ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿದ ಮೇಯಿತ್ತು!
ಕೊಂದಹರೆಂಬುದನರಿಯದೆ
ಬೆಂದೊಡಲ ಹೊರೆವುತ್ತಲಿದೆ?
ಅದಂದೆ ಹುಟ್ಟಿತ್ತು ಅದಂದೇ ಹೊಂದಿತ್ತು!!
ಕೊಂದವರುಳಿವರೆ ಕೂಡಲ ಸಂಗಮದೇವ

-ಬಲಿಕೊಡಲೆಂದು ತಂದ ಕುರಿಯು ತನಗೆ ಮುಂದೆ ಸಾವಿದೆ ಎಂದರಿಯದೆ ಬಾಗಿಲಿಗೆ ಕಟ್ಟಿದ ತೋರಣದ ಹಸಿರೆಲೆಗಳನ್ನು ತಿನ್ನುತ್ತಿರುವುದು. ತನ್ನೆದುರಲ್ಲಿ ತನ್ನ ಕೊರಳನ್ನು ಕತ್ತರಿಸಲು ಕತ್ತಿಮಸೆಯುತ್ತಿರುವರು ಎಂಬ ಅರಿವು ಅದಕ್ಕಿಲ್ಲ. ಈ ಮಾನವನಾದರೂ ಬಲಿ ಕುರಿಯಂತೆ, ಸಾವು ಈಗಲೋ ಆಗಲೋ ಬರಲು ಸಿದ್ಧವಾಗಿದ್ದರೂ, ಸುಖಕ್ಕೆ ಬಲಿಗಳಂತಹ ಹೀನ ಕಾರ್ಯಗಳನ್ನೆಸಗುತ್ತಿರುವನು.
-------------------

ದಯವಿಲ್ಲದ ಧರ್ಮವದೇವುದಯ್ಯ?
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ!
ದಯವೇ ಧರ್ಮದ ಮೂಲವಯ್ಯ
ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯ!

-ಎಲ್ಲಾ ಧರ್ಮಗಳು ಪ್ರತಿಪಾದಿಸುವದು ದಯೆ, ದಯವೇ ಧರ್ಮದ ಮೂಲಾಂಶ, ಸಮಷ್ಟಿ ಹಿತವನ್ನು ಸಾಧಿಸಬೇಕಾದರೆ ದಯವಿರಬೇಕು ಸಕಲ ಪ್ರಾಣಿಗಳಲ್ಲಿ. ದಯವೇ ಇಲ್ಲವಲ್ಲ ಅಲ್ಲಿ ದ್ವೇಷ ರಾಗಗಳ ವಿಜೃಂಭಿಸಿ ಸರ್ವನಾಶಕ್ಕೆ ಕಾರಣವಾಗುತ್ತದೆ. ಆಯಾ ಧರ್ಮ ಸ್ಥಾಪಕರು, ಪ್ರವರ್ತಕರು ದಯೆಗೆ ಪ್ರಥಮಸ್ಥಾನ ಕೊಟ್ಟಿದ್ದಲ್ಲದೆ ದಯವೇ ಧರ್ಮದ ಮೂಲಾಂಶವಾಗಿಸಿದ್ದಾರೆ.
-------------------

ಕೊಲುವನೇ ಮಾದಿಗ!
ಹೊಲಸ ತಿಂಬುವನೇ ಹೊಲೆಯ
ಕುಲವೇನೋ ಆವಂದಿರ ಕುಲವೇನೋ
ಸಕಲ ಜೀವಾತ್ಮರಿಗೆ ಲೇಸನೆ ಬಯಸುವ
ನಮ್ಮ ಕೂಡಲ ಸಂಗನ ಶರಣರೇ ಕುಲಜರು!

-ಮಾದಿಗ-ಹೊಲೆಯ ಎಂದು ಊರ ಹೊರಗಿರುವವರನ್ನು ಕರೆಯುವರು. ಆದರೆ ಮಾದಿಗ ಹೊಲೆಯ ಊರೊಳಗಿಲ್ಲವೇ? ಯಜ್ಞಯಾಗಾದಿಗಳ ನೆಪದಲ್ಲಿ ಪಶುಗಳನ್ನು ಆಹುತಿ ಕೊಟ್ಟು ಕೊಂದು ತಿನ್ನುವರು ಹೊಲೆಯರಲ್ಲವೇ? ಮಾದಿಗರಲ್ಲವೇ? ಯಾವನು ಹುಟ್ಟಿದ ಕುಲ ಏನಾದರೂ ಆರಿಗಲಿ, ಯಾರು ಸಕಲ ಜೀವಾತ್ಮರಿಗೆ ಒಳ್ಳೆಯದನ್ನು ಹಾರೈಸುವನೋ ಅವನೇ ಕುಲಜನು.
-------------------

ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ
ಇದೇ ಅಂತರಂಗ ಶುದ್ಧಿ! ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ!!

-ಕಳ್ಳತನ ಮಾಡಬೇಡ,ಕೊಲ್ಲಬೇಡ,ಸಿಟ್ಟುಮಾಡಬೇಡ, ಪರರ ದೂಷಣೆ ಮಾಡಬೇಡ, ಆತ್ಮ ಪ್ರಶಂಶೆಯಲ್ಲಿ ತೊಡಗಬೇಡ - ಇವುಗಳನ್ನು ಪಾಲಿಸುತ್ತ ಬಂದಲ್ಲಿ ಅಂತರಂಗವೂ-ಬಹಿರಂಗವೂ ಶುದ್ಧಿಯಾಗಿರುವುದು, ಇದೇ ಮಾರ್ಗ ದೇವರನೊಲಿಸುಕೊಳ್ಳುವದು. ಆತ್ಮೋದ್ಧಾರಕ್ಕೆ ಆತ್ಮಶುದ್ಧಿಗೆ ಇದೇ ಸರಳ ಮಾರ್ಗ ಎಂಬಂತೆ ಬಸವಣ್ಣ ತಿಳಿಸಿದ್ದಾರೆ.

ಅಲ್ಲಮಪ್ರಭುವಿನ ವಚನಗಳು

೧.
ಶಿಲೆಯೊಳಗಣ ಪಾವಕನಂತೆ
ಉದಕದೊಳಗಣ ಪ್ರತಿಬಿಂಬದಂತೆ
ಬೀಜದೊಳಗಣ ವೃಕ್ಷದಂತೆ
ಶಬ್ದದೊಳಗಣ ನಿಶ್ಯಬ್ದದಂತೆ
ಗುಹೇಶ್ವರ, ನಿಮ್ಮ ಶರಣಸಂಬಂಧ.
೨.
ಜಲದೊಳಗಿದ್ದ ಕಿಚ್ಚು
ಜಲವ ಸುಡದೆ, ಜಲವು ತಾನಾಗಿದ್ದಿತು ನೋಡಾ!
ನೆಲೆಯನಱದು ನೋಡಿಹೆನೆಂದಡೆ
ಅದು ಜಲವು ತಾನಲ್ಲ !
ಕುಲದೊಳಗಿದ್ದು, ಕುಲವ ಬೆರಸದೆ,
ನೆಲೆಗೆಟ್ಟುನಿಂದುದನಾರುಬಲ್ಲರು !
ಹೊಱಗೊಳಗೆ ತಾನಾಗಿದ್ದು ಮತ್ತೆ
ತಲೆದೋಱದಿಪ್ಪುದು, ಗುಹೇಶ್ವರ, ನಿಮ್ಮ ನಿಲುವು ನೋಡಾ !
ಪಿಂಡಜ್ಞಾನ ಸ್ಥಲ
೩.
ಆದಿಯಾಧಾರವಿಲ್ಲದಂದು
ಹಮ್ಮು ಬಿಮ್ಮುಗಳಿಲ್ಲದಂದು
ಸುರಾಳನಿರಾಳವಿಲ್ಲದಂದು
ಸಚರಾಚರವೆಲ್ಲ ರಚನೆಗೆ ಬಾರದಂದು
ಗುಹೇಶ್ವರ, ನಿಮ್ಮ ಶರಣನುದಯಿಸಿದನಂದು
೪.
ಅಯ್ಯ,
ಜಲ-ಕೂರ್ಮ-ಗಜ-ಫಣಿಯ ಮೇಲೆ ಧರೆ ವಿಸ್ತರಿಸಿ ನಿಲ್ಲದಂದು,
ಗಗನವಿಲ್ಲದಂದು, ಪವನನ ಸುಳುಹಿಲ್ಲದಂದು,
ಅಗ್ನಿಗೆ ಕಳೆದೋಱದಂದು,
ಯುಗ-ಜುಗಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದಂದು,
ನಿಜವನಱಿದಿಹೆನೆಂಬ ತ್ರಿಜಗದಧಿಪತಿಗಳಿಲ್ಲದಂದು :
ತೋಱುವ ಬೀಱುವ ಪರಿಭಾವದಲ್ಲಿ ಭರಿತ
ಅಗಮ್ಯ ಗುಹೇಶ್ವರಲಿಂಗವು.
೫.
ಎನ್ನ ನಾನಱಿಯದ ಮುನ್ನ
ನೀನೇನಾಗಿದ್ದೆ ಹೇಳಾ ?
ಮುನ್ನ ನೀ ಬಾಯಿ ಮುಚ್ಚಿಕೊಂಡಿದ್ದೆಯೆಂಬುದ
ನಾ ನಿನ್ನ ಕಣ್ಣಿಂದ ಕಂಡೆನು !
ಎನ್ನ ನಾನಱಿದ ಬಳಿಕ
ಇನ್ನು ನೀ ಬಾಯ್ದೆಱೆದು ಮಾತನಾಡಿದರೆ
ಅದನೆನ್ನ ಕಣ್ಣಿಂದ ನೀ ಕಂಡು ನಾಚಿದೆ ನೋಡಾ !
ಎನ್ನ ಕಾಬ ನಿನಗೆ, ನಿನ್ನ ಕಾಬ ಎನಗೆ
ಸಂಚದ ನೋಟ ಒಂದೆ ನೋಡಾ !
ಗುಹೇಶ್ವರ, ನಿನ್ನ ಬೆಡಗಿನ ಬಿನಾಣವನಱಿದೆ ನೋಡಾ !
೬.
ಮಾಯದ ಬಲೆಯಲ್ಲಿ ಸಿಲುಕಿದ
ಮರುಳ ನಾನೆಂದಱಿದ ಪರಿಯ ನೋಡಾ !
ತನ್ನ ವಿನೋದಕ್ಕೆ ಬಂದು
ನಿಶ್ಚಿಂತ ನಿರಾಳ ಗುಹೇಶ್ವರನೆಂದಱಿಯದ ಪರಿಯ ನೋಡಾ !
ಮಾಯಾವಿಲಾಸ ವಿಡಂಬನ ಸ್ಥಲ
೭.
ಕಾಯದ ಮೊದಲಿಂಗೆ ಬೀಜವಾವುದೆಂದಱಿಯದೀ ಲೋಕ !
ಇಂದ್ರಿಯಂಗಳು ಬೀಜವಲ್ಲ !
ಆ ಕಳಾಭೇದ ಬೀಜವಲ್ಲ !
ಸ್ವಪ್ನ ಬಂದೆಱಗಿತ್ತಲ್ಲಾ !
ಇದಾವಂಗೂ ಶುದ್ಧ ಸುಯಿಧಾನವಲ್ಲ ಕಾಣಾ ಗುಹೇಶ್ವರ.
೮.
ಗಗನದ ಮೇಲೊಂದಭಿನವ ಗಿಳಿ ಹುಟ್ಟಿ
ಸಯಸಂಭ್ರಮದಲ್ಲಿ ಮನೆಯ ಮಾಡಿತ್ತು !
ಒಂದು ದಿನ ಗಿಳಿ ಇಪ್ಪತೈದು ಗಿಳಿಯಾಯಿತ್ತು !
ಬ್ರಹ್ಮನಾ ಗಿಳಿಗೆ ಹಂಜರವಾದ
ವಿಷ್ಣುವಾ ಗಿಳಿಗೆ ಕೊಱೆಕೂಳಾದ
ರುದ್ರನಾ ಗಿಳಿಗೆ ತಾ ಕೋಲಾದ !
ಇಂತೀ ಮೂವರ ಮುಂದಣ ಕಂದನ ನುಂಗಿ
ದೃಷ್ಟನಾಮ ನಷ್ಟವಾಯಿತ್ತು-ಇದೆಂತೋ ಗುಹೇಶ್ವರ ?!
೯.
ನೆಲದ ಬೊಂಬೆಯ ಮಾಡಿ
ಜಲವ ಬಣ್ಣವನುಡಿಸಿ
ಹಲವು ಪರಿಯಾಶ್ರಮದಲ್ಲಿ ಉಲಿವ ಗೆಜ್ಜೆಯ ಕಟ್ಟಿ
ವಾಯುವನಲಸಂಚಕ್ಕೆ ಅರಳೆಲೆಯ ಶೃಂಗಾರವ ಮಾಡಿ
ಆಡಿಸುವ ಯಂತ್ರವಾಹಕನಾರೋ ?
ಬಯಲ ಕಂಭಕ್ಕೆ ತಂದು
ಸಯವೆಂದು ಪರವ ಕಟ್ಟಿದೆಡೆ
ಸಯವದ್ವಯವಾಯಿತ್ತು-ಏನೆಂಬೆ ಗುಹೇಶ್ವರ.
೧೦.
ಜಂಬೂದ್ವೀಪದ ವ್ಯವಹಾರಿ
ಖಂಡಭಂಡವ ತುಂಬಿ
ಕುಂಭಿನಿಯುದರದ ಮೇಲೆ ಪಸರವನಿಕ್ಕಿದ.
ಉಷ್ಣ-ತೃಷ್ಣೆ ಘನವಾಗಿ
ಕಡಲೇಳು ಸಮುದ್ರವ ಕುಡಿದು
ನೀರಡಸಿ, ಅಱಲುಗೊಂಡು ಬೆಱಗಾದ !
ಶಿಶು ತಾಯ ಹೆಣನ ಹೊತ್ತುಕೊಂದು ಹೆಸರು ಹೇಳುತ್ತೈದಾನೆ
ಗುಹೇಶ್ವರನೆಂಬ ನಿಲವ ವಸುಧೆಯಾಕೃತಿ ನುಂಗಿತ್ತು.
೧೧.
ದೇವರೆಲ್ಲರ ಹೊಡೆತಂದು
ದೇವಿಯರೊಳಗೆ ಕೂಡಿತ್ತು-ಮಾಯೆ !
ಹರಹರಾ, ಮಾಯೆಯಿಯ್ದೆಡೆಯ ನೋಡಾ !
ಎರಡೆಂಬತ್ತು ಕೋಟಿ ಪ್ರಮಥಗಣಂಗಳು
ಅಂಗಾಲ ಕಣ್ಣವರು, ಮೈಯೆಲ್ಲ ಕಣ್ಣವರು
ನಂದಿವಾಹನ-ರುದ್ರರು
ಇವರೆಲ್ಲರೂ
ಮಾಯೆಯ ಕಾಲುಗಾಹಿನ ಸರಮಾಲೆ ಕಾಣ ಗುಹೇಸ್ವರ !
೧೨.
ಊರ ಮಧ್ಯದ ಕಣ್ಣ ಕಾಡಿನೊಳಗೆ
ಬಿದ್ದೈದಾವೆ ಐದು ಹೆಣನು.
ಅಂದು ಬಂದು ಅಳುವರು ಬಳಗ ಘನವಾದ ಕಾರಣ,
ಹೆಣನೂ ಬೇಯದು, ಕಾಡೂ ನಂದದು
ಮಾಡ ಉರಿಯಿತ್ತು ಗುಹೇಶ್ವರ !
೧೩.
ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ ಹೋಗಿ
ಮೇದು ಬಂದೆನೆಂದರೆ-ಅದ ಕಂಡು ಬೆಱಗಾದೆ !
ರಕ್ಕಸಿಯ ಮನೆಗೆ ಹೋಗಿ
ನಿದ್ರೆಗೆಯ್ದು ಬಂದೆನೆಂದರೆ-ಅದ ಕಂಡು ಬೆಱಗಾದೆ !
ಜವನ ಮನೆಗೆ ಹೋಗಿ
ಸಾಯದೆ ಬದುಕಿ ಬಂದೆನೆಂದರೆ-ಅದ ಕಂಡು ಬೆಱಗಾದೆ !
ಗುಹೇಶ್ವರ.
೧೪.
ಹೃದಯಕಂದದ ಮೇಲೆ ಹುಟ್ಟಿತ್ತು
ಹರಿದು-ಹಬ್ಬಿ-ಕೊಬ್ಬಿ ಹಲವು ಫಲವಾಯಿತ್ತು ನೋಡಿರೇ
ಪರಿಪರಿಯ ಫಲಂಗಳನು-ಬೇಡಿದವರಿಗಿತ್ತು -
ಆ ಫಲವ ಬಯಸಿದವರು ಜಲದೊಳಗೆ ಬಿದ್ದರೆ
ನೋಡಿ ನಗುತ್ತಿದ್ದೆನ್ತು - ಗುಹೇಶ್ವರ.
೧೫.
ಅರಗಿನ ಪುತ್ಥಳಿಯನುರಿ ಕೊಂಡಡೆ
ಉದಕ ಬಾಯಾಱಿ ಬಳಲುತ್ತಿದೆ !
ಅಗೆಯಿಂ ಭೋ! ಭಾವಿಯನಗೆಯಿಂ ಭೋ !
ಅಗೆದಾತ ಸತ್ತ-ಭಾವಿ ಬತ್ತಿತ್ತು.
ಇದು ಕಾರಣ ನೆಱೆ ಮೂಱು ಲೋಕ
ಬಱುಸೂಱೆವೋಯಿತ್ತು-ಗುಹೇಶ್ವರ.
೧೬.
ಅಂಗದ ಕೊನೆಯ ಮೇಲಣ ಕೋಡಗ
ಕೊಂಬು-ಕೊಂಬಿಗೆ ಹಾರಿತ್ತು ಅಯ್ಯ.
ಒಂದು ಸೋಜಿಗ-
ಕೈಯ ನೀಡಲು ಮೈಯೆಲ್ಲವ ನುಂಗಿತ್ತು !
ಒಯ್ಯನೆ ಕರೆದಡೆ ಮುಂದೆ ನಿಂದಿತ್ತು !
ಮು(ಮೆ)ಯ್ಯಾಂತಡೆ ಬಯಲಾಯಿತ್ತು ಗುಹೇಶ್ವರ !!
೧೭.
ಭೂತ ಭೂತವ ಕೂಡಿ ಅದ್ಭುತವಾಗಿತ್ತು :
ಕಿಚ್ಚು ಕೋಡಿತ್ತು, ನೀರು ನೀರಡಸಿತ್ತು ;
ಉರಿಪವನದೋಷದೊಳಗಿದ್ದು ವಾಯುವಿಮ್ಮಡಿಸಿತ್ತ ಕಂಡೆ
ಗುಹೇಶ್ವರ.
೧೮.
ಅಡವಿಯೊಳಗೆ ಕಳ್ಳರು
ಕಡವಸದ ಸ್ವಾಮಿಯನು ಹುಡುಕಿ ಹುಡುಕಿ
ಅರಸುತ್ತೈದಾರೆ !
ಸೊಡರು ನಂದಿ ಕಾಣದೆ
ಅನ್ನಪಾನದ ಹಿರಿಯರೆಲ್ಲರೂ ತಮ್ಮ ತಾವಱಿಯದೆ
ಅಧರಪಾನವನುಂಡು ತೇಗಿ
ಸುರಾಪಾನವ ಬೇಡುತ್ತೈದಾರೆ.
ಅಱಿದ ಹಾರುವನೊಬ್ಬನು
ಅರಿದ ತಲೆಯ ಹಿಡಿದುಕೊಂಡು
ಅಧ್ಯಾತ್ಮವಿಕಾರದ ನೆತ್ತರ ಕುಡಿದನು
ನೋಡಾ-ಗುಹೇಸ್ವರ.
೧೯.
ಮಾಯದ ಕೈಯಲ್ಲಿ ಓಲೆಕಂಠವ ಕೊಟ್ಟರೆ
ಲಗುನ-ಮಿಗುನವ ಬರೆಯಿತ್ತು ನೋಡಾ !
ಅರಗಿನ ಪುತ್ಥಳಿಗೆ ಉರಿಯ ಸೀರೆಯನುಡಿಸಿದರೆ
ಅದು ಸಿರಿಯ ಸಿಂಗಾರವಾಯಿತ್ತು ನೋಡಾ !
ಅಂಬರದೊಳಗಾಡುವ ಗಿಳಿ
ಪಂಜರದೊಳಗಣ ಬೆಕ್ಕ ನುಂಗಿ
ರಂಭೆಯ ತೋಳಿಂದಗಲಿತ್ತು ನೋಡಾ-ಗುಹೇಶ್ವರ.
೨೦.
ಕೋಣನ ಕೊಂಬಿನ ತುದಿಯಲ್ಲಿ
ಏಳುನೂರೆಪ್ಪತ್ತು ಸೇದೆಯ ಭಾವಿ.
ಭಾವಿಯೊಳಗೊಂದು ಬಗರಿಗೆ
ಬಗರಿಗೆಯೊಳಗೊಬ್ಬ ಸೂಳೆ ನೋಡಯ್ಯ !
ಆ ಸೂಳೆಯ ಕೊರಳಲ್ಲಿ
ಏಳುನೂರೆಪ್ಪತ್ತಾನೆ ನೀಱಿತ್ತ ಕಂಡೆ-ಗುಹೇಶ್ವರ.
೨೧.
ಹುಲಿಯ ತಲೆಯ ಹುಲ್ಲೆ
ಹುಲ್ಲೆಯ ತಲೆಯ ಹುಲಿ-
ಈ ಎರಡರ ನಡು ಒಂದಾಯಿತ್ತು !
ಹುಲಿಯಲ್ಲ - ಹುಲ್ಲೆಯಲ್ಲ
ಕೆಲದಲೊಂದು ಬಂದು ಮೆಲುಕಾಡಿತ್ತು ನೋಡಾ.
ತಲೆಯಿಲ್ಲದ ಮುಂಡ
ತಱಗೆಲೆಯ ಮೇದರೆ
ಎಲೆಮಱೆಯಾಯಿತ್ತು ಗುಹೇಶ್ವರ.
೨೨.
ತೋಟವ ಬಿತ್ತಿದರೆಮ್ಮವರು
ಕಾಹ ಕೊಟ್ಟರು ಜವನವರು
ನಿತ್ಯವಿಲ್ಲದ ಸಂಸಾರ ವೃಥಾ ಹೋಯಿತ್ತಲ್ಲಾ !
ಗುಹೇಶ್ವರನಿಕ್ಕಿದ ಕಿಚ್ಚು
ಹೊತ್ತಿಕ್ಕಲುಂಟು, ಅಟ್ಟುಣ್ಣಲಿಲ್ಲ.
೨೩.
ನಿರ್ಣಯವನಱಿಯದ ಮನವೇ
ದುಗುಡವನಾಹಾರಂಗೊಂಡೆಯಲ್ಲಾ !
ಮಾಯಾಸೂತ್ರವಿದೇನೋ !
ಕಂಗಳೊಳಗಣ ಕತ್ತರೆ ತಿಳಿಯದಲ್ಲಾ !
ಬೆಳಗಿನೊಳಗಣ ಶೃಂಗಾರ ಬಳಲುತ್ತಿದೆ ಗುಹೇಶ್ವರ !
ಸಂಸಾರಹೇಯ ಸ್ಥಲ
೨೪.
ಸಂಸಾರವೆಂಬ ಹೆಣ ಬಿದ್ದಿರೆ
ತಿನಬಂದ ನಾಯ ಜಗಳವ ನೋಡಿರೇ !
ನಾಯ ಜಗಳವ ನೋಡಿ
ಹೆಣನೆದ್ದು ನಗುತ್ತಿದೆ
ಗುಹೇಶ್ವರನೆಂಬ ಲಿಂಗವಲ್ಲಿಲ್ಲ ಕಾಣಿರೇ !
೨೫.
ಹಳ್ಳದೊಳಗೊಂದು ಹುಳ್ಳಿ ಬರುತ್ತಿರಲು
ನೊರೆತೆರೆಗಳು ತಾಗಿದವಲ್ಲಾ !
ಸಂಸಾರವೆಂಬ ಸಾಗರದೊಳಗೆ
ಸುಖ-ದು:ಖಂಗಳು ತಾಗಿದವಲ್ಲಾ !
ಇದು ಕಾರಣ
ರೂಪಾದ ಜಗಕ್ಕೆ ಪ್ರಳಯವಾಯಿತ್ತು ಗುಹೇಶ್ವರ.
೨೬.
ಕರೆಯದೇ ಬಂದುದ
ಹೇಳದೆ ಹೋದುದ-ಆರೂ ಅಱಿಯರಲ್ಲಾ !
ಅಂದಂದಿಗೆ ಬಂದ ಪ್ರಾಣಿಗಳು-ಆರೂ ಅಱಿಯರಲ್ಲಾ !
ಗುಹೇಶ್ವರಲಿಂಗ ಉಣ್ಣದೇ ಹೋದುದ-ಆರೂ ಅಱಿಯರಲ್ಲ !
೨೭.
ಆಯಿತ್ತೆ ಉದಯಮಾನ
ಹೋಯಿತ್ತೆ ಅಸ್ತಮಾನ
ಉಳಿದವಲ್ಲಾ ನೀರಲಾದ ನಿರ್ಮಿತಂಗಳೆಲ್ಲವೂ !
ಕತ್ತಲೆಗವಿಯಿತ್ತು
ಮೂಱು ಲೋಕದೊಳಗೆ
ಇದಱಚ್ಚುಗವೇನು ಹೇಳಾ ಗುಹೇಶ್ವರ ? !
೨೮.
ಕಾಲುಗಳೆರಡೂ ಗಾಲಿ ಕಂಡಯ್ಯ
ದೇಹವೆಂಬುದೊಂದು ತುಂಬಿದ ಬಂಡಿ ಕಂಡಯ್ಯ
ಬಂಡಿಯ ಹೊಡೆವರೈವರು ಮಾನಿಸರು
ಒಬ್ಬರಿಗೊಬ್ಬರು ಸಮವಿಲ್ಲಯ್ಯ.
ಅದಱಿಚ್ಛೆಯನಱಿದು ಹೊಡೆಯದಿದ್ದರೆ
ಅದುಱಚ್ಚು ಮುಱಿಯಿತ್ತು ಗುಹೇಶ್ವರ.
೨೯.
ಆರಕ್ಕೆಯ ಸಿರಿಗೆ ಆರಕ್ಕೆ ಚಿಂತಿಸುವರು !
ಆರಕ್ಕೆಯ ಬಡತನಕ್ಕೆ ಆರಕ್ಕೆ ಮುಱುಗುವರು !
ಇದಾರಕ್ಕೆ ಆರಕ್ಕೆ ?
ಇದೇನಕ್ಕೆ ಏನಕ್ಕೆ ?
ಮಾಯದ ಬೇಳುವೆ ಹುರುಳಿಲ್ಲ
ಕೊಂದು ಕೂಗಿತ್ತು ನೋಡಾ ಗುಹೇಶ್ವರ.
೩೦.
ಮಾನದ ತೋರಿಹ ಆವಿಂಗೆ
ಕೊಳಗದ ತೋರಿಹ ಕೆಚ್ಚಲು
ತಾಳಮರದುದ್ದವೆರಡು ಕೋಡು ನೋಡಾ !
ಅದುನಱಸ ಹೋಗಿ ಆಱು ದಿನ
ಅದು ಕೆಟ್ಟು ಮೂಱು ದಿನ !
ಅಘಟಿತಘಟಿತ ಗುಹೇಶ್ವರ,
ಅಱಸುವ ಬಾರೈ ತಲೆಹೊಲದಲ್ಲಿ !
೩೧.
ಕುಲದಲಧಿಕನು ಹೋಗಿ
ಹೊಲೆಗೇರಿಯಲ್ಲಿ ಮನೆಯ ಕಟ್ಟಿದರೆ
ಕುಲಗೆಡದಿಪ್ಪ ಪರಿಯ ನೋಡಾ !
ಆತನ ಕುಲದವರೆಲ್ಲರೂ ಮುಖವ ನೋಡಲೊಲ್ಲದೈದಾರೆ.
ಕುಲವುಳ್ಳವರೆಲ್ಲರು ಕೈವಿಡಿದರು
ಕುಲಗೆಟ್ಟವನೆಂದು ತಿಳಿದು
ವಿಚಾರಿಸಲು ಹೊಲೆಗೆಟ್ಟು ಹೋಯಿತ್ತು
ಕಾಣಾ ಗುಹೇಶ್ವರ.
ಗುರುಕರುಣ ಸ್ಥಲ
೩೨.
ಕಂಡುದ ಹಿಡಿಯಲೊಲ್ಲದೆ
ಕಾಣದುದನಱಸಿ ಹಿಡಿದಹೆನೆಂದರೆ
ಸಿಕ್ಕದೆಂಬ ಬಳಲಿಕೆ ನೋಡಾ !
ಕಂಡುದನೆ ಕಂಡು
ಗುರುಪಾದವ ಹಿಡಿದಲ್ಲಿ
ಕಾಣದುದ ಕಾಣಬಹುದು ಗುಹೇಶ್ವರ.
೩೩.
ಕಾಣದುದನಱಸುವರಲ್ಲದೆ ಕಂಡುದನಱಸುವರೇ ?!
ಘನಕ್ಕೆ ಘನವಾದ ವಸ್ತು
ತಾನೆ ಗುರುವಾದ, ತಾನೆ ಲಿಂಗವಾದ, ತಾನೆ ಜಂಗಮವಾದ
ತಾನೆ ಪ್ರಸಾದವಾದ, ತಾನೆ ಮಂತ್ರವಾದ, ತಾನೆ ಯಂತ್ರವಾದ
ತಾನೆ ಸಕಲವಿದ್ಯಾಸ್ವರೂಪನಾದ:
ಇಂತಿವೆಲ್ಲವನೊಳಕೊಂಡು
ಎನ್ನ ಕರಸ್ಥಲಕ್ಕೆ ಬಂದ ಬಳಿಕ
ಇನ್ನು ನಿರ್ವಿಕಾರ-ಗುಹೇಶ್ವರ.
೩೪.
ಕೃತಯುಗದಲ್ಲಿ
ಶ್ರೀಗುರು ಶಿಷ್ಯಂಗೆ ಬಡಿದು
ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ.
ತ್ರೇತಾಯುಗದಲ್ಲಿ
ಶ್ರೀಗುರು ಶಿಷ್ಯಂಗೆ ಬೈದು
ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ.
ದ್ವಾಪರ ಯುಗದಲ್ಲಿ
ಶ್ರೀಗುರು ಶಿಷ್ಯಂಗೆ ಝಂಕಿಸಿ
ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ.
ಕಲಿಯುಗದಲ್ಲಿ
ಶ್ರೀಗುರು ಶಿಷ್ಯಂಗೆ ವಂದಿಸಿ
ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ.
ಗುಹೇಶ್ವರ,
ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆಱಗಾದೆನು.
೩೫.
ಅಯ್ಯ, ನೀನೆನಗೆ ಗುರುವಪ್ಪಡೆ
ನಾ ನಿನಗೆ ಶಿಷ್ಯನಪ್ಪಡೆ,
ಎನ್ನ ಕರಣಾದಿ ಗುಣಂಗಳ ಕಳೆದು
ಎನ್ನ ಕಾಯದ ಕರ್ಮವ ತೊಡೆದು
ಎನ್ನ ಪ್ರಾಣದ ಧರ್ಮವ ತೊಡೆದು
ಎನ್ನ ಪ್ರಾಣದ ಧರ್ಮವ ನಿಲಿಸಿ,
ನೀನೆನ್ನ ಕಾಯದಲಡಗಿ
ನೀನೆನ್ನ ಪ್ರಾಣದಲಡಗಿ
ನೀನೆನ್ನ ಭಾವದಲಡಗಿ,
ನೀನೆನ್ನ ಕರಸ್ಥಲಕ್ಕೆ ಬಂದು
ಕಾರುಣ್ಯವ ಮಾಡು ಗುಹೇಶ್ವರ.
೩೬.
ಕಸ್ತುರಿಯ ಮೃಗ ಬಂದು ಸುಳಿಯಿತ್ತಯ್ಯ
ಸಕಲವಿಸ್ತಾರದ ರೂಹು ಬಂದು ನಿಂದಿತ್ತಯ್ಯ.
ಆವ ಗ್ರಹ ಬಂದು ಸೋಕಿತ್ತೆಂದಱಿಯೆನಯ್ಯ
ಆವ ಗ್ರಹ ಬಂದು ಹಿಡಿಯಿತ್ತೆಂದಱಿಯೆನಯ್ಯ.
ಹೃದಯಕಮಲಮಧ್ಯದಲ್ಲಿ
ಗುರುವನಱಿದು, ಪೂಜಿಸಿ,
ಗುರು ವಿಖ್ಯಾತನೆಂಬುದ ನಾನಱಿದೆನಯ್ಯ
ಗುರುಗುಹೇಶ್ವರನಲ್ಲಿ ಹಿಂದಣ ಹುಟ್ಟಱತು ಹೋದುದ ಕಂಡೆನಯ್ಯ.
೩೭.
ಎಣ್ಣೆ-ಬತ್ತಿ-ಪ್ರಣಿತೆ ಕೂಡಿ
ಜ್ಯೋತಿಯ ಬೆಳಗಯ್ಯ !
ಅಸ್ಥಿ-ಮಾಂಸ-ದೇಹ
ಪ್ರಾಣನಿ:ಪ್ರಾಣವಾಯಿತ್ತು !!
ದೃಷ್ಟಿವರಿದು ಮನ ಮುಟ್ಟಿದ ಪರಿ ಇನ್ನೆಂತೋ ?
ಮುಟ್ಟಿ ಲಿಂಗವ ಕೊಂಡಡೆ
ಕೆಟ್ಟಿತ್ತು ಜ್ಯೋತಿಯ ಬೆಳಗು !
ಇದು ಕಷ್ಟಕರವೆಂದಱಿದೆನು ಗುಹೇಶ್ವರ.
೩೮.
ಪಾತಾಳದಿಂದತ್ತ ಮಾತ ಬಲ್ಲವರಿಲ್ಲ
ಗಗನದಿಂದ ಮೇಲೆ ಅನುಭಾವ ತಾನಿಲ್ಲ
ಒಳಗಣ ಜ್ಯೋತಿಯ ಬೆಳಗ ಬಲ್ಲವರಿಲ್ಲ
ಹೊಱಗಣ ಹೊಱಗನು ಅಱಿಯಬಲ್ಲವರಿಲ್ಲ
ಹಿಂದಣ ಹಿಂದನು
ಮುಂದಣ ಮುಂದನು
ತಂದೆ ತೋಱಿದನು ನಮ್ಮ ಗುಹೇಶ್ವರನು.
೩೯.
ಎತ್ತಣ ಮಾಮರ
ಎತ್ತಣ ಕೋಗಿಲೆ ?
ಎತ್ತಣಿಂದೆತ್ತ ಸಂಬಂಧವಯ್ಯ ?!
ಬೆಟ್ಟದ ನೆಲ್ಲಿಯ ಕಾಯಿ
ಸಮುದ್ರದೊಳಗಣ ಉಪ್ಪು
ಎತ್ತಣಿಂದೆತ್ತ ಸಂಬಂಧವಯ್ಯಾ ?!
ಗುಹೇಶ್ವರಲಿಂಗಕ್ಕೆಯೂ
ಎನಗೆಯೂ
ಎತ್ತಣಿಂದೆತ್ತ ಸಂಬಂಧವಯ್ಯ ?!
೪೦.
ಕಾಣಬಾರದ ಲಿಂಗವು
ಕರಸ್ಥಲಕ್ಕೆ ಬಂದರೆ
ಎನಗಿದು ಸೋಜಿಗ ! ಎನಗಿದು ಸೋಜಿಗ !
ಅಹುದೆನಲಮ್ಮೆನು ಅಲ್ಲೆನಲಮ್ಮೆನು,
ಗುಹೇಶ್ವರಲಿಂಗ ನಿರಾಳ !
ನಿರಾಕಾರ ಸಾಕಾರವಾಗಿ
ಎನ್ನ ಕರಸ್ಥಲಕ್ಕೆ ಬಂದರೆ
ಹೇಳಲಮ್ಮೆ ಕೇಳಲಮ್ಮೆ.
೪೧.
ಜ್ಯೋತಿಯೊಳಗಣ ಕರ್ಪುರಕ್ಕೆ
ಅಪ್ಪುವಿನೊಳಗಿಪ್ಪ ಉಪ್ಪಿಂಗೆ
ಶ್ರೀ ಗುರುವಿನ ಹಸ್ತದೊಳಗಿಪ್ಪ ಶಿಷ್ಯಂಗೆ-
ಈ ಮೂಱಕ್ಕೆಯೂ
ಬೇಱೆ ಕ್ರಿಯಾವರ್ತನೆಯುಂಟೆ ಗುಹೇಶ್ವರ ?
೪೨.
ಗುರುಶಿಷ್ಯ ಸಂಬಂಧವನಱಸಲೆಂದು ಹೋದರೆ
ತಾನೆ ಗುರುವಾದ
ತಾನೆ ಶಿಷ್ಯನಾದ
ತಾನೆ ಲಿಂಗವಾದ.
ಗುಹೇಶ್ವರ,
ನಿಮ್ಮ ಶರಣನ ಕಾಯದ ಕೈಯಲ್ಲಿ ಲಿಂಗವ ಕೊಟ್ಟರೆ
ಭಾವ ಬತ್ತಲೆಯಾಯಿತ್ತು !
ಭಕ್ತ ಸ್ಥಲ
೪೩.
ಭವಿಯ ತಂದು ಭಕ್ತನ ಮಾಡಿ
ಪೂರ್ವಾಶ್ರಯವ ಕಳೆದ ಬಳಿಕ ಮರಳಿ ಪೂರ್ವವನೆತ್ತಿ ನುಡಿವ
ಗುರುದ್ರೋಹಿಯ ಮಾತ ಕೇಳಲಾಗದು,
ಹೆಸರಿಲ್ಲದ ಲಿಂಗಕ್ಕೆ ಹೆಸರಿಡುವ
ಲಿಂಗದ್ರೋಹಿಯ ಮಾತ ಕೇಳಲಾಗದು.
ಪೂರ್ವದಲ್ಲಿ ನಾಮವಿಲ್ಲದ ಗುರು
ಹೆಸರಿಲ್ಲದ ಲಿಂಗ, ಹೆಸರಿಲ್ಲದ ಶಿಷ್ಯ
ಇಂತೀ ತ್ರಿವಿಧಸ್ಥಲವನಱಿಯದೆ ಕೆಟ್ಟರು ಗುಹೇಶ್ವರ.
೪೪.
ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಭತ್ತವಿಲ್ಲದಿದ್ದರೆ
ಆ ಬೆವಸಾಯದ ಗೊರ[=ಡ]ವೇತಕಯ್ಯ ?
ಕ್ರಯವಿಕ್ರಯವ ಮಾಡಿ ಮನೆಯ ಸಂಚು ನಡೆಯದನ್ನಕ್ಕ
ಆ ಕ್ರಯವಿಕ್ರಯದ ಗೊರ[=ಡ]ವೇತಕಯ್ಯ ?
ಒಡೆಯನನೋಲೈಸಿ ತನುವಿಂಗೆ ಅಷ್ಟಭೋಗವ ಪಡೆಯದಿದ್ದರೆ
ಆ ಓಲಗದ ಗೊರ[=ಡ]ವೇತಕಯ್ಯ ?
ಭಕ್ತನಾಗಿ ಭವಂನಾಸ್ತಿಯಾಗದಿದ್ದರೆ
ಆ ಉಪದೇಶವ ಕೊಟ್ಟ ಗುರು
ಕೊಂಡ ಶಿಷ್ಯ
ಇವರಿಬ್ಬರ ಮನೆಯಲ್ಲಿ ಮಾರಿ ಹೊಗಲಿ
ಗುಹೇಶ್ವರಲಿಂಗವತ್ತಲೆ ಹೊಗಲಿ.
೪೫.
ಮೇರುವ ಸಾರಿಗೆ ಕಾಗೆ ಹೊಂಬಣ್ಣವಾಗದಿದ್ದರೆ
ಆ ಮೇರುವಿಂದತ್ತಣ ಹುಲುಮೊರಡಿಯೆ ಸಾಲದೇ ?
ದೇವ, ನಿಮ್ಮ ಪೂಜಿಸಿ ಧಾವತಿಗೊಂಬಡೆ
ಆ ಧಾವತಿಯಿಂದ ಮುನ್ನಿನ ವಿಧಿಯೇ ಸಾಲದೇ?
ಗುಹೇಶ್ವರ, ನಿಮ್ಮ ಪೂಜಿಸಿ ಸಾವಡೆ
ನಿಮ್ಮಿಂದ ಹೊಱಗಣ ಜವನೆ ಸಾಲದೆ!
೪೬.
ಕಾಳರಕ್ಕಸಿಗೊಬ್ಬ ಮಗ ಹುಟ್ಟಿ
ಕಾಯದ ರಾಶಿಯ ಮೊಗೆವುತ್ತ ಸುರಿವುತ್ತಲಿದ್ದನಯ್ಯ !
ಕಾಳರಕ್ಕಸಿಯ ಮೂಗು ಮೊಲೆಯ ಕೊಯ್ದು
ದೇವಕನ್ನಿಕೆಯ ಮಱೆಹೊಕ್ಕು
ಬಾಯ ತುತ್ತೆಲ್ಲವನು ಉಣಲೊಲ್ಲದೆ ಕಾಱಿದಡೆ
ಆತನೆ ಭಕ್ತನೆಂಬೆ !
೪೭.
ಅಕ್ಷರವ ಬಲ್ಲೆವೆಂದು
ಅಹಂಕಾರವಡೆಗೊಂದು ಲೆಕ್ಕಗೊಳ್ಳರಯ್ಯ,
ಗುರುಹಿರಿಯರು ತೋರಿದ ಉಪದೇಶದಿಂದ
ವಾಗದ್ವೈತವ ಕಲಿತು, ವಾದಿಪರಲ್ಲದೆ
ಆಗು-ಹೋಗೆಂಬುದನಱಿಯರು,
ಭಕ್ತಿಯನಱಿಯರು-ಯುಕ್ತಿಯನಱಿಯರು-ಮುಕ್ತಿಯನಱಿಯರು
ಮತ್ತೂ ವಾದಿಗಳೆನಿಸುವರು
ಹೋದರು, ಗುಹೇಶ್ವರ, ಸಲೆ ಕೊಂಡ ಮಾಱಿಂಗೆ !
೪೮.
ಐದು ಮುಖದಂಗನೆಗೆ ಹದಿನೈದು ದೇಹ ನೋಡ ;
ಆ ಅಂಗನೆಯ ಮನೆಯೊಳಗಿದ್ದು
ತಾವಾರೆಂಬುದನಱಿಯದೆ
ಬಾಯಿಗೆ ಬಂದಂತೆ ನುಡಿವರು,
ಗುಹೇಶ್ವರ, ನಿಮ್ಮನಱಿಯದ ಜಡರುಗಳು.
೪೯.
ಎಣ್ಣೆ ಬೇಱೆ, ಬತ್ತಿ ಬೇಱೆ
ಎರಡೂ ಕೂಡಿ ಸೊಡರಾಯಿತ್ತು.
ಪುಣ್ಯ ಬೇಱೆ, ಪಾಪ ಬೇಱೆ
ಎರಡೂ ಕೂಡಿ ಒಡಲಾಯಿತ್ತು.
ಮಿಗಬಾರದು, ಮಿಗದಿರಬಾರದು,
ಒಡಲಿಚ್ಚೆಯ ಸಲಿಸದೆ ನಿಮಿಷವಿರಬಾರದು,
ಕಾಯಗುಣವಳಿದು,
(ಮಾಯ ಜ್ಯೋತಿ ವಾಯುವ ಕೂಡದ ಮುನ್ನ)
ಭಕ್ತಿಯ ಮಾಡಬಲ್ಲಾತನೇ ದೇವ, ಗುಹೇಶ್ವರ.
೫೦.
ಹೊನ್ನು ಮಾಯೆಯೆಂಬರು
ಹೊನ್ನು ಮಾಯೆಯಲ್ಲ.
ಹೆಣ್ಣು ಮಾಯೆಯೆಂಬರು
ಹೆಣ್ಣು ಮಾಯೆಯಲ್ಲ.
ಮಣ್ಣು ಮಾಯೆಯೆಂಬರು
ಮಣ್ಣು ಮಾಯೆಯಲ್ಲ.
ಮನದ ಮುಂದಣ ಆಶೆಯೇ ಮಾಯೆ ಕಾಣಾ
ಗುಹೇಶ್ವರ !
೫೧.
ಕಳ್ಳಗಂಜಿ ಕಾಡ ಹೊಕ್ಕಡೆ
ಹುಲಿ ತಿನ್ನದೆ ಮಾಬುದೇ ?
ಹುಲಿಗಂಜಿ ಹುತ್ತವ ಹೊಕ್ಕಡೆ
ಸರ್ಪ ತಿನ್ನದೆ ಮಾಬುದೇ ?
ಕಾಲಕ್ಕಂಜಿ ಭಕ್ತನಾದಡೆ ಕರ್ಮ ತಿನ್ನದೆ ಮಾಬುದೇ ?
ಇಂತೀ ಮೃತ್ಯುವಿನ ಬಾಯ ತುತ್ತಾದ
ವೇಷಡಂಬಕರನೇನೆಂಬೆ - ಗುಹೇಶ್ವರ !
೫೨.
ಐದು ಸರ್ಪಂಗಳಿಗೆ
ತನುವೊಂದು, ದಂತವೆರಡು !
ಸರ್ಪ ಕಡಿದು ಸತ್ತ ಹೆಣನು ಸುಳಿದಾಡುವುದ ಕಂಡೆ !
ಈ ನಿತ್ಯವನಱಿಯದ ಠಾವಿನಲ್ಲಿ
ಭಕ್ತಿಯೆಲ್ಲಿಯದೊ ಗುಹೇಶ್ವರ ?!
೫೩.
ಆರೂ ಇಲ್ಲದಾರಣ್ಯದೊಳಗೆ ಮನೆಯ ಕಟ್ಟಿದರೆ
ಕಾಡುಗಿಚ್ಚು ಎದ್ದು ಬಂದು ಹತ್ತಿತಲ್ಲ !
ಆ ಉರಿಯೊಳಗೆ ಮನೆ ಬೇವಲ್ಲಿ
ಮನೆಯೊಡೆಯನೆತ್ತ ಹೋದನೋ ?!
ಆ ಉರಿಯೊಳಗೆ ಬೆಂದ ಮನೆ
ಚೇಗೆಯಾಗದುದ ಕಂಡು
ಮನೆಯೊಡೆಯನಳಲುತ್ತ ಬಳಲುತ್ತೈದಾನೆ.
ಗುಹೇಶ್ವರ.
ನಿಮ್ಮ ಒಲವಿಲ್ಲದ ಠಾವ ಕಂಡು
ಹೇಸಿ ತೊಲಗಿದೆನಯ್ಯ !
೫೪.
ಪ್ರಣಿತೆಯೂ ಇದೆ
ಬತ್ತಿಯೂ ಇದೆ -
ಜ್ಯೋತಿಯ ಬೆಳಗುವಡೆ
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೋ ?!
ಗುರುವಿದೆ
ಲಿಂಗವಿದೆ -
ಶಿಷ್ಯನ ಸುಜ್ಞಾನವಂಕುರಿಸದನ್ನಕ್ಕರ ಭಕ್ತಿಯೆಲ್ಲಿಯದೋ ?!
ಸೋಹಮೆಂಬುದ ಕೇಳಿ, ದಾಸೋಹವ ಮಾಡದಿದ್ದರೆ
ಅತಿಗಳೆದನು ಗುಹೇಶ್ವರ.
೫೫.
ಘನತರಚಿತ್ರದ ರೂಹ ಬರೆಯಬಹುದಲ್ಲದೆ
ಪ್ರಾಣವ ಬರೆಯಬಹುದೇ ?
ಅಯ್ಯ,
ದಿವ್ಯಾಗಮಂಗಳು ಹೇಳಿದ ಕ್ರೀಯಲು ದೀಕ್ಷೆಯ ಮಾಡಬಹುದಲ್ಲದೆ
ಭಕ್ತಿಯ ಮಾಡಬಹುದೇ ?
ಅಯ್ಯ,
ಪ್ರಾಣವಹ ಭಕ್ತಿಯ ತನ್ಮಯ ನೀನು !
ಈ ಗುಣವುಳ್ಳಲ್ಲಿ ನೀನಿಹೆ
ಇಲ್ಲದಲ್ಲಿ ನೀನಿಲ್ಲ, ಗುಹೇಶ್ವರ.
೫೬.
ಕಾಯಕ್ಕೆ ಮಜ್ಜನ
ಪ್ರಾಣಕ್ಕೆ ಓಗರ
ಇವ ಮಾಡಲೆ ಬೇಕು,
ಸುಳಿವ ಸುಳುಹುಳ್ಳನ್ನಕ್ಕರ
ಇವ ಮಾಡಲೆ ಬೇಕು
ಗುಹೇಶ್ವರನೆಂಬ ಲಿಂಗಕ್ಕೆ
ಆತ್ಮನುಳ್ಳಕ್ಕರ ಭಕ್ತಿಯ ಮಾಡಲೆ ಬೇಕು.
೫೭.
ಅದ್ವೈತವ ನುಡಿದು ಅಹಂಕಾರಿಯಾದೆನಯ್ಯ
ಬ್ರಹ್ಮವ ನುಡಿದು ಭ್ರಮಿತನಾದೆನಯ್ಯ
ಶೂನ್ಯವ ನುಡಿದು ಸುಖದು:ಖಕ್ಕೆ ಗುರಿಯಾದೆನಯ್ಯ
ಗುಹೇಶ್ವರ, ನಿಮ್ಮ ಶರಣ ಸಂಗನ ಬಸವಣ್ಣನ ಸಾನ್ನಿಧ್ಯದಿಂದ
ನಾನು ಸದ್ಭಕ್ತನಾದೆನಯ್ಯ.
೫೮.
'ದೇವ' ಕಂಡಾ.
'ಭಕ್ತ' ಕಂಡಾ
ವಕರಳಿ ಮರಳಿ ಶರಣೆಂಬ ಕಂಡಾ !
ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ !
ಸಾವನ್ನಕ್ಕರ ಸರ ಉಂಟೇ, ಗುಹೇಶ್ವರ.
೫೯.
ಮುಂದು ಜಾವದಲೆದ್ದು
ಲಿಂಗದಂಘ್ರಿಯ ಮುಟ್ಟಿ,
ಸುಪ್ರಭಾತ ಸಮಯದಲ್ಲಿ
ಶಿವಭಕ್ತರ ಮುಖವ ನೋಡುವುದು,
ಹುಟ್ಟಿದುದಕ್ಕಿದೆ ಸಫಲ ನೋಡಾ !
ಸತ್ಯವಚನವಿಂತೆಂದುದು ;
"ಇವಿಲ್ಲದವರ ನಾನೊಲ್ಲೆ"
ಗುಹೇಶ್ವರ.
೬೦.
ಆಚಾರವಱಿಯದೆ
ವಿಭವವಳಿಯದೆ ;
ಕೋಪವಡಗದೆ
ತಾಪ ಮುಱಿಯದೆ-
ಬಱಿದೆ ಭಕ್ತರಾದೆವೆಂದು
ಬೆಬ್ಬನೆ ಬೆಱೆವವರ ಕೇಡಿಂಗೆ ನಾನು ಮಱುಗುವೆನು ಕಾಣಾ
ಗುಹೇಶ್ವರ.
೬೧.
ಆಸೆಗೆ ಸತ್ತುದು ಕೋಟಿ !
ಆಮಿಷಕ್ಕೆ ಸತ್ತುದು ಕೋಟಿ !
ಹೊನ್ನು-ಹೆಣ್ಣು-ಮಣ್ಣಿಂದು ಸತ್ತುದು ಕೋಟಿ !
ಗುಹೇಶ್ವರ,
ನಿಮಗಾಗಿ ಸತ್ತವರನಾರನೂ ಕಾಣೆ !!
೬೨.
ಹೃದಯಕಮಲದೊಳಗೊಂದು
ಮಱಿದುಂಬಿ ಹುಟ್ಟಿತ್ತು !
ಹಾರಿ ಹೋಗಿ ಆಕಾಶವ ನುಂಗಿತ್ತಯ್ಯಾ !!
ಆ ತುಂಬಿಯ ಗಱಿಯ ಗಾಳಿಯಲ್ಲಿ
ಮೂಱು ಲೋಕವೆಲ್ಲವೂ ತಲೆಕೆಳಗಾಯಿತ್ತು !!!
ಪಂಚವರ್ಣದ ಹಂಸೆಯ ಪಂಜರವ ಖಂಡಿಸಿದರೆ
ಗಱಿ ಮುಱಿದು, ತುಂಬಿ ನೆಲಕ್ಕುರುಳಿತ್ತು !
ನಿಜದುದಯದ ಬೆಡಗಿನ ಕೀಲ -
ಗುಹೇಶ್ವರ,
ನಿಮ್ಮ ಶರಣರನುಭಾವಸಂಗದಲ್ಲಿದ್ದು ಕಂಡೆನಯ್ಯ.
೬೩.
ಕಬ್ಬಿನಲ್ಲಿ ಬಿಲ್ಲ ಮಾಡಿ
ಪರಿಮಳದಲ್ಲಿ ಅಂಬ ಮಾಡಿ
ನಲ್ಲೋ ಬಿಲ್ಲಾಳೇ,
ಎನ್ನ ಮನದಲ್ಲಿ ಎಸೆಯ ಬಲ್ಲೆಯಲ್ಲಾ
ಗುಹೇಶ್ವರನೆಂಬ ಲಿಂಗವನು ?!
೬೪.
ಅಮರಾವತಿಯ ಪಟ್ಟಣದೊಳಗೆ
ದೇವೇಂದ್ರನಾಳುವ ನಂದನವನವಯ್ಯ !
ಅತ್ತ ಸಾರೆಲೆ ಕಾಮ, ಮೋಹವೆ ನಿನಗೆ ?
ಲೋಕಾದಿಲೋಕವನೆಲ್ಲವ ಮರುಳುಮಾಡಿದೆ-
ಕಾಮ, ಗುಹೇಶ್ವರಲಿಂಗವನಱಿ ಭೋ!
೬೫.
ಎಸೆಯದಿರು, ಎಸೆಯದಿರು
ಕಾಮ, ನಿನ್ನ ಬಾಣ ಹುಸಿಯಲೇಕೋ ?
ಲೋಭ-ಮೋಹ-ಮದ-ಮತ್ಸರ
ಇವು ಸಾಲದೇ ನಿನಗೆ ?
ಗುಹೇಶ್ವರಲಿಂಗದ ವಿರಹದಲ್ಲಿ ಬೆಂದವರ
ಮರಳಿ ಸುಡಲುಂಟೇ ಮರುಳು ಕಾಮ ?!
೬೬.
ಬಿಸುವಂತೆ ! ಜವಳಿಗಂಭ !!
ಲೇಸಾಯಿತ್ತು ಮನೆ
ಲೇಸಾಯಿತ್ತು ಮೇಲುವೊದಿಕೆ
ಮಗುಳೆ ಆ ಅಂಗಕ್ಕೆ ಕಿಚ್ಚನಿಕ್ಕಿ
ಮನೆಯನಿಂಬುಮಾಡಿದೆ ಲಿಂಗಜಂಗಮಕ್ಕೆ !
ಹುಟ್ಟುಗೆಟ್ಟು ಬಟ್ಟಬಯಲಲ್ಲಿ ನಾನಿದೇನೆ ಗುಹೇಶ್ವರ.
೬೭.
ತನು ತರತರಂಬೋಗಿ
ಮನವು ನಿಮ್ಮಲ್ಲಿ ಸಿಲುಕಿತ್ತಯ್ಯ.
ನೋಟವೇ ಪ್ರಾಣವಾಗಿ
ಆಪ್ಯಾಯನ ನಿಮ್ಮಲ್ಲಿ ಅಱಿತುದಯ್ಯ
ಸಿಲುಕಿತ್ತು ಶೂನ್ಯದೊಳಗೆ
ಗುಹೇಶ್ವರ ನಿರಾಳವಯ್ಯ.
೬೮.
ಮನ ಬಸುಱಾದರೆ ಕೈ ಬೆಸಲಾಯಿತ್ತ ಕಂಡೆ !
ಕರ್ಪುರದ ಕಂಪ ಕಿವಿ ಕುಡಿಯಿತ್ತ ಕಂಡೆ !
ಮುತ್ತಿನ ಢಾಳವ ಮೂಗು ನುಂಗಿತ್ತ ಕಂಡೆ !
ಕಂಗಳು ಹಸಿದು ವಜ್ರವ ನುಂಗಿತ್ತ ಕಂಡೆ !
ಒಂದು ನೀಲದೊಳಗೆ ಮೂಱು ಲೋಕವಡಗಿತ್ತ ಕಂಡೆ !
ಗುಹೇಶ್ವರ.
೬೯.
ನಿಚ್ಚಕ್ಕೆ ನಿಚ್ಚ ಒತ್ತೆಯ ಬೇಡಿದಡೆ
ಅಚ್ಚಿಗವಾಯಿತ್ತವ್ವಾ, ನಮ್ಮ ನಲ್ಲಂಗೆ
ಕಿಚ್ಚನೆ ಹೊತ್ತುಕೊಂಡು
ಅಚ್ಚನೆಯಾಡಲು
ಅಚ್ಚುಗವಾಯಿತ್ತವ್ವಾ, ನಮ್ಮ ನಲ್ಲಂಗೆ !
ಅಚ್ಚನೆಯ ಗಳಿಹವನಿಳುಹಿದರೆ
ಬಳಿಕ ನಿಶ್ಚಿಂತವಾಯಿತ್ತು, ಗುಹೇಶ್ವರ !!!
೭೦.
ಆಸೆಯೆಂಬ ಕೂಸನೆತ್ತಲು
ರೋಷವೆಂಬ ತಾಯಿ ಮುಂದೆ ಬಂದಿಪ್ಪಳು ನೋಡಾ !
ಇಂತೆರಡಿಲ್ಲದ ಕೂಸನೆತ್ತಬಲ್ಲಡೆ
ಅವ ಅಚ್ಚ ಶೀಲವಂತನೆಂಬೆ ಕಾಣಾ ಗುಹೇಶ್ವರ.
೭೧.
ತಾಯಿ ಬಂಜೆಯಾದಲ್ಲದೆ ಶಿಶು ಗತವಾಗದು.
ಬೀಜ ನಷ್ಟವಾದಲ್ಲದೆ ಸಸಿ ಗತವಾಗದು
ನಾಮ ನಷ್ಟವಿಲ್ಲದೆ ನೇಮ ನಷ್ಟವಾಗದು
ಮೊದಲುಗೆಟ್ಟಲ್ಲದೆ ಲಾಭದಾಸೆ ಬಿಡದು
ಗುಹೇಶ್ವರಲಿಂಗದ ನಿಜವನೆಯ್ದುವಡೆ
ಪೂಜೆಯ ಫಲ ಮಾದಲ್ಲದೆ ಭವಂ ನಾಸ್ತಿಯಾಗದು.
೭೨.
ಬೆಟ್ಟಕ್ಕೆ ಚಳಿಯಾದಡೆ
ಏನ ಹೊದಿಸುವಿರಯ್ಯ !
ಬಯಲು ಬತ್ತಲೆಯಾದಡೆ
ಏನ ನುಡಿಸುವರಯ್ಯ ?
ಭಕ್ತನು ಭವಿಯಾದಡೆ
ಏನನುಪಮಿಸುವೆನಯ್ಯ - ಗುಹೇಶ್ವರ ?
೭೩.
ಸತ್ತ ಬಳಿಕ ಮುಕ್ತಿಯ ಹಡೆದಹೆನೆಂದು
ಪೂಜಿಸ ಹೋದರೆ
ಆ ದೇವರೇನ ಕೊಡುವರೋ ?
ಸಾಯದೆ-ನೋಯದೆ-ಸ್ವತಂತ್ರನಾಗಿ
ಸಂದು-ಭೇದವಿಲ್ಲದಿಪ್ಪ, ಗುಹೇಶ್ವರ, ನಿಮ್ಮ ಶರಣ.
ಮಾಹೇಶ್ವರ ಸ್ಥಲ
೭೪.
ಕುರೂಪಿ
ಸುರೂಪಿಯ ನೆನೆದಡೆ
ಸುರೂಪಿಯಪ್ಪನೆ ?
ಆ ಸುರೂಪಿ
ಕುರೂಪಿಯ ನೆನದಡೆ
ಕುರೂಪಿಯಪ್ಪನೆ ?
ಧನವುಳ್ಳವರ ನೆನೆದಡೆ ದರಿದ್ರ ಹೋಹುದೇ ?
ಪುರಾತರ ನೆನೆದು ಕೃತಾರ್ಥರಾದೆವೆಂಬರು !
ತಮ್ಮಲ್ಲಿ ಭಕ್ತಿನಿಷ್ಠೆಯಿಲ್ಲದವರ ಕಂಡಡೆ
ಮೆಚ್ಚನು ಗುಹೇಶ್ವರನು.
೭೫.
ಕಾರಣವಿಲ್ಲ, ಕಾರ್ಯವಿಲ್ಲ.
ಏತಕ್ಕೆ ಭಕ್ತರಾದೆವೆಂಬಿರೋ ?
ಐವರ ಬಾಯ ಎಂಜಲನುಂಬಿರಿ !
ಐವರು ಸ್ತ್ರೀಯರ ಮುಖವನಱಿಯಿರಿ !
ಮೂಱು ಸಂಕಲೆಯ ಕಳೆಯಲಱಿಯಿರಿ !
ಕಾಯವಿಡಿದು ಲಿಂಗವ ಮುಟ್ಟಿಹೆನೆಂಬ
ಭ್ರಮೆಯ ನೋಡಾ, ಗುಹೇಶ್ವರ.
೭೬.
ಉದಯವಾಯಿತ್ತ ಕಂಡು
ಉದರಕ್ಕೆ ಕುದಿವರಯ್ಯ !
ಕತ್ತಲೆಯಾಯಿತ್ತ ಕಂಡು
ಮಜ್ಜನಕ್ಕೆಱೆವರಯ್ಯ ! ಲಿಂಗಕ್ಕೆ ನೇಮವಿಲ್ಲ !
ಇರುಳಿಗೊಂದು ನೇಮ !
ಹಗಲಿಗೊಂದು ನೇಮ ! ಲಿಂಗಕ್ಕೆ ನೇಮವಿಲ್ಲ !
ಕಾಯ ಒಂದೆಸೆ
ಜೀವ ಒಂದೆಸೆ
ಗುಹೇಶ್ವರನೆಂಬ ಲಿಂಗವು ತಾನೊಂದೆಸೆ !
೭೭.
ಅಗ್ರವಣಿ-ಪತ್ರೆ-ಧೂಪ-ದೀಪನಿವಾಳಿಯಲ್ಲಿ
ಪೂಜಿಸಿ ಪೂಜಿಸಿ ಬಳಲುತ್ತೈದಾರೆ !
ಏನೆಂದಱಿಯರು ! ಎಂತೆಂದಱಿಯರು !
ಜನಮರುಳೋ ಜಾತ್ರೆ ಮರುಳೋ-
ಎಂಬಂತೆ ಎಲ್ಲರೂ ಪೂಜಿಸಿ
ಏನನೂ ಕಾಣದೆ
ಲಯವಾಗಿ ಹೋದರು, ಗುಹೇಶ್ವರ.
೭೮.
ಮಜ್ಜನಕ್ಕೆಱೆದು ಫಲವ ಬೇಡುವರಯ್ಯ
ತಮಗೆಲ್ಲಿಯದೋ ಆ ಫಲವು ಸೀತಾಳಕ್ಕಲ್ಲದೆ ?
ಪತ್ರೆ-ಪುಷ್ಪದಲ್ಲಿ ಪೂಜಿಸಿ ಫಲವು ಬೇಡುವರಯ್ಯ
ತಮಗೆಲ್ಲಿಯದೋ ಆ ಫಲವು ಗಿಡುಗಳಿಗಲ್ಲದೆ ?
ಸಯಿಧಾನವರ್ಪಿಸಿ ಪ್ರಸಾದದ ಫಲವ ಬೇಡುವರಯ್ಯ
ತಮಗೆಲ್ಲಿಯದೋ ಆ ಫಲವು ಹದಿನೆಂಟು ಧಾನ್ಯಕ್ಕಲ್ಲದೆ ?
ಲಿಂಗದೊಡೆಯ ಲಿಂಗಕ್ಕೆ ಕೊಟ್ಟು
ಫಲವ ಬೇಡುವ ಸರ್ವಾನ್ಯಾಯಿಗಳನೇನೆಂಬೆ ಗುಹೇಶ್ವರ.
೭೯.
ಜಾಲಗಾಱನ ಕಾಲು ಮುಳ್ಳು ತಾಗಿ ನೊಂದಿತ್ತೆಂಬಂತೆ
ಸೂನೆಗಾಱನ ಮನೆಯಲ್ಲಿ ಹೆಣ ಹೋಗಿ ಅಳುವಂತೆ
ಕನ್ನಗಳ್ಳನ ಮನೆಯಲ್ಲಿ ಬಟ್ಟಲು ಹೋಗಿ ಮಱುಗುವಂತೆ
ಠಕ್ಕನ ಪೂಜೆಗೆ ಮೆಚ್ಚುವನೇ ನಮ್ಮ ಗುಹೇಶ್ವರನು ?
೮೦.
ಸಾಸವೆಯಷ್ಟು ಸುಖಕ್ಕೆ
ಸಾಗರದಷ್ಟು ದುಃಖ ನೋಡಾ !
ಘಳಿಗೆಯ ಬೇಟವ ಮಾಡಿಹೆನೆಂಬ
ಪರಿಯ ನೋಡಾ !
ತನ್ನನಿಕ್ಕಿ ನಿಧಾನವ ಸಾಧಿಸಿಹೆನೆಂದಡೆ
ಬಿನ್ನಾಣ ತಪ್ಪಿತ್ತು ಗುಹೇಶ್ವರ.
೮೧.
ಮಜ್ಜನಕ್ಕೆಱೆವರೆಲ್ಲಾ ಇದ್ದಲ್ಲಿ ಫಲವೇನು ?
ಮುದ್ರೆಧಾರಿಗಳಪ್ಪರಯ್ಯ !
ಲಿಂಗದಲ್ಲಿ ನಿಷ್ಠೆಯಿಲ್ಲ
ಜಂಗಮದಲ್ಲಿ ಪ್ರೇಮಿಗಳಲ್ಲ
ವೇಷಲಾಂಛನಧಾರಿಗಳಪ್ಪರಯ್ಯ !
ನೋಡಿ ಮಾಡುವ ಭಕ್ತಿ ಸಜ್ಜನಸಾರಾಯವಲ್ಲ
ಗುಹೇಶ್ವರ ಮೆಚ್ಚನಯ್ಯ !
೮೨.
ಕೊಟ್ಟ ಕುದುರೆಯನೇಱಲಱಿಯದೆ
ಮತ್ತೊಂದು ಕುದುರೆಯ ಬಯಸುವರು
ವೀರರೂ ಅಲ್ಲ ! ಧೀರರೂ ಅಲ್ಲ !!
ಇದು ಕಾರಣ
ನೆಱೆ ಮೂಱು ಲೋಕವೆಲ್ಲವೂ
ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ
ಗುಹೇಶ್ವರನೆಂಬ ಲಿಂಗವನವರೆತ್ತಬಲ್ಲರೋ ?
೮೩.
ಜೀವವಿಲ್ಲದ ಹೆಣನ ಹಿಡಿದಾರುವರಯ್ಯ
ಪ್ರತಿಯಿಲ್ಲದ ಪ್ರತಿಗೆ ಪ್ರತಿಯ ಮಾಡುವರಯ್ಯ
ಶಿರವಿಲ್ಲದ ಮುಂಡಕ್ಕೆ ಸೇಸೆಯನಿಕ್ಕುವರು ಗುಹೇಶ್ವರ !
೮೪.
ಆದ್ಯರಲ್ಲ ! ವೇದ್ಯರಲ್ಲ !
ಸಾಧ್ಯರಲ್ಲದ ಹಿರಿಯರ ನೋಡಾ !
ತನುವಿಕಾರ ! ಮನವಿಕಾರ !
ಇಂದ್ರಿಯವಿಕಾರದ ಹಿರಿಯರ ನೋಡಾ !
ಶಿವಚಿಂತೆ ಶಿವಜ್ಞಾನಿಗಳ ಕಂಡರೆ
ಅಳವಾಡಿ ನುಡಿವರು
ಗುಹೇಶ್ವರನಱಿಯದ ಕರ್ಮಿಗಳಯ್ಯ !
೮೫.
ಆಳವಱಿಯದ ಭಾಷೆ
ಬಹುಕುಳವಾದ ನುಡಿ
ಇಂತೆರಡಱ ನುಡಿ ಹುಸಿಯಯ್ಯ !
ಬಹುಭಾಷಿತರು, ಸುಭಾಷಿತವರ್ಜಿತರು
"ಶರಣಸತಿ ಲಿಂಗಪತಿ" ಎಂಬರು
ಹುಸಿಯಯ್ಯ !
ಇಂತಪ್ಪವರ ಕಂಡು ನಾಚಿದೆನಯ್ಯ ಗುಹೇಶ್ವರ.
೮೬.
ದೇಶ ಗುಱಿಯಾಗಿ
ಲಯವಾಗಿ ಹೋದವರ ಕಂಡೆ !
ತಮಂಧ ಗುಱಿಯಾಗಿ
ಲಯವಾಗಿ ಹೋದವರ ಕಂಡೆ !
ಕಾಮ ಗುಱಿಯಾಗಿ
ಬೆಂದುಹೋದವರ ಕಂಡೆ !
ನೀ ಗುಱಿಯಾಗಿ
ಲಯವಾಗಿ ಹೋದವರನಾರನೂ ಕಾಣೆ ಗುಹೇಶ್ವರ.
೮೭.
ಮರನೊಳಗಣ ಪತ್ರೆ ಫಲಂಗಳು
ಮರ ಕಾಲವಶದಲ್ಲಿ ತೋರುವಂತೆ,
ಹರನೊಳಗಣ ಪ್ರಕೃತಿಸ್ವಭಾವಂಗಳು
ಹರಭಾವದಿಚ್ಚೆಗೆ ತೋಱುವವು !
ಲೀಲೆಯಾದಡುಮಾಪತಿ
ಲೀಲೆ ತಪ್ಪಿದಡೆ ಸ್ವಯಂಭು ಗುಹೇಶ್ವರ.
೮೮.
ಓಡಿನೊಳಗುಂಟೆ ಕನ್ನಡಿಯ ನೋಟ ?
ಮರುಳಿನ ಕೂಟ ವಿಪರೀತಚರಿತ್ರ !
ನೋಟದ ಸುಖ ತಾಗಿ ಕೋಟಲೆಗೊಂಡೆನು
ಗುಹೇಶ್ವರನೊಬ್ಬನೆ ಅಚಳ
ಉಳಿದವರೆಲ್ಲರೂ ಸೂತಕಿಗಳು.
೮೯.
ಸತಿ ಭಕ್ತೆಯಾದಡೆ ಹೊಲೆಗಂಜಲಾಗದು.
ಪತಿ ಭಕ್ತನಾದಡೆ ಕುಲಕಂಜಲಾಗದು.
ಸತಿ-ಪತಿಯೆಂಬ ಅಂಗಸುಖ ಹಿಂಗಿ
ಲಿಂಗವೆ ಪತಿಯಾದ ಬಳಿಕ
ಸತಿಗೆ ಪತಿಯುಂಟೆ?
ಪತಿಗೆ ಸತಿಯುಂಟೆ?
ಪಾಲುಂಡು ಮೇಲುಂಬರೇ ಗುಹೇಶ್ವರ ?!
೯೦.
ಪಂಚೇಂದ್ರಿಯ ಸಪ್ತಧಾತುವನತಿಗಳೆದಲ್ಲಿ
ಘನವೇನೋ ?
ಕಾಮ-ಕ್ರೋಧ-ಲೋಭ-ಮೋಹ-
ಮದ-ಮತ್ಸರವಿಷಯವನತಿಗಳೆದಲ್ಲಿ
ಫಲವೇನೋ ?
ಇವೆಲ್ಲವ ಕೊಂದ ಪಾಪ ನಿಮ್ಮ ತಾಗುವುದು,
ಗುಹೇಶ್ವರ.
೯೧.
ಲಿಂಗ ಒಳಗೋ ಹೊಱಗೋ ?
ಬಲ್ಲಡೆ ನೀವು ಹೇಳಿರೇ !
ಲಿಂಗ ಎಡನೋ ಬಲನೋ ?
ಬಲ್ಲಡೆ ನೀವು ಹೇಳಿರೇ !
ಲಿಂಗ ಮುಂದೋ ಹಿಂದೋ ?
ಬಲ್ಲಡೆ ನೀವು ಹೇಳಿರೇ !
ಲಿಂಗ ಸ್ಥೂಲವೋ ಸೂಕ್ಷ್ಮವೋ ?
ಬಲ್ಲಡೆ ನೀವು ಹೇಳಿರೇ !
ಲಿಂಗ ಪ್ರಾಣವೋ, ಪ್ರಾಣ ಲಿಂಗವೋ ?
ಬಲ್ಲಡೆ ನೀವು ಹೇಳಿರೇ ? ಗುಹೇಶ್ವರ.
೯೨.
ತನುವಿಂಗೆ ತನುವಾಗಿ
ಮನಕ್ಕೆ ಮನವಾಗಿ
ಜೀವಕ್ಕೆ ಜೀವವಾಗಿ ಇದ್ದುದನಾರು ಬಲ್ಲರೋ ?!
ಅದು ದೂರವೆಂದು
ಸಮೀಪವೆಂದು
ಮಹಂತ ಗುಹೇಶ್ವರನೊಳಗೆಂದು
ಹೊಱಗೆಂದು
ಬಱುಸೂಱೆವೋದರು !
ಪ್ರಸಾದಿ ಸ್ಥಲ
೯೩.
ಲಿಂಗಾರ್ಚನೆಯಿಲ್ಲದ ಮುನ್ನ
ಸಿಂಗಿಯಾನಾರೋಗಿಸಿದಿರಿ
ಸಂಜೆ ಸಮಾಧಿಗಳಿಲ್ಲದ ಮುನ್ನ ಉಂಡಿರಿ ಚೆನ್ನನ ಮನೆಯಲ್ಲಿ
ಚಿತ್ರಗುಪ್ತರಱಿಯದ ಮುನ್ನ ಎತ್ತಿದಿರಿ ಕಾಂಚಿಯ ಪುರವ
ಬೈಚಿಟ್ಟಿರಿ ಕೈಲಾಸವ ನಿಮ್ಮ ಚಿಕ್ಕುಟಾಧಾರದಲ್ಲಿ
ಈರೇಳು ಭುವನಂಗಳೆಲ್ಲವೂ ನಿಮ್ಮ ರೋಮಕೂಪದಲ್ಲಡಗಿದವು
ಪ್ರಾಣಾಪಾನ ವ್ಯಾನೋದಾನ ಸಮಾನರಹಿತ ಗುಹೇಶ್ವರ.
೯೪.
ತ್ರಿವಿಧ ನಿತ್ಯವ
ತ್ರಿವಿಧ ಅನಿತ್ಯವ ಬಲ್ಲವರಾರೋ ?
ತ್ರಿವಿಧಕ್ಕೆ ತ್ರಿವಿಧವನಿತ್ತು
ತ್ರಿವಿಧಪ್ರಸಾದದ ಕೊಳಬಲ್ಲಡೆ
ಆತನ ಧೀರನೆಂಬೆ !
ಆತನ
ಗುಹೇಶ್ವರಲಿಂಗದಲ್ಲಿ ಅಚ್ಚಪ್ರಸಾದಿಯೆಂಬೆ !
೯೫.
ಬೇಡದ ಮುನ್ನ ಮಾಡಬಲ್ಲಡೆ ಭಕ್ತ
ಬೇಡುವನೆ ಲಿಂಗಜಂಗಮ ?
ಬೇಡುವರಿಗೆಯೂ
ಬೇಡಿಸಿಕೊಂಬವರಿಗೆಯೂ
ಪ್ರಸಾದವಿಲ್ಲ ಗುಹೇಶ್ವರ.
೯೬.
ಒಳಗ ತೊಳೆಯಲಱಿಯದೇ
ಹೊಱಗ ತೊಳೆದು ಕುಡಿಯುತ್ತಿದ್ದರಯ್ಯ !
ಪಾದೋದಕ-ಪ್ರಸಾದವನಱಿಯದೆ
ಬಂದ ಬಟ್ಟೆಯಲ್ಲಿ ಮುಳುಗುತ್ತೈದಾರೆ ಗುಹೇಶ್ವರ.
೯೭.
ಮಾಡಿದ ಓಗರ ಮಾಡಿದಂತೆ ಇದ್ದಿತು
ನೀಡುವ ಕೈಗಳೆಡೆಯಾಡುತ್ತಿದ್ದವು.
ಲಿಂಗಕ್ಕರ್ಪಿತವ ಮಾಡಿದೆನೆಂಬರು.
ಒಂದಱಲೊಂದು ಸವೆಯದು ನೋಡಾ
ಲಿಂಗನಾರೋಗಣೆಯ ಮಾಡಿದನೆಂಬರು
ತಾವುಂಡು ನಿಮ್ಮ ದೂಱುವರು ಗುಹೇಶ್ವರ.
೯೮.
ತನ್ನ ಮುಟ್ಟಿ ನೀಡಿದುದೇ ಪ್ರಸಾದ.
ತನ್ನ ಮುಟ್ಟದೇ ನೀಡಿದುದೇ ಓಗರ.
ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದಿ.
ಇದುಕಾರಣ-
ಇಂತಪ್ಪ ಭೃತ್ಯಾಚಾರಿಗಲ್ಲದೆ ಪ್ರಸಾದವಿಲ್ಲ ಗುಹೇಶ್ವರ.
೯೯.
ಆಧಿಯಿಲ್ಲದಿದ್ದಡೆ
ಲಿಂಗಪ್ರಸಾದಿಯೆಂಬೆ !
ವ್ಯಾಧಿಯಿಲ್ಲದಿದ್ದಡೆ
ಜಂಗಮಪ್ರಸಾದಿಯೆಂಬೆ !
ಲೌಕಿಕ ಸೋಂಕದಿದ್ದಡೆ
ಸಮಯಪ್ರಸಾದಿಯೆಂಬೆ !
ಇಂತೀ ತ್ರಿವಿಧಪ್ರಸಾದಸಂಬಂಧಿಯಾದಾತನ
ಅಚ್ಚಪ್ರಸಾದಿಯೆಂಬೆನು ಕಾಣಾ ಗುಹೇಶ್ವರ.
೧೦೦.
ಪದವನರ್ಪಿಸಬಹುದಲ್ಲದೆ
ಪದಾರ್ಥವನರ್ಪಿಸಬಾರದು !
ಓಗರವನರ್ಪಿಸಬಹುದಲ್ಲದೆ
ಪ್ರಸಾದವನರ್ಪಿಸಬಾರದು !
ಗುಹೇಶ್ವರ, ನಿಮ್ಮ ಶರಣರು
ಹಿಂದ ನೋಡಿ ಮುಂದನರ್ಪಿಸಿದರು !
ಪ್ರಾಣಲಿಂಗಿ ಸ್ಥಲ
೧೦೧.
ಪ್ರಣವಮಂತ್ರವ ಕರ್ಣದಲಿ ಹೇಳಿ
ಶ್ರೀಗುರು ಶಿಷ್ಯನ ಅಂಗದ ಮೇಲೆ
ಲಿಂಗಪ್ರತಿಷ್ಠೆಯ ಮಾಡಿದ ಬಳಿಕ
ಪ್ರಾಣದಲಿ ಲಿಂಗವಿಪ್ಪುದೆಂಬ
ವ್ರತಗೇಡಿಗಳ ಮಾತ ಕೇಳಲಾಗದು.
ಒಳಗಿಪ್ಪನೇ ಲಿಂಗದೇವನು
ಮಲ-ಮೂತ್ರ-ಮಾಂಸದ ಹೇಸಿಕೆಯೊಳಗೆ ?
ಅಲ್ಲಿ ಪ್ರಾಣವಿಪ್ಪುದಲ್ಲದೆ ಲಿಂಗವಿಪ್ಪುದೇ ?
ಆ ಪ್ರಾಣವ ತಂದು
ತನ್ನ ಇಷ್ಟಲಿಂಗದಲ್ಲಿರಿಸಿ ನೆರೆಯ ಬಲ್ಲಡೆ
ಆತನೆ ಪ್ರಾಣಲಿಂಗಸಂಬಂಧಿ !
ಅಲ್ಲದವರ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು ?
೧೦೨.
ಕದಳಿಯ ಬನವ ಹೊಕ್ಕು
ಹೊಲಬ ತಿಳಿಯದನ್ನಕ್ಕ,
ಬಯಲ ಗಾಳಿಯ ಹಿಡಿದು
ಘಟ್ಟಿ ಮಾಡದನ್ನಕ್ಕ,
ಬಱಿದೆ ಬಹುದೇ ಶಿವಜ್ಞಾನ ?
ಷಡುವರ್ಗವಳಿಯದನ್ನಕ್ಕ
ಅಷ್ಟಮದವಳಿಯದನ್ನಕ್ಕ
ಬಱಿದೆ ಬಹುದೇ ಶಿವಸಂಪದ ?
ಮದಮತ್ಸರವ ಮಾಡಲಿಲ್ಲ !
ಹೊದಕುಳಿಗೊಳಲಿಲ್ಲ
ಗುಹೇಶ್ವರಲಿಂಗ ಕಲ್ಪಿತದೊಳಗಲ್ಲ !
೧೦೩.
ಶಬ್ದ ಸ್ಪರ್ಶ ರೂಪ ರಸ ಗಂಧ
ಪಂಚೇಂದ್ರಿಯ ಸಪ್ತಧಾತು ಅಷ್ಟಮದದಿಂದ
ಮುಂದುಗಾಣದವರು ನೀವು ಕೇಳಿರೇ !
ಲಿಂಗವಾರ್ತೆಯ ವಚನರಚನೆಯ
ಮಾತನಾಡುವಿರಯ್ಯ !
ಸಂಸಾರದ ಮುಚ್ಚು ಬಿಡದನ್ನಕ್ಕರ
ಸೂಕ್ಷ್ಮಶಿವಪಥವು ಸಾಧ್ಯವಾಗದು.
ಗುಹೇಶ್ವರಲಿಂಗದಲಿ
ವಾಕು ಪಾಕವಾದಡೇನು ?
ಮನ ಪಾಕವಾಗದನ್ನಕ್ಕರ ?!
೧೦೪.
ಮರ್ತ್ಯಲೋಕದ ಮಾನವರು
ದೇಗುಲದೊಳಗೊಂದು ದೇವರ ಮಾಡಿದಡೆ
ಆನು ಬೆಱಗಾದೆನಯ್ಯ !
ನಿಚ್ಚಕ್ಕೆ ನಿಚ್ಚ ಅರ್ಚನೆಪೂಜನೆಯ ಮಾಡಿಸಿ
ಭೋಗವ ಮಾಡುವರ ಕಂಡು ನಾನು ಬೆಱಗಾದೆನು
ಗುಹೇಶ್ವರ,
ನಿಮ್ಮ ಶರಣರು ಹಿಂದೆ ಲಿಂಗವನಿರಿಸಿ ಹೋದರು.
೧೦೫.
ಭಾವದಲೊಬ್ಬ ದೇವರ ಮಾಡಿ
ಮನದಲೊಂದು ಭಕ್ತಿಯ ಮಾಡಿ
ಕಾಯದ ಕೈಯಲ್ಲಿ ಕಾರ್ಯವುಂಟೆ ?
ವಾಯಕ್ಕೆ ಬಳಲುವರು ನೋಡಾ !
ಎತ್ತನೇಱಿ ಎತ್ತನಱಸುವರು ಎತ್ತ ಹೋದರೈ
ಗುಹೇಶ್ವರ ?
೧೦೬.
ಹೊಟ್ಟೆಯ ಮೇಲೆ
ಕಟ್ಟೋಗರದ ಮೊಟ್ಟೆಯ ಕಟ್ಟಿದರೇನು?
ಹಸಿವು ಹೋಹುದೇ ?
ಅಂಗದ ಮೇಲೆ ಲಿಂಗ ಸ್ವಾಯತವಾದರೇನು ?
ಭಕ್ತನಾಗಬಲ್ಲನೆ ?
ಇಟ್ಟ ಕಲ್ಲು ಮೆಳೆಯ ಮೇಲೆ ಸಿಕ್ಕಿದಡೆ
ಆ ಕಲ್ಲು ಲಿಂಗವೆ ?
ಆ ಮೆಳೆ ಭಕ್ತನೆ ?
ಇಟ್ಟಾತ ಗುರುವೆ ?
ಇಂತಪ್ಪನವರ ಕಂಡರೆ ನಾಚುವೆನಯ್ಯ ಗುಹೇಶ್ವರ.
೧೦೭.
ಇಷ್ಟಲಿಂಗವನು ಪ್ರಾಣಲಿಂಗವೆಂಬ
ಕಷ್ಟವೆಲ್ಲಿಯದೋ ?
ಇಷ್ಟಲಿಂಗ ಹೋದರೆ ಪ್ರಾಣಲಿಂಗ ಹೋಗದು ನೋಡಾ !
ಇಷ್ಟಲಿಂಗ-ಪ್ರಾಣಲಿಂಗವೆಂಬ ಬೇಧವನು
ಗುಹೇಶ್ವರ, ನಿಮ್ಮ ಶರಣ ಬಲ್ಲ.
೧೦೮.
ವ್ರತಗೇಡಿ, ವ್ರತಗೇಡಿ ಎಂಬವ ತಾನೆ ವ್ರತಗೇಡಿ,
ವ್ರತಗೆಡಲಿಕೇನು ಹಾಲಂಬಿಲವೆ ?
ವ್ರತಗೆಟ್ಟ ಬಳಿಕ ಘಟ ಉಳಿಯಬಲ್ಲುದೇ ?
ಕಾಯದೊಳಗೆ ಜೀವ ಉಳ್ಳನ್ನಕ್ಕರ
ಅದೇ ಪ್ರಾಣಲಿಂಗವು ಕಾಣಾ ಗುಹೇಶ್ವರ.
೧೦೯.
ಅಂಗದ ಕಳೆಯಲೊಂದು ಲಿಂಗವ ಕಂಡೆ
ಲಿಂಗದ ಕಳೆಯಲೊಂದು ಅಂಗವ ಕಂಡೆ !
ಅಂಗದ ಲಿಂಗದ ಸಂದಣಿಯನಱಸಿ ಕಂಡೆ ನೋಡಿರೇ !
ಇಲ್ಲಿ ಐದಾನೆ ಶಿವನು !
ಬಲ್ಲಡೆ ಇರಿಸಿಕೊಳ್ಳಿರೇ ಕಾಯವಳಿಯದ ಮುನ್ನ !!
ನೋಡಬಲ್ಲಡೆ ಗುಹೇಶ್ವರಲಿಂಗಕ್ಕೆ ಬೇರೆ ಠಾವುಂಟೆ ಹೇಳಿರೇ.
೧೧೦.
ಪೂಜಿಸಿ ಕೆಳಯಿಂಕೆ ಇಳುಹಲದೇನೋ ?
ಅನಾಗತ ಪೂಜೆಯ ಮಾಡಲದೇನೋ ?
ದೇಹವೇ ಪಿಂಡಿಗೆ
ಜೀವವೇ ಲಿಂಗ-ಗುಹೇಶ್ವರ.
೧೧೧.
ಅಱಿದಱಿದು ಅಱಿವು ಬಱುದೊಱಿವೋಯಿತ್ತು !
"ಕುಱುಹ[ತೋಱ]ದಡೆಂತೂ ನಂಬರು,
ತೆಱಹಿಲ್ಲದ ಘನವ ನೆನೆದು
ಗುರುಶರಣೆಂಬುದಲ್ಲದೆ ಮಱಹು ಬಂದೀತೆಂ"ದು
ಗುರು ಕುಱುಹ ತೋಱಿದನಲ್ಲದೆ
ಬಲ್ಲಡೆ ಗುಹೇಶ್ವರಲಿಂಗವು ಹೃದಯದಲೈದಾನೆ.
೧೧೨.
ಉದಕ ಮೂರುತಿಯಾಗಿ
ಉದಯವಾಯಿತ್ತು ಪಿಂಡಿಗೆಯಲ್ಲಿ
ಮೂಲ ಸ್ಥಾನ ಸ್ಥಾಪ್ಯವಾಯಿತ್ತು
ಸ್ವದೇಹಶಿವಪುರದಲ್ಲಿ !
ವಾಯು ಪೂಜಾರಿಯಾಗಿ
ಪರಿಮಳದಿಂಡೆದಂಡೆಯ ಕಟ್ಟಿ
ಪೂಜಿಸುತ್ತಿರ್ದುದೋ ನವದ್ವಾರಶಿವಾಲಯದಾದಿಮಧ್ಯಸ್ಥಾನದಲ್ಲಿ
ಗುಹೇಶ್ವರನೆಂಬುದಲ್ಲಿಯೆ ನಿಂದಿತ್ತು.
೧೧೩.
ಕಾಲೇ ಕಂಭಗಳಾದವೆನ್ನ
ದೇಹವೇ ದೇಗುಲವಾದುವಯ್ಯ !
ಎನ್ನ ನಾಲಗೆಯೆ ಘಂಟೆ
ಶಿರ ಸುವರ್ಣದ ಕಳಸವಿದೇನಯ್ಯ !
ಸ್ವರವೇ ಲಿಂಗಕ್ಕೆ ಸಿಂಹಾಸನವಾಗಿರ್ದುದು !
ಗುಹೇಶ್ವರ,
ನಿಮ್ಮ ಪ್ರಾಣಲಿಂಗಪ್ರತಿಷ್ಠೆ ಪಲ್ಲಟವಾಗದಂತಿದ್ದೆನಯ್ಯ.
೧೧೪.
ಪ್ರಾಣಲಿಂಗಕ್ಕೆ ಕಾಯವೇ ಸೆಜ್ಜೆ
ಆಕಾಶಗಂಗೆಯಲ್ಲಿ ಮಜ್ಜನ
ಹೂವಿಲ್ಲದ ಪರಿಮಳದ ಪೂಜೆ
ಹೃದಯಕಮಲದಲ್ಲಿ ಶಿವಶಿವಾ ಎಂಬ ಶಬ್ದ
ಇದು ಅದ್ವೈತ ಕಾಣಾ ಗುಹೇಶ್ವರ.
೧೧೫.
ಹೊತ್ತಾರೆ ಪೂಜಿಸಲುಬೇಡ ಕಂಡಾ !
ಬೈಗೆ ಪೂಜಿಸಲುಬೇಡ ಕಂಡಾ !
ಇರುಳುವನೂ ಹಗಲುವನೂ ಕಳೆದು ಪೂಜಿಸಬೇಕು ಕಂಡಾ !
ಇಂತಪ್ಪ ಪೂಜೆಯ ಪೂಜಿಸುವರ
ಎನಗೆ ತೋಱಯ್ಯ ಗುಹೇಶ್ವರ.
೧೧೬.
ಅಂಗದಲ್ಲಿ ಮಾಡುವ ಸುಖವದು
ಲಿಂಗಕ್ಕೆ ಭೂಷಣವಾಯಿತ್ತು.
ಕಾಡುಗಿಚ್ಚಿನ ಕೈಯಲ್ಲಿ
ಕರಡವ ಕೊಯ್ಸುವಂತೆ-
ಹಿಂದೆ ಮೆದೆಯಿಲ್ಲ !
ಮುಂದೆ ಹುಲ್ಲಿಲ್ಲ !!
ಅಂಗ-ಲಿಂಗವೆಂಬನ್ನಕ್ಕರ ಫಲದಾಯಕ,
ಲಿಂಗೈಕ್ಯವದು ಬೇಱೆ ಗುಹೇಶ್ವರ.
೧೧೭.
ಎನ್ನ ಮನದ ಕೊನೆಯ ಮೊನೆಯ ಮೇಲೆ
ಅಂಗವಿಲ್ಲದ ರೂಪನ ಕಂಡು ಮರುಳಾದೆನವ್ವ !
ಆತನ ಕಂಡು ಬೆಱಗಾದೆನವ್ವ-
ಎನ್ನಂತರಂಗದ ಆತುಮನೊಳಗೆ
ಅನಿಮಿಷನಿಜೈಕ್ಯ ಗುಹೇಶ್ವರನ ಕಂಡು !
೧೧೮.
ಮನದ ಸುಖವ ಕಂಗಳಿಗೆ ತಂದರೆ
ಕಂಗಳ ಸುಖವ ಮನಕ್ಕೆ ತಂದರೆ
ನಾಚಿತ್ತು, ಮನ ನಾಚಿತ್ತು !
ಸ್ಥಾನಪಲ್ಲಟವಾದಡೆ
ವ್ರತಕ್ಕೆ ಭಂಗ ಗುಹೇಶ್ವರ.
೧೧೯.
ಎನಗೊಂದು ಲಿಂಗ
ನಿನಗೊಂದು ಲಿಂಗ
ಮನೆಗೊಂದು ಲಿಂಗವಾಯಿತ್ತು !
ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ !
ಉಳಿ ಮುಟ್ಟಿದ ಲಿಂಗವ
ಮನ ಮುಟ್ಟಬಲ್ಲುದೇ ಗುಹೇಶ್ವರ ?
೧೨೦.
ಅರಳಿಯ ಮರದ ಮೇಲೆ
ಒಂದು ಹಂಸೆ ಗೂಡನಿಕ್ಕಿತ್ತ ಕಂಡೆ !
ಆ ಗೂಡಿನೊಳಗೊಬ್ಬ ಹೆಂಗೂಸು
ಉಯ್ಯಾಲೆಯಾಡುತ್ತಿದ್ದಳು.
ಉಯ್ಯಾಲೆ ಹಱಿದು
ಹೆಂಗೂಸು ನೆಲಕ್ಕೆ ಬಿದ್ದು ಸತ್ತಡೆ
ಪ್ರಾಣಲಿಂಗವ ಕಾಣಬಹುದು ಕಾಣಾ ಗುಹೇಶ್ವರ.
೧೨೧.
ಪೃಥ್ವಿಗೆ ಹುಟ್ಟಿದ ಶಿಲೆ
ಕಲ್ಲುಕುಟಿಕಂಗೆ ಹುಟ್ಟಿದ ಮೂರುತಿ
ಮಂತ್ರಕ್ಕೆ ಲಿಂಗವಾಯಿತ್ತಲ್ಲಾ !
ಆ ಮೂವರಿಗೆ ಹುಟ್ಟಿದ ಮಗನ
ಲಿಂಗವೆಂದು ಕೈವಿಡಿವ
ಅಚ್ಚವ್ರತಗೇಡಿಗಳನೇನೆಂಬೆ ಗುಹೇಶ್ವರ.
೧೨೨.
ಮೂಱು ಪುರದ ಹೆಬ್ಬಾಗಿಲೊಳಗೊಂದು
ಕೋಡಗ ಕಟ್ಟಿದುದ ಕಂಡೆ !
ಅದು ಕಂಡಕಂಡವರನೇಡಿಸುತ್ತಿದ್ದಿತು ನೋಡಾ !
ಪುರದರಸು ತನ್ನ ಪಾಯದಳ ಸಹಿತ ಬಂದರೆ
ಒಂದೇ ಬಾರಿ ಮುಱಿದು ನುಂಗಿತ್ತ ಕಂಡೆ !
ಆ ಕೋಡಗಕ್ಕೆ ಒಡಲುಂಟು, ತಲೆಯಿಲ್ಲ ;
ಕಾಲುಂಟು, ಹೆಜ್ಜೆಯಿಲ್ಲ ;
ಕೈಯುಂಟು, ಬೆರಳಿಲ್ಲ ;
ಇದು ಕರಚೋದ್ಯ ನೋಡಾ !
ತನ್ನ ಕರೆದವರ ಮುನ್ನವೇ ತಾ ಕರೆವುದು ಆ ಕೋಡಗ
ತನ್ನ ಬಸಿಱಲ್ಲಿ ಬಂದ ಮದಗಜದ ನೆತ್ತಿಯನೇಱಿ
ಗಾಳಿಯ ಧೂಳಿಯ ಕೂಡಿ ಓಲಾಡುತ್ತಿಹುದ ಕಂಡೆ !
ವಾಯದ ಗಗನದ ಮೇಲೆ
ತನ್ನ ಕಾಯವ ಪುಟನೆಗೆದು ತೋಱುತ್ತಿಹುದ ಕಂಡೆ !
ಹತ್ತು ಮುಖದ ಸರ್ಪನ
ತನ್ನ ಹೇಳಿಗೆಯೊಳಗಿಕ್ಕಿ ಆಡಿಸುತ್ತಿಹುದ ಕಂಡೆ !
ಐವರು ಕೊಡಗೂಸುಗಳ ಕಣ್ಣಿಂಗೆ
ಕಣ್ಣಡವ ಕಟ್ಟುತ್ತಿಹುದ ಕಂಡೆ !
ಹತ್ತು ಕೇರಿಗಳೊಳಗೆ ಸುಳಿವ ಹರಿಯ ನೆತ್ತಿಯ ಮೆಟ್ಟಿ
ಹುಬ್ಬನಾಡಿಸುವುದ ಕಂಡೆ !
ಆ ಕೋಡಗದ ಕೈಯಲ್ಲಿ ಮಾಣಿಕ್ಯವ ಕೊಟ್ಟಡೆ
ನೋಡುತ್ತ ನೋಡುತ್ತ ಬೆಱಗಾದುದು ಕಂಡೆ !
ಕೂಡಲಿಲ್ಲ ಕಳೆಯಲಿಲ್ಲ ! ಗುಹೇಶ್ವರನ ನಿಲುವು
ಪ್ರಾಣಲಿಂಗ ಸಂಬಂಧವಿಲ್ಲದವರಿಗೆ ಕಾಣಬಾರದು.
೧೨೩.
ಕಲ್ಲ ಮನೆಯ ಮಾಡಿ
ಕಲ್ಲ ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕೆಡೆದರೆ
ದೇವರೆತ್ತ ಹೋದರೋ?
ಲಿಂಗಪ್ರತಿಷ್ಠೆಯ ಮಾಡಿದವಂಗೆ
ನಾಯಕನರಕ ಗುಹೇಶ್ವರ.
೧೨೪.
ದೇಹವೇ ದೇವಾಲಯವಾಗಿದ್ದ ಮೇಲೆ
ಮತ್ತೆ ಬೇರೆ ದೇಗುಲಕ್ಕೆ ಎಡೆಯಾಡುವರಿಗೆ
ಏನ ಹೇಳುವೆನಯ್ಯ ?
ಗುಹೇಶ್ವರ, ನೀ ಕಲ್ಲಾದೆಡೆ ನಾನೇನಪ್ಪೆನು ?!
೧೨೫.
ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದರಲ್ಲಾ !
ಅಂಗಸಂಗಿಗಳೆಲ್ಲಾ ಮಹಾಘನವನಱಿಯದೆ ನಿಂದರೊ !
ಹುಸಿಯನೆ ಕೊಯ್ದು
ಹುಸಿಯನೆ ಪೂಜಿಸಿ
ಗಸಣಿಗೊಳಗಾದರು ಗುಹೇಶ್ವರ.


ಅ.ನ.ಕೃ


Tuesday, April 26, 2011

ಬಿ. ಜಿ. ಎಲ್. ಸ್ವಾಮಿ


ಬಿ. ಜಿ. ಎಲ್. ಸ್ವಾಮಿ (ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿ)

ಬಸವಣ್ಣನ ವಚನಗಳು 501 - 516

೫೦೧.
ಭಿತ್ತಿಯಿಲ್ಲದ ಚಿತ್ತಾರದಂತೆ,
ಭಕ್ತಿಯಲ್ಲದ ಪ್ರಮಥನಾಗಿ ಎಂದಿಪ್ಪೆನಯ್ಯ
ಸತ್ಯವಿಲ್ಲದ ಶರಣನಾಗಿ ಎಂದಿಪ್ಪೆನಯ್ಯ!
ಗೆರೆಯಿಲ್ಲದ ಕೋಲಲ್ಲಿ
ಉದ್ದರೆಯನಿಕ್ಕಿದ ಭಂಡದ ಹರದನಂತಾದೆನಯ್ಯ!
ಕೂಡಲಸಂಗಮದೇವ.
೫೦೨.
ಹುಸಿಯಿಂದ ಜನಿಸಿದೆನಯ್ಯ
ಮರ್ತ್ಯಲೋಕದೊಳಯಿಂಕೆ!
ಹುಸಿಯಿಂದ ಲಿಂಗವ ಹೆಸರುಗೊಂಡು ಕರೆದೆನಯ್ಯ!
ಅದು ಎನಗೆ ಭಾವವೂ ಅಲ್ಲದೆ
ನಿರ್ಭಾವವೂ ಅಲ್ಲದೆ ನಿಂದಿತ್ತಯ್ಯ!
ಅದರ ಅವಯವಂಗಳೆಲ್ಲವು ಜಂಗಮವಯ್ಯ!
ಅದಕ್ಕೆ ಎನ್ನ ಉಳ್ಳ ಸಯದಾನವ ಮಾಡಿ ನೀಡಿದೆನಯ್ಯ,
ಆ ಪ್ರಸಾದಕ್ಕೆ ಶರಣೆಂದೆನಯ್ಯ!
ಅದು ಸಾರವೂ ಅಲ್ಲ, ನಿಸ್ಸಾರವೂ ಅಲ್ಲ!
ಆ ಪ್ರಸಾದದಲ್ಲಿ ನಾನೇ ತದ್ಗತನಾದೆ ಕಾಣಾ
ಕೂಡಲಸಂಗಮದೇವ.
೫೦೩.
ಕುರುಹಿಲ್ಲ ಕುರುಹಿಲ್ಲ ಲಿಂಗವೆಂದೆಂಬರೆ,
ತೆರಹಿಲ್ಲ ತೆರಹಿಲ್ಲ ಜಂಗಮವೆಂದೆಂಬರೆ-
ಇದೇ ನೋಡಾ ಶಿವಾಚಾರ!
ಇದೇ ನೋಡಾ ಶಿವದೊಡಕು!
"ಆತ್ಮಾನಾಂ ಪ್ರಕೃತಿಸ್ವಭಾವ" ಎಂದುದಾಗಿ
ಮುಟ್ಟಬಾರದ ಠಾವ ಮರೆಗೊಂಡಿಪ್ಪ
ಮಮ ಕರ್ತೃ ಕೂಡಲಸಂಗಮದೇವ.
೫೦೪.
ವೇದ ವೇದಿಸಲರಿಯದೆ,
ಅಭೇದ್ಯ ಲಿಂಗವೆಂದು ನಡನಡುಗಿತ್ತು!
ಶಾಸ್ತ್ರ ಸಾಧಿಸಲರಿಯದೆ,
ಅಸಾಧ್ಯಲಿಂಗವೆಂದು ಸಾರುತ್ತೈದಾವೆ!
ತರ್ಕ ತರ್ಕಿಸಲರಿಯದೆ,
ಅತರ್ಕ್ಯಲಿಂಗವೆಂದು ಮನಂಗೊಳ್ಳವು!
ಆಗಮ ಗಮನಿಸಲರಿಯದೆ,
ಅಗಮ್ಯವೆಂದು ಹೋದುವು!
ನರರು ಸುರರು ಅಂತುವ ಕಾಣರು!
ನಮ್ಮ ಕೂಡಲಸಂಗಮದೇವನ ಪ್ರಮಾಣವ ಶರಣ ಬಲ್ಲ!
೫೦೫.
ಅಂತರಂಗ ಬಹಿರಂಗ
ಆತ್ಮಸಂಗ ಒಂದೇ ಅಯ್ಯ!
ನಾದ-ಬಿಂದು-ಕಳಾತೀತ
ಆದಿಯಾಧಾರ ನೀನೇ ಅಯ್ಯ!
ಆರೂಢದ ಕೂಟದ ಸುಖವ
ಕೂಡಲ ಸಂಗಯ್ಯ ತಾನೇ ಬಲ್ಲ!
೫೦೬.
ಕಾಮವೇಕೋ ಲಿಂಗಪ್ರೇಮಿಯೆನಿಸುವಂಗೆ ?
ಕಾಮವೇಕೋ ಶರಣವೇದ್ಯನೆನಿಸುವಂಗೆ ?
ಲೋಭವೇಕೋ ಭಕ್ತಿಲಾಭವ ಬಯಸುವಂಗೆ ?
ಮೋಹವೇಕೋ ಪ್ರಸಾದವೇದ್ಯನೆನಿಸುವಂಗೆ ?
ಮದಮತ್ಸರವುಳ್ಳವಂಗೆ ಹೃದಯ ಶುದ್ಧವೆಲ್ಲಿಯದೋ ?
ಹದುಳಿಗರಾದಲ್ಲಿಪ್ಪ ಕೂಡಲಸಂಗಮದೇವ |
೫೦೭.
ಎನ್ನ ನಡೆಯೊಂದು ಪರಿ |
ಎನ್ನ ನುಡಿಯೊಂದು ಪರಿ |
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯ |
ನುಡಿಗೆ ತಕ್ಕ ನಡೆಯ ಕಂಡರೆ
ಕೂಡಲಸಂಗಮದೇವ ತನ್ನೊಳಗಿಪ್ಪನಯ್ಯ |
೫೦೮.
ಬಡಪಶು ಪಂಕದಲ್ಲಿ ಬಿದ್ದರೆ
ಕಾಲ ಬಡಿವುದಲ್ಲದೆ ಬೇರೆ ಗತಿಯುಂಟೆ ?
ಶಿವ ಶಿವಾ ಹೋದಹೆ ಹೋದಹೆನಯ್ಯ |
ನಿಮ್ಮ ಮನದತ್ತಲೆನ್ನ ತೆಗೆಯಯ್ಯ |
ಪಶುವಾನು ಪಶುಪತಿ ನೀನು |
ತುಡುಗುಣಿಯಿಂದೆನ್ನ ಹಿಡಿದು ಬಡಿಯದ ಮುನ್ನ
ಒಡೆಯ, ನಿಮ್ಮ ಬೈಯದಂತೆ ಮಾಡು
ಕೂಡಲಸಂಗಮದೇವ.
೫೦೯.
ತನು ನಿಮ್ಮದೆಂದ ಬಳಿಕ ಎನಗೆ ಬೇರೆ ತನುವಿಲ್ಲ |
ಮನ ನಿಮ್ಮದೆಂದ ಬಳಿಕ ಎನಗೆ ಬೇರೆ ಮನವಿಲ್ಲ |
ಧನ ನಿಮ್ಮದೆಂದ ಬಳಿಕ ಎನಗೆ ಬೇರೆ ಧನವಿಲ್ಲ |
ಇಂತಿ ತ್ರಿವಿಧವೂ ನಿಮ್ಮದೆಂದರಿತ ಬಳೀಕ
ಎನಗೆ ಬೇರೆ ವಿಚಾರವುಂಟೇ ಕೂಡಲಸಂಗಮದೇವ ||
೫೧೦.
ಅಂಗದಿಚ್ಚೆಗೆ ಮದ್ದು ಮಾಸವ ತಿಂಬರು |
ಕಂಗಳಿಚ್ಚೆಗೆ ಪರವಧುವ ನೆರೆವರು |
ಲಿಂಗಲಾಂಛನಧಾರಿಯಾದಲ್ಲಿ ಫಲವೇನು ?
ಲಿಂಗಪಥವ ತಪ್ಪಿ ನಡೆವರು |
ಜಂಗಮ ಮುಖದಿಂದೆ ನಿಂದೆ ಬಂದರೆ
ಕೊಂಡ ಮಾರಿಂಗೆ ಹೋಹುದು ತಪ್ಪದು
ಕೂಡಲಸಂಗಮದೇವ |
೫೧೧.
ಕೋಪಿ ಮಜ್ಜನಕ್ಕೆರೆದರೆ ರಕ್ತದ ಧಾರೆ |
ಪಾಪಿ ಹೂವನೇರಿಸಿದರೆ ಮಸೆದಡಾಯುಧದ ಗಾಯ |
ಕೂಪವರನಾರನೂ ಕಾಣೆನು ಮಾದಾರಚೆನ್ನಯ್ಯನಲ್ಲದೆ |
ಕೂಪವರನಾರನೂ ಕಾಣೆನು ಡೋಹರಕಕ್ಕಯ್ಯನಲ್ಲದೆ |
ವ್ಯಾಪತ್ತಿಯುಳ್ಳವ ನಮ್ಮ ಮಡಿವಾಳ ಮಾಚಯ್ಯ |
ನಿನ್ನ ಪತ್ತಿಗರಿವರಯ್ಯ ಕೂಡಲಸಂಗಮದೇವ |
೫೧೨.
ಕೃಷಿ-ಕೃತ್ಯ-ಕಾಯಕದಿಂದಾದರೇನು ?
ತನು-ಮನವ ಬಳಲಿಸಿ ಪಾದವ ತಂದು ದಾಸೋಹವ ಮಾಡುವ
ಪರಮ ಸದ್ಭಕ್ತನ ಪಾದವ ತೋರಯ್ಯ ಎನಗೆ |
ಅದೆಂತೆನೆ :
ಆತನ ತನು ಶುದ್ಧ | ಆತನ ಮನ ಶುದ್ಧ |
ಆತನ ನಡೆ ಶುದ್ಧ | ನುಡಿಯೆಲ್ಲವು ಪಾವನ |
ಆತಂಗೆ ಉಪದೇಶವ ಮಾಡಿದಾತನೆ ಪರಮಸದ್ಗುರು |
ಅಂತಪ್ಪ ಸದ್ಭಕ್ತನ ಮನೆಯ ಕೈಲಾಸವೆಂದು ಹೊಕ್ಕು
ಲಿಂಗಾರ್ಚನೆಯ ಮಾಡುವ ಜಂಗಮವೇ ಜಗತ್ಪಾವನ |
ಇಂತಪ್ಪವರ ನಾನು ನೆರೆ ನಂಬಿ
ನಮೋ ನಮೋ ಎಂಬೆನಯ್ಯ ಕೂಡಲಸಂಗಮದೇವ |
೫೧೩.
ದೇವ ದೇವ ಬಿನ್ನಪವ ಅವಧಾರು |
ವಿಪ್ರ ಮೊದಲು ಅಂತ್ಯಜ ಕಡೆಯಾಗಿ
ಶಿವಭಕ್ತರಾದವರನೆಲ್ಲರನು ಒಂದೇ ಎಂಬೆ
ಹಾರುವ ಮೊದಲು ಶ್ವಪಚ ಕಡೆಯಾಗಿ
ಭವಿಯಾದವರನೆಲ್ಲರನು ಒಂದೇ ಎಂಬೆ |
ಈ ಹೀಂಗೆಂದು ನಂಬುವುದೆನ್ನ ಮನವು |
ಈ ನುಡಿದ ನುಡಿಯೊಳಗೆ ಎಳ್ಳ ಮೊನೆಯಷ್ಟುಸಂದೇಹವುಳ್ಳೆರೆ
ಹಲುದೋರ ಮೂಗ ಕೊಯಿ ಕೂಡಲಸಂಗಮದೇವ |
೫೧೪.
ಗೋತ್ರನಾಮವ ಬೆಸಗೊಂಡರೆ
ಮಾತ ನೂಂಕದೆ ಸುಮ್ಮನಿದ್ದಿರಿದೇಕಯ್ಯ ?
ತಲೆಯ ಕುತ್ತಿ ನೆಲನ ಬರುವುತಿದ್ದಿದೇನಯ್ಯ ?
ಗೋತ್ರ ಮಾದಾರ ಚೆನ್ನಯ್ಯ
ಡೋಹಾರ ಕಕ್ಕಯ್ಯನೆಂಬುದೇನು ?
ಕೂಡಲಸಂಗಯ್ಯ.
೫೧೫.
ಕುಲಮದಕ್ಕೆ ಹೋರಿ ಜಂಗಮಬೇಧವ ಮಾಡುವೆ |
ಫಲವೇನು ? ನಿತ್ಯಲಿಂಗಾರ್ಚನೆ ಪ್ರಾಯಶ್ಚಿತ್ತ |
ಛಲಮದಕ್ಕೆ ಹೋರಿ ಲಿಂಗ ಭೇದವ ಮಾಡುವೆ
ಜಂಗುಳಿಯ ಕಾವ ಗೋವಳ ಹಲವು ಪಶುವ ನಿವಾರಿಸುವಂತೆ |
ತನುಭಕ್ತನಾಯಿತ್ತೆನ್ನ ಮನ ಭವಿ |
ಕೂಡಲಸಂಗಮದೇವ
೫೧೬.
ಬ್ರಹ್ಮಪದವಿಯನೊಲ್ಲೆ |
ವಿಷ್ಣುಪದವಿಯನೊಲ್ಲೆ |
ರುದ್ರಪದವಿಯನೊಲ್ಲೆ |
ನಾನು ಮತ್ತಾವ ಪದವಿಯನೊಲ್ಲೆನಯ್ಯ |
ಕೂಡಲಸಂಗಮದೇವ
ನಿಮ್ಮ ಸದ್ಭಕ್ತರ ಪಾದವನರಿದಿಪ್ಪ
ಮಹಾಪದವಿಯನೆ ಕರಿಶಿಸಯ್ಯ |
೫೦೬.
ಕಾಮವೇಕೋ ಲಿಂಗಪ್ರೇಮಿಯೆನಿಸುವಂಗೆ ?
ಕಾಮವೇಕೋ ಶರಣವೇದ್ಯನೆನಿಸುವಂಗೆ ?
ಲೋಭವೇಕೋ ಭಕ್ತಿಲಾಭವ ಬಯಸುವಂಗೆ ?
ಮೋಹವೇಕೋ ಪ್ರಸಾದವೇದ್ಯನೆನಿಸುವಂಗೆ ?
ಮದಮತ್ಸರವುಳ್ಳವಂಗೆ ಹೃದಯ ಶುದ್ಧವೆಲ್ಲಿಯದೋ ?
ಹದುಳಿಗರಾದಲ್ಲಿಪ್ಪ ಕೂಡಲಸಂಗಮದೇವ |
೫೦೭.
ಎನ್ನ ನಡೆಯೊಂದು ಪರಿ |
ಎನ್ನ ನುಡಿಯೊಂದು ಪರಿ |
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯ |
ನುಡಿಗೆ ತಕ್ಕ ನಡೆಯ ಕಂಡರೆ
ಕೂಡಲಸಂಗಮದೇವ ತನ್ನೊಳಗಿಪ್ಪನಯ್ಯ |
೫೦೮.
ಬಡಪಶು ಪಂಕದಲ್ಲಿ ಬಿದ್ದರೆ
ಕಾಲ ಬಡಿವುದಲ್ಲದೆ ಬೇರೆ ಗತಿಯುಂಟೆ ?
ಶಿವ ಶಿವಾ ಹೋದಹೆ ಹೋದಹೆನಯ್ಯ |
ನಿಮ್ಮ ಮನದತ್ತಲೆನ್ನ ತೆಗೆಯಯ್ಯ |
ಪಶುವಾನು ಪಶುಪತಿ ನೀನು |
ತುಡುಗುಣಿಯಿಂದೆನ್ನ ಹಿಡಿದು ಬಡಿಯದ ಮುನ್ನ
ಒಡೆಯ, ನಿಮ್ಮ ಬೈಯದಂತೆ ಮಾಡು
ಕೂಡಲಸಂಗಮದೇವ.
೫೦೯.
ತನು ನಿಮ್ಮದೆಂದ ಬಳಿಕ ಎನಗೆ ಬೇರೆ ತನುವಿಲ್ಲ |
ಮನ ನಿಮ್ಮದೆಂದ ಬಳಿಕ ಎನಗೆ ಬೇರೆ ಮನವಿಲ್ಲ |
ಧನ ನಿಮ್ಮದೆಂದ ಬಳಿಕ ಎನಗೆ ಬೇರೆ ಧನವಿಲ್ಲ |
ಇಂತಿ ತ್ರಿವಿಧವೂ ನಿಮ್ಮದೆಂದರಿತ ಬಳೀಕ
ಎನಗೆ ಬೇರೆ ವಿಚಾರವುಂಟೇ ಕೂಡಲಸಂಗಮದೇವ ||
೫೧೦.
ಅಂಗದಿಚ್ಚೆಗೆ ಮದ್ದು ಮಾಸವ ತಿಂಬರು |
ಕಂಗಳಿಚ್ಚೆಗೆ ಪರವಧುವ ನೆರೆವರು |
ಲಿಂಗಲಾಂಛನಧಾರಿಯಾದಲ್ಲಿ ಫಲವೇನು ?
ಲಿಂಗಪಥವ ತಪ್ಪಿ ನಡೆವರು |
ಜಂಗಮ ಮುಖದಿಂದೆ ನಿಂದೆ ಬಂದರೆ
ಕೊಂಡ ಮಾರಿಂಗೆ ಹೋಹುದು ತಪ್ಪದು
ಕೂಡಲಸಂಗಮದೇವ |
೫೧೧.
ಕೋಪಿ ಮಜ್ಜನಕ್ಕೆರೆದರೆ ರಕ್ತದ ಧಾರೆ |
ಪಾಪಿ ಹೂವನೇರಿಸಿದರೆ ಮಸೆದಡಾಯುಧದ ಗಾಯ |
ಕೂಪವರನಾರನೂ ಕಾಣೆನು ಮಾದಾರಚೆನ್ನಯ್ಯನಲ್ಲದೆ |
ಕೂಪವರನಾರನೂ ಕಾಣೆನು ಡೋಹರಕಕ್ಕಯ್ಯನಲ್ಲದೆ |
ವ್ಯಾಪತ್ತಿಯುಳ್ಳವ ನಮ್ಮ ಮಡಿವಾಳ ಮಾಚಯ್ಯ |
ನಿನ್ನ ಪತ್ತಿಗರಿವರಯ್ಯ ಕೂಡಲಸಂಗಮದೇವ |
೫೧೨.
ಕೃಷಿ-ಕೃತ್ಯ-ಕಾಯಕದಿಂದಾದರೇನು ?
ತನು-ಮನವ ಬಳಲಿಸಿ ಪಾದವ ತಂದು ದಾಸೋಹವ ಮಾಡುವ
ಪರಮ ಸದ್ಭಕ್ತನ ಪಾದವ ತೋರಯ್ಯ ಎನಗೆ |
ಅದೆಂತೆನೆ :
ಆತನ ತನು ಶುದ್ಧ | ಆತನ ಮನ ಶುದ್ಧ |
ಆತನ ನಡೆ ಶುದ್ಧ | ನುಡಿಯೆಲ್ಲವು ಪಾವನ |
ಆತಂಗೆ ಉಪದೇಶವ ಮಾಡಿದಾತನೆ ಪರಮಸದ್ಗುರು |
ಅಂತಪ್ಪ ಸದ್ಭಕ್ತನ ಮನೆಯ ಕೈಲಾಸವೆಂದು ಹೊಕ್ಕು
ಲಿಂಗಾರ್ಚನೆಯ ಮಾಡುವ ಜಂಗಮವೇ ಜಗತ್ಪಾವನ |
ಇಂತಪ್ಪವರ ನಾನು ನೆರೆ ನಂಬಿ
ನಮೋ ನಮೋ ಎಂಬೆನಯ್ಯ ಕೂಡಲಸಂಗಮದೇವ |
೫೧೩.
ದೇವ ದೇವ ಬಿನ್ನಪವ ಅವಧಾರು |
ವಿಪ್ರ ಮೊದಲು ಅಂತ್ಯಜ ಕಡೆಯಾಗಿ
ಶಿವಭಕ್ತರಾದವರನೆಲ್ಲರನು ಒಂದೇ ಎಂಬೆ
ಹಾರುವ ಮೊದಲು ಶ್ವಪಚ ಕಡೆಯಾಗಿ
ಭವಿಯಾದವರನೆಲ್ಲರನು ಒಂದೇ ಎಂಬೆ |
ಈ ಹೀಂಗೆಂದು ನಂಬುವುದೆನ್ನ ಮನವು |
ಈ ನುಡಿದ ನುಡಿಯೊಳಗೆ ಎಳ್ಳ ಮೊನೆಯಷ್ಟುಸಂದೇಹವುಳ್ಳೆರೆ
ಹಲುದೋರ ಮೂಗ ಕೊಯಿ ಕೂಡಲಸಂಗಮದೇವ |
೫೧೪.
ಗೋತ್ರನಾಮವ ಬೆಸಗೊಂಡರೆ
ಮಾತ ನೂಂಕದೆ ಸುಮ್ಮನಿದ್ದಿರಿದೇಕಯ್ಯ ?
ತಲೆಯ ಕುತ್ತಿ ನೆಲನ ಬರುವುತಿದ್ದಿದೇನಯ್ಯ ?
ಗೋತ್ರ ಮಾದಾರ ಚೆನ್ನಯ್ಯ
ಡೋಹಾರ ಕಕ್ಕಯ್ಯನೆಂಬುದೇನು ?
ಕೂಡಲಸಂಗಯ್ಯ.
೫೧೫.
ಕುಲಮದಕ್ಕೆ ಹೋರಿ ಜಂಗಮಬೇಧವ ಮಾಡುವೆ |
ಫಲವೇನು ? ನಿತ್ಯಲಿಂಗಾರ್ಚನೆ ಪ್ರಾಯಶ್ಚಿತ್ತ |
ಛಲಮದಕ್ಕೆ ಹೋರಿ ಲಿಂಗ ಭೇದವ ಮಾಡುವೆ
ಜಂಗುಳಿಯ ಕಾವ ಗೋವಳ ಹಲವು ಪಶುವ ನಿವಾರಿಸುವಂತೆ |
ತನುಭಕ್ತನಾಯಿತ್ತೆನ್ನ ಮನ ಭವಿ |
ಕೂಡಲಸಂಗಮದೇವ
೫೧೬.
ಬ್ರಹ್ಮಪದವಿಯನೊಲ್ಲೆ |
ವಿಷ್ಣುಪದವಿಯನೊಲ್ಲೆ |
ರುದ್ರಪದವಿಯನೊಲ್ಲೆ |
ನಾನು ಮತ್ತಾವ ಪದವಿಯನೊಲ್ಲೆನಯ್ಯ |
ಕೂಡಲಸಂಗಮದೇವ
ನಿಮ್ಮ ಸದ್ಭಕ್ತರ ಪಾದವನರಿದಿಪ್ಪ
ಮಹಾಪದವಿಯನೆ ಕರಿಶಿಸಯ್ಯ |

Monday, April 25, 2011

ಬಸವಣ್ಣನ ವಚನಗಳು - 401 - 500

೪೦೧.
ಒಡೆಯರೊಡವೆಯ ಕೊಂಡರೆ
ಕಳ್ಳಂಗಳಲಾಯಿತ್ತೆಂಬ ಗಾದೆಯೆನಗಿಲ್ಲಯ್ಯ.
ಇಂದೆನ್ನ ವಧುವ, ನಾಳೆನ್ನ ಧನವ,
ನಾಡಿದೆನ್ನ ತನುವ ಬೇಡರೇಕಯ್ಯ ?
ಕೂಡಲಸಂಗಮದೇವ, ಆನು ಮಾಡಿದುದಲ್ಲದೆ
ಬಯಸಿದ ಬಯಕೆ ಸಲುವುದೇ ಅಯ್ಯ ?
೪೦೨.
ಸಮಚಿತ್ತವೆಂಬ ನೇಮದ ಹಲಗೆಯ ಹಿಡಿದು,
ಶಿವಚಿತ್ತವೆಂಬ ಕೂರಲಗ ಕೊಂಡು
ಶರಣಾರ್ಥಿಯೆಂಬ ಶ್ರವಗಲಿತಡೆ
ಆಳುತನಕ್ಕೆ ದೆಸೆಯಪ್ಪೆ ನೋಡಾ!
ಮಾರಂಕ-ಜಂಗಮ ಮನೆಗೆ ಬಂದಲ್ಲಿ
ಇದಿರೆತ್ತಿ ನಡೆವುದು;
ಕೂಡಲಸಂಗಮದೇವನನೊಲಿಸುವಡಿದು ಚಿಹ್ನ.
೪೦೩.
ಅಟ್ಟಟ್ಟಿಕೆಯ ಮಾತನಾಡಲದೇಕೋ ?
ಮುಟ್ಟಿ ಬಂದುದಕ್ಕಂಜಲದೇಕೋ ?
ಕಾದಿದಲ್ಲದೆ ಮಾಣೆನು,
ಓಡಿದರೆ ಭಂಗ ಹಿಂಗದಾಗಿ;
ಕೂಡಲಸಂಗಮದೇವ ಎನ್ನ ಭಂಗ ನಿಮ್ಮದಾಗಿ!
೪೦೪.
ನೀನಿರಿಸಿದ ಮನದಲ್ಲಿ ನಾನಂಜೆನಯ್ಯ.
ಮನವು ಮಹಾಘನಕ್ಕೆ ಶರಣಾಗತಿವೊಕ್ಕುದಾಗಿ!
ನೀನಿರಿಸಿದ ಧನದಲ್ಲಿ ನಾನಂಜೆನಯ್ಯ,
ಧನವು ಸತಿಸುತಮಾತಾಪಿತರಿಗೆ ಹೋಗದಾಗಿ!
ನೀನಿರಿಸಿದ ತನುವಿನಲ್ಲಿ ನಾನಂಜೆನಯ್ಯ,
ಸರ್ವಾರ್ಪಿತದಲ್ಲಿ ತನು ನಿಯತಪ್ರಸಾದಭೋಗಿಯಾಗಿ!
ಇದು ಕಾರಣ ವೀರಧೀರ ಸಮಗ್ರನಾಗಿ
ಕೂಡಲಸಂಗಮದೇವಯ್ಯ ನಿಮಗಾನಂಜೆನು!
೪೦೫.
ಬತ್ತೀಸಾಯುಧದಲ್ಲಿ ಅಭ್ಯಾಸವ ಮಾಡಿದರೇನು ?
ಹಗೆಯ ಕೊಲುವಡೆ ಒಂದಲಗು ಸಾಲದೆ ?
ಲಿಂಗವ ಗೆಲುವಡೆ "ಶರಣಸತಿ ಲಿಂಗಪತಿ"
ಎಂಬಲಗು ಸಾಲದೆ ?
ಎನಗೆ ನಿನಗೆ ಜಂಗಮಪ್ರಸಾದವೆಂಬಲಗು ಸಾಲದೆ
ಕೂಡಲಸಂಗಮದೇವ ?
೪೦೬.
ಕೊಲ್ಲೆನಯ್ಯ ಪ್ರಾಣಿಗಳ,
ಮೆಲ್ಲೆನಯ್ಯ ಬಾಯಿಚ್ಚೆಗೆ,
ಒಲ್ಲೆನಯ್ಯ ಪರಸತಿಯರ ಸಂಗವ,
ಬಲ್ಲೆನಯ್ಯ ಮುಂದೆ ತೊಡಕುಂಟೆಂಬುದ!
ಬಳ್ಳದ ಬಾಯಂತೆ ಒಂದೇ ಮನವ ಮಾಡಿ
ನಿಲ್ಲೆಂದು ನಿಲಿಸಯ್ಯ ಕೂಡಲಸಂಗಮದೇವ.
೪೦೭.
ಆನೆ ಅಂಕುಶಕ್ಕಂಜುವುದೆ ಅಯ್ಯ,
ಮಾಣದೆ ಸಿಂಹದ ನಖವೆಂದಂಜುವುದಲ್ಲದೆ ?
ಆನೀ ಬಿಜ್ಜಳಂಗಂಜುವೆನೇ ಅಯ್ಯ,
ಕೂಡಲಸಂಗಮದೇವ,
ನೀನು ಸರ್ವಜೀವದಯಾಪಾರಿಯಾದ ಕಾರಣ
ನಿಮಗಂಜುವೆನಲ್ಲದೆ !?
೪೦೮.
ಬಂದಹೆನೆಂದು ಬಾರದಿದ್ದರೆ
ಬಟ್ಟೆಗಳ ನೋಡುತ್ತಿದ್ದೆನಯ್ಯ!
ಇನ್ನಾರನಟ್ಟುವೆ ? ಇನ್ನಾರನಟ್ಟುವೆ ?
ಇನ್ನಾರ ಪಾದವ ಹಿಡಿವೆನಯ್ಯ ?
ಕೂಡಲಸಂಗನ ಶರಣರು ಬಾರದಿದ್ದರೆ
ಅಟ್ಟುವೆನೆನ್ನ ಪ್ರಾಣವನು!
೪೦೯.
ಜಗದಗಲ ಮುಗಿಲಗಲ
ಮಿಗೆಯಗಲ ನಿಮ್ಮಗಲ!
ಪಾತಾಳದಿಂದವತ್ತತ್ತ ನಿಮ್ಮ ಶ್ರೀಚರಣ!
ಬ್ರಹ್ಮಾಂಡದಿಂದವತ್ತತ್ತ ನಿಮ್ಮ ಶ್ರೀಮಕುಟ!
ಅಗಮ್ಯ ಅಪ್ರಮಾಣ
ಅಗೋಚರ ಅಪ್ರತಿಮಲಿಂಗವೇ,
ಕೂಡಲಸಂಗಮದೇವಯ್ಯ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ.
೪೧೦.
ನಿಷ್ಠೆಯಿಂದ ಲಿಂಗವ ಪೂಜಿಸಿ,
ಮತ್ತೊಂದು ಪಥವನರಿಯದ ಶರಣರು,
ಸರ್ಪನ ಹೆಡಯ ಮಾಣಿಕದ ಮಕುಟದಂತಿಪ್ಪರು ಭೂಷಣರಾಗಿ!
ದರ್ಪಣದೊಳಗಣ ಪ್ರತಿಬಿಂಬದಂತಿಪ್ಪರು
ಕೂಡಲಸಂಗಮದೇವ, ನಿಮ್ಮ ಶರಣರು!
೪೧೧.
ಶಿವಲೋಕಕ್ಕೆ ಸರಿ ಬೇರೆ ಲೋಕವಿಲ್ಲ!
ಶಿವಮಂತ್ರಕ್ಕೆ ಸರಿ ಬೇರೆ ಮಂತ್ರವಿಲ್ಲ!
ಜಗಕ್ಕೆ ಇಕ್ಕಿದೆ ಮುಂಡಿಗೆಯ!
ಎತ್ತಿಕೊಳ್ಳಿ, ಕೂಡಲಸಂಗಯ್ಯನೊಬ್ಬನೇ ದೈವವೆಂದು!
೪೧೨.
ವೇದ ನಡನಡುಗಿತ್ತು.
ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದುದಯ್ಯ,
ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತಯ್ಯ,
ಆಗಮ ಹೊರತೊಲಗಿ ಆಗಲಿದ್ದಿತಯ್ಯ,
ನಮ್ಮ ಕೂಡಲಸಂಗಯ್ಯನು
ಚೆನ್ನಯ್ಯನ ಮನೆಯಲುಂಡ ಕಾರಣ!
೪೧೩.
ಆರು ಮುನಿದು ನಮ್ಮನೇನ ಮಾಡುವರು ?
ಊರು ಮುನಿದು ನಮ್ಮನೆಂತು ಮಾಡುವರು ?
ನಮ್ಮ ಕುನ್ನಿಗೆ ಕೂಸ ಕೊಡಬೇಡ!
ನಮ್ಮ ಸೊಣಗಂಗೆ ತಣಿಗೆಯಲ್ಲಿಕ್ಕಬೇಡ!
ಆನೆಯ ಮೇಲೆ ಹೋಹನ ಶ್ವಾನ ಕಚ್ಚಬಲ್ಲುದೆ ?
ನಮಗೆ ನಮ್ಮ ಕೂಡಲಸಂಗನುಳ್ಳನ್ನಕ ?
೪೧೪.
ನ್ಯಾಯನಿಷ್ಠುರ!
ದಾಕ್ಷಿಣ್ಯಪರ ನಾನಲ್ಲ.
ಲೋಕವಿರೋಧಿ!
ಶರಣನಾರಿಗಂಜುವನಲ್ಲ,
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪೆನಾಗಿ!
೪೧೫.
ಊರ ಮುಂದೆ
ಹಾಲ ಹಳ್ಳ ಹರಿಯುತ್ತಿರಲು ?
ಓರೆಯಾವಿನ ಬೆನ್ನ ಹರಿಯಲದೇಕಯ್ಯ ?
ಲಜ್ಜೆಗೆಡಲೇಕೆ ? ನಾಣುಗೆಡಲೇಕೆ ?
ಕೂಡಲಸಂಗಮದೇವಯ್ಯನುಳ್ಳನ್ನಕ
ಬಿಜ್ಜಳನ ಭಂಡಾರವೆನಗೇಕಯ್ಯ ?
೪೧೬.
ಕಂಡುದಕ್ಕೆಳೆಸೆನೆನ್ನ ಮನದಲ್ಲಿ;
ನೋಡಿ ಸೋಲೆನೆನ್ನ ಕಂಗಳಲ್ಲಿ;
ಆಡಿ ಹುಸಿಯನೆನ್ನ ಜಿಹ್ವೆಯಲ್ಲಿ;
ಕೂಡಲಸಂಗಮದೇವ,
ನಿಮ್ಮ ಶರಣನ ಪರಿ ಇಂತುಟಯ್ಯ.
೪೧೭.
ಆಪ್ಯಾಯನಕ್ಕೆ ನೀಡುವೆ:
ಲಾಂಛನಕ್ಕೆ ಶರಣೆಂಬೆ.
ಲಾಂಛನಕ್ಕೆ ತಕ್ಕ ಆಚಾರವಿಲ್ಲದಿದ್ದರೆ
ನೀ ಸಾಕ್ಷಿಯಾಗಿ ಛೀಯೆಂಬೆನು.
೪೧೮.
ದಾಸನಂತೆ ತವನಿಧಿಯ ಬೇಡುವನಲ್ಲ,
ಚೋಳನಂತೆ ಹೊನ್ನ ಮಳೆಯ ಕರಸೆಂಬುವನಲ್ಲ.
ಅಂಜದಿರು, ಅಂಜದಿರು!
ಅವರಂದದವ ನಾನಲ್ಲ!
ಎನ್ನ ತಂದೆ ಕೂಡಲಸಂಗಮದೇವ,
ಸದ್ಭಕ್ತಿಯನೆ ಕರಣಿಸೆನಗೆ.
೪೧೯.
ಲಿಂಗದಲ್ಲಿ ಸಮ್ಯಕ್ಕರು,
ಲಿಂಗದಲ್ಲಿ ಸದರ್ಥರು,
ಲಿಂಗದ ಸೊಮ್ಮು-ಸಂಬಂಧವರಿತ
ಸ್ವಾಮಿಭೃತ್ಯರೆಲ್ಲರು ನಿಮ್ಮ ಬೇಡೆನಂಜದಿರಿ.
ಎನಗೆ ಮರ್ತ್ಯಲೋಕದ ಮಹಾಗಣಂಗಳುಂಟು.
ಇದು ಕಾರಣ, ಕೂಡಲಸಂಗಮದೇವರ ಲೋಕವ
ಹಂಚಿಕೊಳ್ಳಿ ನಿಮನಿಮಗೆ.
೪೨೦.
ಕಲಿಯ ಕಯ್ಯ ಕೈದುವನಂತಿರಬೇಕಯ್ಯ
ಎಲುದೋರ ಸರಸವಾಡಿದರೆ ಸೈರಿಸಬೇಕಯ್ಯ,
ರಣದಲ್ಲಿ ತಲೆ ಹರಿದು ನೆಲಕ್ಕೆ ಬಿದ್ದು ಬೊಬ್ಬಿಡಲು
ಅದಕ್ಕೆ ಒಲಿವ ಕೂಡಲಸಂಗಮದೇವ.
೪೨೧.
ಸೂಳೆಗೆ ಮೆಚ್ಚಿ
ಸೂಳೆಯ ಬಂಟರೆಂಜಲ ತಿಂಬುದೀ ಲೋಕವೆಲ್ಲ!
ಅಡಗ ವೆಚ್ಚಿ
ಸೊಣಗನೆಂಜಲ ತಿಂಬುದೀ ಲೋಕವೆಲ್ಲ!
ಲಿಂಗವ ಮೆಚ್ಚಿ
ಜಂಗಮಪ್ರಸಾದವ ಕೊಂಬರ ನೋಡಿ ನಗುವವರ
ಕುಂಭೀಪಾಕ ನಾಯಕನರಕದಲಿಕ್ಕುವ
ಕೂಡಲಸಂಗಮದೇವ.
೪೨೨.
ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ ?
ಕುಲವುಂಟೇ ಜಂಗಮವಿದ್ದೆಡೆಯಲ್ಲಿ ?
ಎಂಜಲುಂಟೇ ಪ್ರಸಾದವಿದ್ದೆಡೆಯಲ್ಲಿ ?
ಅಪವಿತ್ರದ ನುಡಿಯ ನುಡಿವ ಸೂತಕವೆ ಪಾತಕ.
ನಿಷ್ಕಳಂಕ, ನಿಜೈಕ್ಯ, ತ್ರಿವಿಧನಿರ್ಣಯ
ಕೂಡಲಸಂಗಮದೇವ, ನಿಮ್ಮ ಶರಣರಿಗಲ್ಲದಿಲ್ಲ.
೪೨೩.
ಹುತ್ತದ ಮೇಲಣ ರಜ್ಜು ಮುಟ್ಟಿದರೆ
ಸಾವರು ಶಂಕಿತರಾದವರು!
ಸರ್ಪದಷ್ಟವಾದರೆಯೂ
ಸಾಯರು ನಿಶ್ಶಂಕಿತರಾದವರು!
ಕೂಡಲಸಂಗಮದೇವಯ್ಯ,
ಶಂಕಿತಂಗೆ ಪ್ರಸಾದ ಕಾಳಕೂಟವಿಷವು!
೪೨೪.
ನಂಬಿದರೆ ಪ್ರಸಾದ
ನಂಬದಿದ್ದರೆ ವಿಷವು!
ತುಡುಕಬಾರದು ನೋಡಾ ಲಿಂಗನ ಪ್ರಸಾದ!
ಸಂಗನ ಪ್ರಸಾದ!
ಕೂಡಲಸಂಗನ ಪ್ರಸಾದ ಸಿಂಗಿ-ಕಾಳಕೂಟ ವಿಷವು.
೪೨೫.
ಪಂಡಿತನಾಗಲಿ ಮೂರ್ಖನಾಗಲಿ
ಸಂಚಿತಕರ್ಮ ಉಂಡಲ್ಲದೆ ಬಿಡದು.
ಪ್ರಾರಬ್ಧಕರ್ಮ ಭೋಗಿಸಿದಲ್ಲದೆ ಹೋಗದು-
ಎಂದು ಶ್ರುತಿ ಸಾರುತ್ತೈದಾವೆ-
ನೋಡಾ, ತಾನಾವ ಲೋಕದೊಳಗಿದ್ದರೆಯು ಬಿಡದು.
ಕರ್ಮಫಲಗೂಡಿ ಕೂಡಲಸಂಗಮದೇವಂಗೆ
ಆತ್ಮನೈವೇದ್ಯವ ಮಾಡಿದವನೇ ಧನ್ಯನು!
೪೨೬.
ಒಲ್ಲೆನೆಂಬುದು ವೈರಾಗ್ಯ,
ಒಲಿವೆನೆಂಬುದು ಕಾಯಗುಣ.
ಆವ ಪದಾರ್ಥವಾದರೇನು
ತಾನಿದ್ದೆಡೆಗೆ ಬಂದುದು ಲಿಂಗಾರ್ಪಿತವ ಮಾಡಿ
ಭೋಗಿಸುವುದೇ ಆಚಾರ!
ಕೂಡಲಸಂಗಮದೇವನ
ಒಲಿಸ ಬಂದ ಪ್ರಸಾದಕಾಯವ ಕೆಡಿಸಲಾಗದು.
೪೨೭.
ಒಪ್ಪವ ನುಡಿವಿರಯ್ಯ ತುಪ್ಪವ ತೊಡೆದಂತೆ!
ಶರಣ ತನ್ನ ಮೆರೆವನೇ ಬಿನ್ನಾಣಿಯಂತೆ ?
ಕೂಡಲಸಂಗನ ಪ್ರಸಾದದಿಂದ ಬದುಕುವನಲ್ಲದೆ
ತನ್ನ ಮೆರೆವನೇ ?
೪೨೮.
ದಾಸೋಹವೆಂಬ ಸೋಹೆಗೊಂಡು ಹೋಗಿ
ಗುರುವ ಕಂಡೆ, ಲಿಂಗವ ಕಂಡೆ,
ಜಂಗಮವ ಕಂಡೆ, ಪ್ರಸಾದವ ಕಂಡೆ
ಇಂತೀ ಚತುರ್ವಿಧ ಸಂಪನ್ನನಾದೆ ಕಾಣಾ
ಕೂಡಲಸಂಗಮದೇವ.
೪೨೯.
ಕಿವಿಯ ಸೂತಕ ಹೋಯಿತ್ತು
ಸದ್ಗುರುವಿನ ವಚನದಿಂದ!
ಕಂಗಳ ಸೂತಕ ಹೋಯಿತ್ತು
ಸದ್ಭಕ್ತರ ಕಂಡೆನಾಗಿ!
ಕಾಯದ ಸೂತಕ ಹೋಯಿತ್ತು
ನಿಮ್ಮ ಚರಣವ ಮುಟ್ಟಿದೆನಾಗಿ!
ಬಾಯ ಸೂತಕ ಹೋಯಿತ್ತು
ನಿಮ್ಮ ಒಕ್ಕುದ ಕೊಂಡೆನಾಗಿ!
ನಾನಾ ಸೂತಕ ಹೋಯಿತ್ತು
ನಿಮ್ಮ ಶರಣರನುಭಾವಿಯಾಗಿ!
ಕೂಡಲಸಂಗಮದೇವ ಕೇಳಯ್ಯ
ಎನ್ನ ಮನದ ಸೂತಕ ಹೋಯಿತ್ತು
ನೀವಲ್ಲದಿಲ್ಲೆಂದರಿದೆನಾಗಿ!
೪೩೦.
ಮೋನದಲುಂಬುದು ಆಚಾರವಲ್ಲ,
ಲಿಂಗಾರ್ಪಿತವ ಮಾಡಿದ ಬಳಿಕ
ತುತ್ತಿಗೊಮ್ಮೆ ಶಿವಶರಣೆನ್ನುತ್ತಿರಬೇಕು.
ಕರಣವೃತ್ತಿಗಳಡಗುವವು,
ಕೂಡಲಸಂಗನ ನೆನೆವುತ್ತ ಉಂಡರೆ.
೪೩೧.
ಶಿವಾಚಾರವೆಂಬುದೊಂದು ಬಾಳ ಬಾಯಿಧಾರೆ
ಲಿಂಗ ಮೆಚ್ಚಬೇಕು; ಜಂಗಮ ಮೆಚ್ಚಬೇಕು
ಪ್ರಸಾದ ಮೆಚ್ಚಿ ತನ್ನಲ್ಲಿ ಸ್ವಾಯತವಾಗಿರಬೇಕು.
ಬಿಚ್ಚಿ ಬೇರಾದರೆ ಮೆಚ್ಚ ನಮ್ಮ ಕೂಡಲಸಂಗಮದೇವ.
೪೩೨.
ಆವಾವ ಭಾವದಲ್ಲಿ ಶಿವನ ನಂಬಿದ ಶರಣರು
ಎಂತಿದ್ದರೇನಯ್ಯ ?
ಆವಾವ ಭಾವದಲ್ಲಿ ಶಿವನ ನಂಬಿದ ಮಹಿಮರು
ಎಂತಿದ್ದರೇನಯ್ಯ ?
ಸುಚರಿತ್ರರೆಂತಿದ್ದರೇನಯ್ಯ ?
ಅವಲೋಹವ ಕಳೆವ
ಪರುಷವೆಂತಿದ್ದರೇನಯ್ಯ ?
ಕೂಡಲಸಂಗನ ಶರಣರು ರಸದ ವಾರಿಧಿಗಳು
ಎಂತಿದ್ದರೇನಯ್ಯ ?
೪೩೩.
ನಡೆ ಚೆನ್ನ, ನುಡಿ ಚೆನ್ನ, ಎಲ್ಲಿ ನೋಡಿದರಲ್ಲಿ ಚೆನ್ನ!
ಪ್ರಮಥರೊಳಗೆ ಚೆನ್ನ, ಪುರಾತರೊಳಗೆ ಚೆನ್ನ!
ಪ್ರಸಾದಿಗಳೊಳಗೆ ಚೆನ್ನ!
ಸವಿದು ನೋಡಿ ಅಂಬಲಿ ರುಚಿಯಾಯಿತ್ತೆಂದು
ಕೂಡಲಸಂಗಮದೇವರಿಗೆ ಬೇಕಾಯಿತ್ತೆಂದು
ಕೈದೆಗೆದ ನಮ್ಮ ಚೆನ್ನ!
೪೩೪.
ಲಿಂಗವಿಕಾರಿಗೆ ಅಂಗವಿಕಾರವೆಂಬುದಿಲ್ಲ.
ಜಂಗಮವಿಕಾರಿಗೆ ಧನವಿಕಾರವೆಂಬುದಿಲ್ಲ.
ಪ್ರಸಾದವಿಕಾರಿಗೆ ಮನವಿಕಾರವೆಂಬುದಿಲ್ಲ.
ಇಂತೀ ತ್ರಿವಿಧಗುಣವನರಿದಾತನು
ಅಚ್ಚಲಿಂಗೈಕ್ಯನು ಕೂಡಲಸಂಗಮದೇವ.
೪೩೫.
ಪ್ರಾಣಲಿಂಗಪ್ರತಿಗ್ರಾಹಕನಾದ ಬಳಿಕ
ಲಿಂಗವಿರಹಿತವಾಗಿ ನಡೆವ ಪರಿಯೆಂತೊ ?
ಲಿಂಗವಿರಹಿತವಾಗಿ ನುಡಿವ ಪರಿಯೆಂತೊ ?
ಪಂಚೇಂದ್ರಿಯಸುಖವನು
ಲಿಂಗವಿರಹಿತವಾಗಿ ಭುಂಜಿಸಲಾಗದು!
"ಲಿಂಗವಿರಹಿತವಾಗಿ ಉಗುಳ ನುಂಗಲಾಗದು!"
ಇಂತೆಂದುದು ಕೂಡಲಸಂಗನ ವಚನ.
೪೩೬.
ಹತ್ತು ಸಾವಿರ ಗೀತವ ಹಾಡಿ ಅರ್ಥವಿಟ್ಟಲ್ಲಿ ಫಲವೇನು
ಮುಟ್ಟುವ ತೆರನನರಿಯದನ್ನಕ ?
ಕಟ್ಟಿದರೇನು ಬಿಟ್ಟರೇನು
ಮನವು ಲಿಂಗದಲ್ಲಿ ಮುಟ್ಟದನ್ನಕ ?
ಮಾತಿನಲೆ ಒಲಿಸಿ ಮಹತ್ತಪ್ಪ ಲಿಂಗವ ಕಂಡೆನೆಂಬ
ಪಾತಕರ ಮೆಚ್ಚ ನಮ್ಮ ಕೂಡಲಸಂಗಮದೇವ
೪೩೭.
ಶ್ವಾನಜ್ಞಾನ, ಗಜಜ್ಞಾನ, ಕುಕ್ಕುಟಜ್ಞಾನವೆಂಬ
ಜ್ಞಾನತ್ರಯಂಗಳೇಕಾದವು ?!
ಕೂಡಲಸಂಗಮದೇವ,
ನಿಮ್ಮನರಿಯದ ಜ್ಞಾನವೆಲ್ಲ ಅಜ್ಞಾನ!
೪೩೮.
ಕಬ್ಬುನ ಪರುಷವೇದಿಯಾದರೇನು ?!
ಕಬ್ಬುನ ಹೊನ್ನಾಗದೊಡೆ ಪರುಷವದೇಕೋ ?
ಮನೆಯೊಳಗೆ ಕತ್ತಲೆ ಹರಿಯದೊಡೆ
ಆ ಜ್ಯೋತಿಯದೇಕೋ ?
ಕೂಡಲಸಂಗಮದೇವರ ಮನಮುಟ್ಟಿ ಪೂಜಿಸಿ
ಕರ್ಮ ಹರಿಯದೊಡೆ ಆ ಪೂಜೆಯದೇಕೋ ?
೪೩೯.
ಅಹಂಕಾರ ಮನವನಿಂಬುಗೊಂಡಲ್ಲಿ
ಲಿಂಗ ತಾನೆಲ್ಲಿಪ್ಪುದೋ ?
ಅಹಂಕಾರಕ್ಕೆ ಎಡೆಗುಡದೆ
ಲಿಂಗತನುವಾಗಿರಬೇಕು!
ಅಹಂಕಾರರಹಿತನಾದಲ್ಲಿ
ಸನ್ನಿಹಿತ ಕಾಣಾ ಕೂಡಲಸಂಗಮದೇವ.
೪೪೦.
ನುಡಿದರೆ ಮುತ್ತಿನ ಹಾರದಂತಿರಬೇಕು!
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು!
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು!
ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು ?
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯ ?
೪೪೧.
ಅರಿದರಿದು ಸಮಗಾಣಿಸಬಾರದು ?
ತ್ರಾಸಿನ ಕಟ್ಟಳೆಯಂತಿನಿತು ವೆಗ್ಗಳವಾದರೆ
ಈಶ್ವರನು ಒಡೆಯಿಕ್ಕದೆ ಮಾಣುವನೆ ?
ಪಾತ್ರಾಪಾತ್ರವೆಂದು ಕಂಡರೆ
ಶಿವನೆಂತು ಮೆಚ್ಚುವನೊ ?
ಜೀವಜೀವಾತ್ಮವ ಸರಿಯೆಂದು ಕಂಡರೆ
ಸಮವೇದಿಸದಿಪ್ಪನೇ ಶಿವನು ?
ತನ್ನ ಮನದಲ್ಲಿ
"ಯತ್ರ ಜೀವಸ್ತತ್ರ ಶಿವ"ನೆಂದು
ಸರ್ವಜೀವದಯಾಪಾರಿಯಾದರೆ
ಕೂಡಲಸಂಗಮದೇವನು
ಕೈಲಾಸದಿಂದ ಬಂದು ಎತ್ತಿಕೊಳ್ಳದಿಪ್ಪನೆ ?
೪೪೨.
ಮುತ್ತು ಉದಕದಲಾಗದು,
ಉದಕ ಮುತ್ತಿನೊಲಾಗದು,
ತತ್ತ್ವಘಟಿಸಿದ ಸುಮುಹೂರ್ತದಲಲ್ಲದೆ!
ಚಿತ್ತವೇದ್ಯವಾಗದು ಸದ್ಗುರುವಿನ ಕರುಣಕಲ್ಲದೆ,
ಕರ್ತೃ ಕೂಡಲಸಂಗಮದೇವರ
ಒಲವಿನ ದಯದ ಚಿತ್ತವಿಡಿದಂಗಲ್ಲದೆ
ಶಿವತತ್ತ್ವ ಸಾಹಿತ್ಯವಾಗದು.
೪೪೩.
ಚಂದ್ರಕಾಂತದ ಶಿಲೆಯಲ್ಲಿ ಜಲವಿಲ್ಲದನ್ನಕ
ಶೈತ್ಯವ ತೋರುವ ಪರಿಯೆಂತೋ ?
ಸೂರ್ಯಕಾಂತದ ಶಿಲೆಯಲ್ಲಿ ಅಗ್ನಿಯಿಲ್ಲದನ್ನಕ
ಉಷ್ಣವ ತೋರುವ ಪರಿಯೆಂತೋ ?
ಶರಣಂಗೆ ಭಕ್ತಿಕಾಯವಿಲ್ಲದನ್ನಕ
ಕೂಡಲಸಂಗನನರಿವ ಪರಿಯೆಂತೋ ?
೪೪೪.
ಮುನ್ನೂರರುವತ್ತು ನಕ್ಷತ್ರಕ್ಕೆ
ಬಾಯ ಬಿಟ್ಟುಕೊಂಡಿಪ್ಪುದೇ ಸಿಂಪು ?
ಅದು ಸ್ವಾತಿಗಲ್ಲದೆ ಬಾಯ್ದೆರೆಯದು ಕೇಳಾ ಕೇಳು ತಂದೆ!
ಎಲ್ಲವಕ್ಕೆ ಬಾಯ ಬಿಟ್ಟರೆ
ತಾನೆಲ್ಲಿಯ ಮುತ್ತಪ್ಪುದು ?
ಪರಮಂಗಲ್ಲದೆ ಹರುಷವಿಲ್ಲೆಂದು
ಕರಣಾದಿ ಗುಣಂಗಳ ಮರೆದರು;
ಇದು ಕಾರಣ ಕೂಡಲಸಂಗನ ಶರಣರು
ಸಪ್ತವ್ಯಸನಿಗಳಲ್ಲಾಗಿ.
೪೪೫.
ಮೈಗೆ ಕಾಹ ಹೇಳುವರಲ್ಲದೆ,
ಮನಕ್ಕೆ ಕಾಹ ಹೇಳುವರೆ ?
ಅಣಕದ ಗಂಡನ ಹೊಸ ಪರಿಯ ನೋಡಾ!
ಕೂಡಲಸಂಗಮದೇವನೆನ್ನ ಮನವ ನಂಬದೆ
ತನ್ನಲ್ಲಿದ್ದ ಲೇಸ ಕಾಹ ಹೇಳಿದನು.
೪೪೬.
ಬೆಳಗಿನೊಳಗಣ ಮಹಾಬೆಳಗು! ಶಿವಶಿವಾ!!
ಪರಮಾಶ್ರಯವೆ ತಾನಾಗಿ,
ಶತಪತ್ರಕಮಳಕರ್ಣಿಕಾಮಧ್ಯದಲ್ಲಿ
ಸ್ವತಸ್ಸಿದ್ಧನಾಗಿಪ್ಪ ನಮ್ಮ ಕೂಡಲಸಂಗಮದೇವ.
೪೪೭.
ತಮತಮಗೆಲ್ಲ ನೊಸಲ ಕಣ್ಣವರು!
ತಮತಮಗೆಲ್ಲ ನಂದಿವಾಹನರು!
ತಮತಮಗೆಲ್ಲ ಖಟ್ವಾಂಗಕಪಾಲ ತ್ರಿಶೂಲಧರರು!
ದೇವರಾರು ಭಕ್ತರಾರು ಹೇಳಿರಯ್ಯ ?
ಕೂಡಲಸಂಗಮದೇವ,
ನಿಮ್ಮ ಶರಣರು ಸ್ವತಂತ್ರರು!
ಎನ್ನ ಬಚ್ಚಬರಿಯ ಬಸವನೆನಿಸಯ್ಯ!
೪೪೮.
ಉಳ್ಳವರು ಶಿವಾಲಯವ ಮಾಡಿಹರು!
ನಾನೇನ ಮಾಡುವೆ ? ಬಡವನಯ್ಯ!
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಶವಯ್ಯ!
ಕೂಡಲಸಂಗಮದೇವ ಕೇಳಯ್ಯ,
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!
೪೪೯.
ಗುರು ಮುನಿದರೆ ಒಂದು ದಿನ ತಾಳುವೆ,
ಲಿಂಗ ಮುನಿದರೆ ದಿನವರೆ ತಾಳುವೆ.
ಜಂಗಮ ಮುನಿದರೆ
ಕ್ಷಣಮಾತ್ರವ ತಾಳಿದೆನಾದರೆ
ಎನ್ನ ಪ್ರಾಣದ ಹೋಕು ಕೂಡಲಸಂಗಮದೇವ.
೪೫೦.
ರಚ್ಚೆಯ ನೆರವಿಗೆ ನಾಡನುಡಿ ಇಲ್ಲದಿಹುದೆ ?
ಅದರಂತೆನಬಹುದೇ ಸಜ್ಜನ ಸ್ತ್ರೀಯ ?
ಅದರಂತೆನಬಹುದೇ ಭಕ್ತಿರತಿಯ ?
ಕರುಳ ಕಲೆ-ಪ್ರಕಟಿತ ಉಂಟೆ ಕೂಡಲಸಂಗಮದೇವ ?
೪೫೧.
ಭೂತ ಒಲಿದು ಆತ್ಮನ ಸೋಂಕಿದ ಬಳಿಕ
ಭೂತದ ಗುಣವಲ್ಲದೆ, ಆತ್ಮನ ಗುಣವುಂಟೆ ?
ಗುರುಕಾರುಣ್ಯವಾಗಿ,
ಹಸ್ತಮಸ್ತಕಸಂಯೋಗವಾದ ಬಳಿಕ
ಗುರುಲಿಂಗಜಂಗಮವೇ ಗತಿಯಾಗಿದ್ದೆ
ಕೂಡಲಸಂಗಮದೇವ.
೪೫೨.
ಮಾಡುವಾತ ನಾನಲ್ಲಯ್ಯ,
ನೀಡುವಾತ ನಾನಲ್ಲಯ್ಯ,
ಬೇಡುವಾತ ನಾನಲ್ಲಯ್ಯ,
ನಿಮ್ಮ ಕಾರುಣ್ಯವಲ್ಲದೆ, ಎಲೆ ದೇವಾ!
ಮನೆಯ ತೊತ್ತಲಸಿದರೆ ಒಡತಿ ಮಾಡಿಕೊಂಬಂತೆ
ನಿನಗೆ ನೀ ಮಾಡಿಕೋ ಕೂಡಲಸಂಗಮದೇವಾ!
೪೫೩.
ಪರಿಯಾಣವೇ ಭಾಜನವೆಂಬರು
ಪರಿಯಾಣ ಭಾಜನವಲ್ಲ ಲಿಂಗಕ್ಕೆ!
ತನ್ನ ಮನವೇ ಭಾಜನ!
ಪ್ರಾಣವನು ಬೀಸರವೋಗದೆ
ಮೀಸಲಾಗರ್ಪಿಸಬಲ್ಲಡೆ,
ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಮದೇವ.
೪೫೪.
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ.
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ.
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ.
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯ.
ಕೂಡಲಸಂಗನ ಶರಣರನುಭಾವದಿಂದ
ಎನ್ನ ಭವದ ಕೇಡು ನೋಡಯ್ಯ.
೪೫೫.
ಆಲಿಕಲ್ಲ ಹರಳಿನಂತೆ,
ಅರಗಿನ ಪುತ್ಥಳಿಯಂತೆ
ತನು ಕರಗಿ ನೆರೆವ ಸುಖವ ನಾನೇನೆಂಬ!
ಕಡೆಗೋಡಿವರಿದವೆನಗಯ್ಯ ನಯನದ ಸುಖಜಲಂಗಳು!
ನಮ್ಮ ಕೂಡಲಸಂಗಮದೇವರ ಮುಟ್ಟಿ
ನೆರೆವ ಸುಖವನಾರಿಗೇನೆಂಬೆ!
೪೫೬.
ನಾಲಗೆ ತಾಗಿದ ರುಚಿಗೆ ಮನವೇ ಸಾಕ್ಷಿ!
ಸಾಲದೇ ಅಯ್ಯ!
ಮಾಲೆಗಾರನ ಕೇಳಿ ನನೆಯರಳುವುದೇ ?
ಆಗಮವನಿದಿರಿಂಗೆ ತೋರುವುದು ಆಚಾರವೇ ಅಯ್ಯ ?
ಕೂಡಲಸಂಗನ ಕೂಡಿದ
ಕೂಟದ ಕರುಳ ಕಲೆಯನು
ಇದಿರಿಂಗೆ ತೋರುವುದು ಆಚಾರವೇ ಅಯ್ಯ ?
೪೫೭.
ಎಲ್ಲ ಗಂಡರ ಪರಿಯಂತಲ್ಲ ನೋಡವ್ವ ನನ್ನ ನಲ್ಲ!
ಸುಳಿಯಲಿಲ್ಲ, ಸುಳಿದು ಸಿಂಗರವ ಮಾಡಲಿಲ್ಲ;
ಕೂಡಲ ಸಂಗಮ ದೇವನು ತನ್ನೊಳಗೆ ಬೈಚಿಟ್ಟನಾಗಿ!
೪೫೮.
ಆಹ್ವಾನಿಸಿ ಕರೆವಲ್ಲಿ ಎಲ್ಲಿದ್ದನೋ
ಈರೇಳು ಭುವನಂಗಳ ಒಳಗೊಂಡಿಪ್ಪ ದಿವ್ಯವಸ್ತು ?
ಮತ್ತೆ, ವಿಸರ್ಜಿಸಿ ಬಿಡುವಾಗ ಎಲ್ಲಿದ್ದನೋ
ಮುಳ್ಳೂರ ತೆರಹಿಲ್ಲದಿಪ್ಪ ಅಖಂಡವಸ್ತು ?
ಬರಿಯ ಮಾತಿನ ಬಳಕೆಯ ತೂತಿನ ಜ್ಞಾನವ ಬಿಟ್ಟು
ನೆಟ್ಟನೆ ತನ್ನ ಕರಸ್ಥಳದೊಳಗಿರುತಿಪ್ಪ
ಇಷ್ಟಲಿಂಗವ ದಿಟ್ಟಿಸಿ ನೋಡಲು
ಅಲ್ಲಿ ತನ್ನ ಮನಕ್ಕೆ ಮನ-ಸಂಧಾನವಾಗಿ ದಿವ್ಯನಿಶ್ಚಯ ಒದಗೆ
ಆ ದಿವ್ಯ ನಿಶ್ಚಯದಿಂದ ಕುಳವಡಗಿ ಅದ್ವೈತವಪ್ಪುದು!
ಇದು ಕಾರಣ, ನಮ್ಮ ಕೂಡಲಸಂಗನ ಶರಣರು
ಆಹ್ವಾನ-ವಿಸರ್ಜನವೆಂಬುಭಯ ಜಡತೆಯ ಬಿಟ್ಟು
ತಮ್ಮ ತಮ್ಮ ಕರಸ್ಥಳದಲ್ಲಿ ನಿಶ್ಚೈಸಿ ಅವರೇ
ಸ್ವಯಲಿಂಗವಾದರು ಕಾಣಿರೋ!
೪೫೯.
ಎನ್ನ ಗಂಡ ಬರಬೇಕೆಂದು
ಎನ್ನ ಅಂತರಂಗವೆಂಬ ಮನೆಯ ತೆರಹುಮಾಡಿ
ಅಷ್ಟದಳಕಮಲವೆಂಬ ಓವರಿಯೊಳಗೆ
ನಿಜನಿವಾಸವೆಂಬ ಹಾಸುಗೆಯ ಹಾಸಿ
ಧ್ಯಾನಮೌನವೆಂಬ ಮೇಲುಕಟ್ಟ ಕಟ್ಟಿ
ಜ್ಞಾನವೆಂಬ ದೀಪವ ಬೆಳಗಿ
ನಿಷ್ಕ್ರೀಗಳೆಂಬುಪಕರಣಂಗಳ ಹರಹಿಕೊಂಡು
ಪಶ್ಚಿಮದ್ವಾರವೆಂಬ ಬಾಗಿಲ ತೆರೆದು
ಕಂಗಳೇ ಪ್ರಾಣವಾಗಿ ಹಾರುತಿರ್ದೆನಯ್ಯ!
"ನಾನು ಬಾರೆನೆಂದು ಉಮ್ಮಳಿಸಿಹ"ನೆಂದು
ತಾನೇ ಬಂದು ಎನ್ನ ಹೃದಯಸಿಂಹಾಸನದ ಮೇಲೆ
ಮೂರ್ತಿಗೊಂಡರೆ
ಎನ್ನ ಮನದ ಬಯಕೆ ಸಯವಾಯಿತ್ತು.
ಹಿಂದೆ ಹನ್ನೆರಡು ವರ್ಷದಿಂದಿದ್ದ ಚಿಂತೆ ನಿಶ್ಚಿಂತೆಯಾಯಿತ್ತು!
ಕೂಡಲಸಂಗಮದೇವ ಕೃಪಾಮೂರ್ತಿಯಾದ ಕಾರಣ,
ಆನು ಬದುಕಿದೆನು.
೪೬೦.
ಕಾಯವೆಂಬ ಘಟಕ್ಕೆ
ಚೈತನ್ಯವೇ ಸಯಿದಾನ,
ಸಮತೆ ಎಂಬ ಜಲ,
ಕರಣಾದಿಗಳೇ ಸ್ರವಣ,
ಜ್ಞಾನವೆಂಬ ಅಗ್ನಿಯನಿಕ್ಕಿ
ಮತಿಯೆಂಬ ಸಟ್ಟುಗದಲ್ಲಿ ಘಟ್ಟಿಸಿ,
ಪಾಕಕ್ಕೆ ತಂದು, ಭಾವದಲ್ಲಿ ಕುಳ್ಳಿರಿಸಿ
ಪರಿಣಾಮದೋಗರವ ನೀಡಿದರೆ
ಕೂಡಲಸಂಗಮದೇವಂಗೆ ಆರೋಗಣೆಯಾಯಿತ್ತು.
೪೬೧.
ಅಡಿಗಡಿಗೆ ಸ್ಥಾನನಿಧಿ!
ಅಡಿಗಡಿಗೆ ದಿವ್ಯಕ್ಷೇತ್ರ!
ಅಡಿಗಡಿಗೆ ನಿಧಿಯು ನಿಧಾನ! ನೋಡಾ!
ಆತನಿರವೇ ಅವಿಮುಕ್ತ ಕ್ಷೇತ್ರ,
ಕೂಡಲಸಂಗನ ಶರಣ ಸ್ವತಂತ್ರನಾಗಿ.
೪೬೨.
ಧನದಲ್ಲಿ ಶುಚಿ, ಪ್ರಾಣದಲ್ಲಿ ನಿರ್ಭಯ
ಇದಾವಂಗಳವಡುವುದಯ್ಯ ?
ನಿಧಾನ ತಪ್ಪಿ ಬಂದರೆ ಒಲ್ಲೆನೆಂಬವರಿಲ್ಲ!
ಪ್ರಮಾದವಶ ಬಂದರೆ ಹುಸಿಯೆನೆಂಬವರಿಲ್ಲ!
ನಿರಾಶೆ, ನಿರ್ಭಯ, ಕೂಡಲಸಂಗಮದೇವ,
ನೀನೊಲಿದ ಶರಣಂಗಲ್ಲದಿಲ್ಲ!
೪೬೩.
ಹಲಬರ ನುಂಗಿದ ಹಾವಿಂಗೆ ತಲೆ-ಬಾಲವಿಲ್ಲ ನೋಡಾ!
ಕೊಲುವುದು ತ್ರೈಜಗವೆಲ್ಲವ!
ತನಗೆ ಬೇರೆ ಪ್ರಳಯವಿಲ್ಲ!!
ನಾಕಡಿಯನೆಯ್ದದು,
ಲೋಕದ ಕಡೆಯನೇ ಕಾಬುದು!
ಸೂಕ್ಷ್ಮಪಥದಲ್ಲಿ ನಡೆವುದು,
ತನಗೆ ಬೇರೊಡಲಿಲ್ಲ!
ಅಹಂಕಾರವೆಂಬ ಗಾರುಡಿಗನ ನುಂಗಿತ್ತು
ಕೂಡಲಸಂಗನ ಶರಣರಲ್ಲದುಳಿದವರ.
೪೬೪.
ಉಂಬ ಬಟ್ಟಲು ಬೇರೆ ಕಂಚಲ್ಲ!
ನೋಡುವ ದರ್ಪಣ ಬೇರೆ ಕಂಚಲ್ಲ!
ಭಾಂಡ, ಭಾಜನ ಒಂದೆ!
ಬೆಳಗೆ ಕನ್ನಡಿಯೆನಿಸಿತ್ತಯ್ಯ!
ಅರಿದರೆ ಶರಣನು, ಮರೆದರೆ ಮಾನವನು!
ಮರೆಯದೆ ಪೂಜಿಸು ಕೂಡಲಸಂಗನ.
೪೬೫.
ಕೆರೆ ಹಳ್ಳ ಭಾವಿಗಳು ಮೈದೆಗೆದರೆ
ಗುಳ್ಳೆ, ಗೊರಚೆ, ಚಿಪ್ಪು ಕಾಣಬಹವು!
ವಾರಿಧಿ ಮೈದೆಗೆದರೆ
ರತ್ನ ಮುತ್ತುಗಳು ಕಾಣಬಹವು!
ಕೂಡಲಸಂಗನ ಶರಣರು
ಮನದೆರೆದು ಮಾತನಾಡಿದರೆ
ಲಿಂಗವೇ ಕಾಣಬಹುದು!
೪೬೬.
ನಾರುಳಿಯ ಹಣಿದವನಾರಾದರೆಯು ಆಡರೆ
ನಾರುಳಿದರೆ ಮುಂದೆ ಅಂಕುರಿತ ಫಲ ತಪ್ಪದು!
ಮಾಡುವನ್ನಕ ಫಲದಾಯಕ.
ಮಾಟವರತು ನಿಮ್ಮಲ್ಲಿ ಸಯವಾದರೆ
ಆತನೇ ಅಚ್ಚ ಶರಣನಯ್ಯ, ಕೂಡಲಸಂಗಮದೇವ.
೪೬೭.
ಐದು ಮಾನವ ಕುಟ್ಟಿ
ಒಂದು ಮಾನವ ಮಾಡು ಕಂಡೆಯಾ ಮದುವಳಿಗೆ!
ಇದು ನಮ್ಮ ಬಾಳುವೆ ಮದುವಳಿಗೆ!
ಇದು ನಮ್ಮ ವಿಸ್ತಾರ ಮದುವಳಿಗೆ!
ಮದವಳಿದು ನಿಜವುಳಿದ ಬಳಿಕ
ಅದು ಸತ್ಯ ಕಾಣಾ ಕೂಡಲಸಂಗಮದೇವಾ.
೪೬೮.
ಕುಲಮದವಳಿಯದನ್ನಕ ಶರಣನಾಗಲೇಕೆ ?
ವಿಧಿವಶ ಬಿಡದನ್ನಕ ಭಕ್ತನಾಗಲೇಕೆ ?
ಹಮ್ಮಿನ ಸೊಮ್ಮಿನ ಸಂಬಂಧ ಬಿಟ್ಟು
ಕಿಂಕರರ ಕಿಂಕರನಾಗಿರಬೇಕು.
ಹೆಪ್ಪನೆರೆದ ಹಾಲು ಕೆಟ್ಟು
ತುಪ್ಪವಪ್ಪಂತೆಯಿಪ್ಪರು,
ಕೂಡಲಸಂಗಮದೇವ, ನಿಮ್ಮ ಶರಣರು.
೪೬೯.
ಮಣ್ಣ ಮಡಕೆ ಮಣ್ಣಾಗದು ಕ್ರೀಯಳಿದು,
ಬೆಣ್ಣೆ ಕರಗಿ ತುಪ್ಪವಾಗಿ
ಮರಳಿ ಬೆಣ್ಣೆಯಾಗದು ಕ್ರೀಯಳಿದು,
ಹೊನ್ನು ಕಬ್ಬುನವಾಗದು ಕ್ರೀಯಳಿದು,
ಮುತ್ತು ನೀರಲ್ಲಿ ಹುಟ್ಟಿ ಮತ್ತೆ ನೀರಾಗದು ಕ್ರೀಯಳಿದು.
ಕೂಡಲಸಂಗನ ಶರಣನಾಗಿ
ಮರಳಿ ಮಾನವನಾಗ ಕ್ರೀಯಳಿದು.
೪೭೦.
ಪೂರ್ವಜನ್ಮ ನಿವೃತ್ತಿಯಾಗಿ
ಗುರುಕರುಣವಿಡಿದಂಗೆ ಬಂಧನವೆಲ್ಲಿಯದೋ,
ಭವಬಂಧನವೆಲ್ಲಿಯದೋ
ಸಂಕಲ್ಪ-ವಿಕಲ್ಪವೆಂಬ ಸಂದೇಹವ ಕಳೆದುಳಿದವಂಗೆ
ಕೂಡಲಸಂಗಮದೇವರ
ತ್ರಿಸಂಧ್ಯಾಕಾಲದಲ್ಲಿ ಮಾಣದೇ ನೆನೆವಂಗೆ ?
೪೭೧.
ಲಗ್ನವೆಲ್ಲಿಯದೋ
ವಿಘ್ನವೆಲ್ಲಿಯದೋ ಸಂಗಯ್ಯ ?
ದೋಷವೆಲ್ಲಿಯದೋ
ದುರಿತವೆಲ್ಲಿಯದೋ ಸಂಗಯ್ಯ ?
ನಿಮ್ಮ ಮಾಣದೆ ನೆನೆವಂಗೆ
ಭವಕರ್ಮವೆಲ್ಲಿಯದೋ ಕೂಡಲಸಂಗಯ್ಯ!
೪೭೨.
ಶರಣ ನಿದ್ರೆಗೈದರೆ ಜಪ ಕಾಣಿರೋ!
ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ!
ಶರಣ ನಡೆದುದೇ ಪಾವನ ಕಾಣಿರೋ!
ಶರಣ ನುಡಿದುದೇ ಶಿವತತ್ವಕಾಣಿರೋ
ಕೂಡಲಸಂಗನ ಶರಣನ ಕಾಯವೇ
ಕೈಲಾಸ ಕಾಣಿರೋ!
೪೭೩.
ಸಮುದ್ರ ಘನವೆಂಬೆನೆ ?
ಧರೆಯ ಮೇಲಡಗಿತ್ತು!
ಧರೆ ಘನವೆಂಬೆನೆ ?
ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು!
ನಾಗೇಂದ್ರ ಘನವೆಂಬೆನೆ ?
ಪಾರ್ವತಿಯ ಕಿರುಗುಣಿಕೆಯ ಮುದ್ರಿಕೆಯಾಯಿತ್ತು!
ಅಂಥ ಪಾರ್ವತಿ ಘನವೆಂಬೆನೆ ?
ಪರಮೇಶ್ವರನ ಅರ್ಧಾಂಗಿಯಾದಳು!
ಅಂಥ ಪರಮೇಶ್ವರ ಘನವೆಂಬೆನೆ ?
ನಮ್ಮ ಕೂಡಲಸಂಗನ ಶರಣರ
ಮನದ ಕೊನೆಯ ಮೊನೆಯ ಮೇಲಡಗಿದನು!
೪೭೪.
ನೆಲನೊಂದೇ ಹೊಲೆಗೇರಿ, ಶಿವಾಲಯಕ್ಕೆ!
ಜಲವೊಂದೇ ಶೌಚಾಚಮನಕ್ಕೆ!
ಕುಲವೊಂದೇ ತನ್ನ ತಾನರಿದವಂಗೆ!
ಫಲವೊಂದೇ ಷಡುದರ್ಶನ ಮುಕ್ತಿಗೆ!
ನಿಲವೊಂದೇ, ಕೂಡಲಸಂಗಮದೇವ,
ನಿಮ್ಮನರಿದವಂಗೆ.
೪೭೫.
ಅಯ್ಯಾ, ಸಜ್ಜನ ಸದ್ಭಕ್ತರ ಸಂಗದಿಂದ
ಮಹಾನುಭಾವರ ಕಾಣಬಹುದು!
ಮಹಾನುಭಾವರ ಸಂಗದಿಂದ
ಶ್ರಿಗುರುವನರಿಯಬಹುದು!
ಲಿಂಗವನರಿಯಬಹುದು ಜಂಗಮವನರಿಯಬಹುದು!
ಪ್ರಸಾದವನರಿಯಬಹುದು! ತನ್ನ ತಾನರಿಯಬಹುದು!!
ಇದು ಕಾರಣ ಸದ್ಭಕ್ತರ ಸಂಗವ ಕರುಣಿಸು
ಕೂಡಲಸಂಗಮದೇವಾ ನಿಮ್ಮ ಧರ್ಮ!
೪೭೬.
ಕುಂಡಲಿಗನೊಂದು ಕೀಡೆಯ ತಂದು
ತನ್ನಂತೆ ಮಾಡಿತಲ್ಲ!
ಎಲೆ ಮಾನವಾ, ಕೇಳಿ ನಂಬಯ್ಯ!
ನೋಡಿ ನಂಬಯ್ಯ, ಎಲೆ ಮಾನವ!
"ತ್ವಚ್ಚಿಂತಯಾ ಮಹಾದೇವ!
ತ್ವಮೇವಾಸ್ಮಿ ನ ಸಂಶಯಃ!
ಭ್ರಮದ್ ಭ್ರಮರಚಿಂತಾಯಾಂ
ಕೀಟೋಪಿ ಭ್ರಮರಾಯತೇ"!!
ಕೂಡಲಸಂಗನ ಶರಣರ ಅನುಭಾವ
ಇದರಿಂದ ಕಿರುಕುಳವೆ ಎಲೆ ಮಾನವಾ ?!
೪೭೭.
ಮರಮರನ ಮಥನದಿಂದಗ್ನಿ ಹುಟ್ಟಿ,
ಆ ಮರನೆಲ್ಲವ ಸುಡದಿಪ್ಪುದೆ ?
ಮಹಾನುಭಾವರ ಸಂಗದಿಂದ ಜ್ಞಾನಾಗ್ನಿ ಹುಟ್ಟಿ
ಎನ್ನ ತನುಗುಣವೆಲ್ಲವ ಸುಡದಿಪ್ಪುದೆ ?
ಇದು ಕಾರಣ,
ಮಹಾನುಭಾವರ ತೋರಿಸು
ಕೂಡಲಸಂಗಮದೇವ.
೪೭೮.
ಅರಿದುದ ಅರಿಯಲೊಲ್ಲದು! ಅದೆಂತಯ್ಯ ?
ಮರೆದುದ ಮರೆಯಲೊಲ್ಲದು! ಅದೆಂತಯ್ಯ
ಅರಿದು ಮರೆದ ಮನವ
ಕೂಡಲಸಂಗಯ್ಯ ತಾನೇ ಬಲ್ಲ.
೪೭೯.
ಮೀಸಲು ಬೀಸರವೋದ ಪರಿಯ ನೋಡಾ!
ಕಾಲು ತಾಗಿದ ಅಗ್ಛವಣಿ,
ಕೈ ಮುಟ್ಟಿದರ್ಪಿತ
ಮನ ಮುಟ್ಟಿದಾರೋಗಣೆಯನೆಂತು ಘನವೆಂಬೆನಯ್ಯ !?
ಬಂದ ಪರಿಯಲಿ ಪರಿಣಾಮಿಸಿ
ನಿಂದ ಪರಿಯಲ್ಲಿ ನಿಜಮಾಡಿ
ಆನೆಂದ ಪರಿಯಲ್ಲಿ ಕೈಕೋ
ಕೂಡಲಸಂಗಮದೇವ!
೪೮೦.
ಹಾಲೆಂಜಲು ವತ್ಸನ!
ಉದಕವೆಂಜಲು ಮತ್ಸ್ಯದ!
ಪುಷ್ಪವೆಂಜಲು ತುಂಬಿಯ!
ಎಂತು ಪೂಜಿಸುವೆನಯ್ಯ!
ಶಿವಶಿವಾ! ಎಂತು ಪೂಜಿಸುವೆ ?
ಈ ಎಂಜಲವನತಿಗಳೆವರೆ ಎನ್ನಳವಲ್ಲ.
ಬಂದುದ ಕೈಕೋ ಕೂಡಲಸಂಗಮದೇವ.
೪೮೧.
ದಿಟ ಮಾಡಿ ಪೂಜಿಸಿದರೆ ಸಟೆ ಮಾಡಿ ಕಳೆವೆ.
ಸಟೆ ಮಾಡಿ ಪೂಜಿಸಿದರೆ ದಿಟ ಮಾಡಿ ಕಳೆವೆ.
ಏನೆಂಬೆನೆಂತೆಂಬೆ!
ಸುಖಕ್ಕೆ ತುಂಬಿದ ದೀವಿಗೆ ಮನೆಯೆಲ್ಲವ ಸುಟ್ಟಂತೆ
ಆನು ಮಾಡಿದ ಭಕ್ತಿ
ಎನಗಿಂತಾಯಿತ್ತು ಕೂಡಲಸಂಗಮದೇವ.
೪೮೨.
ಎಂಬತ್ತೆಂಟು ಪವಾಡವ ಮೆರೆದು
ಹಗರಣದ ಚೋಹದಂತಾಯಿತ್ತೆನ್ನ ಭಕ್ತಿ;
ತನುವಿನೊಳಗೆ ಮನ ಸಿಲುಕದೆ,
ಮನದೊಳಗೆ ತನು ಸಿಲುಕದೆ
ತನು ಅಲ್ಲಮನಲ್ಲಿ ಸಿಲುಕಿತ್ತು!
ಮನ ಚೆನ್ನಬಸವಣ್ಣನಲ್ಲಿ ಸಿಲುಕಿತ್ತು
ನಾನೇತರಲ್ಲಿ ನೆನೆವೆನಯ್ಯ
ಕೂಡಲಸಂಗಮದೇವ ? !
೪೮೩.
ಬಸವ ಬಾರಯ್ಯ,
ಮರ್ತ್ಯಲೋಕದೊಳಗೆ ಭಕ್ತರುಂಟೆ ಹೇಳಯ್ಯ ?
ಮತ್ತಾರು ಇಲ್ಲಯ್ಯ, ಮತ್ತಾರು ಇಲ್ಲಯ್ಯ !
ನಾನೊಬ್ಬನೇ ಭಕ್ತನು,
ಮರ್ತ್ಯಲೋಕದೊಳಗಣ ಭಕ್ತರೆಲ್ಲರೂ
ಜಂಗಮಲಿಂಗ ನೀನೇ ಅಯ್ಯ ಕೂಡಲಸಂಗಮದೇವ!!
೪೮೪.
ಭಕ್ತ, ಮಾಹೇಶ್ವರ, ಪ್ರಸಾದಿ,
ಪ್ರಾಣಲಿಂಗ, ಶರಣನೈಕ್ಯನು
ಮೆಲ್ಲಮೆಲ್ಲನೆ ಆದೆನೆಂಬನ್ನಬರ,
ನಾನು ವಜ್ರದೇಹಿಯೆ ?
ನಾನೇನು ಅಮೃತವ ಸೇವಿಸಿದೆನೆ ?
ನಾನು ಮರುಜೇವಣಿಯ ಕೊಂಡೆನೆ ?
ನುಡಿದ ನುಡಿಯೊಳಗೆ ಷಡುಸ್ಥಲ ಬಂದು
ನನ್ನ ಮನವನಿಂಬುಗೊಳದಿದ್ದರೆ
ಸುಡುವೆನೀ ತನುವ ಕೂಡಲಸಂಗಮದೇವ.
೪೮೫.
ತಾಪತ್ರಯವೆಂದರೆ ರೂಪ ಕಾಣುತ್ತ ಕನಲಿದ!
ಕೋಪದಲ್ಲಿ ಶಿವಕಳೆಯದ ಕರಡಿಗೆಯನೆ ಮುರಿದ!
ಧೂಪಗುಂಡಿಗೆಯನೊಡೆದ!
ದೀಪದಾರತಿಯ ನಂದಿಸಿದ!
ಬಹು ಪರಿಣಾಮದೋಗರವ ತುಡುಕಿದ!
ಪಾಪಕರ್ಮ, ಕೂಡಲಸಂಗಮದೇವಾ,
ನಿಮ್ಮ ಶರಣ.
೪೮೬.
ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯ,
ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಯ್ಯ!
ನೀನು ಜಗಕ್ಕೆ ಬಲ್ಲಿದನು,
ನಾನು ನಿನಗೆ ಬಲ್ಲಿದನು ಕಂಡಯ್ಯ!
ಕರಿಯು ಕನ್ನಡಿಯೊಳಡಗಿದಂತಯ್ಯ -
ಎನ್ನೊಳಗೆ ನೀನಡಗಿದೆ ಕೂಡಲಸಂಗಮದೇವ.
೪೮೭.
ಎಲ್ಲರ ಗಂಡರು ಬೇಂಟೆಯ ಹೋದರು.
ನೀನೇಕೆ ಹೋಗೆ ಎಲೆ ಗಂಡನೆ ?
ಸತ್ತುದ ತಾರದಿರು; ಕೈ ಮುಟ್ಟಿ ಕೊಲ್ಲದಿರು!
ಅಡಗಿಲ್ಲದೆ ಮನೆಗೆ ಬಾರದಿರು!
ದೇವರ ಧರ್ಮದಲೊಂದು
ಬೇಂಟೆ ದೊರೆಕೊಂಡರೆ
ಕೂಡಲಸಂಗಮದೇವಂಗರ್ಪಿತ ಮಾಡುವೆ ಎಲೆ ಗಂಡನೆ,
೪೮೮.
ಗ್ರಹ ಬಂದು ಆವರಿಸಲೊಡನೆ ತನ್ನ ಮರೆಸುವುದು;
ಮತ್ತೊಂದಕಿಂಬುಗೊಡಲೀಯದಯ್ಯ!
ಕೂಡಲಸಂಗಮದೇವನ ಅರಿವು
ಅನುಪಮವಾಗಲೊಡನೆ,
ಬೆವಹಾರದೊಳಗಿರಲೀಯದಯ್ಯ!
೪೮೯.
ಮನೆಯ ಗಂಡನ ಮನೆವಾರ್ತೆಯನೇನ ಹೇಳುವೆನವ್ವ!
ಅಂಗವಿದ್ಯವನೊಲ್ಲ,
ಕಂಗಳೊಳಗಣ ಕಸವ ಕಳೆದಲ್ಲದೆ ನೋಡಲೀಯ!
ಕಯ್ಯ ತೊಳೆದಲ್ಲದೆ ಮುಟ್ಟಲೀಯ,
ಕಾಲ ತೊಳೆದಲ್ಲದೆ ಹೊದ್ದಲೀಯ.
ಇಂತೀ ಸರ್ವಾಂಗ ತಲೆದೊಳೆದ ಕಾರಣ
ಕೂಡಲಸಂಗಮದೇವನೆನ್ನ
ಕೂಡಿಕೊಂಡನವ್ವ.
೪೯೦.
ಅಯ್ಯ, ನೀ ಮಾಡಲಾದ ಜಗತ್ತು;
ಅಯ್ಯ, ನೀ ಮಾಡಲಾದ ಸಂಸಾರ;
ಅಯ್ಯ, ನೀ ಮಾಡಲಾದ ಮರವೆ;
ಅಯ್ಯ, ನೀ ಮಾಡಲಾದ ದುಃಖ!
ಅಯ್ಯ, ನೀ ಬಿಡಿಸಿದರೆ ಬಿಟ್ಟಿತ್ತು ತಾಮಸವಯ್ಯ!
ನಾನೀ ಮಾಯೆಯ ಗೆದ್ದೆನೆಂಬ ಹಮ್ಮಿದೇಕೆ,
ಕೂಡಲಸಂಗಮದೇವ ?
೪೯೧.
ಅರತುದಯ್ಯ ಅಂಗಗುಣ, ಒರೆತುದಯ್ಯ ಭಕ್ತಿರಸ!
ಆವರಿಸಿತಯ್ಯ ಅಂಗ ಲಿಂಗವನು!
ಏನೆಂದರಿಯೆನಯ್ಯ ಲೋಕ-ಲೌಕಿಕದ ಮದವ,
ಕೂಡಲಸಂಗಮದೇವ, ನಿಮ್ಮ ಕರುಣವೆನ್ನನೆಡೆಗೊಂಡಿತ್ತಾಗಿ!
೪೯೨.
ಪೂಜೆಯುಳ್ಳನ್ನಬರ ಲಿಂಗವ ಹಾಡಿದೆ!
ಮಾಟವುಳ್ಳನ್ನಬರ ಜಂಗಮವ ಹಾಡಿದೆ!
ಜಿಹ್ವೆಯುಳ್ಳನ್ನಬರ ಪ್ರಸಾದವ ಹಾಡಿದೆ!
ಈ ತ್ರಿವಿಧ ನಾಸ್ತಿಯಾದ ಬಳಿಕ
ಎನ್ನ ನಾ ಹಾಡಿಕೊಂಡೆ ಕಾಣಾ
ಕೂಡಲಸಂಗಮದೇವ.
೪೯೩.
ಮರಳು ತಲೆ, ಹುರುಳು ತಲೆ ನೀನೇ ದೇವ
ಹೆಂಗೂಸು ಗಂಡುಗೂಸೂ ನೀನೇ ದೇವ
ಎಮ್ಮಕ್ಕನ ಗಂಡ ನೀನೇ ದೇವ,
ಕೂಡಲಸಂಗಮದೇವ,
ಭ್ರಾಂತಳಿದು ಭಾವ ನಿಂದುದಾಗಿ.
೪೯೪.
ಉಮಾದಿನಾಥರು ಕೋಟಿ,
ಪಂಚವಕ್ತ್ರರು ಕೋಟಿ,
ನಂದಿವಾಹನರೊಂದು ಕೋಟಿ ನೋಡಯ್ಯ!
ಸದಾಶಿವರೊಂದು ಕೋಟಿ
ಗಂಗೆವಾಳುಕಸಮಾರುದ್ರರು ಇವರೆಲ್ಲರು
ಕೂಡಲಸಂಗನ ಸಾನ್ನಿಧ್ಯರಲ್ಲದೆ
ಸಮರಸವೇದ್ಯರೊಬ್ಬರೂ ಇಲ್ಲ!
೪೯೫.
ಬಯಲ ರೂಪಮಾಡಬಲ್ಲಾತನೇ ಶರಣನು,
ಆ ರೂಪ ಬಯಲಮಾಡಬಲ್ಲಾತನೇ ಲಿಂಗಾನುಭಾವಿ.
ಬಯಲ ರೂಪಮಾಡಲರಿಯದಿದ್ದರೆ
ಎಂತು ಶರಣನೆಂಬೆ ?
ಆ ರೂಪ ಬಯಲ ಮಾಡಲರಿಯದಿದ್ದರೆ
ಎಂತು ಲಿಂಗಾನುಭಾವಿಯೆಂಬೆ ?
ಈ ಉಭಯವೊಂದಾದರೆ
ನಿಮ್ಮಲ್ಲಿ ತೆರಹುಂಟೇ ಕೂಡಲಸಂಗಮದೇವ ?
೪೯೬.
ದೇವಲೋಕ, ಮರ್ತ್ಯಲೋಕವೆಂಬ
ಸೀಮೆಯುಳ್ಳನ್ನಕ ಕೇವಲ ಶರಣನಾಗಲರಿಯ,
ಸತ್ತು ಬೆರೆಸಿಹೆನೆಂದರೆ
ಕಬ್ಬಿನ ತುದಿಯ ಮೆಲಿದಂತೆ ಕೂಡಲಸಂಗಮದೇವ.
೪೯೭.
ಏನನಾದರೆಯು ಸಾಧಿಸಬಹುದು!
ಮತ್ತೇನನಾದರೆಯು ಸಾಧಿಸಬಹುದಯ್ಯ!
ತಾನಾರೆಂಬುದ ಸಾಧಿಸಬಾರದು,
ಕೂಡಲಸಂಗಮದೇವನ
ಕರುಣವುಳ್ಳವಂಗಲ್ಲದೆ!
೪೯೮.
ಗುರುಶಿಷ್ಯ ಸಂಬಂಧವಾದುದಕ್ಕೆ ಇದು ಚಿಹ್ನ!
ಹಿಂದ ಬಿಟ್ಟು ಮುಂದ ಹಿಡಿಯಲೇ ಬೇಕು.
ಕೂಡಲಸಂಗಮದೇವಯ್ಯ
ಕಿಚ್ಚಿನೊಳಗೆ ಕೋಲ ಬೈಚಿಟ್ಟಂತಿರಬೇಕು.
೪೯೯.
ಲಿಂಗವ ಪೂಜಿಸಿ ಫಲವೇನಯ್ಯ
ಸಮರತಿ, ಸಮಕಳೆ, ಸಮಸುಖವರಿಯದನ್ನಕ ?
ಲಿಂಗವ ಪೂಜಿಸಿ ಫಲವೇನಯ್ಯ
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿ ಬೆರಸಿದಂತಾಗದನ್ನಕ ?
೫೦೦.
ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಸಲಿಗೆವಂತರಾಗಿ ಒಳಗೈದಾರೆ.
ಆನು ದೇವಾ ಹೊರಗಳವನು!
ಸಂಬೋಳಿಯೆನುತ್ತ, ಇಂಬಿನಲ್ಲಿದೇನೆ.
ಕೂಡಲಸಂಗಮದೇವ.
ನಿಮ್ಮ ನಾಮವಿಡಿದ ಅನಾಮಿಕ ನಾನು.

Sunday, April 24, 2011

ಆವು ಈವಿನ ನಾವು ನೀವಿಗೆ

ಆವು ಈವಿನ ನಾವು ನೀವಿಗೆ
ಆನು ತಾನಾದ ತನನನ
ನಾವು ನೀನಿನ ಈನೀನಾನಿಗೆ
ಬೇನೆ ಏನೋ? ಜಾಣೆ ನಾ
ಚಾರು ತಂತ್ರಿಯ ಚರಣ ಚರಣದ
ಘನಘನಿತ ಚತುರಸ್ವನಾ
ಹತವೊ ಹಿತವೊ ಆ ಅನಾಹತಾ
ಮಿತಿ ಮಿತಿಗೆ ಇತಿ ನನನನಾ
ಬೆನ್ನಿನಾನಿಕೆ ಜನನ ಜಾನಿಕೆ
ಮನನವೇ ಸಹಿತಸ್ತನಾ.
ಗೋವಿನ ಕೊಡುಗೆಯ ಹಡಗದ ಹುಡುಗಿ
ಬೆಡಗಿಲೆ ಬಂದಳು ನಡುನಡುಗಿ;
ಸಲಿಗೆಯ ಸುಲಿಗೆಯು ಬಯಕೆಯ ಒಲುಮೆ
ಬಯಲಿನ ನೆಯ್ಗೆಯ ಸಿರಿಯುಡುಗಿ;
ನಾಡಿಯ ನಡಿಗೆಯ ನಲುವಿನ ನಾಲಿಗೆ
ನೆನೆದಿರೆ ಸೋಲುವ ಸೊಲ್ಲಿನಲಿ;
ಮುಟ್ಟದ ಮಾಟದ ಹುಟ್ಟದ ಹುಟ್ಟಿಗೆ
ಜೇನಿನ ಥಳಿಮಳಿ ಸನಿಹ ಹನಿ;
ಬೆಚ್ಚಿದ ವೆಚ್ಚವು ಬಸುರಿನ ಮೊಳಕೆ
ಬಚ್ಚಿದ್ದಾವುದೊ ನಾ ತಿಳಿಯೆ
ಭೂತದ ಭಾವ ಉದ್ಬವ ಜಾವ
ಮೊಲೆ ಊಡಿಸುವಳು ಪ್ರತಿಭೆ ನವ.
ಚಿತ್ತೀಮಳಿ, ತತ್ತಿ ಹಾಕತ್ತಿತ್ತು ಸ್ವಾತಿಮುತ್ತೀನೊಳಗ
ಸತ್ತಿಯೋ ಮಗನ ಅಂತ ಕೂಗಿದರು
ಸಾವೀ ಮಗಳು, ಭಾವಿ ಮಗಳು ಕೂಡಿ
ಈ ಜಗ ಅಪ್ಪಾ ಅಮ್ಮನ ಮಗ
ಅಮ್ಮನೊಳಗ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ
ನಾ ಅವರ ಕಂದ ಶ್ರೀ ಗುರುದತ್ತ ಅಂದ
'ನಾನು' 'ನೀನು' 'ಆನು' 'ತಾನು'
ನಾಕು ನಾಕೇ ತಂತಿ.
ಸೊಲ್ಲಿಸಿದರು ನಿಲ್ಲಿಸಿದರು
ಓಂ ದಂತಿ!
ಗಣನಾಯಕ ಮೈ ಮಾಯಕ
ಸೈ ಸಾಯಕ ಮಾಡಿ
ಗುರಿಯ ತುಂಬಿ ಕುರಿಯ ಕಣ್ಣು
ಧಾತು ಮಾತು ಕೂಡಿ.

ಬಸವಣ್ಣನ ವಚನಗಳು 301 -400

೩೦೧.
ಕಾಮ ಸಂಗವಳಿದು,
ಅನುಭಾವ ಸಂಗದಲುಳಿದವರನಗಲಲಾರೆ,
ಶಿವಂಗೆ ಮಿಗೆ ಒಲಿದವರನು
ನಾನು ಅಗಲಲಾರೆ ಕಾಣಾ ಕೂಡಲಸಂಗಮದೇವ.
೩೦೨.
ಭಕ್ತಿರತಿಯ ವಿಕಲತೆಯ
ಯುಕುತಿಯನೇನ ಬೆಸಗೊಂಬಿರಯ್ಯ ?
ಕಾಮಿಗುಂಟೇ ಲಜ್ಜೆ ನಾಚಿಕೆ ?
ಕಾಮಿಗುಂಟೇ ಮಾನಾಪಮಾನವು ?
ಕೂಡಲಸಂಗನ ಶರಣರಿಗೊಲಿದ
ಮರುಳನನೇನ ಬೆಸಗೊಂಬಿರಯ್ಯ ?
೩೦೩.
ಸಕ್ಕರೆಯ ಕೊಡನ ತುಂಬಿ
ಹೊರಗ ಸವಿದರೆ ರುಚಿಯುಂಟೆ ?
ತಕ್ಕೈಸಿ ಭುಜತುಂಬಿ,
ಲಿಂಗಸ್ಪರ್ಶನವ ಮಾಡದೆ,
ಅಕ್ಕಟಾ, ಸಂಸಾರ ವೃಥಾ ಹೋಯಿತ್ತಲ್ಲ!
ಅದೇತರ ಭಕ್ತಿ ? ಅದೇತರ ಯುಕ್ತಿ ? ಕೂಡಿಕೊ!
ಕೂಡಲಸಂಗಮದೇವ.
೩೦೪.
ಪರಚಿಂತೆ ಎಮಗೇಕಯ್ಯ ?
ನಮ್ಮ ಚಿಂತೆ ಎಮಗೆ ಸಾಲದೆ ?
ಕೂಡಲಸಂಗಯ್ಯ ಒಲಿದಾನೋ ಒಲಿಯನೋ
ಎಂಬ ಚಿಂತೆ
ಹಾಸಲುಂಟು ಹೊದಿಯಲುಂಟು!
೩೦೫.
ಲಜ್ಜೆಗೆಟ್ಟೆನು, ನಾಣುಗೆಟ್ಟೆನು,
ಕುಲಗೆಟ್ಟೆನು, ಛಲಗೆಟ್ಟೆನು,
ಸಂಗಾ, ನಿಮ್ಮ ಪೂಜಿಸಿ ಭವಗೆಟ್ಟೆನು ನಾನಯ್ಯ!
ಕೂಡಲಸಂಗಮದೇವಯ್ಯ,
ನಿಮ್ಮ ಮುಟ್ಟಿ ಹುಟ್ಟುಗೆಟ್ಟೆನು ನಾನಯ್ಯ!
೩೦೬.
ಮಾಡುವ ಭಕ್ತನ ಕಾಯ
ಬಾಳೆಯ ಕಂಬದಂತಿರಬೇಕು!
ಮೆಲ್ಲಮೆಲ್ಲನೆ ಹೊರೆಯೆತ್ತಿ ನೋಡಿದರೆ
ಒಳಗೆ ಕೆಚ್ಚಿಲ್ಲದಿರಬೇಕು!
ಮೇಲಾದ ಫಲವ ನಮ್ಮವರು
ಬೀಜ ಸಹಿತ ನುಂಗಿದರು.
ಎನಗಿನ್ನಾವ ಭವವಿಲ್ಲ ಕಾಣಾ
ಕೂಡಲಸಂಗಮದೇವ.
೩೦೭.
ಏನು ಮಾಡುವೆನೆನ್ನ ಪುಣ್ಯದ ಫಲವು!
ಶಾಂತಿಯ ಮಾಡಹೋದರೆ ಬೇತಾಳ ಮೂಡಿತ್ತು!
ಕೂಡಲಸಂಗಮದೇವನ ಪೂಜಿಸಿಹೆನೆಂದರೆ
ಭಕ್ತಿ ಎಂಬ ಮೃಗವೆನ್ನನಟ್ಟಿ ಬಂದು
ನುಂಗಿತಯ್ಯ!
೩೦೮.
ಭಕ್ತಿಯೆಂಬ ಫೃಥ್ವಿಯ ಮೇಲೆ
ಗುರುವೆಂಬ ಬೀಜವಂಕುರಿಸಿ,
ಲಿಂಗವೆಂಬ ಎಲೆಯಾಯಿತ್ತು!
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾಯಿತ್ತು!
ಆಚಾರವೆಂಬ ಕಾಯಾಯಿತ್ತು!!
ನಿಷ್ಪತ್ತಿಯೆಂಬ ಹಣ್ಣಾಯಿತ್ತು!!!
ನಿಷ್ಪತ್ತಿಯೆಂಬ ಹಣ್ಣು
ತೊಟ್ಟುಬಿಟ್ಟು ಕಳಚಿಬೀಳುವಲ್ಲಿ
ಕೂಡಲಸಂಗಮದೇವನು
ತನಗೆ ಬೇಕೆಂದೆತ್ತಿಕೊಂಡನು.
೩೦೯.
ಸ್ವಾಮಿ ನೀನು, ಶಾಶ್ವತ ನೀನು.
ಎತ್ತಿದೆ ಬಿರುದ ಜಗವೆಲ್ಲರಿಯಲು.
ಮಹಾದೇವ, ಮಹಾದೇವ!
ಇಲ್ಲಿಂದ ಮೇಲೆ ಶಬ್ದವಿಲ್ಲ!
ಪಶುಪತಿ ಜಗಕ್ಕೆ ಏಕೋದೇವ;
ಸ್ವರ್ಗಮರ್ತ್ಯ ಪಾತಾಳದೊಳಗೊಬ್ಬನೇ ದೇವ;
ಕೂಡಲಸಂಗಮದೇವ.
೩೧೦.
ಶ್ರುತಿತತಿಶಿರದ ಮೇಲೆ
ಅತ್ಯತಿಷ್ಠದ್ದಶಾಂಗುಲನ ನಾನೇನೆಂಬೆನಯ್ಯ
ಘನಕ್ಕೆ ಘನಮಹಿಮನ
ಮನಕ್ಕಗೋಚರನ !?
ಅಣೋರಣೀಯಾನ್
ಮಹತೋ ಮಹೀಯಾನ್
ಮಹಾದಾನಿ ಕೂಡಲಸಂಗಮದೇವ.
೩೧೧.
ಸಕಲ-ನಿಷ್ಕಲವ ಕೂಡಿಕೊಂಡಿಪ್ಪೆಯಾಗಿ
ಸಕಲ ನೀನೆ, ನಿಷ್ಕಲ ನೀನೇ ಕಂಡಯ್ಯ!
ವಿಶ್ವತಶ್ಚಕ್ಷು ನೀನೇ ದೇವ!
ವಿಶ್ವತೋಬಾಹು ನೀನೇ ದೇವ
ವಿಶ್ವತೋಮುಖ ನೀನೇ ದೇವ!
ಕೂಡಲಸಂಗಮದೇವ.
೩೧೨.
ಎತ್ತೆತ್ತ ನೋಡಿದಡತ್ತತ್ತ ನೀನೇ ದೇವ!
ಸಕಲ ವಿಸ್ತಾರದ ರೂಹು ನೀನೇ ದೇವ.
ವಿಶ್ವತಶ್ಚಕ್ಷು ನೀನೇ ದೇವ,
ವಿಶ್ವತೋಮುಖ ನೀನೇ ದೇವ.
ವಿಶ್ವತೋಬಾಹು ನೀನೇ ದೇವ.
ವಿಶ್ವತೋಪಾದ ನೀನೇ ದೇವ.
ಕೂಡಲಸಂಗಮದೇವ.
೩೧೩.
ಹರನ ಕೊರಳಲ್ಲಿಪ್ಪ ಕರೋಟಿಮಾಲೆಯ
ಶಿರದ ಲಿಖಿತವ ಕಂಡು, ಮರುಳುತಂಡಗಳು
ಓದಿನೋಡಿ
"ಇವನಜ, ಇವ ಹರಿ, ಇವ ಸುರಪತಿ
ಇವ ಧರಣೀಂದ್ರ, ಇವನಂತಕ"ನೆಂದು
ಹರುಷದಿಂದ ಸರಸವಾಡುವುದ ಹರ ನೋಡಿ
ಮುಗುಳುನಗೆಯ ನಗುತ್ತಿದ್ದನು!
ಕೂಡಲಸಂಗಮದೇವ.
೩೧೪.
ಅದುರಿತು ಪಾದಘಾತದಿಂದ ಧರೆ!
ಬಿದಿರಿದವು ಮಕುಟ ತಾಗಿ ತಾರಕಿಗಳು
ಉದುರಿದವು ಕೈತಾಗಿ ಲೋಕಂಗಳೆಲ್ಲ!
"ಮಹೀ ಪಾದಾಘಾತಾದ್ವ್ರಜತಿ ಸಹಸಾ ಸಂಶಯಪದಂ
ಪದಂ ವಿಷ್ಣೋರ್ಭ್ರಾಮ್ಯದ್ಭುಜಪರಿಘರುಗ್ಣಗ್ರಹಗಣಂ!
ಮುಹರ್ದ್ಯೌರ್ಧ್ವಸ್ತಾತ್ಯಂತ್ಯನಿಭೃತಜಟಾತಾಟಿತತಟಾ
ಜಗದ್ರಕ್ಷಾಯೈ ತ್ವಂ ನನು ವಹಸಿ ಭೌಮಾಂ ಚ ವಿಭುತಾಂ"
ನಮ್ಮ ಕೂಡಲಸಂಗಮದೇವ
ನಿಂದು ನಾಂಟ್ಯವನಾಡೆ!
೩೧೫.
ಇಬ್ಬರು ಮೂವರು ದೇವರೆಂದು
ಉಬ್ಬಿ ಮಾತನಾಡಬೇಡ.
ದೇವನೊಬ್ಬನೇ ಕಾಣಿರೋ.
ಇಬ್ಬರೆಂಬುದು ಹುಸಿ ನೋಡಾ.
ಕೂಡಲಸಂಗಮನಲ್ಲದಿಲ್ಲೆಂದಿತ್ತು ವೇದ.
೩೧೬.
ಬಿದಿರೆಲೆಯ ಮೆಲಿದಂತಲ್ಲದೆ,
ರಸ ಪಡೆಯಲು ಬಾರದು.
ನೀರ ಕಡೆದರೆ, ಕಡೆದಂತಲ್ಲದೆ,
ಬೆಣ್ಣೆಯ ಪಡೆಯಲು ಬಾರದು.
ಮಳಲ ಹೊಸೆದರೆ, ಹೊಸೆದಂತಲ್ಲದೆ,
ಸರವಿಯ ಪಡೆಯಲು ಬಾರದು.
ನಮ್ಮ ಕೂಡಲಸಂಗಮದೇವನಲ್ಲದೆ
ಅನ್ಯ ದೈವಕ್ಕೆರಗಿದರೆ,
ಪೊಳ್ಳ ಕುಟ್ಟಿ ಕೈ ಪೋಟು ಹೋದಂತಾಯಿತ್ತಯ್ಯ!
೩೧೭.
ಆಗಳೂ ಲೋಗರ ಮನೆಯ ಬಾಗಿಲ
ಕಾಯ್ದುಕೊಂಡಿಪ್ಪವು ಕೆಲವು ದೈವಂಗಳು,
ಹೋಗೆಂದರೆ ಹೋಗವು,
ನಾಯಿಂದ ಕರಕಷ್ಟ ಕೆಲವು ದೈವಂಗಳು!
ಲೋಗರ ಬೇಡಿಕೊಂಡುಂಬ ದೈವಂಗಳು
ತಾವೇನ ಕೊಡುವವು ಕೂಡಲಸಂಗಮದೇವ.
೩೧೮.
ಹಾಳುಮೊರಡಿಗಳಲ್ಲಿ, ಊರ ದಾರಿಗಳಲ್ಲಿ;
ಕೆರೆ-ಭಾವಿ-ಹೂಗಿಡಂ-ಮರಂಗಳಲ್ಲಿ,
ಗ್ರಾಮಮಧ್ಯಂಗಳಲ್ಲಿ,
ಚೌಪಥ-ಪಟ್ಟಣ ಪ್ರವೇಶದಲ್ಲಿ, ಹಿರಿಯಾಲದ ಮರದಲ್ಲಿ
ಮನೆಯ ಮಾಡಿ,
ಕರೆವೆಮ್ಮೆ, ಹಸುಗೂಸು, ಬಸುರಿ, ಬಾಣತಿ, ಕುಮಾರಿ
ಕೊಡುಗೂಸೆಂಬರ ಹಿಡಿದುಂಬ, ತಿರಿದುಂಬ
ಮಾರಯ್ಯ, ಬೀರಯ್ಯ,
ಖೇಚರ ಗಾವಿಲ, ಅಂತರಬೆಂತರ,
ಕಾಳಯ್ಯ, ಮಾರಯ್ಯ, ಮಾಳಯ್ಯ, ಕೇತಯ್ಯಗಳೆಂಬ
ನೂರು ಮಡಕೆಗೆ ನಮ್ಮ ಕೂಡಲಸಂಗಮದೇವ
ಶರಣೆಂಬುದೊಂದು ದಡಿ ಸಾಲದೆ ?
೩೧೯.
ಅರಗು ತಿಂದರೆ ಕರಗುವ ದೈವವ,
ಉರಿಯ ಕಂಡರೆ ಮುರುಟುವ ದೈವವ,
ಎಂತು ಸರಿಯೆಂಬೆನಯ್ಯ!
ಅವಸರ ಬಂದರೆ ಮಾರುವ
ದೈವವನೆಂತು ಸರಿಯೆಂಬೆನಯ್ಯ!
ಅಂಜಿಕೆಯಾದರೆ ಹೂಳುವ
ದೈವವನೆಂತು ಸರಿಯೆಂಬೆನಯ್ಯ!
ಸಹಜಭಾವ ನಿಜೈಕ್ಯ
ಕೂಡಲಸಂಗಮದೇವನೊಬ್ಬನೇ ದೇವ.
೩೨೦.
ಮಾರಿಕವ್ವೆಯ ನೋಂತು ಕೊರಳಲ್ಲಿ ಕಟ್ಟಿಕೊಂಬರು.
ಸಾಲಬಟ್ಟರೆ ಮಾರಿಕೊಂಬರಯ್ಯ!
ಸಾಲಬಟ್ಟರೆ ಅವನೊತ್ತೆಯನಿಟ್ಟು ಕೊಂಡುಂಬರಯ್ಯ!
ಮಾರುವೋಗನೊತ್ತೆವೋಗ
ನಮ್ಮ ಕೂಡಲಸಂಗಮದೇವ.
೩೨೧.
ಮೊರನ ಗೋಟಿಗೆ ಬಪ್ಪ ಕಿರುಕುಳದೈವಕ್ಕೆ
ಕುರಿಯನಿಕ್ಕಿಹೆವೆಂದು ನಲಿನಲಿದಾಡುವರು.
ಕುರಿ ಸತ್ತು ಕಾವುದೆ ಹರ ಮುಳಿದವರ ?
ಕುರಿ ಬೇಡ, ಮರಿ ಬೇಡ
ಬರಿಯ ಪತ್ರೆಯ ತಂದು
ಮರೆಯದೇ ಪೂಜಿಸು ನಮ್ಮ ಕೂಡಲಸಂಗಮದೇವನ.
೩೨೨.
ಮಡಕೆ ದೈವ, ಮೊರ ದೈವ,
ಬೀದಿಯ ಕಲ್ಲು ದೈವ,
ಹಣಿಗೆ ದೈವ, ಬಿಲ್ಲ ನಾರಿ ದೈವ--ಕಾಣಿರೊ!
ಕೊಳಗ ದೈವ, ಗಿಣ್ಣಿಲು ದೈವ--ಕಾಣಿರೊ!
ದೈವ ದೈವವೆಂದು ಕಾಲಿಡಲಿಂಬಿಲ್ಲ!
ದೇವನೊಬ್ಬನೆ ಕೂಡಲಸಂಗಮದೇವ.
೩೨೩.
ಋಣ ತಪ್ಪಿದ ಹೆಂಡಿರಲ್ಲಿ,
ಗುಣ ತಪ್ಪಿದ ನಂಟರಲ್ಲಿ,
ಜೀವವಿಲ್ಲದ ದೇಹದಲ್ಲಿ ಫಲವೇನೋ ?
ಆಳ್ದನೊಲ್ಲದಾಳಿನಲ್ಲಿ,
ಸಿರಿತೊಲಗಿದರಸಿನಲ್ಲಿ
ವರವಿಲ್ಲದ ದೈವದಲ್ಲಿ ಫಲವೇನೋ ?
ಕಳಿದ ಹೂವಿನಲ್ಲಿ ಕಂಪನು,
ಉಳಿದ ಸೊಳೆಯಲ್ಲಿ ಪೆಂಪನು,
ಕೊಳೆಚೆನೀರಿನಲ್ಲಿ ಗುಣ್ಪನರಸುವಿರಿ!
ಮರುಳೆ, ವರಗುರು ವಿಶ್ವಕ್ಕೆಲ್ಲ
ಗಿರಿಜಾಮನೋವಲ್ಲಭ ಪರಮ ಕಾರುಣಿಕ
ನಮ್ಮ ಕೂಡಲಸಂಗಮದೇವ.
೩೨೪.
ಗುಡಿಯೊಳಗಿದ್ದು ಗುಡಿಯ ನೇಣ ಕೊಯ್ದರೆ
ಗುಡಿಯ ದಡಿ ಬಿದ್ದು ಹಲ್ಲು ಹೋಹುದು ನೋಡಾ!
ಪೊಡವಿಗೀಶ್ವರನ ಗರ್ಭವಾಸದೊಳಗಿದ್ದು
ನುಡಿವರು ಮತ್ತೊಂದು ದೈವ ಉಂಟೆಂದು!
ತುಡುಗುಣಿ ನಾಯ ಹಿಡಿತಂದು ಸಾಕಿದರೆ
ತನ್ನೊಡಯಂಗೆ ಬೊಗಳುವಂತೆ ಕಾಣಾ
ಕೂಡಲಸಂಗಮದೇವ.
೩೨೫.
ಮಾತಿನ ಮಾತಿಂಗೆ ನಿನ್ನ ಕೊಂದೆಹರೆಂದು
ಅಳು ಕಂಡಾ! ಎಲೆ ಹೋತೇ,
ವೇದವನೋದಿದವರ ಮುಂದೆ
ಅಳು, ಕಂಡಾ! ಎಲೆ ಹೋತೇ,
ಶಾಸ್ತ್ರವನೋದಿದವರ ಮುಂದೆ
ಅಳು, ಕಂಡಾ! ಎಲೆ ಹೋತೇ,
ನೀನತ್ತುದಕೆ ತಕ್ಕುದ ಮಾಡುವ ಕೂಡಲಸಂಗಮದೇವ.
೩೨೬.
ಹೊಲೆಯೊಳಗೆ ಹುಟ್ಟಿ ಕುಲವನರಸುವೆಯೆಲವೋ
ಮಾತಂಗಿಯ ಮಗ ನೀನು!
ಸತ್ತುದನೆಳೆವವನೆತ್ತಣ ಹೊಲೆಯ ?
ಹೊತ್ತು ತಂದು ನೀವು ಕೊಲುವಿರಿ!
ಶಾಸ್ತ್ರವೆಂಬುದು ಹೋತಿಂಗೆ ಮಾರಿ.
ವೇದವೆಂಬುದು ನಿಮಗೆ ತಿಳಿಯದು.
ನಮ್ಮ ಕೂಡಲಸಂಗನ ಶರಣರು
ಕರ್ಮವಿರಹಿತರು, ಶರಣಾಸನ್ನಹಿತರು,
ಅನುಪಮ ಚರಿತ್ರರು,
ಅವರಿಗೆ ತೋರಲು ಪ್ರತಿಯಿಲ್ಲವೋ.
೩೨೭.
ಇಟ್ಟಯ ಹಣ್ಣ ನರಿ ತಿಂದು
ಸೃಷ್ಟಿ ತಿರುಗಿತೆಂಬಂತೆ,
ಮಟ್ಟಿಯನಿಟ್ಟ ದ್ವಿಜರ ಮಾತದೇಕೆ ?
ಹಗಲುಗಾಣದ ಗೂಗೆ ಇರುಳಾಯಿತ್ತೆಂದರೆ
ಜಗಕ್ಕೆ ಯಿರುಳಪ್ಪುದೆ ಮರುಳೆ ?
ಹೋಮದ ನೆವದಿಂದ ಹೋತನ ಕೊಂದು ತಿಂಬ
ಅನಾಮಿಕರೊಡನಾಡಿ ಗೆಲುವುದೇನು
ಕೂಡಲಸಂಗಮದೇವ.
೩೨೮.
ನೀರ ಕಂಡಲ್ಲಿ ಮುಳುಗುವರಯ್ಯ!
ಮರನ ಕಂಡಲ್ಲಿ ಸುತ್ತುವರಯ್ಯ!
ಬತ್ತುವ ಜಲವನೊಣಗುವ ಮರನ
ಮೆಚ್ಚಿದವರು ನಿಮ್ಮನೆತ್ತ ಬಲ್ಲರು
ಕೂಡಲಸಂಗಮದೇವ.
೩೨೯.
ಕಣ್ಣಮುಚ್ಚಿ ಕನ್ನಡಿಯ ತೋರುವಂತೆ!
ಇರುಳು ಹಗಲಿನ ನಿದ್ರೆ ಸಾಲದೆ ?
ಬೆರಳನೆಣಿಸಿ ಪರಮಾರ್ಥವ ಹಡೆವುದು
ಚೋದ್ಯವಲ್ಲವೆ ಹೇಳಾ ?
ಮೂಗ ಮುಚ್ಚಿ ಮುಕ್ತಿಯ ಬಯಸುವ
ನಾಚಿಕೆಯಿಲ್ಲದವರ ನಾನೇನೆಂಬೆ ಕೂಡಲಸಂಗಮದೇವ.
೩೩೦.
ನಿಮ್ಮನರಿಯದ ಕಾರಣ ಕೈಯಲ್ಲಿ ಹುಲ್ಲು.
ನಿಮಗೆರಗದ ಕಾರಣ ಕೊರಳಲ್ಲಿ ನೇಣು.
ಹಿಂಡಲೇಕೋ, ತೊಳೆಯಲೇಕೊ ?
ಮುಳುಮುಳುಗಿ ಮೂಗ ಹಿಡಿಯಲೇಕೋ ?
ಕೂಡಲಸಂಗನ ಶರಣರಲ್ಲಿ
ಡೋಹರಕಕ್ಕಯ್ಯನಾವ ತೊರೆಯಲ್ಲಿ ಮಿಂದ ?
೩೩೧.
ವ್ಯಾಸ ಬೋಯಿತಿಯ ಮಗ.
ಮಾರ್ಕಂಡೇಯ ಮಾತಂಗಿಯ ಮಗ.
ಮಂಡೋದರಿ ಕಪ್ಪೆಯ ಮಗಳು.
ಕುಲವನರಸದಿರಿ ಭೋ!
ಕುಲದಿಂದ ಮುನ್ನೇನಾದಿರಿ ಭೋ!
ಸಾಕ್ಷಾತ್ ಅಗಸ್ತ್ಯ ಕಬ್ಬಿಲ.
ದೂರ್ವಾಸ ಮಚ್ಚಿಗ.
ಕಶ್ಯಪ ಕಮ್ಮಾರ.
ಕೌಂಡಿನ್ಯನೆಂಬ ಋಷಿ
ಮೂರುಲೋಕವರಿಯೆ ನಾವಿದ ಕಾಣಿ ಭೋ!
ನಮ್ಮ ಕೂಡಲಸಂಗನ ವಚನವಿಂತೆಂದುದು-
"ಶ್ವಪಚೋಪಿಯಾದರೇನು ಶೀವಭಕ್ತನೇ ಕುಲಜಂ" ಭೋ!
೩೩೨.
ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ.
ಜಲಬಿಂದುವಿನ ವ್ಯವಹಾರವೊಂದೇ.
ಆಶೆಯಾಮಿಷ ಹರ್ಷರೋಷ ವಿಷಯಾದಿಗಳೆಲ್ಲವೊಂದೇ.
ಏನನೋದಿ ಏನ ಕೇಳಿ ಏನು ಫಲ ?!
ಕುಲಜನೆಂಬುದಕ್ಕೆ ಆವುದು ದೃಷ್ಟ ?
"ಸಪ್ತಧಾತುಸಮಂ ಪಿಂಡಂ
ಸಮಯೋನಿಸಮುದ್ಭವಂ |
ಆತ್ಮಾಜೀವಸ್ಸಮಸ್ತಸ್ಮಾತ್
ವರ್ಣಾನಾಂ ಕಿಂ ಪ್ರಯೋಜನಂ ?" ||
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ,
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ.
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ ?
ಇದು ಕಾರಣ, ಕೂಡಲಸಂಗಮದೇವ,
ಲಿಂಗಸ್ಥಲವನರಿದವನೇ ಕುಲಜನು!
೩೩೩.
ಕೊಲುವವನೇ ಮಾದಿಗ!
ಹೊಲಸ ತಿಂಬವನೇ ಹೊಲೆಯ!
ಕುಲವೇನೋ ? ಆವದಿರ ಕುಲವೇನೋ ?
ಸಕಲ ಜೀವಾತ್ಮರಿಗೆ ಲೇಸನೇ ಬಯಸುವ
ನಮ್ಮ ಕೂಡಲಸಂಗನ ಶರಣರೇ ಕುಲಜರು!
೩೩೪.
ಹೊನ್ನ ನೇಗಿಲಲುತ್ತು
ಎಕ್ಕೆಯ ಬೀಜವ ಬಿತ್ತುವರೆ ?
ಕರ್ಪೂರದ ಮರನ ಕಡಿದು
ಕಳ್ಳಿಗೆ ಬೇಲಿಯನಿಕ್ಕುವರೆ ?
ಶ್ರೀಗಂಧದ ಮರನ ಕಡಿದು
ಬೇವಿಂಗೆ ಅಡೆಯನಿಕ್ಕುವರೆ ?
ನಮ್ಮ ಕೂಡಲಸಂಗನ
ಶರಣರಿಗಲ್ಲದೆ ಬೇರೆ ಇಚ್ಛಾಭೋಜನವಿಕ್ಕಿದರೆ
ಕಿಚ್ಚಿನೊಳಗುಚ್ಚೆಯ ಹೊಯ್ದು
ಹವಿಯ ಬೇಳ್ದಂತಾಯಿತ್ತು.
೩೩೫.
ಕುರಿವಿಂಡು ಕಬ್ಬಿನ ಉಲಿವ ತೋಂಟವ ಹೊಕ್ಕು
ತೆರನನರಿಯದೇ ತನಿರಸದ,
ಹೊರಗಣೆಲೆಯನೇ ಮೇದುವು!
ನಿಮ್ಮನರಿವ ಮದಕರಿಯಲ್ಲದೆ
ಕುರಿಯೇನ ಬಲ್ಲುದೋ ಕೂಡಲಸಂಗಮದೇವ ?
೩೩೬.
ದೇವ, ನಿಮ್ಮ ಪೂಜಿಸಿ
ಚೆನ್ನನ ಕುಲ ಚೆನ್ನಾಯಿತ್ತು!
ದೇವ, ನಿಮ್ಮ ಪೂಜಿಸಿ
ದಾಸನ ಕುಲ ದೇಸಿವಡೆಯಿತ್ತು!
ದೇವ, ನಿಮ್ಮಡಿಗೆರಗಿ
ಮಡಿವಾಳ ಮಾಚಯ್ಯ ನಿಮ್ಮಡಿಯಾದ!
ನೀನೊಲಿದ ಕುಲಕ್ಕೆ
ನೀನೊಲಿದ ಹೊಲೆಗೆ ಮೇರೆಯುಂಟೇ, ದೇವ ?
ಶ್ವಪಚೋಪಿ ಮುನಿಶ್ರೇಷ್ಠಃ
ಯಸ್ತು ಲಿಂಗಾರ್ಚನೇ ರತಃ |
ಲಿಂಗಾರ್ಚನವಿಹೀನೋಪಿ
ಬ್ರಾಹ್ಮಣಃ ಶ್ವಪಚಾಧಮಃ ||
ಎಂದುದಾಗಿ ಜಾತಿ-ವಿಜಾತಿಯಾದರೇನು
ಅಜಾತಂಗೆ ಶರಣೆಂದೆನ್ನದವನು ?
ಆತನೇ ಹೊಲೆಯ ಕೂಡಲಸಂಗಮದೇವ.
೩೩೭.
ಭಕ್ತಿಹೀನನ ದಾಸೋಹವ
ಸದ್ಭಕ್ತರು ಸವಿಯರು!
ಬೇವಿನ ಹಣ್ಣು ಕಾಗೆಗೆ ಇನಿದಲ್ಲದೆ
ಕೋಗಿಲೆಗೆ ಮೆಲಲಾಗದು!
ಲಿಂಗಸಂಬಂಧವಿಲ್ಲದವರ ನುಡಿ
ಕೂಡಲಸಂಗನ ಶರಣರಿಗೆ ಸಮನಿಸದು.
೩೩೮.
ಬಂದು ಬಲ್ಲಹ ಬಿಡಲು
ಹೊಲಗೇರಿಯೆಂಬ ಹೆಸರೊಳವೇ ಅಯ್ಯ!
ಲಿಂಗವಿದ್ದವರ ಮನೆ
ಕೈಲಾಸವೆಂದು ನಂಬಬೇಕು!
ಇದಕ್ಕೆ ಪ್ರಮಾಣ:-
ಚಂಡಾಲವಾಟಿಕಾಯಾಂ ವಾ
ಶಿವಭಕ್ತಃಸ್ಸ್ಥಿತೋ ಯದಿ |
ತತ್ ಶ್ರೇಣಿಶ್ಯಿವಲೋಕಸ್ಯಾತ್
ತದ್ ಗೃಹಂ ಶಿವಮಂದಿರಂ ||
ಲೋಕದ ಡಂಭಕರ ಮಾತು ಬೇಡ.
ಕೂಡಲಸಂಗನಿದ್ದುದೇ ಕೈಲಾಸ!
೩೩೯.
ದೇವನೊಬ್ಬ ನಾಮ ಹಲವು.
ಪರಮ ಪತಿವ್ರತೆಗೆ ಗಂಡನೊಬ್ಬ.
ಮತ್ತೊಂದಕ್ಕೆರಗಿದರೆ
ಕಿವಿ ಮೂಗ ಕೊಯ್ವನು.
ಹಲವು ದೈವದ ಎಂಜಲ
ತಿಂಬವರನೇನೆಂಬೆ ಕೂಡಲಸಂಗಮದೇವ.
೩೪೦.
ಎಲವೋ! ಎಲವೋ!
ಪಾಪಕರ್ಮವ ಮಾಡಿದವನೇ
ಎಲವೊ! ಎಲವೊ!
ಬ್ರಹ್ಮೇತಿಯ ಮಾಡಿದವನೇ
ಒಮ್ಮೆ ಶರಣೆನ್ನೆಲವೋ!
ಒಮ್ಮೆ ಶರಣೆಂದರೆ
ಪಾಪಕರ್ಮ ಓಡುವವು.
ಸರ್ವಪ್ರಾಯಶ್ಚಿತ್ತಕ್ಕೆ
ಹೊನ್ನಪರ್ವತಂಗಳೆಯ್ದವು!
ಓರ್ವಂಗೆ ಶರಣೆನ್ನು ನಮ್ಮ ಕೂಡಲಸಂಗಮದೇವಂಗೆ!
೩೪೧.
ಅರಸು-ವಿಚಾರ, ಸಿರಿಯು-ಶೃಂಗಾರ
ಸ್ಥಿರವಲ್ಲ ಮಾನವ!
ಕೆಟ್ಟಿತ್ತು ಕಲ್ಯಾಣ ಹಾಳಾಯಿತ್ತು ನೋಡಾ!
ಒಬ್ಬ ಜಂಗಮನಭಿಮಾನದಿಂದ
ಚಾಳುಕ್ಯರಾಯನಾಳ್ವಿಕೆ ತೆಗೆಯಿತ್ತು
ಸಂದಿತ್ತು, ಕೂಡಲಸಂಗಮದೇವ,
ನಿನ್ನ ಕವಳಿಗೆಗೆ.
೩೪೨.
ಬೇವಿನ ಬೀಜವ ಬಿತ್ತಿ,
ಬೆಲ್ಲದ ಕಟ್ಟೆಯ ಕಟ್ಟಿ,
ಆಕಳ ಹಾಲನೆರೆದು,
ಜೇನುತುಪ್ಪವ ಹೊಯ್ದರೆ
ಸಿಹಿಯಾಗಬಲ್ಲುದೆ ಕಹಿಯಹುದಲ್ಲದೆ ?
ಶಿವಭಕ್ತರಲ್ಲದವರ ಕೂಡೆ
ನುಡಿಯಲಾಗದು ಕೂಡಲಸಂಗಮದೇವ.
೩೪೩.
ಮಾರಿ ಮಸಣಿ ಎಂಬವು ಬೇರಿಲ್ಲ ಕಾಣಿರೋ!
ಮಾರಿ ಎಂಬುದೇನು ?
ಕಂಗಳು ತಪ್ಪಿ ನೋಡಿದರೆ ಮಾರಿ!
ನಾಲಿಗೆ ತಪ್ಪಿ ನುಡಿದರೆ ಮಾರಿ!
ನಮ್ಮ ಕೂಡಲಸಂಗಯ್ಯನ ನೆನಹ ಮರೆದರೆ ಮಾರಿ!
೩೪೪.
ಆಯುಧವಿಕ್ಕಿದವಂಗೆ ವೀರದ ಮಾತೇಕೆ ?
ಲಿಂಗವು ಅಂತರಿಸಿದವಂಗೆ ಒಳುನುಡಿಯೇಕೆ ?
ಐದೆಯರ ಪೋಚಿ ಇಲ್ಲದವಳಿಗೆ
ಸೌಭಾಗ್ಯದ ಹೂವಿನ ಬಟ್ಟೇಕೆ ?
ಸತ್ಯನಲ್ಲದವಂಗೆ ನಿತ್ಯನೇಮವೇಕೆ ?
ಕರ್ತಾರ, ನಿನ್ನ ಒಲವಿಲ್ಲದವಂಗೆ
ಶಂಭುವಿನ ಬಂಧುಗಳೇಕೆ ?
ಕೂಡಲಸಂಗಮದೇವಯ್ಯ
ನೀವಿಲ್ಲದವಂಗೆ ಶಿವಾಚಾರದ ಮಾತೇಕೆ ?
೩೪೫.
ಸಿಂಗದ ನಡು ಮುರಿಯಲಾ ಸಿಂಗವೇಬಾತೆ!
ಸೊಂಡಿಲು ಮುರಿದರೆ ಆ ಗಜವೇಬಾತೆ!
ಸಂಗ್ರಾಮದಲ್ಲಿ ಧೀರನುಳಿಯೆ ಆ ಧೀರತ್ವವೇಬಾತೆ!
ಸಿಂಗಾರದ ಮೂಗು ಹೋದರಾ ಶೃಂಗಾರವೇಬಾತೆ!
ನಿಜತುಂಬಿದ ಭಕ್ತಿ ತುಳುಕಾಡದವರ ಸಂಗವೇಬಾತೆ!
ಕೂಡಲಸಂಗಮದೇವ.
೩೪೬.
ಗೀಜಗನ ಗೂಡು, ಕೋಡಗದಣಲ ಸಂಚ,
ಬಾದುಮನ ಮದುವೆ, ಬಾವಲನ ಬಿದ್ದಿನಂತೆ:
ಜೂಜುಗಾರನ ಮಾತು, ಬೀದಿಯ ಗುಂಡನ ಸೊಬಗು;
ಓಡಿನೊಳಗಗೆಯ ಹೊಯ್ದಂತೆ ಕಾಣಿರೇ;
ಶಿವನಾದಿಯಂತುವನರಿಯದವನ ಭಕ್ತಿ
ಸುಖಶೋಧನೆಗೆ ಮದ್ದ ಕೊಂಡಂತೆ
ಕೂಡಲಸಂಗಮದೇವ.
೩೪೭.
ತೊತ್ತಿನ ಕೊರಳಲ್ಲಿ
ಹೊಂಬಿತ್ತಾಳಿಯ ಸಿಂಗಾರವ ಮಾಡಿದಂತೆ!
ಕುಚಿತ್ತರ ಸಂಗ ಸುಸಂಗಿಗೆ ಸಂಗವಲ್ಲ.
ಗುರುಗುಂಜಿ ಮಾಣಿಕಕ್ಕೆ ಸರಿಯಪ್ಪುದೆ ?
ಕೂಡಲಸಂಗಮದೇವ.
೩೪೮.
ಆನೆಯನೇರಿಕೊಂಡು ಹೋದಿರಿ ನೀವು,
ಕುದುರೆಯನೇರಿಕೊಂಡು ಹೋದಿರಿ ನೀವು.
ಕುಂಕುಮ-ಕಸ್ತುರಿಯ ಪೂಸಿಕೊಂಡು ಹೋದಿರಿ ಅಣ್ಣಾ;
ಸತ್ಯದ ನಿಲುವನರಿಯದೆ ಹೋದಿರಲ್ಲಾ!
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ
ಅಹಂಕಾರವೆಂಬ ಮದಗಜವನೇರಿ
ವಿಧಿಗೆ ಗುರಿಯಾಗಿ ನೀವು ಕೆಟ್ಟು ಹೋದಿರಲ್ಲಾ!
ನಮ್ಮ ಕೂಡಲಸಂಗಮದೇವನನರಿಯದೆ
ನರಕಕ್ಕೆ ಭಾಜನವಾದಿರಲ್ಲಾ!
೩೪೯.
ಇಂದ್ರಿಯನಿಗ್ರಹವ ಮಾಡಿದರೆ
ಹೊಂದುವವು ದೋಷಂಗಳು.
ಮುಂದೆ ಬಂದು ಕಾಡುವವು ಪಂಚೇಂದ್ರಿಯಂಗಳು.
ಸತಿಪತಿರತಿಸುಖವ ಬಿಟ್ಟರೇ ಸಿರಿಯಾಳ-ಚೆಂಗಳೆಯರು ?
ಸತಿಪತಿರತಿಸುಖ ಭೋಗೋಪಭೋಗವಿಳಾಸವ
ಬಿಟ್ಟರೇ ಸಿಂಧುಬಲ್ಲಾಳನವರು ?
ನಿಮ್ಮ ಮುಟ್ಟಿ, ಪರಧನ ಪರಸತಿಯರಿಗೆಳಸಿದರೆ
ನಿಮ್ಮ ಚರಣಕ್ಕೆ ದೂರ ಕೂಡಲಸಂಗಮದೇವ.
೩೫೦.
ನೋಡಲಾಗದು, ನುಡಿಸಲಾಗದು ಪರಸ್ತ್ರೀಯರ;
ಬೇಡ ಕಾಣಿರೋ!
ತಗರ ಬೆನ್ನಲಿ ಹರಿವ ಸೊಣಗನಂತೆ;
ಬೇಡ ಕಾಣಿರೋ!
ಒಂದಾಸೆಗೆ ಸಾಸಿರ ವರುಷ
ನರಕದಲದ್ದುವ ಕೂಡಲಸಂಗಮದೇವ.
೩೫೧.
ತೊರೆಯ ಮೀವ ಅಣ್ಣಗಳಿರಾ,
ತೊರೆಯ ಮೀವ ಸ್ವಾಮಿಗಳಿರಾ,
ತೊರೆಯಿಂ ಭೋ, ತೊರೆಯಿಂ ಭೋ!
ಪರನಾರಿಯ ಸಂಗವ ತೊರೆಯಿಂ ಭೋ!
ಪರಧನದಾಮಿಷವ ತೊರೆಯಿಂ ಭೋ!
ಇವ ತೊರೆಯದೇ, ಹೋಗಿ ತೊರೆಯ ಮಿಂದರೆ
ಬರುದೊರೆ ಹೋಹುದು ಕೂಡಲಸಂಗಮದೇವ.
೩೫೨.
ಹುತ್ತವ ಕಂಡಲ್ಲಿ ಹಾವಾಗಿ,
ನೀರ ಕಂಡಲ್ಲಿ ಹೊಳೆಯಾದವನ ಮೆಚ್ಚುವನೆ ?
ಬಾರದ ಭವಕ್ಕೆ ಬರಿಸುವನಲ್ಲದೆ ಮೆಚ್ಚುವನೆ ?
ಅಘೋರ ನರಕವನುಣಿಸುವನಲ್ಲದೆ ಮೆಚ್ಚುವನೆ ?
ಅಟಮಟದ ಭಕ್ತರ ಕಂಡರೆ
ಕೋಟಲೆಗೊಳಿಸುವನು ಕೂಡಲಸಂಗಯ್ಯನು.
೩೫೩.
ಕುಳ್ಳಿದ್ದು ಲಿಂಗವ ಪೂಜಿಸಿ
ಅಲ್ಲದಾಟವನಾಡುವರಯ್ಯ;
ಬೆಳ್ಳೆತ್ತಿನ ಮರೆಯಲ್ಲಿದ್ದು
ಹುಲ್ಲೆಗೆ ಅಂಬ ತೊಡುವಂತೆ!
ಕಳ್ಳ-ಹಾದರಿಗರ ಕೈಯಲು ಪೂಜೆಯ ಕೊಳ್ಳ
ನಮ್ಮ ಕೂಡಲಸಂಗಮದೇವ.
೩೫೪.
ತನುಶುಚಿಯಿಲ್ಲದವನ ದೇಹಾರವೇಕೆ ?
ದೇವರು ಕೊಡನೆಂಬ ಭ್ರಾಂತೇಕೆ ?
ಮನಕ್ಕೆ ಮನವೇ ಸಾಕ್ಷಿ ಸಾಲದೆ ಲಿಂಗ ತಂದೆ ?!
ಹೇಂಗೆ ಮನ ಹಾಂಗೆ ಘನ!
ತಪ್ಪದು ಕೂಡಲಸಂಗಮದೇವ.
೩೫೫.
ನೂರನೋದಿ ನೂರ ಕೇಳಿದರೇನು ?
ಆಶೆ ಹರಿಯದು, ರೋಷ ಬಿಡದು!
ಮಜ್ಜನಕ್ಕೆರೆದು ಫಲವೇನು ?
ಮಾತಿನಂತೆ ಮನವಿಲ್ಲದ
ಜಾತಿ-ಡೊಂಬರ ನೋಡಿ ನಗುವನಯ್ಯ
ಕೂಡಲಸಂಗಮದೇವರು.
೩೫೬.
ಗುರೂಪದೇಶ ಮಂತ್ರವೈದ್ಯ!
ಜಂಗಮೋಪದೇಶ ಶಸ್ತ್ರವೈದ್ಯ ನೋಡಾ!
ಭವರೋಗವ ಕಳೆವ ಪರಿಯ ನೋಡಾ!
ಕೂಡಲಸಂಗನ ಶರಣರ ಅನುಭಾವ
ಮಡಿವಾಳನ ಕಾಯಕದಂತೆ!
೩೫೭.
ಶ್ವಪಚನಾದರೇನು ಲಿಂಗಭಕ್ತನೇ ಕುಲಜನು.
ನಂಬಿ ನಂಬದಿದ್ದರೆ, ಸಂದೇಹಿ ನೋಡಾ!
ಕಟ್ಟಿದರೇನು, ಮುಟ್ಟಿದರೇನು,
ಪೂಸಿದರೇನು ಮನಮುಟ್ಟದನ್ನಕ ?
ಭಾವಶುದ್ಧವಿಲ್ಲದವಂಗೆ ಭಕ್ತಿ ನೆಲೆಗೊಳ್ಳದು
ಕೂಡಲಸಂಗಮದೇವನೊಲಿದವಂಗಲ್ಲದೆ.
೩೫೮.
ಅರಗಿನ ಪುತ್ಧಳಿಗೆ ಉರಿಯ ನಾಲಗೆ ಹೊಯ್ದು
ಮಾತಾಡುವ ಸರಸ ಬೇಡ!
ಬೆಣ್ಣೆಯ ಬೆನಕಂಗೆ ಕೆಂಡದುಂಡಲಿಗೆಯ ಮಾಡಿ
ಚಲ್ಲವಾಡಿದರೆ ಹಲ್ಲು ಹೋಹುದು!
ಕೂಡಲಸಂಗನ ಶರಣರೊಡನೆ ಸರಸವಾಡಿದರೆ
ಅದು ವಿರಸ ಕಾಣಿರಣ್ಣ.
೩೫೯.
ಹಾವಿನ ಹೆಡೆಗಳ ಕೊಂಡು
ಕೆನ್ನೆಯ ತುರಿಸಿಕೊಂಬಂತೆ,
ಉರಿವ ಕೊಳ್ಳಿಯ ಕೊಂಡು
ಮಂಡೆಯ ಸಿಕ್ಕ ಬಿಡಿಸುವಂತೆ,
ಹುಲಿಯ ಮೀಸೆಯ ಹಿಡಿದುಕೊಂಡು
ಒಲೆದುಯ್ಯಲನಾಡುವಂತೆ,
ಕೂಡಲಸಂಗನ ಶರಣರೊಡನೆ ಮರೆದು ಸರಸವಾಡಿದರೆ
ಸುಣ್ಣಕಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ!
೩೬೦.
ಉರಿವ ಕೊಳ್ಳಿಯ ಮಂಡೆಯಲಿಕ್ಕಿದಡೆ
ಉರಿವುದು ಮಾಣ್ಬುದೇ ?
ಕಲ್ಲ ಗುಗ್ಗುರಿಯ ಮೆಲಿದರೆ
ಹಲ್ಲು ಹೋಹುದು ಮಾಣ್ಬುದೇ ?
ಶರಣರೊಡನೆ ಸರಸವಾಡಿದರೆ
ನರಕ ತಪ್ಪದು ಕಾಣಾ ಕೂಡಲಸಂಗಮದೇವ.
೩೬೧.
ಕೋಣನ ಹೇರಿಗೆ ಕುನ್ನಿ ಬಸುಗುತ್ತಬಡುವಂತೆ
ತಾವು ನಂಬರು, ನಂಬುವರನು ನಂಬಲೀಯರು!
ತಾವು ಮಾಡರು, ಮಾಡುವರನು ಮಾಡಲೀಯರು!
ಮಾಡುವ ಭಕ್ತರ ಕಂಡು ಸೈರಿಸಲಾರದವರ
ಕೂಗಿಡೆ ಕೂಗಿಡೆ ನರಕದಲ್ಲಿಕ್ಕುವ ಕೂಡಲಸಂಗಮದೇವ.
೩೬೨.
ಚೇಳಿಂಗೆ ಬಸುರಾಯಿತ್ತೆ ಕಡೆ!
ಬಾಳೆಗೆ ಫಲವಾಯಿತ್ತೆ ಕಡೆ ನೋಡಾ !
ರಣರಂಗದಲ್ಲಿ ಕಾದುವ ಓಲೆಯಕಾರಂಗೆ ಓಸರಿಸಿತ್ತೆ ಕಡೆ!
ಮಾಡುವ ಭಕ್ತಂಗೆ ಮನಹೀನವಾದರೆ
ಅದೇ ಕಡೆ ಕೂಡಲಸಂಗಮದೇವ.
೩೬೩.
ಹುಲಿಯ ಹಾಲು ಹುಲಿಗಲ್ಲದೆ
ಹೊಲದ ಹುಲ್ಲೆಗುಣಬಾರದು
ಕಲಿಯ ಕಾಲ ತೊಡರು ಛಲದಾಳಿಂಗಲ್ಲದೆ ಇಕ್ಕಬಾರದು.
ಅಳಿಮನದಾಸೆಯವರ ಮೂಗ ಹಲುದೋರ ಕೊಯ್ವ
ಕೂಡಲಸಂಗಮದೇವ.
೩೬೪.
ಅಲಗಲಗು ಮೋಹಿದಲ್ಲದೆ
ಕಲಿತನವ ಕಾಣಬಾರದು.
ನುಡಿವ ನುಡಿ ಜಾರಿದರೆ
ಮನಕ್ಕೆ ಮನ ನಾಚಬೇಕು.
ಶಬ್ದಗಟ್ಟಿಯತನದಲ್ಲಿ
ಎಂತಪ್ಪುದಯ್ಯ ಭಕ್ತಿ ?
ಪಾಪಿಯ ಕೂಸನೆತ್ತಿದಂತೆ-
ಕೂಡಲಸಂಗಮದೇವರ ಭಕ್ತಿ
ಅಳಿಮನದವರಿಗೆ ಅಳವಡದಯ್ಯ!
೩೬೫.
ಹರಬೀಜವಾದರೆ ಹಂದೆ ತಾನಪ್ಪನೇ ?
ಒರೆಯ ಬಿಚ್ಚಿ ಇರಿಯದವರ ಲೋಕ ಮೆಚ್ಚುವುದೆ ?
ಚಲ್ಲಣವುಟ್ಟು ಕೈಯ ಪಟ್ಟೆಹವಿಡಿದು
ಗರುಡಿಯ ಕಟ್ಟಿ ಶ್ರಮವ ಮಾಡುವ-
ಅಂತೆ ತನ್ನ ತಪ್ಪಿಸಿಕೊಂಡರೆ ಶಿವ ಮೆಚ್ಚುವನೆ ?
ಅರಿಯದವರಿಗೆ ಒಳ್ಳೆ ಹೆಡೆಯೆತ್ತಿ ಆಡುವಂತೆ
ಬೊಳ್ಳೆಗನ ಭಕ್ತಿ ಕೂಡಲಸಂಗಮದೇವ.
೩೬೬.
ಮೊನೆ ತಪ್ಪಿದ ಬಳಿಕ,
ಅಲಗೇನ ಮಾಡುವುದು ?
ವಿಷ ತಪ್ಪಿದ ಬಳಿಕ,
ಹಾವೇನ ಮಾಡುವುದು ?
ಭಾಷೆ ತಪ್ಪಿದ ಬಳಿಕ
ದೇವನೇ ಬಲ್ಲಿದ;
ಭಕ್ತನೇನ ಮಾಡುವನಯ್ಯ ?
ಭಾಷೆ ತಪ್ಪಿದ ಬಳಿಕ
ಪ್ರಾಣದಾಸೆಯನು ಹಾರಿದರೆ
ಮೀಸಲನು ಸೊಣಗ ಮುಟ್ಟಿದಂತೆ
ಕೂಡಲಸಂಗಮದೇವ.
೩೬೭.
ವೀರ, ವ್ರತಿ, ಭಕ್ತನೆಂದು ಹೊಗಳಿಕೊಂಬಿರಿ!
ಹೇಳಿರಯ್ಯ.
ವೀರನಾದರೆ ವೈರಿಗಳು ಮೆಚ್ಚಬೇಕು!
ವ್ರತಿಯಾದರೆ ಅಂಗನೆಯರು ಮೆಚ್ಚಬೇಕು!
ಭಕ್ತನಾದರೆ ಜಂಗಮ ಮೆಚ್ಚಬೇಕು.
ಈ ನುಡಿಯೊಳಗೆ ತನ್ನ ಬಗೆಯಿರೆ
ಬೇಡಿದ ಪದವಿಯನೀವ ಕೂಡಲಸಂಗಮದೇವ.
೩೬೮.
ಕಟ್ಟಿ ಬಿಡುವನೇ ಶರಣನು ?
ಬಿಟ್ಟು ಹಿಡಿವನೇ ಶರಣನು ?
ನಡೆದು ತಪ್ಪುವನೇ ಶರಣನು ?
ನುಡಿದು ಹುಸಿವನೇ ಶರಣನು ?
ಸಜ್ಜನಿಕೆ ತಪ್ಪಿದರೆ
ಕೂಡಲಸಂಗಯ್ಯ ಮೂಗ ಹಲುದೋರ ಕೊಯ್ವ!
೩೬೯.
ಒಡನೆ ಹುಟ್ಟಿದುದಲ್ಲ;
ಒಡನೆ ಬೆಳೆದುದಲ್ಲ;
ಎಡೆಯಲಾದೊಂದುಡಿಗೆಯನುಟ್ಟು ಸಡಿಲಿದರೆ
ಲಜ್ಜೆ-ನಾಚಿಕೆಯಾಯಿತ್ತೆಂಬ ನುಡಿ ದಿಟವಾಯಿತ್ತು ಲೌಕಿಕದಲ್ಲಿ
ಪಡೆದ ಗುರುಕರುಣದೊಡನೆ ಹುಟ್ಟಿದ
ನೇಮವನು ಬಿಡದಿರೆಲವೋ!
ಬಿಟ್ಟರೆ ಕಷ್ಟ!
ಕೂಡಲಸಂಗಮದೇವನು
ಅಡಸಿ ಕೆಡಹುವ ನಾಯಕನರಕದಲ್ಲಿ.
೩೭೦.
ಛಲಬೇಕು ಶರಣಂಗೆ ಪರಧನವನೊಲ್ಲೆಂಬ!
ಛಲಬೇಕು ಶರಣಂಗೆ ಪರಸತಿಯನೊಲ್ಲೆಂಬ!
ಛಲಬೇಕು ಶರಣಂಗೆ ಪರದೈವವನೊಲ್ಲೆಂಬ
ಛಲಬೇಕು ಶರಣಂಗೆ ಲಿಂಗಜಂಗಮವೊಂದೆಂಬ!
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ!
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ.
೩೭೧.
ಜಂಬೂದ್ವೀಪನವಖಂಡಪೃಥ್ವಿಯೊಳಗೆ
ಕೇಳಿರಯ್ಯ ಎರಡಾಳಿನ ಭಾಷೆಯ!
ಕೊಲುವೆನೆಂಬ ಭಾಷೆ ದೇವನದು,
ಗೆಲುವೆನೆಂಬ ಭಾಷೆ ಭಕ್ತನದು.
ಸತ್ಯವೆಂಬ ಕೂರಲಗನೆ ಕಳೆದುಕೊಂಡು
ಸದ್ಭಕ್ತರು ಗೆದ್ದರು ಕಾಣಾ ಕೂಡಲಸಂಗಮದೇವ.
೩೭೨.
ಶಿವಭಕ್ತನಾಗಿ ತನ್ನ ಹಿಡಿದಹೆನೆಂದು ಹೋದರೆ
ನುಗ್ಗುಮಾಡುವ, ನುಸಿಯ ಮಾಡುವ!
ಮಣ್ಣುಮಾಡುವ, ಮಸಿಯ ಮಾಡುವ!
ಕೂಡಲಸಂಗಮದೇವರ ನೆರೆನಂಬಿದನಾದರೆ
ಕಡೆಗೆ ತನ್ನಂತೆ ಮಾಡುವ.
೩೭೩.
ಅರೆವನಯ್ಯ ಸಣ್ಣವಹನ್ನಕ
ಒರೆವನಯ್ಯ ಬಣ್ಣಗಾಬನ್ನಕ
ಅರೆದರೆ ಸುಣ್ಣವಾಗಿ,
ಒರೆದರೆ ಬಣ್ಣವಾದರೆ
ಕೂಡಲಸಂಗಮದೇವನೊಲಿದು ಸಲಹುವನು.
೩೭೪.
ಎಡದ ಪಾದದಲೊದ್ದರೆ ಬಲದ ಪಾದವ ಹಿಡಿವೆ!
ಬಲದ ಪಾದದಲೊದ್ದರೆ ಎಡದ ಪಾದವ ಹಿಡಿವೆ!
ತ್ರಾಹಿ, ತ್ರಾಹಿ! ತಪ್ಪೆನ್ನದು, ಕ್ಷಮೆ ನಿನ್ನದು!
ಕೂಡಲಸಂಗಮದೇವ ನಿಮ್ಮ ಕರುಣದ ಕಂದ ನಾನು!
೩೭೫.
ಅಂಜಿದರಾಗದು, ಅಳುಕಿದರಾಗದು!
ವಜ್ರಪಂಜರದೊಳಗಿದ್ದರಾಗದು!
ತಪ್ಪದೆಲವೋ ಲಲಾಟಲಿಖಿತ!
ಕಕ್ಕುಲತೆಬಟ್ಟರಾಗದು ನೋಡಾ!
ಧೃತಿಗೆಟ್ಟು ಮನ ಧಾತುಗೆಟ್ಟರೆ
ಅಪ್ಪುದು ತಪ್ಪದು ಕೂಡಲಸಂಗಮದೇವ.
೩೭೬.
ಆಯುಷ್ಯ ತೀರಿದಲ್ಲದೆ ಮರಣವಿಲ್ಲ.
ಭಾಷೆ ತೀರಿದಲ್ಲದೆ ದಾರಿದ್ರ್ಯವಿಲ್ಲ.
ಅಂಜಲದೇಕೋ ಲೋಕವಿಗರ್ಹಣೆಗೆ ?
ಅಂಜಲದೇಕೋ ಕೂಡಲಸಂಗಮದೇವ ನಿಮ್ಮಾಳಾಗಿ ?
೩೭೭.
ಮನಕ್ಕೆ ಮನ ಒಂದಾಗಿ, ಧನಕ್ಕೆ ಧನ ಒಂದಾಗಿ;
ನಚ್ಚಿದ ಮಚ್ಚು ಅಚ್ಚೊತ್ತಿದಂತಿರಬೇಕು.
ಪ್ರಾಣಕ್ಕೆ ಪ್ರಾಣ ಒಂದಾಗಿ, ಶುಭಸೂಚನೆ ಒಂದಾಗಿರದ
ನಚ್ಚು ಮಚ್ಚು ಪಾರವೈದುವುದೆ ?
ಶಿರ ಹರಿದರೇನು ? ಕರುಳು ಕುಪ್ಪಳಿಸಿದರೇನು ?
ಇಂತಪ್ಪ ಸಮಸ್ತ ವಸ್ತುವೆಲ್ಲ ಹೋದರೇನು ?
ಚಿತ್ತ-ಮನ-ಬುದ್ಧಿಯೊಂದಾದ ಮಚ್ಚು
ಬಿಚ್ಚಿ ಬೇರಾಗದಿದ್ದರೆ
ಮೆಚ್ಚುವ ನಮ್ಮ ಕೂಡಲಸಂಗಮದೇವ.
೩೭೮.
ಎನಿಸೆನಿಸೆಂದಡೆಯೂ ನಾ ಧೃತಿಗೆಡೆನಯ್ಯ ?
ಎಲುದೋರಿದಡೆಯೂ, ನರ ಹರಿದಡೆಯೂ,
ಕರಳು ಕುಪ್ಪಳಿಸಿದಡೆಯೂ ನಾ ಧೃತಿಗೆಡೆನಯ್ಯ ?
ಸಿರ ಹರಿದು ಅಟ್ಟೆ ನೆಲಕ್ಕೆ ಬಿದ್ದಡೆಯೂ
ನಾಲಗೆ ಕೂಡಲಸಂಗ ಶರಣೆನುತಿಪ್ಪುದಯ್ಯ ?
೩೭೯.
ಒಣಗಿಸಿಯೆನ್ನ ಘಣಘಣಲನೆ ಮಾಡಿದಡೆಯೂ
ಹರಣವುಳ್ಳನ್ನಕ ನಿಮ್ಮ ಚರಣವ ನೆನೆವುದ ಮಾಣೆ, ಮಾಣೆ!
ಶರಣೆಂಬುದ ಮಾಣೆ, ಮಾಣೆ!
ಕೂಡಲಸಂಗಮದೇವಯ್ಯ
ಎನ್ನ ಹೆಣನ ಮೇಲೆ ಕಂಚಿಟ್ಟುಂಡೊಡೆಯು ಮಾಣೆ, ಮಾಣೆ!
೩೮೦.
ಜಾಗ್ರತ್-ಸ್ವಪ್ನ-ಸುಷುಪ್ತಿಯಲ್ಲಿ
ಮತ್ತೊಂದ ನೆನೆದಡೆ ತಲೆದಂಡ, ತಲೆದಂಡ!
ಹುಸಿಯಾದಡ ದೇವಾ, ತಲೆದಂಡ! ತಲೆದಂಡ!
ಕೂಡಲಸಂಗಮದೇವ ನೀವಲ್ಲದೆ ಅನ್ಯವ ನೆನೆದಡೆ
ತಲೆದಂಡ, ತಲೆದಂಡ!
೩೮೧.
ಸುಖ ಬಂದರೆ ಪುಣ್ಯದ ಫಲವೆನ್ನೆನು,
ದುಃಖ ಬಂದರೆ ಪಾಪದ ಫಲವೆನ್ನೆನು,
ನೀ ಮಾಡಿದಡಾಯಿತ್ತೆನ್ನೆನು,
ಕರ್ಮಕ್ಕೆ ಕರ್ತೃವೇ ಕಡೆಯೆನ್ನೆನು,
ಉದಾಸೀನವಿಡಿದು ಶರಣೆನ್ನೆನು ಕೂಡಲಸಂಗಮದೇವ.
ನೀ ಮಾಡಿದುಪದೇಶವು ಎನಗೀ ಪರಿಯಲಿ!
ಸಂಸಾರವ ಸವೆಯ ಬಳಸುವೆನು.
೩೮೨.
ಕಾಯದ ಕಳವಳಕಂಜಿ ಕಾಯಯ್ಯ ಎನ್ನೆನು.
ಜೀವನೋಪಾಯಕಂಜಿ ಈಯಯ್ಯ ಎನ್ನೆನು.
'ಯದ್ಭಾವಂ ತದ್ಭವತಿ'
ಉರಿ ಬರಲಿ, ಸಿರಿ ಬರಲಿ
ಬೇಕು ಬೇಡೆನ್ನೆನಯ್ಯ!
ಆನು ನಿಮ್ಮ ಹಾರೆನು, ಮಾನವರ ಬೇಡೆನು;
ಆಣೆ, ನಿಮ್ಮಾಣೆ ಕೂಡಲಸಂಗಮದೇವ.
೩೮೩.
ನಾಳೆ ಬಪ್ಪುದು ನಮಗಿಂದೇ ಬರಲಿ.
ಇಂದು ಬಪ್ಪುದು ನಮಗೀಗಲೇ ಬರಲಿ.
ಇದಕಾರಂಜುವರು ? ಇದಕಾರಳುಕುವರು-
'ಜಾತಸ್ಯ ಮರಣಂ ಧ್ರುವಂ' ಎಂದುದಾಗಿ ?
ನಮ್ಮ ಕೂಡಲಸಂಗಮದೇವ ಬರೆದ
ಬರಹವ ತಪ್ಪಿಸುವಡೆ ಹರಿಬ್ರಹ್ಮಾದಿಗಳಿಗಳವಲ್ಲ ?
೩೮೪.
ಕಳ ಹೋದರೆ ಕನ್ನದುಳಿಯ ಹಿಡಿವೆ.
ಬಂದಿವಿಡಿದರೆ ನಿಮ್ಮಿಂದ ಮುಂದೆ ನಡೆವೆ,
ಮನಭೀತಿ ಮನಶಂಕೆಗೊಂಡೆನಾದರೆ,
ನಿಮ್ಮಾಣೆ ನಿಮ್ಮ ಪುರಾತರಾಣೆ.
ಆಳ್ದರ ನಡೆ ಸದಾಚಾರವೆನ್ನದಿದ್ದರೆ
ಕಟ್ಟಾಳು ಶಿಷ್ಟತನಕ್ಕೆ ಹೋಹ ಕಷ್ಟವ ನೋಡಾ
ಕೂಡಲಸಂಗಮದೇವ.
೩೮೫.
ಜೋಳವಾಳಿಯಾನಲ್ಲ,
ವೇಳೆವಾಳಿಯವ ನಾನಯ್ಯ!
ಹಾಳುಗೆಟ್ಟೋಡುವಾಳು ನಾನಲ್ಲಯ್ಯ,
ಕೇಳು, ಕೂಡಲಸಂಗಮದೇವ,
ಮರಣವೇ ಮಹಾನವಮಿ.
೩೮೬.
ಎನಗೆ ಜನನವಾಯಿತ್ತೆಂಬರು,
ಎನಗೆ ಜನನವಿಲ್ಲಯ್ಯ!
ಎನಗೆ ಮರಣವಾಯಿತ್ತೆಂಬರು,
ಎನಗೆ ಮರಣವಿಲ್ಲಯ್ಯ!
ಜನನವಾದರೆ ನಿಮ್ಮ ಪಾದೋದಕಪ್ರಸಾದವ ಕೊಂಬೆ.
ಮರಣವಾದರೆ ನಿಮ್ಮ ಶ್ರೀ ಚರಣವನೆಯ್ದುವೆ.
ಬಾವನ್ನದ ವೃಕ್ಷ ಊರೊಳಗಿದ್ದರೇನು ?
ಅಡವಿಯೊಳಗಿದ್ದರೇನು ?
ಪರಿಮಳವೊಂದೆ!
ಕೂಡಲಸಂಗಮದೇವ.
೩೮೭.
ಒಡೆಯರುಳ್ಳಾವಿಂಗೆ ಕೇಡಿಲ್ಲ ಕಾಣಿರೋ
ಊರೆನ್ನದೆ ಅಡವಿಯೆನ್ನದೆ ಆಳನರಸಿ ಬಹ ಆಳ್ದರುಂಟೆ!
ಜೋಳವಾಳಿಂಗೆ ಬಿಜ್ಜಳಂಗೆ ಆಳಾದರೇನು ?
ವೇಳೆವಾಳಿಂಗೆ ಕೊಡಿಕೊಂಡಿಪ್ಪ ಕೂಡಲಸಂಗಮದೇವ!
೩೮೮.
ಕರ್ಮವೆಂಬ ಅಂಕದೊಡನೆ ತೊಡರಿದೆ
ಬಿನ್ನಪವ ಅವಧಾರು-ನಿಮ್ಮಾಳಿನ ಭಾಷೆಯ:
ಕಡೆಗಳಕ್ಕೆ ನೂಂಕುವೆ, ಕೆಡಹುವೆನಂಕವ.
ಕರೆದಡೋಸರಿಸಿದರೆ ನಿಮ್ಮಾಳಲ್ಲ!
ಶಿವಶರಣೆಂಬ ದಂಡೆಯ ಹೂಡಿ
ಗಣಮೇಳಾಪವೆಂಬಲಗಿನಿಂದಿರಿವೆ
ಕೂಡಲಸಂಗಮದೇವ.
೩೮೯.
ಎಲೆ ಗಂಡುಗೂಸೆ ನೀ ಕೇಳಾ!
ನಿನಗೊಬ್ಬಗೆಂದುಟ್ಟೆ ಗಂಡುಡುಗೆಯನು;
ಮತ್ತೊಮ್ಮೆಯಾನು ಗಂಡಪ್ಪೆನಯ್ಯ;
ಮತ್ತೊಮ್ಮೆಯಾನು ಹೆಣ್ಣಪ್ಪೆನಯ್ಯ!
ಕೂಡಲಸಂಗಮದೇವ,
ನಿಮಗೆ ವೀರನಪ್ಪೆ! ನಿಮ್ಮ ಶರಣರಿಗೆ ವಧುವಪ್ಪೆ!
೩೯೦.
ಹುಟ್ಟುತ್ತ ದ್ರವ್ಯವನರಿಯದವಂಗೆ
ಐಶ್ವರ್ಯವಂತ ಮಗನಾದರೆ
ಲಕ್ಷಸಂಖ್ಯೆಯ ಹಿರಣ್ಯವ ತಂದು ಸಂತೋಷಂಬಡಿಸುವಂತೆ;
ಕಾಳಗದ ಮುಖವಾವುದೆಂದರಿಯದ ಹಂದೆ-ನೃಪಂಗೆ
ಒಬ್ಬ ಕ್ಷತ್ರಿಯನಂತಹ ಕುಮಾರ ಹುಟ್ಟಿ
ಕಿಗ್ಗಡಲ ರಕ್ತದ ಹೊನಲಲ್ಲಿ ಕಡಿದು ಮುಳುಗಾಡುವ
ಕೊಳುಗುಳವ ಕಂಡು ಪರಿಣಾಮಿಸುವಂತೆ
ಆನು ಪರಿಣಾಮಿಸುವೆನಯ್ಯ, ಕೂಡಲಸಂಗಮದೇವ,
ನೀ ಬಂದೆನ್ನ ಬೇಡಿದರೆ.
೩೯೧.
ಒಡವೆ-ಭಂಡಾರ-ಕಡವರ-ದ್ರವ್ಯವ
ಬಡ್ಡಿಯ ವ್ಯವಹಾರಕ್ಕೆ ಕೊಟ್ಟು
ಮನೆಯ ಗೊಂಟಿನಲ್ಲಿ ಹೊಯ್ದುಕೊಂಡಿದ್ದೆನಾದರೆ
ಅದು ಎನ್ನರ್ಥವಲ್ಲ! ಅನರ್ಥವೆಂಬೆ!!
ಸಂಗಮ ದೇವ, ನೀ ಜಂಗಮರೂಪಾಗಿ ಬಂದು
ಆ ಧನವನು ನೀ ಬಲ್ಲಂತೆನ್ನ ಮುಂದೆ ಸೂರೆಗೊಳ್ಳುತ್ತಿರಲು
ನಾ ಬೇಕು-ಬೇಡೆಂದು ಮನದಲ್ಲಿ ಮರುಗಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ, ಮನದೊಡೆಯ, ನೀನೆ ಬಲ್ಲೆ!
ಕಾಮನೇಮವೆಂಬ ಸಿಂಧುಬಲ್ಲಾಳನ ವಧುವ
ಸರ್ವಭುವನದೊಡೆಯ ಸಂಗಮದೇವರು ಬೇಡುವಂತಲ್ಲ-
ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆ ಚೆಲುವೆ
ಆಕೆಯನು, ಸಂಗಮದೇವ, ನೀ ಜಂಗಮರೂಪಾಗಿ ಬಂದು
ಎನ್ನ ಮುಂದೆ ಸಂಗವ ಮಾಡುತ್ತಿರಲು
ಎನ್ನೊಡನಿದ್ದ ಸತಿಯೆಂದು ವಾಯಕ್ಕೆ ಮರುಗಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ ಮನದೊಡೆಯ, ನೀನೆ ಬಲ್ಲೆ!
ಪ್ರತ್ಯಕ್ಷವಾಗಿ ಸಿರಿಯಾಳ-ಚಂಗಳೆಯರ ಮನೆಗೆ ಬಂದು
ಅವರ ಮಗನ ಬೇಡುವಂತಲ್ಲ-
ಸಂಗಮ ದೇವ, ನಿಮ್ಮ ಹೆಸರ ಚಿಕ್ಕಸಂಗಯ್ಯನಿದ್ದಹನು
ನೀ ಜಂಗಮರೂಪಾಗಿ ಬಂದು ಅವನ ಹಿಡಿದು
ಎನ್ನ ಮುಂದೆ ಹೆಡಗುಡಿಯ ಕಟ್ಟಿ ಚಿನಿಖಂಡವ ಮಾಡಿ
ಬಾಣಸವ ಮಾಡುವಾಗಲು
ಎನ್ನುದರದಲ್ಲಿ ಬಂದ ಪುತ್ರನೆಂದು ವಾಯಕ್ಕೆ ಮರುಗಿದೆನಾದಡೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ, ಮನದೊಡೆಯ, ನೀನೆ ಬಲ್ಲೆ!
ಇಂತೀ ತ್ರಿವಿಧವು ಹೊರಗಣವು-
ಎನ್ನ ನೋವಿನೊಳಗಲ್ಲ! ಎನ್ನ ಬೇನೆಯೊಳಗಲ್ಲ!
ಇನ್ನು ನಾನಿದ್ದಿಹೆ-
ಕದ್ದ ಕಳ್ಳನ ಕಟ್ಟುವಂತೆ ಕಟ್ಟಿ ನೀ ಜಂಗಮರೂಪಾಗಿ ಬಂದು
ಎನ್ನಂಗದ ಮೇಲೆ ಶಸ್ತ್ರವನಿಕ್ಕಿ ನೋಡು!
ಬಸಿವ ಶೂಲಪ್ರಾಪ್ತಿಯ ಮಾಡಿ ನೋಡು!
ಸೂಜಿಯ ಮೊನೆಯಂತಿದ್ದ ಶೂಲದ ಮೇಲಿಕ್ಕಿ ನೋಡು!
ನವಖಂಡವ ಮಾಡಿ ಕಡಿಕಡಿದು ನೋಡು!
ಆ ಶೂಲವೈದೈದು ಮುಖವಾಗಿ ಹಾಯುವಾಗ ಹರಿತಿನಿಸಿ
ನೋಡು!
ಎಂತೆನ್ನ ಭಂಗಬಡಿಸಿ ನೋಡಿದರೆಯೂ
ಲಿಂಗಾರ್ಚನೆಯ ಮಾಡುವುದ ಬಿಡೆ,
ಜಂಗಮದಾಸೋಹವ ಮಾಡುವುದು ಬಿಡೆ.
ಪಾದತೀರ್ಥ ಪ್ರಸಾದವ ಕೊಂಬುದ ಬಿಡೆ.
ಇಂತೀ ತ್ರಿವಿಧಕ್ಕೆ ರೋಷವ ಮಾಡಿ ಬಿಟ್ಟೆನಾದರೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ಇನಿತರೊಳಗೆ ತಪ್ಪುಳ್ಳಡೆ ಮೂದಲಿಸಿ ಮೂಗ ಕೊಯಿ
ಕೂಡಲಸಂಗಮದೇವ.
೩೯೨.
ಅರ್ಥವನರ್ಥವ ಮಾಡಿ ಕೋಳಾಹಳಂಗೈವುತ್ತಿರಲಿ;
ಹುಟ್ಟಿದ ಮಕ್ಕಳ ನವಖಂಡವ ಮಾಡಿ ಕಡಿವುತ್ತಿರಲಿ!
ಮುಟ್ಟಿದ ಸ್ತ್ರೀಯ ಕಣ್ಣ ಮುಂದೆ ಅಭಿಮಾನಂಗೊಂಡು
ನೆರೆವುತ್ತಿರಲಿ.
ಇಂತೀ ತ್ರಿವಿಧವು ಹೊರಗಣವು.
ಇನ್ನೆನ್ನಂಗದ ಮೇಲೆ ಬರಲಿ, ಹಿಡಿಖಂಡವ ಕೊಯ್ಯಲಿ.
ಇಕ್ಕುವ ಶೂಲ ಪ್ರಾಪ್ತಿಸಲಿ
ಹಾಕೊಂದೆಸೆ ಹನ್ನೊಂದೆಸೆಯಾಗಿ ಮಾಡುತ್ತಿರಲಿ,
ಮತ್ತೆಯೂ ಲಿಂಗಾರಾಧನೆಯ ಮಾಡುವೆ,
ಜಂಗಮಾರಾಧನೆಯ ಮಾಡುವೆ,
ಪ್ರಸಾದಕ್ಕೆ ತಪ್ಪೆ.
ಇಂತಪ್ಪ ಭಾಷೆ ಕಿಂಚಿತ್ತು ಹುಸಿಯಾದರೆ
ನೀನಂದೇ ಮೂಗ ಕೊಯಿ ಕೂಡಲಸಂಗಮದೇವ.
೩೯೩.
ತನುವ ಬೇಡಿದಡೀವೆ, ಮನವ ಬೇಡಿದಡೀವೆ,
ಧನವ ಬೇಡಿದಡೀವೆ; ಬೇಡು ಬೇಡೆಲೆ ಹಂದೆ.
ಕಣ್ಣ ಬೇಡಿದಡೀವೆ, ತಲೆಯ ಬೇಡಿದಡೀವೆ.
ಕೂಡಲ ಸಂಗಮ ದೇವ,
ನಿಮಗಿತ್ತು ಶುದ್ಧನಾಗಿಪ್ಪೆ ನಿಮ್ಮ ಪುರಾತರ ಮನೆಯಲ್ಲಿ.
೩೯೪.
ಓಡದಿರೋಡದಿರು ನಿನ್ನ ಬೇಡುವವ ನಾನಲ್ಲ!
ಶಿವನೇ, ನೋಡುವೆ ಕಣ್ಣ ತುಂಬ! ಆಡಿ-ಪಾಡಿ ನಲಿದಾಡುವೆ!
ಬೇಡೆನ್ನ ಕೂಡೆ ಮಾತನಾಡಲಾಗದೆ ?
ಕೂಡಲಸಂಗಮದೇವ, ನೀನಾಡಿಸುವ ಗೊಂಬೆ ನಾನು!
೩೯೫.
ನಾನು ಆರಂಬವ ಮಾಡುವೆನಯ್ಯ ಗುರುಪೂಜೆಗೆಂದು.
ನಾನು ಬೆವಹಾರವ ಮಾಡುವೆನಯ್ಯ ಲಿಂಗಾರ್ಚನೆಗೆಂದು
ನಾನು ಪರಸೇವೆಯ ಮಾಡುವೆನಯ್ಯ
ಜಂಗಮದಾಸೋಹಕ್ಕೆಂದು.
ನಾನಾವಾವ ಕರ್ಮಂಗಳ ಮಾಡಿದಡೆಯೂ
ಆ ಕರ್ಮಫಲಭೋಗವ ನೀ ಕೊಡುವೆಯೆಂಬುದ
ನಾನು ಬಲ್ಲೆನು.
ನೀ ಕೊಟ್ಟ ದ್ರವ್ಯದ ನಿಮಗಲ್ಲದೆ
ಮತ್ತೊಂದು ಕ್ರೀಯ ಮಾಡೆನು.
ನಿಮ್ಮ ಸೊಮ್ಮ ನಿಮಗೆ ಸಲ್ಲಿಸುವೆನು
ನಿಮ್ಮಾಣೆ ಕೂಡಲಸಂಗಮದೇವ.
೩೯೬.
ಹೊತ್ತಾರೆಯೆದ್ದು ಕಣ್ಣ ಹೊಸೆವುತ್ತ
ಎನ್ನ ಒಡಲಿಂಗೆ, ಎನ್ನ ಒಡವೆಗೆ,
ಎನ್ನ ಮಡದಿ ಮಕ್ಕಳಿಗೆಂದು ಕುದಿದೆನಾದರೆ
ಎನ್ನ ಮನಕ್ಕೆ ಮನವೇ ಸಾಕ್ಷಿ!
"ಆಶನೇ ಶಯನೇ ಯಾನೇ
ಸಂಪರ್ಕೇ ಸಹಭೋಜನೇ,
ಸಂಚರಂತಿ ಮಹಾಘೋರೇ
ನರಕೇ ಯಾವದಕ್ಷಯೇ"
ಎಂಬ ಶ್ರುತಿಯ ಬಸವಣ್ಣನೋದುವನು.
ಭವಿಬಿಜ್ಜಳನ ಗದ್ದುಗೆಯ ಕೆಳಗೆ ಕುಳ್ಳಿರ್ದು
ಓಲೈಸಿಹೆನೆಂದು ನುಡಿವರಯ್ಯ ಪ್ರಮಥರು;
ಕೊಡುವೆನ್ನುತ್ತರವನವರಿಗೆ - ಕೊಡಲಮ್ಮೆ,
ಪ್ರತ್ಯುತ್ತರ ನಾಯಕನರಕವೆಂಬುದುಂಟಾಗಿ,
ಹೊಲೆಹೊಲೆಯರ ಮನೆಯ ಹೊಕ್ಕಾದರೆಯು,
ಸಲೆ ಕೈಕೂಲಿಯ ಮಾಡಿಯಾದರೆಯು,
ನಿಮ್ಮ ನಿಲವಿಂಗೆ ಕುದಿವೆನಲ್ಲದೆ,
ಎನ್ನ ಒಡಲವಸರಕ್ಕೆ ಕುದಿದೆನಾದರೆ
ತಲೆದಂಡ ಕೂಡಲಸಂಗಮದೇವ.
೩೯೭.
ಅಣ್ಣ, ತಮ್ಮ, ಹೆತ್ತಣ್ಣ ಗೋತ್ರವಾದರೇನು
ಲಿಂಗಸಾಹಿತ್ಯವಿಲ್ಲದವರ ಎನ್ನವರೆನ್ನೆನಯ್ಯ.
ನಂಟು-ಭಕ್ತಿ-ನಾಯಕನರಕ ಕೂಡಲಸಂಗಮದೇವ.
೩೯೮.
ಹೊನ್ನು-ಹೆಣ್ಣು-ಮಣ್ಣೆಂಬ
ಕರ್ಮದ ಬಲೆಯಲ್ಲಿ ಸಿಲುಕಿ
ವೃಥಾ ಬರುದೊರೆ ಹೋಹ ಕೆಡುಕ ಹಾರುವ ನಾನಲ್ಲ.
ಹಾರುವೆನಯ್ಯ ಭಕ್ತರ ಬರವ ಗುಡಿಗಟ್ಟಿ!
ಹಾರುವೆನಯ್ಯ ಶರಣರ ಬರವ ಗುಡಿಗಟ್ಟಿ!
ಕೂಡಲಸಂಗಮದೇವನು
ವಿಪ್ರಕರ್ಮವ ಬಿಡಿಸಿ
ಅಶುದ್ಧನ ಶುದ್ಧನ ಮಾಡಿದನಾಗಿ.
೩೯೯.
ವೇದಕ್ಕೆ ಒರೆಯ ಕಟ್ಟುವೆ!
ಶಾಸ್ತ್ರಕ್ಕೆ ನಿಗಳವನಿಕ್ಕುವೆ!
ತರ್ಕದ ಬೆನ್ನ ಬಾರನೆತ್ತುವೆ!
ಆಗಮದ ಮೂಗ ಕೊಯ್ವೆ!
ನೋಡಯ್ಯ, ಮಹಾದಾನಿ ಕೂಡಲಸಂಗಮದೇವ,
ಮಾದರ ಚೆನ್ನಯ್ಯನ ಮನೆಯ ಮಗ ನಾನಯ್ಯ!
೪೦೦.
ಕಳ್ಳ, ಬಂದಿಕಾರ, ಹಾವಾಡಿಗ, ಹಾದರಿಗ,
ಬಂಟನೋಲೆಯಕಾರನೆಂದೆನಾದರೆ,
ನೀ ಮುಂತಾಗಿ ಬಂದ ಭಕ್ತರ ನೀನೆನ್ನದಿದ್ದರೆ,
ಅದೇ ದ್ರೋಹ!
ನಡೆ-ನುಡಿ ಹುಸಿಯುಂಟಾದರೆ
ಕೂಡಲಸಂಗನ ತೋರಿದ ಚೆನ್ನಬಸವಣ್ಣನಾಣೆ.