ಬಾಕಿಯುಳಿದ ಕೊನೆಯ ಹನಿ....
ಸಾಂಗತ್ಯದ ಅಗತ್ಯ ಪ್ರತಿ ಏಕಾಂತಕ್ಕೂ ಇದ್ದೆ ಇರುತ್ತದೆ
ಮೌನಕ್ಕೂ ಕೆಲವೊಮ್ಮೆ ಮಾತಿನ ಸನಿಹ ಬೇಕೆನ್ನಿಸುತ್ತದೆ....
ಕಣ್ಣ ಕೊನೆಯಲ್ಲಿ ಕಾಡಿಗೆಯನ್ನೂ ಕರಗಿಸುವ
ನಿರೀಕ್ಷೆಯ ಹನಿ ನಿತ್ಯ ಜಾರುವಾಗ,
ಬದುಕಿನ ಮುಂದಿನ ಹಾದಿಯೆಲ್ಲ ಮಂಜಾದಂತೆ ಕಾಣಿಸಿ
ಮನ ಕಂಗಾಲಾಗುತ್ತದೆ /
ನನ್ನುಸಿರು ಚರ....
ಅದರೊಳಗೆ ಅಡಗಿರುವ ನಿನ್ನ ಅನುದಿನದ
ಜಪದ ಆವರ್ತ ಮಾತ್ರ ಚಿರ,
ಗಗನದ ತುದಿಯಂಚಿನಲ್ಲಿ ಮಡುಗಟ್ಟಿರುವ ಮೋಡದ
ಎದೆಯಾಳದಲ್ಲಿ ನೋವು ತುಂಬಿ ಬಂದಾಗ ...
ಇಳೆಗೆ ಮಳೆ ಖಾತ್ರಿ //
ಸಾಲು ಸಾಲು ಸುಳ್ಳುಗಳ ನಡುವೆ
ಸತ್ಯದ ತಲಾಶಿನಲ್ಲಿರುವ ಮನಸ ಮೂರ್ಖತನ....
ಎಷ್ಟೊಂದು ಅವಾಸ್ತವ!,
ರಾಗದ ಹಂಗಿಲ್ಲದ ಈ ನನ್ನ ಮೌನ ವೇದನೆಯ ಆಲಾಪ
ನಿನ್ನ ಕಿವಿ ಮುಟ್ಟಿದರೂ.....
ನಿನ್ನೊಳಗಿನ ಸಂಕಟವನ್ನದು ಎಂದೂ ಕೆದಕದಿರಲಿ /
ಒಬ್ಬಂಟಿತನದ ಹನಿ ನೋವೂ ನಿನ್ನನೆಂದೂ ತಟ್ಟದಿರಲಿ
ವಿರಹದ ಪಸೆಯಷ್ಟೂ ನೋವು ನಿನ್ನ ಕಡೆ ತನಕ ಮುಟ್ಟದಿರಲಿ...
ಕಾಲಿರದ ಕನಸುಗಳದು ಬೆಳಕಿನ ವೇಗದ ಪಯಣ
ನನ್ನದೊಂದು ಕನಸಿನ ಚೂರು ಈಗಷ್ಟೇ ನಿನ್ನೆದೆಯ ಮಾಳಿಗೆ ಹೊಕ್ಕಿರಬಹುದು ,
ಹುಡುಕಿ ನೋಡು! //
ಗಡಿಬಿಡಿಯೇನಿಲ್ಲ ಕಾಯಲು ಕೊನೆಯುಸಿರಿರುವ ತನಕ
ಸಮಯವಿದೆಯಲ್ಲ ಕಾಯುತ್ತೀನಿ ಬಿಡು....
ನನಗಿನ್ನೇನು ತಾನೇ ಇದೆ ಇದಕ್ಕಿಂತಾ ಮಹತ್ತರವಾದ ಕೆಲಸ?,
ಮೌನ ಕಲಕುವ ಮೌನದ ಕೊಳದಲ್ಲಿ ಏಳುವ ಪ್ರತಿ ಅಲೆಯಲ್ಲೂ
ನಿನ್ನ ನೆನಪಿನ ದೋಣಿಯೇರಿ ತೇಲಿ ಹೋಗುವ ಹಂಬಲ ನನಗೆ /
ನಿಡುಸುಯ್ಯುವ ಮೌನದ ಪ್ರತಿ ಉಶ್ವಾಸ ನಿಶ್ವಾಸಗಳಲ್ಲೂ
ನಿನ್ನ ಉಸಿರ ಬಿಸಿ ಇನ್ನೂ ಉಳಿದಿದೆ...
ಗೀಚಿದ ಅಕ್ಷರಗಳೆಲ್ಲ ತನ್ನಿಂತಾನೆ ಪದಗಳಾಗಿ
ತನ್ನ ಪ್ರತಿ ಸಾಲುಗಳಲ್ಲೂ ನಿನ್ನ ನೆನಪುಗಳನ್ನೇ ಅದು ಹೇಗೊ ಪ್ರತಿಫಲಿಸುವಾಗ,
ನಾನೊಂದು ನಿಶ್ಚಲ ಬಿಂಬವಷ್ಟೆ ಅಗುಳಿದಿದ್ದೇನೆ //
ಕೇವಲ ಕೊನೆಯದೊಂದು ಹನಿ ಬಾಕಿಯುಳಿದಿದೆ
ನಿನ್ನ ನಿರೀಕ್ಷೆಯಲ್ಲಿ.....
ನನ್ನ ಕಣ್ಣಲ್ಲಿ,
ಕಣ್ಣು ಕಾಯುವ ನಿನ್ನ ಹಾದಿಯಲ್ಲಿ ಕಿರು ಸದ್ದಾದರೂ ಸರಿ
ಅದನ್ನಾಲಿಸಲು ಕಿವಿಯೂ ಸದಾ ಕಾತರವಾಗಿರುತ್ತದೆ /
ಗಾಲವನ ಗಲ್ಲದ ಮೇಲಿನ ಮಚ್ಚೆ ನಾನು
ನಿನಗಲ್ಲದೆ ಹೇಳು ಇನ್ಯಾರ ಕಣ್ಣಿಗೆ ನಾ ಕಾಣಿಸಿಯೇನು?....
ಸಿಗದ ಪದಗಳನ್ನ ಸುಮ್ಮನೆ ಕಷ್ಟ ಪಟ್ಟು ಕಟ್ಟಿ ಕೃತಕವಾಗಿಸುವುದಕ್ಕಿಂತ
ಮೌನದಲ್ಲಿ ಕಣ್ಣು ದಾಟಿಸುವ ಮಾತಿಗೆ ಧ್ವನಿಯಾದರೆ ಸಾಕಲ್ಲ? //
Comments
Post a Comment