ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Friday, September 28, 2012

ದಸರೆಯ ಗಮ್ಮತ್ತು....

ದಸರಾ ಬಂತೆಂದರೆ ಸಾಮಾನ್ಯವಾಗಿ ನಮಗೆಲ್ಲ ಬಾಲ್ಯದಲ್ಲಿ ಹೊಸ ಉಲ್ಲಾಸ ಉತ್ಸಾಹ ಚಿಗುರುತ್ತಿತ್ತು. ಸಾಮಾನ್ಯವಾಗಿ ದಸರಾ ಮಧ್ಯಂತರ ಶಾಲಾ ರಜೆಗಳ ಕಾಲದಲ್ಲಿಯೆ ಬರುತ್ತಿದ್ದರೂ ಅಪರೂಪಕ್ಕೆ ಅದರ ಹಿಂಚು ಮುಂಚಿನಲ್ಲೂ ವಿಜಯದಶಮಿಯ ದಿನ ಬೀಳುತ್ತಿದ್ದುದೂ ಉಂಟು. ಆಗೆಲ್ಲ ಶಾಲೆಗೆ ಇನ್ನೆರಡು ದಿನಗಳ ಹೆಚ್ಚುವರಿ ರಜೆ ಸಿಗುತ್ತಿದ್ದರಿಂದ ನಾನಂತೂ ದಸರಾ ರಜೆಯಲ್ಲಿ ಬಾರದೆ ರಜೆ ಮುಗಿದ ಮೇಲೆಯೆ ಬರಲಿ ಅಂತ ಕಂಡಕಂಡ ದೇವರಿಗೆಲ್ಲ ಮನಸೊಳಗೆ ಹರಕೆ ಹೊರುತ್ತಿದ್ದೆ. ನನ್ನ ಈ ಬೇಡಿಕೆ ಕೆಲವೊಮ್ಮೆ ಪೂರೈಸಿದ್ದು ಹೌದಾದರೂ ನನ್ನ ಆ ಅರ್ಜೆಂಟ್ "ರಜಾಪೇಕ್ಷಿತ" ಹರಕೆಗಳು ಸಕಾಲದಲ್ಲಿ ಸಂದು ಸಂತೃಪ್ತರಾಗುವ ಯೋಗ ಇನ್ನೂ ಯಾವ ದೇವರಿಗೂ ಕೂಡಿಬಂದಿಲ್ಲ. ವಿಷಯ ಹೀಗಿದ್ದರೂ ವರ್ಷವರ್ಷವೂ ನಾನು ಈ ಎಂದೆಂದೂ ಈಡೇರಿಸದ ಹರಕೆ ಹೊರುವುದನ್ನು ನಿಲ್ಲಿಸುತ್ತಿರಲಿಲ್ಲ, ಅಭ್ಯಾಸ ಬಲದಿಂದ ನನ್ನ ಹರಕೆಗಳನ್ನ ಕೇಳುವ ಅನಿವಾರ್ಯ ಕರ್ಮದಿಂದ ಯಾವೊಬ್ಬ ದೇವರಿಗೂ ಆಗೆಲ್ಲ ಮುಕ್ತಿಯಿರಲಿಲ್ಲ! ತೀರ್ಥಹಳ್ಳಿಯಲ್ಲಿ ದಸರಾ ಆಚರಣೆಗೆ ಶಿವಮೊಗ್ಗ ಜಿಲ್ಲೆಯಲ್ಲಿಯೆ ಒಂದು ಮೆರುಗಿತ್ತು. ಮೈಸೂರು ದಸರಾಕ್ಕೆ ಹೋಲಿಸಿದರೆ "ಸಿಂಗನ ಮುಂದೆ ರಂಗ" ಎನ್ನುವಂತಿದ್ದರೂ ಆಚರಣೆಯ ಅಚ್ಚುಕಟ್ಟುತನದಲ್ಲಿ ಯಾವ ಮೈಸೂರಿಗೂ ತೀರ್ಥಹಳ್ಳಿ ಕಡಿಮೆಯಿರಲಿಲ್ಲ. ನಮ್ಮಲ್ಲೂ ಅನೆ ಮೇಲೆ ನಾಡದೇವಿಯ ಅಂಬಾರಿ ಇರುತ್ತಿತ್ತು. ಆನೆಯ ಮುಂದೆ ಸುಮಾರು ಹತ್ತಕ್ಕೂ ಹೆಚ್ಚು ವಿವಿಧ ಸ್ತಬ್ಧ ಚಿತ್ರಗಳು ತೆವಳಿಕೊಂಡು ಸಾಗುತ್ತಿದ್ದವು. ಅವೆಲ್ಲಕ್ಕೂ ಮುಂದೆ ನಮ್ಮ ಸೇವಾಭಾರತಿಯ ಶಾಲಾ ಬ್ಯಾಂಡ್'ಸೆಟ್, ಹೋಂಗಾರ್ಡಿನವರ ಬ್ಯಾಂಡ್'ಸೆಟ್, ಕಂಗಿಲು ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಕಂಭದ ಕಾಲು ನಡಿಗೆ, ತಟ್ಟೀರಾಯ, ಕೀಲುಕುದುರೆ ಬೇತಾಳ ಹೀಗೆ ಯಾವುದುಂಟು ಯಾವುದಿಲ್ಲ ಹೇಳಿ! ಎಲ್ಲಕ್ಕೂ ಹೆಚ್ಚಾಗಿ ವಿವಿಧ ವರ್ಣಗಳ ಹುಲಿವೇಷದ ಹಿಂದೆ ಅಲ್ಲಿ ತುಂಬಿ ತುಳುಕುತ್ತಿತ್ತು. ಅಂತೂ ಮೆರವಣಿಗೆ ಊರಿನ ರಾಜರಸ್ತೆಯುದ್ದಕ್ಕೂ ರಂಗೇರಿಸುತ್ತಾ, ಅಸಾಧ್ಯ ಗದ್ದಲವೆಬ್ಬಿಸುತ್ತಾ ಹೋಗುತ್ತಿದ್ದರೆ ಇವೆಲ್ಲಕ್ಕೂ ಕಟ್ಟ ಕೊನೆಯಲ್ಲಿ ಛತ್ರಿ ಚಾಮರಗಳೊಂದಿಗೆ ದೇವಿಯ ಮೂರ್ತಿ ಹೊತ್ತ ಭೋವಿಗಳ ಪಲ್ಲಕಿ ಸಾಗುತ್ತಿತ್ತು. ಅದರ ಹಿಂದೆ ಸಕ್ರೆಬೈಲಿನ ಆನೆ ಬಿಡಾರದಿಂದ ಬಂದಿರುತ್ತಿದ್ದ ಆನೆ ಗಜ ಗಾಂಭೀರ್ಯದಿಂದ ಅಂಬಾರಿಯಲ್ಲಿ ದೇವಿಯ ಮೂಲ ವಿಗ್ರಹ ಹೊತ್ತು ಮೆಲ್ಲಗೆ ಹೆಜ್ಜೆ ಹಾಕುತ್ತಿತ್ತು. ಮೆರವಣಿಗೆ ಶುರುವಾಗುವ ರಥಬೀದಿಯಿಂದ ಆರಂಭಿಸಿ ಕೊನೆಗೊಳ್ಳುವ ಕುಶಾವತಿಯ ನೆಹರೂ ಪಾರ್ಕಿನವರೆಗೂ ಎಲ್ಲಿ ನೋಡಿದರಲ್ಲಿ ಜನವೋ ಜನ. ಎಳ್ಳಮವಾಸ್ಯೆ ಬಿಟ್ಟರೆ ತೀರ್ಥಹಳ್ಳಿ ಅಷ್ಟು ಜನ ಪ್ರವಾಹವನ್ನ ಕಾಣುತ್ತಿದ್ದುದು ಬಹುಷಃ ವಿಜಯದಶಮಿಯ ದಿನ ಮಾತ್ರ. ಸಕ್ರೆಬೈಲಿನ ಆನೆ ಬಿಡಾರದಿಂದ ಆನೆಯನ್ನ ಹಿಂದಿನ ದಿನವೆ ತಂಪು ಹೊತ್ತಿನಲ್ಲಿ ಹೊರಡಿಸಿ ತೀರ್ಥಹಳ್ಳಿಗೆ ಅರಣ್ಯ ಇಲಾಖೆಯವರೆ ತಮ್ಮ ದೊಡ್ಡ ಲಾರಿಯಲ್ಲಿ ಹತ್ತಿಸಿಕೊಂಡು ತರುತ್ತಿದ್ದರು. ಆದರೆ ಅದ್ಯಾಕೆ ಹೆಣ್ಣು ಆನೆಗಳನ್ನೆ ತರುತ್ತಿದ್ದರು ಅಂತ ನನಗೆ ಇಂದಿಗೂ ಅರ್ಥವಾಗಿಲ್ಲ. ಒಂದೆರಡು ಸಲವಂತೂ ಇನ್ನೂ ಎಳೆಮರಿ ಜೊತೆಗಿರುವ ತಾಯಿ ಆನೆಯನ್ನ ಈ ಭೂಪರು ಮೆರವಣಿಗೆಗೆ ತಂದಿದ್ದರು! ಅಂಬಾರಿ ಹೊತ್ತ ತಾಯಿಯ ಮೇಲೆ ಊರವರೆಲ್ಲರ ಕಣ್ಣಿದ್ದರೆ.ತಾಯಿಯೊಂದಿಗೆ ಪುಟುಪುಟು ಹೆಜ್ಜೆ ಹಾಕುತ್ತಾ ಆಗಾಗ ಅಕ್ಕ ಪಕ್ಕದಲ್ಲಿನವರ ಅಂಗಿಯನ್ನೋ, ಬೀದಿಯನ್ಚಿಗೆ ಕಟ್ಟಿರುವ ತೋರನವನ್ನೋ ತನ್ನ ಕಿರು ಸೊಂಡಿಲಿನಿಂದ ಎಳೆಯುತ್ತಾ ತಾಯಿಯ ಕೆಂಗಣ್ಣಿಗೆ ಗುರಿಯಾಗುತ್ತಿದ್ದ ನಮ್ಮಷ್ಟೆ ಮಂಗಾಟ ಪ್ರಾವೀಣ್ಯತೆಯನ್ನೂ ಗಳಿಸಿದ್ದ ಮರಿಯಾನೆಯ ಮೇಲೆ ನಮ್ಮ ತದೇಕ ದೃಷ್ಟಿ ನೆಟ್ಟಿರುತ್ತಿತ್ತು. ಚೇಷ್ಟೆ ಮಾಡುವ ಮರಿಯನ್ನ ಪುಟ್ಟದೊಂದು ಗುಟುರು ಹಾಕುತ್ತಲೆ ಅಮ್ಮ ಆನೆ ನಿಯಂತ್ರಿಸುತ್ತಾ ಮೆರವಣಿಗೆಗೆ ತನ್ನ ಮಗುವಿನ ತುಂಟಾಟ ತೊಂದರೆ ತಾರದಂತೆ ಮುನ್ನೆಚ್ಚರಿಕೆ ವಹಿಸುತ್ತಿತ್ತು. ರಾಮೇಶ್ವರ ದೇವಸ್ಥಾನದ ರಥದ ಕೊಟ್ಟಿಗೆ ಎದುರು ವಿಜಯದಶಮಿಯ ಮುಂಜಾನೆ ಆನೆಯಮ್ಮನ ಮೇಕಪ್ ಶುರುವಾಗುತ್ತಿತ್ತು. ಮೊದಲಿಗೆ ಅವಳನ್ನ ಪಕ್ಕದಲ್ಲಿಯೇ ಹರಿಯುತ್ತಿದ್ದ ತುಂಗೆಯ ದಡಕ್ಕೆ ಕರೆದು ಕೊಂಡು ಹೋಗಿ ಈಜಿಸಿ ಮೀಯಿಸಲಾಗುತ್ತಿತ್ತು. ಅವಳ ಆನೆಬಿದಾರದಲ್ಲಿಯೂ ಇದೆ ತುಂಗೆ ಹರಿಯುತ್ತಲಾದ್ದರಿಂದ ಇಬ್ಬರದ್ದೂ ಒಂಥರಾ ಹಳೆ ಪರಿಚಯ.ಮನಸಾರೆ ಈಜಿ ದಡಕ್ಕೆ ಬರುತ್ತಿದ್ದ ಆನೆಯಮ್ಮನ ಕಡೆದ ಕಲ್ಲಿನಂತಹ ಕಪ್ಪುಕಪ್ಪು ಅಂಗ ಸೌಷ್ಠವ ಆಗ ಮಾತ್ರ ಕಣ್ಣಿಗೆ ರಾಚುವಂತೆ ಕಾಣುತ್ತಿತ್ತು. ಅವಳ ಕಾವಾಡಿ ನೀರಿನಲ್ಲಿ ಕರಿಬಂಡೆಯಂತೆ ಕಾಣುತ್ತಿದ್ದ ಅವಳ ಮೇಲೇರಿ ಒರಟು ತೆಂಗಿನ ಚೊಪ್ಪಿನಲ್ಲಿ ಕತ್ತ ಮಾಡಿಕೊಂಡು ಅವಳನ್ನ ಉಜ್ಜಿ ಉಜ್ಜಿ ಮೀಯಿಸುತ್ತಿದ್ದ. ಅವನ ಉಜ್ಜಾಟವೆಲ್ಲ ಆಕೆಯ ಒರಟು ಮೈಗೆ ಹಿತವಾದ ಮಾಲೀಸಿನಂತೆ ಭಾಸವಾಗುತ್ತಿತ್ತೋ ಏನೋ? ಒಂದೊಮ್ಮೆ ಈ ಉಜ್ಜಾಟದ ಭರದಲ್ಲಿ ಅವನ ಕೈಯೆಲ್ಲಾದರೂ ಆಕೆಯ ಗುಪ್ತಾಂಗಗಳ ಬಳಿ ಸುಳಿದಾಡಿದರೂ ಆಕೆ ಅದನ್ನ ಚೂರೂ ಪರಿಗಣಿಸಿ ಪ್ರತಿಭಟಿಸದೆ ಆನಂದದಿಂದ ಕಣ್ಣು ಮುಚ್ಚಿ ಕೊಂಡು ಮಜಾ ಅನುಭಿಸುತ್ತಿರುವಂತೆ ದೂರಕ್ಕೆ ತೋರುತ್ತಿತ್ತು! ಇಷ್ಟೆಲ್ಲಾ ಮೀಯಾಟ ಆಗಿ ಆಕೆ ದಡಕ್ಕೆ ಹತ್ತುವಾಗ ಅಲ್ಲಿಯೆ ನಯವಾಗಿ ಬಿದ್ದಿರುತ್ತಿದ್ದ ಹಿಟ್ಟಿನಂತಹ ಧೂಳನ್ನ ತನ್ನ ನೀಳ ಸೊಂಡಿಲಲ್ಲಿ ಒಮ್ಮೆ ಎಳೆದು ಕೊಂಡು ತನ್ನ ಬೆನ್ನು ಹಾಗು ಮೈಗಳಿಗೆ ಪೌಡರಿನಂತೆ ಎರಚಿ ಕೊಳ್ಳುತ್ತಿದ್ದಳು. ಅಲ್ಲಿಗೆ ಅಷ್ಟು ಹೊತ್ತಿನ ಅವಳ ಸ್ನಾನವೆಲ್ಲ ಮಣ್ಣು ಪಾಲಾಗುತ್ತಿತ್ತು. ಉಳಿದೆಲ್ಲಾ ಹೊತ್ತಿನಲ್ಲಿ ತನ್ನ ಮಾವುತ ಹಾಗೂ ಕಾವಾಡಿಗಳಿಗೆ ಪರಮ ವಿಧೇಯಳಾಗಿದ್ದುಕೊಂಡು ನಮ್ಮ ಕೊಟ್ಟಿಗೆಯ ಲಕ್ಷ್ಮಿಯಷ್ಟೇ ಸಾಧುವಾಗಿದ್ದ ಆಕೆ ಆ ಒಂದು ಕ್ಷಣದಲ್ಲಿ ಮಾತ್ರ ಅವರಿಬ್ಬರ ಮಾತಿಗೆ ಕವಡೆ ಕಿಮ್ಮತ್ತನ್ನೂ ಕೊಡುತ್ತಿರಲಿಲ್ಲ! ಇದನ್ನ ನೋಡುವಾಗ ನನಗೆ ಅವಳ ಸೌಂದರ್ಯ ಪ್ರಜ್ಞೆಯ ಬಗ್ಗೆಯೆ ಸಂಶಯ ಮೂಡುತ್ತಿತ್ತು. ಸಾಲದ್ದಕ್ಕೆ ಆಗಾಗ ಅಜ್ಜನೂ ಹೀಗೆ ನಶ್ಯ ಎಳೆದು ಕೊಂಡು ಸೀನಿನ ಸರಣಿಯನ್ನೆ ಹೊಮ್ಮಿಸುತ್ತಿದ್ದುದು ನೆನಪಾಗಿ. ಸೊಂಡಿಲು ಆನೆಯ ಮೂಗಲ್ಲವ? ಇಷ್ಟು ಧೂಳು ಅದರಲ್ಲಿ ಹೊಕ್ಕರೂ ಅದಕ್ಕೆ ಸೀನು ಬರಲ್ಲವಾ! ಅಂತ ತಲೆ ತುರಿಸಿ ಕೊಳ್ಳುತ್ತಿದ್ದೆ. ನಮ್ಮಜ್ಜನ ನಶ್ಯದ ಚಟದಂತೆಯೆ ಆನೆಯಮ್ಮನಿಗೆ ಧೂಳಿನ ಚಟ ಅಂತ ಲೆಕ್ಖ ಹಾಕಿದ್ದೆ ಆಗೆಲ್ಲ. ಈ ಅತಿ ಮೇಕಪ್ಪಿಗೆ ಮತ್ತೆ ದೇವಸ್ಥಾನದ ತೇರು ಕೊಟ್ಟಿಗೆಯಲ್ಲಿ ತಕ್ಕ ಶಾಸ್ತಿ ಅವಳಿಗೆ ಆಗುತ್ತಿತ್ತು ಅನ್ನೋದು ಬೇರೆ ಸಂಗತಿ. ಅಲ್ಲಿ ಬಕೆಟುಗಟ್ಟಲೆ ನೀರನ್ನ ಹೊಯ್ದು ಅವಳ ಧೂಳಿನ ತೆರೆಯಿಂದ ಮತ್ತೆ ಕರಿ ಬಣ್ಣದ ಮೈಯನ್ನ ಹೊರ ತೆಗೆಯಲಾಗುತ್ತಿತ್ತು. ಅನಂತರ ತರು ಕಟ್ಟಿಗೆಯ ಮುಂದೆ ರಾಶಿ ಹಾಕಿದ ಬೈನೆ- ಬೈಹುಲ್ಲು- ಕಬ್ಬು- ತರಕಾರಿ ಗುಡ್ಡದ ಮುಂದೆ ಅವಳು ಮಂಡಿಯೂರಿ ಮಲಗಿ ಕೊಳ್ಳುತ್ತಿದ್ದಳು. ನುರಿತ ಚಿತ್ರಕಾರರು ಕಾವಡಿಯ ಮುತುವರ್ಜಿಯಲ್ಲಿ ಅವಳ ಹಣೆ ಕೆನ್ನೆ ಕಣ್ಣಿನ ಸುತ್ತ ಹಾಗೂ ಕಂಭದಂತಹ ಕಾಲುಗಳ ಮೇಲೆ ಸುಣ್ಣದ ನೀರು ಹಾಗೂ ನೀರಿನಲ್ಲಿ ನೆನೆಸಿದ ಸೀಮೆ ಸುಣ್ಣದ ಕಡ್ಡಿ ಬಳಸಿ ರಂಗೋಲಿಯ ಚಿತ್ತರದಂತಹ ಚಿತ್ರಗಳನ್ನ ತನ್ಮಯರಾಗಿ ಬರೆಯುತ್ತಿದ್ದರು. ಚಾಮರದಂತೆ ಆಗಾಗ ಅವಳು ಬೀಸುತ್ತಿದ್ದ ಅಗಲ ಕಿವಿಗಳಿಗೂ ಈ ಚಿತ್ತಾರದ ಅಲಂಕಾರ ಸಾಗುತ್ತಿತ್ತು. ಈ ನಡುವೆ ಆಕೆಯ ಎಳೆ ಕುಮಾರ ಒಂದಷ್ಟು ತಂಟೆ ಮಾಡಿ ಅಮ್ಮನಿಂದಲೂ, ಅಮ್ಮನ ಮಾವುತನಿಂದಲೂ ನಡುನಡುವೆ ಸರದಿಯಂತೆ ಉಗಿಸಿಕೊಳ್ಳುತ್ತಿದ್ದ. ಇನ್ನು ಆನೆಯಮ್ಮ ಹೊಟ್ಟೆಗೆ ಅಲ್ಲಿ ರಾಶಿ ಹಾಕಿದ್ದ ಭಕ್ಷ್ಯಗಳನ್ನ ಎಡೆಬಿಡದೆ ಇಳಿಸಿಕೊಳ್ಳುತ್ತಲೇ ಎದ್ದು ನಿಂತು ಉಚ್ಚೆ- ಲದ್ಧಿಗಳನ್ನ ನಿರ್ದಾಕ್ಷಿಣ್ಯವಾಗಿ ಬುಟ್ಟಿಗಟ್ಟಲೆ ಉದುರಿಸಿ ಏನೂ ಆಗದವಳಂತೆ ಬಾಲವಾಡಿಸುತ್ತಿದ್ದಳು. ಇದರ ಮಧ್ಯೆಯೆ ಅವಳ ಬಾಹ್ಯ ಅಲಂಕಾರ ನಡೆಯುತ್ತಿದ್ದರೂ ಆ ಬಗ್ಗೆ ಆಕೆ ಪರಮ ನಿರ್ಲಕ್ಷ್ಯವನ್ನ ನಟಿಸುತ್ತಿದ್ದಳು. ಮಧ್ಯಾಹ್ನ ಸಮಯ ಸೂರ್ಯ ನೆತ್ತಿಗೆ ಮುಟ್ಟಲಿಕ್ಕಾದಾಗ ಅವಳ ಅನ್ನದಮುದ್ದೆಗೆ ಬೆಲ್ಲ ರಾಗಿ ಬೆರೆಸಿ ತೌಡಿನಲ್ಲಿ ಕಲಸಿದ ಮುದ್ದೆಗಳನ್ನಾಗಿಸಿ ಬೈ ಹುಲ್ಲಿನಲ್ಲಿ ಸುತ್ತಿ ಕಾವಾಡಿ ಅವಳ ಬಾಯಿಗೆ ಕೊಡುತ್ತಿದ್ದ. ಈ ಗಜ ಭೋಜನವನ್ನ ನಾವು ಬಿಟ್ಟ ಕಣ್ಣು ಬಿಟ್ಟಂತೆ ನೋಡಿ ಬೆರಗಾಗುತ್ತಿದ್ದೆವು. ಒಂದು ದಪ್ಪ ಹಾಸಿಗೆಯಂತಹ ಮೆತ್ತೆಯನ್ನ ಮಡಚಿ ಅವಳ ಬೆನ್ನಿಗೇರಿಸಿ ದನ ಕಟ್ಟುವಂತಹ ದಪ್ಪ ಹಗ್ಗದಲ್ಲಿ ಮಾವುತ ಕಾವಾಡಿ ಬಿಗಿದೆಳೆದು ಅವಳ ಹೊಟ್ಟೆಯಡಿಯಿಂದ ತಂದು ಗಟ್ಟಿಯಾಗಿ ಭದ್ರ ಕಟ್ಟುತ್ತಿದ್ದರು. ಮುಂದೆ ಅದರ ಮೇಲೆಯೆ ಅಂಬಾರಿ ಇಡಲಾಗುತ್ತಿತ್ತು. ಅವಳ ತಲೆಯಿಂದ ಇಳಿಬಿದ್ದ ಹಾಗೆ ಒಂದು ಕೆಂಪನೆ ವಸ್ತ್ರವನ್ನು ಸೊಂಡಿಲಿನಂಚಿಗೆ ಕಟ್ಟುತ್ತಿದ್ದರು. ಅದರ ಮೇಲೆ ಚಿತ್ತಾರಗಳನ್ನ ಕುಸುರಿಯಲ್ಲಿ ಕೊರೆದ ಬಂಗಾರದ ಬಣ್ಣದ ಹಿತ್ತಾಳೆ ಆಭರಣದಂತಹದ್ದೊಂದನ್ನ ಅದರ ಮೇಲೆ ಸೇರಿಸಿ ಬಿಗಿಯಲಾಗುತ್ತಿತ್ತು. ಆಮೇಲೆ ಗುಲಾಬಿ ಬಣ್ಣದ ಜರಿಯ ಅಂಚಿರುವ ರೇಶಿಮೆ ಶಾಲಿನಂತಹ ದೊಡ್ಡ ವಸ್ತ್ರವನ್ನು ಅವಳ ಎರಡೂ ಹೊಟ್ಟೆಯ ಪಕ್ಕ ನೇಲುವಂತೆ ಮೆತ್ತೆಯ ಮೇಲೆ ಹೊದಿಸಿ ಅನಂತರ ಬೆನ್ನಿನ ಮೇಲೆ ಒಂದು ದೊಡ್ಡ ಮರದ ಅಂಬಾರಿ ಕಟ್ಟಿ ಬಂದೋಬಸ್ತು ಮಾಡಲಾಯಿತೆಂದರೆ ಮಹಾರಾಣಿಯ ಅಲಂಕಾರ ಪುರಾಣ ಕಡೆಗೂ ಮುಗಿದಂತೆ. ಈ ಅಲಂಕಾರ ಸಂಭ್ರಮ ಒಂದೆಡೆ ಸಾಗುತ್ತಿದ್ದರೆ ಊರಿನ ಉದ್ದಗಲಕ್ಕೂ ಮನೆಮನೆಯ ಮುಂದೆ ಅನೇಕ ಹುಲಿವೇಷಗಳು ಕಂಡಾಪಟ್ಟೆ ಕುಣಿ ಕುಣಿದು ತಮ್ಮ ಪ್ರತಿಭೆಯನ್ನ ಮುಕ್ತವಾಗಿ ತೀರ್ಥಹಳ್ಳಿಯ ಬೀದಿದೀದಿಯುದ್ದಕ್ಕೂ ಪ್ರದರ್ಶಿಸಿ ಕಲಾರಸಿಕರಿಂದ ಕಾಸಿನ ಶಹಭಾಸ್'ಗಿರಿ ಗಿಟ್ಟಿಸುತ್ತಿದ್ದರು. ಬಾಯಲ್ಲಿ ಇಡಿ ಲಿಂಬೆಹಣ್ಣನ್ನ ಕಚ್ಚಿಕೊಂಡೆ ಕುಣಿಯೋದೇನು!, ಕುಣಿಯುತ್ತಲೇ ನೆಲಕ್ಕೆ ಹಾಕಿದ ಕಾಸನ್ನ ಕೈಯಲ್ಲಿ ಮುಟ್ಟದೆ ಕೇವಲ ಬಾಯಲ್ಲೇ ಕಚ್ಚಿ ಎತ್ತೋದೇನು!! ಕೋವಿ ಹಿಡಿದ ಬೇಟೆಗಾರನ ವೇಷದವನೊಂದಿಗೆ ಪೈಪೋಟಿಯಲ್ಲಿ ಅಬ್ಬರಿಸಿ ಬೊಬ್ಬಿರಿದು ಕುಣಿಯೋದೇನು!!! ಚುಮುಣಿ ಎಣ್ಣೆಯನ್ನ ಬಾಯಿಂದ ಉರುಟಿ ಕೈಯಲ್ಲಿ ಹಿಡಿದ ದೊಂದಿಯಿಂದ ಬೆಂಕಿಯ ಕೋಲನ್ನ ಬಾನಿನತ್ತ ಎಬ್ಬಿಸೋದೇನು!!! ಏನುಂಟು ಏನಿಲ್ಲ? ಯಾವುದನ್ನ ಕೇಳ್ತೀರಿ ಅಲ್ಲಿ! ಈ ಹುಲಿವೇಷ ಹಾಕುವವರು ಕೂಡ ಒಂದೋ ಬಂಟರ ಅಥವಾ ಬ್ಯಾರಿಗಳ ಕಲಾ ನಿಪುಣರೆ ಆಗಿರುತ್ತಿದುದೊಂದು ವಿಶೇಷ. ಅಪರೂಪಕ್ಕಲ್ಲಲ್ಲಿ ಪೂಜಾರಿ, ಪರ್ಬುಗಳೂ ಹುಲಿವೇಷ ಕುಣಿಯುವುದನ್ನ ಕಾಣಬಹುದಾಗಿತ್ತು. ಇವರ ಕಲೆಯನ್ನ ಆಸ್ವಾದಿಸಿದ ಕೆಲವು ಕಲಾಭಿಮಾನಿಗಳು ಈ ಥೆರೆವಾರಿ ಕುಣಿತದ ಕೊನೆಗೆ ಇವರ ಕುತ್ತಿಗೆಗೆ ದುಡ್ಡಿನ ಹಾರವನ್ನ ಹಾಕೋದು ಅಲ್ಲಿ ತೀರಾ ಮಾಮೂಲಿ ಪ್ರಹಸನವಾಗಿತ್ತು. ಇತ್ತಾಗಿ ದಸರೆಯ ಮೆರವಣಿಗೆಯುದ್ದಕ್ಕೂ ನೋಟಿನ ಹಾರವನ್ನ ಹೆಮ್ಮೆಯಿಂದ ಹೊತ್ತು ಕುಣಿಯುತ್ತಿರುವ ಹಿರಿ- ಮರಿ- ಕಿರಿ ಹುಲಿಗಳ ಕಿರಿಕಿರಿ ಹುಟ್ಟಿಸುವಷ್ಟು ಜಬರ್ದಾಸ್ತಾಗಿರುತ್ತಿದ್ದ ಸಾಮೂಹಿಕ ಎರ್ರಾಬಿರ್ರಿ ಕುಣಿತವನ್ನು ಕಾಣಬಹುದಾಗಿತ್ತು. ಅಂದು ನಾನು ಕಾಣುತ್ತಿದ್ದ ಹುಲಿ ವೇಷದ ಕುಣಿತದ ಮುಂದೆ ಇಂದಿನ ಸ್ಟ್ರೀಟ್ ಡ್ಯಾನ್ಸರ್ ರೇಣುಕುಮಾರನ ಕುಣಿತವೂ ಸಾಟಿಯಲ್ಲ! ಮೈತುಂಬ ಆಯಿಲ್ ಪೇಯಿಂಟಿನಿಂದ ಪಟ್ಟೆಪಟ್ಟೆ ಬಣ್ಣ ಬಳಿಸಿ ಕೊಂಡು ಸಾಕ್ಷಾತ್ ಹುಲಿಗಳಾಗಿರುತ್ತಿದ್ದ ಅವರ ಹೊಟ್ಟೆ ಭಾಗದಲ್ಲಿ ಕಪ್ಪು ಬಿಳಿ ಚುಕ್ಕಿಗಳಿರುತ್ತಿದ್ದವು. ಕೇವಲ ಬಿಗಿಯಾದ ಲಂಗೋಟಿಯಂತದ್ದನ್ನು ಕಟ್ಟಿ ಕೊಂಡಿರುತ್ತಿದ್ದ ಹುಲಿಗಳ ಹಿಂದೆ ಉದ್ದುದ್ದನೆಯ ಬಾಲವನ್ನೂ ಬಿಗಿದಿರಲಾಗುತ್ತಿದ್ದು. ಬಿಸಿಲು -ಸೆಖೆ ಯ ಆ ವಾತಾವರಣದಲ್ಲಿ ಹುಲಿವೇಷಧಾರಿಗಳ ಆ ಬಾಲ ಹೊತ್ತೆ ಬ್ಯಾಲೆನ್ಸ್ ಮಾಡಿಕೊಂಡು ಲಯಬದ್ಧವಾಗಿ ಕುಣಿಯುವ ರಣೋತ್ಸಾಹ ಇಂದಿಗೂ ನನಗೆ ಬೆರಗು ಹುಟ್ಟಿಸುತ್ತದೆ. ಇವರನ್ನ ಬಿಟ್ಟರೆ ನನಗೆ ಬೆರಗು ಅನ್ನಿಸುತ್ತಿದ್ದುದು ತಟ್ಟೀರಾಯ. ಸೊಗಸಾಗಿ ಹಲ್ಲು ಕಿರಿದು ಕೊಂಡಂತಿರುತ್ತಿದ್ದ ದೊಡ್ಡ ದೊಡ್ಡ ತಟ್ಟೀರಾಯನ ಟೊಳ್ಳು ಗೊಂಬೆಗಳನ್ನ ಅದರ ಒಳಗೆ ತೂರಿರುತ್ತಿದ್ದ ಪುಣ್ಯಾತ್ಮ ಅಷ್ಟೊಂದು ಭಾರವನ್ನ ಹೊತ್ತು ಕೊಂಡು ಬೀದಿಯುದ್ದ ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದ. ಗೊಂಬೆಯ ಸೊಂಟದ ಭಾಗಧಲ್ಲಿ ಒಂದು ತೂತು ಅವನ ದಾರಿ ಕಾಣಲಿಕ್ಕಾಗಿ ಬಿಟ್ಟಿರುತ್ತಿದ್ದರು. ಇನ್ನು ಸೊಂಟದವರೆಗೆ ಕುದುರೆಯೊಳಗೆ ಹೂತು ಹೋದ ರಾಜ ರಾಣಿಯರ ಕೀಲು ಕುದುರೆ ಸವಾರಿಯ ಗೌಜಿಯೇನು, ಶಿವಮೊಗ್ಗದ ಪೊಲೀಸ್ ಪಡೆಯ ದೊಡ್ಡ ಕುದುರೆಯೂ ಆಗ ಬಂದು ಇವೆಲ್ಲವನ್ನೂ ಒಳಗೊಂಡ ಮೆರವಣಿಗೆ ಶಮಿ ವೃಕ್ಷವಿದ್ದ ಪಾರ್ಕಿಗೆ ಕುಣಿಕುಣಿಯುತ್ತಾ ಸಾಗಿ ಹೊರಟರೆ ಕಟ್ಟ ಕಡೆಗೆ ದೇವಿಯ ಮೂಲ ಮೂರ್ತಿ ಹೊತ್ತ ಗಜರಾಣಿ ಗಾಂಭೀರ್ಯದ ಹೆಜ್ಜೆಯಿಡುತ್ತಾ ಎರಡು ಕಿಲೋಮೀಟರ್ ದೂರದ ಪಾರ್ಕಿನತ್ತ ಹೆಜ್ಜೆಯಿಡುತ್ತಿತ್ತು. ಈ ದಸರ ನನ್ನ ಪಾಲಿಗೆ ನಲಿವಿಗಾಗಿ ನೆನಪಿರುವಷ್ಟೇ ನೋವಿನ ಕಾರಣಕ್ಕಾಗಿಯೂ ನೆನಪಿನಲ್ಲಿದೆ. ಮುಂದಿನ ಮುಂದುವರೆದ ಭಾಗದಲ್ಲಿ ಅದನ್ನ ಹೇಳುತ್ತೇನೆ. --

No comments:

Post a Comment