ಮಲೆನಾಡಿನೊಂದಿಗೆ ಬೆಸೆದ ನನ್ನ ನಂಟಿನ ಹಿಂದಿನ ಕಥೆ....




ನನ್ನಜ್ಜ ತೀರ್ಥಹಳ್ಳಿಗೆ ಬಂದು ಮುಟ್ಟಿದ್ದು ತೀರಾ ಆಕಸ್ಮಿಕವಾಗಿ ಕಾರ್ಕಳ ತಾಲೂಕಿನ ಅಜೆಕಾರು ಬಳಿಯ ಗುಡ್ಡೆಮನೆಯಲ್ಲಿ ಅವರು ಹುಟ್ಟಿ ಬೆಳೆದದ್ದು. ಅವರಿಗೆ ಒಬ್ಬ ಅಣ್ಣ, ಒಬ್ಬಳು ಅಕ್ಕ ಹಾಗು ಒಬ್ಬ ತಮ್ಮನಿದ್ದರು. ಕಾಸರಗೋಡಿನ ಕಡೆಯ ಹೆಣ್ಣೊಬ್ಬಳನ್ನ ಮದುವೆಯಾಗಿದ್ದ ಅಣ್ಣನ ಯಜಮಾನಿಕೆಯಲ್ಲಿ ಅವರ ಮನೆ ನಡೆಯುತ್ತಿತ್ತು. ಅಜ್ಜ ಎರಡನೆ ಕ್ಲಾಸಿನವರೆಗೆ ಶಾಲೆಗೂ ಹೋಗಿದ್ದರಂತೆ. ಕನ್ನಡವನ್ನ ಸ್ಪಷ್ಟವಾಗಿ ಓದಲಿಕ್ಕೆ ಹಾಗೂ ಇಂಗ್ಲಿಷಿನಲ್ಲಿ ರುಜು ಮಾಡಲಿಕ್ಕೆ ಅವರಿಗೆ ಬರುತ್ತಿತ್ತು.. ಅಪ್ಪ-ಅಮ್ಮ ಸತ್ತ ನಂತರ ಎಳೆಯ ತಮ್ಮಂದಿರನ್ನ ಅಣ್ಣ ಬಹಳ ಮೋಕೆಯಿಂದ ಸಾಕಿದನಷ್ಟೇ ಅಲ್ಲ ತಂಗಿಗೊಂದು ಮದುವೆಯನ್ನೂ ಮಾಡಿದ್ದ. ಮನೆಯನ್ನ, ಇದ್ದ ತೋಟ-ಗದ್ದೆಯನ್ನ ಊರ್ಜಿತ ಮಾಡುವ ಕಾಲದಲ್ಲಿ ಹಾವುಕಚ್ಚಿ ಅಣ್ಣ ಕೊನೆಯುಸಿರೆಳೆದದ್ದೆ ತಡ ಅಜ್ಜ ಮತ್ತವರ ತಮ್ಮನ ಬಾಳು ನರಕವಾಯಿತು.


ಅದನ್ನ ನರಕ ಆಗ ಮಾಡಿದವರು ಸ್ವತಃ ಒಡಹುಟ್ಟಿದ ಅಕ್ಕ ಹಾಗೂ ಮನೆಹಾಳ ಭಾವ. ಕಾರಣ ಸರಳ, ಆಸ್ತಿಯ ಮೇಲಿನ ದುರಾಸೆ. ಅಣ್ಣನ ಹೆಂಡತಿ ಮರಳಿ ಕಾಸರಗೋಡಿನ ತವರು ಮನೆ ಸೇರಿಕೊಂಡಳು, ಅಲ್ಲಿಗೆ ಆಕೆಗೆ ಇಲ್ಲಿನ ಋಣ ಹರಿಯಿತು. ಇಂದಿಗೂ ನಮಗ್ಯಾರಿಗೂ ಅವರ ಸಂಪರ್ಕವಿಲ್ಲ, ಅವರೆಲ್ಲಿದ್ದರೆಂತಲೂ ಗೊತ್ತಿಲ್ಲ. ಹುಡುಕುವ ಪ್ರಯತ್ನವನ್ನ ನಾನಂತೂ ಮಾಡುತ್ತಿದ್ದೇನೆ. ಅಜ್ಜನ ಅಣ್ಣ ಸಾಯುವಾಗ ಅವರಿಗೊಂದು ಕೈಕೂಸಿತ್ತಂತೆ. ದಿನ ನಿತ್ಯದ ಅಕ್ಕ-ಭಾವನ ಕಿರುಕುಳ ಒದೆಗಳನ್ನ ಸಹಿಸಲಾಗದೆ ಕಿರಿಯರಿಬ್ಬರು ಕೈಕೈ ಹಿಡಿದುಕೊಂಡು ಮನೆ ಬಿಟ್ಟರು. ಎಲ್ಲಿಗೆ ಹೋಗಬೇಕಂತ ನಿರ್ಧರಿಸಿ ಅವರು ಹೊರಟದ್ದೇನೂ ಅಲ್ಲ. ಅಲ್ಲಿಂದ ಪಾರಾದರೆ ಸಾಕು ಅಂತ ಹೊರಟದ್ದಷ್ಟೇ.

ಆವಾಗ ಆಗುಂಬೆ ಘಾಟಿಗೆ ಈಗಿನಂತೆ ರಸ್ತೆ ಸಂಪರ್ಕ ಇರಲಿಲ್ಲ. ಕಾಲು ಹಾದಿಯೊಂದಿದ್ದು (ಕಾಲುಹಾದಿ ಈಗಲೂ ಇದೆ ಆದರೆ ನಿರ್ವಹಣೆಯಿಲ್ಲದೆ ಹಾಳುಬಿದ್ದಿದೆ.) ದಕ್ಷಿಣ ಕನ್ನಡ ಜಿಲ್ಲೆಗೆ ತೀರ್ಥಯಾತ್ರೆಗೆ ಬಂದು ಹೋಗುವ ಘಟ್ಟದ ಮೇಲಿನವರು, ವರ್ಷಕ್ಕೊಂದಾವರ್ತಿ ಸಂಭಾವನೆಗೆ ಘಟ್ಟ ಹತ್ತುತ್ತಿದ್ದ ಬಡ ಬ್ರಾಮ್ಹಣರು, ಘಟ್ಟದ ಗೌಡರ ತೋಟಗಳಿಗೆ ದುಡಿಯಲು ಇಲ್ಲಿಂದ ಆಳುಗಳನ್ನು ಕರೆದೊಯ್ಯುತ್ತಿದ್ದ ಸೇರೆಗಾರರು, ದಕ್ಷಿಣ ಕನ್ನಡದಿಂದ ಘಟ್ಟಕ್ಕೆ ಶಾಶ್ವತ ಆನ್ನ ಅರಸಿ ವಲಸೆ ಹೋಗುವವರು ಹಾಗೂ ಬೇಸಿಗೆಯಲ್ಲಿ ತಮ್ಮ ಒಣಮೀನಿಗೆ ಘಟ್ಟದಲ್ಲಿ ಗಿರಾಕಿ ಹುಡುಕುತ್ತಿದ್ದ ಸಾಹಸಿ ಬ್ಯಾರಿಗಳು ಈ ಕಾಲು ಹಾದಿಯನ್ನ ಬಳಸಿ ಕಾರ್ಕಳ ತಾಲೂಕಿನ ಸೋಮೇಶ್ವರದಿಂದ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸೇರಿಕೊಳ್ಳುತ್ತಿದ್ದರು. ಎಲ್ಲಕ್ಕೂ ತಮಾಷೆಯ ಸಂಗತಿಯೆಂದರೆ ಅದು ಅಂತರರಾಜ್ಯ ಗಡಿರೇಖೆಯೂ ಆಗಿತ್ತು. ಮದರಾಸು ಪ್ರಾಂತ್ಯಕ್ಕೆ ಸೇರಿದ್ದು ಬ್ರಿಟಿಷರ ನೇರ ಆಳ್ವಿಕೆಯಲ್ಲಿದ್ದ ದಕ್ಷಿಣ ಕನ್ನಡವನ್ನ ಮೈಸೂರು ರಾಜ್ಯದಿಂದ ಅದು ವಿಭಜಿಸುತ್ತಿತ್ತು. ದಟ್ಟಕಾಡು, ವರ್ಷದ ಹತ್ತು ತಿಂಗಳ ಧಾರಾಕಾರ ಮಳೆಯ ದೆಸೆಯಿಂದ ಜಿಗಣೆಗಳ ಕಾಟ, ಮಲೇರಿಯದಂತಹ ಜ್ವರದ ಕಾರಣಕ್ಕೆ ಮಲೆನಾಡು ಆಗ ಖ್ಯಾತವಾಗಿತ್ತು. ಅಂತಹ ದುರ್ಗಮ ದಾರಿಯಲ್ಲಿ ಡಕಾಯಿತರ ಹಾಗೂ ಕಾಡುಪ್ರಾಣಿಗಳ ಭೀತಿ ಸದಾ ಇರುತ್ತಿದ್ದರಿಂದ ಆ ಮಾರ್ಗವಾಗಿ ಸಾಗುವವರು ಧೈರ್ಯಕ್ಕೆ ಗುಂಪುಗಟ್ಟಿಕೊಂಡೆ ಘಾಟಿಯ ಹಾದಿಯಲ್ಲಿ ಸಾಗುತ್ತಿದ್ದರು. ಜನ ಕಡಿಮೆ ಇದ್ದರೆ ಇನ್ನಷ್ಟು ಮಂದಿ ಕೂಡುವವರೆಗೆ ಸೋಮೇಶ್ವರದಲ್ಲಿಯೇ ಕೂತು ಕಾಯುತ್ತಿದ್ದರಂತೆ.

ಮುಂದೆ ಮಂಗಳೂರಿನ ಸಿಪಿಸಿ ಕಂಪನಿಯವರು ಘಟ್ಟದ ಮೇಲಿನ ಸಾಗರದ ದೇವಂಗಿ ಮೋಟರ್ ಸರ್ವಿಸ್'ನವರೊಂದಿಗೆ ಜೊತೆ ಸೇರಿ "ಕಂಬೈಂಡ್ ಬುಕ್ಕಿಂಗ್ ಏಜೆನ್ಸಿ"ಯನ್ನ ಆರಂಭಿಸಿ ಇಲ್ಲಿ ಸಂಪರ್ಕಕ್ಕೆ ಅನುವು ಮಾಡಿಕೊಟ್ಟರಂತೆ. ಸಿಪಿಸಿಯವರ ದೊಡ್ಡ ಬಸ್ಸು ಸೋಮೇಶ್ವರದಲ್ಲಿ ತಂದಿಳಿಸಿದ ಪ್ರಯಾಣಿಕರು ನಾಲ್ಕಾಣೆ ಕೊಟ್ಟು ಅಲ್ಲಿರುತ್ತಿದ್ದ ಟ್ಯಾಕ್ಸಿಗಳಲ್ಲಿ ಕೂತು ಆಗುಂಬೆ ಸೇರಿದರೆ ಅಲ್ಲಿ ಕಾದಿರುತ್ತಿದ್ದ ಡಿಎಂಎಸ್ ತಾವಿಳಿಸಿದ ಪ್ರಯಾಣಿಕರ ಜಾಗದಲ್ಲಿ ಇವರನ್ನ ಹೊತ್ತು ತೀರ್ಥಹಳ್ಳಿ-ಶಿವಮೊಗ್ಗದ ದಿಕ್ಕಿಗೆ ಓಡುತ್ತಿದ್ದವು. ಎರಡನೆ ಮಹಾಯುದ್ದದ ಸಮಯ ಅದಾಗಿದ್ದರಿಂದ ಪೆಟ್ರೋಲ್-ಡೀಸಲ್ ಎಲ್ಲಾ ಸೈನ್ಯದ ಬಳಕೆಗೆ ಸೀಮಿತವಾಗಿ ತತ್ವಾರವಾಗಿತ್ತು. ಹೀಗಾಗಿ ಅಂದು ಓಡುತ್ತಿದ್ದುದು ಕಲ್ಲಿದ್ದಲ ಬಸ್ಸುಗಳು!

ಕಲ್ಲಿದ್ದಲ ಬಸ್ಸುಗಳೆಂದರೆ ಹನುಮಂತನ ಮೂತಿಯಂತೆ ಊದಿಕೊಂಡ ಮುಂಭಾಗದಲ್ಲಿ ಇಂಜಿನ್ ಇದ್ದು ಹಿಂದಿನ ಸೀಟಿನಡಿಯಲ್ಲಿ ಎರಡೋ ಮೂರೋ ಸಿಲೆಂಡರಿನ ಬಾಯ್ಲರ್'ಗಳಿರುತ್ತಿದ್ದ ವಿಶಿಷ್ಟ ತಂತ್ರಜ್ಞಾನದ ವಾಹನಗಳು. ಸಿಲೆಂಡರಿನ ಪಕ್ಕದಲ್ಲಿ ಮುಚ್ಚಿದ ಒಂದು ಓಲೆ ಇರುತ್ತಿದ್ದು ಅದಕ್ಕೆ ಕಲ್ಲಿದ್ದಲು ತುಂಬಿಸಿ ಮುಚ್ಚಿ ಚನ್ನಾಗಿ ಉರಿಯಲು ಹೊರಗಡೆಯಿರುತ್ತಿದ್ದ ಹ್ಯಾಂಡಲನ್ನು ಎಡೆಬಿಡದೆ ತಿರುಗಿಸ ಬೇಕಾಗುತ್ತಿತ್ತು, ನಿಗಿನಿಗಿ ಕಲ್ಲಿದ್ದಲ ಶಾಖಕ್ಕೆ ಸಿಲೆಂಡರಿನಲ್ಲಿದ್ದ ನೀರು ಕುದ್ದು ಆದರಿಂದೇಳುವ ಹಬೆಯ ಒತ್ತಡದ ಶಕ್ತಿಯಲ್ಲಿ ಬಸ್ಸಿನ ಇಂಜಿನ್ ಚಾಲನೆಗೊಂಡು ವಾಹನ ಮುಂದೋಡುತ್ತಿತ್ತು . ಓಡುತ್ತಿತ್ತು ಅನ್ನೋದಕ್ಕಿಂತ ತೆವಳುತ್ತಿತ್ತು ಅನ್ನೋದೇ ವಾಸಿ. ಏಕೆಂದರೆ ಕೇವಲ ಮೂವತ್ತು ಕಿಲೋಮೀಟರ್ ದೂರದ ತೀರ್ಥಹಳ್ಳಿ ಮುಟ್ಟಲು ಆಗುಂಬೆಯಿಂದ ಹೊರಟ ಅಂತಹ ಒಂದು ಬಸ್ಸಿಗೆ ಕೇವಲ ಎರಡು ಗಂಟೆ ಬೇಕಾಗುತ್ತಿತ್ತು. ತೀರ್ಥಹಳ್ಳಿಯಿಂದ ಅದರ ಎರಡು ಪಟ್ಟು ದೂರದ ಶಿವಮೊಗ್ಗ ಸೇರಲು ನಾಲ್ಕು ತಾಸು ಕಡಿಮೆಯೆಂದರೂ ಬೇಕೇ ಇತ್ತು. ಇದಷ್ಟೇ ಅಲ್ಲದೆ ಏರಿನಲ್ಲಿ ಬಸ್ಸು ಒತ್ತಡ ಸಾಲದೆ ಮುಂದೋಡಲು ಮುಷ್ಕರ ಹೂಡುತ್ತಲೂ ಇತ್ತು. ಆಗ ಬಸ್ಸಿನ ಕ್ಲೀನರ್ ಕೆಳಗಿಳಿದು ಬೆವರು ಕಿತ್ತು ಬರುವ ತನಕ ಒಲೆಯ ಹ್ಯಾಂಡಲ್ ತಿರುವುತ್ತಿದ್ದ. ಅಷ್ಟೂ ಸಾಕಾಗಾದಿದ್ದರೆ ಪ್ರಯಾಣಿಕರೆಲ್ಲ ಎದ್ದು ಒಂದು ಸುತ್ತು ಬಸ್ಸನ್ನ ತಳ್ಳಿ ಮುಂದೆ ತರಬೇಕಾಗುತ್ತಿತ್ತು!

ಹೀಗೆ ಗುರಿ ಮುಟ್ಟುವ ಭರದಲ್ಲಿ ಸೀಟು ಸರಿಯಾಗಿ ಸಿಕ್ಕದೆ ಹಿಂದಿನ ಸಾಲಿನಲ್ಲಿ ಸಿಲೆಂಡರ್ ಮೇಲಿನ ಸ್ಥಳದಲ್ಲಿ ಕೂತುಕೊಳ್ಳುವ ಅನಿವಾರ್ಯತೆಗೆ ಸಿಕ್ಕ ಪ್ರಯಾಣಿಕರದ್ದಂತೂ ನಾಯಿ ಪಾಡಾಗುತ್ತಿತ್ತು. ಕುದಿ ನೀರ ಸಿಲೆಂಡರಿನ ಉರಿಯಲ್ಲಿ ಸ್ವಲ್ಪ ಪಾಲು ಅವರಿಗೂ ಉಚಿತವಾಗಿ ಸಿಗುತ್ತಿತ್ತಲ್ಲ! ಮನಸಿಲ್ಲದಿದ್ದರೂ ಬಸ್ಸಿನೊಂದಿಗೆ ಖಡ್ಡಾಯವಾಗಿ ಅದನ್ನ ಹಂಚಿಕೊಳ್ಳಲೆಬೇಕಿತ್ತು! ಸಾಲದ್ದಕ್ಕೆ ಮೇಲೇಳುತ್ತಿದ್ದ ಕಲ್ಲಿದ್ದಲ ಹೊಗೆಯ ಕರಿ ಹಾಗೂ ಹಿಟ್ಟಿನಂತಾಗಿರುತ್ತಿದ್ದ ಮಣ್ಣು ಹಾದಿಯ ಧೂಳುಗಳೆಲ್ಲ ಸರಿ ಸಮವಾಗಿ ಬೆರೆತು ಅವರನ್ನ ಆವರಿಸಿ ಬಸ್ಸಿಳಿಯುವಾಗ ಅವರು ಥೇಟ್ ಆದಿಮಾನವನ ಅಪರಾವತಾರವಾಗಿ ಕಂಗೊಳಿಸುತ್ತಿದ್ದರು. ಆಗಿನ್ನೂ ಡಾಮರ್ ಅಥವಾ ಟಾರ್ ಎನ್ನುವ ಅದ್ಭುತ ವಸ್ತು ಮಲೆನಾಡಿನ ರಸ್ತೆಗಳನ್ನ ಮುತ್ತಿಟ್ಟಿರಲಿಲ್ಲ . ಮುಂದೆ ಕೂತವರಿಗೇನೂ ಹೆಚ್ಚು ವಿನಾಯತಿ ಇರುತ್ತಿರಲಿಲ್ಲ. ಅವರಿಗೆ ರಸ್ತೆ ಧೂಳಿಗೆ ಸಿಕ್ಕು ಕಂಚ್ಗಿನ ಪ್ರತಿಮೆಗಳಾಗುವ ವಿಶೇಷ ಯೋಗವಿರುತ್ತಿತ್ತು!. ಒಟ್ಟಿನಲ್ಲಿ ಯಾವ ಬಣ್ಣದ್ದೆಂದೆ ಗುರುತಿಸಲಾಗದ ಸ್ಥಿತಿಯಲ್ಲಿರುತ್ತಿದ್ದ ಅವರು ಹಾಕಿರ ಬಹುದಾದ ಬಿಳಿ ಅಂಗಿ ಹಾಗು ಮುಂಡನ್ನು ಹಿಂದೊಮ್ಮೆ ಅದು ಬಿಳಿಯದೇ ಆಗಿತ್ತು ಅಂತ ಯಾರಾದರೂ ಆಣೆ ಪ್ರಮಾಣ ಮಾಡಿ ಹೇಳಬೇಕಾಗುತ್ತಿತ್ತು?!



ಅಂತಹ ದುರ್ಗಮ ಹಾದಿಯನ್ನ ಹಿಡಿದು ಕೈಯಲ್ಲಿ ಮೂರು ಕಾಸಿಲ್ಲದ ಕರ್ಮಕ್ಕೆ ಎಂಟು ವರ್ಷದ ನಾರಾಯಣ ಹಾಗೂ ಐದು ವರ್ಷದ ನಾಗಪ್ಪ ಅನ್ನದ ತಲಾಶಿನಲ್ಲಿ ಮತ್ತು ಭವಿಷ್ಯದ ನೆಮ್ಮದಿಯ ಹುಡುಕಾಟದಲ್ಲಿ ಯಾತ್ರಾರ್ಥಿಗಳ ತಂಡವೊಂದರ ಜೊತೆ ಜೊತೆಗೆ ಹೆಜ್ಜೆ ಹಾಕುತ್ತಾ ನಡೆದೇ ತೀರ್ಥಹಳ್ಳಿ ಸೀಮೆ ಮುಟ್ಟಿದರು. ಮೇಳಿಗೆಯ ಸಾಹುಕಾರರಾದ ಐತಾಳರ ಅಡುಗೆ ಮನೆಯಲ್ಲಿ ಹುಡುಗರಿಗೆ ಅಡುಗೆ ಸಹಾಯಕರ ಕೆಲಸ ಸಿಕ್ಕಿತು. ಬಾಳಿನಲ್ಲಿ ಅವರ ಮುಂದಿನ ಅನ್ನದ ದಾರಿ ಅಲ್ಲೆ ಎಲ್ಲೋ ಇತ್ತು...

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು