ಬೈಟು ಮಸಾಲೆ ದೋಸೆ.....
ಚಿಕ್ಕಂದಿನಲ್ಲಿ ನನಗೆ ವಿಪರೀತ ತಿನ್ನುವ ರಾವು ಬಡಿದುಕೊಂಡಿತ್ತು. ಚಂದ-ಬಣ್ಣಬಣ್ಣವಾಗಿ ಕಂಡದ್ದೆಲ್ಲ ಕೊಂಡು ತಿನ್ನುವ ಚಪಲ ನನಗಾಗ. ಆದರೆ ನನ್ನ ಚಡ್ಡಿಯ ಜೇಬು ಒಂದು ಬದಿ ತೂತಾಗಿರುತ್ತಿದ್ದರೆ, ಇನ್ನೊದು ಬದಿ ಖಾಲಿ ಹೊಡೆಯುತ್ತಿತ್ತು. ಇನ್ನು ಹಿರಿಯರೋ, ಯಾರೂ ಅಂಗಡಿ ತಿಂಡಿಗಳನ್ನ ಕೊಡಿಸುತ್ತಲೇ ಇರಲಿಲ್ಲ. ಅಂಗಡಿ ತಿಂಡಿ ತಿಂದರೆ ಆರೋಗ್ಯ ಹುಷಾರು ತಪ್ಪುತ್ತದೆ ಅನ್ನೋದು ಅವರ ಅನುಗಾಲದ ಪಲ್ಲವಿ. ಮನೆಯ ಖರ್ಚುವೆಚ್ಚಗಳನ್ನ ಇರುತ್ತಿದ್ದ ಅಲ್ಪ ಆದಾಯದಲ್ಲೆ ಸರಿದೂಗಿಸುವ ತಂತಿ ಮೇಲಿನ ನಡಿಗೆಯನ್ನ ಮಾಡುವ ಕಾರಣಕ್ಕಾಗಿಯೆ ಬಹುಷಃ ಈ ಸಿದ್ಧ ಎಚ್ಚರಿಕೆಯನ್ನ ಕೊಟ್ಟುಕೊಟ್ಟೆ ಹೊರಗಡೆ ಅಂಗಡಿಗಳ ಮುಂದೆ ಹುಟ್ಟುತ್ತಿದ್ದ ನಮ್ಮಂತಾ ಹಟಮಾರಿ ಮಕ್ಕಳ ತೀರದ ಬೇಡಿಕೆಗಳಿಂದ ಆಗಬಹುದಾಗಿದ್ದ ಸಂಭಾವ್ಯ ಮುಜುಗರಗಳಿಂದ ದೊಡ್ಡವರು ತಪ್ಪಿಸಿಕೊಳ್ಳುವ ಹರ ಸಾಹಸವಾಗಿತ್ತು ಅಂತಾ ಈಗ ಅನ್ನಿಸುತ್ತೆ. ನಮ್ಮ ಮನೆಯಲ್ಲಿ ತೀರ ಹೊಟ್ಟೆ ಬಿರಿಯುವಷ್ಟಲ್ಲದಿದ್ದರೂ ಹೊಟ್ಟೆ ತುಂಬುವಷ್ಟು ಊಟಕ್ಕೆ ಕೊರತೆಯಿರಲಿಲ್ಲ. ನಮ್ಮ ಮನೆ ಅಗತ್ಯಗಳಿಗೆ ಕೇವಲ ಒಂದೆರಡು ಕುಡ್ತೆ ಕರೆದ ಹಾಲನ್ನ ಉಳಿಸಿ ಕೊಂಡ ಅಮ್ಮ ಉಳಿದ ಎಲ್ಲವನ್ನೂ ಮಾರಿ ಮನೆಖರ್ಚಿಗೆ ನಾಲ್ಕು ಕಾಸು ಹೊಂದಿಸುತ್ತಿದ್ದರು. ಅದೂ ಸಾಲದೆ ಬರುತ್ತಿದ್ದರಿಂದ ಹೊಲಿಗೆ ಯಂತ್ರವನ್ನ ಇಟ್ಟುಕೊಂಡು ಯಾರ್ಯಾರದ್ದೋ ಸೀರೆಗಳಿಗೆ ಫಾಲ್ ಹಾಕಿಯೋ, ಇನ್ಯಾರದ್ದೋ ಲಂಗಕ್ಕೆ-ಬ್ಲೌಸಿಗೆ ಅಂಚು ಹೊಲೆದೋ ಇನ್ನೊಂದು ಮೂರು ಕಾಸನ್ನ ಕೂಡುತ್ತಿದ್ದರು. ಪ್ರತಿ ಸಂಜೆ ಮನೆಯ ಜಗಲಿಯ ಮೂಲೆಯಲ್ಲಿದ್ದ ಹೊಲಿಗೆ ಮಿಶೀನಿನ ಎದುರು ಸ್ಟೂಲೊಂದರಲ್ಲಿ ಕೂತು ದಪ್ಪ ಕನ್ನಡಕವೊಂದನ್ನ ಏರಿಸಿಕೊಂಡು ಅವರು ತನ್ಮಯರಾಗಿ ಬೀಳುವ ಹೊಲಿಗೆಯನ್ನೇ ದಿಟ್ಟಿಸುತ್ತಾ, ಯಾಂತ್ರಿಕವಾಗಿ ಮಿಷನ್ನಿನ ಪೆಡಲನ್ನು ತನ್ಮಯರಾಗಿ ತುಳಿಯುತ್ತಿರುವ ಚಿತ್ರ ಹಾಗೆಯೆ ನಿಶ್ಚಲವಾಗಿ ಕಟ್ಟುಹಾಕಿದ ಚಿತ್ರದಂತೆ ನನ್ನ ಮನಸಿನ ಭಿತ್ತಿಯ ಕೀಳಲಾರದ ಮೊಳೆಗೆ ಭದ್ರವಾಗಿ ತೂಗುಬಿದ್ದಿದೆ.
ಅಷ್ಟಕ್ಕೂ ಆಗ ಶಿವಮೊಗ್ಗದ "ಶ್ರೀಗಜಾನನ ಮೋಟರ್ ಸರ್ವಿಸ್"ನಲ್ಲಿ ಡ್ರೈವರ್ ಆಗಿದ್ದ ನಮ್ಮಜ್ಜನಿಗೆ ಬರುತ್ತಿದ್ದ ಪಗಾರವಾದರೂ ಎಷ್ಟು? ಪಿಎಫ್ ವಗೈರೆಗಳೆಲ್ಲ ಕಳೆದನಂತರ ಸುಮಾರು ನಾಲ್ಕುನೂರ ಐವತ್ತಿತ್ತೇನೊ. ಕಳೆದ ಶತಮಾನದ ಎಂಭತ್ತರ ದಶಕದ ಅಂತ್ಯದ ದಿನಗಳವು. ಮದುವೆ ಮಾಡಿ ಕೊಟ್ಟರೂ ತವರಿಗೆ ಮರಳಿ ಬಂದು ಠಿಕಾಣಿ ಹಾಕಿರುವ ಮಗಳು-ಮತ್ತವಳ ಸಂತಾನ ನಾನು, ಇನ್ನುಳಿದಂತೆ ಐದು ಮಕ್ಕಳು, ಹೆಂಡತಿ ಇವರೆಲ್ಲರ ಊಟ ಬಟ್ಟೆಯ ಖರ್ಚು ಕಳೆದು ತನ್ನ ಸಣ್ಣಪುಟ್ಟ ಶೋಕಿಗಳಿಗೂ ಅದರಲ್ಲೆ ನಾಲ್ಕು ಕಾಸು ಉಳಿಸಿಕೊಂಡು ಸಂಬಳದ ಸಣ್ಣ ಪಾಲೊಂದನ್ನ ಅವರು ಆರ್'ಡಿ ಕಟ್ಟುತ್ತಿದ್ದರು. ಮುಂದೆ ಇನ್ನು ಮೂರು ಹೆಣ್ಣು ಮಕ್ಕಳ ಮದುವೆ ಮಾಡುವ ಜವಾಬ್ದಾರಿತೂ ಹೆಗಲ ಮೇಲಿತ್ತಲ್ಲ. ಹೀಗಾಗಿ ಅನಿವಾರ್ಯವಾಗಿ ಕೈಹಿಡಿತದಲ್ಲೇ ಖರ್ಚು-ವೆಚ್ಚಗಳನ್ನ ನಿಭಾಯಿಸುವ ಅನಿವಾರ್ಯತೆ ಅವರಿಗಿತ್ತು. ಹಾಗೆ ನೋಡಿದರೆ ಅಜ್ಜನಿಗೆ ಚಟಗಳೇನೂ ಇರಲಿಲ್ಲ. ನನ್ನಜ್ಜ ಧೂಮಪಾನಿಯಲ್ಲ. ಆದರೆ ಕುಡಿತದ ಶೋಕಿ ಚೂರಿತ್ತು, ಆದರೂ ತನ್ನ ಸ್ವಂತ ಖರ್ಚಿನಲ್ಲಿ ಅವರು ಕೊಂಡು ಕುಡಿದಿದ್ದನ್ನ ನಾಕಾಣೆ! ಯಾರೊ ಸಹುದ್ಯೋಗಿಗಳು ಕೊಡಿಸಿದ್ದಾರೆ ಅಪರೂಪಕ್ಕೊಮ್ಮೆ ಏರಿಸಿರಬಹುದಷ್ಟೆ. ಆಗಾಗ ನಶ್ಯ ಏರಿಸುವ ಸುಖ ಅನುಭವಿಸುವುದನ್ನ ಕಂಡಿದ್ದೆನಾದರೂ ಅದು ನಿರಂತರ ಹವ್ಯಾಸವೇನೂ ಆಗಿರಲಿಲ್ಲ. ಮನೆಗೆ ಬಂದಾಗಲೆಲ್ಲ ಬೆನ್ನಿಗೆ ಕೈ ಕಾಲಿಗೆ ತೆಂಗಿನೆಣ್ಣೆ ಮಾಲೀಸು ಮಾಡಿಸಿಕೊಂಡು ಬಿಸಿಬಿಸಿ ನೀರಲ್ಲಿ ಮೀಯುವ ಚಟ ಮಾತ್ರಾ ಸ್ವಲ್ಪ ಹೆಚ್ಚೇ ಇತ್ತು ಅವರಿಗೆ. ನಾವು ಕಿರಿಯರ್ಯಾರಾದರೂ ನಮ್ಮ ಪುಟ್ಟ ಪುಟ್ಟ ಕೈಗಳಿಂದ ಅವರು ಸಾಕು ಸಾಕು ಅನ್ನುವ ವರೆಗೂ ಬೆನ್ನಿಗೆ ಎಣ್ಣೆ ಹಚ್ಚಿ ತಿಕ್ಕ ಬೇಕಿತ್ತು. ಎಣ್ಣೆ ಹಚ್ಚಿದ ಉಪಕಾರಕ್ಕೆ ಅವರು ಒಂದು ಚೂರು ಚಿಕ್ಕಿ ದಯಪಾಲಿಸುತ್ತಿದ್ದರು ಅನ್ನೋದೇ ನಮ್ಮ ಅಂದಿನ ನಿಷ್ಕಾಮಕರ್ಮಕ್ಕೆ ಪ್ರೇರಕ ಶಕ್ತಿ! ಅದಾದ ಮೇಲೆ ಕಟ್ಟಿ ಕೊಂಡಿರುತ್ತಿದ್ದ ಬರೀ ಲಂಗೋಟಿಯಲ್ಲೆ ಮನೆ ಹಿತ್ತಲಿನಲ್ಲಿದ್ದ ತೆಂಗಿನ ಮರವನ್ನ ಏಣಿಯಿಟ್ಟು ಹತ್ತಿ ಅದರ ಕಸ ಕಿತ್ತು, ಹುಳ ಹುಪ್ಪಡಿ ಕೂರದಂತೆ ಅದರ ಮಡಿಲುಗಳ ಬುಡದಲ್ಲಿ ಅಲ್ಲಲ್ಲಿ ಉಪ್ಪು ತುಂಬಿ, ಪಕ್ಕದಲ್ಲಿದ್ದ ಗೊಬ್ಬರದ ಗುಂಡಿಯನ್ನೊಮ್ಮೆ ಮೇಲೆ ಕೆಳಗೆ ಮಾಡಿ ಹೊಸ ಸೊಪ್ಪು ತುಂಬಿ, ಹೊಸತಾಗಿ ಹಿತ್ತಲಲ್ಲಿ ಎರಡು ಗಿಡ ನೆಟ್ಟು, ಹಿಂದೆ ನೆಟ್ಟಿದ್ದ ಗಿಡಗಳ ಯೋಗಕ್ಷೇಮ ವಿಚಾರಿಸಿಕೊಳ್ಳುವ ಹೊತ್ತಿಗೆ ಅವರ ಬೆವರು ಬಸಿದು ಹೋಗಿರುತ್ತಿತ್ತು. ಅಲ್ಲಿಂದ ನೇರ ಕೊಟ್ಟಿಗೆಗೆ ಧಾವಿಸಿ ತಮ್ಮ ನೆಚ್ಚಿನ ದನಗಳಿಗಷ್ಟು ಅಟ್ಟದಿಂದ ಹುಲ್ಲೆಳೆದು ಹಾಕಿ ಅವುಗಳ ಗಂಗೆದೊಗಳು ತುರಿಸಿ ಅಲ್ಲಲ್ಲಿ ಅವಕ್ಕೆ ಅಂಟಿರಬಹುದಾದ ಉಣುಗನ್ನ ಕಿತ್ತು ಹಾಕುವ ಕಾಯಕ ಮಾಡುತ್ತಿದ್ದರು. ಅಷ್ಟಾಗುವಾಗ ಅಮ್ಮ ಹಂಡೆಯಲ್ಲಿ ಕುದಿಕುದಿ ನೀರು ತಯಾರಿಟ್ಟಿರುತ್ತಿದ್ದರು ಅಲ್ಲಿಗೆ ಅಜ್ಜನ ಮಹಾ ಮಜ್ಜನಕ್ಕೆ ವೇದಿಕೆ ಸಿದ್ಧ ವಾಗಿರುತ್ತಿತ್ತು. ಈ ಸ್ನಾನದ ಮಧ್ಯದಲ್ಲೊಮ್ಮೆ ಅಜ್ಜಿಗೆ ಅವರು ಬೆನ್ನುಜ್ಜಲು ಕೂಗು ಹಾಕೊದಿತ್ತು. ಅಜ್ಜಿ ಆಗ ಏನಾದರೂ ಕೆಲಸದಲ್ಲಿ ವ್ಯಸ್ಥವಾಗಿದ್ದರೆ ಆ ಹೊಣೆ ನನ್ನ ಅಥವಾ ಕಿರಿ ಚಿಕ್ಕಮನ ಕೈಗೆ ಬೀಳುತ್ತಿತ್ತು. ಬಿಡಿಸಿದ್ಸ ಕಾಯಿ ಜುಟ್ಟಿನಲ್ಲಿ ಅವರ ಎಣ್ಣೆಮಯ ಬೆನ್ನನ್ನು ಉಜ್ಜಿ ಉಜ್ಜಿ ಕುದಿ ನೀರನ್ನ ನಾವು ಚೋಪುತ್ತಿದ್ದೆವು. ಅಲ್ಲಿಗೆ ಅಜ್ಜ ಸಂತೃಪ್ತ ಸಂತೃಪ್ತ. ಮತ್ತರ್ಧ ಘಂಟೆ ಅದೇ ಹಬೆಯ ಮತ್ತಿನಲ್ಲಿ ಹಂಡೆ ಎದುರಿನ ಮಣೆಯ ಮೇಲೆ ಕೂತು ಮೆಲ್ಲ ಮೆಲ್ಲ ಮೀಯುತ್ತಾ, ತನ್ನ ಈ ಶೋಕಿಗೆ ಅಜ್ಜಿಯಿಂದ ಪದೆಪದೆ ಅಣಗಿಸಿಕೊಳ್ಳುತ್ತಾ ಅಂತೂ ಹಂಡೆಯ ಕೊನೆಹನಿ ನೀರು ಖಾಲಿಯಾಗುತ್ತಲೂ ಅಜ್ಜನ ಸ್ನಾನ ಕೊನೆಗೂ ಮುಗಿಯುತ್ತಿತ್ತು.
ಅಜ್ಜನ ಕಂಪನಿ ಇದ್ದದು ಸಾಗರದಲ್ಲಿ. ಅವರ ನಿತ್ಯದ ರೂಟು ಇದ್ದದ್ದು ಶಿವಮೊಗ್ಗದಿಂದ ಉಡುಪಿಗೆ. ಕಂಪನಿಯ ಗ್ಯಾರೇಜು ಶಿವಮೊಗ್ಗ ಹೊರವಲಯದ ತೀರ್ಥಹಳ್ಳಿ ರಸ್ತೆಯಲ್ಲಿತ್ತು. ಹತ್ತು ದಿನ ಅಥವಾ ಹದಿನೈದು ದಿನಕ್ಕೊಮ್ಮೆ ಅಜ್ಜ ಮನೆಗೆ ಬರುವುದಿತ್ತು. ಉಳಿದ ದಿನಗಳಲ್ಲಿ ಗ್ಯಾರೇಜಿನ ಮರದ ಬೆಂಚೆ ಅವರ ಶಯನ ತೂಲಿಕಾ ತಲ್ಪ. ಬೆಳಗ್ಯೆ ಐದು ಮೂವತ್ತಕ್ಕೆ ಶಿವಮೊಗ್ಗ ಬಿಡುತ್ತಿದ್ದ ಅವರ ಬಸ್ಸು "ವಿನಯ" ಮಧ್ಯಾಹ್ನ ಉಡುಪಿ ಮುಟ್ಟಿ ಅಲ್ಲಿಂದ ಎರಡೂವರೆಗೆ ಮರಳಿ ಹೊರಟು ರಾತ್ರಿ ಏಳೂವರೆಯ ಸುಮಾರಿಗೆ ಶಿವಮೊಗ್ಗ ಮುಟ್ಟುತಿದ್ದರು. ಹೋಲಿಕೆಯಲ್ಲಿ ಈ ಹೆಗಡೇರ ಬಸ್ಸು ಇನ್ನಿತರ ಮಿನಿ ಬಸ್ಸುಗಳಾದ "ಲಾವಣ್ಯ" "ಗಜೇಂದ್ರ"ಗಳಿಗಿಂತ ವೇಗದಲ್ಲಿ ನಿಧಾನ ಎಂಬ ಆರೋಪ ಹೊತ್ತಿದ್ದರೂ ಸುರಕ್ಷತೆಗೆ ಹೆಸರುವಾಸಿಯಾಗಿತ್ತು. ತಮ್ಮ ಸರ್ವಿಸಿನ ಉದ್ದಕ್ಕೂ ಅವರ ಸೇವಾವಧಿಯ ದಾಖಲೆಯಲ್ಲಿ ಅಫಘಾತದ ಕರಿಚುಕ್ಕೆಯಿಲ್ಲ. ಈ ಐದು ತಾಸಿನ ಒಮ್ಮುಖ ಪ್ರಯಾಣದಲ್ಲಿ ಅವರು ಎರಡು ಕಡೆ ಪ್ರಯಾಣಿಕರ "ಚಾ-ಕಾಪಿ"ಯ ನಿಲುಗಡೆ ನೀಡುತ್ತಿದ್ದರು. ಸಾಮಾನ್ಯವಾಗಿ ಈ ನಿಲುಗಡೆ ಬಸ್ಸಿನ ಚಾಲಕ ಹಾಗೂ ನಿರ್ವಾಹಕರ ಮರ್ಜಿಗೆ ಒಳಪಟ್ಟಿರುತ್ತಿತ್ತು. ಅಜ್ಜ ಒಂದು ನಿಲುಗಡೆ ತೀರ್ಥಹಳ್ಳಿಯಲ್ಲಿ ಅವರ ಗೆಳೆಯ ಕಾರಂತರ ಬಸ್ಟ್ಯಾಂಡ್ ಮಯೂರ ಹೋಟೆಲಿನ ಎದುರು ಕೊಡುತ್ತಿದ್ದರೆ, ಇನ್ನೊಂದನ್ನ ಸೋಮೇಶ್ವರದಲ್ಲಿ ಘಾಟಿ ಇಳಿವಲ್ಲಿದ್ದ ಕಾಮತರ ಮನೆ ಹೋಟೆಲಿನಲ್ಲಿ ಕೊಡುತ್ತಿದ್ದರು.
ಅಮ್ಮ ಚಳಿ-ಮಳೆ ಲೆಕ್ಖಿಸದೆ ರಾತ್ರಿ ಅದೆಷ್ಟೇ ಹೊತ್ತಿಗೆ ಹಾಸಿಗೆ ಸೇರಿದ್ದರೂ ಪ್ರತಿನಿತ್ಯ ನಸುಕಿನ ಐದಕ್ಕೆ ಹಾಸಿಗೆ ಬಿಟ್ಟೆದ್ದು, ಬೆಳಗಿನ ತಿಂಡಿಗೂ ಮೊದಲೆ ಅನ್ನ-ಸಾರನ್ನು ತರಾತುರಿಯಲ್ಲಿ ತಯಾರಿಸಿ ಅಜ್ಜನ ಮಧ್ಯಾಹ್ನದ ಬುತ್ತಿಯನ್ನ ತಯಾರಿಸಿ ಕಟ್ಟಿಟ್ಟು ಬಿಡುತ್ತಿದ್ದರು. ನೀರಿನ ಬಾಟಲಿ-ಚಾದ ಬಾಟಲಿ ಜೊತೆಗೆ ಬಟ್ಟೆಯ ಕೈ ಚೀಲವೊಂದರಲ್ಲಿ ಹಾಕಿಟ್ಟ ಆ ಊಟದ ಬುತ್ತಿಯನ್ನ ಮೊದಮೊದಲಿಗೆ ನನ್ನ ಚಿಕ್ಕಮ್ಮಂದಿರು ಬೆಳಗ್ಯೆ ಸಂಜೆ ಬಸ್ಟ್ಯಾಂಡ್'ಗೆ ಹೋಗಿ ತಲುಪಿಸಿ ಬರುತ್ತಿದ್ದರು. ಹೊತ್ತಿಗೊಬ್ಬರಂತೆ ಚಿಕ್ಕಮ್ಮಂದಿರು ಈ ಕೆಲಸವನ್ನ ಹಂಚಿಕೊಂಡು ಮಾಡುವ ಪೈಪೋಟಿಯ ಹಿಂದಿದ್ದ "ರಾಜರಹಸ್ಯ" ಏನೆಂಬುದು ಅರಿವಾದ ನಂತರ ನಾನೂ ಈ ಅನ್ನ ಹೊರುವ ಪುಣ್ಯ ಕಾರ್ಯದಲ್ಲಿ ಯಾರೂ ಬಯಸದೆ ಬಂದ(?) ಪಾಲುದಾರನಾದೆ. ಅಮ್ಮನ ಕಟ್ಟುನಿಟ್ಟಿಗೆ ಎದುರಾಡಲಾಗದೆ ತಮ್ಮ ಬೇಡಿಕೆ ಪಟ್ಟಿಗಳನ್ನೆಲ್ಲ ಒಳಗೊಳಗೇ ಅದುಮಿಡುತ್ತಿದ್ದ ಅವರಿಬ್ಬರಿಗೂ ಅಜ್ಜನ ಮುಂದೆ ಅವನ್ನ ಇಟ್ಟು ಮಂಜೂರು ಮಾಡಿಸಿಕೊಳ್ಳೋದು ಅಷ್ಟು ಕಷ್ಟವಾಗುತ್ತಿರಲಿಲ್ಲ. ಮೊದಮೊದಲು ಪ್ರತಿ ಬಾರಿ ಇಂತಹ ಬೇಡಿಕೆ ಬಂದಾಗಲೂ ಸಿಟ್ಟಾದಹಾಗೆ ವಾಡಿಕೆಯಂತೆ ನಟಿಸುತ್ತಿದ್ದ ಅಜ್ಜ. ಇನ್ನೇನು ಸ್ಟಿಯರಿಂಗ್ ಮುಂದಿನ ತಮ್ಮ ಸಿಂಹಾಸನದಲ್ಲಿ ವಿರಾಜಮಾನರಾಗುವ ಹೊತ್ತಲ್ಲಿ ಏನೋ ದೊಡ್ಡ ಯೋಜನೆಯೊಂದನ್ನು ಮಂಜೂರು ಮಾಡುವ ಪ್ರಧಾನಮಂತ್ರಿಯ ಗೆಟಪ್ಪಿನಲ್ಲಿ ಚಿಕ್ಕಮಂದಿರ ಚಿಲ್ಲರೆ ಬೇಡಿಕೆಗಳನ್ನೆಲ್ಲ ಕ್ಷಣಮಾತ್ರದಲ್ಲಿ ತಮ್ಮ ಜೇಬಿಗೆ ಕೈ ಇಳಿಸಿ ದಯಪಾಲಿಸಿ ಬಿಡುತ್ತಿದ್ದರು! ಅದಕ್ಕೂ ಮೊದಲು ಅವರಿಗೆ ಕಾರಂತರ ಹೋಟೆಲಿನ ಮಸಾಲೆದೋಸೆ ಅಥವಾ ಗೋಲಿಬಜೆಯ ಸಮಾರಾಧನೆ ನೊರೆನೊರೆ ಕಾಫಿಯೊಂದಿಗೆ ಆಗುತ್ತಿತ್ತು. ಇವೆರಡರ ಆಕರ್ಷಣೆಗೆ ಬಲಿಯಾದ ಚಿಕ್ಕಮ್ಮಂದಿರು ಅಪ್ಪನಿಗೆ ಬುತ್ತಿ ಹೊರಲು ಪೈಪೋಟಿ ನಡೆಸುವಾಗ ನಾನು ಎರಡನೆ ಕಾರಣಕ್ಕೆ ಮಾತ್ರ ಮನಸೋತಿದ್ದೆ. ಹಣ ಎಂಬ ಕ್ಷುಲ್ಲಕ ವಸ್ತುವಿನ ಮೌಲ್ಯ ಆಗಿನ್ನೂ ನನ್ನ ಮಡ್ಡ ತಲೆಗೆ ಏರಿರಲಿಲ್ಲವಲ್ಲ.
ಬಸ್ಸೊಂದು ತನ್ನ ಪ್ರಯಾಣದ ಮಧ್ಯೆ ಹೀಗೆ ಹೋಟೆಲಿನ ಮುಂದೆ ವಿರಾಮಾಕ್ಕೆ ನಿಂತಾಗ ಆಗುವ ವ್ಯಾಪಾರಕ್ಕೆ ಬದಲಾಗಿ ಹೋಟೆಲಿನ ಮಾಲೀಕ ಬಸ್ಸಿನ ಚಾಲಕ ಹಾಗೂ ನಿರ್ವಾಹಕರಿಗೆ ಪುಡಿಗಾಸು ಹಾಗೂ ಉಚಿತ ಕಾಫಿ-ತಿಂಡಿ ಒದಗಿಸುತ್ತಿದ್ದರು. ಆ ಉಚಿತ ತಿಂಡಿಯನ್ನ ಅಜ್ಜ ಬುತ್ತಿ ಕೊಂಡೊಯ್ಯುವ ನಮಗೆ ತಿನ್ನಿಸುತ್ತಿದ್ದರು. ಬೆಳಗ್ಯೆ ಗ್ಯಾರೇಜಿನ ತಮ್ಮ ಕೋಣೆಯಲ್ಲಿಯೇ ಕಾಸಿದ ಕಣ್ಣ ಚಹಾ (ಹಾಲು ಹಾಕದ ಚಹಾದ ಕಷಾಯ) ಹಾಗೂ ಒಣಗಿದ ಒಂದು ಬನ್ನನ್ನಷ್ಟೆ ಹೊಟ್ಟೆಗೆ ಹಾಕಿರುತ್ತಿದ್ದ ಆ ಜೀವ ನಿಜವಾದ ಬೆಳಗಿನ ತಿಂಡಿಯನ್ನ ಕಾಣುತ್ತಿದ್ದುದೆ ಸೋಮೇಶ್ವರದ ಕಾಮತರ ಮನೆ ಹೋಟೆಲನ್ನ ಮುಟ್ಟಿದಾಗ. ಆ ನಡುವೆ ಮೂರೂ ಮುಕ್ಕಾಲು ಘಂಟೆ ತಗಲುತ್ತಿದ್ದ ನೂರಾ ಹತ್ತು ಕಿಲೋಮೀಟರಿನ ಧೀರ್ಘ ಪ್ರಯಾಣಕ್ಕೆ ಅವರಿಗೆ ಬಲ ಸಿಗುತ್ತಿದ್ದುದು ಶಿವಮೊಗದ್ದಲ್ಲಿ ಕುಡಿದಿರುತ್ತಿದ್ದ ಕಣ್ಣ ಚಾ ಹಾಗೂ ಕಾರಂತರ ಹೋಟೆಲಿನ ಅರ್ಧ ಕಾಫಿಯಿಂದ ಮಾತ್ರ! ಈ ಹಸಿದ ಹೊಟ್ಟೆ ಹೊತ್ತೇ ಅವರು ನಿತ್ಯ ಸಾವಕಾಶವಾಗಿ ಪ್ರಯಾಣಿಕರಿಂದ ಕಿಕ್ಕರಿದು ತುಂಬಿದ ಬಸ್ಸನ್ನ ಕಡಿದಾದ ರಸ್ತೆಯ ಆಗುಂಬೆ ಘಾಟಿಯಲ್ಲಿಳಿಸುತ್ತಿದ್ದರು.
ಕಾರಂತರ ಹೋಟೆಲಿಗೆ ಹೋಗುವ ಬುತ್ತಿ ಯಾತ್ರೆಯಲ್ಲಿ ನಾನೂ ಬಾಲವಾದ ನಂತರ ನನಗೂ ಬೈಟು ಮಸಾಲೆ ದೋಸೆ ಸವಿಯುವ ಭಾಗ್ಯ ಲಭ್ಯವಾಯಿತು. ಮಸಾಲೆ ದೋಸೆ ಸಿಗುತ್ತಿದ್ದುದು ಅರ್ಧವೆ ಆದರೂ ಚಟ್ನಿ ಮಾತ್ರ ಮೂರ್ನಾಲ್ಕು ಬಾರಿ ಕೇಳಿ ಹಾಕಿಸಿಕೊಳ್ಳುತ್ತಿದ್ದೆ! ಕಾಫಿಗೆ ತುಂಬಾ ನೊರೆ ಬೇಕೇಬೇಕು ಅಂತ ನಾವಿಬ್ಬರೂ ಹಟ ಹಿಡಿಯುತ್ತಿದ್ದರಿಂದ ಅಡುಗೆ ಭಟ್ಟರು ಕೈಪಾತ್ರೆಯಲ್ಲಿ ಎತ್ತಿಎತ್ತಿ ಹೊಡೆದು ನೊರೆ ಎಬ್ಬಿಸಿಯೆ ಕಾಫಿ ಕೊಡುತ್ತಿದ್ದರು. ನೋರೆಯಿಲ್ಲದ ಕಾಫಿ ಕಾಫಿಯೇ ಅಲ್ಲ ಅನ್ನೋದು ನಮ್ಮ ಒಕ್ಕೊರಲ ಅಭಿಪ್ರಾಯವಾಗಿತ್ತು. ನಾವು ಬರಗೆಟ್ಟವರಂತೆ ದೋಸೆ ಮುಕ್ಕುತ್ತಿದ್ದದ್ದನ್ನ ಅಜ್ಜ ಅಕ್ಕರೆ ತುಂಬಿದ ಮಮತೆಯ ಕಂಗಳಿಂದ ದಿಟ್ಟಿಸುತ್ತಾ ಅರ್ಧ ಕಾಫಿ ಕುಡಿದು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು! ಮನೆಯ ಏಕತಾನತೆಯ ತಿಂಡಿ ತಿನುಸುಗಳ ನಡುವೆ ನಮಗೆ ಸಿಗುತ್ತಿದ್ದ ಏಕೈಕ ಹೊರಗಿನ ತಿಂಡಿ ಎಂದರೆ ಇದೊಂದೆ.
ಇಂದು ಅದನ್ನೆಲ್ಲ ನೆನೆದರೆ ಅದೇ ಮಸಾಲೆ ದೋಸೆಗಾಗಿ ಒಂದು ಕಾಲದಲ್ಲಿ ಚಡಪಡಿಸುತ್ತಿದ್ದ ನನ್ನ ಕರಳು ಚುರುಕ್ ಎನ್ನುತ್ತದೆ. ತಾನು ಉಪವಾಸವಿದ್ದು ನಮ್ಮೆಲ್ಲರ ಹೊಟ್ಟೆ ತುಂಬಿಸಿದ್ದ ಅಜ್ಜ ಹಾಗೂ ಅಮ್ಮನ ತ್ಯಾಗಕ್ಕೆ ಕಣ್ತುಂಬಿ ಬರುತ್ತದೆ. ಬೆಳಗ್ಯೆ ಕಟ್ಟಿಕೊಟ್ಟ ಅನ್ನ ನೂರು ಕಿಲೋಮೀಟರ್ ದೂರದ ಉಡುಪಿ ಮುಟ್ಟುವಾಗ ಆರಿ ಸೆಖೆಗೆ ಹಳಸಿ ಹೋಗಿದ್ದರೂ, ಸಂಜೆಯ ಬುತ್ತಿ ಅರವತ್ತು ಕಿಲೋಮೀಟರ್ ದೂರದ ಶಿವಮೊಗ್ಗ ಮುಟ್ಟುವಾಗ ಆರಿ ತಣ್ಣಗಾಗಿ ಹೋಗಿದ್ದರೂ ಅಜ್ಜ ಅದನ್ನೆ ತಿಂದು ತಮ್ಮ ಎಲ್ಲಾ ಸುಖಗಳನ್ನ ನಮಗೆ ದಾಟಿಸಿ ಕಷ್ಟದಲ್ಲಿ ಬಾಳುವುದನ್ನೆ ಮನಪೂರ್ವಕವಾಗಿ ಆಯ್ದುಕೊಂಡಿದ್ದರು. ಇಂದು ನನ್ನಜ್ಜ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಸೇರಿದ್ದಾರೆ. ಅಮ್ಮ ಅವರನ್ನ ಮೊದಲಿನ ಅದೇ ಮುತುವರ್ಜಿಯಿಂದ ಅಷ್ಟೆ ಅಸ್ಥೆ ವಹಿಸಿ ನೋಡಿಕೊಳ್ಳುತ್ತಿದ್ದಾರೆ. ನಾವೆ ಅನ್ನದ ಬೆನ್ನು ಹತ್ತಿ ರುವ ಪಿಳ್ಳೆನೆವ ಹೇಳುತ್ತಾ ದೂರದ ಊರುಗಳಲ್ಲಿ ಗಾಣದೆತ್ತಿನಂತೆ ದುಡಿಯುತ್ತಾ ನಮ್ಮ ನೈತಿಕ ಜವಾಬ್ದಾರಿಗಳಿಂದ ನುಣುಚಿ ಕೊಳ್ಳುತ್ತಿದ್ದೆವೇನೋ ಅನ್ನುವ ಅಪರಾಧಿ ಪ್ರಜ್ಞೆ ಈ ನಡುವೆ ಎಡಬಿಡದೆ ಕಾಡುತ್ತಿದೆ.
Comments
Post a Comment