ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Thursday, September 13, 2012

ಹೇಳಲು ಇದೆ ಕಾರಣ...ಹಳೆ ನೆನಪುಗಳು ಮರುಕಳಿಸುವಾಗ ಹಬೆಯಾಡುವ ಚಹಾ ಕಪ್ ಕೈಯಲ್ಲಿ ಹಿಡಿದು ಮಳೆಯನ್ನೇ ನೋಡುತ್ತಾ ಅದರ ಬಿಸಿಯ ಗುಟುಕು ಗುಟುಕಾಗಿ ಅನುಭವಿಸುತ್ತಾ ಕಿಟಕಿಯಂಚಿನಲ್ಲಿ ಕೂರೋದೇ ಹಿತ. ನಿಂತ ಮಳೆಯ ಉಳಿದ ಹನಿ ಮೆಲ್ಲನೆ ಬೀಸೊಗಾಳಿಗೆ ಮರದ ಎಲೆಗಳಿಂದ ಉದುರೋವಾಗ ಅವಕ್ಕೂ ನನ್ನಂತೆ ಚಳಿಗೆ ನಡುಕ ಹುಟ್ಟಿರಬಹುದೇ? ಎಂಬ ಅನುಮಾನ ನನಗೆ. ಮೈತುಂಬ ಹೊದ್ದುಕೊಂಡು ಅಕ್ಷರಶಃ ಕಂಬಳಿ ಮರೆಯಲ್ಲಿ ಭೂಗತನಾದವನು ಹಳೆಯ ಸ್ಮ್ರತಿಗೆ ಜಾರಿದೆ. ಹೌದಲ್ವ? ಹೀಗೆಯೇ ಮಳೆಯ ಸವಾರಿ ಬಂದಾಗಲೆಲ್ಲಾ ಬೆಚ್ಚಗೆ ಹೊದಿಸಿ ಅಮ್ಮ ಚಿಕ್ಕಂದಿನಲ್ಲಿ ನನ್ನ ತಬ್ಬಿ ಮಲಗುತಿದ್ದರಲ್ಲ! ಎಂಬ ಬೆಚ್ಚನೆಯ ನೆನಪು. ಆಗೆಲ್ಲ ಕಂಬಳಿಗಿಂತಲೂ ಹಿತವೆನಿಸಿದ್ದು ಅಮ್ಮನ ಮೈಯ್ಯ ಹಿತವಾದ ಬಿಸಿ ಹಾಗು ಅವರ ಸೀರೆಯ ಆಪ್ತ ವಾಸನೆ. ಬಾರ್ ಮಾತ್ರ ಬದಲಿಸಿದ ಹಳೆಯ ಹವಾಯಿ ಚಪ್ಪಲಿಯನ್ನು ವರ್ಷ ವರ್ಷವೂ ಬಳಸುತ್ತಿದ್ದುದು. ಮಳೆಗೆ ರಾಡಿಯೆದ್ದು ಕೆಸರಾದ ರಸ್ತೆಗಳಲ್ಲಿ ಅವನ್ನೇ ಮೆಟ್ಟಿ ಶಾಲೆಗೆ ಹೋಗುವಾಗ ಬೆನ್ನಿಗೆಲ್ಲ ಕೆಮ್ಮಣ್ಣ ಕೆಸರ ಚಿತ್ತಾರ ಹರಡುತ್ತಿದ್ದುದು ಎಲ್ಲಾ ನೆನಪಾಗುತ್ತೆ. ಮುಗಿಯದ ನೆನಪುಗಳ ಜಾತ್ರೆ ! ಜೋಕಾಲಿ, ಭರಪೂರ ಆಟಿಕೆ, ಕೊಳಲು, ವಾಚು, ಬೆಂಡು-ಬತಾಸು, ಸಕ್ಕರೆ ಮಿಠಾಯಿ, ಬೊಂಬಾಯಿ ಮಿಠಾಯಿ, ಖರ್ಜೂರ, ಬಣ್ಣಬಣ್ಣದ ತಿಂಡಿಗಳೇ ತುಂಬಿದ ಎಳ್ಳಮವಾಸ್ಯೆ ಜಾತ್ರೆಯಲ್ಲಿ ಇದ್ದಕ್ಕಿದ್ದಂತೆ ಎಲ್ಲರೂ ಮಾಯವಾಗಿ ನಾನೊಬ್ಬನೇ ಪುಟ್ಟ ಮಗುವಾಗಿ ಉಳಿದಂತಿದೆ ನನ್ನ ಮನಸ್ತಿತಿ. ನೆನಪಿನ ಒಲೆಯ ಮುಂದೆ ಮಾರ್ದವ ಬೆಚ್ಚಗಿನ ಚಳಿ ಕಾಯಿಸೋದೆ ಚೆನ್ನ ಅಲ್ಲವಾ?ಪ್ರೀತಿಯಲ್ಲಿ ಒತ್ತಾಯ ಸಲ್ಲ, ಒಪ್ಪಿಗೆ ಮಾತ್ರ ಚೆನ್ನ. ಕ್ರಮೇಣ ಕಳೆದೆ ಹೋಗಿರುವ ಬಾಲ್ಯವನ್ನು ನೆನಪಿಸಿಕೊಳ್ಳೋದ್ದಕ್ಕಿಂತ ಹೆಚ್ಚಿನ ಸುಖ ಬಾಳಲ್ಲಿ ಉಳಿದೆ ಇಲ್ಲ. ಊರು ಬಿಟ್ಟು ಊರು ಸೇರಿ ಮತ್ತೊಂದು ಪರಿಚಯವೇ ಇರದ ಜಗತ್ತಿನಲ್ಲಿ ಹೊಸದಾಗಿ ಬೆರೆಯುವ ಅನಿವಾರ್ಯತೆಯ ತಲ್ಲಣ. ಅಲ್ಲಿಗೂ ನನ್ನೊಂದಿಗೆ ಜೊತೆಯಾಗಿ ಬಂದದ್ದು ಮಳೆ ಮಾತ್ರ ಇನ್ನೊಂದು ಶಾಲೆ, ನಗೆಪಾಟಿಲಿಗೆ ಈಡಾಗೋ ನನ್ನ ಹಳ್ಳಿ ಕನ್ನಡ, ಗೊತ್ತಿರುವ ಭಾಷೆಯೇ ಆದರೂ ಬೇರೆಯದೇ ಅನ್ನಿಸೋ ಉಚ್ಛಾರಣೆಯ ಅನುಕರಿಸೋ ಸರ್ಕಸ್'ಮಾಡುವ ಕರ್ಮ. ನನ್ನಂತ ಇಬ್ಬರನ್ನು ತೂರಿಸ ಬಹುದಾಗಿರುತ್ತಿದ್ದ ಯಾವಾಗಲೂ ದೊಡ್ಡ ಅಳಯತೆಯದೆ ಆಗಿರುತಿದ್ದು ರೇಜಿಗೆ ಹುಟ್ಟಿಸುತ್ತಿದ್ದ ಯೂನಿಫಾರ್ಮ್. ಆಗಲೂ ಆಪ್ತವಾಗುತ್ತಿದ್ದ ಕ್ಷಣಗಳು ಯಾವುದೆಂದರೆ, ಮತ್ತದೇ ಹಬೆಯಾಡುವ ಚಹಾದ ಬಿಸಿಯನ್ನು ಗುಟುಕು ಗುಟುಕಾಗಿ ಗಂಟಲಲ್ಲಿ ಇಳಿಸುವ ಸುಖದ ಮತ್ತಲಿ ಮುಳುಗಿ ಹನಿವ ಮಳೆಯನ್ನೇ ಮುಗ್ಧನಂತೆ ದಿಟ್ಟಿಸುತ್ತಿದ್ದೆನಲ್ಲ ಅದು ಮಾತ್ರ.ರಾಜಧಾನಿಯಲ್ಲಿದ್ದೇನೆ ಈಗ. ಇಂದೊಂತರಾ ಕಾಂಕ್ರೀಟ್ ಸ್ಲಂ-ನಾನು ಇದರ ಖಾತೆಯಿಲ್ಲದ ಅಕ್ರಮ ನಿವಾಸಿ! ಇಲ್ಲಿಯೂ ಮಳೆ ಸುರಿಯುತ್ತದೆ ಆದರೆ ಬಾಲ್ಯದ ಸ್ಮ್ರತಿಯಲ್ಲಿ ಉಳಿದಿರುವಂತೆ ಚುಚ್ಚುವುದಿಲ್ಲ. ತೇಪೆ ಹಾಕಿದ ಕೊಡೆ ನಿರ್ದಯಿಯಾಗಿ ಬೀಸೊ ಗಾಳಿಗೆ ಕೋಡಂಗಿಯಂತೆ ಮುಂಬಾಗಿದಾಗ ಕೆಕರುಮೆಕರಾಗಿ ಮೊದಲು ಜಾರೋ ಚಡ್ಡಿಯನ್ನು ಸರಿಮಾಡಿಕೊಳ್ಳಲೋ? ಮುರುಟಿದ ಛತ್ರಿಯನ್ನು ಸಂಭಾಳಿಸಲೋ? ಎಂಬ ಸಂದಿಗ್ಧ ಕಾಡುತಿತ್ತು. ಇಲ್ಲಿ ಕಾಡೋ ಸಂಧಿಗ್ಧವೆ ಬೇರೆ, ಅದು ಹಣಕಾಸಿನ ಮೇಲಾಟಕ್ಕೆ ಸಂಬಂಧಿಸಿದ್ದು ಅಂತ ನಿರ್ಲಜ್ಜವಾಗಿ ಹೇಳಬೇಕಿದೆ. ಬಾಲ್ಯದುದ್ದಕ್ಕೂ ನಿಷ್ಕರುಣೆಯಿಂದ ಸೂಜಿ ಚುಚ್ಚಿದಂತೆ ಒಂದೇ ಸಮ ಮುಖದ ಮೇಲೆ ರಾಚಿ ಮೈಯೆಲ್ಲಾ ತೋಯಿಸಿ ತೊಪ್ಪೆ ಮಾಡುತ್ತಿದ್ದರೂ ಅದೇಕೋ ಮಳೆಯೆಂದರೆ ಮನಸ್ಸಿಗೆ ವಿಚಿತ್ರ ಮೋಹ. ನಲವತ್ತೈದೆ ರೂಪಾಯಿಗೆ ಸಿಗೋ ಪಾಸ್ ಜೇಬಿಗಿಳಿಸಿ ಗೊತ್ತುಗುರಿಯಿಲ್ಲದೆ ಸಿಕ್ಕಸಿಕ್ಕ ಬಿ ಎಂ ಟಿ ಸಿ ಬಸ್ಸನ್ನೇರಿ ಹೊರಗೆ ಜಡಿಮಳೆ ಚೆಚ್ಚುತ್ತಿರುವಾಗ ಕಾರಣವೆ ಇಲ್ಲದೆ ತಿರುಗಾಡೋ ಹೊಸ ಹವ್ಯಾಸವೊಂದು ಇತ್ತೀಚಿಗೆ ಅಂಟಿಕೊಂಡಿದೆ. ಬೆಂಗಳೂರಿನ ಮಳೆಗೆ ಊರ ಮಳೆಯ ಆರ್ದ್ರತೆ ಇಲ್ಲದಿದ್ದರೂ ಮಳೆ ಮಳೆಯೇತಾನೆ? ಎಂಬ ಹುಸಿ ಕಳ್ಳ ಸಮಾಧಾನ. ಇಂತಹದ್ದೇ ಒಂದು ಮಳೆಯಲ್ಲೇ ತಾನೆ ನೀನು ಮೊದಲ ಬಾರಿಗೇನನ್ನ ಕಣ್ಣಿಗೆ ಬಿದ್ದದ್ದು? ಮಳೆಯ ಬಗ್ಗೆ ವಿಪರೀತ ಮೋಹಿತನಾಗಿಗಿದ್ದ ನನ್ನ ಇನ್ನಷ್ಟು ಮೋಹದ ಗುಂಗಲ್ಲಿ ತೇಲಿಸಿದ್ದು?

ಈ ನಿನ್ನ ಅಸಮ್ಮತಿಯ ಸೂಚನೆ, ಯಾವುದೇ ಕಾರಣದಿಂದಲೂ ಪ್ರತಿಕ್ರಿಯಿಸದ ನಿನ್ನ ಅಸಡ್ಡೆಯಿಂದಲೇ ಸ್ಪಷ್ಟವಾಗಿದೆ. ಆದರೂ ನಿನ್ನೊಂದಿಗೆ ಮನಬಿಚ್ಚಿ ಹರಟುವ ವಾಂಛೆ. ಎಂದೆಂದೂ ಮುಗಿಯಲಾರದ ರಾತ್ರಿಗಳಲ್ಲಿ ಮನಸ್ಸಿಗೆ ತೀರಾ ಹತ್ತಿರವಾದ ಜೀವದೊಂದಿಗೆ ಎದೆಯಾಳದ ನವಿರು ನೋವನ್ನು ನಿರ್ಭಾವುಕವಾಗಿ ತೆರೆದಿಡುವ ರೀತಿಯಷ್ಟೇ ಇದು. ಇದನ್ನು ಕೇಳಲು ನೀನೊಂದು ಕಿವಿಯಾದರಷ್ಟೇ ಸಾಕು. ಹೌದು ...ಪ್ರೇಮದ ನಗುವನ್ನು ನಿನ್ನಿಂದ ನಿರೀಕ್ಷಿಸಿ ಸೋತಿದ್ದೇನೆ. ಹೀಗಾಗಿ ಇನ್ಯಾವುದೇ ಪ್ರತಿಕ್ರಿಯೆಯ ನಿರೀಕ್ಷೆ ಖಂಡಿತ ಇಲ್ಲ. ಕಡೇಪಕ್ಷ ನನ್ನ ಈ ಹರಿಕಥೆ ಕೇಳ್ತಾ ಕೇಳ್ತಾ ನಿನ್ನ ಕೆಲಸದ ಏಕತಾನತೆಯಾದರೂ ಕಳೆದೀತು ಕೇಳು.


ಎಲ್ಲಾ ಯಾತ್ರೆಗಳಿಗೂ ಒಂದು ಕಾರ್ಯಸಾಧನೆಯ ಉದ್ದೇಶ ಇರಲೇಬೇಕಂತಿಲ್ಲ ಎನ್ನುವುದು ನನ್ನ ಆಲೋಚನಾ ಬುನಾದಿ. ಹುಟ್ಟು ಅಲೆಮಾರಿಯ ಮನಸಿರುವ ನನ್ನ ಈ ವಾದ ನಿನ್ನೊಂದಿಗಿನ ಪ್ರೇಮ ನಿವೇದನೆಯಲ್ಲೂ ಬದಲಾಗಿಲ್ಲ ಎಂದರೆ ಆಶ್ಚರ್ಯ ಪಡಬೇಕಿಲ್ಲ. ನನ್ನ ಜೀವಮಾನದಲ್ಲಿ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿದ್ದು ಕೇವಲ ಮೂವರನ್ನು. ಅಮ್ಮ ಮೊದಲನೆಯವರು, ನನಗೀಗಲೂ ನೆನಪಿದೆ ಹೆತ್ತತಾಯಿಗಿಂತ ಹೆಚ್ಚಾಗಿ ನಾನು ಅಂಟಿಕೊಂಡಿರುತ್ತಿದ್ದುದು ಅಮ್ಮನಿಗೇನೆ. ಅವರ ಸೀರೆಯ ಹಿತವಾದ ವಾಸನೆ ಇಲ್ಲದಿದ್ದರೆ ನನಗೆ ನಿದ್ದೆ ಬರುತ್ತಿರಲಿಲ್ಲ. ಅನಂತರ ಹೆಚ್ಚು ಹತ್ತಿರವಾದವನು ರುದ್ರಪ್ರಸಾದ್ ಅವನು ನಂಗೆ ಕೇವಲ ಗೆಳೆಯ ಮಾತ್ರನಲ್ಲ ಜೀವದ ಬಂಧು, ಆತ್ಮಸಖ. ನನ್ನ ಬಗ್ಗೆ ನನಗಿಂತ ಹೆಚ್ಚು ಕಳಕಳಿ ಇರುವ ಒಬ್ಬನೇ ಒಬ್ಬ ಅವನು. ಅವನ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ. ಇನ್ನು ನೀನು ಮನಕೆ ಜೀವಕೆ ಹತ್ತಿರವಾದವಳು. ದೂರವೇ ಇದ್ದರೂ...ಏನನೂ ಹೇಳದಿದ್ದರೂ ನನ್ನೊಳಗೆ ಆವರಿಸಿರುವವಳು. ನನ್ನ ಪಾಲಿಗೆ ನೀನು ಪಾರಿಜಾತ, ದೇವಲೋಕದ ಆ ಸುಮದಂತೆ ಕಾರಣವೆ ಇಲ್ಲದೆ ಕನಸಾಗಿ ಕಾಡುವವಳು. ಅಸಲಿಗೆ ನಾನು ನನ್ನ ಪುರಾಣ ಹೇಳದೆ ನೀನೆ ಅದನ್ನು ಅರಿತುಕೊಂಡರೆ ಚೆನ್ನ. ಆದರೆ ನಿನಗೆ ಹೇಳುವ ನೆಪದಲ್ಲಿ ನಾನು ಹಳೆಯ ನೆನಪಿನ ಹೊಳೆಯಲ್ಲಿ ಈಜುವಂತಾಗಿದೆ...ಕೊರೆತವಂತೆನಿಸಿದರೂ ಸಹಿಸಿಕೋ ಪ್ಲೀಸ್!ಆಗಷ್ಟೆ ನಾನು ಶಾಲೆಗೆ ಸೇರಿ ಒಂದುವರ್ಷ ಕಳೆದಿತ್ತು. ಟಿವಿ "ರಾಮಾಯಣ"ದ ಜನಪ್ರಿಯತೆಯ ಉತ್ತುಂಗದ ದಿನಗಳವು. ಅಪ್ಪಿ ತಪ್ಪಿ ಟಿ ವಿ ಇಟ್ಟುಕೊಂಡಿರುವವರ ಮನೆಯಲ್ಲಿ ಜನಜಾತ್ರೆ. ಭಾನುವಾರ ಬಂದರೆ ಊರೆಲ್ಲ ಕರ್ಫ್ಯೂ ಹಾಕಿದಂತೆ ನಿರ್ಜನವಾಗುತ್ತಿದ್ದ ಅಧ್ಭುತ ಕಾಲವದು. ಆಗ ಎಲ್ಲರಂತೆ ನಾನೂ ಅದರ ದಾಸಾನುದಾಸ. ಮನೆಯ ನಿರ್ವಹಣೆ ಅಮ್ಮ ಹೇಗೆ ಮಾಡುತ್ತಿದ್ದರೋ? ಎಂಬ ವಿಸ್ಮಯ ಈಗಲೂ ಕಾಡುತ್ತದೆ. ಅಜ್ಜ ಡ್ರೈವರ್ ಆಗಿದ್ದರಿಂದ ಸಮೀಪದ ಹಳ್ಳಿಗರ ಪರಿಚಯ ಅವರಿಗಿತ್ತು. ಅವರಲ್ಲಿ ಒಬ್ಬರಾದ ಎಡುವಿನಕೊಪ್ಪದ ಪುಟ್ಟಯ್ಯಗೌಡರ ಒಬ್ಬ ಮಗ ಹಾಗು ಮೂವರು ಸಂಬಂಧಿಕರನ್ನು ಶಾಲೆಗೆ ಹೋಗುವ ಸಲುವಾಗಿ ಮನೆಯಲ್ಲಿ ಇಟ್ಟುಕೊಂಡರು. ಆಗ ತುಂಗಾನದಿಗೆ ಅವರೂರಿನಿಂದ ಸೇತುವೆ ಇರದಿದ್ದರಿಂದ ಮಳೆಗಾಲದಲ್ಲಿ ತುಂಗೆ ಉಕ್ಕಿಹರಿದಾಗ ಅವರೂರಿನ ಸಂಪರ್ಕ ತೀರ್ಥಹಳ್ಳಿಯಿಂದ ಕಡಿದು ಹೋಗುತ್ತಿತ್ತು, ಆದ್ದರಿಂದ ಓದುವ ಹುಡುಗರು ಪೇಟೆಯಲ್ಲಿ ಹೀಗೆ ವ್ಯವಸ್ಥೆ ಮಾಡಿಕೊಂಡೋ, ಇಲ್ಲ ಹಾಸ್ಟೆಲ್ಲಿನಲ್ಲಿ ಇದ್ದುಕೊಂಡೋ ಶಾಲೆಗೆ ಹೋಗುವುದು ಅನಿವಾರ್ಯವಾಗಿತ್ತು. ಇವರೊಂದಿಗೆ ಊರಿನ ಅಜ್ಜನ ಮನೆಕಡೆಯ ಇಬ್ಬರು ಟೀಚರ್'ಗಳೂ ಆಗ ನಮ್ಮ ಮನೆಯಲ್ಲೇ ಉಳಿದುಕೊಂಡಿದ್ದರು. ಅವರೆಲ್ಲರ ಕಡೆಯಿಂದ ಒಂದಲ್ಲ ಒಂದು ರೀತಿಯ ಪ್ರತಿಫಲ ದೊರೆಯುತ್ತಾ ಇದ್ದಿರಬೇಕು ಎಂಬುದು ನನ್ನ ಊಹೆ. ಇದರೊಂದಿಗೆ ಸಾಕಿದ್ದ ದನಗಳ ಹಾಲಿನ ವ್ಯಾಪಾರ-ಅಮ್ಮ ಇಟ್ಟುಕೊಂಡಿದ್ದ ಹೊಲಿಗೆ ಮಿಶನ್ನಿನಿಂದ ಹುಟ್ಟುತ್ತಿದ್ದ ಪುಡಿಗಾಸು.... ಹೀಗೆ ಉಟ್ಟು ಉಡಲು ಕೊರತೆಇಲ್ಲದಂತೆ ನಮ್ಮೆಲ್ಲರ ಕನಿಷ್ಠ ಅಗತ್ಯಗಳು ಸುಸೂತ್ರವಾಗಿ ಪೂರೈಕೆ ಆಗುತ್ತಿದ್ದವು.


ನಾನು ಬಾಲವಾಡಿಗೆ ಹೋಗಲಾರಂಭಿಸಿದ ನಂತರ ನನ್ನ ಪ್ರಪಂಚವೂ ನಿಧಾನವಾಗಿ ಹಿಗ್ಗಿತು ಅನ್ನಿಸುತ್ತೆ. ಅಲ್ಲಿಂದ ನನ್ನನ್ನು ಭಾರತಿ ಶಿಶುವಿಹಾರಕ್ಕೆ ಸೇರಿಸಲಾಯಿತು. ಅಲ್ಲಿ ಎರಡು ವರ್ಷದ ಓದು. ಅನಂತರ ಸೇವಾಭಾರತಿಯಲ್ಲಿ ಭರ್ತಿಯಾದೆ. ಮನೆ, ಶಾಲೆ, ಶಿಶುವಿಹಾರದಲ್ಲಿದ್ದಾಗ ಕರೆದುಕೊಂಡು ಹೋಗುತ್ತಿದ್ದ ಶಾರದಕ್ಕ... ಅಲ್ಲಿನ ಮೊದಲ ಗೆಳೆಯರು. ಮನೆ ತುಂಬ ಇದ್ದ ಹಲವಾರು ಅಕ್ಕ, ಅಣ್ಣ, ಮಾವಂದಿರು ಹೀಗೆ ಯಾವಾಗಲೂ ತುಂಬಿದ ಮನೆಯಲ್ಲಿದ್ದು ಅಭ್ಯಾಸವಾಗಿದ್ದ ನನಗೆ ಒಳಗೂ-ಹೊರಗೂ ಹೆಚ್ಚಿನ ವ್ಯತ್ಯಾಸ ಅನ್ನಿಸುತ್ತಿರಲಿಲ್ಲ.

No comments:

Post a Comment