ಇಳಿ ಸಂಜೆಯ ಕನವರಿಕೆ.....





ಅಜ್ಜ ಅಮ್ಮನಿಗೆ ಅಕ್ಕರೆಯಿಂದ ಕೊಡಿಸಿದ್ದು ಬಹುಷಃ ಎರಡೆ ಬೆಲೆಬಾಳುವ ವಸ್ತುಗಳನ್ನ. ಒಂದು ರೇಡಿಯೋ ಹಾಗೂ ಮತ್ತೊಂದು ಸಿಂಗರ್ ಹೊಲಿಗೆ ಯಂತ್ರ. ಇವೆರಡೂ ಅಮ್ಮನಿಗೆ ಅಜ್ಜನ ಪ್ರೇಮದ ಕಾಣಿಕೆಯಾಗಿ ಸಂದದ್ದು ಮೊದುವೆಯಾದ ಮೊದಲ ನಾಲ್ಕೈದು ವರ್ಷಗಳೊಳಗೆ ಅನ್ನೋದು ಗಮನಾರ್ಹ! ಒಂದು ಅಮ್ಮನ ಮನರಂಜನೆಗೆ ಮೂಲವಾದರೆ ಇನ್ನೊಂದು ಆಕೆಗೆ ನಾಲ್ಕು ಕಾಸನ್ನ ಸಂಪಾದಿಸಲು ದಾರಿ ಮಾಡಿಕೊಟ್ಟಿತು. ಅಮ್ಮ ಹಾಗೂ ಅಜ್ಜನ ಮದುವೆಯಾದದ್ದು ಆಗುಂಬೆಯ ಗೋಪಾಲಕೃಷ್ಣ ದೇವಸ್ಥಾನದಲ್ಲಿ. ಮೂಡಬಿದ್ರಿಯಿಂದ ಹೆಣ್ಣಿನ ದಿಬ್ಬಣ ಅಲ್ಲಿಗೆ ಮೊದಲ ದಿನವೇ ಬಂದು ಬೀಡು ಬಿಟ್ಟಿತ್ತಂತೆ. ಅಜ್ಜನಿಗೆ ಅದು ಎರಡನೆ ಮದುವೆ. ಮೊದಲ ಹೆಂಡತಿ ಎರಡು ಎಳೆಯ ಹೆಣ್ಣು ಮಕ್ಕಳನ್ನ ಬಿಟ್ಟು ಆತ್ಮಹತ್ಯೆ ಮಾಡಿಕೊಂಡ ನಂತರ ಅವಳ ಅಪ್ಪ-ಅಮ್ಮನೆ ಅಳಿಯನಿಗೆ ಎರಡನೆ ಸಂಬಂಧ ಕುದುರಿಸಿ ಮದುವೆಯ ಪ್ರಸ್ತಾಪ ಎತ್ತಿದ್ದರು. ಹಾಗೂ ಎರಡನೆ ಮದುವೆಯನ್ನೂ ಮಾಡಿಸಿ ಅವನ ಬದುಕನ್ನ ನೆರ್ಪು ಗೊಳಿಸಿದ್ದರು.

ನಮ್ಮ ಮನೆಯಲ್ಲಿದ್ದದ್ದು ದೈತ್ಯ ಗಾತ್ರದ ಬುಶ್ ನಿರ್ಮಿತವಾಗಿದ್ದ ರೇಡಿಯೊ. ಆಗಿನ ಕಾಲದಲ್ಲಿ ರೇಡಿಯೊ ಒಂದು ಐಶಾರಾಮದ ಸಲಕರಣೆಯಾಗಿತ್ತು ಹಾಗು ಮನೆಯಲ್ಲಿ ಅದನ್ನಿರಿಸಿ ಕೊಳ್ಳುವುದು ಒಂದು ಪ್ರತಿಷ್ಠೆಯ ಸಂಗತಿಯಾಗಿತ್ತು. ಸಾಲದ್ದಕ್ಕೆ ರೇಡಿಯೊ ಇರಿಸಿಕೊಳ್ಳ ಬಯಸುವವರು ಸ್ಥಳಿಯಾಡಳಿತಗಳಾದ ಗ್ರಾಮಪಂಚಾಯತ್, ಪುರಸಭೆ, ನಗರಸಭೆ ಯಾವುದಾದರೊಂದರಿಂದ ಪರವಾನಗಿ ಪಡೆಯುವುದು ಖಡ್ಡಾಯವಾಗಿತ್ತು ಅದಕ್ಕಾಗಿ ಪ್ರತಿ ವರ್ಷವೂ ನಿಗದಿತ ಶುಲ್ಕ ಕಟ್ಟಿ ಪರವಾನಗಿಯನ್ನ ನವೀಕರಣ ಮಾಡಿಸಿ ಕೊಳ್ಳಬೇಕಿತ್ತು. ಅಂತಹದ್ದೊಂದು ಲೈಸನ್ಸ್ ಪ್ರತಿಯನ್ನ ಅಜ್ಜನ ಹಳೆ ಕಡತಗಳಲ್ಲಿ ನಾನು ಕಂಡಿದ್ದೇನೆ. ಆಗೆಲ್ಲ ಬುಶ್, ಮರ್ಫಿ, ಫಿಲಿಪ್ಸ್, ಸೋನಿಗಳದ್ದೆ ರಾಜ್ಯಭಾರ. ದುಬಾರಿಯಾದ ಸೋನಿ- ಫಿಲಿಪ್ ಸುಲಭವಾಗಿ ಸಿಗದ ಕಾರಣ :ಅವುಗಳ ರಿಪೇರಿಗೆ ಅಗತ್ಯವಾದ ಬಿಡಿ ಭಾಗಗಳು ಸುಲಭವಾಗಿ ಸಿಗುತ್ತಿದ್ದರಿಂದ ಬುಶ್ ಹಾಗು ಮರ್ಫಿ ಅತಿ ಹೆಚ್ಚು ಜನಪ್ರಿಯವಾಗಿದ್ದವು.


ಈ ರೇಡಿಯೊ ನಮ್ಮ ಮನೆಗೆ ಬಂದ ಹಿನ್ನೆಲೆ ಹೀಗಿದೆ. ವಿಧುರನಾಗಿದ್ದ ನನ್ನಜ್ಜ ಆಗಷ್ಟೇ ನನ್ನಜ್ಜಿಯನ್ನ ಮರು ಮದುವೆಯಾಗಿದ್ದರು. ದಕ್ಷಿಣಕನ್ನಡದ ಮೂಡುಬಿದಿರೆ ಸಮೀಪದ ಸಾಗಿನಬೆಟ್ಟು ನನ್ನಜ್ಜಿಯ ಮನೆ. ಅಲ್ಲಿ ಕೂಡು ಕುಟುಂಬದಲ್ಲಿ ಆಡಿ ಬೆಳೆದಿದ್ದ ಅವರಿಗೆ ಇಲ್ಲಿ ದೂರದ ತೀರ್ಥಹಳ್ಳಿಯಲ್ಲಿ ಹೊಸತಾಗಿ ಸಂಸಾರ ಶುರು ಮಾಡಿದಾಗ ಇನ್ನೂ ಹದಿನೇಳರ ಹರೆಯ. ಇಲ್ಲಿ ವಿಪರೀತ ಒಂಟಿತನ ಕಾಡಿರಬೇಕು. ಅಜ್ಜನಿಗೂ ಡ್ರೈವರ್ ಕೆಲಸದ ಮೇಲೆ ಆಗಾಗ ಹೊರ ಹೋಗಬೇಕಿರುತ್ತಿದ್ದರಿಂದ ಹೊಸ ಹೆಂಡತಿಯ ಒಂಟಿತನ ಕಳೆಯಲು ಅವರು ತಂದುಕೊಟ್ಟದ್ದೆ ಈ ರೇಡಿಯೊ. ಅವರ ಮೊತ್ತ ಮೊದಲ ಪ್ರೇಮದ ಕಾಣಿಕೆಯದು! ಆ ಕಾಲಕ್ಕೆ ದುಬಾರಿಯೂ-ದುಂದುವೆಚ್ಚವೂ ಅನ್ನಿಸಬಹುದಾಗಿದ್ದ ನೂರೈವತ್ತು ರುಪಾಯಿಗಳನ್ನ ಮರುಯೋಚಿಸದೆ ಖರ್ಚು ಮಾಡಿ ಅಜ್ಜ ಆ ರೇಡಿಯೊವನ್ನ ನಮ್ಮ ಮನೆ ತುಂಬಿಸಿದ್ದರು. ಹೀಗೆ ೧೯೬೧ರ ಆಗಷ್ಟ್ ತಿಂಗಳಲ್ಲಿ ನಲವತ್ತೊಂಭತ್ತು ವರ್ಷಗಳ ಹಿಂದೆ ಒಬ್ಬ ಸದಸ್ಯನಾಗಿ ರೇಡಿಯೊ ನಮ್ಮ ಮನೆಯೊಳಗೆ ಅದಕ್ಕಾಗಿಯೇ ಮಾಡಿರಿಸಿದ್ದ ಗೂಡನ್ನ ಖಾಯಮ್ಮಾಗಿ ಸೇರಿತು. ತಮ್ಮ ಡ್ರೈವಿಂಗ್ ಸರ್ವಿಸ್ಸಿನುದ್ದಕ್ಕೂ ರಜೆಗೆ ಮನೆಗೆ ಬರುತ್ತಿದ್ದ ಅಜ್ಜ ಸಂಪ್ರದಾಯದಂತೆ ರೇಡಿಯೋವನ್ನ ಅದರ ಸ್ಥಾನದಿಂದ ಕೆಳಗಿಳಿಸಿ ಒಮ್ಮೆ ಬಿಚ್ಚಿ ಒಳಗೆಲ್ಲ ಕೂಲಂಕುಶವಾಗಿ ಪರಿಶೀಲಿಸಿ ಮತ್ತೆ ಯಥಾವತ್ ಸ್ಥಾನದಲ್ಲಿರಿಸುವುದನ್ನು ಪರಿಪಾಠ ಮಾಡಿಕೊಂಡಿದ್ದರು.

ಈ ರೇಡಿಯೋಗೊಂದು ಬಾಲಂಗೋಚಿಯಾಗಿ ಜೊತೆಗೊಂದು ಆಂಟೆನ ಕೂಡ ಬಂದಿತ್ತು. ನೋಡಲು ಬಲೆಬಲೆಯ ಎರಡು ಮೀಟರ್ ಉದ್ದದ ಕೊಳವೆಯಂತದ್ದು ಅದು. ಮನೆ ಪಕ್ಕದ ಓಣಿಯಲ್ಲಿ ಬಟ್ಟೆ ಹರವಲು ಕಟ್ಟಿದ್ದ ತಂತಿಗಳಿಂದ ಸ್ವಲ್ಪವೇ ಮೇಲೆ ಅದನ್ನು ಎರಡು ಪಕ್ಕಾಸುಗಳ ನಡುವೆ ಬಿಗಿದು ಕಟ್ಟಲಾಗಿತ್ತು. ಅದರ ಒಂದು ಮೂಲೆಯಿಂದ ಒಂದು ವಯರ್ ಮನೆಯೊಳಗೆ ಸಾಗಿ ರೇಡಿಯೊ ಒಳಗೆಲ್ಲೋ ಅಂತರ್ಧನಾಗುತ್ತಿತ್ತು. ಅದಿಲ್ಲದೆ ರೇಡಿಯೊಗೆ ಸ್ಪಷ್ಟ ಸಿಗ್ನಲ್ ಸಿಗುತ್ತಲೇ ಇರಲಿಲ್ಲ.

ಇನ್ನು ರೇಡಿಯೊದ ದೇಖಾರೇಕಿಯೋ... ಅಬ್ಬಬ್ಬಾ ಅದನ್ನ ವಿವರಿಸಿ ಹೇಳಿ ಸುಖವಿಲ್ಲ! ರೇಡಿಯೋ ಸಂತೃಪ್ತವಾಗಿರಲು ವಿಶ್ವಸುಂದರಿಯಷ್ಟೇ ಅದರ ಮುತುವರ್ಜಿ ವಹಿಸಬೇಕು. ಆದರಡಿಗೊಂದು ಮೆತ್ತನೆ ಹಾಸು, ತಲೆ ಮೇಲೆ ಬೆನಜಿರ್ ಭುಟ್ಟೋನಂತೆ ಶಾಲು ಸುತ್ತಿ ಸದಾ ಧೂಳು ಕೂರದಂತೆ ಒರೆಸಿಡಲಾಗುತ್ತಿತ್ತು. ದೊಡ್ಡ ಮರದ ಫ್ರೇಮಿನ ಅದರ ಕೆಳಗಣ ಭಾಗದ ಎರಡೂ ಪಕ್ಕಗಳಲ್ಲಿ ಎರಡು ತಿರುಗಣೆ ಸ್ವಿಚ್ಚುಗಳು, ಅನಂತ್'ಕುಮಾರ್ ತನ್ನ ಉಬ್ಬುಹಲ್ಲು ಕಿರಿದಂತೆ ಅವೆರಡರ ನಡುವೆ ಹಲವಾರು ಅಂಕಿ ಸಂಖ್ಯೆ ಹೊತ್ತ ವಿವಿಧ ಬ್ಯಾಂಡ್ ಸೂಚಿ, ಎಲ್ಲಕ್ಕೂ ಮೇಲೆ ವಿಸ್ತಾರವಾಗಿ ಕಾಣುವ ಸ್ಪೀಕರ್... ಹೀಗೆ ಮೇಲ್ನೋಟಕ್ಕೆ ಇದು ಯಾರೋ ಹಲ್ಲುಬ್ಬರು ಮೂಲೆಯಲ್ಲಿ ಹಲ್ಲು ಬಿಟ್ಟುಕೊಂಡು ಕೂತಂತೆ ಕಾಣುತ್ತಿತ್ತು.


ಇಂತಿದ್ದ ರೇಡಿಯೊ ಮಹಾಶಯನನ್ನ ನಿತ್ಯ ತಟ್ಟಿ ಎಬ್ಬಿಸುವುದು ಒಂದು ಸಾಧನೆಯಂತಿರುತ್ತಿತ್ತು. ಸ್ವಿಚ್ ಅದುಮಿ ಐದು ನಿಮಿಷದ ನಂತರ ಬೇಕೊ ಬೇಡವೋ ಎಂಬ ಸೋಮಾರಿ ಮೈ ಮರೆತು ಏಳುವಂತೆ : ಏನೋ ನಮ್ಮ ಮೇಲೆ ಬಹುದೊಡ್ಡ ಕೃಪೆ ತೋರುವ ಫೋಜು ಕೊಡುತ್ತಾ ದಿನಚರಿಗೆ ಅದು ತಯಾರಾಗುತ್ತಿತ್ತು. ಮೊತ್ತ ಮೊದಲಿಗೆ ಅದರೊಳಗಿದ್ದ ಬಲ್ಬ್ ಹೊತ್ತಿಕೊಂಡು ಬೆಚ್ಚಗಾಗಬೇಕು. ಅನಂತರವಷ್ಟೇ ಕೊಂಚ ಗೊರಗೊರ ಸದ್ದಿನೊಂದಿಗೆ ಕೆಮ್ಮಿ ಕ್ಯಾಕರಿಸಿ ತನ್ನ ಗಂಟಲನ್ನು ಸರಿಪಡಿಸಿಕೊಂಡು ತುಣುಕು ತುಣುಕಾಗಿ ದೂರದೆಲ್ಲಿಂದಲೋ ಬರುವ ಧ್ವನಿಯನ್ನು ಅದು ಮೊದಲು ಕೇಳಿಸಿಕೊಂಡು ನಮಗೂ ಚೂರುಪಾರು ಕೇಳಿಸುತ್ತಿತ್ತು. ಹೀಗೆ ಚೂರು ಸದ್ದು ಕೇಳಿ ಬಂದಾಗ ಭಾರಿ ದಂಡು ಕಡಿದು ಬಂದವರಂತೆ ನಾವೆಲ್ಲಾ ಬೀಗುತ್ತಿದ್ದೆವು.! ಒಮ್ಮೆ ಹೀಗೆ ತಯಾರಾಯ್ತೆಂದರೆ ನಂತರ ಮನೆಯ ದೀಪ ಆರುವ ತನಕವೋ ಇಲ್ಲವೇ ಕರೆಂಟು ಹೊತ್ತಲ್ಲದ ಹೊತ್ತಿನಲ್ಲಿ ಕೈ ಕೊಡುವ ತನಕವೋ ಅದಕ್ಕೆ ಬಿಡುವಿಲ್ಲದ ಕೆಲಸ. ಆರಂಭದ ಅದರ ಬಿಂಕ-ಬಿನ್ನಾಣಗಳಿಗೆಲ್ಲ ದಿನದುದ್ದಕ್ಕೂ ಅದರ ಕಿವಿಹಿಂಡಿ ಸರಿಯಾಗಿ ಸೇಡು ತೀರಿಸಿಕೊಳ್ಳುತ್ತಿದ್ದೆವು?!

ಆಗಾಗ ಸೂಕ್ಷ್ಮ ಪ್ರಕೃತಿಯ ಈ ರೇಡಿಯೊ ಮಹಾಶಯನ ಆರೋಗ್ಯ ಹದಗೆಡುವುದೂ ಇತ್ತು. ತೀರ ಸಣ್ಣಪುಟ್ಟ ಸಮಸ್ಯೆಗಳಿಗೆಲ್ಲ ಮನೆಮದ್ದೇ ನಡಿಯುತ್ತಿತ್ತು. ಅತಿ ಮಳೆ ಬಂದರೆ- ಚಳಿ ಸ್ವಲ್ಪ ಹೆಚ್ಚಾದರೆ ಅದಕ್ಕೂ ಜ್ವರ, ನೆಗಡಿ ಬಂದು ಅಂತಹ ವಿಪರೀತ ಸಂದರ್ಭಗಳಲ್ಲಿ ಜಪ್ಪಯ್ಯ ಎಂದರೂ ಗೊರಲು ರೋಗದವರಂತೆ ಗೊರಗೊರ ಸದ್ದಿನ ಹೊರತು ಇನ್ಯಾವ ಧ್ವನಿಯೂ ಹೊರ ಬರುತ್ತಿರಲಿಲ್ಲ. ಆಗ ಅದನ್ನು ವಿಶೇಷ ಮುತುವರ್ಜಿಯಿಂದ ಇನ್ನೆರಡು ಮಂದರಿ ಸೇರಿಸಿ ಸುತ್ತಿಟ್ಟು ಬೆಚ್ಚಗೆಗಿರಿಸಿ ಆಸ್ಪತ್ರೆಯ ಹೊರರೋಗಿಯಂತೆ ಉಪಚಾರ ಮಾಡಲಾಗುತ್ತಿತ್ತು. ಮನೆಯಲ್ಲಿ ಇದು ಒಳ ರೋಗಿ ಅನ್ನುವುದಷ್ಟೇ ಇಲ್ಲಿರುತ್ತಿದ್ದ ವ್ಯತ್ಯಾಸ. ಆದರೆ ಅದರ ಈ ಅಕಾಲದ ನಡೆ ತೀರ ಸಂಶಯಾಸ್ಪದವಾಗಿದ್ದು ನಮ್ಮಿಂದ ಕಿವಿ ಹಿಂಡಿಸಿ ಕೊಂಡ ಕೋಪಕ್ಕೆ ಹೀಗೆ ರಚ್ಚೆ ಹಿಡಿದು ಪ್ರತಿಕಾರ ತೀರಿಸಿಕೊಳ್ಳುತ್ತಿತ್ತದು ಎಂಬ ಗುಮಾನಿ ಆಗೆಲ್ಲ ನನಗಿತ್ತು. ಜೀರಿಗೆ ಕಾಳುಮೆಣಸು ಕಷಾಯವನ್ನೂ ಮಾಡಿ ಕುಡಿಸಿ- ಪಥ್ಯದ ಊಟವನ್ನೂ ಕೆಟ್ಟ ರೇಡಿಯೊಗೆ ಮಾಡಿಸುತ್ತಾರೆ ಅಂತ ಚಿಕ್ಕವನಾಗಿದ್ದಾಗ ಬಲವಾಗಿ ನಂಬಿದ್ದೆ. ಏಕೆಂದರೆ ನನಗೂ ಜ್ವರ-ಶೀತ ಆಗಿದ್ದಾಗ ಹಾಗೆಯೆ ಮಾಡಲಾಗುತ್ತಿತ್ತಲ್ಲ!



ಮನೆಯಿಂದ ಸುಮಾರು ಒಂದೂವರೆ ಫರ್ಲಾಂಗ್ ದೂರದಲ್ಲಿದ್ದ ನಮ್ಮ ಶಾಲೆ ಬಿಟ್ಟ ತಕ್ಷಣ ಮನೆಯತ್ತ ಓಟ ಹೂಡುವ ನನಗೆ ಮರಳಿ ಮನೆ ಸೇರೋಕೆ ಹೆಚ್ಚೆಂದರೆ ಹತ್ತು ನಿಮಿಷ ಸಾಕಾಗುತ್ತಿತ್ತು. ತೀರಾ ಸಂಪ್ರದಾಯ ಬದ್ಧತೆಯೂ- ಅದೇ ವೇಳೆಗೆ ವಿಶಾಲ ಮನೋಭಾವವೂ ಸಮಾಸಮವಾಗಿದ್ದ ಕುಟುಂಬದ ಹಿನ್ನೆಲೆ ನನ್ನದು. ಶಾಲೆ ಮುಗಿಸಿ ಮನೆಗೆ ಬಂದವನಿಗೆ ಮೊದಲು ಮನೆಯ ಸುತ್ತಲೂ ಬೆಳಸಿದ್ದ ಗಿಡಗಳಿಗೆ ನೀರು ಹಾಕುವ ಕೆಲಸವಿರುತ್ತಿತ್ತು. ಬರಿ ಚಡ್ಡಿಯಲ್ಲಿ ಭರಪೂರ ನೀರಾಡುವ ಸುವರ್ಣಾವಕಾಶವಿದು, ಬಿಟ್ಟರೆ ಕೆಟ್ಟಂತೆ! ಇನ್ನುಳಿದ ದಿನದ ವೇಳೆಯಲ್ಲಿ ಅಪ್ಪಿತಪ್ಪಿ ಸುಮ್ಮನೆ ನೀರಿನಲ್ಲಿ ಕೈ ಬಿಟ್ಟರೂ ಬೆನ್ನ ಮೇಲೆ ಉಚಿತ ಹಾಗು ಖಚಿತವಾದ ಗುದ್ದುಗಳು ವಯಸ್ಸಿನಲ್ಲಿ ಹಿರಿಯರಾದ ಕುಟುಂಬದ ಸದಸ್ಯರಿಂದ ತಪ್ಪದೆ ಸಿಗುತ್ತಿದ್ದವು. ಇಂತಹ ಪುಣ್ಯಕಾರ್ಯದಲ್ಲಿ ನನ್ನ ಕಡೇ ಚಿಕ್ಕಮ್ಮನ ಕೈ ಯಾವಾಗಲೂ ಮುಂದು. ನೀರಾಟವಾಡಿದ ನಂತರ ಮನೆಯ ಹಟ್ಟಿಯಲ್ಲಿದ್ದ ಅಸಂಖ್ಯ ದನಗಳ ಹಿಂಡಿನಿಂದ ಅಮ್ಮ ಕರೆದಿಟ್ಟು ಅನಂತರ ಸಮ ಪ್ರಮಾಣದಲ್ಲಿ ನೀರು ಬೆರಿಸಿ ಕೊಟ್ಟ ಹಾಲನ್ನು ಪಾವು, ಕುಡ್ತೆ, ಲೋಟಗಳ ಲೆಕ್ಖದಲ್ಲಿ ವರ್ತನೆ ಮನೆಗಳಿಗೆ ಕೊಟ್ಟು ಬರಬೇಕಿತ್ತು. ಇದೊಂಥರಾ ಕಿರಿಕಿರಿಯ ಬಾಬತ್ತು. ಓಡೋಡುತ್ತ ಈ ಕೆಲಸ ಮಾಡುವಂತಿಲ್ಲ, ಕೊಂಚ ಅಲುಗಾಡಿದರೂ ವಯರಿನ ಚೀಲದಲ್ಲಿ ಜಾಗರೂಕತೆಯಿಂದ ಜೋಡಿಸಿಟ್ಟ ಹಾಲು ಚೆಲ್ಲಿ ಅವಾಂತರವಾಗುವ ಅಪಾಯವಿತ್ತಲ್ಲ. ಹಾಗೂ ಹೀಗೂ ಈ ಕೆಲಸವನ್ನು ಮುಗಿಸಿ-ಸಂಜೆಯ ಚಹದೊಟ್ಟಿಗೆ ಸಿಗುತ್ತಿದ್ದ ತಿಂಡಿಗೆ ಗತಿ ಕಾಣಿಸಿ ನೋಡುವಾಗ ಸುಮಾರಾಗಿ ಹೊತ್ತು ಕಂತಿರುತ್ತಿತ್ತು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ನನ್ನ ಸಮ ವಯಸ್ಕರು ಆಡುವ ಮನೆ ಹತ್ತಿರದ ಬಯಲಿಗೆ ಓಡಿದರೂ ಅವರೆಲ್ಲರ ಆಟ ಮುಗಿಯುವ ಕೊನೆಯ ಕೆಲವು ಕ್ಷಣಗಳಷ್ಟೇ ಉಳಿದಿರುತ್ತಿದ್ದವು. ತಥ್ ತೆರಿಕಿ! ಯಾವಾಗಲೂ ನನ್ನದು ಇದೇ ಹಣೆಬರಹ ಅಂತ ನನ್ನನ್ನೇ ಶಪಿಸಿ ಕೊಳ್ಳುವುದರ ಹೊರತು ಇನ್ಯಾವ ಅನ್ಯ ಮಾರ್ಗವೂ ಉಳಿದಿರುತ್ತಿರಲಿಲ್ಲ.

ಅಂತೂ ಆಟದ ಶಾಸ್ತ್ರ ಮುಗಿಸಿ ಮನೆಗೆ ಬರುವಾಗ ನಿಚ್ಚಳ ಕತ್ತಲು ಕವಿದಿರುತ್ತಿತ್ತು. ಮನೆಗೆ ಬಂಡವ ಆಗಷ್ಟೇ ನನ್ನ ಚಿಕ್ಕಮ್ಮಂದಿರು ಗುಡಿಸಿ ಒರೆಸಿಟ್ಟಿರುತ್ತಿದ್ದ ನೆಲದ ಮೇಲೆ ಅಪ್ಪಿತಪ್ಪಿ ಕಾಲಿಟ್ಟೆನೋ ಕೆಟ್ಟೆ! ಆಕಾಶ ಭೂಮಿ ಒಂದಾಗಲು ಅಂತಹ ಸಂದರ್ಭದಲ್ಲಿ ಹೆಚ್ಚು ಸಮಯ ಬೇಕಾಗುತ್ತಿರಲಿಲ್ಲ. ತೀರಾ ಸೊಕ್ಕು ಹೆಚ್ಚಿದಾಗ ಇದ್ಯಾವದಕ್ಕೂ ಕೇರ್ ಮಾಡದೆ ಬಿಡುಬೀಸಾಗಿ ಒರೆಸಿದ ನೆಲದ ಮೇಲೆ ಬೇಕಂತಲೆ ಮಣ್ಣು-ಕೆಸರಾದ ಕಾಲುಗಳ ಚಿತ್ತಾರ ಮೂಡಿಸುತ್ತ ಮನೆ ಹೊಕ್ಕುತ್ತಿದ್ದೆ. ತೀರಾ ಕುನ್ನಿಯಂತೆ ನಯವಂಚಕ ನರಿ ಮಾದರಿಯಲ್ಲಿ ಬಾಲ ಮಡಚಿಕೊಂಡು ಮನೆ ಪಕ್ಕದ ಓಣಿಯಿಂದ ಹಿತ್ತಲು ಹೊಕ್ಕು : ಮುಟ್ಟಾದವರಂತೆ ಮೈ-ಕೈ ಕಾಲನ್ನೆಲ್ಲ ಅಗತ್ಯಕ್ಕಿಂತ ಜಾಸ್ತಿ ತಿಕ್ಕೀ ತಿಕ್ಕೀ ತೊಳೆದುಕೊಂಡು ಅತಿ ಮಡಿಯಿಂದ ಒಂದುವೇಳೆ ಹಿಂಬಾಗಿಲ ಪ್ರವೇಶ ಮಾಡುತ್ತಿದ್ದೇನೆಂದರೆ ಅವತ್ತು ನನ್ನಿಂದ ಎಲ್ಲೋ ಏನೋ ಘನಘೋರ ಅಪರಾಧವಾಗಿರೋದು ಖಚಿತ! ಇದರ ಮುಂದಿನ ಭೀಕರ ಪರಿಣಾಮಗಳು, ಮನೆಯ ಹಿರಿಯರ ಕಿವಿಗೆ ನನ್ನ ಪ್ರತಾಪ ಬಿದ್ದು ಬೀಳಬಹುದಾದ ಪೆಟ್ಟುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವುದು ಈ ಅತಿವಿನಯದ ನಡವಳಿಕೆಯನ್ನು ನೇರವಾಗಿ ಅವಲಂಬಿಸುತ್ತಿದ್ದುದು ಮಾತ್ರ ಸುಳ್ಳಲ್ಲ.

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು