ಒಂದು ರಕ್ತ ಚರಿತೆ.....
ನಮ್ಮೂರಲ್ಲಿ ವರ್ಷಕ್ಕೊಂದು ಜಾತ್ರೆ, ಮೂರು ವರ್ಷಕ್ಕೊಮ್ಮೆ ಮಾರಿಜಾತ್ರೆ, ವರ್ಷಕ್ಕೆ ಮೂರು ಗಣಪತಿ ಪೆಂಡಾಲಿನ ಆರ್ಕೆಸ್ಟ್ರಾ, ವರ್ಷಕ್ಕೊಂದು ಆಯುಧಪೂಜೆಯ ರಸಮಂಜರಿ, ಶ್ರಾವಣದ ನಂತರ ಸಾಲಾಗಿ ಬರುವ ಎಲ್ಲಾ ಹಬ್ಬಗಳೊಂದಿಗೆ ಊರಿನ ಸಮಸ್ತ ಚೌಡಿ, ಭೂತರಾಯ ಹಾಗೂ ನಾಗಬನಗಳಿಗೆ ಅವುಗಳ ಯೋಗ್ಯತಾನುಸಾರ ಆಗಾಗ ಪಾನಕ-ಪನಿವಾರ, ಪ್ರಾಣಿ ಬಲಿಯ ಸೇವೆ ಸಲ್ಲಿಸುತ್ತಾ ತಮ್ಮ ಎಲ್ಲಾ ಕಷ್ಟ ನಷ್ಟಗಳೊಂದಿಗೆ ಸುಖವಾಗಿದ್ದರು! ಅಥವಾ ಕನಿಷ್ಠ ಸುಖವಾಗಿರುವ ಫೋಜು ಕೊಟ್ಟುಕೊಳ್ಳುತ್ತಾ ಓಡಾಡಿ ಕೊಂಡಿರುತ್ತಿದ್ದರು. ಜಡ್ಡು ಜಾಪತ್ರೆಯಾದಾಗಲೆಲ್ಲ ಸರಕಾರಿ ಜೆ ಸಿ ಧರ್ಮಾಸ್ಪತ್ರೆ ಹೋಗುತ್ತಿದ್ದುದಷ್ಟೇ ನಿಷ್ಠೆಯಿಂದ ಮಾರಿ, ಚೌಡಿ ಭೂತರಾಯನಿಗೂ ಹರಕೆ ಹೊರುತ್ತಿದ್ದರು. ತಮ್ಮ ಆಹಾರಕ್ರಮಕ್ಕನುಗುಣವಾಗಿ ಕುಂಬಳದಿಂದ ಕೋಳಿಯವರೆಗೂ ನಂಬಿದ ದೈವದ ಹರಕೆ ಸಲ್ಲಿಸುತ್ತಾ ಬಹಿರಂಗವಾಗಿ ಅವರವರ ಅಂತಸ್ತಿಗೆ ತಕ್ಕಂತೆ ಕುರಿಯಿಂದ ಕೋಣದವರೆಗೂ ಈ ಹರಕೆಯ ರೂಪದಲ್ಲಿ ದೇವರಿಗೆ ತೋರಿಸುತ್ತಿದ್ದ ಅಮಿಷದಲ್ಲಿ ಬದಲಾವಣೆಯಾಗುತ್ತಿತ್ತು. ಮಾರಿ ಒಲಿದರೆ ಸಕಲ ಸಮಸ್ಯೆಗಳೂ ಪರಾರಿ ಎಂಬ ಅನುಗಾಲದ ಅಲ್ಲಿನವರ ನಂಬಿಕೆ ಇನ್ನೂ ಬದಲಾಗಿಲ್ಲ. ಈ ಮಾರಿಜಾತ್ರೆ ಅಥವಾ ಭೂತ ಬಲಿಯ ಕಾಲಕ್ಕೆ ಹಿಂದುಗಳಷ್ಟೇ ಆ ಬಲಿ ಪ್ರಾಣಿಗಳನ್ನ ಮಾರುವ ಮುಸಲ್ಮಾನರೂ, ಕಡಿದ ಪ್ರಾಣಿಗಳ ಚರ್ಮಗಳ ಗುತ್ತಿಗೆ ಹಿಡಿಯುತ್ತಿದ್ದ ಬ್ಯಾರಿಗಳು, ಜಾತ್ರೆಯ ನೆಪದಲ್ಲಿ ಬರುವ ನೆಂಟರ ನಾಲಗೆ ರುಚಿ ತಣಿಸಲು ಊರ ಜನ ಹೆಚ್ಚು ಮೀನು ಕೊಳ್ಳುವುದರಿಂದ ಗಿರಾಕಿಗಳಿಂದ ಅದನ್ನ ಮಾರುವ ಕ್ರಿಸ್ತುವರು ಹಾಗೂ ಜಾತ್ರೆಯ ಪೆಂಡಾಲಿಗೆ ಮೈಕಿನ ಉಸ್ತುವಾರಿ ವಹಿಸುತ್ತಿದ್ದ ಜೈನರು ಹೀಗೆ ಎಲ್ಲರೂ ಆರ್ಥಿಕವಾಗಿ ಸಂತೃಪ್ತರಾಗುತ್ತಿದ್ದರಿಂದ ಈ ಆಚರಣೆಗಳಿಗೆ ಒಂದು ಸಾಮೂಹಿಕ ಸ್ವರೂಪವೂ ಪ್ರಾಪ್ತವಾಗಿತ್ತು. ಈ ಎಲ್ಲಾ ಕಾರಣಗಳಿಂದ ಸುತ್ತಮುತ್ತಲ ಕಾರ್ಕಳ, ಸಾಗರ, ಮಂಗಳೂರು ಹಾಗೂ ಶಿರಸಿಗಳಂತೆ ಇಲ್ಲಿನ ಮಾರಿಜಾತ್ರೆಯೂ ಒಂದು ಮಟ್ಟಿಗೆ ಪ್ರಸಿದ್ಧವಾಗಿತ್ತು.
ಮಾರಿಜಾತ್ರೆ ಸಾಮಾನ್ಯವಾಗಿ ಮೂರು ದಿನ ನಡೆಯುವಂತದ್ದು. ಇತ್ತೀಚಿಗೆ ವೈದಿಕ ಆಚರಣೆಗಳು ಅಲ್ಲಿ ಪ್ರಾಮುಖ್ಯತೆ ಪಡೆಯುತ್ತಿವೆಯಾದರೂ, ಮಾರಿಜಾತ್ರೆಯಲ್ಲಿ ನಾನು ಕಂಡಂತೆ ಮಹತ್ಹ್ವವಿರುತ್ತಿದ್ದುದು ಕೇವಲ ಅವೈದಿಕ ಆರಾಧನಾ ಕ್ರಮಗಳಿಗೆ. ಇನ್ನೇನು ಮಾರಿಜಾತ್ರೆಗೆ ಒಂದು ವಾರ ಇದೆಯೆನ್ನುವಾಗ ಊರಿನ ಕುಳವಾಡಿ ತಮಟೆ ಬಾರಿಸಿಕೊಂಡು ಊರೆಲ್ಲ ಮಾರಿ ಸಾರುತ್ತಾ ಸುತ್ತು ಬರುತ್ತಿದ್ದ. ಈ ಸಾರುವಿಕೆಯ ಜೊತೆಗೆ ಊರ ಉಳ್ಳವರಿಂದ ವೀಳ್ಯ ಹಾಗೂ ಚಿಲ್ಲರೆಕಾಸನ್ನೂ ಭಿಡೆಯಿಲ್ಲದೆ ಬಾಯಿ ಬಿಟ್ಟು ಕೇಳಿಯೇ ವಸೂಲು ಮಾಡುತ್ತಿದ್ದ. ಅವನ ಹಿಂದೆಯೆ ಹೊಲೆಯರ ಕೆರಿಯವರು ಆ ಬಾರಿ ಮಾರಿಗೆ ಬಲಿಕೊಡಲಿಕ್ಕಿರುವ ಹೋತವನ್ನ ಹೂಮಾಲೆ ಹಾಕಿ ದರದರ ಮನೆಮನೆ ಬಾಗಿಲಿಗೂ ಎಳೆದು ತರುತ್ತಿದ್ದರು. ತನ್ನ ಮುಂದಿನ ದುರ್ವಿಧಿಯ ಸುಳಿವು ಇನ್ನೂ ಹತ್ತಿರದ ಆ ಮೂಢ ಹೋತ ತನ್ನ ಕುತ್ತಿಗೆಗೆ ಹಾಕಿರುವ ಚಂಡು ಹೂವಿನ ಹಾರವನ್ನೆ ಕಿತ್ತುತಿನ್ನಲು ಹವಣಿಸುತ್ತಾ ತಮಟೆ ಬಾರಿಸುವವನ ಹಿಂದೆಯೇ ಒಲ್ಲದ ಮನಸ್ನಿಂದ ಒತ್ತಾಯಕ್ಕೊಳಗಾಗಿ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಹಿಂಬಾಲಿಸುತ್ತಿತ್ತು. ಅದು ಮನೆ ಬಾಗಿಲಿಗೆ ಬಂದಾಗ ಬ್ರಾಮ್ಹಣರಿಂದ ಹಿಡಿದು ಶೂದ್ರಾತಿಶೂದ್ರರವರೆಗೂ ಎಲ್ಲರೂ ಅದರ ತಲೆಗೆ ಎಳ್ಳೆಣ್ಣೆ ಹನಿಸಿ ಜೊತೆಗಿರುತ್ತಿದ್ದ ಇನ್ನೊಬ್ಬನ ಕೈಯಲ್ಲಿರುತ್ತಿದ್ದ ಕ್ಯಾನಿಗೆ ಕುಡ್ತೆ ಎಣ್ಣೆ ಸುರಿಯೋದು ಖಡ್ಡಾಯವಾಗಿತ್ತು . ಅದರೊಂದಿಗೆ ಮಾರಿ ಜಾತ್ರಾ ವಂತಿಗೆಯನ್ನೂ ನಗದಿನ ರೂಪದಲ್ಲಿ ನೀಡಬೇಕಿತ್ತು. ಹೀಗೆ ನೀಡಿದ ಹಣದಲ್ಲಿ ಮಾರಿಬಲಿಯ ಊಟದ ಖರ್ಚು ವೆಚ್ಚಗಳನ್ನು ನಿಭಾಯಿಸಲಾಗುತ್ತಿತ್ತು. ಮಾರಿ ಸಾರಿದ ನಂತರ ಊರಲ್ಲಿದ್ದವರ್ಯಾರೂ ಜಾತ್ರೆ ಮುಗಿಯುವವರೆಗೂ ಊರು ಬಿಟ್ಟು ಹೊರಗೆ ತೆರಳುವಂತಿರಲಿಲ್ಲ, ಹಾಗೊಂದು ವೇಳೆ ಹೋಗಿದ್ದರೂ ಕತ್ತಲಾಗುವ ಮುನ್ನ ಮರಳಿ ಊರು ಸೇರಿಕೊಳ್ಳಲೆ ಬೇಕಿತ್ತು.
. ತೀರ್ಥಹಳ್ಳಿಯ ಮಾರಿಗುಡಿ ಊರಿನ ನಡುಮಧ್ಯದಲ್ಲಿದೆ. ಇಲ್ಲಿಗೆ ಕಣ್ಣಳತೆಯಲ್ಲಿ ಊರಿನ ಲೂರ್ದುಮಾತೆಯ ಇಗರ್ಜಿಯಿದ್ದರೆ, ಊರಿನ ಎರಡೂ ಮಸೀದಿಗಳು ಇಲ್ಲಿಗೆ ಕೇವಲ ಕೂಗಳತೆಯ ದೂರದಲ್ಲಿವೆ. ಮಾರಿಯಮ್ಮನ ಭಕ್ತಕೋಟಿ ಸದಾ ಈ ಇಕ್ಕಟ್ಟಿನ ಗುಡಿಯಲ್ಲಿ ಇರುಕಿಕೊಂಡಿರುತ್ತಿದ್ದ ಕಾರಣ ಅಲ್ಲಿನ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಹಗಲಿಡಿ ವಿಪರೀತ ಹೂವು-ಹಣ್ಣುಗಳ ವ್ಯಾಪಾರ ಎಡೆಬಿಡದೆ ಬಿರುಸಿನಿಂದ ನಡೆಯುತ್ತಿತ್ತು. ಹಾಗೆ ನೋಡಿದಾರೆ ಊರಿನ ಮುಖ್ಯ ಆಕರ್ಷಣೆಯಾದ ರಾಮೇಶ್ವರ, ಮಠದೊಳಗೆ ವಿರಾಜಮಾನರಾಗಿರುವ ರಾಘವೇಂದ್ರ ಸ್ವಾಮಿಗಳು, ತಂತ್ರಿಗಳ ನಿಗದಲ್ಲಿರುವ ಗಣಪತಿ ಕಟ್ಟೆಯ ಗಣಪ, ರಥಬೀದಿಯಂಚಿನಲ್ಲಿರುವ ಶ್ರೀರಾಮಚಂದ್ರ, ಕೋದಂಡರಾಮ, ಸೊಟ್ಟಮುಖದ ಹನುಮನಂತಹ ಶಿಷ್ಟದೇವರುಗಳೆಲ್ಲ ಮಂಕೋ ಮಂಕು. ಇಷ್ಟುದ್ದ ನಾಲಗೆ ಕಳೆದು ಕೊಂಡು ದೊಡ್ಡದೊಡ್ಡ ಕಣ್ಣು ಬಿಡುತ್ತಿರುವ ಬೆಳ್ಳಿ ಮುಖವಾಡದ ಮಾರಮ್ಮನದ್ದು ಊರಿನಲ್ಲಿ ಒಂದು ತೂಕವಾದರೆ ಈ ಹೆಣ್ಣು ದೇವರ ಮುಂದೆ ಪುರುಷ ಪ್ರತಾಪಿ ದೈವಗಳ ಪುಂಗಿಯೆಲ್ಲ ಪೂರ್ಣ ಬಂದ್! . ಪುರುಷಪ್ರಧಾನ ದೇವರುಗಳಿಗಿಂತ ಈ ಸ್ತ್ರೀದೇವರ ಹಿಂಬಾಲಕರ ಸಂಖ್ಯೆ ಯಾವಾಗಲೂ ಹೆಚ್ಚಾಗಿರುತ್ತಿದ್ದುದು ಬಹಿರಂಗ ಗುಟ್ಟು!
ನಮ್ಮ ಮನೆಯಿದ್ದುದು ಊರಿನ ಸೂಪ್ಪುಗುಡ್ಡೆ ಬಡಾವಣೆಯಲ್ಲಿ. ಅದರ ಕಟ್ಟಕಡೆಯ ತುದಿಯಂಚಿನಲ್ಲಿ ಇರುವ ಆಚಾರಿಗಳ ಮನೆಯಲ್ಲಿ ಮಾರಿ ಗೊಂಬೆ ತಯಾರಾಗುತ್ತಿತ್ತು. ಆ ಬೊಂಬೆ ಕೊರೆಯುವುಇದು ಆ ಮನೆತನಕ್ಕೆ ಬಂದ ವಂಶ ಪಾರಂಪರ್ಯದ ಹಕ್ಕು. ನಾವು ಚಡ್ಡಿ ಪೈಲ್ವಾನರಾಗಿದ್ದ ಕಿರಿಯರು ಆಚಾರಿಗಳು ಬಟ್ಟೆ ಕಟ್ಟಿ ಮರೆಯಲ್ಲೆ ಮರವೊಂದಲ್ಲಿ ಕೆತ್ತುತ್ತಿದ್ದ ಮಾರಮ್ಮ ಹಾಗೂ ಅವಳ ಗಂಡನ ಮೂರ್ತಿಯನ್ನ ದಿನವೂ ಕದ್ದುಕದ್ದು ನೋಡುತ್ತಿದ್ದೆವು. ಎರಡು ಚಕ್ರದ ಕೈ ಗಾಡಿಯ ಮೇಲೆ ಸೊಂಟದಿಂದ ಮೇಲೆ ಕೂತಂತೆ ಕೆತ್ತಿರುತ್ತಿದ್ದ ಮಾರಿ ಬೊಂಬೆಗಳನ್ನ ಸೀರೆ-ಪಂಚೆ ಉಡಿಸಿ ಅಲಂಕರಿಸಿ ಜಾತ್ರೆಯ ಮೊದಲನೆದಿನ ದೇವಸ್ಥಾನಕ್ಕೆ ಕೊಂಬು ಕಹಳೆಗಳೊಂದಿಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತಿತ್ತು. ದೇವಸ್ಥಾನದ ಮುಂದಿರುವ ಮಾತಂಗಿಗುಡಿಯ ಎದುರು ಆ ಮೂರ್ತಿಗಳ ಸಮಕ್ಷಮದಲ್ಲಿ ಊರು ಸುತ್ತು ಬರಿಸಿರುತ್ತಿದ್ದ ಬಲಿಯ ಹೋತವನ್ನ ಪೂಜೆಯ ಭಂಡಾರ ಬಳಿದು ಮಾರಿಯ ಕಟುಕ ಉದ್ದನೆಯ ಕತ್ತಿಯಿಂದ ಒಂದೇ ಹೊಡೆತಕ್ಕೆ ಕಡಿದು ಮುಂದ-ರುಂಡ ಎರಡು ಮಾಡುತ್ತಿದ್ದ. ಅನಿರೀಕ್ಷಿತವಾಗಿ ವಧೆಯಾಗುತ್ತಿದ್ದ ಹೋತದ ದೇಹಡ ಕಡಿದ ಕುತ್ತಿಗೆಯಿಂದ ರಕ್ತದ ಓಕುಳಿ ಕಾರಂಜಿಯಂತೆ ಚಿಮ್ಮುತ್ತಲೆ ಹೋತದ ಮುಂದ ಕೆಳಗುರುಳುತ್ತಿತ್ತು. ಈ ಕೈಂಕರ್ಯವನ್ನ ನೋಡುವ ಉಮೇದಿನೊಂದಿಗೆ ಅಲ್ಲಿಗೆ ದಾಂಗುಡಿಯಿಡುತ್ತಿದ್ದ ನಮ್ಮಂತ ಕಿರಿಯರಿಗೆ ವಿಲವಿಲ ಒದ್ದಾಡುವ ಅದನ್ನ ನೋಡುವಾಗ ಚಡ್ಡಿ ಒದ್ದೆಯಾಗುತ್ತಿದ್ದುದೂ ಇಟ್ಟು. ಹೀಗೆ ಕಡಿದ ಹೋತದ ತಲೆಗೆ ಅದರದ್ದೆ ಮುಂಗಾಲೊಂದನ್ನ ಬಾಯಲ್ಲಿ ಸಿಕ್ಕಿಸಿದಂತೆ ಮಾತಂಗಿ ಗುಡಿಯ ಮುಂದೆಯೆ ಇರಿಸಿ ಅದರ ಮೇಲೆ ದೊಡ್ಡದೊಂದು ಹಣತೆಯಿಟ್ಟು ದೊಡ್ಡ ಬತ್ತಿಯ ದೀಪವನ್ನ ಮೂರುದಿನವೂ ಬಿಡದೆ ಉರಿಸಲಾಗುತ್ತಿತ್ತು. ದೇವಸ್ಥಾನಕ್ಕೆ ಆ ಮೂರುದಿನವೂ ಹೋಗುವಾಗ ಈ ಭಯಾನಕ ದೃಶ್ಯವನ್ನು ಕಂಡು ನಾವು ಬೆಚ್ಚಿ ಬೀಳುತ್ತಿದ್ದೆವು.
ದೇವರನ್ನ ಪೂಜಿಸಿ ಭಂಡಾರ ಕೊಂಡೊಯ್ದು ಮಾರಿಯ ಭಕ್ತಕೋಟಿ ತಮ್ಮ ಆಹಾರ ಕ್ರಮಕ್ಕೆ ತಕ್ಕಂತೆ ಭಂಡಾರ ಹಚ್ಚಿದ ಕುಂಬಳವನ್ನೋ, ಇಲ್ಲಾ ಹರಕೆಯ ಕೋಳಿಯನ್ನೋ ಮನೆಯಲ್ಲಿಯೆ ಕಡಿದು ಮಾರಿಯನ್ನ ಸಂತೃಪ್ತಗೊಳಿಸಿ ಎಡೆಯಿಟ್ಟು ಅಂದು ಊಟ ಮುಗಿಸುತ್ತಿದ್ದರು.ಮಾರಿಗೆ ಫಾರಂ ಕೋಳಿಗಳು ನಿಶಿದ್ಧವಂತೆ, ಹೀಗಾಗಿ ನಾಟಿ ಕೋಳಿ ಸಾಕಿದ ಮಂದಿಗೆ ಜಾತ್ರೆಯಲ್ಲಿ ಭರ್ಜರಿ ಬೇಡಿಕೆ. ಕೆಲವರಂತೂ ಜಾತ್ರೆಗೂ ಮೊದಲೆ ಹೇಳಿ ಮುಂಗಡವಾಗಿ ಕೋಳಿ ಪಿಳ್ಳೆಗಳನ್ನ ಬುಕ್ ಮಾಡುವುದನ್ನ ಶಾಲೆಗೆ ಹೋಗುವ ಹಾದಿಯಲ್ಲಿ ಕಾಣುತ್ತಿದ್ದೆವು. ಕೋಳಿ ಸಾಕುವ ಬೂಬಮ್ಮ ಬಾಯಮ್ಮಗಳು ಜಾತ್ರೆಗೆ ಇನ್ನೂ ವರ್ಷಕ್ಕೆ ಮೊದಲೆ ಮೊಟ್ಟೆ ಎಣಿಸಿ ಎಣಿಸಿ ಮುಂದಿನ ಹಂಗಾಮಿನಲ್ಲಿ ಆಗುವ ವ್ಯಾಪಾರದ ಕನಸು ಕಾಣುತ್ತಲೇ ದಿನ ದೂಕುತ್ತಿರುತ್ತಿದ್ದರು. ಈ ವ್ಯಾಪಾರದ ಲೆಕ್ಖಾಚಾರದಲ್ಲಿಯೆ ಅವರ ಭವಿಷ್ಯದ ಕೆಲವು ಸಾಂಸಾರಿಕ ಯೋಜನೆಗಳು ರೂಪುಗೊಳ್ಳುತ್ತಿದ್ದುದೂ ಉಂಟು. ಮಾರಿಗೆ ಈ ಕೋಳಿಗಳ ನಡುವೆ ವರ್ಣದ ಅಸ್ಪರ್ಶ್ಯತೆ ಆಚರಿಸುವ ಅನಿವಾರ್ಯತೆ ಏನಿತ್ತು ಅಂತ ಇಂದಿಗೂ ನನಗೆ ಅರ್ಥವಾಗಿಯೇ ಇಲ್ಲ! ಅಲ್ಲಿಗೆ ಜಾತ್ರೆಯ ಎರಡನೆ ದಿನ ಮುಗಿಯುತ್ತಿತ್ತು. ಮೂರನೆ ದಿನ ಊರಲ್ಲೆಲ್ಲ ಮಾರಿ ಬಿಡುವ ಗಡಿಬಿಡಿ. ಮಾರಿಯ ಗಂಡ-ಹೆಂಡಿರ ಬೊಂಬೆಯನ್ನ ಪೂಜೆಯ ನಂತರ ಎಳೆದೊಯ್ದು ಊರ ಗಡಿ ದಾಟಿಸಿ ಮಾರಿಯ ಹೆಸರಲ್ಲಿ ಕಡಿದ ಏಳೆಂಟು ಹೋತಗಳ ಮಾಂಸದಡುಗೆಯನ್ನ ಮೂರ್ತಿ ಕೆತ್ತಿದ ಆಚಾರಿಯ ಮನೆಯಂಗಳದಲ್ಲೇ ಅಡುಗೆ ಮಾಡಿ ಮಾರಿಯ ಭಕ್ತ ಕೋಟಿಗೆ ಅಲ್ಲೆ ಸಮೀಪದಲ್ಲಿದ್ದ ದೇವಸ್ಥಾನದ ಗದ್ದೆಯಲ್ಲಿ ಹಾಕಿರುತ್ತಿದ್ದ ಪೆಂಡಾಲಿನಲ್ಲಿ ಭೂರಿ ಭೋಜನ ಏರ್ಪಡಿಸಲಾಗುತ್ತಿತ್ತು. ಕದ್ದು ಮುಚ್ಚಿ ಕಳ್ಳಿನ ಸಮಾರಾಧನೆಯೂ ಈ ಭೋಜನದಲ್ಲಿ ಆಗುತ್ತಿದ್ದರಿಂದ ಮಾರಮ್ಮನ ಮಕ್ಕಳು ಟೈಟಾಗಿ ಓಲಾಡುವುದನ್ನ ಪುಕ್ಕಟೆಯಾಗಿ ನೋಡಿ ಎಂಜಾಯ್ ಮಾಡಬಹುದಾಗಿತ್ತು.
ಒಮ್ಮೆ ಊರು ದಾಟಿಸಿದ ಮಾರಿಯ ಬೊಂಬೆಯ ಜೊತೆ ಮೊಂಡು ಹಿಡಿಸೂಡಿ (ಪೊರಕೆ), ಹರಿದ ಚಾಪೆ , ಮುರಿದ ಕಡಗೋಲನ್ನೂ ಸಂಪ್ರದಾಯದಂತೆ ಇಡುತ್ತಿದ್ದರು. ಮಾರಿ ಬ್ರಾಮ್ಹಣ ಕನ್ಯೆಯಾಗಿದ್ದಳಂತೆ. ಅವಳನ್ನ ಸುಳ್ಳುಜಾತಿ ಹೇಳಿ ಯಾಮಾರಿಸಿದ ಹೊಲೆಯನೊಬ್ಬ ಮದುವೆಯಾದನಂತೆ. ಈ ಜೋಡಿಯ ಸುಖ ಸಂಸಾರಕ್ಕೆ ಮೂವರು ಮಕ್ಕಳೂ ಆದರಂತೆ. ಕೊನೆಯ ಕಿರಿಯ ಅಪ್ಪನೊಂದಿಗೆ ಹೋಗಿದ್ದಾಗಲೋಮ್ಮೆ ಅಪ್ಪ ಚಕ್ಕಳ ಸುಳಿದು ಎಕ್ಕಡ ಹೊಲೆಯುತ್ತಿದ್ದುದರ ವರದಿಯನ್ನ ಅಮ್ಮನಿಗೆ ಒಪ್ಪಿಸಿದನಂತೆ. ಈ ವಿಶ್ವಾಸ ದ್ರೋಹದ ಕಥೆ ಕೇಳಿ ಗಂಡನ ಜಾತಿಯ ರಹಸ್ಯ ಅರಿತ ಮಾರಿ ಕ್ಷುದ್ರಳಾಗಿ ತನ್ನ ಕೈಗತ್ತಿಯಿಂದ ತನ್ನವೇ ಮೂರೂ ಸಂತಾನಗಳನ್ನ ಕೊಚ್ಚಿ ಹಾಕಿದಳಂತೆ. ಮನೆಗೆ ಮರಳುತ್ತಿದ್ದ ಅವಳ ಗಂಡ ತನ್ನ ಹೆಂಡಿರ ಈ ರೌದ್ರಾವತಾರ ಕಂಡು ಕಂಗಾಲಾಗಿ ಓಟ ಕಿತ್ತನಂತೆ. ಇವಳೂ ಛಲ ಬಿಡದೆ ಕತ್ತಿ ಜಳಪಿಸುತ್ತಾ ಅವನ ಬೆನ್ನು ಹತ್ತಿದಳಂತೆ.ಓಡಿ ಓಡಿ ಸುಸ್ತಾದ ಆತ ಎದುರಲ್ಲಿ ಬರುತ್ತಿದ್ದ ಕೋಣವೊಂದರ ಒಳಗೆ ತೂರಿದನಂತೆ. ಗಂಡನ ಕಪಟ ವೇಷ ಅರಿತ ಮಾರಿಯನ್ನ ಸಂತೃಪ್ತಗೊಳಿಸಲಿಕ್ಕೆ ಮಾರಿಯ ಸೇವಕಿಯೂ, ಅವಳ ಗಂಡನ ಉಪಪತ್ನಿಯೂ ಆದ ಮಾತಂಗಿ ಆ ಕೋಣವನ್ನ ಮಾರಿಯೆದುರೆ ಕಡಿದ ನಂತರ ಮಾರಮ್ಮ ಸಂತೃಪ್ತಗೊಂಡಳಂತೆ! ಮಾರಿಜಾತ್ರೆಯ ಈ ಕಥೆಯನ್ನ ಅಮ್ಮ ರಾತ್ರಿ ಅಪ್ಪಿಕೊಂಡು ಮಲಗಿ ನಿದ್ದೆ ಬರಿಸಲಿಕ್ಕಂತ ನನಗೆ ಹೇಳಿದ್ದರಾದರೂ ನಾನು ಹೆದರಿ ಕಂಗಾಲಾದವ ಅವರನ್ನ ಇನ್ನಷ್ಟು ಅಪ್ಪಿ ಹಿಡಿದು ನಿದ್ದೆ ಬಾರದಷ್ಟು ಭಯಭೀತನಾಗಿದ್ದೆ. ತೀರ್ಥಹಳ್ಳಿಯಲ್ಲೂ ಮೊದಲು ಕೋಣವನ್ನೇ ಮಾರಿಗೆ ಬಲಿ ನೀಡುತ್ತಿದ್ದರಂತೆ ಆದರೆ ಈಗ ಅದನ್ನೆ ಹೋತಕ್ಕೆ ಬದಲಿಸಿ ಕೊಂಡಿದ್ದಾರೆ ಅಂತಲೂ ಅಮ್ಮ ಹೇಳುತ್ತಿದ್ದರು.
ಮಾರಿಜಾತ್ರೆ ಬಂತೆಂದರೆ ನಮಗೆ ಕಿರಿಯರಿಗೆ ಮೂರು ಕಾರಣಕ್ಕೆ ಪರಮಾನಂದವಾಗುತ್ತಿತ್ತು. ಮೊದಲನೆಯದು ಶಾಲೆಗೆ ರಜೆ ಸಿಗುತ್ತಿತ್ತು, ಎರಡನೆಯದು ಪರವೂರಿನ ನೆಂಟರು ಜಾತ್ರೆಗಂತ ಊರಿಗೆ ಬರುತ್ತಿದ್ದರು, ಬಂದವರು ಮರಳಿ ಹೋಗುವಾಗ ಮಕ್ಕಳಿಗೆ ಚಿಲ್ಲರೆ ಕಾಸು ಕೊಟ್ಟು ಹೋಗುತ್ತಿದ್ದರು! ಮುಖ್ಯವಾದ ಮೂರನೆಯ ಕಾರಣವೆಂದರೆ ಮಾರಿಗುಡಿಯ ಮುಂದೆ ರಾಜರಸ್ತೆಯಲ್ಲಿಯೆ ಪೆಂಡಾಲು ಹಾಕುವುದರಿಂದ ಊರಿನ ಮೇಲು ಬಸ್ಟ್ಯಾಂಡಿನಿಂದ ಕೆಳ ಬಸ್ಟ್ಯಾಂಡಿಗೆ ಹೋಗುವ ಸಮಸ್ತ ಬಸ್ಸುಗಳೂ ಸುತ್ತು ಬಳಸಿ ನಮ್ಮ ಮನೆಯ ಹಾದಿಯಾಗಿಯೇ ಮೂರುದಿನ ಸಾಗಬೇಕಾಗುತ್ತಿತ್ತು. ಬಸ್ಸಿನ ಚಾಲಕರೆ ನಮ್ಮಂತರ ಎಳೆಯರ ಹೀರೋಗಳೂ ಆಗಿರುತ್ತಿದ್ದ ಕಾಲವದು. ಅಲ್ಲದೆ ನನ್ನಜ್ಜನೆ ಆಗ ಡ್ರೈವರ್ ಬೇರೆ!. ಸಾಗುವ ಬಸ್ಸುಗಳಿಗೆಲ್ಲ ಕೂಗಿ-ಕಿರುಚಿ ಕೈ ಬೀಸುತ್ತಿದ್ದ ಮನೆಯಂಗಳದಿಂದಲೆ ನಮ್ಮ ಪಟಾಲಂ ಮುಂದೆ ಅಜ್ಜನ ಬಸ್ ಸಾಗುವಾಗ ಮಾತ್ರ ನಾನು ಒಂಚೂರು ಹೆಚ್ಚೇ ಎದೆಯುಬ್ಬಿಸಿ ಜಂಭದಿಂದ ಜಿಗಿದಾಡಿ ಅಗತ್ಯಕ್ಕಿಂತ ಹೆಚ್ಚು ಗದ್ದಲವೆಬ್ಬಿಸುತ್ತಾ ಕೈ ಬೀಸುತ್ತಿದ್ದೆ! ಮಾರಿಗೆ, ಮಾರಿಜಾತ್ರೆಗೆ ತೀರ್ಥಹಳ್ಳಿಯಲ್ಲಿ ಇನ್ನೂ ಅಷ್ಟೆ ಪ್ರಾಮುಖ್ಯತೆ ಇದೆ ಅಂದುಕೊಂಡಿದ್ದೇನೆ. ಊರಿನ ರಸ್ತೆ ಅಗಲೀಕರಣಗೊಳ್ಳುವಾಗ ಗಾಂಧಿಚೌಕದ ಮೂಲೆಯಲ್ಲಿದ್ದ ಗಣಪತಿಕಟ್ಟೆಗೂ ಬುಲ್ಡೋಜರ್ ಹರಿಸಿದ್ದ ಸ್ಥಳಿಯಾಡಳಿತ ನಡು ರಸ್ತೆಗೆ ಚಾಚಿಕೊಂಡಿರುವ ಮಾರಿ ಮತ್ತವಳ ಸಖಿ ಮಾತಂಗಿಯ ಕೂದಲನ್ನೂ ಕೊಂಕಿಲ್ಲ. ಅವರ ಸುದ್ದಿಗೆ ಹೋಗದೆ ಸುಮ್ಮನಿರುವ ಸರಕಾರದ ಈ ನಡೆ ನನ್ನಲ್ಲಿ ನಿಜಕ್ಕೂ ವಿಸ್ಮಯ ಹುಟ್ಟಿಸಿದ್ದು ಸುಳ್ಳಲ್ಲ. ಕನಿಷ್ಠ ದೇವರ ಮಟ್ಟದಲ್ಲಾದರೂ ಸ್ತ್ರೀ ಪ್ರಾಬಲ್ಯವಿದ್ದು ಪುರುಷ ದೇವರುಗಳೆ ಮೀಸಲಾತಿಗಾಗಿ ಅಂಗಲಾಚುತ್ತಾ ಪರಿತಪಿಸುವುದನ್ನ ನೋಡುವಾಗ ತುಟಿಯಂಚಿನಲ್ಲಿ ಒಂದು ತುಂಟ ನಗು ಸುಳಿಯುತ್ತಿದೆ .
Comments
Post a Comment