ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Tuesday, September 18, 2012

ಡೊಳ್ಳು ಹೊಟ್ಟೆಯವನ ನೆನಪಲ್ಲಿ.....
ಬಾಲ್ಯದಲ್ಲಿ ಹೆಚ್ಚು ಕಾತರದಿಂದ ನಾನು ನಿರೀಕ್ಷಿಸುತ್ತಿದ್ದುದು ಕೇವಲ ಎರಡನ್ನು. ಮೊದಲನೆಯದು ಶಾಲೆಗೆ ಸಿಗುತ್ತಿದ್ದ ಅರ್ಧ ವಾರ್ಷಿಕ ಹಾಗೂ ವಾರ್ಷಿಕ ರಜಾ ದಿನಗಳಾದರೆ, ಎರಡನೆಯದು ಶ್ರಾವಣದ ನಂತರ ಸಾಲಾಗಿ ದಾಂಗುಡಿಯಿಟ್ಟು ಬರುತ್ತಿದ್ದ ಹಬ್ಬಗಳು. ಮೊದಲನೆಯ ನಿರೀಕ್ಷೆ ಅಮ್ಮನ ಜೊತೆ ಮೂಡುಬಿದ್ರೆಯಲ್ಲಿದ್ದ ಅವರ ತವರಿಗೆ ಹೋಗಿ ಮಜವಾಗಿ ಶಾಲೆಯ ಆತಂಕವಿಲ್ಲದೆ ದಿನಗಳನ್ನ ಕಳೆಯಬಹುದು ಎನ್ನುವ ಕಾರಣಕ್ಕಾದರೆ. ಎರಡನೆಯದು ಶುದ್ಧ ಬಾಯಿ ಚಪಲಕ್ಕಾಗಿ! ಹಬ್ಬದ ನೆಪದಲ್ಲಿ ಅಪರೂಪಕ್ಕೆ ತಿನ್ನಲು ಸಿಗುತ್ತಿದ್ದ ಭಕ್ಷ್ಯಗಳನ್ನ ಬಕಾಸುರನಂತೆ ಕಬಳಿಸಲು ಮನಸು ಸದಾ ಹಾತೊರೆಯುತ್ತಲೇ ಇರುತ್ತಿತ್ತು. ಮಕ್ಕಳ ಬಾಯಿ ಚಪಲದ ಅರಿವಿದ್ದ ಅಮ್ಮ ಪ್ರತಿ ಹಬ್ಬಕ್ಕೂ ಎರಡು ಬಗೆಯ ಪಲ್ಯ, ಕೋಸಂಬರಿ. ಒಂದು ಹುಳಿಯನ್ನ ಅಥವಾ ಚಿತ್ರಾನ್ನ, ಚಟ್ತಂಬೋಡೆ, ಹಪ್ಪಳ ಹಾಗೂ ಎಲ್ಲಕ್ಕೂ ಮುಖ್ಯವಾಗಿ ಪಾಯಸ ಮಾಡಿಯೆ ಮಾಡುತ್ತಿದ್ದರು. ವರ್ಷಕ್ಕೊಮ್ಮೆ ನಾಗರ ಪಂಚಮಿಗೆ ಅರಿಸಿನದೆಲೆಯ ಕಡಬು,ಚೌತಿಗೆ ಅತಿರಸ, ದೀಪಾವಳಿಯ ಸಂದರ್ಭದಲ್ಲಿ ಹೋಳಿಗೆ ಮೆಲ್ಲಲಿಕ್ಕೆ ಸಿಗುತ್ತಿತ್ತು. ಹೀಗಾಗಿ ಹಬ್ಬಗಳೆಂದರೆ ಅತಿ ನಿರೀಕ್ಷೆ ಆಗೆಲ್ಲ ನನಗೆ.

ನಾವು ಸಾಮಾನ್ಯವಾಗಿ ಎಲ್ಲಾ ಹಬ್ಬಗಳನ್ನೂ ಬಿಡದೆ ಆಚರಿಸುತ್ತಿದ್ದರೂ ನಾಗರ ಪಂಚಮಿ, ನವರಾತ್ರಿ ಹಾಗೂ ದೀಪಾವಳಿಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದೆವು. ದಕ್ಷಿಣ ಕನ್ನಡ ಮೂಲದವರಾದ ನಮ್ಮದು ಸೌರ ಯುಗಾದಿ. ಹೀಗಾಗಿ ಊರವರೆಲ್ಲರೂ ಹಬ್ಬ ಮಾಡಿಯಾದ ಹದಿನೈದನೆ ದಿನಕ್ಕೆ ನಮ್ಮ ಮನೆಯಲ್ಲಿ ವರ್ಷವೂ ಯುಗಾದಿ ಕುಂಟಿಕೊಂಡು ಬರಲೋ? ಬೇಡವೋ? ಎಂಬಂತೆ ಬರುತ್ತಿತ್ತು ಅಂತ ಬಾಲ್ಯದುದ್ದಕ್ಕೂ ನನಗೆ ಅದರ ಮೇಲೆ ಸಿಟ್ಟೋ ಸಿಟ್ಟು! ಆದರೆ ಚೌತಿಯೆಂದರೆ ಒಂದು ವಿಚಿತ್ರ ಆಕರ್ಷಣೆಯಿತ್ತು ನನಗೆ.


ಮೊದಲನೆಯದಾಗಿ ಅದು ಡೊಳ್ಳುಹೊಟ್ಟೆಯ ಗಣಪತಿಯ ಜನ್ಮದಿನ. ಆನೆಯ ಆಕಾರಕ್ಕೆ ಮನ ಸೋತಿದ್ದ ನನಗೆ ಗಣಪತಿಯೆಂದರೆ ಇನ್ನೆಲ್ಲರಿಗಿಂತ ಚೂರು ಜಾಸ್ತಿಯೆ ಪ್ರೀತಿ. ಗಣಪತಿಗೆ ಆನೆಮುಖ ಬಂದ ಕಥೆಯನ್ನ ಅಮ್ಮ ನನಗೆ ಮಲಗಿಸುವಾಗ ಹೇಳುತ್ತಿದ್ದರು. ಜೊತೆಗೆ ಪ್ರತಿ ತಿಂಗಳೂ ಅಮ್ಮ ಮಾಡುತ್ತಿದ್ದ ಸಂಕಷ್ಟಹರವೃತದ ಕಾರಣ ಗಣಪತಿ ಇನ್ನಷ್ಟು ಆಪ್ತನಾಗಿದ್ದ. ತಿಂಗಳ ಈ ವೃತ ಹಿಡಿದವರು ಹಗಲಿಡಿ ಉಪವಾಸ ಇರಬೇಕಿದ್ದು ಅದು ಸಾಧ್ಯವಾಗದಿದ್ದರೆ ಅಕ್ಕಿ ಹೊರತು ಇನ್ನುಳಿದ ಧಾನ್ಯಗಳನ್ನ ಬಳಸಿ ಲಘು ಉಪಹಾರವನ್ನ ದಿನದ ಮಧ್ಯದಲ್ಲೊಮ್ಮೆ ಮಾಡಿಕೊಂಡು ಹೊಟ್ಟೆಯನ್ನ ತಣಿಸಿಕೊಳ್ಳಬಹುದಾಗಿತ್ತು. ಅಮ್ಮ ನ್ಯಾಯಬೆಲೆ ಅಂಗಡಿಯಿಂದ ತಂದ ಗೋಧಿಯ ಹಿಟ್ಟಿನಲ್ಲಿ ಅಂದು ತಮಗಾಗಿ ಮಾತ್ರ ಚಪಾತಿ ಮಾಡಿಕೊಳ್ಳುವುದಿತ್ತು ಅದಕ್ಕೆ ನಂಚಿಕೊಳ್ಳಲಿಕ್ಕೆ ಪಚ್ಚ ಬಾಳೆ ಹಣ್ಣಿನ ರಸಾಯನ. ರಾತ್ರಿ ಎಲ್ಲರೂ ಮಧ್ಯಾಹ್ನದ ಸಾರನ್ನೆ ಕಲಸಿ ಉಂಡರೂ. ಅಮ್ಮ ವೃತದ ಕಾರಣ ಬೇರೆ ಅಡುಗೆ ಮಾಡಿಕೊಂಡು ಚಂದ್ರೋದಯದ ನಂತರ ಬೇರೆ ಊಟ ಮಾಡುತ್ತಿದ್ದರು. ಸಾಮಾನ್ಯವಾಗಿ ಹೀರೆಕಾಯಿ ಸಾರು ಹಾಗು ಅದರ ಸಿಪ್ಪೆಯ ಚಟ್ನಿ ಅವರ ಊಟದಲ್ಲಿ ಇದ್ದೆ ಇರುತ್ತಿತ್ತು. ಅದೆರಡರ ರುಚಿಗೆ ಮಾರು ಹೋಗಿದ್ದ ನಾನೂ ಬುದ್ದಿ ತಿಳಿದಲ್ಲಿಂದ ಈ ಮಹತ್ವದ ಕಾರಣಗಳಿಗಾಗಿ ಅಮ್ಮನೊಂದಿಗೆ ಉಪವಾಸ ಮಾಡುವ ಕಳ್ಳ ಮಾರ್ಜಾಲವಾದೆ! ವೃತದ ದಿನಗಳಲ್ಲಿ ಸಂಜೆ ಹಣ್ಣುಕಾಯಿ ಮಾಡಿಸಲಿಕ್ಕೆ ಗಣಪತಿಕಟ್ಟೆಗೂ ಹೋಗುವ ಪರಿಪಾಠವಿದ್ದು ಅಲ್ಲಿ ತಂತ್ರಿಗಳು ನೈವೇದ್ಯಕ್ಕಾಗಿಯೇ ಮನೆಯಿಂದ ಮಾಡಿ ತಂದಿರುತ್ತಿದ್ದ ಕಡಲೆ ಉಸುಲಿ, ಸಿಹಿ ಸಜ್ಜಿಗೆ, ಕೋಸಂಬರಿ ಈ ವೃತ ಪ್ರೀತಿಯನ್ನ ನನ್ನಲ್ಲಿ ಇನ್ನಷ್ಟು ಉದ್ದೀಪಿಸುತ್ತಲೂ ಇದ್ದವು. ಯಾವಾಗ ಪೂಜೆ ಮುಗಿಯಲಿಲ್ಲ ಬಾಳೆಎಲೆಯ ಕೀತಿನಲ್ಲಿ ತಂತ್ರಿಗಳ ಮಗ ಲಕ್ಷ್ಮೀಶ ಈ ರುಚಿಯಾದ ಪ್ರಸಾದ ವಿತರಿಸಲಿಲ್ಲ ಎಂದೆ ಮನ ನಿರೀಕ್ಷಿಸುತ್ತಿತ್ತು. ಪೂಜೆ ಸಾಂಗವಾಗಿ ಸಾಗುತ್ತಿರುವಾಗ ಕ್ಷಣವೊಂದು ಯುಗವಾದಂತೆ ಭಾಸವಾಗಿ ಈ ದೀರ್ಘ ಪೂಜಾ ಪದ್ಧತಿಯನ್ನ ನಾನು ಮನಸಾರೆ ದ್ವೇಷಿಸುತ್ತಿದ್ದೆ. ನಮ್ಮಂತಹ ಭಕ್ತಗ್ರೇಸರರ ಗೊಣಗಾಟ ಅದೇನೆ ಇದ್ದರೂ ಅದಕ್ಕೆ ಸೊಪ್ಪು ಹಾಕದ ತಂತ್ರಿಗಳು ಸಾವಕಾಶವಾಗಿ ಪ್ರತಿಯೊಂದು ಮಂತ್ರವನ್ನೂ ಗಟ್ಟಿಯಾಗಿ ಬಿಡಿಸಿ ಬಿಡಿಸಿ ಉಚ್ಚರಿಸುತ್ತಾ ಮಧ್ಯೆ ಮಧ್ಯೆ ವಾಡಿಕೆಯಂತೆ ತಮ್ಮ ಮಗನ ಮೇಲೆ ದೊಡ್ಡ ದ್ವನಿಯಲ್ಲಿ ರೇಗುತ್ತಾ, ಸಣ್ಣ ಪುಟ್ಟ ತಪ್ಪುಗಳಿಗೂ ಜಾಗಟೆ ಹೊಡೆಯುವ-ಗಂಟೆ ಬಾರಿಸುವ ಹುಡುಗರಿಗೆ ಮಾತಿನಲ್ಲೆ ಬಾರಿಸುತ್ತಾ ಈ ದೀರ್ಘಾವಧಿಯನ್ನು ಇನ್ನಷ್ಟು ವಿಸ್ತರಿಸಿ ನನ್ನ ಚಡಪಡಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದರು.

ಮನೆಯಲ್ಲಿ ಹಬ್ಬದ ಊಟಕ್ಕೆ ಅಮ್ಮ ಮಾಡುತ್ತಿದ್ದ ಸುವರ್ಣಗೆಡ್ಡೆಯ ಸಾರು, ಕೆಸುವಿನದಂಟಿನ ಪಲ್ಯ ಹಾಗೂ ಚಟ್ಟೆಸೊಪ್ಪಿನ ಪಲ್ಯವೆಂದರೆ ನನಗೆ ಬಾಯಲ್ಲಿ ನೀರೂರುತ್ತಿತ್ತು. ಆದರೆ ಅನಿವಾರ್ಯವಾಗಿ ಹಬ್ಬಗಳು ಬರುವ ತನಕ ಈ ತವಕಗಳನ್ನೆಲ್ಲ ಒತ್ತಾಯಪೂರ್ವಕವಾಗಿ ಹಿಡಿದಿಡಲೇ ಬೇಕಿತ್ತಲ್ಲ! ಅದು ಯಾವಾಗಲೂ ಹಾಗೆಯೆ. ಉಳಿದೆಲ್ಲ ದಿನಗಳಲ್ಲಿ ಅನ್ನಕ್ಕೊಂದು ಬಗೆಯ ಸಾರು, ಸಾಮಾನ್ಯವಾಗಿ ಬೇಳೆ ಸಾರು ಅಥವಾ ಟೊಮ್ಯಾಟೋ ಸಾರು. ಅಪರೂಪಕ್ಕೊಮ್ಮೊಮ್ಮೆ ಪಲ್ಯವನ್ನೂ ಕಾಣುತ್ತಿದ್ದ ನಮಗೆ ದೊಡ್ಡ ವೈಭೋಗವೆಂದರೆ ಚಟ್ಟೆಸೊಪ್ಪಿನ ಅಥವಾ ಹುರುಳಿಯ ಚಟ್ನಿ ಮಾತ್ರ. ಆಷಾಢದ ಆರಂಭದಲ್ಲಿ ಪತ್ರೊಡೆ, ಕೊಟ್ಟೆ ಕಡುಬು ಮಾಡುವುದಿತ್ತು. ಮಳೆಗಾಲದಲ್ಲಿಯಂತೂ ಮನೆಯಲ್ಲಿ ಸೌತೆಯ ಸಾರಿಲ್ಲದ ದಿನಗಳಿರುತ್ತಿರಲಿಲ್ಲ.

ಆಗೆಲ್ಲ ಅಪರೂಪಕ್ಕೊಮ್ಮೆ ಹಳ್ಳಿಯ ನೆಂಟರಿಂದ ಒದಗಿ ಬರುತ್ತಿದ್ದ ಕಳಲೆ (ಎಳೆ ಬಿದಿರು ), ಬಾಳೆದಿಂಡು, ದೀಗುಜ್ಜೆ ಹಾಗೂ ಕೆಸುವಿನ ದಂಟು-ಗೆಡ್ಡೆ-ಎಲೆ ಈ ಏಕತಾನತೆಯನ್ನ ಕಳೆಯುತ್ತಿದ್ದವು. ಉಳಿದಂತೆ ಮನೆಯ ಹಿತ್ತಲಲ್ಲಿ ಅಮ್ಮನೆ ಬೆಳೆಸಿದ ಬಸಳೆ, ಬೊಂಬಾಯಿ ಬಸಳೆ, ತೊಂಡೆ, ಚಪ್ಪರದ ಬೀನ್ಸ್, ಹರವೆ, ಪಪ್ಪಾಯಿ ಕಾಯಿ ನಮ್ಮ ನಿತ್ಯದ ಅಗತ್ಯಗಳಿಗೆ ಒದಗಿ ಬರುತ್ತಿದ್ದವು. ತೀರ ಸ್ವಂತ ಬೆಳೆಯಲಿಕ್ಕಾಗದ ಈರುಳ್ಳಿ-ಟೊಮ್ಯಾಟೊಗಳನ್ನಷ್ಟೆ ಅಮ್ಮ ಸೋಮವಾರದ ಸಂತೆಯಲ್ಲಿ ಚೌಕಾಸಿ ಮಾಡಿ ಸಾಧ್ಯವಾದಷ್ಟು ಸಸ್ತಾ ಬೆಲೆಗೆ ಖರೀದಿಸುತ್ತಿದ್ದರು. ಆಗೆಲ್ಲ ಅಮ್ಮನ ಬಾಲವಾಗಿರುತ್ತಿದ್ದ ನನಗೆ ಈ ಚೌಕಾಸಿ ಮಾಡುವ ಗುಣ ಸಹಜವಾಗಿ ದಾಟಿಕೊಂಡಿದೆ. ಮನೆಯಲ್ಲಿಯೆ ಮೆಣಸಿನ ಸಸಿ ಹಾಕಿರುತ್ತಿದ್ದು ಅದನ್ನೆ ಅಡುಗೆಗೆ ಉಪಯೋಗಿಸಿ ಹೆಚ್ಚಿನದನ್ನು ಮಜ್ಜಿಗೆ ಮೆಣಸಾಗಿಸಿ ಒಣಗಿಸಿ ಇಟ್ಟುಕೊಳ್ಳುತ್ತಿದ್ದರು. ಅಜ್ಜನಿಗೆ ಊಟಕ್ಕೆ ಕರಿದ ಮಜ್ಜಿಗೆ ಮೆಣಸಿದ್ದರೆ ಖುಷಿಯೋ ಖುಷಿ. ಬೇಸಗೆಯಲ್ಲಿ ಅಮ್ಮ ಮಾಡಿಟ್ಟ ಹಪ್ಪಳ-ಸಂಡಿಗೆಗಳು, ಹಾಕಿಟ್ಟ ಮಾವಿನ ಮಿಡಿ-ದೊಡ್ಲಿ ಕಾಯಿ (ಹೇರಳೆ ಕಾಯಿ) ಉಪ್ಪಿನ ಕಾಯಿಗಳು ವರ್ಷದುದ್ದ ನಮ್ಮೆಲ್ಲರ ಊಟದ ರುಚಿ ಹೆಚ್ಚಿಸುತ್ತಿದ್ದವು.


ಹೀಗಾಗಿ ಸಿಹಿ ಊಟದ ಹಬ್ಬಗಳು ಸದಾ ತಮ್ಮ ಆಕರ್ಷಣೆಯನ್ನ ಉಳಿಸಿಕೊಂಡಿರುತ್ತಿದ್ದುದು ಸಹಜ. ಹಬ್ಬಗಳಲ್ಲಿ ಅಮ್ಮ ಸಾಮಾನ್ಯವಾಗಿ ಮಾಡುತ್ತಿದ್ದುದು ಸಾಬಕ್ಕಿ ಅಥವಾ ಕಡಲೆಬೇಳೆ ಪಾಯಸವನ್ನ. ನನಗೆ ಅನ್ನದೊಂದಿಗೆ ಪಾಯಸವನ್ನೇ ಬರಗೆಟ್ಟವನಂತೆ ಕಲಸಿಕೊಂಡು ಸೊರ ಸೊರ ನೆಕ್ಕುವ ವಿಲಕ್ಷಣ ಅಭ್ಯಾಸವಿತ್ತು. ಚಿಕ್ಕಂಮ್ಮಂದಿರು ಇದನ್ನ ನೋಡಿ ಹೇಸಿಕೊಳ್ಳುತ್ತಿದ್ದರೆ . ಅಮ್ಮ ಮಾತ್ರ ಪ್ರೀತಿಯಿಂದ ನನ್ನ ಎಲೆಗೆ ಒಂದು ಸೌಟು ಪಾಯಸ ಹೆಚ್ಚೆ ಬಡಿಸುತ್ತಿದ್ದರು. ಚೌತಿಗೆ ನಮ್ಮ ಮನೆಯಲ್ಲಿ ಗಣಪತಿ ಕೂರಿಸುವ ಸಂಪ್ರದಾಯವಿರಲಿಲ್ಲ. ಒಮ್ಮೆ ಕೂರಿಸಿಒದರೆ ಬಿಡದೆ ಇಪ್ಪತ್ತೊಂದು ವರ್ಷ ಕೂರಿಸಲೆಬೇಕಂತೆ!. ಜೊತೆಗೆ ಮಡಿ ಚೂರೂ ತಪ್ಪ ಬಾರದಂತೆ ಅನ್ನುವ ಕಾರಣದಿಂದ ಅಮ್ಮ ಮನೆಯಲ್ಲಿ ಗಣಪತಿ ಕೂರಿಸಲು ಒಪ್ಪುತ್ತಿರಲಿಲ್ಲ. ಗೌರಿ ಪೂಜೆಗೆ ಅವರ ಚೌತಿಯ ಸಂಭ್ರಮ ಮುಗಿದು ಹೋಗುತ್ತಿತ್ತು. ಮಧ್ಯಾಹ್ನದ ಸಿಹಿ ಊಟವೆ ಹಬ್ಬವನ್ನ ಆಚರಿಸಿದ್ದಕ್ಕೊಂದು ಗುರುತು.

ನಿತ್ಯ ಸಂಜೆ ಮಣ್ಣಲ್ಲಿ ಆಡಿ ಸೊಕ್ಕಿ ಬರುತ್ತಿದ್ದ ನನ್ನನ್ನ ನನ್ನ ಒಡ್ದ ಇಚ್ಛೆಗೆ ವಿರುದ್ಧವಾಗಿ ನೀರಿನ ಹಿತ್ತಲಿನ ನೀರು ಟ್ಯಾಂಕಿಯ ಬಳಿ ಉಜ್ಜಿಉಜ್ಜಿ ಕೈ ಕಾಲು ಮುಖ ತೊಳೆಯುವಂತೆ ಅಮ್ಮ ಒತ್ತಾಯಿಸುತ್ತಿದ್ದರು. ಅದಾದ ಮೇಲೆ ಚಿಕ್ಕಮ್ಮಂದಿರ ಜೊತೆ ಒಂದರ್ಧ ಗಂಟೆ ತಾಳ ಕುಟ್ಟಿಕೊಂಡು ಭಜನೆಗಳನ್ನ ಕಿರುಚುತ್ತಿದ್ದೆ. "ಮೊದಲೊಂದಿಪೆ ನಿನಗೆ ಗಣನಾಥ"ನಿಂದ ಆರಂಭಿಸಿ ಆಯಾದಿನಕ್ಕೆ ತಕ್ಕಂತೆ ಅನ್ವಯಿಸುವ ದೇವರನ್ನೆಲ್ಲ ಪ್ರತಿ ಸಂಜೆ ನಮ್ಮ ಮೂಗು ರಾಗದ ಅಬ್ಬರದೊಂದಿಗೆ ಇಳಿಸಂಜೆಯ ನಸುಗತ್ತಲಲ್ಲಿ ಬೆದರಿಸಿ ಬೆಚ್ಚಿಬೀಳಿಸುತ್ತಿದ್ದೆವು.. ಅದಾದ ನಂತರ ಮಂಗಳದ ಕೊನೆಯ ಸಾಲು ಹಾಡಿದ್ದೆ ತಡ ಮೂರು ಸುತ್ತು ನಿಂತಲ್ಲೆ ತಿರುಗಿ ದೇವರ ಮನೆಯೊಳಗೆ ಜೀವಾವಧಿ ಶಿಕ್ಷೆಗೊಳಪಟ್ಟು ಸಜಾ ಬಂಧಿಗಲಾಗಿದ್ದ ಸಮಸ್ತ ದೈವಗಳಿಗೂ ಒಂದು ಉದ್ದಂಡ ನಮಸ್ಕಾರ ಹೊಡೆದು ಎದುರು ಮನೆ "ಬಪಮ" ಕೊಡುವ ಗಣಪತಿ ಕಡ್ಲೆಗಾಗಿ ಅವರ ಮನೆಗೆ ನಿಟ್ಟೋಟ ಹೂಡುತ್ತಿದ್ದೆ. ಅಲ್ಲಿಗೆ ನಾನು ತಲುಪುವ ಸಮಯ ದೀರ್ಘವಾದಷ್ಟೂ "ಗಣಪತಿ ಕಡಲೆ"ಯ ಆಕ್ಷಾಂಶಿ ಪ್ರತಿಸ್ಪರ್ಧಿಗಳು ಹೆಚ್ಚಾಗುವ ಸಂಭವ ಸದಾ ಇರುತ್ತಿದ್ದರಿಂದ ಆ ಅಪಾಯದಿಂದ ಪಾರಾಗಲು ಹೀಗೆ ಓಡಿ ಶೀಘ್ರ ಗಮ್ಯ ತಲುಪಿಕೊಳ್ಳುವುದು ಅನಿವಾರ್ಯವೇ ಆಗಿತ್ತು. ಹೀಗೆ ಗಣಪತಿ ನಿತ್ಯದ ಬದುಕಿನಲ್ಲಿ ಹಾಸು ಹೊಕ್ಕಾಗಿದ್ದ.

ಇನ್ನು ಗಣಪತಿ ಹಬ್ಬದ ಸಂಜೆ ಈ ಕಾರ್ಯಕ್ರಮಗಳ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಆಗುತ್ತಿತ್ತು. ಊರಲ್ಲಿ ಕೂರಿಸಿರುತ್ತಿದ್ದ ಗಣಪತಿಗಳಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ನೋಡಿಕೊಂಡು ಅದೆಷ್ಟು ಲಭ್ಯವೋ ಅಷ್ಟು ಪ್ರಸಾದವನ್ನ ಮುಕ್ಕಲು ಹೊರಟ ನನ್ನದೆ ವಯಸ್ಸಿನ ಪಟಾಲಮ್ಮಿನಲ್ಲಿ ನಾನೂ ಮನಪೂರ್ವಕವಾಗಿ ಸೇರಿಕೊಳ್ಳುತ್ತಿದ್ದೆ. ಜಿಟಿಜಿಟಿ ಹನಿಯುವ ಮಳೆಯಲ್ಲಿಯೆ ನಮ್ಮ ಈ ದಿಗ್ವಿಜಯ ಯಾತ್ರೆ ನಿರಾತಂಕವಾಗಿ ಸಾಗುತ್ತಿತ್ತು. ತೀರ್ಥಹಳ್ಳಿಯಲ್ಲಿ ಬಸ್'ಸ್ಟಾಂಡ್ ರಿಕ್ಷಾ ಚಾಲಕರ ಸಂಘ ಕೆಳ ಸ್ಟ್ಯಾಂಡಿನಲ್ಲಿ, ಕುರುವಳ್ಳಿಯ ಯುವಕ ಸಂಘ ಕುರುವಳ್ಳಿಯ ತುಂಗಾ ತೀರದಲ್ಲಿ, ಕೆಇಬಿ ನೌಕರರ ಸಂಘ ತಮ್ಮ ಕಚೇರಿಯ ಆವರಣದಲ್ಲಿ, ರಥಬೀದಿ ಯುವಕರ ಸಂಘ ರಾಮೇಶ್ವರ ದೇವಸ್ಥಾನದ ತೇರು ಕೊಟ್ಟಿಗೆ ಎದುರಲ್ಲಿ, ಛತ್ರಕೇರಿಯ ಯುವಕರ ಸಂಘ ರಾಮದೇವರ ಗುಡಿ ರಸ್ತೆಯಲ್ಲಿ ಸಾರ್ವಜನಿಕ ಗಣಪತಿಯಿಡುವುದು ವಾಡಿಕೆಯಾಗಿತ್ತು. ಮಧ್ಯೆ ತೀರ್ಥಹಳ್ಳಿಯಲ್ಲಿ ಮಿತ್ರಾ ಹೆರಾಜೆಯವರು ಸರ್ಕಲ್ ಇನ್ಸ್'ಪೆಕ್ಟರ್ ಆಗಿದ್ದಾಗ ಸಾಮರಸ್ಯದ ಏಕೈಕ ಸಾರ್ವಜನಿಕ ಗಣಪತಿ ಇಡುವಂತೆ ಈ ಎಲ್ಲಾ ಸಂಘದವರನ್ನು ಪುಸಲಾಯಿಸಿ ಕೆಳ ಕಾಲ ಒಂದೇ ಗಣಪತಿಯನ್ನ ಸಂಸ್ಕೃತಿ ಮಂದಿರದ ಆವರಣದಲ್ಲಿ ಇಡಿಸಿದ್ದೂ ಉಂಟು. ಆದರೆ ಅವೆಲ್ಲ ಹೆಚ್ಚು ಕಾಲ ಬಾಳಿಕೆ ಬರದೆ ಜನ ಅತ್ತ ಅವರ ವರ್ಗಾವಣೆಯಾಗುತ್ತಿದ್ದಂತೆ ಮತ್ತೆ ಹಳೆಯ ಚಾಳಿಗೆ ಹೊರಳಿಕೊಂಡರು.


ನಮ್ಮ ಪಟಾಲಂ ಈ ಎಲ್ಲಾ ಸಾರ್ವಜನಿಕ ಗಣಪತಿ ಪೆಂಡಾಲುಗಳಿಗೂ ದಾಳಿಯಿಟ್ಟು ಕೊಟ್ಟ ಕೊನೆಗೆ ಗಣಪತಿಕಟ್ಟೆಯ ತಂತ್ರಿಗಳ ಹಬ್ಬದ ಸ್ಪೆಷಲ್ ಪ್ರಸಾದ ಪಡೆದೆ ಮನೆಯ ಹಾದಿ ಹಿಡಿಯುತ್ತಿತ್ತು. ಹಬ್ಬದ ಪ್ರಸಾದ ಹಂಚುವಲ್ಲಿ ಲಕ್ಷ್ಮೀಶ ಅನಗತ್ಯ ಜುಗ್ಗತನ ಮೆರೆಯುತ್ತಿದ್ದ. ಶಾಲೆಯಲ್ಲಿ ನಮಗಿಂತ ಎರಡು ವರ್ಷ ಹಿರಿಯನಾಗಿದ್ದ ಆತ ಅಲ್ಲಿ ಎಷ್ಟೇ ಮಂಗಾಟ ಆಡುತ್ತಿದ್ದರೂ ದೇವಸ್ಥಾನದಲ್ಲಿ ಮಾತ್ರ ಹುಸಿ ಗಾಂಭೀರ್ಯ ಮೆರೆಯುತ್ತಿದ್ದ!. ಅವನ ಪ್ರಕಾರ ನಮ್ಮಂತ ಚಿಕ್ಕವರಿಗೆ ಅಷ್ಟು ಪ್ರಸಾದ ಧಾರಾಳ ಸಾಕು(?). ದೊಡ್ಡವರಿಗೆ ಕೈ ಬಿಚ್ಚಿ ಪ್ರಸಾದ ನೀಡುವ ಆತ ನಮ್ಮಂತ ಚಡ್ಡಿ ಪೈಲ್ವಾನರ ಎಳೆ ಕೀತಿನ ಸರದಿ ಬಂದಾಗ ಯಾಂತ್ರಿಕವಾಗಿ ಕೈ ಗಿಡ್ಡ ಮಾಡುತ್ತಿದ್ದ! ಈ "ತಾರತಮ್ಯ" ನೀತಿಯನ್ನ ಕೆಂಗಣ್ಣಿನಿಂದಲೇ ನೋಡುತ್ತಾ ನಮ್ಮ ಸಿಟ್ಟನ್ನೆಲ್ಲಾ ಒಳಗೊಳಗೇ ಕಷ್ಟಪಟ್ಟು ನುಂಗಿಕೊಳ್ಳುತ್ತಿದ್ದೆವು. ಇಲ್ಲದ ಪಕ್ಷದಲ್ಲಿ ಸಿಗುತ್ತಿದ್ದ ಅರೆಕಾಸಿನ ಪ್ರಸಾದದ ಪ್ರಮಾಣದಲ್ಲಿಯೂ ಖೋತವಾಗುವ ಅಪಾಯವಿರುತ್ತಿತ್ತು. "ಇದು ಪ್ರಸಾದ, ಊಟ ಅಲ್ಲ?!" ಅಂತ ಹೆಚ್ಚಿನ ಅನುದಾನಕ್ಕಾಗಿ ಬೇಡಿಕೆಯಿಡುತ್ತಿದ್ದ ಕಿರಿಯರಿಗೆ ಲಕ್ಷ್ಮೀಶ ಮುಲಾಜಿಲ್ಲದೆ ಹೇಳುತ್ತಿದ್ದುದು ಆಗೆಲ್ಲ ಸಾಮಾನ್ಯವಾಗಿರುತ್ತಿತ್ತು!. ಆ ಕ್ಷಣ ಅವನು ನಮ್ಮ ಕಣ್ಣಿಗೆ ಶತ್ರು ದಂಡಿನ ಸೇನಾಪತಿಯಂತೆ ಗೋಚರಿಸುತ್ತಿದ್ದ. ಈಗ ತಂತ್ರಿಗಳು ಕಾಲವಾದ ನಂತರ ಅವನೇ ಗಣಪತಿಯ ಮುಖ್ಯ ಅರ್ಚಕನಾಗಿದಾನಂತೆ. ಪ್ರಸಾದ ಸೇವೆಯೂ ಸಂಪ್ರದಾಯದಂತೆ ನಡೆದು ಬರುತ್ತಿದೆ ಅನ್ನುವ ಮಾಹಿತಿ ಬಂದಿದೆ. ಊರಿಗೆ ಹೋದಾಗ ಒಂದು ಕೈ ನೋಡಬೇಕು. ಈಗ ಹೇಗೂ ನಾನು ದೊಡ್ಡವನಾಗಿದೀನಲ್ಲ! ಜಾಸ್ತಿ ಪ್ರಸಾದ ತಿನ್ನೋಕೆ ಅರ್ಹತೆ ಬಂದಿದ್ದರೂ ಬಂದಿರಬಹುದು?!


ಈಗಲೂ ಅಷ್ಟೆ ನನಗೆ ಗಣಪತಿ ಎಂದರೆ ಒಂದು ಮುಷ್ಠಿ ಹೆಚ್ಚಿಗೆಯೇ ಪ್ರೀತಿ. ಇಂದು ನನಗೆ "ದೇವರು" ಎಂಬ ಕಲ್ಪನೆಯಲ್ಲಿ ಅರೆ ಕಾಸಿನ ನಂಬಿಕೆಯೂ ಇಲ್ಲ. ನಾನು ದೇವಸ್ಥಾನಗಳ ಹೊಸ್ತಿಲು ತುಳಿಯದೇನೆ ಅದೆಷ್ಟೋ ವರ್ಷಗಳಾದವು. ಆದರೂ ನನ್ನ ಮನೆಯಲ್ಲಿ ಹಬ್ಬವುಂಟು! ನಾನೂ ಪೇಟೆಯಿಂದ ವರ್ಷವೂ ಚಂದ ಕಂಡ ಗಣಪತಿ ಮೂರ್ತಿಯನ್ನ ಕೊಂಡು ತರುತ್ತೇನೆ. ಆದರೆ ಹಬ್ಬದ ನಂತರ ವಿಸರ್ಜಿಸದೆ ಶೋಕೇಸಿನಲ್ಲಿ ಗಣಪನನ್ನ ಕೂಡಿ ಹಾಕುತ್ತೇನೆ! ಹಬ್ಬದ ಸವಿ ಈಗ ಮೊದಲಿನಷ್ಟಿಲ್ಲ ನಿಜ. ಅದೆಲ್ಲ ಅಮ್ಮನ ಅಡುಗೆ, ಬಪಮನ ಗಣಪತಿ ಕಡ್ಲೆ, ತಂತ್ರಿಗಳ ಪ್ರಸಾದ ಹಾಗೂ ಲಕ್ಷ್ಮೀಶನ ಜುಗ್ಗತನದಲ್ಲಿಯೇ ಪಾಸ್ ಆಗಿ ಉಳಿದು ಹೋಗಿವೆ.

No comments:

Post a Comment