ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Tuesday, September 25, 2012

ಈ ನೆಲದ ಇಸ್ಲಾಂ ಕುರಿತ ನನ್ನ ಅಪೇಕ್ಷೆಗಳು....

ಮುಸಲ್ಮಾನ್ ಆಳು ದೊರೆಗಳಿಂದ ಭಾರತೀಯ ಉಪಖಂಡದ ನಿಯಂತ್ರಣ ನೇರವಾಗಿ ಬ್ರಿಟಿಶ್ ರಾಣಿಯ ಕೈ ಸೇರಿ ಅನಂತರ ಭಾರತೀಯರ ಸ್ವಂತ ಸರಕಾರಕ್ಕೆ ಅಧಿಕಾರ ಹಸ್ತಾಂತರ ವಾಗುವ ಹೊತ್ತಿಗಾಗಲೇ ಉನ್ನತ ಆಡಳಿತ ವಲಯದಲ್ಲೀ "ಇಸ್ಲಾಂ ಲಾಬಿ" ದುರ್ಬಲಗೊಂಡು ಪೇಲವವಾಗಿತ್ತು. ಆಳುವ ವರ್ಗವಾಗಿದ್ದ ತಾವು ಸ್ವತಂತ್ರ ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಪಾಲಿಗೆ ಕಾಲ ಕಸವಾಗುತ್ತೇವೆ ಎನ್ನುವ ಪೂರ್ವಾಗ್ರಹವನ್ನ ಮುಸ್ಲಿಂ ಸಮುದಾಯದಲ್ಲಿ ಅದರ ಧರ್ಮಾಂದ ಮೌಲ್ವಿಗಳು ಬೆಳೆಸಿದ್ದರು. ಇದರ ಅಸಲಿಯತ್ತನ್ನ ನನ್ನ ಮುಸಲ್ಮಾನ ಸ್ನೇಹಿತರು ಬಲವಾಗಿ ಅಲ್ಲಗೆ;ಲೆಯುತ್ತರಾದರೂ ನಾನವರಿಗೆ ಅದನ್ನ ಸಶಕ್ತ ಉದಾಹಾರನೆಯೊಂದಿಗೆ ಮನದಟ್ಟು ಮಾಡಿಸಲು ಯತ್ನಿಸಬಲ್ಲೆ. ಮಲಬಾರಿನಾದ್ಯಂತ 1920 ರಲ್ಲಿ ನಡೆದ "ಮಾಪಿಳ್ಳಾ ದಂಗೆ"ಗೆ, ಅದರ ಬರ್ಬರತೆಗೆ- ಆಗ ನಡೆದ ಒತಾಯದ ಸಾಮೂಹಿಕ ಮತಾಂತರಗಳಿಗೆ ಇದೆ ಸುಶುಪ್ತ ವ್ಯಗ್ರತೆಯೇ ನೇರ ಕಾರಣ. ಈ ಒಂದು ಪ್ರಕರಣ ಮುಂದೆ ಮಾಡಿದ ಅನಾಹುತ ಅಪಾರ. ಬ್ರಿಟಿಷರಿಗೂ ಅದೇ ಬೇಕಿತ್ತು! ಸ್ವತಂತ್ರ ಭಾರತವನ್ನ ಪರೋಕ್ಷವಾಗಿ ನಿಯಂತ್ರಿಸಲು ಹಾಗೂ ಸೋವಿಯತ್ ಸಾಮ್ರಾಜ್ಯಶಾಹಿಯನ್ನ ಏಷ್ಯಾದಲ್ಲಿ ವಿಸ್ತರಿಸದಂತೆ ತಡೆಯಲು ಅದಕ್ಕೊಂದು "ಮೆತ್ತೆ ರಾಷ್ಟ್ರ" (ಬಫರ್ ಸ್ಟೇಟ್ ) ಡ ಅಗತ್ಯವಿತ್ತು. ಈ ತೆರೆ ಮರೆಯ ಕಾರಣಕ್ಕೆ ನಮ್ಮ ದೇಶದ ಮುಸ್ಲಿಂ ಸಮುದಾಯದ ಒಡಕು ತುಪ್ಪ ಎರೆಯಿತು. ದೇಶ ಇಬ್ಭಾಗವಾಯಿತು. ಮೊಘಲ್ ಸಾಮ್ರಾಜ್ಯ ಅಳಿದ ನಂತರವೂ ದೇಶದಾದ್ಯಂತ ಕಿರು ಮುಸ್ಲಿಂ ಪಾಳೆಪಟ್ಟುಗಳು ಉಳಿದು ಹೋಗಿದ್ದವಲ್ಲ. ಹೀಗೆ ಉಳಿದಿದ್ದ ಶಾಹಿ ಮನೆತನಗಳ ದಖನ್ ಹುಕೂಮತ್ತು, ಆರ್ಕಾಟಿನ ನವಾಬಗಿರಿ, ಢಾಕಾ ನವಾಬಗಿರಿ, ಜುನಾಘಡದ ನವಾಬಗಿರಿ, ಅವಧದ ನವಾಬಗಿರಿ, ಹಿಸ್ಸಾರಿನ ನವಾಬಗಿರಿ, ಭೂಪಾಲದ ನವಾಬಗಿರಿ ಹೀಗೆ ಅಲ್ಲಲ್ಲಿ ಮುಸ್ಲಿಂ ಪಾಳೆಪಟ್ಟು ಸಕ್ರಿಯವಾಗಿತ್ತು. ಅದಾಗಲಷ್ಟೆ ಯುರೋಪಿಯನ್ನರ ಕಿರುಕುಳದ ವಿರುದ್ಧ ಸೆಟೆದು ನಿಲ್ಲಲು ಆರಂಭಿಸಿದ್ದ,ಭಾರತೀಯ ಯುವಮನಸ್ಸುಗಳಲ್ಲಿ ಧರ್ಮಾತೀತವಾಗಿ ಮೂಡಿದ್ದ ರಾಷ್ಟ್ರೀಯತೆಯ ಸ್ಪಷ್ಟ ಮನೋಭಾವ ತಾತ್ಕಾಲಿಕ ಐಕ್ಯತೆಯ ಆಶಾಭಾವ ಮೂಡಿಸಿದ್ದು ಹೌದಾದರೂ. ಒಡೆದು ಆಳುವುದರಲ್ಲಿ ನಿಸ್ಸೀಮರಾದ ಬ್ರಿಟೀಷರು ಇತ್ತಂಡಗಳಲ್ಲಿ ಸುಶುಪ್ತವಾಗಿದ್ದ ಧಾರ್ಮಿಕ ಅಸಹನೆಯನ್ನ ಪ್ರಚೋದಿಸಿದ ಪರಿಣಾಮ ಭಾರತದಲ್ಲಿ ಕೋಮು ಸಮರಗಳ ಸರಣಿಯೆ ನಡೆದುಹೋದವು- ದುರಾದೃಷ್ಟವಶಾತ್ ಇಂದೂ ಎಗ್ಗುಸಿಗ್ಗಿಲ್ಲದೆ ಅದು ನಡೆಯುತ್ತಲೆ ಇವೆ. ಇದರ ದೊಡ್ಡ ಆಘಾತವೆಂದರೆ ಧರ್ಮದ ಹೆಸರಿನಲ್ಲಿ ಆದ ದೇಶದ ವಿಭಜನೆ. ಅದರ ಪಾಶ್ಚಾತ್ ಪರಿಣಾಮಗಳು ಇಂದೂ ಸಹ ದೇಶದ ನೆಮ್ಮದಿಯನ್ನ ಆಗಾಗ ಕದಡುತ್ತಲೆ ಇವೆ. ಭಾರತೀಯ ಮುಸ್ಲೀಮರಲ್ಲಿ ಶೇಕಡಾ ಐದು ಭಾಗ ಅರಬ್ಬಿ ಬುಡಕಟ್ಟು ಮೂಲದ ಶುದ್ಧರಕ್ತದವರಾಗಿದ್ದರೆ ಉಳಿದವರೆಲ್ಲರೂ ಕಾರಣಾಂತರದಿಂದ ಮತಾಂತರವಾದ ಸನಾತನಧರ್ಮ ಮೂಲದವರೆ ಅನ್ನುವುದು ಸ್ಪಷ್ಟ. ಇದು ಆಯ್ಕೆಯ ಅವರೆಲ್ಲರ ಮತಾಂತರವಾಗಿತ್ತು ಎನ್ನುವ ಇಂದಿನ ಸೋ-ಕಾಲ್ಡ್ ಬುದ್ಧಿಜೀವಿಗಳ ಬುಡಭದ್ರವಿಲ್ಲದ ವಾದಸರಣಿ ಹಾಸ್ಯಾಸ್ಪದ. ಸಮಾಜದ ಮೇಲುವರ್ಗಗಳಲ್ಲಿ ಅಧಿಕಾರದ ಆಸೆಗಾಗಿ ವಿರಳವಾಗಿ ಇದಾಗಿರಬಹುದೇನೋ, ಆದರೆ ಕೆಳವರ್ಗದ ಮಂದಿಗೆ ಅಂತಹ ಯಾವುದೆ ಆಕರ್ಷಣೆಗಳಿರಲಿಲ್ಲ. ಅಲ್ಲದೆ ಶ್ರೇಣೀಕೃತ ವ್ಯವಸ್ಥೆಗೆ ಇತ್ತೀಚಿನವರೆಗೂ ಇದ್ದ ಸಾಮಾಜಿಕ ಸಮ್ಮತಿಯ ಹಿನ್ನೆಲೆಯಲ್ಲಿ ; ಹಿಂದೂ ಜಾತಿಭೇದ ಈ ಪರಿ ಮತಾಂತರಕ್ಕೆ ಪ್ರೋತ್ಸಾಹಿಸಿತು ಅನ್ನುವುದೂ ಕೂಡ ದುರ್ಬಲ ಪೊಳ್ಳುವಾದವೆ ಸರಿ. ಒಮ್ಮೆ ಧರ್ಮಭ್ರಷ್ಟನಾದರೆ ಸಾಕು ಅವನನ್ನ ಹೀನಾಯವಾಗಿ ಕಾಣುವ ಹಾಗೂ ಮರಳಿ ಮಾತೃಧರ್ಮಕ್ಕೆ ಪ್ರವೇಶ ನಿರಾಕರಿಸುವ ಹಿಂದೂ ಸನಾತನ ಧರ್ಮದ ವಿಲಕ್ಷಣತೆಯೆ ಅದರ ಅನೇಕ ಅನುಯಾಯಿಗಳನ್ನ ಕಾಲಕ್ರಮದಲ್ಲಿ ಇಸ್ಲಾಂ ಹಾಗೂ ಕ್ರೈಸ್ತ ಮತಗಳಿಗೆ ಶರತ್ತಿಲ್ಲದೆ ಧಾರೆ ಎರೆದು ಕೊಟ್ಟಿದೆ! ಗೋವೆಯ ಪೋರ್ಚಗೀಸ್ ಪ್ರೇರಿತ ಮತಾಂತರಗಳು ಹಾಗೂ ಮೇಲೆ ಹೇಳಿದ ಮಲಬಾರ್ ದಂಗೆಯ ಸಮಯದಲ್ಲಾದ ಒತ್ತಾಯದ ಮತಾಂತರಗಳು ಇದಕ್ಕೆ ಉತ್ತಮ ಉದಾಹಾರಣೆ. ತನ್ನ ಇಚ್ಚೆಯ ವಿರುದ್ಧವಾಗಿದ್ದರೂ ಸಹ ಒಮ್ಮೆ ಮತಭ್ರಷ್ಟನಾಗಿ ಅದರ ಮರುಕ್ಷಣ ತನ್ನದೇ ಕುಲ ಬಾಂಧವರಿಂದ ಹೀನಾಯವಾಗಿ ನಡೆಸಲ್ಪಟ್ಟ ನವ ಮತಾನ್ತರಿಯ ಮನಸು ಸಹಜವಾಗಿ ಕುದಿಯುತ್ತದೆ. ತನ್ನದಲ್ಲದ ತಪ್ಪಿಗೆ ಹುಟ್ಟುವ ಅಸಹಾಯಕತೆಗೆ ಆತ ತನ್ನ ಪೂರ್ವಧರ್ಮವನ್ನ ದ್ವೇಷಿಸುತ್ತಾನೆ ಜೊತೆಗೆ ನವ ಧರ್ಮವನ್ನ ಅಗತ್ಯಕ್ಕಿಂತ ಹೆಚ್ಚು ಕರ್ಮಠನಾಗಿ ಆಚರಿಸುತ್ತಾನೆ. ಭಾರತೀಯ ಮುಸ್ಲೀಮರ ಮೂಲಭೂತ ಸಮಸ್ಯೆಯೂ ಇದೆ ತಾನೆ? ಅಂದರೆ ಈ ನೆಲದ ಹಿಂದೂಯೇತರ ಧರ್ಮೀಯರ ಧಾರ್ಮಿಕ ಸಭ್ಯತೆ ಈ ಮತಾಂತರಗಳ ಮೂಲಕ ಬದಲಾಗಿದೆಯೆ ಹೊರತು ಅವರ ಭಾರತೀಯ ಸಂಸ್ಕೃತಿಯಲ್ಲ. ಅವರ ಧಾರ್ಮಿಕ ಶ್ರದ್ಧೆ ಅದೇನೆ ಇದ್ದರೂ, ಅವರೂ ಸನಾತನ ಧರ್ಮೀಯರಂತೆ ಇಲ್ಲಿನ ಎಲ್ಲಾ ಹಕ್ಕು- ಭಾದ್ಯತೆಗಳಿಗೆ ಕಟ್ಟು ಬದ್ಧರಾಗಿರಲೇಬೇಕು. ಅವರ ರಕ್ತದಲ್ಲಿ- ವಂಶವಾಹಿಗಳಲ್ಲಿ ಭಾರತೀಯತೆ ಸುಶುಪ್ತವಾಗಿ ಇರುವ ತನಕ ಬಾಹ್ಯ ಭೂಷಣ-ಆಹಾರಗಳಲ್ಲಿ ಇನ್ಯಾವುದೊ ದೇಶದವರನ್ನ ಅನುಕರಿಸುವುದು ಕೇವಲ ನಕಲಿ ಛದ್ಮವೇಷದಂತೆ ಕಾಣಿಸುತ್ತದೆ. ಭಾರತೀಯ ಮುಸ್ಲೀಮರು ಅದನ್ನು ಅರಿತುಕೊಂಡು ಪುಂಡ ಧರ್ಮಭೋದಕರ ಹಾಗೂ ಸ್ವಾರ್ಥಿ ರಾಜಕಾರಣಿಗಳ ಹುನ್ನಾರಕ್ಕೆ ಬಲಿಯಾಗಬಾರದು. ಅಲ್ಲದೆ ಈ ನಡುವೆ "ವಹಾಬಿ ಧರ್ಮಾಂಧತೆ"ಯ ಮಾರಿ ಭಾರತವನ್ನ ಆಂತರಿಕವಾಗಿ ಕೊರೆಯುತ್ತಿದೆ. ಶುದ್ಧ ಇಸ್ಲಾಂ(?) ಪ್ರತಿಪಾದಿಸುವ ಸೌದಿ ದೊರೆಗಳ "ತೈಲ ಧನ" ಪ್ರಾಯೋಜಿತ "ವಹಾಬಿ ಪಂಥ"ದ ಹಗಲು ಕಂಡ ಬಾವಿಗೆ ಭಾರತೀಯ ಮುಸ್ಲೀಮರು ಹಗಲೇ ಬೀಳುತ್ತಿರುವುದು ಮಾತ್ರ ದಿಗಿಲು ಹುಟ್ಟಿಸುವಂತಿದೆ. "ಭಾರತದಲ್ಲಿ ನಮಗೆ ಅಲ್ಲಾ ಬೇಕು ;ಆದರೆ ಮುಲ್ಲಾ ಅಲ್ಲ!". ಅರಬ್ ಜಗತ್ತಿನಲ್ಲಿಯೂ ಇಲ್ಲದ ಭಾರತೀಯ ಇಸ್ಲಾಮಿನ ಕೆಟ್ಟ ಉಪಲಬ್ಡಿ ಈ ಮುಲ್ಲಾಗಳು. ಮತ ಪಾಂಡಿತ್ಯದ ಸೋಗು ಹಾಕುತ್ತಾ ಮೂಲ ಇಸ್ಲಾಮಿನ ವ್ಯಾಖ್ಯೆಯನ್ನ ತಿರುಚಿ ವಾಸ್ತವ ಜಗತ್ತಿನಿಂದ ಧರ್ಮಾನುಯಾಯಿಗಳನ್ನ ವಂಚಿಸುವ ಈ ಧರ್ಮಾಂಧರ ದೆಸೆಯಿಂದ ತಲೆಮಾರುಗಳ ಹಿಂದೆ ಧರ್ಮಾಂತರವಾದ ಭಾರತೀಯ ಮುಸ್ಲಿಂ ಮನಸ್ಸುಗಳು ಇಬ್ಬಂದಿತನದಲ್ಲಿ ಸಿಲುಕಿ ಒದ್ದಾಡುವಂತಾಗುತ್ತಿದೆ. 'ದೀನ್ ಮೇ ಧಾಡಿ ಹೈ...ಪರ್ ಧಾಡಿ ಮೇ ದೀನ್ ನಹಿ!' ಎನ್ನುವುದು ಭಾರತೀಯ ಮುಸ್ಲಿಂ ಬಾಂಧವರಿಗೆ ಅರ್ಥವಾಗಬೇಕು. ಅಲ್ಲೊಬ್ಬ ಗೋಮುಖ ವ್ಯಾಘ್ರ ಕಸಾಯಿ ಎಸಿ ರೂಮಿನಲ್ಲಿ ಕುಳಿತು ಸದ್ಭಾವನೆಗಾಗಿ ಉಪಾವಾಸ ಮಾಡುವುದು ಈ ಸಮಾಜದ ಸ್ವಾಸ್ಥ್ಯಕ್ಕೆ ಎಷ್ಟು ಅಪಾಯಕಾರಿಯೊ, ಅಷ್ಟೆ ಅಪಾಯ ಕೇವಲ ಬಾಹ್ಯ ತೋರಿಕೆಯ ಧರ್ಮ ಭೋದಿಸುವ ಮುಲ್ಲಾಗಳಿಂದಲೂ ಕಟ್ಟಿಟ್ಟಿದೆ. ಅಷ್ಟಕ್ಕೂ ಮಹಮದ್ ಪೈಗಂಬರ್ ಭೋಧನೆಗಳು ಅರೇಬಿಯಾ ಮರಳುಗಾಡಿನ ಆಕಾಲದ ಖುರೈಶಿ ಬುಡಕಟ್ಟುಗಳ ಆಚರಣೆಗೆ ಅನುಸಾರವಾಗಿತ್ತು. ಅಲ್ಲಿನ ದೈನಂದಿನ ಕಟ್ಟು-ಕಟ್ಟಳೆಗಳು ಭಾರತದ ಮಟ್ಟಿಗೆ ಬಹುಪಾಲು ಅಪ್ರಸ್ತುತ. ಕೇವಲ ಗಡ್ಡ ಬಿಟ್ಟು, ಬಲೆಬಲೆ ಟೋಪಿ ಧರಿಸುವಂತೆ ಮಾಡಿ ಮುಸ್ಲಿಂ ಹುಡುಗರ ಪ್ರತ್ಯೇಕತೆಯನ್ನು ಮುಖ್ಯವಾಹಿನಿಯಿಂದ ಕಾಪಾಡಿಕೊಳ್ಳುವುದು, ಹಿಜಾಬ್ -ನಕಾಬ್ -ಬುರ್ಕಾ (ತಲೆವಸ್ತ್ರ- ಮುಖವಸ್ತ್ರ- ಮೈಮುಚ್ಚುವ ನಿಲುವಂಗಿ ) ಧರಿಸುವಂತೆ ಮುಸ್ಲಿಂ ಹೆಂಗಸರನ್ನ ಪೀಡಿಸುವುದು ಇಂತಹ ಬಹಿರಂಗ ಪ್ರದರ್ಶನಗಳು ಪರಸ್ಪರರಲ್ಲಿ ಅಪನಂಬಿಕೆಯನ್ನ ಹುಟ್ಟಿಸಿ ದೇಶದ ಸಾಮಾಜಿಕ ವ್ಯವಸ್ಥೆಗೆ ಮಾರಕವಾಗ ಬಲ್ಲದೆ ಹೊರತು ಎಂದಿಗೂ ಪೂರಕವಾಗಲಾರದು. ರೋಮಿನಲ್ಲಿ ರೋಮನ್ನರಂತಿರಬೇಕಲ್ಲವೆ? ಹಾಗಂತ ಮುಸ್ಲೀಮರಿಗೆ ಯಾವುದೆ ಧಾರ್ಮಿಕ ನಿರ್ಬಂಧಗಳು ಭಾರತದಲ್ಲಿಲ್ಲವಲ್ಲ? ಇನ್ಯಾವುದೆ ಶರಿಯತ್ ಬದ್ಧ ಮುಸ್ಲಿಂ ದೇಶಗಳಿಗಿಂತಲೂ ಇಲ್ಲಿನ ಆಡಳಿತ ಮುಸ್ಲೀಂ ಸಮುದಾಯದ ಪರವಾಗಿದೆ ಆನ್ನುವುದು ಸ್ಪಟಿಕದಷ್ಟು ಸುದ್ಧ ಸತ್ಯ. ಜಗತ್ತಿನ ಬಹುಸಂಖ್ಯಾತ ಮುಸ್ಲಿಂ ರಾಷ್ಟ್ರವಾಗಿರುವ ಇಂಡೋನೇಷಿಯ ಈ ಮಟ್ಟಿಗೆ ಜಗತ್ತಿಗೆ ಮಾದರಿಯಾಗಿದೆ. ಒಂದಾನೊಂದು ಕಾಲದಲ್ಲಿ ಸಂಪೂರ್ಣ ಹಿಂದೂಮಯವಾಗಿದ್ದ ಆ ದೇಶ ಇಂದು ಅದಕ್ಕೆ ತದ್ವಿರುದ್ಧವಾಗಿ ನೂರಕ್ಕೆ ನೂರು ಇಸ್ಲಾಮಿಕರಣಗೊಂಡಿದೆ. ಸುಮಾರು ಇಪ್ಪತ್ತ ಮೂರು ಕೋಟಿ ಮುಸ್ಲೀಮರಿರುವ ಅಲ್ಲಿನ ಜನ ತಮ್ಮ ಪೂರ್ವ ಸಂಸ್ಕೃತಿಯ ಬಗ್ಗೆ ಕುರುಡಾಗಿಲ್ಲ. ಇಂದಿಗೂ ತಮ್ಮ ಹೆಸರುಗಳಲ್ಲಿ- ನಾಗರೀಕ ಸೇವೆಗಳಲ್ಲಿ ನೆಲದ ಸಂಸ್ಕೃತಿಯ ಕುರುಹುಗಳನ್ನ ಉಳಿಸಿಕೊಂಡು ಬಂದಿದ್ದಾರೆ. ಅಂದರೆ ಇಸ್ಲಾಮನ್ನ ಅವರು ತಮ್ಮ ನೆಲದ ಅವಶ್ಯಕತೆಗಳಿಗೆ ತಕ್ಕಂತೆ ಮಾರ್ಪಡಿಸಿ ಒಗ್ಗಿಸಿ ಕೊಂಡಿದ್ದಾರೆ. ಅವರಿಗೆ ತಮ್ಮ ಪುರಾತನ ಸಂಸ್ಕೃತಿಯ ಬಗ್ಗೆ ಅತೀವ ಹೆಮ್ಮೆಯಿದೆ. ಮನುಷ್ಯನ ಧರ್ಮಾಚರಣೆ ವಯಕ್ತಿಕ ಮಟ್ಟದ್ದು. ಅದು ಬಹಿರಂಗವಾಗಿ ಗದ್ದಲವೆಬ್ಬಿಸುವ ಮಟ್ಟಕ್ಕೆ ಎಂದೂ ಇಳಿಯಬಾರದು. ಇಸ್ಲಾಂ ಹುಟ್ಟಿದ ಅರಬ್ ಜಗತ್ತಿನಲ್ಲಿಯೆ ನಮಾಜ್ ಕರೆಗೆ ಸೈರನ್ ಕೂಗಿಸುವ ವ್ಯವಸ್ಥೆ ಚಾಲ್ತಿಗೆ ಬಂದಿರುವಾಗ ಇನ್ನೂ ಭಾರತದಲ್ಲಿ 'ಬಾಂಗ್' ಕೂಗುವ ಹಳೆಯ ಪದ್ದತಿಗೆ ಅಂಟಿಕೊಳ್ಳುವುದು ಹೊಸತನವನ್ನು ತಂತ್ರಜ್ಞಾನದ ಪ್ರಸ್ತುತತೆಯನ್ನ ನಿರಾಕರಿಸಿದಂತೆ. ಅದಕ್ಕೆ ಪೈಪೋಟಿಯಾಗಿ ಸನಾತನ ಅವಿವೇಕಿಗಳೂ ಸಹ ಹೊತ್ತುಗೊತ್ತಿನ ಪರಿವೆಯಿಲ್ಲದೆ "ಎದ್ದೇಳು ಮಂಜುನಾಥಾ" ಎಂದು ಗದ್ದಲವೆಬ್ಬಿಸುತ್ತ ಬೆಳಗ್ಯೆ- ಮಧ್ಯಾಹ್ನ- ಸಂಜೆ ಹೀಗೆ ಅಸಂಬದ್ಧವಾಗಿ ಮಂಜುನಾಥನನ್ನ ಕ್ಷಣಕಾಲ ಮಲಗಲೂ ಬಿಡದೆ ನಿಮಿಷಕ್ಕೊಮ್ಮೆ ಬಡಿದೆಬ್ಬಿಸುತ್ತಾರೆ! ಗೋಮಾಂಸದ ಕುರಿತೂ ಇದೆ ಮಾತನ್ನ ಹೇಳಬಹುದು. ಹಿಂದೂ ಕೆಳವರ್ಗದ ಮಂದಿಯೂ ಕಡಿಮೆ ಬೆಲೆಗೆ ಸಿಗುವ ಕಾರಣ ಗೋಮಾಂಸವನ್ನ ಸೇವಿಸುತ್ತಾರೆ. ಅಂತೆಯೆ ಬಡ ಮುಸ್ಲೀಮರೂ ಸಹ. ಆದರೆ ಅದು ತಮ್ಮ ಧಾರ್ಮಿಕ ಸ್ವಾಭಿಮಾನದ ಸಂಕೇತ ಅಂತ ಮುಸ್ಲೀಮರು ಪರಿಗಣಿಸುವುದು ಕೊನೆಯಾಗಬೇಕು. ಆಹಾರ- ವಿಹಾರ ವ್ಯಕ್ತಿಯ ವಯಕ್ತಿಕ ವಿಚಾರಗಳು. ಕಡೆಯದಾಗಿ ಪರಸ್ಪರ ಅಪನಂಬಿಕೆಗೆ ಹಿಂದೂಗಳ ಕುರಿತ ಮುಸ್ಲೀಮರ ಹುಸಿ ಅಭದ್ರತೆಯ ಸಂಶಯ- ಮುಸ್ಲೀಮರ ಕುರಿತ ಹಿಂದೂಗಳ ದೇಶನಿಷ್ಠೆಯ ಸುಳ್ಳು ಸಂದೇಹ ಇವೆರಡೂ ಕಾರಣ. ಭಾರತೀಯ ಸಂಸ್ಕೃತಿ ಶ್ರೇಷ್ಠವಾದದ್ದನ್ನೆಲ್ಲ ಸ್ತ್ರೀ ರೂಪಕ್ಕೇರಿಸಿ ತಾಯಿಯನ್ನಾಗಿ ಆರಾಧಿಸುತ್ತೆ. ಉದಾಹಾರಣೆಗೆ ದೇಶ- ವಿದ್ಯೆ- ಅನ್ನ- ಹಣ- ನದಿ ಇವುಗಳನ್ನು ನೋಡಬಹುದು. ಆದರೆ ಧರ್ಮನಿಷ್ಠವಾಗಿ ಇಸ್ಲಾಂ ಪ್ರಕಾರ ನಡೆದುಕೊಂಡ ಅಂದಿನ ಇಸ್ಲಾಮಿ ಆಡಳಿತಗಾರರು ಈ ಭಾವನೆಗಳನ್ನೆ ಕೆಣಕುವಂತೆ ನಡೆದು ಕೊಂಡು ಸನಾತನ ಧರ್ಮೀಯರಾಲ್ಲಿ ಕಸಿವಿಸಿ ತಂದರು. ಹಿಂದೂ ಆರಾಧನಾಕ್ಷೇತ್ರಗಳ ಮೂರ್ತಿಗಳನ್ನ ಮಸೀದಿಗಳ ನೆಲಹಾಸು, ಮೆಟ್ಟಿಲು ಮಾಡಿಕೊಂಡದ್ದು. ಕಾಶ್ಮೀರದಲ್ಲಿ (ಹಿಂದೂ ನಂಬಿಕೆಗಳ ಪ್ರಕಾರ ಅದು ಶಾರದೆಯ ಆವಾಸ...ಅವಳನ್ನ 'ಕಾಶ್ಮೀರ ಪುರವಾಸಿನಿ' ಎಂದು ಕರೆಯಲಾಗುತ್ತೆ) ಆ ನೆಲದ ಭಾಷೆಯ ಸತ್ವವನ್ನೆ ಕಸಿಯಲಾಗಿದೆ. ಕಾಶ್ಮೀರಿ ಭಾಷೆಗೆ ಸ್ವಂತ ಲಿಪಿಯಿದ್ದರೂ ಇಂದು ಅದು ಬಳಕೆಯಲ್ಲಿಲ್ಲ, ಮೊಘಲ್ ಕಾಲದ ಹೇರಿಕೆಯ ಪರಿಣಾಮ ಅರಬ್ಬಿ ಲಿಪಿಯಲ್ಲಿ ಕಾಶ್ಮೀರಿ ಬರೆಯಲಾಗುತ್ತೆ. ತನ್ನ ನಿವಾಸದಲ್ಲೆ ವಿದ್ಯಾಧಿದೇವತೆ ಅನಾಥೆ ಆದದ್ದು ಹೀಗೆ! ಅದು ಇಂದಿಗೂ ಹಾಗೆಯೆ ಮುಂದುವರೆಯ ಬೇಕಿಲ್ಲ. ಧರ್ಮಕ್ಕಿಂತ ದೇಶ ಹಾಗೂ ಭಾಷೆ ಯಾವಾಗಲು ದೊಡ್ಡದು. ನಮ್ಮ ಮುಸ್ಲೀಂ ನೆರೆಕೆರೆಯವರಿಗೆ ಅರಬ್ಬಿಯೇ ಸಂವಹನ ಮಾಧ್ಯಮವಾದರೆ ಸಾಮನ್ಯ ಮುಸ್ಲಿಂ ಒಬ್ಬನಿಗೆ ಕಿರಿಕಿರಿ ಹುಟ್ಟಲಾರದೆ? ಹಿಂದೂ ಅತಿರೇಕಿಗಳಂತೆ ಇಸ್ಲಾಂ ಮೂಲಭೂತವಾದಿಗಳಿಗೂ "ಮಾನವ ಧರ್ಮ" ಎಲ್ಲಕಿಂತ ದೊಡ್ಡದು ಎಂಬುದನ್ನು ಒತ್ತಯವಾಗಿಯಾದರೂ ಅರಿವು ಮೂಡಿಸಲೆ ಬೇಕಿರುವುದು ಇಂದಿನ ತುರ್ತು ಅಗತ್ಯ. ಈ ನಿಟ್ಟಿನಲ್ಲಿ ಇಂಡೋನೇಷ್ಯ ನಮಗೆ ಮಾದರಿಯಾಗಬೇಕು. ಈ ದೇಶ ನಮ್ಮೆಲ್ಲರದು ಹಾಗೂ ಎಲ್ಲರೂ ಸಮಾನರು ಅನ್ನುವುದು ಮೊದಲು ಜಾರಿಯಾಗಲು ಅನುವಾಗುವಂತೆ ಮುಸ್ಲಿಂ ಸಮುದಾಯಕ್ಕೆ ಪ್ರತ್ಯೆಕವಾಗಿರುವ ಶರಿಯತ್ ಭಾರತೀಯ ನ್ಯಾಯಾಂಗ ವ್ಯವಸ್ಥೆಯಿಂದ ರದ್ದಾಗಬೇಕು. ಸದ್ಯ ಮುಸ್ಲಿಂ ವಯಕ್ತಿಕ ಮಂಡಳಿ ಶರಿಯತ್ತಿನ ಪ್ರಕಾರವೇ ಮುಸ್ಲಿಂ ವಿವಾಹ ವಿಚ್ಚೇದನಗಳನ್ನ ಪರಾಮರ್ಶಿಸಿ ನ್ಯಾಯ ದಯಪಾಲಿಸುವ ಅಧಿಕಾರ ಹೊಂದಿದೆ. ಗುರುಕುಲ ಪದ್ಧತಿಯನ್ನ ಮರೆಯಾಗಿಸಿದಂತೆ ಮದರಸಗಳಿಗೂ ಸರಕಾರಿ ರಾಜಾಶ್ರಯ ನಿಂತು ಮುಸ್ಲಿಂ ಮಕ್ಕಳು ಮುಖ್ಯವಾಹಿನಿಯ ಶಾಲೆಗಳಲ್ಲಿ ಉಳಿದೆಲ್ಲರಷ್ಟೆ ಕಲಿತು, ತನ್ನ ಸಮವಯಸ್ಕ ಅನ್ಯ ಕೋಮಿನ ಮಕ್ಕಳಿಗೆ ಓದಿನಲ್ಲಿ- ಇನ್ನಿತರ ಚಟುವಟಿಕೆಗಳಲ್ಲಿ ಪೈಪೋಟಿ ನೀಡುವಂತಾಗಬೇಕು. ಎರಡು ಕಣ್ಣಷ್ಟೇ ಗೋಚರಿಸುವ ಬುರ್ಕಾ ಜಾಹಿರಾತಿನ ವೀನೈಲ್'ಗಳು ಕರಾವಳಿಯ ಹೆದ್ದಾರಿಯ ಇಕ್ಕೆಲಗಳಲ್ಲಿ ಕಾಣುವುದು ನಿಂತಷ್ಟು ಶೀಘ್ರ ಮುಸ್ಲಿಂ ಮಹಿಳೆಯರು ನಿಟ್ಟುಸಿರು ಬಿಟ್ಟಾರು. ಕೊನೆಯ ಖಿಲಾಫತ್ ಅಸ್ತಿತ್ವದಲ್ಲಿದ್ದ ತುರ್ಕಿಯಲ್ಲಿಯೆ ಹೊಸತರದ ಇಸ್ಲಾಮನ್ನ ಜಾರಿಗೆ ತಂದಿರೋವಾಗ ನಮ್ಮಲ್ಲೇಕೆ ಹಳೆಯ ಮರಳುಗಾಡಿನ ಸಂಸ್ಕೃತಿಯ ಮೋಹ? "ಮೊದಲು ಭಾರತೀಯರಾಗೋಣ" ಆಮೇಲೆ ಇದ್ದೆ ಇದೆ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಬೌದ್ಧ, ಜೈನರಾಗೋದು. ನಾಳೆಯಿಂದ ಇಸ್ಲಾಂ ಉಗಮದ ಕಥೆ ಇಲ್ಲಿ ಮೂಡಿ ಬರಲಿದೆ. ಆರಂಭದಲ್ಲಿ ಅಂದಿನ ಅರಬ್ ಜಗತ್ತಿನ ವಿಸ್ಕೃತ ಪರಿಚಯ ಮಾಡಿಸುವುದು ಅನಿವಾರ್ಯ. ಬೋರ್ ಎನಿಸಿದರೂ ಅದನ್ನ ಓದದೆ ಇರಬೇಡಿ. ಆ ಮೊದಲ ಕಂತನ್ನ ಓದದಿದ್ದರೆ ಮುಂದಿನ ಕಥೆ ಅಷ್ಟಾಗಿ ಅರ್ಥವಾಗಲಾರದು. ನನ್ನ ದೃಷ್ಟಿಯಲ್ಲಿ ಇಸ್ಲಾಂ ಇಷ್ಟೆ. ನನ್ನ ಸಹೋದರನೊಬ್ಬ ಅದಕ್ಕೆ ಮಾರುಹೊದರೆ ಹೇಗೆಯೋ ಹಾಗೆಯೆ ಇನ್ನುಳಿದ ಮುಸ್ಲೀಮರು ನನ್ನ ಪಾಲಿಗೆ. ಏಕೆಂದರೆ ನಾನವರನ್ನ ಮೊದಲು ನೋಡೋದು ಭಾರತೀಯತೆಯ ಮೋಹರಿನಿಂದ. ಅವರ ಧಾರ್ಮಿಕ ಶ್ರದ್ಧೆ ನನಗೆ ಇಲ್ಲಿಯ ತನಕ ಮುಖ್ಯವಾಗಿಲ್ಲ, ಇನ್ನು ಮುಂದೆಯೂ ಆಗುವುದಿಲ್ಲ. 'ಇಸ್ಲಾಂ ಮರುಭೂಮಿಯ ಬುಡಕಟ್ಟಿಗೆ ಹೇಳಿಮಾಡಿಸಿದ ಧರ್ಮಾಚರಣೆ ; ಅದರ ಆಶಯಗಳು-ನಿಯಮಾವಳಿಗಳು ಅದನ್ನ ಹೆಚ್ಚು ಸ್ಪುಟಗೊಳಿಸುತ್ತವೆ' ಅನ್ನುವ ನನ್ನ ನಿರ್ಧಾರಕ್ಕೆ ಕಾರಣವಾದದ್ದು ಆಗುಂಬೆ ಎಸ್.ನಟರಾಜ್'ರವರು ಬರೆದ "ಮಹಮದ್ ಪೈಗಂಬರ್ ಹಾಗು ಖಲೀಫರು" ಎಂಬ ಇಸ್ಲಾಮಿನ ಆತ್ಮಕಥೆ. ಬೆಂಗಳೂರಿನಲ್ಲಿ ಕಳೆದ ಬಾರಿ ನಡೆದ 'ಕನ್ನಡ ಸಾಹಿತ್ಯ ಸಮ್ಮೇಳನ'ದಲ್ಲಿ ಬೆಳಕು ಕಂಡಿದ್ದ ಈ ಹೊತ್ತಗೆಯನ್ನ (ಹಂಸ ಪ್ರಕಾಶನ) ಹಿಂದೆಂದೋ ಕುತೂಹಲಕ್ಕಾಗಿ ಓದಿದ್ದ ಖುರಾನ್ ಹಾಗು ಹದೀಸ್'ಗಳೊಂದಿಗೆ ಹೋಲಿಸಿ ಓದಿದಾಗ ಇದು ಇನ್ನಷ್ಟು ಧೃಡವಾಯಿತು. ಬಹುಷಃ ನಿಮ್ಮೆಲ್ಲರ ಭಾವನೆಗಳು ಇದಕ್ಕೆ ವ್ಯತರಿಕ್ತವಾಗಿದ್ದಿರಲೂಬಹುದು. ಅದೇ ಹೊತ್ತಗೆಯ ಪ್ರತಿಯೊಂದು ಪುಟವೂ ಇಲ್ಲಿ 'ದಿನಕ್ಕೊಂದು ಪುಟ'ದಂತೆ ಪ್ರಕಟಿಸುತ್ತೇನೆ. ಇಸ್ಲಾಮಿನ ಉಗಮದ ಬಗ್ಗೆ ನಿಮಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನ ಓದುವ ಸುಖವೂ ನಿಮ್ಮದಾಗಲಿ. ( ಮುಗಿಯಿತು...)

1 comment: