ತೀರ್ಥಹಳ್ಳಿ ಎಂದರೆ.....




ಬೇಸಿಗೆ ಹಾಗು ದಸರೆಯ ಶಾಲಾ ರಜಾಗಳನ್ನು ನಾನು ಜಾತಕಪಕ್ಷಿಯಂತೆ ಕಾಯುತ್ತಿದ್ದೆ. ನನ್ನ ಶಾಲಾ ರಜಾದಿನಗಳನ್ನು ಕಳೆಯಲು ನನಗಿದ್ದದ್ದು ಕೇವಲ ಸೀಮಿತವಕಾಶ. ಒಂದೋ ಅಮ್ಮನ ತವರು ಸಾಗಿನಬೆಟ್ಟಿಗೆ ಅವರೊಂದಿಗೆ ಹೋಗಬೇಕು, ಇಲ್ಲವೆ ಕೊಪ್ಪದಲ್ಲಿದ್ದ ಚಿಕ್ಕಪ್ಪನ (ಅಜ್ಜನ ತಮ್ಮ) ಮನೆಗೆ ಹೋಗಬೇಕು, ಅದೂ ಇಲ್ಲದಿದ್ದರೆ ದಬ್ಬಣಗದ್ದೆಯಲ್ಲಿದ್ದ ಪ್ರಭಾಕರಣ್ಣನ ಮನೆಗೆ ಹೋಗಬೇಕು ( ಅವರ ಬಗ್ಗೆ ಮುಂದೆ ಹೇಳುತ್ತೇನೆ). ಅಪ್ಪನ ಮನೆಗೆ ಹೋಗುವ ಅವಕಾಶ ಇದ್ದೂ ಇಲ್ಲದಂತಿತ್ತು. ಇವಿಷ್ಟರಲ್ಲಿ ನನ್ನ ಪ್ರಾಥಮಿಕ ಆದ್ಯತೆ ಇರುತ್ತಿದ್ದುದು ಅಮ್ಮನ ಜೊತೆಗೆ ಸಾಗಿನಬೆಟ್ಟಿಗೆ ಹೋಗುವುದಕ್ಕೆ.

ಹಳ್ಳಿಯ ವಾತಾವರಣದ ಹಿನ್ನೆಲೆ, ಗದ್ದೆ-ತೋಟಗಳಲ್ಲಿ ಸ್ವಚ್ಛಂದವಾಗಿ ಅಲೆಯಲಿಕ್ಕೆ ಸಿಗುತ್ತಿದ್ದ ಮುಕ್ತ ಅವಕಾಶ, ಗದ್ದೆಯಲ್ಲಿ ಅತ್ತ ಗೊರಬಿನೊಳಗೆ ಹುದುಗಿ ನೇಜಿ ನೆಡುವವರ 'ಓ ಬೇಲೆ' ಕೇಳುತ್ತ ಇತ್ತ ನೇಗಿಲಿಗೆ ಕೋಣಕಟ್ಟಿ ಹೂಡುವವರ 'ಊ ಹು ಊ ಹು ಊ' ರಾಗವನ್ನ ಕೇಳುತ್ತಾ ಮಾವಿನ ಮರದ ಕೊಂಬೆಗೆ ಕಟ್ಟಿರುವ ಉಯ್ಯಾಲೆಯಲ್ಲಿ ತೂಗಾಡುತ್ತಾ ಇರುವ ಹಂಬಲ, ಮನೆಯ ಜಾಗದೊಳಗೆ ಬಳುಕುತ್ತ ಹರಿಯುವ 'ಫಲ್ಗುಣಿ'ಯ ಸೇರಗಾದ ತೋಡಿನ ನೀರಲ್ಲಿ ಆಡುವ ತವಕ, ಹಟ್ಟಿಯಲ್ಲಿದ್ದ ಹೂಡುವ ಕೋಣಗಳನ್ನು ತೋಡಲ್ಲಿ ಮೀಯಿಸುವಾಗ ತೆಂಗಿನ ಚೊಪ್ಪಿನಲ್ಲಿ ಅವುಗಳ ಮೈ ತಿಕ್ಕುವ ರೋಮಾಂಚನ (ತಿಕ್ಕೋದು ಕಡಿಮೆಯಾಗಿ ನೀರಲ್ಲಿ ಬಿದ್ದು ಕುಂಟೆ ಕೋಣನಂತೆ ಕೆಸರೆಬ್ಬೆಸಿ ಹೊಡಕೋದೆ ಜಾಸ್ತಿಯಾಗಿರುತ್ತಿತ್ತು). ಮನೆಗೆ ಅಂಟಿಕೊಂಡಿದ್ದ ಕೆರೆಯಲ್ಲಿ ಅಮ್ಮನ ಅಣ್ಣ ಸುಂದರಮಾವ ಈಜುವಾಗ ನಾನೂ ಕೋಮಣ ಕಟ್ಟಿಕೊಂಡು ಅವರ ಈಜಿನ ಕೊನೆಯಲ್ಲಿ ಕೇವಲ ಐದೇ ಐದು ನಿಮಿಷವಾದರೂ ಅವರಿಂದ ಈಜು ಕಲಿಯುವ ಹಠ ಇವೆಲ್ಲ ಊರಿನತ್ತ ಒಂದೇ ಉಸುರಿನಲ್ಲಿ ಓಡಲು ನನಗೆ ಇರುತ್ತಿದ್ದ ಪ್ರಮುಖ ಆಕರ್ಷಣೆಗಳು.

ಜೊತೆಗೆ ಮನೆಯಲ್ಲಿ ಮಾಡುತ್ತಿದ್ದ ಆಗಾಗ ಮೂಡೆ, ಕೊಟ್ಟೆ ಕಡುಬು, ನೀರುದೋಸೆ, ಪುಂಡಿ, ಅರಿ ಸೇಮಿಗೆ- ಕಾಯಿ ಪೇರ್, ಉದ್ದು ದೋಸೆ, ಕೆಂಡದಡ್ದಾಯಿ, ಕಡಲೆಬೇಳೆ ಪಾಯಸಗಳಂತಹ ತುಳುನಾಡ ತಿಂಡಿಗಳು ಮೋಡಿ ಹಾಕುತ್ತಿದ್ದವು. ಅಲ್ಲದೆ ಈ ತಿಂಡಿಗಳೊಡನೆ ಹೇರಳವಾಗಿ ಮೇಯಲು ಸಿಗುತ್ತಿದ್ದ ಮಾವು, ಪೇರಳ- ಸಾಂತಿ- ಕೇಪಳ- ಪೆಜಕ್ಕಾಯಿ- ಪೆಲಕ್ಕಾಯಿ- ನೇರಳೆ- ಬಿಂಬುಳಿ- ನಲ್ಲಿ ಮುಂತಾದ ಹಣ್ಣುಗಳ ರುಚಿ ಅತ್ತಲೆ ಹೋಗುವಂತೆ ಪ್ರೇರೇಪಿಸುತ್ತಿದ್ದವು ಅನ್ನಿಸುತ್ತದೆ. ಇವೆಲ್ಲದರ ರುಚಿಯ ಬಾಲ ಹಿಡಿದು ಅಮ್ಮನೊಟ್ಟಿಗೆ ಊರಿಗೆ ಹೋಗಲು ಸದಾ ಒಂಟಿಕಾಲಲ್ಲಿ ನಿಂತಿರುತ್ತಿದ್ದೆ. ಅಲ್ಲಿಂದ ತೀರ್ಥಹಳ್ಳಿಗೆ ಮರಳಿ ಬರುವಾಗ ಕಾರ್ಕಳದ ಕಾಬೆಟ್ಟಿನಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ಒಂದು ದಿನ, ಹಾಗು ಮುನಿಯಾಲಿನ ಬಳಿಯ ಗುಡ್ಡೆಮನೆಯಲ್ಲಿದ್ದ ಅಜ್ಜನ ಮನೆಯಲ್ಲಿ ಒಂದು ದಿನ ಕಳೆಯಲು ಸಿಗುತ್ತಿದ್ದ ಸಂತಸದ ವೇಳೆ ಸಾಗಿನಬೆಟ್ಟಿಗೆ ಅವಕಾಶ ಸಿಕ್ಕಾಗಲೆಲ್ಲಾ ಹೋಗಲು ಪ್ರೇರೇಪಿಸುತ್ತಿದ್ದವು.

ಹಾಗಂತ ಊರಿಗೆ ಹೋಗುವಾಗಲೆಲ್ಲ ಅಮ್ಮ ನನ್ನನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು ಎಂದೇನಲ್ಲ. ಹಲವಾರು ಬಾರಿ ನನ್ನ ಶಾಲಾ ದಿನಗಳಲ್ಲೇ ಅವರು ತವರಿಗೆ ಹೊರಡುತ್ತಿದ್ದುದೂ ಉಂಟು, ಆಗೆಲ್ಲ ನಾನು ಅದೆಷ್ಟೇ ಅತ್ತು-ಕರೆದು ರಂಪ ಮಾಡುತ್ತಿದ್ದರೂ ಫಲ ಮಾತ್ರ ನಾಸ್ತಿ. ಅಂತಹ ಸಂದರ್ಭಗಳಲ್ಲಿ ಅಡುಗೆ ಮನೆಯ ಮೂಲೆಯಲ್ಲಿರುತ್ತಿದ್ದ ನಾಗರಬೆತ್ತಕ್ಕೆ ನನ್ನ ಮೇಲೆ ಸವಾರಿ ಮಾಡಲು ಮುಫತ್ ಅವಕಾಶ ಬೇರೆ ಸಿಗುತ್ತಿತ್ತು!. ಬರುಬರುತ್ತಾ ಈ ಪೆಟ್ಟಿನ ಹೆದರಿಕೆಯಿಂದ ನಾನು ಹಟ ಕಡಿಮೆ ಮಾಡಿದೆನಾದರೂ ಪೂರ್ತಿ ರಾಜಿ ಯಾಗಲಿಲ್ಲ. ಆಗ ಆದ ರಾಜಿಸೂತ್ರದ ಪ್ರಕಾರ ಅಮ್ಮ ನನ್ನನ್ನು ಊರಿಗೆ ಕರೆದೊಯ್ಯದ ಸಂದರ್ಭಗಳಲ್ಲಿ ಅವರಿಗಾಗಿ ಬಸ್ಸಿನಲ್ಲಿ ಸೀಟು ಹಿಡಿಯುವುದಕ್ಕಷ್ಟೇ ನನ್ನ ಹಾರಾಟದ ಕಾರ್ಯವ್ಯಾಪ್ತಿ ಸೀಮಿತವಾಯ್ತು.

ಈ ಸೀಟು ಹಿಡಿಯುವುದು ನನಗಾಗ ಒಂದು ಮೋಜಿನ ಆಟ. ತೀರ್ಥಹಳ್ಳಿ ಪಟ್ಟಣದ ಚಹರೆಪಟ್ಟಿಯ ಅರಿವು ನಿಮಗಿದ್ದಲ್ಲಿ ಮುಂದೆ ನಾನು ಕೊಡುವ ವಿವರಣೆ ಸರಳವಾಗಿ ನಿಮಗೆ ಅರ್ಥವಾದೀತು. ಶಿವಮೊಗ್ಗದಿಂದ ಸುಮಾರು ೬೦ ಕಿಲೋಮೀಟರ್ ದೂರದಲ್ಲಿ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯಹೆದ್ದಾರಿಯಲ್ಲಿ ನಮ್ಮೂರಿದೆ ( ಈಗ ಅದು ರಾಷ್ಟ್ರೀಯ ಹೆದ್ದಾರಿಯ ದರ್ಜೆಗೇರಿದೆ). ಹೀಗಾಗಿ ಮಂಗಳೂರು, ಸಾಗರ, ಹೊಸನಗರ, ಕುಂದಾಪುರಗಳತ್ತ ಸಾಗುವ ಬಸ್ಸುಗಳದ್ದೊಂದು ದಿಕ್ಕಾದರೆ, ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ, ಬೆಂಗಳೂರಿಗೆ ಸಾಗುವ ಬಸ್ಸುಗಳದ್ದು ಇನ್ನೊಂದು. ಇನ್ನು ಕೊಪ್ಪ-ಶೃಂಗೇರಿಗಳ ಕಡೆಗೆ ಸಾಗುವವದ್ದು ಮೇಲಿನೆರಡರ ನಡುವಿನ ದಾರಿ. ಹೀಗಾಗಿ ಈ ಗೊಂದಲಾಪುರದಲ್ಲಿ ಮೂರ್ಮೂರು ಬಸ್ ನಿಲ್ದಾಣಗಳಿವೆ. ಮುಖ್ಯಬಸ್ ನಿಲ್ದಾಣ ಕೆಳಗಿನ ಸ್ಟ್ಯಾಂಡ್ ಎಂದು ಕರೆಯಿಸಿಕೊಂಡರೆ, ಉಳಿದೆರಡನ್ನು ಮೇಲ್'ಸ್ಟ್ಯಾಂಡ್ ಹಾಗು ಕೊಪ್ಪಸ್ಟ್ಯಾಂಡ್ ಎನ್ನಲಾಗುತ್ತದೆ. ಈ ಮೂರೂ ದಿಕ್ಕಿನಿಂದ ಬರುವ ಬಸ್ಸುಗಳು ಮುಖ್ಯ ಬಸ್ ನಿಲ್ದಾಣಕ್ಕೆ ಬರುವುದು ಖಡ್ಡಾಯವಾದರೂ ಉಳಿದಂತೆ ತಮ್ಮತಮ್ಮ ದಿಕ್ಕಿನ ಕಡೆಗಿನ ನಿಲ್ದಾಣಗಳಲ್ಲೇ ಹೆಚ್ಚು ಸಮಯ ನಿಲ್ಲುತ್ತವೆ. ಈ ಮೂರೂ ನಿಲ್ದಾಣಗಳ ನಡುವೆ ಒಂದೊಂದು ಕಿಲೋಮೀಟರ್ ಅಂತರವಿದೆ. ಈಗಲೂ ಅಲ್ಲಿ ಇದೆ ಪರಿಸ್ಥಿತಿಯಿದೆ,

ಶಿವಮೊಗ್ಗದಿಂದ ಮಂಗಳೂರಿನತ್ತ ಸಾಗುವ ಬಹುತೇಕ ಬಸ್ಸುಗಳೆಲ್ಲ ಹೆಬ್ರಿ-ಉಡುಪಿ ಮಾರ್ಗವಾಗಿಯೆ ಹೋಗುತ್ತಿದ್ದರಿಂದ ಕಾರ್ಕಳ-ಮೂಡಬಿದ್ರಿಗಳ ಕಡೆಗೆ ಸಾಗುವ ಬಸ್ಸುಗಳು ಕಡಿಮೆಯಿದ್ದವು. ಈ ಮಾರ್ಗವಾಗಿ ಸಾಗಿದರೂ ಉಡುಪಿ ಮೇಲೆ ಸಾಗಿದಷ್ಟೇ ಮಂಗಳೂರಿಗೆ ಅಂತರ ಇದ್ದರೂ ರಸ್ತೆ ಹೋಲಿಕೆಯಲ್ಲಿ ಅಷ್ಟು ಚೆನ್ನಾಗಿರದ ಕಾರಣ ( ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಚೆನ್ನಾಗಿದೆ) ಹಾಗು ಮಣಿಪಾಲದತ್ತ ಚಿಕಿತ್ಸೆಗಾಗಿ ಸಾಗುವ ರೋಗಿ ಪ್ರಯಾಣಿಕರ ಸಂಖ್ಯೆಯೂ ಗಣನೀಯವಾದುದರಿಂದ ಆರ್ಥಿಕ ಹಿತದೃಷ್ಟಿಯಿಂದ ಮಂಗಳೂರಿಗೆ ಹೋಗುವ ಬಸ್ಸುಗಳೆಲ್ಲ ಅದೆ ಮಾರ್ಗವಾಗಿ ಸಂಚರಿಸುತ್ತಿದ್ದವು. ಹೀಗಾಗಿ ಮೂಡುಬಿದ್ರಿ-ಕಾರ್ಕಳದ ದಿಕ್ಕಿಗೆ ಧಾರಾಳ ಬಸ್ಸಿನ ಕೊರತೆಯಿತ್ತು. ಒಂದೋ ಮಂಗಳೂರಿನ ಬಸ್ಸಿನಲ್ಲಿ ಹೆಬ್ರಿ ಮುಟ್ಟಿ ಅಲ್ಲಿ ಇನ್ನೊಂದು ದಿಕ್ಕಿನ ಬಸ್ ಬದಲಿಸಬೇಕಿತ್ತು, ಇಲ್ಲವೋ ಇದು ಹೆಚ್ಚು ತ್ರಾಸ ಎಂದೆನಿಸಿದರೆ ಸಾಗರದಿಂದ ಗುರುವಾಯನಕೆರೆಗೆ ಹೋಗುತ್ತಿದ್ದ 'ಪುಷ್ಪದಂತ' ಹಾಗು 'ನವಶಕ್ತಿ' ಎನ್ನುವ ಎರಡು ಬಸ್ಸುಗಳಿದ್ದವು, ಸಾಮಾನ್ಯವಾಗಿ ಧರ್ಮಸ್ಥಳಕ್ಕೆ ಹೋಗುವ ಭಕ್ತಕೋಟಿಯಿಂದ ತುಂಬಿ ತುಳುಕಾಡುತ್ತಿದ್ದ ಅವನ್ನೇ ಕಾದು ಒಂಟಿಕಾಲಲ್ಲಿ ನಿಂತಾದರೂ ಊರು ಸೇರ ಬೇಕಿತ್ತು.


ತೀರ್ಥಹಳ್ಳಿಗೂ ಮೂಡಬಿದ್ರಿಗೂ ಸರಿ ಸುಮಾರು ನೂರು ಕಿಲೋಮೀಟರ್ ಅಂತರ ಹಾಗು ಎರಡೂ ಎರಡೂವರೆ ಗಂಟೆಗಳ ದೀರ್ಘ ಪ್ರಯಾಣ ಹೀಗಾಗಿ ನಿಂತು ಸಾಗೋದು ಕಷ್ಟ. ಸಾಲದ್ದಕ್ಕೆ ಆಗುಂಬೆ ಘಾಟಿಯ ಕಡಿದಾದ ತಿರುವುಗಳಲ್ಲಿ ಪದೇ ಪದೇ ಒತ್ತಿಸಿಕೊಳ್ಳುವ ಬಸ್ಸಿನ ಬ್ರೇಕಿಗೆ ಹಚ್ಚಿರುವ ಕೀಲೆಣ್ಣೆ ಡೀಸಲ್ ಘಮದೊಂದಿಗೆ ಹೊರಹೊಮ್ಮಿಸುವ ದರಿದ್ರ ವಾಸನೆ, ಈ ವಾಸನೆಗೆ ತಲೆ ತಿರುಗಿದಂತಾಗಿ ಹೊಟ್ಟೆ ತೊಳಿಸಿ ಪ್ರಯಾಣದುದ್ದಕ್ಕೂ ಬಕ ಬಕ ವಾಂತಿ ಮಾಡಿಕೊಳ್ಳುತ್ತ ತಿಂದದ್ದನೆಲ್ಲ ಕಾರಿಕೊಳ್ಳುವ ಮಂಜುನಾಥನ ಭಕ್ತಕೋಟಿ! ಒಂದಾ? ಎರಡ? ಈ ಎಲ್ಲ ವಿವಿಧ ವಿನೋದಾವಳಿಗಳನ್ನು ನೋಡಿಯೇ ಸವಿಯಬೇಕು. ಒಟ್ಟಿನಲ್ಲಿ ಇದೊಂಥರಾ ಅಲ್ಪಾವಧಿಯ ಕಾಲಾಪಾನಿ ಶಿಕ್ಷೆ. ಈ ಎಲ್ಲ ರಗಳೆಗಳಿಂದ ಮುಕ್ತರಾಗಬೇಕಿದ್ದಲ್ಲಿ ಕಷ್ಟಪಟ್ಟು ಕುಸ್ತಿ ಮಾಡಿಯಾದರೂ ಸರಿ ಸೀಟು ಹಿಡಿದು ಕೂತು ಪ್ರಯಾಣಿಸಬೇಕು.




ಮಲೆನಾಡಿನ ಒಳಗೆ ಹುದುಗಿರುವ ತೀರ್ಥಹಳ್ಳಿ ಸುಮಾರು ಆರು ಸಾವಿರ ಜನಸಂಖ್ಯೆಯೂ ಇರದ ಪುಟ್ಟ ಪಟ್ಟಣ. ಅತ್ತ ತೀರ ಹಳ್ಳಿಯೂ ಅಲ್ಲದೆ, ಇತ್ತ ಅರೆಬೆಂದ ಪಟ್ಟಣದ ಲಕ್ಷಣಗಳನ್ನ ರೂಢಿಸಿಕೊಳ್ಳುತ್ತಾ ತನ್ನ ಹೆಸರಿಗೆ ನ್ಯಾಯ ಸಲ್ಲಿಸುತ್ತಾ ಇದೆ. ನಾಲ್ಕೂ ಸುತ್ತಿನಲ್ಲಿರುವ ಗುಡ್ಡಗಳ ನಡುವೆ ತಟ್ಟೆಯಾಕಾರದಲ್ಲಿ ಊರು ಹಬ್ಬಿದ್ದು ಯಾವುದೆ ದಿಕ್ಕಿನಿಂದ ಊರು ಹೊಕ್ಕರೂ ನಿಮ್ಮ ಕಣ್ಣಿಗೆ ಅಡಿಕೆ ತೋಟಗಳು, ಬೇಸಾಯದ ಗದ್ದೆಗಳು ಕಾಣುತ್ತವೆ. ಕಳೆದ ಅರ್ಧ ಶತಮಾನದಲ್ಲಿ ಆಗಿದ್ದ ಪ್ರಗತಿಯ ವೇಗವನ್ನ ಕಳೆದ ಐದೇ ವರ್ಷದಲ್ಲಿ ಸಾಧಿಸಿ ಅಡ್ಡಾದಿಡ್ಡಿ ಓಡುತ್ತಿರುವ ಹೊಚ್ಚಹೊಸ ಕುಡುಕನಂತೆ ನನ್ನ ಕಣ್ಣಿಗೆ ಈ ನಡುವೆ ತೀರ್ಥಹಳ್ಳಿ ಕಾಣುತ್ತಿದೆ.

ಮೂಲತಃ ಕೆಳದಿ ಸಂಸ್ಥಾನದ ಆಡಳಿತಕ್ಕೆ ಒಳಪಟ್ಟಿದ್ದ ಇಲ್ಲಿಗೆ ನವ ನಾಗರೀಕತೆ ಕಾಲಿಟ್ಟದ್ದು ಬಹುಷಃ ಎಪ್ಪತ್ತು ವರ್ಷಗಳ ಹಿಂದೆ ಮೈಸೂರಿನ ಒಡೆಯರು ತುಂಗಾನದಿಗೆ ಅಡ್ಡಲಾಗಿ ಕಟ್ಟಿಸಿದ ಕಮಾನು ಸೇತುವೆಯ ಮೂಲಕ.ಬಿದನೂರು, ಕೆಳದಿ, ನಗರ ಹಾಗು ಇಕ್ಕೇರಿಗಳಲ್ಲಿ ನಾಲ್ಕು ನಾಲ್ಕು ರಾಜಧಾನಿ ಇದ್ದಿದ್ದರೂ ಕೆಳದಿ ನಾಯಕರ ವಾಣಿಜ್ಯದ ಕೇಂದ್ರವಾಗಿದ್ದುದು ತೀರ್ಥಹಳ್ಳಿ. ಜಾತಿಯಿಂದ ಲಿಂಗಾಯತರಾಗಿದ್ದ ಕೆಳದಿ ನಾಯಕರ ಗುರು ಮಠ ಇದ್ದುದು ಇಲ್ಲಿನ ಕವಲೆದುರ್ಗದಲ್ಲಿರುವ ಕೋಟೆಯಲ್ಲಿ. ಇಂದಿಗೂ ಈ ಲಿಂಗಾಯತ ಮಠ ಅಸ್ತಿತ್ವದಲ್ಲಿದೆ. ಸಾಂಸ್ಕ್ರತಿಕವಾಗಿ ಆ ಕಾಲದಿಂದಲೂ ತೀರ್ಥಹಳ್ಳಿ ಸಮೃದ್ಧ. ಸುತ್ತಮುತ್ತಲಿನ ಹೊಸನಗರ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಕುಂದಾಪುರ, ಕಾರ್ಕಳ, ಶಿವಮೊಗ್ಗ ತಾಲೂಕುಗಳು ಹೋಲಿಕೆಯಲ್ಲಿ ಸಾಂಸ್ಕೃತಿಕವಾಗಿ ಇನ್ನೂ ತೂಕಡಿಸುತ್ತಿದ್ದರೆ ಇತ್ತ ತೀರ್ಥಹಳ್ಳಿಯಲ್ಲಿ ಅಕ್ಷರಶಃ ಪ್ರತಿಭಾ ಸ್ಪೋಟವಾಗುತ್ತಿದೆ.

ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರು ಇಲ್ಲಿನ ಆರಗದವರು. ಕನ್ನಡದ ಮೊದಲ ಜ್ಞಾನಪೀಠ ಪಡೆದ ಕುವೆಂಪು ಇಲ್ಲಿಯ ಕುಪ್ಪಳಿಯವರು. ಆರನೆ ಜ್ಞಾನಪೀಠವೂ ಇಲ್ಲಿನ ಭಾರತೀಪುರದ ಅನಂತಮೂರ್ತಿಯವರಿಗೆ ಸಂದಿದೆ. ಐದು ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಚಿತ್ರ ನಿರ್ದೇಶಕ ಗಿರೀಶ್ ಇಲ್ಲಿನ ಕಾಸರವಳ್ಳಿಯವರು. ಕರ್ನಾಟಕದಲ್ಲಿ ಗೇಣಿ ಪದ್ಧತಿ ಜಾರಿಗೆ ತಂದ ನಾಡಿನ ಎರಡನೇ ಮುಖ್ಯಮಂತ್ರಿ ಮಂಜಪ್ಪ ಇಲ್ಲಿನ ಕಡಿದಾಳಿನವರು (ಅಂದಹಾಗೆ ವಿಧಾನಸೌಧದ ಉದ್ಘಾಟಕರು ಇವರೇ). ಈ ನಾಡು ಕಂಡ ವಿಶಿಷ್ಟ ರಾಜಕಾರಣಿ ಗೋಪಾಲಗೌಡರು ಇಲ್ಲಿನ ಶಾಂತಾವೇರಿಯವರು. ಕರುನಾಡ ಇಂದಿನ ಯುವಕರ ಒಂದು ತಲೆಮಾರಿನ ಕಣ್ತೆರೆಸಿದ ಪೂರ್ಣಚಂದ್ರ ತೇಜಸ್ವಿ ಹುಟ್ಟಿದ ಇಂಗ್ಲಾದಿ- ಕಡೆಗೆ ಪ್ರಕೃತಿಯಲ್ಲಿ ಲೀನವಾದ ಕುಪ್ಪಳ್ಳಿ ಇರುವ ಊರಿದು.


ಕನ್ನಡದ ವಿಶಿಷ್ಟ ಕವಿ ಎಸ್ ವಿ ಪರಮೇಶ್ವರ ಭಟ್ಟರು ಇಲ್ಲಿನ ಮಾಳೂರಿನವರು. ಅಂಕಣ ಬರಹ ಪಿತಾಮಹ ಮಾನಪ್ಪ ನಾಯಕರು ಇಲ್ಲಿನ ಹಾರೋಗುಳಿಗೆಯವರು. ರಾಜ್ಯದಲ್ಲಿ ರೈತ ಚಳುವಳಿ ಕಟ್ಟಿ ಬೆಳೆಸಿದ ದಿವಂಗತ ಸುಂದರೇಶ್, ಶಾಮಣ್ಣ ಇಲ್ಲಿನ ಕಡಿದಾಳಿನವರು. ಶರತ್ ಕಲ್ಕೋದ್, ಸತ್ಯಮೂರ್ತಿ ಆನಂದೂರು, ರಮೇಶ್ ಶಟ್ಟಿ, ವಿಕಾಸ ನೇಗಿಲೋಣಿ, ಶ್ರೀಕಾಂತ್ ಭಟ್, ಪಿಟಿಐ ವೆಂಕಟೇಶ್ ಇವರೆಲ್ಲ ಸಧ್ಯ ಮುಖ್ಯವಾಹಿನಿಯ ಪತ್ರಿಕೋದ್ಯಮದಲ್ಲಿ ಬ್ಯುಸಿ. ಇಲ್ಲಿನ ಎಂ ಕೆ ಇಂದಿರಾ, ಶಾರದ ಉಳುವೆಯವರನ್ನ ಓದಿರದ ಕಾದಂಬರಿ ಪ್ರಿಯರು ಇದ್ದಿರಲಿಕ್ಕಿಲ್ಲ. ಆಕಾಲದ ಸುಂದರಾಂಗ ಮಾನು, ಈ ಕಾಲದ ಚಲುವ ದಿಗಂತ ಇಲ್ಲಿಂದ ಹೋಗಿ ಬೆಳ್ಳಿತೆರೆಯಲ್ಲಿ ಮಿನುಗುತ್ತಿದ್ದರೆ. ಶಾಲೆಯಲ್ಲಿ ನನ್ನ ಜೂನಿಯರ್ ದಿಗಂತ, ಅವನ ನಟನಾ ವೃತ್ತಿ ಜೀವನದ ಮೊದಲ ಸಂದರ್ಶನ ನಾನೇ ತೆಗೆದುಕೊಂಡು ಪ್ರಚಾರ ಕೊಟ್ಟಿದ್ದು ನೆನಪಾಗುತ್ತಿದೆ. ಕೋಡ್ಲು ರಾಮಕೃಷ್ಣ ಇಲ್ಲಿನವರೇ ಆದ ಚಿತ್ರ ನಿರ್ದೇಶಕ

ಇತ್ತೀಚಿಗೆ 'ನೆನಪಿರಲಿ' ಕನ್ನಡ ಚಿತ್ರಕ್ಕಾಗಿ ಹಂಸಲೇಖರವರು ಬರೆದ ಹಾಡೊಂದರಲ್ಲಿ' "ತೀರ್ಥಹಳ್ಳಿಲಿ ಕುವೆಂಪು ಹುಟ್ಟಿದ್ರು!" ಎಂಬ ಸಾಲಿದೆ, ವಾಸ್ತವವಾಗಿ ಕುವೆಂಪು ಹುಟ್ಟಿದ್ದು ಕೊಪ್ಪದ ಹಿರೆಕೊಡುಗೆಯಲ್ಲಿ, ಅದವರ ತಾಯಿಯ ತವರು. ಕುಪ್ಪಳ್ಳಿ ಏನಿದ್ದರೂ ಅಪ್ಪನ ಮನೆ ಅಷ್ಟೆ!. ಅವರು ಸಿಕ್ಕಾಗ 'ಕುವೆಂಪು ಅಷ್ಟೇ ಅಲ್ಲ ಸಾರ್ ನಮ್ಮಂತ ಬಡಪಾಯಿಗಳೂ ತೀರ್ಥಹಳ್ಳಿಯಲ್ಲೆ ಹುಟ್ಟಿದೀವಿ?!' ಅಂತ ತಮಾಷೆ ಮಾಡ್ತಿರ್ತೀನಿ. ಸಿನೆಮಾ ಅಂದ ಕೂಡಲೆ ಹೇಳಲೆ ಬೇಕಾದ ಮುಖ್ಯ ಸಂಗತಿಯೊಂದಿದೆ. ಇತ್ತೀಚಿಗೆ ಕನ್ನಡ ಚಿತ್ರರಂಗದ ಪಾಲಿಗೆ ತೀರ್ಥಹಳ್ಳಿ ಮಾವನ ಮನೆಯಂತಾಗಿ ಹೋಗಿದೆ. ಪ್ರತಿ ನಾಲ್ಕನೆ ಕನ್ನಡ ಚಿತ್ರದ ಚಿತ್ರೀಕರಣಕ್ಕಾಗಿ ಗಾಂಧಿನಗರದ ಮಂದಿ ಇಲ್ಲಿಗೆ ಕ್ಯಾಮರಾದೊಂದಿಗೆ ದೌಡಾಯಿಸುತ್ತಾರೆ. ಆಗುಂಬೆ, ಕವಲೇದುರ್ಗ, ಭೀಮನಕಟ್ಟೆ, ಹುಂಚ, ಕುಂದಾದ್ರಿ ಬೆಟ್ಟ, ಬರ್ಕಣ, ಒನಕೆ ಅಬ್ಬಿ, ಗಾಜನೂರಿನ ಹಿನ್ನೀರು, ಚಕ್ರಾ-ಯಡೂರಿನ ವಾರಾಹಿ ಹಿನ್ನೀರು, ಮಂಡಗದ್ದೆ ಪಕ್ಷಿಧಾಮ, ಸಕ್ರೆಬೈಲಿನ ಹಿನ್ನೀರ ಬಳಿಯಿರುವ ಆನೆ ಬಿಡಾರ , ಸಿಬ್ಬಲಗುಡ್ಡೆಯ ಗಣಪತಿ ದೇವಸ್ಥಾನದ ಮೀನಿನ ಹಿಂಡು, ಕುಪ್ಪಳಿ, ತೀರ್ಥಹಳ್ಳಿ ಪೇಟೆಯೊಳಗಿನ ಗ್ರಾಮೀಣ ಸೊಗಡು ಹೀಗೆ ಸುಂದರ ಹಿನ್ನೆಲೆಗೆ ಕೊರತೆ ಇಲ್ಲದಿರುವುದರಿಂದ ಸಿಕ್ಕ ಸಿಕ್ಕ ಸಿನೆಮಾಗಳ ಪತ್ರಿಕಾಗೋಷ್ಠಿಗಳಲ್ಲಿ ಕೊಡುವ ಪ್ರೆಸ್ ನೋಟ್'ಗಳು ಖಡ್ಡಾಯ ಎಂಬಂತೆ ಹೊರಾಂಗಣಗಳ ಪಟ್ಟಿಯಲ್ಲಿ ತೀರ್ಥಹಳ್ಳಿಯ ಹೆಸರನ್ನೂ ಒಳಗೊಂಡಿರುತ್ತವೆ.

ನನಗೆ ನೆನಪಿರುವಂತೆ ಆಕಸ್ಮಿಕ, ಕಾದಂಬರಿ, ಫಣಿಯಮ್ಮ, ನಿಲುಕದ ನಕ್ಷತ್ರ, ಮುಂಗಾರಿನ ಮಿಂಚು, ಉಲ್ಟಾಪಲ್ಟ, ಮಸಣದ ಮಕ್ಕಳು,ಸಂಭ್ರಮ, ಪ್ರೇಮ-ಪ್ರೇಮ-ಪ್ರೇಮ, ಸಂಸ್ಕಾರ, ಘಟಶ್ರಾದ್ಧ, ನಿನದೆ ನೆನಪು, ಕಾನೂರು ಹೆಗ್ಗಡತಿ, ಮೌನಿ, ಕಲ್ಯಾಣ ಮಂಟಪ, ಮೈ ಆಟೋಗ್ರಾಫ್, ಮಿಸ್ ಕ್ಯಾಲಿಫೋರ್ನಿಯ, ಚಿಲಿಪಿಲಿ ಹಕ್ಕಿಗಳು, ಕರಾವಳಿ ಹುಡುಗಿ, ಮಠ, ಮತದಾನ, ಮತ್ತೆ ಮುಂಗಾರು, ಗಾಳಿಪಟ, ಮಾತಾಡ್ ಮಾತಾಡ್ ಮಲ್ಲಿಗೆ, ಹೊಂಗನಸು, ನಮ್ ಏರಿಯಾಲ್ ಒಂದಿನ, ಲಿಫ್ಟ್ ಕೊಡ್ಲಾ?, ಪರಮಾತ್ಮ. ಶ್ರೀರಾಮದಾಸು (ತೆಲುಗು) ಹೀಗೆ ಅನೇಕ ಚಿತ್ರಗಳಿಗೆ ಇಲ್ಲಿ ರೀಲು ಸುತ್ತಲಾಗಿದೆ.

ಈ ಊರಿನ ಚಹರೆಪಟ್ಟಿ ವಿವರಿಸೋದು ಸುಲಭ, ನಿಮ್ಮ ಅಂಗಯ್ಯನ್ನೊಮ್ಮೆ ನೋಡಿ ಕೊಂಡರಾಯಿತು! ಥೇಟ್ ಅದರ ಪಡಿಯಚ್ಚೆ ನಮ್ಮ ತೀರ್ಥಹಳ್ಳಿ. ದಕ್ಷಿಣಕ್ಕೆ ಒಂದೆಡೆ ಊರನ್ನೂ, ಇನ್ನೊಂದೆಡೆ ಕುರುವಳ್ಳಿಯ ಕಲ್ಲು ಕ್ವಾರಿಗಳನ್ನೂ ಬಳಸಿಕೊಂಡು ತುಂಗೆ ಹರಿಯುತ್ತಾಳೆ, ಕೊಪ್ಪದ ಕಡೆಯಿಂದ ಬರುವವರಿಗೆ ಪುರ ಪ್ರವೇಶಕ್ಕೆ ಕಮಾನುಸೇತುವೆಯಿದೆ (ಹಿಂದೆ ಇಲ್ಲಿ ಕಲ್ಲುಸಾರ ಮಾತ್ರವಿತ್ತು,ಹೊಳೆದಾಟುವವರು ದೋಣಿಯನ್ನೇ ಆಶ್ರಯಿಸಬೇಕಿತ್ತು, ಕುವೆಂಪು-ಎಂ ಕೆ ಇಂದಿರಾ ಕಾದಂಬರಿಗಳಲ್ಲಿ ಇದರ ಚಿತ್ರಣ ನೀವು ಓದಿರಬಹುದು. ಸಾರ=ಕಾಲಲ್ಲಿ ಮಾತ್ರ ಸಾಗಬಹುದಾದ ಕಿರುಸೇತುವೆ). ಊರ ಮಧ್ಯ ಇರುವ ಮುಖ್ಯರಸ್ತೆ ಮೌಲಾನ ಅಬ್ದುಲ್ ಕಲಾಂ ಆಜಾದ್ ಎಂಬ ಮೈಲುದ್ದದ ಹೆಸರಿನ ಹೃಸ್ವವೋ ಇಲ್ಲಾ ಚಂದ್ರಶೇಖರ್ ಆಜಾದ್ ಎನ್ನುವ ಹೆಸರಿನ ಕಿರು ರೂಪವೋ ಸ್ಪಷ್ಟವಿಲ್ಲ, ಜನ ಮಾತ್ರ ಅದನ್ನು ಕರಿಯೋದು ಆಜಾದ್ ರಸ್ತೆ ಎಂದೆ.


ಪೂರ್ವಕ್ಕೆ ಆನಂದಗಿರಿ ಬೆಟ್ಟವಿದೆ. ಇದನ್ನ ಬಳಸಿಕೊಂಡು ಶಿವಮೊಗ್ಗ ರಸ್ತೆ ಊರನ್ನ ಕೂಡುತ್ತದೆ. ಪಶ್ಚಿಮಕ್ಕೆ ಯಡೇಹಳ್ಳಿ ಕೆರೆ ಇಲ್ಲಿಂದ ಸಾಗರ ರಸ್ತೆ ಸೀಬಿನಕೆರೆ ಹಾಗು ಕೋಳಿಕಾಲುಗುಡ್ಡ ಬಳಸಿ ಊರನ್ನು ಮುಟ್ಟುತ್ತದೆ. ವಾಯುವ್ಯಕ್ಕೆ ಸಿದ್ದೇಶ್ವರಗುಡ್ಡ ಇದರ ಪಕ್ಕದ ಹೆದ್ದಾರಿ ಮಂಗಳೂರಿಗೆ ಊರಿನ ಕೊಂಡಿ. ಎಡವಿದರೊಂದು ದೇವಸ್ಥಾನ ಸಿಗುವ ರಥಬೀದಿ, ಹಿಂದೊಮ್ಮೆ ಛತ್ರಗಳಿದ್ದಿರಬಹುದಾದ ಛತ್ರಕೆರಿ, ಊರಿಗೊಬ್ಬಳೇ ಪದ್ಮಾವತಿಯಂತಿದ್ದ ಏಕೈಕ ಬಡಾವಣೆ ಸೊಪ್ಪು ಗುಡ್ಡೆ ಅಲ್ಲಿನ ಸಂತೆ ಮೈದಾನ ಪಕ್ಕದ ಸಾಬರ ಕೇರಿ, ಮಸೀದಿ ರಸ್ತೆಯ ಅಂಚಿಗೆ ಸೆಯಿಂಟ್ ಮೇರಿಸ್ ಇಗರ್ಜಿ, ಹೊಸತಾಗಿ ವಿಸ್ತಾರವಾದ ಬೆಟ್ಟಮಕ್ಕಿ, ಊರ ಆರಂಭದ ಕುಶಾವತಿ (ಪಕ್ಕದಲ್ಲೇ ನಾಡ್ತಿ ಹಾಗು ಕುಶಾವತಿ ಹಳ್ಳಗಳ ನೀರ ಸೆಲೆಯಿದೆ), ಬಾಳೆಬೈಲಿನ ಹೊರವಿಸ್ತಾರ ಇವಿಷ್ಟು ಸೇರಿ ತೀರ್ಥಹಳ್ಳಿ ಪೇಟೆ ರೂಪುಗೊಂಡಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಸಂಸ್ಥಾನದ ಗಡಿಯಾಗಿದ್ದ (ಘಟ್ಟದ ಕೆಳಗಿನ ದಕ್ಷಿಣ ಕನ್ನಡ ಆಗ ಮದರಾಸು ಪ್ರಾಂತ್ಯದ ಭಾಗವಾಗಿತ್ತು) ತೀರ್ಥಹಳ್ಳಿಗೆ ಒಡೆಯರ ಕೃಪಾದೃಷ್ಟಿ ಆಗಲೆ ಹರಿದಿತ್ತು. ಸರ್ ಎಂ ವಿಶ್ವೇಶ್ವರಯ್ಯನವರ ಮುತುವರ್ಜಿಯಿಂದ ಆ ಕಾಲದಲ್ಲಿಯೇ ತುಂಗೆಗೆ ಅಡ್ಡಲಾಗಿ ಕಮಾನು ಸೇತುವೆ ಕಟ್ಟಲಾಯಿತು, ಏಳು ದಶಕದ ಹಿಂದೆ ಕಟ್ಟಲಾಗಿರುವ ಆ ಸೇತುವೆ ಇವತ್ತಿಗೂ ಗಟ್ಟಿಮುಟ್ಟಾಗಿದೆ. ಮೂರೆದಿನಕ್ಕೆ ಬೀಳುವ ಇಂದಿನ ಸರಕಾರಿ ಸೇತುವೆಗಳ 'ಸಾಧನೆ'ಗಳನ್ನು ಇದು ಇಂದಿಗೂ ನಾಚಿಸುತ್ತಿದೆ. ಈಗಿನ ಕಾಲದಲ್ಲಾದರೆ ನಿಶ್ಚಿತ ಮೊತ್ತಕ್ಕಿಂತ ಹೆಚ್ಚುವರಿ ಅನುದಾನಕ್ಕಾಗಿ ಬಾಯಿ ಬಿಡುತ್ತಿದ್ದರೇನೋ? ಆದರೆ ಆಗಿನ ವಿಶ್ವೇಶ್ವರಯ್ಯನವರ ಕಾಮಗಾರಿಯಲ್ಲಿ ಸೇತುವೆ ಕಟ್ಟಿಯೂ ಕಚ್ಚಾ ಸಾಮಗ್ರಿ ಮಿಕ್ಕಿತು! ಉಳಿದಿದ್ದನ್ನು ಒಂದು ನೆಲೆ ಮುಟ್ಟಿಸಲು ಅವರು ಕಂಡುಕೊಂಡದ್ದೆ ಬೆಟ್ಟಕ್ಕೆ ಕಲ್ಲು ಹೊರುವ ಉಪಾಯ!


ಅಂದು ಅವರು ಬೆಟ್ಟಕ್ಕೆ ಕಲ್ಲು ಹೊತ್ತದ್ದು ಖಂಡಿತ ನಿರುಪಯೋಗವಾಗಲಿಲ್ಲ.ಇಂದಿಗೂ ತೀರ್ಥಹಳ್ಳಿಯ ಯಾವುದೆ ಭಾಗದಿಂದಲಾದರೂ ಅನಂದಗಿರಿಯತ್ತ ಕಣ್ಣು ಹಾಯಿಸಿದರೆ ಅದರ ತುತ್ತತುದಿಯಲ್ಲಿ ಟೋಪಿಯಂತೆ ಕಾಣುವ ಸುಂದರ ಮಂಟಪವೊಂದನ್ನು ನೀವು ಕಾಣಬಹುದು. ಅದರ ತಪ್ಪಲಿನಲ್ಲಿರುವ ತುಂಗಾ ಕಾಲೇಜಿನ ದೂರದ ನೋಟವೂ ಸೇರಿ ಅದು ಮನೋಹರವಾಗಿ ಕಾಣುತ್ತೆ. ಸ್ಥಳಿಯರ ಬಾಯಲ್ಲಿ 'ವಿಶ್ವೇಶ್ವರ ಮಂಟಪ' ಎಂದೇ ಕರೆಸಿ ಕೊಳ್ಳುವ ಈ ಮಂಟಪಕ್ಕೆ ಎಲ್ಲಾದರೂ ಮಾತನಾಡಲು ಬಾಯಿದ್ದಿದ್ದರೆ ತನ್ನ ಆಸುಪಾಸಿನಲ್ಲಿ ಈ ತನಕ ನಡೆದಿರುವ ತುಂಗಾ ಕಾಲೇಜಿನ ತಲೆಮಾರುಗಳ ವಿದ್ಯಾರ್ಥಿ, ವಿದಾರ್ಥಿನಿಯರ ನಡುವಿನ ಹಲವು ಹತ್ತು ಪ್ರೇಮ ಕಲಾಪ-ಪ್ರಣಯ ಪ್ರಕರಣಗಳನ್ನು ಅದು ಇದ್ದ ಬದ್ದವರಿಗೆಲ್ಲ ಹೇಳಿ ಅನೇಕರ ಮನೆ ಹಾಳು ಮಾಡುತ್ತಿತ್ತು! ತಾಲೂಕಿನ ಕೇಂದ್ರದಲ್ಲಿರುವ ಸರಕಾರಿ ಆಸ್ಪತ್ರೆಯೂ ಮೈಸೂರಿನ ಒಡೆಯರ ಕೊಡುಗೆಯೆ, ಇದನ್ನು ಇಲ್ಲಿಯ ಜನ ಬಾಯ್ತುಂಬ 'ಜಯಚಾಮ ರಾಜೇಂದ್ರ ಆಸ್ಪತ್ರೆ' ಅನ್ನುತ್ತರೆಯೇ ಹೊರತು ಸರಕಾರಿ ಆಸ್ಪತ್ರೆ ಎನ್ನರು. ಸೇತುವೆಗೂ "ರಾಜ ಬಹದ್ದೂರ್ ಜಯಚಾಮರಾಜೇಂದ್ರ ಒಡೆಯರ್ ಸೇತುವೆ" ಎನ್ನುವ ಹೆಸರಿಡಲಾಗಿದೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ನಡುವೆ ಕೊಂಡಿಯನ್ನ ಕಳೆದ ಏಳು ದಶಕಗಳಿಂದ ಈ ಕಮಾನು ಸೇತುವೆ ಬೆಸೆದಿದೆ, ಇನ್ನೂ ಅನುದಿನವೂ ಬೆಸೆಯುತ್ತಲೇ ಇದೆ.

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು