ಮೊದಲ ಶಾಲೆ....
ವೈರುಧ್ಯಗಳೆ ಹಾಸು ಹೊಕ್ಕಾಗಿದ್ದ ನನ್ನ ಬಾಲ್ಯವನ್ನು ನೆನೆಯುವಾಗ ಕೆಲವೊಮ್ಮೆ ನನಗೆ ವಿಸ್ಮಯವಾಗುತ್ತದೆ. ಕಾಲ್ಚೆಂಡಿನಂತೆ ಅತ್ತಿಂದಿತ್ತ, ಒಂದೂರಿನಿಂದ ಇನ್ನೊಂದೂರಿಗೆ ಉರುಳುರುಳಿ ಇನ್ಯಾರದೋ ಆಣತಿಯಂತೆ ಹೋಗುವಾಗ ಮನ ಗೊಂದಲದ ಗೂಡಾಗುತ್ತಿತ್ತು. ತೀರ್ಥಹಳ್ಳಿಯಲ್ಲಿ ಪರಮ ಸತ್ಯವೆಂದು ನಂಬಿದ್ದ ಹಲವಾರು ಸಂಗತಿಗಳು ಕಾರ್ಕಳದಲ್ಲಿ ಸುಳ್ಳಾಗಿ ಸಾಬೀತಾದವು. ಕಾರ್ಕಳದಲ್ಲಿ ಕಲಿತು ಅರಿತ ಸಂಗತಿಗಳು ಮಂಗಳೂರಿನಲ್ಲಿ ನಿಸ್ಸಂಶಯವಾಗಿ ಒಪ್ಪಲಸಾಧ್ಯವಾಗಿ ಪರಿಣಮಿಸಿದವು. ಶಾಲೆಯಲ್ಲಿ ಕಲಿತ ಗೋವಿನ ಹಾಡಿಗೆ ಬೀದಿಯಲ್ಲಿ ಕಾಸಿನ ಕಿಮ್ಮತ್ತು ಸಿಗಲಿಲ್ಲ. ಮೊದಮೊದಲಿಗೆ ನಾನು ಒಳ್ಳೆಯವರು ಅಂದುಕೊಂಡಿದ್ದ ಮಂದಿ ಹೃದಯ ಹೀನರಾಗಿದ್ದು ಜೀವನಾನುಭವದ ಹಾದಿಯಲ್ಲಿ ವೇದ್ಯವಾದರೆ ಯಾರನ್ನ ಭಾವನೆಗಳ ಬೆಲೆ ಅರಿಯದವರು ಅಂದು ಕೊಂಡಿದ್ದೆನೋ ಅವರು ವಿಶಾಲ ಮನಸಿನವರಾಗಿ ಗೋಚರಿಸಿದರು. ಒಟ್ಟಿನಲ್ಲಿ ಶಾಲೆಯಲ್ಲಿ ಕಲಿತದ್ದಕ್ಕೂ - ವಾಸ್ತವದಲ್ಲಿ ಅನುಸರಿಸುವುದಕ್ಕೂ ಈ ವಿಸ್ಮಯ ಜಗತ್ತು ಅಜಗಜಾಂತರವನ್ನಿಟ್ಟುಕೊಂಡಿದೆ. ತತ್ವಗಳನ್ನ ಹೇಳುವ ಮಂದಿ ಅದನ್ನ ಪಾಲಿಸೋದು ಕಡಿಮೆ. ತಾತ್ವಿಕವಾಗಿ ಬದುಕನ್ನ ಕಟ್ಟಿಕೊಂಡ ಪುಣ್ಯಾತ್ಮರು ಒಣ ತತ್ವಗಳನ್ನ ಭೋದಿಸುತ್ತಾ ವ್ಯಥಾ ಕಾಲಹರಣ ಮಾಡುವುದಿಲ್ಲ. ಅವರೊಂಥರಾ ಸರ್ವಜ್ಞ ಮೂರ್ತಿ ಅಂದಂತೆ " ಆಡದೆ ಮಾಡುವ ರೂಢಿಯೊಳಗುತ್ತಮರು " .
ತಾಯಿಯ ಒತ್ತಾಯದ ಕಲಿಕೆಯ ಹೇರುವಿಕೆ ನನ್ನ ಮೇಲೆರಗಿದಾಗ ನನಗೆ ಬಹುಷಃ ಎರಡು ವರ್ಷ ಪ್ರಾಯವಾಗಿದ್ದೀತು. ನನ್ನ ಮೊದಲ ಕಲಿಕೆಯ ಆರಂಭ ನಿಸ್ಸಂಶಯವಾಗಿ ಅಮ್ಮ ಹೇಳಿ ಕೊಟ್ಟ ಪುಟ್ಟಪುಟ್ಟ ಶ್ಲೋಕಗಳನ್ನ ಬಾಯಿಪಾಠ ಮಾಡಿಕೊಂಡು ಕಣ್ಣುಮುಚ್ಚಿ ಪುಟ್ಟಪುಟ್ಟ ಕೈ ಜೋಡಿಸಿಕೊಂಡು ಮನೆಯ ದೇವರ ಪಟಗಳ ಮುಂದೆ ನಿಂತು ತೊದಲು ತೊದಲಾಗಿ ಉಚ್ಛರಿಸುವ ಮೂಲಕ ಆಯಿತು ಅನ್ನಿಸುತ್ತೆ. ರೋಟರಿ ಶಿಶುವಿಹಾರಕ್ಕೆ ಹೋಗುತ್ತಿದ್ದಾಗ ಉದ್ದ ಜಡೆಯ ಟೀಚರ್ ರಾಗವಾಗಿ ಪದ್ಯಗಳನ್ನ ನಮ್ಮಿಂದ ಹೇಳಿಸಿ ಅದರ ಲಯಕ್ಕೆ ತಕ್ಕಂತೆ ಕೈಯಾಡಿಸಿ ನರ್ತಿಸುವಂತೆ ಹೇಳಿ ಕೊಡುತ್ತಿದ್ದರು. ಪ್ರಾಸ ಬದ್ಧವಾದ ಶಿಶು ಗೀತೆಗಳು ನನ್ನಲ್ಲಿ ಥಟ್ಟನೆ ಆಸಕ್ತಿ ಹುಟ್ಟಿಸಿದವು. "ಸೀನನೊಬ್ಬ ಸೀನನು" "ರೊಟ್ಟಿ ಅಂಗಡಿ ಕಿಟ್ಟಪ್ಪ" "ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೆ" "ಒಂದು ಎರಡು ಬಾಳೆಲೆ ಹರಡು" ಹೀಗೆ ಚಂದದ, ನನ್ನ ಮಟ್ಟಿಗೆ ಹೊಸತಾಗಿದ್ದ ಯಾವ್ಯಾವುದೋ ಪದಗಳೇ ತುಂಬಿ ತುಳುಕಾಡುತ್ತಿರುವಂತೆ ಕಾಣುತ್ತಿದ್ದ ಅನೇಕ ಶಿಶುಗೀತೆಗಳನ್ನ ಮನೆಯಲ್ಲೂ ಎಲ್ಲೆಂದರಲ್ಲಿ ಅಭಿನಯಿಸಿ ಹಾಡಿ ತೋರಿಸುವಷ್ಟು ನಾನು ಅವುಗಳ ಅಭಿಮಾನಿಯಾಗಿ ಹೋದೆ.
ಅಮ್ಮನ ಮುಂದೆ ಅಡುಗೆ ಮನೆಯಲ್ಲೋ, ಕೊಟ್ಟಿಗೆಯಲ್ಲಿ ಮಾವಂದಿರೊಂದಿಗೆ ದನಗಳ ಸಗಣಿ ಎತ್ತುವಾಗಲೋ, ಚಿಕ್ಕಮ್ಮಂದಿರೊಂದಿಗೆ ಮನೆಯ ಮುಂದೆ ಅಥವಾ ಅಂಗಳದಲ್ಲಿ ಸಗಣಿ ಸಾರಿಸಿ ರಂಗೋಲಿ ಹಾಕುವಾಗಲೋ, ಗೊಮ್ಮಟನ ಅವತಾರದಲ್ಲಿ ಸ್ನಾನವೆಂಬ ಜೀವಾವಧಿ ಶಿಕ್ಷೆಗೆ (?) ಒಳಗಾಗುವಾಗಲೋ ನನ್ನ ಸಾಭಿನಯ "ರೊಟ್ಟಿಯಂಗಡಿ ಕಿಟ್ಟಪ್ಪ" ಯಾವುದೆ ಬಾಹ್ಯ ಪ್ರಚೋದನೆಯಿಲ್ಲದೆ ಪ್ರತ್ಯಕ್ಷವಾಗಿ ಬಿಡುತ್ತಿದ್ದ! ಹೀಗೆ ಹಾಡಿ ನಲಿಯುವ ಅತ್ಯಾಸಕ್ತಿ ಮನೆ ಮಂದಿಗೆಲ್ಲ ಕಿರಿಕಿರಿ ಹುಟ್ಟಿಸುವಷ್ಟು ಹೆಚ್ಚಾದಾಗ ಇದರಿಂದ ಪೀಡಿತರಾದ ಪದ್ಯ ಸಂತ್ರಸ್ತರೆಲ್ಲ ಈ ನನ್ನ ಇನ್ಸ್ಟಂಟ್ ಅಭಿನಯ ಚಾತುರ್ಯಕ್ಕೆ ತಕ್ಕ ಚಿಕಿತ್ಸೆ ಮಾಡಲು ತಯ್ಯಾರಾಗಿ ಬಿಟ್ಟರು. ಅದರ ಒಂದು ಉಪಕ್ರಮವಾಗಿ ನನ್ನ ಹಿಡಿದಿಡಲಾಗದ ಉತ್ಸಾಹಕ್ಕೆ ಅಕ್ಷರ ಕಲಿಕೆಯ ಕಡಿವಾಣ ತೊಡಿಸಲಾಯಿತು. ಶಿಶು ವಿಹಾರದಲ್ಲಿ ನಮಗೆ ಆಡಿ-ಹಾಡಲಷ್ಟೆ ಕಲಿಸಿ ಕೊಡುತ್ತಿದ್ದು ವಿವಿಧ ವರ್ಣಮಾಲೆಗಳ ಚಾರ್ಟನ್ನ ಅಲ್ಲಿನ ಗೋಡೆಗೆ ತೂಗು ಹಾಕಿದ್ದರೂ ಇನ್ನೂ ಶಿಶುಗಳೇ ಆಗಿದ್ದ ನಮಗ್ಯಾರಿಗೂ ಅಕ್ಷರಾಭ್ಯಾಸ ಮಾಡಿಸುತ್ತಿರಲಿಲ್ಲ. ಅಲ್ಲಿ ಮೌಖಿಕ ಕಲಿಕೆಗೆ ಹೆಚ್ಚು ಮಹತ್ವ ಕೊಟ್ಟಿದ್ದರು. ಎಳೆಯರಿಗೆ ರೂಪಿಸಿದ್ದ ಇಂತಹ ಕಲಿಕೆಯ ವಿಧಾನವನ್ನ ನಾನು ಇಂದು ಅದರ ನಿಖರತೆಗಾಗಿ ಮುಕ್ತ ಕಂಠದಿಂದ ಪ್ರಶಂಸಿಸುತ್ತೇನೆ.
ನನಗೆ ಮೊದಲ ಅಕ್ಷರ ಅಭ್ಯಾಸ ಎಲ್ಲಿ ಆಗಿದ್ದು ಅಂತ ನೆನಪಾಗ್ತಾ ಇಲ್ಲ. ಶೃಂಗೇರಿ ಅಥವಾ ಹೊರನಾಡಿನಲ್ಲಿ ಅಜ್ಜ ಮಾಡಿಸಿದ್ದಿರಬಹುದು. ಒಂದು ಸಾರಿ ಅಜ್ಜ ನನ್ನೊಬ್ಬನನ್ನೇ ಅವೆರಡೂ ಜಾಗಗಳಿಗೆ ಕರೆದುಕೊಂಡು ಹೋದದ್ದು, ನಾವು ಹೊರನಾಡಿನಲ್ಲಿ ಒಂದು ರಾತ್ರೆ ತಂಗಿದ್ದು ಎಲ್ಲಾ ಮಾಸಲು ಮಾಸಲಾಗಿ ನೆನಪಿದೆ. ಆದರೆ ಮನೆಯಲ್ಲಿ ಮಾತ್ರ ಅಕ್ಷರ ಕಲಿತ ನನ್ನ ಮುಂದಿನ ದಿನಗಳು ಭೀಕರವಾಗಿದ್ದವು. ಓದಲು ಕಲಿತ ತಪ್ಪಿಗೆ ಓದಿದ್ದನ್ನ ಸ್ಲೇಟಿನ ಮೇಲೆ ತಿದ್ದಿತಿದ್ದಿ ಬರೆಯ ಬೇಕಾಯಿತು! ಬರೆದ ತಪ್ಪಿಗೆ ಅಕ್ಷರಗಳನ್ನ ಕೂಡಿಸಿ ಕೂಡಿಸಿ ಉಚ್ಚರಿಸಲು ಕಲಿಯ ಬೇಕಾಯಿತು. ಹೀಗೆ ಒಂದೊಂದೇ ಕಷ್ಟಗಳ ಸರಮಾಲೆ ನಂಗೆ ಅರಿವಿಲ್ಲದಂತೆ ನನ್ನ ಕುತ್ತಿಗೆಗೆ ಸುತ್ತಿ ಕೊಳ್ಳ ತೊಡಗಿತು. ಅಕ್ಷರ ಕಲಿತ ಮೊದಮೊದಲಿಗೆ ನಾನು ಹೊಸ ಅಗಸ ಒದ್ದೆ ಗೋಣಿಯನ್ನ ಎತ್ತೆತ್ತಿ ಒಗೆದಂತೆ ಸಿಕ್ಕ ಸಿಕ್ಕ ಖಾಲಿ ಜಾಗಗಳಲ್ಲೆಲ್ಲ ಕೈಗೆ ಸಿಕ್ಕ ಮಸಿ ಇದ್ದಲು, ಕೊಟ್ಟಿಗೆಯ ದನಗಳ ಸಗಣಿ, ಚಿಕ್ಕಮಂದಿರ ಸೀಮೆಸುಣ್ಣ, ಮಾವಂದಿರ ಪೆನ್ನಿನ ಶಾಯಿ ಇದರಲ್ಲೆಲ್ಲ ತೋಚಿದಂತೆ ಗೀಚಿ ನನ್ನ ಅಕ್ಷರ ಜ್ಞಾನದ ಪುರಾವೆಯನ್ನ ಒದಗಿಸತೊಡಗಿದೆ! ಯಾರೊಬ್ಬರೂ ಕೇಳಿರದ ಈ ನನ್ನ ಪ್ರತಿಭಾ ಪ್ರದರ್ಶನದಿಂದ ಹಾನಿಗೊಳಗಾಗಿ "ನೊಂದವರಿಂದ", ಆದ ಅನಾಹುತಗಳನ್ನ ಕಂಡು ಕೆರಳಿದ ಸಂಬಂಧಪಟ್ಟವರಿಂದ ನನ್ನ ಅನಪೇಕ್ಷಿತ ಪ್ರತಿಭಾ ಪ್ರದರ್ಶನಕ್ಕೆ ಬೈಗುಳ, ಗುದ್ದುಗಳ ಸಮೃದ್ಧ ಪಾರಿತೋಷಕಗಳನ್ನೂ ಕಾಲಕಾಲಕ್ಕೆ ಮುಫತ್ತಾಗಿ ಪಡೆದೆ, ಆದರೆ ಬೀಗಲಿಲ್ಲ! .
ಈ ಕಲಿಕೆಯ ಆಸಕ್ತಿ ಹುಚ್ಚು ಹೊಳೆಯಂತೆ ಹರಿಯೋದನ್ನ ತಡೆದು ನನ್ನ ಭೀಕರ ಪ್ರತಿಭಾ ಪ್ರವಾಹಕ್ಕೆ ಒಂದು ಒಡ್ಡು ಕಟ್ಟುವ ತೀರ್ಮಾನಕ್ಕೆ ಬಾಧಿತ ಮನೆಮಂದಿಯೆಲ್ಲ ಕೊನೆಗೂ ಬಂದೆ ಬಿಟ್ಟರು. ಕೇವಲ ಸೀಮಿತ ಕಲಿಕೆಯ ಅವಕಾಶಗಳಿದ್ದ ರೋಟರಿ ಶಿಶುವಿಹಾರದಿಂದ ನನ್ನನ್ನು ಬಿಡಿಸಿ ಹೊತ್ತು ಭಾರತಿ ಶಿಶು ವಿಹಾರಕ್ಕೆ ಸೇರಿಸಲಾಯಿತು. ಕೆಟ್ಟ ಮೇಲೆ ಬುದ್ದಿ ಬಂದವನಂತೆ ನನಗೆ ಆಗ ನನ್ನ ಅತ್ಯುತ್ಸಾಹದಿಂದಾದ ಅಪಾಯಗಳೆಲ್ಲ ಆರಿವಿಗೆ ಬರತೊಡಗಿದವು. ಅಲ್ಲಿ ಮನಸಿಗೆ ತೋಚುವಂತೆ ಎಲ್ಲೆಲ್ಲೋ ಗೀಚುವ, ಸಿಕ್ಕಾಪಟ್ಟೆ ಹಾಡಿ ಎಲ್ಲೆಂದರಲ್ಲಿ ಸಂಗೀತದ ಕೊಲೆ ಮಾಡುವ, ಮನಸು ಬಂದಾಗಲೆಲ್ಲ ಮಣ್ಣಾಟವಾಡುವ , ಹುಟ್ಟು ಬರಹ ದ್ವೇಷಿಯಂತಾಡುವ ನನ್ನ ಕಾಡುಪಾಪದಂತಹ ಅನಾಗರೀಕ ನಡುವಳಿಕೆಗಳಿಗೆಲ್ಲ ಕಡೆಗೂ ನಾನೊಂದು ಪೂರ್ಣವಿರಾಮ ಇಡಲೇಬೇಕಾಯಿತು. ಮನಸ್ಸೇ ಇಲ್ಲದಿದ್ದರೂ ಶಿಸ್ತನ್ನ ಕಲಿತು ಆದಿ ಮಾನವನಿಂದ ಆಧುನಿಕ ಮಾನವನಾಗುವ ಈ ಹಟಯೋಗದ ಕಲಿಕೆ ನನಗೆ ಆಗೆಲ್ಲ ಇಷ್ಟವೇ ಆಗುತ್ತಿರಲಿಲ್ಲ. ನಮ್ಮಂತ ವಿಕಾಸದ ಹಂತದಲ್ಲಿದ್ದ ಅಡವಿಗರನ್ನು "ರಿಪೇರಿ" ಮಾಡಲು "ಕೋಲುಪೂಜಾ" ಪ್ರಾವಿಣ್ಯತೆ ರೂಪಿಸಿಕೊಳ್ಳೋದು ಅಲ್ಲಿನ ಎಲ್ಲಾ ಮಾತಾಜಿಯವರಿಗೆ ಅನಿವಾರ್ಯವೇ ಆಗಿತ್ತೆನ್ನಿ.
"ಯಾರಿಗೂ ಹೆದರದವ ಕೋಲಿಗೆ ಹೆದರುತ್ತಾನೆ!" ಅನ್ನೋದನ್ನ ತಮ್ಮ ಅನುಭವದಿಂದ ದೃಢ ಪಡಿಸಿಕೊಂಡಿದ್ದ ಅಲ್ಲಿನ ಮಾತಾಜಿಗಳಿಗೆ ನನ್ನಂತ ಯಕಶ್ಚಿತ್ ಪುಂಡನನ್ನು ಹೆಡೆಮುರಿಗೆ ಕಟ್ಟುವುದು ಅಷ್ಟು ಕಷ್ಟವಾಗಲೇ ಇಲ್ಲ! ಬಿಲಾಸಿಲ್ಲದ ಕಾಡು ಕುದುರೆಯಂತೆ ಸೊಕ್ಕಿ ಹೋಗಿದ್ದ ನಾನು ಅಲ್ಲಿದ್ದ ನಾಗರಬೆತ್ತದ ಪುಂಗಿಗೆ ನಿರ್ವಾಹವಿಲ್ಲದೆ ಅನಿವಾರ್ಯವಾಗಿ ( ಕೇವಲ ಅನಿವಾರ್ಯವಾಗಿ! ) ಕಷ್ಟಾಪಟ್ಟು ಹೆಡೆಯಾಡಿಸತೊಡಗಿದೆ. ಅಲ್ಲಿ ತಿದ್ದಿತೀಡಿದ ನನ್ನ ನಡುವಳಿಕೆಗಳು ಹಾಗೂ ಸುಪ್ತ ಪ್ರತಿಭೆಗಳು ಕ್ರಮೇಣ ಒಂದು ಹದಕ್ಕೆ ಬಂದವು. ಅಪ್ಪಟ ದೇಸಿ ಶೈಲಿಯಲ್ಲಿ ಶಿಕ್ಷಣವನ್ನ ಕೊಡುವ ಸಂಕಲ್ಪದೊಂದಿಗೆ "ರಾಷ್ಟ್ರೋತ್ತಾನ ಪರಿಷತ್ತು" ತನ್ನ ಶೈಕ್ಷಣಿಕ ಯೋಜನೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ, ಭದ್ರಾವತಿ ಹಾಗೂ ತೀರ್ಥಹಳ್ಳಿಯಲ್ಲಿ ಆರಂಬಿಸಿದ್ದ ಶಾಲೆಗಳೊಂದಿಗೆ ಈ ಮಾದರಿಯ ಪೂರ್ವ ಪ್ರಾಥಮಿಕ ತರಗತಿಗಳನ್ನೊಳಗೊಂಡ ಶಿಶುವಿಹಾರಗಳನ್ನೂ ಸ್ಥಾಪಿಸಲಾಗಿತ್ತು. ಅಲ್ಲಿ ಮಾತೃಭಾಷೆಗೆ ಹೆಚ್ಚು ಮಹತ್ವ ಕೊಡಲಾಗುತ್ತಿದ್ದು ನಮ್ಮ ಶಿಕ್ಷಣದ ಮಾಧ್ಯಮವೂ ಕನ್ನಡವೆ ಆಗಿತ್ತು. ನನ್ನ ಮುಂದಿನ ಶಿಕ್ಷಣವನ್ನೂ ಅದರದೆ ಅಂಗ ಸಂಸ್ಥೆಯಾದ ಸೇವಾಭಾರತಿಯಲ್ಲಿ ನಾನು ಪಡೆದೆ ಅಲ್ಲಿ ಕನ್ನಡ ಮಾಧ್ಯಮವನ್ನಷ್ಟೇ ಅಳವಡಿಸಿಕೊಂಡಿದ್ದರು. ಇಂದೂ ಸಹ ಅದೆ ನಿಯಮ ಬದ್ಧತೆ ಅಲ್ಲಿ ಇದ್ದಿರಬಹುದು ಎಂದು ಆಶಿಸುತ್ತೇನೆ.
ನನ್ನಂತಹ ಕಿವಿಗೆ ಗಾಳಿ ಹೊಕ್ಕ ಕೋಣಕ್ಕೆ ಅಲ್ಲಿನ ಕಟ್ಟುನಿಟ್ಟಾದ ಶಿಸ್ತು, ಸರಿಯಾದ ಮೂಗುದಾರವನ್ನೆ ಹಾಕಿದವು. ಬೆಳಗ್ಯೆ ನನ್ನಂತಹ ಒಂದಿಪ್ಪತ್ತು-ಮೂವತ್ತು ಸಮವಯಸ್ಕ ಪುಂಡು ಪೋಕರಿಗಳನ್ನೆಲ್ಲ ಸ್ನಾನ ಮಾಡಿಸಿ ಅಪ್ಪ ಅಮ್ಮಂದಿರು ಅಂಗಿ ಚೆಡ್ಡಿ ಹಾಕಿ ಬೆನ್ನ ಮೇಲೊಂದು ಪುಟ್ಟ ಚೀಲ ಏರಿಸಿ ತಯಾರು ಮಾಡಿ ಬಿಟ್ಟರೆ ಶಾರದಕ್ಕ ಬಂದು ಮೇಯುವ ದನ ಹೊಡೆದುಕೊಂಡು ಹೋಗುವಂತೆ ಕೈಯಲ್ಲೊಂದು ಕೋಲು ಹಿಡಿದುಕೊಂಡು ಜಾಗ್ರತೆಯಿಂದ ರಸ್ತೆ ದಾಟಿಸುತ್ತಾ, ಅಗತ್ಯ ಬಿದ್ದಲ್ಲಿ ಒಂದೇಟು ಹಾಕುತ್ತಾ, ಕೂಗುತ್ತಾ ಶಿಶುವಿಹಾರದ ಹಾದಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದರು. ನಮ್ಮ ಬೀದಿಯ ಕೊನೆಯಲ್ಲಿ ಈ ತುಡುಗು ಮಂದೆ ಬಂದಾಗ ಏನೂ ಅರಿಯದ ಮಳ್ಳನಂತೆ ನಾನೂ ಈ ಗುಂಪಿನಲ್ಲಿ ಸೇರಿ ಹೋಗುತ್ತಿದ್ದೆ. ಶಾಲೆಗೆ ಹೋಗಲು ಮನಸ್ಸಿಲ್ಲದೆ ಅತ್ತು ಅತ್ತು ಕಣ್ಣು ಕೆಂಪಾದವರನ್ನು, ಸುರಿಯುತ್ತಿರುವ ಸಿಂಬಳವನ್ನ ಮೂಗಿನಿಂದ ತೆಗೆದು ಒರೆಸಿಕೊಳ್ಳಬೇಕು ಎಂದು ಅರಿಯದ ಅಮಾಯಕರನ್ನು, ಇನ್ನೂ ಬಾಯಲ್ಲಿ ಅಮ್ಮ ತುರುಕಿದ್ದ ಅದೇನನ್ನೂ ಚಪ್ಪರಿಸುತ್ತಾ ಇನ್ನುಳಿದವರ ಅಸೂಯಪರ ದೃಷ್ಟಿಗೆ ಸಿಕ್ಕಿ ಹಾಕಿ ಕೊಂಡವರನ್ನು ಹೀಗೆ ಚಿತ್ರ ವಿಚಿತ್ರ ವೇಷದವರನ್ನ ಆ ಹಿಂಡಿನಲ್ಲಿ ನಿತ್ಯವೂ ಕಾಣಬಹುದಾಗಿತ್ತು.
ನಮ್ಮ ಈ ಮೆರವಣಿಗೆ ಊರನ ಮುಖ್ಯಬೀದಿಯಾದ ಆಜಾದ್ ರಸ್ತೆಯನ್ನ ಕೊಪ್ಪ ಸರ್ಕಲ್ಲಿನಲ್ಲಿ ದಾಟಿ ಅಲ್ಲಿಂದ ಒಂದು ಫರ್ಲಾಂಗ್ ದೂರದಲ್ಲಿ ಕೊಪ್ಪ ರಸ್ತೆಯಲ್ಲಿದ್ದ ಶಿಶುವಿಹಾರ ಮುಟ್ಟುವಾಗ ಶಾರದಕ್ಕನ ಗಂಟಲು ಕಿರುಚಿ ಕಿರುಚಿ ಮುಂದೆ ಧ್ವನಿಯನ್ನೇ ಎಬ್ಬಿಸಲಾಗದಷ್ಟು ಕ್ಷೀಣವಾಗಿ ಬಿದ್ದು ಹೋಗಿರುತ್ತಿತ್ತು. ಹಳ್ಳಿಯಲ್ಲಿ ನಿತ್ಯ ಬೆಳಗ್ಯೆ ದನ ಮೇಯಿಸುವ ಗೊಲ್ಲರು ಪುಂಡು ದನಗಳನ್ನು ಗೋಮಾಳಕ್ಕೆ ಮೆಯಿಸೋಕಂತ ಗುಂಪಿನಲ್ಲಿ ಕೂಡಿಸಿ ಹೊಡೆದುಕೊಂಡು ಹೋಗುತ್ತಿದ್ದುದನ್ನು ನೀವು ಎಂದಾದರೂ ಕಂಡಿದ್ದೆ ಹೌದಾದಲ್ಲಿ ಈ ದೃಶ್ಯದ ವೈಭವ ನಿಮ್ಮ ಗ್ರಹಿಕೆಗೆ ನಿಲುಕೀತು. ಇಂತಹದ್ದೆ ಇನ್ನೆರಡು ಮಂದೆಗಳನ್ನ ಛತ್ರಕೇರಿ ಹಾಗೂ ರಥಬೀದಿಯ ದಿಕ್ಕಿನಿಂದ ಒಬ್ಬರು, ಕಟ್ಟೆ ಚನ್ನಕೇಶವನ ಬೀದಿ ಹಾಗೂ ಕುಶಾವತಿಗಳಿಂದ ಇನ್ನೊಬ್ಬರು ಕೂಡಿಸಿಕೊಂಡು ಬಂದು ದನಗಳ ಹಟ್ಟಿಗೆ ಹೋಲಿಕೆಯಲ್ಲಿ ಏನೇನೂ ಕಡಿಮೆಯಿರದಿದ್ದ ಶಿಶುವಿಹಾರದಲ್ಲಿ ನಮ್ಮೊಂದಿಗೆ ಒಟ್ಟುತ್ತಿದ್ದರು. ಒಮ್ಮೆ ಅಲ್ಲಿಗೆ ಸೇರಿದವರೆಂದರೆ ನಮ್ಮ ನಾನಾ ಅವತಾರದ ಮಂಗಾಟಗಳೆಲ್ಲ ಆಯಾಚಿತವಾಗಿ ಸೂಚಾನೆಯ ಆವಶ್ಯಕತೆಯೆ ಇಲ್ಲದೆ ನಿಂತವೆಂದೆ ಅರ್ಥ. ಇಂದಿರಾ ಮಾತಾಜಿಯ ಬಿಡುಗಣ್ಣುಗಳ ಹಾಗೂ ಅವರ ಕೈಯಲ್ಲಿ ಸದಾ ಇರುತ್ತಿದ್ದ ಕಿರುಬೆತ್ತದ ಸದುದ್ದೇಶದ ಅರಿವು ಅದಾಗಲೇ ಆಗಿರುತ್ತಿದ್ದರಿಂದ ನಮ್ಮ ಇಲ್ಲದ ಬಾಲಗಳನ್ನೆಲ್ಲ ಅಲ್ಲಲ್ಲೆ ಮುದುಡಿಕೊಂಡು ಒತ್ತಾಯದ ಸಭ್ಯತೆಯನ್ನ ನಟಿಸುತ್ತಾ ಕೆಳಗೆ ನೆಲದಲ್ಲಿ ಹಾಕಿರುತ್ತಿದ್ದ ಉದ್ದನೆಯ ಮರದ ಮಣೆಯಲ್ಲಿ ಕೈ ಕಟ್ಟಿಕೊಂಡು ಕುಕ್ಕುರು ಬಡಿಯುತ್ತಿದ್ದೆವು. ನನ್ನ "ಉದಯ ವರ್ಗ" (ಎಲ್'ಕೆಜಿ) ಹಾಗೂ "ಅರುಣ ವರ್ಗ" (ಯು'ಕೆಜಿ) ಅಭ್ಯಾಸ ನಡೆದದ್ದು ಅಲ್ಲಿಯೆ. ಅದಾಗಲೇ ರೋಟರಿ ಶಿಶುವಿಹಾರದಲ್ಲಿ ಒಂದು ವರ್ಷ ಆಡಿ ಹಾಡಿ ನಲಿದಿದ್ದರಿಂದ ಇಲ್ಲಿನ "ಉಷಾ ವರ್ಗ" ( ಕಿಂಟರ್ ಗಾರ್ಡನ್) ನಿಂದ ನನಗೆ ವಿನಾಯತಿ ಸಿಕ್ಕಿತ್ತು. ಮುಂದಿನ ಎರಡು ವರ್ಷಗಳಲ್ಲಿ ನಾನು ಅಲ್ಲಿದ್ದು ಕಲಿತದ್ದು ಬಹಳ.
,
Comments
Post a Comment