ಶ್ರೀ ಶಿಕಾರಿಪುರ ಹರಿಹರೇಶ್ವರ ಅವರಿಗೆ ಕನ್ನಡ ಸಾಹಿತ್ಯರಂಗದ ಭಾವಪೂರ್ಣ ಶ್ರದ್ಧಾಂಜಲಿ
ಕಣ್ಮರೆಯಾದ ಒಬ್ಬ ಅಚ್ಚ ಕನ್ನಡಿಗ ಎಸ್.ಕೆ. ಹರಿಹರೇಶ್ವರ
ನಮ್ಮ ಮಾನ್ಯ ಗೆಳೆಯರಾದ ಶ್ರೀ ಎಸ್.ಕೆ. ಹರಿಹರೇಶ್ವರರು ಕಳೆದ ಜುಲೈ ೨೩ರಂದು ಮೈಸೂರಿನಲ್ಲಿ ತೀರಿಹೋದ ಸುದ್ದಿ ಅವರ ‘ಅಮೆರಿಕನ್ನಡ’ ಬಂಧುಗಳೆಲ್ಲರಿಗೂ ಅಪಾರವಾದ ವ್ಯಥೆ ಉಂಟುಮಾಡಿದೆ. ಅಮೆರಿಕದಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆಗಾಗಿಯೇ ಸ್ಥಾಪಿತವಾಗಿರುವ ಕನ್ನಡ ಸಾಹಿತ್ಯ ರಂಗದ ಸದಸ್ಯರೆಲ್ಲರ ಪರವಾಗಿ ಶ್ರೀ ಹರಿಹರೇಶ್ವರರ ಪತ್ನಿ ಶ್ರೀಮತಿ ನಾಗಲಕ್ಷ್ಮಿಯವರಿಗೂ, ಅವರ ಮಕ್ಕಳಿಗೂ, ಆಪ್ತ ಬಂಧುಗಳಿಗೂ ನಮ್ಮ ಸಂತಾಪವನ್ನು ಈ ಮೂಲಕ ತಿಳಿಸಬಯಸುತ್ತೇನೆ.೧೯೭೦, ೮೦ರ ದಶಕಗಳಲ್ಲಿ ಇಲ್ಲಿ ಬಂದು ನೆಲಸಿದ ಬಹು ಮಂದಿ ಕನ್ನಡಿಗರಿಗೆ ಹರಿಹರೇಶ್ವರರ ಪರಿಚಯ ಇದ್ದೇ ಇರುತ್ತದೆ. ಹರಿಹರೇಶ್ವರರು ಈ ನೆಲದಲ್ಲಿ ಕನ್ನಡಕ್ಕಾಗಿ ಮಾಡಿದ ಕೆಲಸಗಳು ಹಲವಾರು. ಅವರು ಮೊದಲು ಈ ದೇಶಕ್ಕೆ ಬಂದು ನೆಲಸಿದಾಗ ಪೆನ್ಸಿಲ್ವೇನಿಯ ಮತ್ತು ನ್ಯೂ ಜೆರ್ಸಿ ಪ್ರದೇಶದಲ್ಲಿದ್ದರು. ಆ ಸಮಯದಲ್ಲಿ ಇಲ್ಲಿನ ತ್ರಿವೇಣಿ ಕನ್ನಡ ಸಂಘದ ಅಧ್ಯಕ್ಷರಾಗಿದ್ದು ಅನೇಕ ಉತ್ತಮ ಕಾರ್ಯಕ್ರಮಗಳನ್ನು ನಡೆಸಿದ್ದರು. ಒಂದು ಕನ್ನಡ ಸಮ್ಮೇಳನವನ್ನೂ ನಡೆಸಿದ್ದರು. ಆದರೆ ಇವೆಲ್ಲಕ್ಕಿಂತ ಬಹುಶಃ ಜನ ಅವರನ್ನು ನೆನೆಯುವುದು ಅವರು ಸ್ಥಾಪಿಸಿದ ‘ಅಮೆರಿಕನ್ನಡ’ ಪತ್ರಿಕೆಗಾಗಿ. ಅಮೆರಿಕದ ಕನ್ನಡ ಸಮಾಜದ ಬೆಳವಣಿಗೆಯಲ್ಲಿ ಇದೊಂದು ಮುಖ್ಯವಾದ ಮೈಲಿಗಲ್ಲು.
ಅಮೆರಿಕನ್ನಡ ಒಂದು ವಿಶಿಷ್ಟವಾದ ಕೊಡುಗೆ ಎಂಬುದರಲ್ಲಿ ಎರಡು ಅಭಿಪ್ರಾಯಗಳಿಲ್ಲ. ಅದು ಮೊದಲು ಹೊರಬಂದಾಗ ಅದಕ್ಕೆ ಸಿಕ್ಕ ಸ್ವಾಗತ ಅಭೂತಪೂರ್ವವಾಗಿತ್ತು. ದೇಶಾದ್ಯಂತ ನಾನಾ ಕನ್ನಡ ಸಂಘಗಳಲ್ಲಿ ಅದರ ಲೋಕಾರ್ಪಣೆಯಾಯಿತು. ಹರಿಹರೇಶ್ವರ ದಂಪತಿಗಳು ಹತ್ತಾರು ಕಡೆ ಹೋಗಿ ಆ ಸಮಾರಂಭಗಳಲ್ಲಿ ಭಾಗವಹಿಸಿದರು.
ಈ ಪತ್ರಿಕೆಗೆ ಮುಂಚೆ ಇಲ್ಲಿ ಕನ್ನಡ ಪತ್ರಿಕೆಗಳು ಇರಲೇ ಇಲ್ಲ ಎನ್ನಲಾಗದು. ಅನೇಕ ಕನ್ನಡ ಸಂಘಗಳು ಪತ್ರಿಕೆಗಳನ್ನು ಹೊರತರುತ್ತಿದ್ದರು. ಇದು ಸ್ತುತ್ಯವಾದ ಕೆಲಸವೇ ಆದರೂ ಅವು ಆಯಾ ಸಂಘಗಳ ಸದಸ್ಯವರ್ಗಕ್ಕೆ ಮಾತ್ರ ಸೀಮಿತವಾಗಿದ್ದುದರಿಂದಲೂ, ಅವು ಹೆಚ್ಚಾಗಿ ಕೈಬರಹದ ಪತ್ರಿಕೆಗಳಾಗಿರುತ್ತಿದ್ದುದರಿಂದಲೂ ಅವುಗಳ ವ್ಯಾಪ್ತಿ ತೀರ ಸಂಕುಚಿತವಾಗಿತ್ತಿತ್ತು. ಅದಕ್ಕಿಂತ ಮುಖ್ಯವಾಗಿ ಅವು ಮುಖ್ಯವಾಗಿ ವಾರ್ತಾವಾಹಿನಿಗಳಾಗಿರುತ್ತಿದ್ದವು. ಅವಕ್ಕೆ ಯಾವ ಸಾಹಿತ್ಯಕ ಉದ್ದೇಶಗಳೂ ಇರುತ್ತಿರಲಿಲ್ಲ. ಅದರಿಂದಾಗಿ ಅವಕ್ಕೆ ಇಲ್ಲಿನ ಕನ್ನಡ ಜನತೆಯನ್ನು ಸಂಘಟಿಸುವ ಸಾಮರ್ಥ್ಯವಿರಲಿಲ್ಲ. ಆದರೆ ಅಮೆರಿಕನ್ನಡದ ದೃಷ್ಟಿ ಮೊದಲಿಂದಲೂ ಇಡೀ ಅಮೆರಿಕವನ್ನು ಒಳಗೊಂಡಿತ್ತು. ಅದರ ದೃಷ್ಟಿ ಸಾಂಸ್ಕೃತಿಕವೂ. ಸಾಹಿತ್ಯಾತ್ಮಕವೂ ಆಗಿತ್ತು. ಅದೊಂದು ಧೀರ ನಿಲುವು. ಸಣ್ಣಸಣ್ಣ ಕಕೂನುಗಳಿಂದ ಹೊರಬಂದು ಕನ್ನಡ ಇಡೀ ದೇಶವನ್ನು ನೋಡತೊಡಗಿತ್ತು. ಇದೊಂದು ಗಮನಾರ್ಹ ಸಂಗತಿ.
ಅಮೆರಿಕನ್ನಡ ಇಲ್ಲಿನ ನಮ್ಮ ಕನ್ನಡಿಗರನೇಕರಲ್ಲಿ ಹುದುಗಿದ್ದ ಸಾಹಿತ್ಯ ಸಾಮರ್ಥ್ಯವನ್ನು ಹೊರಗೆಳೆಯಿತು. ಅವರ ಬರವಣಿಗೆಗೆ ಒಂದು ಒಳ್ಳೆಯ ವೇದಿಕೆಯನ್ನು ಕಲ್ಪಿಸಿತು. ದೇಶದ ನಾನಾಕಡೆಗಳಿಂದ ಸಾಹಿತ್ಯಾಸಕ್ತರು ಅದರಲ್ಲಿ ಬರೆಯತೊಡಗಿದರು. ಅಂದು ಅದರಲ್ಲಿ ಬರೆಯತೊಡಗಿದ ಅನೇಕರು ಇಂದು ಇಲ್ಲಿನ ಪ್ರಮುಖ ಲೇಖಕರಾಗಿದ್ದಾರೆ. ಈ ರೀತಿ ಲೇಖಕರನ್ನು ಬೆಳಸುವ ಕಾರ್ಯ ಸಾಮಾನ್ಯವಲ್ಲ.
ಅಮೆರಿಕನ್ನಡದ ಇನ್ನೊಂದು ವೈಶಿಷ್ಟ್ಯ ಅದು ಮೊದಲಿಂದಲೂ ಕಂಪ್ಯೂಟರ್ ಬಳಕೆಯ ಬಗ್ಗೆ ಗಮನವಿತ್ತದ್ದು. ಅಂದರೆ ಎಲ್ಲ ಕೆಲಸವೂ ಗಣಕಯಂತ್ರದ ಸಹಾಯದಿಂದಲೇ ನಡೆಯುತ್ತಿತ್ತೆಂದಲ್ಲ. ಹಲವು ಪುಟಗಳನ್ನಾದರೂ ಕಂಪ್ಯೂಟರ್ ಸಹಾಯದಿಂದ ತಯಾರಿಸುತ್ತಿದ್ದರು. ಆಗಿನ್ನೂ ಬರಹ, ನುಡಿ ಇತ್ಯಾದಿ ಸಾಫ಼್ಟ್‌ವೇರ್ ಸಿದ್ಧವಾಗಿರಲಿಲ್ಲ. ಕೆಲವು ಪುಟಗಳನ್ನು ಕರ್ನಾಟಕದಲ್ಲಿ ಮುದ್ರಿಸಿ ತರಿಸುತ್ತಿದ್ದರು. ಹೀಗೆ ಪುಟಗಳಲ್ಲಿ ಏಕರೂಪತೆ (uniformity) ಇಲ್ಲದಿದ್ದರೂ, ಒಟ್ಟಿನಲ್ಲಿ ಪತ್ರಿಕೆ ಆಕರ್ಷಕವಾಗಿಯೇ ಇರುತ್ತಿತ್ತು.
ಅಮೆರಿಕನ್ನಡದಲ್ಲಿ ವಿಷಯವೈವಿಧ್ಯತೆಯಿತ್ತು. ಸಂಪಾದಕೀಯ, ಸಾಹಿತ್ಯಕ, ವೈಚಾರಿಕ, ಹಾಸ್ಯ ಲೇಖನಗಳು, ಕವಿತೆಗಳು, ಪುಸ್ತಕ ವಿಮರ್ಶೆಗಳಿಂದ ಹಿಡಿದು ನಾಗಲಕ್ಷ್ಮಿಯವರು ಮಕ್ಕಳಿಗಾಗಿ ತಯಾರಿಸುತ್ತಿದ್ದ ಕನ್ನಡ ಪಾಠಗಳವರೆಗೂ ವಿಷಯದ ಹರವಿತ್ತು, ಸಮೃದ್ಧಿಯಿತ್ತು. ಸಂಪಾದಕರ ಸಾಮರ್ಥ್ಯಕ್ಕೆ, ಅವರ ಸೃಜನಶೀಲತೆಗೆ, ಕಲ್ಪನಾಸಾಮರ್ಥ್ಯಕ್ಕೆ ಅಲ್ಲಿ ಏನೂ ಕೊರತೆಯಿರಲಿಲ್ಲ. ಅವರಿಗಿದ್ದ ಕೊರತೆ ಮುಖ್ಯವಾಗಿ ಆರ್ಥಿಕವಾದದ್ದು. ಪತ್ರಿಕೆ ಬೆಳೆಯುತ್ತಿದ್ದಂತೆ ಸಾಕಷ್ಟು ದ್ರವ್ಯಸಹಾಯ ಇಲ್ಲದೇಹೋದದ್ದು. ಆ ಬಗ್ಗೆ ಅವರು ಸಾಕಷ್ಟು ಎಚ್ಚರಿಕೆ ವಹಿಸದೇಹೋದದ್ದು ವಿಷಾದಕರ. ಮೊದಮೊದಲು ಲೇಖಕರಿಗೆ ಒಂದು ಸಣ್ಣ ಗೌರವಧನವನ್ನು ಸಹ ಕೊಡುತ್ತಿದ್ದರು. (ಇದು ತುಂಬ professional ಆದ ಪದ್ಧತಿ. ಕರ್ನಾಟಕದಲ್ಲೇ ಎಷ್ಟೋ ಘನ ಪತ್ರಿಕೆಗಳು ಇದನ್ನು ಆಚರಿಸುವುದಿಲ್ಲ.) ಅಥವ ಅದಕ್ಕೆ ಬದಲು ಕರ್ನಾಟಕದಿಂದ ತರಿಸಿದ ಪುಸ್ತಕಗಳನ್ನು ಕಳಿಸುತ್ತಿದ್ದರು. (ಇಂಥ ಒಂದು ಸಂದರ್ಭದಲ್ಲಿ ಅವರು ನನಗೆ ಕಳಿಸಿದ ಕನ್ನಡ ರತ್ನಕೋಶ (ಹಾ.ಮಾ. ನಾಯಕರು ಸಂಪಾದಿಸಿದ ಕನ್ನಡ-ಕನ್ನಡ ನಿಘಂಟು) ಈಗಲೂ ನನ್ನ ಬಳಿ ಇದೆ. ಅದನ್ನು ತೆರೆದಾಗೆಲ್ಲ ಹರಿಹರೇಶ್ವರರನ್ನು ನೆನೆಯುತ್ತೇನೆ.) ಅಮೆರಿಕನ್ನಡದ ನಿಲುಗಡೆಗೆ ಬಹುಶಃ ಜನಸಹಾಯವೂ ಅವರಿಗೆ ಸಾಹಷ್ಟು ಸಿಕ್ಕದೇಹೋಯಿತು ಎನ್ನಿಸುತ್ತದೆ. ಅವರು ಕೈಗೆತ್ತಿಕೊಂಡಿದ್ದ ಕೆಲಸಕ್ಕೆ ತುಂಬಾ ಶ್ರದ್ಧೆ ಬೇಕು, ಸಹನೆ, ನಿಷ್ಠೆ, ಪರಿಶ್ರಮ ಬೇಕು. ಅವು ಸುಲಭವಾಗಿ ಸಿಕ್ಕುವ ವಸ್ತುಗಳಲ್ಲ. ಸುಮಾರು ಐದಾರು ವರ್ಷ ನಡೆದ ಆ ಪತ್ರಿಕೆಯನ್ನು ಅವರು ಈ ಎಲ್ಲ ಕಾರಣಗಳಿಂದಾಗಿ ನಿಲ್ಲಿಸಬೇಕಾಯಿತು. ಪತ್ರಿಕೆ ಇಂದು ನಮ್ಮ ಕಣ್ಣೆದುರಿಗಿಲ್ಲ, ನಿಜ, ಆದರೆ ಅದರ ನೆನಪು ನಮ್ಮೆಲ್ಲರ ಮನಸ್ಸಿನಲ್ಲಿ ಉಳಿಯುವುದು ಖಂಡಿತ.
ಈ ಎಲ್ಲ ಕೆಲಸದಲ್ಲೂ ಅವರಿಗೆ ಸಹವರ್ತಿನಿಯಾಗಿ ಅಷ್ಟೇ ಶ್ರದ್ಧೆಯಿಂದ ದುಡಿದವರು ಅವರ ಪತ್ನಿ ಶ್ರೀಮತಿ ನಾಗಲಕ್ಷ್ಮಿಯವರು. ಅವರಿಬ್ಬರನ್ನೂ ಕಂಡಾಗ ಅವರ ಮದುವೆಯಲ್ಲಿ ಸಪ್ತಪದಿ ನಡೆದಾಗ ‘ಈ ಮುಂದಿನ ಹೆಜ್ಜೆಯನ್ನು ನಾವು ಕನ್ನಡಕ್ಕಾಗಿ ಇಡೋಣ’ ಎಂದು ಹೇಳಿದ್ದರೇನೋ ಅನ್ನಿಸುತ್ತದೆ! ಡಾಕ್ಟರು, ಇಂಜಿನಿಯರು, ಅಥವಾ ಬ್ಯಾಂಕಿನ (ಈಗ ಈಟಿ/ಬೀಟಿ) ಕೆಲಸ ಇರುವವಳನ್ನೇ ಮದುವೆಯಾಗಬೇಕು ಎನ್ನುವ ಧೋರಣೆಯಿರುವ ಸಮಾಜದಲ್ಲಿ ಹರಿಹರೇಶ್ವರ ಕನ್ನಡ ಎಂ.ಎ. ಮಾಡಿದವಳನ್ನೇ ಮದುವೆಯಾಗುವ ಮನಸ್ಸುಮಾಡಿದ್ದರಂತೆ! ಅವರ ಮನಸ್ಸಿಗೆ, ಮನೋಧರ್ಮಕ್ಕೆ ತಕ್ಕವರೇ ದೊರಕಿದರು. ಅದು ಅವರ ಸುಕೃತ. ಇಲ್ಲಿ ನಾನೊಂದು ಸ್ವಂತ ವಿಷಯ ಹೇಳಿಕೊಳ್ಳೋಣವೆನಿಸುತ್ತದೆ, ತಪ್ಪು ತಿಳಿಯಬಾರದು. ನಾನೊಂದು ಲೇಖನ ಬರೆದು ಅಮೆರಿಕನ್ನಡಕ್ಕೆ ಕಳಿಸಿದ್ದೆ. ಅದನ್ನು ಓದಿ ಆ ದಂಪತಿಗಳಿಗೆ ಎಷ್ಟು ಸಂತೋಷವಾಗಿತ್ತೆಂದರೆ ಆ ದಿನ ಅವರು ಪಾಯಸದ ಅಡಿಗೆ ಮಾಡಿ ಉಂಡರಂತೆ. ಇದನ್ನು ನಾಗಲಕ್ಷ್ಮಿಯವರೇ ನನಗೆ ಹೇಳಿದ್ದು. ಜೊತೆಯ ಲೇಖಕನೊಬ್ಬನಿಗೆ ಮತ್ತೊಬ್ಬ ಕೊಡಬಹುದಾದ ಒಂದು ದೊಡ್ಡ ಸಂಭ್ರಮದ ಉಡುಗೊರೆ ಅದು. ಅದನ್ನು ಎಂದಿಗೂ ವಿಶ್ವಾಸದಿಂದ ನೆನೆಯುತ್ತೇನೆ.
ಹರಿಹರೇಶ್ವರ ಇಲ್ಲಿ ಬರುವವರೆಗೂ ಇಲ್ಲಿ ಕನ್ನಡ ಕೆಲಸ ಏನೂ ನಡೆಯುತ್ತಿರಲಿಲ್ಲ ಅಂದುಕೊಳ್ಳಬಾರದು ಎಂದು ಈ ಮೊದಲೇ ಸೂಚಿಸಿದ್ದೆ. ಅವರು ಬಂದಮೇಲೂ ಸಹ ಅನೇಕರು ಆ ಕೆಲಸ ಮಾಡುತ್ತಿದ್ದರು. ಆದರೆ ಹರಿಹರೇಶ್ವರರ ವೈಶಿಷ್ಟ್ಯವೆಂದರೆ ಅವರ ಕೆಲಸದಲ್ಲಿ ಕಾಣುತ್ತಿದ್ದ ಅಪರಿಮಿತ ಉತ್ಸಾಹ, ಅದಕ್ಕಿಂತ ಹೆಚ್ಚಾಗಿ ತೀವ್ರತೆ, ‘ಇದಕ್ಕೆ ಯಾಕಿನ್ನು ತಡ’ ಎನ್ನುವ ಆತುರ; ಜನರನ್ನು ಆಹ್ವಾನಿಸಿ, ಬೇಡಿ, ಕಾಡಿ, ಹುರಿದುಂಬಿಸಿ, ತಳ್ಳಿ – ಎಲ್ಲ ರೀತಿಯಲ್ಲೂ ಅವರ ಮನಸ್ಸನ್ನು ಕನ್ನಡದ ಕಡೆಗೆ ತಿರುಗಿಸುತ್ತಿದ್ದ ರೀತಿ. ಇಗೋ, ಕನ್ನಡ ನಮ್ಮ ಕಣ್ಣೆದುರಿಗಿದೆ, ಅದನ್ನು ನೋಡೋಣ ಬನ್ನಿ ಎನ್ನುವ ಅವರ ಧಾಟಿ. ಅವರು ವೃತ್ತಿಯಲ್ಲಿ ಇಂಜಿನಿಯರು. ದಿನದಲ್ಲಿ ಸುಮಾರು ಹತ್ತು-ಹನ್ನೊಂದು ಗಂಟೆ ಕಡ್ಡಾಯವಾಗಿ ಆ ವೃತ್ತಿಗೆ ಮೀಸಲಾಗಿಡಬೇಕಿತ್ತು. ಇನ್ನು ಉಳಿದ ಸಮಯದಲ್ಲಿ, ವಾರಾಂತ್ಯದಲ್ಲಿ (ಆಗಲೂ ಎಷ್ಟೋ ಸಲ ಆಫ಼ೀಸಿನ ಕರೆ ಬರುವುದುಂಟು) ಮಾತ್ರ ಮಾಡಲಾಗುತ್ತಿದ್ದ ಕೆಲಸ ಇದು. ಅಂಥ ಪರಿಸ್ಥಿತಿಯಲ್ಲಿ ಇಷ್ಟು ಕೆಲಸ ಅವರು ಸಾಧಿಸಿದ್ದು ಗಮನಾರ್ಹ. ಅವರ ತೀವ್ರತೆಗೆ ತಕ್ಕ ಆಸರೆ, ಪ್ರತಿಸ್ಪಂದನ ದೊರೆಯದಿದ್ದಾಗ ಅಥವಾ ನಿಧಾನವಾದಾಗ, ಅವರಿಗೆ ತಾಳ್ಮೆಗೆಡುತ್ತಿದ್ದುದೂ ಉಂಟು.
ಹರಿಹರೇಶ್ವರರು ತಮ್ಮ ವೃತ್ತಿಯನ್ನರಸಿ ಅಮೆರಿಕದ ಪೂರ್ವ, ಮಧ್ಯಮ, ಮತ್ತು ಪಶ್ಚಿಮ ಭಾಗಗಳಲ್ಲಿದ್ದವರು. ಹೋದೆಲ್ಲ ಕಡೆಯೂ ಅನೇಕ ಗೆಳೆಯರ ಸಂಪರ್ಕ, ಸ್ನೇಹ ಪ್ರೀತಿಗಳನ್ನು ಗಳಿಸಿಕೊಂಡವರು. ಪತ್ನಿ ನಾಗಲಕ್ಷ್ಮಿಯವರ ಸೂಚನೆಯಂತೆ ಭಾರತಕ್ಕೆ – ಮೈಸೂರಿಗೆ – ತೆರಳಿದ ಹರಿಹರೇಶ್ವರ ಅಲ್ಲಿಯೂ ತಮ್ಮ ಕೆಲಸಗಳನ್ನು ಮುಂದುವರೆಸುತ್ತಲೇ ಇದ್ದರು. ಅನೇಕ ಯುವಜನರು ಅವರ ಮಾರ್ಗದರ್ಶನದಿಂದ ಲಾಭ ಪಡೆದಿದ್ದಾರೆ. ಹೊಸ ಲೇಖಕರ ಪುಸ್ತಕಗಳನ್ನು ಒಂದಲ್ಲ ಹತ್ತು ಪ್ರತಿ ಕೊಂಡು, ಅವನ್ನು ತಮಗೆ ಬೇಕಾದವರಿಗೆಲ್ಲ ಹಂಚಿ ಆ ಲೇಖಕರನ್ನು ಪ್ರೋತ್ಸಾಹಿಸಿದ್ದಾರೆ. ಇಲ್ಲಿ ನಡೆಯುವ ಅಕ್ಕ ಸಮ್ಮೇಳನ ಮುಂತಾದ ವಿಶೇಷ ಕಾರ್ಯಕ್ರಮಗಳಲ್ಲಿ ಕೆಲವು ವೇಳೆ ಪ್ರತ್ಯಕ್ಷವಾಗಿ, ಬಹು ವೇಳೆ ಪರೋಕ್ಷವಾಗಿ ಭಾಗವಹಿಸಿದ್ದಾರೆ.
ನಮ್ಮಲ್ಲಿ ಕನ್ನಡ ಪ್ರೇಮ, ಉತ್ಸಾಹ, ಪಾಂಡಿತ್ಯ, ಕೈಂಕರ್ಯ ಇವುಗಳ ಮಾತು ಬಂದಾಗ ಸಾಮಾನ್ಯವಾಗಿ ನೆನಪಿಗೆ ಬರುವವರು ಜಿ. ಪಿ. ರಾಜರತ್ನಂ. ಹರಿಹರೇಶ್ವರರೂ ಅದೇ ಅಚ್ಚಿನವರು. ಜನ ಅವರಿಗೆ ಸಲ್ಲಿಸುತ್ತಿರುವ ಗೌರವವನ್ನು ಸಂಪೂರ್ಣವಾಗಿ ಅವರೇ ಗಳಿಸಿಕೊಂಡದ್ದು. ಹರಿಹರೇಶ್ವರ ಇನ್ನೂ ಬಹು ಕಾಲ ನಮ್ಮೊಂದಿಗಿರಬಹುದಿತ್ತು. ಆದರೆ ಮತ್ತೆ ಕನ್ನಡ ತಾಯ ಮಡಿಲಲ್ಲಿ ಮುಖವಿಟ್ಟು ಚಿರಶಾಂತಿ ಪಡೆಯುವ ಸೌಭಾಗ್ಯ ಅವರದಾಗಿತ್ತು. ಅದು ಅವರು ಪಡೆದುಕೊಂಡ ಧನ್ಯತೆಯೆಂದೇ ಅನ್ನಿಸುತ್ತದೆ.
ಎಚ್. ವೈ. ರಾಜಗೋಪಾಲ್
ಅಧ್ಯಕ್ಷ, ಕನ್ನಡ ಸಾಹಿತ್ಯ ರಂಗ
ಅಧ್ಯಕ್ಷ, ಕನ್ನಡ ಸಾಹಿತ್ಯ ರಂಗ
Comments
Post a Comment