ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Thursday, September 27, 2012

ವಲಿ..... (ಭಾಗ-1)

ಒಂದೊಮ್ಮೆ ಮೊಹಮದ್'ನ ಅಜ್ಜ ಅಬ್ದುಲ್ ಮುತ್ತಾಲಿಬ್ ಇಪ್ಪತ್ತನಾಲ್ಕು ವರ್ಷದ ತನ್ನ ಎಳೆಮಗ ಅಬ್ದುಲ್ಲಾನನ್ನು ಜೊತೆಗೆ ಕರೆದುಕೊಂಡು ದೂರದ ಸಂಬಂಧಿ ವಾಹಬ್'ನ ಮನೆಗೆ ಅತಿಥಿಯಾಗಿ ಹೋಗಬೇಕಾಯಿತು. ಅಲ್ಲಿ ವಹಾಬ್'ನ ಸಹೋದರಿಯ ಮಗಳಾದ ಅಮೀನಾಳನ್ನು ಕಂಡು ಸಂಪ್ರೀತನಾದ ಆತ ಆಕೆಯನ್ನು ತನ್ನ ಮಗನಿಗೆ ತಂದುಕೊಳ್ಳಲು ಪ್ರಸ್ತಾಪಿಸಿದ. ಅದಕ್ಕೊಪ್ಪಿದ ವಹಾಬ್ ಈ ವಿವಾಹ ನೆರವೇರಿಸಿಕೊಟ್ಟ, ಜೊತೆಗೆ ಅದಾಗಲೆ ಎಪ್ಪತ್ತರ ಆಸುಪಾಸಿನಲ್ಲಿದ್ದ ಮುತ್ತಾಲಿಬ್ ತಾನು ಸ್ವತಃ ವಹಾಬನ ಸ್ವಂತ ಮಗಳಾದ ಹಲಾಹಳನ್ನು ವಿವಾಹವಾದ! ತಂದೆ-ಮಕ್ಕಳಿಬ್ಬರೂ ಅಕ್ಕ-ತಂಗಿಯರನ್ನೆ ಮದುವೆಯಾದ ನಂತರ ಕೆಲಕಾಲ ಅಲ್ಲಿಯೆ ನೆಲಸಿದರು. ಅಮೀನ ಗರ್ಭವತಿಯಾದಳು. ಅದೇ ಸಮಯಕ್ಕೆ ಆಕೆಯ ಪತಿ ಅಬ್ದುಲ್ಲಾ ವ್ಯಾಪಾರದ ನಿಮಿತ್ತ ಸಿರಿಯಾದ ಕಡೆ ಸಾಗಬೇಕಾಯಿತು. ದುರಾದೃಷ್ಟವಶಾತ್ ಆತ ಅಲ್ಲಿಂದ ಮರಳುವಾಗ ಅನಾರೋಗ್ಯಕ್ಕೆ ತುತ್ತಾಗಿ ಅಸುನೀಗಿದ. ಮಗನ ಸಾವಿನ ಸುದ್ದಿ ಮುತ್ತಾಲಿಬನನ್ನು ಬಹುವಾಗಿ ಕಾಡಿಸಿತು. ಆತ ತನ್ನೊಂದಿಗೆ ಉಳಿದಿದ್ದ ಇನ್ನೊಬ್ಬ ಮಗನನ್ನು ಮುಂದಿನ ಉತ್ತರಕ್ರಿಯೆಗಳಿಗಾಗಿ ಮದೀನಕ್ಕೆ ಕಳುಹಿಸಿದ. ಆತ ಮದೀನ ತಲುಪಲು ತಿಂಗಳೆ ತಗುಲಿತು. ಅಲ್ಲಿ ಅಬ್ದುಲ್ಲ ಮರಣ ಹೊಂದುವಾಗ ಕೇವಲ ಐದು ಒಂಟೆಗಳನ್ನೂ, ಕೆಲವು ಮೇಕೆಗಳನ್ನೂ ಹಾಗೂ ಓರ್ವ ಗುಲಾಮಳನ್ನಷ್ಟೆ ಬಿಟ್ಟುಹೋಗಿದ್ದ. ಕ್ರಿಸ್ತಶಕ 570ರ ಅಗೊಸ್ತು 20ರಂದು ಮಹಮದ್'ನಿಗೆ ಜನ್ಮ ನೀಡುವಾಗ ಅಮೀನಳ ಪಾಲಿಗೆ ಬಂದ ಆಸ್ತಿಯೆಂದರೆ ಇವಿಷ್ಟೆ. ಮಗುವಿನ ಜನನದ ಸುದ್ದಿ ಅರಿತ ಮಾವ ಮುತ್ತಾಲಿಬ್ ಬಂದು ಮೊಮ್ಮಗನನ್ನು ಮುದ್ದಾಡಿ ಕಾಬಾಕ್ಕೆ ಮಗುವನ್ನೊಯ್ದು, ದೇವರಿಗೆ ಕೃತಜ್ಞತೆ ಸಲ್ಲಿಸಿ ಅಲ್ಲಿಯೆ ಕಂದನಿಗೆ 'ಮಹಮದ್' ಎಂದು ನಾಮಕರಣ ಮಾಡಿಬಿಟ್ಟ (ಅರಬ್ಬಿಯಲ್ಲಿ ಮಹಮದ್ ಎಂದರೆ ಕೊಂಡಾಡುವ ಎನ್ನುವ ಅರ್ಥ ಬರುತ್ತದೆ). ಮಹಮದ್ ಹುಟ್ಟಿದ ಆ ವರ್ಷ ಅರಬ್ಬಿಯನ್ ಪಂಚಾಗದ ಪ್ರಕಾರ ಆನೆಯ ವರ್ಷವಾಗಿತ್ತು. ಅರೇಬಿಯಾದ ಉತ್ತಮ ಕುಲದವರ ವಾಡಿಕೆಯಂತೆ ಹುಟ್ಟಿದ ಮಗುವಿಗೆ ದಾದಿಯಿಂದ ಮೊಲೆಯೂಡಿಸುವ ವ್ಯವಸ್ಥೆ ಮಾಡಲಾಯಿತು. ಇದಕ್ಕಾಗಿ ಥುವೈಬಾ ಎಂಬ ಗುಲಾಮಳ ಕೈಗೆ ಮಗುವನ್ನ ದಾಟಿಸಲಾಯಿತು. ಸ್ವಲ್ಪ ಸಮಯದ ನಂತರ ಹಲೀಮಾ ಎಂಬ ಇನ್ನೊಬ್ಬ ದಾದಿಯನ್ನೂ ಅದಕ್ಕಾಗಿ ನೇಮಿಸಿಕೊಳ್ಳಲಾಯಿತು. 'ಬೆನ್ ಸಾದ್' ಬುಡಕಟ್ಟಿನವಳಾದ ಈ ದಾದಿಯ ಎದೆಹಾಲು ಕುಡಿದು ಬೆಳೆದ ಮೊಹಮದ್ ಐದು ವರ್ಷ ಪ್ರಾಯದವನಾದ. ಮರುಭೂಮಿಯ ಭೀಕರ ವಾತಾವರಣದಲ್ಲೂ ಮಗುವಿನ ಆರೋಗ್ಯ ಸ್ಥಿರವಾಗಿರಲಿ ಎನ್ನುವ ಕಾರಣದಿಂದ ತಾಯಿ ಅಮೀನಾ ಈ ವ್ಯವಸ್ಥೆ ಮಾಡಿದ್ದಳು. ಆರನೆ ವಯಸ್ಸಿನಲ್ಲಿ ಮಗುವನ್ನ ತನ್ನೊಂದಿಗೆ ಬಂಧುಗಳಿಗೆ ತೋರಿಸಲು ಅಮೀನಾ ಮದೀನಕ್ಕೆ ಕರೆದೊಯ್ದಳು. ಅಲ್ಲಿ ಗಂಡನ ಮನೆ ಹಾಗು ಆತನ ಸಮಾಧಿಯ ದರ್ಶನವನ್ನ ಮಗುವಿಗೆ ಮಾಡಿಸಿದಳು. ಒಂದು ತಿಂಗಳು ಅಲ್ಲಿಯೆ ಉಳಿದು ಮರುಪಯಣಕ್ಕಾಗಿ ಮಗು ಹಾಗು ಗುಲಾಮಳಾದ ಲುಮ್'ಐಮನಳೊಂದಿಗೆ ಒಂಟೆಯೇರಿದ ಅಮೀನಾ ವಾತಾವರಣದ ವೈಪರೀತ್ಯದಿಂದ ತೀವ್ರ ಅಸ್ವಸ್ಥಲಾಗಿ ನಡುದಾರಿಯಲ್ಲೆ ಮರಣಿಸಿದಳು. ಆಕೆ ಅಸುನೀಗಿದ 'ಅಲ್-ಅಬ್ಬಾ'ದಲ್ಲಿಯೆ ಆಕೆಯನ್ನ ಮಣ್ಣು ಮಾಡಲಾಯಿತು. ಹೀಗೆ ಎಳೆಯ ಪ್ರಾಯದಲ್ಲಿಯೆ ಮಹಮದ್ ತಬ್ಬಲಿಯಾಗಬೇಕಾಯಿತು. ಗುಲಾಮಳಾದ ಲುಮ್-ಐಮನ್ ಮೆಕ್ಕಾಗೆ ಮಗುವನ್ನು ಕರೆದುಕೊಂಡು ಹೋದಳು. ಮುಂದೆ ಆಕೆಯೆ ಮಹಮದ್'ನ ಸಾಕುತಾಯಿಯಾಗಿ ದೇಖಾರೇಕಿ ನೋಡಿಕೊಂಡು ಬೆಳಸಿದಳು. ಅದರ ಖರ್ಚನ್ನೆಲ್ಲ ತಾತ ಅಬ್ದುಲ್ ಮುತ್ತಾಲಿಬ್ ವಹಿಸಿಕೊಂಡ. ಅದಾಗಲೆ ಎಂಬತ್ತು ವರ್ಷದ ಆಸುಪಾಸಿನಲ್ಲಿದ್ದ ಆತ ಮೊಮ್ಮಗನನ್ನು ಬಲು ಮುದ್ದಿನಿಂದಲೆ ಸಾಕಿ ಬೆಳೆಸಿದ. ಆದರೆ ವೃದ್ದಾಪ್ಯದ ಕಾರಣ ಮುಂದಿನ ಎರಡುವರ್ಷಗಳಲ್ಲಿ ಆತನೂ ಮರಣಿಸಿದ್ದರಿಂದ ಅಜ್ಜನ ಮುಚ್ಚಟೆ- ಪ್ರೀತಿ- ವಿಶ್ವಾಸಗಳನ್ನು ಕಂಡುಂಡಿದ್ದ ಮಹಮದ್ ಆಘಾತಗೊಂಡ. ಆತನ ಮನಸ್ಸಿನ ಮೇಲೆ ಈ ಸಾವು ಗಾಢ ಪರಿಣಾಮ ಬೀರಿತು. ಹೀಗಾಗಿ ಆತನ ಹೊಣೆಗಾರಿಕೆ ದೊಡ್ಡಪ್ಪ ಅಬು ತಾಲಿಬ್'ಗೆ ಸೇರಿತು.ತನ್ನ ತಂದೆಯಷ್ಟೆ ಕರುಣಾಮಯಿಯಾಗಿದ್ದ ಆತ ಮುಂದಿನ ತಾರುಣ್ಯದವರೆಗೆ ಮಹಮದನನ್ನು ಒಲವಿನಿಂದಲೆ ಸಾಕಿ ಬೆಳೆಸಿದ. ಮುಂದೆ ಅಬು ತಾಲಿಬ್ ವ್ಯಾಪಾರಕ್ಕಾಗಿ ಸಿರಿಯಾದತ್ತ ಪ್ರಯಾಣಿಸಬೇಕಾಗಿ ಬಂದಾಗ ಆಗಿನ್ನೂ ಹನ್ನೆರಡರ ಹರೆಯದಲ್ಲಿದ್ದ ಮಹಮದ್ ಮನೆಯಲ್ಲಿ ಒಂಟಿಯಾಗಿರಬಯಸದೆ ಹಠ ಹೂಡಿ ತಾನೂ ಅವನೊಂದಿಗೆ ತೆರಳುತ್ತಾನೆ. ಈ ಪ್ರಯಾಣ ಆತನ ಬದುಕಲ್ಲಿ ಆರಂಭಿಕ ಅನುಭವ ತರುತ್ತದೆ. ಸಿರಿಯಾದಲ್ಲಿ ಆತ ಕ್ರೈಸ್ತರ ಹಾಗೂ ಯಹೂದಿಗಳ ಸಂಪರ್ಕಕ್ಕೆ ಬಂದ. ಮುಖ್ಯವಾಗಿ ಆತನಿಗೆ ಅಲ್ಲಿ ಯಹೂದಿಗಳ ಭಾಷೆ, ಸಂಸ್ಕೃತಿ, ರೀತಿ ನೀತಿ, ಕಟ್ಟಳೆ- ರಿವಾಜು, ಬದುಕಿನ ನಿಯಮಗಳೆಲ್ಲದರ ಪರಿಚಯವಾಯಿತು ಎಂದಿದ್ದಾನೆ ಇತಿಹಾಸಕಾರ ಮೂಯಿರ್. 'ಒಕಾಜಾ' ಅಕಾಲದ ಅರೇಬಿಯಾದ ಪ್ರಸಿದ್ಧ ಸಂತೆ ಕೂಡುವ ವ್ಯಾಪಾರಿ ಸ್ಥಳವಾಗಿತ್ತು. ಬೆನಿ ಹವಾಜಿನ್ ಹಾಗೂ ಖುರೈಷಿಗಳು ಅಲ್ಲಿ ವ್ಯಾಪಾರಕ್ಕಾಗಿ ಪ್ರತಿವರ್ಷಕ್ಕೊಮ್ಮೆ ಸೇರುವ ಪರಿಪಾಠವಿತ್ತು. ವಾಸ್ತವವಾಗಿ ಇವರಿಬ್ಬರಲ್ಲೂ ಜನಾಂಗೀಯ ದ್ವೇಷದ ಭವ್ಯ ಹಿನ್ನೆಲೆ ಇದ್ದುದ್ದರಿಂದ ಪರಸ್ಪರ ನೆತ್ತರು ಹರಿಸಿ ಅವರು ಕಾದಾಡುತ್ತಿದ್ದರು. ಎರಡೂ ಬುಡಕಟ್ಟಿನ ಹಿರಿಯರು ಈ ಅನಗತ್ಯ ವೈರತ್ವದಿಂದ ಸತ್ತವರ ಕುಟುಂಬಗಳಿಗೆ 'ಪರಿಹಾರ' ನೀಡುವ ಮೂಲಕ ಪರಿಸ್ಥಿತಿಯನ್ನು ಹಿಡಿತಕ್ಕೆ ತರಲು ಹೆಣಗುತ್ತಿದ್ದರು. ಅವರಲ್ಲಿ ಪರಸ್ಪರ ಇದ್ದ ಈರ್ಷ್ಯೆ- ಪ್ರತಿಕಾರದ ಸ್ವಭಾವಗಳ ಬಗ್ಗೆ ಒಂದು ರಂಜನೀಯ ಕತೆ ಚಾಲ್ತಿಯಲ್ಲಿದೆ. 'ಕಿನಾನಾ' ಬುಡಕಟ್ಟಿಗೆ ಸೇರಿದ ಒಬ್ಬ ವ್ಯಕ್ತಿ ಹವಾಜಿನ್ ಬುಡಕಟ್ಟಿನ ಸಾಲಗಾರನಿಂದ ಸಾಲ ಪಡೆದು ಅದನ್ನು ಹಿಂದಿರುಗಿಸದಿದ್ದಾಗ ಇದೆ 'ಒಕಾಜ್' ಸಂತೆಯ ಪ್ರಮುಖ ಸ್ಥಳದಲ್ಲಿ ಕೂತು ತನ್ನ ಬಳಿ ಒಂದು ಮಂಗವನ್ನು ಕಟ್ಟಿಹಾಕಿಕೊಂಡು "ಯಾರು ನನಗೆ ಇಂತಹದ್ದೆ ಒಂದು ಮಂಗವನ್ನು ನೀಡುತ್ತಾರೊ ಅವರಿಗೆ ಸಾಲ ಕೊಂಡವನ ಮೇಲೆ ನನಗಿರುವ ಹಕ್ಕನ್ನು ಬಿಟ್ಟು ಕೊಡುತ್ತೇನೆ!' ಎಂದು ಕೂಗಿಕೂಗಿ ಹೇಳಿದ. ಅವನ ಧ್ವನಿಯಲ್ಲಿ 'ಕಿನಾನಾ' ಪಂಗಡದ ಬಗ್ಗೆ ಇದ್ದ ಹೀಯಾಳಿಕೆಯನ್ನ ಕೇಳಿ ಕೆರಳಿದ ಆಗುಂತಕನೊಬ್ಬ ತಕ್ಷಣವೆ ಕೈಗತ್ತಿಯಿಂದ ಆ ಮಂಗದ ಕುತ್ತಿಗೆ ಕಡಿದು ಹಾಕಿದ. ಮುಂದೆ ಎರಡುದಿನ ಬಿಡದೆ ನಡೆದ ಕಾಳಗಕ್ಕೆ ಇಷ್ಟು ಕಾರಣ ಧಾರಾಳ ಸಾಕಾಯಿತು!. ಇಂತಹ ದುರದೃಷ್ಟಕರ ಘಟನೆಗಳನ್ನು ಮರುಕಳಿಸದಂತಾಗಿಸಲು ಎರಡೂ ಗುಂಪಿನ ಹಿರಿಯರು ಅಲ್ಲಿಗೆ ವ್ಯಾಪಾರಕ್ಕೆ ಬರುವಯಾರೂ ಮಾರಣಾಂತಿಕ ಶಸ್ತ್ರಾಸ್ತ್ರಗಳನ್ನು ಅಲ್ಲಿಗೆ ತರುವಂತಿಲ್ಲವೆಂದೂ, ಬಳಿಯಿರುವುದನ್ನು ಮೆಕ್ಕಾದ ಅಬ್ದುಲ್ಲ ಇಬ್ನ ಜುಡಾನನ ಬಳಿ ಒತ್ತೆಯಿಸಿ ನಿರಾಯುಧರಾಗಿ ಬರುವಂತೆ ಕಾನೂನನ್ನೆ ಜಾರಿ ಮಾಡಿದರು. ಹೀಗಾಗಿ ಮುಂದೆ ಬಹುಕಾಲ ಅಲ್ಲಿನ ಶಾಂತಿಯನ್ನ ಕಾಪಾಡಿಕೊಳ್ಳುವುದು ಸಾಧ್ಯವಾಯಿತು, ಆದರೆ ಕ್ರಿಸ್ತಶಕ 580ರಲ್ಲಿ ಅಲ್ಲೊಂದು ಕೊಲೆಯಾಯಿತು, 'ಅಲ್ ಹಿರಾ' ಪ್ರಾಂತ್ಯದ ರಾಜಕುಮಾರ ವ್ಯಾಪಾರಕ್ಕಾಗಿ ಅಲ್ಲಿಗೊಂದು ಕ್ಯಾರವಾನನ್ನು ಆ ಹಂಗಾಮಿನಲ್ಲಿ ಕಳುಹಿಸಿದ್ದ. ಅವನ ಬಗ್ಗೆ ಈರ್ಷ್ಯೆಯಿದ್ದ ಖುರೈಶಿಗಳಲ್ಲೊಬ್ಬ ಆ ಕ್ಯಾರವಾನನ್ನು ಲೂಟಿಹೊಡೆಯಲಿಕ್ಕಾಗಿ ಹವಾಜಿನರ ಆ ಕ್ಯಾರವಾನಿನ ಮುಖಂಡನನ್ನು ಹತ್ಯೆ ಮಾಡಿ ಸಂಪತ್ತನ್ನು ದೋಚಿದ. ಈ ಸುದ್ದಿ ತಿಳಿದ ಖುರೈಶಿಗಳೆಲ್ಲ ಮೆಕ್ಕಾದಲ್ಲಿ ಒಂದಾದರು. ಅವರಿಗೆ ಮುಂದಾಗುವ ಅನಾಹುತದ ಮುನ್ಸೂಚನೆ ಸಿಕ್ಕಿತು. ಅವರ ಎಣಿಕೆಯಂತೆ ಹವಾಜಿನರು ಖುರೈಷಿಗಳ ಬೆನ್ನು ಹತ್ತಿದರು. ಆದರೆ ಅವರಾಗಲೆ ಮೆಕ್ಕಾದಲ್ಲಿದ್ದುದ್ದರಿಂದ ಪವಿತ್ರ ಸ್ಥಳದಲ್ಲಿ ಕಾದಾಡಲಾಗದೆ ಕೈಚೆಲ್ಲ ಬೇಕಾಯಿತು. ಹೀಗಾಗಿ ಮರುವರ್ಷ ಒಕಾಜ್'ನಲ್ಲೆ ಕಾದಾಡಲು ಆಮಂತ್ರಣ ನೀಡಿ ಹವಾಜಿನರು ಅಲ್ಲಿಂದ ನಿರ್ಗಮಿಸಿದರು. ಈ ಆಮಂತ್ರಣವನ್ನು ಒಪ್ಪಿದ ಖುರೈಷಿಗಳು ಮರುವರ್ಷ ತಪ್ಪದೆ ಬಂದು ಜೀವದ ಹಂಗು ಬಿಟ್ಟು ಹವಾಜಿನರೊಂದಿಗೆ ಕಾದಾಡಿದರು!. ಹೀಗೆ ನಾಲ್ಕುವರ್ಷ ಕದನ ನಡೆದರೂ ಯಾರೊಬ್ಬರೂ ಗೆಲ್ಲದೆ, ಯಾರೊಬ್ಬರೂ ಸೋಲದೆ ಕಡೆಗೆ ಸಂಧಾನ ಅನಿವಾರ್ಯವಾಯಿತು?! ಹವಾಜಿನರಲ್ಲೆ ಹೆಚ್ಚಿನ ಪ್ರಾಣ ಹಾನಿಯಾಗಿದ್ದರಿಂದ ಅವರಿಗೆ 'ರಕ್ತಹಣ' (blood money) ವನ್ನು ನೀಡುವ ನಿಯಮಕ್ಕನುಸಾರವಾಗಿ ಖುರೈಷಿಗಳು ತಮ್ಮ ಜನರನ್ನು ಅವರ ಬಳಿ ಒತ್ತೆಯಿತ್ತರು. ಅವರಲ್ಲಿ ಮುಂದೆ ಮಹಮದ್'ನ ನೆಂಟ ಹಾಗೂ ವೈರಿಯಾಗಿದ್ದ ಅಬು ಸಫ್ಯಾನನೂ ಒಬ್ಬನಾಗಿದ್ದ. ಈ ಕದನದಲ್ಲಿ ಖುರೈಷಿಗಳ ಪೈಕಿ ಎಲ್ಲಾ ಪಂಗಡದವರೂ ಪಾಲ್ಗೊಂಡಿದ್ದರು. ಉಮೈಯ್ಯಾ ಹಾಗೂ ಹಾಶಿಮ್ ಕುಟುಂಬದವರು ಅವರಲ್ಲಿ ಪ್ರಮುಖರಾಗಿದ್ದರು. ಈ ಕಾದಾಟದಲ್ಲಿ ಮಹಮದ್ ನೇರವಾಗಿ ಕತ್ತಿ ಹಿಡಿದು ಕಾದಾಡದಿದ್ದರೂ ರಣರಂಗದಲ್ಲಿ ಬತ್ತಳಿಕೆಯಿಂದ ನೆಲಕ್ಕೆ ಬಿದ್ದ ಬಾಣಗಳನ್ನು ಆಯುವ ಕೆಲಸ ಮಾಡಿ ಯೋಧರಿಗೆ ನೆರವಾದ. ಮನರಂಜನೆಗೆ ಧಾರಾಳ ಕೊರತೆಯಿದ್ದ ಆ ಕಾಲದ ಮರುಭೂಮಿಯಲ್ಲಿ ಈ ಕಾದಾಟವೂ ಒಂದು ಮನರಂಜಕ ಮಾರ್ಗವೆ ಆಗಿತ್ತು ಅಂತ ಕಾಣುತ್ತದೆ!. ಈ 'ಅಪವಿತ್ರ ಯುದ್ಧ' ನಾಲ್ಕುವರ್ಷ ನಡೆದು ಶಾಂತಿ ನೆಲೆಸಿದ ನಂತರ ಮಹಮದ್ ಬುಡಕಟ್ಟಿನ ಕುರಿ- ಮೇಕೆಗಳನ್ನು ಊರ ಹೊರಗಿನ ಕಣಿವೆಗಳಲ್ಲಿ ಮೇಯಿಸುವ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ. ಗುಡ್ಡಬೆಟ್ಟಗಳಿಂದ ಆವೃತವಾಗಿದ್ದ ಈ ಪರಿಸರದಲ್ಲಿ ತನ್ನ ಸ್ವಭಾವಕ್ಕನುಗುಣವಾಗಿ ಏಕಾಂತದಲ್ಲಿ ಪ್ರಾಕೃತಿಕ ಸೌಂದರ್ಯ ಆಸ್ವಾದಿಸುತ್ತಾ, ಅಲ್ಲಿನ ಮೌನದಲ್ಲಿ ಲೀನವಾಗುವ -ಕಣಿವೆಯ ಭವ್ಯತೆಯನ್ನು ಅವಲೋಕಿಸಿ ಅನುಭವಿಸುವ ನಿರಾಯಾಸದ ಅವಕಾಶ ಮಹಮದನಿಗೆ ಹೀಗೆ ಒದಗಿ ಬಂತು. ಒಂಟಿಯಾಗಿ ಕುರಿಮಂದೆಯೊಂದಿಗೆ ಹಗಲು ರಾತ್ರಿ ಕಳೆದರೂ ಮಹಮದ್ ಯವ್ವನದ ಸಹಜ ಆಕರ್ಷಣೆಗಳಿಗೆ ಬಲಿಯಾಗದೆ ತನ್ನ ಸದ್-ಚಾರಿತ್ರ್ಯವನ್ನು ಕಾಪಾಡಿಕೊಂಡು ಬಂದನು. ಉಚ್ಛರೀತಿಯ ನಡತೆ ಹೊಂದಿದ್ದ ಆತ ಮೆಲು ಮಾತಿನ-ನಾಜೂಕಿನ ನಡೆ ಹೊಂದಿದ್ದ ವ್ಯಕ್ತಿಯಾಗಿ ಗುರುತಿಸಲ್ಪಟ್ಟನು. ಗಾಂಭೀರ್ಯದ ರೀತಿಯಲ್ಲಿ ಪಳಗಿದ್ದ ಆತ ಏಕಾಗ್ರಚಿತ್ತನಾಗಿ ತನ್ನದೆ ಭಾವಪ್ರಪಂಚದಲ್ಲಿ ಮುಳುಗಿ ಹೋಗಿರುತ್ತಿದ್ದ. ಅವನ ಇವೆ ಗುಣಗಳಿಂದ ಮೆಕ್ಕಾ ನಿವಾಸಿಗಳಿಂದ ಮಹಮದ್ 'ಅಲ್-ಅಮೀನ್' ಎಂದು ಹೊಗಳಿಸಿಕೊಂಡ. ಹಾಗೆಂದರೆ ಅರಬ್ಬಿಯಲ್ಲಿ 'ಶ್ರದ್ಧಾಳು' ಎಂದರ್ಥ. ಹೀಗೆ ಯವ್ವನವನ್ನು ದೊಡ್ಡಪ್ಪ ಅಬುತಾಲಿಬನ ಮನೆಯಲ್ಲೆ ಕಳೆದ ಆತ ಮುಂದೆ ಅವನ ಸಂಸಾರದ ಸದಸ್ಯರ ಸಂಖ್ಯೆ ಹೆಚ್ಚಾಗಿ, ಸಂಸಾರ ನಿರ್ವಹಣೆಯ ಖರ್ಚು ಹೆಚ್ಚಾದುದರಿಂದ ತಾನೂ ದೊಡ್ಡಪ್ಪನ ಹೊಣೆಗೆ ಹೆಗಲುಕೊಡುವ ಅನಿವಾರ್ಯತೆ ಹುಟ್ಟಿತು. ಹೀಗಾಗಿ ಉದ್ಯೋಗದ ನಿಮಿತ್ತ ಮಹಮದನನ್ನು ಅಬು-ತಾಲಿಬ್ ಸಿರಿಯಾದ ಕಡೆ ಸಾಗುವ ಒಂದು ಕ್ಯಾರವಾನ್'ಗೆ ಸೇರಿಸಿದ. ಆ ಕ್ಯಾರವಾನ್ ಖತೀಜಾ ಎಂಬ ಸಿರಿವಂತ ವಿಧವೆಗೆ ಸೇರಿತ್ತು. ಮೊಹಮದ್ ಆ ಕ್ಯಾರವಾನಿನ ಭಾಗವಾದ. ತಾನು ಹದಿಮೂರುವರ್ಷಗಳ ಹಿಂದೆ ದೊಡ್ಡಪ್ಪನೊಂದಿಗೆ ಸಾಗಿದ ದಾರಿಯಲ್ಲೆ ಮತ್ತೆ ಈಗಲೂ ಆತ ಸಾಗಬೇಕಾಯಿತು. ಕ್ಯಾರವಾನ್ ಸಿರಿಯಾದ ರಾಜಧಾನಿ 'ಡಮಾಸ್ಕಸ್' ಸಮೀಪದ ಬಸ್ರಾದಲ್ಲಿ ಲಂಗರು ಹಾಕಿತು. ಮಹಮದ್ ಚಾಕಚಾಕ್ಯತೆಯಿಂದ ಉತ್ತಮ ವ್ಯಾಪಾರವನ್ನೆ ಮಾಡಿ ಲಾಭದೊಂದಿಗೆ ಮರಳಿ ಸ್ವದೇಶದತ್ತ ಹೆಜ್ಜೆ ಹಾಕಿದ. ಆಗಲೆ ಬಸ್ರಾ ಪಟ್ಟಣದಲ್ಲಿದ್ದ ಸಿರಿಯನ್ ಕ್ರೈಸ್ತರ ಸಂಪರ್ಕ ಮಹಮದನಿಗೆ ಆಗಿ ಅವರಿಂದ ಪ್ರಭಾವ ಹೊಂದುವಂತಾಯಿತು. ಅವರ ಪೂಜಾರಿ, ಸನ್ಯಾಸಿಗಳ ಹಾಗೂ ಉಚ್ಚ ವರ್ಗದವರೊಂದಿಗೆ ಧಾರ್ಮಿಕ ಚರ್ಚೆ- ವಿಚಾರ ವಿನಿಮಯ ನಡೆಯಲು ಅದು ಕಾರಣವಾಯಿತು. ಇದರ ಪರಿಣಾಮವನ್ನು ಮುಂದಿನ ಮಹಮದನ ಧರ್ಮಭೋದನೆಗಳಲ್ಲಿ ಕಾಣಬಹುದಾಗಿದೆ. ಮೆಕ್ಕಾಗೆ ಹಿಂದಿರುಗಿದ ಮೊಹಮದ್ ಖತೀಜಾಳಿಗೆ ವ್ಯಾಪಾರದ ಪ್ರಾಮಾಣಿಕ ಲೆಕ್ಖದ ವರದಿ ಒಪ್ಪಿಸಿದ.ಹೀಗೆ ಆತ ಆಕೆಯ ಮನಗೆದ್ದ. ( ಇನ್ನೂ ಇದೆ... )

No comments:

Post a Comment