ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Saturday, September 22, 2012

".....ಕಪಿತ್ತ ಜಂಬೋ ಫಲಸಾರ ಭಕ್ಷಿತಂ"


ಸಂಜೆ ಬಯಲಿಗೆ ಆಡಲು ಹೋಗುತ್ತಿದ್ದ ನಾವು ಮಕ್ಕಳಿಗೆ ನಾಳೆ ನಮ್ಮೂರಿಗೆ ಯಕ್ಷಗಾನ ಮೇಳವೊಂದು ಬರುವ ಪುರಾವೆಗಳು ಸಿಗುತ್ತಿದ್ದವು. ಸದಾ ಹುಡಿ ಧೂಳಿನಿಂದ ಆವ್ರುತ್ತವಾಗಿರುತ್ತಿದ್ದ ಮೈದಾನಕ್ಕೆಲ್ಲ ಒಂದು ಸುತ್ತು ನೀರು ಹೊಡೆದು ನಾಳೆ ಟರ್ಪಾಲ್ ಟೆಂಟು ಕಟ್ಟಲು ಅನುಕೂಲವಾಗುವಂತೆ ಮೈದಾನದ ಸುತ್ತಲೂ ಸರಳಿನಂತ ಗೂಟಗಳನ್ನ ಹೊಡೆಯಲು ಆರಂಭಿಸಿರುತ್ತಿದ್ದರು. ನಾಳೆ ಯಕ್ಷಗಾನ ನೋಡುವ ಖುಷಿಗೆ ಮನಸೊಳಗೆ ಮಂಡಿಗೆ ಮೆಲ್ಲುತ್ತಾ ಕತ್ತಲು ಕವಿಯಲು ಇನ್ನೇನು ಆರಂಭ ವಾಗುವ ಹೊತ್ತಿನಲ್ಲಿ ನಾನು ಮನೆಯ ಹಾದಿ ಹಿಡಿಯುತ್ತಿದ್ದೆ. ಬಯಲಿಗೆ ಸೊಕ್ಕಲು ಹೋಗಿ ನಿತ್ಯ ತಡವಾಗಿ ಬರುತ್ತೇನೆ ಅನ್ನುವ ಹಿರಿಯರ ದೂರು ಬೈಗುಳದ ರೂಪದಲ್ಲಿ ದಿನವೂ ಎದುರಿಸಲೇ ಬೇಕಾಗಿದ್ದರಿಂದ ನಾನದರ ಪಾಲಿಗೆ ಸಂಪೂರ್ಣ ಕಿವುಡನಾಗಿದ್ದೆ. ಶಾಸ್ತ್ರದಂತೆ ಅವರೂ ಉಗಿಯುತ್ತಿದ್ದರು, ನಾನೂ ಅಭ್ಯಾಸ ಬಲದಿಂದ ನಿರ್ಲಿಪ್ತನಾಗಿ ಉಗಿಸಿಕೊಳ್ಳುತ್ತಿದ್ದೆ. ಒಂದೇ ಒಂದು ದಿನ ಯಾರಾದರೂ ಈ ಹೊತ್ತಲ್ಲಿ ಬಯ್ಯದಿದ್ದರೆ ಅದೇನನ್ನೋ ಕಳೆದು ಕೊಂಡಂತೆ ಭಾಸವಾಗುತ್ತಿತ್ತು! ಕೈಕಾಲು ತೊಳೆದ ಶಾಸ್ತ್ರ ಪೂರೈಸಿ ಮೂರು ಸಂಜೆ ಅಂತನ್ನುವ ಆ ಹೊತ್ತಿನಲ್ಲಿ ನಮ್ಮ ದೇವರ ಮನೆಯಲ್ಲಿ ಕೂಡು ಹಾಕಲ್ಪಟ್ಟಿದ್ದ ಶೃಂಗೇರಿ ಶಾರದೆ, ಕಟೀಲು ದುರ್ಗಾಪರಮೇಶ್ವರಿ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಸಹಿತ ಅಷ್ಟೂ ದೇವರುಗಳು, ಕೊಲ್ಲೂರು ಮೂಕಾಂಬಿಕೆ, ಹೊರನಾಡ ಅನ್ನಪೂರ್ಣೆ, ಉಡುಪಿ ಕೃಷ್ಣ, ಕಾಶಿ ವಿಶ್ವನಾಥನ ಕಟ್ಟು ಹಾಕಿಸಿದ ಪಟಗಳ ಜೊತೆಗೆ ಬೀಡಿ- ಸೋಪು- ಬ್ಲೇಡ್- ಪೇಯಿಂಟು ಪ್ರಚಾರ ಕ್ಯಾಲೆಂಡರ್ಗಳಲ್ಲಿ ಕಾರಣವೆ ಇಲ್ಲದೆ ಸೆರೆಸಿಕ್ಕವರಂತೆ ಮುದ್ರಿತರಾಗಿ, ಈಗ ನನ್ನಜ್ಜನ ಒತ್ತಡಕ್ಕೆ ಅನಿವಾರ್ಯವಾಗಿ ಮಣಿದು (ಬೇರೆ ದಾರಿಯಾದರೂ ಅವರೆಲ್ಲರಿಗೆ ಏನಿತ್ತು ಪಾಪ!) ಕಪ್ಪು ಅಂಚಿನ ಫ್ರೇಮ್ ಸೇರಿ ಸದ್ಯಕ್ಕೆ ಈ ಕ್ಷುಲ್ಲಕ ಜಗತ್ತಿನ ಗೋಳುಗಳಿಂದ ಸೇಫಾಗಿದ್ದ ಖಾದರ್ ಸಾಬರ ಮೂರುಮಾರ್ಕ್ "ಬೀಡಿ" ಲಕ್ಷ್ಮಿ (ಜೂಲಿ ಲಕ್ಷ್ಮಿ ತರಹ), ಭಾರತ್ ಬೀಡಿ ಸರಸ್ವತಿ, ಹಮಾಮ್ ಸೋಪಿನ ಶಿವಪಾರ್ವತಿ, ಮಹಾಲಸ ಜುವೆಲ್ಲರ್ಸ್ ಗಣಪತಿ, ಏಷ್ಯನ್ ಪೇಯಿಂಟ್ ಸುಬ್ರಮಣ್ಯ, "ಲಿಂಗೇಶ್ವರ ಕಟ್ಟಿಂಗ್ ಶಾಪ್, ಸವಳಂಗ ರಸ್ತೆ, ಶಿವಮೊಗ್ಗ" ಇವರ ಅಕ್ಕಮಹಾದೇವಿ, ಮಹಾವೀರ ಕ್ಲಾತ್ ಸೆಂಟರಿನ ಗೊಮ್ಮಟೇಶ್ವರ ಹೀಗೆ ಆ ಉದ್ಯಮಗಳಿಗೆ ಚೂರೂ ಸಂಬಂಧಿಸದ ಮೂರೂ ಮುಕ್ಕಾಲು ದೇವತೆಗಳ (ಕೆಲವು ದೇವಾನುದೇವತೆಗಳ ಅಸಹಜ ಗಾತ್ರದ ಚಿತ್ರಗಳು ಫ್ರೇಮ್ ಗಾತ್ರಕ್ಕೆ ಅನುಗುಣವಾಗಿ ದೇಹದ "ಕೆಳಗಿನ" ಅವಯವಗಳನ್ನು ಕಳೆದು ಕೊಂಡು ಅಂಗವಿಕಲರಾಗಿರುತ್ತಿದ್ದುದೂ ಉಂಟು!) ಸಾಲಿಗೆ ದೀಪ ಹಚ್ಚಿ, ಅದರಲ್ಲೊಂದು ಹಣತೆ ದೀಪವನ್ನಿರಿಸಿ ಕಡೆಗೆ ಮನೆ ಮುಂದಿನ ತುಳಸಿ ಕಟ್ಟೆಗೆ ಕೊಂಡೊಯ್ದು ಇಟ್ಟು ಕೈ ಮುಗಿಯ ಬೇಕಿತ್ತು. ತುಳಸಿಗೆ ದೀಪ ಇಡುವ ಹೊಣೆ ಅಮ್ಮನದ್ದು ದೀಪವನ್ನ ತುಳಸಿಕಟ್ಟೆಯ ಮೇಲಿತ್ತು ಅದಕ್ಕೆ ಮೂರುಸುತ್ತು ಬಂದು ಅಡ್ಡಬಿದ್ದು ನಮಸ್ಕರಿಸುವಾಗ ಯಾಂತ್ರಿಕವಾಗಿ ಇವೆಲ್ಲವನ್ನೂ ಅನುಕರಿಸುತ್ತಿದ್ದೆ. ಮನದಲ್ಲಿ ಅಷ್ಟೇನೂ ಭಕ್ತಿ ಇರದಿದ್ದರೂ ಈ ಎಲ್ಲಾ ಸದಾಚಾರಗಳನ್ನ ಮಾಡದಿದ್ದರೆ ಬೆನ್ನ ಮೇಲೆ ಆಡ ಬಹುದಾದ ಹಿರಿಯರ ಭಯವಂತೂ ಇದ್ದೆ ಇತ್ತು. ಈ ಭಯದ ದಾಸನಾಗಿ ಇವೆಲ್ಲ ಅನಿವಾರ್ಯ ಕರ್ಮಗಳನ್ನ ಶ್ರದ್ಧೆಯಿಂದ ಪೂರೈಸುತ್ತಿದ್ದೆ. ಇಷ್ಟಾದ ಮೇಲೆ ಯಾವ ರಾಗದ ಖಚಿತ ಹಂಗೂ ಇಲ್ಲದ ನಮ್ಮದೇ ಧಾಟಿಯಲ್ಲಿ ನಾಲ್ಕಾರು ಭಜನೆಗಳನ್ನೂ ಮನೆಯ ಮಕ್ಕಳೆಲ್ಲ ಸಾಮೂಹಿಕವಾಗಿ ಅಷ್ಟೂ ದೇವರ ಪಟಗಳ ಮುಂದೆ ಗಟ್ಟಿ ಧ್ವನಿಯಲ್ಲಿ ಭಕ್ತಿ ಪರವಶರಂತೆ ಸೋಗು ಹಾಕುತ್ತಾ ತಾಳ ಕುಟ್ಟಿ ಕೊಂಡು ಅರಚುತ್ತಿದ್ದೆವು. ಈ ಅಪಶ್ರುತಿಯ ಪ್ರಲಾಪವನ್ನು ಕೇಳಿ ಕೇಳಿ ದೇವರುಗಳಿಗೆಲ್ಲ ಸುಸ್ತಾಗಿಯೋ... ಇಲ್ಲ... ತಾಳ ಕುಟ್ಟುತ್ತಾ ಕೂಗಿ ಕೂಗಿ ಕಡೆಗೆ ನಮ್ಮ ಗಂಟಲಿಗೆ ದಣಿವಾಗಿಯೋ ಅಂತೂ ಇಂತೂ ಮಂಗಳಕ್ಕೆ ಬಂದು ಮುಟ್ಟುತ್ತಿದ್ದೆವು. ಈ ಮಂಗಳದೊಂದಿಗೆ ಮಂಗಳಾರತಿ ಮುಗಿದರೂ ಬಾಯಿಪಾಠ ಮಾಡಿಕೊಂಡಿರುತ್ತಿದ್ದ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಸಂಸ್ಕೃತ ಶ್ಲೋಕಗಳನ್ನು ಕೇಳಿದವರಿಗೆ ಶೋಕ ಒತ್ತರಿಸಿಕೊಂಡು ಬರುವಂತೆ ಅಪಭ್ರಂಶದಲ್ಲಿ ದೇವರನ್ನೆ ಹೆದರಿಸುವಂತೆ ಘರ್ಜಿಸದ ಹೊರತು ನಮ್ಮ ಪ್ರಾರ್ಥನೆಯ ಕಲಾಪ ಮುಗಿಯುತ್ತಿರಲ್ಲಿಲ್ಲ. ನಮ್ಮ ಈ ಎಲ್ಲ ಕಿರುಕುಳಗಳನ್ನು ಸಹಿಸಲು ಆ ಎಲ್ಲ ದೇವಗಣಗಳಿಗೆ ಅಪಾರ ತಾಳ್ಮೆಯ ಶಕ್ತಿಯಿತ್ತಲ್ಲಾ ಎಂದು ಇಂದಿಗೂ ಸೋಜಿಗ ಪಡುತ್ತೇನೆ. ಇಷ್ಟಾಗಿ ಇಲ್ಲಿ ಭಜನೆ ಮುಗಿಸಿ ಎದುರು ಮನೆ ಬಪಮನ ಗಣಪತಿ ಕಡ್ಲೆಗಾಗಿ ಅವರ ಮನೆಯತ್ತ ಓಡುತ್ತಿದ್ದೆ. ಅವರ ಮನೆ ಗಣಪತಿಯ ನೈವೇದ್ಯವಾಗಿ ಅವರು ನೆನೆಸಿದುತ್ತಿದ್ದ ಹಸಿ ಕಡಲೆಯ ಪಾಲಿಗಾಗಿ ಇನ್ನೂ ಅನೇಕ ಪ್ರತಿ ಸ್ಪರ್ಧಿಗಳು ಸುತ್ತಮುತ್ತಲ ಮನೆಗಳಿಂದ ನನಗಿಂತ ಮೊದಲೆ ದೌಡಾಯಿಸುವ ಅಪಾಯ ಕಟ್ಟಿಟ್ಟ ಬುತ್ತಿ ಯಾಗಿರುತ್ತಿದ್ದರಿಂದ ಹೀಗೊಂದು ಅಕಾಲದ ರನ್ನಿಗ್ ರೇಸ್ ನನ್ನ ಬಾಲ್ಯದುದ್ದಕ್ಕೂ ಇದ್ದ ತುರ್ತು ಅಗತ್ಯಗಳಲ್ಲಿ ಒಂದಾಗಿತ್ತು. ಬಪಮ ಕಡ್ಲೆ ಕೊಡುವಾಗ ಅವರ ಸೊಸೆ ಗೀತಮ್ಮ ತಮ್ಮ ಅಂಗಳದಲ್ಲಿದ್ದ ತುಳಸಿಕಟ್ಟೆಗೆ ಪ್ರದಕ್ಷಿಣೆಯ ಸುತ್ತು ಹಾಕುತ್ತ ಮೂಗಿನಲ್ಲೇ ದೇವರ ನಾಮ ಹಾಡಿಕೊಳ್ಳುತ್ತಿದ್ದುದು ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಕಳೆದ ವರ್ಷ ಇದೆ ಸಂಧರ್ಭದಲ್ಲಿ ಅವರ ವೈಕುಂಠ ಸಮಾರಾಧನೆಯಲ್ಲಿ ಪಾಲ್ಗೊಳ್ಳಲು ತೀರ್ಥಹಳ್ಳಿಗೆ ಹೋಗಿದ್ದೆ! ಕಾಲ ಎಷ್ಟು ಬೇಗ ಸವೆಯುತ್ತದೆಯಲ್ಲ. ಅವರ ಮೂಗುರಾಗಕ್ಕೆ ನಮ್ಮದೂ ಶ್ರುತಿ ಅನಪೇಕ್ಷಿತವಾಗಿ "....ಕಪಿತ್ತ ಜಂಬೋ ಫಲಸಾರ ಭಕ್ಷಿತಂ" ಎಂದು ಸೇರುತ್ತಿತ್ತು. ಸರಿ ಸುಮಾರು ಹೀಗೆಯೇ ಇರುತ್ತಿದ್ದ ನನ್ನ ಬಹುಪಾಲು ಸಂಜೆಗಳು ಈಗ ಕೈಜಾರಿ ಹೋಗಿ ಯಾವುದೋ ಕಾದಿಟ್ಟ ನಿಧಿ ಕಳೆದುಕೊಂಡ ಅರ್ಜೆಂಟ್ ನಿರ್ಗತಿಕನ ಫೋಸ್ ಕೊಟ್ಟುಕೊಳ್ಳುತ್ತಾ ನನ್ನನ್ನು ನಾನೆ ಸಂತೈಸಿಕೊಳ್ಳುತ್ತಿರುತ್ತೇನೆ. ಇವತ್ತಿಗೂ ಮುಕ್ತಿಯಿಲ್ಲದೆ ಅವವೆ ಫ್ರೇಮ್'ಗಳಲ್ಲಿ ಸಿಲುಕಿ ಒರಲೆಗಳಿಂದ ಕಚ್ಚಿಸಿಕೊಂಡು ಒದ್ದಾಡುತ್ತಿರುವ ನಮ್ಮ ದೇವರ ಮನೆಯಲ್ಲಿ ಬಂಧಿಗಳಾಗಿರುವ ದೇವಾನು ದೇವತೆಗಳಿಗೂ ಇಂತಹದ್ದೊಂದು ನಿರಂತರ ಶೂನ್ಯ ಕಾಡುತ್ತಿರಬಹುದು ಎಂಬ ಗುಮಾನಿ ನನಗಿದೆ. ಸಂಪ್ರದಾಯದಂತೆ ಇಷ್ಟೆಲ್ಲಾ ಆಗಿ ಮುಗಿಯುವಾಗ ಶಾಲೆಯ ಚೀಲ- ಅದರೊಳಗೆ ಬಿಲದೊಳಗಣ ಇಲಿಯಂತೆ ಹುದುಗಿರುತ್ತಿದ್ದ ಮನೆಕೆಲಸದ ಪುಸ್ತಕಗಳನ್ನು ಇಷ್ಟವಿಲ್ಲದಿದ್ದರೂ ಹೊರಗೆ ತೆಗೆಯಲೇ ಬೇಕಾಗಿದ್ದ ದಿನದ ಅತಿ ಕೆಟ್ಟ ಘಳಿಗೆಗಳು ಬಂದೆ ಬಿಟ್ಟಿರುತ್ತಿದ್ದವು. ಇಷ್ಟವಿಲ್ಲದಿದ್ದರೂನು ಈ ಪ್ರಾರಬ್ಧ ಕರ್ಮದಿಂದ ಪಾರಾಗಲು ಬೇರೆ ದಾರಿ ಇರುತ್ತಿರಲಿಲ್ಲವಾಗಿ ಅನಿವಾರ್ಯವಾಗಿ ಹೋಂ ವರ್ಕ್ ಮಾಡಲು ಸನ್ನದ್ಧನಾಗುತ್ತಿದ್ದೆ. ವಾಸ್ತವವಾಗಿ ನಾನು ಓದಿನಲ್ಲಿ ಸಾಕಷ್ಟು ಜಾಣನಾಗಿದ್ದೆ. ಕಾಪಿ ಬರೆಯುವುದೂ ಸೇರಿದಂತೆ ಶಾಲೆಯಲ್ಲಿ ಕೊಡುತ್ತಿದ್ದ- ನನ್ನ ಪಾಲಿಗೆ ತೀರಾ ಚಿಲ್ಲರೆ ಅನ್ನಿಸುತ್ತಿದ್ದ ಮನೆಕೆಲಸಗಳಿಗೆ ಇನ್ನೂ ಕಡೆಯ ಘಂಟೆ ಹೊಡೆಯುವ ಮೊದಲು ಅಲ್ಲೇ ಮೋಕ್ಷ ಕಲ್ಪಿಸಿರುತ್ತಿದ್ದೆ. ಆದರೀಗ ಇಲ್ಲದ ಮನೆಗೆಲಸವನ್ನು ಈ ಟ್ಯೂಬ್ ಲೈಟ್ ಅಡಿ ಕೂತು ಮಾಡೋದಾದರೂ ಎಲ್ಲಿಂದ? ಹೀಗಾಗಿ ಓದುವ ನಾಟಕ ನಿರಂತರವಾಗಿ ಮಾಡುತ್ತಿದ್ದೆ. ನಡುವೆ ನಿದ್ದೆಯ ಸೆಳೆತ ವಿಪರೀತವಾದಾಗ ತಲೆಯನ್ನು ಹಿಡಿತ ಮೀರಿ ತೂಗದಂತೆ ನಿಗಾವಹಿಸುವ ಕೆಲಸಕ್ಕೆ ಯಾರ ಅಪ್ಪಣೆ ಇಲ್ಲದಿದ್ದರೂ ಸದಾ ಸ್ವಯಂ ಸೇವಕಳಂತೆ ಸಿದ್ದಳಾಗಿರುತ್ತಿದ್ದ ನನ್ನ ಕಡೆಯ ಚಿಕ್ಕಮ್ಮ "ಟಪ್" ಎಂದು ಜೋರಾಗಿ ತಲೆಯ ಮೇಲೊಂದು ಏಟನ್ನ ಉತ್ಸಾಹದಿಂದ ಕಾದಿದ್ದವಳಂತೆ ಹಾಕುತ್ತಿದ್ದಳು. ಅವಳು ಅಲ್ಲಿ ತನ್ನ ಹೋಂ ವರ್ಕ್ ಮಾಡಲು ಕೂತಿರುತ್ತಿದ್ದಳೋ ಇಲ್ಲ ನನಗೆ ತಲೆ ಮೊಟಕಲೋ ಎಂಬ ಸಂಶಯ ನನಗಿವತ್ತಿಗೂ ಇದೆ. ಈ ಪ್ರಹಸನ ಕಷ್ಟದಲ್ಲಿ ಮುಗಿಯುವಾಗ ಕಡೆಗೂ ಊಟದ ಸಮಯ ಆಗಿರುತ್ತಿತ್ತು. ಮತ್ತೆ ಮನೆಯಲ್ಲಿ ಅಗೋಳಿ ಮಂಜಣನ ಸಾಕ್ಷಾತ್ಕಾರವಾಗುವ ಹೊತ್ತದು. ಊಟಕ್ಕೆ ಕಳ್ಳತನ ಮಾಡುತ್ತಿದ್ದ ನನಗೆ "ಬೇಗ ಉಂಡವರು ಗಿಳಿಯಂತೆ; ನಿಧಾನವಾಗಿ ಉಣ್ಣುವವರು ಕಾಗೆಯಂತೆ!!" ( ಗಿಳಿಯಾಗಿ ಬರುವ ಭಾಗ್ಯವೇನು? ಕಾಗೆಯಾದರೆ ನಷ್ಟವೇನು ಎಂಬ ಪ್ರಶ್ನೆಗೆ ಇನ್ನೂ ಅರ್ಥ ಹುಡುಕುತ್ತಿದ್ದೇನೆ!) ಎನ್ನುವ ಪುಸಲಾವಣೆ ಮಾವ ಹಾಗು ಚಿಕ್ಕಮ್ಮಂದಿರದು. ಗಿಳಿಯಾಗಲು ನನ್ನ ಅಳತೆ ಮೀರುತ್ತಿರುವ ಸಂಪೂರ್ಣ ಅರಿವಿದ್ದರೂ ಒತ್ತಾಯದಲ್ಲಿ ತುರುಕಿಕೊಂಡು ಕಾದರೆ ಗಿಳಿಯಾಗುವ ಮೊದಲೇ ಅಗೋಳಿ ಮಂಜಣನೆಂಬ ಬಿರುದು ಉಚಿತವಾಗಿ ಸಿಕ್ಕಿರುತ್ತಿತ್ತು! ನನ್ನ ಊಟ ಮಾಡುವುದರಲ್ಲಿದ್ದ ನಿರಾಸಕ್ತಿಗೆ ಅವರು ಅರಿಯುತ್ತಿದ್ದ ಇಂತಹ ಭೀಕರ ಮದ್ದುಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೊ? ತಿಳಿಯದೆ ಗಲಿಬಿಲಿಯಾಗುತ್ತಿತ್ತು. ಅಸಹಾಯಕತೆಯೆ ಮಡುಗಟ್ಟಿರುತ್ತಿದ್ದ ಜಲಪಾತ ಇನ್ನೇನು ನನ್ನ ಬೋಳೆ ಕಣ್ಣುಗಳಿಂದ ಉದುರೋಕೆ ಸರ್ವ ಸನ್ನದ್ಧವಾಗಿರುತ್ತಿದ್ದವು. ಆದರೆ ರಾತ್ರಿ ಊಟದ ಬಗ್ಗೆ ನನಗಿದ್ದ ನಿರಾಸಕ್ತಿಯ ಅಸಲು ಕಾರಣ ಅವರ್ಯಾರಿಗೂ ಗೊತ್ತಿರಲೇ ಇಲ್ಲ!. ಇವತ್ತಿಗೂ ಅದರ ರಹಸ್ಯ ಅವರಿಗೆ ಗೊತ್ತೇ ಇಲ್ಲ.

No comments:

Post a Comment