ನನಗೊಂದು ಕಥೆ ಬೇಕು......

ನನಗೆ ಬುದ್ದಿ ತಿಳಿದಲ್ಲಿಂದಲೂ ನಾನು ಸುತ್ತಾಟದ ಶೂರ. ಚಿಕ್ಕಂದಿನಲ್ಲಿ ಅಷ್ಟೇನೂ ವಿಶೇಷ ಪ್ರವಾಸಗಳಿಗೆ ಅವಕಾಶವಿರಲಿಲ್ಲ ಅದರಲ್ಲೂ ನಮ್ಮ ಮನೆಯ ಮಟ್ಟಿಗೆ ಪ್ರವಾಸದ ವ್ಯಾಖ್ಯೆ ಎರಡೋ ಮೂರೋ ವರ್ಷಗಳಿಗೊಮ್ಮೆ ಹೋಗುತ್ತಿದ್ದ ಧರ್ಮಸ್ಥಳ, ಕಟೀಲು, ಸುಬ್ರಮಣ್ಯ, ಉಡುಪಿ, ಮಂದಾರ್ತಿ, ಶೃಂಗೇರಿ, ಹೊರನಾಡುಗಳಿಗಷ್ಟೆ ಸೀಮಿತವಾಗಿರುತ್ತಿದ್ದವು. ಹೀಗಾಗಿ ಸ್ವಂತ ಸಂಪಾದನೆಗೆ ತೊಡಗಿ ನನ್ನ ಕಾಲಿಗೆ ನಾನೇ ಚಕ್ರ ಕಟ್ಟಿಕೊಳ್ಳುವ ತನಕವೂ ನನಗೆ ಬಾಳಲ್ಲಿ ಕಂಡು ಗೊತ್ತಿದ್ದದ್ದು ಕೇವಲ ಕರುನಾಡ ಎರಡು ಹಾಗೂ ತುಳುನಾಡ ಎರಡು ಜಿಲ್ಲೆಗಳು. ತುಂಬಾ ಎಳೆಯನಾಗಿದ್ದಾಗ ಗುಲ್ಬರ್ಗಾದ ಬಳಿಯ ಕುಗ್ರಾಮವೊಂದಕ್ಕೆ ತಾಯಿಯೊಂದಿಗೆ ಅವರ ಯಾವೋದು ತರಬೇತಿಗಾಗಿ ಹೋಗಿ ಎರಡು ತಿಂಗಳು ಅಲ್ಲೇ ಇದ್ದ ಮಾಸಲು ನೆನಪಿದೆ. ಸ್ಥಳದ ಹೆಸರು ಜಾಲಾಹಳ್ಳಿ ಅಂತೇನೋ ಇತ್ತನ್ನಿಸುತ್ತೆ. ಅದು ಬಿಟ್ಟರೆ ತೀರ್ಥಯಾತ್ರೆಗಳೆ ಉಲ್ಲಾಸಯಾತ್ರೆಗಳೂ ಆಗಬೇಕಿದ್ದ ಅನಿವಾರ್ಯತೆಯ ದಿನಗಳವು. ಬೆಂಗಳೂರಿಗೆ ಬರುವವರೆಗೂ ನನ್ನ ಬದುಕಲ್ಲಿಯೆ ನಾನು ಕಂಡಿದ್ದ ಅತಿ ದೊಡ್ಡ ನಗರವೆಂದರೆ ಅದು ಮಂಗಳೂರು. ಅಲ್ಲಿ ಒಂದೂವರೆ ವರ್ಷ ವಿಧ್ಯಾರ್ಥಿಯಾಗಿದ್ದಾಗ ಅಲ್ಲಿನ "ಶ್ರೀರಾಮಕೃಷ್ಣ ಮಿಶನ್"ನ್ನಿನ ಬಾಲಕಾಶ್ರಮದಲ್ಲಿ ಉಚಿತ ಆಸರೆ ಪಡೆದಿದ್ದೇನೆ. ಇಂತಹ ದೇವಸ್ಥಾನಕ್ಕೆ ಸುತ್ತುಬರುವ- ತಲೆ ಬೋಳಿಸಿಕೊಳ್ಳುವ ಪ್ರವಾಸಗಳು ಅಷ್ಟು ಇಷ್ಟ ಆಗದಿದ್ದರೂ ಅದನ್ನೂ ಬಿಟ್ಟರೆ ಬೇರೆ ಗತಿರ್ನಾಸ್ತಿ ಆಗಿದ್ದರಿಂದ ಅನಿವಾರ್ಯವಾಗಿ ಯಾರಾದರೂ ಕರೆದರೆ ಸಾಕು ಬರಗೆಟ್ಟವನಂತೆ ಅದೆಲ್ಲಿಗೆ ಆದರೂ ಹೊರಟುಬಿಡುತ್ತಿದ್ದೆ. ಶಾಲಾ ಪ್ರವಾಸಗಳಿಗೆ ಹೋಗುವ ಖರ್ಚಿನ ಹಣ ಕೊಡಬೇಕಾದ್ದರಿಂದ, ಅಂತಹ ಯಾವುದೆ ಹಣದ ಮೂಲಗಳು ನನ್ನಲ್ಲಿ ಯಾವುದೂ ಇಲ್ಲದ್ದರಿಂದ ಬೇರೆ ಮಕ್ಕಳು ಹೋಗಿ ನಲಿವುದನ್ನಷ್ಟೇ ನೋಡಿ ತನಿಯಬೇಕಿತ್ತು. ಆದರೆ ಮುಂದೆ ಅಂತಹ ತಿರುಗಾಟಗಳಲ್ಲಿ ಯಾವ ಸ್ವಾರಸ್ಯವೂ ಉಳಿಯಲಿಲ್ಲ. ವಾಸ್ತವವಾಗಿ ಅಧ್ಯಯನ ಪ್ರವಾಸ ನನ್ನ ಆಸಕ್ತಿಯ ವಿಷಯ. ಯಾವುದಾದರೂ ಒಂದು ಸ್ಥಳದ ಹಿನ್ನೆಲೆ ಈ ದೃಷ್ಟಿಯಿಂದ ಪ್ರಚೋದನಕಾರಿಯಾಗಿದ್ದರೆ ನಾನು ಸುಲಭವಾಗಿ ಅದಕ್ಕೆ ಬಲಿ ಬೀಳುತ್ತೀನಿ. ಹೀಗೆ ಅನೇಕ ಸ್ಥಳಗಳನ್ನ ಸುತ್ತಿದ್ದೇನೆ. ಪ್ರಾಚೀನ ದಂತಕಥೆಗಳನ್ನ- ಐತಿಹಾಸಿಕ ಸಂಗತಿಗಳನ್ನ ತಮ್ಮೊಳಗೆ ಗಂಟು ಹಾಕಿಕೊಂಡ ಜಾಗಗಳು ಅದೆಷ್ಟೇ ಹಿಂದುಳಿದ ದರಿದ್ರ ಸ್ಥಿಯಲ್ಲಿದ್ದರೂ ನನ್ನ ಗಮನ ಸೆಳೆಯುತ್ತವೆ. ಐಶಾರಾಮ-ಸುಖಲೋಲುಪತೆ ನನ್ನ ಪ್ರವಾಸಾಸಕ್ತಿಗೆ ಚುಂಬಕವಲ್ಲ. ಹೀಗಾಗಿಯೇ ವಿದೇಶಿ ಪ್ರವಾಸದ ವಿಷಯಕ್ಕೆ ಬಂದರೆ ಅಮೆರಿಕೆ ಸೇರಿದಂತೆ ಅನೇಕ ಐರೋಪ್ಯ ದೇಶಗಳು ನನ್ನ ಆಯ್ಕೆ ಪಟ್ಟಿಯಲ್ಲಿಲ್ಲ. ಅತಿ ಸಿರಿವಂತಿಕೆಯ ಬಿಟ್ಟಿ ಪ್ರದರ್ಶನದ ಮಾದರಿಯನ್ನು ಸಿಂಗಾಪುರದಲ್ಲಿ ಕಂಡು ಹೇಸಿಗೆ ಪಟ್ಟುಕೊಂಡಿದ್ದೆ. ಅದೇ ಆಫ್ರಿಕೆಯ ದೇಶಗಳು, ಅಫಗನಿಸ್ತಾನ, ಉಜ್ಬೇಕಿಸ್ತಾನ, ಶ್ರೀಲಂಕ, ಬ್ರಜಿಲ್, ಪಾಕಿಸ್ತಾನ, ಈಜಿಪ್ತ, ಗ್ರೀಸ್, ಸ್ಪೇನ್, ಬೊಲಿವಿಯಾ, ಕೊಲಂಬಿಯಾ, ಬ್ರಜಿಲ್, ನೇಪಾಳ, ಕಾಂಬೋಡಿಯ, ಬರ್ಮಾ, ಮೆಕ್ಸಿಕೋ ನನ್ನಾಯ್ಕೆಯ ಪಟ್ಟಿಯಲ್ಲಿ ಮೊದಲ ಸ್ಥಾನಗಳಲ್ಲಿ ರಾರಾಜಿಸುತ್ತವೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚಿನ ದೇಶಗಳಿಗೆ ಒಂದುಸುತ್ತು ತಿರುಗಾಲ ತಿಪ್ಪನಂತೆ ಹೋಗಿ ಹಣಕಿ ಬಂದಿದ್ದೇನೆ. ಮತ್ತೊಮ್ಮೆ ಹೋಗಲಿಕ್ಕೂ ಇದೆ. ಅವ್ಯಕ್ತವಾಗಿ ಈ ದೇಶಗಳಲ್ಲಿ ಇರುವ ಸೆಳೆತ socalled ಸುಖಿ ಕಲ್ಪನೆಯ ರಾಷ್ಟ್ರಗಳಲ್ಲಿ ಇರದೆ ಇರುವುದಕ್ಕೆ ಯಾವುದೇ ಐತಿಹಾಸಿಕ ಕಥಾ ಹಿನ್ನೆಲೆಯ ಬಲ ಅವುಗಳಲ್ಲಿ ಇಲ್ಲದಿರೋದೆ ಕಾರಣವೇನೋ ಅನ್ನಿಸುತ್ತೆ ಕೆಲವೊಮ್ಮೆ. ಅನುಕ್ಷಣ ಹೋರಾಟದ ಜೀವಂತ ಘಳಿಗೆಗಳು ಬದುಕಿನಲ್ಲಿ ಉಪ್ಪಿನಕಾಯಿಯ ಹಾಗಿದ್ದರೆ ವಿಷಯ ಬೇರೆ: ಆದರೆ ಮನಸ್ಸೇ ಇಲ್ಲದಿದ್ದರೂ ಬದುಕುವ ಸವಾಲಿನ ಭೀತಿಯ ಮುಂದೆ ವಾಸ್ತವಗಳ ಗೋಡೆಗೆ ಅನಿವಾರ್ಯವಾಗಿ ತಲೆಚಚ್ಚಿಕೊಳ್ಳುವುದೇ ಅಭ್ಯಾಸವಾಗುತಿರುವಾಗ ಈ ಸುಖಲೋಲುಪತೆಗಳು ನನಗೆ ಆಕರ್ಷಕ ಅನ್ನಿಸದೆ ಹೋದವೇನೋ! ಹೀಗಾಗಿ ತಮ್ಮ ಕನಿಷ್ಠ ಅಗತ್ಯಗಳಿಗಿಂತ ಹೆಚ್ಚಿನ ಐಭೋಗದ ಮೇಲೆ ಹಕ್ಕು ಸಾಧಿಸೋದು ಇನ್ನೊಬ್ಬ ಅರ್ಹನ ಅನ್ನಕ್ಕೆ ಕನ್ನ ಹಾಕಿದಂತೆ ಎನ್ನುವ ಭಾವನೆ ದಟ್ಟವಾಗಿ ನನ್ನೊಳಗೆ ಬೇರು ಬಿಟ್ಟಿದೆ. ಯಾವುದೇ ಜಾಗ ನನ್ನ ಆಸಕ್ತಿ ಕೆರಳಿಸಲು ಅದರೊಳಗೊಂದು ಕಥೆ ಹುದುಗಿರಬೇಕು ಅನ್ನಿಸುತ್ತೆ, ಬಾಲ್ಯದಲ್ಲಿ ಬಾಲವಾಡಿ-ಶಿಶುವಿಹಾರದಲ್ಲಿ ಕೇಳಿದ್ದ ಕಥೆಗಳು, ಎದುರು ಮನೆ ಬಪಮನಿಂದ ( ಕೊಂಕಣಿಯಲ್ಲಿ ಬಪಮ ಎಂದರೆ ಅಪ್ಪನ ಅಮ್ಮ , ಅಜ್ಜಿ) ಬಾಯಿಂದ ಕೇಳಿ ಕಲ್ಪಿಸಿಕೊಳ್ಳುತ್ತಿದ್ದ ಪಿಳಿಪ-ಪಿಟರನ ಕಥೆಗಳು (ಫಿಲಿಪ್ ಹಾಗೂ ಪೀಟರ್'ನ ಬಪಮ ಉಚ್ಚಾರ ಅದು!.), ಅವ್ರೆ ಹೇಳಿದ್ದ ಆಗುಂಬೆ ಘಾಟಿಯ ಭಯಾನಕ ಡಕಾಯಿತರ ಕಥೆಗಳು, ನನ್ನಜ್ಜನ ಬಾಯಿಂದ ಕೇಳುತ್ತಿದ್ದ ಹಳೆ ತೀರ್ಥಹಳ್ಳಿಯ ಆಗುಹೋಗಿನ ಕಥೆಗಳು, ಅಮ್ಮನೊಟ್ಟಿಗೆ (ಅಜ್ಜಿಗೆ ನಾನು ಅಮ್ಮ ಎನ್ನುತ್ತೇನೆ) ಅವರ ತವರು ಸಾಗಿನಬೆಟ್ಟಿಗೆ ಶಾಲಾರಜೆಯಲ್ಲಿ ಹೋಗಿದ್ದಾಗ ಕೇಳಲು ಸಿಗುತ್ತಿದ್ದ ಹೇರಳ ಕಥೆಗಳು, ಅಲ್ಲಿನ ಚಾವಡಿ ದೈವಗಳ ಕೋಲ-ತಂಬಿಲಗಳ ಪ್ರತ್ಯಕ್ಷ ದರ್ಶನ, ನಾಗಮಂಡಲಗಳ ಪ್ರಾತ್ಯಕ್ಷಿಕೆ, ಸತ್ಯದೈವಗಳಾದ ಭೂತಗಳ ಹಿನ್ನೆಲೆ ವಿವರಿಸುತ್ತಿದ್ದ ಕಥೆಗಳು, ಕಲ್ಕುಡ-ಕಲ್ಲುರ್ಟಿ.. ಕೋಟಿ-ಚೆನ್ನಯ... ಆಗೋಳಿ ಮಂಜಣನ ( ಅವನೊಬ್ಬ ದೈತ್ಯಾಕಾರದ ಮಡ್ಡ ಮನದ ಸಾಹಸಿಗ, ಹಿಂದೆ ಬದುಕಿದ್ದ.) ಬೆರಗು ಹುಟ್ಟಿಸುವ ಕಥೆಗಳು, ರಾಂಪಣ್ಣನ ಹಾಸ್ಯ ಕಥೆಗಳು, ಇನ್ನು ಗದ್ದೆ ಕಾಯುವವರ ಕಾದು ಹಂದಿ ಹೊಡೆದ- ಕಾಟಿಯನ್ನು ಕಂಡು ಎದುರಿಸಿದ- ಕುರ್ಕಕ್ಕೆ ಬೆದರಿಸಿದ ಸಾಹಸದ ಕಥೆಗಳು, ಒಂಚೂರು ಅಕ್ಷರ ಓದಲು ಬಂದಾಗ ಎದುರು ಮನೆ ರಾಘಣ್ಣನವರ ಮನೆಯಿಂದ ಕಡ ತಂದು ಓದಿ ಮರಳಿಸಲು ಮನಸ್ಸಾಗದಿದ್ದ "ಚಂದಾಮಾಮ"ನ ವಿಕ್ರಮ-ಬೇತಾಳ, ಭೋಧಿಸತ್ವನ ಜಾತಕಕಥೆಗಳು, ರಾಮಾಯಣ, ಶ್ರೀಮಧ್ಭಾಗವತದ ಕಥೆಗಳು, "ಬಾಲಮಿತ್ರ"ದ ಮಂಡೂಕ ದ್ವೀಪದಲ್ಲಿ ರಾಜಕುಮಾರಿ, ಮಿನಿ ಕಾದಂಬರಿ, ಮೇಲ್ಮವತ್ತೂರಿನ ಆದಿಪರಾಶಕ್ತಿಯ ಕಥೆಗಳು, "ಬೊಂಬೆಮನೆ"ಯ ವಿಕ್ರಮಶೀಲ, ನಳ-ದಮಯಂತಿ, ಆಡುಗೂಲಜ್ಜಿ, ದುಷ್ಯಂತ-ಶಾಕುಂತಳೆಯರ ಕಥೆಗಳು ಹೀಗೆ ಬಾಲ್ಯವೆಲ್ಲ ಬಣ್ಣಿಸಲಸದಳ ಕಥೆಗಳ ಜಡಿಮಳೆಯಲ್ಲಿ ಅಕ್ಷರಶಃ ಕೊಚ್ಚಿಕೊಂಡೆ ಹೋಗಿತ್ತು. ಹೊರಗೆ ಜೋರು ಮಳೆ ಚಚ್ಚಿ ಊರಿಗೆ ಊರನ್ನೆ ಹೈರಾಣು ಮಾಡುತ್ತಿದ್ದರೆ ನಾನು ಒಳಗೊಳಗೆ ಕಥೆಗಳ ಮುಸಲಧಾರೆಯಲ್ಲಿ ತೋಯ್ದು ತೋಪ್ಪೆಯಾಗುತ್ತಿದ್ದೆ. ಹೀಗಿದ್ದೂ ಈ ಕಥಾಸರಿತ್ಸಾಗರದ ದಾಹ ತೀರಿರಲಿಲ್ಲ, ವಾಸ್ತವವಾಗಿ ಇನ್ನೂ ಅದು ತೀರಿಯೂ ಇಲ್ಲ, ಬಾಲ್ಯದಲ್ಲಂತೂ ಚೂರು ಸಿಕ್ಕರೆ ಇನ್ನಷ್ಟರ ಆಸೆ ಹುಟ್ಟಿ, ಇನ್ನಷ್ಟು ಸಿಕ್ಕರೆ ಮತ್ತಷ್ಟರ ಅತಿಯಾಸೆ ಗರಿದೆದರಿ ಆಸೆ-ಅತಿಯಾಸೆಯ ಮಟ್ಟ ದಾಟಿ ದುರಾಸೆಯ ಆಜುಬಾಜುಗಳಲ್ಲಿ ಅದು ಮನಸೊಳಗೆ ಓಡಾಡುತ್ತಿತ್ತು. ಅಗೋಳಿ ಮಂಜಣ ಈಗಲೂ ನನ್ನ ಆಸಕ್ತಿ ಕೆರಳಿಸುವ ಕಥಾಪುರುಷ. ಅಗೋಳಿ ಎಂದರೆ ತುಳುವಿನಲ್ಲಿ ಊಟದ ಹರಿವಾಣ ಅಥವಾ ಅಗಲವಾದ ಊಟದ ತಟ್ಟೆ ಎಂದರ್ಥ. ಮಂಗಳೂರು ಬಳಿಯ ಚೇಳಾರುಗುತ್ತಿನಲ್ಲಿ ಮಂಜಣ ಬಾಳಿ ಬದುಕಿದ್ದ. ಬಪ್ಪ ನಾಡಿನ ದಪ್ಪ ಕಲ್ಲು ಕಂಭವನ್ನ ಅವನೊಬ್ಬನೆ ಎತ್ತಿದ್ದ ಕಥೆ ಅಜ್ಜಿಯಿಂದ ಕೇಳಿ ನಾನು ಬೆಚ್ಚಿಬಿದ್ದಿದ್ದೆ. ತುಳುನಾಡಿನಲ್ಲಿ ಅಲ್ಲಿನ ಎಳೆ ಮಕ್ಕಳಿಗೆ ಅವರ ಅಜ್ಜ ಅಜ್ಜಿಯಂದಿರು ಬಾಲ್ಯದಲ್ಲಿ ಹೇಳುವ ಜಾನಪದ ಕಥೆಗಳಲ್ಲಿ ಅವನು ತನ್ನ ಹುಂಬ ಸಾಹಸಗಳಿಗಾಗಿ- ಬಕಾಸುರ ಭೋಜನಕ್ಕಾಗಿ ಪ್ರಸಿದ್ದ. ಮಕ್ಕಳು ಅವನ ಕಥೆಗಳನ್ನ ಊಟ ನಿದ್ದೆ ಮರೆತು ಕಣ್ಣು ಬಾಯಿ ಬಿಟ್ಟು ಕೇಳುವುದೂ ಇದೆ. ಒಮ್ಮೆ ಅವನು ಮನೆಗೆ ಹಟ್ಟಿಗೆ ಬೇಕಾದ ಸೊಪ್ಪನ್ನ ಕಾಡಿನಲ್ಲಿ ಕಡಿದು ಹೊತ್ತು ತಂದು ಗುತ್ತಿನ ಅಂಗಳದಲ್ಲಿ ಅದರ ಕಟ್ಟನ್ನ ಹೊತ್ತು ಹಾಕಿ ಕಟ್ಟಿದ್ದ ಬಳ್ಳಿ ಬಿಚ್ಚಿದಾಗ ಒಂದು ಭಾರಿ ಗಾತ್ರದ ಕಾಡು ಹಂದಿ ಅದರೊಳಗಿಂದ ಬೆದರಿ ಬೆಚ್ಚಿ ಕಾಡಿಗೆ ಪೇರಿ ಕಿತ್ತಿತಂತೆ! ಆ ಒಡ್ದ ಸಾಂಬ್ರಾಣಿಗೆ ತಾನು ಕಟ್ಟುವ ಕಟ್ಟಿನಲ್ಲಿ ಹಂದಿ ಹೊಕ್ಕಿರುವುದೂ ಗೊತ್ತಿರಲಿಲ್ಲ! ಅದರ ತೂಕವೂ ಕಾಡಿಂದ ಹೊತ್ತು ತರುವಾಗ ಅರಿವಿಗೆ ಬಂದಿರಲಿಲ್ಲ!! ಇದು ಕಲ್ಪನೆ ಅಲ್ಲ ಸತ್ಯವಾಗಿ ನಡೆದದ್ದು ಅಂತ ಅಜ್ಜಿ ಹೇಳುತ್ತಿದ್ದರು. ಪಂಜೆ ಮಂಗೇಶರಾಯರು ಮಕ್ಕಳಿಗಾಗಿ ಬರೆದಿದ್ದ ಅವನ ಕಥೆ ಸಹಿತ ಪದ್ಯ ಓದಿ ನಾನೂ ಅವನನ್ನು ತಪ್ಪಾಗಿ ಅರ್ಥೈಸಿದ್ದೆ. ಆದರೆ ಸಂಶೋಧಕಿ ಇಂದಿರಾ ಹೆಗ್ಗಡೆ ಯವರು ಬರೆದ "ಚೇಳಾರುಗುತ್ತು ಮಂಜಣ್ಣಾಯ್ಗೆರ್ " ಕೃತಿ ಓದಿ ತಪ್ಪು ತಿಳುವಳಿಕೆಯನ್ನು ತಿದ್ದಿಕೊಂಡಿದ್ದೇನೆ. ( ಅಂದಹಾಗೆ ಈ ಚೇಳಾರುಗುತ್ತು ಮಂಗಳೂರಿನ ಬಳಿ ಉಡುಪಿ ಮಾರ್ಗದಲ್ಲಿ ಇದೆ ಹಾಗು ಇದು ಸ್ವತಃ ಆ ಲೇಖಕಿಯ ಗಂಡನ ಮನೆ) ಅವನ ಕುರಿತು ನನ್ನ ಆಸಕ್ತಿ ಕೆರಳಿಸಿದ್ದ ಪಂಜೆಯವರ ಕವನ ಹೀಗಿತ್ತು. ಅದರಲ್ಲಿ ಮಂಜಣ ಹೀಗೆ ಹೇಳ್ತಾನೆ ನೋಡಿ "ಕಾರ್ಲದ ಬಾಕ್ಯಾರ್ ಕಂಜನ ಆವೋಡು, ಕೊಡಂಜದ ಕಲ್ ಉಡಾರ್ಗೆ ಆವೋಡು, ಗುಜ್ಜೆರೆ ಕೆದು ಪೇರಾವೊಡು, ಎನ್ನಪ್ಯೇ ದುಗ್ಗು ಬಳಸೋಡು, ಯಾನ್ ಮಗೆ ಮಂಜಣೆ ಕುಲ್ಲುದು ಉಣೋಡು!" (ಕಾರ್ಕಳದ ಬಾಕಿಮಾರು ಗದ್ದೆ ತಟ್ಟೆಯಾಗಬೇಕು, ಕೊಣಾಜೆಯ ಅವಳಿ ಕೊಡುಗಲ್ಲುಗಳು ಉಡಾರ್ಗೆ ಅಂದರೆ ಕಡುಬಾಗಬೇಕು, ಗುಜ್ಜೆರೆ ಕೆರೆಯ* ನೀರೆಲ್ಲ ಹಾಲಾಗಬೇಕು, ನನ್ನಮ್ಮ ದುಗ್ಗು ಬಡಿಸಬೇಕು, ಮಗ ನಾನು ಮಂಜಣ್ಣ ಕೂತುಣ್ಣಬೇಕು! ) *ಅಜ್ಜಿ ಹೇಳುತ್ತಿದ್ದ ಕಥೆಯಲ್ಲಿ ಅದು ಕಾರ್ಕಳದ "ರಾಮಸಮುದ್ರ"ವಾಗಿರುತ್ತಿತ್ತು. ಮಾರಾಯ ಅಬ್ಬ! ಕಾರ್ಕಳದ ಕಾಬೆಟ್ಟಿನ ಏಳ್ನಾಡುಗುತ್ತಿನ ೧೨೦ ಎಕರೆ ಬಾಕಿಮರು ಗದ್ದೆಯಷ್ಟು ದೊಡ್ಡತಟ್ಟೆ ಇದ್ದರೇನೆ ಕೊಣಾಜೆ ಕಲ್ಲಿನಷ್ಟು ಗಾತ್ರದ ಕಡುಬು ಹಿಡಿಸಲು ಸಾಧ್ಯ, ಇನ್ನು ಅದಕ್ಕೆ ನಂಚಿಕೊಳ್ಳಲು ಗುಜ್ಜೆರೆ ಕೆರೆಯ ನೀರಿನಷ್ಟು ಹಾಲು ಬೇಕೇಬೇಕು! ಅಷ್ಟನ್ನು ಅ ದೊಡ್ಡ ಇಕ್ಕುಗೈಯ ಅವನಮ್ಮ ಬಡಿಸಬೇಕಂತೆ! ಇವ ಮಗ ಮಂಜಣ ಕೂತು ಉಣ್ಣಬೇಕಂತೆ!!! ನೀವೇ ಹೇಳಿ ಇಂತಹ ಉತ್ಪ್ರೇಕ್ಷಿತ ಕಥಾ ನಾಯಕ ಬಾಲ್ಯದಲ್ಲಿ ಬೆರಗು ಹುಟ್ಟಿಸಲಾರನೆ? ಸಾಗರದಿಂದ ಮೇಲು ಬಸ್'ಸ್ಟ್ಯಾಂಡಿಗೆ ಬಂದ ಕೂಡಲೆ ಬಸ್ ಬಾಗಿಲಲ್ಲಿ ತುಂಬಿ ತುಳುಕುವ ಪ್ರಯಾಣಿಕರ ಧಾವಂತ ಯಾವಾಗಲೂ ಸಾಮನ್ಯವಾಗಿ ಇದ್ದೆ ಇರುತ್ತಿತ್ತು. ನಮ್ಮ ಕಡೆ ಡ್ರೈವರ್ ಬಾಗಿಲಿನಲ್ಲಿ ನುಗ್ಗೋದು- ಟಾಪ್ ಮೇಲೆ ಕೂತು ಪ್ರಯಾಣಿಸೋದು ಆಗಲೂ ಇರಲಿಲ್ಲ, ಈಗಲೂ ಇಲ್ಲ. ಇಲ್ಲಿ ಯಾರೂ ಬಸ್ಸು ಬಂದ ಕೂಡಲೆ ಜೊತೆಯಲ್ಲೆ ಓಡೋಡುತ್ತಾ ಉಟ್ಟ ಪಂಚೆಯನ್ನೇ ಬಿಚ್ಚಿ ಸೀಟು ಹಿಡಿಯಲು ಹಾಕೋದೂ ಇಲ್ಲ! ಅದರಲ್ಲೆಲ್ಲ ವಿಪರೀತ ನಾಗರೀಕರು ನಮ್ಮೂರಿನವರು. ಇಳಿಯುವವರ ನಡುವೆ ಹರಸಾಹಸ ಮಾ ಡಿ ಬಸ್ಸನ್ನೇರೋದು ನನ್ನಂತ ಲಗೇಜಿನ ಹಂಗಿಲ್ಲದಿದ್ದ ಎಳೆಯರಿಗೆ ಚಿಟಿಕೆ ಹೊಡೆದಷ್ಟು ಸುಲಭ. ಹೀಗಾಗಿ ಅಮ್ಮ ತವರಿಗೆ ಸಾಗರ- ಗುರುವಾಯನಕೆರೆ ಬಸ್ಸಿಗೆ ಹೋಗಲಿಕ್ಕಿದ್ದಾಗ ನಾನು ಅರಂಟಿ ರಾಪಾಟ ಮಾಡಿ ಸೀಟು ಹಿಡಿಯುವ ಆಸೆಗೆ ಎಂದೂ ಕಲ್ಲು ಬಿದ್ದಿರಲಿಲ್ಲ. ಸಾಗರದ ದಿಕ್ಕಿನಿಂದ ಹೊರಟು ತೀರ್ಥಹಳ್ಳಿಯ ಮೇಲ್'ಬಸ್'ಸ್ಟ್ಯಾಂಡಿಗೆ ಬರುತ್ತಿದ್ದ ಬಸ್ ಒಂದು ಕಿಲೋಮೀಟರ್ ದೂರದ ಮುಖ್ಯ ಬಸ್ ನಿಲ್ದಾಣಕ್ಕೆ ಹೋಗಿ ಬಂದ ಶಾಸ್ತ್ರ ಮಾಡಿ ಪುನಃ ಮಂಗಳೂರಿನತ್ತ ಮುಖ ಮಾಡುತ್ತ ಮೇಲಿನ'ಸ್ಟ್ಯಾಂಡಿಗೆ ಬರಬೇಕಲ್ಲ? ಸಾಗರದಿಂದ ಬಸ್ ಬಂದದ್ದೆ ಇಳಿಯುವವರಿಗೂ ಬಿಡದೆ ಮೊದಲೆ ತೂರಿಕೊಂಡು ಖಾಲಿಯಾದ ಸೀಟೊಂದನ್ನು, ಅದರಲ್ಲೂ ಕಿಟಕಿ ಪಕ್ಕದ ಸೀಟನ್ನೇ ಕಬಳಿಸಿ ಅಲ್ಲೇ ಶತಶತಮಾನಗಳಿಂದ ಬೇರು ಬಿಟ್ಟ ಉದ್ಭವ ಮೂರ್ತಿಯಂತೆ ಕೂತುಬಿಡುತ್ತಿದ್ದೆ. ಅಮ್ಮ ಕೆಳಗಡೆಯೆ ನಿಂತು ಕಾಯುತ್ತಿರುವಾಗ ಬಸ್ ಊರ ಸವಾರಿಗೆ ಹೊರಟು ಮರಳಿ ಬಂದಲ್ಲಿಗೆ ಮುಟ್ಟುತ್ತಿತ್ತು. ಈ ಹೊತ್ತಿಗೆ ಮಾಡಿರುತ್ತಿದ್ದ ಎರಡು ಕಿಲೋಮೀಟರ್ ಬಿಟ್ಟಿ ಪ್ರಯಾಣ ನನ್ನೊಳಗಿನ ಬಸ್ ಸವಾರಿಯ ತೆವಲನ್ನು ಬಹುಪಾಲು ತೀರಿಸಿರುತ್ತಿತ್ತು. ಕಾಯುತ್ತಿದ್ದ ಅಮ್ಮನಿಗೆ ಅವರ ಸೀಟನ್ನ ಬಿಟ್ಟು ಕೊಟ್ಟು ಒಲ್ಲದ ಮನಸ್ಸಿನಿಂದ ಕೆಳಗಿಳಿಯುತ್ತಿದ್ದೆ. ಬಸ್ ಮುಂದೆ ಹೊರಟು ನನ್ನ ದೃಷ್ಟಿಯಿಂದ ಪೂರ್ತಿ ಮರೆಯಾಗುವವರೆಗೂ ಅಲ್ಲಿಯೆ ನಿಂತಿದ್ದು ಅನಂತರವಷ್ಟೇ ಭಾರವಾದ ಹೆಜ್ಜೆ ಎಳೆಯುತ್ತ ಮನೆಯತ್ತ ಹೊರಡುತ್ತಿದ್ದೆ. ನನಗೆ ಅರಿವಿಲ್ಲದೆ ಕಣ್ಣುಗಳೆರಡೂ ತುಂಬಿ ಬಂದು ಮುಂದಿನ ಮಾರ್ಗವೆಲ್ಲ ಮಂಜುಮಂಜಾಗುತ್ತಿದ್ದವು. ಈ ಕಣ್ಣೀರು ಅಮ್ಮ ನನ್ನನ್ನು ಜೊತೆಗೆ ಕರೆದೊಯ್ಯದಿದ್ದುದಕ್ಕೋ? ಇಲ್ಲವೆ ಅವರನ್ನಗಲಿ ಮುಂದಿನ ನಾಲ್ಕಾರು ದಿನ ಇರಬೇಕಿದ್ದುದಕ್ಕೋ ಗೊತ್ತಿರುತ್ತಿರಲಿಲ್ಲ. ಅವರಿಗೂ ಆ ಹೊತ್ತಿನಲ್ಲಿ ಕಣ್ತುಂಬಿ ಬಂದಿರಬಹುದು ಎಂದುಕೊಳ್ಳುತ್ತಿದ್ದೆನಾದರೂ ತವರಿಗೆ ಹೋಗುವಾಗ ಸಹಜವಾಗಿ ಉಲ್ಲಾಸದಿಂದ ಇರಬಹುದಾಗಿದ್ದ ಅವರ ದೃಷ್ಟಿಕೋನದಿಂದ ಯಾವಾಗಲೂ ಯೋಚಿಸಿರಲೇ ಇಲ್ಲ. ಬಾಳಿನಲ್ಲಿ ಅನೇಕ ಬಾರಿ ತಪ್ಪು ಹೆಜ್ಜೆಗಳನ್ನು ಇಟ್ಟಿದ್ದೇನೆ ಅನ್ನಿಸುತ್ತೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದಾಗಲೆಲ್ಲ ಸೆಟೆದು ನಿಂತಿದ್ದೇನೆ. ಆದರೆ ಘಟನೆಯೊಂದರಲ್ಲಿ ನನ್ನಿಂದಲೆ ಅಚಾತುರ್ಯ ಘಟಿಸಿದ್ದಾಗ ಭಿಡೆಯಿಲ್ಲದೆ ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ್ದೇನೆ. ನನ್ನ ಸಹಜ ಸಿದ್ಧ ಸ್ವಭಾವವನ್ನ ನಾನು ಆತ್ಮಾಭಿಮಾನ ಅಂತೇನೆ, ಉಳಿದವರು ದುರಹಂಕಾರ ಅಂತಾರೆ ಇಷ್ಟೇ ವ್ಯತ್ಯಾಸ! ಒಟ್ಟಿನಲ್ಲಿ ಇದ್ದದ್ದನ್ನು ಇದ್ದ ಹಾಗೆ ಹೇಳುತ್ತಾ ನೇರವಾಗಿ ನಡೆಯೋದರಿಂದ ಅನೇಕರ ನಿಷ್ಠೂರ ಕಟ್ಟಿ ಕೊಳ್ಳಬೇಕು ಅನ್ನುವ ಸಂಗತಿ ಮಾತ್ರ ಖಚಿತವಾಗಿದೆ. ನಾನಾ ರೀತಿಯ ಅಯೋಗ್ಯರೆಲ್ಲ ಎತ್ತರದ ಸ್ಥಾನಗಳಿಗೆ ಲಗ್ಗೆ ಹಾಕುವಾಗ ಅಂತಲ್ಲಿಗೆ ತಲುಪುವ ಸಕಲ ಅರ್ಹತೆ ಇದ್ದೂ ನಾನಲ್ಲಿಗೆ ತಲುಪುವಲ್ಲಿ ಎಡವುತಿರೋದು ವಿಷಾದವೆನಿಸಿದರೂ ಜಿಗುಪ್ಸೆಯನ್ನಂತೂ ಖಂಡಿತಾ ಹುಟ್ಟಿಸಿಲ್ಲ. ನನ್ನೊಳಗೆ ನಾ ಪ್ರಾಮಾಣಿಕನಾಗಿರುವ ಭರವಸೆ ಕೈ ಬಿಡದ ತನಕ ಅಯೋಗ್ಯರ socalled ಉನ್ನತಿ ನನ್ನನ್ನು ಹತಾಶನನ್ನಾಗಿಸಿಲ್ಲ ನಂಬದ ದೇವರನ್ನ ಉದ್ದೇಶಿಸಿ ನಾ ಹೇಳೋದು ಇಷ್ಟೆ thank god i didn't become cynical ! ಸಂಬಂಧಗಳ ವಿಚಾರಗಳಲ್ಲೂ ನನ್ನ ಧೋರಣೆ ನೇರ. ಹಾಗೆ ನೋಡಿದರೆ ತೀರ್ಥಹಳ್ಳಿಯ ದಿನಗಳಿಂದಲೂ ನಾನು ಬಹುಪಾಲು ಒಬ್ಬಂಟಿ. ಶಾಲೆಯಲ್ಲೂ ನನಗೆ ಹೆಚ್ಚು ಗೆಳೆಯರಿರಲಿಲ್ಲ. ಆಗೆಲ್ಲ ಕೀಳರಿಮೆಯ ಕೂಪದಲ್ಲಿದ್ದುದೆ ಅದಕ್ಕೆ ಕಾರಣ. ನನ್ನ ಜೊತೆ ಓದುವವರೆಲ್ಲ ತಕ್ಕ ಮಟ್ಟಿನ ಸ್ಥಿತಿವಂತರೆ, ನನ್ನದೋ ಕುಚೇಲನಿಗೆ ಹತ್ತಿರದ ನೆಂಟಸ್ತನ. ಇತ್ತ ನನ್ನ ಹೆತ್ತಮ್ಮನದೊಂದು ದ್ವಿಮುಖ ವ್ಯಕ್ತಿತ್ವ. ತನ್ನ ನಿರೀಕ್ಷೆ-ಅಗಾಧವಾಗಿದ್ದ ಬಾಳಿನ ಕನಸುಗಳನ್ನೆಲ್ಲ ಮಣ್ಣು ಪಾಲಾಗಿಸಿದ್ದ ನಾನು ಕೂತಲ್ಲಿ ನಿಂತಲ್ಲಿ ತಪ್ಪು ಕಂಡು ಹಿಡಿದು ಭೀಕರವಾಗಿ ಶಿಕ್ಷಿಸುತ್ತಿದ್ದಳು. ಬಿಸಿ ಇಸ್ತ್ರಿಪೆಟ್ಟಿಗೆಯಿಂದ ಕೈ ಸುಡುವುದು, ವಿದ್ಯುತ್ ಸ್ಟವ್ ಬಿಸಿ ಮಾಡಿ ಬಲವಂತವಾಗಿ ಕೈಯಿಂದ ಮುಟ್ಟಿಸುವುದು, ಬ್ಯಾಡಗಿ ಮೆಣಸಿನ ಹೊಗೆ ಹಾಕುವುದು, ದನ ಕಟ್ಟುವ ಹಗ್ಗದಲ್ಲಿ ಕೈ ಹಿಂದೆ ಬಿಗಿದು-ಕಾಲು ಕಟ್ಟಿ ಕೋಣೆಯಲ್ಲಿ ಕೂಡಿ ಹಾಕೊದು ಇಂತಹ ಪೈಶಾಚಿಕ ಶಿಕ್ಷೆಗಳನ್ನೆಲ್ಲ ಇನ್ನೂ ವಯಸ್ಸು ಆರು ಮುಟ್ಟುವ ಮೊದಲೆ ಅನುಭವಿಸಿದ್ದೆ. ಕೈಗೆ ಸಿಕ್ಕ ಮಣೆ-ಕೋಲು-ಹಗ್ಗಗಳಲ್ಲಿ ಹೊಡೆಸಿಕೊಂಡದ್ದು ಇವುಗಳ ಮುಂದೆ ಏನೇನೂ ಅಲ್ಲ. ಆಗೆಲ್ಲ ಅಮ್ಮ ಅವರ ಕ್ರೂರ ಕೈಯಿಂದ ನನ್ನ ಕುಸ್ತಿ ಮಾಡಿಯಾದರೂ ಬಿಡಿಸಿ ಕೊಳ್ಳೋದಿತ್ತು. ಅದು ಅವರ ಒಂದು ಮುಖವಾದರೆ ಸಾಮಾಜಿಕವಾಗಿ ಹೊರಗಡೆ ನಾನು ಅತಿ ಕಟ್ಟುನಿಟ್ಟಿನಿಂದ ಬೆಳೆದ ಶಿಸ್ತಿನ ಹುಡುಗ ಎಂದು ಬಿಂಬಿಸುವ ತೆವಲು! ಓದಿನಲ್ಲೂ ಪ್ರತಿಷ್ಠಿತ ಶಾಲೆಯಲ್ಲೇ ಓದಿಸಬೇಕೆಂಬ ಹುಚ್ಚು ಹಂಬಲ. ಆಗ ತೀರ್ಥಹಳ್ಳಿಯ ಮಟ್ಟಿಗೆ ಇದ್ದುದು ಎರಡೆ ಎರಡು ಖಾಸಗಿ ಶಾಲೆಗಳು. ಪರೀಕ್ಷೆಯ ಫಲಿತಾಂಶದಿಂದ ಹಿಡಿದು ಕ್ರೀಡಾಕೂಟ ಇನ್ನಿತರ ಚಟುವಟಿಕೆ ಹಾಗು ನವೊದಯಕ್ಕೆ ಆಯ್ಕೆಗಳಂತಹ ಸಣ್ಣ ಸಣ್ಣ ವಿಷಯಗಳಲ್ಲೂ ರಾಷ್ಟ್ರೋತ್ಥಾನ ಪರಿಷತ್ ನ ಅಂಗಸಂಸ್ಥೆ 'ಸೇವಾ ಭಾರತಿ" ಹಾಗು ಕ್ಯಾಥೊಲಿಕ್ ಮಹಾಸಭಾದ ಅಂಗಸಂಸ್ಥೆ 'ಸೆಯಿಂಟ್ ಮೇರಿಸ್' ಶಾಲೆಗಳ ನಡುವೆ ಭಾರೀ ಪೈಪೋಟಿ ಚಾಲ್ತಿಯಲ್ಲಿತ್ತು. ಸರ್ಕಾರಿ ಶಾಲೆಗಲಾ ಬಗ್ಗೆ ನನ್ನ ತಾಯಿ ಸಸಾರ ಬೆಳೆಸಿ ಕೊಂಡಿದ್ದರಿಂದ ನನ್ನನ್ನು ಸೇವಾಭಾರತಿಯ ಶಿಶು ಮಂದಿರ 'ಭಾರತಿ ಶಿಶುವಿಹಾರಕ್ಕೆ ಸೇರಿಸಲಾಗಿತ್ತು. ಆದರೆ ಅದಾಗಲೇ ನಾನು ಮನೆಯ ಹತ್ತಿರವೆ ಪುರಸಭೆಯವರು ನಡೆಸುತ್ತಿದ್ದ ಒಂದು ವರ್ಷ ರೋಟರಿ ಶಿಶುವಿಹಾರದಲ್ಲಿ ಪುಟು ಪುಟು ಹೆಜ್ಜೆಯಿಡುತ್ತಾ ಹೋಗಿ ಬಂದು ಮಾಡಿ ತಕ್ಕ ಮಟ್ಟಿಗೆ ಆಡಲು ಹಾಡಲು ಕಲಿತಿದ್ದೆ.

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು