ನಿನ್ನೊಂದು ನಗುವ ಕದ್ದು....
ಸಾಲು ಕನಸುಗಳ ನಡುವಿನಿಂದ
ಬೇರೆ ಸರಿದ ನಿನ್ನೊಂದು ಕನಸು...
ನನ್ನ ಇರುಳ ತುಂಬಾ ಸಂತಸದ ಮುತ್ತುಗಳ ಸುರಿದು
ಮತ್ತೆ ಅದೆ ಸಾಲಿನಲ್ಲಿ ಸೇರಿ ಲೀನವಾಯ್ತು/
ಮೆಲ್ಲಗೆ ಮನಸಿನಂಗಳ ದಾಟಿದ
ಮೋಹಕ ಕನಸು....
ಭಾವಗಳ ಹೂ ತೋಟದಲ್ಲಿ
ನಿನ್ನ ಮೊಗವರಳಿಸಿಕೊಂಡ ಸುಮಕ್ಕಾಗಿ,
ಸುಮ್ಮನಾದರೂ ಹುಡುಕುತ್ತಲೆ ಇದೆ//
ಕವಿತೆಗಳೆಲ್ಲ ಕೇವಲ ನಿರ್ಜೀವ ಪ್ರತೀಕ
ಮನದ ಮಾತಿಗೆ ಇಷ್ಟೆ ಎಂದು ಬೇಲಿ ಹಾಕಲಸಾಧ್ಯ!....
ಇದು ಹರಿವ ತೊರೆ,
ಬೀಸುವ ತಂಗಾಳಿ...ಕೇವಲ ಕೆಲ ಪದಗಳ .ಹಿಡಿತಕ್ಕೆ ಸಿಗದಷ್ಟು ಅಭೇದ್ಯ!/
ಕನಸು ಬಿತ್ತಿದ ಸಾಲುಗಳೆಲ್ಲ ಕವನಗಳಾಗಿ
ಮನಸು ಕೆತ್ತಿದ ಬರಿ ಮಾತುಗಳೆಲ್ಲ ಎದೆಬೇನೆಯ ಶಮನಗಳಾಗಿ...
ಬಾಳು ಖುಷಿ-ಕಣ್ಣೀರಿನ ನಾವೆಯಲ್ಲಿ
ಮೌನವಾಗಿ ತೇಲುತಿದೆ//
ವಿಶ್ವಾಸ ಕುದುರದ ಮೇಲೆ ಪರಸ್ಪರ
ಅಪನಂಬಿಕೆಯೆ ಆಗಿರುವಾಗ ಬೆಟ್ಟ...
ಸ್ವಾತಂತ್ರ್ಯಕ್ಕಿಂತ ಪರತಂತ್ರವೆ ಹಿತವಾಗಿದ್ದಂತೂ ದಿಟ...!
ಎಲ್ಲಿದ್ದರೇನು,
ನೀ ಹೇಗಿದ್ದರೇನು...
ಅಲಿಯುತ್ತಿರು ಹೀಗೆ ಯಾವುದೊ ದಿಕ್ಕೇ ಗೊತ್ತಿಲ್ಲದ ಪರದೇಶ
ಬದಲಾದೀತೆನು ನಿನ್ನ ಭಾರತೀಯ ನಡೆ-ನುಡಿ-ವೇಷ?/
ನಾ ಕನಸುಗಳನ್ನ ಗಾಳಿಯಲ್ಲಿ ತೇಲಿ ಬಿಟ್ಟಾಗ
ನಿನ್ನೆದೆ ಕಿಂಡಿಯನ್ನು ಮರೆಯದೆ ತೆರೆದಿಡು......
ಅವಕ್ಕೂ ನಿನ್ನ ಮನಸಲ್ಲೇ ತಾವುಬೇಕು//
ನೀನೊಮ್ಮೆ ಮರಳಿ ಬಂದರೆ ತುಂಗೆಯಲ್ಲಿ ತೇಲುತ್ತ ಹರಿಯೋಣ
ಒಲವಿನ ಸವಿ ಮಾತನ್ನೆಲ್ಲ ಮುಗಿಲಂಚಲ್ಲಿ ಬರೆಯೋಣ...
ನಿನ್ನೊಂದು ನಗುವ ಕದ್ದು
ನಾ ಪೋಣಿಸಿದ ಈ ರಾಗ ಇನ್ಯಾವುದೆ ಮಾಧುರ್ಯಕ್ಕಿಂತಲೂ....ಬಲು ಇಂಪು,
ನಿನ್ನ ನೆನಪಿನ ಎಳೆಗಳಿಂದಲೆ ನೇಯ್ದ ನನ್ನ ಕನಸಿನ ಕುಲಾವಿಯ ತುಂಬೆಲ್ಲ....
ನಿನ್ನುಸಿರನದೆ ನರುಗಂಪು/
ಥಟ್ಟನೆ ಹೊರಟ
ನಿಂತ ನೀರಾಗಿದ್ದ ನನ್ನ ಬಾಳ ಬಂಡಿಗೆ....
ನಿನ್ನ ಒಲವ ಇಂಧನವೇ ಮೂಲಾಧಾರ,
ಆತ್ಮ ನಿವೇದನೆ ಅನ್ನು
ನೋವಿನ ಅನಾವರಣ ಅನ್ನು...
ನಿನ್ನ ಮಾತೆತ್ತದೆ ನನ್ನ ನಾಲ್ಕು ಸಾಲುಗಳಿಗೆ ವಿರಮಿಸಿ ಗೊತ್ತಿಲ್ಲ
ಎದೆಯಲ್ಲಿ ನಿನ್ನುಸಿರಷ್ಟು ಬೆಚ್ಚನೆ ಭಾವಗಳನ್ನು ಇನ್ಯಾರು ಬಿತ್ತಿಲ್ಲ//
Comments
Post a Comment