ಅಪೇಕ್ಷೆಗಳ ಹಿಡಿತ

ಹಿಮಾಲಯ ತಪ್ಪಲಿನಲ್ಲಿತ್ತು ಆ ಆಶ್ರಮ. ಅಲ್ಲಿ ಅನೇಕ ಸನ್ಯಾಸಿಗಳು ತಮ್ಮ ಜೀವನದ ದಾರಿಯನ್ನು ಕಂಡುಕೊಳ್ಳುತ್ತಿದ್ದರು. ಬೇಸಿಗೆಯಲ್ಲೇನೋ ಸ್ವಲ್ಪ ಜೀವನ ಚೆನ್ನಾಗಿರುತ್ತಿತ್ತು. ಗುರುಗಳು-ಶಿಷ್ಯರು ಬಿಸಿಲಿನಲ್ಲಿ ಕುಳಿತು ಮೈಕಾಯಿಸಿಕೊಳ್ಳಲು ಅನುಕೂಲವಿತ್ತು. ಆದರೆ ಉಳಿದ ತಿಂಗಳುಗಳಲ್ಲಿ ಮಾತ್ರ ಬದುಕು ದುಃಸಾಧ್ಯವಾಗುತ್ತಿತ್ತು.

ಮಳೆಗಾಲದಲ್ಲಿ ನಿರಂತರವಾಗಿ ಬೀಳುವ ಮಳೆ, ಅದರಿಂದ ಉಕ್ಕಿ ಹರಿಯುವ ನದಿಗಳು ಯಾರಿಗಾದರೂ ಗಾಬರಿ ಮಾಡುತ್ತಿದ್ದವು. ನಂತರ ಬರುವ ಚಳಿಗಾಲದಲ್ಲಂತೂ ಕೊರೆಯುವ ಚಳಿಗೆ ನಡುನಡುಗಿ ಮೈಯಲ್ಲಿಯ ಮೂಳೆಗಳು ಮುರಿಯದಿದ್ದುದೇ ಪವಾಡ.

ಈ ಗುಂಪಿನಲ್ಲೊಬ್ಬ ತರುಣ ಸನ್ಯಾಸಿ. ಆತನಿಗೆ ಈಜುವುದೆಂದರೆ ಬಲು ಸಂತೋಷ. ಇನ್ನೇನು ಕೆಲವೇ ದಿನಗಳಲ್ಲಿ ಚಳಿಗಾಲ ಪ್ರಾರಂಭವಾಗುತ್ತದೆನ್ನುವಾಗ ಒಂದು ದಿನ ಆತ ನದೀ ತೀರದಲ್ಲಿ ನಿಂತಿದ್ದ. ಆಗ ಅವನ ಕಣ್ಣಿಗೆ ಒಂದು ದೃಶ್ಯ ಬಿತ್ತು. ಅವನು ದೂರದಲ್ಲಿ ನದಿಯ ನೀರಿನಲ್ಲಿ ಯಾವುದೋ ವಸ್ತು ತೇಲಿ ಬರುತ್ತಿದ್ದುದನ್ನು ಕಂಡ. ದಿಟ್ಟಿಸಿ ನೋಡಿದರೆ ಒಂದು ದೊಡ್ಡ ಕಪ್ಪು ಕಂಬಳಿ ನೀರಿನಲ್ಲಿ ಹರಿದುಕೊಂಡು ಬರುತ್ತಿದೆ.

ಅದನ್ನು ನೋಡಿದ ತಕ್ಷಣ ತರುಣ ಸನ್ಯಾಸಿಗೆ ಮುಂದೆ ಬರಲಿರುವ ಚಳಿಯ ದಿನಗಳ ನೆನಪಾಯಿತು. ತಾನು ಕಳೆದ ಬಾರಿ ತನ್ನನ್ನು ಬೆಚ್ಚಗಿರಿಸಿಕೊಳ್ಳಲು ಒದ್ದಾಡಿದ್ದರ ನೆನಪಾಯಿತು. ಆಹಾ! ಈ ಕಂಬಳಿ ನನಗಾಗಿಯೇ ಬಂದಂತಿದೆ. ಇದನ್ನು ದಂಡೆಗೆಳೆದು ಒಣಗಿಸಿ ಇಟ್ಟುಕೊಂಡರೆ ಚಳಿಗಾಲವನ್ನು ಸುಸೂತ್ರವಾಗಿ ಪಾರಾಗಬಹುದು. ಹೀಗೆಲ್ಲ ಯೋಚಿಸಿ ಆತ ತಣ್ಣಗೆ ಕೊರೆಯುವ ನೀರಿಗೆ ಹಾರಿಕೊಂಡ.

ಜೋರಾಗಿ ಕೈಬೀಸುತ್ತ ಆ ಕಂಬಳಿ ಬರುತ್ತಿರುವೆಡೆ ಈಜುತ್ತ ನುಗ್ಗಿದ. ದಂಡೆಯ ಮೇಲೆ ನಿಂತಿದ್ದ ಆಶ್ರಮದ ಜನಕ್ಕೆ ಇದೊಂದು ಆಶ್ಚರ್ಯ. ಈತ ಎಲ್ಲಿಗೆ ಸಾಗುತ್ತಿದ್ದಾನೆ ಎಂದು ನೋಡುತ್ತಿದ್ದರು. ಅವನು ಈಜುತ್ತ ಕಂಬಳಿಯ ಹತ್ತಿರ ತಲುಪಿದ. ಕಂಬಳಿಗೆ ಕೈ ಹಾಕಿ ಎಳೆದ. ಹಾಗೆ ಎಳೆದವನೇ ಹೋ, ಹೋ ಎಂದು ಕಿರುಚಲಾರಂಭಿಸಿದ.

ದಂಡೆಯ ಮೇಲಿದ್ದವರಿಗೆ ಏನೂ ಅರ್ಥವಾಗಲಿಲ್ಲ. ಅವರೂ ಅವನು ಕಂಬಳಿಯನ್ನೇ ಎಳೆಯುತ್ತಿದ್ದಾನೆ ಎಂದುಕೊಂಡಿದ್ದರು. ತರುಣ ಸನ್ಯಾಸಿ ಮತ್ತೆ ಕೂಗಿದ,  `ನನ್ನನ್ನು ಪಾರು ಮಾಡಿ, ಪಾರುಮಾಡಿ.` ದಂಡೆಯಲ್ಲಿದ್ದವರಿಗೆ ಆ ಕಂಬಳಿ ಬಹಳ ಭಾರವಾಗಿದ್ದರಿಂದ ಅದನ್ನು ಎಳೆಯುವುದು ಅವನಿಗೆ ಅಸಾಧ್ಯವಾಗಿರಬೇಕು ಎನ್ನಿಸಿ,  `ಭಾರವಾಗಿದ್ದರೆ ನೀನೇ ಕೈ ಬಿಟ್ಟು ಬಿಡು, ದೂರ ತಳ್ಳಿ ಬಂದುಬಿಡು`  ಎಂದು ಕೂಗಿದರು.

ಆಗ ಆತ,  `ನಾನು ಅದನ್ನು ಯಾವಾಗಲೋ ಬಿಟ್ಟೆ. ಆದರೆ ಅದು ನನ್ನನ್ನು ಬಿಡುತ್ತಿಲ್ಲ`  ಎಂದು ಅರಚಿದ. ಅವನು ಕಂಬಳಿ ಎಂದು ಹಿಡಿದದ್ದು ಒಂದು ನೀರು ಕರಡಿ. ಈಗ ಅದು ಅವನನ್ನೇ ಹಿಡಿದುಬಿಟ್ಟಿದೆ! ಅದರಿಂದ ಪಾರಾಗುವುದು ಅವನಿಗೆ ಕಷ್ಟವಾಗಿದೆ. ನಂತರ ಹತ್ತಾರು ಜನ ನೀರಿಗೆ ಹಾರಿ ಕೋಲಿನಿಂದ ಹೊಡೆದು ಅದನ್ನು ಓಡಿಸಿ ಈ ಸನ್ಯಾಸಿಯನ್ನು ಪಾರುಮಾಡಿಕೊಂಡು ಬಂದರು.

ನಮಗೂ ಹಾಗೆಯೇ ಆಗುತ್ತದೆ ಅಲ್ಲವೇ? ನಾವೂ ಜೀವನದ ನದಿಯಲ್ಲಿ ತೇಲಿಬರುವ ಅನೇಕ ವಸ್ತುಗಳನ್ನು ನಾವೂ ಬೆನ್ನತ್ತಿ ಹೋಗುತ್ತೇವೆ.  ನಮ್ಮ ಕಷ್ಟಕಾಲಕ್ಕೆ ಒದಗುತ್ತವೆ ಎಂದು. ಆ ವಸ್ತುಗಳು, ಬಂಗಲೆ, ಕಾರು, ಅಧಿಕಾರ, ಮನ್ನಣೆ, ದೇಹ ಸಂತೋಷ ಯಾವುದೂ ಆಗಬಹುದು. ಅವು ನಮಗೆ ಬೇಕೆಂದು ಹಿಡಿದುಕೊಳ್ಳುತ್ತೇವೆ.

ಹಿಡಿದುಕೊಳ್ಳುವುದಷ್ಟೇ ನಮ್ಮ ಕೈಯಲ್ಲಿದ್ದದ್ದು. ನಂತರ ಆ ವಸ್ತುವೇ ನಮ್ಮನ್ನು ಹಿಡಿದುಕೊಳ್ಳುತ್ತದೆ. ಒಂದು ಸ್ಕೂಟರ್ ಬೇಕು ಎಂದುಕೊಂಡು ಕೊಂಡರೆ ಅದರ ಹಿಂದೆಯೇ ಸರಮಾಲೆ ಬಂದೇ ಬರುತ್ತದೆ. ಸ್ಕೂಟರಿನ ಇನ್ಸೂರೆನ್ಸ್, ಪೆಟ್ರೋಲ್ ಖರ್ಚು, ಹೆಲ್ಮೆಟ್, ಕೂದಲು ಉದುರುವಿಕೆ ಇತ್ಯಾದಿ. ಒಂದು ಅಧಿಕಾರದಲ್ಲಿ ಕುಳಿತಿರೋ ಬಂತು ನೋಡಿ ಅದರ ಹಿಂದೆಯೇ ಅಧಿಕಾರದ ಜರ್ಬು, ಅಹಂಕಾರ, ಮತ್ತೊಬ್ಬರ ಅಸೂಯೆ ಮತ್ತು ಅಧಿಕಾರ ಕಳೆದುಹೋಗುವ ಭಯ.

ಈ ವಸ್ತುಗಳನ್ನು, ಅಪೇಕ್ಷೆಗಳನ್ನು ಹಿಡಿದುಕೊಳ್ಳುವ ಮೊದಲೇ ಅವು ತರುವ ಹಿಡಿತಗಳನ್ನು, ಬಿಗಿತಗಳನ್ನು ನೆನಪಿಗೆ ತಂದುಕೊಂಡರೆ ವಾಸಿ.

Krupe: Prajavani - 13 July 2011

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು