ನಂಗೆಲಿಯ ಬಲಿದಾನ
ನಮ್ಮ ದೇಶದ ಅತಿ ದೊಡ್ಡ ಶಾಪವೆಂದರೆ ಅಸ್ಪೃಶ್ಯತೆ. ನಾವು ಎಲ್ಲಿಯವರೆಗೆ ಮನುಷ್ಯರನ್ನು ಮನುಷ್ಯರಂತೆ ನೋಡುವುದನ್ನು ಬೆಳೆಸಿಕೊಳ್ಳುವುದಿಲ್ಲವೋ ನಾವು ಒಂದು ನಾಗರಿಕ ಸಮಾಜವಾಗಿ ಬಾಳುವುದು ಅಸಾಧ್ಯವಾಗುತ್ತದೆ. ನಮ್ಮ ಧರ್ಮ ಇಂದು ಅವರನ್ನು ಮುಟ್ಟಬೇಡಿ, ಇವರನ್ನು ಮುಟ್ಟಬೇಡಿ ಎನ್ನುತ್ತ ಕೇವಲ ಮುಟ್ಟದಿರುವ ಧರ್ಮವಾಗಿ ಬಿಟ್ಟಿದೆ. ಒಂದು ಕಾಲದಲ್ಲಿ ಜ್ಞಾನದ ನೀಡಿಕೆಯಲ್ಲಿ, ಅಧ್ಯಾತ್ಮದಲ್ಲಿ, ಶ್ರೀಮಂತಿಕೆಯಲ್ಲಿ ಪ್ರಪಂಚಕ್ಕೇ ಮಾದರಿಯಾಗಿದ್ದ ನಮ್ಮ ದೇಶ ಕೆಳಮಟ್ಟಕ್ಕೆ ಇಳಿಯಲು ಈ ಅಸ್ಪೃಶ್ರ್ಯತೆಯ ಮನೋಭಾವವೇ ಕಾರಣ.` ಹೀಗೆಂದು ತಮ್ಮ ಆಕ್ರೋಶವನ್ನು ಒಂದು ಶತಮಾನದ ಹಿಂದೆಯೇ ಬಹಿರಂಗಪಡಿಸಿದವರು ವೀರ ಸನ್ಯಾಸಿ ವಿವೇಕಾನಂದರು. ಈ ವ್ಯಕ್ತಿ-ವ್ಯಕ್ತಿಗಳ ನಡುವಿನ ತಾರತಮ್ಯಗಳು ಈಗ ಕಡಿಮೆಯಾಗಿದ್ದರೂ ಅವು ಇನ್ನೂ ಉಳಿದಿರುವುದು ಖೇದದ ಸಂಗತಿ. ಈ ಅವ್ಯವಸ್ಥೆಯ ವಿರುದ್ಧ ಹೋರಾಡಿದವರು ಹಲವರು. ಕೆಲವರ ಹೆಸರುಗಳು ನೆನಪಿನಲ್ಲಿವೆ. ಅನೇಕರ ಹೆಸರುಗಳು ಮರೆಯಾಗಿ ಹೋಗಿವೆ. ಹೀಗೆ ತಾರತಮ್ಯದ ವಿರುದ್ಧ ಹೋರಾಟದಲ್ಲಿ ತನ್ನ ಜೀವನವನ್ನೇ ಬಲಿಕೊಟ್ಟು ಇತಿಹಾಸ ನಿರ್ಮಿಸಿದ ಮಹಿಳೆ ನಂಗೆಲಿ. ಕೇರಳದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಇಡೀ ಮಹಿಳಾ ಸಮುದಾಯಕ್ಕೆ ಮರ್ಯಾದೆಯನ್ನು, ಸ್ವಾತಂತ್ರವನ್ನು ತಂದುಕೊಟ್ಟವಳು ನಂಗೆಲಿ. ಅವಳ ಬಲಿದಾನವನ್ನು ಇತಿಹಾಸ ದಾಖಲಿಸದಿರುವುದು ದುರ್ದೈವ. ಅವಳ ಮನೆತನದವರು ಬಾಯಿಂದ ಬಾಯಿಗೆ ಅವಳ ಗಾಥೆಯನ್ನು ಸಾ...