ತಳಮಳಿಸುತ್ತಿರುವ ಹಳ್ಳಿಗಳು
20 ವರ್ಷದ ಹಿಂದೆ ಊರಿನಲ್ಲಿ ಒಂದು ಮನೆಯಲ್ಲಿ ಮದುವೆ, ಪೂಜೆ, ಗ್ರಹಪ್ರವೇಶ ಏನೇ ಮುಖ್ಯವಾದ ಕಾರ್ಯವಿರಲಿ, ಅಥವಾ ಊರಿನ ದೇವಸ್ಥಾನದ ಮುಖ್ಯವಾದ ಕಾರ್ಯವಿರಲಿ ಒಟ್ಟಾರೆ ಅಂದು ಊರಿನ ಎಲ್ಲರಿಗೂ ಎಲ್ಲರ ಸಹಕಾರದ ಅಗತ್ಯವಿತ್ತು. ಸಹಕಾರಕ್ಕಾಗಿಯೇ ಮನೆ ಮನೆಗೆ ಹೋಗಿ ಚಪ್ಪರದ ವಿಳ್ಯ, ಮದುವೆ ವೀಳ್ಯ,ಅಡುಗೆ ವಿಳ್ಯ ಎಂದು ಪ್ರತ್ಯೇಕ ಪ್ರತ್ಯೇಕ ಆಮಂತ್ರಣ ಇತ್ತು. ಆ ಆಮಂತ್ರಣ ಸ್ವೀಕರಿಸಿದ ಮೇಲೆ ಆ ಕಾರ್ಯಕ್ಕೆ ಮನೆಯಿಂದ ಒಬ್ಬರ ಉಪಸ್ಥಿತಿ ಕಡ್ಡಾಯವಾಗಿತ್ತು. ಊರಿನಲ್ಲಿ ಸಂಕ್ರಾತಿ ಹಬ್ಬ, ಗಡಿಹಬ್ಬ, ಹಗರಣ, ಭಜನೆ ಈ ಎಲ್ಲಾ ದೈವಿಕ ಕಾರ್ಯಗಳಲ್ಲಿಯೂ ಎಲ್ಲಾ ಜನಾಂಗದವರು ಭಾಗವಹಿಸಿ ಆಯಾಯ ಕಾರ್ಯವನ್ನು ಭಕ್ತಿಯಿಂದ ಮಾಡುತ್ತಿದ್ದರು. ಯಾರದೇ ಮನೆಯಲ್ಲಿ ಒಂದು ಸಾವು ಸಂಭವಿಸಿದ್ದರೂ ಊರಿಗೇ ಊರೇ ಬಂದು ಸಾಂತ್ವಾನ ಹೇಳುತ್ತಿತ್ತು ಮತ್ತು ಮುಂದಿನ ಕಾರ್ಯವನ್ನು ನೇರವೆರಿಸುತ್ತಿತ್ತು. ಅಂದರೇ ಊರಿನ ಸಂಭ್ರಮವಾಗಿರಲ್ಲಿ ಅಥವಾ ದುಖ:ವಾಗಿರಲ್ಲಿ ಎರಡರಲ್ಲಿಯೂ ಊರಿಗೆ ಊರೇ ಸಂಭ್ರಮಿಸುತ್ತಿತ್ತು ಮತ್ತು ದುಖಿ:ಸುತ್ತಿತ್ತು. ಪರಸ್ಪರರ ಬಗ್ಗೆ ಮತ್ತು ಪ್ರತಿಯೊಂದು ಕಾರ್ಯದ ಬಗ್ಗೆ ಎಲ್ಲರಿಗೂ ಭಕ್ತಿ ಶ್ರದ್ಧೆಯಿತು ಜೊತೆಗೆ ಸಹಕಾರ ಭಾವನೆ ಇತ್ತು.
ಬೇಸಿಗೆಯಲ್ಲಿ ಯಕ್ಷಗಾನ, ದೊಡ್ಡಾಟ್ ನಡೆಯುತ್ತಿತ್ತು. ಬೇಸಿಗೆ ರಜೆಗೆ ಬರಲು ಊರಿನ ಮಕ್ಕಳು ಮೊಮ್ಮಕ್ಕಳು ಕಾತರದಿಂದ ಕಾಯುತ್ತಿದ್ದರು. ಊರಿನಲ್ಲಿರುವ ಅಜ್ಜನ ಕಥೆಯನ್ನು ಕೇಳಲು, ಚಿನ್ನಿದಾಂಡು ಆಟ ಆಡಲು, ಮೊಮ್ಮಕ್ಕಳು ಹಪಹಪಿಸುತ್ತಿದ್ದರೇ, ಊರಿಗೆ ಬಂದು ತಮ್ಮ ಹಳೆಯ ಸ್ನೇಹಿತರೊಂದಿಗೆ ಊರಿನ ವಿವಿಧ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸುವ ಗುಂಗಿನಲ್ಲಿ ಮಕ್ಕಳಿರುತ್ತಿದ್ದರು.
ಇಂದಿನ ಹಳ್ಳಿಯಲ್ಲಿ 20 ವರ್ಷದ ಹಿಂದಿನ ಯಾವುದೇ ಚಟುವಟಿಕೆಗಳು ಕಂಡುಬರುತ್ತಿಲ್ಲ. ಮದುವೆ ಎಂಬುದು ಒಂದು ನಾಟಕದಲ್ಲಿ ಬಂದು ಹೋಗುವ ದ್ರಶ್ಯದಂತೆ ಆಗಿರುವುದು. ಹಳ್ಳಿ ಹಳ್ಳಿಗಳಲ್ಲಿ ಮದುವೆ ಸಭಾಭವನಗಳು ತಲೆ ಎತ್ತಿರುವವು. ಊರಿನ ಸಭಾಭವನದಲ್ಲಿ ಮದುವೆ ದಿನ ಬೇರೆ ಮದುವೆ ಇದ್ದರೇ ಬೇರೆ ಊರಿನ ಸಭಾಭವನ ತಯಾರಾಗಿರುವುದು. ಈಗ ಮದುವೆ ಆಗಲು ಹುಡುಗ ಹುಡುಗಿ ಇದ್ದರೇ ಸಾಕು ಯಾರ ಸಹಕಾರವು ಬೇಕಾಗಿಲ್ಲ. ಸಾಕಷ್ಟು ದುಡ್ಡು ಬೇಕು ಅಷ್ಟೇ. ಲೋಕಲ್ ಟಿವಿ ಚಾನಲ್ ಮತ್ತು ಸ್ಥಳೀಯ ದಿನಪತ್ರಿಕೆಯಲ್ಲಿ ಆಮಂತ್ರಣವನ್ನು ನೀಡುವುದು, ಕಲ್ಯಾಣ ಮಂಟಪಕ್ಕೆ ಹೋಗಿ ದುಡ್ಡು ಕೊಟ್ಟು ಬಂದರೆ ಆಯಿತು. ಆ ನಂತರ ಮದುವೆ ದಿನ ಹೋಗಿ ಮದುವೆ ಆಗುವುದು. ಅಷ್ಟೊಂದು ಸರಳ ಸುಲಭವಾಗಿರುವುದು. ಚಪ್ಪರ ಬೇಕಾಗಿಲ್ಲ, ಮನೆಮನೆಗೆ ಹೋಗಿ ಅಡುಗೆ ಸಾಮಗ್ರಿ ಸಂಗ್ರಹಿಸುವ ಶ್ರಮವಿಲ್ಲ. ಬೇರೆ ಬೇರೆ ರೀತಿಯ ವೀಳ್ಯ ನೀಡುವ ಚಿಂತೆಯಿಲ್ಲ. ಮಂಟಪ ಕಟ್ಟುವ ಅಗತ್ಯವಿಲ್ಲ, ಬಾಳೆ ಎಲೆಯನ್ನು ಹುಡುಕಬೇಕಾಗಿಲ್ಲ. ಬೇರೆಯವರ ಹಂಗಿಲ್ಲ.
ಊರಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಟಿವಿ ಆಕ್ರಮಿಸಿರುವುದು. ಮೊಮ್ಮಕಳೊಂದಿಗೆ ಕಥೆ ಹೇಳಬೇಕಾದ ಅಜ್ಜಿ-ಅಜ್ಜ, ಧಾರವಾಹಿ-ವಾತೆ೯ ನೋಡುವಲ್ಲಿ ಮಗ್ನರಾಗಿರುವರು. ಹಳ್ಳಿಯಲ್ಲಿ ಮಕ್ಕಳಿಗೆ ಸಿಗಬೇಕಾದ ಸ್ವಾತಂತ್ಯದ ಬಾಲ್ಯ ಮರೆಯಾಗಿ ನೀತಿ ನಿಯಮದ ಅಪ್ಪ ಅಮ್ಮ ಬಯಸಿದಂತಹ ಬಾಲ್ಯ ಪ್ರಾರಂಭವಾಗಿರುವುದು. ಟಿವಿ,ಟ್ಯೂಶನ್, ಬೇಸಿಗೆ ಶಿಬಿರ, ಕ್ರಿಕೆಟ್ ಇವು ಇಂದಿನ ಮಕ್ಕಳ ಬಾಲ್ಯವಾಗಿದೆ. ಹಾಣೆಗೆಂಡೆ ಆಟ(ಚಿನ್ನಿ ದಾಂಡು),ಮುಟ್ಟಾಟ, ಅಜ್ಜನ ಕಥೆಗಳು, ಮೀನು ಹಿಡಿಯುವುದು, ಬಯಲಾಟ ಇವೆಲ್ಲ ಇಂದಿನ ಮಕ್ಕಳಿಗೆ ಇತಿಹಾಸವಾಗಿದೆ. ಊರಿನ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದ ಮಕ್ಕಳಿಗೆ ಪ್ರತ್ಯೇಕ ಮನೆ ಕಟ್ಟುವ, ಚಿನ್ನ ಮಾಡಿಸುವ ಒಟ್ಟಾರೆ ದುಡ್ಡು ಮಾಡುವ ಔಷಧ ಇಲ್ಲದ ಕಾಯಿಲೆ ಪ್ರಾರಂಭವಾಗಿದೆ. ಎಲ್ಲರೂ ಪಟ್ಟಣದಲ್ಲಿಯೇ ಖಾಯಂ ಆಗಿ ಇರಲು ಯೋಚಿಸಿ ಅದಕ್ಕೆ ಪೂರವಾಗಿ ಯೋಜನೆ ಮಾಡುತ್ತಾ ರಜೆಯನ್ನು ಕಳೆಯುತ್ತಿರುವರು.
ಹೌದು, ಈ ರೀತಿಯ ಅನುಕೂಲವಾಗಿದೆ ಎಂದು ಭಾವಿಸಿಯೇ ಇಂದು ನಾವೇಲ್ಲರೂ ಈ ಪದ್ದತಿಯನ್ನು ಪೋಷಿಸುತ್ತಿರುವೆವು. ಆದರೇ ಸೂಕ್ಮವಾಗಿ ಗಮನಿಸಿದಾಗ ನಾವು ಏನೋ ಕಳೆದುಕೊಳ್ಳುತ್ತಿರುವೆವು ಎಂದು ಅನಿಸುವುದು. ಹಳ್ಳಿಯಲ್ಲಿನ ಸಹಕಾರ ತತ್ವ ಎಂಬುದು ಈ ರೀತಿಯ ಹಲವಾರು ಕಾರಣಗಳಿಂದ ಮರೆಯಾಗುತ್ತಿರುವುದನ್ನು ನಾವು ಗುರುತಿಸುತ್ತಿಲ್ಲ. ಪಟ್ಟಣದಲ್ಲಿ ಅಕ್ಕ ಪಕ್ಕದ ಮನೆಯಲ್ಲಿ ಏನಾದರೂ ಯಾರಿಗೂ ಗೊತ್ತಾಗದು ಮತ್ತು ಅವರ ದಿನ ನಿತ್ಯದ ಚಟುವಟಿಕೆಗೆ ಯಾವುದೇ ತೊಂದರೆಯಾಗದು. ಇದೇ ರೀತಿಯ ವಾತಾವರಣ ಹಳ್ಳಿಗಳಲ್ಲಿ ಪ್ರಾರಂಭವಾಗಿರುವುದನ್ನು ಗಮನಿಸಬಹುದಾಗಿದೆ.
ಇಂತಹ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ಪ್ರಾರಂಭಿಸಿರುವ ಪ್ರಗತಿಬಂಧು ಗುಂಪು ಸಹಕಾರ ತತ್ವವನ್ನು ಹಳ್ಳಿಗಳಲ್ಲಿ ಸಾರಲು ಪ್ರಯತ್ನಿಸುತ್ತಿರುವುದು. ಕನಿಷ್ಠ ಪಕ್ಷ ವಾರೆದಲ್ಲಿ ಒಂದು ದಿನ ಗಂಡಸರು ಒಂದೊಂದು ಮನೆಯಲ್ಲಿ ಗುಂಪಿನ ಎಲ್ಲರೂ ಸೇರಿ ಕೆಲಸ ಮಾಡುವ ರೂಢಿಯನ್ನು ಪ್ರಾರಂಭಿಸುತ್ತಿರುವರು. ಮಹಿಳೆಯರು ವಾರದ ಒಂದು ದಿನದ 2 ಗಂಟೆಯಾದರೂ ಉಳಿತಾಯ ಸಂಘದ ಹೆಸರಿನಲ್ಲಿ ಪರಸ್ಪರ ಮಾತನಾಡುತ್ತಿರುವರು. ಇದು ನಮ್ಮ ಹಿಂದಿನವರು ನಡೆಸಿಕೊಂಡು ಬಂದ ಕೆಲವೊಂದು ಉತ್ತಮ ಸಂಪ್ರದಾಯವನ್ನು ಬೆಳಸುವ ನಿಟ್ಟಿನಲ್ಲಿ ಶ್ಲಾಘನೀಯ ಕಾರ್ಯವಾಗಿದೆ.
ಹಳೆಯ ಭಕ್ತಿಶ್ರದ್ಧೆಯಳಿಸಿಹೋಗಿವೆ ಮಾಸಿ
ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ
ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ
ತಳಮಳಿಸುತಿದೆ ಲೋಕ-ಮಂಕುತಿಮ್ಮ
(ಹಿಂದಿನ ಕಾಲದಲ್ಲಿ ಇದ್ದಂತಹ ಶ್ರದ್ಧೆ, ಭಕ್ತಿಗಳನ್ನು ನಾವು ಈಗ ಕಾಣುತ್ತಿಲ್ಲ, ಕಾಲದ ಜೊತೆಗೆ ಹಳೆಯ ನಂಬಿಕೆಗಳು ಕಳೆದು ಹೋಗುತ್ತಿದೆ. ಬರುತ್ತಿರುವ ಕಾಲದಲ್ಲಿ ನಂಬಿಕೆಗಳಿಗೆ ಬೆಲೆಯೇ ಇಲ್ಲದಂತಾಗಿರುವಾಗ ಹೊಸ ನಂಬಿಕೆ ಹುಟ್ಟುತ್ತಿಲ್ಲ. ಕುಂಟ ಅಥವಾ ಕುರುಡನು, ಬಹುಕಾಲ ಅಭ್ಯಾಸವಾಗಿದ್ದ ಮನೆಯೂ ಬಿದ್ದು ಹೋದಾಗ, ತೊಂದರೆ ಪಡುವಂತೆ, ನಮ್ಮ ಲೋಕವು ಸಹಾ ತಳಮಳಿಸುತ್ತಿದೆ.)
ವಿವೇಕ ಬೆಟ್ಕುಳಿ
vivekpy@gmail.com
Comments
Post a Comment