ಜನುಮದ ಜಾತ್ರಿ .............ದ.ರಾ.ಬೇಂದ್ರೆ
ನೇತ್ರಪಲ್ಲವಿಯಿಂದ ಸೂತ್ರಗೊಂಬೀ ಹಾಂಗ
ಪಾತ್ರ ಕುಣಿಸ್ಯಾನ ಒಲುಮೀಗೆ | ದಿನದಿನ
ಜಾತ್ರಿಯೆನಿಸಿತ್ತ ಜನುಮವು. ||೧||
‘ಅಬ್ಬ’ ಎನಬೇಡs ನನ ಗೆಣತಿ | ಸಾವಿರಕ
ಒಬ್ಬ ನೋಡವ್ವ ನನ ನಲ್ಲ. ||೨||
ಕಣ್ಣೆವಿ ಎತ್ತಿದರ ಹುಣ್ಣೀವಿ ತೆರಧ್ಹಾಂಗ
ಕಣ್ಣು ಏನಂತ ಬಣ್ಣಿಸಲೆ | ಚಿತ್ತಕ್ಕ
ಕಣ್ಣು ಬರೆಧ್ಹಾಂಗ ಕಂಡಿತ್ತು. ||೩||
ಹೇಸಿರಲು ಈ ಜೀವ ಆಸಿ ಹುಟ್ಟಿಸುತಿತ್ತು
ಮೀಸಿ ಮೇಲೆಳೆದ ಕಿರಿಬೆರಳು | ಕೆಂಗಯ್ಯ
ಬೀಸಿ ಕರೆದಾನ ನನಗಂತ. ||೪||
ತಂಬುಲತುಟಿ ನಗಿ ಹೊಂಬಿಸಲೆಂಬಂತೆ
ಬಿಂಬಿಸಿತವ್ವಾ ಎದಿಯಾಗ | ನಂಬೀಸಿರಂಬೀಸಿತವ್ವಾ ಜೀವವ. ||೫||
-- ದ.ರಾ.ಬೇಂದ್ರೆ
ಕೃಪೆ: ಸುನಾಥ್
ಮೂಲ ಲೇಖನ: http://sallaap.blogspot.com/2011/07/blog-post.html
Comments
Post a Comment