ಆರ್ಥರ್ ಆಶ್

ಆರ್ಥರ್ ಆಶ್ ಟೆನಿಸ್ ಇತಿಹಾಸದಲ್ಲಿ ಬಹುದೊಡ್ಡ ಹೆಸರು. ಅದು ಬರೀ ಟೆನಿಸ್ ನಲ್ಲಿ ಮಾತ್ರ ದೊಡ್ಡ ಹೆಸರಲ್ಲ. ಆಶಾವಾದಕ್ಕೆ, ಸಮಾಜ ಸುಧಾರಣೆಗೆ, ಅಸಮಾನತೆಯ ನಿವಾರಣೆಗೆ ತನ್ನನ್ನು ಆಳವಾಗಿ ತೊಡಗಿಸಿಕೊಂಡ ಹೆಸರು ಆರ್ಥರ್ ಆಶ್.

ಆರ್ಥರ್ ಆಶ್ ಹುಟ್ಟಿದ್ದು ಜುಲೈ 10, 1948 ರಂದು ಅಮೆರಿಕೆಯ ವರ್ಜಿನಿಯಾದ ರಿಚ್‌ಮಂಡ್‌ನಲ್ಲಿ. ತಂದೆ ಬ್ರೂಕ್‌ಫೀಲ್ಡ್ ಆಟದ ಮೈದಾನದ ಹೊರಗಿದ್ದ ಕಾರುಗಳನ್ನು ನಿಲ್ಲಿಸುವ ಸ್ಥಳದ ವಿಶೇಷ ಪೋಲೀಸ್ ಆಗಿದ್ದರು. ಮಗನನ್ನು ತುಂಬ ಪ್ರೀತಿಯಿಂದ ಆದರೆ ಶಿಸ್ತಿನಿಂದ ಬೆಳೆಸಿದರು. ಈ ಹುಡುಗ ಬೆಳೆದದ್ದೇ ಟೆನಿಸ್ ಮೈದಾನಗಳಲ್ಲಿ. ಮೈ ತುಂಬಿಕೊಳ್ಳದೇ ಕಡ್ಡಿಯ ಹಾಗೆ ಆರಡಿ ಒಂದು ಇಂಚು ಎತ್ತರಕ್ಕೆ ಬೆಳೆದ.

ತನ್ನ ಏಳನೇ ವಯಸ್ಸಿಗೆ ಟೆನಿಸ್ ಆಡಲು ಪ್ರಾರಂಬಿಸಿದ ಆಶ್, ಹದಿನೇಳನೇ ವಯಸ್ಸಿಗೆ ರಾಷ್ಟ್ರೀಯ ಜ್ಯೂನಿಯರ್ ಚಾಂಪಿಯನ್ ಆದ. ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯಲು ವಿದ್ಯಾರ್ಥಿವೇತನ ಪಡೆದು ಹೋದ. ವರ್ಣಭೇದ ನೀತಿ ಹೆಚ್ಚಾಗಿದ್ದ ಕಾಲದಲ್ಲಿ ಈ ಕಪ್ಪು ಹುಡುಗ ಮುಂದೆ ಬೆಳೆಯುವುದು ತುಂಬ ಕಷ್ಟವಿತ್ತು. ಎಷ್ಟೋ ಟೆನಿಸ್ ಮೈದಾನಗಳಲ್ಲಿ ಈತನಿಗೆ ಪ್ರವೇಶ ದೊರೆಯುತ್ತಿರಲಿಲ್ಲ. ಆದರೆ ಅವನ ಏಕಾಗ್ರ ಚಿತ್ತ ಮತ್ತು ಸತತ ಪ್ರಯತ್ನ ಯಾವುದನ್ನೂ ಲೆಕ್ಕಿಸದೇ ಮುಂದೆ ನಡೆಸುತ್ತಿತ್ತು.

1966 ರಲ್ಲಿ ಆತ ಅಮೆರಿಕೆಯ ಡೆವಿಸ್ ಕಪ್ ತಂಡಕ್ಕೆ ಆಯ್ಕೆಯಾಗಿದ್ದ ಮೊದಲ ಕಪ್ಪು ವ್ಯಕ್ತಿಯಾಗಿದ್ದ. 1968 ರಲ್ಲಿ ಅಮೆರಿಕೆಯ ಓಪನ್ ಟೆನಿಸ್‌ನ ಚಾಂಪಿಯನ್ನಾಗಿ ಜಗತ್ತನ್ನು ಬೆರಗುಗೊಳಿಸಿದ. ಮುಂದೆ 1970 ರಲ್ಲಿ ಆಸ್ಟ್ರೇಲಿಯನ್ ಓಪನ್ ಟೆನಿಸ್‌ನ ಚಾಂಪಿಯನ್ ಆದ. 1975 ರಲ್ಲಿ ಪ್ರಪಂಚದ ಅತ್ಯಂತ ಶ್ರೇಷ್ಠ ಹಾಗೂ ಪ್ರತಿಷ್ಠೆಯ ಇಂಗ್ಲೆಂಡಿನ ವಿಂಬಲ್ಡನ್ ಪ್ರಶಸ್ತಿಯನ್ನು ಆಗಿನ ಚಾಂಪಿಯನ್ ಆಗಿದ್ದ ಜಿಮ್ಮಿ ಕಾನರ್ಸನನ್ನು ಸೋಲಿಸಿ ಗೆದ್ದ. ಹಾಗೆ ಪ್ರಶಸ್ತಿ ಪಡೆದ ಮೊದಲ ಕರಿಯ ವ್ಯಕ್ತಿ ಎಂದು ಮನ್ನಣೆ ಪಡೆದ, ಪ್ರಪಂಚದ ನಂಬರ್ ಒಂದನೇ ಆಟಗಾರನಾದ.

ಇದಿಷ್ಟೇ ಆಗಿದ್ದರೆ ಅದೊಂದು ಕ್ರೀಡಾಪಟುವಿನ ಸಾಧನೆಯ ಕಥೆಯಾಗುತ್ತಿತ್ತು. ಆದರೆ ಆತ ವರ್ಣಭೇದ ನೀತಿಯ  ವಿರುದ್ಧ ಹೊರಾಡಿದ್ದೂ ಒಂದು ವಿಶೇಷ ಗಾಥೆ.

ಬಹಿಷ್ಕಾರವಿದ್ದರೂ ಆಗ ದಕ್ಷಿಣ ಆಫ್ರಿಕೆಗೆ ಹೋಗಿ ನೆದರ್ಲೆಂಡಿನ ಬಿಳಿಯ ಆಟಗಾರ ಆಕರ್‌ನೊಡನೆ ಸೇರಿ ಡಬಲ್ಸ್ ಪ್ರಶಸ್ತಿಯನ್ನು ಗೆದ್ದ. ಅಷ್ಟೇ ಅಲ್ಲ ಅಲ್ಲಿಯ ಜನರ ಮನಸ್ಸನ್ನು ಗೆದ್ದ. ಅವರು ಆತನಿಗೊಂದು ವಿಶೇಷ ಹೆಸರು ನೀಡಿದರು -  ಸಿಫೋ . ಝುಲು ಭಾಷೆಯಲ್ಲಿ ಸಿಫೋ ಎಂದರೆ  ಭಗವಂತ ನೀಡಿದ ಕಾಣಿಕೆ .

 1979 ರಲ್ಲಿ ಅವನಿಗೆ ಹೃದಯಘಾತವಾಗಿ ನಾಲ್ಕು ರಕ್ತನಾಳಗಳ ಬದಲಾವಣೆಯಂತಹ ಭಾರೀ ಶಸ್ತ್ರಚಿಕಿತ್ಸೆಯಾದರೂ ಪಾರಾಗಿ ಬದುಕಿದ. ಅಷ್ಟಾದರೂ ಅಮೆರಿಕೆಯ ತಂಡಕ್ಕೆ ತರಬೇತುದಾರನಾಗಿ ಮುಂದುವರೆದ. 1983 ರಲ್ಲಿ ಮತ್ತೊಮ್ಮೆ ಹೃದಯಘಾತವಾಗಿ ಶಸ್ತ್ರಚಿಕಿತ್ಸೆಗೆ ಒಳಗಾದ. ಇದಕ್ಕಿಂತ ಹೆಚ್ಚಿನ ಆಘಾತವೆಂದರೆ 1988 ರಲ್ಲಿ ಅವನಿಗೆ ಭಯಂಕರವಾದ ಏಡ್ಸ್ ರೋಗ ತಗುಲಿದೆ ಎಂದು ಗೊತ್ತಾಯಿತು. ಬಹುಶಃ ಎರಡು ಬಾರಿ ಶಸ್ತ್ರಚಿಕಿತ್ಸೆಯಾದಾಗ ನೀಡಿದ ಯಾವುದೋ ರಕ್ತದಲ್ಲಿ ಬಂದ ಸೋಂಕು ಅದು. ಮುಂದೆ ಆರು ವರ್ಷ ಅದರೊಡನೆ ಹೋರಾಟ. ಏಡ್ಸ್ ರೋಗದ ವಿರುದ್ಧ ನಡೆದ ಹೋರಾಟಗಳಿಗೆಲ್ಲ ನೇತಾರನಾದ. ಇದರೊಂದಿಗೆ ತನ್ನ ಜೀವನ ಚರಿತ್ರೆ ಬರೆದ. ಅವನ ಗ್ರಂಥ,  `ಯಶಸ್ಸಿನೆಡೆಗೆ ಕಠಿಣ ದಾರಿ`  (ಎ ಹಾರ್ಡ್ ರೋಡ್ ಟು ಗ್ಲೋರಿ) 1,600 ಪುಟಗಳ ಬೃಹತ್ ಗ್ರಂಥ. ಇದು ಎಷ್ಟು ಮೆಚ್ಚಿಗೆ ಪಡೆಯಿತೆಂದರೆ ಅವನಿಗೆ ಅಮೆರಿಕೆಯ ಅನೇಕ ವಿಶ್ವವಿದ್ಯಾಲಯಗಳ ಡಾಕ್ಟರೇಟ್ ನೀಡಲಾಯಿತು.

ಅವನಿಗಾದ ನೋವನ್ನು ಕಂಡು ಅಭಿಮಾನಿಯೊಬ್ಬ ಕೇಳಿದ,  `ಭಗವಂತ ನೀನೇಕೆ ಹೀಗೆ ಮಾಡಿದೆ ಎಂದು ಕೇಳಬಾರದೇ?`  ಅದಕ್ಕೆ ಆಶ್ ಕೊಟ್ಟ ಉತ್ತರ ಅಸಾಮಾನ್ಯ. ಅತ ಹೇಳಿದ,  `ಪ್ರಪಂಚದಲ್ಲಿ ಐದಾರು ಕೋಟಿ ಹುಡುಗರು ಟೆನಿಸ್ ಆಡಲು ಪ್ರಾರಂಭಿಸಿರಬೇಕು. ಅದರಲ್ಲಿ ಒಂದು ಐದಾರು ಲಕ್ಷ ತರುಣರು ರಾಜ್ಯ ಮಟ್ಟದಲ್ಲಿ, ಐದು ಸಾವಿರ ತರುಣರು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಿರಬಹುದು. ಅವರಲ್ಲಿ ಕೇವಲ ಐವತ್ತು ಜನ ವಿಂಬಲ್ಡನ್‌ನ ಪ್ರಾಥಮಿಕ ಹಂತಕ್ಕೆ ಆಯ್ಕೆಯಾಗುತ್ತಾರೆ. ಕೇವಲ ಎಂಟು ಜನ ಕ್ವಾರ್ಟರ್ ಫೈನಲ್ಲಿಗೆ, ನಾಲ್ಕು ಜನ ಸೆಮಿ ಫೈನಲ್ಲಿಗೆ ಮತ್ತು ಕೊನೆಗೆ ಇಬ್ಬರು ಫೈನಲ್ಲಿಗೆ ತಲುಪುತ್ತಾರೆ. ಅವರಲ್ಲೊಬ್ಬ ಮಾತ್ರ ಚಾಂಪಿಯನ್ ಎನ್ನಿಸಿಕೊಳ್ಳುತ್ತಾನೆ. ಅಂತಹ ಒಬ್ಬ ಅದೃಷ್ಟಶಾಲಿ ನಾನಾಗಿದ್ದೆ. ಆ ವಿಂಬಲ್ಡನ್ ಪಾರಿತೋಷಕವನ್ನು ಕೈಯಲ್ಲಿ ಹಿಡಿದು ಸಂತೋಷದಲ್ಲಿ ತೇಲಾಡುತ್ತಿರುವಾಗ ನಾನು ಆಕಾಶದ ಕಡೆಗೆ ನೋಡಿ,  ಭಗವಂತಾ ನನಗೇಕೆ ಇಂಥ ಸಂತೋಷ ಕೊಟ್ಟೆ, ಎಂದು ಕೇಳಿದೆನೇ? ಈಗ ಏಕೆ ಈ ಪ್ರಶ್ನೆ ಕೇಳಲಿ?`  ಇಂಥ ಸಮತೋಲನ ಮನಃಸ್ಥಿತಿ ಹೊಂದಿದ್ದವನು ಆಶ್. ಅವನು 1993 ರ ಫೆಬ್ರವರಿ 6ರಂದು ಆತ ದೇಹ ಬಿಟ್ಟ. ಆದರೆ ಜನರ ಮನಸ್ಸಿನಲ್ಲಿ ಉಳಿದುಬಿಟ್ಟ. ಎಲ್ಲಿಂದ ಎಲ್ಲಿಗೆ ಜೀವನದ ಪಯಣ? ಸಾಧನೆಗೆ ಮಿತಿಗಳಿಲ್ಲ. ನಮ್ಮ ಮನಸ್ಸಿನ ಮಿತಿಗಳೇ ನಮ್ಮ ಜೀವನದ ಧೋರಣೆಗಳನ್ನು, ಸಾಧನೆಯ ಮಿತಿಗಳನ್ನು ನಿರ್ಧರಿಸುತ್ತವೆ. ನಾವೇ ಹಾಕಿಕೊಂಡ ಈ ಮಿತಿಗಳನ್ನು ಮೀರಲು ಪ್ರಯತ್ನಿಸೋಣ.

Krupe - Prajavani ; 08 July 2011

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು