Showing posts with label ಪುರಂದರದಾಸರು. Show all posts
Showing posts with label ಪುರಂದರದಾಸರು. Show all posts

Thursday, March 31, 2011

ಶರಣು ಸಿದ್ಧಿವಿನಾಯಕ ಶರಣು ವಿದ್ಯಾಪ್ರದಾಯಕ

ಶರಣು ಸಿದ್ಧಿವಿನಾಯಕ ಶರಣು ವಿದ್ಯಾಪ್ರದಾಯಕ
ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಿಕ ವಾಹನ || ಪ ||
ಶರಣು ಶರಣು ಶರಣು ಶರಣು ಶರಣು ಸಿದ್ಧಿವಿನಾಯಕ

ನಿಟಿಲ ನೇತ್ರನೆ ದೇವಿ ಸುತನೆ ನಾಗಭೂಷಣ ಪ್ರಿಯನೆ
ತಟಿಲತಾಂಕಿತ ಕೋಮಲಾಂಗನೆ ಕರ್ಣಕುಂಡಲಧಾರನೆ || ಶರಣು ಶರಣು ||

ಬಟ್ಟ ಮುತ್ತಿನ ಪದಕಹಾರನೆ ಬಾಹುಹಸ್ತಚತುಷ್ಟನೆ
ಇಟ್ಟ ತೊಡುಗೆಯ ಹೇಮ ಕಂಕಣ ಪಾಶ ಅಂಕುಶಧಾರನೆ || ಶರಣು ಶರಣು ||

ಕುಕ್ಷಿಮಹಾಲಂಬೋದರನೆ ಇಕ್ಷುಛಾಪನ ಗೆಲಿದನೆ
ಪಕ್ಷಿವಾಹನ ಸಿರಿ ಪುರಂದರ ವಿಠ್ಠಲನ ನಿಜ ದಾಸನೆ || ಶರಣು ಶರಣು ||

Wednesday, March 30, 2011

ಹರಿ ಚಿತ್ತ ಸತ್ಯ ನಮ್ಮ ಹರಿ ಚಿತ್ತ ಸತ್ಯ

ಹರಿ ಚಿತ್ತ ಸತ್ಯ ನಮ್ಮ ಹರಿ ಚಿತ್ತ ಸತ್ಯ
ನರ ಚಿತ್ತಕೆ ಬಂದದ್ದು ಲವಲೇಶ ನಡೆಯದು

ಸುದತಿ ಮಕ್ಕಳ ಭಾಗ್ಯ ಬಯಸೋದು ನರ ಚಿತ್ತ
ಮದುವ್ಯಾಗದಿರುವುದು ಹರಿ ಚಿತ್ತವಯ್ಯ

ಕುದುರೆ ಅಂದಣ ಆನೆ ಬಯಸೋದು ನರ ಚಿತ್ತ
ಪಾದಚಾರಿ ಆಗೋದು ಹರಿ ಚಿತ್ತವಯ್ಯ

ಸದಾ ಅನ್ನದಾನವ ಬಯಸೋದು ನರ ಚಿತ್ತ
ಉದರಕೆ ಅಳುವುದು ಹರಿ ಚಿತ್ತವಯ್ಯ

ಪುರಂದರ ವಿಠ್ಠಲನ ಬಯಸೋದು ನರ ಚಿತ್ತ
ದುರಿತವ ಕಳೆವುದು ಹರಿ ಚಿತ್ತವಯ್ಯ

Tuesday, March 29, 2011

ಹರಿ ಸ್ಮರಣೆ ಮಾಡೊ ನಿರಂತರ

ಹರಿ ಸ್ಮರಣೆ ಮಾಡೊ ನಿರಂತರ
ಪರಗತಿಗೆ ಇದು ನಿರ್ಧಾರ

ದುರಿತ ಗಜಕ್ಕೆ ಕಂಠೀರವನೆನಿಸಿದ
ಶರಣಾಗತ ರಕ್ಷಕಾ ಪಾವನ ನೀ
(ಹರಿ ಸ್ಮರಣೆ ಮಾಡೊ ..)

ಶ್ರೀಶ ಪುರಂದರ ವಿಠ್ಠಲ ರಾಯನ
ಸೃಷ್ಟಿಗೊಡೆಯನ ಮುಟ್ಟಿ ಭಜಿಸಿ ನೀ
(ಹರಿ ಸ್ಮರಣೆ ಮಾಡೊ ..)

Monday, March 28, 2011

ಶ್ರೀನಿವಾಸ ಎನ್ನ ಬಿಟ್ಟು ನೀನಗಲದೆ

ಶ್ರೀನಿವಾಸ ಎನ್ನ ಬಿಟ್ಟು ನೀನಗಲದೆ

ಮನವೆಂಬೊ ಮಂಟಪ
ತನುವೆಂಬೊ ಹಾಸು ಮಂಚ
ಜ್ಞಾನವೆಂಬೊ ದಿವ್ಯದೀಪದ ಬೆಳಕಲಿ
ಸನಕಾದಿ ವಂದ್ಯ ನೀ ಬೇಗ ಬಾರೊ

ಪಂಚದೈವರು ಯಾವಾಗಲೂ ಎನ್ನ
ಹೊಂಚು ಹಾಕಿ ನೋಡುತಾರೆ
ಹೊಂಚುಗಾರರು ಆರು ಮಂದಿ
ಆವ ಹಿಂದು ಮುಂದಿಲ್ಲದೆ ಎಳೆಯುತಾರೆ

ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆನೊ
ಇನ್ನಾದರೂ ಎನ್ನ ಕೈ ಪಿಡಿಯೊ
ಘನ್ನ ಮಹಿಮ ಸಿರಿ ಪುರಂದರ ವಿಠ್ಠಲ
ಮನ್ನಿಸಿ ಎನ್ನನು ಕಾಯಬೇಕೊ

Sunday, March 27, 2011

ರಾಮ ನಾಮ ಪಾಯಸಕ್ಕೆ

ರಾಮ ನಾಮ ಪಾಯಸಕ್ಕೆ
ಕೃಷ್ಣ ನಾಮ ಸಕ್ಕರೆ
ವಿಠ್ಠಲ ನಾಮ ತುಪ್ಪವ ಸೇರಿಸಿ
ಬಾಯ ಚಪ್ಪರಿಸಿರೋ

ಒಮ್ಮಾನ ಗೋಧಿಯ ತಂದು
ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮಾನೆ ಸಜ್ಜಿಗೆ ತೆಗೆದು
ಗಮ್ಮಾನೆ ಶಾವಿಗೆ ಹೊಸೆದು

ಹೃದಯವೆಂಬೊ ಮಡಕೆಯಲಿ
ಭಾವವೆಂಬೊ ಎಸರಲಿ
ಬುದ್ಧಿಯಿಂದ ಪಾಕ ಮಾಡಿ
ಹರಿವಾಣಕೆ ಬಡಿಸಿಕೊಂಡು

ಆನಂದ ಆನಂದವೆಂಬೊ ತೇಗು
ಬಂದಿತು ಕಾಣಿರೊ
ಆನಂದ ಮೂರುತಿ ನಮ್ಮ
ಪುರಂದರ ವಿಠ್ಠಲನ ನೆನೆಯಿರೊ

Saturday, March 26, 2011

ಭಾಗ್ಯದ ಲಕ್ಷ್ಮೀ ಬಾರಮ್ಮ

ಭಾಗ್ಯದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ನೀ
ಸೌಭಾಗ್ಯದ ಲಕ್ಷ್ಮೀ ಬಾರಮ್ಮ

ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ
ಗೆಜ್ಜೆ ಕಾಲ್ಗಳ ಧ್ವನಿಯ ತೋರುತ
ಸಜ್ಜನ ಸಾಧು ಪೂಜೆಯ ವೇಳೆಗೆ
ಮಜ್ಜಿಗೆಯೊಳಗಿನ ಬೆಣ್ಣೆಯಂತೆ

ಕನಕವೃಷ್ಟಿಯ ಕರೆಯುತ ಬಾರೆ
ಮನಕೆ ಮಾನವ ಸಿದ್ಧಿಯ ತೋರೆ
ದಿನಕರ ಕೋಟಿ ತೇಜದಿ ಹೊಳೆಯುವ
ಜನಕರಾಯನ ಕುಮಾರಿ ಬೇಗ

ಅತ್ತಿತ್ತಲಗದೆ ಭಕ್ತರ ಮನೆಯಲಿ
ನಿತ್ಯ ಮಹೋತ್ಸವ ನಿತ್ಯ ಸುಮಂಗಲಿ
ಸತ್ಯವ ತೋರುವ ಸಾಧು ಸಜ್ಜನರ
ಚಿತ್ತದಿ ಹೊಳೆಯುವ ಪುತ್ಥಳಿ ಬೊಂಬೆ

ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು
ಕಂಕಣ ಕೈಯ ತಿರುವುತ ಬಾರೆ
ಕುಂಕುಮಾಂಕಿತ ಪಂಕಜಲೋಚನೆ
ವೆಂಕಟರಮಣನ ಬಿಂಕದ ರಾಣಿ

ಸಕ್ಕರೆ ತುಪ್ಪದ ಕಾಲುವೆ ಹರಿಸಿ
ಶುಕ್ರವಾರದ ಪೂಜೆಯ ವೇಳೆಗೆ
ಅಕ್ಕರೆವುಳ್ಳ ಅಳಗಿರಿ ರಂಗನ
ಚೊಕ್ಕ ಪುರಂದರ ವಿಠ್ಠಲನ ರಾಣಿ

ಬಂದದೆಲ್ಲ ಬರಲಿ

ಬಂದದೆಲ್ಲ ಬರಲಿ
ಗೋವಿಂದನ ದಯ ನಮಗಿರಲಿ

ಅರಗಿನ ಮನೆಯೊಳಗಂದು
ಪಾಂಡವರನು ಕೊಲಬೇಕೆಂದು
ದುರುಳ ಕೌರವ ಬಂದು ಅತಿ
ಹರುಷದಲಿರುತರಿಲಂದು
ಹರಿ ಕೃಪೆ ಅವರಲ್ಲಿದ್ದ ಕಾರಣ
ಘೋರ ದುರಿತ ಬಯಲಾದುದಲ್ಲವೆ

ಆರು ಒಲಿಯದರಿಲೆನ್ನ
ಮುರಾರಿ ಎನಗೆ ಪ್ರಸನ್ನ
ಹೋರುವ ದುರಿತ ಬನ್ನ
ಅದ ನಿವಾರಿಪ ಕರುಣ ಸಂಪನ್ನ
ಸಿರಿ ರಮಣನ ಸಿರಿಚರಣ ಶರಣರಿಗೆ
ಕ್ರೂರ ಯಮನು ಶರಣಾಗತನಲ್ಲವೆ

ಸಿಂಗನ ಪೆಗಲೇರಿದವಗೆ
ಕರಿ ಭಂಗವೇಕೆ ಮತ್ತವಗೆ
ರಂಗನ ದಯೆವುಳ್ಳವಗೆ
ಭವ ಭಂಗಗಳೇತಕ್ಕವಗೆ
ಮಂಗಳಮಹಿಮ ಪುರಂದರ ವಿಠ್ಠಲ
ಶುಭಾಂಗನ ದಯವೊಂದಿದ್ದರೆ ಸಾಲದೆ

Friday, March 25, 2011

ಪೋಗದಿರೆಲೊ ರಂಗ ಬಾಗಿಲಿಂದಾಚೆಗೆ

ಪೋಗದಿರೆಲೊ ರಂಗ ಬಾಗಿಲಿಂದಾಚೆಗೆ
ಭಾಗವತರು ಕಂಡರೆತ್ತಿಕೊಂಡೊಯ್ವರೊ

ಸುರಮುನಿಗಳು ತಮ್ಮ ಹೃದಯ ಗಹ್ವರದಲ್ಲಿ
ಪರಮಾತ್ಮನ ಕಾಣದೆ ಅರಸುವರು
ದೊರಕದ ವಸ್ತುವು ದೊರಕಿತು ತಮಗೆಂದು
ಹರುಷದಿಂದಲಿ ನಿನ್ನ ಕರೆದೆತ್ತಿಕೊಂಬರು

ಅಗಣಿತ ಗುಣ ನಿನ್ನ ಜಗದ ನಾರಿಯರೆಲ್ಲ
ಹಗೆಯಾಗಿ ನೋಡ್ವರೋ ಗೋಪಾಲನೆ
ಮಗುಗಳ ಮಾಣಿಕ್ಯ ತಗುಲಿತು ಕರಕೆಂದು
ವೇಗದಿಂದಲಿ ಬಂದು ಬಿಗಿದಪ್ಪಿಕೊಂಬರು

ದಿಟ್ಟ ನಾರಿಯರೆಲ್ಲ ಇಷ್ಟವ ಸಲಿಸೆಂದು
ಅಟ್ಟಟ್ಟಿ ಬೆನ್ನಿಂದೆ ತಿರುಗುವರು
ಸೃಷ್ಟೀಶ ಪುರಂದರ ವಿಠ್ಠಲ ರಾಯಗೆ
ಇಷ್ಟಿಷ್ಟು ಬೆಣ್ಣೆಯ ಕೊಟ್ಟೆನೋ ರಂಗಯ್ಯ

ನೀನ್ಯಾಕೊ ನಿನ್ನ ಹಂಗ್ಯಾಕೊ

ನೀನ್ಯಾಕೊ ನಿನ್ನ ಹಂಗ್ಯಾಕೊ
ನಿನ್ನ ನಾಮದ ಬಲವೊಂದಿದ್ದರೆ ಸಾಕೊ

ಕರಿ ಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗ
ಆದಿ ಮೂಲ ಎಂಬೊ ನಾಮವೆ ಕಾಯ್ತೊ

ಬಾಲೆಯ ಸಭೆಯಲ್ಲಿ ಸೀರೆಯ ಸೆಳೆವಾಗ
ಕೃಷ್ಣ ಕೃಷ್ಣ ಎಂಬೊ ನಾಮವೆ ಕಾಯ್ತೊ

ಆ ಮರ ಈ ಮರ ಧ್ಯಾನಿಸುತಿರುವಾಗ
ರಾಮ ರಾಮ ಎಂಬೊ ನಾಮವೆ ಕಾಯ್ತೊ

ನಿನ್ನ ನಾಮಕೆ ಸರಿ ಕಾಣೆನೊ ಜಗದಲಿ
ಘನ್ನ ಮಹಿಮ ಸಿರಿ ಪುರಂದರ ವಿಠ್ಠಲ

Thursday, March 24, 2011

ನಾ ನಿನ್ನ ಧ್ಯಾನದೊಳಿರಲು ಮಿಕ್ಕ

ನಾ ನಿನ್ನ ಧ್ಯಾನದೊಳಿರಲು ಮಿಕ್ಕ
ಹೀನ ಮಾನವರೇನು ಮಾಡಬಲ್ಲರೊ ರಂಗ

ಮತ್ಸರಿಸುವರೆಲ್ಲ ಕೂಡಿ ಮಾಡುವರೇನು
ಅಚ್ಯುತ ನಿನ್ನ ದಯೆಯೆನ್ನೊಳಿರಲು
ವಾತ್ಸಲ್ಯ ಬಿಡದಿರು ನಿನ್ನ ನಂಬಿದೆ ದೇವ
ಕಿಚ್ಚಿಗೆ ಇರುವೆ ಮುತ್ತುವುದೆ ಕೇಳೆಲೊ ರಂಗ

ಧಾಳಲಿ ಕುದುರೆ ವೈಯಾರದಿ ಕುಣಿಯಲು
ಧೂಳು ರವಿಯ ತಾ ಮುತ್ತುವುದೆ
ತಾಳಿದವರ ವಿರುದ್ಧ ಲೋಕದೊಳಗುಂಟೆ
ಗಾಳಿಗೆ ಗಿರಿಯು ಅಲ್ಲಾಡಬಲ್ಲದೆ

ಕನ್ನಡಿಯೊಳಗಣ ಗಂಟು ಕಂಡು ಕಳ್ಳ
ಕನ್ನವಿಕ್ಕಲವನ ವಶವಹುದೆ
ನಿನ್ನ ನಂಬಲು ಮುದ್ದು ಪುರಂದರ ವಿಠ್ಠಲ
ಚಿನ್ನಕ್ಕೆ ಪುಟವನಿಟ್ಟಂತೆ ಅಹುದೋ ರಂಗ

ನಾ ಮಾಡಿದ ಕರ್ಮ ಬಲವಂತವಾದರೆ

ನಾ ಮಾಡಿದ ಕರ್ಮ ಬಲವಂತವಾದರೆ
ನೀ ಮಾಡುವುದೇನೋ ದೇವ

ಸಾಮಾನ್ಯವಲ್ಲಿದು ಬ್ರಹ್ಮ ಬರೆದ ಬರಹ
ನೇಮದಿಂದಲಿ ಎನ್ನ ಹಣೆಯಲ್ಲಿ ಬರೆದುದಕೆ

ಅತಿಥಿಗಳಿಗೆ ಅನ್ನ ಕೊಟ್ಟವನಲ್ಲ ಪರ
ಸತಿಯರ ಸಂಘಗಳ ಬಿಟ್ಟವನಲ್ಲ
ಮತಿಹೀನ ನಾನಾಗಿ ಮರುಳಾಗಿದ್ದೆನೊ ದೇವ
ಗತಿಯಾವುದಿನ್ನು ಗರುಡ ಗಮನ ಕೃಷ್ಣ

ಅನ್ನಪಾನಂಗಳಿಗೆ ಅಗ್ರಗಣ್ಯನಾಗಿ
ಸ್ನಾನ ಸಂಧ್ಯಾದಿ ಜಪ ತಪವ ನೀಗಿ
ದಾನವಾಂತಕ ನಿನ್ನ ಧ್ಯಾನವ ಮಾಡದೆ
ಶ್ವಾನನಂತೆ ಮನೆ ಮನೆ ತಿರುಗತಲಿದ್ದೆ

ಇನ್ನಾದರೂ ನಿನ್ನ ದಾಸರ ಸಂಘವಿತ್ತು
ಮನ್ನಿಸಿ ಸಲಹಯ್ಯ ಮನ್ಮಥ ಜನಕ
ಅನ್ಯರೊಬ್ಬರ ಕಾಣೆ ಆಧರಿಸುವರಿಲ್ಲ
ಪನ್ನಗಶಯನ ಪುರಂದರ ವಿಠ್ಠಲ

Wednesday, March 23, 2011

ದುಗ್ಗಾಣಿ ಎಂಬೊದು....

ದುಗ್ಗಾಣಿ ಎಂಬೊದು ದುರ್ಜನ ಸಂಘ
ದುಗ್ಗಾಣಿ ಬಲು ಕೆಟ್ಟದಣ್ಣ

ಆಚಾರ ಹೇಳೋದು ದುಗ್ಗಾಣಿ
ಬಲು ನೀಚರ ಮಾಡೋದು ದುಗ್ಗಾಣಿ
ನಾಚಿಕೆಯಿಲ್ಲದೆ ಮನೆ ಮನೆ ತಿರುಗಿ
ಛೀ ಛೀ ಎನಿಸೋದು ದುಗ್ಗಾಣಿಯಣ್ಣ
(ದುಗ್ಗಾಣಿ ಎಂಬೊದು ..)

ನೆಂಟತನ ಹೇಳೋದು ದುಗ್ಗಾಣಿ
ಬಹುನೆಂಟರನೊಲಿಸುವುದು ದುಗ್ಗಾಣಿ
ಒಂಟೆ ಹಾಂಗೆ ಮೋರೆ ಮೇಲಕ್ಕೆ ಸೆಳಕೊಂಡು
ಕುಂಟನೆನಿಸೋದು ದುಗ್ಗಾಣಿಯಣ್ಣ
(ದುಗ್ಗಾಣಿ ಎಂಬೊದು ..)

ಮಾನವ ಹೇಳೋದು ದುಗ್ಗಾಣಿ
ಮಾನ ಹದೆಗೆಡಿಸೋದು ದುಗ್ಗಾಣಿ
ಬಹುಮಾನ ನಿಧಿ ಶ್ರೀ ಪುರಂದರ ವಿಠ್ಠಲನ
ಕಾಣಿಸದಿರುವುದು ದುಗ್ಗಾಣಿಯಣ್ಣ
(ದುಗ್ಗಾಣಿ ಎಂಬೊದು ..)

ತೇಲಿಸೊ ಇಲ್ಲ ಮುಳುಗಿಸೊ ನಿನ್ನ

ತೇಲಿಸೊ ಇಲ್ಲ ಮುಳುಗಿಸೊ ನಿನ್ನ
ಕಾಲಿಗೆ ಬಿದ್ದೇನೊ ಪರಮ ಕೃಪಾಳೊ || ಪ ||

ಸತಿಸುತ ಧನದಾಸೆ ಎಂದೆಂಬ ಮೋಹದಿ
ಹಿತದಿಂದ ಅತಿ ನೊಂದು ಬೆಂಡಾದೆನೊ
( ಗತಿಕೊಡುವರ ಕಾಣೆ ಮತಿಯ ಪಾಲಿಸೊ ) ೨ ಲಕ್ಷ್ಮೀ
ಪತಿ ನಿನ್ನ ಚರಣದ ಸ್ಮರಣೆ ಇತ್ತೆನಗೆ || ೧ ||

ಜರೆ ರೋಗ ದಾರಿದ್ರ್ಯ ಕಶ್ಮಲವೆಂತೆಂಬ
ಶರಧಿಯೊಳಗೆ ಬಿದ್ದು ಮುಳುಗಿದೆನೊ
ಸ್ಥಿರವಲ್ಲ ದೇಹವು ನೆರೆನಂಬಿದೆನು
ಸ್ಥಿರವಲ್ಲ ದೇಹವು ನೆರೆನಂಬಿದೆ ನಿನ್ನ
ಕರುಣಾಭಯವಿತ್ತು ಪಾಲಿಸೊ ಹರಿಯೆ || ೨ ||

ದೋಷವುಳ್ಳವ ನಾನು ಭಾಷೆಯುಳ್ಳವ ನೀನು
ಮೋಸ ಹೋದೆನು ಭಕ್ತಿ ರಸವ ಬಿಟ್ಟು
(ಶೇಷಶಯನ ಶ್ರೀ ಪುರಂದರ ವಿಠ್ಠಲನ ) ೨
ದಾಸರ ಸಂಗವಿತ್ತು ಪಾಲಿಸೊ ಹರಿಯೆ || ೩ ||

Tuesday, March 22, 2011

ಗುರುವಿನ ಗುಲಾಮನಾಗುವ ತನಕ

ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ
ಪರಿ ಪರಿ ಶಾಸ್ತ್ರವನೋದಿದರೇನು
ವ್ಯರ್ಥವಾಯ್ತು ಭಕುತಿ

ಆರು ಶಾಸ್ತ್ರವ ಓದಿದರಿಲ್ಲ
ಮೂರು ಪುರಾಣವ ಮುಗಿಸಿದರಿಲ್ಲ
ಸಾರ ನ್ಯಾಯ ಕಥೆಗಳ ಕೇಳಿದರಿಲ್ಲ
ಧೀರನಾಗಿ ತಾ ಪೇಳಿದರಿಲ್ಲ

ಕೊರಳೊಳು ಮಾಲೆ ಧರಿಸಿದರಿಲ್ಲ,
ಬೆರಳೊಳು ಜಪಮಣಿ ಜಪಿಸಿದರಿಲ್ಲ
ಮರುಳನಾಗಿ ಶರೀರಕೆ ಬೂದಿ
ಒರೆಸಿಕೊಂಡು ತಾ ತಿರುಗಿದರಿಲ್ಲ

ನಾರಿಯ ಭೋಗ ಅಳಿಸಿದರಿಲ್ಲ
ಶಾರೀರಿಕ ಸುಖವ ಬಿಡಿಸಿದರಿಲ್ಲ
ನಾರದವರದ ಪುರಂದರ ವಿಠ್ಠಲನ
ಸೇರಿಕೊಂಡು ತಾ ಪಡೆಯುವ ತನಕ

Monday, March 21, 2011

ಡೊಂಕು ಬಾಲದ ನಾಯಕರೆ

ಡೊಂಕು ಬಾಲದ ನಾಯಕರೆ
ನೀವೇನೂಟವ ಮಾಡುವಿರಿ

ಕಣಕ ಕುಟ್ಟೋ ಅಲ್ಲಿಗೆ ಹೋಗಿ
ಹಣಕಿ ಇಣಕಿ ನೋಡುವಿರಿ
ಕಣಕ ಕುಟ್ಟೋ ಒನಕೆಲಿ ಬಡಿದರೆ
ಕಂಞ ಕುಂಞ ಕಂಞ ಕುಂಞ ಮಾಡುವಿರಿ

ಹುಗ್ಗಿ ಮಾಡೋ ಅಲ್ಲಿಗೆ ಹೋಗಿ
ತಗ್ಗಿ ಬಗ್ಗಿ ನೋಡುವಿರಿ
ಹುಗ್ಗಿ ಮಾಡೋ ಸೌಟಲಿ ಬಡಿದರೆ
ಕಂಞ ಕುಂಞ ಕಂಞ ಕುಂಞ ಮಾಡುವಿರಿ

ಹಿರೇ ಬೀದಿಯಲಿ ಓಡುವಿರಿ
ಕರೇ ಬೂದಿಯಲಿ ಹೊರಳುವಿರಿ
ಪುರಂದರ ವಿಠ್ಠಲರಾಯನ ಈ ಪರಿ
ಮರೆತು ಸದಾ ನೀವು ಚಲಿಸುವಿರಿ

ಕಲ್ಲು ಸಕ್ಕರೆ ಕೊಳ್ಳಿರೊ ನೀವೆಲ್ಲರು

ಕಲ್ಲು ಸಕ್ಕರೆ ಕೊಳ್ಳಿರೊ ನೀವೆಲ್ಲರು
ಕಲ್ಲು ಸಕ್ಕರೆ ಕೊಳ್ಳಿರೊ

ಕಲ್ಲು ಸಕ್ಕರೆ ಸವಿ ಬಲ್ಲವರೆ ಬಲ್ಲರು
ಪುಲ್ಲಲೋಚನ ಶ್ರೀ ಕೃಷ್ಣ ನಾಮವೆಂಬ

ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ
ಒತ್ತೊತ್ತಿ ಗೋಣಿಯೊಳ್ ತುಂಬುವುದಲ್ಲ
ಎತ್ತ ಹೋದರೂ ಬಾಡಿಗೆ ಸುಂಕವಿದಕಿಲ್ಲ
ಉತ್ತಮ ಸರಕಿದು ಅತಿ ಲಾಭ ತರುವಂಥ

ಸಂತೆ ಕಂತೆಗೆ ಹೋಗಿ ಶ್ರಮ ಪಡಿಸುವುದಲ್ಲ
ಸಂತೆಯೊಳಗೆ ಇದು ಮಾರುವುದಲ್ಲ
ಸಂತತ ಭಕ್ತರ ನಾಲಿಗೆ ಸವಿಗೊಂಬ
ಕಾಂತ ಪುರಂದರ ವಿಠ್ಠಲ ನಾಮವೆಂಬ

Sunday, March 20, 2011

ಗಿಳಿಯು ಪಂಜರದೊಳಿಲ್ಲ ಶ್ರೀ ರಾಮ ರಾಮ

ಗಿಳಿಯು ಪಂಜರದೊಳಿಲ್ಲ ಶ್ರೀ ರಾಮ ರಾಮ
ಬರಿದೆ ಪಂಜರವಾಯ್ತಲ್ಲ

ಅಕ್ಕ ನಿನ್ನ ಮಾತು ಕೇಳಿ
ಚಿಕ್ಕದೊಂದು ಗಿಳಿಯ ಸಾಕಿದೆ
ಅಕ್ಕ ನಿಲ್ಲದ ವೇಳೆಯಲ್ಲಿ
ಬೆಕ್ಕು ಕೊಂಡು ಹೋಯಿತಯ್ಯೋ

ಅರ್ತಿಗೆಂದು ಗಿಳಿಯ ಸಾಕಿದೆ
ಮುತ್ತಿನ ಹಾರವೇ ಹಾಕಿದೆ
ಮುತ್ತುಗೊಂಡು ಗಿಳಿಯು ತಾನು
ಎತ್ತಲೋಡಿ ಹೋಯಿತಯ್ಯೋ

ಹಸಿರು ಬಣ್ಣದ ಗಿಳಿಯು
ಕುಶಲ ಬುದ್ಧಿಯ ಗಿಳಿಯು
ಅಸುವು ಕುಂದಿ ಗಿಳಿಯು ತಾನು
ಹಸನಗೆಡಿಸಿ ಹೋಯಿತಯ್ಯೋ

ಮುಪ್ಪಾಗ ಬೆಣ್ಣೆಯನ್ನು
ತಪ್ಪದೇ ನಾ ಹಾಕಿ ಸಾಕಿದೆ
ಒಪ್ಪದಿಂದ ಗಿಳಿಯು ಈಗ
ತೆಪ್ಪನೆ ಹಾರಿ ಹೋಯಿತಯ್ಯೋ

ರಾಮ ರಾಮ ಎನ್ನೊ ಗಿಳಿ
ಕೋಮಲ ಕಾಯದ ಗಿಳಿ
ಸಮಾಜ ಪೋಷಕ ತಾನು
ಪ್ರೇಮದಿ ಸಾಕಿದ ಗಿಳಿ

ಒಂಬತ್ತು ಬಾಗಿಲ ಮನೆಯಲ್ಲಿ
ತುಂಬಿದ ಸಂದಣಿ ಇರಲು
ಕುಂಭ ಮುರಿದು ಡಿಂಬ ಬಿದ್ದು
ಅಂಬರಕ್ಕೆ ಹಾರಿತಯ್ಯೋ

ಅಂಗೈಯಲ್ಲಿ ಆಡೋ ಗಿಳಿ
ಮುಂಗೈ ಮೇಲಣ ಗಿಳಿ
ರಂಗ ಪುರಂದರ ವಿಠ್ಠಲನಂತೆ
ರಂಗದಿ ಭಜಿಸುವ ಗಿಳಿ

ಕೃಷ್ಣಾ ಬಾರೋ , ಕೃಷ್ಣಾ ಬಾರೋ

ಕೃಷ್ಣಾ ಬಾರೋ , ಕೃಷ್ಣಾ ಬಾರೋ
 ಕೃಷ್ಣಯ್ಯ ನೀ ಬಾರಯ್ಯ || ಪಲ್ಲವಿ ||


ಸಣ್ಣ ಹೆಜ್ಜೆಗಳಿಟ್ಟು , ಗೆಜ್ಜೆ ನಾದಗಳಿಂದ || ಪ ||
 ಮನ್ಮಥ ಜನಕನೆ ಬೇಗನೆ ಬಾರೋ
ಕಮಲಾಪತಿ ನೀ ಬಾರೋ
ಅಮಿತ ಪರಾಕ್ರಮ ಶಂಕರ ಬಾರೋ
ಕಮನೀಯ ಗಾತ್ರನೆ ಬಾರಯ್ಯ ದೊರೆಯೇ || ಪ ||

  ಹಾಲು ಬೆಣ್ಣೆಗಳ ಕೈಯಲ್ಲಿ ಕೊಡುವೆ
ಮೇಲಾದಿ ಭಕ್ಷಗಳ ಮುಚ್ಚಿಟ್ಟು ತರುವೆ
ಜಾಲ ಮಾಡದೆ ನೀ ಬಾರಯ್ಯ ಮರಿಯೇ
ಬಾರಾ ಎನ ತಂದೆ ಪುರಂದರ ವಿಠ್ಠಲ || ಪ ||

Saturday, March 19, 2011

ಅಂಬಿಗ ನಾ ನಿನ್ನ ನಂಬಿದೆ

ಅಂಬಿಗ ನಾ ನಿನ್ನ ನಂಬಿದೆ
ಜಗದಂಬರಮಣನ ನಂಬಿದೆ

ತುಂಬಿದ ಹರಿಗೋಲಂಬಿಗ
ಅದಕ್ಕೊಂಬತ್ತು ಛಿದ್ರವು ಅಂಬಿಗ
ಸಂಭ್ರಮದಿಂ ನೋಡಂಬಿಗ
ಅದರಿಂಬು ನೋಡಿ ನಡೆಸಂಬಿಗ

ಹೊಳೆಯ ಭರವ ನೋಡಂಬಿಗ
ಅದಕೆ ಸೆಳೆವು ಘನವಯ್ಯ ಅಂಬಿಗ
ಸುಳಿಯೊಳು ಮುಳುಗಿದೆ ಅಂಬಿಗ
ಎನ್ನ ಸೆಳೆದು ಕೊಂಡೊಯ್ಯೊ ಅಂಬಿಗ

ಆರು ತೆರೆಯ ನೋಡಂಬಿಗ
ಅದು ಮೀರಿ ಬರುತಿದೆ ನೋಡಂಬಿಗ
ಯಾರಿಂದಲಾಗದು ಅಂಬಿಗ
ಅದ ನಿವಾರಿಸಿ ದಾಟಿಸೊ ಅಂಬಿಗ

ಸತ್ಯವೆಂಬುದೆ ಹುಟ್ಟಂಬಿಗ
ಸದಾ ಭಕ್ತಿಯೆಂಬುದೆ ಪಥವಂಬಿಗ
ನಿತ್ಯಮೂರುತಿ ನಮ್ಮ ಪುರಂದರ ವಿಠ್ಠಲನ
ಮುಕ್ತಿ ಮಂಟಪಕೊಯ್ಯೊ ಅಂಬಿಗ

ಆಡಿಸಿದಳೆಶೋದಾ ಜಗದೋದ್ಧಾರನ

ಆಡಿಸಿದಳೆಶೋದಾ ಜಗದೋದ್ಧಾರನ

ಜಗದೋದ್ಧಾರನ ಮಗನೆಂದು ತಿಳಿಯುತ
ಮಗುಗಳ ಮಾಣಿಕ್ಯನ ಆಡಿಸಿದಳೆಶೋದಾ

ನಿಗಮಕೆ ಸಿಲುಕದ ಅಗಣಿತ ಮಹಿಮನ
ಸುಗುಣಾಂತ ರಂಗನ ಆಡಿಸಿದಳೆಶೋದಾ

ಅಣೋರಣೀಯನ ಮಹತೋಮಹೀಯನ
ಅಪ್ರಮೇಯನ ಆಡಿಸಿದೆಳೆಶೋದಾ

ಪರಮ ಪುರುಷನ ಪರವಾಸು ದೇವನ
ಪುರಂದರ ವಿಠ್ಠಲನ ಆಡಿಸಿದಳೆಶೋದಾ

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...