Showing posts with label ರೋಹಿತ್ ಚಕ್ರತೀರ್ಥ. Show all posts
Showing posts with label ರೋಹಿತ್ ಚಕ್ರತೀರ್ಥ. Show all posts

Tuesday, April 7, 2026

ಒಂದು ಸಂಕೀರ್ಣ ವಿಷಯದ ಬಗ್ಗೆ ಸರಳವಾಗಿ ತಿಳಿದುಕೊಳ್ಳೋಣ ಬನ್ನಿ! -ರೋಹಿತ್ ಚಕ್ರತೀರ್ಥ


ಇಂದು ಪ್ರಧಾನಿ ಮೋದಿಯವರು ಮಾನ್ಯ ಜನರಿಗೆ ಸಾಮಾನ್ಯವಾಗಿ ಅರ್ಥವಾಗದ ಅಥವಾ ತಲೆಯ ಮೇಲಿಂದ ಹಾರಿಹೋಗುವ ಒಂದು ವಿಷಯದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಮೂರು ಸಂಗತಿಗಳು ಬಹುಶಃ ಹೆಚ್ಚಿನವರಿಗೆ ಹೊಸತು: ಫಾಸ್ಟ್ ಬ್ರೀಡರ್ ರಿಯಾಕ್ಟರ್, ಕ್ರಿಟಿಕಾಲಿಟಿ ಮತ್ತು ಥೋರಿಯಂ. ಇದು ಭಾರತದ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಬಹುದೊಡ್ಡ ಜಿಗಿತ ಎಂಬಂತೆಯೂ ಪ್ರಧಾನಿಯವರು ಬರೆದಿದ್ದಾರೆ. ಆದರೆ ಏನು ಈ ಜಿಗಿತ, ಭಾರತ ಎಲ್ಲಿಂದ ಎಲ್ಲಿಯವರೆಗೆ ಜಿಗಿದಿದೆ ಎಂಬುದು ಬಹುತೇಕರಿಗೆ ಅಂದಾಜಾಗಿರಲಿಕ್ಕಿಲ್ಲ. 


ಇದನ್ನು ನಮ್ಮ ತಿಳಿವಳಿಕೆಗೆ ಅರ್ಥವಾಗುವ ಹೋಲಿಕೆಗಳನ್ನು ಬಳಸಿಕೊಂಡು ಅರ್ಥ ಮಾಡಿಕೊಳ್ಳಲು ಯತ್ನಿಸೋಣ. ಯಾವುದೇ ವಸ್ತುವಿನಿಂದ ಶಕ್ತಿ ಪಡೆಯಲು ಅದನ್ನು ಉರಿಸಬೇಕು (ನಮಗೂ ಅಷ್ಟೆ: ಯಾರಾದರೂ ನಮಗೆ ಉರಿಸಿದರೆ ತಾನೇ ನಮಗೂ ನಮ್ಮ ಶಕ್ತಿ ತೋರಿಸಬೇಕು ಅನ್ನಿಸುವುದು!). ಉರಿಸಿದಾಗ ಸಿಗುವ ಶಕ್ತಿ ಶಾಖದ ರೂಪದಲ್ಲಿರಬಹುದು, ಬೆಳಕಿನ ರೂಪದಲ್ಲಿರಬಹುದು ಅಥವಾ ಇನ್ನಾವುದಾದರೂ ರೂಪದಲ್ಲಿ ಇರಬಹುದು. ಅದನ್ನು ನಾವು ನಮಗೆ ನಮಗೆ ಬೇಕಾದಂತೆ ಬಳಸಿಕೊಳ್ಳುವುದರಲ್ಲಿ ನಮ್ಮ ಜಾಣ್ಮೆ ಇದೆ. ಉದಾಹರಣೆಗೆ ಕಲ್ಲಿದ್ದಲು ಉರಿಸಿ, ಅದರಿಂದ ನೀರು ಕಾಯಿಸಿ, ಆ ಕುದಿನೀರಿನ ಆವಿಯನ್ನು ಬಳಸಿಕೊಂಡು ರೈಲು ಓಡಿಸುವುದನ್ನು ನಾವು ಶತಮಾನಗಳ ಹಿಂದೆ ಕಂಡುಕೊಂಡೆವು. ಹಾಗೆಯೇ ಉರುವಲು ಉರಿಸಿ, ಅದರಿಂದ ನೀರು ಕಾಯಿಸಿ, ಹಬೆ ಎಬ್ಬಿಸಿ, ಅದರಿಂದ ಟರ್ಬೈನುಗಳನ್ನು ತಿರುಗಿಸಿ ವಿದ್ಯುತ್ ತಯಾರಿಸುವುದನ್ನೂ ಕಲಿತೆವು. ಪರಮಾಣು ರಿಯಾಕ್ಟರುಗಳಲ್ಲಿ ಆಗುವುದೂ ಇಷ್ಟೆ: ಟರ್ಬೈನುಗಳ ಚಕ್ರಗಳು ತಿರುಗಬೇಕಾದರೆ ಅವುಗಳನ್ನು ಉಗಿ (Steam) ದೂಡಬೇಕು. ಆ ಉಗಿಯನ್ನು ಎಬ್ಬಿಸಲು ಶಾಖ ಉತ್ಪತ್ತಿಯಾಗಬೇಕು. ಪರಮಾಣು ರಿಯಾಕ್ಟರುಗಳಲ್ಲಿ ವಿಕಿರಣಶೀಲ ಧಾತುಗಳನ್ನು (ಅಥವಾ ಧಾತುರೂಪಗಳನ್ನು) ಬಳಸಿ ಅಂಥ ಶಾಖವನ್ನು ಸೃಷ್ಟಿಸುತ್ತಾರೆ. ವಿಕಿರಣಶೀಲ ಧಾತುಗಳು ಕ್ಷಣಕ್ಷಣಕ್ಕೂ ಸಹಸ್ರ ಸಹಸ್ರ ಸಂಖ್ಯೆಯ ಕಣಗಳನ್ನು ಉತ್ಸರ್ಜಿಸುತ್ತ ಇರುವುದರಿಂದ ಆ ಕಣಗಳ ಹೊಡೆತಕ್ಕೆ ಶಾಖ ಸೃಷ್ಟಿಯಾಗುತ್ತದೆ. ಆ ಶಾಖವನ್ನು ಬಳಸಿಕೊಂಡು ನೀರು ಬಿಸಿ ಮಾಡಿ ಉಗಿ ಎಬ್ಬಿಸಬಹುದು. 


ಕಲ್ಲಿದ್ದಲನ್ನು ಉರುವಲಾಗಿ ಬಳಸುವುದಕ್ಕೂ ವಿಕಿರಣಶೀಲ ಯುರೇನಿಯಮ್ಮನ್ನು ಬಳಸುವುದಕ್ಕೂ ವ್ಯತಾಸವುಂಟು. ಕಲ್ಲಿದ್ದಲನ್ನು ಉರಿಸಿದರೆ ಕೊನೆಯಲ್ಲಿ ಬೂದಿ ಮಿಗುತ್ತದೆ. ಆದರೆ ಯುರೇನಿಯಂ ತುಂಡನ್ನು ಹಾಗೆ "ಕಾಯಿಸಿದಾಗ" ಅದರಿಂದ ಬೂದಿ, ಕೆಂಡ, ಭಸ್ಮ ಏನೊಂದೂ ಬರುವುದಿಲ್ಲ. ಆ ಯುರೇನಿಯಂ ತುಂಡು ಕಪ್ಪುಮಸಿ ಕೂಡ ಆಗುವುದಿಲ್ಲ. ಅದರಿಂದ ಹೊರಹಾರಿದ್ದು ವಿಕಿರಣಗಳು ಮಾತ್ರ (ಆಲ್ಫಾ, ಬೀಟಾ, ಗ್ಯಾಮಾ ಇತ್ಯಾದಿ ಕಣಗಳು). ಅವು ಬರಿಗಣ್ಣಿಗೆ ಕಾಣುವುದೂ ಇಲ್ಲ. ನಮ್ಮಲ್ಲಿ ಪರಮಾಣುಶಕ್ತಿಯ ಬಗ್ಗೆ ಎಷ್ಟೊಂದು ಅಜ್ಞಾನವಿದೆಯೆಂದರೆ "ಪ್ರಖ್ಯಾತ" ವಿಜ್ಞಾನ ಸಂವಹನಕಾರ ನಾಗೇಶ ಹೆಗಡೆಯವರು ಒಮ್ಮೆ ಯುರೇನಿಯಂನ್ನು ಸುಟ್ಟ ಮೇಲೆ ಬೂದಿಯನ್ನು ವಿಲೇವಾರಿ ಮಾಡುವುದು ದೊಡ್ಡ ಸಮಸ್ಯೆ ಎಂದು ಬರೆದಿದ್ದರು (ಆಮೇಲೆ, ತಪ್ಪು ತೋರಿಸಿಕೊಟ್ಟಾಗ, ಎಂದಿನಂತೆ ತನ್ನ ಮೊಲಕ್ಕೆ ಎರಡು ಕೊಂಬು, ಮೂರು ಕಾಲು ಎಂದು ವಾದಮಾಡಿದರು. ಬಿಡಿ, ಮಾತಾಡಿ ಪ್ರಯೋಜನವಿಲ್ಲ!)


ಹಾಗಾದರೆ ಪರಮಾಣು ರಿಯಾಕ್ಟರುಗಳಲ್ಲಿ ತ್ಯಾಜ್ಯವೆಂಬುದು (Nuclear waste) ಇರುವುದಿಲ್ಲವೇ ಎಂದು ಕೇಳಿದರೆ ಖಂಡಿತ ಇರುತ್ತದೆ. ಯುರೇನಿಯಂ ಅನ್ನು ಉರುವಲಾಗಿ ಉಪಯೋಗಿಸಿದ ನಂತರ ಅದು ವಿಕಿರಣಶೀಲವಾಗಿಯೇ ಇರುತ್ತದೆ. ಅಂಥ ಸಲಾಕೆಗಳನ್ನು ವಿಲೇವಾರಿ ಮಾಡುವುದು ದೊಡ್ಡ ತಲೆನೋವು ಹೌದು - ಅವನ್ನು ಭೂಮಿಯಲ್ಲಿ ನೂರಾರು ಮೀಟರ್ ಆಳಕ್ಕೆ ಹೊಂಡ ತೋಡಿ, ಕಾಂಕ್ರೀಟು ಗೋಡೆಗಳಿಂದ ಮಾಡಿದ ಕೋಣೆಗಳಲ್ಲಿಟ್ಟು ಭದ್ರಪಡಿಸಬೇಕು. ಸ್ವಲ್ಪ ಎಚ್ಚರ ಮರೆತರೆ ಆ ಸಲಾಕೆಗಳಿಂದ ಹೊರಹಾರುವ ಅದೃಶ್ಯ ವಿಕಿರಣಗಳು ಭೂಮಿಯ ಮೇಲಿರುವವರ ಮೇಲೆ ಏನೇನೋ ಭಾನಗಡಿ ಮಾಡಿಯಾವು. ಪರಮಾಣು ರಿಯಾಕ್ಟರುಗಳಲ್ಲಿ ಆ ಎಲ್ಲ ಎಚ್ಚರಿಕೆ ತೆಗೆದುಕೊಂಡೇ ಕೆಲಸ ಮಾಡುವುದು. ನಮ್ಮ ಕೈಗಾದಲ್ಲಿ ಉರುವಲಾಗಿ ಬಳಸಿದ ವಿಕಿರಣಶೀಲ ಸಲಾಕೆಗಳನ್ನು ಆಮೇಲೆ ಪಕ್ಕದ ತೋಡುಗಳಲ್ಲೋ ಹೊಲಗದ್ದೆಗಳಲ್ಲೋ ಎಸೆಯುವುದಿಲ್ಲ - ಆದರೆ ಹಾಗೆ ಮಾಡುತ್ತಾರೆಂಬ ರೇಂಜಿಗೆ ಒಂದು ಕಾಲದಲ್ಲಿ ಪ್ರಗತಿಪರ ಚಿಂತಕರು ಬಾಯಿ ಬಡಿದುಕೊಂಡದ್ದು ಹೌದು!


ಪರಮಾಣು ರಿಯಾಕ್ಟರುಗಳಲ್ಲಿ ವಿದ್ಯುತ್ ಉತ್ಪಾದನೆಗೆ ಯುರೇನಿಯಂ-233 ಎಂಬ ಒಂದು ಧಾತುರೂಪ ಬೇಕು. ಏಕಂ ಸತ್ ವಿಪ್ರಾ ಬಹುಧಾ ವದನ್ತಿ ಎಂಬಂತೆ ಯುರೇನಿಯಂ ಎಂಬ ಒಂದು ಧಾತುವಿಗೆ ಯು233, ಯು234, ಯು235, ಯು238 ಮುಂತಾದ ಹತ್ತಾರು ರೂಪಗಳು. ಇವನ್ನು ಐಸೋಟೋಪುಗಳು (Isotopes) ಎನ್ನುತ್ತೇವೆ. ಇಲ್ಲಿರುವ 233, 234 ಇತ್ಯಾದಿ ಸಂಖ್ಯೆಗಳನ್ನು ರಾಶಿಸಂಖ್ಯೆ (Mass Number) ಎನ್ನುತ್ತೇವೆ. ಈ ಐಸೋಟೋಪುಗಳಲ್ಲಿ ಕೆಲವು ಸ್ಥಿರ, ಕೆಲವು ಅಸ್ಥಿರ. ಕೆಲವು ಬಹುಪ್ರಮಾಣದಲ್ಲಿ ಸಿಗುತ್ತವೆ, ಇನ್ನು ಕೆಲವು ಕಡಿಮೇ ಅಂದರೆ ಕಡಿಮೆ ಪ್ರಮಾಣದಲ್ಲಿ ಸಿಗುವಂಥವು. ಉದಾಹರಣೆಗೆ ಯು235, ಯು238 ಮುಂತಾದವು ಹೆಚ್ಚು ಪ್ರಮಾಣದಲ್ಲಿ ಅಲ್ಲಲ್ಲಿ ಸಿಗುತ್ತವೆ. ಆದರೆ ಅವುಗಳಿಂದ ನೇರವಾಗಿ ಅಂಥ ಪ್ರಯೋಜನವಿಲ್ಲ. ಯಾಕೆಂದರೆ ಅವು ಉತ್ಸರ್ಜಿಸುವ (ಹೊರಚಿಮ್ಮಿಸುವ) ಕಣಗಳ ಸಂಖ್ಯೆ ಕಡಿಮೆ. ಯು233 ಹಾಗಲ್ಲ; ಅದು ದೀಪಾವಳಿಯ ನೆಲಚಕ್ರದಂತೆ ಪಟುವಾದ ಕಣಗಳನ್ನು ರಪರಪರಪನೆ ಹೊರಹಾರಿಸುತ್ತದೆ. ಆದರೆ ಯು233-ನ ಪ್ರಮಾಣ ಜಗತ್ತಲ್ಲಿ ಭಾಳ ಭಾಳ ಕಡಿಮೆ. ಯಾವತ್ತೂ ಅಷ್ಟೆ ನೋಡಿ: ಬೇಕಾದ್ದು ಹೆಚ್ಚಿರುವುದಿಲ್ಲ, ಬೇಡವಾದ್ದು ಬೇಕಾದಷ್ಟಿರುತ್ತದೆ! 


ನಮ್ಮಲ್ಲಿ ಪರಮಾಣು ರಿಯಾಕ್ಟರುಗಳಲ್ಲಿ ವಿದ್ಯುತ್ ಉತ್ಪಾದನೆಗೆ ನಮಗೆ ಬೇಕಿರುವುದು ಯು233 ಎಂಬ ಐಸೋಟೋಪು. ಅದು ಜಗತ್ತಿನಲ್ಲಿ ಸಿಗುವುದು ಬಹಳ ಕಡಮೆ. ಇದರ "ಭಾರೀ ದಾಸ್ತಾನು" ಇದೆ ಎಂದು ಹೇಳಿಕೊಂಡ ಅಮೆರಿಕ, ರಷ್ಯಗಳು ಇಡೀ ಇತಿಹಾಸದುದ್ದಕ್ಕೆ ತಯಾರು ಮಾಡಿರಬಹುದಾದ ಯುರೇನಿಯಂ 2 ಟನ್‌ಗಿಂತ ಕಡಿಮೆ! ಅಲ್ಲದೆ ಯು233ನ್ನು ಯಾವ ದೇಶವೂ ಮಾರಾಟ ಮಾಡುವಂತಿಲ್ಲ; ಉತ್ಪಾದಿಸುವುದಂತೂ ದೂರದ ಮಾತು. ಗಲ್ಫ್ ರಾಷ್ಟ್ರಗಳು ನೆಲದಲ್ಲಿ ಬಾವಿ ತೋಡಿ ಕಲ್ಲೆಣ್ಣೆ ತೆಗೆದು ಹಡಗುಗಳಲ್ಲಿ ತುಂಬಿ ಮಾರಿದಂತೆ ಇದನ್ನು ಮಾಡಲು ಬರುವುದಿಲ್ಲ. ಇಡೀ ದೇಶಕ್ಕೆ ದೇಶವನ್ನೇ ಬಗೆದು ಗುಡ್ಡೆಹಾಕಿದರೂ ಹತ್ತಿಪ್ಪತ್ತು ಕೆಜಿ ಈ ಐಸೋಟೋಪು ಸಿಗುವುದೂ ಕಷ್ಟವೆ. ಅಂಥ ವಿರಳಾತಿವಿರಳ ಐಸೋಟೋಪು ಇದು.


ಆದರೆ ಇದು ಎಷ್ಟೊಂದು ಪಟುವೆಂದರೆ ಇದರಿಂದ ಅತ್ಯಧಿಕ ಪ್ರಮಾಣದ ಶಕ್ತಿಯನ್ನು ಉತ್ಪಾದಿಸಬಹುದು. ಉದಾಹರಣೆಗೆ ಒಂದು ಕೆಜಿ ಯು233 ಕಚ್ಚಾಪದಾರ್ಥದಿಂದ ಸರಿಸುಮಾರು 82 ಟೆರಾಜೂಲುಗಳಷ್ಟು ಶಕ್ತಿಯನ್ನು ಉತ್ಪಾದಿಸಬಹುದು. ಇದು ಸರಿಸುಮಾರು 23,000 ಮೆಗಾವಾಟ್‌ಗಳಷ್ಟು ವಿದ್ಯುತ್ ಶಕ್ತಿಗೆ ಸಮ. ಏನಾದರೂ ಅರ್ಥ ಆಯಿತಾ? ಆಗಿಲ್ಲವಾ? ಹಾಗಾದರೆ ಈ ಹೋಲಿಕೆ ನೋಡಿ: ಒಂದು ಕೆಜಿ ಕಲ್ಲಿದ್ದಲಿಂದ 24 ಮೆಗಾಜೂಲ್ ಶಕ್ತಿ ಉತ್ಪಾದಿಸಬಹುದು. ಅದೇ ಒಂದು ಕೆಜಿ ಯು233 ಉರುವಲಿಂದ 8,20,00,000 ಮೆಗಾಜೂಲ್ ಶಕ್ತಿ ಉತ್ಪಾದಿಸಬಹುದು. ಅಂದರೆ ಒಂದು ಕೆಜಿ ಯು233 ಉರುವಲು ಉತ್ಪಾದಿಸುವ ಶಕ್ತಿಯು 30 ಲಕ್ಷ ಕೆಜಿ ಕಲ್ಲಿದ್ದಲು ಉತ್ಪಾದಿಸುವ ಶಕ್ತಿಗೆ ಸಮ. ಅರ್ಥ ಆಯ್ತಲ್ಲ! ಅಂದರೆ ಕೆಲವೇ ಕೆಲವು ಗ್ರಾಂಗಳಷ್ಟು ಯು233 ಇದ್ದರೂ ಸಾಕು, ಒಂದು ರಿಯಾಕ್ಟರಿನಲ್ಲಿ ಸಾಕುಸಾಕು ಅನ್ನಿಸುವಷ್ಟು ವಿದ್ಯುತ್ ತಯಾರಿಸಬಹುದು ಎಂದಾಯಿತು.


ಈಗ ಮುಖ್ಯ ವಿಷಯಕ್ಕೆ ಬರುವಾ. ನಮ್ಮಲ್ಲಿ ಸಮುದ್ರದಂಡೆಯಲ್ಲಿ (ಮುಖ್ಯವಾಗಿ ಕೇರಳದ ಸಮುದ್ರ ಕಿನಾರೆಯ ಹೊಯಿಗೆಯಲ್ಲಿ) ಸಾಕಷ್ಟು ಪ್ರಮಾಣದಲ್ಲಿ ಥೋರಿಯಂ ಎಂಬ ಧಾತುವಿನ ಅಂಶವಿದೆ. ಈ ಥೋರಿಯಂ ಎಂಬುದು ಅದರಷ್ಟಕ್ಕೆ ಅದು ನಿರುಪಯೋಗಿ, ನಿರಪಾಯಕಾರಿ. ಆದರೆ ಅದನ್ನು ಯು233 ಆಗಿ ಪರಿವರ್ತಿಸಲು ಸಾಧ್ಯವಿದೆ! ಥೋರಿಯಂನ 232 ಎಂಬ ಐಸೋಟೋಪಿಗೆ ನ್ಯೂಟ್ರಾನುಗಳನ್ನು ಡಿಕ್ಕಿ ಹೊಡೆಸಿದಾಗ ಅದು ಥೋರಿಯಂ-233 ಆಗಿ ಬದಲಾಗುತ್ತದೆ. ಆದರೆ ಇದು ತುಂಬ ಅಸ್ಥಿರವಾದ ಐಸೋಟೋಪ್. ಅಂದರೆ ಕೆಲವೇ ಕೆಲವು ಕ್ಷಣಗಳಲ್ಲಿ ಇದು ತನ್ನೊಳಗಿನ ಎಲೆಕ್ಟ್ರಾನುಗಳನ್ನು ಹೊರಚೆಲ್ಲಿಕೊಂಡು ಪ್ರೊಟಾಕ್ಟಿನಿಯಮ್-233 ಎಂಬ ಧಾತುರೂಪಕ್ಕೆ ಬದಲಾಗುತ್ತದೆ. ಈ ಧಾತುರೂಪ ಕೂಡ ಅಸ್ಥಿರ. ಇದು ತಕ್ಷಣವೇ ಬೀಟಾ ಕಣಗಳನ್ನು ಹೊರಹಾಕಿ, ಯುರೇನಿಯಂ-233 ಆಗಿ ಬದಲಾಗುತ್ತದೆ. ಈ ಯು233 ಉಂಟಲ್ಲ - ಇದೇ ನಮಗೆ ಶಕ್ತಿ ಉತ್ಪಾದನೆಗೆ ಬೇಕಾದ ಮುಖ್ಯವಾದ ಉರುವಲು. ಹಾಗಾಗಿ ಥೋರಿಯಂ ಅನ್ನು ಫರ್ಟೈಲ್ ಮೆಟೀರಿಯಲ್ (Fertile Material) ಎಂದೂ ಯು233 ಅನ್ನು ಫಿಸೈಲ್ ಫ್ಯೂಲ್ (Fissile Fuel) ಎಂದೂ ಕರೆಯುತ್ತಾರೆ. ಒಂದು ಉರುವಲುಚೋದಕ, ಇನ್ನೊಂದು ನಿಜವಾದ ಉರುವಲು. ಹಸು ಹುಲ್ಲು ತಿಂದು ಸೆಗಣಿ ಹಾಕುತ್ತದೆ; ಆ ಸೆಗಣಿಯನ್ನು ಬೆರಣಿ ತಟ್ಟಿ ನಾವು ಉರುವಲಾಗಿ ಬಳಸುತ್ತೇವಲ್ಲ, ಹಾಗೆ. ಥೋರಿಯಂ ಹುಲ್ಲು ಇದ್ದಂತೆ; ಯುರೇನಿಯಂ-233 ಬೆರಣಿ ಇದ್ದಂತೆ. ಇಷ್ಟು ದಿನ ನಮ್ಮಲ್ಲಿ ಹುಲ್ಲಿತ್ತು; ಆದರೆ ಆ ಹುಲ್ಲನ್ನು ಸೆಗಣಿ ಮಾಡುವ ಹಸು ಇನ್ನೂ ಪ್ರಯೋಗಶಾಲೆಯಲ್ಲಿತ್ತು.


ಆಗಲೇ ಹೇಳಿದಂತೆ ಥೋರಿಯಂ - ಅದರ ಪಾಡಿಗದು ನಿರುಪದ್ರವಿ. ಅದಕ್ಕೆ ನ್ಯೂಟ್ರಾನ್ ಕಣವನ್ನು ಹೊಡೆಸಿದಾಗಷ್ಟೇ ಅದರೊಳಗಿಂದ ವಿಕಿರಣಶೀಲ ಕಣಗಳು ಹೊರಹಾರುವುದು. ಈ ಅತಿ ವೇಗದ ಅತ್ಯಧಿಕ ಶಕ್ತಿಯ ನ್ಯೂಟ್ರಾನ್ ಕಣಗಳನ್ನು ಹೊಡೆಸುವುದೂ ಒಂದು ದೊಡ್ಡ ಸಾಹಸವೇ. ಆದರೆ ಒಂದು ಮ್ಯಾಜಿಕ್ ಮಾಡಬಹುದು: ಅದೇನೆಂದರೆ ಮೊದಲ ಸಲ, ಕೆಲಸ ಶುರುಮಾಡುವಾಗ ಮಾತ್ರ - ಒಂದಷ್ಟು ನ್ಯೂಟ್ರಾನ್ ಕಣಗಳನ್ನು ಥೋರಿಯಂ-232ಗೆ ತಾಡಿಸಬಹುದು. ಆಮೇಲೆ ಥೋರಿಯಂ-232 ಎಂಬುದು ಥೋರಿಯಂ-233 ಆಗಿ, ನಂತರ ಪ್ರೊಟಾಕ್ಟಿನಿಯಂ-233 ಆಗಿ, ಅಲ್ಲಿಂದ ಯುರೇನಿಯಂ-233 ಆದ ಮೇಲೆ ಆ ಯುರೇನಿಯಂ ಒಂದಷ್ಟು ನ್ಯೂಟ್ರಾನ್ ಕಣಗಳನ್ನು ಹೊರಚಿಮ್ಮಿಸುತ್ತದಲ್ಲ, ಆ ನ್ಯೂಟ್ರಾನ್ ಕಣಗಳೇ ಮತ್ತೆ ಥೋರಿಯಂನ್ನು ಬಡಿಯುವ ಹಾಗೆ ಮಾಡಿ ಇಡೀ ಚಕ್ರವು (Cycle. Not 'wheel'!) ತನ್ನಷ್ಟಕ್ಕೆ ತಾನೇ ಸುತ್ತತೊಡಗುವ ಹಾಗೆ ಮಾಡಬಹುದು! ಇಲ್ಲಿ, ಕೊನೆಯಲ್ಲಿರುವ ಯುರೇನಿಯಂ ಉರುವಲಿಂದ ಹೊರಹಾರುವ ನ್ಯೂಟ್ರಾನುಗಳ ಸಂಖ್ಯೆ ಅಗತ್ಯಕ್ಕಿಂತ ಹೆಚ್ಚಾದರೆ ಅದು ಅಪಾಯಕರ. ಅಗತ್ಯಕ್ಕಿಂತ ಕಡಿಮೆಯಾದರೆ ಮತ್ತೆ ಹೊಸ ನ್ಯೂಟ್ರಾನುಗಳನ್ನು ಹೊರಗಿನಿಂದ ಸಪ್ಲೈ ಮಾಡುತ್ತಲೇ ಇರಬೇಕು. ಆದರೆ ಇಡೀ ಚಕ್ರವು ತನ್ನಷ್ಟಕ್ಕೆ ತಾನೇ ಸುತ್ತುತ್ತಲೇ ಇರುವಂತೆ ಮಾಡಲು ಯುರೇನಿಯಂ-233ರಿಂದ ಒಂದು ನಿರ್ದಿಷ್ಟ ಸಂಖ್ಯೆಯ ನ್ಯೂಟ್ರಾನುಗಳಷ್ಟೇ ಹೊರಹಾರುವಂತೆ ವ್ಯವಸ್ಥೆ ಮಾಡಿಕೊಂಡರೆ ಕೆಲಸ ಸಲೀಸು. ಈ ಅತ್ಯಪರೂಪದ ಸಮತೋಲನಕ್ಕೆ ಹೆಸರು ಕ್ರಿಟಿಕಾಲಿಟಿ (Criticality). ಅರ್ಥ ಆಯ್ತಲ್ಲ?


ಇಷ್ಟು ದಿನ ನಮ್ಮ ದೇಶದ ಸಮುದ್ರ ಕಿನಾರೆಯಲ್ಲಿ ರಾಶಿರಾಶಿಯಾಗಿ ಥೋರಿಯಂ ನಿಕ್ಷೇಪ ಬಿದ್ದುಕೊಂಡು ನಿದ್ದೆಮಾಡುತ್ತಿತ್ತು. ಜಗತ್ತಿನ ಒಟ್ಟು ಥೋರಿಯಂ ನಿಕ್ಷೇಪದ 25% ನಮ್ಮ ದೇಶವೊಂದರಲ್ಲೇ ಇದೆ. ಈ ಥೋರಿಯಂನ್ನು ಯು233 ಆಗಿ ಮಾಡಿಕೊಳ್ಳುವ ಚಾಕಚಕ್ಯತೆ, ತಂತ್ರಜ್ಞಾನ ನಮಗೆ ಇರಲಿಲ್ಲ ಅಷ್ಟೆ. ಈಗ ಅಂಥ ತಂತ್ರಜ್ಞಾನ ನಮ್ಮ ಕೈವಶ ಆಗಿದೆ ಎಂಬುದೇ ಪ್ರಧಾನಿಯವರ ಟ್ವೀಟಿನ ಭಾವಾರ್ಥ. ಹೀಗೆ ಮಾಡಬಹುದು ಎಂದು ಭಾರತದ ಪರಮಾಣು ಚೈತನ್ಯದ ಜನಕ ಹೋಮಿ ಜಹಾಂಗೀರ್ ಭಾಭಾ ಐವತ್ತು ವರ್ಷಗಳ ಹಿಂದೆಯೇ ಹೇಳಿದ್ದರು. ಅವರು ಸ್ವಿತ್ಸರ್ಲೆಂಡ್ ಪಕ್ಕ ವಿಮಾನ ಅಪಘಾತದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಕೇರಳಕ್ಕೆ ಇಸ್ರೋ ಕೆಲಸಗಳಿಗೆಂದು ನಿರಂತರ ಓಡಾಡಿಕೊಂಡಿದ್ದ ಮತ್ತು ಭಾಭಾರ ಪರಮಾಪ್ತರಾಗಿದ್ದ ವಿಕ್ರಂ ಸಾರಾಭಾಯಿ ಒಂದು ಮುಂಜಾನೆ ಕೇರಳದಲ್ಲೇ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು. ಇಂಥ ಹಲವು ಸಂಶಯಾಸ್ಪದ ಸಾವುಗಳಿಂದಾಗಿ ದೇಶದ ಪರಮಾಣು ತಂತ್ರಜ್ಞಾನ ಕ್ಷೇತ್ರ ದಶಕಗಳಷ್ಟು ಹಿಂದಕ್ಕೆ ಹೋಗಿತ್ತು. ಪರಮಾಣು ಎಂದರೆ ಸಾಕು ಪ್ರತಿಭಟನೆಯ ಬಾವುಟ, ಘೋಷಣೆ, ಘೇರಾವ್, ಹರತಾಳಗಳನ್ನು ಹಿಡಿದುಕೊಂಡು ಬರುವ ಪ್ರಗತಿಪರ ಚಿಂತಕರ ದಂಡುದಂಡುಗಳನ್ನೇ ಈ ದೇಶದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಬೆಳೆಸಲಾಗಿತ್ತು. ಇಷ್ಟೆಲ್ಲಾ ಅಡೆತಡೆ-ತಡೆಅಡೆಗಳನ್ನು ಮೀರಿ ಇದೀಗ ಭಾರತ ಥೋರಿಯಂನ್ನು ಯುರೇನಿಯಂ ಆಗಿ ಪರಿವರ್ತಿಸಿಕೊಂಡು ವಿದ್ಯುತ್ ಉತ್ಪಾದಿಸಿಕೊಳ್ಳುವ ಹಂತಕ್ಕೆ ಪದಾರ್ಪಣೆ ಮಾಡಿದೆ. ಭಾರತದಲ್ಲಿ ಈಗ ಇರುವ ಥೋರಿಯಂ ದಾಸ್ತಾನನ್ನು ಬಳಸಿಕೊಂಡು ಈ ದೇಶವನ್ನು ಮುಂದಿನ 60,000 ವರ್ಷಗಳ ಕಾಲ ವಿದ್ಯುತ್ತಿನಿಂದ ಬೆಳಗುತ್ತಿರಬಹುದು.


ಮಿಕ್ಕಿದ್ದೆಲ್ಲ ನೀವೇ ಲೆಕ್ಕ ಹಾಕಿ!

Tuesday, December 6, 2016

ಸಮ್ಮೇಳನವಲ್ಲ, ಸರಕಾರಿ ಸಾಹಿತಿಗಳ ಒಡ್ಡೋಲಗ - ರೋಹಿತ್ ಚಕ್ರತೀರ್ಥ

ಎರಡು ವಾರದ ಹಿಂದೆ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಹಾಕಿದ್ದೆ. ಬರಗೂರು ರಾಮಚಂದ್ರಪ್ಪ ಬರೆದ ಒಂದು ಪುಸ್ತಕದ ಹೆಸರನ್ನು ಗೂಗಲ್ ನೋಡದೆ ಹೇಳಿ, ಎಂದು. ಸುಮಾರು 200ಕ್ಕೂ ಮಿಕ್ಕಿ ಕಾಮೆಂಟ್‌ಗಳು ಬಂದವು. ಆದರೆ ಒಬ್ಬನೇ ಒಬ್ಬ ವ್ಯಕ್ತಿ ಕೂಡ ಬರಗೂರರ ಒಂದೇ ಒಂದು ಪುಸ್ತಕದ ಹೆಸರನ್ನೂ ಸರಿಯಾಗಿ ಹೇಳಲಿಲ್ಲ (ಆ ಪೋಸ್ಟ್ ಮತ್ತು ಕಾಮೆಂಟ್‌ಗಳು ಹಾಗೇ ಇವೆ, ಅಳಿಸಿಲ್ಲ). ಇನ್ನೇನು ಹತ್ತು ದಿನಗಳಲ್ಲಿ ರಾಯಚೂರಿನಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಉತ್ಸವ ಮೂರ್ತಿಯ ಒಂದಾದರೂ ಕೃತಿಯನ್ನು ಕನ್ನಡಿಗರು ನೆನಪಿಸಿಕೊಂಡಿಲ್ಲ ಎಂದರೆ ಅದಕ್ಕಿಂತ ದುಃಖ, ಖೇದ, ವಿಷಾದ ಬೇರೆ ಇದೆಯೆ? ಈ ವೈಫಲ್ಯದ ಹೊಣೆಯನ್ನು ಯಾರು ಹೊರಬೇಕು?

ಕ್ವಾಲಿಟಿ! ಅದೊಂದು ಗುಣ ಸಾಹಿತ್ಯರಂಗದಲ್ಲಿ ನಾಸ್ತಿಯಾಗಿ ಬಹಳ ಕಾಲವೇ ಆಗಿಹೋಯಿತು. ಹಾಗಂತ ಒಳ್ಳೆಯ ಕೃತಿಗಳು ಬರುತ್ತಿಲ್ಲವೇ? ಖಂಡಿತಾ ಬರುತ್ತಿವೆ. ಆದರೆ ಹಾಗೆ ಒಳ್ಳೊಳ್ಳೆಯ ಕೃತಿಗಳನ್ನು ಬರೆಯುವವರನ್ನು ಪ್ರಕಾಶಕರು ಮಾತಾಡಿಸುವುದಿಲ್ಲ. ಸರಕಾರದ ಪ್ರಶಸ್ತಿ ಕಮಿಟಿಗಳು ಕಣ್ಣೆತ್ತಿಯೂ ನೋಡುವುದಿಲ್ಲ. ಓದುಗರ ಸಹೃದಯತೆಯಿಂದ, ಬಾಯಿಂದ ಬಾಯಿಗೆ ಹರಡುವ ಪ್ರಚಾರದಿಂದ, ಸಹೃದಯ ವಿಮರ್ಶಕರ ವಿಮರ್ಶೆಯ ಬಲದಿಂದ ಒಳ್ಳೆಯ ಲೇಖಕ ಹೆಚ್ಚು ಜನರನ್ನು ತಲುಪುವುದು ಸಾಧ್ಯವಾಗುತ್ತದೆ. ಆದರೆ ಸರಕಾರ ನಡೆಸುವ ಕಾರ್ಯಕ್ರಮಗಳಲ್ಲಿ ಈ ಲೇಖಕರು ವೇದಿಕೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ, ಯಾವ ಅಕಾಡೆಮಿಗಳಲ್ಲೂ ಅಧ್ಯಕ್ಷ-ಸದಸ್ಯ ಆಗುವುದಿಲ್ಲ.

ಸರಕಾರದ ಕಾರ್ಯಕ್ರಮಗಳನ್ನು ಸರಕಾರಿ ಸಾಹಿತಿಗಳಷ್ಟೇ ಆಳುತ್ತಾರೆ. ಪ್ರಶಸ್ತಿ-ಪುರಸ್ಕಾರಗಳನ್ನು ತಮ್ಮತಮ್ಮೊಳಗೇ ವಿಲೇವಾರಿ ಮಾಡಿಕೊಳ್ಳುವ ಗುಪ್ತ ಒಪ್ಪಂದವೊಂದು ಅವರ ನಡುವೆ ಜಾರಿಯಲ್ಲಿರುತ್ತದೆ. ಬರಗೂರು ರಾಮಚಂದ್ರಪ್ಪರಂಥ ಲೇಖಕರು ಸದಾ ಸರಕಾರಿ ಮೊಗಸಾಲೆಗಳಲ್ಲಿ ಕಾಣಿಸಿಕೊಂಡು, ಪತ್ರಿಕೆಗಳ ದಿನನಿತ್ಯದ ವರದಿಗಳಲ್ಲಿ ಸುದ್ದಿಯಾಗುತ್ತ, ಟೌನ್‌ಹಾಲ್ ಎದುರು ಆಗೀಗ ನಡೆಯುವ ಬುದ್ಧಿಜೀವಿಗಳ ಪ್ರತಿಭಟನಾ ಸಭೆಗಳಲ್ಲಿ ಘೋಷಣೆ ಕೂಗುತ್ತ ತಮ್ಮ ಹೆಸರನ್ನು ಚಾಲೂ ಇಟ್ಟಿರುತ್ತಾರೆ. ತಾವು ಬರೆದದ್ದು ಸುದ್ದಿಯಾಗದಾಗ ಹೀಗೆ ಬೇರೆ ವಿಧಾನಗಳ ಮೂಲಕ ಸುದ್ದಿಯಲ್ಲಿರುವುದು ಸರಕಾರಿ ಸಾಹಿತಿಗಳಿಗೆ ಅನಿವಾರ್ಯವಾಗುತ್ತದೆ. ಬರಗೂರು ರಾಮಚಂದ್ರಪ್ಪ ಏನು ಬರೆದಿದ್ದಾರೆಂಬ ಸಂಶೋಧನೆ ಮಾಡುವವರಿಗೆ ದಟ್ಟವಾದ ನಿರಾಸೆ ಕವಿಯುತ್ತದೆ.

ಯಾಕೆಂದರೆ, ಧರ್ಮ ಮತ್ತು ರಿಲಿಜನ್ ಒಂದೇ. ಪುರೋಹಿತಶಾಹಿಗಳು ಭಾರತದ ಮೂಲನಿವಾಸಿಗಳನ್ನು ಶತಮಾನಗಳಿಂದ ಶೋಷಣೆಗೊಳಪಡಿಸಿದ್ದಾರೆ. ಹಿಂದುಳಿದವರು ಮತ್ತು ಅಶಿಕ್ಷಿತರನ್ನು ತುಳಿಯುವುದೇ ಬ್ರಾಹ್ಮಣರ ಕೆಲಸ. ಮಹಾಭಾರತ, ರಾಮಾಯಣಗಳನ್ನು ಬರೆದ ವ್ಯಾಸ, ವಾಲ್ಮೀಕಿಗಳು ಅವೈದಿಕರಾದ್ದರಿಂದ ಅವರನ್ನು ದ್ವೇಷಿಸಬಾರದು, ಆದರೆ ಆ ಕಾವ್ಯಗಳನ್ನು ಬಳಸಿಕೊಳ್ಳುವ ವೈದಿಕ ಶಕ್ತಿಗಳನ್ನು ದ್ವೇಷಿಸಬೇಕು. ಹಿಂದೂ ಮೂಲಭೂತವಾದ ಬೃಹದಾಕಾರವಾಗಿ ಬೆಳೆದಿದೆ. ಭಯೋತ್ಪಾದನೆಗೆ ಧರ್ಮವೇ ಮೂಲ, ಆದರೆ ಇಸ್ಲಾಂ ಅನ್ನು ಹಾಗೆಂದು ಭಾವಿಸಬಾರದು…. ಹೀಗೆ ತಲೆಬುಡವಿಲ್ಲದ ಏಳೆಂಟು ಸಾಲುಗಳನ್ನು ಸಾಲುಸಾಲಾಗಿ ಜೋಡಿಸಿಟ್ಟರೆ ಬರಗೂರರ ಚಿಂತನೆಯ ಧಾಟಿ ಕಾಣಸಿಗುತ್ತದೆ. ಆಂತರ್ಯದಲ್ಲಿ ಮಹಾ ಕಮ್ಯುನಿಸ್ಟರಾದ ಬರಗೂರರು ಲೆನಿನ್ ಅನ್ನು ದೇವತೆಯ ಮಟ್ಟಕ್ಕೇ ಏರಿಸುತ್ತಾರೆ.

ವೇದಗಳನ್ನು ಅಧ್ಯಯನ ನಡೆಸಿ ಸಂಹಿತೆಗಳಾಗಿ ವಿಭಾಗಿಸಿದ ವ್ಯಾಸಮಹರ್ಷಿಗಳನ್ನೇ ಅವೈದಿಕರೆಂದು ಕರೆಯುತ್ತಾರೆ! ಭಾರತದಲ್ಲಿದ್ದ ಶಾಸ್ತ್ರ-ಪುರಾಣಗಳನ್ನು ಪಾಶ್ಚಾತ್ಯ ರಿಲಿಜನ್‌ಗಳ ಡಾಕ್ಟ್ರಿನ್‌ಗಳಿಗೆ ಸಮೀಕರಿಸುತ್ತಾರೆ. ಪಾಶ್ಚಾತ್ಯ ಜಗತ್ತಲ್ಲಿ ಹುಟ್ಟಿ ಹಬ್ಬಿದ ರಿಲಿಜನ್‌ಗಳಿಗೂ ಭಾರತೀಯ ಧಾರ್ಮಿಕ ಪರಂಪರೆಗೂ ಅಭೇದ ಕಲ್ಪಿಸುತ್ತಾರೆ. ರಾಮಚಂದ್ರಪ್ಪನವರು ಸಿದ್ದರಾಮಯ್ಯನವರ ಕಾರಿನ ಮೇಲೆ ಕಾಗೆ ಕೂತ ಸಂದರ್ಭದಲ್ಲಿ ಒಂದು ಲೇಖನ ಬರೆದರು. ಅದರಲ್ಲಿ, ‘ಕಾಗೆಯ ವಿಷಯದಲ್ಲಿ ಕಂಠವನ್ನು ಮೀರಿದ ಸಾಮಾಜಿಕ ಮೌಢ್ಯವೂ ಮುನ್ನೆಲೆಯಲ್ಲಿರುವುದು ಆಘಾತಕಾರಿ. ಕಾಗೆಯನ್ನು ಅಪಶಕುನದ ಮುಖ್ಯ ಸಂಕೇತವಾಗಿ ಪ್ರಚುರಪಡಿಸಿ ಕೀಳು ಎಂಬ ಪಟ್ಟಿಗೆ ಸೇರಿಸಲಾಗಿದೆ. ಆದರೆ ಕೋಗಿಲೆಯ ಮೊಟ್ಟೆಗಳ ಮೇಲೆ ಕಾವಿಗೆ ಕೂತು ಮರಿ ಮಾಡುವುದು ಕಾಗೆಯೇ ಹೊರತು ಕೋಗಿಲೆಯಲ್ಲ.

ಕೋಗಿಲೆ ಮತ್ತು ಕಾಗೆಯ ಈ ಮಧುರ ಸಂಬಂಧವು ಕೋಮುವಾದಿ ಗಳಿಗೊಂದು ಪಾಠವಾಗಬೇಕಿದೆ.. ಎಂಬ ಸಾಲುಗಳು ಬರುತ್ತವೆ. ಕೋಮುವಾದಿ, ಪುರೋಹಿತಶಾಹಿ, ಮನುಸ್ಮತಿ, ಶೋಷಕ-ಶೋಷಿತ ಮತ್ತು ಮುಖಾಮುಖಿ – ಇವಿಷ್ಟು ಶಬ್ದಗಳಿಲ್ಲದೆ ಲೇಖನ ಬರೆಯಿರಿ ಎಂದರೆ ಈ ವ್ಯಕ್ತಿ ಅಕ್ಷರಸನ್ಯಾಸ ಸ್ವೀಕರಿಸಿಬಿಡಬಹುದೇನೋ! ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಅಕ್ಷರಕಸ ಎಂಬುದೇನಾದರೂ ಇದ್ದರೆ ಅದಕ್ಕೆ ರಾಮಚಂದ್ರಪ್ಪನವರ ಬರಹಕ್ಕಿಂತ ಮಿಗಿಲಾದ ಉದಾಹರಣೆ ಸಿಗುವುದು ಕಷ್ಟ.

ಇದು ಅವರೊಬ್ಬರ ಸಮಸ್ಯೆ ಅಲ್ಲ. ಪಾಶ್ಚಾತ್ಯರು ಕಟ್ಟಿಬೆಳೆಸಿದ ಮಿಥ್ಯಾವಾದಗಳನ್ನು ಮೆದುಳಿಗಿಳಿಸಿಕೊಂಡು ಕಳೆದ ಮೂರ್ನಾಲ್ಕು ದಶಕಗಳಲ್ಲಿ ಕಾಲೇಜು-ಯೂನಿವರ್ಸಿಟಿಗಳಲ್ಲಿ ಕುರ್ಚಿ ಬಿಸಿ ಮಾಡುತ್ತ, ಅಲ್ಲಿನ ವಿದ್ಯಾರ್ಥಿಗಳನ್ನು ಸಾಧ್ಯವಾದಷ್ಟು ದಾರಿ ತಪ್ಪಿಸಿದ ಒಂದು ವರ್ಗದ ಸಾಹಿತಿಗಳೆಲ್ಲ ಬರೆಯುವುದು ಹೀಗೆಯೇ. ವೀರಪ್ಪ ಮೊಯಿಲಿಯವರ ಕಾವ್ಯವನ್ನಾದರೂ ಅರ್ಥ ಮಾಡಿಕೊಳ್ಳಬಹುದೇನೋ, ಆದರೆ ಬರಗೂರು ಮತ್ತು ಅವರಂಥ ಲೇಖಕರ ಗದ್ಯವನ್ನು ಜಪ್ಪಯ್ಯ ಎಂದರೂ ಅರಗಿಸಿಕೊಳ್ಳಲಾರೆವು. ಹೇಳಬೇಕಾದ ಸುಳ್ಳುಗಳ ಪ್ರಮಾಣ ಹೆಚ್ಚಿದಾಗ ಭಾಷೆ ಸಂಕೀರ್ಣವಾಗಬೇಕಾದ್ದು ಅನಿವಾರ್ಯ ತಾನೆ! ಹಿಂದೊಮ್ಮೆ ಬರಗೂರರು ವಿವೇಕಾನಂದರನ್ನು ಕೋಟ್ ಮಾಡುತ್ತ ಒಂದು ವಾಕ್ಯ ಬರೆದಿದ್ದರು.

ನಿಜವಾಗಿಯೂ ವಿವೇಕಾನಂದರು ಹಾಗೆ ಹೇಳಿದ್ದಾರೆಯೇ ಎಂದು ಅಚ್ಚರಿಪಡುತ್ತ ವಿವೇಕಾನಂದರ ಸಮಗ್ರ ಕೃತಿಶ್ರೇಣಿಯಲ್ಲಿ ಹುಡುಕಿದಾಗ, ಬರಗೂರರು ಪ್ರಸ್ತಾಪಿಸಿದ ಮಾತಿಗೆ ತದ್ವಿರುದ್ಧಾರ್ಥವಿರುವ ವಾಕ್ಯಗಳು ಅಲ್ಲಿದ್ದವು. ತನಗೆ ಬೇಕಾದ ಅರ್ಥ ತೆಗೆಯಲು ಬರಗೂರರು, ವಿವೇಕಾನಂದರ ಹೇಳಿಕೆಯ ಹಿಂದು-ಮುಂದಿನ ಪದಗಳನ್ನು ಹಕ್ಕಿಯ ಪುಕ್ಕ ಕತ್ತರಿಸಿದಂತೆ ಕತ್ತರಿಸಿ ಎಸೆದಿದ್ದರು! ಹಾಗಾದರೆ ಇವರು ಬರೆದಿರುವ ನಾಲ್ಕು ಮತ್ತೊಂದು ಪುಸ್ತಕದಲ್ಲಿ ಅದೆಷ್ಟು ತಿರುಚಿದ ಸತ್ಯಗಳು, ವಿಜೃಂಭಿಸಲ್ಪಟ್ಟ ಸುಳ್ಳುಗಳು ತುಂಬಿಕೊಂಡಿರಬಹುದು ಎಂಬ ಚಿಂತೆ ಹುಟ್ಟಿತು ನನಗೆ. ಬರಗೂರು ರಾಮಚಂದ್ರಪ್ಪ ಸಾಹಿತ್ಯಿಕವಾಗಿ ಏನನ್ನಾದರೂ ಬರೆದಿದ್ದಾರೆಯೇ? ಅವರ ಕತೆ-ಕಾದಂಬರಿ-ಕಾವ್ಯ ಎಲ್ಲಾದರೂ ಚರ್ಚೆಗೊಳಪಟ್ಟಿದ್ದಾವೆಯೇ? ಶ್ರಮಿಕ ಸಂಸ್ಕೃತಿ ಒಳ್ಳೆಯದು ಎಂಬ ಮೂರು ಪದಗಳ ಸಂದೇಶವನ್ನು ಹೇಳಲು ಹಲವು ಸಾವಿರ ಪುಟಗಳ ಸಾಹಿತ್ಯ ಬರೆದ ಕಂಬಾರರಂತೆ ಬರಗೂರರ ಸಾಹಿತ್ಯದಿಂದ ನಮಗೆ ಸಿಗುವ, ಅದೆಷ್ಟು ಪುಟ್ಟದೇ ಆಗಿರಲಿ, ಸಂದೇಶ ಯಾವುದು? ರಾಜ್‌ಕುಮಾರ್ ಕುಟುಂಬವನ್ನು ಹಾಡಿಹೊಗಳುವುದನ್ನು ಹೊರತುಪಡಿಸಿ ಬರಗೂರರು ಸಾಹಿತ್ಯವಲಯಕ್ಕೆ ಕೊಟ್ಟ ಕೊಡುಗೆ ಏನು?

ನನಗೆ ವೈಯಕ್ತಿಕವಾಗಿ ಬರಗೂರು ರಾಮಚಂದ್ರಪ್ಪನವರ ಮೇಲೆ ಯಾವ ದ್ವೇಷವೂ ಇಲ್ಲ. ಅವರ ಸಾಹಿತ್ಯವಿಮರ್ಶೆಯನ್ನು ಮಾಡುವ ಅಗತ್ಯವೂ ಇರಲಿಲ್ಲವೇನೋ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರದಿದ್ದರೆ. ಆದರೆ ಒಬ್ಬ ಸಾಹಿತಿ ಸರಕಾರಿ ಖರ್ಚಿನಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆಗೊಂಡಾಗ ಸಹಜವಾಗಿಯೇ ನಾಡಿನ ಜನರಿಗೆ ಆತನ ಬಗ್ಗೆ ಕುತೂಹಲಗಳಿರುತ್ತವೆ. ನಮ್ಮ ಪ್ರೀತಿಯ ಸಾಹಿತಿಗೆ ಈಗಲಾದರೂ ಈ ಗೌರವ ಸಿಕ್ಕಿತಲ್ಲ! ಎಂಬ ಸಂತೃಪ್ತಿಯೂ ಇರಬಹುದು. ಆದರೆ ಬರಗೂರರ ವಿಷಯದಲ್ಲಿ ಜನರಿಗಿರುವುದು ಸಂತೃಪ್ತಿಯಲ್ಲ, ಆಶ್ಚರ್ಯ. ಜನ ನೆನಪಿಸಿಕೊಳ್ಳಬಹುದಾದ ಒಂದಾದರೂ ಕೃತಿ ರಚಿಸದ ಬರಗೂರರು ಯಾವ ಆಧಾರದ ಮೇಲೆ ಸರಕಾರಿ ಕಾರ್ಯಕ್ರಮಗಳಿಗೆ ಆಯ್ಕೆಯಾಗುತ್ತಾರೆ? ಸರಿ, ಆಯ್ಕೆಯಾದರೆಂದೇ ಇಟ್ಟುಕೊಳ್ಳೋಣ, ಇವರಿಂದ ಭರವಸೆಯ ನಾಲ್ಕು ಹೊಸ ಮಾತು, ಹೊಸ ಚಿಂತನೆಯನ್ನು ನಾವು ನಿರೀಕ್ಷಿಸಬಹುದೆ? ಲಂಕೇಶರಿಂದಲೇ ಡಂಬಾಯ ಸಾಹಿತಿಯೆಂದು ಹೊಗಳಿಸಿಕೊಂಡಿದ್ದ ಬರಗೂರು ಈಗಲಾದರೂ ಡಂಬ್ ಅಲ್ಲದ ಮಾತುಗಳನ್ನು ಆಡುತ್ತಾರೆಂಬ ನಿರೀಕ್ಷೆ ಇಡಬಹುದೆ?

ಸಮ್ಮೇಳನದ ಗೋಷ್ಠಿಗಳ ವಿಷಯಪಟ್ಟಿಯನ್ನು ಕಂಡಾಗ ಅಂಥ ಆಸೆಯನ್ನೇನೂ ಇಟ್ಟುಕೊಳ್ಳುವಂತಿಲ್ಲ. ಮಹಿಳೆ-ಆಧುನಿಕತೆ ಮುಖಾಮುಖಿ, ಪುಸ್ತಕ ಮತ್ತು ಸಂಸ್ಕೃತಿ – ಸವಾಲುಗಳು, ಕನ್ನಡ ಸಾಹಿತ್ಯ – ಬಹುಮುಖಿ ನೆಲೆಗಳು, ಪ್ರಜಾಪ್ರಭುತ್ವದಲ್ಲಿನ ವಿಮರ್ಶೆಯ ಸಾಧ್ಯತೆಗಳು, ದಲಿತ ಬಂಡಾಯ ಸಾಹಿತ್ಯ ಮತ್ತು ಚಳವಳಿ, ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಾದೇಶಿಕ ಅಸಮಾನತೆ – ಅಭಿವೃದ್ಧಿಯ ಸವಾಲುಗಳು… ಹೀಗೆ ನಡೆಯಲಿರುವ ಸಾಲುಸಾಲು ಗೋಷ್ಠಿಗಳಲ್ಲಿ ಹೊಸತೆಲ್ಲಿದೆ! ಇವೇ ಇವೇ ವಿಷಯಗಳನ್ನು ಕಳೆದ ಅರ್ಧ ಶತಮಾನದಿಂದ ಸಾಹಿತ್ಯ ಸಮ್ಮೇಳನಗಳಲ್ಲಿ ನೋಡುತ್ತಿದ್ದೇವೆ, ಕೇಳುತ್ತಿದ್ದೇವೆ. ಗಾಂಧಿ ಜಯಂತಿಯ ಪುಷ್ಪಾರ್ಪಣೆಯ ಹಾಗೆ ಈ ಗೋಷ್ಠಿಗಳು ಕೂಡ ಪ್ರತಿವರ್ಷ ಕಾಟಾಚಾರಕ್ಕೆಂಬಂತೆ ನಡೆದುಹೋಗುತ್ತವೆ.

ಏನು ಉದ್ಧಾರವಾಗಿದೆ ಇವುಗಳಿಂದ? ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ವಿಷಯವನ್ನು ನಾವು ಸಾಹಿತ್ಯ ಸಮ್ಮೇಳನದಿಂದ ಕೈ ಬಿಡುವುದು ಇನ್ನು ಯಾವ ಶತಮಾನದಲ್ಲಿ? ಮಹಿಳೆ ಮತ್ತು ಆಧುನಿಕತೆಯ ಚರ್ಚೆಗೆ ಮುಕ್ತಿ ಯಾವಾಗ? ಸಂಸ್ಕೃತಿ ಮತ್ತು ರಾಜಕಾರಣವನ್ನು ಬಿಟ್ಟರೆ ಬೇರಾವ ವಿಷಯವೂ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚಿಸಲು ನಮಗೆ ಸಿಗುವುದಿಲ್ಲವೆ? ಇನ್ನು, ಈ ಗೋಷ್ಠಿಗಳಲ್ಲಿ ಭಾಗವಹಿಸಿ ವಿಚಾರ ಮಂಡಿಸುವವರಾದರೂ ಯಾರು? ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಸಮ್ಮೇಳನದಿಂದ ಸಮ್ಮೇಳನಕ್ಕೆ ಹಾರುತ್ತ, ಅಂದಕಾಲತ್ತಿಲೆ ಹೇಳಲು ಶುರುಮಾಡಿದ ವಿಚಾರಗಳನ್ನೇ ಟೇಪ್ ರೆಕಾರ್ಡರಿನಂತೆ ಉರುಹೊಡೆಯುತ್ತಾ ಬಂದಿರುವ ಸರಕಾರಿ ಸಾಹಿತಿಗಳು. ಬಹುಶಃ ಅದಕ್ಕೇ ಏನೋ, ಸಾಹಿತ್ಯ ಸಮ್ಮೇಳನದ ವರದಿಗೆ ಮೀಸಲಿಡುವ ದಿನಪತ್ರಿಕೆಯ ಒಂದಿಡೀ ಪುಟದಲ್ಲಿ ಊಟದ ವಿವರಗಳೇ ತುಂಬಿಕೊಂಡಿರುತ್ತವೆ. ಹೆಚ್ಚಿನ ಗೋಷ್ಠಿಗಳಲ್ಲಿ ಜನ ಊಟತಿಂಡಿಗಳಾದ ಮೇಲೆ ಕುರ್ಚಿ ಸಿಕ್ಕಿತೆಂದು ಕೂತು ಸುಧಾರಿಸಿಕೊಂಡು ಹೋಗುತ್ತಾರೆಯೇ ವಿನಾ ವೇದಿಕೆಯ ಮೇಲಿಂದ ಏನೇನು ಮಾತುಗಳು ತೇಲಿ ಬರುತ್ತಿವೆಯೆಂದು ತಲೆ ಕೆಡಿಸಿಕೊಳ್ಳುವುದಿಲ್ಲ.

ಸಾಹಿತ್ಯ ಸಮ್ಮೇಳನಗಳು ಬದಲಾಗಬೇಕು. ಮುಖ್ಯವಾಗಿ ಇವು ಬೇಕೇ ಬೇಡವೇ ಎಂಬುದನ್ನಾದರೂ ಸರಕಾರ ಗಂಭೀರವಾಗಿ ಯೋಚಿಸಬೇಕು. ವರ್ಷಕ್ಕೊಂದಾವರ್ತಿ ರಾಜ್ಯದ ಒಂದೊಂದು ಜಾಗದಲ್ಲಿ ಗುಂಡಿ ತೋಡಿ ದುಡ್ಡು ಸುರಿಯುವುದಕ್ಕಿಂತ ಪ್ರತಿವರ್ಷ ಒಂದು ತಾಲೂಕು ಗುರುತಿಸಿ ಶಾಶ್ವತವಾದ ಪುಸ್ತಕದಂಗಡಿಗಳನ್ನೋ, ಲೈಬ್ರರಿಗಳನ್ನೋ ಯಾಕೆ ತೆರೆಯಬಾರದು? ಅಥವಾ ಸಮ್ಮೇಳನ ನಡೆಸಿದ ಜಿಲ್ಲೆಯಲ್ಲಿ ಯಾಕೆ ಯಾವುದಾದರೂ ಸಾಹಿತಿಯ ಮನೆಯನ್ನು ಸ್ಮತಿಭವನವನ್ನಾಗಿ ಪರಿವರ್ತಿಸುವ ಕೆಲಸ ಮಾಡಬಾರದು? ಸಮ್ಮೇಳನ ನಡೆಸುವುದೇ ಆದರೆ ಯಾಕೆ ಜೀವಂತಿಕೆಯಿರುವ ಗೋಷ್ಠಿಗಳನ್ನು ಆಯೋಜಿಸಬಾರದು? ಸಾಹಿತ್ಯ ಸಮ್ಮೇಳನಗಳಿಗೆ ಕತೆ-ಕಾದಂಬರಿ ಬರೆದವರನ್ನು ಹೊರತುಪಡಿಸಿ ಬೇರೆ ಯಾವ ಸಾಹಿತಿಗಳನ್ನೂ ಅಧ್ಯಕ್ಷರಾಗಿ ಆರಿಸಬಾರದೆಂಬ ನಿಯಮವೇನಾದರೂ ಇದೆಯೇ? ವಿಜ್ಞಾನ ಸಾಹಿತಿಗಳು, ಮಾಹಿತಿ ಸಾಹಿತ್ಯ ಕೊಟ್ಟವರು, ವಿಮರ್ಶಕರು, ಬೀದಿ ನಾಟಕಗಳನ್ನು ಬರೆದು ಆಡಿಸಿದವರು, ಮಕ್ಕಳ ಕತೆಗಳನ್ನು ವ್ರತದಂತೆ ವರ್ಷಾನುಗಟ್ಟಲೆ ಬರೆದುಕೊಂಡು ಬಂದವರು, ಕೃಷಿ ಸಂಬಂಧಿತ ಲೇಖನಗಳನ್ನೂ ಪುಸ್ತಕಗಳನ್ನೂ ಬರೆದವರು, ವಿತ್ತಸಾಹಿತ್ಯ ರಚಿಸಿದವರು, ನಗೆಸಾಹಿತಿಗಳು, ಚುಟುಕ ಬರೆದವರು ಇವರ್ಯಾಾರೂ ಸಾಹಿತಿಗಳಲ್ಲವೇ? ಯಾರೂ ಓದದ ಸಾಹಿತಿಗಳನ್ನು ಮುಖ್ಯವೇದಿಕೆಯಲ್ಲಿ ಉತ್ಸವಮೂರ್ತಿಗಳನ್ನಾಾಗಿ ಮಾಡಿ, ಯಾರೂ ಕೇಳದ ಗೋಷ್ಠಿಗಳನ್ನು ಆಯೋಜಿಸಿ, ಕನ್ನಡ ಬೆಳೆಯಬೇಕೆಂದು ಬಯಸುವುದು ಹಾಸ್ಯಾಸ್ಪದವಾಗುವುದಿಲ್ಲವೆ?

ಕಳೆದ ಸಲ ಶ್ರವಣಬೆಳಗೊಳದಲ್ಲಿ ನಡೆದ ಸಮ್ಮೇಳನದ ಮೊದಲ ದಿನದ ಸಂಜೆ ಒಂದಷ್ಟು ಸಾಹಿತಿಗಳು ಕಲೆತು ಈ ಸಲ ಭೈರಪ್ಪನವರನ್ನು ಬಯ್ಯುವ ಕಾರ್ಯಕ್ರಮ ಇಟ್ಟುಕೊಳ್ಳೋಣ ಎಂದು ಯೋಜಿಸಿದರಂತೆ. ಅದರಂತೆ ಮರುದಿನದ ಕಾರ್ಯಕ್ರಮಗಳ ರೂಪುರೇಷೆಗಳು ತಟ್ಟನೆ ಬದಲಾಗಿಬಿಟ್ಟವು. ಗೋಷ್ಠಿಯ ವಿಷಯ ಯಾವುದೇ ಇರಲಿ, ಅದೆಲ್ಲವನ್ನೂ ಪಕ್ಕಕ್ಕಿಟ್ಟು ಭೈರಪ್ಪರನ್ನು ಬಯ್ಯುವ ಒಂದಂಶದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಮ್ಮೇಳನಕ್ಕೆ ಮತ್ತು ಸ್ವಂತಕ್ಕೆ ಅತಿಮುಖ್ಯವಾಗಿ ಬೇಕಿದ್ದ ಟಿಆರ್‌ಪಿಯನ್ನು ಅಂತೂ ಆ ಮೂಲಕ ಹೊಂದಿಸಿದ್ದಾಯಿತು! ಈ ಬಾರಿಯ ಸಮ್ಮೇಳನ ಅದಕ್ಕಿಂತ ಭಿನ್ನವಾಗಿರುತ್ತದೆ ಎಂದೇನೂ ಭಾವಿಸುವಂತಿಲ್ಲ.

ಸಮ್ಮೇಳನ ಎಂದರೆ ರಾಜಕಾರಣಿಗಳ ಒಡ್ಡೋಲಗ, ಒಂದಷ್ಟು ಬಲಪಂಥೀಯ ಸಾಹಿತಿಗಳ ಹೀಯಾಳಿಕೆ ಮತ್ತು ಪ್ರಸ್ತುತ ಕಾಲಘಟ್ಟಕ್ಕೆ ಸಂಬಂಧವೇ ಇಲ್ಲದ ಯಾವ್ಯಾವುದೋ ಸಮಸ್ಯೆಗಳ ಅಡಗೂಲಜ್ಜಿ ಕತೆಗಳ ವಿಸ್ತಾರವಾದ ರೋದನೆ – ಇದಿಷ್ಟೇ ಎಂಬಂತಾಗಿದೆ. ಸಮ್ಮೇಳನದ ಮುಕ್ತಾಯದ ಹೊತ್ತಿಗೆ, ಇದುವರೆಗೆ ಒಮ್ಮೆಯೂ ಈಡೇರದ ನಿರ್ಣಯಗಳನ್ನು ಮತ್ತೊಮ್ಮೆ ಬರೆದು ಓದಿ, ಈ ವರ್ಷದ ಸಮ್ಮೇಳನ ಮುಗಿಯಿತು ಎಂದು ಪಿಂಡಪ್ರದಾನ ಮಾಡುತ್ತಾರೆ. ಸಾಹಿತ್ಯ ಸಮ್ಮೇಳನಗಳಿಂದ ಕ್ಯಾಟರಿಂಗ್ ಮತ್ತು ಚಪ್ಪರ ಹಾಕುವ ಮಂದಿಗಲ್ಲದೆ ಬೇರೆ ಯಾರಿಗೆ ಯಾವ ಬಗೆಯ ಅನುಕೂಲವಾಗುತ್ತಿದೆ, ಕನ್ನಡವೆಷ್ಟು ಉದ್ಧಾರವಾಗುತ್ತಿದೆ ಎಂಬುದೆಲ್ಲ ಬರಗೂರರ ಸಾಹಿತ್ಯದಂತೆ – ಯಾರಿಗೂ ಅರ್ಥವಾಗದ ವಿಚಾರ!

ರೋಹಿತ್ ಚಕ್ರತೀರ್ಥ

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...