Showing posts with label ಭಾವಗೀತೆಗಳು. Show all posts
Showing posts with label ಭಾವಗೀತೆಗಳು. Show all posts

Thursday, December 22, 2016

ನೂರು ದೇವರನೆಲ್ಲ ನೂಕಾಚೆ ದೂರ - ಕುವೆಂಪು

ನೂರು ದೇವರನೆಲ್ಲ ನೂಕಾಚೆ ದೂರ ।। ೩।।
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೨।।
ಶತಮಾನಗಳು ಬರಿಯ ಜಡಶಿಲೆಯ ಪೂಜಿಸಿ ಆಯ್ತು
ಹಾವ್ಗಳಿಗೆ ಹಾಲೆರದು ಪೋಷಿಸಾಯ್ತು
ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿ ಆಯ್ತು
ದಾಸರನು ಪೂಜಿಸಿಯೇ ದಾಸ್ಯವಾಯ್ತು
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೨।।

ಗುಡಿಯೊಳಗೆ ಕಣ್ಮುಚ್ಚಿ ಬೆಚ್ಚಗಿರುವರನೆಲ್ಲ
ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ
ಗಂಟೆ ಜಾಗಟೆಗಳಿಂಬಡಿದು ಕುತ್ತಿಗೆ ಹಿಡಿದು ಕಡಲಡಿಗೆ ತಳ್ಳಿರೈ ಶಂಖದಿಂ ನುಡಿದು
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೨।।

ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು
ಜೀವದಾತೆಯಾನಿಂದು ಕೂಗಬೇಕು
ಶಿಲೆಯ ಮೂರ್ತಿಗೆ ನೇಯ್ದ ಕಲೆಯ ಹೊದಿಕೆಯನು ಓಯ್ದು
ಚಳಿಯು ಮಳೆಯಲಿ ನಮೆವ ತಾಯ್ಗೆ ಹಾಕು
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೩।।
ನೂಕಾಚೆ ದೂರ

Saturday, April 13, 2013

ಆನಂದಮಯ ಈ ಜಗಹೃದಯ ಏತಕೆ ಭಯ ಮಾಣೋ- ಕುವೆಂಪು


ಆನಂದಮಯ ಈ ಜಗಹೃದಯ ಏತಕೆ ಭಯ ಮಾಣೋ
ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣೋ
ಆನಂದಮಯ ಈ ಜಗಹೃದಯ

ಬಿಸಿಲಿದು ಬರಿ ಬಿಸಿಲಲ್ಲವೋ ಸೂರ್ಯನ ಕೃಪೆ ಕಾಣೋ
ಸೂರ್ಯನು ಬರಿ ರವಿಯಲ್ಲವೋ ಆ ಭ್ರಾಂತಿಯ ಮಾಣೋ
ಆನಂದಮಯ ಈ ಜಗಹೃದಯ.

ರವಿವದನವೇ ಶಿವಸದನವೊ ಬರಿ ಕಣ್ಣದು ಮಣ್ಣೋ
ಶಿವನಿಲ್ಲದೆ ಸೌಂದರ್ಯವೇ ಶವ ಮುಖದ ಕಣ್ಣೋ
ಆನಂದಮಯ ಈ ಜಗಹೃದಯ.

ಉದಯದೊಳೇನ್ ಹೃದಯವ ಕಾಣ್, ಅದೇ ಅಮೃತದ ಹಣ್ಣೋ
ಶಿವಕಾಣದೆ ಕವಿ ಕುರುಡನೋ ಶಿವ ಕಾವ್ಯದ ಕಣ್ಣೋ
ಆನಂದಮಯ ಈ ಜಗಹೃದಯ.

Wednesday, March 20, 2013

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ - ಕುವೆಂಪು


ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರಾ..

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರಾ..

ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗೀ..
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವ ಭವದಿ ಭವಿಸಿಹೇ ಭವ ವಿದೂರಾ

ನಿತ್ಯವೂ ಅವತರಿಪ ಸತ್ಯಾವತಾರಾ
ನಿತ್ಯವೂ ಅವತರಿಪ ಸತ್ಯಾವತಾರಾ

|| ಬಾ ಇಲ್ಲಿ ||

ಮಣ್ ತನಕೆ ಮರತನಕೆ ಮಿಗತನಕೆ ಖಗತನಕೆ
ಮಣ್ತನಕೆ ಮರತನಕೆ ಮಿಗತನಕೆ ಖಗತನಕೆ
ಮುನ್ನಡೆಗೆ ಕಣ್ಣಾದ ಗುರುವೆ ಬಾರಾ
ಮೂಡಿ ಬಂದೆನ್ನಾ ನರ ರೂಪ ಚೇತನದೀ…
ಮೂಡಿ ಬಂದೆನ್ನಾ ನರ ರೂಪ ಚೇತನದಿ
ನಾರಾಯಣತ್ವಕ್ಕೆ ದಾರಿ ತೋರ
ನಿತ್ಯವೂ ಅವತರಿಪ ಸತ್ಯಾವತಾರ

|| ಬಾ ಇಲ್ಲಿ ||

ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಲಲಿ,

ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಲಲಿ,

ದೇಶದೇಶದಿ ವೇಷವೇಷಾಂತರವನಾಂತು
ವಿಶ್ವಸಾರಥಿಯಾಗಿ ಲೀಲಾರಥವನೆಂತು
ಚೋದಿಸಿರುವೆಯೊ ಅಂತೆ, ಸೃಷ್ಟಿಲೋಲ ,
ಚೋದಿಸಿರುವೆಯೊ ಅಂತೆ, ಸೃಷ್ಟಿಲೋಲಾ,

ಅವತರಿಸು ಬಾ…
ಅವತರಿಸು ಬಾ…

ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ಯದಲಿ
ಹೇ ದಿವ್ಯ ಸಚ್ಚಿದಾನಂದ ಶೀಲ
ಹೇ ದಿವ್ಯ ಸಚ್ಚಿದಾನಂದ ಶೀಲ
ಹೇ ದಿವ್ಯ ಸಚ್ಚಿದಾನಂದ ಶೀಲ

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರ
|| ಬಾ ಇಲ್ಲಿ ||

|| ಬಾ ಇಲ್ಲಿ ||

ಮುಚ್ಚು ಮರೆ ಇಲ್ಲದೆಯೇ - ಕುವೆಂಪು


ಮುಚ್ಚು ಮರೆ ಇಲ್ಲದೆಯೇ ನಿನ್ನಮುಂದೆಲ್ಲವನು ಬಿಚ್ಚಿಡುವೇ ಓ ಗುರುವೇ ಅಂತರಾತ್ಮ
ಪಾಪವಿದೆ ಪುಣ್ಯವಿದೆ , ನರಕವಿದೆ ನಾಕವಿದೆ, ಸ್ವೀಕರಿಸು ಓ ಗುರುವೇ ಅಂತರಾತ್ಮ
|| ಮುಚ್ಚು ಮರೆ ಇಲ್ಲದೆಯೇ ||

ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು, ಪಾಪ ತಾನುಳಿಯುವುದೇ ಪಾಪವಾಗಿ
ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಂಗೇ, ನರಕ ತಾನುಳಿಯುವುದೇ ನರಕವಾಗಿ
|| ಮುಚ್ಚು ಮರೆ ಇಲ್ಲದೆಯೇ ||

ಸಾಂತ ರೀತಿಯನೆಮ್ಮೀ ಕದಡಿರುವುದೆನ್ನಾತ್ಮ, ನಾಂತರೀತಿಯು ಅದೆಂತೋ ಓ ಅನಂತ
ನನ್ನ ನೀತಿಯ ಕುರುಡಿನಿಂದೆನ್ನ ರಕ್ಶಿಸಯ್, ನಿನ್ನ ಪ್ರೀತಿಯ ಬೆಳಕಿನ ಆನಂದಕೆ
|| ಮುಚ್ಚು ಮರೆ ಇಲ್ಲದೆಯೇ ||

ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ - ಕುವೆಂಪು


ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ
ಜೊನ್ನ ಜೇನಿಗೆ ಬಾಯಾರಿದೆ ಚಕೋರ ಚುಂಬನ

ಚಂದ್ರಿಕಾಮಧುಪಾನಮತ್ತ
ಪೀನಕುಂಭಪಯೋಧವಿತ್ತ
ವಕ್ಷಪರಿಲಂಭನ ನಿಮಿತ್ತ ನಿರಾವಲಂಬನ
ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ

ಚರಣನೂಪುರಕಿಂಕಿಣಿಕೊಳ
ಮದನಸಿಂಜಿನಿ ಜನಿತ ನಿಹ್ವಳ
ಚಿತ್ತ ರಂಜನಿ ತಳುವದೀಕ್ಷಣ
ಚಂದ್ರ ಮಂಚಕೆ ಬಾ ಚಕೋರಿ
ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ

ತೆರೆಯ ಚಿಮ್ಮಿಸಿ ನೊರೆಯ ಹೊಮ್ಮಿಸಿ
ಕ್ಷೀರಸಾಗರದಲ್ಲಿ ತೇಲುವ
ಬಾಗುಚಂದ್ರನ ತೂಗುಮಂಚಕೆ
ಬಾ ಚಕೋರಿ ಬಾ ಚಕೋರಿ ಎದೆ ಹಾರಿದೆ
ಬಾಯಾರಿದೆ ಚಕೋರ ಚುಂಬನ
ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ

ನಿಕುಂಜ ರತಿವನ ಮದನ ಯಾಗಕೆ
ಅನಂಗರಕ್ತಿಯ ಬಿಂಬ ಭೋಗಕೆ
ಕಾಂಕ್ಷಿಯಾಗಿದೆ ನಗ್ನ ಯೋಗಕೆ
ಇಕ್ಷು ಮಂಚದ ಸಾಗ್ನಿ ಪಕ್ಷಿಯ ಅಚಂಚು ಚುಂಬನ
ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ

ಇಳಿದು ಬಾ ತಾಯೆ ಇಳಿದು ಬಾ - ಕುವೆಂಪು


ಓಂ ಸಚ್ಚಿದಾನಂದ ತ್ರಿತ್ವ ಮುಖವಾದ ಪರಬ್ರಹ್ಮದಲ್ಲಿ
ಅಭವದೊತ್ತಾದೆ ಭವದ ಬಿತ್ತಾದೆ ಋತದ ಚಿತ್ತಾದೆ ನೀ
ಇಳಿದು ಬಾ ಇಳೆಗೆ ತುಂಬಿ ತಾ ಬೆಳೆಗೆ ಜೀವ ಕೇಂದ್ರದಲ್ಲಿ
ಮತ್ತೆ ಮೂಡಿ ಬಾ ಒತ್ತಿ ನೀನೆನ್ನ ಚಿತ್ತ ಪೃಥ್ವಿಯಲ್ಲಿ ||

ಋತದ ಚಿತ್ತಾಗಿ ವಿಶ್ವಗಳ ಸೃಜಿಸಿ ನಡೆಸುತಿಹ ಶಕ್ತಿಯೆ
ಅನ್ನ ಪ್ರಾಣಗಳ ಮನೋಲೋಕಗಳ ಸೂತ್ರಧರ ಯುಕ್ತಿಯೆ
ಅಖಿಲ ಬಂಧನದ ಹೃದಯದಲ್ಲಿ ಅವಿನಾಶಿ ಆಸಕ್ತಿಯೆ
ನಿನ್ನ ಅವತಾರವೆನ್ನ ಉದ್ಧಾರ ಬಾ ದಿವ್ಯ ಮುಕ್ತಿಯೆ
ಎಲ್ಲವನು ಮಾಡಿ ಎಲ್ಲರೊಳಗೂಡಿ ನೀನೆ ಎಲ್ಲವಾದೆ
ಜ್ಯೋತಿಯಾದರೂ ತಮೋಲೀಲೆಯಲಿ ಜಡದ ಮುದ್ರೆಯಾದೆ
ಎನಿತು ಕರೆದರೂ ಓಕೊಳ್ಳದಿರುವಚಿನ್ನಿದ್ರೆಯಾದೆ
ಬೆಳಗಿ ನನ್ನಾತ್ಮಕಿಳಿದು ಬಾ ತಾಯೆ ನೀನೆ ಬ್ರಹ್ಮ ಬೋಧೆ
ಇಳಿದು ಬಾ ತಾಯೆ ಇಳಿದು ಬಾ ||

ಗಾಳಿಗುಸಿರು ನೀ ಬೆಂಕಿಗುರಿಯು ನೀನುದಕಕದರ ಜೀವ
ಅಗ್ನಿ ಇಂದ್ರ ವರುಣಾರ್ಕ ದೇವರನು ಮಾಡಿ ನೋಡಿ ಕಾವ
ಶಿವನ ಶಕ್ತಿ ನೀ, ವಿಷ್ಣು ಲಕ್ಷ್ಮೀ ನೀ, ಚತುರ್ಮುಖನ ರಾಣಿ
ದಿವ್ಯ ವಿಜ್ಞಾನ ನನ್ನೊಳುದ್ಭವಿಸೆ ಮತಿಗಾಗಮಿಸು, ವಾಣಿ
ಹೃದಯ ಪದ್ಮ ತಾನರಳೆ ಕರೆವೆ ಬಾರಮ್ಮ ಬಾ, ಇಳಿದು ಬಾ
ಮನೋದ್ವಾರ ತಾ ಬಿರಿಯೆ ಕರೆವೆ ಜಗದಂಬೆ ಬಾ, ಇಳಿದು ಬಾ
ಅಗ್ನಿ ಹಂಸ ಗರಿಗೆದರೆ ಕರೆವೆ ಬಾ ತಾಯೆ ಬಾ, ಇಳಿದು ಬಾ
ಚೈತ್ಯ ಪುರುಷ ಯಜ್ಞಕ್ಕೆ ನೀನೆ ಅಧ್ವರ್ಯು, ಬಾ, ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ ||'


ನೀನಿಲ್ಲದೇ ನನಗೇನಿದೇ - ಎಂ ಎನ್ ವ್ಯಾಸರಾವ್


ನೀನಿಲ್ಲದೇ ನನಗೇನಿದೇ
ಮನಸ್ಸೆಲ್ಲಾ ನಿನ್ನಲ್ಲಿ ನೆಲೆಯಾಗಿದೆ
ಕನಸ್ಸೆಲ್ಲಾ ಕಣ್ಣಲ್ಲೇ ಸೆರೆಯಾಗಿದೇ

ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೇ ನಾನು
ಕಹಿಯಾದ ವಿರಹದ ನೋವೂ ಹಗಲಿರುಳು ತಂದೇ ನೀನು
ಎದೆಯಾಸೆ ಏನೋ ಎಂದೂ ನೀ ಕಾಣದಾದೇ
ನಿಶೆಯೊಂದೆ ನನ್ನಲ್ಲೀ ನೀ ತುಂಬಿದೇ
ಬೆಳಕೊಂದೆ ನಿನ್ನಿಂದಾ ನಾ ಬಯಸಿದೇ

ನೀನಿಲ್ಲದೇ ನನಗೇನಿದೇ…

ಒಲವೆಂಬ ಕಿರಣಾ ಬೀರೀ ಒಳಗಿರುವ ಕಣ್ಣಾ ತೆರೆಸೀ
ಒಣಗಿರುವ ಎದೆನೆಲದಲ್ಲಿ ಭರವಸೆಯ ಜೀವ ಹರಿಸಿ
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು
ಹೊಸ ಜೀವ ನಿನ್ನಿಂದಾ ನಾ ತಾಳುವೇ
ಹೊಸ ಲೋಕ ನಿನ್ನಿಂದಾ ನಾ ಕಾಣುವೇ

ನೀನಿಲ್ಲದೇ ನನಗೇನಿದೇ …

ಹಾವು ಅಂದ್ರೆ ಮರಿ ಗುಬ್ಬಿಗೆ ಭಾರಿ ದಿಗಿಲೇನೆ - ಡಾ.ಹೆಚ್. ಎಸ್. ವೆಂಕಟೇಶಮೂರ್ತಿ,


ಹಾವು ಅಂದ್ರೆ ಮರಿ ಗುಬ್ಬಿಗೆ ಭಾರಿ ದಿಗಿಲೇನೆ
ನೆನಿಸಿಕೊಂದ್ರೆ ಮೈ ನಡುಗುತ್ತೆ ಹಾಡೇ ಹಗಲೇನೆ
ಒಂದು ಸಾರಿ ಪುಟಾಣಿ ಗುಬ್ಬಿ ಅಮ್ಮನ ಕೇಳುತ್ತೆ
ಅಮ್ಮ ಅಮ್ಮ ಬುಸ್ಸ್ ಬುಸ್ಸ್ ಹಾವು ಹ್ಯಾಗಿರತ್ತೆ ||

ಒಕ್ಕಲಿ ಬೆನ್ನು ತಿಕ್ಕಿ ಕೊಳ್ತಾ ಅಮ್ಮ ಅನ್ನುತ್ತೆ
ಒಳ್ಳೆ ಪ್ರಶ್ನೆ ಹಾವು-ಹ್ಯಾಗಿರತ್ತೆ ಹಾವು ಹ್ಯಾಗಿರತ್ತೆ
ಹಾವಿರತ್ತೆ ಹಾವಿನ ಹಾಗೆ ಕಾಗೆ ಕಪ್ಪಗೆ
ಸಪೂರ ಥಳ ಥಳ ಕೆಂಡದ ಕಣ್ಣು ಕಡ್ಡಿ ದಪ್ಪಗೆ ||

ಸೂರಿಗೆ ಸುತ್ತಿ ಜೋತಾಡತ್ತೆ ಗೋಧಿ ಬೆನ್ನು
ದೀಪದ ಹಾಗೆ ಉರಿತಿರತ್ತೆ ಹಾವಿನ ಕಣ್ಣು
ಬುಸ್ಸ್ ಎನ್ನುತ್ತೆ ದರಿದ್ರ ಹಾವಿಗೆ ತುಂಬದ ಹೊಟ್ಟೆ
ಇಡಿ ಇಡಿಯಾಗಿ ನುಂಗ್ ಬಿಡುತ್ತೆ ಹಕ್ಕಿ ಮೊಟ್ಟೆ

ಹಕ್ಕಿಯ ಮೊಟ್ಟೆ ನುಂಗಿದ್ ಮೇಲೆ ಇಡಿ ಇಡೀಲಿ
ಹಕ್ಕಿ ಮರಿ ಬೆಳ್ಕೊಳುತ್ತೆ ಹಾವಿನ ಹೊಟ್ಟೆಲಿ
ಹಕ್ಕಿ ಮರಿ ಹುಟ್ಕೋಳ್ಳತ್ತೆ ಹಾವಿನ ಹೊಟ್ಟೆಲಿ
ಅಂತ ಪುಟಾಣಿ ಕುಣಿದಾಡ್ತಿತ್ತು ಅಮ್ಮನ ತೋಳಲ್ಲಿ

ನಿಟ್ಟುಸಿರಿತ್ತು ಅಮ್ಮ ಗುಬ್ಬಿ ಇಲ್ಲ ಬಂಗಾರ
ಇನ್ನೂ ನಿನಗೆ ತಿಳೀದಮ್ಮ ಹಾವಿನ ಹುನ್ನಾರ
ಹಾವಿನ ಹೊಟ್ಟೆ ಸೇರಿದ್ ಮೇಲೆ ಹೇಳೋದ್ ಇನ್ನೇನು
ಹಾವಿನ ಮೊಟ್ಟೆ ಆಗ್ಬಿಡತ್ತೆ ಹಕ್ಕಿ ಮೊಟ್ಟೇನು

Sunday, March 17, 2013

ಎಂಥಾ ದಿನಗಳವು ಮರೆಯಾಗಿ ಹೋದವು - ಸುಬ್ರಾಯ ಚೊಕ್ಕಾಡಿ


ಎಂಥಾ ದಿನಗಳವು ಮರೆಯಾಗಿ ಹೋದವು
ಮಿಂಚಂಥ ಕ್ಷಣಗಳವು ಇನ್ನೆಂದೂ ಬಾರವು ||

ಸುರಿವ ಮಳೆಗೆ ದೋಣಿಯನ್ನು ತೇಲಿ ಬಿಟ್ಟೆವು,
ಚಿಟ್ಟೆ ಹೂವ ಗೊಂದಲದಲಿ ನಕ್ಕು ನಲಿದೆವು
ಮುಗಿಲ ಬಣ್ಣ ಚಂದ್ರ ತಾರೆ ಹಾಡ ಹಿಡಿದೆವು
ಮುಂದೆ ನುಗ್ಗಲೇನೋ ಬಡಿದು ಕೆಳಗೆ ಕುಸಿದೆವು || ಎಂಥಾ ||

ಹಕ್ಕಿ ಬೆನ್ನನೇರಿ ಗಗನ ಮೀರಿ ನೆಗೆದೆವು
ಇಂದ್ರ ಚಾಪದಲ್ಲಿ ಕೈ ಕೈ ಬೆಸೆದು ನಡೆದೆವು
ಈಗ ಹಕ್ಕಿ ರೆಕ್ಕೆ ಮುರಿದು ಧರೆಗೆ ಉರುಳಿದೆ
ಕಿಸೆಯಲಿಟ್ಟ ಬಿಲ್ಲ ತುಣುಕು ಕಳೆದು ಹೋಗಿದೆ || ಎಂಥಾ ||




ಸಾಹಿತ್ಯ – ಸುಬ್ರಾಯ ಚೊಕ್ಕಾಡಿ
ಸಂಗೀತ – ಸಿ ಅಶ್ವಥ್
ಗಾಯನ – ಸಂಗೀತ ಕಟ್ಟಿ ಕುಲಕರ್ಣಿ / ಅಜಯ್ ವಾರಿಯರ್

ಬಾ ಸವಿತಾ ಬಾ ಸವಿತಾ ಬಾ ಸವಿತಾ - ಮಾಸ್ತಿ ವೆಂಕಟೇಶ ಅಯ್ಯಂಗಾರ್


ಬಾ ಸವಿತಾ ಬಾ ಸವಿತಾ ಬಾ ಸವಿತಾ..

ಒಳಗಿನ ಕಣ್ಣನು ಮುಚ್ಚಿಸಿವೊಮ್ಮೆ
ತಿಳಿವಿಗೆ ಬಣ್ಣವ ಹಚ್ಚಿಸಿವೊಮ್ಮೆ
ಒಳಿತಲ್ಲದುದೆ ಒಳಿತೆಂಬುದರ
ಚಳಕವೆಲ್ಲಕೆ ವಿನಾಶವತಾ || ಬಾ ||

ನೆಲೆಯಿಂದ ಹೊರಟು ಅಲೆ ಅಲೆ ಅಲೆ ಅಲೆ
ಛಲ ತೊಟ್ಟ ಮಲ್ಲ, ವಾಹಿನಿ ಬಾ
ನಿಲವಿಲ್ಲಾ ಜಗದಿ ಕತ್ತಲೆಗೆಂದು
ಗೆಲವನು ಸಾರುವ ಭಾಸವ ತಾ || ಬಾ ||

ಓಂ ತತ್ಸವಿತುರ್ವರೇಣ್ಯವೆಂಬೆವು
ಅಂತಲ್ಲದೆ ಬೇರೆಯದನು ನಂಬೆವು
ಪಂಥವ ಬೆಳೆಗಿಸಿ ನಿರೂಪಿಸಿ ಕೋಂಬೆವು
ಶಾಂತಸುಂದರ ಶಿವದಾ ಸವಿತಾ || ಬಾ ||

ಸಾಹಿತ್ಯ – ಮಾಸ್ತಿ ವೆಂಕಟೇಶ ಅಯ್ಯಂಗಾರ್
ಸಂಗೀತ – ಮೈಸೂರು ಅನಂತಸ್ವಾಮಿ

ಅಕೋ ಶ್ಯಾಮ ಅವಳೇ ರಾಧೆ - ಪು.ತಿ.ನ


ಅಕೋ ಶ್ಯಾಮ ಅವಳೇ ರಾಧೆ
ನಲಿಯುತಿಹರು ಕಾಣಿರೇ |
ನಾವೆ ರಾಧೆ ಅವನೇ ಶ್ಶಾಮ
ಬೇರೆ ಬಗೆಯ ಮಾಣಿರೇ ||

ಕಲರವದೊಳು ಯಮುನೆ ಹರಿಯೆ
ಸೋಬಾನೆಯ ತರುಗಳುಲಿಯೆ
ತೆನೆತೆನೆಯೊಳು ಹರಸಿದಂತೆ
ಬಾನಿಂ ಜೊನ್ನ ಭೂಮಿಗಿಳಿಯೆ ||

ಕಂಪ ಬಿಡುವ ದಳಗಳಂತೆ
ಸುತ್ತಲರಳಿ ಕೊಳ್ಳಿರೇ|
ಒಲುಮೆಗಿಡುವ ಪ್ರಭಾವಳಿಯ
ತೆರದಿ ಬಳಸಿ ನಿಲ್ಲಿರೇ ||

ಕಡಗ ಕಂಕಣ ಕಿನಿಕಿನಿಯೆನೆ
ಅಡಿಗೆಯಿರುಲೆ ಝಣರೆನೆ |
ಎದೆ ನುಡಿತಕೆ ಚುಕ್ಕಿ ಮಿಡಿಯೆ
ಕೊಳಲನೂದಿ ಕುಣಿವನೆ ||

ನಮ್ಮ ಮನವ ಕೋದು
ಮಾಲೆ ಗೈದು ಮುಡಿಯುತಿಹನೆನೆ |
ಮಾಧವನೂದುವ ಮಧುರ ಗಾನ
ಎದೆಯ ಹಾಯ್ವುದಾಯೆನೆ ||

ನೋಡಿ ತಣಿಯೆ ಹಾಡಿ ತಣೆಯೆ
ಲೇಸನಾಡಿ ತಣಿಯೆನೆ |
ಕುಣಿದು ತಣಿಯೆ ದಣಿದು ತಣಿಯೆ
ದಣಿವಿಲ್ಲದೆ ನಲಿವೆನೆ ||

ಸಾಹಿತ್ಯ – ಪು.ತಿ.ನ
ಸಂಗೀತ – ಸಿ ಅಶ್ವಥ್
ಗಾಯನ – MS ಶೀಲ / KS ಸುರೇಖ

ಶಿವಮಂದಿರಸಮ ವನಸುಂದರ - ಕುವೆಂಪು


ಶಿವಮಂದಿರಸಮ ವನಸುಂದರ ಸುಮಶೃಂಗಾರದ ಗಿರಿಶೃಂಗಕೆ ಬಾ!
ಬಾ ಫಾಲ್ಗುಣ ರವಿ ದರ್ಶನಕೆ!

ಕುಂಕುಮ ಧೂಳಿಯ ದಿಕ್ತಟವೇದಿಯೊಳೋಕುಳಿಯಲಿ ಮಿಂದೇಳುವನು
ಕೋಟಿವಿಹಂಗಮ ಮಂಗಲರವ ರಸನೈವೇದ್ಯಕೆ ಮುದ ತಾಳುವನು
ಚಿನ್ನದ ಚೆಂಡನೆ ಮೂಡುವನು; ಹೊನ್ನನೆ ಹೊಯ್‌ನೀರ್ ನೀಡುವನು
ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆಹರಿಯಿಸಿ ರವಿ ದಯಮಾಡುವನು || ಬಾ ||

ತೆರೆತೆರೆಯಾಗಿಹ ನೊರೆನೊರೆ ಕಡಲೆನೆ ನೋಡುವ ಕಣ್ಣೋಡುವವರೆಗೆ
ಬನಸಿರಿ ತುಂಬಿದ ಕಣಿವೆಯ ಹಂಬಿರೆ ಧೂಳೀಸಮಹಿಮ ಬಾನ್‌ಕರೆಗೆ
ಪ್ರತಿಭೆಯ ಹೋಮಾಗ್ನಿಯ ಮೇಲೆ ಕವಿಮನ ತಾನುರಿದುರಿದೇಳೆ
ಮರಗಿಡದಲಿ ಜಡದೊಡಲಲಿ ಇದೆಕೋ ಸ್ಪಂದಿಸುತಿದೆ ಭಾವಜ್ವಾಲೆ || ಬಾ ||

ವರ್ಣನದಿಂದ್ರಿಯ ನಂದನವನು ದಾಂಟುತೆ ದರ್ಶನ ಮುಕ್ತಿಯ ಸೇರಿ
ವ್ಯಕ್ತಿತೆ ಮೈಮರೆವುದು ಸೌಂದರ್ಯ ಸಮಾಧಿಯೊಳಾನಂದವ ಹೀರಿ
ಸರ್ವೇಂದ್ರಿಯ ಸುಖನಿಧಿ ಅಲ್ಲಿ; ಸರ್ವಾತ್ಮನ ಸನ್ನಿಧಿ ಅಲ್ಲಿ
ಸಕಲಾರಾಧನ ಸಾಧನಬೋಧನ ಅನುಭವರಸ ತಾನಹುದಲ್ಲಿ || ಬಾ ||

ಸಾಹಿತ್ಯ – ಕುವೆಂಪು
ಗಾಯನ - ನರಸಿಂಹ ನಾಯಕ್


Saturday, December 8, 2012

ಹಚ್ಚೇವು ಕನ್ನಡದ ದೀಪ


ಹಚ್ಚೇವು ಕನ್ನಡದ ದೀಪ
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವ ದೀಪ

ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು
ನಡುನಾಡೆ ಇರಲಿ ಗಡಿನಾಡೆ ಇರಲಿ
ಕನ್ನಡದ ಕಳೆಯ ಕೆಚ್ಚೇವು
ಮರೆತೇವು ಮರವ ತೆರೆದೇವು ಮನವ
ಎರೆದೇವು ಒಲವ ಹಿರಿನೆನಪಾ
ನರನರವನೆಲ್ಲ ಹುರಿಗೊಳಿಸಿ ಹೊಸದು ಹಚ್ಚೇವು ಕನ್ನಡದ ದೀಪ.

ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯರೂಪ
ಅಚ್ಚಳಿಯದಂತೆ ತೋರೇವು
ಒಡಲೊಳಲ ಕೆಚ್ಚಿನ ಕಿಡಿಗಳನ್ನು
ಗಡಿನಾಡಿನಾಚೆ ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿನದು ಭೀತಿ
ನಾಡೊಲವೆ ನೀತಿ ಹಿಡಿನೆನಪಾ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ.

ನಮ್ಮವರು ಗಳಿಸಿದ ಹೆಸರುಳಿಸಲು
ಎಲ್ಲಾರು ಒಂದುಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು
ತೊರೆದೇವು ಮರುಳ ಕಡೆದೇವು ಇರುಳ
ಪಡೆದೇವು ತಿರುಳ ಹಿರಿನೆನಪಾ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ

Monday, March 19, 2012

ಜಾರುಬೆಣ್ಣೆಯಿದೆ ಕೈಯೊಳಗೆ

ಜಾರುಬೆಣ್ಣೆಯಿದೆ ಕೈಯೊಳಗೆ
ಅಂಬೆಗಾಲನಡೆ! ಧೂಳಡರಿದ ಮೈ!
ಮೊಸರಿನ ಕೊಸರಿದೆ ಮುಖದೊಳಗೆ!


ಕನ್ನಡಿ ಕೆನ್ನೆ! ನೇರಿಲೆ ಕಣ್ಣು !
ಹಣೆಯಲಿ ಗೋರೋಚನ ತಿಲಕ !
ನೊಸಲಿನ ತುಂಬ ಗುಂಗುರಿನುಂಗುರ
ಮುಖಕಮಲಕೆ ಕವಿದಿವೆ ಭೃಂಗ ||


ಕೊರಳಲಿ ತಾಯತಿ! ಹುಲಿಯುಗುರಿನ ಸರ !
ಬರುತಿದೆ ಶ್ಯಾಮಾಂಗನ ಡೋಲಿ |
ಗಾಳಿಗಾಡುತಿದೆ ಸಿರಿ ಮುಂಗುರುಳು
ಮಧು ಹೀರಿದ ದುಂಬಿಯ ಹೋಲಿ || 


-ಹೆಚ್. ಎಸ್ ವೆಂಕಟೇಶ ಮೂರ್ತಿ (ಉತ್ತರಾಯಣ ಮತ್ತು.... ಕವನ ಸಂಕಲನದಿಂದ)

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...