Showing posts with label ರಾಜೇಂದ್ರ ಪ್ರಸಾದ್. Show all posts
Showing posts with label ರಾಜೇಂದ್ರ ಪ್ರಸಾದ್. Show all posts

Wednesday, September 21, 2016

ನೈಸರ್ಗಿಕ ಸಂಪತ್ತಿನ ಪಾಲು ನಮಗೂ ಕೊಡಿ - ರಾಜೇಂದ್ರ ಪ್ರಸಾದ್



ಒಂದು ಪ್ರದೇಶದ ನೈಸರ್ಗಿಕ ಉತ್ಪತ್ತಿಗಳಾದ ಗಾಳಿ ನೀರು ಬೆಳಕು ಭೂಮಿ ಬಿಸಿಲು ಇವೆಲ್ಲವೂ ಆಯಾ ಪ್ರದೇಶದ ಸ್ವತ್ತು. ಅವುಗಳ ಬಳಕೆಯ ಪೂರ್ಣ ಹಕ್ಕು ಆಯಾ ಪ್ರದೇಶದ ಪಶು-ಪ್ರಾಣಿಗಳದ್ದು ಮನುಷ್ಯನನ್ನೂ ಸೇರಿಸಿ. ಇನ್ನೂ ಸಂವಿಧಾನದ ಆಧಾರದಲ್ಲಿ ಹೇಳುವುದಾದರೆ ಇವುಗಳನ್ನು ಅನುಭೋಗಿಸಿ ಬದುಕುವುದು ಮನುಷ್ಯನ ಮೂಲಭೂತ ಹಕ್ಕು.

ಈವಾಗ ನಿರ್ಧಿಷ್ಟ ಪ್ರದೇಶದ ಜನ ತಮ್ಮ ನೆಲದ್ಲಲಿ ಬಿದ್ದ, ಹರಿದು ಬಂದ ನೀರನ್ನು ಕೃಷಿ ಮತ್ತು ಕುಡಿಯುವ ನೀರಿಗಾಗಿ ಸಂಗ್ರಹಿಸಿಕೊಳ್ಳುವುದು ತಪ್ಪೇ? ಹಾಗೆ ಸಂಗ್ರಹಿಸಿದ ನೀರನ್ನು ಮತ್ತೊಂದು ಪ್ರದೇಶದ ಕೃಷಿಗಾಗಿ ನಾವೇ ಜಾರಿಗೊಳಿಸಿಕೊಂಡ ಪ್ರಜಾಪ್ರಭುತ್ವ ವ್ಯವಸ್ಥೆಯ ಉನ್ನತ ಸ್ಥಾನಗಳು ಕಸಿದುಕೊಳ್ಳುವುದು, ಅದನ್ನು ಆದೇಶವೆಂದು ಜಾರಿಗೊಳಿಸುವುದು ನಮಗಿರುವ ಮೂಲಭೂತಹಕ್ಕನ್ನು ಉಲ್ಲಂಘಿಸಿದಂತೆ ಆಗುವುದಿಲ್ಲವೇ ?!

ಕಾವೇರಿಯ ನೀರನ್ನು ನಾವು ತಮಿಳುನಾಡಿಗೆ ಬಿಟ್ಟರೆ

* ತಮಿಳುನಾಡು ನಮಗೆ ಉಚಿತ ವಿದ್ಯುತ್ ಕೊಡುತ್ತದೆಯೇ ? ವಿದ್ಯುತ್ ಉತ್ಪತ್ತಿಯಾಗುವುದು ನೈಸರ್ಗಿಕ ಮೂಲಗಳಿಂದಲೇ ತಾನೇ!

* ಉಚಿತವಾಗಿ ತೂತುಕುಡಿಯಿಂದ ಕರ್ನಾಟಕಕ್ಕೆ ಬೇಕಾದ ಉಪ್ಪನ್ನು ಉಚಿತವಾಗಿ ಸರಬರಾಜು ಮಾಡುತ್ತದೆಯೇ! ಉಪ್ಪಿನ ಮೂಲ ಸಮುದ್ರ.

*ಕಾವೇರಿ ನೀರಿನ ಬಳಕೆ ಮಾಡುವ ತಮಿಳುನಾಡಿನ ಪ್ರದೇಶಗಳಲ್ಲಿ ಸಂಗ್ರಹವಾಗುವ ಭೂಕಂದಾಯದಲ್ಲಿ ನಮಗೆ ಭಾಗ ಕೊಡುತ್ತದೆಯೇ?!

* ಕಾವೇರಿ ನದೀ ಮುಖಜ ಭೂಮಿಯಲ್ಲಿ ಇದೆ ಎನ್ನಲಾಗುತ್ತಿರುವ ತೈಲ ಮತ್ತು ನೈಸರ್ಗಿಕ ನಿಕ್ಷೇಪಗಳ ಆದಾಯದಲ್ಲಿ ಕರ್ನಾಟಕಕ್ಕೆ ಎಷ್ಟು ಪಾಲು ಕೊಡಲು ಸಿದ್ದವಿದೆ ?!

* ಮಾನವೀಯತೆ ಆಧಾರದಲ್ಲಿ ಕೃಷ್ಣಾನದಿಯಿಂದ ಪ್ರತಿವರ್ಷ 5 ಟಿ‌ಎಮ್‌ಸಿ ನೀರನ್ನು ಕುಡಿಯಲು ಚೆನ್ನೈ ನಗರಕ್ಕೆ ಕೊಡುತ್ತೇವಲ್ಲ. ಅದಕ್ಕೆ ಪ್ರತಿಯಾಗಿ ಕಾವೇರಿಯಿಂದ 5 ಟಿ‌ಎಮ್‌ಸಿ ನೀರನ್ನು ಬೆಂಗಳೂರು ನಗರಕ್ಕೆ ಕೊಡಿಸಲು ಸಾಧ್ಯವೇ?!

ಹೇಳಿ ತಮಿಳುನಾಡು /ಪುದುಚೇರಿ / ಕೇಂದ್ರ ಸರಕಾರಗಳೇ ಅಥವಾ ಆದೇಶ ಕೊಡುವ ವ್ಯವಸ್ಥೆಗಳೇ ಕರ್ನಾಟಕಕ್ಕೆ ತಮಿಳಿನಾಡು / ಪುದುಚೇರಿಯ ಯಾವ ನೈಸರ್ಗಿಕ ಸಂಪತ್ತಿನಲ್ಲಿ ನಮಗೆ ಪಾಲು ಕೊಡಲು ಮತ್ತು ಕೊಡಿಸಲು ತಯಾರಿದ್ದೀರಿ?
ಅದನ್ನು ಕೊಡಲು, ಕೊಡಿಸಲು ಸಾಧ್ಯವಾಗದೇ ಇದ್ದಲ್ಲಿ ಕರ್ನಾಟಕದ ಜನರ ನೈಸರ್ಗಿಕ ಜಲಸಂಪತ್ತನ್ನು ಕೇಳುವ ಯಾವ ನೈತಿಕತೆ ಅಥವಾ ಹಕ್ಕು ನಿಮಗೆ ಇದೆ! ಕಾನೂನಿನ ಮೂಲಕ ನಡೆಯುತ್ತಿರುವ ಇದು ದೌರ್ಜನ್ಯವಲ್ಲವೇ, ಇದು ಶೋಷಣೆಯಲ್ಲವೇ?!

ಸಂಪತ್ತು ಪಾಲುಕೊಡಲಾಗದ ಸರಕಾರಗಳು ಹಣ ಕೊಟ್ಟು ನೀರನ್ನು ಕೊಂಡುಕೊಳ್ಳಿ. ಅಥವಾ ಬೇರೆಡೆ ನೀರು ಹುಡುಕಿಕೊಳ್ಳಿ.

___

ಕೋರ್ಟ್ ಗಳಲ್ಲಿ ನಮ್ಮ ನೈಸರ್ಗಿಕ ಸಂಪತ್ತನ್ನು ಬಳಸಿಕೊಳ್ಳುವ ಕುರಿತು ನೆಟ್ಟಗೆ ವಾದಿಸಲು, ಪುರಾವೆ ಒದಗಿಸಲು ಸಾಧ್ಯವಿಲ್ಲದ ಸರಕಾರಗಳು, ಸಂಸದರು, ಶಾಸಕರು ಇದ್ದರೆಷ್ಟು ಹೋದರೆಷ್ಟು?!
ಕುಡಿಯುವ ನೀರು ಕೊಡಿಸಲು ಸಾಧ್ಯವಾಗದ ನಿಮ್ಮಂತಹ ಪ್ರತಿನಿಧಿಗಳನ್ನು ಇಟ್ಟುಕೊಂಡು ಏನು ಮಾಡೋಣ?
ಒಕ್ಕೂಟವ್ಯವಸ್ಥೆಯಲ್ಲಿ ಪ್ರಧಾನಿಯೊಬ್ಬರು ಮಧ್ಯಸ್ಥಿಕೆವಹಿಸಲು ಹಿಂಜರಿಯುತ್ತಾರೆ, ಬರೆದ ಪತ್ರಗಳಿಗೆ ಉತ್ತರಕೊಡದೇ ಅದೇ ವ್ಯವಸ್ತೆಗೆ ದ್ರೋಹವೆಸಗುತ್ತಾರೆ. ಒಂದು ಕಠಿಣ ನಿರ್ಧಾರ ಕೈಗೊಳ್ಳಲು ಅಶಕ್ತವಾದ ಮುಖ್ಯಮಂತ್ರಿ, ತಮ್ಮ ಭಾಗದ ಜನರ ನೀರಿಗೆ ಓಡಾಡಲು ಸಾಧ್ಯವಾಗದ ಅಪ್ರಯೋಜಕ ಸಂಸದರು ಮತ್ತು ಶಾಸಕರು, ಕಡೆಗೆ ಏನು ಮಾಡಬೇಕು ಅಂತಲೂ ತಿಳಿಯದ ಹೀಗೆ ಬಡಬಡಿಸಿಕೊಂಡು ಕುಳಿತೇ ಇರುವ ನಾವು ನಾಗರೀಕರು!

ಕನ್ನಡನಾಡಿನ ಜನ ರಾಜಕೀಯವಾಗಿ ಒಂದು ಬದಲಾವಣೆಯನ್ನಂತೂ ಮಾಡಿಕೊಳ್ಳಲೇಬೇಕಿದೆ. ಈಗ ತುರ್ತಾಗಿ. ಅದು ಕನ್ನಡ ಕೇಂದ್ರಿತ ಸದೃಢ ರಾಜಕಾರಣ. ಸದೃಢ ರಾಜಕಾರಣವೊಂದೇ ನಮಗೆ ನ್ಯಾಯ ಒದಗಿಸಬಲ್ಲುದು. ಈ ರಾಷ್ಟ್ರಿಯವಾದಿಗಳು , ರಾಷ್ಟ್ರೀಯ ಪಕ್ಷಗಳು ನಮ್ಮ ಪಾಲಿನ ಯಮಧೂತರು. ಕನ್ನಡ ಸ್ವಾಭಿಮಾನವನ್ನು ನಾವು ರಾಜಕೀಯವಾಗಿ ಬೆಳೆಸಿಕೊಳ್ಳಬೇಕಿದೆ. ಅದು ನಮಗಿರುವ ಒಂದೇ ಮಾರ್ಗ.

Wednesday, November 18, 2015

ಹಗಲಲ್ಲದ ಇರುಳಲ್ಲದ ನಡುಗಾಲದ - ರಾಜೇಂದ್ರ ಪ್ರಸಾದ್

ಹಗಲಲ್ಲದ ಇರುಳಲ್ಲದ ನಡುಗಾಲದ
ನೆತ್ತಿಯ ಮೇಲೆ ಎಷ್ಟೊಂದು ಉರಿದೀಪ
ಎದೆಯ ಮೇಲೆ ತೇಲಿ ಬಿಟ್ಟಂತೆ!
ಎತ್ತ ನೋಡಿದರತ್ತ ಸಾವಿನ ದೋಣಿಗಳು
ನನ್ನನೇ ಅಟ್ಟಿಸಿಕೊಂಡು ಬಂದಂತೆ
ಬಿಡಿದೆ ಬಾಗಿಲವರೆಗೆ ಬಂದು ಅಲ್ಲಿಯೇ ಕಾಯ್ದಂತೆ
ರುಂಡವಿಲ್ಲದ ಹಾರುಪಕ್ಷಿಗಳು ಯಮಪಾಶವ
ಹಿಡಿದು ಮನೆಯ ಮೇಲಣ ಮುಗಿಲೆಲ್ಲಾ ಸುತ್ತಿದಂತೆ.
ದೇಹ ಬೆವರುತ್ತಿದೆ ಬಿಸಿಹಬೆಯಂತೆ.
ಹನುಮಾss ಇಟ್ಟು ಮರೆತ ಸಂಜೀವಿನಿ ಎಲ್ಲೋ ?
ಮರೆತದ್ದು ಮಣ್ಣಾಗಲಿ ಚಮ್ಮಾರನ ಮನೆಯ
ಗಲ್ಲೇಬಾನಿಯನಾದರೂ ಮೊಗೆದು ತಾರೋ ಸಂಜೀವರಾಯ
ನಿನ್ನ ಮನೆಕಾಯ, ಉಸಿರು ಸಿಕ್ಕಿಕೊಂಡಿದೆ.
ಬಾಗಿಲಲ್ಲಿ ದೋಣಿ
ಮುಗಿಲಲ್ಲಿ ಪಕ್ಷಿ
ಎದೆಯಲ್ಲಿ ದೀಪ
ನನ್ನ ಕಾಯುತ್ತಿವೆ. ~

                                                -    ರಾಜೇಂದ್ರ ಪ್ರಸಾದ್

Friday, April 11, 2014

ತಪ್ಪದೇ ಮತ ಚಲಾಯಿಸಿ.. ಭಾರತದ ಪ್ರಜಾಸಾರ್ವಭೌಮತ್ವವನ್ನು ಕಾಪಾಡಿ.

ಈ ಹಿಂದೆ ಕರ್ನಾಟಕದಲ್ಲಿ ಜೆಡಿಸ್, ಬಿಜೆಪಿಗೂ ಯಡಿಯೂರಪ್ಪನವರಿಗೆ ಮೋಸ ಮಾಡಿತೆಂದು ಗೋಳಿಟ್ಟು ಮಾಡಿಕೊಂಡ 'ವ್ಯಕ್ತಿ ಗತ' ಪ್ರಚಾರಕ್ಕೆ ಮರುಳಾಗಿ ಮತ ಚಲಾಯಿಸಿದ ಜನತೆ ಮುಂದಿನ ೫ ವರುಷಗಳ ಕಾಲ ಎಲ್ಲ ವಿಧದ ಆಟೋಪಗಳನ್ನೂ, ಗಣಿ- ಭೂಮಿ- ಧರ್ಮ ಹೆಸರಿನಲ್ಲಿ ಹಾಡುಹಗಲೇ ಕೊಳ್ಳೆ ಹೊಡೆಯುವುದನ್ನು ಕಣ್ಣಾರೆ ಕಂಡು ಮತವಿಟ್ಟ ಬೆರಳು ಕಚ್ಚಿಕೊಂಡರು... ಇದೀಗ ಕೇಂದ್ರದಲ್ಲೂ ಅದೇ ''ವ್ಯಕ್ತಿಗತ'' ಧೋರಣೆಯ ಜಾಹೀರಾತುಗಳು!


* ನಮ್ಮ ಮತ ಯಾವಾಗಲೂ ನಮ್ಮ 'ಕ್ಷೇತ್ರಗತ' ವಾಗಿರಬೇಕು.
* ನಮ್ಮ ಕ್ಷೇತ್ರವನ್ನು ಪ್ರತಿನಿಧಿಸಲು ಯಾರು ಸಮರ್ಥರೋ ಅವರನ್ನು ನಾವು ಗೆಲ್ಲಿಸಬೇಕು.
* ನಮ್ಮ ಕ್ಷೇತ್ರದ ಬೇಕಾದ ಸಂಪನ್ಮೂಲಗಳನ್ನು ತರುವ, ಕುಂದು ಕೊರತೆಗಳನ್ನು ಆಲಿಸುವ, ಪರಿಹರಿಸುವ, ಬೇಕಿದ್ದನ್ನು ಮುಂದಾಲೋಚಿಸುವ ಪ್ರತಿನಿಧಿ ಬೇಕಿರುವುದು.
* ಜನತಂತ್ರ ವ್ಯವಸ್ತೆ ಇರುವುದು ಹಲವರಲ್ಲಿ, ಒಬ್ಬನಲ್ಲಿರುವುದು ಸರ್ವಾಧಿಕಾರ. ವರ್ತಮಾನದಲ್ಲಿ ಲಿಬಿಯಾ, ಇರಾಕ್, ಸಿರಿಯಾ, ಉಕ್ರೇನ್ ಇತ್ಯಾದಿ ದೇಶಗಳ ಅರಾಜಕತೆಯನ್ನು ಒಮ್ಮೆ ನೆನೆಯಲೇಬೇಕು ನಾವು ( ಖಂಡಿತ ತುರ್ತ ಪರಿಸ್ತಿತಿಯ ಭಾರತವನ್ನು ಕೂಡ )
* ಕಾಂಗ್ರೆಸ್ಸು, ಬಿಜೆಪಿ, ಜೆಡಿಸ್, ಆಪ್ ಕಡೆಗೆ ಪಕ್ಷೇತರ ಯಾರಾದರು ಸರಿ ನಮ್ಮ ಕ್ಷೇತ್ರಕ್ಕೆ ದುಡಿಯುವವನ್ನು ಆಯ್ಕೆ ಮಾಡಿ... ಖಂಡಿತ ಆಯ್ಕೆಗೊಂಡ ಆ ಅರ್ಹ ಪ್ರತಿನಿಧಿ ಅವರುಗಳ ಯೋಗ್ಯ ನಾಯಕನನ್ನು ಆರಿಸುತ್ತಾನೆ..ಇದುವೇ ನೈಜ ಜನತಂತ್ರ ವ್ಯವಸ್ತೆ.
ತಪ್ಪದೇ ಮತ ಚಲಾಯಿಸಿ.. ಭಾರತದ ಪ್ರಜಾಸಾರ್ವಭೌಮತ್ವವನ್ನು ಕಾಪಾಡಿ.

- ರಾಜೇಂದ್ರ ಪ್ರಸಾದ್


Friday, April 4, 2014

ಇವತ್ತು ದೇವರ ದಾಸಿಮಯ್ಯನ ಹುಟ್ಟುದಿನ.- ರಾಜೇಂದ್ರ ಪ್ರಸಾದ್

ಇವತ್ತು ದೇವರ ದಾಸಿಮಯ್ಯನ ಹುಟ್ಟುದಿನ...
ಆದ್ಯ ವಚನಕಾರ ದೇವರ ದಾಸಿಮಯ್ಯ, 12ನೇ ಶತಮಾನದ ವಚನ ಚಳುವಳಿಯ ಮುನ್ನಾ ನೂರು ವರ್ಷಗಳ ಹಿಂದೆಯೇ ವಚನಗಳನ್ನು ಕಟ್ಟಿದವರು.. ಪತ್ನಿ ದುಗ್ಗಳೆಯೊಂದಿಗೆ ಅನ್ಯೋನ್ಯ ದಾಂಪತ್ಯದೊಂದಿಗೆಸೀರೆ ನೇಯುವ ನೇಕಾರಿಕೆಯ ಮಾಡುತ್ತಾ
ಮುಂದೆ ಬಸವಾದಿ ಶರಣರಿಂದ 'ನೆರೆ ನಂಬೋ ನೆರೆ ನಂಬೋ ದಾಸ-ದುಗ್ಗಳೆಯಂತೆ'
ಎಂದು ಹಾಡಿಸಿಕೊಂಡ ಮಹಾನುಭಾವಿ..
ತಾನೇ ನೇಯ್ದು, ಉಟ್ಟ ಉಡುಗೆಯನ್ನು ಶಿವನಿಗೆ ದಾನಕೊಟ್ಟು 'ತವನಿಧಿಯನ್ನು' ಪಡೆದರೆಂಬುದು ದಂತಕಥೆ.
ದೇವರ ದಾಸಿಮಯ್ಯನನ್ನು ಕುರಿತು ಬ್ರಹ್ಮಶಿವ, ಹರಿಹರ,ರಾಘವಾಂಕ, ಭೀಮಕವಿ, ವಿರೂಪಾಕ್ಷ ಪಂಡಿತ, ಸಿದ್ದ ನಂಜೇಶ ಮುಂತಾದ ಕನ್ನಡ ಕವಿಕೃತಿಗಳಲ್ಲಿ ಅಲ್ಲದೇ
ಕ್ರಿ.ಶ.1148 ರ ಗೊಬ್ಬೂರಿನ ಶಾಸನ, ಕ್ರಿ.ಶ.1167ರ ಚಿಕ್ಕಮುದನೂರಿನ ಶಾಸನ, ಕ್ರಿ.ಶ.1200 ರ ಅರಸೀಕೆರೆ ಶಾಸನ, ಕ್ರಿ.ಶ.1259 ರ ಹಿರಿಯೂರಿನ ಶಾಸನಗಳಲ್ಲಿ ಉಲ್ಲೇಖಗಳಿವೆ
ನನ್ನಿಷ್ಟದ ಕೆಲವು ವಚನಗಳು
ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು
ನೀನೆನ್ನ ಜರಿದೊಮ್ಮೆ ನುಡಿಯದಿರ!
ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ!
ರಾಮನಾಥ.
***

ಉಂಕೆಯ ನಿಗುಚಿ ಸರಿಗೆಯ ಸಮಗೊಳಿಸಿ
ಸಮಗಾಲನಿಕ್ಕಿ ಅಣಿಯೇಳ ಮುಟ್ಟದೆ
ಹಿಡಿದ ಲಾಳಿಯ ಮುಳ್ಳು ಕಂಡಿಕೆಯ ನುಂಗಿತ್ತು.
ಈ ಸೀರೆಯ ನೆಯ್ದವ ನಾನೊ ನೀನೋ?ರಾಮನಾಥ.
***
ಬಯಲ ಬಣ್ಣವ ಮಾಡಿ;
ಸ್ವಯವ ನಿಲವ ಮಾಡಿ
ಸುಳಿವಾತನ ಬೆಡಗ ಬಲ್ಲವರಾರೈ? ರಾಮನಾಥ!
***
ನಾನೊಂದು ಸುರಗಿಯನೇನೆಂದು ಹಿಡಿವೆನು?
ಏನ ಕಿತ್ತೇನನಿರಿವೆನು?
ಜಗವೆಲ್ಲಾ ನೀನಾಗಿಪ್ಪೆ ಕಾಣಾ! ರಾಮನಾಥ.
****

Tuesday, February 18, 2014

ಶ್ರದ್ದಾಂಜಲಿ

Krupe : Kannada Prabha

ವರ್ತಮಾನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಬಹುದೊಡ್ಡ ಹೆಸರು ಆರ್.ಕೆ. ಶ್ರೀಕಂಠನ್ ಅವರದ್ದು. ಸಾಹಿತ್ಯ ಶುದ್ಧ, ಶ್ರುತಿ ಶುದ್ದ, ಸ್ವರ ಶುದ್ದ ಸಂಗೀತ ಪರಂಪರೆಯಲ್ಲಿ  94 ವರ್ಷಗಳ ತುಂಬು ಜೀವನವನ್ನು ನಡೆಸಿದವರು, ಅವರು.
ಆರ್.ಕೆ. ಶ್ರೀಕಂಠನ್ ಅವರು ಹುಟ್ಟಿದ್ದು ಹಾಸನ ಜಿಲೆಯ ರುದ್ರಪಟ್ಟಣಂ ಎಂಬ ಸಂಗೀತವೇ ಉಸಿರಾದ ಊರಿನಲ್ಲಿ 14 ನೇ ಜನವರಿ 1920ರಲ್ಲಿ. ಇವರ ತಂದೆ ಕೃಷ್ಣ ಶಾಸ್ತ್ರಿಗಳು ಒಳ್ಳೆಯ ಗಮಕಿಗಳು. ಕವಿಗಳು, ನಾಟಕಾಗಾರರು ಆಗಿದ್ದರು.. ತಾಯಿ ಸಣ್ಣಮ್ಮನವರು ಕೂಡ ಒಳ್ಳೆಯ ಗಾಯಕಿ ಆಗಿದ್ದರು ಆದರೆ ದುರದೃಷ್ಟವಶಾತ್ ಆರ್.ಕೆ. ಶ್ರೀಕಂಠನ್ ಅವರು 2 ವರ್ಷ ಚಿಕ್ಕವರಾಗಿದ್ದಾಗಲೇ ತಾಯಿ ತೀರಿಕೊಂಡರು. ಇವರ ತಾತ ವೀಣೆ ನಾರಾಯಣ ಸ್ವಾಮಿಯವರು.. ವೀಣೆ ಶೇಷಣ್ಣ & ವೀಣೆ ಸುಬ್ಬಣ್ಣನವರ ಸಮಕಾಲೀನರು.
ಶ್ರೀಯುತರು ತಮ್ಮ ಪ್ರಾಥಮಿಕ & ಪ್ರೌಢ ಶಿಕ್ಷಣವನ್ನು ಕ್ರಮವಾಗಿ ಮೈಸೂರಿನ ಸದ್ವಿದ್ಯಾ ಪಾಠ ಶಾಲಾ ಹಾಗೂ ಡಿ. ಬನುಮಯ್ಯ ಪ್ರೌಢ ಶಾಲೆಗಳಲ್ಲೂ, ಬಿ.ಎ. ಪದವಿಯನ್ನು ಮಹಾರಾಜ ಕಾಲೇಜಿನಲ್ಲೂ ಪಡೆದುಕೊಂಡರು.
ಸಂಗೀತವಂತೂ ಮನೆತನದಲ್ಲೇ ಇದ್ದುದರಿಂದ ತಂದೆಯೇ ಅವರಿಗೆ ಮೊದಲ ಗುರುವಾಗಿದ್ದರು. ನಂತರದಲ್ಲಿ ವೀಣೆ ಸುಬ್ಬಣ್ಣ & ಪಿಟೀಲು ಚೌಡಯ್ಯನವರಲ್ಲಿ ಸಂಗೀತ ಅಭ್ಯಾಸ ಮಾಡಿದ್ದ ಅವರ ಸೋದರ ಆರ್.ಕೆ. ವೆಂಕಟರಮಣ ಶಾಸ್ತ್ರಿಯವರಲ್ಲಿ ಸಂಗೀತ ಅಭ್ಯಾಸ ಮುಂದುವರಿಸಿದರು.ಇವರು ಸಂತ ತ್ಯಾಗರಾಜ ಸ್ವಾಮಿ ಗುರುಪರಂಪರೆಗೆ ಸೇರಿದವರು.
ಹರೆಯದ ದಿನಗಳಲ್ಲಿ ಮೈಸೂರು ಸಂಸ್ಥಾನದಲಿ ಒಡೆಯರ ಪ್ರೋತ್ಸಾಹದಲ್ಲಿ ನಡೆಯುತ್ತಿದ್ದ ಎಲ್ಲ ಸಂಗೀತಕಚೇರಿಗಳಲ್ಲೂ ತಪ್ಪದೆ ಪಾಲ್ಗೊಳ್ಳುತ್ತಿದ್ದ ಇವರು ಅದೇ ಕಾಲದ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಆರೈಕುಡಿ ರಾಮಾನುಜ ಅಯ್ಯಂಗಾರ್, ಮುಸುರಿ ಸುಬ್ರಹ್ಮಣ್ಯ ಅಯ್ಯರ್ ಅವರ ಸಂಗೀತದಿಂದ ಪ್ರಭಾವಿತರಾಗಿದ್ದರು.
ಅತ್ಯಂತ ಸಾಹಿತ್ಯಶುದ್ದವೂ ಸ್ವರಬದ್ದವೂ ಆದ ಅವರ ಸಂಗೀತ ಕಚೇರಿಗಳು ಜಗತ್ತಿನಾದ್ಯಂತ ಪ್ರಸಿದ್ದಿಯಾಗಿವೆ.ಹಾಗೆಯೇ ಅವರ ಕಚೇರಿಗಳಲ್ಲಿ ಬಹಳವಾಗಿ ಕನ್ನಡ ಕೃತಿಗಳು, ದಾಸರ ರಚನೆಗಳು ಬಳಕೆಯಾಗುತ್ತಿದವು.
ಅವರ ಕೊನೆಯ ದಿನಗಳ ವರೆಗೂ ಅವರ ಮಗ ಆರ್.ಎಸ್. ರಮಾಕಾಂತ ಅವರೊಂದಿಗೆ ಕಚೇರಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ವಿದುಷಿ ಎಂ.ಎಸ್. ಶೀಲಾ, ಟಿ.ಎಸ್. ಸತ್ಯವತಿ, ಎಚ್.ಕೆ. ನಾರಾಯಣ್ ಹಾಗೂ ಮಗಳು ಗಾಯಕಿ ರತ್ನಮಾಲಾ ಪ್ರಕಾಶ್ ಕೂಡ ಅವರ ಪ್ರಸಿದ್ದ ಶಿಷ್ಯ ವೃಂದ.
ಅವರಿಗೆ ಸಂಗೀತ ಒಲಿದಿದ್ದಂತೆಯೇ ಬೇಕಾದಷ್ಟು ಪ್ರಶಸ್ತಿ-ಪುರಸ್ಕಾರಗಳು ಹುಡುಕಿ ಬಂದಿದ್ದವು.
1979- ಕೇಂದ್ರ ಸಂಗೀತ & ನಾಟಕ ಅಕಾಡೆಮಿ ಪ್ರಶಸ್ತಿ
1981- ರಾಜ್ಯ ಸಂಗೀತ & ನಾಟಕ ಅಕಾಡೆಮಿ ಪ್ರಶಸ್ತಿ
1995- ಮದ್ರಾಸಿನ ಮ್ಯೂಸಿಕ್ ಅಕಾಡೆಮಿಯ ಸಂಗೀತ ಕಲಾನಿಧಿ ಬಿರುದು
1994- ಟಿ. ಚೌಡಯ್ಯ ರಾಷ್ಟ್ರೀಯ ಸಂಗೀತ ಪ್ರಶಸ್ತಿ
ಕರ್ನಾಟಕ ಸರ್ಕಾರ ಕೊಡಮಾಡುವ ಕನಕ-ಪುರಂದರ ಪ್ರಶಸ್ತಿ
2011 - ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ
ಹೀಗೆ ನೂರಾರು ಪ್ರಶಸ್ತಿ- ಪುರಸ್ಕಾರಗಳು ದೊರೆತಿವೆ.
 ಇಷ್ಟೆಲ್ಲಾ ಸಾಧನೆಯ ಈ ರಾಜ್ಯದ ಕರ್ನಾಟಕ ಸಂಗೀತದ ಮೇರು ಪ್ರತಿಭೆ 2014, ಫೆಬ್ರವರಿ 17 ರ ಸೋಮವಾರ ರಾತ್ರಿ ಶಾಶ್ವತವಾಗಿ ತಮ್ಮ ಸ್ವರ & ಉಸಿರಿನ ಸಂಚಾರ ನಿಲ್ಲಿಸಿದರು.
 ಆದರೆ ಅವರು ಹಾಡಿ ಖ್ಯಾತಿಗೊಳಿಸಿದ ನೂರಾರು ಕನ್ನಡ ಕೃತಿಗಳು ಇನ್ನೂ ಅಲಾಪಿಸುತ್ತಲೆ ಇವೆ.


-
- ರಾಜೇಂದ್ರ ಪ್ರಸಾದ್, ಮಂಡ್ಯ

Friday, February 14, 2014

ಶಿಲುಬೆಗೇರಿದ್ದು ತಿಳಿಯಲೇ ಇಲ್ಲ .... - ರಾಜೇಂದ್ರ ಪ್ರಸಾದ್

ಶಿಲುಬೆಗೇರಿದ್ದು ತಿಳಿಯಲೇ ಇಲ್ಲ
ಪ್ರಭುವೇ
ಕೈಗಳಿಗೆ ಅಹಮ್ಮಿನ ಮೊಳೆ
ತಲೆಗೆ ಪ್ರತಿಷ್ಠೆಯ ಮೊಳೆ
ಕಾಲಿಗೆ ಹಿಟ್ಲಿರಿನ ಮೊಳೆ
ಕಡೆಗೆ ಎದೆಗೆ ದ್ವೇಷದ ಮೊಳೆ ಹೊಡೆದರಯ್ಯ
ಹೆಸರಿಲ್ಲದ ಮುಳ್ಳಿನ ಕಿರೀಟ
ಕಣ್ಣಿನಾಳಕ್ಕೆ ಹೊಕ್ಕಿದೆ

ಈ ಕಡುಪಾಪಿಯ ಸಾವು
ಒಂದು ಯಕಶ್ಚಿತ್ ಮೌನವಷ್ಟೇ..
ಕ್ಷಮಿಸಿ ಬಿಡಯ್ಯ
ಮೊಳೆಗಳಿಗೆ ಕೆಂಡಸಂಪಿಗೆಯ ಮರುಹುಟ್ಟು
ಕಾಣಿಸಯ್ಯ
ಅವುಗಳ ಘಮಲಿನಲ್ಲಿ ಮಲಗುತ್ತೇನೆ
ಶವಪೆಟ್ಟಿಗೆ ಎಂದೋ ಸಿದ್ದಗೊಳಿಸಿದ್ದಾರೆ
ಮುಳ್ಳಿನ ಹೊದಿಕೆ ಹೊದಿಸಿ..
ನಾನು ಮಲಗುತ್ತೇನೆ
ಯಾರು ಏಳಿಸಲಾಗದ ಒಂದು ನಿದ್ದೆಗೆ
ಒಂದು ಯಕಶ್ಚಿತ್ ನಿದ್ದೆಗೆ.

-  ರಾಜೇಂದ್ರ ಪ್ರಸಾದ್

Monday, October 7, 2013

ಮೊದಲ ಮುಂಗಾರ - ರಾಜೇಂದ್ರ ಪ್ರಸಾದ್,



ಮೊದಲ ಮುಂಗಾರ
ಮಳೆಗೆ ಮೈಯೊಡ್ಡಿ
ನಿಂತ ಭೂತಾಯ
ದೇಹ ಘಮ್ ಎಂದಾಗ
ನನ್ನ ಮಾತು ಮಥಿಸಿ,
ಕಾವ್ಯ ಕಾರಣವಾಗುತ್ತದೆ.

ರಗರಗನೆ ಉರಿವ
ಸೂರ್ಯನ ಬೆಳಕು
ಚಂದ್ರನಿಗೆ ನೆರಳಾಗಿ
ಬೆಳದಿಂಗಳಾದಾಗ
ನನ್ನ ಭಾವ ಬಸಿದು
ಜೀವ ಚಿಲುಮೆಯಾಗುತ್ತದೆ.
ರಾಜೇಂದ್ರ ಪ್ರಸಾದ್

ಕೆಂಡದ ಬಣ್ಣದ
ಮಲ್ಲಿಗ ಮೈ..ಮುಖದ
ಅವಳ ಒಲವಿನ ನಗು
ಶಬ್ದತೀರದಲೆ ಚುಂಬಿಸಿದಾಗ
ಹೃದಯ ಹೂಬನವಾಗುತ್ತದೆ.

ಭೂಮಿಗೀತ ಬ್ಲಾಗಿಂದ, 

Sunday, September 8, 2013

ಸ್ವಗತ ಲಹರಿ - ರಾಜೇಂದ್ರ ಪ್ರಸಾದ್,

ಆಗಷ್ಟೇ ನಿಂತ ಮಳೆಯ ಮಣ್ಣಿನ ದೂರದಲ್ಲಿ ಎಲ್ಲೋ ಷಡ್ಜ ಶಬ್ದ..
ಎದೆಯೊಳಗೆ ಅದೆಷ್ಟೋ ಸಾವಿರ ನದಿಗಳು ಧುಮ್ಮುಕ್ಕಿ
ಕಣ್ಣುಗಳಲಿ ತುಂಬುತ್ತಿವೆ....
ಅತೃಪ್ತ ಕತ್ತಲೆಯ ಆತ್ಮದ ಮೌನವೊಂದು ಸುನಾಮಿಯಾಗಿ
ನನ್ನಾವರಿಸಲಿ..
ತಥಾಗತನ ಕೈಯಿಂದ ಕಪಾಲಮೋಕ್ಷಕ್ಕೆ ಕಾದಿದ್ದೇನೆ!!!


ನನ್ನ ಕಲ್ಪನೆಯ ಮಿತಿಗೆ ಸಿಕ್ಕಿಕೊಂಡಿರುವ ನಿನ್ನ ಬಿಡಿಸಲು
ಯತ್ನಿಸುವೆ .... ಒಮ್ಮೆ ನಕ್ಕಿಬಿಡು ಆ ಶಬ್ದದಲೆಗಳಲು ಎದೆತೀರದೊಳು ಬಡಿದೇಳಿಸುವ
ಭಾವಗಳಲಿ ತೊಯ್ದು ಬಿಡುವೆ.... ಕಲ್ಪನೆಯ ಕಾಲದಾಚೆಗೆ!
ರಾಜೇಂದ್ರ ಪ್ರಸಾದ್  ( RP)


ಎಲ್ಲರೂ ಅವರವರ ಸತ್ಯವ ಹೇಳುತ್ತಾರೆ..
ಕೇಳಿಸಿಕೊಳ್ಳಬೇಕು.
ಒಳಗಣ್ಣಿನಲಿ ನಾವು
ನಮ್ಮ ಸತ್ಯವ ಕಂಡುಕೊಳ್ಳಬೇಕು...


ಹೂವನ್ನು ಶ್ರೀಚಕ್ರ
ಎಂದುಕೊಂಡ ಶಾಕ್ತೇಯ
ಶಿಲಾಕೆ ಸ್ಪರ್ಶಕೆ ಗರ ಬಡಿದು ನಿಂತ
ಪರಾಗ ದೂರದ ಮಾತು.

ಭೂಮಿಗೀತ ಬ್ಲಾಗಿಂದ, 


ಶಿಶಿರದ ಮೊದಲಲ್ಲಿ ಬೀಳುವ - ರಾಜೇಂದ್ರ ಪ್ರಸಾದ್

ಶಿಶಿರದ ಮೊದಲಲ್ಲಿ ಬೀಳುವ
ರಾತ್ರಿಮಳೆ ಹೊತ್ತಲ್ಲಿ
ಇವಳು ಪ್ರಳಯ ಸ್ವರೂಪಿ..
ನಾನೋ ಬಯಲು ಸೀಮೆಯ
ಬಿಸಿಲು ಕುದುರೆ!

ಖುರಪುಟದ ನಾದ
ನದಿ ಹರಿಯೋ
ಶಬ್ದ ಸಂಕರಕ್ಕೆ
ಭೂವ್ಯೋಮಗಳು ಒಂದಾದ
ಸಿಡಿಲ ಸಂಭ್ರಮ

ಧೋ..ಧೋ.. ಸುರಿವ ಮಳೆ
Sri Rajendra Prasad (RP)
ಭೋರ್ಗೆರೆವ ಗಂಡುಹೊಳೆ
ಹಾಗೆ ಸಣ್ಣಗೆ ಮೀಟಿದಂತೆ
ವೀಣೆ ತಂತಿ ತಾನ.

ದಾರಿಯುದ್ದ ಮುತ್ತಿನಧರ
ಕಚ್ಚಿದ ಮಧ್ಯಪಾನ
ಗಮ್ಯವೋ ಮುಳುಗೆದ್ದ
ಸಮಸ್ತ ತೀರ್ಥಸ್ನಾನ

ಮುಗಿಯುತ್ತಲೇ ಇಲ್ಲ
ದಂಡಯಾತ್ರೆ..
ಹರಿವ ನದಿಗೆ ಮೈಯೆಲ್ಲಾ ಕಾಲು
ಸುರಿವ ಮಳೆಗೆ ಮೈಯೆಲ್ಲಾ ಜೀವ

ಹಗಲು ಹಕ್ಕಿ ಹಾಡುವ ಹೊತ್ತಿಗೆ
ಅವಳು ಕೊಚ್ಚಿಹೋದ ಭತ್ತದ ಗದ್ದೆ
ನಾನು ನೆರೆ ನಿಂತ ಹೆಬ್ಬಳ್ಳ.. - ಆರ್.ಪಿ.

ಭೂಮಿಗೀತ ಬ್ಲಾಗಿಂದ,




ನನಗೂ ಕೆಲವು ಆಸೆಗಳಿದ್ದೋ - ರಾಜೇಂದ್ರ ಪ್ರಸಾದ್

Rajendra Prasad ( RP)

ನನಗೂ ಕೆಲವು ಆಸೆಗಳಿದ್ದೋ

ಸಿಕ್ಕರೆ ಮಂಟೇಸ್ವಾಮಿಯಂತ ಗುರು ಸಿಕ್ಕಬೇಕು
ಆದರೆ ಸಿದ್ದಪ್ಪಾಜಿಯಂತ ಶಿಷ್ಯ ಆಗಬೇಕು

ಸಿಕ್ಕರೆ ಬುದ್ಧನಂತ ಗುರು ಸಿಕ್ಕಬೇಕು
ಆದರೆ ಮಹಾಕಶ್ಯಪನಂತ ಶಿಷ್ಯ ಆಗಬೇಕು

ಸಿಕ್ಕರೆ ಬೋಧಿಧರ್ಮನಂತ ಗುರು ಸಿಕ್ಕಬೇಕು
ಆದರೆ ದಾಜ಼ು ಹುಇಕೆಯಂತ ಶಿಷ್ಯ ಆಗಬೇಕು

ಸಿಕ್ಕರೆ ಯಮನಂತ ಗುರು ಸಿಕ್ಕಬೇಕು
ಆದರೆ ನಚಿಕೇತನಂತ ಶಿಷ್ಯ ಆಗಬೇಕು

ಸಿಕ್ಕರೆ ಕೃಷ್ಣನಂತ ಗುರು ಸಿಕ್ಕಬೇಕು
ಆದರೆ ಅಭಿಮನ್ಯುನಂತ ಶಿಷ್ಯ ಆಗಬೇಕು

ಆದರೂ ನಾನು ದ್ರೋಣನಿರದ ಏಕಲವ್ಯನೇ ಆದೆ. ಗುರು ನನಗೆ ಅಮೂರ್ತನಾಗೇ ಉಳಿದುಬಿಟ್ಟ...

ಭೂಮಿಗೀತ ಬ್ಲಾಗಿಂದ,

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...