Showing posts with label ಕುವೆಂಪು. Show all posts
Showing posts with label ಕುವೆಂಪು. Show all posts

Thursday, December 22, 2016

ನೂರು ದೇವರನೆಲ್ಲ ನೂಕಾಚೆ ದೂರ - ಕುವೆಂಪು

ನೂರು ದೇವರನೆಲ್ಲ ನೂಕಾಚೆ ದೂರ ।। ೩।।
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೨।।
ಶತಮಾನಗಳು ಬರಿಯ ಜಡಶಿಲೆಯ ಪೂಜಿಸಿ ಆಯ್ತು
ಹಾವ್ಗಳಿಗೆ ಹಾಲೆರದು ಪೋಷಿಸಾಯ್ತು
ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿ ಆಯ್ತು
ದಾಸರನು ಪೂಜಿಸಿಯೇ ದಾಸ್ಯವಾಯ್ತು
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೨।।

ಗುಡಿಯೊಳಗೆ ಕಣ್ಮುಚ್ಚಿ ಬೆಚ್ಚಗಿರುವರನೆಲ್ಲ
ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ
ಗಂಟೆ ಜಾಗಟೆಗಳಿಂಬಡಿದು ಕುತ್ತಿಗೆ ಹಿಡಿದು ಕಡಲಡಿಗೆ ತಳ್ಳಿರೈ ಶಂಖದಿಂ ನುಡಿದು
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೨।।

ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು
ಜೀವದಾತೆಯಾನಿಂದು ಕೂಗಬೇಕು
ಶಿಲೆಯ ಮೂರ್ತಿಗೆ ನೇಯ್ದ ಕಲೆಯ ಹೊದಿಕೆಯನು ಓಯ್ದು
ಚಳಿಯು ಮಳೆಯಲಿ ನಮೆವ ತಾಯ್ಗೆ ಹಾಕು
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೩।।
ನೂಕಾಚೆ ದೂರ

Wednesday, November 18, 2015

ಇಳಿದು ಬಾ ತಾಯೆ ಇಳಿದು ಬಾ - ಕುವೆಂಪು

ಇಳಿದು ಬಾ ತಾಯೆ ಇಳಿದು ಬಾ - ಕುವೆಂಪು

ಓಂ ಸಚ್ಚಿದಾನಂದ ತ್ರಿತ್ವ ಮುಖವಾದ ಪರಬ್ರಹ್ಮದಲ್ಲಿ
ಅಭವದೊತ್ತಾದೆ ಭವದ ಬಿತ್ತಾದೆ ಋತದ ಚಿತ್ತಾದೆ ನೀ
ಇಳಿದು ಬಾ ಇಳೆಗೆ ತುಂಬಿ ತಾ ಬೆಳೆಗೆ ಜೀವ ಕೇಂದ್ರದಲ್ಲಿ
ಮತ್ತೆ ಮೂಡಿ ಬಾ ಒತ್ತಿ ನೀನೆನ್ನ ಚಿತ್ತ ಪೃಥ್ವಿಯಲ್ಲಿ ||
ಋತದ ಚಿತ್ತಾಗಿ ವಿಶ್ವಗಳ ಸೃಜಿಸಿ ನಡೆಸುತಿಹ ಶಕ್ತಿಯೆ
ಅನ್ನ ಪ್ರಾಣಗಳ ಮನೋಲೋಕಗಳ ಸೂತ್ರಧರ ಯುಕ್ತಿಯೆ
ಅಖಿಲ ಬಂಧನದ ಹೃದಯದಲ್ಲಿ ಅವಿನಾಶಿ ಆಸಕ್ತಿಯೆ
ನಿನ್ನ ಅವತಾರವೆನ್ನ ಉದ್ಧಾರ ಬಾ ದಿವ್ಯ ಮುಕ್ತಿಯೆ
ಎಲ್ಲವನು ಮಾಡಿ ಎಲ್ಲರೊಳಗೂಡಿ ನೀನೆ ಎಲ್ಲವಾದೆ
ಜ್ಯೋತಿಯಾದರೂ ತಮೋಲೀಲೆಯಲಿ ಜಡದ ಮುದ್ರೆಯಾದೆ
ಎನಿತು ಕರೆದರೂ ಓಕೊಳ್ಳದಿರುವಚಿನ್ನಿದ್ರೆಯಾದೆ
ಬೆಳಗಿ ನನ್ನಾತ್ಮಕಿಳಿದು ಬಾ ತಾಯೆ ನೀನೆ ಬ್ರಹ್ಮ ಬೋಧೆ
ಇಳಿದು ಬಾ ತಾಯೆ ಇಳಿದು ಬಾ ||
ಗಾಳಿಗುಸಿರು ನೀ ಬೆಂಕಿಗುರಿಯು ನೀನುದಕಕದರ ಜೀವ
ಅಗ್ನಿ ಇಂದ್ರ ವರುಣಾರ್ಕ ದೇವರನು ಮಾಡಿ ನೋಡಿ ಕಾವ
ಶಿವನ ಶಕ್ತಿ ನೀ, ವಿಷ್ಣು ಲಕ್ಷ್ಮೀ ನೀ, ಚತುರ್ಮುಖನ ರಾಣಿ
ದಿವ್ಯ ವಿಜ್ಞಾನ ನನ್ನೊಳುದ್ಭವಿಸೆ ಮತಿಗಾಗಮಿಸು, ವಾಣಿ
ಹೃದಯ ಪದ್ಮ ತಾನರಳೆ ಕರೆವೆ ಬಾರಮ್ಮ ಬಾ, ಇಳಿದು ಬಾ
ಮನೋದ್ವಾರ ತಾ ಬಿರಿಯೆ ಕರೆವೆ ಜಗದಂಬೆ ಬಾ, ಇಳಿದು ಬಾ
ಅಗ್ನಿ ಹಂಸ ಗರಿಗೆದರೆ ಕರೆವೆ ಬಾ ತಾಯೆ ಬಾ, ಇಳಿದು ಬಾ
ಚೈತ್ಯ ಪುರುಷ ಯಜ್ಞಕ್ಕೆ ನೀನೆ ಅಧ್ವರ್ಯು, ಬಾ, ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ ||



Tuesday, October 15, 2013

ದೇವರು ರುಜು ಮಾಡಿದನು - ಕುವೆಂಪು

ದೇವರು ರುಜು ಮಾಡಿದನು;
ರಸವಶನಾಗುತ ಕವಿ ಅದ ನೋಡಿದನು!

ಬಿತ್ತರದಾಗಸ ಹಿನ್ನೆಲೆಯಾಗಿರೆ
ಪರ್ವತದೆತ್ತರ ಸಾಲಾಗೆಸೆದಿರೆ
ಕಿಕ್ಕಿರದಡವಿಗಳಂಚಿನ ನಡುವೆ
ಮೆರೆದಿರೆ ಜಲಸುಂದರಿ ತುಂಗೆ
ದೇವರು ರುಜು ಮಾಡಿದನು;
ರಸವಶನಾಗುತ ಕವಿ ಅದ ನೋಡಿದನು!

ನದಿ ಹರಿದಿತ್ತು; ಬನ ನಿಂತಿತ್ತು;
ಬಾನ್ ನೀಲಿಯ ನಗೆ ಬೀರಿತ್ತು.
ನಿರ್ಜನ ದೇಶದ ನೀರವ ಕಾಲಕೆ
ಖಗರವ ಪುಲಕಂ ತೋರಿತ್ತು.
ಹೂಬಿಸಲಲಿ ಮಿರುಗಿರೆ ನಿರಿವೊನಲು
ಮೊರೆದಿರೆ ಬಂಡೆಗಳಲಿ ನೀರ‍್ತೊದಲು
ರಂಜಿಸೆ ಇಕ್ಕೆಲದಲಿ ಹೊಮ್ಮಳಲು

ಸಿಬ್ಬಲುಗುಡ್ಡೆಯ ಹೊಳೆಯಲಿ ಮೀಯುತ
ಕವಿಮನ ನಾಕದಿ ನೆಲೆಸಿತ್ತು;
ಮಧು ಸೌಂದರ್ಯದ ಮಧುರ ಜಗತ್ತು
ಹೃದಯ ಜಿಹ್ವೆಗೆ ಜೇನಾಗಿತ್ತು!

ದೃಶ್ಯದಿಗಂತದಿನೊಮ್ಮೆಯೆ ಹೊಮ್ಮಿ
ಗಿರಿವನ ಪಟದಾಕಾಶದಲಿ
ತೇಲುತ ಬರಲ್ಕೆ ಬಲಾಕಪಂಕ್ತಿ
ಲೇಖನ ರೇಖಾವಿನ್ಯಾಸದಲಿ,
ಅವಾಙ್ಮಯ ಛಂದಃಪ್ರಾಸದಲಿ,

ಸೃಷ್ಟಿಯ ರಚನೆಯ ಕುಶಲಕೆ ಚಂದಕೆ
ಜಗದಚ್ಚರಿಯಂದದ ಒಪ್ಪಂದಕೆ
ಚಿರಚೇತನ ತಾನಿಹೆನೆಂಬಂದದಿ
ಬೆಳ್ಳಕ್ಕಿಯ ಹಂತಿಯ ಆ ನೆವದಿ
ದೇವರು ರುಜು ಮಾಡಿದನು:
ರಸವಶನಾಗುತ ಕವಿ ಅದ ನೋಡಿದನು!

Tuesday, October 8, 2013

ಕುವೆಂಪು ನೆನಪು - ಎಚ್.ಎಲ್.ನಾಗೇಗೌಡರು




ಕುವೆಂಪುರವರು ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಬರಬೇಕಾದರೆ ಕೊಂಚ ಹೊತ್ತು ಮೌನ ತಾಳಿ ಆಮೇಲೆ ಶುರುಮಾಡುತ್ತಾರೆ. ಹಾಗೆ ಮಾಡಿ "ಮೊನ್ನೆ ಪುಟ್ಟಯ್ಯ ನಾಯ್ಕರು ಬಂದಿದ್ರು. ನಿಮ್ಮ ಶಿವಮೊಗ್ಗ ಮ್ಯೂಸಿಯಂನಲ್ಲಿ ಕೆಲವು ವಿಷಯಗಳು ದೊರೆಯಬಹುದು ಎಂದರು" ಎಂದು ಹೇಳಿದಾಗ, ನಾನು "ಯಾವ ಬಗ್ಗೆ?" ಎಂದು ಕೇಳಿದೆ.



"ಅದೇ ನನ್ನ ಕಾದಂಬರಿಗೆ ಸಾಮಗ್ರಿ ಸಂಗ್ರಹಿಸುತ್ತಿದ್ದೇನಲ್ಲ ಅದರ ಬಗ್ಗೆ. ಕೆಲವು ಒದಗಿಸಿದ್ದಾರೆ. ಮ್ಯೂಸಿಯಂನಲ್ಲಿ ತುಂಬಾ ಹಳೆಯ ಗ್ರಂಥಗಳನ್ನು ಸಂಗ್ರಹಿಸಿಟ್ಟಿದ್ದೀರಂತೆ. ಒಂದ್ಸಲ ಹೋದಾಗ ನೋಡಿಕೊಂಡು ಬರ್ತೀನಿ." ಎಂದರು.



"ಹೌದು ಇವೆ. ಹಳೆಯ ಕಡತಗಳು, ಓಲೆಗರಿಗಳು, ತಾಮ್ರ ಲಿಖಿತಗಳು ಅನೇಕ ಇವೆ. ಹುಡುಕಿದರೆ ನಿಮಗೆ ಕೆಲವು ಸಂಗತಿಗಳು ಸಿಗಬಹುದು. " ಎಂದೆ.



"ಚಿನ್ನೇಗೌಡರು ಕ್ರೈಸ್ತರಾದದ್ದು ಯಾವಾಗ ಎಂಬ ವಿಷಯ ಈಗ ಗೊತ್ತಾಗಿದೆ. ತಪ್ಪು ನಮ್ಮದು. ವೇದೋಪನಿಷತ್ತುಗಳ ಸಾರವನ್ನು ಮನೆಮನೆಗೆ ಮುಟ್ಟಿಸದೇ ಹೋದ ತಪ್ಪು ನಮ್ಮವರದು. ಕ್ರೈಸ್ತನ ಬಗ್ಗೆ ನನಗೆ ಗೌರವವಿದೆ. ಆದರೆ ಅನ್ಯಮತ ಅವಲಂಬಿಸಬೇಕೆ, ನಮ್ಮ ಮತದಲ್ಲಿ ಏನೂ ಇಲ್ಲ ಅಂತ ಹೇಳಿ! ವೇದೋಪನಿಷತ್ತುಗಳು ತಮ್ಮ ಸ್ವಂತ ಆಸ್ತಿ ಎಂದು ನಮ್ಮವರು ಮಾಡಿದ್ದು ತಪ್ಪು. ದೇವಂಗಿ ರಾಮಣ್ಣಗೌಡರು ಅವರೆಲ್ಲಾ ಕ್ರೈಸ್ತರಾಗಬೇಕು ಅಂತ ತೀರ್ಮಾನ ಮಾಡಿ ಹಾರೆ ತಗೊಂಡು ನಿಂತಿದ್ರಂತೆ, ತುಳಸೀ ಕಟ್ಟೆ ಕಿತ್ತಾಕೋದಕ್ಕೆ, ಅವರ ತಮ್ಮ ನಾಗಪ್ಪಗೌಡರು- ಈಗ್ಲೂ ಇದಾರೆ - ಕೈಲಿ ಕೋವಿ ಹಿಡಿದು ನೀವು ತುಳಸಿ ಕಟ್ಟೆ ಕಿತ್ರೆ ಬಂದೂಕಿನಲ್ಲಿ ಸುಡ್ತೀನಿ ಅಂದ್ರಂತೆ. ಆಗ ಸುಮ್ಮನಾದರು ರಾಮಣ್ಣಗೌಡರು. ಅವರು ಕ್ರೈಸ್ತಮತಕ್ಕೆ ಸೇರೋದು ನಿಂತ್ಹೋಯ್ತು. ವಿಷಯಾನೆಲ್ಲಾ ಸಂಗ್ರಹಿಸ್ತಾ ಇದ್ದೀನಿ ನನ್ನ ಕಾದಂಬರಿಗೆ. " ಎಂದರು.



"ಎಷ್ಟು ದೊಡ್ಡ ಗ್ರಂಥ ಆಗಬಹುದು? " ಎಂದೆ.



"ಬಹುಶಃ ಎಂಟು ಹತ್ತು ಸಂಪುಟಗಳಾಗಬಹುದು. ಕಳೆದ ನೂರು ವರ್ಷಗಳಲ್ಲಿ ಮಲೆನಾಡಿನಲ್ಲಿ ಮೈಸೂರಿನಲ್ಲಿ, ಇಂಡಿಯಾದಲ್ಲಿ ಪ್ರಪಂಚದಲ್ಲಿ ಏನೇನಾಯ್ತು ಎಂಬುದರ ಚಿತ್ರ ಅದರಲ್ಲಿ ಬರ್ತದೆ. ಅದು ಪೂರ್ಣದೃಷ್ಟಿಯ ಮಹಾಕಾದಂಬರಿ. ಇಡೀ ಪ್ರಪಂಚದಲ್ಲಿ ಯಾವ ಭಾಷೆಯಲ್ಲಿಯೂ ಸೃಷ್ಟಿಯಾಗದಂತಹ ಕಾದಂಬರಿ. It covers the whole universe! ಟಾಲ್ಸ್ಟಾಯ್ ಅವರ War and Peace .....? ನನಗೆ ಟಾಲ್ಸ್ಟಾಯ್ ಅವರಿಗಿಂತ ಹೆಚ್ಚು ಇಮ್ಯಾಜಿನೇಷನ್ ಉಂಟು .... " ಎಂದರು.



ಅವರು ಹೀಗೆಂದಾಗ ನನಗೆ ಅನ್ನಿಸಿತು, ಮನುಷ್ಯನ ಜಂಭ ಎಷ್ಟು ಅಂತ. ಆದರೆ ಮಾತಾಡಿದ್ದು ಕೆ.ವಿ.ಪುಟ್ಟಪ್ಪ ಅಲ್ಲ, ಅಂತಹ ಹತ್ತಾರು ಪುಟ್ಟಪ್ಪಗಳನ್ನೊಳಗೊಂಡ ಮಹಾದಾರ್ಶನಿಕ ಎಂದುಕೊಂಡಾಗ ಅವರ ಮಾತಿನ ಅರ್ಥ ಆದಂತಾಯಿತು.



"ಹಿಂದೆ ಹೇಗಿತ್ತು ಎನ್ನುವ ವಿಷಯ ಬೇಕು ನನಗೆ. ನೋಡಿ ರಸ್ತೆ (ಅವರಾಗಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದರು) - ಕೊಪ್ಪ ತೀರ್ಥಹಳ್ಳಿ ರಸ್ತೆ ಯಾವಾಗಾಯ್ತು, ಬಸ್ಸು ಬಂದದ್ದು ಯಾವಾಗ- ಹೀಗೆ ನನಗೆ ಅನೇಕ ವಿಷಯಗಳು ಬೇಕು. ೧೮೬೦ ರಿಂದ ಆರಂಭವಾಗಿ ೧೯೨೦ ಕ್ಕೆ ಮುಗಿಯುತ್ತೆ ಕಾದಂಬರಿ. ಈಗಿರೋ ರಸ್ತೆ ಯಾವಾಗ ಆದದ್ದು, ಹಿಂದಿನ ಕಾಲದಲ್ಲಿ ಜನರು ಹೇಗೆ ಓಡಾಡುತ್ತಿದ್ದರು - ಇವೆಲ್ಲ ಬೇಕು. ನೀವು ನಿಮಗೆ ಗೊತ್ತಾದಷ್ಟನ್ನು ಟಿಪ್ಪಣಿ ಮಾಡಿಕೊಟ್ರೆ ಸಾಕು. " ಎಂದರು.



ವಿಷಯವನ್ನು ನನಗೆ ಹಿಂದೆಯೇ ಹೇಳಿದ್ದರು. ಆದರೆ ಏನೂ ಮಾಡಿರಲ್ಲಿಲ್ಲ. ಈಗ "ಆಗಲಿ" ಎಂದೆ. ಅರವತ್ತಕ್ಕೆ ಅರುಳು ಮರುಳು ಎನ್ನುತ್ತಾರೆ. ಆದರೆ, ಮನುಷ್ಯನಿಗೆ ವಯಸ್ಸಿನಲಿ ಎಂಟು ಹತ್ತು ಸಂಪುಟಗಳ ಮಹಾಕಾದಂಬರಿ ಬರೆಯುವ ನಿರ್ಧಾರ, ನಿಜವಾಗಿಯೂ ಆಶ್ಚರ್ಯ! ವಯಸ್ಸಿನ ಇತಿಮಿತಿ ಇವರಿಗೆ ಇದ್ದಂತೆ ಕಾಣಲಿಲ್ಲ. ಹಿಂದೊಮ್ಮೆ ಕೇಳಿಯೇ ಬಿಟ್ಟಿದ್ದೆ "ವಯಸ್ಸಾಯಿತಲ್ಲ ನಿಮಗೆ, ನಿಮ್ಮ ಮೇಧಾಶಕ್ತಿ ಹೇಗಿದೆ? ಹಿಂದೆ ಇದ್ದಂತೆಯೇ ಇದೆಯೇ?" ಎಂದು. ನಾನು ವಯಸ್ಸಿಗೆ ಹೇಗಿರುತ್ತೇನೆ ಎಂದು ತಿಳಿದುಕೊಳ್ಳುವುದೂ ನನ್ನ ಉದ್ದೇಶವಾಗಿತ್ತು. "ಓಹೋ ಇದೆ. I have not lost anything" ಎಂದಿದ್ದರು. ಈಗಲೂ ಅವರಲ್ಲಿ ಕವಿಯ ದರ್ಶನ ಹಾಗೂ ಕಲ್ಪನೆಗಳಿಗೆ ಹಾಗೂ ಕೃತಿ ರಚನೆಗೆ ಯಾವ ಅಡ್ಡಿಯೂ ಬಂದಂತಿಲ್ಲ. ನರೆತ ಕ್ರಾಪು ಮೀಸೆಗಳನ್ನು ಬಿಟ್ಟರೆ ಮತ್ತೆಲ್ಲೂ ನರೆತಂತೆ ಕಾಣುವುದಿಲ್ಲ.



"ಮಲೆನಾಡಿನ ಮದುಮಗಳು ಎಷ್ಟಕ್ಕೆ ಬಂತು? " ಎಂದೆ.



"ಮಲೆಗಳಲ್ಲಿ ಮದುಮಗಳು. ಬರೀತಾ ಇದ್ದೀನಿ. ರಾಮಾಯಣ ದರ್ಶನಂ ಬರೆಯುವಾಗಲೇ ಇದನ್ನು ಬರೆಯಲು ಆರಂಭಿಸಿದ್ದೆ. ನಲವತ್ತು ಪುಟ ಅಚ್ಚಾಗಿಯೂ ಇತ್ತು..... ಪತ್ರಿಕೇಲಿ ಪ್ರಕಟವಾಗ್ತಾನೂ ಇತ್ತು. ಆದ್ರೆ ರಾಮಾಯಣ ದರ್ಶನಂ, ಕಾದಂಬರಿ ಎರಡನ್ನೂ ಒಟ್ಟಿಗೆ ಬರೆಯುವುದು, ಎರಡರಲ್ಲಿ ಬರುವ ಭಿನ್ನ ಭಿನ್ನ ಭಾವನೆಗಳನ್ನು ಒಂದೇ ಕಾಲದಲ್ಲಿ ಮೂಡಿಸುವುದು ಸರಿಯಲ್ಲ ಎಂದು ಕಾದಂಬರಿ ನಿಲ್ಲಿಸಿದೆ. ಈಗ ಮಾಡ್ತಿದ್ದೀನಿ ಇನ್ನೂ ಒಂದು ದಿನದ ಕಥೆಯೂ ಮುಗಿದಿಲ್ಲ. ಆಗಲೇ ಮುನ್ನೂರು ಪುಟ ಆಗಿದೆ. ಪಾತ್ರಗಳನ್ನು ಸೃಷ್ಟಿ ಮಾಡಿ ಬಿಟ್ಟು ಬಿಟ್ಟಿದ್ದೀನಿ. ಅವರು ಮುಂದೆ ತಮ್ಮ ಕಥೆ ಹೇಳ್ಕೊಂಡು ಹೋಗ್ತಾರೆ. ಈಗ ನನ್ನ ಕೈಯಲ್ಲಿಲ್ಲ ಕಾದಂಬರಿ, ಅವರ ಕೈಯಲ್ಲಿದೆ, ತಾಯಿ-ಮಕ್ಕಳನ್ನು ಹೆತ್ತು ಸಲಹಿದ ನಂತರ ಅವರ ಪಾಡಿಗೆ ಅವರನ್ನು ಬಿಟ್ಟು ತಾನು ನೋಡುತ್ತಿರುವಂತೆ ಆಗಿದೆ ನನ್ನ ಕಾದಂಬರಿಯ ಪಾತ್ರಗಳ ಸೃಷ್ಟಿ, ನಾನೀಗ ಅವರ ಕೈಯಲ್ಲಿದ್ದೇನೆ. I think a poet has to be not only a creator but also humble witness of the actions of the characters he creates. ಕಾದಂಬರಿ ಎಲ್ಲಿಗೆ ಮುಟ್ಟುತ್ತೆ ಅಂತ ಹೇಳಲಾರೆ . . . " ಎಂದರು.



ಮಾತುಗಳನ್ನು ಕೇಳುತ್ತ ಸ್ವಲ್ಪ ಹೊತ್ತು ಮೌನವಾಗಿ ಕುಳಿತೆ.



ಕುವೆಂಪು "ನೆನಪಿನ ದೋಣಿಯಲ್ಲಿ ..... Reminiscences ಎಂಬ ಇನ್ನೊಂದು ಗ್ರಂಥ ಬರೆಯಬೇಕಾಗಿದೆ' ಎಂದರು.



ಕುವೆಂಪು ಅವರು ಅನಾವಶ್ಯಕವಾಗಿ ಮಾತಾಡುವವರಲ್ಲ, ಇಷ್ಟು ಮಾತಾಡಿದ್ದೆ ಹೆಚ್ಚು ಎಂದು ಅಂದುಕೊಂಡು ಅವರಿಗೆ ಬೇಜಾರು ಮಾಡಬಾರದೆಂದು ಹೊರಡುವ ಸೂಚನೆ ತೋರಿಸಿದೆ. ಅವರು ಎದ್ದು ಮನೆಯೊಳಕ್ಕೆ ಹೋಗಿ ಬಂದು ಮತ್ತೆ ಕೂತರು.



"ನೀವು ಕಡೆ ಬಂದರೆ ನಿಮಗೆ ಬೇಕಾದ ವಿಷಯ ಸಂಗ್ರಹ ಮಾಡಲು ಅನುಕೂಲವಾಗುತ್ತದೆ" ಎಂದೆ.

" ಎಲ್ಲಿ? ಸಾಧ್ಯವಾಗುವುದಿಲ್ಲ. ದೇವರು ನನಗೆ ಎಷ್ಟು ಆಯುಸ್ಸು ಕೊಟ್ಟಿದಾನೋ ಕಾಣೆ. ಮಲೆಗಳಲ್ಲಿ ಮದುಮಗಳು ಮುಗಿಸಬೇಕು. ಬೆಳಗ್ಗೆ ವಾಕಿಂಗ್, ವಾಕಿಂಗ್ನಿಂದ ಬಂದ ಮೇಲೆ ಸ್ವಲ್ಪ ಹೊತ್ತು ಮಧ್ಯಾಹ್ನದವರೆಗೆ ಬರೆಯೋ ಕೆಲಸ. ಬರೆಯುವ mood ಬರಬೇಕು. ಬಂದಾಗ ಬರೆದುಬಿಡಬೇಕು.   ಎಲ್ಲಿಯೂ ಹೋಗುವಂತಿಲ್ಲ. ಕರ್ನಾಟಕ ಯೂನಿವರ್ಸಿಟಿಯವರು ಹೋದ ವರ್ಷ ನಿಮಗೆ ಡಾಕ್ಟರೇಟ್ ಕೊಡಬೇಕಾಗಿದೆ ಬನ್ನಿ ಎಂದು ಬರೆದಿದ್ದರು. ನಾನು ಈಗ ಸಾಧ್ಯವಿಲ್ಲ. ನೀವು ಕೊಡ್ಲೇಬೇಕು ಅಂತ ಇದ್ರೆ 'In Absentia' ಕೊಡಿ ಎಂದು ತಿಳಿಸಿದೆ. ಅವರು ಇಲ್ಲ ನೀವೇ ಬರಬೇಕು ,      ಇಲ್ಲಿಯೋರೆಲ್ಲ ನಿಮ್ಮನ್ನ ನೋಡ್ಬೇಕು ಅಂತ ಇದಾರೆ ಎಂದು ಬರೆದು ಒತ್ತಾಯ ಮಾಡಿದರು. ನಾನು ಅವರಿಗೆ ಉತ್ತರ ಬರೆದೆ. ನಾಲ್ಕು ಷರತ್ತುಗಳನ್ನು ಹಾಕಿದೆ; ಒಂದನೆಯದು, ಕನ್ನಡ ಅಧಿಕೃತ ಭಾಷೆಯಾಗಬೇಕು; ಎರಡನೆಯದು, ಮೈಸೂರಿನ ಹೆಸರು ಕರ್ನಾಟಕ ಎಂದಾಗಬೇಕು; ಮೂರನೆಯದು, ರಾಜ್ಯಾಂಗದ ಪ್ರಕಾರ ರಾಜ್ಯಪಾಲರ ನೇಮಕ ಆಗಬೇಕು; ನಾಲ್ಕನೆಯದು ಬೋಧನಾ ಭಾಷೆ ಕನ್ನಡ ಆಗಬೇಕು. ಇವು ನಾಲ್ಕು ಆದ ನಂತರ ಬಂದು ಸಂತೋಷದಿಂದ ಡಾಕ್ಟರೇಟ್ ಸ್ವೀಕರಿಸುತ್ತೇನೆ ಎಂದು ಹೇಳಿದೆ. ಕನ್ನಡ ಅಧಿಕೃತ ಭಾಷೆ ಆಗಬೇಕು ಅಂತ ಕಾಗದದ ಮೇಲೇನೊ ಆಗಿದೆ. ರಾಜ್ಯಾಂಗದ ಪ್ರಕಾರ ರಾಜ್ಯಪಾಲರ ನೇಮಕವೂ ಆಗುವಂತಿದೆ. ನಮಗೆ ದಾಸ್ಯದ ಮನೋಭಾವ ಹೋಗಬೇಕಾದರೆ ಬೇರೆ ರಾಜ್ಯಪಾಲರು ಬರಬೇಕು. ಈಗ ಇರುವ ಮಹಾರಾಜರೇ ಬೇರೆ ಕಡೆ ಹೋಗಿ ಮತ್ತೆ ಬೇಕಾದರೆ ಬರಲಿ. ಆಗ ಸರಿಹೋಗುತ್ತೆ. ಆದರೆ ಹಿಂದೆ ಮಹಾರಾಜರಾಗಿದ್ದವರೆ ರಾಜ್ಯಪಾಲರಾಗಿ ಮುಂದುವರಿಯುವುದು ದಾಸ್ಯ ಮನೋವೃತ್ತಿಯ ಬದಲಾವಣೆಗೆ ಸಹಾಯವಾಗುವುದಿಲ್ಲ. ನಾವು ಸೊಂಟ ಬಗ್ಗಿಸಿ ಬೆನ್ನು ಗೂನು ಮಾಡಿಕೊಂಡಿದ್ದೀವಿ. ಗೂನು ಬೆನ್ನೇ ನಮಗೆ ಲಕ್ಷಣವಾಗಿ ಕಾಣುವಷ್ಟರಮಟ್ಟಿಗೆ ನಾವು ಅದಕ್ಕೆ ಹೊಂದಿಕೊಂಡಿದ್ದೇವೆ. ನೆಟ್ಟಗೆ ನಿಂತರೆ ಎಲ್ಲಿ ಬೆನ್ನುಲುಬು ಮುರಿಯುತ್ತೋ ಎಂದು ಹೆದರಿದ್ದೇವೆ. ನಮ್ಮ ಜನರ ಅಜ್ಞಾನ, ದಾಸ್ಯ, ಸಣ್ಣ ತನಕ್ಕೆ ಎರಡು ಕಾರಣ; ಒಂದು ಗುರುಮನೆ; ಮತ್ತೊಂದು ಅರಮನೆ. ಅರಮನೆಯೇನೋ ಹೋಯಿತು ಗುರುಮನೆ ಇನ್ನೂ ಭದ್ರವಾಗಿ ಬೇರೂರಿದೆ. ಅಜ್ಞಾನಿಗಳಿಂದ ಹಣ ಕಿತ್ತು ತಿನ್ನುವ ಮಠಗಳಿಂದ ದೇಶಕ್ಕಾಗುವ ಅನಾಹುತ ಅಷ್ಟಿಷ್ಟಲ್ಲ. .... " ಎಂದರು.

ಇಷ್ಟರಲ್ಲಿ ಕುವೆಂಪು ಅವರ ಕಿರಿಯ ಮಗಳು ಕಾಫಿ ತಂದಿಟ್ಟು ಹೋದಳು. ಅದನ್ನು ಕುಡಿಯುತ್ತಾ, ಕುಡಿಯುತ್ತಾ ಅವರಿಗೆ ಹುಮ್ಮಸ್ಸು ಬಂದಂತಾಯಿತೋ ಏನೋ " ಸ್ವಾಮಿ ವಿವೇಕಾನಂದರ ಧೀರವಾಣಿ ಹಳ್ಳಿ ಹಳ್ಳಿಗಳಿಗೆಲ್ಲ ಹರಡಬೇಕು, ಷಂಡರನ್ನು ಧೀರರನ್ನಾಗಿ ಮಾಡುವ ವಾಣಿ ಅದು. ನನ್ನ ಜೀವನದಲ್ಲೇ ಅದ್ಭುತ ಬದಲಾವಣೆ ಮಾಡಿದರು ಅವರು. ಮೊನ್ನೆ ಅವರ ಶತಮಾನೋತ್ಸವ ನಡೆಯಿತಲ್ಲ, ಅದನ್ನು ಶೃಂಗೇರಿ ಮುಂತಾದ ಮಠಗಳಲ್ಲಿ ಆಚರಿಸಿದರೇನು? ಇಲ್ಲ! ಅವರಿಗೆ ವಾಣಿಯನ್ನು ಕೇಳುವ ಆಸೆಯಿಲ್ಲ. ಕೇಳಿದರೆ ಅವರ ಕಾಣಿಕೆ ಕಾಸಿಗೇ ಚಕ್ಕರ್! " ಎಂದು ಹೇಳಿ ನಕ್ಕರು.



ಹೀಗೆಂದವರು ಎದ್ದು ಒಳಗೆ ಹೋಗಿ `ವಿವೇಕಾನಂದ ಕೃತಿ ಶ್ರೇಣಿ' ಎಂಬ ಹತ್ತು ಕನ್ನಡ ಪುಸ್ತಕಗಳನ್ನು ತಂದು ಮುಂದೆ ಪೇರಿಸಿಟ್ಟರು. ಮೊದಲನೇ ಸಂಪುಟದಲ್ಲಿ ನನ್ನ ಮುನ್ನುಡಿ ಇದೆ. ಎಲ್ಲಾ ಸೇರಿ ೬೦ ರಿಂದ ೭೦ ರೂಪಾಯಿ ಆಗಬಹುದು. ಇದರ ಒಂದೊಂದು ಕಟ್ಟು ತಕ್ಕೊಂಡ್ಹೋಗಿ ಹಳ್ಳೀಲಿ ಇಟ್ಟುಬಿಡಿ. ಯಾರಾದರೂ ಇದಕ್ಕೆ ಢಿಕ್ಕಿ ಹೊಡೆದಾಗ ಡೈನಮೈಟ್ ಸಿಡಿದು ಹೋಗುತ್ತದೆ. ಆಗ ನೋಡಿ, ಇದು ಮಾಡುವ ಕೆಲಸವನ್ನು! ಎಂದು ಕುವೆಂಪು ಮಹಾವಿಧ್ವಂಸಕ ಗೂಢಾಚಾರನಂತೆ ನುಡಿದರು. "ಭೇಷ್ ನನ್ನಪ್ಪ! " ಎಂದೆ ನನಗೆ ನಾನೇ.

ವಿವೇಕಾನಂದರ ಬಗ್ಗೆ ಅಮೇರಿಕಾ ಮಹಿಳೆಯೊಬ್ಬಳು ಬರೆದಿರುವ ಉದ್ಗ್ರಂಥವೊಂದನ್ನು ಪ್ರಸ್ತಾಪಿಸುತ್ತಾ ಅದರಲ್ಲಿ ಬರುವ anecdotes ಗಳ ಬಗ್ಗೆ ಹೇಳಿದರು. ವಿವೇಕಾನಂದರ ಪ್ರಜ್ಞೆ, ಪ್ರತಿಭೆ, ಜ್ಞಾಪಕ ಶಕ್ತಿ- ಇವುಗಳನ್ನು ವರ್ಣಿಸುತ್ತಾ "ಬೇಕಾದರೆ ಇಂಗ್ಲೀಷ್ ವಿಶ್ವಕೋಶವನ್ನು ಒಮ್ಮೆ ತಿರುವು ಹಾಕಿ ಯಾವುದನ್ನು ಕೇಳಿದರೂ ಹೇಳಬಹುದಾದಷ್ಟು ಜ್ಞಾಪಕ ಶಕ್ತಿ ಇತ್ತು. ವೇದೊಪನಿಷತ್ತುಗಳು ಅವರ ಕಂಠಗತವಾಗಿದ್ದವು. ಶಕ್ತಿ ಹೇಗೆ ಬಂತು ಅಂತ ಕೇಳಿದರೆ ಅವರು ಪಾಲಿಸಿದ ಬ್ರಹ್ಮಚರ್ಯದಿಂದ ! ಒಮ್ಮೆ ಯಾರೋ ರಾಮಕೃಷ್ಣ ಪರಮಹಂಸರನ್ನು ಕೇಳಿದರಂತೆ ಶಕ್ತಿ ಹೇಗೆ ಬರುತ್ತೆ ಅಂತ. ಅದಕ್ಕೆ ಅವರು ಹೇಳಿದರು, `ಯಾರು ಕಾಯಾ, ವಾಚಾ, ಮನಸಾ ಹನ್ನೆರಡು ವರ್ಷಗಳು ಬ್ರಹ್ಮಚರ್ಯ ಪಾಲಿಸುತ್ತಾರೋ ಅವರಿಗೆ ಇದು    ಸಿದ್ಧಿಸುವುದು' ಎಂದು. " ಇದು ನನಗೂ ಸಾಧ್ಯ, ನಿಮಗೂ ಸಾಧ್ಯ " ಎಂದರು ಕುವೆಂಪು .



Krupe: http://www.kuvempu.com/nenapu14.html

Monday, September 9, 2013

ಮಂತ್ರ ಮಾಂಗಲ್ಯ : ಕುವೆಂಪು



ಓಂ ಭೂಹೂಃ, ಓಂ ಭುವಹ. ಓಂ ಸುವಹ. ಓಂ ಮಹಹ.
ಓಂ ಜನಹ, ಓಂ ತಪಹ. ಓಗುಂ ಸತ್ಯಂ. ಓಂ ತತ್ಸವಿತುರ್ವರೇಣ್ಯಂ.
ಭರ್ಗೋ ದೇವಸ್ಯ ಧೀಮಹಿ |
ಧಿಯೋ ಯೋ ನಃ ಪ್ರಚೋದಯಾತ್‌ ||
ಓಮಾಪೋ ಜ್ಯೋತೀ ರಸೋsಮೃತಂ ಬ್ರಹ್ಮ ಭೂರ್ಭ ವಸ್ಸುವರೋಂ ||
- ಗಾಯತ್ರೀ ಮಂತ್ರ. ಋಗ್ವೇದ
ಓಂ ಭೂಲೋಕ, ಭುವಲೋಕ, ಓಂ ಸುವರ್ಲೋಕ ಮಹರ್ಲೋಕ
ಓಂ ಜನೋಲೋಕ ತಪೋಲೋಕ ಸತ್ಯಲೋಕಗಳೆಲ್ಲ
ಪರಬ್ರಹ್ಮ ರೂಪಗಳೇ ಎಂದೆಂದಿಗೂ.
ಎಲ್ಲಕ್ಕೂ ಪ್ರೇರಕನಾದ ಭಗವಂತನ ಶ್ರೀತೇಜವನ್ನು
ನಾವು ಧ್ಯಾನಿಸುವೆವು.
ಪ್ರೇರಿಸಲಾತನು ನಮ್ಮ ಬುದ್ಧಿಯ
ತತ್ವಜ್ಞಾನದ ಕಡೆಗೆ.
ಓಂ ಜಲ ಜ್ಯೋತಿ ರಸ ಅಮೃತಗಳೆಲ್ಲವು
ಪ್ರಣವಾತ್ಮಕ ಪರಬ್ರಹ್ಮವೆ.
ಭೂರ್ಭುವ ಸುವರ್ಲೋಕಗಳೆಲ್ಲವು
ಪ್ರಣವಾತ್ಮಕ ಪರಬ್ರಹ್ಮವೇ.
ಓಂ ಅಸತೋ ಮಾ ಸದ್ಗಮಯ |
ತಮಸೋ ಮಾ ಜ್ಯೋತಿರ್ಗಮಯ |
ಮೃತ್ಯೋರ್ಮಾsಮೃತಂ ಗಮಯ ||
ಓಂ ಶಾತಿಃ ಶಾತಿಃ ಶಾತಿಃ
- ಬೃಹಾದಾರಣ್ಯಕ ಉಪನಿಷದ್
ಓಂ ಅಸತ್ಯದಿಂದ ಸತ್ಯದೆಡೆಗೆ
ಕತ್ತಲಿಂದ ಬೆಳಕಿನೆಡೆಗೆ
ಸಾವಿನಿಂದ ಅಮೃತದೆಡೆಗೆ ಒಯ್ಯಿ ನನ್ನನು.
ತೇಜೋsಸಿ ತೇಜೋ ಮಯಿ ಧೇಹಿ |
ವೀರ್ಯಮಸಿ ವೀರ್ಯಂ ಮಯಿ ಧೇಹಿ |
ಬಲಮಸಿ ಬಲಂ ಮಯಿ ಧೇಹಿ |
ಓಜೋsಸಿ ಓಜೋ ಮಯಿ ಧೇಹೀ |
ಮನ್ಯುರಸಿ ಮನ್ಯುಂ ಮಯಿ ಧೇಹೀ |
ಸಹೋಸಿ ಸಹೋ ಮಯಿ ಧೇಹಿ ||
- ಶುಕ್ಲಯಜುರ್ವೇದ ಸಂಹಿತಾ
ಓಂ ಭಗವನ್‌,
ನೀನೆ ತೇಜಸ್ಸು, ಅದನ್ನು ನಮ್ಮಲ್ಲೂ ತುಂಬು
ನೀನೆ ವೀರ್ಯವು, ಅದನ್ನು ನಮ್ಮಲ್ಲೂ ತುಂಬು
ನೀನೆ ಬಲವು, ತುಂಬು ನಮ್ಮಲ್ಲೂ ಬಲವ
ನೀನೆ ಓಜವು, ತುಂಬು ನಮ್ಮಲ್ಲೂ ಓಜವ
ನೀನೆ ಸಾಹಸ, ತುಂಬು ನಮ್ಮಲ್ಲೂ ಸಾಹಸ
ನೀನೆ ಧೈರ್ಯ, ತುಂಬು ನಮ್ಮಲ್ಲೂ ಧ್ಯೇರ್ಯವ
ದೇವೀಸ್ತುತಿ
ಯಾ ದೇವೀ ಸರ್ವಭೂತೇಷು ವಿಷ್ಣುಮಾಯೇತಿ ಶಬ್ದಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ವಿಷ್ಣು ಮಾಯೆಯೆಂದು ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ಯಾ ದೇವೀ ಸರ್ವಭೂತೇಷು ಚೇತನೇತ್ಯಭಿಧೀಯತೇ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ಚೈತನ್ಯದ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ಯಾ ದೇವೀ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ಶಕ್ತಿ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ಯಾ ದೇವೀ ಸರ್ವಭೂತೇಷು ಶಾಂತಿ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ಶಾಂತಿ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ಯಾ ದೇವೀ ಸರ್ವಭೂತೇಷು ಶ್ರದ್ಧಾ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ಶ್ರದ್ಧೆಯ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ಯಾ ದೇವೀ ಸರ್ವಭೂತೇಷು ಕಾಂತಿ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವೀ ಕಾಂತಿ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ಯಾ ದೇವೀ ಸರ್ವಭೂತೇಷು ದಯಾ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ದಯೆಯ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ಯಾ ದೇವೀ ಸರ್ವಭೂತೇಷು ಮಾತೃ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ಮಾತೃ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ಸರ್ವಮಂಗಲ ಮಾಂಗಲ್ಯೆ ಶಿವೇ ಸರ್ವಾರ್ಥಸಾಧಿಕೆ |
ಶರಣ್ಯೆ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತು ತೇ ||
ಸರ್ವಮಂಗಲಮಯೀ ಶಿವೇ ಸಕಲಾಭಿಷ್ಟ ಸಾಧಿಕೇ
ಆತ್ರಯದಾತೆಯೆ, ತ್ರಿಯಂಬಕೆ, ಗೌರಿ, ನಾರಾಯಣಿ ನಿನಗಿದೋ ನಮ್ಮ ನಮಸ್ಕಾರ.
ಸೃಷ್ಟಿಸ್ಥಿತಿ ವಿನಾಶಾನಾಂ ಶಕ್ತಿಭೂತೇ ಸನಾತನೀ |
ಗುಣಾಶ್ರಯೇsಗಣಮಯೇ ನಾರಾಯಣಿ ನಮೋಸ್ತು ತೇ ||
ಸೃಷ್ಟಿಸ್ಥಿತಿ ವಿನಾಶಕಾರಣಿ, ಶಕ್ತಿಮಯೀ ದೇವಿ.
ತ್ರಿಗುಣಾತ್ಮಕೆಯಾಗಿಯೂ ಅದನ್ನು ಮೀರಿಹೆ, ನಿನಗಿದೋ ನಮ್ಮ ನಮಸ್ಕಾರ.
ಶರಣಾಗತದೀನಾರ್ತ ಪರಿತ್ರಾಣ ಪರಾಯಣೇ |
ಸರ್ವಸ್ಯಾರ್ತಿಹರೇ ದೇವಿ ನಾರಾಯಣಿ ನಮೋಸ್ತು ತೇ ||
ಶರಣು ಬಂದ ದೀನರಿಗೂ ಆರ್ತರಿಗೂ ನೀನೆ ಶರಣು ದೇವಿ
ಎಲ್ಲ ಜೀವಿಗಳ ಎಲ್ಲ ದಃಖವನ್ನೂ ಪರಿಹರಿಪ ನಿನಗಿದೋ ನಮ್ಮ ನಮಸ್ಕಾರ.
ಸರ್ವಸ್ವರೂಪೇ ಸರ್ವೇಶೇ ಸರ್ವಶಕ್ತಿಸಮನ್ವಿತೇ |
ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೇ ದೇವಿ ನಮೋಸ್ತು ತೇ ||
ಎಲ್ಲ ಶಕ್ತಿಗಳ ಪಡೆದಿರುವಾಕೆಯೆ, ಎಲ್ಲಕ್ಕೂ ಒಡತಿಯೆ,
ಎಲ್ಲವೂ ನೀನೆ ಆಗಿರುವೆ
ದುರ್ಗೆಯೆ, ದೇವಿಯೆ ಭಯವನ್ನು ತಪ್ಪಿಸು.
ನಿನಗಿದೋ ನಮ್ಮ ನಮಸ್ಕಾರ.
ದೇವೀ ಮಹಾತ್ಮ್ಯ
ಶ್ರೀಸೀತಾರಾಮಸ್ತವನ
ವರ್ಣಾನಾಮರ್ಥಸಂಘಾನಾಂ ರಸಾನಾಂ ಛಂದಸಾಮಪಿ |
ಮಂಗಲಾನಾಂ ಕರ್ತಾರೌ ವಂದೇ ವಾಣೀವಿನಾಯಕೌ ||
ವರ್ಣಕ್ಕೆ ಅರ್ಥ, ಸಮೂಹಕ್ಕೆ ರಸಛಂದಗೆಲ್ಲಕೆ
ಮಂಗಲವ ನೀಡುವ ವಾಣೀಗಣೇಶರಿಗೆ ತಲೆ ಬಾಗುತ್ತೇವೆ.
ಭವಾನೀಶಂಕರೌ ವಂದೇ ಶ್ರದ್ಧಾವಿಶ್ವಾಸರೂಪಿಣೌ |
ಯಾಭ್ಯಾಂ ವಿನಾ ಪಶ್ಯಂತಿ ಸಿದ್ಧಾಹ ಸ್ವಾಂತಸ್ಥಮೀಶ್ವರಮ್‌ ||
ಯಾರ ಕೃಪೆಯಿಲ್ಲದೆಯೆ ಸಿದ್ಧರು
ಹೃದಯದಲ್ಲಿರುವ ಶಿವನ ಕಾಣಲಾರರೊ
ಅಂಥ ಶ್ರದ್ಧೆ, ವಿಶ್ವಾಸ ರೂಪರಿಗೆ
ಶಿವ ಶಿವೆಯರಿಗೆ ನಮಸ್ಕಾರ.
ಸೀತಾರಾಮ ಗುಣಗ್ರಾಮ ಪುಣ್ಯಾರಣ್ಯ ವಿಹಾರಿಣೌ |
ವಂದೇ ವಿಶುದ್ಧ ವಿಜ್ಞಾನೌ ಕವೀಶ್ವರ ಕಪೀಶ್ವರೌ ||
ಸುಗುಣ ಸಮೂಹನೆ ಸೀತಾರಾಮನೆ ಪುಣ್ಯಕಾನನ ಸಂಚಾರೀ
ಹೇ ಕವೀಶ್ವರನೇ, ಹೇ ಕಪೀಶ್ವರನೆ, ವಿಜ್ಞಾನಾತ್ಮಕಾ ನಿನಗಿದೋ ನಮ್ಮ ನಮಸ್ಕಾರ.
ಉದ್ಭವಸ್ಥಿತಿ ಸಂಹಾರಕಾರಿಣೀಂ ಕ್ಲೇಶಹಾರಿಣೀಮ್‌ |
ಸರ್ವಶ್ರೇಯಸ್ಕರೀಂ ಸೀತಾಂ ನತೋsಹಂ ರಾಮವಲ್ಲಭಾಮ್‌ ||
ಸೃಷ್ಟಿಸ್ಥಿತಿ ಸಂಹಾರ ಕಾರಿಣಿಯೆ, ಸಕಲ ಕ್ಲೇಶ ಪರಿಹಾರಿಣಿಯೆ
ಸಕಲ ಸುಮಂಗಲ ಕಾರಣಿ ಸೀತೆಯೆ, ನಮಿಸುತ್ತೇವೆ ಶ್ರೀರಾಮಪ್ರಿಯೆ.
ವಾಣೀಸ್ತವನ
ಬ್ರಹ್ಮಸ್ವರೂಪಾ ಪರಮಾ ಜ್ಯೋತಿರೂಪಾ ಸನಾತನೀ |
ಸರ್ವ ವಿದ್ಯಾಧಿದೇವೀ ಯಾ ತಸ್ಮೈ ವಾಣ್ಯೈ ನಮೋ ನಮಃ ||
ಬ್ರಹ್ಮಸ್ವರೂಪೀಣಿಯೆ ಪರಮ ಜ್ಯೋತಿರೂಪಿಣಿಯೆ ಸನಾತನಿಯೆ ತಾಯೆ
ಎಲ್ಲ ವಿದ್ಯೆಗಳ ಮೂಲ ದೇವಿಯೇ, ತಾಯಿ ಶಾರದೆಯೇ ನಮಸ್ಕಾರ.
ಯಯಾ ವಿನಾ ಜಗತ್ಸರ್ವಂ ತತ್ವಜ್ಜೀವನ್ಮೃತಂ ಭವೇತ್‌ |
ಜ್ಞಾನಾಧಿದೇವೀ ಯಾ ತಸ್ಮೈ ಸರಸ್ವತ್ಯೈ ನಮೋ ನಮಃ ||
ಯಾರಿಲ್ಲದೆ ಜಗವೆಲ್ಲವೂ ಬದುಕಿಯೂ ಸತ್ತಂತೆಯೆ ತೋರುವುದೋ
ಜ್ಞಾನಾಧಿದೇವಿಗೆ, ತಾಯಿ ಸರಸ್ವತಿಗೆ ಇದೋ ನಮ್ಮ ನಮಸ್ಕಾರ.
ಯಯಾ ವಿನಾ ಜಗತ್ಸರ್ವಂ ಮೂಕಮುನ್ಮತ್ತವತ್ಸದಾ |
ಯಾ ದೇವೀ ವಾಗಧೀಷ್ಠಾತ್ರೀ ತಸ್ಮೈ ವಾಣ್ಯೈ ನಮೋ ನಮಃ ||
ಯಾರಿಲ್ಲದೆ ಜಗವೆಲ್ಲವೂ ಮೂಕನ ತರ ತೋರುತ್ತದೋ
ಉನ್ಮತ್ತನ ತರ ಇರುತ್ತದೋ
ಮಾತಿನ ಅಧಿದೇವಿಗೆ ಶಾರದೆಗೆ ಇದೋ ನಮ್ಮ ನಮಸ್ಕಾರ.
ಮಹಾಲಕ್ಷ್ಮೀಸ್ತುತಿ
ಮಾತರ್ಮಾತರ್ ನಮಸ್ತೇ
ದಹ ದಹ ಜಡತಾಂ
ದೇಹಿ ಬುದ್ಧಿಂ ಪ್ರಶಾಂತಾಮ್‌ ||
ನಮೋ ತಾಯೆ ನಮೋ ಮಾತೆ
ದಹಿಸು ನಮ್ಮ ಜಡತೆಯ
ನೀಡು ಬುದ್ಧಿ ಶಾಂತಿಯ.
ಸರ್ವಜ್ಞೇ ಸರ್ವವರದೇ ಸರ್ವದುಷ್ಟಭಯಂಕರೀ |
ಸರ್ವದುಃಖಹರೇ ದೇವಿ ಮಹಾಲಕ್ಷ್ಮಿ ನಮೋsಸ್ತು ತೇ ||
ಸರ್ವಜ್ಞೆಯೇ ವರದಾಯಿನೀ, ಎಲ್ಲ ದುಷ್ಟರಿಗೂ ಭಯಕಾರೀ
ಎಲ್ಲ ದುಃಖಗಳ ಪರಿಹರಿಪಾಕೆಯೆ ತಾಯಿ ಲಕ್ಷ್ಮಿಯೇ ಇದೊ ನಮನ.
ಸಿದ್ಧಿಬುದ್ಧಿಪ್ರದೇ ದೇವಿ ಭುಕ್ತಿಮುಕ್ತಿಪ್ರದಾಯಿನಿ |
ಮಂತ್ರಮೂರ್ತೇ ಸದಾದೇವೀ ಮಹಾಲಕ್ಷ್ಮಿ ನಮೋsಸ್ತು ತೇ ||
ಸಿದ್ಧಿ ಬುದ್ಧಿಗಳ ನೀಡುವಾಕೆಯೇ ಭುಕ್ತಿ ಮುಕ್ತಿಗಳ ಕರುಣಿಪಾಕೆಯೇ
ಮಂತ್ರಮೂರ್ತಿಯೇ ಮಹಾಲಕ್ಷ್ಮಿಯೇ ನಿನಗಿದೋ ನಮ್ಮ ನಮನ.
ಆದ್ಯಂತರಹಿತೇ ದೇವಿ ಆದ್ಯಶಕ್ತೇ ಮಹೇಶ್ವರೀ |
ಯೋಗಜೇ ಯೋಗಸಂಭೂತೇ ಮಹಾಲಕ್ಷ್ಮಿ ನಮೋsಸ್ತು ತೇ ||
ಆದಿರಹಿತೆಯೇ ಅಂತ್ಯರಹಿತಯೇ ಆದಿಶಕ್ತಿಯೇ ಮಹೇಶ್ವರೀ
ಯೋಗ ಸಂಭವೆಯೆ ಯೋಗದಾಯಿನಿಯೆ ಮಹಾಲಕ್ಷ್ಮಿಯೇ ಇದೊ ನಮಸ್ಕಾರ.
ಸ್ಥೂಲಸೂಕ್ಷ್ಮೇ ಮಹಾರೌದ್ರೇ ಮಹಾಶಕ್ತೇ ಮಹೋದರೇ |
ಮಹಾಪಾಪಹರೇ ದೇವಿ ಮಹಾಲಕ್ಷ್ಮಿ ನಮೋsಸ್ತು ತೇ ||
ಸ್ಥೂಲೆಯೆ ಸೂಕ್ಷ್ಮೆಯೆ, ಅತಿ ಭಯಂಕರಿಯೆ, ಮಹಾಶಕ್ತಿಯೇ ಮಹಾ ಕಾಯೆಯೇ ತಾಯಿ
ಎಲ್ಲ ಪಾಪಗಳ ಪರಿಹರಿಪಾಕೆಯೆ ಮಹಾಲಕ್ಷ್ಮಿಯೇ ಇದೋ ನಮಸ್ಕಾರ.
ಗುರುಸ್ತುತಿ
ಗುರುಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |
ಗುರುರೇವ ಪರಂ ಬ್ರಹ್ಮ ತಸ್ಮೈ ಶ್ರೀಗುರುವೇ ನಮಃ ||
ಗುರುವೆ ಬ್ರಹ್ಮನು, ಗುರುವೆ ವಿಷ್ಣುವು, ಗುರುವೆ ಈಶ್ವರನು
ಗುರುವೆ ಪರಬ್ರಹ್ಮ ಶ್ರೀ ಗರುವಿಗಿದೊ ನಮಸ್ಕಾರ.
ಅಜ್ಞಾನ ತಿವಿರಾಂಧಸ್ಯ ಜ್ಞಾನಾಂಜನ ತಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರುವೇ ನಮಃ ||
ಅಜ್ಞಾನದ ಕತ್ತಲೆಯಿಂ ಕುರುಡಾಗಿರುವೆನಗೆ
ಸುಜ್ಞಾನದ ಅಂಜನದಿಂ ಕಣ್ದೆರೆಸಿದಾತನೇ, ಶ್ರೀ ಗುರುವೆ, ನಿನಗಿದೊ ನಮ್ಮ ನಮನ.
ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಮ್‌ |
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರುವೇ ನಮಃ ||
ಚರ ಅಚರಗಳೆಲ್ಲವನ್ನೂ ಎಡೆಬಿಡದೆ ತುಂಬಿರುವಾತನ ಶ್ರೀ ಚರಣವನ್ನು
ತೋರಿದ ಶ್ರೀ ಗುರುವೆ, ನಿನಗಿದೊ ನಮ್ಮ ನಮಸ್ಕಾರ.
ಅನೇಕ ಜನ್ಮಸಂಪ್ರಾಪ್ತ ಕರ್ಮ ಬಂಧ ವಿದಾಹಿನೇ |
ಆತ್ಮಜ್ಞಾನ ಪ್ರದಾನೇನ ತಸ್ಮೈ ಶ್ರೀಗುರುವೇ ನಮಃ ||
ಆತ್ಮಜ್ಞಾನವನಿತ್ತು ಬಹು ಜನ್ಮಗಳ ಕರ್ಮ-
ಬಂಧವನು ಕಿತ್ತೊಗೆದ ಶ್ರೀ ಗುರುವೆ, ನಿನಗಿದೊ ನಮ್ಮ ನಮಸ್ಕಾರ.
ಶ್ರೀರಾಮಕೃಷ್ಣಸ್ತೋತ್ರ
ಓಂ ಹ್ರೀಂ ಋತಂ ತ್ವಮಚಲೋ ಗುಣಜಿದ್ಗುಣೇಡ್ಯಃ
ನಕ್ತಂ ದಿವಂ ಸಕರುಣಂ ತವ ಪಾದಪದ್ಮಮ್‌ |
ಮೋಹಂಕಷಂ ಬಹುಕೃತಂ ಭಜೇ ಯತೋsಹಂ
ತಸ್ಮಾತ್ತ್ವಮೇವ ತರಣಂ ಮಮ ದೀನಬಂಧೋ ||||
ಓಂ. ಹ್ರೀಂ. ನೀನು ಸತ್ಯಸ್ವರೂಪನು. ಅಚಲನು, ತ್ರಿಗುಣಗಳನ್ನು ಜಯಸಿದವನು ಮತ್ತು ಕಲ್ಯಾಣ ಗುಣಗಳ ಮೂಲಕ ಪ್ರಶಂಸನೀಯನು. ಮೋಹನಾಶಕವೂ. ಪೂಜನೀಯವೂ ಆದ ನಿನ್ನ ಅಡಿದಾವರೆಗಳನ್ನು ನಾನು ಹಗಲೂ ರಾತ್ರಿಯೂ ಭಜಿಸಲಿಲ್ಲ. ಆದುದರಿಂದ ಹೆ, ದೀನಬಂಧು, ನೀನೇ ನನಗೆ ಶರಣು.
ಭಕ್ತಿರ್ಭಗಶ್ಚ ಭಜನಂ ಭವಭೇದಕಾರಿ
ಗಚ್ಛಂತ್ಯಲಂ ಸುವಪುಲಂ ಗಮನಾಯ ತತ್ವಮ್‌ |
ವಕ್ತ್ರೋ ಧ್ರತೋsಪಿ ಹೃದಯೇ ವಿಭಾತಿ ಕಿಂಚಿತ್
ತಸ್ಮಾತ್ತ್ತ್ವಮೇವಶರಣಂ ಮಮ ದೀನಬಂಧೋ ||||
ಸಂಸಾರನಾಶಕವಾದ ಭಕ್ತಿಜ್ಞಾನೈಶ್ವರ್ಯಾದಿಗಳು ಮತ್ತು ಭಜನೆ ಇವು ಮಹಾತತ್ತ್ವವನ್ನು ಹೊಂದಲುಸಾಕು: ಆದರೆ ಇದು ನನ್ನ ಬರಿಯ ಮಾತಾಗಿ ಹೃದಯದಲ್ಲಿ ಸ್ವಲ್ಪವೂ ಹೊಳೆಯದೆ ಇರುವುದರಿಂದ ಧೀನಬಂಧು, ನೀನೇ ನನಗೆ ಶರಣು.
ತೇಜಸ್ತರಂತಿ ತರಸಾ ತ್ವಯಿ ತೃಪ್ತತೃಷ್ಣಾಃ
ರಾಗೇ ಕೃತೇ ಋತಪಥೇ ತ್ವಯಿ ರಾಮಕೃಷ್ಣೇ |
ಮರ್ತ್ಯಾಮೃತಂ ಶವ ಪದಂ ಮರಣೋರ್ಮಿನಾಶಂ
ತಸ್ಮಾತ್ತ್ವಮೇವಶರಣಂ ಮಮ ದೀನಬಂಧೋ ||||
ಹೇ ರಾಮಕೃಷ್ಣ ಋತಪಥನಾದ ನಿನ್ನಲ್ಲಿ ಅನುರಾಗವು ಉಂಟಾದರೆ ಮನುಷ್ಯರು ನಿನ್ನನ್ನು ಹೊಂದಿ ಪೂರ್ಣಕಾಮರಾಗಿ ಶೀಘ್ರವಾಗಿ ರಜೋ ಗುಣವನ್ನೂ ದಾಟುವರು: ಮರಣವೆಂಬ ಅಲೆಗಳನ್ನು ನಾಶಮಾಡುವ ನಿನ್ನ ಚರಣಗಳು ಮರ್ತ್ಯಲೋಕದಲ್ಲಿ ಅಮೃತವಾಗಿರುವುವು. ಆದುದರಿಂದ ಹೇ ದೀನಬಂಧು. ನೀನೆ ನನಗೆ ಶರಣು.
ಕೃತ್ಯಂ ಕರೋತಿ ಕಲುಷಂ ಕುಹಕಾಂತಕಾರಿ
ಷ್ಣಾಂತಂ ಶಿವಂ ಸುವಿಮಲಂ ತವ ನಾಮ ನಾಥ |
ಯಸ್ಮಾದಹಂ ತ್ವತರಣೋ ಜಗದೇಕಗಮ್ಯ
ತಸ್ವಾತ್ತ್ವಮೇವಶರಣಂ ಮಮ ದೀನಬಂಧೋ ||||
ಹೇ ನಾಥ, ಮಾಯೆಯನ್ನು ನಾಶಮಾಡುವುದೂ, ಮಂಗಳವೂ, ವಿಮಲವೂಷ್ಣಎಂಬ ಅಕ್ಷರದಿಂದ ಅಂತ್ಯವಾಗಿರುವುದ ಅದು ನಿನ್ನ ಹೆಸರು ಪಾಪವನ್ನು ಕೂಡ ಪುಣ್ಯವನ್ನಾಗಿ ಮಾಡುವುದು. ಜಗತ್ತಿಗೆ ಏಕಮಾತ್ರ ಗುರಿಯಾದ ದೀನಬಂಧು, ನನಗೆ ಯಾವ ಆಶ್ರಯವೂ ಇಲ್ಲದಿರುವುದರಿಂದ ನೀನೆ ನನಗೆ ಶರಣು.
ಓಂ ಸ್ಥಾಪಕಾಯ ಧರ್ಮಸ್ಯ ಸರ್ವಧರ್ಮ ಸ್ವರೂಪಿಣೀ |
ಅವತಾರವರಿಷ್ಠಾಯ ರಾಮಕೃಷ್ಣಾಯ ತೇ ನಮಃ ||||
ಧರ್ಮಸಂಸ್ಥಾಪಕನೂ, ಸರ್ವಧರ್ಮಸ್ವರೂಪಿಯೂ, ಅವತಾರ ಶ್ರೇಷ್ಠನೂ ಆದ ಶ್ರೀರಾಮಕೃಷ್ಣನಿಗೆ ನಮಸ್ಕಾರಗಳು.
ಶ್ರೀಶಾರದಾದೇವೀಸ್ತೋತ್ರ
ಪ್ರಕೃತಿಂ ಪರಮಾಮಭಯಾಂ ವರದಾಂ
ನರರೂಪಧರಾಂ ಜನತಾಪಹರಾಮ್
ಶರಣಾಗತಸೇವಕತೋಷಕರೀಂ
ಪ್ರಣಮಾಮಿ ಪರಾಂ ಜನನೀಂ ಜಗತಾಮ್
ಪರಮಪ್ರಕೃತಿಸ್ವರೂಪಳೂ, ಅಭಯವನ್ನು ನೀಡುವವಳೂ, ವರಗಳನ್ನು ಕೊಡುವವಳೂ, ನರರೂಪವನ್ನು ಧರಿಸಿರುವವಳೂ, ಜನರ ದಃಖವನ್ನು ಪರಿಹರಿಸುವವಳೂ, ಶರಣಾಗತರಾದ ಭಕ್ತರನ್ನು ಸಂತೋಷಪಡಿಸುವವಳೂ ಆಗಿರುವ ಜಗಜ್ಜನನಿಯನ್ನು ನಮಿಸುತ್ತೇನೆ.
ಗುಣಹೀನಸುತಾನಪರಾಧಯುತಾನ್
ಕೃಪಯಾsದ್ಯ ಸಮುದ್ಧರ ಮೋಹಗತಾನ್‌ |
ತರಣೀಂ ಭವಸಾಗರಪಾರಕರೀಂ
ಪ್ರಣಮಾಮಿ ಪರಾಂ ಜನನೀಂ ಜಗತಾಮ್
ಗುಣಹೀನರು, ಅಪರಾಧಿಗಳೂ, ಮೋಹವಶರೂ ಆದ (ನಿನ್ನ) ಮಕ್ಕಳನ್ನು, ಇಂದೇ ಕೃಪೆಮಾಡಿ, ಉದ್ಧರಿಸು; ಸಂಸಾರಸಾಗರವನ್ನು ದಾಟಿಸುವ ನಾವೆಯಂತಿರುವ ಜಗಜ್ಜನನಿಯನ್ನು ನಮಿಸುತ್ತೇನೆ.
ವಿಷಯಂ ಕುಸುಮಂ ಪರಿಹೃತ್ಯ ಸದಾ
ಚರಣಾಂಬುರುಹಾಮೃತಶಾಂತಿಸುಧಾಮ್
ಪಿಬ ಭೃಂಗಮನೋ ಭವರೋಗಹರಾಂ
ಪ್ರಣಮಾಮಿ ಪರಾಂ ಜನನೀಂ ಜಗತಾಮ್
ಎಲೈ ಮನಸ್ಸೆಂಬ ದುಂಬಿಯೆ, ವಿಷಯವೆಂಬ ಹೂವನ್ನು ಸರ್ವದಾ ತ್ಯಜಿಸಿ. ಭವರೋಗವನ್ನು ನಿವಾರಿಸುವ, ಶ್ರೀಮಾತೆಯ ಚರಣಕಮಲಗಳೆಂಬ ಅಮರವಾದ ಶಾಂತಿ-ಸುಧೆಯನ್ನು ಸೇವಿಸು; ಜಗಜ್ಜನನಿಯನ್ನು ನಾನು ನಮಿಸುತ್ತೇನೆ.
ಕೃಪಾಂ ಕುರು ಮಹಾದೇವಿ ಸುತೇಷು ಪ್ರಣತೇಷು
ಚರಣಾಶ್ರಯದಾನೇನ ಕೃಪಾಮಯಿ ನಮೋsಸ್ತು ತೇ
ಹೇ ಮಹಾದೇವಿ. ನಿನ್ನನ್ನು ನಮಸ್ಕರಿಸುವ ಮಕ್ಕಳಿಗೆ ನಿನ್ನ ಚರಣಗಳಲ್ಲಿ ಆಶ್ರಯಕೊಟ್ಟು ಕೃಪೆಮಾಡು: ಹೇ ಕೃಪಾಮಯಿ, ನಿನಗೆ ನಮಸ್ಕಾರ.
ಲಜ್ಜಾಪಟಾವೃತೇ ನಿತ್ಯಂ ಶಾರದೇ ಜ್ಞಾನದಾಯಿಕೇ
ಪಾಪೇಭ್ಯೋ ನಃ ಸದಾ ರಕ್ಷ ಕೃಪಾಮಯಿ ನಮೋsಸ್ತು ತೇ
ಲಜ್ಜಾಸ್ವಭಾವವುಳ್ಳವಳೂ, ಜ್ಞಾನವನ್ನು ಕೊಡುವವಳೂ ಆದ ಶ್ರೀ ಶಾರದೆ, ನಮ್ಮನ್ನು ಪಾಪಗಳಿಂದ ಯಾವಾಗಲೂ ರಕ್ಷಿಸು; ಹೇ ಕೃಪಾಮಯಿ, ನಿನಗೆ ನಮಸ್ಕಾರ.
ರಾಮಕೃಷ್ಣಗತಪ್ರಾಣಾಂ ತನ್ನಾಮಶ್ರವಣಪ್ರಿಯಾಮ್
ತದ್ಭಾವ ರಂಜಿತಾಕಾರಾಂ ಪ್ರಣಮಾಮಿ ಮುಹುರ್ಮುಹುಃ
ಶ್ರೀರಾಮಕೃಷ್ಣರಲ್ಲಿ ಯಾರ ಪ್ರಾಣವು ಸೇರಿರುವುದೋ, ಶ್ರೀರಾಮಕೃಷ್ಣರ ನಾಮಶ್ರವಣವು ಯಾರಿಗೆ ಪ್ರಿಯವಾದುದೋ, ಶ್ರೀರಾಮಕೃಷ್ಣರ ದಿವ್ಯಭಾವಗಳಿಂದ ಯಾರ ರೂಪಪು ರಂಜಿಸುವುದೋ, ಜಗಜ್ಜನನಿಯನ್ನು ಪುನಃ ಪುನಃ ನಮಸ್ಕರಿಸುತ್ತೇನೆ.
ಪವಿತ್ರಂ ಚರಿತಂ ಯಸ್ಸಾಃ ಪವಿತ್ರಂ ಜೀವನಂ ತಥಾ
ಪವಿತ್ರತಾಸ್ವರೂಪಿಣ್ಯೈ ತಸ್ಮೈ ಕುರ್ಮೋ ನಮೊ ನಮಃ
ಯಾರ ಶೀಲವು ಪವಿತ್ರವಾದುದೊ, ಹಾಗೆಯೇ ಯಾರ ಜೀವನವು (ಕೂಡ) ಪವಿತ್ರವಾದುದೊ. ಪವಿತ್ರತೆಯ ಸ್ವರೂಪಿಣಿಯಾದ ಶ್ರೀ ಶಾರದೆಗೆ ಪುನಃ ಪುನಃ ನಮಸ್ಕರಿಸುತ್ತೇನೆ.
ದೇವೀಂ ಪ್ರಸನ್ನಾಂ ಪ್ರಣತಾರ್ತಿಹಂತ್ರೀಂ
ಯೋಗೀಂದ್ರಪೂಜ್ಯಾಂ ಯುಗಧರ್ಮಪಾತ್ರೀಮ್
ತಾಂ ಶಾರದಾಂ ಭಕ್ರಿವಿಜ್ಞಾನದಾತ್ರೀಂ
ದಯಾಸ್ವರೂಪಾಂ ಪ್ರಣಮಾಮಿ ನಿತ್ಯಮ್
ಪ್ರಸನ್ನಳೂ, ಶರಣಾಗತರಾದವರ ದುಃಖವನ್ನು ನಾಶ ಮಾಡುವವಳೂ, ಯೋಗೀಂದ್ರರಿಂದ ಪೂಜಿಸಲ್ಪಡುವವಳೂ, ಯುಗಧರ್ಮವನ್ನು ರಕ್ಷಿಸುವವಳೂ, ಭಕ್ತಿ ವಿಜ್ಞಾನಗಳನ್ನು ಕೊಡುವವಳೂ, ದಯಾಸ್ವರೂಪಳೂ ಆಗಿರುವ ಶ್ರೀ ಶಾರದಾದೇವಿಯನ್ನು ನಿತ್ಯವೂ ನಮಿಸುತ್ತೇನೆ.
ಸ್ನೇಹೇನ ಬಧ್ನಾಸಿ ಮನೋsಸ್ಮದೀಯಂ
ದೋಷಾನಶೇಷಾನ್ಸಗುಣೀ ಕರೋಷಿ
ಅಹೇತುನಾ ನೋ ದಯಸೇ ಸದೋಷಾನ್
ಸ್ವಾಂಕೇ ಗೃಹೀತ್ವಾ ಯದಿದಂ ವಿಚಿತ್ರಮ್
ನಮ್ಮ ಮನಸ್ಸನ್ನು ಪ್ರೀತಿಯಿಂದ ಬಂಧಿಸಿರುವೆ; ನಮ್ಮ ದೋಷಗಳನ್ನು ನಿಶ್ಯೇಷವಾಗಿ ನಿರ್ಮೂಲಮಾಡಿ ನಮ್ಮನ್ನು ಗುಣವಂತರನ್ನಾಗಿ ಮಾಡಿರುವೆ; ದೋಷವಂತರಾದ ನಮಗೆ ನಿನ್ನ ಮಡಿಲಲ್ಲಿ ಆಶ್ರಯ ಕೊಟ್ಟು ಆಹೇತು ದಯೆಯನ್ನು ತೋರಿಸಿದ್ದೀಯೆ. ಇದು ವಿಚಿತ್ರ!
ಪ್ರಸೀದ ಮಾತರ್ವಿನಯೇನ ಯಾಚೇ
ನಿತ್ಯಂ ಭವ ಸ್ನೇಹವತೀ ಸುತೇಷು
ಪ್ರೇಮೈಕ ಬಿಂದುಂ ಚಿರದಗ್ಧ ಚಿತ್ತೇ
ವಿಷಿಂಚ ಚಿತ್ತಂ ಕುರು ನಃ ಸುಶಾಂತಮ್
ಎಲೈ ತಾಯಿಯೇ, ನಮ್ಮ ಮೇಲೆ ಪ್ರಸನ್ನಳಾಗು ಎಂದು ವಿನಯ ಪೂರ್ವಕವಾಗಿ ಬೇಡುತ್ತೇನೆ; ಮಕ್ಕಳ ಮೇಲೆ ಯಾವಾಗಲೂ ಸ್ನೆಹವುಳ್ಳವಳಾಗು; ಚಿರಕಾಲದಿಂದ ಬೆಂದು ಬಳಲಿದ ನಮ್ಮ ಚಿತ್ತದಲ್ಲಿ ಒಂದು ಪ್ರೇಮ ಬಿಂದುವನ್ನು ಚಿಮುಕಿಸಿ. ನಮ್ಮ ಚಿತ್ತವನ್ನು ಶಾಂತಗೊಳಿಸು.
ಜನನೀಂ ಶಾರದಾಂ ದೇವೀಂ ರಾಮಕೃಷ್ಣಂ ಜಗದ್ಗುರುಮ್
ಪಾದಪದ್ಮೇ ತಯೋಃ ಶ್ರೀತ್ವಾ ಪ್ರಣಮಾಮಿ ಮುಹುರ್ಮುಹುಃ
ಜನನಿಯಾದ ಶ್ರೀಶಾರದಾದೇವಿ ಮತ್ತು ಜಗದ್ಗುರುವಾದ ಶ್ರೀರಾಮಕೃಷ್ಣಇವರ ಚರಣಕಮಲಗಳನ್ನು ಆಶ್ರಯಿಸಿ, ಪುನಃ ಪುನಃ ನಮಸ್ಕರಿಸುತ್ತೇನೆ.
ಸಮಾನೋ ಮಂತ್ರಸ್ಸಮಿತಿಸ್ಸಮಾನೀ
ಸಮಾನಂ ಮನಸ್ಸಹ ಚಿತ್ತಮೇಷಾಮ್‌ ||
ಸಮಾನೀ ಆಕೂತಿಸ್ಸಮಾನಾ ಹೃದಯಾನಿ ವಃ |
ಸಮಾನಮಸ್ತು ವೋ ಮನೋ ಯಥಾ ವಸ್ಸುಸಹಾಸತಿ ||
- ಋಗ್ವೇದ
ಸಮಾನವಾಗಲಿ ನಿಮ್ಮ ಪ್ರಾರ್ಥನೆ
ಸಮಾನವಾಗಲಿ ನಿಮ್ಮ ಧ್ಯೇಯ
ಸಮಾನವಾಗಲಿ ಉದ್ದೇಶ.
ಸಮಾನವಾಗಲಿ ಕೆಲಸ ಕಾರ್ಯ
ಸಮಾನವಾಗಲಿ ಆಶೋತ್ತರಗಳು.
ಒಂದೇ ಆಗಲಿ ನಿಮ್ಮ ಹೃದಯ
ಒಂದೇ ಆಗಲಿ ನಿಮ್ಮ ಗುರಿ ಗತಿ
ಮತ್ತೆ
ಪೂರ್ಣವಾಗಲಿ ನಿಮ್ಮ ಶುಭದೈಕ್ಯ.

Courtesy _ Karthik Zen

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...