Showing posts with label ಶ್ರೀವತ್ಸ ಜೋಶಿ. Show all posts
Showing posts with label ಶ್ರೀವತ್ಸ ಜೋಶಿ. Show all posts

Saturday, July 5, 2014

ಈಶ್ವರ ಸಣಕಲ್ಲ ಅವರ ಪ್ರಖ್ಯಾತ ಕವಿತೆ "ಕೋರಿಕೆ" - ಶ್ರೀವತ್ಸ ಜೋಶಿ

ನಿಮ್ಮ ಮೆಚ್ಚಿನ FB ಪೋಸ್ಟುಗಳು...
====================
ಈ ವಾರ, ಕೋರಿಕೆಗೆ ಕೋರಿಕೆ! ಅಂದರೆ, ಈಶ್ವರ ಸಣಕಲ್ಲ ಅವರ ಪ್ರಖ್ಯಾತ ಕವಿತೆ "ಕೋರಿಕೆ" ಪ್ರಕಟಿಸುವಂತೆ ಕೋರಿಕೆ ಎಂದು ಅರ್ಥ  ಪತ್ರ ಬರೆದವರು ಶಿಕಾಗೋದಿಂದ Anil Deshpande.

ಇದು ಮನಮಿಡಿಯುವ ಪದ್ಯ. ನಾನು ಕಲಿತ ಸಿಲೆಬಸ್‌ನಲ್ಲಿರಲಿಲ್ಲವಾದರೂ ಬೇರೆಬೇರೆ ವರ್ಷಗಳಲ್ಲಿ ಕನ್ನಡ ಪಠ್ಯಪುಸ್ತಕಗಳನ್ನು ಅಲಂಕರಿಸಿ, ವಿದ್ಯಾರ್ಥಿಗಳ ಮನದಾಳದಲ್ಲಿ ಅಚ್ಚಳಿಯದೇ ನಿಂತಿರುವ ಕವನಕುಸುಮಗಳಲ್ಲಿ ಇದೊಂದು. ಪ್ರಪಂಚದಲ್ಲಿ ಈಗೀಗ ಪ್ರತಿಯೊಬ್ಬರೂ ತನ್ನ ಲಾಭ, ತನ್ನ ಸಂಪತ್ತು, ತನ್ನ ಸುಖಗಳಲ್ಲಷ್ಟೇ ಮಗ್ನರಾಗಿರುವಾಗ ಕವಿಯ ಆಶಯ ತದ್ವಿರುದ್ಧ! ತನಗೆ ಕಷ್ಟಗಳಿರಲಿ, ಬಡತನವಿರಲಿ ಚಿಂತೆಯಿಲ್ಲ, ಆದರೆ ಜಗತ್ತು ಸುಖವಾಗಿರಲಿ ಎಂಬ ಹಂಬಲ ಕವಿಯದು. ಈಶ್ವರ ಸಣಕಲ್ಲರವರು ಇದನ್ನು "ಅಕ್ಷರಗಳನ್ನಲಂಕರಿಸುತ್ತಾ ನಾನೂ ಒಂದು ಕವನ ಬರೆದೆ, ಫೇಸ್‌ಬುಕ್‌ನಲ್ಲಿ ಹತ್ತಾರು ಲೈಕುಗಳನ್ನು ಗಿಟ್ಟಿಸಿದೆ" ಎಂಬ ರೀತಿಯಲ್ಲಿ ಬರೆದದ್ದಲ್ಲ. ಅವರು ಬರೆದಂತೆಯೇ ಬದುಕಿದವರು, ಬದುಕಿದಂತೆಯೇ ಬರೆದವರು. ಕಸ್ತೂರಿನಿವಾಸ ಚಿತ್ರಗೀತೆಯಲ್ಲಿ ಚಿ.ಉದಯಶಂಕರ್ ಬರೆದ "ಮೈಯನೆ ಹಿಂಡಿ ನೊಂದರೂ ಕಬ್ಬು ಸಿಹಿಯ ಕೊಡುವುದು... ತೇಯುತಲಿದ್ದರೂ ಗಂಧದ ಪರಿಮಳ ತುಂಬಿ ಬರುವುದು... ತಾನೇ ಉರಿದರೂ ದೀಪವು ಮನೆಗೆ ಬೆಳಕ ಕೊಡುವುದು...’ ಎಂಬ ಸಾಲುಗಳಲ್ಲಿನ ಕಬ್ಬು, ಗಂಧ, ದೀಪಗಳಂತೆಯೇ ಈ ಕವಿಯ ಆತ್ಮ. ತನಗೆ ತೊಂದರೆಯಾದರೂ ಸರಿಯೇ, ಜಗವು ನಗುನಗುತಿರಲಿ ಎಂಬ ನಿವೇದನೆ.

ಸ್ನೇಹಿತ ಅನಿಲ ದೇಶಪಾಂಡೆಯವರು ಈ ಕೋರಿಕೆ ಸಲ್ಲಿಸಿರುವುದು ಅರ್ಥಪೂರ್ಣವೇ ಆಗಿದೆ. ಅವರು ‘SEWA’ (Selfless Efforts for Welfare of All. www.sewausa.org ) ಎಂಬ ಸ್ವಯಂಸೇವಾ ಸಂಸ್ಥೆಯ ಶಿಕಾಗೋ ಶಾಖೆಯ ಸಕ್ರಿಯ ಕಾರ್ಯಕರ್ತ. ಈ ಕವಿತೆಯು ಅವರ ಮೇಲೆ ಪ್ರಭಾವ ಬೀರಿರುವುದು, ಮತ್ತು, ಇನ್ನಷ್ಟು ಸಮಾನಮನಸ್ಕರ ಮೇಲೆ ಇದು ಪ್ರಭಾವ ಬೀರಲಿ ಎಂದು ಅವರು ಬಯಸಿರುವುದು ಸಹಜವೇ ಆಗಿದೆ. ಇಷ್ಟು ಒಳ್ಳೆಯ, ಭಾವಪೂರ್ಣ ಕವಿತೆಯನ್ನು ನೆನಪಿಸಿದ್ದಕ್ಕೆ ಅನಿಲ್ ಅವರಿಗೆ ಧನ್ಯವಾದಗಳು.

* * *
ಇನ್ನೋರ್ವ ಹಿರಿಯಸ್ನೇಹಿತ ಪುತ್ತೂರಿನ Moorthy Deraje ಅವರ ಸಂಗ್ರಹದಿಂದ, ಗಾಯಕ ಗರ್ತಿಕೆರೆ ರಾಗಣ್ಣ ಅವರ ಧ್ವನಿಯಲ್ಲಿ ಈ ಕವಿತೆಯನ್ನು ಇಲ್ಲಿ ಕೇಳಬಹುದು:
https://soundcloud.com/srivathsajoshi/mbnaooaoyiok

* * *
"ಕೋರಿಕೆ" - ಈಶ್ವರ ಸಣಕಲ್ಲ ಅವರ ಪದ್ಯದ ಸಾಹಿತ್ಯ:

ಜಗವೆಲ್ಲ ನಗುತಿರಲಿ!
ಜಗದಳುವು ನನಗಿರಲಿ!
ನಾನಳಲು, ಜಗವೆನ್ನನೆತ್ತಿಕೊಳದೇ?
ನಾ ನಕ್ಕು, ಜಗವಳಲು ನೋಡಬಹುದೇ?

ತೆರವಾಗಿ ನನ್ನೆದೆಯು,
ಧರೆಯೆದೆಯು ಉಕ್ಕಿರಲಿ!
ಧರೆಯೊಳಗೆ ತೇಲಿಸುವೆನೆನ್ನೆದೆಯನು!
ಧರೆ ಬತ್ತಿ, ಎನ್ನೆದೆಯು ಉಕ್ಕಲೇನು?

ಪೊಡವಿಯೈಸಿರಿವಡೆದು,
ಬಡತನವು ನನಗಿರಲಿ
ಕೈಯೊಡ್ಡೆ ಪೊಡವಿಯೆನಗಿಕ್ಕದೇನು?
ಪೊಡವಿಯೇ ಮೈಯಳಿಯೆ, ಮಾಡಲೇನು?

ವಿಶ್ವವನು ತುಂಬಿರುವ
ಈಶ್ವರನೆ ಅಳತೊಡಗೆ,
ಸೈತಿಡಲು, ಸೈಪಿಡಲು ಬರುವನಾವಂ?
’ಹೇ ತಂದೆ’,ಎನಲೆನ್ನನವನೆ ಕಾವಂ!

* * *
ಕವಿ ಕೃತಿ ಪರಿಚಯ:
ಈಶ್ವರ ಸಣಕಲ್ಲ (1906-1984): ’ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ…’ ಎಂದು ಹಾಡಿ, ಸಂಭಾವಿತ ಕವಿ ಎಂಬ ಅಗ್ಗಳಿಕೆಗೆ ಪಾತ್ರರಾಗಿ ಬದುಕಿನುದ್ದಕ್ಕೂ ಕಷ್ಟಗಳನ್ನೇ ಉಂಡ ಈಶ್ವರ ಸಣಕಲ್ಲರು ಹುಟ್ಟಿದ್ದು ಜಮಖಂಡಿ ತಾಲ್ಲೂಕಿನ ರಬಕವಿಯಲ್ಲಿ. ತಂದೆ ಮಹಾರುದ್ರಪ್ಪ, ತಾಯಿ ನೀಲಮ್ಮ. ನೇಕಾರರ ಕುಟುಂಬ. ಪ್ರಾರಂಭಿಕ ವಿದ್ಯಾಭ್ಯಾಸ ತಾಯಿಯ ತೌರೂರಾದ ಯಾದವಾಡ, ರಬಕವಿಯಲ್ಲಿ. ಬಾಲ್ಯದಿಂದಲೇ ಓದಿನಲ್ಲಿ ಆಸಕ್ತಿ, ಪ್ರೌಢಶಿಕ್ಷಣ ಬೆಳಗಾವಿಯ ಜಿ.ಎ. ಹೈಸ್ಕೂಲ್‌ನಲ್ಲಿ. ಆಗಲೇ ಹಲವಾರು ಕವನಗಳ ರಚನೆ. ಶಿವಾನಂದ ಸ್ವಾಮಿಗಳವರ "ಬ್ರಹ್ಮಚರ‍್ಯವೇ ಜೀವನ, ವೀರ‍್ಯನಾಶವೇ ಮೃತ್ಯು" ಗ್ರಂಥದ ಕನ್ನಡಾನುವಾದ ಮಾಡಿದ್ದು 22ರ ಹರೆಯದಲ್ಲಿ. 1929ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣ. ಕೊಲ್ಲಾಪುರದ ರಾಜಾರಾಮ ಕಾಲೇಜಿಗೆ ಸೇರ‍್ಪಡೆ. ಹಣಕಾಸಿನ ತೊಂದರೆಯಿಂದ ಕಾಲೇಜು ಶಿಕ್ಷಣಕ್ಕೆ ಸಂಚಕಾರ. ಉದ್ಯೋಗಕ್ಕೆ ಸೇರಿದ್ದು ರಬಕವಿಯಲ್ಲಿ . ಮಿತ್ರ ಸಮೂಹ ಖಾದಿ ಭಂಡಾರ, ನಂತರ ವಚನ ಪಿತಾಮಹ ಫ.ಗು.ಹಳಕಟ್ಟಿಯವರ ‘ಶಿವಾನುಭವ’ ಮತ್ತು ನವಕರ್ನಾಟಕದ ಪತ್ರಿಕೆಯ ಪ್ರಕಟಣೆಯ ಸಹಾಯಕರಾಗಿ. 1934ರಲ್ಲಿ ಮೊದಲ ಕವನ ಸಂಕಲನ ‘ಕೋರಿಕೆ’ಪ್ರಕಟ. ನಂತರ ಉದ್ಯೋಗಕ್ಕೆ ಸೇರಿದ್ದು ಹರ್ಡೇಕರ್ ಮಂಜಪ್ಪನವರ ಆಲಮಟ್ಟಿ ಆಶ್ರಮದಲ್ಲಿ. ಶರಣ ಸಂದೇಶ, ಖಾದಿ ಗ್ರಾಮೋದ್ಯೋಗ ಪತ್ರಿಕೆಗಳ ಸಂಪಾದಕತ್ವ, ಬೆಳಗಾವಿಯ ಗ್ರಾಮಸೇವಕ ಪತ್ರಿಕೆಯ ಉಪಸಂಪಾದಕ, ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ. ಹಿರೇಮಠರವರಿಂದ ಬಂದ ಕರೆ, ಸಂಶೋಧನೆ ಶಾಖೆಯಲ್ಲಿ 1962ರಿಂದ 1972ರವರೆಗೂ ಸೇವೆ. ಈಶ್ವರ ಸಣಕಲ್ಲ ಸತ್ಯ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದರು. ನಿಷ್ಠುರವಾದಿಗಳಾಗಿದ್ದರು. ಆ ಕಾರಣದಿಂದಾಗಿಯೇ ಅವರು ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಆಗಲಿಲ್ಲ. ಮತ್ತು ಸಾಂಸಾರಿಕ ಜೀವನದಲ್ಲಿಯೂ ನೆಮ್ಮದಿ ಕಾಣಲಿಲ್ಲ. ಬಡತನದ ಬೇಗೆಯಿಂದ ಹೊರಬರಲೂ ಇಲ್ಲ. ಬದುಕಿನ ಉದ್ದಕ್ಕೂ ಬಡತನವನ್ನೇ ಹಾಸಿ, ಬಡತನವನ್ನೇ ಹೊದ್ದು ಬದುಕು ನೂಕಿದರು. ಒಟ್ಟು ಸುಮಾರು ಇಪ್ಪತ್ತು ಕೃತಿ ಪ್ರಕಟಿತ. ‘ಬಟ್ಟೆ’ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ, 1980ರ ಬೆಳಗಾವಿ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ. ಸಣಕಲ್ಲರ ಉತ್ತಮ ಬರವಣಿಗೆಯಿಂದಾಗಿ ರಾಷ್ಟ್ತ್ರಕವಿ ಕುವೆಂಪು ಮನದಲ್ಲಿಯೂ ಅವರು ಸ್ಥಾನ ಪಡೆದಿದ್ದರು. ಸಾಮಾನ್ಯವಾದುದಾವುದನ್ನೂ ಒಪ್ಪಿಕೊಳ್ಳದ ಕುವೆಂಪು ಅವರು ತಮ್ಮ ಆತ್ಮ ಕಥೆಯಲ್ಲಿ ಈಶ್ವರ ಸಣಕಲ್ಲರ ಬಗ್ಗೆಯೂ ಉಲ್ಲೇಖಿಸಿದ್ದಾರನ್ನುವುದು ಸಾಮಾನ್ಯ ಸಂಗತಿಯಲ್ಲ.























ಶ್ರೀವತ್ಸ ಜೋಶಿ


Saturday, June 28, 2014

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ನಿಮ್ಮ ಮೆಚ್ಚಿನ FB ಪೋಸ್ಟುಗಳು...
====================
ಈ ವಾರದ ಕೋರಿಕೆ ತುಸು ವಿಭಿನ್ನ, ವಿಶಿಷ್ಟ. ಎರಡು ಕಾರಣಗಳಿಂದ. ಒಂದನೆಯದಾಗಿ, ಇದುವರೆಗಿನ ಕೋರಿಕೆಗಳೆಲ್ಲ ಇದ್ದದ್ದು ’ಪದ್ಯ’ಗಳ ಪೂರ್ಣಸಾಹಿತ್ಯ ಪ್ರಕಟಿಸುವುದಕ್ಕೆ. ಈ ಸಲ ಪದ್ಯ ಅಲ್ಲ, ಗದ್ಯ. ಅದೂ ಯಾವುದೆಂದರೆ ’ಪದ್ಯಂ ವಧ್ಯಂ ಗದ್ಯಂ ಹೃದ್ಯಂ’ ಎಂದು ಗದ್ಯವನ್ನು ಕೊಂಡಾಡುವ ಗದ್ಯ, ಅದೇ ಮುದ್ದಣ-ಮನೋರಮೆಯ ಜಗದ್ವಿಖ್ಯಾತ ಸರಸಸಲ್ಲಾಪ ಸಂಭಾಷಣೆ. ಹಳಗನ್ನಡದಲ್ಲಿರುವಂಥ ಗದ್ಯ. ಇದು, ನಮಗಿಂತ ಹಿಂದಿನ ಬ್ಯಾಚ್‌ನಲ್ಲಿ ಏಳನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಮೊದಲನೆಯ ಪಾಠವಾಗಿತ್ತು. ಇದರಲ್ಲಿ ಬರುವ ಕೆಲವೆಲ್ಲ ವಾಕ್ಯಗಳು- "ಪದ್ಯಂ ವಧ್ಯಂ ಗದ್ಯಂ ಹೃದ್ಯಂ", "ನೀರಿೞಯದ ಗಂಟಲೊಳ್ ಕಡುಬಂ ತುಱುಕಿದಂತಾಯ್ತು", "ಕನ್ನಡ ಕತ್ತುರಿಯಲ್ತೆ." "ಕರ್ಮಣಿಸರದೊಳ್ ಚೆಂಬವಳಮಂ ಕೋದಂತಿರೆ" ಮುಂತಾದುವು ನುಡಿಗಟ್ಟುಗಳಾಗಿ ಕನ್ನಡ ಜನಮಾನಸದಲ್ಲಿ ಅಚ್ಚಳಿಯದೆ ನಿಂತಿವೆ. ವಿದ್ವತ್ಪೂರ್ಣ ಭಾಷಣಗಳನ್ನೂ ಲೇಖನಗಳನ್ನೂ ಮುತ್ತುಹವಳಗಳಂತೆ ಅಲಂಕರಿಸಿವೆ.

ಹಾಂ. ಹೇಳೋದೇ ಮರೆತೆ. ಈ ವಾರದ ಕೋರಿಕೆ ಸಲ್ಲಿಸಿದವರು ಬೆಂಗಳೂರಿನಿಂದ Jyothi Umesh. ಅವರು ತುಂಬಾ ಹಿಂದೆಯೇ ಒಮ್ಮೆ ಇದರ ಬಗ್ಗೆ ಕೇಳಿದ್ದರು. ಮತ್ತೆ ಮೊನ್ನೆಯಷ್ಟೇ ನಾನು ಬೇರೆ ಒಂದು ಪೋಸ್ಟ್‌ನಲ್ಲಿ ’ಮುದ್ದಣ ಮನೋರಮೆ’ಯರ ಪ್ರಸ್ತಾವ ಮಾಡಿದಾಗ ಮತ್ತೆ ನೆನಪಿಸಿಕೊಂಡು ಯಾವಾಗ ಪ್ರಕಟಿಸುತ್ತೀರಿ ಎಂದು ಕೇಳಿದರು. ಬಹುಶಃ ಅವರು ಉಮೇಶ್ ಅವರೊಡನೆ ಈ ಸಂಭಾಷಣೆಯನ್ನು ಕಂಠಪಾಠ ಮಾಡಿ ಶ್ರಾವಣ ಮಾಸದ ಸೋನೆಮಳೆ ಸುರಿಯುವ ಒಂದು ಮುಸ್ಸಂಜೆಯಲ್ಲಿ ಸಂಭಾಷಿಸುತ್ತ ವಿಶಿಷ್ಟ ಅನುಭೂತಿ ಪಡೆಯಬೇಕೆಂದಿದ್ದಾರೋ ಏನೊ.

ಈ ಪಠ್ಯಭಾಗವು ನನಗೆ ತಮಿಳುನಾಡು ಸರಕಾರದ ಕನ್ನಡ ಮಾಧ್ಯಮ ಪಠ್ಯಪುಸ್ತಕಗಳ ಪೈಕಿ ಅಲ್ಲಿನ ಹತ್ತನೇ ತರಗತಿಯ ಪುಸ್ತಕದಲ್ಲಿ ಸಿಕ್ಕಿತು. ಅದರ pdfನಿಂದ ಈ ಪಾಠದ ಎರಡು ಪುಟಗಳನ್ನು image ರೀತಿಯಲ್ಲಿ ಇಲ್ಲಿ ಹಂಚಿಕೊಂಡಿದ್ದೇನೆ. ಅಂತೆಯೇ, ಆಸಕ್ತರಿಗೆ ಸಂಗ್ರಹಕ್ಕೆ ಅನುಕೂಲವಾಗಲಿ ಎಂದು ಯುನಿಕೋಡ್ ಆವೃತ್ತಿಯಲ್ಲಿ ಮೂಲ ಪಾಠವನ್ನು, ಜೊತೆಯಲ್ಲೇ ನನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಹೊಸಗನ್ನಡ ಅರ್ಥಾನುವಾದವನ್ನೂ ಸೇರಿಸಿ ಈ ಕೆಳಗೆ ಪ್ರಕಟಿಸಿದ್ದೇನೆ. ಇವತ್ತು ಆಷಾಢಸ್ಯ ಪ್ರಥಮದಿವಸೇ ಯಕ್ಷನ ವಿರಹವೇದನೆ ಅಲ್ಲ, ದಂಪತಿಯ ಸರಸಸಂಭಾಷಣೆ...

* * *
ಮುದ್ದಣ ಮನೋರಮೆಯ ಸಲ್ಲಾಪ

ಈ ತೆಱದೆ ಕಾಡುಂ ನಾಡುಂ ಮನೋಜ್ಞಮಾಗೆ ಸಂಪ್ರಾಪ್ತಮಾದ ವರ್ಷಾಕಾಲದೊಳೊಂದು ದೆವಸಂ ಬೈಗುಂಬೊೞನೊಳೆಂದಿನಂತಿರೋಲಗಂ ಪರಿಯೆ, ಕಬ್ಬಿಗರ ಬಲ್ಲಹಂ ಮುದ್ದಣನರಮನೆಯಿಂ ಪೊಱಮಟ್ಟು ನೆರೆವೀದಿವಿಡಿದು ಪೊರೆವೀಡಿಂಗೆಯ್ತರ್ಪುದುಮಾತನ ಮಡದಿ ಮನೋರಮೆ ದೂರದೆ ಕಂಡೆೞ್ದು ಇದಿರ್ವಂದು ಕಾಲ್ಗೆ ನೀರಂ ನೀಡಿ ಮತ್ತಂ ಕಯ್ವಿಡಿದೊಳಚೌಕಿಗೆಗುಯ್ದು ಮಣೆಯಿತ್ತು ಕುಳ್ಳಿರಿಸಿ ಒಡನೆಯೆ ತನಿವಣ್ಣಂ ತಿನಲಿತ್ತು ಕೆನೆವಾಲಂ ಕುಡಿವೊಡಿತ್ತು ಉಪಚರಿಸುತಿರ್ದಳ್. ಈವುಪಚಾರದಿನಾತನ ಪಸಿವುಂ ಬೞಲ್ಕೆಯುಂ ಮುಗಿಯೆ, ಕೆಳದಿ ನಱುದಂಬುಲಮಂ ಸವಿಯಲ್ಕೆಂದು ಮಡಿದೀಯುತುಮಿರೆ, ಇಂತು ಸುಖಸಲ್ಲಾಪಂಗೊಳುತಿರ್ದರ್, ಅದೆಂತೆನೆ.

[ಈ ರೀತಿ ಕಾಡು ನಾಡೆಲ್ಲ ಮುದಗೊಳ್ಳುವಂತೆ ಒದಗಿಬಂದ ಮಳೆಗಾಲದಲ್ಲಿ ಒಂದು ದಿನ ಸಂಜೆಹೊತ್ತು ಎಂದಿನಂತೆ ರಾಜಸಭೆ ಮುಗಿದು ಕವಿಗಳ ಗುರು ಮುದ್ದಣನು ಅರಮನೆಯಿಂದ ಹೊರಟು ನೇರವಾಗಿ ಬೀದಿಗುಂಟ ಬಂದು ತನ್ನ ಮನೆಯನ್ನು ತಲುಪಲು, ಆತನ ಹೆಂಡತಿ ಮನೋರಮೆ ದೂರದಿಂದಲೇ ಅವನನ್ನು ನೋಡಿ ಇದಿರುಗೊಂಡು ಕಾಲುತೊಳೆಯಲು ನೀರು ಕೊಟ್ಟು ಮತ್ತೆ ಕೈಹಿಡಿದು ಒಳಚೌಕಿಯೊಳಕ್ಕೊಯ್ದು ಮಣೆ ಕೊಟ್ಟು ಕುಳ್ಳಿರಿಸಿ ಆಮೇಲೆ ಪಕ್ವವಾದ ಹಣ್ಣುಗಳನ್ನು ತಿನ್ನಲಿಕ್ಕೆ ಕೊಟ್ಟು, ಕಾಯಿಸಿ ಕೆನೆಗೂಡಿದ ಹಾಲನ್ನು ಕುಡಿಯಲಿಕ್ಕೆ ಕೊಟ್ಟು ಉಪಚರಿಸತೊಡಗಿದಳು. ಈ ಉಪಚಾರದಿಂದ ಆತನ ಹಸಿವು ಬಾಯಾರಿಕೆ ತೀರಿ, ಆಮೇಲೆ ಹೆಂಡತಿ ಕೊಟ್ಟ ಎಲೆ‌ಅಡಿಕೆಯನ್ನೂ ಸವಿದು ಈರೀತಿ ಸುಖಸಲ್ಲಾಪದಲ್ಲಿದ್ದುದನ್ನು ಏನೆಂದು ಬಣ್ಣಿಸಲಿ!

ಮನೋರಮೆ: (ಮೆಲ್ನುಡಿಯಿಂ) ನೋೞ್ಪುದೀ ಪಗಲ್ಗಳೆಂತೊ ಪಿರಿಯುವು ! ಪಗಲುಮಿರುಳುಂ ಸುರಿವ ಬಲ್ಸೋನೆಯ ಜಿನುಂಗಿನತ್ತಣಿನೆನ್ನ ಬಗೆಯುಂ ಬೇಸತ್ತುದು. ಅಂತದಱನೇನಾನುಮೊಂದು ನಲ್ಗತೆ ಯಂ ಪೇೞ!
[(ಪಿಸುಮಾತಿನಿಂದ) ನೋಡ್ತಿದ್ದೇನೆ, ಹಗಲುಗಳು ದೀರ್ಘವಾಗಿವೆ. ಹಗಲೂರಾತ್ರಿಯೂ ಸುರಿಯುವ ಸೋನೆಮಳೆ ಜಿನುಗುತ್ತಿರುವುದರಿಂದ ನನ್ನ ಮನಸ್ಸು ಬೇಸತ್ತಿದೆ. ಎಂಬ ಕಾರಣಕ್ಕಾಗಿ ಯಾವುದಾದರೂ ಒಳ್ಳೆಯದೊಂದು ಕಥೆ ಹೇಳಿ!]

ಮುದ್ದಣ: ಪ್ರಾಣೇಶ್ವರಿ ! ತಡೆಯೇಂ ! ಇನಿತೊಂದು ಬಯಕೆ ತಲೆದೋಱೆ ಆವ ಗಹನಂ? ಆದೊಡಮಾವ ನಲ್ಗತೆಯಂ ಪೇೞ್ವೆಂ ? ಏಂ ಭೋಜಪ್ರಬಂಧಂ ? ವಿಕ್ರಮವಿಜಯಂ, ಮಹಾವೀರಚರಿತಂ ?
[ ಪ್ರಾಣೇಶ್ವರಿ, ಅಡ್ಡಿಯೇನು? ನೀನು ಇಷ್ಟೊಂದು ಆಸೆಪಟ್ಟಿರುವಾಗ ಅದೇನು ಕಷ್ಟ? ಆದರೆ ಯಾವ ಒಳ್ಳೆಯಕಥೆ ಹೇಳಲಿ? ಭೋಜಪ್ರಬಂಧವೇ? ವಿಕ್ರಮವಿಜಯವೇ? ಮಹಾವೀರಚರಿತೆಯೇ?]

ಮನೋರಮೆ: ಇಸ್ಸಿ ! ಇವರೊಳೆನಗೞ್ಕಱಲ್ಲಂ; ಉೞದೊಡಮೞದೊಡಂ ಬಟ್ಟೆದೋಱುಪ ರಸಭರಿತಂ ಚರಿತಮೈಸೆ.
[ಛೀ. ಇವೆಲ್ಲ ನನಗಲ್ಲ. ಉಳಿದರೂ ಅಳಿದರೂ ದಾರಿತೋರುವ ರಸಭರಿತ ಚರಿತೆಯೇ ಇರಲಿ.]

ಮುದ್ದಣ: ನಿನಗಾವ ರಸದೊಳಿಷ್ಟಂ ? ಶೃಂಗಾರರಸದೊಳೆ ? ವೀರರಸದೊಳೆ ? ಹಾಸ್ಯರಸದೊಳೆ ?
[ನಿನಗೆ ಯಾವ ರಸದಲ್ಲಿ ಇಷ್ಟ? ಶೃಂಗಾರ ರಸವೇ? ವೀರ ರಸವೇ? ಹಾಸ್ಯರಸವೇ?]

ಮನೋರಮೆ: ಆವರಸದೊಳೆಂದೊಡೇಂ ? ನವರಸದೊಳಂ.
[ಯಾವ ರಸದಲ್ಲಿ ಅಂತ ಕೇಳಿದ್ರಾ? ನವರಸಗಳೂ ಇರಲಿ.]

ಮುದ್ದಣ: ಅಂತಿರೆ ಮತ್ತಮಾಕತೆ ಯಾವುದು ?
[ಹಾಗಾದರೆ ಅದು ಯಾವ ಕಥೆ?]

ಮನೋರಮೆ: ರಾಮಾಯಣದೊಳೇನಾನುಮೊಂದು.
[ರಾಮಾಯಣದೊಳಗೆ ಯಾವುದಾದರೂ ಒಂದು.]

ಮುದ್ದಣ: ಅಂತೆಯ ಅಕ್ಕೆ. ಸೀತಾಸ್ವಯಂವರಮಂ ಪೇೞ್ವೆಂ.
[ಹಾಗೆಯೇ ಆಗಲಿ. ಸೀತಾಸ್ವಯಂವರದ ಕಥೆ ಹೇಳುವೆ.]

ಮನೋರಮೆ: ಆಂ ಮುನ್ನಮೆ ಕೇಳ್ದಿರ್ಪೆನಲ್ತೆ !
[ಆಹ್. ಅದನ್ನು ನಾನು ಈ ಮೊದಲೇ ಕೇಳಿಸಿಕೊಂಡಾಗಿದೆಯಲ್ಲ!]

ಮುದ್ದಣ: ಏಂ ಸೀತಾಪಹರಣಕಥನದೊಳ್ ಬಯಕೆಯೆ ?
[ಮತ್ತೇನು, ಸೀತಾಪಹರಣ ಕಥೆಯನ್ನು ಕೇಳುವ ಬಯಕೆಯೇ?]

ಮನೋರಮೆ: ಉಃ ! ಆನೊಲ್ಲೆಂ.
[ಊಹೂಂ, ಅದೂ ಬೇಡಾ ನನಗೆ.]

ಮುದ್ದಣ: ಮೇಣಾವ ನಲ್ಗತೆಯಂ ಪೇೞ್ವೆನೋ.
[ಮತ್ತ್ಯಾವ ಒಳ್ಳೆಯ ಕಥೆಯನ್ನು ಹೇಳುವೆನೋ!]

ಮನೋರಮೆ: ಇಂತೇಕುಸಿರ್ವಯ್? ನಾಡೊಳೆನಿತ್ತೊ ರಾಮಾಯಣಂಗಳೊಳವು. ನೀಂ ಕೇಳ್ದುದಱೊಳೊಂದಂ ನಲ್ಮೆದೋಱೆ ಕಂಡು ಪೇೞ್ವುದು.
[ಇಷ್ಟೇಕೆ ಗೊಂದಲ? ಈ ದೇಶದಲ್ಲಿ ಅದೆಷ್ಟು ರಾಮಾಯಣ ಆವೃತ್ತಿಗಳಿಲ್ಲ! ನಿಮಗೆ ಗೊತ್ತಿರುವಂಥವುಗಳಲ್ಲಿ ಒಳ್ಳೆಯದೆನಿಸಿದ್ದನ್ನು ನನಗೆ ಹೇಳಿ.]

ಮುದ್ದಣ: ನೀನೆ ಒಂದನಾಯ್ದುಕೊಳ್ವುದು.
[ನೀನೇ ಒಂದನ್ನಾಯ್ದುಕೋ.]

ಮನೋರಮೆ: ಶ್ರೀರಾಮಂ ಅಶ್ವಮೇಧಮಂ ಕಯ್ಕೊಂಡನೆಂಬರಲ್ತೆ; ಆ ಕತೆಯೆ ಅಕ್ಕುಂ.
[ಶ್ರೀರಾಮನು ಅಶ್ವಮೇಧಯಾಗವನ್ನು ಕೈಕೊಂಡನೆನ್ನುತ್ತಾರಲ್ಲ. ಆ ಕಥೆಯೇ ಆಗಬಹುದು.]

ಮುದ್ದಣ: ಈಗಳಱತೆಂ; ಶೇಷರಾಮಾಯಣಮಂ ಪೇೞ್ವುದೆಂಬೆಯೆ ?
[ಈಗ ತಿಳಿಯಿತು. ಉತ್ತರರಾಮಾಯಣವನ್ನು ಹೇಳಬೇಕಂತೀಯಾ?]

ಮನೋರಮೆ: ಅಪ್ಪುದಪ್ಪುದು. ಆದೊಡೆ ಮುನ್ನಮಾರಾರ್ಗಿದನೊರೆದರ್ ?
[ಹೌದುಹೌದು. ಅದನ್ನು ಮೊದಲು ಯಾರು ಯಾರಿಗೆ ಹೇಳಿದರು?]

ಮುದ್ದಣ: ಮುನ್ನಂ ಶೇಷಂ ವಾತ್ಸ್ಯಾಯನಂಗೆ ಪೇೞ್ದನದನೆ ನಿನಗೆ ಬಿತ್ತರಿಪೆಂ. ಆದೊಡೆ ಬಲ್ಗತೆ ಕಣಾ ! ಒಂದೆರೞ್ದೆವಸಕ್ಕೆ ಮುಡಿಯದು.
[ಮೊದಲು ಶೇಷನು ವಾತ್ಸ್ಯಾಯನನಿಗೆ ಹೇಳಿದನು. ಅದನ್ನೇ ನಾನು ನಿನಗೆ ಹೇಳುವೆನು. ಅದೊಂದು ದೊಡ್ಡ ಕಥೆ ಮಾರಾಯ್ತೀ. ಒಂದೆರಡು ದಿವಸಕ್ಕೆ ಮುಗಿಯದು!]

ಮನೋರಮೆ: ಇರ್ಕೆ. ಓರೊಂದು ದೆವಸಮಿನಿಸಿನಿಸಂ ಪೇೞ್ದೊಡೇಂ ?
[ಇರಲಿ. ದಿನಕ್ಕೊಂದಿಷ್ಟಿಷ್ಟರಂತೆ ಹೇಳಿದರಾಯ್ತಲ್ಲ?]

ಮುದ್ದಣ: ಅಕ್ಕುಂ. ಆವ ಧಾಟಿಯೊಳ್ ಪೇೞ್ವೆಂ; ಪದ್ಯದೊಳ್ ಪೇೞ್ವೆನೊ? ಗದ್ಯದೊಳ್ ಪೇೞ್ವೆನೋ
[ಹೌದು. ಯಾವ ಧಾಟಿಯಲ್ಲಿ ಹೇಳಲಿ? ಪದ್ಯದಲ್ಲಿ ಹೇಳಲೇ? ಗದ್ಯದಲ್ಲಿ ಹೇಳಲೇ?]

ಮನೋರಮೆ: ಪದ್ಯಂ ವಧ್ಯಂ, ಗದ್ಯಂ ಹೃದ್ಯಂ. ಹೃದ್ಯಮಪ್ಪ ಗದ್ಯದೊಳೆ ಪೇೞ್ವುದು.
[ಪದ್ಯ ಸತ್ತುಹೋಗಲಿ. ಗದ್ಯವೇ ಒಳ್ಳೆಯದು. ಹೃದಯಸ್ಪರ್ಶಿಯಾದ ಗದ್ಯದಲ್ಲೇ ಹೇಳೋಣವಾಗಲಿ.]

ಮುದ್ದಣ: (ನಸುನಗೆಯಿಂ) ಅದಂತಿರ್ಕೆ. ಅದಱೊಳ್ ಇಂತಪ್ಪ ನಲ್ಗತೆಯಂ ಬಿತ್ತರಿಸಿದೊಡೆ ಅರಮನೆಯೊಳ್ ರನ್ನಗಡಗಮಂ ಪೊನ್ನಕಂಠಿಕೆಯಂ ಮೆಚ್ಚನೀವರ್. ನೀನೀವುದೇಂ ?
[ನಸುನಗುತ್ತ- ಅದಿರಲಿ. ಈರೀತಿಯ ಒಳ್ಳೆಯ ಕಥೆಯನ್ನು ಹೇಳಿದರೆ ಅರಮನೆಯಲ್ಲಾದರೆ ರತ್ನದ ಕಡಗ, ಹೊನ್ನಿನ ಹಾರವನ್ನು ಮೆಚ್ಚುಗೆಯೆಂದು ಕೊಡುವರು. ನೀನೇನು ಕೊಡುತ್ತೀ?]

ಮನೋರಮೆ: ಪೆಱತೇಂ ? ಎನ್ನನೆ ನಾನೀವೆಂ.
[ಮತ್ತೇನು? ನನ್ನನ್ನೇ ಕೊಡುತ್ತೇನೆ.]

ಮುದ್ದಣ: ಬಲ್ಗಡುಸುಗಾರ್ತಿಯೈಸೆ ! ಅಱಯಾ ಮುನ್ನಮೆ ನಿನ್ನ ತಾಯ್ತಂದೆವಿರೆನಗಿತ್ತರೆಂಬುದಂ ?
[ಭಲಾ! ಬಲು ಜಾಣೆಯಿದ್ದೀ ನೀನು. ಅಳಿಯನನ್ನು ಮಾಡಿಕೊಂಡಾಗಲೇ ನಿನ್ನ ತಾಯ್ತಂದೆಯರು ನಿನ್ನನ್ನು ನನಗೆ ಕೊಟ್ಟಿಹರಲ್ಲ?]

ಮನೋರಮೆ: ಇದೇತಱ ನುಡಿ ! ಪೋಕೆ. ಆಂ ಪರಾಧೀನೆ ಗಡ ! ಪುರಾಣಮನೋದಿದಿಂ ಬೞಯಮಲ್ತೆ ದಕ್ಷಿಣೆಯನೀವುದು? ಅರಮನೆಯವರುಂ ಕಬ್ಬಮಂ ಕಂಡಲ್ತೆ ಕಚ್ಚೞಯನಿತ್ತರ್ ? ಆನುಂ ಕತೆಯಂ ಕೇಳ್ದು ಸೊಗಸಾಗೆ ಬಲ್ಲಂತೆ ಸಮ್ಮಾನಿಸುವೆಂ.
[ಇದೇನಿದು. ಹೋಗಿ. ನಾನು ಪರಾಧೀನೆಯೇ? ಪುರಾಣವನ್ನು ಓದಿದ್ದಕ್ಕನುಗುಣವಾಗಿ ಅಲ್ಲವೇ ದಕ್ಷಿಣೆ ಕೊಡುವುದು? ಅರಮನೆಯವರಾದರೂ ಕಾವ್ಯ ಹೇಗಿದೆ ಎಂದು ನೋಡಿದ ಮೇಲೆಯೇ ಅಲ್ಲವೇ ಉಡುಗೊರೆ ಕೊಡುವುದು? ಹಾಗೆಯ ನಾನು ಸಹ ಕಥೆ ಕೇಳಿದಮೇಲೆ ಸೊಗಸಾಗಿದ್ದರೆ ಸನ್ಮಾನಿಸುವೆ.]

ಮುದ್ದಣ: ಒಳ್ಳಿತೊಳ್ಳಿತು ! ಕತೆಯನಾಲಿಸಿ ಲಾಲಿಸಿ ಬೞಕ್ಕ ಮೀಯೆನೆಂದೊಡೆ ಬಿಡೆ ನೋೞ್ಪೆಂ.
[ಒಳ್ಳೆದೊಳ್ಳೆದು. ಕಥೆಯನ್ನು ಕೇಳಿದ ಮೇಲೆ ಉಡುಗೊರೆ ಕೊಡುವುದಿಲ್ಲ ಅಂದಿಯೋ ಬಿಡೋದಿಲ್ಲ ನಿನ್ನನ್ನು, ನೋಡ್ತೇನೆ.]

ಮನೋರಮೆ: ಆನುಂ ನೋೞ್ಪೆಂ ಕತೆಯ ಪುರುಳೆಂತಿರ್ಕುಮೆಂದು.
[ನಾನೂ ನೋಡುತ್ತೇನೆ. ಕತೆಯ ಹೆಚ್ಚುಗಾರಿಕೆ ಎಷ್ಟಿದೆಯೆಂದು.]

ಮುದ್ದಣ: ಆದೊಡಾಲಿಸು. ಸ್ವಸ್ತಿ ಶ್ರೀಮತ್ಸುರಾಸುರೇಂದ್ರ ನರೇಂದ್ರ ಮುನೀಂದ್ರ ಫಣೀಂದ್ರ ಮಣಿಮಕುಟ ತಟಘಟಿತ
[ಆಯ್ತು. ಕೇಳು. ಸ್ವಸ್ತಿಶ್ರೀಮತ್ಸುರಾಸುರೇಂದ್ರ ನರೇಂದ್ರ ಮುನೀಂದ್ರ ಫಣೀಂದ್ರ ಮಣಿಮುಕುಟ ತಟಘಟಿತ]

ಮನೋರಮೆ: ಓ ಓ ! ತಡೆ ! ತಡೆ. ವಸುಧೆಗೊ ಡೆಯನ ರಾಮಚಂದ್ರನ ಕತೆಯಂ ಪೇೞೆನೆ ಬಸದಿಗೊಡೆಯನಪ್ಪ ಸುರೇಂದ್ರರ ಚರಿತೆಯಂ ಪೇೞ್ವುದೇಂ !ಸಾಲ್ಗುಂ ಸಾಲ್ಗುಂ. ಇಂತೆರ್ದೆಗೊಳ್ವ ಕತೆಗೆಂತುಡುಗೊಱೆಯಂ ಗೆಯ್ವೆನೋ !
[ಓ ಓ ನಿಲ್ಲಿಸಿ ನಿಲ್ಲಿಸಿ. ಭೂಮಿಗೊಡೆಯ ಶ್ರೀರಾಮಚಂದ್ರನ ಕಥೆ ಹೇಳಿರೆಂದು ಕೇಳಿದರೆ ಬಸದಿಗೊಡೆಯ ಸುರೇಂದ್ರರ ಚರಿತ್ರೆ ಹೇಳುವುದೇ? ಸಾಕು ಸಾಕು. ಈರೀತಿ ಶುರುವಾಗುವ ಕಥೆಗೆ ಅದೆಂತು ಗಮನವೀಯುವೆನೋ.]

ಮುದ್ದಣ: ನಲ್ನುಡಿಯಿದು ರಮಣಿ ! ಕಚಂಗಳಾಣೆ ! ಆಲ್ತು ಬಸದಿಯಿಂದ್ರರ ಕತೆಯಲ್ತು; ರಾಮಚಂದ್ರನ ಕತೆಯನೆ ಪೊಗೞ್ದು ಪೇೞ್ವುದಿದು ಸಕ್ಕದದೊಂದು ಚೆಲ್ವು.
[ಒಳ್ಳೆಯ ಮಾತಿದು ಪ್ರಿಯೇ. ತಲೆ(ಗೂದಲಿನ)ಆಣೆ. ಅಲ್ಲ, ಇದು ಬಸದಿಯಿಂದ್ರರ ಕಥೆಯಲ್ಲ. ರಾಮಚಂದ್ರನ ಕಥೆಯನ್ನೇ ಸೊಗಸಾಗಿ ಹೇಳುವುದಿದು ಸಂಸ್ಕೃತದ್ದೊಂದು ಚೆಲುವು.]

ಮನೋರಮೆ: ಲೇಸು, ಲೇಸು ! ನೀರಿೞಯದ ಗಂಟಲೊಳ್ ಕಡುಬಂ ತುಱುಕಿದಂತಾಯ್ತು; ಕನ್ನಡದ ಸೊಗಸನಱಯಲಾರ್ತೆನಿಲ್ಲೆನಗೆ ಸಕ್ಕದದ ಸೊಗಸಂ ಪೇೞ್ವುದು ಗಡ !
[ಇದೊಳ್ಳೇ ಕಥೆ. ನೀರೇ ಇಳಿಯದ ಗಂಟಲಿನೊಳಗೆ ಕಡುಬು ತುರುಕಿದಂತೆ ಆಯ್ತು. ಕನ್ನಡಸ ಸೊಗಸನ್ನೇ ಪೂರ್ತಿಯಾಗಿ ಅರ್ಥಮಾಡಿಕೊಳ್ಳಲಾಗದ ನನಗೆ ಸಂಸ್ಕೃತದ ಸೊಗಸನ್ನು ಹೇಳುವುದೇ?]

ಮುದ್ದಣ: ಅಪ್ಪೊಡಿನ್ನೆಂತೊ ಒರೆವೆಂ ?
[ಮತ್ತೆ ಹೇಗೆ ಹೇಳಲಿ?]

ಮನೋರಮೆ: ತಿರುಳ್ಗನ್ನಡದ ಬೆಳ್ನುಡಿಯೊಳೆ ಪುರುಳೊಂದೆ ಪೇೞ್ವುದು. ಕನ್ನಡ ಕತ್ತುರಿಯಲ್ತೆ.
[ಕಥೆಯ ತಿರುಳನ್ನು ಕನ್ನಡದ ಸವಿನುಡಿಯಲ್ಲೇ ಹೇಳುವಂಥವರಾಗಿ. ಕನ್ನಡವು ಕಸ್ತೂರಿಯಲ್ಲವೇ?]

ಮುದ್ದಣ: ಅಪ್ಪುದಪ್ಪುದು. ಆದೊಡಂ ಸಕ್ಕದಮೊಂದೆ, ರನ್ನವಣಿಯಂ ಪೊನ್ನಿಂ ಬಿಗಿದಂತೆಸಗುಂ; ಅದಱಂ ಕರ್ಮಣಿಸರದೊಳ್ ಚೆಂಬವಳಮಂ ಕೋದಂತಿರೆ, ರಸಮೊಸರೆ, ಲಕ್ಕಣಂ ಮಿಕ್ಕಿರೆ, ಎಡೆಯೆಡೆಯೊಳ್ ಸಕ್ಕದದ ನಲ್ನುಡಿ ಮೆಱೆಯೆ ! ತಿರುಳ್ಗನ್ನಡದೊಳೆ ಕತೆಯನುಸಿರ್ವೆಂ ಎಂಬಲ್ಲಿಗೆ ಮುದ್ದಣ ಪೇೞ್ದ ಶ್ರೀ ರಾಮಾಶ್ವಮೇಧದೊಳ್ ಕಥಾಮುಖಮೆಂಬ ಪ್ರಥಮಾಶ್ವಾಸಂ ಸಂಪೂರ್ಣಂ
[ಹೌದು ಹೌದು. ಆದರೂ ಸಂಸ್ಕೃತವೂ ಇರಲಿ. ಮಣಿ-ರತ್ನವನ್ನು ಚಿನ್ನದ ಸರದಲ್ಲಿ ಬಿಗಿದಂತೆ. ಕರಿಮಣಿ ಸರದಲ್ಲಿ ಕೆಂಪು ಹವಳ ಪೋಣಿಸಿದಂತೆ. ರಸಭರಿತವಾಗಿರಲು, ಲಕ್ಷಣ ಹೆಚ್ಚಿದರೆ, ನಡುನಡುವೆ ಸಂಸ್ಕೃತದ ನುಡಿಗಳೂ ಮೆರೆಯಲಿ. ಆದರೆ ಕಥೆಯ ತಿರುಳನ್ನು ಕನ್ನಡದಲ್ಲೇ ವಿವರಿಸುವೆನು ಎಂಬಲ್ಲಿಗೆ ಮುದ್ದಣನು ಹೇಳಿದ ಶ್ರೀ ರಾಮಾಶ್ವಮೇಧದಲ್ಲಿ ಕಥಾಮುಖವೆಂಬ ಮೊದಲ ಆಧ್ಯಾಯವು ಮುಗಿದುದು.]

* * *
ಕವಿಕೃತಿ ಪರಿಚಯ: ಮುದ್ದಣನ ಕಾಲ ಕ್ರಿ.ಶ. 1870-1901. ಮುದ್ದಣ ಎಂಬ ಕಾವ್ಯನಾಮದಿಂದ ಗ್ರಂಥರಚನೆ ಮಾಡಿದ ಲಕ್ಷ್ಮೀನಾರಣಪ್ಪನು ಉಡುಪಿಯ ಸಮೀಪದ ‘ನಂದಳಿಕೆ’ ಎಂಬಲ್ಲಿ ಹುಟ್ಟಿದನು. ಇವನ ತಂದೆ ತಿಮ್ಮಪ್ಪಯ್ಯ, ತಾಯಿ ಮಹಾಲಕ್ಷ್ಮಮ್ಮ. ಈತ ಉಡುಪಿಯ ಒಂದು ಶಾಲೆಯಲ್ಲಿ ಕೆಲವು ಕಾಲ ವ್ಯಾಯಾಮ ಶಿಕ್ಷಕನಾಗಿದ್ದನು. ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ಪರಿಪೂರ್ಣ ಪಾಂಡಿತ್ಯ ಪಡೆದಿದ್ದನು. ಜೀವನದಲ್ಲಿ ಬಹಳ ಕಷ್ಟಗಳನ್ನು ಅನುಭವಿಸಿದರೂ ಮುದ್ದಣ ಬಹಳ ರಸಿಕ ಕವಿ. ಕನ್ನಡ ಸಾಹಿತ್ಯದಲ್ಲಿ ಮುದ್ದಣ-ಮನೋರಮೆಯರ ಸರಸ ಸಂವಾದದ ಶೈಲಿ ವಿನೂತನವಾದುದು. ಸಾಮಾನ್ಯವಾಗಿ ಇವನ ಕೃತಿಗಳಲ್ಲಿ ತಿಳಿಯಾದ ಗದ್ಯಶೈಲಿ ಹಾಗೂ ಚಿಕ್ಕಚಿಕ್ಕ ವಾಕ್ಯಗಳ ಪ್ರಯೋಗಗಳನ್ನು ಕಾಣಬಹುದು. ‘ರತ್ನಾವತಿ ಕಲ್ಯಾಣ’, ‘ಕುಮಾರ ವಿಜಯ’ ಎಂಬ ಯಕ್ಷಗಾನ ಪ್ರಸಂಗಗಳನ್ನು ಮುದ್ದಣ ರಚಿಸಿದ್ದಾನೆ. ವಾರ್ಧಕ ಷಟ್ಪದಿಯಲ್ಲಿ ಬರೆದ ‘ಶ್ರೀರಾಮ ಪಟ್ಟಾಭಿಷೇಖಂ’ ಎಂಬ ಕಾವ್ಯ ಅತ್ಯುತ್ತಮ ಕೃತಿಯಾಗಿದೆ. ‘ರಾಮಾಶ್ವಮೇಧಂ’ ಎಂಬ ಗದ್ಯಕಾವ್ಯದಲ್ಲಿ ಮುದ್ದಣ-ಮನೋರಮೆಯರ ಸರಸ ಸಂವಾದವು ಹರ್ಷದಾಯಕವಾಗಿದೆ. ಕಥಾಮುಖದಲ್ಲಿ ಬರುವ ಈ ಸಂವಾದವನ್ನು ಕವಿಯು ಹೃದಯಂಗಮವಾಗಿ ವರ್ಣಿಸಿದ್ದಾನೆ. ಮುದ್ದಣನು ತನ್ನ ಬಡತನದ ಬೇಗೆಯನ್ನು ಮರೆಯುವುದಕ್ಕಾಗಿ ತನ್ನ ಕೃತಿಗಳಲ್ಲಿ ಇಂತಹ ಹಾಸ್ಯಪ್ರಸಂಗಗಳನ್ನು ತರುತ್ತಾನೆ. ಯಾವುದೇ ಕಷ್ಟ ಬರಲಿ, ನಷ್ಟ ಬರಲಿ ಎಲ್ಲವನ್ನೂ ಎದುರಿಸುವ take it easy policy ಎಂಬ ಸಿದ್ಧಾಂತ ಎಂದೆಂದಿಗೂ ಸತ್ಯವಾದುದಲ್ಲವೇ ?

ಶ್ರೀವತ್ಸ ಜೋಶಿ



Sunday, April 6, 2014

ಪ್ರಾರ್ಥನೆ ಎಂದರೆ ಆತ್ಮದ ನಿವೇದನೆ - ಶ್ರೀವತ್ಸ ಜೋಶಿ

"ಪ್ರಾರ್ಥನೆ ಎಂದರೆ ಬೇಡಿಕೆ ಅಲ್ಲ. ಪ್ರಾರ್ಥನೆ ಎಂದರೆ ಆತ್ಮದ ನಿವೇದನೆ. ನಮ್ಮಲ್ಲಿನ ದೈನ್ಯಭಾವವನ್ನು ದಿನದಿನವೂ ಒಪ್ಪಿಕೊಳ್ಳುವ ರೀತಿ. ಪ್ರಾರ್ಥನೆಯಲ್ಲಿ ಪದಗಳಿಲ್ಲದಿದ್ದರೂ ಸರಿಯೇ, ಹೃದಯ ಇರಬೇಕು. ಹೃದಯವೇ ಇಲ್ಲದೆ ಬರಿ ಪದಗಳ ಅಬ್ಬರವು ಪ್ರಾರ್ಥನೆ ಎನಿಸದು" ಎಂದಿದ್ದ ಮಹಾತ್ಮ ಗಾಂಧೀಜಿಯವರು ತಮ್ಮ ಜೀವನದುದ್ದಕ್ಕೂ ಪ್ರಾರ್ಥನೆಗೆ ಅತ್ಯಂತ ಹೆಚ್ಚು ಮಹತ್ವ ಕೊಟ್ಟವರು. ಪ್ರಾರ್ಥನೆಯ ಅತಿದೊಡ್ಡ ಪ್ರಯೋಜನವೆಂದರೆ ಮನಸ್ಸಿನ ಏಕಾಗ್ರತೆಗೆ ಅನುಕೂಲ ಆಗುವುದು. ಶಾಲೆಗಳಲ್ಲಿ ಬೆಳಗಿನ ಹೊತ್ತು ಪ್ರಾರ್ಥನೆಯ ನಂತರವೇ ಪಾಠಪ್ರವಚನ ಆರಂಭ ಎಂಬ ಕ್ರಮ ಆದಿಕಾಲದಿಂದಲೂ ಬಂದಿರುವುದು ಅದೇ ಕಾರಣಕ್ಕೆ. ವಿಪರ್ಯಾಸವೆಂದರೆ ಈಗ ಢೋಂಗಿ ಜಾತ್ಯತೀತರು ಪ್ರಾರ್ಥನೆಯ ನಿಜವಾದ ಮಹತ್ವವನ್ನರಿಯದೆ, ಅದಕ್ಕೆ ಧರ್ಮ-ಜಾತಿ-ಮತಗಳ ಲೇಪ ಹಚ್ಚಿರುವುದರಿಂದ ಎಷ್ಟೋಕಡೆ ಶಾಲೆಗಳಲ್ಲಿ ಪ್ರಾರ್ಥನೆಯೇ ಇಲ್ಲವಾಗಿದೆ

ನಾನು ಕಲಿತ ಪ್ರಾಥಮಿಕ ಶಾಲೆಯಲ್ಲಿ ವಾರದ ಆರು ದಿನಗಳಲ್ಲಿ ಒಂದೊಂದು ದಿನ ಒಂದೊಂದು ಪ್ರಾರ್ಥನೆ ಹಾಡುವ ಕ್ರಮವಿತ್ತು. ಸೋಮವಾರದ ಪ್ರಾರ್ಥನೆ "ಸ್ವಾಮಿದೇವನೆ ಲೋಕಪಾಲನೆ..." ನಾವು ಹಾಡುತ್ತಿದ್ದದ್ದು (ಬಹುಶಃ ಹೆಚ್ಚಿನೆಲ್ಲ ಶಾಲೆಗಳಲ್ಲೂ ಇದ್ದದ್ದು) ಸ್ಕೂಲ್ ಮಾಸ್ಟರ್ ಚಲನಚಿತ್ರದಲ್ಲಿ ಅಳವಡಿಸಿಕೊಳ್ಳಲಾದ ಎರಡು ಚರಣಗಳಷ್ಟೇ ಇರುವ ಹಾಡು. ಆದರೆ ಮೂಲದಲ್ಲಿ ಇದು ಸೋಸಲೆ ಅಯ್ಯ ಶಾಸ್ತ್ರಿಗಳು (1854-1934) ಎಂಬ ವಿದ್ವಾಂಸರು ರಚಿಸಿದ ಎಂಟು ಚರಣಗಳಿರುವ ಒಂದು ಸುಂದರವಾದ, ಅರ್ಥಗರ್ಭಿತ ಗೀತೆ. ನಮ್ಮೆಲ್ಲರ ಬಾಳಿಗೆ ಬೆಳಕು ನೀಡುವ ಸೂರ್ಯನ ಸ್ತುತಿ. "ಸರ್ವರಿಗೊಂದೇ ಸೂರ್ಯನಕಣ್ಣು ವಿಧವಿಧ ಸಸ್ಯಕೆ ಒಂದೇ ಮಣ್ಣು" ಎಂಬ ಕವಿವಾಣಿಯಂತೆ ಈ ಜಗಕ್ಕೆಲ್ಲ ಒಬ್ಬನೇ ಸೂರ್ಯ. ಬೆಳಕು ನೀಡುವ ಆತನಿಗೆ ನಾವೆಲ್ಲರೂ ಏಕಪ್ರಕಾರವಾಗಿ ಕೃತಜ್ಞರಾಗಿರುವುದರಲ್ಲಿ ತಪ್ಪೇನಿದೆ?

ಸೋಸಲೆ ಎಂದರೆ ಮೈಸೂರಿನ ಪಕ್ಕ ತಿರುಮಕೂಡಲು ನರಸೀಪುರದ ಒಂದು ಹಳ್ಳಿ. ಅಲ್ಲಿ ಜನಿಸಿದ ಅಯ್ಯ ಶಾಸ್ತ್ರಿಗಳು ಪ್ರಾರಂಭಿಕ ಶಿಕ್ಷಣವನ್ನು ಮನೆಯಲ್ಲಿಯೇ ಪಡೆದು ನಂತರ ಮೈಸೂರಿನಲ್ಲಿ ವ್ಯಾಕರಣ, ತರ್ಕ, ಅಲಂಕಾರಾದಿ ಶಾಸ್ತ್ರಾಧ್ಯಯನ ನಡೆಸಿದರು. ಸಾಹಿತ್ಯವಷ್ಟೇ ಅಲ್ಲದೆ ಚಿತ್ರಕಲೆ, ಸಂಗೀತದಲ್ಲೂ ಪರಿಣತಿ ಗಳಿಸಿದರು. ಅವರು ಸುಮಾರಷ್ಟು ಸಾಹಿತ್ಯಕೃತಿಗಳನ್ನು ರಚಿಸಿದ್ದಾರಾದರೂ ಕನ್ನಡಜನಮಾನಸದಲ್ಲಿ ಅಜರಾಮರವಾಗಿ ಉಳಿದದ್ದು ಈ ಪ್ರಾರ್ಧನೆಗೀತೆ.

“ಸ್ವಾಮಿ ದೇವನೆ ಲೋಕ ಪಾಲನೆ...” ಛಂದೋಬದ್ಧವಾಗಿ ರಚಿತವಾದ ಪದ್ಯ. ಮಲ್ಲಿಕಾಮಾಲೆ ಎಂಬ ಛಂದಸ್ಸು. ಒಂದೊಂದು ಸಾಲಿನಲ್ಲಿ 3,4,3,4,3,4,3,4 ಮಾತ್ರೆಗಳ ಗಣಗಳು. ಜನಪ್ರಿಯ ಶಾಲಾ ಪದ್ಯಗಳಾದ ’ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ...’, ’ಭಾರತಾಂಬೆಯೆ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ...’ ಮುಂತಾದವು ಕೂಡ ಇದೇ ಲಯದಲ್ಲಿರುವವು. ಆದಿಪ್ರಾಸವೂ ಇರುವುದರಿಂದ (ಒಂದು ಚರಣದಲ್ಲಿ ಪ್ರತಿ ಸಾಲಿನ ಎರಡನೇ ಅಕ್ಷರವು ಒಂದೇ ವ್ಯಂಜನದಿಂದ ಆಗಿರುವುದು) ಕಂಠಪಾಠ ಮಾಡುವುದಕ್ಕೆ ಅನುಕೂಲ.

ಈಗ ನೀವು ಮತ್ತೊಮ್ಮೆ ನಿಮ್ಮ ಶಾಲಾದಿನಗಳನ್ನು ನೆನಪಿಸಿಕೊಳ್ಳುತ್ತ, ಶಾಲೆಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಕ್ಷಣಗಳನ್ನು ಕಲ್ಪಿಸಿಕೊಳ್ಳುತ್ತ ‘ಸ್ವಾಮಿದೇವನೆ ಲೋಕಪಾಲನೆ...’ ಪದ್ಯವನ್ನು ರಾಗವಾಗಿ ಹಾಡಬಯಸುತ್ತೀರಾದರೆ, ಕಂಠಪಾಠ ಮಾಡಬಯಸುತ್ತೀರಾದರೆ ಪದ್ಯದ ಪೂರ್ಣಸಾಹಿತ್ಯ ಇಲ್ಲಿದೆ:

ಸ್ವಾಮಿದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ
ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೇ
ನೇಮಿಸೆಮ್ಮೊಳು ಧರ್ಮಕಾರ್ಯವ ತೇ ನಮೋಸ್ತು ನಮೋಸ್ತುತೇ
ಕ್ಷೇಮದಿಂದಲಿ ಪಾಲಿಸೆಮ್ಮನು ತೇ ನಮೋಸ್ತು ನಮೋಸ್ತುತೇ || ೧ ||

ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ
ಕಾವರಿಲ್ಲವು ನಿನ್ನ ಬಿಟ್ಟರೆ ಸೂರ್ಯನೇ ಜಗದೀಶನೇ
ಜೀವಕೋಟಿಯು ನಿನ್ನ ಈ ಬೆಳಕಿಂದ ಜೀವಿಪುದಲ್ಲವೆ || ೨ ||

ರಾತ್ರೆನಿದ್ದೆಯ ಗೈವ ಕಾಲದಿ ನೀನೆ ನಮ್ಮನು ಕಾದೆಯೈ
ಮಿತ್ರನೆಂಬುವ ನಾಮಧೇಯವು ಸತ್ಯವಾಯಿತು ನಿನ್ನೊಳು
ಸ್ತೋತ್ರ ಮಾಡುವ ಹಾಗೆ ನಿನ್ನನ್ನು ಹಕ್ಕಿಗಳ್ ದನಿಗೈವವೈ
ಚಿತ್ರಭಾನುವೆ ನೋಡಿ ನಿನ್ನನದೆಲ್ಲಿ ಪೋದುದೊ ಕತ್ತಲೆ || ೩ ||

ಉತ್ತಮೋತ್ತಮ ನಿನ್ನ ಪಾದದ ಭಕ್ತಿಯೇ ಸ್ಥಿರವಲ್ಲವೇ
ವಿತ್ತವೆಂಬುದು ಗಾಳಿಯಲ್ಲಿಹ ದೀಪದಂದದಿ ಚಂಚಲ
ಮತ್ತರಾಗುತ ಬಿಟ್ಟು ನಿನ್ನನು ಕೆಟ್ಟ ಯೋಚನೆ ಗೈಯದಾ
ಚಿತ್ತವಂ ನಮಗಿತ್ತು ರಕ್ಷಿಸು ಪದ್ಮನಾಭ ಸುರೇಶನೇ || ೪ ||

ಆಡುವಾಗಲು ನಾವು ಭೋಜನ ಮಾಡುವಾಗಲು ಸರ್ವದಾ
ನೋಡಿ ನೀ ದಯದಿಂದ ನಮ್ಮನು ಪಾಲಿಸೈ ಭಗವಂತನೇ
ಬೇಡಿಕೊಂಬೆವು ನಮ್ಮ ದೇಹಕೆ ಸೌಖ್ಯವಂ ಬಲ ಪುಷ್ಟಿಯಂ
ನೀಡು ನಿನ್ನಯ ಪಾದಭಕ್ತಿಯನೆಂದಿಗೂ ಬಿಡಲಾರೆವು || ೫ ||

ನಿನ್ನ ದರ್ಶನಗೈವ ನೇತ್ರದ ಜನ್ಮ ಸಾರ್ಥಕವಲ್ಲವೇ
ನಿನ್ನ ಪೂಜಿಪ ಹಸ್ತವೇ ಬಲುದೊಡ್ಡದಲ್ಲವೆ ದೇವನೇ
ನಿನ್ನ ನಾಮವ ಪೇಳ್ವ ನಾಲಗೆ ಧನ್ಯವಲ್ಲವೆ ಸರ್ವದಾ
ನಿನ್ನ ಜಾನಿಪ ಚಿತ್ತವೃತ್ತಿಯೆ ಯೋಗ್ಯವಲ್ಲವೆ ಲೋಕದಿ || ೬ ||

ನೀನೆ ತಾಯಿಯು ನೀನೆ ತಂದೆಯು ನೀನೆ ನಮ್ಮೊಡನಾಡಿಯೂ
ನೀನೆ ಬಂಧುವು ನೀನೆ ಭಾಗ್ಯವು ನೀನೆ ವಿದ್ಯೆಯು ಬುದ್ಧಿಯೂ
ನೀನು ಪಾಲಿಸದಿದ್ದರೆಮ್ಮನು ಬೇರೆ ಪಾಲಿಪರಿಲ್ಲಲೈ
ದೀನಪಾಲನೆ ನಿನ್ನಧೀನದೊಳಿರ್ಪನಮ್ಮನು ಪಾಲಿಸೈ || ೭ ||

ಶ್ರೀಮುಕುಂದನೆ ಗಾಳಿಯಲ್ಲಿಯು ನೀರಿನಲ್ಲಿಯು ನೀನಿಹೇ
ಭೂಮಿಯಲ್ಲಿ ಯಮಗ್ನಿಯಲ್ಲಿಯು ಬಾನಿನಲ್ಲಿಯು ನೀನಿಹೆ
ರಾಮನೂ ನರಸಿಂಹನೂ ಪರಮಾತ್ಮ ಕೃಷ್ಣನು ನೀನೆಯೇ
ನೀ ಮಹಾತ್ಮನು ನಮ್ಮ ತಪ್ಪುಗಳೆಲ್ಲ ಮನ್ನಿಸಿ ಪಾಲಿಸೈ || ೮ ||

* * *
’ಸ್ಕೂಲ್ ಮಾಸ್ಟರ್’ ಚಿತ್ರದಲ್ಲಿನ ‘ಸ್ವಾಮಿ ದೇವನೆ ಲೋಕಪಾಲನೆ...’ ಇಲ್ಲಿದೆ. ಕಣಗಾಲ್ ಪಭಾಕರ ಶಾಸ್ತ್ರಿಯವರು ಮೂಲ ಹಾಡಿನಿಂದ ಕೆಲವು ಸಾಲುಗಳನ್ನು ಎರವಲು ಪಡೆದು, ಮತ್ತೆರಡು ಸಾಲುಗಳನ್ನು ಸೇರಿಸಿ ಮಾಡಿದ ರಚನೆಯಿದು. ಟಿ.ಜಿ.ಲಿಂಗಪ್ಪ ಅವರು ಸಂಗೀತ ನಿರ್ದೇಶಿಸಿ ಸಂಗಡಿಗರೊಂದಿಗೆ ಹಾಡಿದ್ದಾರೆ.
https://www.youtube.com/watch?v=zhIu_VjlTNQ

ಶ್ರೀ ಶ್ರೀವತ್ಸ ಜೋಶಿ


Tuesday, February 11, 2014

ಬುರಿಡಾನ್‌ನ ಕತ್ತೆ ತತ್ತ್ವಜ್ಞಾನ. ನೀವು ಕತ್ತೆ ಆಗಿದ್ದೀರಾ? - ಶ್ರೀವತ್ಸ ಜೋಶಿ

ಬುರಿಡಾನ್‌ನ ಕತ್ತೆ ತತ್ತ್ವಜ್ಞಾನ. ನೀವು ಕತ್ತೆ ಆಗಿದ್ದೀರಾ?
==========================
ಬಟ್ಟೆಯಂಗಡಿಯಲ್ಲಿ ಸೀರೆ ತಗೊಳ್ಳುವಾಗ ಹುಡುಕಿ ಹುಡುಕಿ ಎರಡನ್ನು ಶಾರ್ಟ್‌ಲಿಸ್ಟ್ ಮಾಡಿ ಅದರ ಪೈಕಿ ಯಾವುದು ಫೈನಲ್ ಎಂದು ನಿರ್ಧರಿಸಲಾಗದೆ ಎರಡನ್ನೂ ಬಿಟ್ಟು ಬೇರೊಂದು ಅಂಗಡಿಯಲ್ಲಿ ನೋಡುವಾ ಎಂದು ನೀವು ಹೊರಬಂದದ್ದಿದೆಯೇ? ’ಬಟ್ಟೆಯಂಗಡಿಯಲ್ಲಿ ಸೀರೆ ಖರೀದಿ’ ಅಂತನೇ ಆಗ್ಬೇಕಿಲ್ಲ. ಬೇರಾವ ಅಂಗಡಿಯಲ್ಲಿ ಬೇರಾವ ವಸ್ತು ಖರೀದಿಯ ದೃಶ್ಯ ಸಹ ಆಗ್ತದೆ. ರೆಸ್ಟೋರೆಂಟ್‌ನಲ್ಲಿ ಸೌತ್ ಇಂಡಿಯನ್ ಊಟ ತಗೊಳ್ಲಾ ಅಥವಾ ನಾರ್ತ್ ಇಂಡಿಯನ್ ನಾನ್ ಗೋಬಿ ಮಟರ್ ತಗೋಳ್ಲಾ ಅಂತನ್ನೋ ಸನ್ನಿವೇಶನೂ ಆಗ್ತದೆ. ಎರಡು ಕಂಪನಿಗಳಿಂದ ಆಫರ್ ಲೆಟರ್ ಬಂದಾಗ ಯಾವುದಕ್ಕೆ ಸೇರಲಿ ಎಂದು ತಲೆಕೆರೆದುಕೊಳ್ಳೋ ಪರಿಸ್ಥಿತಿಯೂ ಆಗ್ತದೆ. ಒಟ್ಟಿನಲ್ಲಿ, ನಿರ್ಧಾರ ತೆಗೆದುಕೊಳ್ಳಲಾರದೆ ಒಂದರೆಕ್ಷಣವಾದರೂ ನೀವು ತೊಳಲಾಡಿದ್ದಿದೆಯೇ?
ಹೌದು ಅಂತಾದರೆ ಆ ಕ್ಷಣದಲ್ಲೊಮ್ಮೆ ನೀವು ಬುರಿಡಾನ್‌ನ ಕತ್ತೆ ಆಗಿದ್ದೀರಿ ಎಂದೇ ಅರ್ಥ!
ಬುರಿಡಾನ್‌ನ ಕತ್ತೆ (Buridan's Ass) ಎಂದರೆ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿನ ವಿರೋಧಾಬಾಸ (paradox). ಒಂದು ಕತ್ತೆ ಇರುತ್ತದೆ. ಅದಕ್ಕೆ ವಿಪರೀತ ಬಾಯಾರಿಕೆಯೂ ವಿಪರೀತ ಹಸಿವೆಯೂ ಆಗಿರುತ್ತದೆ. ಅದರ ಇಕ್ಕೆಲಗಳಲ್ಲಿ ಒಂದು ಬಕೆಟ್‌ನಲ್ಲಿ ನೀರು ಮತ್ತೊಂದು ಬಕೆಟ್‌ನಲ್ಲಿ ಬೈಹುಲ್ಲು ಇಡಲಾಗುತ್ತದೆ. ಯಾವ ಬಕೆಟ್‌ಗೆ ಮೊದಲು ಬಾಯಿ ಹಾಕಬೇಕು ಎಂದು ನಿರ್ಧರಿಸಲಾರದೆ ಕತ್ತೆ ಸುಮ್ಮನಾಗುತ್ತದೆ. ಅಷ್ಟೇ ಅಲ್ಲ ಹಾಗೇ ಉಪವಾಸವಿದ್ದು ಕೊನೆಗೆ ಸತ್ತೇ ಹೋಗುತ್ತದೆ!
14ನೇ ಶತಮಾನದಲ್ಲಿ ಬಾಳಿದ ಫ್ರೆಂಚ್ ತತ್ತಜ್ಞಾನಿ ಜೀನ್ ಬುರಿಡಾನ್ ಎಂಬಾತ ಈ ವಿರೋಧಾಭಾಸವನ್ನು ಮೊತ್ತಮೊದಲಿಗೆ ಸಾರ್ವಜನಿಕವಾಗಿ ಚರ್ಚಿಸಿದ. ಸಾಕಷ್ಟು ಗೇಲಿಗೂ ಒಳಗಾದ. ಅವನು ಪ್ರಯೋಗ ಮಾಡಿದ್ದು ತನ್ನ ಸಾಕುನಾಯಿಯ ಮೇಲೆ. ರಷ್ಯನ್ ತತ್ತ್ವಜ್ಞಾನಿ ಪಾವ್ಲೊ ಮಾಡಿದ್ನಲ್ಲ ಹಾಗೆಯೇ ಬುರಿಡಾನ್‌ನ ಪ್ರಯೋಗಪಶು ಸಹ ನಾಯಿಯೇ ಆಗಿತ್ತಂತೆ. ಆದರೆ ನಾಯಿಗಾದರೂ ಸ್ವಲ್ಪ ಸ್ಮಾರ್ಟ್‌ನೆಸ್ ಇರ್ತದೆ, ಎದುರಿಗೆ ಆಹಾರವಿದ್ದೂ ನಿರ್ಧರಿಸಲಾರದೆ ಉಪವಾಸದಿಂದ ಸತ್ತುಹೋಗಬೇಕಿದ್ದರೆ ಅದು ಕತ್ತೆಯಂಥ ದಡ್ಡ ಪ್ರಾಣಿಯೇ ಇರಬೇಕು ಎಂದು ತಮಾಷೆ ಮಾಡಿದ ಜನ ಆ ಪ್ರಯೋಗವನ್ನು "ಬುರಿಡಾನ್‌ನ ಕತ್ತೆ" ಎಂದೇ ಗುರುತಿಸಿದರು. ನಿರ್ಧಾರ ಮಾಡಲಾಗದ, ಡಿಸಿಶನ್ ಮೇಕಿಂಗ್ ಕೆಪ್ಯಾಕಿಟಿ ಇಲ್ಲದ ವ್ಯಕ್ತಿಯನ್ನು ’ಬುರಿಡಾನ್‌ನ ಕತ್ತೆ’ ಎಂದು ತಮಾಷೆ ಮಾಡುವುದು ರೂಢಿಯಾಯ್ತು.
ಈಗ 2014ರ ಲೋಕಸಭಾ ಚುನಾವಣೆಯಲ್ಲಿ ನವಯುವಕರು, ದೇಶ ಮುನ್ನಡೆಯಬೇಕೆಂಬ ಉತ್ಸಾಹಿಗಳು ಮೋದಿಯನ್ನೇ ಬೆಂಬಲಿಸುವುದು ಎಂದು ಆಗಲೇ ನಿರ್ಧರಿಸಿರುವಂತಿದೆ. ಮೋದಿಯನ್ನು ಅತಿಭಯಂಕರವಾಗಿ ವಿರೋಧಿಸುವವರದೂ ನಿರ್ಧಾರ ಹೇಗೂ ಆಗಿದೆ. ಉಳಿದವರ ಪರಿಸ್ಥಿತಿ ಏನು? ಅವರು ತಾವೂ ಉಪವಾಸ ಬಿದ್ದು ದೇಶವನ್ನೂ ಉಪವಾಸಕ್ಕೆ ತಳ್ಳುವ ಬುರಿಡಾನ್ ಕತ್ತೆಗಳಾಗದಿದ್ದರೆ ಸಾಕು!

 ಶ್ರೀವತ್ಸ ಜೋಶಿ

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...