Showing posts with label ರತ್ನಸುತ. Show all posts
Showing posts with label ರತ್ನಸುತ. Show all posts

Saturday, December 7, 2013

ಚಿಗುರು

ಮಿಂಚೆಂದರೆ ಮೋಡಕೆ ಮೀಸಲೆಂಬ
ನಂಬಿಕೆ ಸುಳ್ಳಾಯಿತು ಅಂದು
ನನ್ನೊಳಗೂ ಸಂಚಲಿಸ ಬಹುದು
ಗೊತ್ತಾಯಿತು ಆಕೆಯ ಕಂಡು

ಗೆಳೆತನದಲಿ ಮೊದಲಾಯಿತು ಪರಿಚಯ
ಪ್ರೇಮಾಂಕುರದ ಪಥದಲ್ಲಿ
ನಿದ್ದೆಗೂ ಮೀಸಲಿಡದ ಕನವರಿಕೆಗಳೇ
ಕಾಮನೆ ಜೊತೆಯಲ್ಲಿ

ಚಿಗುರಿದ ಮೀಸೆಗೂ ಕಾರಣವಿತ್ತು
ಕಾಣುವ ಹಂಬಲ ಆಕೆಯನು
ಒಂದೇ ಸಮನೆ ಗೊಂದಲ ಮನಸಲಿ
ಹೃದಯವೂ ಬೆಂಬಲಿಸಿತು ತಾನು

ಓದಿನ ಗೋಜಲಿ ಮೂಡಿದ ಅಂತರ
ದುಃಸ್ವಪ್ನವೇ ಅನಿಸಿರಬಹುದು
ಪಾಠಗಳೆಲ್ಲವೂ ಅವಳದೇ ಕುರಿತು
ಅರ್ಥದಲೊಳಾರ್ಥವಿರಬಹುದು

ನಕ್ಕರೆ ನವರಾತ್ರಿಯ ದೀಪೋತ್ಸವ
ಮಾತಿಗೆ ಸಿಕ್ಕರೆ ಸಕ್ಕರೆಯು
ಪ್ರೌಢತೆಯ ಮೂರುತಿಯಾಗಿದ್ದಳು
ನಾ ಮೆರೆಸಿದ ರಥ ಸಾರಥಿಯೂ

ಆಕೆ ಗಿರಿಜೆ, ಶಂಕರನಾಗೋ
ಯೋಗ್ಯತೆ ನಾ ಪಡೆದಿರಲಿಲ್ಲ
ನನ್ನೊಳ ಪ್ರೇಮ, ನುಡಿಸದ ಕೊಳಲು
ಆಕೆಗೆ ಕೇಳಿಸಲಾಗಿಲ್ಲ !!

                                 -- ರತ್ನಸುತ 

Sunday, November 24, 2013

ನೀ ಪಟ್ಟು ಬಿಡದೆ ಕೂತು ?!!

ಒಮ್ಮೆ, ಮತ್ತೊಮ್ಮೆ, ಮಗದೊಮ್ಮೆ !!!
ಅಷ್ಟು ದೂರ ಕ್ರಮಿಸಿ
ಮರೆಯಾಗುವ ತಿರುವಿನಲ್ಲಿ
ಸಣ್ಣದೊಂದು ಖುಷಿಯ ಕೊಟ್ಟೆ
ಚೂರು ನಿದಾನಿಸಿ
ಹಿಂದಿರುಗಿ ನೋಡದರೆ
ಹೊಣೆಯಾಗುವೆ ಆಘಾತಕೆ
ಗದ್ದಲ ಎಬ್ಬಿಸಿ ಎದೆಯಲಿ
ಮೌನವ ನಿವಾರಿಸಿ

ಹತ್ತಿರದಲಿ ಅಷ್ಟು ದೂರ
ದೂರದಲ್ಲಿ ಹತ್ತಿರದ
ಭಾವ ಸ್ಪರ್ಶದೊಳಗೆ ಎನಿತು
ವಿಶೇಷವಿದು ಕಾಣೆ ?!!
ಮನದ ಪುಟ್ಟ ಅರಮನೆಯಲಿ
ದೀಪ ಹೊತ್ತು ಬಂದವಳೇ
ಈವರಿಗಿನ ಅಚ್ಚರಿಯ
ಪ್ರವೇಶ ನಿನ್ನದೇನೆ !!

ಸೋಲುವ ಪದಗಳ ಹಿಂಡು
ಸಾಗಿವೆ ಸೊರಗುತ ನೊಂದು
ಸಾಟಿಯಿಲ್ಲದಂಥ ನಗೆಯ
ಎದುರು ಸೆಣಸಿ ಸೋತು !
ಕಾವಲ ಕಣ್ಣನು ದಾಟಿ
ಹೃದಯದ ಬಾಗಿಲ ತಟ್ಟಿ
ಗದ್ದಿಗೆ ಹಿಡಿಯುವುದೇ


ನಂತರ ಆನಂತರ
ಈ ಹೊತ್ತಿನ ಈ ವಿವರ
ಸಲ್ಲಿಸುವ ಸರದಿಗೆ
ಸಾಲದಾಯ್ತು ಸೊಲ್ಲು
ಕೊಂಚ ಸುಧಾರಿಸಿ
ಮೊದಲಾಗುವೆ ಮಾತಿಗೆ
ವದಂತಿಗಳನು ಬದಿಗಿಟ್ಟು
ವಿನಂತಿಯನ್ನು ಕೇಳು

ಹುರುಳಿಲ್ಲದ ನನ್ನ
ಕವಲೊಡೆದ ದಾರಿ
ಪಯಣ ಎಲ್ಲಿಗೋ ಏನೋ
ಗೊತ್ತು ಗುರಿಯಿಲ್ಲ !
ಕ್ಷಿತಿಜದಲಿ ನಾನು
ಕೈ ಹಿಡಿವೆ ನಿನ್ನ
ನಾ ಭೂಮಿ, ನೀ ಬಾನು
ಕ್ಷುಲ್ಲಕ ಮಿಕ್ಕೆಲ್ಲ !!

               -- ರತ್ನಸುತ 

Saturday, November 16, 2013

ಸಾಂದರ್ಭಿಕ ಸೋಪಾನ !!! - ರತ್ನಸುತ

ಆಕೆ ಮುನಿಸಿಕೊಂಡಾಗ
ಮೂಗು, ಕೆಂಡ ಸಂಪಿಗೆ
ಕಣ್ಣು, ಕಿಡಿ ಕಾರುವ ಕುಂಡ
ಕೆನ್ನೆ, ಲಾವಾ ರಸ ಹರಿದ ಹಾದಿ
ತುಟಿ, ಕಚ್ಚಿದ ಹಲ್ಲಿಗೆ ಬೆಚ್ಚಿದ ಬಳ್ಳಿ
ನುಡಿ, ಅಪಶೃತಿಯ ಹಾಡು
ನಡೆ, ಭೂ ಕಂಪನಕೆ ಕಂಪನ
ಮೈ, ಕಾಡ್ಗಿಚ್ಚ ಕಾನನ
ಕೈ, ಅದರಿದ ಆಯುಧ

ಆಕೆ ನಾಚಿಕೊಂಡಾಗ
ಮೂಗು, ಅರಳು ಮಲ್ಲಿಗೆ
ಕಣ್ಣು, ರಾತ್ರಿಯ ಮಿನುಗು ಚುಕ್ಕಿ
ಕೆನ್ನೆ, ಮುಸ್ಸಂಜೆ ಬಾನು
ತುಟಿ, ಸುರಪಾನದ ಉಚಿತ ಮಳಿಗೆ
ನುಡಿ, ನೊರೆ ಹಾಲಿನ ಪೇಯ
ನಡೆ, ತಾಳಕೆ ಬೆರಗು ವೈಖರಿ
ಮೈ-ಸೂರಿನ ತುಪ್ಪದ ಪಾಕ
ಕೈ ಸೋಕಲು ಕಾಣ್ವುದು ನಾಕ

ಆಕೆ ಅಚ್ಚರಿಗೊಂಡಾಗ
ಮೂಗು, ಮೂರ್ಸುತ್ತು ಮಲ್ಲಿಗೆ
ಕಣ್ಣು, ಬತ್ತಿ ಏರಿಸಿದ ಉರಿ ದೀಪ
ಕೆನ್ನೆ, ಅಂಕು ಡೊಂಕು ಮಣ್ಣ ಜಾಡು
ತುಟಿ, ಕುತೂಹಲದ ಕೂಸು
ನುಡಿ, ಬರೀ ತೊದಲು
ನಡೆ, ಮೋಹಕ ಮಜಲು
ಮೈ, ಶಿಲೆಯ ನಿಲುವು
ಕೈ, ಕೆನ್ನೆ ಸಲುವು

ಆಕೆ ನಟಿಸುವಾಗ
ಮೂಗು, ನಟನೆಯ ಸುಳುವು
ಕಣ್ಣು, ಕಾಡಿಗೆ ಗೂಡು
ಕೆನ್ನೆ, ಕೃತಕ ಹೂಬನ
ತುಟಿ, ಒತ್ತಾಯದ ನಗೆ ಸಿಂಚನ
ನುಡಿ, ತಾತ್ಕಾಲಿಕ ಸದ್ದು
ನಡೆ, ಬೇಕನಿಸದ ಮುಗಿಲು
ಮೈ, ನನ್ನದಲ್ಲದ ಆಸ್ತಿ
ಕೈ-ಕೊಡುಗೈಯ್ಯ ಕುಸ್ತಿ

ಆಕೆ ಅಳುವಾಗ
ಮೂಗು, ಉಸಿರಿಗಿಕ್ಕಟ್ಟು ಮೂಸೆ
ಕಣ್ಣು, ಉಕ್ಕಿದ ಕಡಲು
ಕೆನ್ನೆ, ಮಳೆಗಾಲದ ನೆಲ
ತುಟಿ, ಕಂಬನಿಗೆ ಜಾರು ಸ್ಥಳ
ನುಡಿ, ಬಿಕ್ಕಳಿಕೆ ಬಂಧು
ನಡೆ, ನುಡಿಯಂತೆ ನೊಂದು
ಮೈ- ಮನಸಿಗೆ ಘಾಸಿ
ಕೈ ಬಯಸಿತು ಪ್ರೀತಿ
ರತ್ನಸುತ

ಆಕೆ ನಾನಾದಾಗ
ಮೂಗು, ದಾರಿಗೊಂದು ದಿಕ್ಸೂಚಿ
ಕಣ್ಣು, ಬದುಕಿಗೆ ಕಾವಲು
ಕೆನ್ನೆ, ಕಾವ್ಯ ಫಲಕ
ತುಟಿ, ಆಮ್ಲಜನಕ
ನುಡಿ, ಶಬ್ಧಕೋಶ
ನಡೆ, ವೀರಾವೇಶ
ಮೈ, ಗೋಪುರ ಕಳಶ
ಕೈ, ಕುಸುರಿ ವಿಳ್ಹಾಸ

-- ರತ್ನಸುತ

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...