Showing posts with label ಜಿ. ಪಿ. ರಾಜರತ್ನಂ. Show all posts
Showing posts with label ಜಿ. ಪಿ. ರಾಜರತ್ನಂ. Show all posts

Saturday, May 7, 2011

ಯೆಂಡ ಯೆಡ್ತಿ ಕನ್ನಡ್ ಪದಗೊಳ್

ಯೆಂಡ ಯೆಡ್ತಿ ಕನ್ನಡ್ ಪದಗೊಳ್
ಅಂದ್ರೆ ರತ್ನಂಗ್ ಪ್ರಾಣ!
ಬುಂಡೇನ್ ಎತ್ತಿ ಕುಡದ್ಬುಟ್ಟಾಂಡೆದ್ರೆ-
ತಕ್ಕೊ! ಪದಗೊಳ್ ಬಾಣ!

 ಬಗವಂತ್ ಏನ್ರ ಬೂಮೀಗ್ ಇಳದ
ನನ್ ತಾಕ್ ಬಂದಾಂತ್ ಅನ್ನು;

ಪರ್ ಗಿರೀಕ್ಸೆ ಮಾಡ್ತಾನ್ ಔನು-
ಬಕ್ತನ್ ಮೇಲ್ ಔನ್ ಕಣ್ಣು!

'ಯೆಂಡ ಕುಡಿಯಾದ್ ಬುಟ್ ಬುಡ್ ರತ್ನ!
'ಅಂತ್ ಔನ್ ಏನಾರ್ ಅಂದ್ರೆ-
ಮೂಗ್ ಮೂರ್ ಚೂರಾಗ್ ಮುರಸ್ಕೋಂತೀನಿ

ದೇವರ್ ಮಾತ್ಗ್ ಅಡ್ಬಂದ್ರೆ!
'ಯೆಂಡ ಬುಟ್ಟೆ. ಯೆಡ್ತೀನ್ ಬುಟ್ ಬುಡ್!'

ಅಂತ್ ಔನ್ ಏನಾರ್ ಅಂದ್ರೆ-
ಕಳದೋಯ್ತ್ ಅಂತ ಕುಣದಾಡ್ತೀನಿ
ದೊಡ್ಡ್ ಒಂದ್ ಕಾಟ! ತೊಂದ್ರೆ!

'ಕನ್ನಡ ಪದಗೊಳ್ ಆಡೋದ್ನೆಲ್ಲ
ನಿಲ್ಲೀಸ್ ಬುಡಬೇಕ್ ರತ್ನ!'
ಅಂತ್ ಔನ್ ಅಂದ್ರೆ - ದೇವ್ರ್ ಆದ್ರ್ ಏನು!
ಮಾಡ್ತೀನ್ ಔನ್ಗೆ ಖತ್ನ!

ಆಗ್ನೆ ಮಾಡೋ ಐಗೋಳ್ ಎಲ್ಲಾ
ದೇವ್ರೆ ಆಗ್ಲಿ - ಎಲ್ಲ!
ಕನ್ನಡ್ ಸುದ್ದೀಗ್ ಏನ್ರ ಬಂದ್ರೆ
ಮಾನಾ ಉಳಸಾಕಿಲ್ಲ

ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ
ಬಾಯ್ ಒಲಿಸಾಕಿದ್ರೂನೆ-
ಮೂಗ್ನಲ್ ಕನ್ನಡ್ ಪದವಾಡ್ತೀನಿ!
ನನ್ ಮನಸನ್ನ್ ನೀ ಕಾಣೆ!

ಯೆಂಡ ಓಗ್ಲಿ! ಯೆಡ್ತಿ ಓಗ್ಲಿ!
ಎಲ್ಲಾ ಕೊಚ್ಕೊಂಡ್ ಓಗ್ಲಿ!
ಪರ್ಪಂಚ್ ಇರೋ ತನಕ ಮುಂದೆ
ಕನ್ನಡ್ ಪದಗೊಳ್ ನುಗ್ಲಿ!

Friday, May 6, 2011

ರತ್ನನ್ ಪರ್ಪಂಚ.

ಯೇಳ್ಕೊಳ್ಳಾಕ್ ಒಂದ್ ಊರು
ತಲೇಮೇಗ್ ಒಂದ್ ಸೂರು
ಮಲಗಾಕೆ ಬೂಮ್ತಾಯಿ ಮಂಚ;
ಕೈ ಯಿಡದೋಳ್ ಪುಟ್ನಂಜಿ
ನೆಗನೆಗತ ಉಪ್ಗಂಜಿ
ಕೊಟ್ರಾಯ್ತು ರತ್ನನ್ ಪರ್ಪಂಚ!

ಅಗಲೆಲ್ಲ ಬೆವರ್ ಅರ್ಸಿ
ತಂದದ್ರಲ್ಲ್ ಒಸಿ ಮುರ್ಸಿ
ಸಂಜೇಲಿ ವುಳಿ ಯೆಂಡ ಕೊಂಚ
ಯೀರ್‍ತ ಮೈ ಝುಂ ಅಂದ್ರೆ
ವಾಸ್ನೆ ಘಂ ಘಂ ಅಂದ್ರ್‍ಎ
ತುಭೋಯ್ತು ರತ್ನನ್ ಪರ್ಪಂಚ!

ಏನೋ ಕುಸಿಯಾದಾಗ
ಮತ್ತ್ ಎಚ್ಚಿ ಓದಾಗ
ಅಂಗೇನೆ ಪರಪಂಚದ್ ಅಂಚ
ದಾಟ್ಕಂಡಿ ಆರಾಡ್ತ
ಕನ್ನಡದಲ್ ಪದವಾಡ್ತ
ಇಗ್ಗೋದು ರತ್ನನ್ ಪರ್ಪಂಚ!

ದುಕ್ಕಿಲ್ಲ ದಾಲಿಲ್ಲ
ನಮಗ್ ಅದರಾಗ್ ಪಾಲಿಲ್ಲ
ನಾವ್ ಕಂಡಿಲ್ಲ್ ಆ ತಂಚ ವಂಚ;
ನಮ್ಮಸ್ಟಕ್ ನಾವಾಗಿ
ಇದ್ದಿದ್ರಲ್ಲ್ ಆಯಾಗಿ
ಬಾಳೋದು ರತ್ನನ್ ಪರ್ಪಂಚ!

’ಬಡತನ ಗಿಡತನ
ಏನಿದ್ರೇನ್ ? ನಡೆತೇನ
ಚೆಂದಾಗ್ ಇಟ್ಕೊಳ್ಳಾದೆ ಅಚ್ಛ!’ -
ಅಂದ್ಕೊಂಡಿ ಸುಕವಾಗಿ
ಕಸ್ಟಕ್ ನೆಗಮೊಕವಾಗಿ
ನೆಗೆಯೋದೆ ರತ್ನನ್ ಪರ್ಪಂಚ!

ದೇವ್ರ್ ಏನ್ರ ಕೊಡಲಣ್ಣ
ಕೊಡದಿದ್ರೆ ಬುಡಲಣ್ಣ
ನಾವೆಲ್ಲ ಔನೀಗೆ ಬಚ್ಚ!
ಔನ್ ಆಕಿದ್ ತಾಳ್ದಂಗೆ
ಕಣ್ ಮುಚ್ಚೊಂಡ್ ಯೇಳ್ದಂಗೆ
ಕುಣಿಯಾದೆ ರತ್ನನ್ ಪರ್ಪಂಚ!

Thursday, May 5, 2011

ಮೊಟ್ಮೊದಲು.

ನನಗೂನೆ ಯೆಂಡಕ್ಕು ಬಲ್ ಬಲೆ ದೋಸ್ತಿ.
ಕುಡದ್ ಬುಟ್ಟಾಗ್ ಆಡೋದು ನಂಗ್ ಪೂರ ಜಾಸ್ತಿ.
ನಂಗ್ ಎಸರು ಯೇಳ್ತಾರೆ - ರ್ರರ್ರರ್ರರ್ರತ್ನ.
ನಾನ್ ಆಡೋ ಪದಗೋಳು ಯೆಂಡದ್ ಪ್ರಯತ್ನ.

ಮಾಬಾರ್‍ತ ಬರೆಯಾಕೆ ಯಾಸಂಗ್ ಇನಾಯ್ಕ
ಸಿಕ್ದಂಗೆ ನಂಗ್ ಒಬ್ಬ ಬೇವಾರ್ಸಿನಾಯ್ಕ
ಸಿಕ್ಕೋನೆ, ನನ್ ಆಡ್ನ ಕೂಡಿಸ್ದ ಬರ್‍ದು!
ಏನ್ ಐತೊ ಯಾರ್ ಬಲ್ರು ಔಂಗ್ ಇರೊ ದರ್‍ದು!

’ಬರಕೊಂಡ್ರೆ ಬರಕೊಂಡ್ ಓಗ್, ನಿಂಗೂನೆ ಐಲು;
ಆದಸ್ಟೂ ಮಾಡಾನೆ ಸಾಯ ನಂಕೈಲು’
ಅಂದ್ಕಂಡ್ ಔನ್ ಬರದಿದ್ನ ಅಚ್ಗ್ ಆಕೋಕ್ ಒಪ್ಪಿ
ಕಳಿಸಿವ್ನಿ. ಬೈದೀರ ನನಗೇನ್ರ ತಪ್ಪಿ!

ಅಕ್ಸಾರ ಗಿಕ್ಸಾರ ನನಗೇನೂ ಬರ್‍ದು.
(ದೊಡ್ ಚಾಕ್ರಿ ಬೇಕಂದ್ರೆ ಓದೆ ಬೇಕು ದರ್‍ದು!)
ಪದಗೋಳು ಚಂದ್ ಇದ್ರೆ ಯೆಂಡಕ್ ಸಿಪಾರ್ಸಿ!
ಚಂದಾಗ್ ಇಲ್ದಿದ್ರನಕ ತಪ್ಗೆ ಬೇವಾರ್ಸಿ!

Wednesday, May 4, 2011

ಕುಡಕರ್ ಮಾತ್ವ.

ಕುಡಕರ್ ಮಾತ್ವ ತಿಳಿಕೊಳ್ದೇನೆ
ನೂಕ್ಬಾರ್ದ್ ಔರ್‍ನ ಕೆಳಗೆ;
ಯಾವ್ ಚಿಪ್ನಾಗ್ ಮುತ್ತ್ ಐತೊ-
ಒಡದ್ ನೋಡ್ಬೇಕ್ ಒಳಗೆ!

ಕೊಚ್ಚೆ ನೀರೀನ್ ಸೋದೀಸ್ತ್ ಅಂದ್ರೆ
ಸಿಕ್ಕೋಕಿಲ್ವ ಗಂಗೆ?
ಸಾಜಾ ಯೇಳೋನ್ ಯಾರಾದ್ರೇನು?
ಸತ್ಯ ಕಣ್ ಕಂಡೌಂಗೆ!

ಆರ್‍ತ್ ಇಲ್ಲಾಂತ್ ನೆಗಬೇಡಾಣ್ಣ
ನಾಕುಡದಾಡೋ ಮಟ್ಟು!
ಕುಡಕನ್ ಪದಗೊಳ್ ಒಕ್ಕ್ ನೋಡಿದ್ರೆ
ಮಸ್ತಾಗ್ ಅವೆ ಗುಟ್ಟು!

’ರವ್ವಿ ಕಾಣದ್ ಕವಿ ಕಂಡ’
ಅಂದ್ರೆ ಕವಿಗೊಳ್ ತತ್ವ-
’ಕವ್ವಿ ಕಾಣದ್ ಕುಡಕ ಕಂಡ’
ಅನ್ನೊದ್ ಕುಡಕರ್ ಮಾತ್ವ!

Tuesday, May 3, 2011

ರತ್ನನ್ ಯೋಚ್ನೆ.


ಬಯಸಿದ ಸಾಮನ್ ಬೇಕಾದಂಗೆ
ಇರಲಿ ಇಲ್ದೇನ್ ಇರಲಿ-
ತಾಪತ್ರೇಯನಕ್ ತಪ್ಪಿದ್ದಲ್ಲ!
ಸುಳ್ಳಂತ್ ಅನ್ನೌನ್ ಬರಲಿ!

ಬುಂಡೇಲ್ ಒಂದ್ ತೊಟ್ ಇರೊಗಂಟ್ಲೂನೆ
ನಿದ್ದೆ ಗಿದ್ದೆ ಬರದು!
ಬುಂಡೇ ಕಾಲಿ ಆಗೋದ್ರನಕ
ನಿದ್ದೆ ಬರಲೇ ಬರದು!

ಈ ತಾಪತ್ರೇನ್ ತಳ್ಳಾಕಾಕೆ
ಏನ್ ಮಾಡ್ಬೇಕೊ ಕಾಣೆ!
ಯೋಚಿಸ್ದಸೂ ತಗಲ್ಕೋಂತೈತ್ ಆ
ಯೋಚ್ನೇಗ್ ಒಂದ್ ಒಸ್ ಸಾಣೆ!

ಬಯಸಿದ್ ಸಾಮಾನ್ ಬೇಕಾದಂಗೆ
ಇರಲಿ ಇಲ್ದೇನ್ ಇರಲಿ-
ತಾಪತ್ರೇಯನಕ್ ತಪ್ಪಿದ್ದಲ್ಲ!
ಸುಳ್ಳಂತ್ ಅನ್ನೌನ್ ಬರಲಿ.

Monday, May 2, 2011

ಬಣ್ಣದ ತಗಡಿನ ತುತ್ತೂರಿ

ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ

ಸರಿಗಮಪದನಿಸ ಊದಿದನು
ಸನಿದಪಮಗರಿಸ ಊದಿದನು

ತನಗೆ ತುತ್ತೂರಿ ಇದೆಯೆಂದು ಬೆರಾರಿಗು ಅದು ಇಲ್ಲೆಂದ
ತುತ್ತುರಿ ಊದಿದ ಕೊಳದ ಬಳಿ ಕಸ್ತುರಿ ನಡದನು ಬೀದೆಯಲಿ
ಜಂಬದ ಕೋಳಿಯ ರೀತಿಯಲಿ

ಜಾರಿತು ನೀರಿಗೆ ತುತ್ತೂರಿ ಗಂಟಲು ಕಟ್ಟಿತು ನೀರೂರಿ
ಸರಿಗಮ ಊದಲು ನೋಡಿದನು ಗಗಗಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು ಜಂಬದಕೋಳಿಗೆ ಗೋಳಾಯ್ತು

Sunday, May 1, 2011

ನಾಯಿಮರಿ ನಾಯಿಮರಿ ತಿಂಡಿ ಬೇಕೆ

ನಾಯಿಮರಿ ನಾಯಿಮರಿ ತಿಂಡಿ ಬೇಕೆ
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು

ನಾಯಿಮರಿ ನಿನಗೆ ತಿಂಡಿ ಏಕೆ ಬೇಕು
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು

ನಾಯಿಮರಿ ಕಳ್ಳ ಬಂದರೇನು ಮಾಡುವೆ
ಕ್ವೊಂ ಕ್ವೊಂ ಬೌ ಎಂದು ಕೂಗಿ ಪಾಡುವೆ

ಜಾಣಮರಿ ತಾಳು ಹೋಗಿ ತಿಂಡಿ ತರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು

Saturday, April 30, 2011

ಜಿ. ಪಿ. ರಾಜರತ್ನಂ

'ಜಿ. ಪಿ. ರಾಜರತ್ನಂ' ರವರು ಹೆಸರಾಂತ ಗುಂಡ್ಲು ಪಂಡಿತ ವಂಶ ದಲ್ಲಿ ಡಿಸೆಂಬರ್ ೦೫, ೧೯೦೪ರಂದು ಜನಿಸಿದರು. ತಾಯಿಯ ಪ್ರೀತಿ ಇಲ್ಲದೆ ಬೆಳೆದ ರಾಜರತ್ನಂಗೆ, ತಂದೆಯೇ ಎಲ್ಲವೂ ಆಗಿದ್ದರು. ಅಜ್ಜಿಯ ಅಕ್ಕರೆಯಲ್ಲೂ ರಾಜರತ್ನಂ ಬೆಳೆದರು. ತಂದೆ ಬಡ ಮೇಸ್ಟ್ರು. ಸ್ವಾತಂತ್ರ್ಯ ಪೂರ್ವದಲ್ಲೇ (೧೯೩೧ರಲ್ಲಿ) ರಾಜರತ್ನಂ ಎಂ. ಎ (ಕನ್ನಡ) ದಲ್ಲಿ ಮುಗಿಸಿ, ಶಿಶು ವಿಹಾರ ಹಾಗೂ ತಂದೆಯ ಶಾಲೆಯಲ್ಲಿ ಆರಂಭಿಕ ಮೇಸ್ಟ್ರು ಆದರು. ಇದರ ಅನುಭವದ ಫಲವೇ ಮಕ್ಕಳ ಕುರಿತು ಬರೆದ `ತುತ್ತೂರಿ' ಶಿಶು ಗೀತೆ ಸಂಕಲನ'. ಕ್ರಮೇಣ ಆ ಕೆಲಸ ತೃಪ್ತವಾಗದೆ ಹೈದರಾಬಾದಿಗೂ ಕೆಲಸ ಹುಡುಕಿ ಹೋಗಿದ್ದುಂಟು. ಅಲ್ಲಿಂದ ನಿರಾಶರಾಗಿ ಬೆಂಗಳೂರಿಗೆ ಬಂದು ಜನಗಣತಿ ಕಛೇರಿಯಲ್ಲಿ ಕೆಲಸಕ್ಕೆ ಪ್ರಯತ್ನಿಸಿದರು. ಆದರೆ ಅಲ್ಲಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ರಾಜರತ್ನಂರವರಿಗೆ 'ಸಾಹಿತ್ಯ ಸೇವೆ' ಮುಂದುವರೆಸಲು ಉಪದೇಶಿಸಿದರು. ಅದರ ಫಲವೇ ಮುಂದೆ 'ರಾಜರತ್ನಂ' ಅವರಿಂದ 'ಉತ್ತಮ ಸಾಹಿತ್ಯ ನಿರ್ಮಾಣ'ಕ್ಕೆ ದಾರಿಯಾಯಿತು. ಬೌದ್ಧ ಸಾಹಿತ್ಯ ಇಂಥ ಉಪಯುಕ್ತ ಸಾಹಿತ್ಯದಲ್ಲೊಂದು 'ಮಿಂಚು'.

ರಾಜರತ್ನಂ ಅವರಿಗೆ ವೈವಾಹಿಕ ಜೀವನದಲ್ಲಿ ಸಾಕಷ್ಟು ನೋವುಂಟಾಯಿತು. ಪತ್ನಿ ಲಲಿತಮ್ಮ ಕಾಯಿಲೆ ಬಿದ್ದವರು ಉತ್ತಮವಾಗಲೇ ಇಲ್ಲ. ವಿಧಿವಶರಾದರು. ಅವರ ನೆನಪು ಹಸಿರಾಗಿದ್ದಾಗಲೇ ಸೀತಮ್ಮ ಅವರ 'ಬಾಳನಂದಾದೀಪ'ವಾಗಿ ಬಂದರು. ಬದುಕು ಸ್ಥಿರವಾಯಿತು. ಕಷ್ಟ ಕಾರ್ಪಣ್ಯಗಳ ನಡುವೆ ೧೯೩೮ರಲ್ಲಿ 'ಕನ್ನಡ ಪಂಡಿತ ಹುದ್ದೆ', ರಾಜರತ್ನಂ ಅವರನ್ನು ಹುಡುಕಿ ಬಂತು. ಮೈಸೂರು, ಬೆಂಗಳೂರು, ಶಿವಮೊಗ್ಗ, ತುಮಕೂರುಗಳಲ್ಲಿ ಅಧ್ಯಾಪಕರಾಗಿ, ಮೆಚ್ಚಿನ ಮೇಸ್ಟ್ರು ಆಗಿ ಖ್ಯಾತರಾದರು

"ರತ್ನನ ಪದಗಳು" ರಾಜರತ್ನಂ ಅವರ ವಿಶಿಷ್ಟ ಕೊಡುಗೆ. ಇದರಲ್ಲಿ ಅವರ ಜೀವನ ದರ್ಶನವಿದೆ. 'ಕುಡುಕ'ನೆಂಬ ಹೀಯಾಳಿಕೆಗೆ ಗುರಿಯಾದ ಬಡವನೊಬ್ಬನ ಕಾಣ್ಕೆ, ನೋವು, ನಲಿವು, ಒಲವು, ಗೆಲವು, ಸೋಲು ಎಲ್ಲಾ ಈ ಕಾವ್ಯದಲ್ಲಿ ಮೈದುಂಬಿವೆ. 'ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ' ಎಂಬ ಶಿಶು ಗೀತೆಯಿಂದ, ಎಂಡಕುಡುಕ ರತ್ನನ ಪದಗಳನ್ನಲ್ಲದೆ ನೂರಾರು ಕೃತಿಗಳನ್ನು ರಚಿಸಿ ಕನ್ನಡ ಕಾಯ್ದ, ಬೋಧಿಸಿದ `ಮೇಷ್ಟ್ರು' ಆಗಿ ಹೆಸರಾದವರು ಜಿ.ಪಿ.ರಾಜರತ್ನಂ ಅವರು. ಟಿ. ಪಿ.ಕೈಲಾಸಂ ಅವರ ಸಾಹಿತ್ಯ ಪ್ರಭಾವ, ಭಾಷೆ ಬಳಕೆ ರಾಜರತ್ನಂ ಅವರ ಮೇಲಾಗಿರುವುದು ಕಾಕತಾಳೀಯ ಇರಬಹುದು.

“ಇಗೋ, ಬೆಂಗಳೂರು ಹೀಗಿತ್ತು”ಜಿ. ವೆಂಕಟಸುಬ್ಬಯ್ಯ -

“ ಇಗೋ , ಬೆಂಗಳೂರು ಹೀಗಿತ್ತು ” ಜಿ . ವೆಂಕಟಸುಬ್ಬಯ್ಯ   ಅರವತ್ತು ವರ್ಷಗಳ ಹಿಂದೆ ಬೆಂಗಳೂರು ಇಷ್ಟು ದೊಡ್ಡದಾಗಿರಲಿಲ್ಲ . ಆಗ ಎರಡು ಬೆಂಗಳೂರು ಇತ್ತು ...