Showing posts with label ಎಸ್ ಆರ್ ರಾಮಸ್ವಾಮಿ. Show all posts
Showing posts with label ಎಸ್ ಆರ್ ರಾಮಸ್ವಾಮಿ. Show all posts

Sunday, April 12, 2026

ಕರಗಿತು ಕಂಪಿನ ಕರ್ಪೂರ... - ಮಹೇಶ ಭಟ್ಟ ಆರ್. ಹಾರ್ಯಾಡಿ


ಮೊನ್ನೆಯ ದಿನ (೧೦.೦೪.೨೬) ಬೆಳಗ್ಗೆ ನಾನು ಕಾಲೇಜಿಗೆ ಸೇರಿಕೊಂಡ ಸ್ವಲ್ಪ ಹೊತ್ತಿನಲ್ಲೇ ನನ್ನ ಶ್ರೀಮತಿ ಕರೆಮಾಡಿ 'ನಾಡೋಜ ಎಸ್. ಆರ್. ರಾಮಸ್ವಾಮಿ ಅವರು ಭೌತಿಕವಾಗಿ ಇನ್ನಿಲ್ಲ ಎಂಬ ಸುದ್ದಿ ಬರುತ್ತಿದೆ' ಎಂದು ಹೇಳಿದಾಗ 'ಕಂಠಃ ಸ್ತಂಭಿತಬಾಷ್ಪವೃತ್ತಿಕಲುಷಃ' ಎಂಬ ಕವಿವಾಣಿಯಂತೆ ಗಂಟಲು ಕಟ್ಟಿತು. 'ತಸ್ಮಾದಪರಿಹಾರ್ಯೇऽರ್ಥೇ ನ ತ್ವಂ ಶೋಚಿತುಮರ್ಹಸಿ' ಎಂಬ ಸಾಲನ್ನು ನೂರಾರು ಬಾರಿ ಹೇಳಿ ನಾಲಗೆಗೆ ಅಭ್ಯಾಸ ಇರಬಹುದು, ಆದರೆ ಹೃದಯಕ್ಕೆ ತಿಳಿದಿರಬೇಕಲ್ಲ! ಭಾವದ ಮುಂದೆ ಬುದ್ಧಿಯ ಹಾರಾಟ ಫಲಿಸುತ್ತದೆಯೇ? 


ಶತಾವಧಾನಿ ಆರ್. ಗಣೇಶರು ಸಲ್ಲಿಸಿದ ಅಂತರಂಗದ ಶ್ರದ್ಧಾಂಜಲಿಯ ಮಾತುಗಳನ್ನು ಕೇಳಿದೆ. ಸರ್ವಶ್ರೀ ಎಸ್. ಸೂರ್ಯಪ್ರಕಾಶ ಪಂಡಿತ್, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಶಶಿಕಿರಣ ಬಿ. ಎನ್., ಮಂಜುನಾಥ ಅಜ್ಜಂಪುರ, ದು. ಗು. ಲಕ್ಷ್ಮಣ, ರಮೇಶ ದೊಡ್ಡಾಪುರ, ನೀಲಕಂಠ ಕುಲಕರ್ಣಿ, ಸುದರ್ಶನ ಮುರಳೀಧರ, ಮಂಜುನಾಥ ಕೊಳ್ಳೇಗಾಲ, ಪು. ರವಿವರ್ಮ ಅವರ ಅನುಭವದ ಮಾತುಗಳನ್ನು ಓದಿದೆ. ರಾಮಸ್ವಾಮಿ ಅವರು ಗೋಖಲೆ ಸಾರ್ವಜನಿಕವಿಚಾರಸಂಸ್ಥೆಗೆ ಮುಖಮಾಡಿ ನಿಂತ ಚಿತ್ರವನ್ನು ಮತ್ತೆ ಮತ್ತೆ ನೋಡಿದೆ. ಮಡುಗಟ್ಟಿದ ಕಣ್ಣೀರು ಕಟ್ಟೆಯೊಡೆಯಿತು. ಏನು ಬರೆಯಲೆಂದು ತೋಚಲಿಲ್ಲ. ಆದರೂ ನನ್ನ ಅನುಭವವನ್ನು ನಾನೇ ಬರೆಯಬೇಕಷ್ಟೆ! ಬರೆದು ಹಗುರಾಗುವ ಪ್ರಯತ್ನ. 


ನನ್ನ ಮನಸ್ಸು ಸರಿ ಸುಮಾರು ೧೮-೨೦ ವರ್ಷಗಳ ಹಿಂದೆ ಹೋಗುತ್ತಿದೆ. ಅಭಿಜ್ಞಾನಪ್ರಕಾಶನದ ಮೂಲಕ ಪರಿಚಿತರಾಗಿ ಆತ್ಮೀಯರಾದ ಎಸ್. ಸೂರ್ಯಪ್ರಕಾಶ ಪಂಡಿತರ ಜೊತೆ ಒಂದು ಸಂಜೆ ಗೋಖಲೆ ಸಾರ್ವಜನಿಕವಿಚಾರಸಂಸ್ಥೆಗೆ ಹೋಗಿದ್ದೆ. ಅಲ್ಲಿ ಮೊದಲ ಬಾರಿಗೆ ಈ ಉನ್ನತ ವ್ಯಕ್ತಿತ್ವವನ್ನು ಕಂಡು ಅಂತಃಕರಣ ಕರಗಿದ ಅನುಭವ. ಪಂಡಿತರು ನನ್ನ ಪರಿಚಯವನ್ನು ರಾಮಸ್ವಾಮಿ ಅವರಿಗೆ ಹೇಳಿದ ಕೂಡಲೇ ನಾನು ಕಾಲಿಗೆರಗಿದೆ. ಬೆನ್ನು ತಟ್ಟಿ ತಮ್ಮ ನಿಡಿದಾದ ತೋಳಿನಿಂದ ನನ್ನ ಭುಜವನ್ನು ಬಳಸಿ ನಿಂತರು. ಬೇರೆ ಬೇರೆ ವಿಷಯಗಳ ಕುರಿತು ಮಾತಿನ ಲಹರಿ ಹರಿದಾಡುತ್ತಿತ್ತು. ಒಮ್ಮೆ ಖಲೀಲ್ ಗಿಬ್ರಾನ್, ಮತ್ತೊಮ್ಮೆ ಚಾರ್ಲ್ಸ್ ಡಿಕನ್ಸ್, ಇನ್ನೊಮ್ಮೆ ಡಿ. ವಿ. ಜಿ. ಮತ್ತು ವಿ. ಸೀತಾರಾಮಯ್ಯ, ಮತ್ತೊಮ್ಮೆ ಆನಂದವರ್ಧನ, ಇನ್ನೊಮ್ಮೆ ಬೆಳ್ಳಾವೆ ನರಹರಿ ಶಾಸ್ತ್ರಿಗಳು, ಮತ್ತೆ ಮನಶ್ಶಾಸ್ತ್ರ, ಪಾಕಶಾಸ್ತ್ರ, ಕ್ರೀಡೆ, ರಾಜಕಾರಣ, ಸಂಗೀತ, ಸಿನೇಮಾ ಹೀಗೆ ಸಾಗುತ್ತಿತ್ತು. ಇನ್ನು ಕೆಲವು ನನಗೆ ಕೇಳಿಯೂ ತಿಳಿಯದ ಫ್ರೆಂಚ್, ಜರ್ಮನ್ ಮೊದಲಾದ ಯಾವುದೋ ವೈದೇಶಿಕಭಾಷೆಯ ಲೇಖಕರ ವಿಚಾರವೂ ಬರುತ್ತಿತ್ತು. ಅವರು ನನಗೆ ಒರಗಿ ನಿಂತಾಗ 'ನಾವಿಬ್ಬರೂ ಒಟ್ಟಿಗೆ ಬಿದ್ದರೆ?' ಎಂದು ಹೆದರಿಕೆ ಆಗುತಿತ್ತು. ಇಷ್ಟೆಲ್ಲ ವಿಷಯಗಳ ಅರಿವು ಸೇರಿ ಈ ಭಾರವಾಯಿತೇನೋ ಎಂಬಂತೆ ಭಾಸವಾಗುತ್ತಿತ್ತು. ಗೋಖಲೆಯ ಉಪನ್ಯಾಸಗಳಲ್ಲಿ ಸ್ವಾಗತ ಮತ್ತು ವಂದನೆ ಸಲ್ಲಿಸುತ್ತಿದ್ದ ಇವರ ಮಾತು ಮುಂದಿನ ಉಪನ್ಯಾಸದ್ರುಮವನ್ನು ತನ್ನೊಳಗೆ ಅಡಗಿಸಿಕೊಂಡ ಬೀಜದಂತಿರುತ್ತಿತ್ತು. ಒಮ್ಮೊಮ್ಮೆ ಅಂದಿನ ಉಪನ್ಯಾಸಕ್ಕಿಂತ ಇವರ ಸ್ವಾಗತವೇ ರೋಚಕ ಎನಿಸುವಷ್ಟು ರಸವತ್ತಾಗಿರುತ್ತಿತ್ತೆನ್ನಿ!


ಇದಾದಮೇಲೆ ಆಗೊಮ್ಮೆ ಈಗೊಮ್ಮೆ ಬೆಂಗಳೂರಿಗೆ ಹೋದಾಗ ಅವರನ್ನು ನೋಡಿದಂತಾಯಿತೆಂದು ರಾಷ್ಟ್ರೋತ್ಥಾನದ ಕಚೇರಿಗೆ ಹೋದದ್ದೂ ಇದೆ. ನನ್ನ ಮದುವೆಯ ಕರೆಯೋಲೆಯನ್ನು ನೀಡಿ ಆಶೀರ್ವಾದ ಪಡೆಯಲು ಅವರ ತಪೋಭೂಮಿಗೆ ಹೋಗಿದ್ದೆ. ಆತ್ಮೀಯವಾಗಿ ಮಾತನಾಡಿ ಅವರ ಕೆಲವು ಪುಸ್ತಕಗಳನ್ನು ನನಗೆ ಉಡುಗೊರೆಯಾಗಿ ಇತ್ತು ಹರಸಿದರು. ಅವರ ಬಳಗದವರು ಬಲ್ಲಂತೆ ಖಡಕ್ ಕಾಫಿಯ ವಿನಿಕೆಯೂ ಆಯಿತು. ಕಷಾಯ, ಚಹಾ ಇತ್ಯಾದಿಗಳಿಗೆ ಒಗ್ಗಿಕೊಂಡ ನಾನು ಕರಾವಳಿಯ ವಾತಾವರಣದಲ್ಲಿ ನನ್ನ ದೇಹಪ್ರಕೃತಿಗೆ ಅನುಗುಣವಾಗಿ ಖಡಕ್ ಕಾಫಿಯಿಂದ ಸ್ವಲ್ಪ ದೂರವೇ. ಆದರೂ ಅವರ 'ಸ್ಟ್ರಾಂಗ್' ವಾತ್ಸಲ್ಯದ ಮುಂದೆ 'ಲೈಟ್' ಎನಿಸಿದ ಆ ಕಾಫಿಯನ್ನು ಹೀರಿದೆ. 


ನನ್ನ ಚಿಕ್ಕಪ್ಪ ಕೀರ್ತಿಶೇಷ ಹಾರ್ಯಾಡಿ ಮಂಜುನಾಥ ಭಟ್ಟರು ಉತ್ಥಾನದಲ್ಲಿ ದಶಕಕ್ಕೂ ಹೆಚ್ಚು ಕಾಲ ರಾಮಸ್ವಾಮಿಗಳ ಒಡನಾಟ ಪಡೆದುಕೊಂಡ ಭಾಗ್ಯವಂತರು. ನಾವು ಒಟ್ಟಿಗೆ ಸೇರಿದಾಗಲೆಲ್ಲ ರಾಮಸ್ವಾಮಿ ಅವರ ವಿಷಯ ಬಂದೇ ಬರುತ್ತಿತ್ತು. ನಮ್ಮ ಚಿಕ್ಕಪ್ಪನಿಗೆ ಅನಾರೋಗ್ಯ ಆದಾಗ ತಮ್ಮ ವಯಸ್ಸು, ದೈಹಿಕ ಬಾಧೆಗಳನ್ನೂ ಲೆಕ್ಕಿಸದೆ ಮಹಡಿಯ ಮೆಟ್ಟಿಲುಗಳನ್ನು ಹತ್ತಿ ಬಂದು ಯೋಗಕ್ಷೇಮ ವಿಚಾರಿಸಿದ ಎತ್ತರದ ವ್ಯಕ್ತಿತ್ವ ರಾಮಸ್ವಾಮಿ ಅವರದು. ಚಿಕ್ಕಪ್ಪ ಭೌತಿಕವಾಗಿ ಇನ್ನಿಲ್ಲವಾದಾಗ ಉತ್ಥಾನಕ್ಕಾಗಿ ನನ್ನಿಂದಲೇ ಶ್ರದ್ಧಾಂಜಲಿಲೇಖನವನ್ನು ಬರೆಸಿದರು. 


ಎಷ್ಟೋ ಬಾರಿ ಅವರ ಜೊತೆಗೊಂದು ಫೋಟೋ ತೆಗೆಸಿಕೊಳ್ಳಬೇಕೆಂದು ಮನಸಾಗುತ್ತಿತ್ತು. ಆದರೆ ಅವರೆದುರು ನಿಂತಾಗ ಮಾತ್ರ ಅದೆಲ್ಲವನ್ನೂ ಮರೆಸುವಷ್ಟು ನಮ್ಮನ್ನು ಆವರಿಸುತ್ತಿದ್ದರು. ಆ ಅನುಭೂತಿಯ ಮುಂದೆ ಇದಾವುದೂ ನೆನಪಿಗೆ ಬರುತ್ತಿರಲಿಲ್ಲ. ಇನ್ನೊಮ್ಮೆ ರಾಮಸ್ವಾಮಿ ಅವರ ಭೇಟಿ ಆದಾಗ ಒಂದು ಫೋಟೋ ತೆಗೆದುಕೊಡಬೇಕು ಎಂದು ಇತ್ತೀಚೆಗೆ ಯಾವಾಗಲೋ ಆತ್ಮೀಯರಾದ ವಿಘ್ನೇಶ್ವರ ಭಟ್ಟರಿಗೆ ಹೇಳಿದ್ದೆ. ಆದರೆ ಆ ದಿನ ಬರಲೇ ಇಲ್ಲ. ಆದರೆ ಅವರು ನನ್ನ ಭುಜ ಬಳಸಿ ನಿಂತ ಚಿತ್ರ ಎಂದಿಗೂ ಸ್ಮೃತಿಪಟಲದಿಂದ ಮಾಸದು. ಅಂತಹ ಒಂದು ಪಾರಿಜಾತದ ಘಮಲನ್ನು ನನ್ನ ಅಂತರಂಗದಲ್ಲಿ ತುಂಬಿಕೊಳ್ಳಲು ಮೊದಲಿಗೆ ಕಾರಣರಾಗಿ ಒದಗಿಬಂದ ಆತ್ಮೀಯರಾದ ಸೂರ್ಯಪ್ರಕಾಶ ಪಂಡಿತರಿಗೆ ನಾನು ಋಣಿ. 


ಮತ್ತೊಮ್ಮೆ ಯಾವಾಗಲೋ ರಾಮಸ್ವಾಮಿ ಅವರು ಉಡುಪಿಗೆ ಬಂದಾಗ ನಮ್ಮ ಎಸ್.ಎಮ್. ಎಸ್. ಪಿ. ಸಂಸ್ಕೃತ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿರುವ ಡಿ. ವಿ. ಜಿ. ಅವರ ಕೈಬರೆಹ ಇದ್ದ ಗೀತಶಾಕುಂತಲ ಪುಸ್ತಕವನ್ನು ತೋರಿಸಿದೆ. ಅದನ್ನು ನೋಡಿ 'ಇದು ಡಿ. ವಿ. ಜಿ. ಅವರ ಕೈಬರೆಹ ಹೌದು. ಅವರು ಎಷ್ಟೋ ಜನರಿಗೆ ಹೀಗೆ ಪುಸ್ತಕಗಳನ್ನು ಕಳುಹಿಸುತ್ತಿದ್ದರು' ಎಂದು ಹೇಳಿದರು. ರಾಮಸ್ವಾಮಿ ಅವರೂ ತಮ್ಮ ಗುರುವಿನಂತೆಯೇ. ಆತ್ಮೀಯ ಮಿತ್ರ ಶಶಿಕಿರಣ ಬಿ. ಎನ್. ಎಷ್ಟೋ ಪುಸ್ತಕಗಳನ್ನು ಕಳುಹಿಸಿದಾಗ ನಾನು ಅದರ ಮೊಬಲಗನ್ನು ಕೊಡುವ ವಿಚಾರ ಕೇಳಿದರೆ 'ನಿಮಗೆ ಕಳುಹಿಸಬೇಕೆಂದು ರಾಮಸ್ವಾಮಿ ಅವರ ಆದೇಶ ಆಗಿದೆ. ಅದರಂತೆ ಕಳುಹಿಸಿದ್ದೇನೆ. ಮತ್ತೇನೂ ನನಗೆ ತಿಳಿದಿಲ್ಲ' ಎಂದಾಗ ನಾನು ಮೂಕನಾಗುತ್ತಿದ್ದೆ. ಇಂತಹ ಸಮಯದಲ್ಲಿ ನಾನು ಅಲ್ಲಿರುವ ಒಂದಷ್ಟು ವಿಷಯಗಳನ್ನು ತಿಳಿದು ನಾಲ್ಕಾರು ಜನರೊಂದಿಗೆ ಹಂಚಿಕೊಂಡರೆ ಋಷಿಋಣನಿರ್ಯಾತನದ ಕಡೆಗೆ ಹೆಜ್ಜೆ ಇರಿಸಿದಂತಾಗುತ್ತದೆ ಎಂಬ ಭಾವ ಬಲವಾಗುತ್ತಿತ್ತು. 


ಹಲವಾರು ಬಾರಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಗ್ರಂಥಾಲಯಕ್ಕೆ ಭೇಟಿ ನೀಡಿ ತಾಸುಗಟ್ಟಲೆ ಕುಳಿತು ಓದಿರುವುದೂ ಇದೆ. ಒಮ್ಮೆ ಹೀಗೆ ಓದುವಾಗ ಮಧ್ಯಾಹ್ನ ಊಟದ ಹೊತ್ತು ಸಮೀಪಿಸಿತು. ಆಗ ಗ್ರಂಥಾಲಯವನ್ನು ನೋಡಿಕೊಳ್ಳುತ್ತಿದ್ದ ಶ್ರೀ ಕೃಷ್ಣಮೂರ್ತಿ ಅವರ ಬಳಿ 'ನೀವು ಊಟ ಮಾಡಿ ಬನ್ನಿ, ನಾನು ಮತ್ತೆ ಬರುತ್ತೇನೆ' ಎಂದೆ. ಆಗ ಅವರು ಆತ್ಮೀಯತೆಯಿಂದ 'ಎಷ್ಟು ಹೊತ್ತು ಬೇಕಿದ್ದರೂ ಇಲ್ಲೇ ಇದ್ದು ಓದಬಹುದು, ಯಾವ ಕಪಾಟನ್ನೂ ನೋಡಬಹುದು. ಯಜಮಾನರು ನಿಮಗೆ ಯಾವ ಪುಸ್ತಕ ಬೇಕಾದರೂ ಒದಗಿಸಲು ಹೇಳಿದ್ದಾರೆ' ಎಂದರು. ಎರಡು-ಮೂರು ದಿನಗಳಿಂದ ಬಂದು ಓದುತ್ತಿದ್ದುದನ್ನು ಅದು ಹೇಗೋ ಗಮನಿಸಿಕೊಂಡು ನಾನಾಗಿ ಕೇಳದೆ ಇದ್ದರೂ ಈ ವ್ಯವಸ್ಥೆಯನ್ನು ಕಲ್ಪಿಸಿದ ರಾಮಸ್ವಾಮಿ ಅವರ ಪ್ರೀತಿಗೆ ಏನೆನ್ನಲಿ?!


ಕೊನೆಯದಾಗಿ ರಾಮಸ್ವಾಮಿ ಅವರನ್ನು ನಾನು ನೋಡಿದ್ದು ವಿದ್ವಾಂಸರಾದ ಎಚ್. ವಿ. ನಾಗರಾಜ ರಾಯರ ಅಭಿವಂದನಸಮಾರಂಭದಲ್ಲಿ. ಅಂದು ನಾನು 'ಕನ್ನಡದಲ್ಲಿ ರಾಯರ ಅನೂದಿತ ಕೃತಿಗಳು ಮತ್ತು ಸ್ವತಂತ್ರ ಕೃತಿಗಳು' ಎಂಬ ವಿಷಯದ ಮೇಲೆ ಮಾತನಾಡಿದೆ. ರಾಮಸ್ವಾಮಿ ಅವರು ಎದುರು ಸಾಲಿನಲ್ಲಿ ಕುಳಿತು ಕೇಳುತ್ತಿದ್ದರೆ ನನಗೆ ರೋಮಾಂಚನ. ವೈಯಾಕರಣಶಿರೋಮಣಿ ಚಾರುದೇವ ಶಾಸ್ತ್ರಿಗಳು ಹೇಳಿದ ಅನುವಾದದ ಲಕ್ಷಣವನ್ನು ನಾನು ಉಲ್ಲೇಖಿಸುತ್ತಿದ್ದಂತೆ ತಲೆದೂಗಿ ತೋರಿದ ಮುಗುಳ್ನಗು ಮತ್ತು ಕಂಗಳಲ್ಲಿ ಕಾಣಿಸಿದ ಹೊಳಪು ನನ್ನ ಮನಃಪಟಲದಿಂದ ಇನ್ನೂ ಮಾಸಿಲ್ಲ. ಆ ವಯಸ್ಸಿನಲ್ಲೂ ಇರುವ ಅಂತಹ ಅಕ್ಷರಪ್ರೀತಿ ಅಚ್ಚರಿಯೇ ಸರಿ! ಕಾರ್ಯಕ್ರಮ ಮುಗಿಸಿ ಹೊರಬರುತ್ತಿದ್ದಂತೆ ಸಿಕ್ಕು 'ಒಟ್ಟಾರೆ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯಿತು. ನಿಮ್ಮ ವಿಷಯನಿರೂಪಣೆ ಚೆನ್ನಾಗಿತ್ತು' ಎಂದರು. ಇದಕ್ಕಿಂತ ದೊಡ್ಡ ಸಂತೃಪ್ತಿಯ ವಿಷಯ ಏನಿದೆ ನನಗೆ?! ಗೋಖಲೆಯಲ್ಲಿ ನಡೆದ ನನ್ನ ಉಪನ್ಯಾಸ, ಅವಧಾನಗಳ ಮೇಲೂ ಇದೇ ಆಸ್ಥೆ ಅವರಿಗಿತ್ತು ಎಂದು ನನ್ನ ಚಿಕ್ಕಪ್ಪನಿಂದ ನನಗೆ ತಿಳಿಯುತ್ತಿತ್ತು. ಇಂತಹ ಮಹನೀಯರ ಕಣ್ಗಾಪಿನಲ್ಲಿ ಬರೆಯಲು, ಮಾತನಾಡಲು ತಿಲದಷ್ಟಾದರೂ ಅವಕಾಶವಾಯಿತು ಎನ್ನುವುದೇ ಒಂದು ಧನ್ಯತೆಯ ವಿಷಯ. ಯಾಕೆಂದರೆ ನಾವು ತಪ್ಪಿದರೆ ಅವರು ತಿದ್ದಿ ಕೈಹಿಡಿದು ಮುನ್ನಡೆಸುತ್ತಾರೆ ಎಂಬ ಧೈರ್ಯ.


ಮಾನ್ಯ ಡಿವಿಜಿಯವರಂತೆ ಇವರೂ ಕೂಡ ಬರೆದ ಸೊಗಸಾದ ವ್ಯಕ್ತಿಚಿತ್ರಗಳು ನನಗೆ ಬಹಳ ಇಷ್ಟ. ಇಂತಹ ಮಹನೀಯರ ಸೇವೆಯನ್ನು ಯಾವುದಾದರೂ ರೂಪದಲ್ಲಿ ಮಾಡಿದರೆ ಅದು ಆತ್ಮೋನ್ನತಿಗೆ ದಾರಿಯಾಗುತ್ತದೆ ಎಂಬ ಚಿಂತನೆ ನನಗೆ ಇತ್ತಾದರೂ ಅವರಿಂದ ಎಲ್ಲೋ ದೂರದಲ್ಲಿ ಇರುವ ನಾನು ಅದನ್ನು ಹೇಗೆ ಮಾಡಿಯೇನು ಎಂಬ ಯೋಚನೆ ಕಾಡುತ್ತಿತ್ತು. ಒಮ್ಮೆ ಸೂರ್ಯಪ್ರಕಾಶ ಪಂಡಿತರು 'ರಾಮಸ್ವಾಮಿ ಅವರ ಮಹಾಭಾರತದ ಬೆಳವಣಿಗೆ/ಮಹಾಭಾರತ ಬೆಳೆದ ಬಗೆ ಎಂಬ ಪುಸ್ತಕವನ್ನು ಪುನರ್ಮುದ್ರಣ ಮಾಡಬೇಕು. ಒಮ್ಮೆ ಕರಡಚ್ಚನ್ನು ನೋಡುವ ಕೆಲಸ ಆಗಬೇಕು' ಎಂದರು. ಇದೇ ಸರಿಯಾದ ಅವಕಾಶ ಎಂದು ತಿಳಿದು ಶ್ರದ್ಧೆಯಿಂದ ಆ ಕೆಲಸವನ್ನು ಮಾಡಿದೆ. ಪಂಡಿತರು ಅಭಿಜ್ಞಾನದ ಗೆಳೆಯರೊಂದಿಗೆ ರಾಮಸ್ವಾಮಿ ಅವರು ಇದ್ದಲ್ಲಿಗೆ ತೆರಳಿ ಅವರ ಕರಕಮಲಗಳಿಂದಲೇ ಸರಳವಾಗಿ ಅದನ್ನು ಬಿಡುಗಡೆ ಮಾಡಿಸಿದರು. ಅದಾಗಿ ಸ್ವಲ್ಪ ಸಮಯ ಕಳೆದ ಬಳಿಕ ಗೋಖಲೆಯಲ್ಲಿ ನಡೆದ ನಮ್ಮದೇ ಅಭಿಜ್ಞಾನಸಂಸ್ಥೆಯ ಕಾರ್ಯಕ್ರಮವೊಂದಕ್ಕೆ ರಾಮಸ್ವಾಮಿ ಅವರು ಬಂದಿದ್ದರು. ಕಾರ್ಯಕ್ರಮ ಮುಗಿದ ಮೇಲೆ ಒಬ್ಬರು ಬಂದು (ಯಾರೆಂದು ನೆನಪಾಗುತ್ತಿಲ್ಲ) 'ಪಂಡಿತರು ರಾಮಸ್ವಾಮಿಗಳ ಜೊತೆಗಿದ್ದಾರೆ. ನಿಮ್ಮನ್ನು ಕರೆಯುತ್ತಿದ್ದಾರೆ' ಎಂದರು. ನಾನು ಅವರಿದ್ದಲ್ಲಿಗೆ ಹೋದೆ. ಆಗ ಅಲ್ಲಿ ಇನ್ನೊಬ್ಬರು ಮಾತನಾಡುತ್ತಿದ್ದರು. ಅವರ ಮಾತು ಮುಗಿದ ಮೇಲೆ ನಾನು ಕಾಲಿಗೆರಗಿದೆ. ಹರಸಿದರು, ಬೆನ್ನು ನೇವರಿಸಿ ಹೊರಟರು. ನಾನು ಕರಡಚ್ಚನ್ನು ತಿದ್ದಿರುವ ಕೆಲಸ ಅವರಿಗೆ ತೃಪ್ತಿ ಆಗಿದ್ದರೆ ಅದು ನನ್ನ ಪುಣ್ಯ. ಅದು ಅವರಿಗೆ ತಿಳಿದಿದೆಯೋ ಇಲ್ಲವೋ ನಾನರಿಯೆ. ಆದರೆ ಅವರ ಹಸ್ತಾಕ್ಷರ ಇರುವ 'ಮಹಾಭಾರತದ ಬೆಳೆದ ಬಗೆ' ಪುಸ್ತಕವನ್ನು ಅವರದೇ ಕೈಗಳಿಂದ ಪಡೆಯಬೇಕೆಂಬ ಕನಸು ಕನಸಾಗಿಯೇ ಉಳಿಯಿತು!


ಯುಗವೊಂದು ಮುಗಿದಂತೆ ಭಾಸವಾಗುತ್ತಿದೆ. ಕೆಲವರ ಅಗಲಿಕೆ ಅಂತಹ ಭಾವವನ್ನು ಉಂಟುಮಾಡುತ್ತದೆ. ಮನೆಯ ಹಿರಿಯಜ್ಜನನ್ನು ಕಳೆದುಕೊಂಡ ಭಾವ. ರಘುವಂಶದ ಎಂಟನೆಯ ಸರ್ಗದಲ್ಲಿ ಅಜಮಹಾರಾಜನ ಆಳ್ವಿಕೆಯನ್ನು ಕೊಂಡಾಡುವ ಒಂದು ಪದ್ಯ ಬರುತ್ತದೆ. 'ಅಹಮೇವ ಮತೋ ಮಹೀಪತೇರಿತಿ ಸರ್ವಃ ಪ್ರಕೃತಿಷ್ವಚಿಂತಯತ್ | ಉದಧೇರಿವ ನಿಮ್ನಗಾಶತೇಷ್ವಭವನ್ನಾಸ್ಯ ವಿಮಾನನಾ ಕ್ವಚಿತ್||' ಪ್ರಜೆಗಳಲ್ಲಿ ಎಲ್ಲರೂ ಕೂಡ 'ಅಜಮಹಾರಾಜನಿಗೆ ನಾನೇ ಇಷ್ಟನಾದವನು' ಎಂದು ಭಾವಿಸುತ್ತಿದ್ದರು. ಅವನು ನೂರಾರು ನದಿಗಳಿಗೆ ಸಮುದ್ರದಂತೆ ಇದ್ದನು, ಯಾರನ್ನೂ ನಿರಾಕರಿಸುತ್ತಿರಲಿಲ್ಲ. ಈ ಮಾತು ರಾಮಸ್ವಾಮಿ ಅವರಿಗೂ ಅನ್ವಯಿಸುತ್ತದೆ. ರಾಮಸ್ವಾಮಿ ಅವರ ಬಳಕೆಗೆ ಬಂದ ಯಾರನ್ನು ಕೇಳಿದರೂ 'ಅವರಿಗೆ ನಾನೆಂದರೆ ಪ್ರೀತಿ' ಎನ್ನುತ್ತಾರೆ. ಪ್ರತಿಯೊಬ್ಬರಿಗೂ ಆ ಭಾವ ಮೂಡಬೇಕಾದರೆ ಎಲ್ಲರನ್ನೂ ಅದೆಷ್ಟು ಪ್ರೀತಿಸುತ್ತಿದ್ದರು ಎಂಬುದು ಮನದಟ್ಟಾಗುತ್ತದೆ. ರಾಮಸ್ವಾಮಿ ಅವರು ಪಚ್ಚೆಕರ್ಪೂರದಂತೆ. ತೀರ್ಥದಲ್ಲಿ ಕರಗಿದ ಮಾತ್ರಕ್ಕೆ ಪಚ್ಚೆಕರ್ಪೂರ ಇಲ್ಲ ಎನ್ನಲಾಗುತ್ತದೆಯೇ? ಸವಿಯನ್ನು, ತಂಪನ್ನು, ಕಂಪನ್ನು ಸೊಂಪಾಗಿ ತುಂಬುವ ಇಂತಹ ಪಚ್ಚೆಕರ್ಪೂರಗಳ ಸಮಾಯೋಗದಿಂದಲೇ ತಾನೇ ಸನಾತನಸಂಸ್ಕೃತಿತೀರ್ಥವು ಸದಾಕಾಲ ಸಕಲರಿಗೂ ಸ್ವಾದ್ಯವೆನಿಸಿರುವುದು. ಅಂತಹ ಪಾವನತೀರ್ಥದ ನಾಲ್ಕಾರು ಹನಿಗಳು ನಮ್ಮನ್ನೂ ಸೋಕಲಿ‌.


ರಾಮಸ್ವಾಮಿ ಅವರು ಕನ್ನಡದಲ್ಲಿ ಆಯಾ ಪ್ರಸಂಗಕ್ಕೆ ಬೇಕಾಗುವಂತೆ ಪದಗಳನ್ನು ಟಂಕಿಸುತ್ತಿದ್ದ ರೀತಿ, ಹಳೆಯ ವಿಶಿಷ್ಟ ಪದಗಳನ್ನು ತಮ್ಮ ಬರೆವಣಿಗೆಯಲ್ಲೋ, ಮಾತಿನಲ್ಲೋ ಬಳಸಿ ಭಾಷೆಯಲ್ಲಿ ಅದನ್ನು ಉರ್ಜಿತಗೊಳಿಸುತ್ತಿದ್ದ ರೀತಿ ಅನನ್ಯ. ಅವರಂತೆ ಯಾವುದೇ ವಿಷಯದ ಆಳ-ಅಗಲ ಎರಡನ್ನೂ ಅರಿತ ವಿದ್ವಾಂಸರು ವಿರಳ. ಅವರ ವಿಚಾರಲಹರಿ ಅನ್ನಮಯಕೋಶದಿಂದ ಆನಂದಮಯಕೋಶದ ತನಕ ಹರವಿಕೊಂಡಿದೆ. ಅದಕ್ಕೆ ದೇಶ, ಕಾಲ, ಭಾಷೆಗಳ ಹಂಗಿಲ್ಲ. ಅವರ ಬರೆವಣಿಗೆ ಎಷ್ಟು ಮಿಗಿಲೋ, ಬಾಳಿನ ಆದರ್ಶ ಅದಕ್ಕಿಂತಲೂ ಮಿಗಿಲು. ತಮ್ಮ ಗುರುಪಂಕ್ತಿಯ ಮಾನ್ಯ ಡಿ. ವಿ. ಗುಂಡಪ್ಪನವರ 'ನಮ್ಮ ಪಾಲಿಗೆ ಬಂದ ಜಗದ್ಭಾಗವನ್ನು ಸ್ವೋಪಭೋಗಸಾಮಗ್ರಿ ಎಂದುಕೊಳ್ಳದೆ ಈಶ್ವರನಿರಿಸಿದ ನ್ಯಾಸವಸ್ತುವೆಂದು ಭಾವಿಸಿ ಪಾಲಿಸುವುದು' ಎನ್ನುವ ಮಾತನ್ನು ಉಸಿರಾಡಿದ, ಲೋಕಸಂಗ್ರಹದ ಸಾಕಾರಮೂರ್ತಿ ಮಾನ್ಯ ಎಸ್. ಆರ್. ರಾಮಸ್ವಾಮಿ ಅವರ ಜೀವಿತವಿಭೂತಿಗೆ ತಲೆಬಾಗಿ ವಂದಿಸುವೆ. ಆಗಲಾದರೂ ಅವರು ಮತ್ತೊಮ್ಮೆ ಬಂದು ವಾತ್ಸಲ್ಯ ತುಂಬಿ ತೂಗಿ ತೊನೆಯುವ ಭಾರವಾದ ತಮ್ಮ ತೋಳಿನಿಂದ ನನ್ನ ಭುಜವನ್ನೊಮ್ಮೆ ಬಳಸಿ ನಿಲ್ಲುವರೇ? ಇದೊಂದು ನಿರುತ್ತರ ಪ್ರಶ್ನಮಾರ್ಗ!


* ಮಹೇಶ ಭಟ್ಟ ಆರ್. ಹಾರ್ಯಾಡಿ

. ಎಸ್ ಆರ್ ರಾಮಸ್ವಾಮಿ ಅವರಿಗೆ ಶ್ರದ್ಧಾಂಜಲಿ - ಎಸ್‌. ಸೂರ್ಯಪ್ರಕಾಶ ಪಂಡಿತ್

 


ಇಂದು ನಮ್ಮನ್ನು ಭೌತಿಕವಾಗಿ ಅಗಲಿದ ಎಸ್‌. ಆರ್. ರಾಮಸ್ವಾಮಿಯವರು ನನ್ನ ಗುರುಗಳು; ಪತ್ರಕರ್ತನಾಗಿ ಅವರಿಂದಲೇ ನಾನು ಮೊದಲ ಪಾಠಗಳನ್ನು ಕಲಿತದ್ದು; ಎಡಿಟಿಂಗ್, ಅನುವಾದ – ಇಂಥ ಹಲವು ವಿಷಯಗಳ ಸೂಕ್ಷ್ಮವಾದ ಮರ್ಮಗಳನ್ನು ಅವರು ಕಲಿಸಿದರು. ಆದರೆ ಯಾವುದನ್ನೂ ಪ್ರತ್ಯಕ್ಷವಾಗಿ ಅಲ್ಲ, ಪರೋಕ್ಷರೂಪದಲ್ಲಿ. ದೇವತೆಗಳು ಪರೋಕ್ಷಪ್ರಿಯರಂತೆ! ಹೌದು, ರಾಮಸ್ವಾಮಿಯವರೂ ಒಂದು ವಿಧದಲ್ಲಿ ‘ದೇವಮಾನವ’!! ನನ್ನ ಪುಣ್ಯವಿಶೇಷ ಎಂದರೆ ರಾಮಸ್ವಾಮಿಯವರು ಪತ್ರಕರ್ತರಾಗಿ ಕರ್ತವ್ಯವನ್ನು ನಿರ್ವಹಿಸಿದ ಸಂಸ್ಥೆಯಲ್ಲಿಯೇ ನಾನು ಕೂಡ ಪತ್ರಕರ್ತನಾದುದು.


ರಾಮಸ್ವಾಮಿಯವರ ಬಗ್ಗೆ ಸಾಕಷ್ಟು ಬರೆದಿರುವೆ, ಮಾತನಾಡಿರುವೆ. ಆದರೂ ಇನ್ನೂ ಮಾತನಾಡುವುದಕ್ಕೂ ಬರೆಯುವುದಕ್ಕೂ ಸಾಕಷ್ಟು ಸಂಗತಿಗಳು ಇವೆ; ಆದರೆ ಸದ್ಯಕ್ಕೆ ಇಂದು ಅದನ್ನೆಲ್ಲ ಬರೆಯಲು ಆಗುತ್ತಿಲ್ಲವಷ್ಟೆ.


ರಾಮಸ್ವಾಮಿಯವರನ್ನು ಮೊದಲು ನೇರವಾಗಿ ನೋಡಿದ್ದು 1994ರಲ್ಲಿ, ಶಂಕರಮಠದಲ್ಲಿ. ಶತಾವಧಾನಿ ಆರ್‌. ಗಣೇಶ್‌ ಅವರೇ ಅವರನ್ನು ಮೊದಲು ನನಗೆ ಕಾಣಿಸಿದ್ದು.


ರಾಮಸ್ವಾಮಿಯವರು ಪತ್ರಕರ್ತ ಮಾತ್ರವಲ್ಲ, ದೊಡ್ಡ ವಿದ್ವಾಂಸರು ಕೂಡ. ಅವರ ಮನೆತನವೇ ವಿದ್ವಾಂಸರ ಮನೆತನ. ಸಂಸ್ಕೃತವ್ಯಾಕರಣವನ್ನೂ ವೇದಾಂತವನ್ನೂ ಸಾಂಪ್ರದಾಯಿಕ ವಿಧಾನದಲ್ಲಿಯೇ ಕಲಿತಿದ್ದರು. ಮಾಗಡಿ ಲಕ್ಷ್ಮೀನರಸಿಂಹಶಾಸ್ತ್ರಿ, ಎನ್‌. ರಂಗನಾಥಶರ್ಮಾ ಅವರಂಥ ವಿದ್ವಾಂಸರಲ್ಲಿ ಅವರಿಗೆ ಪಾಠವಾಗಿದ್ದಿತು. ಇನ್ನು ಡಿವಿಜಿ ಅವರಂಥ ‘ವಿರಕ್ತರಾಷ್ಟ್ರಕ’ರ ಗರಡಿಯಲ್ಲಿ ನಿತ್ಯವೂ ಸಾಹಿತ್ಯ, ಸಂಸ್ಕೃತಿ, ಸಾರ್ವಜನಿಕ ವಿಚಾರಗಳ ಸಾಮು. ಸಿ. ವಿ. ರಾಮನ್‌, ರೋರಿಚ್‌ರಂಥ ಹಲವರು ಸ್ವನಾಮಧನ್ಯರ ಸಂಪರ್ಕವೂ ಇತ್ತು ಅವರಿಗೆ. ರಾಮಸ್ವಾಮಿಯವರ ಅಣ್ಣ ಕೂಡ ದೊಡ್ಡ ಪತ್ರಕರ್ತರಾಗಿದ್ದರು. ಸಾಮಾನ್ಯವಾಗಿ ಪತ್ರಕರ್ತರು – ನಮ್ಮ ಕಾಲದವರು – ಅಧ್ಯಯನಶೀಲರಲ್ಲ ಎಂಬ ಅಭಿಪ್ರಾಯ ಜನಜನಿತವಾಗಿದೆ. ರಾಮಸ್ವಾಮಿ ಅವರು ಇದಕ್ಕೆ ಅಪವಾದ; ಅಧ್ಯಯನಶೀಲತೆಯ ಇನ್ನೊಂದು ರೂಪವೇ ರಾಮಸ್ವಾಮಿಗಳು ಎಂದರೆ ಈ ಮಾತೇನೂ ಅತ್ಯುಕ್ತಿಯಾಗದು.


ರಾಮಸ್ವಾಮಿಯವರಂಥ ವಿದ್ವಾಂಸರು ನಮಗೆ ಎಂದಾದರೂ ಸಿಕ್ಕಿಯಾರು; ಅವರಂಥ ಪತ್ರಕರ್ತರೂ ಮುಂದೆಮ್ಮೊ ಸಿಕ್ಕಿಯಾರು. ಆದರೆ ಅವರಂಥ ಅಂತಃಕರಣವುಳ್ಳ ವ್ಯಕ್ತಿಗಳು ಸಿಕ್ಕಿಯಾರೆ – ಎಂಬುದು ಅನುಮಾನ. ಎಷ್ಟೊಂದು ಜನರಿಗೆ ಅವರು ‘ಮಾತೃವಾತ್ಸಲ್ಯ’ದಂಥ ಶುದ್ಧಪ್ರೀತಿಯನ್ನು ಉಣಬಡಿಸುತ್ತಿದ್ದರು – ಎಂಬುದನ್ನು ಯೋಚಿಸಿದಾಗ, ‘ಒಬ್ಬ ವ್ಯಕ್ತಿ ಇಷ್ಟೊಂದು ಜನರನ್ನು ಪ್ರೀತಿಸಲು ಸಾಧ್ಯವೆ’ ಎನಿಸುತ್ತದೆ. ಅದೂ ಜಾತಿ, ಮತ, ವಿದ್ಯೆ, ಅಂತಸ್ತುಗಳ ಎಣಿಕೆಗೆ ಆಸ್ಪದವಿಲ್ಲದೆ!


ಇತ್ತೀಚಿಗೆ ನನ್ನ ಜೀವನದಲ್ಲಿ ನಡೆದ ಘಟನೆಯೊಂದನ್ನೇ ಇಲ್ಲಿ ಉಲ್ಲೇಖಿಸಬಹುದು.


ನನ್ನ ತಾಯಿಯವರ ಅಂತಿಮ ವಿಧಿ–ವಿಧಾನಗಳು ನಡೆದ ದಿನ ಅಷ್ಟೂ ಹೊತ್ತು ರಾಮಸ್ವಾಮಿಯವರು ರುದ್ರಭೂಮಿಯಲ್ಲಿದ್ದು, ಅಂದಿನ ಎಲ್ಲ ಸಂಸ್ಕಾರಗಳು ಮುಗಿದ ಮೇಲೆ ಸಾಂತ್ವನವನ್ನು ಹೇಳಿಹೊರಟರು. ಅಷ್ಟು ಹೊತ್ತು ಒಂದೆಡೆ ಕುಳಿತುಕೊಳ್ಳಲೂ ಅವರಿಗೆ ಕಷ್ಟವಾಗಿದ್ದ ಸಮಯ ಅದು; ಆದರೂ ಅವರು ಬಂದರು, ಕೊನೆ ತನಕ ಇದ್ದರು. ಅವರ ಆರೋಗ್ಯಪರಿಸ್ಥಿತಿಯನ್ನು ನೋಡಿ ಅವರನ್ನು ತಾಯಿಯವರ ವೈಕುಂಠಸಮಾರಾಧನೆಗೆ ಕರೆಯುವ ಧೈರ್ಯವನ್ನು ಮಾಡಲಿಲ್ಲ. ‘ಕರೆಯುವುದು ಬೇಡ; ಕರೆದರೆ ಬರುತ್ತಾರೆ; ಬಂದರೆ ಕಷ್ಟ ಪಡುತ್ತಾರೆ‘ – ಎಂಬುದು ನನ್ನ ಕಾಳಜಿ. ಆದರೆ ರಾಮಸ್ವಾಮಿಯವರು ವೈಕುಂಠಸಮಾರಾಧನೆಯ ದಿನ ಬಂದೇ ಬಂದರು; ಕೊನೆ ತನಕ ಇದ್ದರು; ಹತ್ತಿರದ ಬಂಧುಗಳು ಕೊಡುವ ‘ಶುಭವಸ್ತ್ರ’ವನ್ನೂ ಕೊಟ್ಟರು; ‘ಇನ್ನು ಎಲ್ಲವೂ ಶುಭವಾಗಲಿ’ ಎಂದು ಹರಸಿದರು. ಇದು ರಾಮಸ್ವಾಮಿಗಳು. ಇದು ರಾಮಸ್ವಾಮಿಗಳಂಥವರಿಗೆ ಮಾತ್ರ ಸಾಧ್ಯ. ಇಂದಿನ ದಿನಗಳಲ್ಲಿ ಜನರು ಕರೆದರೆ ಬರುವುದೇ ಕಷ್ಟ. ಹೀಗಿರುವಾಗ ‘ಈ ಸಮಯದಲ್ಲಿ ನಾನು ಅಲ್ಲಿ ಇರಬೇಕಾದ್ದು ನನ್ನ ಧರ್ಮ; ಕರ್ತವ್ಯ’ ಎಂದು ಮನೆಯ ‘ದೊಡ್ಡವರಾಗಿ’ ಯೋಚಿಸಿ ಬಂದವರು ರಾಮಸ್ವಾಮಿಯವರು. ದಿಟವಾದ ಬಂಧುತ್ವ ಎಂದರೆ ಇದೇ ಅಲ್ಲವೆ? ರಕ್ತಸಂಬಂಧಕ್ಕೂ ಮೀರಿದ್ದು ಈ ಭಾವಸಂಬಂಧ. ಈ ಬಂಧದ ಸೂತ್ರ ಇರುವುದು ಇಲ್ಲಿ, ಈ ಲೋಕದ ಪ್ರತ್ಯಕ್ಷಪ್ರಮಾಣದಲ್ಲಿ ಅಲ್ಲ, ಆ ಲೋಕದ ಪರೋಕ್ಷಸ್ವರೂಪದಲ್ಲಿ. ಆತ್ಮಬಂಧುಗಳಿಗೆ ಶರೀರಸಂಬಂಧದ ಹಂಗು ಇರದು; ಯಾವ ಕಾಲಕ್ಕೂ ನಮ್ಮ ಒಡಲಿಗೆ ಒಳಿತನ್ನು ಒದಗಿಸಬಲ್ಲ ಶುದ್ಧ ಚೈತನ್ಯವೊಂದೇ ಸಂಬಂಧದ ಬೆಸುಗೆಗೆ ಸಾಕಾಗಿರುತ್ತದೆ. ಈ ಚೈತನ್ಯವಸ್ತುವನ್ನೇ ಲೋಕವ್ಯವಹಾರದಲ್ಲಿ ‘ಪ್ರೀತಿ’ ಎಂದು ವ್ಯವಹರಿಸುತ್ತಿರುತ್ತವೆ. ರಾಮಸ್ವಾಮಿಯವರ ಪ್ರೀತಿಯ ಆಳ ಕಡಲಿನಷ್ಟು; ಎತ್ತರ ಪರ್ವತದಷ್ಟು....


– ಎಸ್‌. ಸೂರ್ಯಪ್ರಕಾಶ ಪಂಡಿತ್

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...