ಕೈಗಂಟಿದ ಅತ್ತರು (ಅನುಭವ) - ರಾಜೇಶ್ ಶ್ರೀವತ್ಸ
ನಾನು ಪ್ರೇತದ ಕೈ ಹಿಡಿದು ಮೇಲೆಬ್ಬಿಸಿದೆನೇ?
ನೈಸ್ ರಸ್ತೆಯ ಸೇತುವೆಯ ಕಡೆಗೆ ನಡೆಯುತ್ತಾ ಮನೆಯ ಕಡೆ ಸಾಗುತ್ತಿದ್ದೆ. ತಲೆ ಸಣ್ಣಗೆ ನೋಯುತ್ತಿತ್ತು ಮಾತ್ರೆ ತೆಗೆದುಕೊಂಡು ಮನೆಗೆ ಹೋಗಬೇಕು ಅಂದುಕೊಂಡೆ. ಕೆಲಸ ಮುಗಿಸಿ ಮನೆಯ ಕಡೆ ಸಾಗುತ್ತಿದ್ದ ಗಾರ್ಮೆಂಟ್ಸ್ ಕಂಪನಿಯ ಹುಡುಗಿಯರಿಂದ ರಸ್ತೆ ಗಿಜಿಗಿಡುತ್ತಿತ್ತು. ಎದುರಿನ ವಿಟ್ಟಸಂದ್ರದ ಕಡೆಯಿಂದ ಸುಮಾರು ಮೂವತ್ತು ವರ್ಷದ ಹೆಂಗಸು ನಡೆದು ಬರುತ್ತಿದ್ದಳು. ಸುಮಾರು ಐದೂವರೆ ಅಡಿ ಎತ್ತರ, ದಪ್ಪದೇಹ, ಗೌರವರ್ಣ, ಗುಂಗುರು ಕೂದಲು, ತಲೆ ತುಂಬಾ ಹೂವು, ಕಾಲಿನಲ್ಲಿ ಇಂಚಗಲದ ಬೆಳ್ಳಿ ಗೆಜ್ಜೆ, ಕೈತುಂಬಾ ಬಳೆ , ಕೈಯಲ್ಲಿ ಪ್ಲಾಸ್ಟಿಕ್ ವಯರ್ ಚೀಲ. ಹತ್ತಿರ ಬರುತ್ತಿದ್ದಂತೇ ಕತ್ತಿನಲ್ಲಿದ್ದ ದೊಡ್ಡ ಕರಿಮಣಿ ಚಂದ್ರಹಾರ, ಕಿವಿಯಲ್ಲಿ ಹಳೆಯಕಾಲದ ಹಂಸದ ಹರಳಿನ ಕಿವಿಯೋಲೆ ನೋಡಿ ಅಕೆ ಮುಸ್ಲಿಮ್ ಇರಬೇಕು ಅನ್ನಿಸಿತು. ಇಬ್ಬರೂ ನೈಸ್ ಸೇತುವೆಯ ಕಡೆ ನಡೆದೆವು. ಆಕೆ ಮುಂದೆ. ನಾನು ಹಿಂದೆ. ಸೇತುವೆಯ ಮಧ್ಯ ಬರುತ್ತಿದ್ದಂತೆ ಆಕೆ ಜರ್ರನೆ ಜಾರಿ ಬಿದ್ದಳು. ಕೈಲಿದ್ದ ಚೀಲದಿಂದ ಖಾಲಿ ಟಿಫನ್ ಡಬ್ಬಗಳು ಉರುಳುತ್ತಾ ಹೊರಬಿದ್ದವು. ನಾನು ಅರ್ರೇ!! ಪ್ಚ್ ಪ್ಚ್ ಅನ್ನುತ್ತ ನೆರವಿಗೆ ಹತ್ತಿರ ಹೋಗಿ ನೆರವಿಗೆ ಕೈ ಚಾಚಿದೆ. ಅತ್ತರಿನ ಘಂ ಮೂಗಿಗೆ ಬಡಿಯಿತು. ಆಕೆ ನನ್ನ ಕೈ ಹಿಡಿದು ಸಾವರಿಸಿಕೊಂಡು ಎದ್ದು ಕುಳಿತಳು. ಉರುಳಿ ಬಿದ್ದ ಮೂರು ಟಿಫನ್ ಬಾಕ್ಸ್‌ಗಳನ್ನು ಎತ್ತಿ ಅಕೆಗೆ ನೀಡಿದೆ. ಆಕೆ ನಗುತ್ತಾ ’ ತುಂಬಾ ಥಾಂಕ್ಸ್‌ರೀ. ಅಣ್ಣನ ಮನೆಗೆ ಹೋಗ್ತಾ ಇದ್ದೆ ಇವತ್ತು ಇಫ್ತೆಹಾರ್. ಯಾವಾಗಲೂ ಸೇತುವೆ ದಾಟುವಾಗ ಇಲ್ಲಿ ಜಾರಿ ಬೀಳ್ತೀನಿ ’ ಅಂದಳು. ಅಲ್ಲಾ ಇಷ್ಟು ಹೆಣ್ಣು ಮಕ್ಕಳು ಓಡಾಡುತ್ತಿದ್ದರೂ ಈ ಹೆಣ್ಣಿನ ಸಹಾಯಕ್ಕೆ ಒಬ್ಬರೂ ಬರಲಿಲ್ಲವಲ್ಲ ಅನಿಸಿ ಸುತ್ತ ನೋಡಿದೆ. ರಸ್ತೆಯಲ್ಲಿರುವವರೆಲ್ಲಾ ನನ್ನನ್ನೆ ನೋಡುತ್ತಿದ್ದಾರೆ ಅನ್ನಿಸಿ ಕಸಿವಿಸಿಯಾಯ್ತು. ಹತ್ತಿರ ನಡೆದು ಬರುತ್ತಿದ್ದ ಇಬ್ಬರು ಹುಡುಗಿಯರು ನನ್ನನ್ನೆ ನೋಡುತ್ತಾ ’ ಏನಾಯ್ತು ಸಾರು ಏನಾದ್ರು ಕಳೆದುಕೊಂಡ್ರಾ ’ ಎಂದು ನನ್ನ ಕಡೆ ನೋಡಿ ನಿಂತು ವಿಚಾರಿಸಿದರು. ನಾನು ಪೆಚ್ಚು ಪೆಚ್ಚಾಗಿ ಎನೂ ಇಲ್ಲ ಅನ್ನುತ್ತಾ ಸುತ್ತ ನೋಡಿದೆ ಅಷ್ಟರೊಳಗೆ ಆ ಹೆಣ್ಣು ಅಲ್ಲಿಂದ ಎದ್ದು ಮಾಯವಾಗಿದ್ದಳು. ಜನ ಜಂಗುಳಿಯಲ್ಲಿ ಸೇರಿ ಹೋಗಿರ ಬೇಕೆಂದು ಸುಮ್ಮನಾದೆ. ಸೇತುವೆ ದಾಟಿ ವೀರಭದ್ರ ಮೆಡಿಕಲ್ಸ್ ಕಡೆ ನಡೆದು ನಾಲ್ಕು ನೈಸಿಪ್ ಕೊಡಿ ಅಂತ ಕೇಳಿದೆ. ಅಂಗಡಿಯಾತನಿಗೆ ನನ್ನ ಮುಖ ಪರಿಚಯವಿದೆ. ಆತ ’ ಏನು ಸಾರು ತುಂಬಾ ತಲೆ ನೋವಾ? ಸೇತುವೆ ಮೇಲೆ ಯಾಕೆ ಕೂತು- ನಿಂತು ಮಾಡ್ತಾ ಇದ್ದ್ರಿ ? ತಲೆ ತಿರುಗಿತಾ? ಏನಾದ್ರು ಕಳೆದುಕೊಂಡ್ರಾ ? ’ ಅಂತ ಕೇಳಿದ. ನಾನು ಯಾರದೋ ಟಿಫನ್ ಬಾಕ್ಸ್ ಎತ್ತಿಕೊಡ್ತಾ ಇದ್ದೆ ಎಂದಷ್ಟೇ ಹೇಳಿ ಮನೆಯ ಕಡೆ ತಿರುಗಿದೆ.
ನಮ್ಮ ಲೇಔಟ್ ಗೇಟಿನಿಂದ ಅಷ್ಟು ದೂರದಲ್ಲಿ ಹೊಲದ ಮಧ್ಯದಲ್ಲಿ ಸ್ಥಳೀಯ ಪುಢಾರಿ ಕಂ ರೌಡಿ ಜಮೀಲ್ ಅಬ್ಬಾಸನ ಬಂಗಲೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುತ್ತಾ ಇದ್ದರು. ಶಾಮಿಯಾನದ ಬಾಗಿಲಲ್ಲೇ ದೊಡ್ಡ ಫ್ಲೆಕ್ಸ್ ಬೋರ್ಡ್ ಅದರ ಮೇಲೆ ಜಮೀಲ್‌ನ ಚಿತ್ರ. ಅವನ ಪಕ್ಕದಲ್ಲಿ ನಮ್ಮ ಏರಿಯಾದ ಎಲ್ಲಾ ಪುಢಾರಿಗಳ ಮುಂಡಗಳನ್ನು ಕತ್ತರಿಸಿ ಸಾಲಾಗಿ ಅಂಟಿಸಿದ್ದರು. ಪಕ್ಕದಲ್ಲೇ ಇನ್ನೊಂದು ಫ್ಲೆಕ್ಸ್ ಬೋರ್ಡ್ ಅದರ ಮೇಲೆ ಒಬ್ಬ ಹೆಣ್ಣಿನ ಚಿತ್ರಕ್ಕೆ ಗುಲಾಬಿ ಹೂವಿನ ಅಲಂಕಾರ. ಹತ್ತಿರ ಬರುತ್ತಿದ್ದಂತೇ ಅದು ಅಲ್ಲಿ ಸೇತುವೆಯ ಮೇಲೆ ಭೇಟಿಯಾದ ಹೆಣ್ಣಿನ ಚಿತ್ರವೆಂದು ಗುರುತಿಸಿದೆ. ಕೆಳಗೆ ಉರ್ದು ಭಾಷೆಯಲ್ಲಿ ಎನೋ ಬರೆದಿದ್ದರು. ಅಪಾರ್ಟ್ಮೆಂಟ್‌ನ ಗೇಟ್ ದಾಟುತ್ತಿದ್ದಂತೇ ನಮ್ಮ ಅಪಾರ್ಟ್ಮೆಂಟ್ ಮಾಲಿಕರ ಅಮ್ಮ ಎದುರಾದರು. ’ಏನಮ್ಮ ರಂಜಾನ್ ಊಟಕ್ಕೆ ಸಾಬರ ಮನೆಗೆ ಹೋಗಲಿಕ್ಕಿದೆಯಾ ’ ಅಂತ ತಮಾಷೆಗೆ ಕೇಳಿದೆ. ಅವರು ’ ಕರೆದಿದ್ದಾರಪ್ಪ . ಅದರೆ ಅಲ್ಲಿ ಎಲ್ಲಾ ರಾಜಕೀಯದವರೇ ತುಂಬಿರುತ್ತಾರೆ. ಅವರ ಮಧ್ಯ ನಮಗೇನು ಕೆಲಸ. ಹೋಗದವರಿಗೆಲ್ಲಾ ಜಮೀಲನೇ ಮನೆಗೆ ಪಾರ್ಸಲ್ ಕಳಿಸುತ್ತಾನೆ ’ ಎಂದರು . ಶಾಮಿಯಾನದ ಎದುರು ಒಬ್ಬ ಹೆಂಗಸಿನ ಚಿತ್ರ ಹಾಕಿದ್ದಾರಲ್ಲ ಆಕೆ ..’ ಎಂದು ನಾನು ವಿಚಾರಿಸುತ್ತಿದ್ದಂತೇ ಮಧ್ಯದಲ್ಲೇ ಅವರು ’ ಆಕೆನಾ? ಅವಳು ಜಮೀಲನ ತಂಗಿ ಜುಬೇದಾ. ಇಲ್ಲೇ ವಿಟ್ಟಸಂದ್ರದಲ್ಲಿ ಇದ್ದಳು. ಆರು ವರ್ಷದ ಹಿಂದೆ ಜಮೀಲ ಹೀಗೇ ಒಂದು ರಂಜಾನ್ ಉಪವಾಸದ ದಿನ ರಾತ್ರಿ ಊರಿಗೆಲ್ಲಾ ಊಟ ಇಟ್ಟಿದ್ದ. ಆಗಿನ್ನೂ ನೈಸ್ ಸೇತುವೆ ಕಟ್ಟುತ್ತಿದ್ದರು. ಸಂಜೆ ಆಕೆ ಮನೆಯಿಂದ ನಡೆದು ಬರುತ್ತಾ ಇದ್ದಳು. ಕಟ್ಟಿ ಮುಗಿಸುವ ತನಕ ಸೇತುವೆ ಮೇಲೆ ಹತ್ತಿ ಓಡಾಡ ಬಾರದೆಂದು ರಸ್ತೆ ಬಂದ್ ಮಾಡಿದ್ದರೂ ಜನ ಸೆಕ್ಯುರಿಟಿಯ ಕಣ್ಣು ತಪ್ಪಿಸಿ ಸೇತುವೆಯ ಮೇಲಿಂದಲೇ ಇತ್ತ ಬರುತ್ತಿದ್ದರು. ಇವಳಿಗೆ ಅಂದು ಗ್ರಹಚಾರ ಕಾದಿತ್ತು ಈಕೆಯೂ ತಡೆ ಗೋಡೆ ಹಾರಿ ಸೇತುವೆಯ ಮೇಲೆ ಓಡುತ್ತಾ ದಾಟುತ್ತಿದ್ದಳು ಜಲ್ಲಿ ಕಲ್ಲಿನ ಮೇಲೆ ಕಾಲಿಟ್ಟು ಜಾರಿ ಬಿದ್ದಳು. ತಲೆ ನೆಲಕ್ಕೆ ಬಡಿದು ಅಲ್ಲೇ ಸತ್ತಳು. ಭಾರೀ ಆಳು.. ಲಕ್ಷ್ಣಣವಾಗಿದ್ದಳು , ಸ್ಟೈಲಾಗಿ ಅಲಂಕಾರ ಮಾಡ್ಕೊಂಡು ಸೆಂಟ್ ಹಾಕ್ಕೊಂಡು, ಝಣ್ ಝಣ್ ಗೆಜ್ಜೆ ಸದ್ದು ಮಾಡ್ಕೊಂಡು ಓಡಾಡೋಳು , ಸಾಯುವಾಗ ಮದುವೆ ಆಗಿ ಐದು ತಿಂಗಳಾಗಿತ್ತು ಅಷ್ಟೆ. ಪಾಪ ಛೇ !! . ಈಗಲೂ ಆಗಾಗ ಚೀಲ ಹಿಡಿದುಕೊಂಡು ಸೇತುವೆ ಮೇಲೆ ನಡಿತಾ ಇರ್ತಾಳೆ ನಾವೇ ನೋಡಿದ್ದೀವಿ ಅಂತ ಸಿದ್ದರಾಜು, ತಾಯಪ್ಪ ಹೇಳ್ತಾರೆ. ಅವರು ಮೊದಲೇ ಕುಡುಕ್ ಬಡ್ಡೀಮಕ್ಕಳು ಅವರನ್ನ ಹೆಂಗೆ ನಂಬೋದು ? ಅಷ್ಟಕ್ಕೂ ಸಾಬರು ಸತ್ತರೆ ದೆವ್ವ ಆಗಲ್ವಂತಲ್ಲ? ಹಿಂಗಂದಕ್ಕೆ ಒಮ್ಮೆ ಆ ಜಮೀಲ ತಾಯಪ್ಪನನ್ನು ಕತ್ತರಿಸಿ ಹಾಕ್ತೀನಿ ಮಗನೆ, ನನ್ನ ತಂಗಿನ ಸೈತಾನ್ ಅಂತೀಯಾ ಅಂತ ಹೊಲದೊಳಗೆ ಅಟ್ಟಿಸಿಕೊಂಡು ಹೋಗಿದ್ದ...." ಅವರು ಹೇಳುತ್ತಲೇ ಇದ್ದರು.
ಹಾಗಾದರೆ ನಾನು ಕೈ ಚಾಚಿ ಎಬ್ಬಿಸಿದ್ದು ಜುಬೇದಳನ್ನೇ ? !! ನಾನು ಪ್ರೇತದ ಕೈ ಹಿಡಿದು ಮೇಲೆಬ್ಬಿಸಿದೆನೇ? ಕೈ ಉಜ್ಜಿಕೊಳ್ಳುತ್ತಾ ಮೂಸಿ ನೋಡಿಕೊಂಡೆ.. ಅತ್ತರಿನ ಪರಿಮಳ ಘಂ ಅಂದಿತು !!!
ರಾಜೇಶ್ ಶ್ರೀವತ್ಸ, |
Comments
Post a Comment