ನಾನೂ ಇಫ಼್ತಾರ್‌ಗೆ ಹೋಗಿದ್ದೆ. - ರಾಜೇಶ್ ಶ್ರೀವತ್ಸ,
ನಮ್ಮ ಮನೆಯ ಹಿಂದೆ ಉಲ್ಲಾಳದ ಬ್ಯಾರಿ ಮೊಹಮ್ಮದ್ ಅಬುಕರ್ ಅವರ ಮನೆ. ಅವರ ಹೆಂಡತಿ ಆಯೇಷಾ, ಇನ್ನೂ ಒಂದಿಬ್ಬರು ಸಂಬಂಧಿಕರು ಅವರ ಮಕ್ಕಳು ಅಂತ ಮನೆ ತುಂಬಾ ಜನ-ಮಕ್ಕಳು. ಆ ಮಕ್ಕಳ ಹೆಸರು ನಮಗೆ ನೆನಪಿನಲ್ಲೇ ಉಳಿಯುತ್ತಿರಲಿಲ್ಲ. ಅಬೀದಾ, ನಸೀಮ, ಜುಲ್ಫಿ, ರಫಿಕ್... ಹೀಗೆ. ಯಾರ್ಯಾರು ಯಾರ ಮಕ್ಕಳು ಅಂತ ಕೂಡ ಅರ್ಥವಾಗ್ತಾ ಇರಲಿಲ್ಲ. ಒಟ್ಟಿನಲ್ಲಿ ನಮ್ಮ ಪಾಲಿಗೆ ಅವರೆಲ್ಲ ಬ್ಯಾರಿಮಕ್ಕಳು. ಆಯೇಷಾ ನಮಗೆಲ್ಲಾ ಐಸಮ್ಮ . ಐಸಮ್ಮ ಸುಮಾರು ನಮ್ಮ ಅಮ್ಮನ ಸಮ ವಯಸ್ಸಿನವರು. ಮನೆಗಳ ಮುಖ ಬೇರೆ ಬೇರೆ ರಸ್ತೆಗಿದ್ದರೂ ಇಬ್ಬರ ಹಿತ್ತಿಲೂ ಒಂದೇ ಕಡೆ ಇರುವುದರಿಂದ ಅಮ್ಮ ಹಾಗು ಐಸಮ್ಮ ನಿತ್ಯ ಒಂದೇ ಸಮಯದಲ್ಲಿ ಹರಟೆ ಹೊಡೆಯುತ್ತಾ ಬಟ್ಟೆ ಒಗೆಯುತ್ತಿದ್ದರು. ಆಗಾಗ ಬಟ್ಟೆ ಕಲ್ಲಿಗೆ ಬಡೆಯುವ ಸದ್ದನ್ನೂ ಮೀರಿ ಕೇಳುವಂತೆ ಮಾತನಾಡಬೇಕಾದಾಗ ಜೋರಾಗಿ ಸ್ವರ ಎತ್ತರಿಸುತ್ತಿದ್ದರು. ಆಗಾಗ ಮೆಲ್ಲಗೆ ಸಣ್ಣ ದನಿಯಲ್ಲಿ. ದೂರದಿಂದ ಇದನ್ನು ಕೇಳುತ್ತಿದ್ದ ನೆರೆಹೊರೆಯ ಕೆಲವರು ಇವರಿಬ್ಬರೂ ನಿತ್ಯ ಬಟ್ಟೆ ಒಗೆಯುವಾಗ ಜಗಳಾಡುತ್ತಾರೆ ಎಂದು ಅಂದುಕೊಂಡಿದ್ದರಂತೆ.
ಸಣ್ಣ ಮಕ್ಕಳಾದ ನಮಗೆ ಐಸಮ್ಮನ ಕಿವಿಯ ಅಂಚಿನುದ್ದಕ್ಕೂ ತೂತುಗಳು ಹಾಗು ಅದಕ್ಕೆ ಪೋಣಿಸಿದ ಚಿನ್ನದ ಸುರುಟೆ, ಸುರುಟೆಗೆ ಜೋಲಾಡುವ ಹರಳುಗಳ ಗೊಂಚಲುಗಳು ಮಹಾ ಆಕರ್ಷಣೆ. ಅವರನ್ನು ಕಂಡಾಗಲೆಲ್ಲಾ ಅಷ್ಟೊಂದು ತೂತು ಮಾಡಿಸಿಕೊಳ್ಳುವಾಗ ನೋವಾಗಲಿಲ್ವಾ? ರಕ್ತ ಬರಲಿಲ್ವಾ? ಸುರುಟೆ ಭಾರ ಆಗೋಲ್ವಾ? ಎಷ್ಟು ಚಿನ್ನ ಇದೆ ನಿಮ್ಮ ಹತ್ತಿರ ? ನೀವು ತುಂಬಾ ಶ್ರೀಮಂತರು ಅಲ್ವಾ? ಎಂದು ಪದೇ ಪದೇ ಕೇಳುತ್ತಿದ್ದೆವು. ಇಂದು ಅವರು ನಮ್ಮ ಪ್ರಶ್ನೆಗಳಿಗೆ ಉತ್ತರ ಹೇಳಿದರೂ ನಾಳೆ ಮತ್ತೆ ಅದೇ ಪ್ರಶ್ನೆಗಳನ್ನು ಕೇಳುತ್ತಿದ್ದೆವು. ಅವರು ಸ್ವಲ್ಪವೂ ಬೇಸರವಿಲ್ಲದೆ ಮತ್ತೆ ಉತ್ತರಿಸುತ್ತಿದ್ದರು. ನಮ್ಮ ಮಗ ಈ ಸಲ ಇಸ್ಕೂಲ್ ಪರೀಕ್ಷೆಯಲ್ಲಿ ಫೈಲಾಗಿದ್ದಾನೆ ಅಂದರೆ ’ಗಣಪತಿಗೆ ಹಣ್ಣು ಕಾಯಿ ಮಾಡಿಸಿ ನಿಮ್ಮ ಮಗ ಮುಂದಿನ ಪರೀಕ್ಷೆಯಲ್ಲಿ ಪಾಸ್ ಆಗ್ತಾನೆ’, ಮಗಳಿಗೆ ಅಮ್ಮ ಆಗಿದೆ ಅಂದರೆ ’ ಪರಿಮಳಮ್ಮನಿಗೆ ಹಣ್ಣುಕಾಯಿ ಮಾಡ್ತೀನಿ ಅಂತ ಹರಕೆ ಹೊತ್ತುಕೊಳ್ಳಿ’ ಎಂದು ಬಿಟ್ಟಿ ಸಲಹೆ ಕೊಡುತ್ತಿದ್ದೆವು. ಆಗಲೂ ಅವರು ನಕ್ಕು ಸರಿ ಹಾಗೇ ಮಾಡ್ತೀನಿ ಎಂದು ನುಡಿಯುತ್ತಿದ್ದರು. ಅವರು ಅಗಾಗ ಸಂಜೆ ವಿಧ ವಿಧದ ಮೀನುಗಳನ್ನು ತಂದು ತೊಳೆಯುವಾಗ ನಾವು ಅದನ್ನು ನೋಡಲು ಬೇಲಿ ತೂರಿ ಅವರ ಸುತ್ತ ಹೋಗಿ ನಿಲ್ಲುತ್ತಿದ್ದೆವು. ಎಲ್ಲಿ ಆ ಮೀನಿನ ಕಣ್ಣು ತೋರಿಸಿ, ಈ ಮೀನಿನ ಬಾಲ ತೋರಿಸಿ, ಇದರ ಹೊಟ್ಟೆಯಲ್ಲಿ ಮರಿ ಇದೆಯಾ? ಇದು ಗಂಡಾ? ಇದು ಹೆಣ್ಣಾ ? ಮೀನು ತಿಂತೀರಲ್ಲಾ ನಿಮಗೆ ಪಾಪ ಬರೋಲ್ವಾ ? ನೀವು ನಮ್ಮ ಜಾತಿಗೆ ಸೇರಿಬಿಡಿ. ಈ ವಾಸನೆ ಮೀನು ತಿನ್ನೋದು ತಪ್ಪುತ್ತೆ ಅಂತ ಅವರ ತಲೆ ತಿಂದು ತೇಗುತ್ತಿದ್ದೆವು.
ರಂಜಾನ್ ಉಪವಾಸ ಶುರುವಾದಾಗ ’ನಿಮ್ಮದೆಂತ ಕಳ್ಳ ಉಪವಾಸ ರಾತ್ರಿಯೆಲ್ಲಾ ಗಡದ್ದಾಗಿ ತಿಂದು ಹಗಲು ನಿದ್ದೆ ಮಾಡ್ತೀರಿ ’ ಅಂತ ಆಡಿಕೊಂಡು ನಾವು ಬಿದ್ದು ಬಿದ್ದು ನಗುತ್ತಾ ಗೇಲಿ ಮಾಡಿದರೂ ಅವರ ನಗು ಮಾತ್ರ ನಮಗೆ ಉತ್ತರ. ಒಮ್ಮೆ ರಂಜ಼ಾನ್ ಮಾಸದಲ್ಲಿ ಅಕ್ಕ ವಿಶಾಖ ಊರಿಂದ ಬಂದಿದ್ದಳು. ಅವಳ ಮೇಲೆ ಐಸಮ್ಮನಿಗೆ ನಮಗಿಂತ ಸ್ವಲ್ಪ ಹೆಚ್ಚು ಪ್ರೀತಿ. ಅಂದು ಸಂಜೆ ಮಸೀದಿಯಿಂದ ಬಾಂಗ್ ಕೂಗಿದ ಅರ್ಧ ಘಂಟೆಯ ನಂತರ ನಮಾಜ಼್ ಮುಗಿಸಿ ಹೊರಬಂದ ಐಸಮ್ಮ, ಆಟ ಮುಗಿಸಿ ಹೊರಗೆ ಕೈ ಕಾಲು ತೊಳೆಯುತ್ತಿದ್ದ ನಮ್ಮನ್ನು ( ನಾನು, ವಿಶಾಖ , ನನ್ನ ತಮ್ಮ) ಶ್..! ಎಂದು ಗುಟ್ಟಾಗಿ ಕರೆದರು. ನಾವು ಹೊರಗಿನಿಂದಲೇ ನಮ್ಮಮ್ಮನಿಗೆ ದೇವಸ್ಥಾನಕ್ಕೆ ಹೋಗಿ ಬರ್ತೇವೆ ಎಂದು ಕೂಗಿ ಹೇಳಿ ಬೇಲಿ ನುಸುಳಿ ಐಸಮ್ಮನ ಮನೆಗೆ ಹೋದೆವು. ಒಳಗೆ ಬಣ್ಣ ಬಣ್ಣದ ದುಬೈ ಕಂಬಳಿಯ ಮೇಲೆ ಅವರ ಮನೆಯಲ್ಲಿದ್ದ ಏಳೆಂಟು ಮಕ್ಕಳು ಸಾಲಾಗಿ ಕುಳಿತು ನಮ್ಮನ್ನೇ ಕಾಯುತ್ತಿದ್ದರು. ಮೊದಲಿಗೆ ಎಲ್ಲರಿಗೂ ದೊಡ್ದ ದೊಡ್ಡ ಗಾಜಿನ ಲೋಟಗಳಲ್ಲಿ ಕಾಮಕಸ್ತೂರಿ ಬೀಜ ಹಾಕಿದ ನಿಂಬೆಹಣ್ಣಿನ ಶರಬತ್ತು. ಅದಾದ ಮೇಲೆ ಒಂದಷ್ಟು ಒಣಗಿದ ದ್ರಾಕ್ಷಿ, ಖರ್ಜೂರ, ಗೋಡಂಬಿ, ಅಂಜೂರ. ಬೇರೆ ಬೇರೆ ಹಸಿ ಹಣ್ಣಿನ ಚೂರುಗಳು. ಕಾಯಿದೋಸೆ ಪುದೀನಾ ಚಟ್ಣಿ. ಚಟ್ಣಿ ಬೇಡ ಎಂದು ರಾಗ ತೆಗೆದ ನನ್ನ ತಮ್ಮನಿಗೆ ನೆಂಚಿಕೊಳ್ಳಲು ಗುಲ್ಕನ್. ಹೆಸರು ಬೇಳೆ ಪಾಯಸ, ಕೊಬ್ಬರಿ ಸಕ್ಕರೆ ಹಾಕಿದ ಖರ್ಜಿಕಾಯಿ. ಕೇರಳದ ಹಲ್ವಾ, ಕೊಬ್ರಿ ಬಿಸ್ಕೆಟ್. ತಿನ್ನಿ ತಿನ್ನಿ ಎಂಬ ಒತ್ತಾಯದ ಜೊತೆಗೆ ನಿಮ್ಮ ಮನೆಯಲ್ಲಿ ಶುದ್ಧ ಅಲ್ವಾ ಅದಕ್ಕೆ ಎಲ್ಲಾ ಹೊಸ ಗ್ಲಾಸ್ ಮತ್ತೆ ತಟ್ಟೆ ಯಲ್ಲಿ ನಿಮಗೆ ಕೊಡ್ತಾ ಇದ್ದೀನಿ, ಇದರಲ್ಲಿ ಮೊಟ್ಟೆ ಮೀನು ಏನೂ ಇಲ್ಲ ಹೆದರಬೇಡಿ ಎಂಬ ಸಮಾಧಾನ. ಅವರ ಮನೆಯ ಮಕ್ಕಳೆಲ್ಲಾ ತಿನ್ನುವುದು ಬಿಟ್ಟು ನಮ್ಮನ್ನು ನೋಡುತ್ತಾ ಗುಸು ಗುಸು ನಗುತ್ತಾ ಇದ್ದರು. ಅವರಿಗೆ ಏನೋ ಖುಷಿ. ತಿನ್ನುವಾಗ ನಮ್ಮ ಪ್ರತಿಕ್ರಿಯೆ ಹೇಗಿದೆ ಎಂದು ಹಿರಿಯರೂ ಆಗಾಗ ಇಣುಕಿ ನೋಡುತ್ತಿದ್ದರು. ಅಂತೂ ನಮಗೆ ವಿಐಪಿ ಟ್ರೀಟ್‌ಮೆಂಟ್. ಎಲ್ಲಾ ತಿಂದು ಮುಗಿದ ಮೇಲೆ ಕೆಂಪು ಸಿಪ್ಪೆಯ ಚಂದ್ರ ಬಾಳೆ ಹೊಟ್ಟೆಗೆ ತುರುಕಿ, ಹೊಟ್ಟೆ ಭಾರವಾಗಿ ಮೇಲೆ ಏಳಲಾರದೆ ಎದ್ದೆವು. ಐಸಮ್ಮನೇ ನಮ್ಮ ಕೈಗಳನ್ನು ಹೊಸಾ ಸಣ್ಣ ರೆಕ್ಸೋನಾ ಸೋಪ್‌ನಿಂದ ತೊಳೆದು ಏಲಕ್ಕಿ ನಿಂಬೆ ಹಾಕಿದ ಬಿಸಿ ಪಾನಕ ಕುಡಿಸಿ ಮನೆಯಲ್ಲಿ ಹೇಳ ಬೇಡಿ ಆಯ್ತಾ ಅಂತ ಭಾಷೆ ತೆಗೆದುಕೊಂಡರು. ಐಸಮ್ಮನ ಮೈದುನ ನಮ್ಮ ಮನೆಯ ಹಿತ್ತಲಲ್ಲಿ ಲೈಟ್ ಹಾಕಿಲ್ಲ ಎಂದು ಖಚಿತ ಪಡಿಸಿಕೊಂಡು ಕಳ್ಳ ಹೆಜ್ಜೆಗಳಿಂದ ಕರೆದುಕೊಂಡು ಬಂದು ಒಬ್ಬೊಬ್ಬರನ್ನೆ ಎತ್ತಿ ಬೇಲಿಯಿಂದ ಈಚೆ ದಾಟಿಸಿ ಹೋದನು.
ರಾತ್ರಿ ಓದುತ್ತಾ ಕೂರುವ ನಾಟಕವಾಡುವಾಗ ನನ್ನ ತಮ್ಮ ಗುಲ್ಕನ್ ಚೆನ್ನಾಗಿತ್ತು ಅಂದರೆ , ವಿಶಾಖ ಕಾಮಕಸ್ತೂರಿ ಬೀಜ ಹಾಕಿದ ಶರಬತ್ತು ಚೆನ್ನಾಗಿತ್ತು ಅಂದಳು. ನಾನು ಜೇಬಿನಲ್ಲಿ ಇಟ್ಟುಕೊಂಡು ಬಂದಿದ್ದ ಗೋಡಂಬಿ ದ್ರಾಕ್ಷಿ ಖರ್ಜೂರ ತೋರಿಸುತ್ತಾ ನನಗೆ ಇದು ಚೆನ್ನಾಗಿತ್ತು ಅಂದೆ.
ಅದಾದ ಬಹಳ ವರ್ಷಗಳ ಮೇಲೆ ಹೈದರಾಬಾದಿನಲ್ಲಿದ್ದಾಗ ಪ್ರೀತಿಯಿಂದ ಒತ್ತಾಯ ಮಾಡಿ ಕರೆದ ನನ್ನ ಸ್ನೇಹಿತನ ಮನೆಗೆ ಇಫ಼್ತಾರ್‌ಗೆ ಹೋಗಿದ್ದೆ. ಅದರ ಮಾರನೆಯ ದಿನವೇ ಕಂಪನಿಯ ಕಾಟಾಚಾರದ ಇಫ಼್ತಾರ್ ಕೂಟದಲ್ಲಿ ನೀರೂ ಕುಡಿಯದೆ ಮಡಿಯ ನೆಪ ಹೇಳಿ ವಾಪಾಸ್ ಬಂದಾಗ ಕೆಲವರು ತಿಕ್ಕಲು ಅಂದುಕೊಂಡಿರಬಹುದು. ಈಗಲೂ ಇಫ಼್ತಾರ್ ಅಂದ ಕೂಡಲೆ ಐಸಮ್ಮ ಪ್ರೀತಿ ವಾತ್ಸಲ್ಯದಿಂದ ಊಟಮಾಡಿಸಿದ್ದು ನೆನಪಾಗುತ್ತದೆ.
ರಾಜೇಶ್ ಶ್ರೀವತ್ಸ, |
Comments
Post a Comment