ಹಲ್ಮಿಡಿ ಶಾಸನ

ಹಲ್ಮಿಡಿ ಒಂದು ಪುಟ್ಟ ಗ್ರಾಮ. ಸುಮಾರು ಮುನ್ನೂರು ಮನೆಗಳು ೧,೨೦೦ ಜನವಸತಿಯುಳ್ಳ ಇನ್ನೂ ನಾಗರಿಕ ಸವಲತ್ತುಗಳು ತಲುಪದೇ ಇರುವ ಗ್ರಾಮ. ಹಾಸನ ಜಿಲ್ಲೆಯ ಉತ್ತರ ತುದಿಯ ಚಿಕ್ಕಮಗಳೂರು ಜಿಲ್ಲೆಯ ಜತೆ ಸೇರುವ ಗಡಿ ಭಾಗದಲ್ಲಿ ಅಂದರೆ ಬೇಲೂರು ತಾಲೂಕಿನ ಉತ್ತರ ಭಾಗದ ಕೊನೆಯಲ್ಲಿ ಈ ಊರು ನೆಲೆಸಿದೆ. ಒಂದೂವರೆ ಸಾವಿರ ವರ್ಷಗಳ ಹಿಂದೆಯೇ ಜನಜೀವನಕ್ಕೆ ಯೋಗ್ಯವಾಗಿ, ಕೆರೆಕಟ್ಟೆಗಳಿಂದ ಕೂಡಿ ವ್ಯವಸಾಯ ಯೋಗ್ಯ ಗದ್ದೆಗಳು ರೂಪುಗೊಂಡು ರಾಜನಿಗೆ ಕಂದಾಯ ಕೊಡುವಷ್ಟು ಮಟ್ಟಿಗೆ ಆಗಲೇ ಈ ಹಳ್ಳಿ ಬೆಳೆದಿತ್ತು.
ಸ್ಥಳನಾಮ
ಶಾಸನದಲ್ಲಿ ಹಲ್ಮಿಡಿಯನ್ನು ‘ಪಲ್ಮಿಡಿ’ಎಂದು ಕರೆಯಲಾಗಿದೆ. ಒಂದೂವರೆ ಸಾವಿರ ವರ್ಷಗಳ ಹಿಂದೆ ಈ ಊರನ್ನು ಹಾಗೆ ಕರೆಯುತ್ತಿದ್ದರು ಎಂಬುದು ಸ್ಪಷ್ಟ. ಆದರೆ ಇಂದಿನ ಕಂದಾಯ ಇಲಾಖೆಯ ದಾಖಲೆಗಳಲ್ಲಿ ಜನಸಾಮಾನ್ಯರ ಬಾಯಲ್ಲೂ ‘ಹನುಮಿಡಿ’ ಎಂಬ ರೂಪವೂ ಬಳಕೆಯಲ್ಲಿದೆ. ಇಂದು ಕೆಲವರು ‘ಹನುಮಿಡಿ’ ಎಂದು ಉಚ್ಚರಿಸಿದ ಮಾತ್ರಕ್ಕೆ ಆ ಊರಿನ ನಿಜವಾದ ಹೆಸರು ಅದೇ ಇರಬೇಕಿಲ್ಲ. ಸ್ಥಳನಾಮವೂ ಪೀಳಿಗೆಯಿಂದ ಪೀಳಿಗೆಗೆ ರೂಪಾಂತರ ಹೊಂದುತ್ತಾ ಬರುತ್ತದೆಂಬುದು ಸ್ಥಳನಾಮಗಳ ಸಮೀಕ್ಷೆಯಿಂದ ಸಿದ್ಧವಾಗಿದೆ. ಒಂದು ಸ್ಥಳದ ಪುರಾತನ ನಾಮರೂಪ ಮತ್ತು ರೂಪಾಂತರಗಳನ್ನು ತಿಳಿಯಲು ಶಾಸನ ಸಾಹಿತ್ಯವೂ ಅಧಿಕೃತ ಸಾಕ್ಷ್ಯವಾಗಿರುತ್ತದೆ. ಹಲ್ಮಿಡಿ ಶಾಸನದಲ್ಲಿ ಊರಿನ ಹೆಸರು ‘ಪಲ್ಮಿಡಿ’ ಎಂದಿದೆ. ಇದರ ನಂತರದಲ್ಲಿ ಹಾಕಲ್ಪಟ್ಟ ಕ್ರಿ.ಶ. ೫೨೦ರ ಕದಂಬರ ೫ನೇ ರಾಜನಾದ ಮುಮ್ಮಡಿ ಕೃಷ್ಣವರ್ಮನ ತಾಮ್ರಶಾಸನದಲ್ಲೂ ‘ಪಲ್ಮಿಡಿ ಗ್ರಾಮ’ ಎಂದೇ ಇದೆ. ಮುಂದೆ ಗಂಗರಾಜರ ಆಡಳಿತಾವಧಿಯಲ್ಲಿ ರಾಚಮಲ್ಲನ ಚಿಕ್ಕಮಗಳೂರು ಶಾಸನ (ಕ್ರಿ.ಶ.೮೯೯) ಮತ್ತು ೨ನೇ ಬೂತುಗನ ಬಪ್ಪವಳ್ಳಿಯ (ಕ್ರಿ.ಶ. ೯೫೯)ಗಳಲ್ಲಿ ‘ಪಲ್ಮಾಡಿ’ ಎಂದು ಕರೆಯಲಾಗಿದೆ.
ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿ ಕ್ರಿ.ಶ. ೧೫೨೩ರಲ್ಲಿ ಶೃಂಗೇರಿಯ ಬಸದಿಗೆ ಕೊಡುಗೆ ನೀಡಿದ ದೇವಣಸೆಟಿಯ ಊರು ‘ಹಲುಮಿಡಿ’ ಕೃಷ್ಣದೇವರಾಯನ ಆಡಳಿತ ಕಾಲದ ಕ್ರಿ.ಶ. ೧೫೨೪ರ ಬೇಲೂರು ಶಾಸನದ ಎರಡು ಪ್ರತಿಗಳಲ್ಲಿ ‘ಹಲುಮಿಡಿ’ ಎಂಬ ರೂಪ ಕಾಣಸಿಗುತ್ತದೆ.
ಈ ರೀತಿ ಒಂದೂವರೆ ಸಾವಿರ ವರ್ಷಗಳ ಹಿಂದೆ ‘ಪಲ್ಮಿಡಿ’ ಎಂದಿದ್ದ ಹೆಸರು ನಂತರ ಪಲ್ಮಾಡಿ, ಹಲುಮಿಡಿ ಮುಂತಾದ ರೂಪಾಂತರಗಳನ್ನು ಹೊಂದಿ ಜನಸಾಮಾನ್ಯರ ಬಾಯಲ್ಲಿ ‘ಹಲ್ಮಿಡಿ’ಯಾಗಿ ಉಳಿದಿರಬೇಕು. ಆದರೆ ಹನುಮಿಡಿ ಎಂಬ ರೂಪವು ಯಾವ ಶಾಸನದಲ್ಲೂ ದಾಖಲಾಗಿಲ್ಲ. ಬಹುಶಃ ಇಸ್ಲಾಂ ಮತ್ತು ಬ್ರಿಟಿಷ್ ಆಡಳಿತ ಕಾಲದಲ್ಲಿನ ಕಂದಾಯ ಇಲಾಖೆಯ ದಾಖಲೆಗಳಲ್ಲಿ ‘ಹಲುಮಿಡಿ’ಯು ಹನುಮಿಡಿ ಎಂದು ದಾಖಲಾಗತೊಡಗಿ ಕ್ರಮೇಣ ಜನಸಾಮಾನ್ಯರಲ್ಲಿ ಹಲ್ಮಿಡಿ, ಹನುಮಿಡಿ ಈ ಎರಡೂ ರೂಪಗಳು ಬಳಕೆಯಲ್ಲಿ ಉಳಿದವು. ಊರಿನ ಗಡಿಕಲ್ಲಿನಲ್ಲಿಯೂ ಈ ಎರಡು ನಾಮರೂಪಗಳನ್ನು ಕಾಣಬಹುದು. ಮತ್ತೆ ಕೆಲವರು ‘ಹಲ್ಮಿಡಿ’ ಎಂದೂ ಕರೆಯುತ್ತಾರೆ. ಇದೂ ಅಪಭ್ರಂಶಗಳನ್ನೇ ಮುಂದುವರಿಸದೆ ಶಾಸನತಜ್ಞರು ಒಪ್ಪಿ ಬಳಸಿಕೊಂಡು ಬಂದಿರುವ ‘ಹಲ್ಮಿಡಿ’ ನಾಮರೂಪವನ್ನೇ ಈ ಪುಸ್ತಕದಲ್ಲಿಯೂ ಸ್ವೀಕರಿಸಿ ಬಳಸಲಾಗಿದೆ.
ಗ್ರಾಮೀಣ ಜನರಲ್ಲೂ ಈ ಎರಡು ಹೆಸರುಗಳಲ್ಲಿ ಸರಿ ಯಾವುದು ಎಂಬ ಜಿಜ್ಞಾಸೆ ಇತ್ತು. ಹಲ್ಮಿಡಿ ಶಾಸನದ ಪ್ರತಿಕೃತಿ ಮಂಟಪ ನಿರ್ಮಾಣ ಕಾರ್ಯದ ನಿಮಿತ್ತ ಅಲ್ಲಿನ ಶ್ರೀ ಆದರ್ಶ ಯುವಕ ಸಂಘದವರು ನನ್ನಲ್ಲಿ ಚರ್ಚಿಸಿ-ಇನ್ನು ಮುಂದೆ ‘ಹಲ್ಮಿಡಿ’ ನಾಮರೂಪವನ್ನೇ ಸರ್ಕಾರೀ ವ್ಯವಹಾರಗಳಲ್ಲೂ ಬಳಸುವಂತೆ ಸರ್ಕಾರಿ ಕಚೇರಿಗಳಿಗೆ ಮನವಿ ಮಾಡಲು ನಿರ್ಧರಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಕೂಡ ‘ಹಲ್ಮಿಡಿ’ ನಾಮರೂಪವನ್ನೇ ಮಾನ್ಯಮಾಡಿದೆ.
ಭೌಗೋಳಿಕ ಸ್ಥಾನ: ಭೂಗೋಳದಲ್ಲಿ ಹಲ್ಮಿಡಿಯ ಸ್ಥಾನ ೧೩.೨ ಡಿಗ್ರಿ ಉತ್ತರ ಅಕ್ಷಾಂಶ ಮತ್ತು ೭೬.೬೬ ಡಿಗ್ರಿ ಪೂರ್ವ ರೇಖಾಂಶಗಳು ಸಂಧಿಸುವಲ್ಲಿ ಇದೆ. ಈ ಭಾಗವನ್ನು ಇಂದು ನಾವು ಹಾಸನ ಜಿಲ್ಲೆಯ, ಬೇಲೂರು ತಾಲೂಕಿನ ಉತ್ತರ ತುದಿ ಎಂದು ಗುರ್ತಿಸುತ್ತೇವೆ. ಆದರೆ ಪುರಾತನ ಕಾಲದಲ್ಲಿ- ಹಲ್ಮಿಡಿ ಶಾಸನದಲ್ಲಿರುವ ಉಲ್ಲೇಖದಂತೆ ಈ ಭೂಭಾಗವನ್ನು ‘ನರಿದಾವಿಳೆ ನಾಡು’ ಎಂದು ಕರೆಯಲಾಗಿದೆ. ನಂತರದಲ್ಲಿ ಇದು ದಾವಿಳೆ-ದಾವಳಿಗೆ-ದೇವಳಿಗೆ ದೇವಾಳ್ಗೆ ಮುಂತಾಗಿ ರೂಪಭೇದಗಳನ್ನು ಹೊಂದಿರಬೇಕು. ಏಕೆಂದರೆ ಕದಂಬರ ಸಮಕಾಲೀನವಾದ ನೆರೆಯ ಗಂಗ ರಾಜ್ಯದಲ್ಲಿ ಕ್ರಿ.ಶ. ೪೬೦ರ ಮೂರನೇ ಮಾಧವನ ಕಾಲದ ಸಂಸ್ಕೃತ ತಾಮ್ರಶಾಸನದಲ್ಲಿಯೇ ‘ದೇವಳ್ಗೆ’ ವಿಷಯ’ ಎಂಬ ಉಲ್ಲೇಖವಿದೆ.
ಗಂಗರಾಜ ಎರಡನೇ ಬೂತುಗನ ಕ್ರಿ.ಶ. ೯೫೬ರ ಶಾಸನದಲ್ಲಿ ‘ದೇವಳಿಗೆ ಎಪ್ಪತ್ತು’ ಎಂದೂ, ಹೊಯ್ಸಳರ ವಿನಯಾದಿತ್ಯನ ಕಾಲದ ಕ್ರಿ.ಶ. ೧೦೭೪ರ ಶಾಸನದಲ್ಲೂ ‘ದೇವಳಿಗೆ ನಾಡ ಎಳ್ಪತ್ತು’ ಎಂದು ಇರುವ ಉಲ್ಲೇಖನಗಳಿಂದ ಈ ದೇವಳಿಗೆ ಎಂಬ ವಿಭಾಗವು ಎಪ್ಪತ್ತು ಹಳ್ಳಿಗಳ ಸಮುದಾಯವೆಂದು ಊಹಿಸಬಹುದು. ದೇವಳಿಗೆ ನಾಡು ಎಂಬ ಆಡಳಿತ ವಿಭಾಗದ ಉಲ್ಲೇಖನವನ್ನು ವಿಷ್ಣುವರ್ಧನನ ಕ್ರಿ.ಶ. ೧೧೧೭ರ ಬೇಲೂರು ಶಾಸನ ಮತ್ತು ಅವನ ಮೊಮ್ಮಗ ವೀರಬಲ್ಲಾಳನ ಕ್ರಿ.ಶ. ೧೨೦೦ರ ತಾಮ್ರ ಶಾಸನಗಳಲ್ಲಿ ಕಾಣಬಹುದು. ವಿಜಯನಗರದ ಆಡಳಿತ ಕಾಲಕ್ಕೆ ಸೇರಿದ ಕ್ರಿ.ಶ.೧೪೦೪ರ ಅಂಬಳೆಯ ಶಾಸನವು ದೇವಳಿಗೆ ಸೀಮೆಯ ನಿರ್ದಿಷ್ಟ ಸ್ಥಾನ ಸೂಚನೆಯನ್ನು ನೀಡಿದೆ.
“ವೇಲಾಪುರ್ಯಾಃ ಉದಗ್ದಿಶಿ ಕ್ರೋಶದ್ವಯ ಮಿತೇ ದೇಶೇ |
ಸುಖಸಂವಾಸನೋಚಿತೇ ದೇವಳಾಭಿದ ಸೀಮಾಯಾಃ||”
ಎಂಬ ಭಾಗವು ‘ವೇಲಾಪುರ ಅಂದರೆ ಬೇಲೂರು ಪಟ್ಟಣದ ಉತ್ತರ ದಿಕ್ಕಿಗೆ ಎರಡು ಕ್ರೋಶಗಳಷ್ಟು ದೂರದಲ್ಲಿ ಜನವಸತಿಗೆ ಅತ್ಯಂತ ಯೋಗ್ಯವಾದ ದೇವಳ ಎಂಬ ಹೆಸರಿನ ಸೀಮೆಯಲ್ಲಿ...’ ಎಂದರ್ಥ ಕೊಡುತ್ತದೆ. ಹಲ್ಮಿಡಿ ಶಾಸನದ ನರಿದಾವಿಳೆ ನಾಡು ಎಂಬ ವಿಭಾಗದ ಜಾಗವು ಇದೇ ಆಗಿದೆ.
ಈ ದೇವಳಿಗೆ ನಾಡಿನಲ್ಲೇ ಹಲ್ಮಿಡಿ ಗ್ರಾಮವು ಇತ್ತು ಎಂಬುದಕ್ಕೆ ಇನ್ನೊಂದು ಖಚಿತ ಪುರಾವೆಯಾಗಿ ಕೃಷ್ಣದೇವರಾಯನ ಆಳ್ವಿಕೆಯ ಕಾಲದ ಕ್ರಿ.ಶ. ೧೫೨೪ರ ಶಿಲಾಶಾಸನವನ್ನು ಉದಾರಿಸಬಹುದು. ಬೇಲೂರಿನ ದೊಡ್ಡಕೆರೆಯಾದ ವಿಷ್ಣು ಸಮುದ್ರದ ಉತ್ತರ ಭಾಗವನ್ನು ಪುಷ್ಕರಣಿಯಾಗಿ ರೂಪಿಸಿದ ಬಗ್ಗೆ ಹಾಕಿಸಿದ ಈ ಶಾಸನದಲ್ಲಿ ಕೃಷ್ಣದೇವಮಹಾರಾಯರು ನಾಯಕತನಕ್ಕೆ ಪಾಲಿಸಿದ ವಸ್ತಾರೆಯ ಸೀಮೆಗೆ ಸಲ್ಲುವ ದೇವಣಿಗೆಯ ನಾಡೋಗಳಗಣ ನಾರಾಯಣಪುರ ಗ್ರಾಮವೊಂದು ಹಲುಮಿಡಿಯ ಗ್ರಾಮ ೧-ಉಭಯ ಗ್ರಾಮಕ್ಕೆ ಸಲುವ ಗದ್ದೆ, ಬೆದ್ದಲು, ತೋಟತುಡಿಕೆ ಎಂಬ ಸಾಲುಗಳಿಂದ ಹಲ್ಮಿಡಿ ಮತ್ತು ಅದರ ಪಕ್ಕದ ನಾರಾಯಣಪುರ ಗ್ರಾಮಗಳು ದೇವಳಿಗೆ ನಾಡಿಗೆ ಸೇರಿದ್ದವೆಂಬುದು ಖಚಿತವಾಗಿದೆ. ಆದುದರಿಂದ ನರಿದಾವಿಳೆ ನಾಡು ಮತ್ತು ದೇವಳಿಗೆ ನಾಡು ಈ ಎರಡೂ ಸಹ ಒಂದೇ ಎಂದು ಖಚಿತವಾಗಿ ತೀರ್ಮಾನಿಸಬಹುದು.
ಮತ್ತೊಂದು ಕುತೂಹಲಕರ ವಿಷಯವೆಂದರೆ ದೇವಳಿಗೆ ನಾಡನ್ನು ವಸ್ತಾರೆ ಸೀಮೆಗೆ ಸೇರಿದುದೆಂದು ಈ ಬೇಲೂರು ಶಾಸನದಲ್ಲಿ ಹೇಳಲಾಗಿದೆ. ಅಂದರೆ, ವಿಜಯನಗರದ ಆಡಳಿತ ಕಾಲದಲ್ಲಿ ಈ ಭೂಭಾಗವು ವಸ್ತಾರೆ ಸೀಮೆಗೆ ಸೇರಿತ್ತೆಂದು ತಿಳಿಯುತ್ತದೆ. ಆದರೆ ಕದಂಬರ ಕಾಲದ ಕ್ರಿ.ಶ. ೫೨೦ ಸುಮಾರಿನ ಇಮ್ಮಡಿ ಕೃಷ್ಣವರ್ಮನ ತಾಮ್ರಶಾಸನದ ಮೂರನೇ ಪುಟದಲ್ಲಿ ಸೇನ್ದ್ರಕ ವಿಷಯಾಂತರ್ಗತ ಪಲ್ಮಿಡಿ ಗ್ರಾಮೇ... ಎಂದಿದೆ. ಇದಲ್ಲದೆ. ಕ್ರಿ.ಶ. ೪೬೦ರ ಗಂಗವಂಶದ ಮೂರನೇ ಮಾಧವನ ಆಳ್ವಿಕೆಯ ತಾಮ್ರ ಶಾಸನದಲ್ಲಿ ದೇವಾಳ್ಗೆವಿಷಯ ಎಂದಿದೆ. ವಿಷಯ ಎಂಬುದು ಅನೇಕ ಸೀಮೆಗಳನ್ನೊಳಗೊಂಡ ಭೂಭಾಗ ಆದುದರಿಂದ ದೇವಳಿಗೆ ಎಂಬ ಆಡಳಿತ ವಿಭಾಗವು ಒಮ್ಮೆ ಒಂದು ಪ್ರಾಂತ್ಯವಾಗಿತ್ತು. ನಂತರ ಒಮ್ಮೆ ಸೇಂದ್ರಕ ಪ್ರಾಂತ್ಯಕ್ಕೂ ಮತ್ತೊಮ್ಮೆ ವಸ್ತಾರೆ ಪ್ರಾಂತ್ಯಕ್ಕೂ ಸೇರಿದ ಭಾಗವಾಯಿತು ಎಂದು ಊಹಿಸಬಹುದು. ದೇವಳಿಗೆ ನಾಡು ಒಂದೂವರೆ ಸಾವಿರ ವರ್ಷಗಳ ಅವಧಿಯಲ್ಲಿ ಅನೇಕ ಆಡಳಿತಾತ್ಮಕ ಬದಲಾವಣೆಯನ್ನು ಕಂಡಿದೆಯಾದರೂ ಹಲ್ಮಿಡಿ ಗ್ರಾಮವು ಮಾತ್ರ ದೇವಳಿಗೆ ನಾಡಿನಲ್ಲಿಯೇ ಇದೆ.
ಕದಂಬ ರಾಜ್ಯದ ದಕ್ಷಿಣ ತುದಿಯ ಒಂದು ಪ್ರಾಂತ್ಯವಾಗಿದ್ದ ಈ ದೇವಳಿಗೆ ವಿಭಾಗವು ಎಪ್ಪತ್ತು ಹಳ್ಳಿಗಳನ್ನು ಒಳಗೊಂಡಿತ್ತು. ಶಾಸನಗಳು ಇದನ್ನು "ದೇವಾಳ್ಗೆಎಛ್ವಿ(ಳ್ವ)ತ್ತು" ಎಂದೇ ಕೆರೆದಿವೆ. ಹಲ್ಮಿಡಿ, ನಾರಾಯಣಪುರ, ಮುಗುಳುವಳ್ಳಿ, ಸೋಮಶೆಟ್ಟಿಹಳ್ಳಿ, ಮರ್ಲೆ, ಚಿಕ್ಕಮಗಳೂರು, ಬಸವನಹಳ್ಳಿ, ಅಂಬಳೆ, ಹಿರೇಮಗಳೂರು ಮತ್ತು ಇವುಗಳ ಅಕ್ಕಪಕ್ಕದ ಊರುಗಳೇ ಈ ಎಪ್ಪತ್ತು ಹಳ್ಳಿಗಳಾಗಿದ್ದವು ಎಂಬ ಅಂಶವು ಶಾಸನಗಳ ಸೂಕ್ಷ್ಮ ಅಧ್ಯಯನದಿಂದ ತಿಳಿಯುತ್ತದೆ. ಒಟ್ಟಿನಲ್ಲಿ ಇಂದಿನ ಬೇಲೂರು ತಾಲೂಕಿನ ಉತ್ತರಭಾಗ ಮತ್ತು ಚಿಕ್ಕಮಗಳೂರು ತಾಲೂಕಿನ ದಕ್ಷಿಣಭಾಗಗಳು ಸೇರಿ ದೇವಳಿಗೆ ನಾಡು ರೂಪಿತವಾಗಿತ್ತು. ಈ ದೇವಳಿಗೆ ನಾಡೇ ಹಲ್ಮಿಡಿ ಶಾಸನದ ‘ನರಿದಾವಿಳೆ ನಾಡು’ ಎಂದು ಊಹಿಸಬಹುದು.
ಈ ನರಿದಾವಿಳೆ ನಾಡಿನ ದಕ್ಷಿಣ ತುದಿಯಲ್ಲಿ ನಾರಾಯಣಪುರ ಮತ್ತು ಮುಗುಳುವಳ್ಳಿಗಳ ನಡುವೆ ಹಲ್ಮಿಡಿ ಗ್ರಾಮವಿದೆ. ಶಿಲಾಯುಗದ ಕಾಲದಿಂದಲೂ ನೀರಿನಾಸೆಯ ಅಂದರೆ ನದಿ-ಹಳ್ಳಗಳ ತೀರದಲ್ಲಿ ನಾಗರೀಕ ವಸತಿಗಳು ಅರಳುತ್ತಾ ಬಂದಿವೆಯಷ್ಟೇ. ಬೇಲೂರು ತಾಲೂಕಿಗೆ ಯಗಚಿ ನದಿಯು ಜೀವನದಿಯಾಗಿದೆ. ಇದರ ದಡದಲ್ಲಿ ಶಿಲಾಯುಗದ ಕಾಲದಿಂದಲೇ ಜನವಸತಿ ಇದ್ದು ನಾಗರೀಕತೆ ರೂಪುಗೊಳ್ಳುತ್ತಾ ಬಂದಿದೆ. ಈ ಯಗಚೀ ನದಿಗೆ ಸೇರುವ ಹಳ್ಳವಾದ ‘ಬೆನಕನಗಳ್ಳದ ದಡದಲ್ಲಿ ಈ ಹಲ್ಮಿಡಿಗ್ರಾಮ ಹುಟ್ಟಿ ಬೆಳದಿದೆ. ಬಹುಶ: ಬೃಹತ್ ಶಿಲಾಯುಗದ ಅವಧಿಯಿಂದಲೇ ಇಲ್ಲಿ ಜನರು ವಾಸಿಸಲು ಆರಂಭಿಸಿದ್ದು, ಇಲ್ಲಿಗೆ ಒಂದೂವರೆ ಸಾವಿರ ವರ್ಷಗಳಿಗೂ ಮೊದಲೇ ಹಲ್ಮಿಡಿಯು ಒಂದು ಬಲಿಷ್ಠ ಗ್ರಾಮವಾಗಿ ನಿಂತಿತ್ತು. ಕದಂಬರ ಆಳ್ವಿಕೆಯ ಕಾಲದಲ್ಲೇ ಒಂದು ಮಣ್ಣಿನ ಕೋಟೆಯೂ ಇತ್ತೆಂದು ಕಾಣುತ್ತದೆ. ಊರಿನ ಸುತ್ತಲೂ ಆಳವಾದ ಕಂದಕ ತೋಡಿ ಆ ಮಣ್ಣನ್ನು ಒಳ ಅಂಚಿಗೆ ಗೋಡೆಯಂತೆ ಸುರಿದು ಕೋಟೆಯನ್ನು ಕಟ್ಟುವ ಪುರಾತನ ತಂತ್ರವನ್ನು ಇಲ್ಲಿ ಬಳಸಲಾಗಿದೆ.
ಈ ಕೋಟೆಗೆ ಕನಿಷ್ಠ ಎರಡು ದ್ವಾರಗಳಾದರೂ ಇದ್ದವು.
ಒಂದು ಪೂರ್ವಕ್ಕೆ ಇನ್ನೊಂದು ಪಶ್ಚಿಮಕ್ಕೆ. ಇನ್ನೂ ಎರಡು ದ್ವಾರಗಳ ಸಾಧ್ಯತೆಯೂ ಕಂಡುಬರುತ್ತದೆ. ಪೂರ್ವದ ಮಹಾದ್ವಾರವು ಬಹುಶ: ನಂತರದಲ್ಲಿ ಪುನರ್ನವೀಕರಿಸಲ್ಪಟ್ಟಿದ್ದು, ಅದರ ಭಾಗಗಳು ಇಂದೂ ಇವೆ. ಇನ್ನುಳಿದ ದ್ವಾರಗಳು ಪೂರ್ಣವಾಗಿ ನಾಶವಾಗಿವೆ. ಕೋಟೆಯ ಮಣ್ಣು ಕೂಡಾ ಕುಸಿದು, ಕಂದಕವು ಮುಚ್ಚಿಕೊಂಡು. ಗುರುತು ಸಿಕ್ಕದಂತಾಗಿದೆ. ಪ್ರಯತ್ನಿಸಿದರೆ ಕೋಟೆ-ಕಂದಕಗಳನ್ನು ಗುರ್ತಿಸಬಹುದು. ಕೋಟೆಯ ಪಶ್ಚಿಮ ಭಾಗದ ಅವಶೇಷವು ದಿಣ್ಣೆಯಂತಾಗಿದೆ. (ಅಲ್ಲೊಂದೆಡೆ ಒಂದು ಪ್ರತಿಮೆಯೂ ಇದ್ದು ಇಂದು ಅದನ್ನು ‘ಬೊಮ್ಮೇಶ್ವರ’ ಎಂಬ ಹೆಸರಿನಿಂದ ಪೂಜಿಸುತ್ತಾರಾದರೂ ಇದು ಯಾರೋ ರಾಜದಂಪತಿ ಅಥವ ನಾಯಕ ದಂಪತಿಗಳದ್ದಾಗಿರುವಂತಿದೆ)
ಕದಂಬರ ಕಾಲಕ್ಕಾಗಲೇ ವ್ಯವಸ್ಥಿತ ರೂಪವನ್ನು ಹೊಂದಿದ್ದ ಈ ಊರಿಗೆ ಒಳ್ಳೆಯ ಕೆರೆಯೂ, ಆ ಕೆರೆಯ ನೀರಾವರಿಯಿಂದ ಬೆಳೆ ಬೆಳೆಯುವ ಗದ್ದೆಗಳ ಸಮೂಹವೂ ಇತ್ತು ಎಂಬುದು ಹಲ್ಮಿಡಿ ಶಾಸನದಿಂದಲೇ ಸ್ಪಷ್ಟವಾಗಿದೆ. ಈ ಊರು ಆಗಲೇ ಜನರ ಸುಖ ಜೀವನಕ್ಕೆ ಅಗತ್ಯವಾದ ಗ್ರಾಮೀಣ ಸವಲತ್ತುಗಳನ್ನು ಹೊಂದಿದ್ದು ಈ ಸಮೃದ್ಧ ಗ್ರಾಮದಲ್ಲಿ ತೋಟ=ತುಡಿಕೆಗಳಿದ್ದವು. ಅಂತೆಯೇ ಕಂದಾಯ ವಸೂಲಿಯೂ ಆಗುತ್ತಿತ್ತು ಎಂಬುದನ್ನೂ ಅನೇಕ ಶಾಸನಗಳಿಂದ ತಿಳಿಯಬಹುದು. ಅಂತೂ ಹಾಸನ ಜಿಲ್ಲೆಯ ಪುರಾತನ ಜನವಸತಿಗಳಲ್ಲಿ ಹಲ್ಮಿಡಿಗ್ರಾಮವೂ ಒಂದು. ಇದು ಪುಟ್ಟಗ್ರಾಮವಾದರೂ ಈ ನೆಲದಿಂದ ಕನ್ನಡ ನಾಡಿನ ವಾಙ್ಮಯ ಇತಿಹಾಸ, ಭಾಷೆ, ಲಿಪಿ, ಸಂಸ್ಕೃತಿ, ಜನಜೀವನ ಮುಂತಾಗಿ ನಾನಾ ರಂಗಗಳಿಗೆ ಪ್ರಥಮ ಲಿಖಿತ ದಾಖಲೆ ಎನಿಸುವಂತಹ ಶಾಸನವೊಂದು ನಮಗೆ ಉಡುಗೊರೆಯಾಗಿ ದೊರೆತಿದೆ.
- ಡಾ.ಶ್ರೀವತ್ಸ ಎಸ್.ವಟಿ  
ಕೃಪೆ - http://karavenalnudi.blogspot.com/2010/08/blog-post_5115.html

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು