ದೀಪವಿರದ ದಾರಿಯಲ್ಲಿ

ದೀಪವಿರದ ದಾರಿಯಲ್ಲಿ
ತಡವರಿಸುವ ನುಡಿಗಳೆ
ಕಂಬನಿಗಳ ತಲಾತಲದಿ
ನಂದುತಿರುವ ಕಿಡಿಗಳೆ
ಉಸಿರನ್ನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ

ನೀಲಿಯಲ್ಲಿ ಮೈಯಿಲ್ಲದೆ
ತೇಲಾಡುವ ಹನಿಗಳೆ
ಬಾಯಿಲ್ಲದ ಮೌನದಲ್ಲಿ
ಅಲೆಯುತಿರುವ ದನಿಗಳೆ
ಉಸಿರನ್ನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ

ಜಲವಿಲ್ಲದ ನೆಲಗಳಲ್ಲಿ
ಕಮರುತಿರುವ ಕುಡಿಗಳೆ
ಬಿರು ಬಿಸಿಲಿನ ತುಳಿತದಲ್ಲಿ
ಸೊರಗಿ ಹೋದ ಮಿಡಿಗಳೆ
ಉಸಿರನ್ನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ

ಶೃತಿಯಿಲ್ಲದ ವಾದ್ಯದಲ್ಲಿ
ಗತಿಯಿಲ್ಲದ ಸ್ವರಗಳೆ
ಬಿರುಗಾಳಿಗೆ ಗರಿವುದುರಿದ
ಹೊಂಗನಸಿನ ಮರಿಗಳೆ
ಉಸಿರನ್ನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ

-ಡಾ.ಜಿ. ಎಸ್. ಶಿವರುದ್ರಪ್ಪ...

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು