ಶಿಲ್ಪಕಲೆ ‍೬ - ರಾಜೇಶ್ ಶ್ರೀವತ್ಸ


ಸ್ನೇಹಿತರೊಬ್ಬರು ಬದಾಮಿ ಬನಶಂಕರಿಯ ವಿಗ್ರಹದ ಸ್ವರೂಪ ಹೇಗಿದೆ ಎಂದು ಕೇಳಿದ್ದಾರೆ. ಯಾವಾಗಲೂ ಅಲಂಕಾರದಲ್ಲಿ ಮುಚ್ಚಿ ಹೋಗಿರುವ ದೇವಿಯ ವಿಗ್ರಹದ ವಿವರಗಳು ಕಾಣುವುದಿಲ್ಲವಾದ್ದರಿಂದ ಅವರಿಗೆ ಅದರ ಬಗ್ಗೆ ತಿಳಿದುಕೊಳ್ಳಬೇಕು ಎನಿಸಿರಬಹುದು. ಬದಾಮಿ ಬನಶಂಕರಿ ಚಾಲುಕ್ಯರ ಆರಾಧ್ಯ ದೇವತೆ. ಹಿಂದೊಮ್ಮೆ ದುರ್ಗಮನೆಂಬ ಅಸುರ ಬ್ರಹ್ಮನನ್ನು ಒಲಿಸಿಕೊಂಡು ವೇದಗಳನ್ನು ತನ್ನ ವಶದಲ್ಲಿಟ್ಟುಕೊಂಡನಂತೆ. ವೇದಗಳ ಮರೆವಿನಿಂದ ಜನರು ಧರ್ಮಭ್ರಷ್ಟರಾಗಿ ಭೂಮಿಯ ಮೇಲೆ ಮಳೆ ಇಲ್ಲದೆ ಬರಗಾಲ ಉಂಟಾಯಿತಂತೆ. ಜನರ ಕಷ್ಟ ನೋಡಲಾಗದೆ ಆದಿಶಕ್ತಿಯು ಅವತಾರವೆತ್ತಿದಳು. ಜನರ ದೀನ ಸ್ಥಿತಿಯನ್ನು ನೋಡಿ ಆಕೆ ದುಃಖದಿಂದ ಮೈಯೆಲ್ಲಾ ನೂರಾರು ಕಣ್ಣುಗಳನ್ನು ಹೊಂದಿ ಕಂಬನಿಯ ಮಳೆಬರಿಸಿದಳು(=ಶತಾಕ್ಷಿ) . ತನ್ನ ಮೈಯಿಂದಲೇ ಫಲ,ಪುಷ್ಪ,ಗೆಡ್ದೆ,ಗೆಣಸುಗಳನ್ನು (=ಶಾಕಂಭರಿ) ಸೃಷ್ಟಿಸಿ ಜನರ ಹಸಿವನ್ನು ನೀಗಿಸಿದಳು . ನಂತರ ಭಯಂಕರ ಕೋಪದಿಂದ ದುರ್ಗಮಾಸುರನೊಡನೆ ಹೋರಾಡಿ ಅವನನ್ನು ಸಂಹರಿಸಿ ವೇದಗಳನ್ನು ಮರಳಿ ಪಡೆದಳು. ದುರ್ಗಮಾಸುರನನ್ನು ಸಂಹರಿಸಿ ದುರ್ಗೆ ಎನಿಸಿಕೊಂಡಳು. ನಂತರ ತಿಲಕಾರಣ್ಯದಲ್ಲಿ (ಈಗಿನ ಬದಾಮಿ) ನೆಲೆಸಿದಳು. ವನದಲ್ಲಿ ನೆಲೆಸಿದ್ದರಿಂದ ವನಶಂಕರಿ ಎನಿಸಿಕೊಂಡಳು.
ದೇವೀ ಭಾಗವತ ಹಾಗು ಸಪ್ತಶತಿಗಳಲ್ಲಿ ದೇವಿಯು ಶಾಕಂಭರಿ ಅವತಾರದಲ್ಲಿ ತನ್ನ ನಾಲ್ಕು ಕೈಗಳಲ್ಲಿ ಬಲ ಕೈಯಗಳಲ್ಲಿ ಬಾಣ ಹಾಗು ಶಾಕಸಮೂಹ (ಫಲ,ಪುಷ್ಪ,ಗೆಡ್ದೆ,ಗೆಣಸು)ವನ್ನು , ಎಡಕೈಗಳಲ್ಲಿ ಧನಸ್ಸು ಹಾಗು ತಾವರೆಯನ್ನು ಹಿಡಿದಿರುವಂತೆ ವರ್ಣಿಸಲಾಗಿದೆ. ಆದರೆ ಬದಾಮಿಯ ಧ್ಯಾನ ಶ್ಲೋಕದಲ್ಲಿ ಬೇರೆಯ ರೂಪವನ್ನು ವರ್ಣಿಸಲಾಗಿದೆ.ವಿಗ್ರಹವು ಕರಿಕಲ್ಲಿನ ಅರೆ ಉಬ್ಬು ಶಿಲ್ಪ. ಇಲ್ಲಿ ಆಕೆ ಅಷ್ಟಭುಜೆ. ಪ್ರಭಾವಳಿಗೆ ಹೊಂದಿಕೊಂಡಂತೆ ಆಕೆಯ ದೇಹ ಹಾಗು ಕೈಗಳನ್ನು ಕೆತ್ತಲಾಗಿದೆ. ಬಲ ಭಾಗದ ನಾಲ್ಕು ಕೈಗಳಲ್ಲಿ ಮೇಲಿನಿಂದ ಕೆಳಗೆ ಖಡ್ಗ, ಘಂಟೆ, ತ್ರಿಶೂಲ ಹಾಗು ಬಲತೊಡೆಯ ಮೇಲಿಟ್ಟಿರುವ ಕೈಯಲ್ಲಿ ಪುಸ್ತಕ (ವೇದ) ಇವುಗಳನ್ನು ಧರಿಸಿದ್ದಾಳೆ. ಎಡ ಕೈಗಳಲ್ಲಿ ಮೇಲಿನಿಂದ ಕೆಳಗೆ ಡಮರುಗ , ಡಮರು, ದುರ್ಗಮಾಸುರನ ತಲೆ ಹಾಗು ಎಡತೊಡೆಯ ಮೇಲೆ ಇಟ್ಟಿರುವ ಕೈಯಲ್ಲಿ ಮಧುಪಾತ್ರೆಗಳನ್ನು ಧರಿಸಿದ್ದಾಳೆ. ದೇವಿಯು ಸಿಂಹದ ಮೆಲೆ ಕುಳಿತಿದ್ದು ಎರಡೂ ಕಾಲುಗಳನ್ನು ಅಕ್ಕ ಪಕ್ಕ ಇಳಿಬಿಟ್ಟಿದ್ದಾಳೆ. ಎಡ ಬಲಗಳಲ್ಲಿ ಜಯೆ-ವಿಜಯೆಯರು ಚಾಮರಹಿಡಿದಿದ್ದಾರೆ. ಬಲದಲ್ಲಿ 
ಜಯೆಯ ಎದುರು ವಾಮಾಕ್ಷೀ, ವಿಜಯೆಯ ಎದುರು ವಾರುಣಿ ವಾದ್ಯಗಳನ್ನು ನುಡಿಸುತ್ತಾ ಕುಳಿತಿದ್ದಾರೆ. ದೇವಿಯ ಎರಡೂ ಪಾದಗಳಿಗೆ ಆಧಾರವಾಗಿ ಬಲಭಾಗದಲ್ಲಿ ಶಾಕಿಣಿ ಎಡಭಾಗದಲ್ಲಿ ಡಾಕಿಣಿಯರು ಇದ್ದಾರೆ. ಸಿಂಹವು ಶಾಂತವಾಗಿದ್ದು ಎರಡೂ ಕಾಲುಗಳನ್ನು ಕೆಳಗಿರುವ ಎರಡು ಆನೆಗಳ ಮೇಲೆ ಊರಿನಿಂತಿದೆ. ಆನೆಗಳು ಆಮೆಯ ಮೇಲೆ ನಿಂತಿವೆ.

ದೇವಿಯು ತ್ರಿಲೋಚನೆ ಅಗಲವಾದ ಹಣೆಯಲ್ಲಿ ಮೂರನೆಯ ಕಣ್ಣನ್ನು ಧರಿಸಿದ್ದಾಳೆ. ಯಾವುದೇ ಕುಸುರಿಯ ಕೆತ್ತನೆ ಇಲ್ಲದ ಮೆಟ್ಟಿಲು ಮೆಟ್ಟಿಲಾದ ದೊಡ್ದ ಕಿರೀಟ. ದುಂಡನೆಯ ಬಿಲ್ಲೆಯಂತಾ ದೊಡ್ದದಾದ ಚಿತ್ತಾರ ರಹಿತ ಕಿವಿಯೋಲೆಗಳು. ದೇವಿಯ ಎಲ್ಲಾ ಆಭರಣಗಳು ಸರಳವಾಗಿವೆ ಅಥವ ಕಾಲಾಂತರದಲ್ಲಿ ಪೂಜೆ, ಅಭಿಷೇಕಾದಿಗಳಿಂದ ವಿವರಗಳು ಸವೆದು ಹೋಗಿವೆ ಎನ್ನಬಹುದು. ಪ್ರಭಾವಳಿಯಲ್ಲಿ ಸಿಂಹ ಲಲಾಟವಿದ್ದು ಅದರ ಮೇಲಿರುವ ಬಳ್ಳಿಯ ಚಿತ್ತಾರಗಳು ಎಡ ಬಲಗಳಲ್ಲಿ ಬೇರೆ ಬೇರೆಯಾಗಿವೆ. ಕೈಲಿರುವ ಮಧು ಪಾತ್ರೆಯಿಂದ ಆಗಷ್ಟೇ ಪಾನಮಾಡಿದಂತಿರುವ ಅರೆತೆರೆದ ತುಟಿಗಳು, ದುಂಡನೆಯ ಕಣ್ಣುಗುಡ್ದೆಗಳು ದೇವಿಯ ಮುಖಕ್ಕೆ ಸ್ವಲ್ಪ ಉಗ್ರಕಳೆಯನ್ನು ನೀಡಿದೆ ಅನ್ನಬಹುದು.

ರಾಜೇಶ್ ಶ್ರೀವತ್ಸ

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು