ಶಿಲ್ಪಕಲೆ; ೪ - ರಾಜೇಶ್ ಶ್ರೀವತ್ಸ
ಖಟ್ವಾಂಗಧಾರಿಣಿ ಚಾಮುಂಡಾ:
ದುರ್ಗಾ ಸಪ್ತಶತಿಯ ಏಳನೆಯ ಅಧ್ಯಾಯದಲ್ಲಿ ಚಾಮುಂಡಿಯ ಕಥೆ ಬರುತ್ತದೆ. ಶುಂಭ-ನಿಶುಂಭರ ಸೇವಕರಾದ ಚಂಡ ಮುಂಡರು ದೇವಿಯನ್ನು ಬಂಧಿಸಿ ಕರೆದೊಯ್ಯಲು ಬರುತ್ತಾರೆ. ಆಗ ಕೋಪದಿಂದ ಹುಬ್ಬುಗಂಟ್ಟಿಕ್ಕಿದ ದುರ್ಗೆಯ ಮುಖದಿಂದ ಕಡುಗಪ್ಪಿನ ಶಕ್ತಿದೇವಿಯೊಬ್ಬಳು ಆವಿರ್ಭವಿಸುತ್ತಾಳೆ.ಆಕೆ ಕೈಗಳಲ್ಲಿ ಕತ್ತಿ , ಹಗ್ಗ, ಖಟ್ವಾಂಗ ಮೊದಲಾದ ಅಯುಧಗಳನ್ನು ಕೈಗಳಲ್ಲಿ ಹಿಡಿದಿರುತ್ತಾಳೆ. ಹುಲಿಚರ್ಮವನ್ನು ಧರಿಸಿರುತ್ತಾಳೆ. ಮೈಯಲ್ಲಿ ಮಾಂಸವಿಲ್ಲದ ಅಸ್ಥಿ ಪಂಜರದಂತೆ ಕಾಣಿಸುವ

ಸಪ್ತಮಾತೃಕೆಯರ ಶಿಲ್ಪಗಳ ಸಾಲಿನಲ್ಲಿ ಯಾವಾಗಲೂ ಕೊನೆಯಲ್ಲಿ ಇರುವ ದೇವತೆ ಈ ಚಾಮುಂಡಿ.( ಸಪ್ತ ಮಾತೃಕೆಯರ ಸಾಲು ಯಾವಾಗಲೂ ಬ್ರಾಹ್ಮಿ , ಮಾಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ,

ಚಾಮುಂಡಾ ಇದೇ ಕ್ರಮದಲ್ಲಿರುತ್ತದೆ) ಶಿಲ್ಪಶಾಸ್ತ್ರಗಳು ಅವಳ ಭೀಕರ ರೂಪ ಸಾಲದು ಎಂಬಂತೆ ಇನ್ನಷ್ಟು ಭೀಕರತೆಯನ್ನು ಸೇರಿಸಲು ಕಿವಿಯಲ್ಲಿ ಚೇಳಿನ ಆಭರಣ, ಸರ್ಪಗಳ ಸ್ತನಬಂಧ, ಮೂಳೆಗಳ ಗೆಜ್ಜೆ ಹಾಗು ನಡುಕಟ್ಟು, ಮೈತುಂಬಾ ಹಾವುಗಳ ಆಭರಣ, ತಲೆಯಲ್ಲಿ ಹೂವಿನಂತೆ ಜೋತು ಬಿದ್ದಿರುವ ಬಾವಲಿ. ಜೇಡ.... ಇತ್ಯಾದಿಗಳ ಅಲಂಕಾರವನ್ನು ವಿಧಿಸುತ್ತದೆ. ಸಪ್ತಮಾತೃಕೆಯರಲ್ಲಿ ಇತರರಿಗಿಲ್ಲದ ಮನ್ನಣೆ, ಅದೃಷ್ಟ ಆಕೆಯದ್ದು. ಹೇಗೆಂದರೆ ಆಕೆ ಸಪ್ತಮಾತೃಕೆಯರ ಸಾಲಿನಲ್ಲೂ ಅಲ್ಲದೆ ದೇಗುಲಗಳ ಗೋಡೆ ಕಂಬಗಳ ಮೇಲೆ ಪ್ರತ್ಯೇಕವಾಗಿ ಕೂಡ ಕಾಣಿಸಿಕೊಳ್ಳುತ್ತಾಳೆ. ಅಲ್ಲದೆ ಆಂಧ್ರದ ಅಲ್ಲಂಪುರದಲ್ಲಿರುವ ಜೋಗುಳಾಂಬ, ಶಿವಗಂಗೆಯ ಬೆಟ್ಟದ ಮೇಲಿರುವ ಸ್ವರ್ಣಾಂಬ (ಹೊನ್ನಾದೇವಿ) ದೇವಾಲಯಗಳು ಆಕೆಗೆಂದೇ ಅರ್ಪಿತವಾದವುಗಳು. ( ಹೆಸರು ಚಾಮುಂಡೇಶ್ವರಿ ಎಂದಿದ್ದರೂ ಮೈಸೂರು ಚಾಮುಂಡೇಶ್ವರಿಯ ದೇವಸ್ಥಾನ ಮಹಿಷಾಸುರಮರ್ದಿನಿ ಸ್ವರೂಪದ ದುರ್ಗೆಯದ್ದು) . ತನ್ನ ಶವವಾಹನದ ಮೇಲೆ ನಿಂತಿರುವ, ಕುಳಿತಿರುವ , ನರ್ತಿಸುತ್ತಿರುವ ವಿಗ್ರಹಗಳು ಕಾಣಸಿಗುತ್ತವೆ. ಚತುರ್ಭುಜ, ಅಷ್ಟಭುಜ , ದಶಭುಜಗಳ ವಿಗ್ರಹಗಳು ಕಾಣಸಿಗುತ್ತವೆ. ಕೈಯಲ್ಲಿ ಖಡ್ಗ, ಚೂರಿ, ತ್ರಿಶೂಲ, ಡಮರುಗ, ಪಾನಪಾತ್ರೆ, ಖಟ್ವಾಂಗ, ಕತ್ತರಿಸಿದ ತಲೆಗಳನ್ನು ಹಿಡಿದಿರುತ್ತಾಳೆ. ಕೆಲವು ವಿಗ್ರಹಗಳ ಕೈಗಳಲ್ಲಿ ನರ್ತನ ಮುದ್ರೆಗಳನ್ನು ಪ್ರದರ್ಶಿಸಿರುವುದೂ ಉಂಟು. ಹಳೇಬೀಡಿನ ವಿಗ್ರಹದಲ್ಲಿ ವಿಸ್ಮಯ ಮುದ್ರೆಯ ಪ್ರದರ್ಶನವಿದೆ. ಭಯಂಕರ ಬೇತಾಳಗಣಗಳು ವಾದ್ಯಗಳನ್ನು ನುಡಿಸುತ್ತಾ , ನರ್ತಿಸುತ್ತಾ ಆಕೆಯನ್ನು ಸುತ್ತುವರೆದಿರುತ್ತವೆ.

-------------------
ಖಟ್ವಾಂಗ ಒಂದು ಅನುಭವ ; ಉದ್ದವಾದ ಕೋಲಿನ ತುದಿಗೆ ತಲೆಬುರುಡೆಯನ್ನು ಸಿಕ್ಕಿಸಿರುವ ಯಕ್ಷಿಣಿ ದಂಡ( magic wand).ಪುರಾಣಗಳ ಪ್ರಕಾರ ಇದನ್ನು ಒಮ್ಮೆ ಬೀಸಿದರೆ ಶತ್ರುಗಳು ಮಂಕು ಕವಿದು ಬೀಳುವುದು, ರಕ್ತ, ಹಾವು- ಚೇಳುಗಳ ಮಳೆ ಸುರಿವ ಭ್ರಮೆ ಮೂಡುವುದು. ಶತ್ರುಗಳ ಚರ್ಮ ಸುಲಿಯುವುದು, ಅವರು ರಕ್ತಹೀನರಾಗುವುದು ಇತ್ಯಾದಿ ಪರಿಣಾಮಗಳಾಗುತ್ತವೆ.
ಕೊಲ್ಕೊತ್ತಾದಲ್ಲಿ ಇದನ್ನು ಹಿಡಿದುಕೊಂಡು ಓಡಾಡುವ ಬಾಬಗಳನ್ನು ನೋಡಿದ್ದೆ. ಕರುಣೋಮೋಯಿ ( ಕರುಣಾಮಯಿ ಕಾಳಿ) ದೇಗುಲದ ಬಳಿ ಒಮ್ಮೆ ಕುತೂಹಲದಿಂದ ನನ್ನ ಸ್ನೇಹಿತನೊಬ್ಬನೊಂದಿಗೆ ಹತ್ತಿರದಿಂದ ನೋಡಲು ನಡೆದೆ. ಅದು ಖಟ್ವಾಂಗವೆಂದು ಗೊತ್ತಿದ್ದರೂ ಅದೇನೆಂದು ಕೇಳಿದೆ. ಬಾಬ ಏನನ್ನೂ ಹೇಳದೆ ಮಣ ಮಣ ಮಂತ್ರ ಹೇಳುತ್ತಾ ಅದನೆತ್ತಿ ನಮ್ಮೆದುರು ಗಾಳಿಯಲ್ಲಿ ಆಡಿಸಿದ. ತಕ್ಷಣ ನನ್ನ ಸ್ನೇಹಿತ ಮೂರ್ಚೆ ಹೋಗಿ ಅಲ್ಲೇ ಉರುಳಿದ. ನನಗೇನೂ ಆಗಲಿಲ್ಲ, ಒಳಗೆ ಹೆದರಿಕೆಯಾಗುತ್ತಿದ್ದರೂ ಮಾತನಾಡದೆ ಅಲ್ಲೇ ನಿಂತಿದ್ದೆ. ಐದು ನಿಮಿಷಗಳ ಬಳಿಕ ನನ್ನ ಸ್ನೇಹಿತ ಮೇಲೆದ್ದ ಮೇಲೆ ಬಾಬ ತನ್ನ ಚೀಲದಿಂದ ಹುಣಸೆಕಾಯಿಗಳನ್ನು ತೆಗೆದು ಕೊಟ್ಟ. ನಮಸ್ಕರಿಸಲು ಹೋದ ನನ್ನ ಸ್ನೇಹಿತನನ್ನು ನಿನ್ನ ನಮಸ್ಕಾರ ಯಾರಿಗೆ ಬೇಕು? ಒಳಗೆ ಹೋಗಿ ತಾಯಿಗೆ ನಮಸ್ಕರಿಸು ಎಂದು ಗದರಿಸಿದ. ನಾವು ಮಕ್ಕಳ ಹಾಗೆ ರುಚಿಯಾದ ಹುಣಸೆಕಾಯಿ ತಿನ್ನುತ್ತಾ ಹಿಂತಿರುಗಿದೆವು.

Comments
Post a Comment