ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Wednesday, September 24, 2014

ಶಿಲ್ಪಕಲೆ : ೫ - ರಾಜೇಶ್ ಶ್ರೀವತ್ಸ


ಬಹುತೇಕ ಎಲ್ಲಾ ಪುರಾಣಾಗಳಲ್ಲೂ ಜಗತ್ ಸೃಷ್ಟಿಯ ಕಥೆ ಬರುತ್ತದೆ. ಪುರಾಣದ ಕಥೆಗಳ ಪ್ರಕಾರ ಕಶ್ಯಪ ಹಾಗು ದಿತಿಯರ ಎರಡನೆಯ ಮಗ ಹಿರಣ್ಯಾಕ್ಷ ಭೂಮಿಯನ್ನು ಚಾಪೆಯಂತೆ ಸುರುಳಿ ಸುತ್ತಿ
ಸಮುದ್ರದಡಿಯಲ್ಲಿ ಬಚ್ಚಿಟ್ಟ. ಆಗ ವಿಷ್ಣು ವರಾಹ (ಕಾಡು ಹಂದಿ) ರೂಪವನ್ನು ತಾಳಿ ನೀರಿಗಿಳಿದು ಹಿರಣ್ಯಾಕ್ಷನನ್ನು ಎಡಗಾಲಿಂದ ಒದ್ದು ಸಂಹರಿಸಿ ಕೋರೆದಾಡೆಗಳ ಮೂಲಕ ಭೂಮಿಯನ್ನು ಮೇಲೆತ್ತಿ
ಮೊದಲಿದ್ದಂತೆ ನೀರಿನ ಮೇಲೆ ಪ್ರತಿಷ್ಠಾಪಿಸಿದ. ಬ್ರಹ್ಮ ವರಾಹನನ್ನೆ ಸೃಷ್ಟಿಯಜ್ಞದ ಪಶುವನ್ನಾಗಿಸಿ ತನ್ನ ಕಾರ್ಯವನ್ನು ಪ್ರಾರಂಭ ಮಾಡಿದನು. ಆ ಯಜ್ಞ ಸ್ವರೂಪಿ ವರಾಹನನ್ನು ಈ ರೀತಿ ಬಣ್ಣಿಸಲಾಗುತ್ತದೆ. ನಾಲ್ಕು ವೇದಗಳೇ ಅವನ ಕಾಲುಗಳು, ಯೂಪ ಸ್ತಂಭವೇ ಅವನ ಕೋರೆಹಲ್ಲುಗಳು, ಯಾಗಗಳೆಲ್ಲಾ ಅವನ ದಂತಗಳು, ಚಯನವೇ ( ಅಗ್ನಿವೇದಿಕೆ ) ಮುಖ, ಅಗ್ನಿಯೇ ನಾಲಗೆ, ದರ್ಭೆಗಳೆ ರೋಮಗಳು, ಬೆವರಹನಿಗಳೇ ತಿಲ(ಎಳ್ಳು), ರಾತ್ರಿ-ಹಗಲುಗಳೇ ಇವನ ಕಣ್ಣುಗಳು, ಆಕಾಶವೇ ಒಡಲು, ಗುಡುಗಿನ ಶಬ್ಧಗಳೇ ವಾದ್ಯಗಳು, ಸಾಮಗಾನವೇ ಅವನ ಸ್ವರ, ಅವನ ಮೂತಿಯೇ ಸೃಕ್ -ಸ್ರುವಗಳು (ತುಪ್ಪಹೊಯ್ಯುವ ಚಮಚಗಳು ), ರಕ್ತವೇ ಆಜ್ಯ(ತುಪ್ಪ), ಅಸ್ಥಿಗಳೇ ಸಮಿತ್ತ್ತು(ಕಟ್ಟಿಗೆ), ಗುಪ್ತರ ಕಾಲದಲ್ಲಿ ನಾಲ್ಕುಕಾಲಿನ ಪಶುರೂಪಿ ವರಾಹನ ಮೂರ್ತಿಗಳೇ ಪ್ರಚಲಿತವಾಗಿದ್ದವು, ಪಲ್ಲವ, ಚಾಳುಕ್ಯ ಕಾಲದಿಂದ ನೃವರಾಹ (ಮನುಷ್ಯ ದೇಹ ಕಾಡುಹಂದಿಯ ತಲೆ) ರೂಪದಿಂದ ಅವನ ವಿಗ್ರಹಗಳ ಕೆತ್ತನೆ ಪ್ರಾರಂಭವಾಯ್ತು.


ಮೊದಲನೇ ಚಿತ್ರದಲ್ಲಿರುವುದು ಮಹಾಬಲಿಪುರಂ ನ ಆದಿವರಾಹ. ಚತುರ್ಭುಜ ವರಾಹನು ಆಗಷ್ಟೇ ಭೂಮಿಯನ್ನು ಹಿರಣ್ಯಾಕ್ಷನ ಸೆರೆಯಿಂದ ಪಾರು ಮಾಡಿ ಮೇಲೆತ್ತಿ ತಂದಿದ್ದಾನೆ. ಸುತ್ತಲಿರುವ ಎಲ್ಲರಿಗಿಂತ ಆತನೇ ಬಲಶಾಲಿ ಭೂಮಿಯನ್ನು ಮೇಲೆತ್ತಲು ಇವನೇ ಸರಿ ಎನ್ನುವಂತ ಮಾಹಾಕಾಯ ರೂಪದಲ್ಲಿ ಶಿಲ್ಪಿ ಅವನನ್ನು ತೋರಿಸಿದ್ದಾನೆ. ಬಲಗಾಲನ್ನು ಆದಿ ಶೇಷನ ಮೇಲೆ ಎತ್ತರಿಸಿ ಇಟ್ಟಿದ್ದರೆ ಎಡಗಾಲನ್ನು ನೆಲದ ಮೇಲೆ ಊರಿದ್ದಾನೆ. ಅವನ ಈ ಸಾಹಸವನ್ನು ನೋಡಿ ದೇವತೆಗಳು ಧನ್ಯವಾದಗಳನ್ನರ್ಪಿಸಲು ನಮಸ್ಕರಿಸುತ್ತಿದ್ದಾರೆ. ಆದರೆ ಅವರ ನಮಸ್ಕಾರ ಸ್ವೀಕರಿಸಲು ಅವನಿಗೆ ಸಮಯವಿಲ್ಲ. ಅವನಿಗೆ ತನ್ನ ಪ್ರಿಯಪತ್ನಿಯ ಯೋಗಕ್ಷೇಮದ ಚಿಂತೆ. ಎರಡೂ ಕೈಗಳಿಂದ ಭೂದೇವಿಯನ್ನು ಹಿಡಿದು ತನ್ನ ಬಲತೊಡೆಯ ಮೇಲೆ ಕೂರಿಸಿಕೊಂಡಿದ್ದಾನೆ. ಅವನ ಎಡಗೈ ಭೂ ದೇವಿಯ ಕಾಲನ್ನು ಭದ್ರವಾಗಿ ಹಿಡಿದಿದ್ದು ಬಲಗೈ ಆಕೆಯ ಹಿಂಭಾಗವನ್ನು ಬಳಸಿದೆ. ತನ್ನ ಮೂತಿಯಿಂದ ದೇವಿಯ ಸ್ತನಗಳನ್ನು ಪ್ರೇಮದಿಂದ ಸ್ಪರ್ಷಿಸುತ್ತಾ ಇದ್ದಾನೆ ( ಏನೂ ತೊಂದರೆ ಅಗಿರಲಿಲ್ಲ ತಾನೆ ಅನ್ನುವಂತೆ) ಇವರ ಏಕಾಂತಕ್ಕೆ ಅಡ್ದಿಯಾಗದಂತೆ ಅವನ ಎಡಬದಿಯಲ್ಲಿರುವ ಬ್ರಹ್ಮ (ಎಡ ಬಲದ ಮುಖಗಳನ್ನು ಸ್ಪಷ್ಟವಾಗಿ ಕೆತ್ತಿಲ್ಲ,) ಕೆಲವರ ಪ್ರಕಾರ ಅದು ಪ್ರಜಾಪತಿ .( ಆತನೂ ಸೃಷ್ಟಿಕಾರ್ಯ ನಡೆಸುವವನು ) ಹುಸಿನಗೆ ಬೀರುತ್ತಾ ಇತ್ತ ತಿರುಗಿದ್ದಾನೆ , ಬಲಬದಿಯಲ್ಲಿರುವ ಇಂದ್ರ ತಲೆ ತಗ್ಗಿಸಿದ್ದಾನೆ. ಮೇಲ್ಭಾಗದಲ್ಲಿರುವ ಸೂರ್ಯನಿಗೆ ತಮ್ಮ ಪ್ರೇಮ ಸಲ್ಲಾಪ ಕಾಣದಂತೆ ವರಾಹನೇ ತನ್ನ ಕೈಲಿರುವ ಸುದರ್ಶನ ಚಕ್ರವನ್ನು ಅಡ್ದ ಹಿಡಿದಿರುವಂತೆ ಶಿಲ್ಪಿ ಕೆತ್ತಿದ್ದಾನೆ. ಭೂಮಿಯಾದರೋ ತನ್ನ ಸ್ತ್ರೀ ಸಹಜ ನಾಚಿಕೆ ಸಂಕೋಚಗಳಿಂದ ತಲೆಯನ್ನು ಅರೆ ತಗ್ಗಿಸಿ ಪ್ರೇಮ ಕೃತಜ್ಞತೆಗಳಿಂದ ತನ್ನ
ಪತಿಯನ್ನು ನೋಡುತ್ತಿದ್ದಾಳೆ. ಪತಿರಾಯನ ಕೈಲಿ ತನ್ನ ಕಾಲು ಹಿಡಿಸಿಕೊಂಡ ಮೊದಲ ಹೆಣ್ಣಿರಬೇಕು ಆಕೆ  ಅವಳ ದೇಹ ಭಂಗಿ, ನೋಟಗಳು ಸಂಕೋಚ , ಪ್ರೇಮ , ಕೃತಜ್ಙತೆಗಳ ಮಿಶ್ರಣ.
ಎರಡನೆಯ ಚಿತ್ರ ಬದಾಮಿಯ ಗುಹಾ ಕೆತ್ತನೆ. ಇಲ್ಲಿ ಭೂದೇವಿ ಕಷ್ಟದಿಂದ ಪಾರಾದೆ ಸಾಕಪ್ಪಾ ಸಾಕು ಎನ್ನುವಂತೆ ವರಾಹನ ಸೊಂಡಿನ ಮೇಲೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಳೆ. ಆಕೆಯ ಮುಖದಲ್ಲಿ ಈಗ ನಿರ್ಭಯ. ವರಾಹ ಅವಳಿಗೆ ಎಲ್ಲಿ ನೋವಾಗುವುದೋ ಎಂಬಂತೆ ತಾವರೆ ಹೂವಿನ ಸಹಿತ ಆಕೆಯನ್ನು ಮೇಲೆತ್ತಿದ್ದಾನೆ. ಅವನ ಮುಖದಲ್ಲಿ ಪ್ರೇಮಾರಾಧನಾ ಭಾವ. ಆದರೆ ಶಿಲ್ಪಿ ವರಾಹನ ಅಂಗ ಪ್ರಮಾಣತೆಯಲ್ಲಿ ಅಷ್ಟು ಲಕ್ಷ್ಯವಹಿಸಿದಂತಿಲ್ಲ.
ರಾಜೇಶ್ ಶ್ರೀವತ್ಸ

No comments:

Post a Comment