ಶಿಲ್ಪಕಲೆ ೨ - ರಾಜೇಶ್ ಶ್ರೀವತ್ಸ

ಭಾರತೀಯ ಕಲಾ ಪ್ರಪಂಚಕ್ಕೆ ಚಾಳುಕ್ಯರ ಕೊಡುಗೆ ಅನನ್ಯವಾದುದ್ದು. ಐಹೊಳೆ, ಪಟ್ತದಕಲ್ಲು, ಬಾದಾಮಿಗಳು ಶಿಲ್ಪ ಕಲೆಯ ಹಾಗು ಭಾರತೀಯ ವಾಸ್ತುಕಲೆಯ ಪ್ರಯೋಗ ಶಾಲೆಯೆಂದೇ ಹೆಸರಾಗಿದೆ. ಚಾಳುಕ್ಯರು ತಮ್ಮ ಸಮಕಾಲೀನ ಪಲ್ಲವರೊಡನೆ ಪೈಪೋಟಿಗೆ ಬಿದ್ದಂತೆ ರಚಿಸಿದ ಶಿಲಾದೇಗುಲಗಳ ವಾಸ್ತು ಹಾಗು ವಿಗ್ರಹಗಳು ಇಂದಿಗೂ ನವನವೀನ. ಪಟ್ತದಕಲ್ಲಿನ ವಿರೂಪಾಕ್ಷ ದೇವಾಲಯದ (ಹಿಂದೆ ಲೋಕಪಾಲೇಶ್ವರ ಹೆಸರಿತ್ತು) ಕಂಬ ಹಾಗು ಗೋಡೆಯ ಕೋಷ್ಠಕಗಳಲ್ಲಿರುವ ಕೆಲವು ಶಿಲ್ಪಗಳಂತೂ ಅದ್ಬುತ. ಉತ್ತರ ದ್ವಾರದ ಮಂಟಪದ ಬಲಕಂಬದಲ್ಲಿರುವ ಗಜೇಂದ್ರ ಮೋಕ್ಷ ಶಿಲ್ಪವು ಅವುಗಳಲ್ಲೊಂದು.
ಗಜೇಂದ್ರ ಮೋಕ್ಷ ಪ್ರಕರಣವು ವಿಷ್ಣು ಪರವಾದ ಬಹುತೇಕ ಎಲ್ಲಾ ಪುರಾಣಗಳಲ್ಲಿ ಕಾಣಿಸುತ್ತದೆ.ಸರೋವರದಲ್ಲಿ ತನ್ನ ಬಳಗದೊಡನೆ ಜಲಕ್ರೀಡೆಯಾಡುತ್ತಿದ್ದ ಗಜೇಂದ್ರನನ್ನು ಮೊಸಳೆಯೊಂದು ಕಚ್ಚಿ ನೀರಿನೊಳಗೆ ಸೆಳೆಯಲು ಪ್ರಾರಂಬಿಸುತ್ತದೆ. ಮೊಸಳೆಯ ದವಡೆಯಿಂದ
ತಪ್ಪಿಸಿಕೊಳ್ಳಲಾಗದೆ ಬವಳಿದ ಗಜೇಂದ್ರನನ್ನು ಇತರ ಆನೆಗಳು ಸಂಕಷ್ಟದಿಂದ ಪಾರುಮಾಡಲು ಯತ್ನಿಸಿ ಸೋತು ಕೈಚೆಲ್ಲುತ್ತವೆ. ಸೋಲೊಪ್ಪದ ಗಜರಾಜ ಮೊಸಳೆಯ ದವಡೆಯಿಂದ ಪಾರಾಗಲು ಏಕಾಂಗಿಯಾಗಿ ಹೋರಾಡುತ್ತಾನೆ. ಮೊಸಳೆಗಳಿಗೆ ನೀರಿನಲ್ಲೇ ಬಲ.
ಹಾಗಾಗಿ ಗಜರಾಜ ಕೊನೆಗೂ ಸೋಲನೊಪ್ಪಿ ಅಹಂಕಾರವನ್ನು ತ್ಯಜಿಸಿ ತನ್ನನ್ನು ಪಾರುಮಾಡಲು ಎಕಮೇವಾದ್ವಿತೀಯ ಭಗವಂತ ವಿಷ್ಣುವಿನ ಮೊರೆ ಹೋಗಿ ಆರ್ತನಾಗಿ ಸ್ತುತಿಸುತ್ತಾನೆ. ಸಾವಿನ ಬಾಯೋಳಗೆ ಹೊಕ್ಕಿರುವ ತನ್ನ ಭಕ್ತನನ್ನು ಕಾಪಾಡಲು ದೇವನು ಅರೆಕ್ಷಣವನ್ನೂ ವ್ಯರ್ಥ ಮಾಡದೆ ಗರುಡನ ಮೇಲೇರಿ ಧಾವಿಸುತ್ತಾನೆ.
ನಾಲ್ಕು ಪಾತ್ರಗಳಿರುವ ಈ ಪ್ರಸಂಗವನ್ನು ಶಿಲ್ಪದಲ್ಲಿ ಸಂಯೋಜಿಸುವುದು ಬಹಳ ಸವಾಲಿನ ಕೆಲಸ. ಹಾಗಾಗಿ ಭಗವಂತನ ಅತ್ಯಂತ ಪ್ರಮುಖ ಲೀಲೆಗಳಲ್ಲೊಂದಾದ ಗಜೇಂದ್ರ ಮೋಕ್ಷವು ಶಿಲ್ಪ ಕಲೆಯಲ್ಲಿ ಕಾಣಿಸಿಕೊಳ್ಳುವುದು ತುಂಬಾ ವಿರಳ. ಪಟ್ತದಕಲ್ಲಿನ ಈ ಶಿಲ್ಪದ ದೃಶ್ಯ ಸಂಯೋಜನೆ ಅದ್ಭುತವಾದುದ್ದು. ಶಿಲ್ಪಿಯು ಸಂಯೋಜನೆಯ ಸವಾಲನ್ನು ಸುಲಭವಾಗಿ ಬಗೆಹರಿಸಿದ್ದಾನೆ. (ಮೇಲುಭಾಗದಲ್ಲಿ ಗರುಡನ ಹೆಗಲಿನ ಮೇಲೆ ವಿಷ್ಣು, ಕೆಳಭಾಗದ ಸರೋವರದಲ್ಲಿ ಗಜ-ಮಕರಗಳು) ವಿಷ್ಣುವಿನ ಎಡ ಭಾಗದ ಎರಡೂ ಕೈಗಳು ಭಿನ್ನವಾಗಿದ್ದರೂ ಅದರಿಂದ ಅವನ ಹಿರಿಮೆಗೆ ಒಂದಿನಿತೂ ಮುಕ್ಕಾಗಿಲ್ಲ. ಭಕ್ತವತ್ಸಲನ ಮುಖದಲ್ಲಿ ತನ್ನ ಭಕ್ತನ ಸಂಕಷ್ಟವನ್ನು ನೋಡಿ ದುಃಖವನ್ನು ಅನುಭವಿಸುತ್ತಾ ಅದಕ್ಕೆ ಕಾರಣನಾದ ಮೊಸಳೆಯ ಮೇಲೆ ಕ್ರೋಧವನ್ನು ವ್ಯಕ್ತಪಡಿಸುತ್ತಾ ಇರುವ ದುಃಖ-ಕ್ರೋಧ- ಆತಂಕಗಳ ಮಿಶ್ರಭಾವವನ್ನು ಶಿಲ್ಪಿಯು ಸೆರೆಹಿಡಿದಿರುವ ಪರಿ ಅಪ್ರತಿಮವಾದುದ್ದು. ತಡವಾದರೆ ತನ್ನ ಭಕ್ತನಿಗೇನಾಗುವುದೋ ಎಂಬ ಆತಂಕದಿಂದ ನಾನೇ ಕೆಳಗೆ ನೆಗೆದು ಬಿಡುವೆ ಎನ್ನುವಂತೆ ಎಡ ಕಾಲನ್ನು ನೆಲದ ಮೇಲಿಡಲು ಹವಣಿಸುತ್ತಿದ್ದಾನೆ. ಬಲಗೈಲಿರುವ ಚಕ್ರವನ್ನೆಸೆಯಲುದ್ಯುಕ್ತನಾಗಿ ಕೈಯನ್ನು ಮೇಲೆತ್ತಿದ್ದಾನೆ. ಅಷ್ಟಾದರೂ ಅವನಿಗೆ ಗಾಂಭೀರ್ಯವನ್ನು ತುಂಬಲು ಶಿಲ್ಪಿಯು ಮರೆತಿಲ್ಲ . ಎಷ್ತಾದರೂ ಜಗದೋಡೆಯನಲ್ಲವೇ? ವಿಷ್ಣುವಿನ ಕೆಳಬಲಗೈಯನ್ನು ರಾಜಠೀವಿಯಿಂದ ತೊಡೆಯ ಮೇಲಿಟ್ಟಿರುವಂತೆ ಕೆತ್ತಿದ್ದಾನೆ. ಅದೇ ರೀತಿ ಬಲಗಾಲು ಇನ್ನೂ ಆಸನ ಭಂಗಿಯಲ್ಲಿ ಗರುಡನ ಹಸ್ತವನ್ನಾದರಿಸಿದೆ. ವಿಷ್ಣುವಿನ ಮೈಕಟ್ತು ಮನೋಹರವಾಗಿದ್ದು. ಹಿತಮಿತವಾದ ವಸ್ತ್ರಾಭರಣಗಳಿಂದ ಅಲಂಕೃತವಾಗಿದೆ.
ಗರುಡನು ತನ್ನ ಸ್ವಾಮಿಯನ್ನು ತಕ್ಕ ಸಮಯದಲ್ಲಿ ಗಮ್ಯಸ್ಥಳಕ್ಕೆ ತಲುಪಿಸುವ ಹೊಣೆಯಿಂದ ವೇಗವಾಗಿ ಧಾವಿಸಿ ಬರುತ್ತಿರುವನು. ಆ ವೇಗವನ್ನು ತೋರಿಸುವ ಕಲ್ಪನೆಯುಂಟಾಗಲು ಅವನ ಮುಖದಲ್ಲಿ ಆಯಾಸವನ್ನು ಶಿಲ್ಪಿ ತುಂಬಿದ್ದಾನೆ. ಮುಂಚಾಚಿರುವ ಗರುಡನ ಎದೆ ಎಡಕ್ಕೆ ವಾಲಿದ ಕತ್ತುಗಳು ಗರುಡ ನಿಜಕ್ಕೂ ಆಯಾಸವನ್ನು ಅನುಭವಿಸುತ್ತ ಇರುವಂತೆ ತೋರುತ್ತದೆ. ಗರುಡನ ರೆಕ್ಕೆಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡದೆ ಶಿಲ್ಪದ ಹಿಂಬದಿಯ ಕಂಭದ ಮೇಲೆ ಬಹುಪಾಲು ರೇಖಾ ಕೆತ್ತನೆಗಳಿಂದಷ್ಟೇ ಚಿತ್ರಿಸಿ ತೋರಿಸಿದ್ದಾನೆ.. ವೇಗವಾಗಿ ಹಾರುವ ಹಕ್ಕಿಯ ರೆಕ್ಕೆಗಳು ಮುಸುಕು ಮುಸುಕಾಗಿ ಕಾಣುವುದಿಲ್ಲವೇ ಹಾಗೆ. ತನ್ನೊಡೆಯ ನಾರಾಯಣನ ಧಾವಂತವನ್ನು ಅರ್ಥ ಮಾಡಿಕೊಂಡಿರುವ ಗರುಡ ಅವನು ಅವಸರದಲ್ಲಿ ಕೆಳಗೆ ಜಾರದಂದೆ ಕಾಲುಗಳನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಲು ಹೆಣಗಾಡುತ್ತಿದ್ದಾನೆ. ನಾರಾಯಣನ ಕಾಲುಗಳು ಕೋಮಲವಾಗಿದ್ದರೆ ಗರುಡನ ಕಾಲುಗಳು ಕಷ್ಟಜೀವಿಯ ಕಾಲುಗಳಂತೆ ಒರಟಾಗಿ ದಪ್ಪ ದಪ್ಪ ವಾಗಿವೆ.
ಕೆಳಗೆ ಸರೋವರದಲ್ಲಿ ತಾವರೆಯ ಗಿಡಗಳ ನಡುವೆ ಗಜರಾಜ ಹಾಗು ಮೊಸಳೆಯನ್ನು ಕೆತ್ತಲಾಗಿದೆ . ಆನೆಯ ಆರ್ತತೆಯು ಚೆನ್ನಾಗಿ ಚಿತ್ರಿತವಾಗಿದ್ದು ಅಂಗ ಭಂಗಿಗಳು ಸಹಜತೆಯಿಂದ ಕೂಡಿವೆ.
ಶಿಲ್ಪಿಯು ಎಡವಿರುವುದು ಮೊಸಳೆಯ ಕೆತ್ತನೆಯಲ್ಲಿ. ಮೊಸಳೆಯನ್ನು ಆಮೆಯಂತೆ ಚಿತ್ರಿಸಿ ದೊಡ್ದ ಪ್ರಮಾದವನ್ನೇ ಮಾಡಿಬಿಟ್ತಿದ್ದಾನೆ. ಇದರಿಂದ ಶಿಲ್ಪಿಗೆ ಮೊಸಳೆಯ ಪರಿಚಯವಿರಲಿಲ್ಲವೆಂಬುದು ಸುಸ್ಪಷ್ಟವಾಗಿ ತಿಳಿಯುತ್ತದೆ. ಸರೋವರದ ತಾವರೆಯ ಗಿಡಗಳಲ್ಲಿ ಶಿಲ್ಪಿಯು ಸಹಜವಾದ ಬಾಗು ಬಳುಕುಗಳನ್ನು ತುಂಬಿದ್ದಾನೆ.

ರಾಜೇಶ್ ಶ್ರೀವತ್ಸ

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು