ಶಿಲ್ಪಕಲೆ :೩ - ರಾಜೇಶ್ ಶ್ರೀವತ್ಸ

ಐಹೊಳೆಯ ಗಜ ಪೃಷ್ಟಾಕಾರದ (ಅರ್ಧ ವೃತ್ತಾಕಾರದ ಹಿಂಬದಿಯ) ದುರ್ಗಾ ದೇವಾಲಯ ಚಾಳುಕ್ಯರ ವಿಶಿಷ್ಟ ವಾಸ್ತು ಪ್ರಯೋಗ. ಅದು ನಿಜವಾಗಿ ವಿಷ್ಣುವಿನ ದೇಗುಲ . ದುರ್ಗದ (ಕೋಟೆಯ) ದೇವಾಲಯ ದುರ್ಗಾ ದೇವಾಲಯವಾಗಿ ಆಡು ಮಾತಿನಲ್ಲಿ ಬಂದು ಬಿಟ್ಟಿದೆ. ಎತ್ತರ ಜಗುಲಿಯ ಮೇಲೆ ದೇವಾಲಯವನ್ನು ಸುತ್ತುವರೆದಿರುವ ಪ್ರದಕ್ಷಿಣಾ ಪಥದ ಹೊರಾಂಗಣವಿದೆ. ದೇವಾಲಯದ ಗೋಡೆಯ ಸುತ್ತಲೂ ರಚಿಸಿರುವ ಗೂಡುಗಳಲ್ಲಿ ಹರಿಹರ, ಲಕ್ಷ್ಮೀನಾರಾಯಣ, ನರಸಿಂಹ, ವರಾಹ, ವೃಷಭವಾಹನ, ಗರುಡಾರೂಢ, ತ್ರಿವಿಕ್ರಮ, ಅರ್ಧನಾರೀಶ್ವರ ಹಾಗು ಮಹಿಷಾಸುರ ಮರ್ದಿನಿ ವಿಗ್ರಹಗಳಿವೆ.
ಇಲ್ಲಿರುವ ಮಹಿಷಾಸುರ ಮರ್ದಿನಿಯ ಶಿಲ್ಪವು ಬಹಳ ಪ್ರಸಿದ್ಧವಾದದ್ದು. ಗೂಗ‌‌‌ಲ್ನಲ್ಲಿ ಮಹಿಷಾಸುರ ಮರ್ದಿನಿ ಶಿಲ್ಪವೆಂದು ಹುಡುಕಿದರೆ ಕೇವಲ ಇದರ ಚಿತ್ರಗಳೇ ಕಾಣಿಸುವಷ್ಟು.
ಶಿಲ್ಪದಲ್ಲಿ ಮಹಿಷಾಸುರನನ್ನು ಕೋಣನ ರೂಪದಲ್ಲಿ ಬಿಂಬಿಸಲಾಗಿದೆ. ಅವನನ್ನು ತ್ರಿಶೂಲದ ಬುಡದದಿಂದ ತಿವಿಯುತ್ತಿರುವಂತೆ ದೇವಿಯನ್ನು ತೋರಿಸಲಾಗಿದೆ. ದೇವಿ ಎಂಟು ಕೈಗಳನ್ನು ಹೊಂದಿದ್ದು ಎಡಗಾಲು ಹಾಗು ಎಡ ಭಾಗದ ೪ ಕೈಗಳು ಈಗ ಭಿನ್ನವಾಗಿವೆ. ಬಲಕೈಗಳಲ್ಲಿ ತ್ರಿಶೂಲ, ಚಕ್ರ, ಬಾಣ, ಖಡ್ಗ ಗಳನ್ನೂ ಎಡಗೈಯಲ್ಲಿ ಘಂಟೆ, ಶಂಖಗಳನ್ನು ಹಿಡಿದಿದ್ದು ಉಳಿದೆರಡು ಕೈಗಳು ಭಿನ್ನವಾಗಿವೆ. ಬಲಗಾಲನ್ನು ನೆಲದ ಮೇಲೆ ಊರಿನಿಂತಿದ್ದು ಎಡಗಾಲನ್ನು ಕೋಣನ ಬೆನ್ನಿನ ಮೇಲೆ ಊರಿದ್ದಾಳೆ.
ಕೋಣವು ತಲೆಯನ್ನು ನೆರವಾಗಿ ಮೇಲಕ್ಕೆತ್ತಿದ್ದು ತನ್ನನ್ನು ಅದುಮಿ ಕೆಳಗೆ ಒತ್ತಿರುವ ದೇವಿಯ ಕಾಲಿನಿಂದ ಬಿಡುಗಡೆ ಹೊಂದಲು ತುದಿಕಾಲುಗಳ ಮೇಲೆ ನಿಂತು ಮೇಲೇಳಲು ಪ್ರಯತ್ನಿಸುತ್ತಿದೆ. ಬಾಲವು ಅರ್ಧವೃತ್ತಾಕಾರದಲ್ಲಿ ಸೆಟೆದುಕೊಂಡಿದ್ದು ಕುತ್ತಿಗೆಯನ್ನು ಇರಿಯುತ್ತಿರುವ ಶೂಲದ ನೋವು ರಾಕ್ಷಸನ ಬಾಲದ ಮೂಲಕ ವ್ಯಕ್ತವಾಗುತ್ತಿದೆ. ಕೋಣದ ಕೋಡುಗಳು ನೈಜವಾಗಿದ್ದು ಅದರ ಮೇಲೆ ಗೆರೆಗಳನ್ನೂ ಕೆತ್ತಿದ್ದಾನೆ ಶಿಲ್ಪಿ. ಕುತ್ತಿಗೆಯ ಸುಕ್ಕಿನ ಸುರುಳಿ ಗೆರೆಗಳು, ಪುಷ್ಟವಾದ ಮಾಂಸ ಖಂಡಗಳು ಕಲಾವಿದನು ಪ್ರಾಣಿ ಅಂಗರಚನಾ ಶಾಸ್ತ್ರವನ್ನು ಅಭ್ಯಾಸಮಾಡಿರುವುದಕ್ಕೆ ಸಾಕ್ಷಿಯಾಗಿದ್ದರೆ ಕೋಣನ ಚಡಪಡಿಕೆಯನ್ನು ಸಮರ್ಥವಾಗಿ ಕೆತ್ತನೆಯಲ್ಲಿ ವ್ಯಕ್ತಪಡಿಸಿರುವುದು ಪ್ರಾಣಿಯ ನಡುವಳಿಕೆಯನ್ನು ಅಭ್ಯಾಸ ಮಾಡಿರುವುದಕ್ಕೆ ಸಾಕ್ಷಿ.
ದುರ್ಗೆಯು ಸೊಂಟದಿಂದ ಮೊಣಕಾಲಿನವರೆಗೆ ತೆಳುವಾದ ಮೈಗಂಟಿದಂಟಿರುವ ವಸ್ತ್ರವನ್ನು ಧರಿಸಿದ್ದು ಸಕಲಾಭರಣ ಭೂಷಿತೆಯಾಗಿದ್ದು ಅಡಿಯಿಂದ ಮುಡಿಯವರೆಗೆ ಆಭರಣಗಳಿಂದ ಅಲಂಕರಿಸಲ್ಪಟ್ತಿದ್ದಾಳೆ. ತಲೆಕೂದಲನ್ನು ಮುಕುಟದಂತೆ ಎತ್ತಿಕಟ್ಟಿದ್ದು ಬಾಸಿಂಗ, ಕಿರೀಟಗಳಿಂದ ಅಲಂಕರಿಸಲಾಗಿದೆ. ಬಲಕಿವಿಯಲ್ಲಿ ಸಣ್ಣ ಕುಂಡಲ, ಎಡ ಕಿವಿಯಲ್ಲಿ ದೊಡ್ದ ಕರ್ಣಪೂರವನ್ನು. ಧರಿಸಿದ್ದಾಳೆ. ಕತ್ತಿನಲ್ಲಿ ವೈಜಯಂತಿಮಾಲೆ ಹಾಗು ಮುತ್ತಿನ ಮಾಲೆಗಳು ಹಾಗು ಕೈಯಲ್ಲಿ ಧರಿಸಿರುವ ಕಡಗಗಳ ಮೇಲೆ ಸೂಕ್ಶ್ಮ ಹೂವಿನ ಕೆತ್ತನೆಗಳಿವೆ.
ಶಿಲ್ಪದ ಹೆಚ್ಚುಗಾರಿಕೆ ಇರುವುದು ದೇವಿಯು ಅಂಗ ಸೌಷ್ಠವದಲ್ಲಿ ಹಾಗು ನಿಂತಿರುವ ಭಂಗಿಯಲ್ಲಿ ತುಂಬಿರುವ ಕ್ರಿಯಾಶೀಲತೆಯಲ್ಲಿ. ನೀಳವಾದ ಕೈ- ಕಾಲುಗಳು, ಸ್ಥಿರವಾದ ಸ್ತನಗಳು, ತೆಳುವಾದ ಉದರ ಆರೋಗ್ಯಪೂರ್ಣ ಯೋಧೆಯ ದೇಹ. ತ್ರಿಶೂಲ ಹಾಗು ಘಂಟೆಯನ್ನು ಹಿಡಿದಿರುವ ಕೈಗಳನ್ನು ಉತ್ಸಾಹದಿಂದ ಮೇಲಕ್ಕೆ ಎತ್ತಿ ಹಿಡಿದು ವಿಜಯವನ್ನು ಸಾರುತ್ತಿದ್ದಾಳೆ. ಕಾಲಕೆಳಗೆ ಬಿದ್ದಿರುವ ಮಹಿಷನ ಕಡೆ ಆಕೆಗೆ ಲಕ್ಷ್ಯವೇ ಇಲ್ಲ . ವಿಜಯವಿನ್ನು ನನ್ನದೇ ಎಂಬ ಆತ್ಮವಿಶ್ವಾಸ ಆಕೆಯ ಅಗಲವಾದ ಕಣ್ಣಿನಲ್ಲಿ ಎದ್ದು ಕಾಣುತ್ತಿದೆ. ತಲೆಯ ಹಿಂದೆ ಕೆತ್ತಿರುವ ಪ್ರಭಾವಳಿ ದೇವಿಗೆ ಅಲೌಕಿಕ ದೈವೀಕಳೆಯನ್ನು ತುಂಬಿದೆ.
ದೇವಿಯ ಬಲ ಭಾಗದಲ್ಲಿರುವ ಸಿಂಹವು ಮಹಿಷನೆಡೆಗೆ ಘರ್ಜಿಸುತ್ತಾ ಭಯಂಕರ ಕಣ್ಣುಗಳಿಂದ ನೋಡುತ್ತ ಇದೆ. ಅದರ ಕೆದರಿದ ಕೇಸರಗಳ ಕೆತ್ತನೆ ಸಿಂಹಕ್ಕೆ ಜೀವಂತಿಕೆಯನ್ನು ತುಂಬಿದೆ. ಭಿನ್ನವಾಗಿದ್ದರೂ ಶಿಲ್ಪದ ಎದುರು , ಎಡ, ಬಲ ಯಾವ ಕಡೆ ನಿಂತು ನೋಡಿದರೂ ಶಿಲ್ಪದ ಸೌಂದರ್ಯ, ಕ್ರಿಯಾಶೀಲತೆ , ಜೀವಂತಿಕೆ, ದೈವಿಕತೆಗಳ ಅರಿವಾಗುತ್ತದೆ


ರಾಜೇಶ್ ಶ್ರೀವತ್ಸ
.

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು